ಭಾಮಿನಿ

ನಂಬು ನಿಶ್ಚಯವಿನ್ನು ಹಲವನು |
ಹಂಬಲಿಸಬೇಡೆಂದು ಕಂಸಗೆ |
ನಂಬುಗೆಯ ನೀಡಿದರೆ ಬಿಟ್ಟನು ಸತಿಯ ಮುಂದಲೆಯು ||
ತೂಂಬನುಗಿದಂತಿರುವ ಕಂಗಳ |
ಕಂಬನಿಯೊಳಾ ಖಳನ ಬೀಳ್ಕೊ |
ಟ್ಟಂಬುಜಾನನೆ ಸಹಿತಲಾ ವಸುದೇವ ನಡೆತಂದ || ||೬೨||

ರಾಗ ಭೈರವಿ ಝಂಪೆತಾಳ

ಇತ್ತಲರಮನೆಗೆ ನಡೆ | ತಂದು ಕಾಲಾಂತರಕೆ |
ಪುತ್ರನನು ಪಡೆದಳಾ | ಮತ್ತಗಜಗಮನೆ ||೬೩||

ಉತ್ತಮ ಗುಣಾಢ್ಯನಹ | ವಸುದೇವ ನೃಪತಿ ತಂ |
ದಿತ್ತನಿದಕೋ ಸತಿಯು | ಪೆತ್ತಳೆಂದೆನುತ ||೬೪||

ಕಂಡನಾ ಖಳತಿಲಕ | ಗಂಡುಗಲಿತನದಿರುವ |
ಕೊಂಡು ಪೋಗೀ ಶಿಶುವ | ದಂಡಿಸಲದ್ಯಾಕೆ ||೬೫||

ಏಳು ಪರಿಯಂತರವು | ಯೆನಗೆ ಗೋಚರವಿಲ್ಲ |
ಮೇಲೆ ನಿನಗುದಿಸಿದರೆ | ಬಾಲಕರನೆನಗೆ ||೬೬||

ತಂದುಕೊಡು ಸಾಕೆನ್ನ | ಕುಂದ ನೆಣಿಸದೆ ನಿನ್ನ |
ಕಂದರನು ಸಲಹಿಕೋ ತಂಗಿಯಿರುವನಕ ||೬೭||

ಭಾಮಿನಿ

ಎಲೆ ಪರೀಕ್ಷಿತರಾಯ ಕೇಳಾ |
ಲಲನೆ ಕೆಲವು ದಿನಕ್ಕೆ ದಂಡಕೆ |
ಘಳಿಸಿದರ್ಥದ ತೆರದಿ ಪಡೆದಳು ಕುವರರೈವರನು ||
ಸಲಹಿಕೊಂಡಿರಲಿತ್ತ ನಾರದ |
ನಿಳಿದನಂಬರದಿಂದ ಕಂಸನ |
ನಿಲಯ ಕಮಲಪ್ರಭೆಯ ಚಂದ್ರಮನಂತೆ ಥಳಥಳಿಸಿ || ||೬೮||

ಕಂದ

ಸುರಮುನಿಯಂ ದೂರದೊಳು |
ಪರಿಕಿಸುತಿದಿರೆದ್ದು ನಮಿಸುತಾ ಋಷಿಯಡಿಗಂ ||
ಕರವಿಡಿದಾಸನದೊಳ್ಕು |
ಳ್ಳಿರಿಸುತ ತತ್ಪದವನರ್ಚಿಸಿದನಾ ಕಂಸಂ || ||೬೯|

ರಾಗ ಸಾಂಗತ್ಯ ರೂಪಕತಾಳ

ಮರುಳಾದೆಯೇನಯ್ಯ ನೀ ಮಾಡಿದುದು ಸರಿ |
ಬರಲಿಲ್ಲೆನಗೆ ಕಂಸರಾಯ ||
ಒರೆಯಲಿನ್ನ್ಯಾತಕೆ ವಸುದೇವನಣುಗರ |
ಮರಳಿ ನೀ ಕೊಟ್ಟುದನ್ಯಾಯ ||೭೦||

ಒಂದೆರಡೆಂಟೇಳು ಲೆಕ್ಕವ ಗಣಿಸಲು |
ಹಿಂದು ಮುಂದಕೆ ಸಮನಹುದು ||
ಇಂದಿರೆಯರಸ ಯಾವಾಗ ಪುಟ್ಟುವನೋ ಹೀ |
ಗೆಂದು ನಿಶ್ಚಯವಾರಿಗಿಹುದು ||೭೧||

ಮೊಳೆಯಲ್ಲಿ ಕಿಚ್ಚ ನಂದಿಸದಿರ್ದಡದು ಮತ್ತೆ |
ಬೆಳೆಯಲು ಮಣಿಯದೋರುವರ |
ತಲೆಗೇರದನಕ ತಗ್ಗಿಸದಡೆ ವಿಷವದು |
ನೆಲೆಗೊಳ್ಳದಲ್ಲ ಪಂಡಿತರ ||೭೨||

ಪರಿಕಿಸೆ ನೀ ಕಾಲನೇಮಿ ನಿನ್ನಲ್ಲಿ ನಿ |
ರ್ಜರರಿಗೆ ವೈರ ಪೂರ್ವದೊಳು |
ಅರಿತುಕೋ ಮನದಲ್ಲಿ ಯಾದವರಲ್ಲದೆ |
ಪರರಿಲ್ಲ ನಿನಗೆ ಶತ್ರುಗಳು ||೭೩||

ಯಾರೆತ್ತಲಾದರೆ ನಮಗೇನು ಗೋವಿಂದ |
ನಾರಾಯಣಾಚ್ಚುತಯೆಂದು ||
ನಾರದನುತಿಸಿ ಪೋಗಲು ಕಂಸ ಗಜರಿ ಕಾ |
ಳೋರಗಗೆಣೆಯಾದನಂದು ||೭೪||

ರಾಗ ಭೈರವಿ ಏಕತಾಳ

ಸುರಮನಿಯಿಂತೆನುತತ್ತಾ | ತಾ | ತೆರಳಲು ಖಳ ಗಜರುತ್ತ ||
ಪೊರೆಯುಬ್ಬಿದ ಭುಜಗನನು | ಪೋ | ಲ್ದುರೆ ಕೋಪವ ತಾಳಿದನು ||೭೫||

ಕರೆಸಿದ ವಸುದೇವನನು | ತಾ | ತರಿಸಿದ ತತ್ಪುತ್ರರನು ||
ತರುಣಿ ಮರುಗಲಾರ್ವರನು | ಬಡಿ | ದುರುಳಿಸಿದನು ಖಳವರನು ||೭೬||

ಸೆರೆ ಸಂಕೋಲೆಯೊಳವರ | ತಾ | ನಿರಿಸುತುಳಿದ ಯಾದವರ ||
ಪರಿ ಪರಿ ವಿಧದಾಜ್ಞೆಯಲಿ | ಖಳ | ಮರುಗಿಸಿದನು ಖಾತಿಯಲಿ ||೭೭||

ವಾರ್ಧಕ

ಮದಕಂಸನಾಜ್ಞೆಯಲಿ ವಸುದೇವ ದೇವಕಿಯ |
ರೆದೆಯುರಿತದಿಂದ ಸೆರೆಮನೆಯೊಳಳುತಿರಲಿತ್ತ |
ಪದುಮ ಸಂಭವನರಿತು ಪರರಿಗುಪಕಾರಮಂ ಮಾಳ್ಪುದೇ ಸತ್ಯವೆಂದು ||
ಮುದದಿಂದ ಕೃಷ್ಣ ಜನನ ಸ್ಥಿತಿಯ ಗೋಕುಲದ |
ಸುದತಿಯರ ಸೌಭಾಗ್ಯ ದುಷ್ಟಾಪಹಾರಗಳ |
ಮೊದಲಾದ ಗುಣಗಳಂ ಪೇಳ್ವ ಮನದಿಂದೊಲಿದು ಲೋಕೇಶನಣಿಯಾದನು || ||೭೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳಾ ಹರಿಯ ಜನನದ |
ಪರಿಯ ದೇವಕಿಗೊರೆಯಲೋಸುಗ |
ಸರಸಿಜೋದ್ಭವನಂದು ಮಾಯಾ | ಕೊರವಿಯಾದ || ||೭೯||

ರಾಗ ಶಂಕರಾಭರಣ ಅಷ್ಟತಾಳ

ಬಂದಳು ಕೊರವಂಜೀ ನೀರೇ | ಮುದ | ದಿಂದ ತ್ರಿಭುವನ ವಿಚಾರೇ |
ಸುಂದರಮಯದ ಶರೀರೇ | ಮನ | ಕುಂದದೆ ಶರಧಿ ಗಂಭೀರೇ | ರಾಕಾ |
ಚಂದಿರವದನೆ ಆ | ನಂದಪೂರದನೆ ಬಾ |
ಲೇಂದು ಶೇಖರ ಶರ | ಣೆಂದು ಸಜ್ಜನನುತೆ ||೮೦||

ಕಂದ

ಪದುಮಾನನೆಯೀಪರಿಯಿಂ |
ಮುದದಿಂ ತಾ ಕಣಿಯ ಪೇಳ್ದು ತಿರುಗುತಲಿಳೆಯೊಳ್ ||
ಮಧುಹರನಂ ಧ್ಯಾನಿಸುತಲಿ |
ಮಧುರಾಪಟ್ಟಣಕೆ ಬಂದಳತ್ಯುತ್ಸಹದೊಳ್ || ||೮೧||

ರಾಗ ನಾದನಾಮಕ್ರಿಯೆ ಅಷ್ಟತಾಳ

ಮಧುರಾ ಪಟ್ಟಣಕಾಗಿ ಬಂದಳು | ಅಲ್ಲಿ | ಸುಧೆಯ ಬಾಗಿಲ ಮುಂದೆ ನಿಂದಳು ||
ಮುದದಿ ಕಣಿಯ ಕೇಳಿರೆಂದಳು | ಹಿಂದಾ | ದುದ ಮುಂದಹುದ ಪೇಳ್ವೆನೆಂದಳು ||೮೨||

ಈ ವಿಧಗಳ ಸುದ್ದಿ ಪೇಳುತ್ತಾ | ನಾರಿ | ದೇವಕಿ ಹರುಷವ ತಾಳುತ್ತ ||
ಕಾವಲಂಗನೆಯರ್ಗೆ ಪೇಳುತ್ತಾ | ಕರೆಸಿ | ಕೋವಿದೆಯನ್ನು ಕಂಡೇಳುತ್ತ ||೮೩||

ವಚನ

ಅಮ್ಮ ಕೇಳಡಿಯಮ್ಮ ಅಮ್ಮೋಯಮ್ಮ ಸಂದೋಷ ಮಾಯಾಲ್ ಪೋರ್ಂದು, ಕಣಿಯಾನ್ ಚೊಲ್ಪೇನ್ ನಾನ್, ಯೋಚನೈ ವೇಂಡಾಮ್ ನೀನ್ ನಿನಚ್ಚುಕಾರ್ಯ ಮೆಲ್ಲಾಂ ಕೈಗೂಡುಂ ತಿರುನಾರಾಯಣನ್ ಕೃಪೆಯಾನೇ.

ರಾಗ ಪಂತುವರಾಳಿ ಏಕತಾಳ

ಯಾವ ದೇಶದಿಂದ ಬಂದೆ | ದೇವಿ ಕೊರವಂಜಿ ||
ಯಾವಲ್ಲಿಗೆ ಪಯಣವಿಂದು ನಾರಿ | ಕೊರವಂಜಿ ||೮೪||

ಪೊಂಗಳಶ ಕುಚದ ಬಾಲೆ | ಯಾರೆ ಕೊರವಂಜೀ ||
ಶೃಂಗಾರದ ಸದನೆ ಸುಪ್ರ | ವೀಣೆ ಕೊರವಂಜಿ ||೮೫||

ನೋಡಿಯೆನ್ನ ಮನದ ಕೊರತೆ | ನೀಗಿದೆ ಕೊರವಂಜಿ ||
ಪಾಡಿನಿಂದ ಪ್ರಶ್ನೆಯೊಂದ | ಪೇಳೆ ಕೊರವಂಜಿ ||೮೬||

ರಾಗ ಕೇದಾರಗೌಳ ಅಷ್ಟತಾಳ

ನೀ ಕೇಳು ತರುಣಿ ನಾಯಕರನ್ನೆ ನಾ ಸತ್ಯ |
ಲೋಕದೊಳಿರುವೆ ಕಾಣೆ ||
ನಾಕು ರಾಜ್ಯವನೆಲ್ಲ ತಿರುಗುತಿಲ್ಲಿಗೆ ಬಂದೆ |
ನಾ ಕೊರವಂಜಿ ಜಾಣೆ ||೮೭||

ಲೋಕದ ಸಕಲ ಪ್ರಪಂಚವನರಿತು ವಿ |
ವೇಕದಿ ಸತಿಯರಿಗೆ ||
ವಾಕು ತಪ್ಪದೆ ಪೇಳಲುಂಟಮ್ಮ ಕೊಲ್ಲೂರ |
ಮೂಕಾಂಬೆ ದಯವೆನಗೆ ||೮೮||

ಎಂಬ ಮಾತನು ಕೇಳಿ ಹರಿಣಾಕ್ಷಿ ತೋಷದೊ |
ಳಂಬುಜಸುಮ ತರಿಸಿ ||
ಪೊಂಬಣ್ಣ ರಂಗಮಾಲೆಯನಿಕ್ಕುತಕ್ಷತೆ |
ತಾಂಬೂಲಗಳನಿರಿಸಿ ||೮೯||

ಲಿಂಬೆಯ ಹಣ್ಣನು ಕಾಣಿಕೆಗಳನಿತ್ತು |
ತುಂಬಿ ಮುತ್ತಿನ ಸೇಸೆಯಾ |
ಮುಂಬರಿದಿಡಲು ಮಾಡಿದಳಾಗ ಕೊರವಿ ಹೇ |
ರಂಬನ ಪ್ರಾರ್ಥನೆಯ ||೯೦||

ಕಂದ

ಗಣಪತಿಯಂ ಪೂಜಿಸುತಲಿ |
ತ್ರಿಣಯಂಗೆರಗುತ್ತ ಮನದೊಳತಿ ಭಕ್ತಿಯೊಳು ||
ಮಣಿದಾಕಣಿಗೂಡೆಗೆ ಮನ |
ದೆಣೆಕೆಯ ದೇನೆನಲು ಜವದಿ ದೇವಕಿ ನುಡಿದಳ್ || ||೯೧||

ರಾಗ ಸಾಂಗತ್ಯ ರೂಪಕತಾಳ

ನೀ ಕೇಳು ಕೊರವಿ ಎನ್ನಂಗದ ವ್ಯಥೆಯನ್ನು | ಲೋಕೇಶ ಶಿವನೊಬ್ಬ ಬಲ್ಲ |
ಕಾಕಾ ಕದಂಬವಟ್ಟುತ್ತಲಿರುವ ಮರಿ | ಕೋಕಿಲೆಯಂತಾದೆನಲ್ಲ ||೯೨||

ಶ್ವಾನದ ಬಾಲದ ತ್ರಾಣ ತಗ್ಗಿಸಲೆಂದು | ಕೋಣನ ಬಲಿಯಕೊಟ್ಟಂತೆ ||
ಭಾನುವಾಕ್ಯವ ಕೇಳಿ ಕಳೆದನೆನ್ನಣುಗರ | ಪ್ರಾಣವನಣ್ಣನೋರಂತೆ ||೯೩||

ಮೋರೆ ಗಂಟಿಕ್ಕಿ ಮೊದಲು ನಮ್ಮೀರ್ವರ | ಸೇರಿಸಿದನು ಸೆರೆಮನೆಗೆ ||
ಘೋರ ದಾನವರ ಕಾವಲನಿಕ್ಕಿ ನಿತ್ಯ ಕ | ಣ್ಣೀರ ಕೂಳುಣಿಸುವ ನಮಗೆ ||೯೪||

ಶೂರ ನೃಪಾಲನ ಮಗನೆತ್ತ ಸಂಕೋಲೆ | ಸೇರಿಕೊಂಬುದಿದೆತ್ತ ||
ಧಾರೆಯ ನೀರಿಗೆ ಕೈಯೊಡ್ಡಿದಂದಿಂದ | ನೀರ ತಾನುಂಡ ಭಾಗ್ಯಗಳ ||೯೫||

ರಾಗ ಸೌರಾಷ್ಟ್ರ ಅಷ್ಟತಾಳ

ಕೈಯ ತೋರಿಸೆ ನಾರಿಯರ ಮೌಕ್ತಿಕವೆ ನಿನ್ನ | ಕೈಯ ತೋರೆ | ಬಲು |
ವೈಯಾರದೊಳಗೊಂದು ಕುರುಹ ನಾ ಪೇಳುವೆ | ಕೈಯ ತೋರೆ ||೯೬||

ಅಕ್ಕರದಿಂದ ಬಾಂಧವರನುದ್ಧರಿಸುವ | ಕೈಯ ತೋರೆ | ಸಣ್ಣ
ಮಕ್ಕಳ ಬಿಡದೆ ಮುದ್ದಿಸಿ ನೋಡಿ ಸಲಹುವ | ಕೈಯ ತೋರೆ ||೯೭||

ಧಿಕ್ಕರಿಸದೆ ದ್ವಿಜಜನಕೆ ದಾನವನೀವ | ಕೈಯ ತೋರೆ | ಚಲ್ವ |
ಮುಕ್ಕಣ್ಣ ಶಿವ ಮುರಹರನ ಪೂಜೆಯ ಮಾಳ್ಪ | ಕೈಯ ತೋರೆ ||೯೮||

ರಾಗ ಮಧುಮಾಧವಿ ಏಕತಾಳ

ವಸುದೆವನರಸಿ ಕೇಳ್ ಮದ್ವಚನವನು |
ರಸೆಯೊಳು ಕಾಣೆ ನಿನ್ನಂತ ಸ್ತ್ರೀಯರನು ||
ಎಸಳು ರೇಖೆಯ ಸಂತಸದ ಸೌಭಾಗ್ಯವನು |
ಉಸುರಲೇನಿನ್ನು ಪೇಳುವೆ ಮುಂದಹುದನು ||೯೯||

ಪೂರ್ವ ಜನ್ಮದಲಿ ನೀ ಮಾಡಿದ ತಪವ |
ಸರ್ವಲೋಕೇಶನೊಳು ಬೇಡಿದ ವರವ ||
ಸರ್ವಥಾ ಮಗನಾಗಲೆಂದ ಕಾರಣವ |
ಗರ್ವೆ ನಿನ್ನುದರದೊಳೀಗ ಜೀವಿಸುವ ||೧೦೦||

ಮೊದಲೆರಡಂತ್ರ ಪುಟ್ಟಿದನು ಗೋವಿಂದ |
ಇದುವೆ ಮೂರನೆಯ ಪ್ರಾರಂಭದೊಳಾದ ಕಂದ ||
ಬೆದರಬೇಡಿನ್ನು ಕಾರ್ಯಗಳೆಲ್ಲ ಚಂದ |
ಮುದದಿಂದ ನಂಬು ತಪ್ಪದೆ ಮಾತಿದೊಂದ ||೧೦೧||

ಶಿಶುಪಾಲ ದಂತವಕ್ತ್ರರ ಕೊಲ್ವ ಬಗೆಗೆ |
ವಸುಧೆಯೊಳವತರಿಸುವನಮ್ಮ ನಿಮಗೆ ||
ಅಸುರ ಕಂಸನ ಕಳುಹಿಸುತೆಮನೆಡೆಗೆ |
ವಸುಧೆ ಪಟ್ಟವನೀವನುಗ್ರಸೇನನಿಗೆ ||೧೦೨||

ಪಾಂಡುನಂದನರೊಳು ಬೆಳೆಸುತ್ತ ನಂಟೂ |
ಹಿಂಡು ಕೌರವರ ಕೊಲ್ಲಿಸುವ ನಿಘಂಟು ||
ಕಂಡು ಹದಿನಾರು ಸಾವಿರದ ನೂರೆಂಟು |
ಹೆಂಡಿರನೊಲಿಸುತಾಳುವ ಯೋಗವುಂಟು ||೧೦೩||

ಕಂದ

ಕಂದನು ನಿಮಗುದಿಸಿಯೆ ಬಲು |
ಬಂಧನವಂ ಕಿತ್ತು ಬಾಲಲೀಲೆಯ ತೋರ್ದುಂ ||
ಮುಂದತಿ ಭಾಗ್ಯದೊಳಿಹಿರೆನೆ |
ಚಂದಿರಮುಖಿ ಕೇಳ್ದು ಪೇಳ್ದಳಾ ಕೊರವಿಯೊಳು || ||೧೦೪||

ರಾಗ ರೇಗುಪ್ತಿ ತ್ರಿವುಡೆತಾಳ

ಮನಸೊಡಂಬಡದು ಕಾಣೇ | ಮಾತಿನ ಹೋಲ್ವೆ | ಎನಗಾಹುದಿಲ್ಲ ಜಾಣೆ ||
ಘನತರ ಪುಣ್ಯ ಸಾಧನವೆನಿಸುವ ಕೃಷ್ಣ |
ಜನಿಸಿ ಖಂಡಿಸುವ ಬಂಧನವೆಂಬ ಮಾತಿಗೆ || ಮನ ||೧೦೫||

ಹುಟ್ಟಿದರೆಂತಾದರೂ | ರಕ್ಷಿಸುವಂಥ | ಬಟ್ಟೆ ಹ್ಯಾಗಮ್ಮ ತೋರೂ ||
ಕಟ್ಟು ಕಾವಲು ಕಂಸನಾಜ್ಞೆಯೆಂಟನೆಯಲ್ಲಿ |
ಕೃಷ್ಣನುದ್ಭವಿಸಿ ಕೊಲ್ಲುವನೆಂಬ ಮಾತಿಗೆ || ಮನ ||೧೦೬||

ಲೊಟ್ಟೆ ಜೋಯಿಸಗಾರರೂ | ಶಕುನ ವಾಕ್ಯ | ಮುಟ್ಟಿ ಪೇಳ್ವಂತೆಲ್ಲರೂ ||
ಹೊಟ್ಟೆಗೋಸುಗವಾಗಿ ನುಡಿದ ನಿಮಿತ್ತದಿ |
ಪಟ್ಟಿಯಾಗುವದಿಲ್ಲ ದಿಟ್ಟೆ ನಂಬುವದಕ್ಕೆ || ಮನ ||೧೦೭||

ರಾಗ ಶಂಕರಾಭರಣ ತ್ರಿವುಡೆತಾಳ

ಹೊನ್ನಿನಾಸೆಗೆ ಬಂದುದಿಲ್ಲವು | ಹಸ್ತಿಗಮನೇ ನಿನ್ನಯಾ ||
ಪುಣ್ಯವನು ನಿನಗೊರೆಯಲೋಸುಗ | ಬಂದೆನಮ್ಮ ||೧೦೮||

ನಾಡ ಮಾತನು ಪೇಳಿ ಪೋಗಲು | ಬಂದುದಿಲ್ಲಾ ಶಿವದಯಾ ||
ಮಾಡಿದುದ ನಿನಗೊರೆಯ ಲೋಸುಗ | ಬಂದೆನಮ್ಮ ||೧೦೯||

ಕಟ್ಟು ಬಣ್ಣದ ಜಾಲ ಮಾತಿನ | ಕೊರವಿಯಲ್ಲಾ ಲೋಕದ ||
ಸೃಷ್ಟಿಯಧಿಪತಿತನಕೆ ಯೋಗ್ಯದ | ಕೊರವಿಯಮ್ಮ ||೧೧೦||

ರಾಗ ಆನಂದಭೈರವಿ ಏಕತಾಳ

ಎಷ್ಟು ಪೇಳಿದರು ಮನವು | ತುಷ್ಟಿ ಹೊಂದದಮ್ಮ ನಿತ್ಯ |
ಕಷ್ಟ ಬಿಡುವೆನೆಂತು ಬಿಡಲಿ || ಕ್ಲೇಶವಾ | ಮೋಹ | ಪಾಶವಾ ||೧೧೧||

ವಂಶ ವೃದ್ಧಿಯಾಗದಂತೆ | ಕಂಸನೆನ್ನ ಸುತರ ನಿಂತು |
ಹಿಂಸಿಸಿ ಕೊಲ್ಲುವನೆಂಬು || ದರಿವೆನೇ | ನಾ ಬಾ | ಳಿರುವೆನೆ ||೧೧೨||

ಎಂದಿಗೆ ನೀಗುವುದೆನಗೆ | ಬಂದ ಬಾಧಕವಿದಮ್ಮ |
ಇಂದಿರೇಶ ದಯಮಾಡಿ || ಕಾವುದೂ | ಸುಖ | ನೀವೀವುದು ||೧೧೩||

ರಾಗ ಭೈರವಿ ಝಂಪೆತಾಳ

ನಿನ್ನ ಪಾಡೇನಮ್ಮ | ಮುನ್ನ ನಾರಿಯರೊಳಗೆ |
ಬನ್ನ ಬಿಟ್ಟವರುಂಟು | ಬಹಳ ದುಃಖದಲಿ ||೧೧೪||

ಹಿಂದೆ ಜನಕನ ಮಗಳು | ಹೇಗಿದ್ದಳದ ಹೇಳು |
ಮುಂದವಳ ಸುಖವೇನು | ಮನದಿ ತಿಳಿ ನೀನು ||೧೧೫||

ನಳನೆಂಬ ಭೂಪಾಲ | ನರಸಿ ದಮಯಂತಿ ಸುಳಿ |
ಸುಳಿದು ವನಗಳನೆಲ್ಲ | ಸುಖದಿಂದಲಿರಳೆ ||೧೧೬||

ಪೊಡವಿಯೊಳು ಹರಿಶ್ಚಂದ್ರ | ಮಡದಿಯಹ ಚಂದ್ರಮತಿ |
ಪಡೆದ ಮಗ ಲೋಹಿತನ | ಸುಖವ ತಿಳಿನೀನು ||೧೧೭||

ಎಲೆ ದೇವಿ ಕೇಳು ನೀ | ನೆಂದಿಗಾದರು ದೈವ |
ನೆಲೆಯ ಮೀರುವರುಂಟೆ | ನರರೊಳಗೆ ಕಾಂತೆ ||೧೧೮||

ರಾಗ ಕೇದಾರಗೌಳ ಏಕತಾಳ

ಸೊಲ್ಲ ಕೇಳೆ ಸೊಲ್ಲ ಕೇಳೆ | ಸೊಗಸುಗಾರರವ್ವ ||
ಬಲ್ಲಿದ ಸುಜಾಣೆ ಮರಿ | ಹುಲ್ಲೆಗೆಣ್ಣಿನವ್ವ ||೧೧೯||

ಇಳೆಯೊಳವತರಿಸಿ ಖಳರ | ಕೊಲುವನು ನೋಡವ್ವ ||
ಗೆಲುವಿನಿಂದ ನಿಮ್ಮೆಲ್ಲರ | ಸಲಹುವ ಕಾಣವ್ವ ||೧೨೦||

ಸಣ್ಣ ಕೂಸಿಗೊಂದಿಷ್ಟಾದ | ರನ್ನವ ನೀಡವ್ವ ||
ಚನ್ನಕೃಷ್ಣರಾಯನೆಂದು | ಚಲುವಾಗಿರವ್ವ ||೧೨೧||

ವಾರ್ಧಕ

ಪರಮ ಮಂಗಳಕರವ ಪೇಳ್ದ ಕೊರವಂಜಿಗಾ |
ತರುಣಿ ತಾ ಸಕಲವಸ್ತುವನಿತ್ತು ಬೀಳುಕೊಡ |
ಲರವಿಂದ ಭವನೈದಿದಂ ತನ್ನ ನಿಜಲೋಕಕಿತ್ತ ಹರಿ ಶರಣೆನ್ನುತ ||
ಸೆರೆಮನೆಯೊಳಿರಲು ದೇವಕಿಗೇಳನೆಯ ಗರ್ಭ |
ಕರಗಿ ಭುಜಗಾಧಿಪತಿ ರೋಹಿಣಿಗೆ ಜನಿಸಿದಂ |
ಸುರರಿಗಭಯವನಿತ್ತು ಹವಣಮಂಮನದಿ ಗೋಚರಿಸಿದಂ ಜಗದೀಶನು || ||೧೨೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತ ಕಂಸನು ಗರ್ಭವಡಗಿದ | ವರ್ತಮಾನವ ಕೇಳಿ ತನ್ನಯ |
ಚಿತ್ತದಲಿ ಖತಿಯಾಂತು ಚಿಂತೆಗೆ | ತೆತ್ತು ಮನವ ||೧೨೩||

ಹರಿಯು ಬಹು ಕಪಟಿಗನು ಮೈಮರೆ | ದಿರಲು ಬಾರನೆನುತ್ತ ತಾನೇ |
ಸೆರೆಮನೆಯೊಳಿರ್ದಂತೆ ಕಾದಿರ | ಲಿರುಳು ಹಗಲು ||೧೨೪||

ತರುಣಿ ದೇವಕಿ ಜಠರದೊಳು ಸಿರಿ | ಹರಿಯು ನೆಲಸಿದನೇನನೆಂಬೆನು |
ಪರಮ ಪುರುಷನ ಮಹಿಮೆಯನು ಕೇಳ್ | ಧರಣೀಪಾಲ ||೧೨೫||

ದ್ವಿಪದಿ

ದೇವಕಾ ದೇವಿಯುದರದೊಳಗಚ್ಚುತನು |
ಆವಾಸವಾದನೆಂದರಿತು ಕಮಲಜನು ||೧೩೬||

ಶತಮಖಾದ್ಯಮರ ಸಂದೋಹ ಸಹಿತಂದು |
ನುತಿಗೈವುತಿರ್ದರಾಗಂಬರದಿ ನಿಂದು ||೧೨೭||

ಸ್ಫಟಿಕ ಕಲಶದ ದೀಪದಂತೆ ದೇವಕಿಯಾ |
ಜಠರದೊಳಗೊಪ್ಪುತಿರ್ದುದು ಬಿಂಬ ಹರಿಯ ||೧೨೮||

ಖಳ ಕಂಸನನುಜೆಯಂಗಚ್ಛವಿಯ ನೋಡಿ |
ತಿಳಿದನೀತನೆ ವೈರಿಯೆಂದು ಭಯಗೂಡಿ ||೧೨೯||

ಅರೆನಿಮಿಷವೆಡೆಬಿಡದೆ ದುಷ್ಟಬಲ ಸಹಿತ |
ಸೆರೆಮನೆಯಕಾದಿರ್ದ ದಿನವ ಲೆಕ್ಕಿಸುತ ||೧೩೦||

ವಾರ್ಧಕ

ಅರಸ ಕೇಳಿಂತಿರಲು ದೇವಕಿಯ ಬಸುರಿಂಗೆ |
ತೆರಳೆ ನವಮಾಸಮನಿತರೊಳು ಶ್ರಾವಣ ತಿಂಗ |
ಳಿರುಳಪರ ಪಕ್ಷದಷ್ಟಮಿ ದಿನದಿ ರೋಹಿಣಿಗನಂತನುದಿಸಿದ ಸಮಯದಿ ||
ಧರಣಿಗವತರಿಸಿದಂ ಪುರುಷೋತ್ತಮಂ ಸುರರು |
ನೆರೆದಭ್ರದೊಳಗೆ ಜಯವೆಂದು ಸುಮದೃಷ್ಟಿಯಂ |
ಗರೆದರಂಬುಜಭವಾದಿಗಳೆರಗಿನುತಿಸಿದರ್ ಜಗಕೆ ಮಂಗಳವಾದುದು || ||೧೩೧||

ದ್ವಿಪದಿ

ಸಿರಿಮುಡಿಯ ಸುಳಿಗುರುಳ ತರುಣ ತುಲಸಿಗಳ |
ಮಿರುಪ ನಾಸಿಕದ ಮಣಿಮಕುಟ ದೀಪ್ತಿಗಳ ||೧೩೨||

ಕರ್ಣಕುಂಡಲ ಕಪೋಲಗಳ ಚುಬುಕುಗಳ |
ಅರ್ಣವಸುಗಂಭೀರದತಿಶಯದ ಕೊರಳ ||೧೩೩||

ವೈಜಯಂತಿಯ ಮಾಲೆ ಕೌಸ್ತುಭವು ಮೇಲೆ ||
ತೇಜದಿಂದೆಸೆವ ನವರತುನಗಳ ಲೀಲೆ ||೧೩೪||

ಶಶಿನೀಲ ಶುಭಕಾಂತಿ ಭುಜ ಚತುಷ್ಟಯದ |
ನಿಜ ಶಂಖ ಚಕ್ರ ಗದೆ ಪದ್ಮ ಧಾರಣದ ||೧೩೫||

ಮುಂದೆಸೆವ ಬಾಲಕನ ಕಂಡು ವಸುದೇವ |
ವಂದಿಸಿದ ದೇವಕಿಯು ಸಹಿತಲರೆಜಾವ ||೧೩೬||

ರಾಗ ರೇಗುಪ್ತಿ ಏಕತಾಳ

ಕೃಷ್ಣ ಹರೇ ಪಾಹಿಮಾಂ | ಜಯ ಜಯ ಬಾಲ | ಕೃಷ್ಣ ಹರೇ ಪಾಹಿಮಾಂ ||
ಜಿಷ್ಣು ಮುಖ್ಯಸುರೌಘವಂದಿತ ಪರ | ಮೇಷ್ಠಿ ಪೂಜಿತ ಚಲ್ವಪಾದ ವಿನೋದ ||೧೩೭||

ಇಂದಿರಾಸತಿ ರಮಣ | ಸಕಲ ಮುನಿ | ವಂದಿತ ಸಚ್ಚರಣ ||
ಸುಂದರಾಂಗ ಸರ್ವಲೋಕ ನಾಯಕ ದಯಾ | ಸಿಂಧು ಶ್ರೀವನಮಾಲ ಸಜ್ಜನ ಪಾಲ ||೧೩೮||

ರಾಗ ಪಂತುವರಾಳಿ ಏಕತಾಳ

ಕರುಣಿಸು ಕಂಜದಳ ನೇತ್ರ | ಕೋಮಲಗಾತ್ರ |
ಪರಮ ಪಾವನ ಸುಪ್ರಸನ್ನ | ಕೀರ್ತಿಸಂಪನ್ನ  || ಪಲ್ಲವಿ ||
ಎಂತು ಧರಿಸಿದೆ ನಿನ್ನ ನಾನು | ಎನ್ನುದರಾಬ್ಧಿಯೊ |
ಳಿಂತು ಪುಟ್ಟಿದೆಯಯ್ಯ ನೀನು | ನೋಡಿದರಾ |
ದ್ಯಂತವಿಲ್ಲದ ಕಾಮಧೇನು || ಕಾಲ ಕಾಲದೊ |
ಳಂತರಂಗದಲಿ | ಚಿಂತಿಪ ಭಕ್ತರ |
ಸಂತತಿಗೊಲಿವಾ | ನಂತ ಗುಣಾಢ್ಯ || ಕರುಣಿಸು ||೧೩೯||

ಕಂಸ ದೈತ್ಯನು ಕಡುಕೋಪಿ | ಕಂಡರೆ ನಿನ್ನ |
ಹಿಂಸೆಮಾಡದುಳಿಯನು ಪಾಪಿ | ನೋಡಲು ನಮ್ಮ |
ವಂಶದೊಳೆಲ್ಲ ಸುಪ್ರತಾಪಿ || ಹೊತ್ತಿಲ್ಲವು ಕಾಯೋ |
ಹಂಸವಾಹನ ಪಿತ | ನೀಂ ಸರ್ವೋತ್ತಮ |
ಪುಂಸರಿಪೂ | ಭಯ | ಧ್ವಂಸಮಾಡಯ್ಯ || ಕರುಣಿಸು ||೧೪೦||

ವಾರ್ಧಕ

ವಸುದೇವ ದೇವಕಿಯರಿಂತೆಂದು ಕೈಯ ಮುಗಿ |
ದಸುರ ಕಂಸನ ಬಾಧೆಗೆಣೆಯಿಲ್ಲವೆಂದೆನಲು |
ವಸೆದು ಗೋಕುಲದೊಳು ಯಶೋದೆಗಾತ್ಮಜೆಯಾಗಿ ಮಾಯೆಯಿಹಳೀ ರಾತ್ರಿಯೆ ||
ಕೊಸರುಗೊಳದೆನ್ನ ಕೊಂಡಲ್ಲಿರಿಸಿ ತರುತಲಾ |
ಶಿಶುವ ಕಂಸಂಗೆ ಕೊಡಿರೆನಲುಟ್ಟ ಧೋತ್ರವನು |
ಮುಸುಕಿಡಲು ಸತಿಪುರುಷರಿಬ್ಬರಿಗೆ ಕಾಲ ಸಂಕಲೆ ಕಳಚಿತಾ ಕ್ಷಣದೊಳು || ||೧೪೧||