ಭಾಮಿನಿ

ವಾರಿಜಾಕ್ಷಿಯರಿಂತು ಕೃಷ್ಣನ |
ದೂರುಸುರುತಿರೆ ತಿಂದ ಮೊಸರಿನ |
ನೀರು ತುಪ್ಪದ ಜೊಲ್ಲು ಕೈ ಬಾಯೆಂಜಲೂಡಿರಲು ||
ಚೋರನಿವನಹುದೆನಲು ತನ್ನ ಕು |
ಮಾರನನು ಕಂಡಬಲೆ ನಾಚಿವಿ |
ಚಾರಮತಿ ಮನೆಗೊಯ್ದುಸಲೆ ಬೆದರಿಸಿದಳರ್ಭಕನ || ||೨೬೬||

ರಾಗ ಘಂಟಾರವ ಝಂಪೆತಾಳ

ಚೋರತನದಲಿ ಪಾಲು ಮೊಸರು ಬೆಣ್ಣೆಯ ಮೆಲಲು |
ಧಾರಿಣೀ ಪತಿಗಳಿಗೆ ಧೀರತನವೇನೋ ||೨೬೭||

ಇನಿತು ದಿನ ಸೈರಿಸಿದೆ ಈ ಮಾತುಗಳು ನಿನ್ನ |
ಘನತರದಿ ನೋಡಿದನು ಗಂಭೀರ ಗುಣವ ||೨೬೮||

ಕಂಡವರ ಮನೆಯ ಪಾಲುಂಡು ಮೊಸರ್ಕಳುವುದಕೆ |
ಪುಂಡು ಪೋಕನೆ ನೀನು ಪುರುಷಾರ್ಥವೇನು ||೨೬೯||

ಬೆಣ್ಣೆ ತುಪ್ಪ ಬೇಡಿ ಬೇಸರಿಸಿ ಕಾಡುವರೆ |
ಉಣ್ಣಲಿಲ್ಲದ ತಿರುಕುಳಿಯ ಕೂಟದವನೆ ||೨೭೦||

ರಾಗ ಶಂಕರಾಭರಣ ಅಷ್ಟತಾಳ

ತರವೇನೊ ರಂಗ | ತಾಳು ತಾಳಯ್ಯ |
ತರುಣಿಯ ಒಡನಾಟ ಬೇಡವೆ ನಿನಗೆ || ತರವೇನೊ  || ಪಲ್ಲವಿ ||

ಸರಿ ರಾತ್ರೆಯವರ ಮಂದಿರದಿ ದಂಪತಿಗಳು |
ಸರಸದೊಳಿರಲೊಳ ಸರಿಯುತಲ್ಲಿ |
ಮರಿಯಾದೆ ಕೆಟ್ಟು ಮೈ ಮುಟ್ಟಿವಂಚಿಸುತವ |
ರರಿಯದಂ ತೋಡಿ ಕಾಡುವ ಮಂಗಚೇಷ್ಟೆಯು || ತರವೇನೋ ||೨೭೧||

ಅನ್ಯರ ಮನೆಯೊಳಗಡಗಿರಿಸಿದ ಬಾಳೆ |
ಹಣ್ಣಿನ ಗೊನೆಯ ತುಪ್ಪವ ಭಕ್ಷಿಸಿ
ಹೆಣ್ಣು ಮಕ್ಕಳು ಮೊಸರ್ಕಡೆವಾಗ ಬಲುಮೆಯೊಳ್ |
ಬೆನ್ನ ಮೇಲಡರಿ ಚೆಂದುಟಿಯ ಕಚ್ಚುವದಿದು || ತರವೇನೋ ||೨೭೨||

ಬಚ್ಚಲು ಮನೆಯೊಳು ನೀನಡಗಿರುವುದಕೆ ನೀ |
ಹುಚ್ಚಾದೆಯೇನೊ ನೀ | ಮಂದಿರ ಬಿಟ್ಟು |
ಉಚ್ಚೆಯ ಹೊವದರೊಡನೆ ದೃಷ್ಟಿಸುವುದೇ |
ನಾಶ್ಚರ್ಯ ಪೋಕವಿದ್ಯೆಗಳ ಮಾಡುವದಿದು || ತರವೇನೋ ||೨೭೩||

ಚೋರರ ಪಿಡಿದು ಬುದ್ಧಿಯ ಪೇಳಿ ನಡೆಸುವ |
ಧಾರಿಣೀಪತಿಗಳೆ ನಾವಾಗೀ |
ಸೇರದ ನಡತೆಯ ನಡೆಸುವದಪಕೀರ್ತಿ |
ಊರ ಮಕ್ಕಳ ಕೂಡಿಕೊಂಡು ಪುಂಡೇಳ್ವದು || ತರವೇನೊ ||೨೭೪||

ಅರಿತವರಂತರಂಗದಿ ನಿನ್ನ ವರ ಕಣ್ವ |
ಪುರದ ಶ್ರೀ ಗೋಪಾಲಕೃಷ್ಣನೆಂದು |
ಹಿರಿಯಣ್ಣ ಬಲರಾಮನುರಗೇಂದ್ರನೆಂಬಂಥ |
ಮರಿಯಾದೆಯಲಿ ಪಾಠಕರು ಪೊಗಳುವುದಾಗಿ ||೨೭೫||

ಕಂದ

ಮದಗಜಗಮನೆ ಯಶೋದೆಯು |
ಬೆದರಿಸಲವನಂಜಿದಂತೆ ಸುಮ್ಮನಿರಲ್ಕಾ |
ಮದನಪಿತನ ಮೈದಡವುತ |
ವಿಧುಮುಖಿ ಪಾಲ್ಕುಡಿಸಿ ಸಂತವಿಟ್ಟಳು ಮಗನ ||೨೭೬||

ರಾಗ ಕೇದಾರಗೌಳ ಅಷ್ಟತಾಳ

ಮರುದಿನ ಬೆಳಗಾಗೆ ಗೋಕುಲದೊಳಗಿದ್ದ | ತುರುಗಾವರೊಡನಾಡುತ್ತ |
ಕರು ದನಂಗಳ ಬಿಟ್ಟು ಹೊಡೆದು ವೃಂದಾವನಾಂ | ತರಕೆ ತಾ ತೆರಳಿ ಬಂದ ||೨೭೭||

ಕೊಳಲ ಧ್ವನಿಯ ಕೇಳಿ ತಲೆದೂಗಿ ಗೋವ್ಗಳ | ಬಳಗ ಸಂಗಡ ಓಡುತ್ತ |
ಬಳಲಿ ನೀರಡಿಕೆ ಆಹಾರವೆನ್ನದೆ ಸುತ್ತಿ | ತೊಳಲಾಡುತಿರ್ದರೆಲ್ಲ ||೨೭೮||

ಫಲಮರಂಗಳನೇರಿ | ಪೆಣ್ಗೊನೆಗಳ ನೀರಿಂ | ಗಿಳಿದು ಪಂಕಜವ ಕೊಯ್ದು |
ಬಲರಾಮ ಸಹಿತ ಗೋವಳರೊಡನಾಡುತ್ತ | ಗೆಲವಿನಿಂದಿರಲಿತ್ತಲು ||೨೭೯||

ಕಂದ

ಗೋಕುಲದೊಳ್ ಸುದತಿಯ ರಾ |
ಶ್ರೀಕೃಷ್ಣನ ಕಾಣದಿರಲು ಬಲು ಬೇಸರದಿಂ |
ಏಕಾಂತದಿ ಮಾತಾಡುತ |
ಶ್ರೀಕಾಂತನ ಗುಣವ ಪೊಗಳುತ್ತರಸಿದರಾಗಳ್ || ||೨೮೦||

ರಾಗ ತೋಡಿ ಏಕತಾಳ

ಎಲ್ಲಿಗೆ ಎದ್ದು ಪೋದ | ಗೋಪಾಲ |
ಪುಲ್ಲಲೋಚನ ಪರಮಾತ್ಮ ತಾ ಮುನಿಸಿಂದ || ಎಲ್ಲಿಗೆ   || ಪಲ್ಲವಿ ||

ಬೆದರಿಸೆ ತಾಯ ಮಾತಿಗೇ | ಕೋಪಿಸಿಕೊಂಡು |
ಬದಲೊಂದು ರಾಜ್ಯ ಸೇರಿದನೋ ಗೋವಳರಾಯ || ಎಲ್ಲಿಗೆ ||೨೮೧||

ಗಾಡಿಗಾರಿನ ಮುದ್ದು ಮೋರೆ ನಟನೆಯಿಂದ |
ಆಡುತ್ತ ದಿನದಿನ ಬರುವ ಗೋಪಾಲ ತಾ || ಎಲ್ಲಿಗೆ ||೨೮೨||

ಬಲರಾಮ ಸಹಿತ ಗೋವಳರೊಡಗೊಂಡು ಗೋ |
ಕುಲದ ಬೀದಿಯೊಳಾಡುತಿರುವ ಕೃಷ್ಣಯ್ಯ ತಾ || ಎಲ್ಲಿಗೆ ||೨೮೩||

ರಾಗ ಆನಂದಭೈರವಿ ತ್ರಿವುಡೆ ಅಷ್ಟತಾಳ

ಕಾಣದೆ ನಿಲಲಾರೆವೈ | ಗೋಪಾಲಕೃಷ್ಣನ   || ಪಲ್ಲವಿ ||

ಕಾಣದೆ ನಿಲಲಾರೆ | ಪ್ರಾಣನಾಯಕ ಪಂಚ |
ಬಾಣ ಜನಕ ಶ್ರೀ | ವೇಣುಗೋಪಾಲನ   || ಅ.ಪ ||

ಅಂಬುಜದಳನೇತ್ರನ | ಆಶ್ರಿತನಿಕು | ರುಂಬ ಲಲಿತ ಗಾತ್ರನ |
ಸದ್ದಿವಿಜಕ | ದಂಬ ಸನ್ನುತಿ ಪಾತ್ರನ |
ಕಂಬು ಚಕ್ರಾಂಕ ಪೀ | ತಾಂಬರಧರ ದೇವ |
ಶಂಭು ಮಿತ್ರ ಸರ್ವೇಶ | ಶ್ರೀಕೃಷ್ಣನ || ಕಾಣದಿ ||೨೮೪||

ವಿಷದ ಮೊಲೆಯನುಂಡನ | ಮಹಾಂತ ರಾ | ಕ್ಷಸಿಯ ಪ್ರಾಣವ ಗೊಂಡನ |
ಗೋಕುಲಕೆ ಬಂ | ದಸಮದೈತ್ಯರ ಕೊಂದನ |
ಮೊಸರು ಬೆಣ್ಣೆಯ ಕದ್ದು | ಮೆದ್ದು ಗೋವಳರ್ಗಿತ್ತು |
ಹಸನಾಗಿ ನಲಿದಾಡುತ್ತಿರುವ ಕೃಷ್ಣಯ್ಯನ || ಕಾಣದೆ ||೨೮೫||

ಕಂದ

ವಾರಿಜಲೋಚನ ತಾ ಮೈ |
ದೋರದೆ ವಂಚಿಸಿದಕೆ ನಾವೀಗಲೆ ಯಮುನಾ |
ತೀರದಿ ಮಳಲಿನ ಗೌರಿಯ |
ನಾರಾಧಿಸಿ ಮನದಿರಮಂ ಪಡೆವುದುಚಿತಂ || ||೨೮೬||

ರಾಗ ಸವಾಯ್ ಏಕತಾಳ

ಬಂದರು ಯಮುನಾ ತೀರದೊಳೆಲ್ಲರು | ಮಿಂದು ಮಡಿಯ ವಸನವನುಟ್ಟು |
ಚಂದದಿ ಮಳಲಿನ ಗೌರಿಯ ಮಾಡುತ | ಮಂದಗಮನೆಯರು ಪೊಡಮಟ್ಟು ||೨೮೭||

ಬರಿಸುತ ಬ್ರಾಹ್ಮಣ ದಂಪತಿಗಳನುಪ | ಚರಿಸಿ ಕನಕ ವಸ್ತ್ರಂಗಳಲಿ |
ಪರಿಪರಿಯಲಿ ಪೂಜಿಸಿ ಪಾದಾಂಬುಜ | ಕೆರಗುತವರೊಳಪ್ಪಣೆ ಬೇಡಿ ||೨೮೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹಲವು ವಿಧದಲಿ ನಲಿದು ಪ್ರಾರ್ಥಿಸಿ | ಕಲಶ ಕನ್ನಡಿ ಧೂಪದಿ |
ಫಲ ಮಹಾ ನೈವೇದ್ಯ ಪುಷ್ಪಾಂ | ಜಲಿ ಸುಶೋಭನ ಘೋಷದಿ | ||೨೮೯||

ಶರಣು ಸಕಲಾಭೀಷ್ಟದಾಯಕಿ | ಶರಣು ತ್ರಿಭುವನ ಪಾಲಕಿ ||
ಶರಣು ಶ್ರೀ ತ್ರೈಲೋಕ್ಯನಾಯಕಿ | ಶರಣು ವರ ನೀಲಾಳಕೀ | ಶರಣು ಶರಣೂ ||೨೯೦||

ಪಂಕಜಾನನೆ ಪರಮ ಪಾವನೆ | ಶಂಕರಾರ್ಧ ಶರೀರಿಣೀ |
ಶಂಖಚಕ್ರ ಗದಾಬ್ಜಪಾಣಿ ಭ | ಯಂಕರೋಂಕಾರಾತ್ಮಕಿ || ಶರಣು ಶರಣು ||೨೯೧||

ವಚನ

ಇಂತೆಂದು ಬೇರೆಬೇರೆ ಪ್ರಾರ್ಥಿಸುತ್ತಾ ಆ ಗೋಕುಲದ ನಾರಿಯರು ದಂಪತಿಗಳಿಗೆ ಬಾಯನ ದಾನವಿತ್ತು ಉಪಚರಿಸಿ ನವರತ್ನದಾರತಿಯನ್ನು ಬೆಳಗಿದರದೆಂತೆನೆ –

ರಾಗ ಢವಳಾರ ಅಷ್ಟತಾಳ

ಶ್ರೀ ಗೌರಿಗೆ ಶುಭ ಶೋಭನವೆ | ನಾಗವೇಣಿ ಪದ್ಮಾಂಬಕಿಗೆ  || ಪ ||

ಭುವನವ ನುಂಗುವೆ ತಾನೆಂದ | ಬವರಕೆ ಮಹಿಷದಾನವ ಬಂದ |
ವಿವರವ ತಿಳಿದು ರಣಾಂಗದೊಳವನ | ಜವನಗರಿಗೆ ಕಳುಹಿದವಳಿಗೆ || ಶ್ರೀ ಗೌರಿಗೆ ||೨೯೨||

ಚಂದಿರವದನೆಗೆ ಚಾರು ಚರಿತ್ರೆಗೆ | ಇಂದ್ರಾದಿ ಸಕಲ ದಿವಿಜನುತೆಗೆ |
ಕಂದರ್ಪ ವೈರಿಯ ರಾಣಿ ಭವಾನಿಗೆ | ಸೌಂದರ್ಯ ರೂಪ ಮಹೇಶ್ವರಿಗೆ || ಶ್ರೀ ಗೌರಿಗೆ ||೨೯೩||

ಧರೆಯೊಳಗಧಿಕ ಕೊಲ್ಲಾಪುರದೊಳಗೆ | ಸ್ಥಿರವಾಗಿ ಭಕ್ತರ ಪೊರೆವಳಿಗೆ |
ಕರಿಮುಖ ಜನನಿಗೆ ಕಲಕೀರವಾಣಿಗೆ | ಕನಕದ ಬೊಂಬೆ ಮುಕಾಂಬಿಕೆಗೆ ||೨೯೪||

ಗಜಮುಖ ಜನನಿಮಹೇಶ್ವರಿಯೆ | ಭುಜಬಲಯುತೆ ಹಿಮಗಿರಿತನಯೆ |
ಭಜಿಸಿದೆವೈ ನಿನ್ನಯ ಪಾದವ ಪಂ | ಕಜನಾಭನ ಕರುಣಿಸು ನಮಗೆ ||೨೯೫||

ರಾಗ ಘಂಟಾರವ ಏಕತಾಳ

ಹೂವ ಕೊಡೆ | ಗೌರಿ | ಹೂವ ಕೊಡೆ | ಸತ್ಯ
ಭಾವೆಯ ರಮಣ ನಮ್ಮ ಆಳುವಾತನಾಗುವಂತೆ | ಹೂವ ||
ಎನ್ನ ಮನದಭೀಷ್ಟಂಗಳನ್ನು ನೀ ಪಾಲಿಸಿದರೆ |
ಹೊನ್ನ ಗೋಪುರಕ್ಕೆ ಕಲಶವನ್ನು ಸಲಿಸುವೆ |
ಚಿನ್ನದ ತೋರಣವ ಕಟ್ಟಿ | ಮುತ್ತಿನ ಚಪ್ಪರವನಿಕ್ಕಿ |
ಹನ್ನೊಂದು ನವಮಿಯ ಉಪವಾಸ | ವನ್ನು ಮಾಳ್ಪೆ ನೀ ಬಲಗೈಯ || ಹೂವ ||೨೯೬||

ಪುಂಡರೀಕ ನೇತ್ರನೆನ್ನ | ಗಂಡನಾಗಿದ್ದರೆ ನಿನ್ನ |
ಮಂಡೆಗೆ ರತ್ನದ ಮುಕುಟ | ಕೊಂಡು ತಂದಿರಿಸುವೆನು |
ದುಂಡುಮಲ್ಲಿಗೆ ಸುವರ್ಣ | ಕೆಂಡ ಸಂಪಿಗೆಯ ಮುಡಿಸಿ |
ಮಂಡಲಾರ್ಧ ದಿವಸ ವ್ರತವ ಕೈ | ಗೊಂಡು ನಾ ಜಾಗರವ ಮಾಳ್ಪೆ || ಹೂವ || ||೨೯೭||

ಕಂದ

ಮಾಧವನಾಗಲಿ ಪತಿಯೆಂ |
ಬಾ ದೇವಿಯ ಬೀಳುಗೊಂಡು ಮುಂದಲ್ಲಿಂದಂ ||
ಪೋದರು ಯಮುನೆಯ ತಡಿಗಂ |
ಕೊದರು ವನ ಕುಂಜದೊಳಗೆ ಫಲಪುಷ್ಪಗಳಂ || ||೨೯೮||

ರಾಗ ಮಾರವಿ ಅಷ್ಟತಾಳ

ಮಿಂದು ಪೋಗುವ ನಾವು ಮನೆಗೆ | ಇಲ್ಲಿ |
ಬಂದು ಹೊತ್ತಾಯಿತು ಈ ಜಲದೊಳಗೆ || ಮಿಂದು   || ಪಲ್ಲವಿ ||

ಉಟ್ಟ ಸೀರೆಗಳ ಬಿಚ್ಚಿರಿಸಿ | ಅಳ | ವಟ್ಟ ಕುಪ್ಪಸದಿ ಚಿನ್ನಗಳ ಕಟ್ಟಿರಿಸಿ |
ಕಟ್ಟಿದ ಮುಡಿಯ ಸಡಿಲಿಸಿ | ನೀರಿ | ಗೊಟ್ಟಾಗಿ ಇಳಿದರೆಲ್ಲರು ಧಡಧಡಿಸಿ || ಮಿಂದು ||೨೯೯||

ಕಂಕಣಗಳು ಘಿಲಿರೆನುತ | ಗಂಧ | ಕುಂಕುಮ ಪರಿಮಳಂಗಳನು ತೊಳೆಯುತ ||
ಸೋಂಕಿದ ಕೆಸರನೊರಸುತ | ಹರಿ | ಣಾಂಕ ವದನೆಯರೊಬ್ಬೊಬ್ಬರೆಳೆಯುತ ||೩೦೦||

ಜಲಕ್ರೀಡೆಯೊಳಗಿದ್ದರೆಲ್ಲ | ತಂತ | ಮ್ಮೊಳಗೊಬ್ಬರೊಬ್ಬರು ಮುಳುಗೇಳುತೆಲ್ಲ ||
ಫುಲ್ಲಶರನರಗಿಣಿಯಂತೆ ಪೋಲ್ವ | ಚೆಲ್ವ | ಲಲನೆಯರೆಲ್ಲ ನೋಡಿದ ಲಕ್ಷ್ಮೀನಲ್ಲ ||೩೦೧||

ಭಾಮಿನಿ

ಬಾಲೆಯರು ತಮತಮಗೆ ಸೊಗಸಿನ |
ಮೇಲೆ ಚೆಲ್ಲುವರುದಕಗಳ ಬಿರು |
ಗಾಳಿಯಂದದೊಳೋಡಿ ಧುಮ್ಮಿಕ್ಕುವರು ಜಲದೊಳಗೆ ||
ಆಳ ಸರಿ ಮರನೇರಿ ಲಂಘಿಸಿ |
ಸೂಳನಿಡುತೊಬ್ಬೊಬ್ಬರಳುಕದೆ |
ಏಳುವರು ಘಟಿಕಾ ಪ್ರಮಾಣದೊಳಾ ಜಲಾಂತರದಿ ||೩೦೨||

ಆಡುತಿರಲಾ ಸಮಯದೊಳಗದ |
ನೋಡುತಿದ್ದನು ಕೃಷ್ಣನಿವರನೆ |
ಕೂಡಲಿದುವೇ ಸಮಯವೆನುತೈತಂದ ನಾ ಕ್ಷಣಕೆ ||
ಗಾಢದಿಂದಾವರಿಸಿ ಸೀರೆಯ |
ಮೋಡಿಯಿಂದಲಿ ತೆಗೆದು ನಲಿನಲಿ |
ದಾಡಿ ಕಡಹದ ಮರವನೇರಿದ ನಿಮಿಷ ಮಾತ್ರದಲಿ ||೩೦೩||

ಕಂದ

ಸೀರೆಯನೊಯ್ದುದ ಕಂಡಾ |
ನಾರಿಯರಾರೆಂದು ತಿಳಿಯದಿರೆ ಲಜ್ಜಿಸುತಂ |
ಭೊರೆಂದೆನುತೆಲ್ಲರು ಬಾ |
ಯಾರುತ ಕೂ ಕೂ ಕು ಎಂದು ಕೂಗಿದರಾಗಳ್ ||

ರಾಗ ಭೈರವಿ ಅಷ್ಟತಾಳ

ಕು ಕ್ಕೂ ಕೂ | ಕೂ ಎಂದು ಕೂಗಿಡೆ ಸತಿಯರು | ದಿಕ್ಕೆಲ್ಲ ಕೇಳಿತು ಕು ಕ್ಕೂ ಕೂ |
ಅಕ್ಕೊ ಮತ್ತಿಕ್ಕೊ ಮರನೇರದಿರು ಬೊಮ್ಮ | ರಕ್ಕಸ ನೈದನೆ ಕುಕ್ಕೂಕೂ ||೩೦೪||

ಕೊಲುವನು ದನುಜ ಸಾಯಲು ಬೇಡ ಮರದಿಂದ | ಇಳಿಯಯ್ಯ ಶ್ರೀಕೃಷ್ಣ ಕುಕ್ಕೂಕೂ ||
ಮೆಲುವನು ಭೇತಾಳ | ಬ್ರಹ್ಮರಾಕ್ಷಸನಿಪ್ಪ | ಸ್ಥಳವಯ್ಯ ಇದು ತಿಳಿ ಕುಕ್ಕೂಕೂ ||೩೦೫||

ಸೀರೆಯ ನೊಯ್ದರೆ ಶ್ರೀಕೃಷ್ಣ ನಿನಗಿಂಥ | ಚೋರವಿದ್ಯೆಯದೇಕೊ ಕುಕ್ಕೂಕೂ |
ಸೋರೆಯ ಮೊಸರ್ಬೆಣ್ಣೆ | ಸೂರೆಯ ಮಾಳ್ಪ ವಿಚಾರವಿದಲ್ಲಯ್ಯ | ಕುಕ್ಕೂಕೂ ||೩೦೬||

ಮನೆಮನೆ ಗೈತಂದು ಕೆನೆಮೊಸರನೆ ತಿಂದು | ಜುಣುಗಾಡಿದಂತಲ್ಲ ಕುಕ್ಕೂ ಕೂ ||
ಮನೆಯವರಿದ ಕೇಳಿದರೆ ನಿನ್ನ ಎಳೆದೊದು | ದಣಿಸಿ ದಂಡಿಸುವರು ಕುಕ್ಕೂ ಕೂ ||೩೦೭||

ಅಂಬರಗಳ ನೊಯ್ವುದುಚಿತವೆ ನಿನಗೆ ಪೀ | ತಾಂಬರ ಧಾರಿಯೆ ಕುಕ್ಕೂ ಕೂ ||
ಶಂಬರ ವೈರಿಯ ಜನಕ ಈ ಪರಿಯಲ್ಲಿ | ಡೊಂಬಿ ಏಳುವುದಯ್ಯ ಕುಕ್ಕೂ ಕೂ ||೩೦೮||

ಮತ್ಸ್ಯ ಕೂರ್ಮ ವರಾಹ ನರಸಿಂಹನಾದ ಶ್ರೀ | ಚಿತ್ತಜನಯ್ಯನೆ ಕುಕ್ಕೂ ಕೂ ||
ಮತ್ತೆ ವಾಮನನಾದ ಕ್ಷತ್ರಿಯರನು ಕೊಂದ | ಉತ್ತಮ ರಾಮನೆ ಕುಕ್ಕೂ ಕೂ ||೩೦೯||

ಹೊಡೆದಂಥ ಮಳೆಗೇಳು ದಿನ ಗೋವರ್ಧನವನ್ನು | ಕೊಡೆಪಿಡಿದಾತನೆ ಕುಕ್ಕೂ ಕೂ ||
ಮಡದಿಯ ವ್ರತವನ್ನು ಕೆಡಿಸಿ ವಾಜಿಯನೇರಿ | ನಡೆದ ನಾರಾಯಣ ಕುಕ್ಕೂ ಕೂ ||೩೧೦||

ವಸನಂಗಳನು ಕದ್ದ ವಸುದೇವ ನಣುಗನೆ | ವಶವಾದೆವೈ ನಿನ್ನ ಕುಕ್ಕೂ ಕೂ ||
ವಸುಧೆಯೊಳಗೆ ಕಣ್ವಪುರದ ಗೋಪಾಲನ | ಬಿಸರುಹ ಚರಣಕ್ಕೆ ಕುಕ್ಕೂ ಕೂ ||೩೧೧||

ಕಂದ

ಅಂಬುಜವದನೆಯರಿನಿತತಿ |
ಸಂಭ್ರಮದಿಂ ಕೂಗೆ ಕೇಳ್ದುನಸುನಗುತಾಗಂ |
ಶಂಬರಮರ್ದನಪಿತನಂ |
ದಂಬುಜ ವದನೆಯರ ನೋಡಿ ನಗುತಿಂತೆಂದಂ || ||೩೧೨||

ರಾಗ ಫರಜು ಏಕತಾಳ

ಮರುಳಾದಿರಿ ನೀವು ಮರುಳಾದಿರಿ |
ಮರುಳಾದಿರಿ ನೀವು ಕೆರೆಯೊಳು ನಿಂತುಕೊಂಡು |
ಶಿರವರಿದವರಂತೆ | ಮೊರೆಯಿಟ್ಟು ಕೂಗಲ್ಯಾಕೆ ||೩೧೩||

ಬೊಮ್ಮರಕ್ಕಸ ತಿಂದರೆ | ನಮ್ಮ ವರ್ಗಲ್ಲದೆ |
ನಿಮ್ಮೊಳೇನಿದೆ ನೀವು | ಸುಮ್ಮನೆ ಮರುಗಲ್ಯಾಕೆ ||೩೧೪||

ಸತ್ಯವುಳ್ಳವರು ನೀವು ನಿ | ಮಿತ್ತವನ್ನು ಕೇಳಿಕೊಳ್ಳಿ |
ಮತ್ಯಾವುದಕ್ಕು ಮನೆಗೆ ಚಿತ್ತೈಸಿರೆಲ್ಲ ಹೀಗೆ ||೩೧೫||

ಕಾಣಲಿಲ್ಲವೆಂದು ಹೀಗೆ | ಆಣೆ ಕೊಡುವೆ ನಿಮಗೆ ಬಂದು |
ಜಾಣೆಯರ್ನೀವೆ ಕಳವ ಕಾಣಿಸಿ ಕೊಡಿರಿ ||೩೧೬||

ಧರೆಯೊಳು ಕಣ್ವಪುರುದ | ಕರುಣಿ ಶ್ರೀಕೃಷ್ಣರಾಯ ಎನ್ನ |
ಬರಿದೆ ದೂರಿಕೊಳ್ಳಲ್ಯಾಕೆ | ಮರುಳು ಹೆಂಗಳಿರಜೋಕೆ ||೩೧೭||

ರಾಗ ಶಂಕರಾಭರಣ ಏಕತಾಳ

ಅರಿಯದೆ ಮೋಸಹೋದೆವು | ಮರಿಯಾದೆ ಕೆಡಿಸದಿರು |
ಅರವಿಂದ ನೇತ್ರ ಬೇಡುವೆವು | ಸೆರಗೊಡ್ಡಿ ನಿನ್ನ ನಾವು ||
ಬರಿದೆ ಬೇಡಿಕೊಂಬುದೇನು | ಅರಿಯೆ ನಿಮ್ಮ ವಸ್ತ್ರಗಳನು |
ತರವಲ್ಲ ನಿಮ್ಮ ಕಣ್ಣಾಣೆ | ತರುಣಿಯರಿರ ||೩೧೮||

ಕಾಣಿಸಿಕೊಂಡಂಥದಕ್ಕು | ಆಣೆ ಭಾಷೆ ಕೊಡುವ ಠಕ್ಕು |
ಜಾಣತನ ಬಿಟ್ಟು ಕೊಡಿಸು | ನೀನು ವಸ್ತ್ರವ ||
ಏನನೆಂಬೆನಿಂಥ ನುಡಿಯ | ಮಾನಿನಿಯರೆಂದು ಮೇಲೆ |
ಜಾಣೆಯರ್ನೀವೆನ್ನ ಕಳವ | ಕಾಣಿಸಿಕೊಡಿರೆ ||೩೧೯||

ದಾಸಿಯರಾದೆವಯ್ಯ | ವಸನವ ನೀಡು ದಮ್ಮಯ್ಯ |
ಲೇಸಲ್ಲ ಬಳಲಿಸುವದಿಂತು | ಈ ಸಾರಿ ಕೃಷ್ಣ ||
ದಾಸಿಯರಾಗಿರುವುದತಿ | ಹೇಸಿಕೆಯು ಮನೆಗಳಲ್ಲಿ |
ಸಾಸಿರ ಸೀರೆಗಳಿಲ್ಲವೆ | ಏ ಸುದತಿಯರಿರ ||೩೨೦||

ಅಂಬುಧಿಯೊಳಾಡುವ ದಿ | ಗಂಬರೆಯರಾವು ಮನೆಗೆ |
ಬೆಂಬಿಡದೈದುವದೆಂತು | ಅಂಬುಜವದನ ||
ಕುಂಭಿನಿಯೊಳಗಾಶ್ಚರ್ಯ | ವೆಂಬುದ ಕೇಳ್ದೆವೀ ಪರಿಯ |
ರಂಬೆಯನೀರ್ವು ಬತ್ತಲೆ ಮೀವ | ಸಂಭ್ರಮವೇನು ||೩೨೧||

ಸೀರೆಗಳ ಕೊಡದಿದ್ದರೆ | ದೂರುವೆವು ಗೋಪಿಯೊಡನೆ |
ಸಾರವಲ್ಲವೆಲವೊ ಕೇಳೈ | ನೀರಜನಯನ ||
ಊರ ತಲವಾರರೊಳು | ದೂರ ಪೇಳಲವರು ಎನ್ನ ಸದ್ವಿ |
ಚಾರವ ಮಾಳ್ಪರು ತೆರಳಿ | ನೀರೆಯರೆಲ್ಲ ||೩೨೨||

ಪಾಳು ಮಾಡಬೇಡವಯ್ಯ | ಪೇಳ್ವುದ ಕೇಳ್ವೆವು ದಮ್ಮಯ್ಯ |
ಕಾಲಿಗೆ ಬೀಳ್ವೆವು ಈಗ | ಪಾಲಿಸೊ ಬೇಗ ||
ಕಾಲಿಗೆ ಬೀಳುವುದೇಕೆ | ಬಾಲೆಯರೆ ನೀರಿಂದ ನೀವು |
ಮೇಲೆ ಬನ್ನಿ ಕೊಡುವೆ ನಿಮ್ಮ | ಸೀರೆಗಳನೆಲ್ಲ ||೩೨೩||

ಎಂದ ಮಾತ ಕೇಳಿ ಮದನ | ಮಂದಿರವ ಮರೆಗೊಳ್ಳುತ್ತ |
ಬಂದರಾಗ ದಡವಹತ್ತಿ | ಮಂದಗಮನೆಯರು ||
ಇಂದಿರೆಯರಮಣ ಕೇಳು | ಇನ್ನಾದರು ದಯೆಯ ಮಾಡು |
ಬಂದೆವಲ್ಲ ದಡವ ಹತ್ತಿ | ಕಂದರ್ಪಜನಕ ||೩೨೪||

ಬತ್ತಲೆ ಕೊಳವಿಳಿದ ಪ್ರಾಯ | ಶ್ಚಿತ್ತವಾಗಿ ನೀವು ಸುರರ್ಗೆ |
ಭಕ್ತಿಯಿಂದ ನಮಿಸಿಕೊಡುವೆ | ಸುತ್ತು ವಸ್ತ್ರವ ||
ಮಡದಿಯರು ತಮ್ಮ ತಮ್ಮ | ಜಡೆಯಬಿಚ್ಚಿ ಪಸರಿಸುತ್ತ |
ಒಡನೆ ಮುಗಿದರೊಂದೆ ಕೈಯ | ಬಿಡದೆ ನಾಚುತ್ತ ||೩೨೫||

ಒಂದು ಕೈಯ ಮುಗಿವರೆ ದೇ | ವೇಂದ್ರ ಮುಖ್ಯ ದೇವರ್ಕಳಿಗೆ |
ಚಂದವಲ್ಲ ಎರಡು ಕೈಗ | ಳಿಂದ ಮುಗಿಯಿರೆ ||
ಮಾರನ ಮಂದಿರಕೆ ತೊಡೆಯ | ಸೇರಿಸುತ್ತ ಮುಚ್ಚಿಕೊಂಡು |
ಬೇರೆ ಬೇರೆ ಎರಡು ಕೈಯ | ತೋರಿ ಮುಗಿದರು ||೩೩೬||

ಧಾರುಣಿಯೊಳು ಕಣ್ವಪುರದ | ಶ್ರೀರಂಗ ಗೋಪಾಲನೆಂದ |
ತೋರಿಸಿ ಸೀರೆಯ ಗುರುತ | ನಾರಿಯರೆ ನಿಮ್ಮ ||೩೨೭||

ರಾಗ ನವರೋಜು ಏಕತಾಳ

ಅಂಗಜ ಜನಕ ಕೇಳಾನುಟ್ಟ ಸೀರೆ ಕು | ರಂಗಲೋಚನದ ಬಣ್ಣ ||
ಹೋಂಗೇದಗೆಸಳಿನ | ತೆರ ಕುಪ್ಪಸವ ದೇವೋ | ತ್ತುಂಗ ನೀ ದಯಮಾಡು ||೩೨೮||

ಇಂದ್ರಾದಿಸುರ ಸೇವ್ಯ | ನಭರಾಜ ವರದ ಶ್ರೀ | ಚಂದ್ರಶೇಖರನ ಪ್ರಿಯ |
ಚಂದ್ರಕಾವಿಯ ಸೀರೆ | ಚಂದದ ರವಕೆ ಗೋ | ವಿಂದ ನೀ ದಯ ಮಾಡು ||೩೨೯||

ಪಗಲರಸನ ಕೋಟಿ | ತೇಜ ಸರ್ವೇಶ ನೀ | ಜಗದಂತರಾತ್ಮಕನೆ |
ನಗಧರ ನಾರಾಯಣದೇವ ನಾನುಟ್ಟ | ಪಗಡೆ ಬಣ್ಣದು ಪಾಲಿಸೊ ||೩೩೦||

ಶ್ರೀಲೋಲ | ಪರಮ ಕೃಪಾಳು ದಾನವ ಶಿಶು | ಪಾಲ ಮರ್ದನನೆ ಬೇಗ |
ಶಾಲೆಯದಕೊ ಬಲಗಡೆಯೊಳಿಹುದು ಗೋ | ಪಾಲ ನೀ ದಯವ ಮಾಡು ||೩೩೧||

ರಾಗ ಭೈರವಿ ಏಕತಾಳ

ಪನ್ನಗಾರಿ ಧ್ವಜನೆ ಕೇಳೆನ್ನ ವಸ್ತ್ರದಂದವನ್ನು |
ಸ್ವರ್ಣದ ರೇಖೆ ಸುತ್ತಲು | ಮೆರೆವುದು | ಮಿಂಚು | ತಿರುವುದು ||೩೩೨||

ಹಳ್ಳಿಯವಳಲ್ಲ ನಾನು ಹರುಷದಿಂದ ಉಟ್ಟಂಥಾದ್ದು |
ಬೆಳ್ಳಿಯ ಕಂಬಿಯ ಸೀರೆ | ಲಾಲಿಸೊ | ಬೇಗ | ಪಾಲಿಸೊ ||೩೩೩||

ಅಚ್ಚುತಾನಂದ ಗೋವಿಂದ | ಅರಮನೆಯೊಳಗಿಂದ
ಮೆಚ್ಚಿ ಕೊಟ್ಟಂಥ ಸೀರೆ | ತೋರಯ್ಯ | ಕೈಯೊಳ್ | ತಾರಯ್ಯ ||೩೩೪||

ಬಾಲೆಯರನೆಲ್ಲ ಕರೆದು | ಶಾಲೆಗಳ ಕೊಟ್ಟನರಿದು |
ಲೀಲೆಯಿಂದ ಉಟ್ಟುಕೊಂಡು | ಮೆರೆದರು | ಸುಖ | ವೆರೆದರು ||೩೩೫||

ಭಾಳ ಹೊತ್ತಾಯಿತಿಂದು | ಜಲದೊಳಾಡುತ ನಿಂದು |
ಕೇಳಿದರೆ ಬೈವರೆಮ್ಮ ಹಿರಿಯರು | ಮನೆ | ಕಿರಿಯರು ||೩೩೬||

ಮರದ ಮೇಲಿಂದಿಳಿದು ಕಣ್ವ | ಪುರದ ಗೋಪಾಲಕೃಷ್ಣ |
ನೆರೆದ ಗೊಲ್ಲ ಹೆಂಗಳೆಲ್ಲ | ನೋಡಿದ | ಒಡ | ಗೂಡಿದ ||೩೩೭||

ವಾರ್ಧಕ

ಹರಿಯು ಈ ತೆರದಿ ಯಮುನಾ ನದಿಯ ತೀರದೊಳು |
ತರುಣಿಯರನೊಡಗೂಡಿ ಸಂಗಡವೆ ಗೋಕುಲಕೆ |
ತೆರಳಿ ನಡೆತಂದು ಸುಖದಿಂದಿರ್ದನೆಂಬಲ್ಲಿ ಸಂಧಿ ಸಂಪೂರ್ಣವಾಯ್ತು ||
ಅರಿತು ಪೇಳುವ ಕೇಳ್ವ ಪುಣ್ಯವಂತರ ಸಕಲ |
ದುರಿತಮಂ ಪರಿಹರಿಸಿ ಕರುಣದಿಂ ಕಣ್ವಪುರ |
ವರದ ಶ್ರೀಗೋಪಾಲ ಕೃಷ್ಣ ರಾಧಾರಮಣ ಪಾಲಿಸುವನನುಗಾಲವು || ||೩೩೮||

ಯಕ್ಷಗಾನ ಕೃಷ್ಣ ಚರಿತೆ ಮುಗಿದುದು

***