ರಾಗ ಧನಾಸರಿ ಅಷ್ಟತಾಳ

ಲಾಲಿಸು | ಮಾತ | ಲಾಲಿಸು  || ಪಲ್ಲವಿ ||

ಮೂಲೋಕದೊಡೆಯನ ಮಹಿಮೆಯ ಕಿವಿಗೊಟ್ಟು || ಲಾಲಿಸು || ಅನು ಪಲ್ಲವಿ ||

ಕಾರೆಂಬ ಕತ್ತಲೆ ಕವಿಯಲು ದಶದಿಕ್ಕು | ಭೋರೆಂದು ಮಳೆ ಹೊವುತಿರಲಾಗ |
ಶ್ವೇತ | ದ್ವಾರದೊಳಾಲಿವಿಂಡಿಗೆ ಬೇಗ | ಕಳಚಿ | ದಾರಿಯಾಯಿತು ಶೌರಿ ಬರುವಾಗ |
ಕಾಣುತಿರುವಾಗ | ಕಾವಲವರಾಗ | ನಿದ್ರೆ | ಭಾರಿಸಲೆಚ್ಚರಿಲ್ಲದ ಯೋಗ | ಸೂತ್ರ |
ಧಾರಿಯ ಮಹಿಮೆಯಿಂದಲಿ ಬೇಗ || ಲಾಲಿಸು ||೧೪೨||

ಒಡೆಯ ಕೋಪಿಸಬಾರದೆನುತ ಪನ್ನಗರಾಜ | ನಡುವಿರುಳಿನೊಳೆದ್ದು ಬಂದನು |
ಮಳೆ | ಹೊಡೆಯಲಂಜುವುದನ್ನು ಕಂಡನು | ತನ್ನ | ಪೆಡೆಯನಂಬರಕೆತ್ತಿ ನಿಂದನು |
ಮಾಣಿಕ್ಯಗಳನು | ಪ್ರಕಾಶಗಳನು | ತೋರ | ಲಡಿಯಿಡುತಲೆ ನಡೆತಂದನು | ಭೋ |
ರ್ಗುಡಿಸುವ ಯಮುನೆಯ ಕಂಡನು || ಲಾಲಿಸು ||೧೪೩||

ಬಂದು ತನ್ನಯ್ಯಗೆ ತಾ ಕೈಯೆ ಮುಗಿಯ ಬೇ | ಕೆಂದಾಗ ಮನದಿ ಯೋಚಿಸಿದಳು |
ಭಕ್ತಿ | ಯಿಂದಲಾಕ್ಷಣವೆದ್ದು ನಿಂದಳು | ಮುದ | ದಿಂದ ಪೋಗಲು ದಾರಿ ಕೊಟ್ಟಳು |
ದಾಟಿ ಜವದೊಳು | ಬರೆ ಪಥದೊಳು | ದೂರ | ದಿಂದ ಗೋಕುಲದ ವೈಭವಗಳು | ಕಣ್ಗೆ |
ಮುಂದೆ ಕಾಣಿಸಲತಿ ಭಯದೊಳು || ಲಾಲಿಸು ||೧೪೪||

ಪೊತ್ತುಕೊಂಡಿರ್ದ ಗೋವಿಂದನ ವಸುದೇವ | ನತ್ತುಕೊಳುತ ತಗ್ಗಿಗಿರಿಸಿದ |
ಕೈಯೊ | ಳೆತ್ತಿ ಮಾಯಾಂಗಿಯ ಧರಿಸಿದ | ಕಾ | ಣುತ್ತಲಿ ಮನದಿ ಕಾತರಿಸಿದ |
ಪಿಂತಿರುಗಿದಾ | ಸೆರೆ ನಿಲಯದ | ಬಳಿ | ನಿತ್ತೊಳ ಪೊಗಲು ಮುಚ್ಚಿತು ಕದ | ಕಾಲಿ |
ಗೊತ್ತೆ ಸಂಕಲೆ ಪೇಳಲೇನದ || ಲಾಲಿಸು ||೧೪೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳು ಭೂವರ ಬಳಿಕ ಮಾಯಾ | ಬಾಲಕಿಯು ಬಲು ತೆರದಿ ಚೀರಿದ |
ಳಾಲಯದಿ ಹೊರಗಿರ್ದ ಖಳನದ | ನಾಲಿಸುತಲಿ ||೧೪೬||

ಪುಟ್ಟಿದನು ಪಗೆಯೆಂದು ಮನದಲಿ | ಬಿಟ್ಟ ಮಂಡೆಯೊಳೊದರಿ ಬಲು ಬುಸು |
ಗುಟ್ಟುತೇಳುತ ಬೀಳುತಲೆ ಕಂ | ಗೆಟ್ಟು ಭರದಿ ||೧೪೭||

ತಡವುತೆಡಹುತ ಬಂದು ಬಾಗಿಲ | ನೊಡೆದು ಹುಂಕರಿಸುತ್ತ ಶಿಶುವನು |
ಕೊಡು ಕೊಡೆನುತಾರ್ಭಟಿಸಿನಿಂದನು | ಘುಡು ಘುಡಿಸುತ ||೧೪೮||

ಕಂಡು ದೇವಕಿ ಮನದೊಳಗೆ ಭಯ | ಗೊಂಡಳುತ ಬಾಲಕಿಯನಪ್ಪುತ |
ದಂಡದಂತೆರಗುತ್ತ ಪೇಳಿದ | ಳಂಡಲೆವುತ ||೧೪೯||

ರಾಗ ನೀಲಾಂಬರಿ ತ್ರಿವುಡೆತಾಳ

ಅಣ್ಣಯ್ಯ ಕೊಲ್ಲಬೇಡ | ಕಡೆಯೊಳೊಂದು | ಹೆಣ್ಣು ಪುಟ್ಟಿಹುದು ನೋಡ ||
ಪುಣ್ಯವಂತನೆ ನಿನ್ನ ಸೊಸೆಯೆಂದೆನಿಸುತೆನ್ನ | ಕಣ್ಣ ಮುಂದಿರಲೋರ್ವಳು | ದಯಾಳು ||೧೫೦||

ಅಶರೀರವಾಣಿಯಂದು | ಎನ್ನೆಂಟನೆ | ಬಸುರಿನ ಮಗನು ಬಂದು ||
ಕುಸುರಿದರಿವನೆನುತುಸುರಿ ಜಾರಿದ ಮಾತು | ಪುಸಿಯಾಯಿತಲ್ಲ ನೋಡು || ದಯಮಾಡು ||೧೫೧||

ಪಡೆದ ಬಾಲಕರನೆಲ್ಲ | ಬರಿದೆ ಕೊಂದೆ | ಕಡೆಗೆ ಹೆಣ್ಣುದಿಸಿತಲ್ಲ ||
ಕಡುಪಾಪಿ ತಾನೈಸೆ ನುಡಿದಿನ್ನು ಫಲವೇನು | ಹುಡುಗಿಯನುಳುಹಿಸಯ್ಯ || ದಮ್ಮಯ್ಯ ||೧೫೨||

ವಾರ್ಧಕ

ಹಲವು ಪರಿಯಲಿ ಬೇಡಿಕೊಳೆ ಕೇಳದಾ ಶಿಶುವ |
ಸೆಳೆದು ಕಾಲೆರಡ ಪಿಡಿದಪ್ಪಳಿಪೆನೆನಲೆದೆಯ |
ತುಳಿದು ಚಿಗಿದಂಬರದೊಳಷ್ಟಭುಜೆಯಾಗಿ ತಾ ಖಳನ ಜರೆದಿಂತೆಂದಳು ||
ಎಲೆ ಪಾಪಿ ಕೇಳು ನೀನೆನ್ನ ಕೊಲುವುದಕೆ ಗಂ |
ಟಲೊಳಿಳಿವ ತುತ್ತಲ್ಲ ನಿನ್ನರಿಪು ಧಾತ್ರಿಯಲಿ |
ಬಳೆವುತಿರುವನು ಕೊಲ್ಲದಿರನೆಂದು ಪೇಳಲಿಂತೆಂಬ ನುಡಿ ಕೇಳಿಸಿದುದು || ||೧೫೩||

ರಾಗ ಭೈರವಿ ಝಂಪೆತಾಳ

ಚಂಡಿಕೆಯ ನುಡಿಗೆ ಭ್ರಮೆ | ಗೊಂಡು ಬಳಿಕಾ ದೈತ್ಯ |
ಮಂಡೆಯನು ಬಡಿದಂತೆ | ಮನಕಾಯ್ತು ಚಿಂತೆ ||೧೫೪||

ಋಷಿ ನಾರದನ ಮಾತು | ಪುಸಿಯಾಯ್ತು ವ್ಯರ್ಥ ದಂ |
ಡಿಸಿದೆ ತಂಗಿಯನು ರಿಪು | ವಶವಾಗಲಿಲ್ಲ ||೧೫೫||

ನಾನು ಮನದೊಳು ನೆನೆದು | ದೊಂದಾಯ್ತು ದೈವಗತಿ |
ತಾನೊಂದನೆಣಿಸಿತಿದ | ಕೇನು ಗತಿ ಮುಂದೆ ||೧೫೬||

ಎನ್ನ ಪ್ರಾಣವ ಕಳೆವ | ಚಿಣ್ಣನನು ಹಿಡಿವುದಕೆ |
ಕನ್ನಡಿಯ ಗಂಟಾಯ್ತು | ಕೈ ತಪ್ಪಿ ಹೋಯ್ತು ||೧೫೭||

ಇಳೆಯೊಳಗೆ ಬೆಳೆದ ಮ | ಕ್ಕಳನೆಲ್ಲ ಕೊಲಿರೆನುತ |
ಖಳರಿಗಪ್ಪಣೆಯಿತ್ತ | ಕಂಸ ಕೋಪಿಸುತ ||೧೫೮||

ಕಂದ

ಹಿಂದವಗುಣವಾಯ್ತೆನುತಲೆ |
ಬಂಧನವಂ ಬಿಡಿಸಿ ತೆಗೆಸಿ ಕಾವಲನಾಗಳ್ ||
ಮುಂದಿರಿ ಸುಖದೊಳಗೆನುತಂ |
ಚಂದದಿ ದಂಪತಿಯರನುಪಚರಿಸಿದ ಕಂಸಂ || ||೧೫೯||

ರಾಗ ಕಾಂಭೋಜಿ ಝಂಪೆತಾಳ

ಬಂದು ಮನೆಯೊಳು ಕುಳಿತು ಖಳ ದುಷ್ಟ ಮಂತ್ರಿಗಳೊ |
ಳೆಂದನಿರುಳಾದ ಸಂಗತಿಯ ||
ಮುಂದೇನುಪಾಯ ಕಂಡಿರಿ ನೀವೆನಲು ನುಡಿದ |
ರಂದವರು ಜಳಪಿಸುತ್ತಸಿಯ ||೧೬೦||

ಜೀಯ ಚಿಂತಿಪುದೇಕೆ ಸಿಕ್ಕನಾ ವಿಷ್ಣು ಬಲು |
ಮಾಯಾವಿಯಾಗಲದಕೇನು ||
ನೋಯಿಸದೆ ಕೊಲ್ಲುವ ಉಪಾಯನಮ್ಮೊಳಗುಂಟು |
ಬಾಯ ಬಿಡದಿರು ಬರಿದೆ ನೀನು ||೧೬೧||

ಪೊಡವಿಯೊಳು ಗೋದ್ವಿಜರ ಬಡಿದು ಶಿಶುಗಳ ತರಿದು |
ತಡೆಯದೆಜ್ಞಾದಿ ಕರ್ಮಗಳ ||
ಕೆಡಿಸಿದರೆ ತಾಳಲಾರದೆ ಬರುವನವನೆಂದು |
ನುಡಿದರವರತಿ ಪೌರುಷಗಳ ||೧೬೨||

ವಾರ್ಧಕ

ಅಹುದು ತಪ್ಪಲ್ಲವೀ ನುಡಿಯೆಂದೊಡಂಬಡುತ |
ಲಹಿತನನು ಕೊಲ್ವದೀ ತೆರದಿಂದಲೆಂದವರ |
ವಿಹಿತ ಸಂತೋಷದಿಂ ಬೀಳ್ಕೊಟ್ಟು ಕಂಸನಿರಲತ್ತಲಾ ಗೋಕುಲದಲಿ ||
ಮಹಿಳೆಯರ್ಬರುತಳುವ ಬಾಲನಂ ಕಾಣುತ್ತ |
ಲಹಹ ಸಿರಿವಂತೆ ನಮ್ಮೊಡತಿಯೆಂಬೊಸಗೆಯಂ |
ಬಹಳ ಸಂಭ್ರಮದಿಂದ ನಂದಗುಸುರಲ್ಕೇಳುತತಿ ಸಂತಸಂಬಟ್ಟನು || ||೧೬೩||

ದ್ವಿಪದಿ

ಇಂತೆನೆ ಮಹೋತ್ಸವದಿ ದಾನಗಳನಿತ್ತು |
ಅಂತರಂಗದಿ ನಂದಗೋಪಮುದವೆತ್ತು ||೧೬೪||

ಪುರಜನವ ಪರಿಜನವ ಮನ್ನಿಸುತಲಾಗ |
ಹರುಷದಲಿ ಜೋಯಿಸರ ಕರೆಸಿದನು ಬೇಗ ||೧೬೫||

ತನುಜನುದಿಸಿದ ವೇಳ್ಯವೆಂತೆನಲಿಕವರು |
ಗುಣಿಸಿ ನೋಡುತಲೆಂದರಧಿಕ ಕೋವಿದರು ||೧೬೬||

ನಂದ ಲಾಲಿಸು ನಿನ್ನ ಮಗನು ಲೋಕದಲಿ |
ಇಂದಿರಾಧವನಂತೆ ಮೆರೆವ ಗುಣಗಳಲಿ ||೧೬೭||

ಎನಲು ಕೇಳುತ ಸಕಲವುಡುಗರೆಯನಿತ್ತು |
ವಿನಯದಿಂ ಕಳುಹಿದನು ಘನ ಹರುಷವೆತ್ತು ||೧೬೮||

ಭಾಮಿನಿ

ನಂದಗೋಪನು ತನಯನುದಿಸಿದ |
ನೆಂದು ಸಂತೋಷದಲಿ ಧನಪಶು |
ವೃಂದವಿತ್ತನು ಧರಣಿಸುರರಿಂಗಪರಿಮಿತವಾಗಿ ||
ಬಂದರಾ ಯಾಚಕರು ಮಧುರೆಗೆ |
ಮಂದಮತಿ ಖಳ ಕೇಳಿ ತಾ ಭಯ |
ದಿಂದ ಪೂತನೆಯೆಂಬ ದಾನವಿಯೊಡನೆ ತಾನೆಂದ || ||೧೬೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹರಿಯು ತನ್ನನು ಕೊಲ್ವೆನೆಂದವ | ತರಿಸಿದನು ಭೂತಳದೊಳೆಂದೆನ |
ಗರುಹಿದಳು ಚಂಡಿಕೆಯು ಚಿಗಿದಂ | ಬರದಿ ನಿಂತು ||೧೭೦||

ವಿಷದ ಮೊಲೆಯನು ಕೊಟ್ಟು ಲೋಕದ | ಶಿಶುಗಳನು ಸಂಹರಿಸಿ ಪೋಗೆಂ |
ದಸುರ ನೇಮಿಸಿ ಕಳುಹಿಸಿದನು ರಾ | ಕ್ಷಸಿಯ ಭರದಿ ||೧೭೧||

ರಾಗ ಭೈರವಿ ತ್ರಿವುಡೆತಾಳ

ಬಂದಳಾಗ | ಪೂತನೆ | ಬಂದಳಾಗ   || ಪಲ್ಲವಿ ||

ಮಂದಮತಿ ಕಂಸಾಖ್ಯನಾಜ್ಞೆಯೊ |
ಳಂದು ಶಿಶುಗಳ ಕೊಂದು ಕೂಗುತ | ಬಂದಳಾಗ || ಅನುಪಲ್ಲವಿ ||

ಅಸುರಭಾವವ ಮರೆಸಿ ನಡುವಿನೊ | ಳೆಸೆವ ಸೀರೆಯನುಟ್ಟಳು |
ಬಿಸಜಕೋರಕ ಕುಚಕೆ ಕುಪ್ಪಸ | ಹೊಸೆದು ಹೊಂದಿಸಿ ತೊಟ್ಟಳು |
ನೊಸಲಿಗಮರುವ ದಿವ್ಯ ಕಸ್ತುರಿ | ಎಸೆವ ನಾಮವನಿಟ್ಟಳು |
ಕುಸುಮಶರನರಗಿಣಿಯ ಭಾವದೊ | ಳೊಸಗೆ ಮಿಗೆ ರಂಜಿಸುತ ಬೇಗದಿ ||
ಬಂದಳಾಗ || ||೧೭೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ವನಿತೆಯರ ಸಂಗಡದಿ ನಂದನ | ಮನೆಗೆ ಬಂದಳು ದುಷ್ಟಪೂತನೆ |
ಘನಪರಾಕ್ರಮದಿಂದ ಕೃಷ್ಣನ | ಕೊಲುವೆನೆಂದು ||೧೭೩||

ಮರೆತು ಮಲಗಿಹ ಹರಿಯ ರಾಕ್ಷಸಿ | ಎರಡು ಕೈಯಲಿ ನೆಗಹಿ ಗರಳವ |
ಸುರಿವ ಮೊಲೆಯನು ಬಾಯಿಗಿಟ್ಟಳು | ಮರುಳುತನದಿ ||೧೭೪||

ಲೋಕ ಶಿಶುಗಳ ಕೊಂದ ಮೊಲೆಯನು | ತಾ ಕರಾಗ್ರದಿ ಪಿಡಿದು ಬಾಯ್ಗಿಡ |
ಲೌಕಿ ಪಲ್ಲಿನೊಳೆಳೆವುತುಂಡನು | ಲೋಕನಾಥ ||೧೭೫||

ರಾಗ ಕಾಂಭೋಜಿ ಝಂಪೆತಾಳ

ಸೋಕಿದರೆ ಮೈಯೊಡೆವ ವಿಷವಕಟ ಬಾಯಿಂದ | ಲಾಕಳಿಸುತುಗುಳುತೆಳೆದೆಳೆದು ||
ಆ ಕುಟಿಲೆಯಂಗರಕುತವ ಹೀರಿ ಬಿಡಲು ಪರಿ | ದೋಕುಳಿಯ ತೆರದಿ
ತೋರಿದುದು || ||೧೭೬||

ರಾಗ ಕಮಾಚು ಏಕತಾಳ

ಬಿಡು ಕಂದ ಬಿಡು ಕಂದ | ಒಂದೇ ಕ್ಷಣ ಮಾತ್ರ | ಬಿಡು ಕಂದ ಬಿಡು ಕಂದ  || ಪಲ್ಲವಿ ||
ನಮ್ಮಯ ಕಂದನಿ | ಗಿಮ್ಮಡಿ ನೀನೇ |
ಭಿಮ್ಮೆಣಿಸುವೆ ಸೈ | ದಮ್ಮಯ್ಯ ಕೊಲದಿರು || ಬಿಡು ಕಂದ ||೧೭೭||

ತೊತ್ತಾಗುವೆ ಕಣ್ | ಗತ್ತಲೆ ಬರುತಿದೆ |
ವೃತ್ತ ಕುಚಂಗಳು | ಬತ್ತಿದವೆನ್ನಯ || ಬಿಡು ಕಂದ ||೧೭೮||

ಒರಗಿಸದಿರು ಕರಿ | ವರದ ವೆಂಕಟಗಿರಿ |
ಯರಸನೆ ನಿನಗಾಂ | ಕರಗಳ ಮುಗಿವೆನು || ಬಿಡು ಕಂದ ||೧೭೯||

ರಾಗ ಕಾಂಭೋಜಿ ಝಂಪೆತಾಳ

ಛೀ ಕುವರ ಬಿಡು ಸಾಕೆನುತ್ತೆರಡು ಕೈಯಿಂದ | ನೂಕಿದರೆ ಬಿಡದಡರುತುಣಲು ||
ನಾ ಕೆಟ್ಟೆನೆಂದೆನುತ ಬಾಯಾರಿ ಬಸವಳಿದು | ಭೀಕರಾಕೃತಿಯ ತೋರಿದಳು ||೧೮೦||

ಮಗುವಲ್ಲವಿದು ಮಾರಿ ಎನುತ ನಿಷ್ಠುರದಬ್ಬ | ರಗಳಿಂದ ಬಾಯ್ ಬಿಡುತ ಕೂಗಿ ||
ಮಿಗೆ ಬಿದ್ದಳಸುರೆ ತಾನೈದು ಯೋಜನದುದ್ದ | ದಗಲದಲಿ ನಗರಕಿದಿರಾಗಿ ||೧೮೧||

ಒಡಲು ಬೀಳ್ವಾಗ ಪುರಸೌಧ ಗೋಪುರವೆಲ್ಲ | ಪುಡಿಯಾಯ್ತನೇಕ ಪಟ್ಟಣದಿ ||
ಬುಡತುದಿಯ ನೋಡಿದರೆ ನೀಲಾದ್ರಿಯಂತೆ ಭಯ | ಪಡಿಸಿದಳು ನಂದ ಗೋಕುಲದಿ ||೧೮೨||

ಮಡದಿಯರು ಬಂದಾ ಯಶೋದೆಗುಸುರಲು ಕೇಳಿ | ನಡೆತಂದು ರಾಕ್ಷಸಿಯ ಮೇಲೆ ||
ಅಡರಿದಣುಗನ ತನ್ನ ಮನೆಗೊದಳಾಗ ನಡ | ನಡುಗಿ ಭೀತಿಯೊಳಾ ಸುಶೀಲೆ ||೧೮೩||

ಕಂದ

ಭರದಿಂ ಮನೆಗೊಯ್ದಣುಗನ |
ಕರಸಲ್ಕಂದೊಡನೆ ವಿಷದ ಗಾರುಡಿಗರನುಂ ||
ಉರಗಾಧಿಪಶಯನಗೆ ಚ |
ಚ್ಚರದೊಳ್ ಮಂತ್ರಿಸುತ ಸೊಪ್ಪ ನಿಕ್ಕಿದರಾಗಳ್ || ||೧೮೪||

ರಾಗ ಪಂತುವರಾಳಿ ಅಷ್ಟತಾಳ

ಸೊಪ್ಪನಿಕ್ಕಿದರು ಗಾರುಡಿಗರು | ಶೇಷ |
ತಲ್ಪಗೆ ವಿಷ ತಲೆಗೇರಿತೆಂದೆನುತ || ಸೊಪ್ಪ  || ಪಲ್ಲ ||

ವಿಷವ ಭುಂಜಿಸುವನ ಮೇಲೇರಿ ಬಪ್ಪಗೆ |
ವಿಷಕಂಧರನ ಮಿತ್ರ ಮಾಧವಗೆ ||
ವಿಷವ ತೊಡೆದು ಮೊಲೆಯುಣ್ಣನೆನುತಲನಿ |
ಮಿಷರು ವಂದಿಸುವಂತ ಪಾದ ಸರೋಜಗೆ || ಸೊಪ್ಪ ||೧೮೫||

ಕಣ್ಣು ಕೈ ಕಾಲಾಡಿತಿನ್ನು ಯಶೋದೆಯ |
ಪುಣ್ಯದಿಂದುಳಿಯಿತು ಶಿಶುವೆನುತ ||
ಕಣ್ವಪುರದಿ ನಿಂತ ಶ್ರೀಕೃಷ್ಣ ಕರುಣಾಳು |
ಚೆನ್ನಾಗಿ ಸುಖದಿಂದ ಬಾಳಿರೆಂದೆನುತಲಿ || ಸೊಪ್ಪ ||೧೮೬||

ವಾರ್ಧಕ

ಘೋರ ಪೂತನಿಯ ಕೊಂದಾ ಮೇಲೆ ಶಕಟನ ಶ |
ರೀರ ವಡಗಿಸುತ ಯಮಳಾರ್ಜುನರ ಭಂಗಿಸುತ |
ವೀರ ತೃಣವರ್ತಧೇನುಕ ವತ್ಸವವಿದರಂ ಸೇರಿಸಿದ ಯಮನ ಪುರಕೆ ||
ಶ್ರೀರಮಣ ಕೃಷ್ಣ ಬಲರಾಮರೆಂದಿಬ್ಬರಿಗೆ |
ಚಾರುನಾಮವನಿರಿಸಿ ನಂದಗೋಪನಸತ್ಕು |
ಮಾರರನು ತೊಟ್ಟಿಲೊಳ ಗಿಟ್ಟು ಪಾಡಿದರಾಗ ನಾರಿಯರು ಸಂಭ್ರಮದೊಳು || ||೧೮೭||

ರಾಗ ಮಧ್ಯಮಾವತಿ ಅಷ್ಟತಾಳ

ಗೋಕುಲದೊಳಗುಳ್ಳ ಗೋಪನಾರಿಯರ |
ರಾಕೇಂದು ನಿಭಮುಖ ಕರೆದು ಮನ್ನಿಸುತ ||
ಆ ಕೀರವಾಣಿಯರೊಡನೆ ಯಶೋದೆ |
ಶ್ರೀಕೃಷ್ಣರೆನ್ನಿರೆ ನೀರೆಯರೆನುತ || ಜೋಜೋ ||೧೮೮||

ಉನ್ನತ ನವರತ್ನ ಮಂಟಪದೊಳಗೆ |
ಸನ್ನುತಾಂಗಿಯರತಿ ಸಂತಸದೊಳಗೆ ||
ಚಿನ್ನದ ಮಿಣಿಗಳ ಕಟ್ಟಿಯಶೋದೆ |
ರನ್ನದ ತೊಟ್ಟಿಲೊಳ್ ಶಿಶುವ ತಂದಿರಿಸಿ | ಜೋ ಜೋ ||೧೮೯||

ಜೋಜೋ ಜೋ ದೇವ ಸಚ್ಚಿದಾನಂದ |
ಜೋಜೋ ದೇವಾದಿ ದೇವ ಮುಕುಂದ ||
ಜೋಜೋಜೋ ಗೋಪಗೋಪಿಯ ಕಂದ |
ಜೋಜೋಜೋ ಗೋಪ ಕೃಷ್ಣ ಗೋವಿಂದ || ಜೋಜೋ ||೧೯೦||

ಭಾಮಿನಿ

ಇಂತು ಗೋವಿಂದನನು ತೂಗಿದ |
ಕಾಂತೆಯರ ಮನ್ನಿಸಿ ಯಶೋದೆ ಮ |
ಹಾಂತ ವಿಭವದೊಳಣುಗರನು ಸಲಹುತ್ತಲಿರುತಿರಲು ||
ಚಿಂತಿತಾರ್ಥಪ್ರದನು ತಾನೆಂ |
ಬಂತೆ ಗೋಕುಲ ವಾಸಿಗಳಿಗ |
ತ್ಯಂತ ಮಹಿಮೆಯ ತೋರುತಿರ್ದನು ಬಾಲಲೀಲೆಯಲಿ ||೧೯೧||

ರಾಗ ಭೈರವಿ ಝಂಪೆತಾಳ

ಬಾಲರುಡಿಗೆಗಳುಟ್ಟು | ಬಂಗಾರಗಳ ತೊಟ್ಟು |
ಕಾಲೊಳಾಡುತ ಬರುವ ಕಾಣಲತಿ ಚೆಲುವ ||೧೯೨||

ನಡೆವುದನು ಕಲಿಸುವರು | ನಂದನರ ಕೈ ಪಿಡಿದು |
ನುಡಿಯುವರೆ ಕಲಿಸುವರು ನಟನಗಾರರಿಗೆ ||೧೯೩||

ಅಂಬೆಗಾಲಿಕ್ಕುತಂಗಳದೊಳಗೆ ಕುಣಿದಾಡಿ |
ಬೆಂಬಿಡದೆ ನಡೆಯುವರು ಬೀಳುತಡಿಗಡಿಗೆ ||೧೯೪||

ಬಾಲಲೀಲೆ

ವಾರ್ಧಕ

ಮೆಲ್ಲ ಮೆಲ್ಲಡಿಯಿಡುತ ಪಶುಪಾಲಕರ ಸ್ನೇಹ |
ದಲ್ಲಿ ಗೋವ್ಗಳ ಮೇಯಿಸುತ್ತ ಬಹರನವರತ |
ಎಲ್ಲಿ ಮುಳ್ಬೇಲಿ ಹಾವ್ಚೇಳುಗಳ ನಿಕರವಿದ್ದಲ್ಲಿಗೊದಗುವರು ಬಿಡದೆ ||
ಬಲ್ಲತನದಿಂ ಗೋಪಿಯರ್ಮೊಸರ ಗಡಿಗೆಗಳ |
ಉಲ್ಲಾಸದಿಂ ಪೊತ್ತುಕೊಂಡು ಪುರಬೀದಿಯೊಳ
ಗಲ್ಲಲ್ಲಿ ಮಾರುತೈತಂದರೊಂದು ದಿನ ಪುರದಂಗಡಿಯ ಬಾಗಿಲೊಳಗೆ || ||೧೯೫||

ರಾಗ ಪಂತುವರಾಳಿ ಏಕತಾಳ

ಮೊಸರ ತೆಕ್ಕೊಳ್ಳಿರವ್ವಾ | ಮಾನಿನಿಯರು | ಮೊಸರ ತೆಕ್ಕೊಳ್ಳಿರವ್ವ |..
ಪಶುಗಳ ಕರೆದು ಹಾಲಿಗೆ ಹೆಪ್ಪುಕೊಟ್ಟ ಅಚ್ಚ-ಕೆನೆ ||
ಮೊಸರ ತೆಕ್ಕೊಳ್ಳಿರವ್ವ ||೧೯೬||

ನಂದನ ಮನೆಯ ಬಾಗಿ | ಲಿಂದೋಡುತ ಸಣ್ಣ
ಕಂದನು ಬರುವ ಮಂದಗಮನೆಯರ ಆ |
ನಂದವ ಕಂಡು ಸುರಿದ ನಿವನ್ಯಾವ | ನೆಂದು ಭ್ರಮಿಸುತಿರೆ |
ಬಂದು ಸುಂಕಗಾರನು ತಾ | ನೆಂದು ತಡೆದು ನಿಲ್ಲಿಸಿ ಪೇಳ್ದ ||೧೯೭||

ರಾಗ ಕಲ್ಯಾಣಿ ಅಷ್ಟತಾಳ

ಕೊಟ್ಟು ಪೋಗೆನ್ನ ಸುಂಕವ | ಕಣ್ಣ | ಬಿಟ್ಟರಂಜುವನಲ್ಲ | ದಿಟ್ಟ ಹೆಂಗಳಿರ || ಕೊಟ್ಟು  || ಪ ||

ಕುಂಭಿನಿಯೊಳಗೆ ಈ ನಂದಗೋಕುಲದಲ್ಲಿ |
ಒಂಭತ್ತು ಕಡೆಯಲ್ಲಿ ಠಾಣ್ಯವುಂಟು |
ಒಂಭತ್ತು ಕಡೆಯೊಳು | ತೊಂಭತ್ತು ಸರತಿಗೆ |
ಡೊಂಬಿಗೆ ಹೋಗುವ ಜಂಭರವಾಯ್ತೆ || ಕೊಟ್ಟು ||೧೯೮||

ರಾಗ ಪೂರ್ವಿ ಅಷ್ಟತಾಳ

ಸುಂಕದ ನಿಜವೇನು ಪೇಳು | ನಿನ್ನ | ಅಂಕೆಗೆ ನಾವಂಜುವವರಲ್ಲ ಕೇಳು || ಸುಂಕದ || ಪ ||

ಬೆಣ್ಣೆ ಮಣವಿಗೊಂದು ತಾರ | ಮೂರು
ಹೊನ್ನು ಮೊಸರ ಭಾರಕಹುದು ನೀವಿದರ |
ಮನ್ನಿಸದಿರೆ ನಿಮ್ಮೆಲ್ಲವರ | ಮನೆ |
ಯನ್ನೊಳ ಪೊಕ್ಕು ಸೆಳಗೊಂಬೆ ಪಾಲ್ಮೊಸರ || ಸುಂಕದ ||೧೯೯||

ನಂದಗೋಪನ ಸುಕುಮಾರ | ಸಣ್ಣ |
ಕಂದ ನಿನಗಿದ್ಯಾತಕಿನಿತು ವಿಚಾರ |
ಮುಂದೆಮ್ಮ ತಡದರಿದರ | ನಿನ್ನ |
ತಂದೆ ತಾಯ್ ಬಳಿಗೈದು ಪೇಳ್ವೆವು ದೂರ || ಸುಂಕದ ||೨೦೦||

ಕಂದ

ಶಶಿವದನೆಯರಿಂತೈದಿಯೆ |
ಮೊಸರಂ ಮರ್ದಿಸುತಲಿಪ್ಪಾ ವೇಳ್ಯದಿ ಬಂದಾ |
ವಸುದೇವಾತ್ಮಜ ತಾ ಕಾ |
ಣಿಸಿಕೊಳ್ಳದ ತೆರದಿ ಕದ್ದು ಮೆದ್ದೈತಂದಂ || ||೨೦೧||

ರಾಗ ಶಂಕರಾಭರಣ ಅಷ್ಟತಾಳ

ಯಾರೆ ಬಂದವರು | ಇಲ್ಲಿಗೆ ಕಳ್ಳ | ರ‍್ಯಾರೆ ಬಂದವರು |
ಸೋರೆಯ ಮೊಸರು ಬೆಣ್ಣೆಯ ತಿಂಬುತೋಡಿದ | ರ‍್ಯಾರೆ ಬಂದವರು  || ಪ ||

ಸಿಕ್ಕದೊಳಿರಿಸಿದ ಮಡಕೆಗಳೊಳಗೆ ಕಾ | ಡ್ಬೆಕ್ಕಿನ ಹಾಗೆಲ್ಲ ಹುಡುಕಾಡುತ್ತ |
ಅಕ್ಕನವರು ಭಾವಗೆಂದು ಕಟ್ಟಿರಿಸಿದ | ಸಕ್ಕರೆ ಜೇನು ತುಪ್ಪವ ತಿಂಬುತೋಡಿದ || ಯಾರೆ ||೨೦೨||

ಸುತ್ತಲು ಚಾವಡಿಯೊಳು ಮಲಗಿರುವಾಗ | ಹಿತ್ತಿಲ ಬಾಗಿಲಿಂದೊಳಗೆ ಬಂದು |
ಅತ್ತೆಯು ಮಲಗಿ ನಿದ್ರಿಸಲಾಕೆ ಕೊರಳಿಂದ | ಮುತ್ತಿನ ಸರವನ್ನು ಹರಿದು ಬಿಟ್ಟೋಡಿದ || ರ‍್ಯಾರೆ ||೨೦೩||

ಹುಣ್ಣಿಮೆ ದಿವಸ ಮುತ್ತೈದೆ ಬ್ರಾಹ್ಮರಿಗೆಲ್ಲ | ಚೆನ್ನಾಗಿ ಬರಹೇಳಿ ಬಡಿಸಲೆಂದು |
ಅಣ್ಣನವರು ತೆಗೆದಿರಿಸಿದ ರಸಬಾಳೆ | ಹಣ್ಣಿನ ಗೊನೆಯ ವಂಚನೆ ಮಾಡುತ್ತೋಡಿದ || ಯಾರೆ ||೨೦೪||