ಹುಣಸೆಯ ಕಾಯಿ ಹುಳಿಯೆಂದು ಗೇರುಕಾಯಿ ಮರಕೆಂದು
ಈ ನಾಡಿನ್ಹೆಣ್ಣು ಕರಿದೆಂದು – ಶಂಕರಲಿಂಗರಾಯ
ಆ ನಾಡಿಗ್ಹೋಗಿ ನುಡಿದಾನೆ – ಕೋಲುಮಲ್ಲಿಗೆ ಕೋಲಣ್ಣ
ಬಾಣತೀರೋಬಿ ಬಟ್ಟಲಲ್ಲಣುತಾಳೆಂದು
ಘಟ್ಟದ ಕೆಳಗಲ ಹರಿವಾಣ – ತರಲ್ಹೋಗಿ
ಶೆಟ್ಟಿ ಶಂಕರರಾಯ ಮಡಿದಾನೆ ||ಕೋ||
ಕನ್ನೆ ಈರೋಬಿ ತಣಿಗೆಲುಣುತಾಳೆಂದು
ಕಣಿವೇಯ ಕೆಳಗಲ ಹರಿವಾಣ – ತರಲ್ಹೋಗಿ
ರಾಯ ಶಂಕರರಾಯ ಮಡಿದಾನೆ ||ಕೋ||*
ಮುಂಗೋಳಿ ಕೂಗಿತು ಮೂಡು ಕೆಂಪೇರಿತು
ಏಳೆ ಈರೋಬಿ ಬೆಳಗಾದೊ – ನಿನ್ಹಟ್ಟಿ
ಕೀಲಾರದೆಮ್ಮ ಕರುವುಂಡೊ
ಕೀಲಾರದೆಮ್ಮೆಗೆ ಗಜಮುಟ್ಟಿ ಗೊಂಡ್ಹೇವು
ದಾವುಣಿ ಮೆಟ್ಹಾಲ ಕರೆಯೋಳು – ಈರೋಬಿ
ವಾಲೆಮೇಲಿದ್ದ ಜವರಾಯ
ಅತ್ಯಮ್ಮ ಅತ್ಯಮ್ಮ ಕೆಟ್ಟ ಸ್ವಪ್ನವ ಕಂಡೆ
ದಿತ್ತುಳ್ಳಿಕಾರ ನಿನ ಮಗ – ಮನಗೋ ಮಂಚ
ನಿಟ್ಟೆಲ್ಲ ಕತ್ತಿ ಕವಿಯಾದೊ
ಮಾಗಿಯ ಸ್ವಪ್ನ ಮನೆಗೆ ಮೂಗಂಡುಗ
ನಮಗಲ್ಲ ಕಾಣೆ ಪರರಿಗೆ ಈರೋಬಿ
ಏನು ಕಂಡ್ಹೇಳೆ ಸಪುನವ
ಉತ್ತದ ಮೇಗಲ ಕಾಗೆ ನೆತ್ತರ ಕಾರೋದ ಕಂಡೆ
ಶೆಟ್ಟಿ ಶಂಕರರಾಯ ಬದುಕೋದ – ಸಪುನವ
ಕಂಡೆನಮ್ಮ ಕಾಲುಗಳಿಗೇಲಿ
ಮೂಗುತಿ ಮುರಿಯೋದ ಕಂಡೆ ಮುಂಬಲ್ಲು ಸಿಡಿಯೋದ ಕಂಡೆ
ಗಿಂಡಿ ತುಂಡಾಗಿ ಒಡೆಯೋದ – ಸಪುನವ
ಕಂಡೆನಮ್ಮ ಕಾಲಗಳಿಗೇಲಿ
ಮೂಗುತಿ ಎಂಬೋಳು ನೀನು ಮುಂಬಲ್ಲು ಅನ್ನೋಳು ನಾನು
ಚಿನ್ನದ ಗಿಂಡಿಯ ನಿನ್ನ ಪುರುಷ – ಈರೋಬಿ
ಏನು ಕಂಡ್ಹೇಳೆ ಸಪುನವ
***
ಕಟ್ಟೆಯ ಹಿಂದೆ ಎಂಟೆಮ್ಮೆ ಮೇಸೋಳೆ
ಒಂಟಂಚಿನ ಸೀರೆ ಸೆರಗೋಳೆ – ಈರೋಬಿ
ನಿನ್ನ ಪುರುಷ ಮಡಿದಾನೆ ರಣದಲ್ಲಿ
ದಂಡಿನ್ಹಾದೀಲಿ ಹಿಂದೆಮ್ಮೆ ಮೇಸೋಳೆ
ನಿನ್ನ ಗಂಡನ ತಲೆಯ ಹೊಡೆದಾರೆ – ಈರೋಬಿ
ಹಿಂದೆಮ್ಮೆ ಬಿಟ್ಟು ಮರೆಯಾಗೆ
ಸತ್ತ ಸುದ್ದಿ ಬರಲಿ ನೆತ್ತರದರಬಿ ಬರಲಿ
ಕಿತ್ತುಳ್ಳಿ ಬರಲಿ ಗುರುತೀಗೆ – ಸೋಮವಾರದ
ಹೋತನಂತೆ ಕೊಂಡ ಹೊಗುತೀನಿ
ಸತ್ತ ಸುದ್ದಿಬಂತು ನೆತ್ತರದರಬಿ ಬಂತು
ಕತ್ತಿ ಬಂತು ಅವನ ಗುರುತೀಗೆ – ಈರೋಬಿ
ಹೊತ್ತೋರಿಗೇಳು ನಿಲುಭಾರ
ಸಣ್ಣಬೆತ್ತದ ಕೋಲು ಮಣ್ಣಾದೊ ಕಾಣಮ್ಮ
ಕನ್ನೆ ಕುಂಡುರುವ ಅರಮಲ್ಲಿ – ಗಾಜಿನಕಂಬ
ಮಣ್ಣಾದೊ ಕಾಲಗಳಿಗೇಲಿ
ಹಸುರು ಬೆತ್ತದಕೋಲು ಮಸಿಯಾದೊ ಕಾಣಮ್ಮ
ಹಸುಳೆ ಕುಂಡುರವ ಅರಮಲ್ಲಿ – ಗಾಜಿನಕಂಬ
ಮಸಿಯಾದೊ ಕಾಲುಗಳಿಗೇಲಿ
ಪಾಪಿ ಹೆಣ್ಹುಟ್ಟಿ ತೋಪನ್ನೆ ಸೇರಿದೆ
ತೋಪೆ ನಿಂದುರುದು ಬೆಯ್ತಾದೆ
ಕರ್ಮಿ ಹೆಣ್ಹುಟ್ಟಿ ನೀ ವನವನೆ ಸೇರಿದೆ
ವನವೇ ನಿಂದುರುದು ಬೇಯ್ತದೆ – ನನ್ನಂಥ
ಕರ್ಮಿ ಹೆಣ್ಣುಂಟೆ ಧರೆಯಲ್ಲಿ
ಕತ್ತಿ ಬರುವಾಗ ಹೆತ್ತೋರಿಗೆ ಹೆಚ್ಚಳ
ಕತ್ತಿ ಬಂದೂರ ಹೊಗುವಾಗ – ಈರೋಬಿ
ಹೆತ್ತೋರಿಗೇಳು ನಿಲುಭಾರ
ಬಾಕು ಬರುವಾಗ ಬಾಲದಿರಿಗ್ಹೆಚ್ಚಳ
ಬಾಕು ಬಂದೂರ ಹೋಗುವಾಗ – ಈರೋಬಿ
ಭಾವದಿರ ಗೋಳು ನಿಲುಭಾರ
ಸಾಲು ಬರುವಾಗ ತಾಯಮ್ಮಗೆ ಹೆಚ್ಚಳ
ಸಾಲು ಬಂದೂರ ಹೊಗುವಾಗ – ಈರೋಬಿ
ತಾಯಮ್ನ ಗೋಳು ನಿಲುಭಾರ
ಹಚ್ಚಡ ಬರುವಾಗ ಅವರಪ್ಪಾಜಿಗೆ ಹೆಚ್ಚಳ
ಹಚ್ಚಡ ಬಂದೂರ ಹೊಗುವಾಗ – ಈರೋಬಿ
ಅವರಪ್ಪನ ಗೋಳು ನಿಲುಭಾರ
ಅಂಗಿ ಬರುವಾಗ ತಂಗೋರಿಗೆ ಹೆಚ್ಚಳ
ಅಂಗಿ ಬಂದೂರ ಹೊಗುವಾಗ – ಈರೋಬಿ
ತಂಗ್ಯಮ್ಮನ ಗೋಳು ನಿಲುಭಾರ
ಉಂಗುರ ಬರುವಾಗ ಅವರಣ್ಣಯ್ಯಗೆ ಹೆಚ್ಚಳ
ಉಂಗುರ ಬಂದೂರ ಹೊಗುವಾಗ – ಈರೋಬಿ
ಅವರಣ್ಣನ ಗೋಳು ನಿಲುಭಾರ
ತುಪ್ಪ ಅನ್ನವುಂಡು ಒಪ್ಪುಳ್ಳ ನಡುಕಟ್ಟು
ದಪ್ಪದೊಂದು ಕೊಡಲಿ ಹೆಗಲೊಡ್ಡಿ – ಈರೋಬಿ
ನಿಮ್ಮಪ್ಪದಿರ್ಹೊರಟಾರೆ ಕೊರಡೀಗೆ
ಅತ್ತಿಯ ಮರವ ಹತ್ತಿ ಕಡಿಯೊ ಅಪ್ಪದಿರ
ಮತ್ತೊಂದು ಕೊರಡ ಮಿಗಿಲಾಗಿ – ಕಡಿದಾರೆ
ಪುತ್ತರ ಸಂತಾನ ದೊರೆಯೇದು
ಎಣ್ಣೆ ಅನ್ನವುಂಡು ಸಣ್ಣದೊಂದು ನಡುಕಟ್ಟು
ಸಣ್ಣದೊಂದು ಕೊಡಲಿ ಹೆಗಲೊಡ್ಡಿ – ಈರೋಬಿ
ನಿಮ್ಮಣದೀರ್ಹೊರಟರೆ ಕೊರಡೀಗೆ
ಆಲದ ಮರವ ಏರಿಕಡಿಯೊ ಅಣ್ಣದೀರ
ಮೇಲೊಂದು ಕೊರಡು ಮಿಗಿಲಾಗಿ – ಕಡಿದಾರೆ
ಬಾಳ ಸಂತಾನ ದೊರೆಯೋದು
ಕೊಂಡ ತಗಿಯೋರು ನೀವು ಚೆಂದಾಗಿ ತಗಿರಯ್ಯ
ಕೊಂಡದ ಮೇಲೆ ಗುಡಿಕಟ್ಟಿ – ತಗಿದಾರೆ
ನಿಮಗೆ ಗಂಡು ಸಂತಾನ ದೊರೆಯೋದು
ಕಿಚ್ಚ ತಗಿಯೋರು ನೀವು ಒಪ್ಪವಾಗಿ ತೆಗಿರಯ್ಯ
ಕಿಚ್ಚಿನ ಮೇಲೆ ಗುಡಿಕಟ್ಟಿ – ತೆಗಿದಾರೆ
ನಿಮಗೆ ಪುತ್ರ ಸಂತಾನ ದೊರೆಯೋದು
ಕೊಂಡಕೆ ಸೌದೆ ಹೊರುವ ಕೋಣನೆ ಚೆಂದ ನೋಡಿ
ಕೊಂಬಿಗೆ ಮುತ್ತು ಕೊರಳಿಗೆ – ಹೂವಿನಮಾಲೆ
ಕೊಂಡಕೆ ಸೌದೆ ಹೊರುತಾರೆ
ಕಿಚ್ಚಿಗೆ ಸೌದೆ ಹೊರುವ ಎತ್ತಿನ ಚೆಂದ ನೋಡಿ
ಕೊಂಬಿಗೆ ಮುತ್ತು ಕೊರಳಿಗೆ – ಹೂವಿನಮಾಲೆ
ಕಿಚ್ಚಿಗೆ ಸೌದೆ ಹೊರುತಾವೆ
ಕೊಂಡ ಕೂಡಿಸ್ಬಾಳೆ ಗಂಡನ ತರಿಸ್ಯಾಳೆ
ಗಂಡನ ಕಷ್ಟವ ಮಾಡ್ಯಾಳೆ – ಈರೋಬಿ
ಮುಂದಕೆ ಹೊರಟಳೆ ಈರೋಬಿ
ನೀರಮಿದೀರೋಬಿ ಹೋದಳಪ್ಪನ ಮನೆಗೆ
ಅಪ್ಪಾಜಿ ನನಗೆ ತರನ್ಬೇಳೋ – ಅನ್ನೋ ಹೊತ್ತಿಗೆ
ನಿನ್ನಂತ ಬಾಳು ತಪ್ಪಿದೋರಿಲ್ಲವಮ್ಮ
ಬಾಳು ತಪ್ಪಿದೋರಿಲ್ಲವೆ ಬಾಲನಾದರು ಇಲ್ಲವೆ
ಯಾರ ಬಾಲನ ಕಂಡು ಇರಲಪ್ಪ – ಅಪ್ಪಾಜಿ
ಬೇಗನೆ ಕೊಡೋ ಬಡೆಗಿಚ್ಚ
ಸೀರೆನುಡುವಮ್ಮ ಕುಪ್ಪಸನೆ ಕೊಡುವಮ್ಮ
ಮಲ್ಲಿಗೆಹೂವ ಮುಡಿಯಮ್ಮ – ಈರೋಬಿ
ತೆಪ್ಪನಿರಮ್ಮ ಅರಮಲ್ಲಿ
ಸೀರೆಯನುಡುವಲ್ಲೆ ಕುಪ್ಪುಸವತೊಡುವಲ್ಲೆ
ಮಲ್ಲಿಗೆಹೂವ ಮುಡಿವಲ್ಲೆ – ಅಪ್ಪಾಜಿ
ಬೇಗನೆ ಕೊಡೊ ಒಡೆಗಿಚ್ಚ
ಕಿಚ್ಚು ಎಂಬುದು ಕಚ್ಚಾಟ ತರವಲ್ಲ
ಕತ್ತೋದು ಚೆನ್ನ ವಲುವೋದು-ಈರೋಬಿ
ತೆಪ್ಪನಿರಮ್ಮ ಅರಮಲ್ಲಿ
ಕಿಚ್ಚುಕೊಟ್ಟರೆ ಕೊಡು ಕೊಡದಿದ್ದರೆ ಬಿಡು
ಪಚ್ಚೆ ಕಾಲಾಣೆ ಪತಿಯಾಣೆ – ಕೆಂಪನರಸು
ತೊಟ್ಟಿಲೊಳಗಿರುವ ಶಿಶುವಾಣಿ
ನೀರಮೀದೀರೋಬಿ ಹೋದಳಣ್ಣನ ಮನೆಗೆ
ಅಣ್ಣ ನನಗೆ ತರನೇಳೊ – ಅನ್ನೋವತ್ತಿಗೆ
ನಿನ್ನಂಥ ಬಾಳುಕೆಟ್ಟೋರು ಇಲ್ಲವಮ್ಮ
ಬಾಳುಕೆಟ್ಟೋರಾದರು ಇಲ್ಲವೆ ಬಾಲನಾದರು ಇಲ್ಲವೆ
ಯಾವ ಬಾಲನ ಕಂಡು ಇರಲಣ್ಣ – ಅಣ್ಣಾಜಿ
ಬೇಗನೆ ಕೊಡು ಒಡಗಿಚ್ಚು
ಸೀರೆಯನುಡುವಮ್ಮ ಕುಪ್ಪುಸ ತೊಡುವಮ್ಮ
ಮಲ್ಲಿಗೆಹೂವ ಮುಡಿಯಮ್ಮ – ಈರೋಬಿ
ತೆಪ್ಪನಿರಮ್ಮ ಅರಮಲ್ಲಿ
ಸೀರೆಯನುಡುವಲ್ಲೆ ಕುಪ್ಪುಸ ತೊಡುವಲ್ಲೆ
ಮಲ್ಲಿಗೆಹೂವ ಮುಡಿವಲ್ಲೆ – ಅಣ್ಣಾಜಿ
ಬೇಗನೆ ಕೊಡು ಒಡಗಿಚ್ಚ
ಕಿಚ್ಚೂ ಎಂಬೋದು ಕೆಟ್ಟದು ತರವಲ್ಲ
ಕರ್ತೋದು ಬೆನ್ನು ಒಲೆಯೋದು – ಈರೋಬಿ
ತೆಪ್ಪನೆ ಇರಮ್ಮ ಅರಮಲ್ಲಿ
ಕಿಚ್ಚುಕೊಟ್ಟರೆ ಕೊಡು ಕೊಡದಿದ್ದರೆ ಬಿಡು
ಪಚ್ಚೆ ಕಾಲಾಣೆ ಪತಿಯಾಣೆ – ಕೆಂಪೇವರಸು
ತೊಟ್ಟಿಲೊಳಗಿರುವ ಶಿಶುವಾಣಿ
ಗಂಡ ಸಾಯೋಕಿಂತ – ಮುಂದ್ಯಾಗೋಕಿಂತ
ಕಂಡೋರ ಮನೆಯ ಕಸನ್ಹಾಕೆ – ಸಾಯೋಕಿಂತ
ಕೊಂಡವನ್ನೋದೆ ಕಡುಲೇಸು
ರಾಗಿ ಮಾಡಿದ ಕಲ್ಲ ಬೀದಿಗೆ ಚೆಲ್ಲೋಳಿ
ನಾದನಿ ನಿನ್ನ ವಿಷವ ಬಿಡಲಿಲ್ಲ – ನಮ್ಮಿಬ್ಬರ
ಗುದ್ದಾಟವಿಲ್ಲಿಗೆ ಸವೆದ್ಹೋದೊ
ಅಕ್ಕ ಮಾಡಿದ ಕಲ್ಲ ಹಟ್ಟೀಗೆ ಚೆಲ್ಲೋಳೆ
ಅತ್ತಿಗೆ ನಿನ್ನ ವಿಷವ ಬಿಡಲಿಲ್ಲ – ನಮ್ಮಿಬ್ಬರ
ಕಿತ್ತಾಟ ಇಲ್ಲಿಗೆ ಸರಿಯಾದೊ
ಬತ್ತ ಮಾಡಿದ ಕಲ್ಲ ಬಚ್ಚಲಿಗೆ ಚೆಲ್ಲೋಳೆ
ಅತ್ಯಮ್ಮ ನಿನ್ನ ವಿಷವ ಬಿಡಲಿಲ್ಲ – ನಮ್ಮಿಬ್ಬರ
ಗುದ್ದಾಟ ಇಲ್ಲಿಗೆ ಸರಿಯಾದೊ
ಹಾಲ ತಕ್ಕಂಡು ನಮ್ಮ ತಾಯನ್ನು ಬರಹೇಳಿ
ತುಪ್ಪಕಿಂತ ಮೇಲು ಜೇನುತುಪ್ಪ – ತಕ್ಕೊಂಡು
ನಮ್ಮಪ್ಪ ಮುದ್ದಯ್ನ ಬರಹೇಳಿ
ಎಣ್ಣೆ ತಕ್ಕೊಂಡು ನಮ್ಮಣ್ಣಯ್ನ ಬರಹೇಳಿ
ಎಣ್ಣೆಗಿಂತ ಮೇಲೆ ಹರಳೆಣ್ಣೆ – ತಕ್ಕೊಂಡು
ಅಣ್ಣ ನಿಂಗಣ್ಣನ ಬರಹೇಳಿ
ಉಪ್ಪರಿಕೆ ಉಪ್ಪರಿಕೆ ಏಳಂತರದುಪ್ಪರಿಗೆ
ಉಪ್ಪರಿಗೆ ಒಳಗೆ ಒರಗಿರುವ – ಈರೋಬಿ
ನಿಮ್ಮ ತಾಯಿ ಬಂದವಳೆ ಮಕ ತೋರೆ
ತಾಯಿ ಬಂದರೆ ಬರಲಿ ಹಾಲು ತಂದರೆ ತರಲಿ
ನನ್ನ ಹಾಲಿನಂಥ ಬದುಕು ಅಡವೀಲಿ – ಈಡಾಡುವಾಗ
ತಾಯಮ್ನಗೊಡವೆ ನಮಗೇನು
ಮಾಳಿಗೆ ಮಾಳಿಗೆ ಏಳಂತರದ ಮಾಳಿಗೆ
ಮಾಳಿಗೆ ಒಳಗೆ ಒರಗಿರುವ – ಈರೋಬಿ
ನಿಮ್ಮಪ್ಪ ಬಂದವನೆ ಮಕತೋರೆ
ಅಪ್ಪ ಬಂದರು ಬರಲಿ ತುಪ್ಪ ತಂದರು ತರಲಿ
ತುಪ್ಪದಂತ ಬದುಕು ಅಡವೀಲಿ – ಈಡಾಡುವಾಗ
ನಮ್ಮಪ್ಪನಗೊಡವೆ ನಮಗೇನು
ಮಂಚದಮೇಲೆ ಮಲಗಿರೊ ಈರೋಬಿ
ನಿಮ್ಮಣ್ಣ ಬಂದವ್ನೆ ಮಕ ತೊರೆ
ಅಣ್ಣ ಬಂದರು ಬರಲಿ ಎಣ್ಣೆ ತಂದರು ತರಲಿ
ಎಣ್ಣೆಯಂಥ ಬದುಕು ಅಡವೀಲಿ – ಈಡಾಡುವಾಗ
ನಮ್ಮಣ್ಣನಗೊಡವೆ ನಮಗೇನು
ಕೊಂಡ ತೆಗೆಸ್ಯಾಳೆ ಕೊಂಡಾ ಕುಡಿಸ್ಯಾಳೆ
ಮುಂದಾಕೊಂಟಾಳೆ ಈರೋಬಿ
ಬಣ್ಣ ಇಟ್ಟುಗಂಡು ಬಂಗಾರ ತೊಟ್ಟುಗಂಡು
ಬೀದೀಲಿ ಹೊರಟಳೆ ಈರೋಬಿ
ಕೊಂಡಕೋಗೋಳ ಕೈಲಿ ಹನ್ನೆರಡು ನಿಂಬೆಹಣ್ಣು
ಹನ್ನೆರಡುದುರುಬು ಕರುವಲ್ಲೆ – ಈರೋಬಿ
ಕೊಂಡಕ್ಹೊಗೋದೆ ಸಡಗರ
ಕಿಚ್ಚಿಗ್ಹೋಗಳಕೈಲಿ ಮುಚ್ಚಳ ನಿಂಬೆಹಣ್ಣು
ಕಿಚ್ಚೇಳುದುರುಬ ಕುರುವಲ್ಲೊ – ಈರೋಬಿ
ಅವಳು ಕಿಚ್ಚಿಗೋಗ್ಹೋದೆ ಸಡಗರ
ನಿಂಬೆಯಹಣ್ಣ ಅಂಬರಕೀಡಾಡುತ
ರಂಬೆ ತನ್ನ ತೋಳ ತಿರುವುತ – ಈರೋಬಿ
ಬಂದೋರಮುಂದೆ ಮೆರೆದಾಳೊ
ಬಾಳೆಯಹಣ್ಣ ಬಾನಿಗೀಡಾಡುತ್ತ
ಬಾಲೆ ತನ್ನ ತೋಳ ತಿರುವುತ್ತ – ಈರೋಬಿ
ಅವರ ಭಾವದೀರಮುಂದೆ ಮೆರೆದಾಳೊ
ಅರಿಸಿಣ ಸೀಗೆಕಾಯ ಸರಸರನೀಡಾಡುತ್ತ
ಅವಳರಸಿ ಈರೋಬಿ ಬರಹೇಳಿ – ಸೀಗೆಕಾಯಿ
ಅವು ಇನವಂದನಾಡಿ ನಗುತಾವೆ
ಎಣ್ಣೆ ಸೀಗೆಕಾಯ ಇನವಂದನಾಡುತಾನೆ
ಕನ್ನೆ ಈರೋಬಿ ಬರಹೇಳಿ – ಸೀಗೆಕಾಯಿ
ಅವು ಇನವಂದನಾಡಿ ನಗುತಾವೆ
ಹುಟ್ಟಿದ್ದಳಿಸಂದ್ರ ಬೆಳೆದಿದ್ದು ನಾಗ್ತಿಹಳ್ಳಿ
ಕೆಟ್ಟು ಬಾಳಿದ್ದು ಬೆಳ್ಳೂರು – ಹೆಣ್ಣು ಮಕ್ಕಳು
ನನ್ನಂಗೆ ನಿಂದು ಉರಿಯಾಲಿ
ಬೆಳ್ಳೂರಲ್ಲಿ ಒಬ್ಬ ಬೇಡರ ಹುಡುಗನ್ನ
ಬಾಗಿಲ ತೆಗಿಸೆ ಇವರೀಗೆ – ನಾನೀಗ
ಕಳಸ ಮುಂದಾಗಿ ಬರುತೀನಿ
ಕಳಸ ಹೊತ್ತುಕೊಂಡು ಬಂದಳು ಈರೋಬಿ
ಕೊಂಡ ಮೂರುಸುತ್ತು ಬಳಸ್ಯಾಳು – ಈರೋಬಿ
ಕಳಸವ ಮಡಗಿ ಕೈಯೆತ್ತಿ ಮುಗಿದಾಳು – ಈರೋಬಿ
ಕೊಂಡಕೆ ಮುಂದಾಗಿ ನಡೆದಾಳು
ಕೋಲುಮಲ್ಲಿಗೆ ಕೋಲಣ್ಣ – ಕೋಲು ಚಿನ್ನದ ಕೋಲಣ್ಣ
***
ಬೆಳ್ಳೂರು ಸುತ್ತಿನಲ್ಲಿ ಸಂಗ್ರಹಿಸಿದ ಮತ್ತೊಂದು ಕೃತಿಯಲ್ಲಿ ಕಥಾಸೂತ್ರ ಒಂದೇ ಆದರೂ ಮೂಲಕಥೆ ಇನ್ನೂ ಸ್ಪಷ್ಟಗೊಳ್ಳುತ್ತದೆ.
ಪತಿ ಶಂಕರರಾಯ ಮಡಿದ ಸುದ್ದಿ ಈರೋಬಿಗೆ ಎಮ್ಮೆ ಕಾಯುವಾಗ ಮುಟ್ಟುತ್ತದೆ. ಹೇಗೆ ಮಡಿದನೆಂಬ ವಿಷಯ ಖಚಿತವಾಗಲಿಲ್ಲ. ಯಾರೊಡನೆಯೋ ಹೋರಾಡಿ ಮಡಿದಿರಬೇಕೆಂಬ ಊಹೆಗಳು ಹರಡುತ್ತವೆ. ಆದರೆ ಈರೋಬಿ ವೀರನಾದ ತನ್ನ ಪತಿ ಮಡಿದನೆಂದೇ ನಂಬಳು !
ಬೆಟ್ಟದ ಸುತ್ತವ ಬಿಟ್ಟೆಮ್ಮೆ ಕಾಯೋಳೆ
ದುಂಡಿ ಕೈಬಳೆ ಹೊಡೆದವು ||ಸುವ್ವಿ||
ಕೊಂಡದ ಸುತ್ತವ ಬಿಟ್ಟೆಮ್ಮೆ ಕಾಯೋಳೆ
ಭದ್ರೆ ಕೈ ಬಳೆ ಹೊಡೆದವು ||ಸುವ್ವಿ||
ಕಡುದ ಕತ್ತಿ ಬರಲಿ ಹಿರಿದ ಈಟಿ ಬರಲಿ
ಜೂಲು ನಾಯಿ ಬರಲಿ ಗುರುತೀಗೆ ||ಸುವ್ವಿ|| ಬೆಳ್ಳೂರ
ಬೋರೆ ಮೇಲೆ ನಾವು ನೆಲೆಗೊಂಡು ||ಸುವ್ವಿ||
ಕಡುದ ಕತ್ತಿ ಬಂದೊ ಹಿರಿದ ಈಟಿ ಬಂದೊ
ಜೂಲುನಾಯ ಬಂದೊ ಗುರುತೀಗೆ ||ಸುವ್ವಿ|| ಬೆಳ್ಳೂರ
ಬೋರೆ ಮೇಲ್ಯವೆ ನೆಲೆಗೊಂಡೊ
ಶಂಕರರಾಯ ಕಡಿದ ಕತ್ತಿ, ಹಿರಿದ ಈಟಿಗಳು ಬಂದುವು. ಅವನ ಜೊತೆಯಲ್ಲಿ ಹೋಗಿದ್ದ ಜೂಲು ನಾಯಿಯೂ ಬಂದಿತು. ನಡೆದ ಘಟನೆಯೇನು ಎನ್ನುವುದೂ ಸ್ಪಷ್ಟವಾಯಿತು.
ಬಸುರಿ ಈರೋಬಿ ಬಟ್ಟಲಲ್ಲುಣುತಾಳೆಂದು
ಗಟ್ಟಿದ ಕೆಳಗಲ ತಣಗೇಯ ||ಸುವ್ವಿ|| ತರಲ್ಹೋಗಿ
ಸುಮ್ಮನಿದ್ದ್ಯಾಗುರುವ ಕೆಣಕೀದ ||ಸುವ್ವಿ|| ಕಾರಣಕಾಗಿ
ಶೆಟ್ಟಿ ಶಂಕರರಾಯ್ನ ತಲೆ ಮಡಿದೊ ||ಸುವ್ವಿ||
ಪತಿಯ ಮರಣದ ವಾರ್ತೆ ಖಚಿತಗೊಂಡ ಕೂಡಲೆ ಈರೋಬಿ ಕೊಂಡವನ್ನು ಏರಲು ಸಿದ್ಧಳಾಗುತ್ತಾಳೆ. ಅತ್ತೆ ಸಮಾಧಾನ ಹೇಳುತ್ತಾಳೆ :
ಗಂಡ ಸುತ್ತೋರಿಲ್ಲವೆ ಮುಂಡೇರಾದೋರಿಲ್ಲವೆ
ಮುಂಡೇರಿಲ್ಲವೇನೆ ಧರೆ ಮೇಲೆ ||ಸುವ್ವೀ||
ಗಂಡ ಸತ್ತೋರವರೆ ಮುಂಡೇರಾದೋರವರೆ
ಹೀನ ಬತ್ತಲ್ಲೆ ಕುಲಕೆಲ್ಲ ||ಸುವ್ವಿ|| ಅತ್ತ್ಯಮ್ಮ
ವಾರಾರಗಿತ್ತೀರು ಆಡುಕಾಯ್ತ ||ಸುವ್ವಿ|| ಅತ್ಯಮ್ಮ
ಮೈದಯ್ಯ ಮಾವದೀರು ನಗುತಾರೆ
ಮೇಲಿನ ಪಾಠಭೇದಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ಮತ್ತೊಂದು ಅಂಶ ಈ ಕಥೆಯಲ್ಲಿ ಬರುವ “ನಿಂಗೇಗೌಡ’ನ ಪ್ರಸಂಗ. ಬಹುಶಃ ಅವಳು ಕೊಂಡವೇರದೆ ಉಳಿದರೆ ತಾನು “”ಕೂಡಾವಳಿ”ಯನ್ನು ಮಾಡಿಕೊಳ್ಳುವ ಪ್ರಲೋಭನೆಯನ್ನು ತೋರುತ್ತಾನೆ.
ಚೆನ್ನಪಟ್ಟಣದಿಂದ ಚಿನ್ನದುಂಗುರ ಬಂದೊ
ಕನ್ನೆ ಈರೋಬಿ ಹಿರಿಯೋಳೆ – ನಿಂಗನಗೌಡ
ಚಿನ್ನದುಂಗುರುವ ಕಳಿಸ್ಯಾನೆ
ಹಟ್ಟಿಕಲ್ಲಡಗಲಿ ಕೊಟ್ಟಿಗೆ ಬರಿದಾಗಲಿ
ಹಿಂಡೆಮ್ಮೆ ಸಾಲು ಅಡಗಲಿ – ನಿಂಗನಗೌಡ
ನನ ಗೋಳು ನಿಮ್ಮೆಣ್ಣಿಗೆ ಮಡಗಿರಲಿ
ಈರೋಬಿಯ ಸ್ಥಿತಿಯನ್ನು ನೆನೆದು ಬಳಗವೆಲ್ಲ ಗೋಳಿಡುವ ಹೃದಯಸ್ಪರ್ಶಿ ಸನ್ನಿವೇಶವೂ ಈ ಕೃತಿಯಲ್ಲಿ ಮುಖ್ಯವಾದುದು –
ವಾಲೆಯಿಕ್ಕುವಾಗ ತಾಯವ್ಗೆ ಹೆಚ್ಚಳ
ವಾಲಿಕ್ಕಿ ಈರೋಬಿ ಮೆರೆವಾಗ – ತಾಯಮ್ಗೆ
ಕಂಡುಗ ದುಃಖ ಎರಗಾವೆ
ಕಪ್ಪನಿಕ್ಕುವಾಗ ಅವರಪ್ಪಗೆ ಹೆಚ್ಚಳ
ಕಪ್ಪಿಕ್ಕಿ ಈರೋಬಿ ಮೆರೆವಾಗ – ಅವರಪ್ಪಗೆ
ಕಂಡುಗ ದುಃಖ ಎರಗಾವೊ
ಹೀಗೆಯೇ ಬಣ್ಣವನ್ನುಡುವಾಗ ಅವರ ಅಣ್ಣನಿಗೆ, ಅಕ್ಷತೆಯನ್ನಿಡುವಾಗ ಅವರ ಅಕ್ಕನಿಗೆ ಕಂಡುಗ ದುಃಖ ಎರಗುತ್ತವೆ. ಇನ್ನು ಕೊಂಡ ಹಾಯುವ ಪರಿ –
ಕೊಂಡಕ್ಹೋಗುವಾಗ ಮತ್ತೇನು ಸುಂಗಾರ
ಈಚಲಗರಿ ನಿಂಬೆಹಣ್ಣು – ಹಿಡಕೊಂಡು
ಕೊಂಡಕ್ಹೋಗೋದೆ ಬಾಳ ಲೇಸು
ಕೊಂಡಕ್ಹೋಗುವಾಗ ಇನ್ನೇನು ಸುಂಗಾರ
ನೀಲ ಪತ್ತಲುಟ್ಟುಕೊಂಡು ನಿಲುಗನಡಿ – ಹಿಡಿಕೊಂಡು
ಅವಳು ಕೊಂಡಾಕ್ಹೋಗೋದೆ ಬಾಳ ಲೇಸು
ಬೆಳ್ಳೂರು ಸಮೀಪದ ಕರೀಜೀರಹಳ್ಳಿಯ ಒಕ್ಕಲಿಗರ ಪುಟ್ಟಮ್ಮ (೨೫ ವರ್ಷ) ಹಾಡಿದ ಒಂದು ಕಥನಗೀತೆ.
ಪಾಠಾಂತರಗಳು ಮತ್ತು ಸಮಾನ ಆಶಯದ ಗೀತೆಗಳು
೧) ಒಡ್ಡಿಗೆರೆ ನಾಗಮ್ಮ, ಕ.ರಾ.ಕೃ. ಹಾಡಿನಲ್ಲಿ ನಾಡ ಕತೆಗಳು, ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು – ೧೯೬೨, ಪು.ಸಂ.೪೪-೭೨
೨) ಈರೋಬಿ, ನಾಗೇಗೌಡ ಎಚ್.ಎಲ್.; ಸೋಬಾನೆ ಚಿಕ್ಕಮ್ಮನ ಪದಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು – ೧೯೭೨ ಪು.ಸಂ. ೧೯೨-೧೯೮
೩) ವಡ್ಡಿಗೆರೆ ನಾಗಮ್ಮ, ಕಾಳೇಗೌಡ ನಾಗವಾರ, ಬಯಲು ಸೀಮೆಯ ಲಾವಣಿಗಳು, ಜನಪದ ಸಾಹಿತ್ಯ ಅಕಾಡೆಮಿ, ಮೈಸೂರು – ೧೯೭೩ ಪು.ಸಂ. ೭೩-೮೮
೪) ಧೂಳು ಗವುದಾವೆ ನಾಗಮ್ಮ ದುಕ್ಕಗಳೆದ್ದಾವೆ. ಕಂಬಾಳು ಸಿದ್ದಗಂಗಯ್ಯ ಬಿ. ಮಾತಾಡು ಮಲ್ಲಿಗೆ ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು – ೧೯೭೩ ಪು.ಸಂ. ೫೪-೬೪
೫) ಕೆಂಗಪ್ಪನ ಹಟ್ಟಿ ತಿಮ್ಮವ್ವ, ನಾಗೇಗೌಡ ಎಚ್.ಎಲ್. ಪದವವೆ ನಮ್ಮ ಎದೆಯಲ್ಲಿ; ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು – ೧೯೭೬ ಪು.ಸಂ. ೨೬೯-೨೭೪
೬) ಎತ್ತಿದೆ ನಾಗವ್ವನ ಸ್ಮರಣೆಯಾ, ನಾಗೇಗೌಡ ಎಚ್.ಎಲ್. ಪದವವೆ ನಮ್ಮ ಎದೆಯಲ್ಲಿ; ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು – ೧೯೭೬ ಪು.ಸಂ. ೨೮೪-೨೯೫
೭) ಈರೋಬಿ, ಚಂದ್ರಯ್ಯ ಬಿ.ಎನ್. ಜಾನಪದ ಕಥನ ಗೀತೆಗಳು, ಶರತ್ ಪ್ರಕಾಶನ, ಮೈಸೂರು – ೧೯೭೯ ಪು.ಸಂ. ೩೫-೪೩
೮) ಈರೋಬಿ, ಲಿಂಗಯ್ಯ. ಡಿ ಮತ್ತು ಸಂಧ್ಯಾರೆಡ್ಡಿ ಕೆ.ಆರ್. ಜಾನಪದ ಸ್ವರೂಪ ಮತ್ತು ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೧೯೭೯ ಪು.ಸಂ. ೨೦೩-೨೧೦
೯) ಮಹಾಸತಿ ವೀರ ತಿಮ್ಮವ್ವ, ಹನೂರು ಕೃಷ್ಣಮೂರ್ತಿ : ಕತ್ತಾಲ ದಾರಿ ದೂರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು – ೧೯೮೩ ಪು.ಸಂ. ೭-೩೫
೧೦) ಮಹಾಸತಿ ತಾಡಿನಾಗಮ್ಮ, ಹನೂರು ಕೃಷ್ಣಮೂರ್ತಿ ಕತ್ತಾಲ ದಾರಿ ದೂರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು – ೧೯೮೩ ಪು.ಸಂ. ೪೩-೭೯
೧೧) ಮಹಾಸತಿ ಕಾಟವ್ವ, ಹನೂರು ಕೃಷ್ಣಮೂರ್ತಿ ಕತ್ತಾಲ ದಾರಿ ದೂರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು – ೧೯೮೩ ಪು.ಸಂ. ೮೪-೯೬
೧೨) ಕೊಂಡಾಟ ಕಾಟವ್ವ ಹನೂರು ಕೃಷ್ಣಮೂರ್ತಿ ಜನಪದ ಮತ್ತು ಬುಡಕಟ್ಟು ಗೀತೆಗಳು : ಸಾಹಿತ್ಯ ಅಕಾಡೆಮಿ ಬೆಂಗಳೂರು – ೧೯೯೮ ಪು.ಸಂ. ೧೦೫-೧೧೭
* ಈರೋಬಿ, ಪರಮಶಿವಯ್ಯ ಜೀ.ಶಂ. ಜಾನಪದ ಖಂಡ ಕಾವ್ಯಗಳು ಶಾರದಾ ಮಂದಿರ, ಮೈಸೂರು – ೧೯೬೮ ಪು.ಸಂ.೧೩-೨೧.
Leave A Comment