ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಚಳವಳಿಯು ತೀವ್ರವಾಲು ಕಾರಣ ಅಲ್ಲಿ ಬಲು ಹಿಂದಿನಿಂದಲೂ ಬೆಳೆದು ಬಂದ ಬ್ರಿಟೀಷ್ ವಿರೋಧಿ ಭಾವನೆ. ಕರನಿರಾಕರಣೆಯನ್ನು ಯಶಸ್ವಿಯಾಗಿ ಕೆಲವು ತಾಲೂಕುಗಳಲ್ಲಾದರೂ ನಡೆಸಲು ಸಾಧ್ಯವಾದದ್ದು ಇಡೀ ಜಿಲ್ಲೆಯ ಜನರಲ್ಲಿ ಇದ್ದ ತೀವ್ರ ರಾಷ್ಟ್ರೀಯ ಜಾಗೃತಿ. ೧೯೩೨-೩೩ ರಲ್ಲಿ ನಡೆದ ಕರನಿರಾಕರಣೆಯಲ್ಲಿ ಎಲ್ಲ ತಾಲೂಕುಗಳ ಒಟ್ಟು ೧೦೦೦ ಕುಟುಂಬಗಳು ಕಡೆತನಕ ಕಂದಾಯ ತೆರದೆ ಹೋರಾಡಿದ್ದು ಸರ್ವವಿದಿತ. ಕಂದಾಯ ತೆರದೆ. ಭೂಮಿ, ಮನೆ ಕಳೆದುಕೊಂಡು ಅಪಾರ ಕಷ್ಟ ನಷ್ಟಕ್ಕೆ ಇವರು ಒಳಗಾದದ್ದು ನಿಜವಾದರೂ ಆಯಾ ತಾಲೂಕುಗಳ ಸಮಗ್ರ ಜನತೆ ಹಾಗೂ ಇತರ ತಾಲೂಕುಗಳ ಬಹುಪಾಲು ಸಮಾಜ ಚಳವಳಿಗೆ ಬೆಂಬಲ ನೀಡಿರದಿದ್ದಲ್ಲಿ ಕರನಿರಾಕರಣ ಯಶ ಕಾಣುತ್ತಿರಲಿಲ್ಲ. ಕಂದಾಯ ನೀಡದವರು ಧೈರ್ಯಸ್ಥೈರ್ಯ ಕುಸಿಯುವ ಸ್ಥಿತಿಗೆ ನೆರೆಕರೆಯ ಜನತೆ ಅವಕಾಶ ನೀಡಿದ್ದರೆ ಪರಿಸ್ಥಿತಿ ವಿಚಿತ್ರವೇ ಆಗುತ್ತಿತ್ತು. ಕರಬಂದಿಯಲ್ಲಿ ಪಾಲುಗೊಂಡವರ ವಸ್ತುಗಳನ್ನು ಜಪ್ತಿ ಮಾಡಿ ಹರಾಜಿಗಿಟ್ಟಾಗಿನ ಸನ್ನಿವೇಶ ಜ್ಞಾಪಿಸಿದರೆ ಈ ವಿಚಾರ ಸ್ಪಷ್ಟವಾಗುತ್ತದೆ. ಸ್ಥಳೀಯ ಸಾಮಾನ್ಯ ನಾಗರಿಕರು ತೀರ ಅಗ್ಗದ ಬೆಲೆಗೆ-ಭೂಮಿ, ರಾಸು, ಪಾತ್ರೆ ಪರಡಿ ಇತ್ಯಾದಿ-ಇಂಥ ವಸ್ತುಗಳನ್ನು ಹರಾಜಿಗಿಟ್ಟರೂ ಸ್ಥಳೀಯರಾರೂ ಕೊಳ್ಳಲು ಮುಂದಾಗಲಿಲ್ಲ. ಸ್ಥಳೀಯ ಸರ್ಕಾರೀ ನೌಕರರು ಹಿರಿಯ ಅಧಿಕಾರಿಗಳ ಒತ್ತಾಯಕ್ಕೆ ಒಳಗಾಗಿ ಅಂಥ ವಸ್ತುಗಳನ್ನು ಕೊಂಡಾಗ ಎದುರಿಸಬೇಕಾಗಿ ಬಂದ ಪ್ರತಿಭಟನೆಯ ಕತೆಗಳು ಕಾವ್ಯಕ್ಕೆ ವಸ್ತುಗಳು. ಕೆಲವು ಖಾಸಗಿ ವ್ಯಕ್ತಿಗಳಾದ ಸಿದ್ದಾಪುರ ತಾಲೂಕಿನ ಅಪ್ಪಡಿಕೆ ರಾಮಯ್ಯ, ಅಂಕೋಲೆ ತಾಲೂಕಿಗೆ ಹೊರಗಿನಿಂದ ಬಂದು ಜಮೀನು ಖರೀದಿಸಿದ ಬಹಾದ್ದೂರ್ ಖಾನ್ ಮುಂತಾದವರಿಗಾದ ಪಾಡು ಶೋಚನೀಯ. ಚಳವಳಿಯ ಕಾಲಕ್ಕೆ ಬ್ರಿಟೀಷ್ ಪಾರ್ಲಿಮೆಂಟ್ನ ಶಿಷ್ಟಮಂಡಲದ ಅಯೋನಾರ್ಡ್‌ ಮ್ಯಾರ್ಟ್‌ಸ್‌ ೧೯೩೨ ರಲ್ಲಿ ಅಂಕೋಲೆಗೆ ಬಂದಿರಲು ಅಲ್ಲಿ ತಹಶೀಲ್ದಾರರು ಅವರಿಗೆ ನೀಡಿದ ಮಾಹಿತಿ ಪರಿಸ್ಥಿತಿಗೆ ಹಿಡಿದ ಕನ್ನಡಿ. “ತಾಲೂಕಿನ ೩೮,೦೦೦ ಜನಸಂಖ್ಯೆಯಲ್ಲಿ ೧೫,೦೦೦ ಜನರು ಪ್ರತ್ಯಕ್ಷ ಕಾಂಗ್ರೆಸ್ಸಿನ ಚಟುವಟಿಕೆಯಲ್ಲಿ ಭಾಗವಹಿಸುವವರು, ೨೩,೦೦೦ ಜನರು ಕಾಂಗ್ರೆಸ್ಸಿನಲ್ಲಿ ಸಹಾನಿಭೂತಿ ಉಳ್ಳವರು.”

ಅ.ಭಾ. ಕಾಂಗ್ರೆಸ್ ನೇಮಿಸಿದ ಸಮಿತಿಯೊಂದರ ಮುಂದೆ ವಳವಳಿಯ ಗತಿಯ ಬಗ್ಗೆ ಸಾಕ್ಷ್ಯಾನೀಡುತ್ತ ೧೯೨೨ ರಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷ ಗಂಗಾಧರ ರಾವ್ ದೇಶಪಾಂಡೆಯವರು ಹೀಗೆ ಹೇಳಿದ್ದರು: “ನಾನು ನನ್ನ ಹೇಳಿಕೆಯಲ್ಲಿ ಕರ್ನಾಟದಲ್ಲಲಿ ಕಾರವಾರ ಜಿಲ್ಲೆ ಪರಿಸ್ಥಿತಿ ಕರನಿರಾಕರಣ ಚಳವಳಿಗೆ ಅನುಕೂಲವಾಗಿದೆಯೆಂದು ಹೆಳಿದ್ದೇನು. ಆ ಜಿಲ್ಲೆಯ ಜನರು ಸ್ವಭಾವತಃ ಶಾಂತವೃತ್ತಿಯವರೂ ಕೈಕೊಂಡ ಕೆಲಸವನ್ನು ಬಿಡದವರೂ ಆಗಿರಬೇಕೆಂದು ನಾನು ಭಾವಿಸಿದ್ದೆ. ಅಲ್ಲಿ ಬ್ರಾಹ್ಮಣ-ಬ್ರಾಹ್ಮಣೇತರ ವಾದವೂ ವಿಷೇಷವಾಗಿರಲಿಲ್ಲ. ಗಾಂಧೀಜಿಯವರ ಬಗ್ಗೆ ಜನಸಾಮಾನ್ಯರ ನಿಷ್ಠೆಯಿತ್ತು. ಜನರು ಭಾವಿಕರಾಗಿದ್ದು ತ್ಯಾಗಕ್ಕೆ ಸಿದ್ಧರಾಗಿದ್ದರು. ಈ ಅನುಕೂಲ ಪರಿಸ್ಥಿತಿ ಬೇರೆ ಯಾವ ಜಿಲ್ಲೆಯಲ್ಲೂ ಇರಲಿಲ್ಲ. ಈ ಜಿಲ್ಲೆಯಲ್ಲಿ ಕಾಲೇಜು ಬಿಟ್ಟು ಬಂದು ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ಚೆನ್ನಾಗಿ ಕೆಲಸ ಮಾಡಿದ್ದರು. ನಾನು ಎರಡು ಮೂರು ಸಾರಿ ಈ ಜಿಲ್ಲೆಯಲ್ಲಿ ಪ್ರವಾಸ ಕೈ ಕೊಂಡಿದ್ದೇನೆ. ಆಗ ಎಲ್ಲ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದ್ದೇನು”. (ಶ್ರೀ ದೇಶಪಾಂಡೆ ಗಂಗಾಧರರಾಯರು, ಶ್ರೀ ವಡವಿ ಭಾಷಾಂತರಿಸಿದ ಆತ್ಮಚರಿತ್ರೆ, ಹುಬ್ಬಳ್ಳಿ, ೧೯೬೪. ಪು. ೪೭೪).

ಬಹುಪಾಲು ಕೃಷಿಕರಾಗಿರುವ ಈ ಜಿಲ್ಲೆಯ ಕೃಷಿಕರನ್ನೂ ವಿಶೇಷವಾಗಿ ಸತಾಯಿಸಿ, ವ್ಯಾಪಾರಿಗಳಲ್ಲೂ ನಾನಾ ರೀತಿಯ ಅಸಮಾಧಾನ ಮೂಡಿಸಿ, ತಲೆತಲಾಂತರಗಳಿಂದ ಉಪ್ಪು ತಯಾರಿಸುತ್ತಿದ್ದ ಆಗೇರರಂಥ ಜನರನ್ನು ತೊಂದರೆಗೀಡುಮಾಡಿ, ಉತ್ತರಕನ್ನಡ ಜಿಲ್ಲೆಯಲ್ಲಿ ಬ್ರಿಟಿಷರ ಬಗ್ಗೆ ತೀರ ಶತ್ರುತ್ವದ ಭಾವನೆ ಬೆಳೆಯಲು ಕಾರಣವಾದದ್ದು ಬ್ರಿಟಿಷರ ನೀತಿಗಳು. ಸ್ಥಳೀಯ ಅರಸರಾಗಿದ್ದ ಸೋಂದಾ ಹಾಗೂ ಬಿಳಿಗಿಯ ರಾಜರನ್ನೂ ನೆರೆಯವರೇ ಆಗಿದ್ದ ಕೆಳದಿಯ ಅರಸರನ್ನೂ ಪದಚ್ಯುತಗೊಳಿಸಿ ಈ ಭಾಗವನ್ನು ಆಳಲು ಬಂದ ಹೈದರ್, ಟಿಪ್ಪುಗಳ ಬಗೆಗೆ ಜನರಲ್ಲಿ ಒಡಮೂಡಿದ್ದ ಅಸಮಾಧಾನ ಬ್ರಿಟಿಷರು ಬಂದಾಗ ಕಡಿಮೆಯಾಗುವಂಥ ಸನ್ನಿವೇಶ ಇರಲಿಲ್ಲ. ೧೮೦೦ ರಿಂದ ೧೮೬೨ ರವರೆಗೆ ದೂರದ ಮದ್ರಾಸಿನಿಂದ ಹಾಗೂ ೧೮೬೨ ರ ನಂತರ ಮುಂಬೈಯಿಂದ ಆಳಲ್ಪಡುತ್ತಿದ್ದ ಈ ಜಿಲ್ಲೆಗೆ, ಎರಡು ಅಧಿಪತ್ಯಗಳಲ್ಲಿದ್ದಾಗಲೂ ‘ದೊರೆ’ ಯಿಡುವುದು ದೂರದ ಮದ್ರಾಸ್ ಅಥವಾ ಮುಂಬೈಯಲ್ಲಿ. ಇಲ್ಲಿಯ ಜನರ ಕೂಗು ಅಲ್ಲಿಗೆ ಕೇಳಿಸದು; ಅಲ್ಲಿದ್ದ ಪ್ರಭುಗಳಿಗೆ ಇಲ್ಲಿ ಯವರ ಕೊರಗು ಕಾಣಿಸದು. ಇಂಥ ಸ್ಥಿತಿಯಲ್ಲಿ ಜನರ ಕಷ್ಟ ಕೋಟಲೆಗಳನ್ನು ಅರಿತು ಅದನ್ನು ಪ್ರಾಮಾಣಿಕವಾಗಿ ನಿವಾರಿಸುವ ಯತ್ನ ಸರಿಯಾಗಿ ಎಂದೂ ಆಗಲಿಲ್ಲ.

೧೮೦೦ ರಲ್ಲಿ ಬ್ರಿಟಿಷರು ಇಲ್ಲಿನ ಆಡಳಿತವನ್ನು ವಹಿಸಿಕೊಂಡಾಗ, ಒಳ್ಳೆಯ ಅಧಿಕಾರಿಯೆಂದು ಖ್ಯಾತನಾದ. ಮನ್ರೋ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ನೇಮಿಸಲ್ಪಟ್ಟ. ಆತನ ಕಾಲದಲ್ಲಿ ನಡೆದ ಭೂಕಂದಾಯ ವ್ಯವಸ್ಥೆಯಲ್ಲಿ ಕಂದಾಯದ ದರದಲ್ಲಿ ಇಳಿತಾಯವಾದರೂ ಕಂದಾಯ ಸಂಗ್ರಹದಲ್ಲಿ ಪಾಲಿಸುವ ಕಟ್ಟುನಿಟ್ಟಿನಿಂದಾಗಿ ಕಂದಾಯದ ದರ ರೈತರಿಗೆ ಹೆಚ್ಚೆನಿಸುತ್ತಿತ್ತೆಂದು ಫ್ರಾನ್ಸಿಸ್ ಬುಕನನ್ ೧೮೦೧ ರಲ್ಲಿ ಹೇಳಿದ್ದಾನೆ. (ಜರ್ನಿ, II, P, ೩೨೬) ಮಳೆ-ಬೆಳೆಯ ಸ್ಥಿತಿಯನ್ನು ಗಮನಿಸದೆ ಆಗುತ್ತಿದ್ದ ಈ ಕಂದಾಯ ಸಂಗ್ರಹದ ಬಗ್ಗೆ ೧೮೩೧ ರಲ್ಲಿ ನಡೆದ ಒಂದು ಪ್ರತಿಭಟನೆ ಸಶಸ್ತ್ರ ಬಂಡಾಯದ ರೂಪ ತಾಳಿತು. “ಮಳೆ ಬೆಳೆಯ ಸ್ಥಿತಿ ಕೆಟ್ಟದ್ದಾಗಿದ್ದರಿಂದ ಕಂದಾಯ ಸಂಗ್ರಹಣೆಗೆ ಪ್ರತಿಭಟನೆ ಕಂಡು ಬಂದಿತು” ಎಂದು ಈ ಬಗ್ಗೆ ಸರ್ಕಾರ ಹೇಳಿಕೊಂಡರೂ “ಜಿಲ್ಲಾಧಿಕಾರಿ ಡಿಕೆನ್ಸನರ ಹೆಸರು ಕೆಡಿಸಲು ಹಾಗೂ ಕಂದಾಯ ಇಲಾಖೆಯಲ್ಲಿನ ಕೆಲವು ದೇಶೀಯ ಕ್ರಿಶ್ಚಿನ್ ನೌಕರರ ನೌಕರಿ ಕಡಿತ ಸಾಧಿಸಲು ಜಿಲ್ಲಾಧಿಕಾರಿಯ ಕಚೇರಿಯಲ್ಲಿದ್ದ ಕೆಲವು ಬ್ರಾಹ್ಮಣ ನೌಕರರ ಒಳಸಂಚು ಇದಕ್ಕೆ ಕಾರಣ” ಎಂಬ ವಿವರಣೆ ನೀಡಿ ಸಮಾಧಾನ ಪಟ್ಟುಕೊಂಡುದು ಇಲ್ಲಿ ಕಾಣಿಸುತ್ತದೆ (ಜಿಲ್ಲಾ ಗ್ಯಾಜಿಟಿಯರ್, ೧೮೮೩, II, P.152). ಕ್ಷಾಮ ಬಂದಾಗ, ಅಡಿಕೆಮರಕ್ಕೆ ಕೊಳೆರೋಗ ಬಂದಾಗ ಕಂದಾಯದಲ್ಲಿ ಸೂಟು ನೀಡಲು ಬ್ರಿಟಿಷರು ಮುಂದಾದದ್ದು ತೀರ ನಿಧಾನವಾಗಿದೆ.

ಅಮೆರಿಕನ್ ಅಂತರ್ಯುದ್ಧ ಕಾಲದಲ್ಲಿ ಕರ್ನಾಟಕದ ಒಳನಾಡಿನಲ್ಲಿ ಕಾಣಿಸಿಕೊಂಡ ಅರಳೆಯ ಉಬ್ಬರ (ಕಾಟನ್ ಬೂಮ್) ನಿಂದ ಕುಮಟಾ ಬಂದರಿಗೆ ಎಲ್ಲಿಲ್ಲದ ಮಹತ್ವ ಬಂತು. “ಕುಮಟಾ-ಧಾರವಾಡ” ಎಂದು ಖ್ಯಾತವಾದ ಹತ್ತಿ ಕುಮಟಾ ಬಂದರಿನಿಂದ ಇಂಗ್ಲೆಂಡ್ ಸೇರುತ್ತಿತ್ತು. ಈ ನಾಲ್ಕಾರು ವರ್ಷಗಳಲ್ಲಿ ಈ ಉಬ್ಬರ ಇಳಿದು, ಕುಮಟೆಗೆ ಹೊರಗಿನಿಂದ ಬಂದು ನೆಲೆಸಿದ ವ್ಯಾಪಾರಿಗಳೂ, ಸ್ಥಳೀಯರೂ ತೀರ ನಷ್ಟಕ್ಕೆ ಒಳಗಾದರು. ಇದರ ಹಿಂದೆಯೇ ಕಾರವಾರವು ಸರ್ವಋತು ಬಂದರಾಗುವುದೆಂಬ ವದಂತಿ ಹಬ್ಬಿತು. ಹಾಗೂ ಕಾರವಾರ-ಗದಗ ರೈಲು ಮಾರ್ಗಕ್ಕಾಗಿ ೧೮೬೯ರಲ್ಲಿ ಸರ್ವೇಕ್ಷಣೆ ಆಯಿತು. ಆಗಿನ್ನೂ ಹುಬ್ಬಳ್ಳಿಗೆ ರೈಲು ಬಂದಿರಲಿಲ್ಲ. ಕಾರವಾರದಲ್ಲಿ ಆಗ ವಿದೇಶಿಯ ಎರಡು ಜಿನ್ನಿಂಗ್ ಫ್ಯಾಕ್ಟರಿಗಳೂ ಆದವು. ಆದರೆ ೧೮೭೨ ರಲ್ಲಿ ಮರ್ಮಗೋವಾ ಬಂದರನ್ನು ರಚಿಸಿ, ಅದನ್ನೇ ಮುಂದೆ ರೈಲು ಮಾರ್ಗಕ್ಕೆ ಜೋಡಿಸುವ ನಿರ್ಧಾರ ಆದಾಗ ಜಿಲ್ಲೆಯ ಜನಕ್ಕಾದ ನಿರಾಶೆ ಅಷ್ಟಿಷ್ಟಲ್ಲ. ಜತೆಗೆ ೧೮೮೭ ರಲ್ಲಿ ಧಾರವಾಡ ಜಿಲ್ಲೆಯನ್ನು ಪುಣೆ, ಮುಂಬೈಗಳ ಜೊತೆ ನೇರವಾಗಿ ಸಂಪರ್ಕಿಸುವ ರೈಲು ಮಾರ್ಗ ಆದಾಗ ಉತ್ತರ ಕನ್ನಡ ಜಿಲ್ಲೆಯ ಬಂದರುಗಳಿಂದ ಸಾಗುತ್ತಿದ್ದ ಧಾರವಾಡ ಜಿಲ್ಲೆ, ಬೆಳಗಾವಿ ಜಿಲ್ಲೆಯ ಪ್ರದೇಶಗಳ ಆಯಾತ ನಿರ್ಯಾತಗಳಿಗೆ ಬಹು ಪಾಲು ಹೊಡೆತ ಬಿದ್ದಂತೆ ಆಯಿತು.

೧೮೭೮ರಲ್ಲಿ ಬ್ರಿಟಿಷರು ಉಪ್ಪಿನ ವ್ಯಾಪಾರವನ್ನು ಸರ್ಕಾರಿ ಗುತ್ತಿಗೆಯಾಗಿ ಮಾಡಿ, “ಸಾಣಿಕಟ್ಟಾ, ಕುಮಟಾ, ಭಟ್ಕಳ, ಶಿರಾಲಿ ಮತ್ತು ಬೈಲೂರುಗಳಲ್ಲಿ ಕೆಲಸ ಮಾಡುತ್ತಿದ್ದ” (ಜಿ.ಗ್ಯಾ. ೧೮೮೩, II, P. ೭೨) ಉಪ್ಪಿನ ಕಳಗಳನ್ನು ಮುಚ್ಚುವಂತೆ ಆಯಿತು. ಸಾಣಿಕಟ್ಟೆಯಲ್ಲಿ ಮಾತ್ರ ಸರ್ಕಾರಿ ಗುತ್ತಿಗೆಯ ಸುಪರ್ದಿಯಲ್ಲಿ ಉಪ್ಪಿನ ಉತ್ಪಾದನೆಯಾಗುವಂತಾಯಿತು. ಕರಾವಳಿಯ ಇತರ ಕಡೆ ಇರುವ ಆಗೇರರು ನಿರುದ್ಯೋಗಿಗಳಾದರು. ಉಪ್ಪು ತುಟ್ಟಿಯಾಗಿ ಕೃಷಿಗೂ ಅದನ್ನು ಬಳಸುವುದು ಕಡಿಮೆಯಾಯಿತು. ಕರಾವಳಿಯ ಜನಕ್ಕೆ ಅಗ್ಗವಾಗಿ ಇಲ್ಲವೆ ಪುಕ್ಕಟ್ಟೆಯಾಗಿ ಸಿಗುತ್ತಿದ್ದ ಉಪ್ಪು ಸಿಗದಂತಾಗಿ ಅದರ ಚುರುಕು ಪ್ರತಿಯೊಂದು ಕುಟುಂಬಕ್ಕೂ ಮುಟ್ಟಿತು. ೧೮೭೮ ರಲ್ಲಿ ೮೦ ಪೌಂಡಿನ ಒಂದು ಮಣಕ್ಕೆ ಒಂದು ಆಣೆ ನಾಲ್ಕು ಪೈ ಬೆಲೆ ಇದ್ದ ಉಪ್ಪು ೧೮೮೦ ರಲ್ಲಿ ಆರು ಆಣೆಗೆ ಏರಿತು. ಇದಕ್ಕೆ ಎರಡೂವರೆ ರೂ. ಸುಂಕವಾಗಿ ಮಣ ಉಪ್ಪಿನ ಅಸಲು ಬೆಲೆ ಮೂರು ರೂ. ಗೆ ಸಮೀಪವಾಯಿತೆಂದು ಕೆನರಾ ಗ್ಯಾಜೆಟಿಯರ್ ಹೇಳಿದೆ. (ಪು.೭೩) ಬಳಕೆದಾರರಿಗೆ ಇದು ಮಣಕ್ಕೆ ಮೂರು ರೂ. ಗೂ ಹೆಚ್ಚಾಯಿತೆಂದು ಹೇಳಬೇಕಾಗಿಲ್ಲ.

ಸರಕಾರೀ ಅರಣ್ಯಗಳನ್ನು ಗುರುತಿಸುವ ೧೮೯೮ ರ ಕಾನೂನು ಹಾಗೂ ೧೮೭೮ರ ಭಾರತೀಯ ಅರಣ್ಯಗಳ ಕಾನೂನು (೧೮೭೮ರ VII ಕಾನೂನು) ಗಳ ಪ್ರಕಾರ ಜಿಲ್ಲೆಯ ಒಟ್ಟು ೩೯೧೦ ಚದರ ಮೈಲಿಗಳ ಪ್ರದೇಶದಲ್ಲಿ ಶೇಕಡ ೯೦ ಕ್ಕೆ ಸಮನಾದ ೩೫೪೮ ಚದರ ಮೈಲಿ ಅರಣ್ಯ ಪ್ರದೇಶದಲ್ಲಿ ೬೮೩.೬೭ ಚದರ ಮೈಲಿ ಪ್ರದೇಶಗಳನ್ನು ರಕ್ಷಿತ ಅರಣ್ಯವೆಂದೂ ಘೋಷಿಸಲಾಯಿತು. ಕಾದಿಟ್ಟ ಅರಣ್ಯಗಳಲ್ಲಿ ಜನಸಾಮಾನ್ಯರು ಪ್ರವೇಶಿಸುವಂತಿಲ್ಲ. ಆದರೆ ಕಾದಿಟ್ಟ ರಕ್ಷಿತ ಅರಣ್ಯಗಳನ್ನು ಬಳಸಲು ಕೆಲವಂದು ಹಕ್ಕುಗಳನ್ನೂ, ಸವಲತ್ತುಗಳನ್ನೂ ಜನಸಾಮಾನ್ಯರಿಗೆ ನೀಡಲಾಗಿತ್ತು. ಆದರೆ ಅರಣ್ಯ ಸಂಪತ್ತಿನ ರಕ್ಷಣೆಯ ಬಗ್ಗೆ ಎಷ್ಟೊಂದು ಮುತುವರ್ಜಿ, ಭ್ರಮೆ ಹಾಗೂ ಕಟ್ಟುನಿಟ್ಟಿನ ನಿಲುವುಗಳನ್ನು ಸರ್ಕಾರ ಹೊಂದಿತ್ತೆಂದರೆ, ಮನುಷ್ಯರಿಗಿಂತ ಮರಗಳೇ ಮುಖ್ಯ, ಕೃಷಿಗಿಂತ ಕಾಡೇ ಮುಖ್ಯ ಎಂಬ ನಿಲುವು ಬೆಳೆಯಿತು. ಅರಣ್ಯ ಇಲಾಖೆಯ ನೌಕರರು ನಿರಂಕುಶ ಸರ್ವಾಧಿಕಾರಿಗಳಾಗಿ, ಜಿಲ್ಲಾಧಿಕಾರಿ ಹಾಗೂ ಇತರ ನಾಗರಿಕ ಆಡಳಿತದವರಿಗೂ ಮೀರಿದ ಒಂದು ಸಮಾಂತರ ಆಡಳಿತ ವ್ಯವಸ್ಥೆಯನ್ನು ಸೃಷ್ಟಿಸಿ ಜಿಲ್ಲೆಯ ರೈತದು ಸರ್ಕಾರದ ಶತೃಗಳಾಗುವ ವಾತಾವರಣವು ಉಂಟಾಗಲು ಕಾರಣರಾದರು. ಈ ಬಗ್ಗೆ ಗಣ್ಯ ಸ್ವಾತಂತ್ರ್ಯಯೋಧ ದಿ|| ಶಂಕರ ಗುಲವಾಡಿಯವರ ಮಾತಿನಲ್ಲಿ ಕೇಳಿ: “ಜಿಲ್ಲೆಯಲ್ಲಿ ಆಗ ಬ್ರಿಟೀಷ್‌‌‌ ವಿರೋಧಿ ವಾತಾವರಣ ಬಲವಾಗಿತ್ತು. ಹೈದರ್-ಟಿಪ್ಪುಗಳ ಕಾಲದಿಂದಲೂ ಜಿಲ್ಲೆಯ ಜನ ಬಂಡಾಯವೃತ್ತಿಯನ್ನು ಮೈಗೂಡಿಸಿಕೊಂಡಿದ್ದರು…..” ಜಿಲ್ಲೆಯನ್ನು ಮೀಸಲಿಟ್ಟ ಅರಣ್ಯಗಳ ಪ್ರದೇಶವಗಿ ಬೆಳಸಬೇಕೆಂಬ ಬ್ರಿಟಿಷರ ಧೋರಣೆಇಂದ ಜನರಿಗೆ ಅಪಾರ ಹಿಂಸೆಯಾಗಿತ್ತು. ಜಿಲ್ಲಾ ಅರಣ್ಯಾಧಿಕಾರಿ ಜಿಲ್ಲಾಧಿಕಾರಿಗೂ ಹೆಚ್ಚು ಅಧಿಕಾರ ಚಲಾಯಿತುತ್ತಿದ್ದ. ಅರಣ್ಯದಿಂದ ಸೌದೆ, ಹುಲ್ಲು ತಂದ ಇಲ್ಲವೆ ಅರಣ್ಯಕ್ಕೆ ಬೆಂಕಿ ತಗಲಲು ಕಾರಣರಾದ ಜನರನ್ನೂ ಇಂಥ ಗುಮಾನಿಯ ಮೇಲೆ ನಿರಪರಾಧಿಗಳನ್ನೂ ಹಿಂಸಿಸುವ ಆಗಿನ ಪದ್ಧತಿ ಅಸಹನೀಯ. ಈ ಸಂಬಂಧ ಒಂದು ಖಟ್ಲೆ ಆಯಿತೆಂದರೆ, ನಿರಪರಾಧಿಗಳಾದವರೂ ಮ್ಯಾಜಿಸ್ಟ್ರೇಟರು ಕರೆದ ಊರಿಗೆ ಹಾಜರಾಗಬೇಕು. ಖಟ್ಲೆಯಿಂದ ಪಾರಾಗಲು ಊರು ಬಿಟ್ಟವರೂ ಉಂಟು. ಒಂದು ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಅರಣ್ಯಾಧಿಕಾರಿಗಳ ಹಿಡಿತದಿಂದ ಪಾರಾಗಲು ಕ್ರೈಸ್ತ ಮತಕ್ಕೆ ಸೇರಲು ಒಪ್ಪಿದ್ದೂ ಉಂಟು. ಅರಣ್ಯಾಧಿಕಾರಿಗಳು ಹಾಕುವ ಸುಳ್ಳು ಖಟ್ಲೆಗಳು ಎಂಥವೆಂದರೆ, ಒಂದೆಡೆ ಯಾವುದೇ ಕಾರಣದಿಂದ ಅಡವಿಗೆ ಬೆಂಕಿ ತಗಲಿತಾದರೆ ಅದಕ್ಕೆ ಯಾರದೋ ಶವಸಂಸ್ಕಾರ ಕಾರಣ ಎಂದು, ಯಾರದೇ ಮನೆಯಲ್ಲಿ ಮರಣ ಸಂಭವಿಸಿದ್ದಲ್ಲಿ. ಅಂಥವರ ಮೇಲೆ ನಿರ್ಧಯವಾಗಿ ಸುಳ್ಳು ಖಟ್ಲೆ ಹಾಕುತ್ತಿದ್ದರು. ಈ ಪದ್ಧತಿ ಎಷ್ಟು ಸಾಮಾನ್ಯವಾಯಿತೆಂದರೆ, ಇಂಥ ಒಂದು ಪ್ರಕರಣದಲ್ಲಿ ಆ ಮೂರಲ್ಲಿ ಒಂದು ಲಿಂಗಾಯತರಲ್ಲಿ ಮರಣ ಸಂಭವಿಸಿರಲು, ಅವರ ಮೇಲೆ ಅಡವಿಗೆ ಬೆಂಕಿ ಹಾಕಿದ ಅಪಾದನೆ ಹೇರಿ ಖಟ್ಲೆ ಹಾಕಲಾಗಿತ್ತು. ವಾಸ್ತವವಾಗಿ ಲಿಂಗಾಯತರು ಸತ್ತವರ ಸಮಾಧಿ ಮಾಡುವರಲ್ಲದೆ ಸುಡರು. ಅಧಿಕಾರಿಗಳ ಕುರುಡು ಅಧಿಕಾರ ಚಲಾವಣೆಗೆ ಇದೊಂದು ಉದಾಹರಣೆ. ಆಗಲೇ ವನದುಃಖ ನಿವಾರಣಾ ಸಭೆ, ಸಮ್ಮೇಳನಗಳ ಸಂಘಟನೆ ನಡೆದಿದ್ದವು. ಈ ಸರ್ಕಾರ ವಿರೋಧಿ ಚಟುವಟಿಕೆಗಳು ಜಿಲ್ಲೆಯ ರಾಷ್ಟ್ರೀಯ ಚಟುವಟಿಕೆಗಳಿಗೆ ಹಿನ್ನೆಲೆ ಒದಗಿಸಿದವು. (ಸ್ವಾ ಸಂ. ಸ್ಕೃ III, P. ೮೮) ಶಂಕರ ಗುಲವಾಡಿಯವರ ಈ ಹೇಳಿಕೆ ಸಮಸ್ಯೆಯ ಹಿನ್ನೆಲೆಯ ಪರಿಚಯ ನೀಡುತ್ತದೆ. ಆದರೆ ಜಿಲ್ಲೆಯ ರೈತರ ವನದುಃಖ ಹಾಗೂ ಅರಣ್ಯ ಇಲಾಖೆಯ ನೌಕರರ ಕಿರಾತವರ್ತನೆಯ ವಿವರ ನಿಜವಾಗಿಯೂ ಹೇಡಿಗಳನ್ನು ಬ್ರಿಟೀಷ್‌‌‌ ವಿರೋಧಿಗಳಾಗಿ ಮಾಡುವಂಥದ್ದಿತ್ತು. ೧೮೮೬ ರಲ್ಲೇ ವನದುಃಖ ನಿವಾರಣಾ ಸಭೆಯನ್ನು ಸಂಘಟಿಸಲಾಗಿತ್ತು. ಮುಂದೆ ೧೮೮೭ ರಲ್ಲಿ ಮತ್ತೊಮ್ಮೆ ಶಿರಸಿಯಲ್ಲಿ ಇಂಥ ಸಭೆಯನ್ನು ಸಂಘಟಿಸಿ ಜನರ ವನದುಃಖಗಳ ಕಡೆ ದೇಶದ ಗಮನ ಹರಿಸಲು ೧೮೮೭ ರ ಮದ್ರಾಸಿನಲ್ಲಿ ನಡೆಯುವ ಕಾಂಗ್ರೆಸ್ಸಿನ ಅಧಿವೇಶನಕ್ಕೆ ಪುಂಟಲೀಕ ನಾರಾಯಣ ಪಂಡಿತ್ ಎಂಬ ಶಿರಸಿಯ ವ್ಯಕ್ತಿಯನ್ನು ಕಳುಹಿಸಲಾಗಿತ್ತು. (ಉ. ಕ.ಗ್ರಾ. ೧೯೮೫. ಪು. ೧೬೫) ಇಪ್ಪತ್ತನೆಯ ಶತಮಾನ ಬಂದಾಗ ಈ ಸಮಸ್ಯೆ ಉಲ್ಬಣಿಸಿತು. ಅರಣ್ಯಾಧಿಕಾರಿಗಳ ಕಿರಾತವರ್ತನೆ, ವನ್ಯಪ್ರಾಣಿಗಳ ಹಾವಳಿ, ಅವುಗಳಿಂದ ಬೆಳೆಗಳಿಗೆ ಸರ್ಕಾರದಿಂದ ಸರಿಯಾದ ರಕ್ಷಣೆ ಸಿಗದಿರುವುದು ಮುಂತಾದ ಪರಿಸ್ಥಿತಿ ಇನ್ನಷ್ಟು ತೀವ್ರವಾಯಿತು. ೧೯೧೬ ರಲ್ಲಿ ಬಿಳಗಿಯಲ್ಲಿ ಮತ್ತೆ ವನದುಃಖ ನಿವಾರಣಾ ಸಮ್ಮೇಳನವನ್ನು ಶಿರಸಿಯ ಕೊಲ್ಲಾಳಿ ವಕೀಲರ ಅಧ್ಯಕ್ಷತೆಯಲ್ಲಿ ಸಂಘಟಿಸಲಾಯಿತು. ಇಂಥ ಎರಡನೆಯ ಸಮ್ಮೇಳನವನ್ನು ಬೀಳಗಿಯಲ್ಲೇ ೧೯೧೭ ರಲ್ಲಿ ದೊಡ್ಮನೆ ನಾರಾಯಣ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ದೊಡ್ಮನೆ ನಾರಾಯಣ ಹೆಗ್ಡೆಯವರ ಮುಂದಾಳುತನದಲ್ಲಿ ಜಿಲ್ಲೆಯಲ್ಲಿ ಟಿಳಕರಹೋಮ್ ರೂಲ್ ಲೀಗ್‌ನ ಶಾಖೆ ಸಂಘಟಿಸಿದಾಗ ಸಿದ್ದಾಪುರ ತಾಲೂಕಿನಲ್ಲೇ ೫೦ ಸದಸ್ಯರು ಇದ್ದರೆಂದು ಕನ್ನಳ್ಳಿ ಶಿವರಾಮ ಹೆಗ್ಡೆ ಹೇಳಿದ್ದಾರೆ. (ಸ್ವಾ.ಸಂ.ಸ್ಮೃ I, P. ೨೪೭) ಇದೇ ಹಿನ್ನೆಲೆಯಲ್ಲಿ ಕುಮಟಾದಿಂದ ‘ಕಾನಡಾಧುರೀಣ” (೧೯೧೮) ಪತ್ರಿಕೆಯನ್ನು ಗಣಪತಿರಾವ್ ಮಾಸೂರ್ ಹಾಗೂ ರಾಘವೇಂದ್ರರಾವ್ ಬಸರೂರ್ ಇವರು ಆರಂಭಿಸಿದರು. ಗುಲ್ವಾಡಿ ಅಣ್ಣಾಜಿಯರಾಯರನ್ನು ಕುಂದಾಪುರದಿಂದ ಕಡೆದು ತಂದು ಇದರ ಸಂಪಾದಕರನ್ನಾಗಿ ಮಾಡಲಾಯಿತು. ರೈತವರ್ಗಗಳ ವನದುಃಖ ವಿರೋಧಿ ಚಳವಳಿಯ ನೇತೃತ್ವವಹಿಸಿದ ಗಣಪತಿರಾವ್ ಮಾಸೂರರು ೧೯೧೮ ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಎಚ್. ಟಪ್ಪರ್ ಅವರಿಗೆ ಬರೆದ ಪತ್ರವು ಅಂದಿನ ಪರಿಸ್ಥಿತಿಯ ಸಮಕಾಲೀನ ಚಿತ್ರವನ್ನು ಸ್ಪಷ್ಟವಾಗಿ ನೀಡುತ್ತಿದ್ದು (ಎ ರೆಪ್ರೆಸೆಂಟೇಶನ್ ಟು ದಿ ಕಲೆಕ್ಟರ್) ಅದನ್ನು ಇಲ್ಲಿ ದೀರ್ಘವಾಗಿ ಭಾಷಾಂತರಿಸಿ ಉದ್ಧರಿಸಿದೆ. ಉತ್ತರ ಕನ್ನಡ ಜಿಲ್ಲೆಯ ಬಹು ಸಂಖ್ಯೆ ಜನರ ಜೀವಾಳ ಕೃಷಿಯೇ ಆಗಿದ್ದು ಜಿಲ್ಲೆಯಲ್ಲಿ ಉಲ್ಲೇಖನೀಯವಾದ ಯಾವುದೇ ಕೈಗಾರಿಕೆಯು ಇಲ್ಲ ಹಾಗೂ ದೇಶದ ಕೃಷಿ ಸಾಧ್ಯತೆ ಹಾಗೂ ಆರ್ಥಿಕ ಪ್ರಗತಿಗಳನ್ನು ಮುಂದುವರಿಸಲು ಭಾರತ ಸರ್ಕಾರವು ಖಚಿತ ಗುರಿಯನ್ನು ಹೊಂದಿದ್ದು, ಆ ದೃಷ್ಟಿಯಿಂದಲೇ ಕೃಷಿ ಇಲಾಖೆಯನ್ನು ಆರಂಭಿಸಲಾಗಿದೆ ಎಂಬ ಸಂಗತಿಯನ್ನು ಆರಂಭದಲ್ಲಿ ಹೇಳಿದೆ. ’ಆದರೆ ನಮಗೆ ತೀರ ವಿಷಾದ ಹುಟ್ಟಿಸುವ ವಿಷಯವೆಂದರೆ, ನಿರೀಕ್ಷಿಸಿದ ದಿಕ್ಕಿನಲ್ಲಿ ಪ್ರಗತಿ ಸಾಧಿಸುವ ಬದಲಿಗೆ, ಕೃಷಿಯು ಒಂದೇಸಮನೆ ನಡೆಸುತ್ತಿದ್ದ ಕೃಷಿ ಭೂಮಿಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಹೊಸ ಬೆಳೆಗಳ್ನನು ರೂಢಿಗೆ ತರುತ್ತಲಿದ್ದರೂ ಒಟ್ಟು ಕೃಷಿ ಉತ್ಪನ್ನದ ಪ್ರಮಾಣ ಕುಸಿಯುತ್ತಿದೆ, ಕೃಷಿಕನ ಬಡತನ ಹೆಚ್ಚುತ್ತಲಿದೆ ಹಾಗೂ ಕೃಷಿಕನಲ್ಲಿ ಅವನಿಗೆ ಚೈತನ್ಯ ನೀಡಲು ಇರಬೇಕಾದ ಉತ್ಸಾಹ ಕುಗ್ಗುತ್ತಿದೆಯೆಂಬುದು ಎಲ್ಲಕ್ಕೂ ಹೆಚ್ಚು ಕೆಡುಕಿನ ಸಂಗತಿ” ಎಂದು ಪತ್ರದಲ್ಲಿ ಹೇಳಿ ಈ ಬಗ್ಗೆ ಸೂಕ್ತ ಅಂಕಿ ಸಂಖ್ಯೆಗಳನ್ನು ಸಾಕ್ಷ್ಯವಾಗಿ ತಾನು ನೀಡುವುದಾಗಿ ಪತ್ರದಲ್ಲಿ ಹೇಳಿದೆ. “ಅರಣ್ಯ ಇಲಾಖೆಯ ಹದ್ದು ಬಸ್ತಿನ ಕ್ರಮಗಳು ರೈತನನ್ನು ಪ್ರತಿಯೊಂದು ದಿಕಕಿನಲ್ಲೂ ಅಡಚಣೆಗಳಿಗೆ ಒಳಪಡಿಸಿ, ದುಡಿಮೆ ಮತ್ತು ಉದ್ಯಮಶೀಲತೆಗೆ ಇರಬಹುದಾದ ಎಲ್ಲ ಆಕರ್ಷಣೆಗಳಿಂದ ಅವನನ್ನು ವಂಚಿತನಾಗಿ ಮಾಡಿ” ಕಂಗೆಡಿಸುವ ಸನ್ನಿವೇಶವನ್ನು ಸೃಷ್ಟಿಸಿವೆ ಎಂದು ಅವರು ಹೇಳಿದ್ದಾರೆ. “ಕೆನರಾ ಜಿಲ್ಲೆಯಲ್ಲಿ ರೈತರಿಗೆ ಅರಣ್ಯ ಇಲಾಖೆಯ ವಿರುದ್ಧ ಇರುವ ತಕರಾರುಗಳು ಹೊಸದಾದವುಗಳೇನೂ ಅಲ್ಲ. ಅವುಗಳು ಬಲು ಹಿಂದಿನಿಂದಲೂ ಇದ್ದು, ೧೯೦೨ ರಿಂದ ತೀವ್ರವಾಗಿವೆ. ಜಿಲ್ಲಾಧಿಕಾರಿಯೂ ಮುಂಬೈ ಸರ್ಕಾರವೂ ಇವುಗಳ ನಿವಾರಣೆಗೆ ಹಿಂದಿನಿಂದಲೂ ಬಹಳ ಸಲ ಪ್ರಯತ್ನಿಸುತ್ತಾ ಬಂದರೂ ಈ ಯತ್ನ ಫಲಪ್ರದವಾಗಿಲ್ಲ. ಇದರ ಪರಿಣಾಮವೆಂದರೆ ಅರಣ್ಯ ಇಲಾಖೆಯನ್ನು ಪರಿಸ್ಥಿತಿಯ ಪೂರ್ಣಒ ಡೆಯನನ್ನಾಗಿ ಮಾಡಿ, ಅವರು ತಮ್ಮ ಇಷ್ಟ ಬಂದಂತೆ ವರ್ತಿಸಲು ಬಿಟ್ಟು, ಕಂದಾಯ ಇಲಾಖೆಗೆ ಅರಣ್ಯ ಇಲಾಖೆಯ ಮೇಲೆ ಯಾವುದೇ ಹತೋಟಿಯಿಲ್ಲದಂತೆ ಆಮದು, ಮತ್ತು ಕಂದಾಯ ಇಲಾಖೆಗೆ ಅರಣ್ಯ ಇಲಾಖೆಯ ಮೇಲೆ ಇದ್ದ ಹಿಡಿತ ನಾಮ ಮಾತ್ರವಾದದ್ದು,” ಎಂದು ಆಡಳಿತದಲ್ಲಿ ಆಗಿದ್ದ ಅವ್ಯವಸ್ಥೆಯನ್ನು ಪತ್ರದಲ್ಲಿ ಎತ್ತಿತೋರಿಸಲಾಗಿದೆಯಲ್ಲದೆ, ಈ ಬಗ್ಗೆ ಮದ್ರಾಸ ಸರ್ಕಾರಕ್ಕೆ ೧೮೬೩ ರಲ್ಲೆ ಲಂಡನ್‌ನಲ್ಲಿರುವ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ನೀಡಿದ್ದ ಎಚ್ಚರಿಕೆಯನ್ನು ಉದ್ಧರಿಸಿದೆ: “ನಿಯಮಗಳನ್ನು ರಚಿಸುವಾಗ ಕಂದಾಯ ಇಲಾಖೆಯ ಸಮ್ಮತಿ ಪಡೆಯಬೇಕು. ಅರಣ್ಯಗಳು ಕೃಷಿಗೆ ನಿಕಟ ಸಂಬಂಧವುಳ್ಳವು. ಹೀಗಾಗಿ ಅರಣ್ಯ ಇಲಾಖೆಯು ಜಿಲ್ಲಾಧಿಕಾರಿ ಹಾಗೂ ಅವರ ಅಧೀನ ಅಧಿಕಾರಿಗಳ ಸಂಬಂಧ ಸಂಪರ್ಕಗಳೊಂದಿಗೆ ಕಟ್ಟುನಿಟ್ಟಾಗಿ ಕೆಲಸ ಮಾಡಬೇಕು.”

ಇದಲ್ಲದೆ ಮುಂಬೈ ಸರ್ಕಾರವು ಈ ಬಗ್ಗೆ ನೀಡಿದ್ದ ಎಚ್ಚರಿಕೆಯನ್ನು ಇಲ್ಲಿ ಉದ್ಧರಿಸಿದೆ: “ಅರಣ್ಯರಕ್ಷಕರೂ ಅರಣ್ಯಾಧಿಕಾರಿಗಳೂ ತಮ್ಮ ಕಾಯೋತ್ಸಾಹದಿಂದ ಮಾಡುತ್ತಿರುವ ಒಳ್ಳೆಯ ಕೆಲಸದ ಬಗ್ಗೆ ಸರ್ಕಾರಕ್ಕೆ ತಿಳಿದಿದೆ, ಆದರೆ ಸ್ಥಳೀಯರ ಅವಶ್ಯಕತೆಗಳ ಪೂರೈಕೆ ಹಾಗೂ ಅವರಿಗೆ ನೀಡಿರುವ ಸವಲತ್ತುಗಳ ರಕ್ಷಣೆಗೆ ಅರಣ್ಯಾಧಿಕಾರಿಗಳ ಅತಿಯಾದ ಉತ್ಸಾಹದ ಅರಣ್ಯ ರಕ್ಷಣೆ ಕ್ರಮಗಳಿಂದ ಹಾಗೂ ಸರ್ಕಾರದ ಸದುದ್ದೇಶಗಳೇ ವ್ಯರ್ಥವಾಗುವ ಭಯವಿರುವುದರಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಅರಣ್ಯಾಧಿಕಾರಿಗಳ ಮೇಲೆ ಎಚ್ಚರಿಕೆಯ ಕಣ್ಣಿಡಬೇಕು.” ಈ ಸರ್ಕಾರಿ ದಾಖಲೆಗಳೊಳಗಣ ಅಂಶಗಳನ್ನು ಉದ್ಧರಿಸಿದ ಈ ಪತ್ರ ಮುಂದೆ ಹೀಗೆ ಹೇಳುತ್ತದೆ: “ಈ ಜಿಲ್ಲೆಯ ಹಿಂದಿ ಹಲವು ಜಿಲ್ಲಾಧಿಕಾರಿಗಳು ಬೇಸಾಯಗಾರರ ಹಿತರಕ್ಷಣೆಗೆ ಬೇರೆ ಬೇರೆ ಕಾರಣಗಳಿಂದ ಮುಂದಾಗಿದ್ದರಾದರೂ, ವಿಚಿತ್ರ ಸನ್ನಿವೇಶಗಳಿಂದಾಗಿ ಅವರು ಇದರಲ್ಲಿ ತೊಡಗದಂತೆ ಈ ಇಲಾಖೆಯು ಅವರನ್ನು ತಡೆಯುತ್ತ ಬಂದಿದೆ. ಒಬ್ಬ ಜಿಲ್ಲಾಧಿಕಾರಿಯು ಈ ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಬಹಳ ದಿನಗಳವರೆಗೆ ಅರಣ್ಯ ಇಲಾಖೆಯು ಅವರನ್ನು ತಡೆಯುತ್ತ ಬಂದಿದೆ. ಒಬ್ಬ ಜಿಲ್ಲಾಧಿಕಾರಿಯು ಈ ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಬಹಳ ದಿನಗಳವರೆಗೆ ಅರಣ್ಯ ಇಲಾಖೆಯ ನಿಲುವಿನ ಜೊತೆ ಭಿನ್ನಾಭಿಪ್ರಾಯ ಪ್ರಕಟಿಸಲು ಸಿದ್ಧನಾಗಿರುವುದಿಲ್ಲ. ಇದು ಜನತೆಗೆ ಅಥರ್ವಾಗಿದೆ.ಆ ದರೆ, ಜನಸಂಪರ್ಕಬೆ ಳೆದು ಅವರ ಅವಶ್ಯಕತೆಗಳ ಸ್ಪಷ್ಟ ಕಲ್ಪನೆ ಆತನಿಗೆ ಬಂದಂತೆ, ಆತನ ನಿಲುವು ಬದಲಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ದೃಷ್ಟಿಕೋನ ತನ್ನ ಮೇಲೆ ಪ್ರಭಾವ ಬೀರದಂತೆ ಆತ ನೋಡಿಕೊಳ್ಳುತ್ತಾನೆ…… ಆದರೆ ಆತ ಜನೋಪಯೋಗಿ ಕ್ರಮಗಳನ್ನು ಕೈಕೊಳ್ಳಲು ಮುಂದಾಗುವಷ್ಟರಲ್ಲಿ ಆತನು ಬೇರೆ ಜಿಲ್ಲೆಗೆ ವರ್ಗಾಯಿಸಲ್ಪಡುತ್ತಾನೆ…… ಒಟ್ಟಿನಲ್ಲಿ ರೈತರಿಗೆ ಘಾತಕವಾದ ಅರಣ್ಯ ಇಲಾಖೆಯ ಧೋರಣೆಗೆ ಹೆಚ್ಚು ಹೆಚ್ಚು ಬಲ ಬಂದಂತಾಗಿ ಅದಕ್ಕೆ ಕಾಲಕಾಲಕ್ಕೆ ಬೀಳುವ ಕಡಿವಾಣವು ಕೇವಲ ತಾತ್ಪೂರ್ತಿಕ ಅಥವಾ ಪರಿಣಾಮರಹಿತವಾಗಿದೆ”.

ಪತ್ರದಲ್ಲಿ ಈ ಬಗ್ಗೆ ಉದಾಹರಣೆಗಳನ್ನೂ ಕೊಡಲಾಗಿದೆ. ಅರಣ್ಯ ಇಲಾಖೆಯ ಧೋರಣೆ ಹಾಗೂ ಅನ್ಯ ವಿಕಟ ನೀತಿಗಳಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ೧೮೯೦ ರಲ್ಲಿ ೨,೪೦,೩೯೯ ಎಕರೆ ಇದ್ದ ಕೃಷಿ ಭೂಮಿಯು ೧೯೧೫ ರಲ್ಲಿ ೨,೧೦,೨೮೬ ಕ್ಕೆ ಇಳಿದು ೩೦,೧೧೩ ಎಕರೆಗಳಷ್ಟು ಭೂಮಿಹಾಳು ಬೀಳುವಂತಾಯಿತು. ಅದೇ ರೀತಿ ಬೀಳು ಭೂಮಿಯು ೧೮೮೫-೮೬ ರಲ್ಲಿ ೭೬,೫೮೧ ಎಕರೆ ಇದ್ದುದು ೧೯೧೪-೧೫ ರಲ್ಲಿ ೧,೨೮,೫೫೭ ಆಯಿತು. ಕೃಷಿ ಪ್ರಧಾನವಾದ, ಶೇಕಡ ೧೦ ಕ್ಕೂ ಕಡಿಮೆ ಭೂಮಿ ಕೃಷಿಗೆ ಸಿಗುತ್ತಿದ್ದ ಜಿಲ್ಲೆಯಲ್ಲಿ ಹೀಗಾಗಲೂ ಕಾರಣವೇನೆಂದು ಊಹಿಸಬೇಕು. ಇದಲ್ಲದೆ ಚಳಿಗಾಲದ ಎರಡನೆಯ ಬೆಳೆಯಾದ ದ್ವಿದಳ ಧಾನ್ಯಗಳ ಬೆಳೆಯ ಕ್ಷೇತ್ರವು ಕುಸಿದಿದೆ. ಕಾರಣ ಚಳಿಗಾಲದ ಈ ಬೆಳೆಯ ರಕ್ಷಣೆಗಾಗಿ ಗದ್ದೆಗಳಿಗೆ ಹಾಕಬೇಕಾದ ಬೇಲಿಗೆ ಹಿಂದೆ ಪುಕ್ಕಟೆಯಾಗಿ ಒದಗಿಸುತ್ತಿದ್ದ (ಎಂದರೆ ರಕ್ಷಿತ ಅರಣ್ಯಗಳಿಂದ ರೈತರು ತಾವೇ ತರುತ್ತಿದ್ದ) ಗೂಟಗಳನ್ನು ಈಗ ಅರಣ್ಯ ಇಲಾಖೆ ಕೊಡುತ್ತಿಲ್ಲ. ಇದರಿಂದ ಈ ದ್ವಿದಳ ಧಾನ್ಯಗಳ ಬೆಳೆ ನಿಂತಿದೆಯಷ್ಟೇ ಅಲ್ಲ. ಈ ಬೆಳೆಯಿಂದ ಈ ಗದ್ದೆಗಳಲ್ಲಿ ಭತ್ತದ ಮೊದಲ ಬೆಳೆಯ ಸಮೃದ್ಧಿಗೆ ಆಗುತ್ತಿದ್ದ ಅಪಾರ ಲಾಭವೂ ಆಗದಂತೆ ಆಗಿ ಉತ್ಪನ್ನ ಕುಸಿದಿದೆ. ಈ ದ್ವಿದಳ ಧಾನ್ಯಗಳಿಂದಾಗಿ ದನಕರುಗಳಿಗೆ ಉಚಿತವಾಗಿ ಸಿಗುತ್ತಿದ್ದ ಮೇವು ಸಿಗದಂತಾಗಿ ಹತ್ತು ವರ್ಷಗಳ ಹಿಂದೆ ಐದು ರೂಪಾಯಿ ಬೆಲೆಗೆ ಸಿಗುತ್ತಿದ್ದ ಹುಲ್ಲಿಗೆ ಈಗ ೩೦ ರಿಂದ ೪೦ ರೂ. ಬೆಲೆ ಆಗಿದೆ ಎಂದು ಈ ಪತ್ರದಲ್ಲಿ ಹೇಳಿದೆ. ಮನೆಯ ಹೊದಿಕೆಗೂ ರಾಸುಗಳ ಮೇವಿಗೂ ಬೇಕಾದ ಈ ಭತ್ತದ ಹುಲ್ಲು ತುಟ್ಟಿಯಾದಾಗ “ಬಡ ಬೇಸಾಯಗಾರನಿಗಿರುವ ಎರಡು ಪರ್ಯಾಯದ ದಾರಿಗಳೆಂದರೆ, ಒಂದು ಮನೆಯೊಳಗೆ ಮಳೆ ನೀಡನ್ನು ಬೀಳ ಬಿಡುವುದು, ಇನ್ನೊಂದು ತನ್ನ ದನಕರುಗಳನ್ನು ಉಪವಾಸ ಕೆಡಹುವುದು,” ಎಂದು ಪತ್ರದಲ್ಲಿ ಹೇಳಿದೆ.

೧೮೭೮ರ ಅರಣ್ಯ ಕಾನೂನಿನಂತೆ ೧೮೮೦ ರಲ್ಲಿ ಅರಣ್ಯಗಳನ್ನು ರಕ್ಷಿತ ಹಾಗೂ ಕಾದಿಟ್ಟ ಎಂದು ವರ್ಗೀಕರಿಸಿದ ಸಂಗತಿಗಳನ್ನು ಪತ್ರದಲ್ಲಿ ಹೇಳಿ, ಕಾದಿಟ್ಟ ಅರಣ್ಯಗಳಲ್ಲಿ ಜನರಿಗೆ ಪ್ರವೇಶವೇ ಇರದಿದ್ದರೂ ರಕ್ಷಿತ ಅರಣ್ಯಗಳ ಪ್ರಮಾಣ ಹೆಚ್ಚಿನದಿದ್ದು ಅವುಗಳಲ್ಲಿ ರೈತರಿಗೆ ನೀಡಿದ್ದ ವಿವಿಧ ಸವಲತ್ತುಗಳನ್ನು ಉಲ್ಲೇಖಿಸಿ, ಈ ಸವಲತ್ತುಗಳನ್ನು ಗಮನಿಸಿಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕಂದಾಯವನ್ನು ಆಕರಿಸಲಾಗಿತ್ತೆಂದು ಹೇಳಿದೆ. ಮುಂಬೈರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿ ಅರಣ್ಯಗಳೇ ಇರದ್ದರಿಂದ ಅಲ್ಲಿ ಭೂಕಂದಾಯವನ್ನು ಎಕರೆಗೆ ಎಂಟಾಣೆಗಿಂತ ಸ್ವಲ್ಪ ಹೆಚ್ಚಾಗಿ ಆಕರಿಸಿದ್ದರೆ, ಉತ್ತರ ಕನ್ನಡದಲ್ಲಿ ಸಾಮಾನ್ಯ ಅಕ್ಕಿ ಬೆಳೆಯುವ ಭೂಮಿಗೆ ಸರಾಸರಿ ಎಕರೆಗೆ ಮೂರು ರೂ. ನಂತೆ ಕಂದಾಯ ಆಕರಿಸಿದೆ. (ಅದೇ ರೀತಿ ಅಡಿಕೆ ತೋಟಗಳಿಗೆ ಎಕರೆಗೆ ಸರಾಸರಿ ರೂ. ಎಂಟರಂತೆ ಆಕರಿಸಲಾಗುತ್ತದೆಂದು ಅನ್ಯ ಆಧಾರಗಳಿಂದ ಹೇಳ ಬಹುದು. ಇದಕ್ಕೆ ಕಾರಣ ಅರಣ್ಯಗಳಿಂದ ತರಗೆಲೆ, ಸೊಪ್ಪು, ಬೇಲಿಗೆ ಬೇಕಾದ ಗೂಟ ಮತ್ತು ಅನ್ಯ ಕೃಷಿ ಕಾರ್ಯಾದಿಗಳಿಗೆ ಬೇಕಾದ ಮರಮಟ್ಟನ್ನು ಪಡೆಯುವ ಹಕ್ಕನ್ನು ರೈತರಿಗೆ ನೀಡಿದ್ದು, ಪ್ರತೀ ಎಕರೆ ಅಡಿಕೆ ತೋಟಕ್ಕೆ ಹಲವು ಎಕರೆ ಬೆಟ್ಟವನ್ನು ಸೊಪ್ಪಿಗಾಗಿ ಬಿಡಲಾಗಿತ್ತು) ಕಂದಾಯ ಆಕರಣೆಯ ಕಾಲಕ್ಕೆ ಪೂರ್ತಿ ಯೋಚನೆಮಾಡಿ, ಈ ಸವಲತ್ತುಗಳನ್ನು ಗಮನಿಸಿಯೇ ಹೆಚ್ಚಿನ ಕಂದಾಯ ಹೇರಿದ್ದರೂ ಹೆಜ್ಜೆಹೆಜ್ಜೆಗೂ ಈ ಹಕ್ಕುಗಳನ್ನು ಮೊಟಕುಗೊಳಿಸುವ ಉದ್ಯಮದಲ್ಲಿ ಅರಣ್ಯ ಇಲಾಖೆ ತೊಡಗಿತ್ತು. ಈ ಪತ್ರದಲ್ಲಿಯೇ ಆ ಬಗ್ಗೆ ವಿವರಗಳನ್ನು ಹೇಳಿದೆ: “೧೮೯೦ನೆಯ ಇಸವಿಯ ನಂತರ ಯಾವಾಗಲೋ ಒಮ್ಮೆ ಅರಣ್ಯ ಇಲಾಖೆಯ ಧೋರಣೆಯಲ್ಲಿ ಬದಲಾವಣೆ ಆದಂತೆ ಕಾಣಬರುತ್ತದೆ. ವರ್ಷ ವರ್ಷಕ್ಕೂ ವಿಶಾಲ ಪ್ರಮಾಣದ ರಕ್ಷಿತ ಅರಣ್ಯ ಪ್ರದೇಶಗಳನ್ನು ಕಾದಿಟ್ಟ ಅರಣ್ಯಗಳಾಗಿ ವರ್ಗಾಯಿಸಲಾಯಿತು. ಇದೇ ರೀತಿ ಗ್ರಾಮಗಳಿಗಾಗಿ ಬಿಟ್ಟು ಕೊಟ್ಟ ಪ್ರದೇಶಗಳಲ್ಲಿ ಹಾಗೂ ಗ್ರಾಮಸ್ಥರಿಗೆನೀಡಿದ ಸವಲತ್ತುಗಳಲ್ಲಿ ಕೂಡ ಬದಲಾವಣೆ ಮಾಡಲಾಯಿತು. ಕಾನೂನಿನಂತೆ ಈ ಬದಲಾವಣೆ ಬಗ್ಗೆ ಪ್ರಕಟಣೆ ನೀಡಲಾಗಿತ್ತಾದರೂ ಅವುಗಳನ್ನು ಸರಿಯಾಗಿ ಹಳ್ಳಿಗರಿಗೆ ತಿಳಿಸಿ ಹೇಳಿರಲಿಲ್ಲ. ಇದರಿಂದ ಹೊಸ ಕಾನೂನುಗಳನ್ನು ತಮಗೆ ಅರಿವಿಲ್ಲದೆ ಭಂಗಿಸಿ ಶಿಕ್ಷೆಗೂ ದಂಡಕ್ಕೂ ಪಾತ್ರರಾದರು. ರೈತರು ಗೊಬ್ಬರಕ್ಕಾಗಿ ಅರಣ್ಯಗಳಿಂದ ತರಗೆಲೆ ಸಂಗ್ರಹಿಸುತ್ತಿದ್ದ ಹಿಂದಿನಿಂದ ನಡೆದು ಬಂದ ರೂಢಿಯ ಮೇಲೆ ೧೯೦೨ ರಲ್ಲಿ ಅರಣ್ಯ ಇಲಾಖೆಯು ಪ್ರತಿಬಂಧ ಹೇರಿ ಮೂರು ವರ್ಷಗಳ ಕಾಲ ಈ ಹಕ್ಕನ್ನು ಕಸಿದುಕೊಂಡಿತು; ಕಡೆಗೆ ಕಂದಾಯ ಇಲಾಖೆಯ ಮಧ್ಯ ಪ್ರವೇಶದಿಂದ ಈ ಪ್ರತಿಬಂಧಕರವನ್ನು ರದ್ದು ಪಡಿಸಲಾಯಿತು. ಆದರೆ, ಬೇರೆ ದೆಸೆಗಳಲ್ಲಿ ಇತಿಮಿತಿಗಳನ್ನು ಹೇರಲು ಅರಣ್ಯ ಇಲಾಖೆಯು ಮುಂದಾಯಿತು, ರಕ್ಷಿತ ಅರಣ್ಯವನ್ನು ೧೯೧೦ ರಲ್ಲಿ ಇಡೀ ಜಿಲ್ಲೆಯಲ್ಲಿ ಕೇವಲ ೩೪೮ ಚದರ ಮೈಲಿಗೆ ಮಿತಗೊಳಿಸಲಾಯಿತು” ಎಂದು ಈ ಪತ್ರ ಹೇಳಿದೆ.  ೧೮೮೦ ರಲ್ಲಿ ೩೦೪೮ ಚದರ ಮೈಲಿಯಾಗಿದ್ದ ರಕ್ಷಿತ ಅರಣ್ಯ ಅದರ ಶೇಕಡಾ ೧೦ ರಷ್ಟು ಇಳಿದಾಗ, ರೈತರು ಸೊಪ್ಪಿಗಾಗಲೀ ತರಗೆಲೆಗಾಗಲೀ ಗೂಟಗಳಿಗಾಗಲೀ ಬಿದಿರಿಗಾಗಲೀ ಕೃಷಿಗೆ ಅವಶ್ಯವಾದ ಅನ್ಯ ಮರಮುಟ್ಟುಗಳಿಗಾಗಲೀ ಕಾದಿಟ್ಟ ಅರಣ್ಯವನ್ನು ಪ್ರವೇಶಿಸಿದ ಸನ್ನಿವೇಶ ಉಂಟಾಗಲಿಲ್ಲವೆ? ಅಡವಿಯ ಬಳಕೆಗೆ ಅವಕಾಶ ನೀಡಿ ಹೆಚ್ಚಿನ ಕಂದಾಯ ಆಕರಣೆ ಮಾಡಿದ್ದ ಸರ್ಕಾರ ಇದೇ ಕಾಲಕ್ಕೆ ಈ ಹಕ್ಕುಗಳನ್ನು ಕಸಿದು ರೈತರನ್ನು ವಂಚಿಸಿ ಹಗಲು ದರೋಡೆ ಮಾಡಿದಂತಾಗಲಿಲ್ಲವೇ?

೧೯೧೧ರ ಕೆನರಾ ಫಾರೆಸ್ಟ್ ಪ್ರಿವಿಲೆಜನ್ ರೂಲ್ಸ್ ಎಂಬ ನಿಯಮಗಳನ್ನು ಈ ಪತ್ರದಲ್ಲಿ ಉಲ್ಲೇಖಿಸಿ “ಇವುಗಳ ಪ್ರಕಟಣೆಯಿಂದ ಬಹುಪಾಲು ನಮ್ಮ ಸಮಸ್ಯೆಗಳು ಇಂದಲ್ಲ ನಾಳೆ ಪರಿಹಾರವಾಗಬಹುದೆಂದು ಆಶೆ ಇರಿಸಿ ಕೊಂಡಿದ್ದೆವು. ಆದರೆ ಈ ನಿರೀಕ್ಷೆಗಳು ಎಷ್ಟರ ಮಟ್ಟಿಗೆ ಕೈಗೂಡಿದುವೆಂಬುದು ಮುಂದಿನ ಘಟನೆಗಳಿಂದ ಸ್ಪಷ್ಟವಾಗುತ್ತದೆ.” ಎನ್ನುವ ಪತ್ರವು ಕುಮಟಾ ತಾಲೂಕಿನ ಉದಾಹಣೆ ನೀಡುತ್ತ, ಕಾದಿಟ್ಟ ಅರಣ್ಯಗಳನ್ನು ಸಂಘಟಿತ ಹಾಗೂ ಅಸಂಘಟಿತ ಎಂದು ಈಗ ವಿಭಜನೆ ಮಾಡಲಾಗಿದ್ದು ಆ ಪೈಕಿ ತಾಲೂಕಿನ ಒಟ್ಟು ಅರಣ್ಯ ಕ್ಷೇತ್ರದ ಒಂಬತ್ತನೇ ಒಂದು ಅಂಶದಷ್ಟು, ಎಂದರೆ ೨೬,೦೦೦ ಎಕರೆ ಪ್ರದೇಶವನ್ನು ೧೯೧೧ ರ ನಿಯಮದಂತೆ ಅಸಂಘಟಿತವೆಂದು ಘೋಷಿಸಿದ್ದರಿಂದ, ಹಿಂದೆ ಒಂದು ದನಕ್ಕೆ ಸರಾಸರಿ ಎರಡು ಎರಡು ಎಕರೆ ಯಷ್ಟಿದ್ದ ಮೇವಿನ ಪ್ರದೇಶವು ಈಗ ಒಂದು ದನಕ್ಕೆ ಎರಡಾಣೆ ಹುಲ್ಲು ಬನ್ನಿ ಕೊಟ್ಟನಂತರವೂ ಒಂದು ಎಕರೆಯ ಹತ್ತನೆಯ ಒಂಬತ್ತು ಭಾಗಕ್ಕೆ ಮಿತಿಯಾಗಿದೆ ಎಂದು ತೋರಿಸಿಕೊಟ್ಟಿದೆ. “ಅಸಂಘಟಿತವೆಂದು ಬಿಟ್ಟು ಕೊಡಲಾದ ಅರಣ್ಯ ಪ್ರದೇಶದಲ್ಲಿ ಹೇಳಿಕೊಳ್ಳುವಂಥ ಅರಣ್ಯಗಳೇ ಇಲ್ಲದಾಗ ಅರಣ್ಯದ ಹಕ್ಕುಗಳನ್ನು ಚಲಾಯಿತುಸುವು ಹೇಗೆ? ಎಂದು ಪತ್ರ ಪ್ರಶ್ನಿಸಿ, ಆ ಬಗ್ಗೆ ಉದಾಹಣರಣೆಗಳನ್ನು ಕೊಟ್ಟಿದೆ. ಗೋಕರ್ಣಕ್ಕೆ ಬಿಡಲಾದ ೧೩೫೦ ಎಕರೆ ಪ್ರದೇಶ ಬರಿಯ ಬೋಳು ನೆಲ. ಅಗ್ಗರಗೋಣದ ೧೪೦ ಎಕರೆಯೂ ಅಷ್ಟೇ. ಅಡಿಗೋಣದ ೨೨೦ ಎಕರೆಯಲ್ಲಿ ಅಲ್ಲಿ ಇಲ್ಲಿ ಕೆಲಸಕ್ಕೆ ಬಾರದ ಪೊದೆಗಳಿವೆ. ತೊರ್ಕೆಯ ೧೬೦ ಎಕರೆಯದೂ ಅಂಥದೇ ಪರಿಸ್ಥಿತಿ. ಮಾದನಗೇರಿಯ ೨೪೦ ಎಕರೆ ಹಾಗೂ ಕುಮಟಾದ ೫೨೦ ಎಕರೆ ಪ್ರದೇಶ ಕೂಡ ಬರಿದಾದ ಬೋಳು ಪ್ರದೇಶ. ಇಂಥ ಅನೇಕ ಉದಾಹರಣೆಗಳನ್ನು ನೋಡಲಾಗಿದೆ. “ಬಾಡ, ಹುಬ್ಬಣಗೇರಿ, ಗುಡ್ಡೆ ಅಂಗಡಿಗಳಂಥ ಗ್ರಾಮಗಳಿಗೆ ನೀಡಲಾದ ಪ್ರದೇಶ ಈ ಹಳ್ಳಿಗರಿಗೆ ತೀರ ಅನಾನುಕೂಲವಾದ ನೆಲೆಗಳಲ್ಲಿದೆ” ಎಂದು ಪತ್ರ ಹೇಳಿದೆ. ರೈತರು ಹೋಗಲಾರದ ದಟ್ಟಾರಣ್ಯ ಅಥವಾ ಹಲವಾರು ಮೈಲಿ ದೂರದ ಪ್ರದೇಶಗಳನ್ನು ರೈತರಿಗೆ ಬಿಟ್ಟುಕೊಡಲಾಗಿದೆ. ಒಂದು ಹೊರೆ ಸೊಪ್ಪು ಅಥವಾ ಸೌದೆಗಾಗಿ ರೈತರು ಆರೇಳು ಮೈಲು ದೂರ ಹೋಗಿ ಬರುವುದು ಸಾಧ್ಯವೇ? ಅದಲ್ಲದೆ ೧೮೮೦ ರಲ್ಲಿ ೧೦ ಜಾತಿಯ ಮರಗಳನ್ನು ರಕ್ಷಿತ ಜಾತಿಗಳೆಂದು ಪ್ರಕಡಿಸಿದ್ದರೆ, ೧೯೧೮ ರ ಹೊತ್ತಿಗೆ ೨೫ ಜಾತಿಗಳನ್ನು ಕಾದಿಟ್ಟವುಗಳೆಂದು ವರ್ಗೀಕರಿಸಿ, ರೈತರು ಉಪಭೋಗಿಸುತ್ತಿರುವ ಹಕ್ಕುಗಳನ್ನು ಕೇವಲ ಭ್ರಮೆಯ ಸ್ವರೂಪಕ್ಕೆ ಇಳಿಸಲಾಗಿದೆ ಎಂದು ಪತ್ರ ಹೇಳಿದೆ. ಹಿಂದೆ ಕಂದಾ ಇಲಾಖೆ ನೀಡುತ್ತಿದ್ದ ಪರ್ಮಿಟ್ ಅಥವಾ ಅನುಮತಿ ಪತ್ರಗಳನ್ನು ಯಾವುದೇ ಸವಲತ್ತನ್ನು ಪಡೆಯಲು ಈಗ ಅರಣ್ಯ ಇಲಾಖೆಯಿಂದ ಹೊಂದಬೇಕಾದ ವ್ಯವಸ್ಥೆಯಾಗಿದ್ದು, ಬೇಲಿಗೆ ಗೂಟ ಅಥವಾ ಬೆಲ್ಲಕ್ಕೆ ಸೌದೆ ಬೇಕಾದಾಗ, ಹಿಂದೆ ರೈತನು ತಾನೇ ರಕ್ಷಿತ ಅರಣ್ಯದಿಂದ ಅದನ್ನು ಕಡಿದು ತರಬಹುದಾಗಿದ್ದಲ್ಲಿ, ಈಗ ಅರಣ್ಯ ಇಲಾಖೆಯಿಂದ ಪರ್ಮಿಟ್ ಪಡೆದು ತರುವಂತಾಗಿ, ಅರಣ್ಯ ಇಲಾಖೆಯು ತಾವು ಸುಲಭವಾಗಿ ಕಡಿಯಲದ ದುರ್ಗಮ ಅರಣ್ಯಗಳಿಂದ ವಸ್ತುಗಳನ್ನು ತರುವಂತೆ ಹೇಳಿ ರೈತರನ್ನು ಸತಾಯಿಸುಂತಾಗಿದೆ. “ಈ ಅರಣ್ಯ ಇಲಾಖೆಯ ಅಧಿಕಾರ ನಿರಂಕುಶವಾದುದು” ಮತ್ತು ಅರಣ್ಯಾಧಿಕಾರಿಯ ಅನುಮತಿ ನಿರಾಕರಿಸಿದರೆ ರೈತ ಇಂಥ ವಸ್ತುಗಳನ್ನು ಡಿಪೋದಿಂದ ಕೊಳ್ಳಬೇಕು. ೧೯೦೨ ರಿಂದ ಆರಂಭವಾದ ಕಂಟ್ರಾಕ್ಟರುಗಳು ನಡೆಸುವ ಈ ಡಿಪೋಗಳಲ್ಲಿ ಬೆಲೆಬಾಳುವ ಮೋಪಿನ (ಟಿಂಬರ್) ಸಂಗ್ರಹ ಇರುವುದಲ್ಲದೆ ರೈತನಿಗೆ ಬೇಕಾದ ವಸ್ತುಗಳದಲ್ಲ. ರೈತ ತನಗೆ ಬೇಕಾದ ಅರಣ್ಯ ಜನ್ಯ ವಸ್ತುಗಳನ್ನು ಹಣ ಕೊಟ್ಟೇ ಕೊಳ್ಳಬೇಕೆಂಬ ವಾತಾವರಣ ಸೃಷ್ಟಿಗೆ ಅರಣ್ಯ ಇಲಾಖೆ ಹೊರಟಿದೆಯಲ್ಲದೆ, ಇಂಥ ಡಿಪೋಗಳನ್ನು ಹೆಚ್ಚಿಸುತ್ತ ಬಂದಿದೆ. ಇದರಿಂದ ರೈತರು ತಮ್ಮ ಹಕ್ಕುಗಳ ಬಗ್ಗೆ ಭಯಭೀತರಾಗಿದ್ದಾರೆ ಎಂದು ಪತ್ರ ವಿವರಿಸಿದೆ.

ಪ್ರತೀ ಒಂದು ಗುಂಟೆ ಕಬ್ಬನ್ನು ಬೆಳೆದ ರೈತನೂ ಬೆಲ್ಲ ತಯಾರಿಸಲು ಬೇಕಾದ ಸೌದೆಗಾಗಿ ಕಡ್ಡಾಯವಾಗಿ ಒಂದು ರೂ. ಪಾವತಿ ಮಾಡಬೇಕೆಂದು ಅರಣ್ಯ ಇಲಾಖೆ ೧೯೧೨ ರಲ್ಲಿ ನಿರ್ಣಯ ತೆಗೆದುಕೊಂಡ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಪ್ರತೀ ಹಳ್ಳಿಯ ಕಬ್ಬು ಬೆಳೆಯ ಪ್ರದೇಶವನ್ನೂ (ನಿಜವಾಗಿ ಬೆಳೆದುದಕ್ಕಿಂತ ಹೆಚ್ಚಾಗಿ ಲೆಕ್ಕ ಹಾಕಿ ಜನರನ್ನು ಸುಲಿಯಲು ಅರಣ್ಯ ಇಲಾಖೆ ಮುಂದಾದ ವಿಚಾರ ಬೇರೆಡೆ ಪ್ರಸ್ತಾಪಿತವಾಗಿದೆ. ಈ ಸಂಗತಿ ಬೇರೆ). ಆದರೆ, ಆಗಿನ ಕಲೆಕ್ಟರ್ ಆಗಿದ್ದ ಮಾಂಟಿಯತ್ ಅವರ ಮಧ್ಯ ಪ್ರವೇಶದಿಂದ ಈ ದರವನ್ನು ಗುಂಟೆಗೆ ಒಂದು ರೂ. ನಿಂದ ಎರಡೂವರೆ ಆಣೆಗೆ ಇಳಿಸಿದರು. ಪುಣೆಯಲ್ಲಿ ರೂಢಿಯಲ್ಲಿರುವ ಪದ್ಧತಿಯಿಂದ ಬೆಲ್ಲ ತಯಾರಿಸುವವರಿಗೆ ಈ ದರವನ್ನು ಗುಂಟೆಗೆ ಒಂದಾಣೆಗೆ ಇಳಿಸಿದರು. “ಹೋದ ವರ್ಷ (೧೯೧೭) ಈ ತಿಯಾಯತಿಯ ನಿಯಮ ರದ್ದು ಮಾಡಿದ್ದನ್ನು ತಾವು ಮಧ್ಯ ಪ್ರವೇಶಿಸಿ ಮತ್ತೆ ಜಾರಿ ಮಾಡಿ ರೈತರಿಗೆ ಸಮಾಧಾನ ಉಂಟುಮಾಡಿದರೂ, ಈ ವರ್ಷ ಡಿಪೋಗಳಿಂದ ಆರು ಮೈಲಿನ ಒಳಫಾಸಲೆಯಲ್ಲಿರುವ ಜನರ ಪರ್ಮಿಟ್‌ಗಳನ್ನು ಬದಿಗೊತ್ತಲಾಯಿತು. ಹಿಂದೆ ಇದ್ದ ಕಿರಿಕಿರಿಯ ವ್ಯವಸ್ಥೆ ಇದಕ್ಕಿಂತ ಮೇಲಾಗಿತ್ತೆಂದು ಅವರು ಭಾವಿಸಿದ್ದಾರೆಂದು ತೋರುತ್ತದೆ. ಬಹುಸಂಖ್ಯೆ ಜನರಿಗೆ ಜಾರಿಗೊಳಿಸಿದಾಗ ತೊಂದರೆಗೆ ಕಾರಣವಾಗುತ್ತಿದ್ದ ಈ ನಿಯಮವನ್ನು ತಾವು ಮಧ್ಯ ಪ್ರವೇಶಿಸಿ ರದ್ದು ಮಾಡಿ ಜನರ ಕೃತಜ್ಞತೆಗೆ ಪಾತ್ರರಾಗಿದ್ದೀರಿ. ಇಂಥ ನಿಯಮಗಳನ್ನು ಮಾಡಿದಾಗ ಮೊದಲೇ ಪ್ರಕಟಿಸುತ್ತಿರಲಿಲ್ಲ. ರೈತರು ಈ ಬಗ್ಗೆ ಅಜ್ಞಾನದಲ್ಲಿದ್ದು ತಮ್ಮ ಬೆಳೆಗಳು ಸಿದ್ಧವಾದಾಗ ಅವರು ಪರ್ಮಿಟ್‌ಗೆ ಅರ್ಜಿ ಹಾಕಲು ಅವರ ಬೇಡಿಕೆಯನ್ನು ಹೊಸ ನಿಯಮದಂತೆ ನೆರವೇರಿಸಲು ಸಾಧ್ಯವಾಗದೆಂದು (ಆಯತ) ವೇಳೆಗೆ ತಿಳಿಸಲಾಗುತ್ತದೆ.”

ಪರ್ಮಿಟ್‌ನ ಪದ್ಧತಿಯಂತೆ ರೈತರು ಮಣಕ್ಕೆ ನಾಲ್ಕು ಪೈಯಂತೆ ಪಡೆಯುತ್ತಿದ್ದ ಉರುವಲು ಸೌದೆಯನ್ನು ಡಿಪೋದಿಂದ ಮಣಕ್ಕೆ ಮೂರರಿಂದ ಐದು ಆಣೆಗೆ ಪಡೆಯಬೇಕಾಗಿದ್ದು, ಖಾಸಗಿ ಕಾಂಟ್ರಾಕ್ಟರರಿಗೆ ಇದರಿಂದ ವಿಶೇಷ ಲಾಭ ಇರದ್ದರಿಂದ ಅವರು ಇದನ್ನೇ ಸದಾಕಾಲ ಸಾಕಷ್ಟು ದಾಸ್ತಾನು ಇಡರು. ಹೆಚ್ಚು ಹಣ ಕೊಡುವ, ಹಣಕೊಟ್ಟರೂ ಮಾಲು ಸಕಾಲದಲ್ಲಿ ಸಿಗದ, ಇಬ್ಬಂದಿಯ ತೊಂದರೆ ರೈತರಿಗಾಗುವುದೆಂದು ಪತ್ರ ಹೇಳಿದೆ. ಇದಲ್ಲದೆ, ಅಘನಾಶಿನಿ ಪ್ರದೇಶದ ರೈತನೊಬ್ಬ ದೂರದ ಹೊನ್ನಾವರ ಇಲ್ಲವೆ ಚಂದಾವರ ಡಿಪೋಗೆ ಉರುವಲು ತರಲು ಹೋಗಬೇಕಾದ ಅಂದಿನ ವ್ಯವಸ್ಥೆಯ ಕಿರುಕುಳವನ್ನೂ ಪತ್ರ ವಿವರಿಸಿದೆ.

ಆರು ಪೈಯಿಂದ ಎರಡಾಣೆ ಬೆಲೆಯ ಸೊಪ್ಪನ್ನು ಅಡವಿಯಿಂದ ತಂದ ರೈತರ ಹಾಗೂ ಮಹಿಳೆಯರ ಮೇಲೆ ಅಂಕೋಲೆಯ ಒಂದು ನ್ಯಾಯಾಲಯದಲ್ಲಿ ಒಂದೇ ದಿನ ನಡೆದಿದ್ದ ೪೦ ಖಟ್ಲೆಗಳನ್ನು ಉಲ್ಲೇಖಿಸಿ, ಇಂಥ ಸಣ್ಣ ಅಪರಾಧಗಳನ್ನು ನಡೆಸಿದವರನ್ನು ಎಚ್ಚರಿಕೆ ಕೊಟ್ಟು ಬಿಡುವ ಬದಲು ಕೋರ್ಟಿಗೆಳೆದ ಅರಣ್ಯಾಧಿಕಾರಿಗಳ ಕ್ರಮವನ್ನು ಟೀಕಿಸಿದ ಹಾಗೂ “ಕರಾವಳಿಯ ತಾಲೂಕುಗಳಲ್ಲಿ ಇಂಥ ಬಹುಸಂಖ್ಯೆ ಅಪರಾಧಗಳು ಘಟಿಸಲು ಕಾರಣವೆಂದರೆ ಬಹುಮಟ್ಟಿಗೆ, ರೈತರ ನ್ಯಾಯವಾದ ಅವಶ್ಯಕತೆಗಳನ್ನು ಪೂರೈಸಲು, ವಿಶೇಷತಃ ಕರಾವಳಿಗೆ ಸಮೀಪದ ಪ್ರದೇಶಗಳಲ್ಲಿ ಅವಶ್ಯ ವಸ್ತುಗಳ ಪೂರೈಕೆ ಇಲ್ಲದ್ದೇ ಕಾರಣವಿರಬೇಕು”, ಎಂದು ೧೯೦೬-೭ ರ ಅರಣ್ಯ ಇಲಾಖೆಯ ಆಡಳಿತ ವರದಿಯಲ್ಲೇ ತಿಳಿಸಿದ ಅಂಶವನ್ನು ಪತ್ರವು ಉಲ್ಲೇಖಿಸಿದೆ. ಅದೇ ವರದಿಯಲ್ಲಿ ಶಿರಸಿ ವಿಭಾಗದ ಅರಣ್ಯ ರಕ್ಷಕರು (ಗಾರ್ಡ್ಸ್‌) ತೀರ ಕುಜಾತಿಯವರು. “ಬ್ಲ್ಯಾಕ್‌ಮೇಲ್‌ನಲ್ಲಿ ಅವರು ತೊಡಗುವುದು ನಿಸ್ಸಂಶಯವಾಗಿಯೂ ಸಾಮಾನ್ಯ ಸಂಗತಿ”, ಎಂಬ ಒಬ್ಬ ಜಿಲ್ಲಾಧಿಕಾರಿಯದೇ ಅನುಭವದ ಮಾತನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅರಣ್ಯಾಧಿಕಾರಿಗಳು ತಾವೇ ದಂಡ ಪಡೆದು ಖಟ್ಲೆಯನ್ನು ಪೂರೈಸುವ (ಕಾಂಪೌಂಡಿಂಗ್ ಅಫೆನ್ಸ್‌) ಪದ್ಧತಿಯ ದುರಾಚಾರವನ್ನು ಉಲ್ಲೇಖಿಸುತ್ತ ತಮ್ಮದೇ ಮಾಸೂರು ಗ್ರಾಮದ ಒಬ್ಬ ವ್ಯಕ್ತಿ ತದಡಿ ನದಿಯಲ್ಲಿ ಪ್ರವಾಹ ಬಂದಾಗ ಸಂಗ್ರಹಿಸಿದ ತೇಲಿ ಬಂದ ಎರಡು ಆಣೆ ಬೆಲೆಯದೂ ಅಲ್ಲದೆ ಸೌದೆಗಾಗಿ ಅರಣ್ಯಾಧಿಕಾರಿ ಒಂಬತ್ತು ರೂ. ದಂಡ ಹಾಕಿದ ಪ್ರಕರಣವನ್ನು ಇಲ್ಲಿ ಉಲ್ಲೇಖಿಸಲಾಗಿದೆ. ತೇಲಿ ಬಂದ ಸೌದೆಯ ಮೇಲೆ ನಿಜವಾಗಿ ಸರ್ಕಾರಕ್ಕೆ ಅಧಿಕಾರ ಇರಲಿಲ್ಲ. ಈ ಪ್ರದೀರ್ಘ ಮುದ್ರಿತ ಪತ್ರದಲ್ಲಿ ಉಲ್ಲೇಖಿತವಾದದ್ದು ರೈತರ ಸಂಕಟಗಳ ಮುಖ್ಯಾಂಶ ಮಾತ್ರ. ರೈತರಗೋಳು ಇದಕ್ಕೂ ಉಗ್ರವಾದದ್ದು.

ಮಲೆನಾಡಿನ ಸೆರಗಿನಲ್ಲಿ ರೈತರು ಮಲೇರಿಯಾ ಪೀಡಿತರು. ಅವರಿಗೆ ಅನಾರೋಗ್ಯದಿಂದ ಸದಾ ಸಂಕಟ. ನಿಸರ್ಗದೊಡನೆ ಚೆಲ್ಲಾಟವಾಡಿ ಬಾಳ್ವೆ ಮಾಡಿ ಬೇಸಾಯ, ತೋಟಗಾರಿಕೆ ಮಾಡುವವರು ಅವರು. ವನ್ಯ ಪ್ರಾಣಿಗಳಾದ ಆನೆ, ಹಂದಿ, ಮಂಗಗಳ ಕಾಟ ಬೆಳೆಗಾದರೆ, ಹುಲಿ, ಚಿರತೆಗಳ ಕಾಟ ರಾಸುಗಳಿಗೆ, ಕಳ್ಳಕಾಕರ, ದರೋಡೆಖೋರರ ಕಾಟ ಬೇರೊಂದೆಡೆ. ವಾಸ್ತವವಾಗಿ ಈ ಪ್ರದೇಶದ ವಿಕೃತ ಪರಿಸ್ಥಿತಿ ಎಷ್ಟಿತ್ತೆಂದರೆ, ಮಲೇರಿಯಾ ಪಿಡುಗಿನಿಂದ ಸತ್ತ, ಅರಣ್ಯಾಧಿಕಾರಿಗಳ ಕಾಟದಿಂದ ಊರು ಬಿಟ್ಟ ಜನರ ಸಂಖ್ಯೆ ದೊಡ್ಡದು. ೧೮೮೧ ರಲ್ಲಿ ೪,೨೧,೯೩೨ ಇದ್ದ ಜಿಲ್ಲೆಯ ಜನಸಂಖ್ಯೆಯು ೧೮೯೧ ರಲ್ಲಿ ೪,೪೬,೪೫೩ ಏರಿದ್ದು ಕೇವಲ ಶೇ. ೫.೮ ಏರಿಕೆ ಅಷ್ಟೆ. ೧೯೦೧ ರಲ್ಲಿ ಇದು ೪,೫೪,೪೮೦ ಕ್ಕೆ ಎಂದರೆ ಕೇವಲ ಶೇ. ೧.೮ ಏರಿತು. ೧೯೧೧ ರಲ್ಲಿ ಜನ ಸಂಖ್ಯೆ ೪,೩೦,೫೪೮, ಎಂದರೆ ಶೇ. ೫.೨೭ ರಷ್ಟು ಇಳಿಯಿತು, ೧೯೨೧ ರಲ್ಲಿ ೪,೦೧,೭೨೭ ಎಂದರೆ ಶೇ. ೬.೬೯ ರಷ್ಟು ಇಳಿಯಿತು. (ಉ.ಕ.ಜಿ.ಗ್ರಾ. ೧೯೮೬, ಪು. ೧೮೯) ಈ ಇಳಿತಕ್ಕೆ ಮಲೇರಿಯಾದಂಥ ರೋಗ ಒಂದು ಕಾರಣವಾದರೆ, ಜನ ಜಿಲ್ಲೆ ಬಿಟ್ಟು ಗುಳೆ ಹೋದುದೂ ಇನ್ನೊಂದು ಕಾರಣ. ಕೃಷಿ ಭೂಮಿಯಲ್ಲಿ ಇಳಿತವಾಗಲು ಭೂಮಿಯನ್ನು ಬೀಳು ಬಿಟ್ಟು ಜನ ಮಲೆನಾಡನ್ನೂ ತ್ಯಜಿಸಿದ್ದೇ ಕಾರಣ. “ಆನೆಗಳ ಕಾಟಕ್ಕೆ ಬೇಸತ್ತ ಮರಾಠಾ ಒಕ್ಕಲಿಗಳು ಮೈಸೂರು ಶೀಮೆಗೆ ಹೋಗಹತ್ತಿ ಹಳ್ಳಿಗಳು ಹಾಳು ಬೀಳುತ್ತಿವೆ” ಎಂಬ ಮಾತು “ಕಾನಾಡಾ ಧುರೀಣ”ದಲ್ಲಿ ೮-೭-೨೪ ರಲ್ಲಿ ಬಂದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಸೋಂದಾ, ಯಾಣಗಳಂಥ ಅನೇಕ ಒಳನಾಡುಗಳು ಬುಕಸನ್‌ನಿಂದ ಜನಭರಿತವೆನಿಸಿದ್ದರೆ, ಇಂದು ಅವು ನಿರ್ಜನ ನೆಲೆಗಳಾಗಿವೆ. ಒಂದು ಪ್ರದೇಶ ನಿರ್ಜನವಾಗುವುದು ಯಾವುದೇ ಸರ್ಕಾರದ ಉತ್ತಮ ಆಡಳಿತಕ್ಕೆ ಸಾಕ್ಷ್ಯವಾಗುವುದಿಲ್ಲ. ಅಲ್ಲಿ ಉಳಿದ ಜನರಾದರೂ ಊರು ಬಿಡದವರಾಗಿ, ನರಳುತ್ತ ರಾಜನನ್ನು ಶಪಿಸುತ್ತ ಇರುತ್ತಾರೆ.

ವನ್ಯ ಮೃಗಗಳ ಬೇಟೆಯ ಬಗ್ಗೆ ತಂದ ಮಿತಿಗಳು ಇನ್ನಷ್ಟು ತಾಪದಾಯಕ. ಸರ್ಕಾರೀ ಅಂದಾಜಿನಂತೆ ಅವುಗಳಿಂದ ವರ್ಷಕ್ಕೆ ಸುಮಾರು ಏಳು ಲಕ್ಷ ರೂ. ಬೆಲೆಯ ಬೆಳೆ ಜಿಲ್ಲೆಯಲ್ಲಿ ಹಾಳಾಗುತ್ತದೆಂದು ಈ ಕಾಲದಲ್ಲಿ ಲೆಜಿಸ್ಲೇಟಿವ್ ಕೌನ್ಸಿಲ್‌ನಲ್ಲಿ ಸರ್ಕಾರ ಉತ್ತರ ಕೊಟ್ಟಿತ್ತು. ೧೯೦೩ರಲ್ಲಿ ಜಾರಿ ಮಾಡಿದ ಕಾನೂನಿನಂತೆ ಬೇಟೆಯಾಡುವುದರ ಬಗ್ಗೆ ಅನೇಕ ಇತಿಮಿತಿಗಳು, ಬಂದೂಕಿಗೆ ರೂ. ೨೫ ಲೈಸನ್ಸ್‌ ಶುಲ್ಕ, ಗದ್ದೆಗೆ ಬಂದ ಪ್ರಾಣಿಯನ್ನು ಅಟ್ಟಿಸಿಕೊಂಡು ಹೋದವರಿಗೂ ಕಾದಿಟ್ಟ ಅಡವಿ ಪ್ರವೇಶಿಸಿ ಬೇಟೆ ಆಡಬಾರದೆಂಬ ಉಗ್ರ ಪ್ರತಿಬಂಧ, ಮೃಗಗಳನ್ನು ಹೆದರಿಸಲು ಬೆಂಕಿ ಹಾಕಿದಾಗ ಅರಣ್ಯ ನಾಶಕ್ಕೆ ಕಾರಣವಾಯಿತೆಂಬ ಖಟ್ಲೆ, ಹೀಗೆ ವನ್ಯ ಪಶುಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗದ ರೈತರ ಗೋಳು. ಹಂದಿಗಳಿಂದ ಬೆಳೆಯನ್ನು ರಕ್ಷಿಸಲು ಬಲವಾದ ಗೂಟಗಳ ಬೇಲಿ ಬೇಕು, ಬೇಲಿಗೆ ಗೂಟಗಳೆಲ್ಲಿಂದ ಬರಬೇಕು? ೧೯೧೮ ರಲ್ಲಿ ಚೀಫ್ ಕನ್ಸ್‌ರ್ವೇಟರ್ ಒಬ್ಬರು, “ಕೃಷಿ ಇಲಾಖೆಯೇ ಹಂದಿಗಳ ತಡೆಗೆ ಕೆಲವಾದರೂ ಪ್ರಾಯೋಗಿಕ ಬೇಲಿಗಳನ್ನು ಹಾಕಬಾರದೆ?” ಎಂದು ಮಾಡಿದ ವಿಚಿತ್ರ ಸೂಚನೆ ಗಮನಿಸಬೇಕಾದದ್ದು.

ರೈತರಿಗೆ ಮೇವಿಗೆ ಹುಲ್ಲು, ಕೃಷಿ ಕಾರ್ಯಕ್ಕೆ ಬೇಕಾಗುವ ಸೊಪ್ಪು, ತರಗೆಲೆ, ಬೇಲಿ ಕಟ್ಟಲು ಮುಳ್ಳು, ಗೂಟ, ಬಿದಿರು, ಬಳ್ಳಿ, ಮರಮುಟ್ಟುಗಳನ್ನು ತರಲು ಹಿಂದೆ ನಡಿದ್ದ ಸವಲತ್ತುಗಳನ್ನು ಹಿಂತೆಗೆದುಕೊಂಡು, ಈ ಸವಲತ್ತುಗಳನ್ನು ಗಮನಿಸಿಯೇ ಆಕರಿಸಿದ್ದ ಕಂದಾಯವನ್ನು ಕಡಿಮೆ ಮಾಡದೆ, ವನ್ಯಪ್ರಾಣಿಗಳಿಂದ ಸೂಕ್ತ ರಕ್ಷಣೆಯನ್ನು ನೀಡದೆ, ಪ್ರತಿಯೊಂದ ಸವಲತ್ತಿಗೂ, ಫಾರೆಸ್ಟ್ ಇಲಾಖೆಯ ಜನಪರ ಜವಾಬ್ದಾರಿ ಇಲ್ಲದೆ ನೌಕರರ ಮುಖನೋಡುವಂತೆ ಮಾಡಿದ ಸನ್ನಿವೇಶ ನಿರಂಕುಶವಾದದ್ದಷ್ಟೇ ಅಲ್ಲ, ದೌರ್ಜನ್ಯದ್ದೂ. ತಾವೇ ಪರ್ಮಿಟ್ ಮಾಡುವ, ತಾವೇ ಅಪರಾಧ ಪತ್ತೆ ಹಚ್ಚುವ, ತಾವೇ ಶಿಕ್ಷೆ ಮಾಡುವ, ಜನಹಿತದ ಜವಾಬ್ದಾರಿ ಇಲ್ಲದ ಸರ್ವತಂತ್ರ ಅರಣ್ಯ ಇಲಾಖೆಯಿಂದ ಜನರ ರಕ್ಷಣೆ ಹೇಗೆ? ಈ ಇಲಾಖೆಯ ನೌಕರರು “ಬ್ಲ್ಯಾಕ್ ಮೇಲ್” ಮಗ್ನರೆಂಬ ಕುಖ್ಯಾತಿಯನ್ನು ಒಬ್ಬ ಅಧಿಕಾರಿ ಆಗಲೇ ಹೇಳಿದ್ದಾರೆ. ೧೯೧೭-೧೮ ರ ಅರಣ್ಯ ಇಲಾಖಾ ವರದಿಯಲ್ಲೇ ಅರಣ್ಯ ಇಲಾಖಾ ಗಾರ್ಡ್‌ಗೆ “ಬಾಳಲು ಅವಶ್ಯವಾದ ಸಂಬಳ ದೊರಕದು; ಅವನು ತನ್ನ ಆದಾಯಕ್ಕೆ ಬೇರೆ ಪೂರಕ ಆದಾಯ ಗಳಿಸಬೇಕು”, ಎಂದು ಹೇಳಿರುವ ಸಂಗತಿ ಗಮನಿಸಿ.

ವ್ಯಾಪಾರಿಗಳು, ನಗರವಾಸಿಗಳು, ಕೂಲಿಗಳು ಹಾಗೂ ಅದಕ್ಕೂ ಹೆಚ್ಚಾಗಿ ರೈತರು, ಇವರಿಗೆ ನೀಡಿದ ಕಿರುಕುಳದಿಂದ ಯಾವ ಜನ ತಾನೇ ಸರ್ಕಾರಕ್ಕೆ ವಿಧೇಯರಾಗಿದ್ದಾರು? ತಾವು ಕಟ್ಟಿದ ರೈತರ ಸಂಘದ ಮೂಲಕ ಸರ್ಕಾರದೊಡನೆ ಪತ್ರವ್ಯವಹಾರ ಸಂದರ್ಶನ ನಡೆಸಿದ್ದ ರಾವ್‌ಸಾಹೇಬ ಗಣಪತರಾವ್ ಮಾಸೂರರೇ, ರಾವ್‌ಸಾಹೇಬ ಗೌರವ ಪದವಿಗೆ ೧೯೨೦ ರ ಡಿಸೆಂಬರ್‌ದಲ್ಲಿ ರಾಜೀನಾಮೆ ಕೊಟ್ಟರು. ರಾಘವೇಂದ್ರರಾವ್ ಬಸ್ರೂರರೂ ಇದೇ ರೀತಿ ಇಂಥ ಪದವಿ ತ್ಯಜಿಸಿದರು. ಸರ್ಕಾರದ ಕಿವುಡು ಕಿವಿಯ ನೀತಿಗೆ ಇದು ಪ್ರತಿಭಟನೆಯಾಗಿತ್ತು. (ಕಾನಡಾ ಜಿಲ್ಲೆಯ ವನದುಃಖಗಳೂ ಬೇಸಾಯದ ಅವನತಿಯೂ; ಭಾಗ I, 1924, P. 25).

ಕಾನಡಾ ಧುರೀಣ, ಕಾನಾಡ ವೃತ್ತ (೧೯೧೬), ಅದಕ್ಕೂ ಹಿಂದಿನ ಮುಂಬೈಯ ಹವ್ಯಕ ಸುಭೋಧ (೧೮೯೫), ಕನ್ನಡ ಸುವಾರ್ತೆ(ಸು. ೧೮೮೨), ಮರಾಠಿ ಕೇಸರಿ (೧೮೮೧), ಕಾಳ್ ಹಾಗೂ ಬಾಂಬೇ ಕ್ರಾನಿಕಲ್‌ಗಳು ಓದಬಲ್ಲ ಜನರಲ್ಲಿ ಜಾಗೃತಿ ಮೂಡಿಸಲು ಮಾಡಿದ ಯತ್ನಕ್ಕೆ ಭೂಮಿ ಹದವಾಗಿತ್ತು. ಕಾಂಗ್ರೆಸ್ ೧೯೨೦ ರ ನಂತರ ತೀವ್ರ ಪ್ರಚಾರಕ್ಕೆ ಮುಂದಾದಾಗ ಬೀಜಾರೋಪಣೆಯಾಗಿ ವಿಶಾಲ ರಾಷ್ಟ್ರೀಯ ವೃಕ್ಷಗಳ ಬೆಳೆಗೆ ಭೂಮಿ ಆಗಲೇ ಸಿದ್ಧವಾಗಿತ್ತು. ಸರ್ಕಾರದ ಬಗೆಗಿನ ಬಹುಮುಖ ಉಗ್ರ, ತೀವ್ರ ಅಸಮಾಧಾನವೇ ಈಭೂಮಿಯನ್ನು ಹದಗೊಳಿಸಿದ್ದ ಸನ್ನಿವೇಶ.

ಆಧಾರ ಗ್ರಂಥಗಳು

೧. ಕಾನಾಡಾ ಜಿಲ್ಲೆಯ ವನದುಃಖಗಳೂ ಬೇಸಾಯದ ಅವನತಿಯೂ (ಕಾನಡಾ ಧುರೀಣದಿಂದ ಅವತರಿಸಿದ್ದು) ಭಾಗ I, ಕುಮಟಾ, ೧೯೨೪.

೨. ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು (ಸಂ: ಸೂರ್ಯನಾಥ ಕಾಮತ), ಮೈಸೂರು, ಭಾಗ-೧ ಮತ್ತು ೩.

೩. ದೇಶಪಾಂಡೆ ಗಂಗಾಧರರಾಯರು (ಆತ್ಮಚರಿತ್ರೆ). ಅನುವಾದ: ರಾಮಚಂದ್ರ ವಡವಿ, ಹುಬ್ಬಳ್ಳಿ, ೧೯೬೪.

೪. Gazetteer of the Bombay Presidency, Kanara (Ed: James M. Champbell), two Parts, 1883

೫. Karnataka State Gazetteer –Uttara Kannada District (Ed: Suryanath U. Kamath), 1985

೬. Buchanan, Francis: A Journey Through Mysore, Malabar and Canara, Two parts, Madras, 1870.

೭. A Representation to the Collector, Treating at Length some of the Grievances Embodied in the Preceding Statement, Raosaheb G.R. Masur Kumta, 1918

೮. Forest Grievances in North Kanara, Pamphlet-I G.R. Masur Kumta, 1927.

೯. Forest Grievances in North Kanara, Pamphlet No. VI, Kumta, 1927.

* * *