ಶ್ರೀಮನ್ಮಾಗೇಂದ್ರ ಭೋಗಸುರದರುಣಮಣಿದ್ಯೋತಿ ಸಂಧ್ಯಾನಿಬದ್ಧ
ಪ್ರೇಮಂ ಪ್ರೋದ್ಯತ್ತರಂಗೋಚ್ಚರಮರನದೀಶೀಕರೋದಾರ ತಾರಾ
ರಾಮಂ ಹೇಮಪ್ರಭಾ ಪ್ರಸುರಿತ ಗಿರಿಶ ಚಂಚಜ್ಜಟಾಜಾಲಜೂಟ
ವ್ಯೋಮ ಪ್ರೋದ್ಭಾಸಿ ಚಂದ್ರಂ ತ್ರಿಭುವನಜನಕಾನಂದಮಂ ಮಾಡುಗೆಂದುಂ       ೧

ಸತತ ಗಂಭೀರವೃತ್ತಿಯಿನುದಾರತೆಯಿಂ ಜಗದೇಕ ಜೀವನ
ಸ್ಥಿತಿಯಿನತಿಪ್ರಸಾದಗುಣದಿಂ ರಸಭಾವವಿಳಾಸದಿಂ ಕವಿ
ಪ್ರತತಿನಿಕಾಂತ ಸೇವ್ಯತೆಯನೊಂದಿ ಸರಸ್ವತಿಯಂದದಿಂ ಸರ
ಸ್ವತಿ ದಯಗೆಯ್ಗೆ ನಮ್ಮೊಳನುಕೂಲತೆಯಿಂದವೆ ನಿರ್ಮಳತ್ವಮಂ                  ೨

ಬಾಣಂ ವಲ್ಲಭನಕ್ಕುಮೆಂದು ಪಡೆದಾ ವಾಗ್ವೇವಿಗಬ್ಯೋದ್ಧವಂ
ಜಾಣಿಂ ಬಾಣಿಯೆನಿಪ್ಪದೊಂದು ಪೆಸರು ಮುನ್ನಿತ್ತನೆಂದಂದು ಪೋ
ಮಾಣಿನ್ನನ್ಯ ಕವಿಸ್ತುತಿವ್ಯಸನಮಂ ವಾಗ್ವಾತ ಚಾತುರ್ಯಗೀ
ರ‍್ಜಾಣಂ ತಾನೆನೆ ಸಂದ ಬಾಣನೆ ವಲಂ ದಂದ್ಯಂ ಪೆರರ್ವಂದ್ಯರೇ               ೩

೧. (ಪರಮೇಶ್ವರನಿಗೆ ಆಭರಣವಾಗಿರುವುದರಿಂದ) ಭಾಗ್ಯವಂತನಾದ ನಾಗರಾಜನ ಹೆಡೆಯಲ್ಲಿ ಪ್ರಕಾಶಮಾನವಾದ ಕೆಂಪುರತ್ನವಿದೆ. ಅದರ ಕೆಂಬೆಳಕೇ ಸಂಜೆ. ಆ ಸಂಜೆಯಲ್ಲಿ ಸಂಪರ್ಕ ಬೆಳೆಸಿದ್ದಾನೆ, ಶಿವನ ತಲೆಯ ಮೇಲಿರುವ ಚಂದ್ರ ಮತ್ತು ಶಿವನ ತಲೆಯಲ್ಲಿ ಉಕ್ಕೇರುತ್ತಿರುವ ಅಲೆಗಳುಳ್ಳ ಗಂಗಾನದಿಯೂ ಇದೆ. ಆ ನದಿಯಿಂದ ಮೇಲಕ್ಕೆ ಸಿಡಿಯುತ್ತಿರುವ ಹನಿಗಳೇ ಮಿನುಗುವ ನಕ್ಷತ್ರಗಳು. ಆ ನಕ್ಷತ್ರಗಳ ಮಧ್ಯದಲ್ಲಿ ಈ ಚಂದ್ರನು ಆರಾಮವಾಗಿದ್ದಾನೆ. ಅಲ್ಲದೆ ಹೊಂಬೆಳಕಿನಿಂದ ಮಿನುಗುತ್ತಿರುವ ಶಿವಜಟಾಮಂಡಲವೆಂಬ ಆಕಾಶದಲ್ಲಿ ವಿರಾಜಿಸುತ್ತಿದ್ದಾನೆ. ಇಂತಹ ಚಂದ್ರನು ಮೂರುಲೋಕದ ಜನರಿಗೆಲ್ಲ ಯಾವಾಗಲೂ ಸಂತೋಷವನ್ನುಂಟುಮಾಡಲಿ. ಟಿ. ಇಲ್ಲಿ ಕವಿಯು “ಆಕಾಶದಲ್ಲಿ ವಿರಾಜಿಸುವ ಪ್ರಸಿದ್ಧ ಚಂದ್ರನಂತೆಯೇ ಶಿವನ ತಲೆಯ ಮೇಲೆ ಶೋಭಿಸುವ ಚಂದ್ರನೂ ಸಂಧ್ಯಾಪ್ರಣಯ, ಮೊದಲಾದ ಧರ್ಮಗಳನ್ನು ಹೊಂದಿದ್ದಾನೆ. ಆದ್ದರಿಂದ ಇಬ್ಬರೂ ಒಂದೇ” ಎಂದು ಚಿತ್ರಿಸಿದ್ದಾನೆ. ೨. ಸರಸ್ವತೀನದಿಯಂತಿರುವ ವಾಙ್ಮಯ ಸ್ವರೂಪಳಾದ ಸರಸ್ವತೀದೇವಿಯು ನಮಗೆ ಪ್ರತಿಭೆಯನ್ನು ಅನುಗ್ರಹಿಸಿ ಸಹಾಯಕಳಾಗಿ ನಾವು ಪ್ರಯೋಗಿಸುವ ಶಬ್ದಗಳು ದೋಷರಹಿತವಾಗಿಯೂ ಪರಿಶುದ್ಧವಾಗಿಯೂ ಇರುವಂತೆ ಅನುಗ್ರಹಿಸಲಿ. ಸರಸ್ವತಿದೇವಿಯು ಯಾವಾಗಲೂ ಅಶ್ಲೀಲ ಮೊದಲಾದ ದೋಷಗಳಿಲ್ಲದುದರಿಂದ ಗಂಭೀರವಾದ ಅರ್ಥವನ್ನು ಕೊಡುವ ಅಭಿಧೆ, ಲಕಣೆ, ವ್ಯಂಜನೆ ಎಂಬ ಮೂರು ಬಗೆಯ ವೃತ್ತಿಗಳಿಂದ ಕೂಡಿದ್ದಾಳೆ ಅಥವಾ ರಸೋಚಿತವಾದ ಕೈಶಿಕೀ ಮೊದಲಾದ ವೃತ್ತಿಗಳಿಂದ ಕೂಡಿದ್ದಾಳೆ. ಇವಳಲ್ಲಿ ಉದಾರತೆಯೆಂಬ ಕಾವ್ಯಗುಣವಿದೆ. ಜಗತ್ತಿನ ಬಾಳುವಿಕೆಗೆ ಮುಖ್ಯಕಾರಣವಾಗಿದ್ದಾಳೆ. ಅತಿಶಯವಾದ ಪ್ರಸಾದವೆಂಬ ಕಾವ್ಯಗುಣದಿಂದ ಕೂಡಿದ್ದಾಳೆ. ರಸ, ಭಾವಗಳ ಬೆಡಗಿನಿಂದ ಮನೋಹರವಾಗಿದ್ದಾಳೆ. ಅಲ್ಲದೆ ಕವಿಗಳು ಇವಳನ್ನು ಬಹಳವಾಗಿ ಸೇವಿಸುತ್ತಾರೆ. ಅಂದರೆ ಅಮೋಘವಾದ ಕಾವ್ಯಗಳನ್ನು ರಚಿಸುತ್ತಾರೆ. ಸರಸ್ವತೀನದಿಯು ಯಾವಾಗಲೂ ಆಳವಾಗಿಯೇ ಇರುತ್ತದೆ. ಬಹಳ ವಿಶಾಲವಾಗಿಯೂ ಇದೆ, ಜಲರೂಪವಾಗಿರುವುದರಿಂದ ಪ್ರಪಂಚದ ಜೀವನಕ್ಕೆ ಆಧಾರಭೂತವಾಗಿದೆ. ಇದರ ನೀರು ನೈರ್ಮಲ್ಯಗುಣದಿಂದ ಕೂಡಿದೆ. ಈ ನದಿಯ ನೀರೋಟದಲ್ಲಿ ಬಗೆಬಗೆಯಾದ ಭಂಗಿಗಳಿವೆ. ಅದರ ನೀರು ಹಕ್ಕಿಗಳ ಸಮೂಹದಿಂದ ಬಹಳವಾಗಿ ಓಲೈಸಲ್ಪಡುತ್ತಿದೆ. ಇಂತಹ ನದಿಯು ದಟಮುಟ್ಟ ಹರಿಯುತ್ತಿದ್ದರೆ ಸ್ನಾನದಿಂದ ಸ್ವಚ್ಛತೆಯನ್ನು ಪಡೆಯಲು ನಮಗೆ ಸಹಾಯವಾಗುತ್ತದೆ. ಟಿ. ಇಲ್ಲಿ ಕವಿಯ ಶ್ಲೇಷೆಯಿಂದ ಸರಸ್ವತೀನದಿಗೂ ವಾಗ್ರೂಪಳಾದ ಸರಸ್ವತಿಗೂ ಸಾಮ್ಯವನ್ನು ಚಿತ್ರಿಸಿದ್ದಾನೆ.

೩. ಬ್ರಹ್ಮನು ವಿದ್ಯಾದೇವತೆಯಾದ ಸರಸ್ವತಿಯನ್ನು ಸೃಷ್ಟಿಸಿದನು. ಆಗಲೇ ಜ್ಞಾನದೃಷ್ಟಿಯಿಂದ “ಮುಂದೆ ಬಾಣನೆಂಬುವನು ಹುಟ್ಟುತ್ತಾನೆ.