ಶಾರ್ದೂಲವಿಕ್ರೀಡಿತ ವೃತ್ತ
ಶ್ರೀಗೋಪಾಲ ಮುಕುಂದ ಭಕ್ತವರದಂ ಶಾಂತಂ ಯಶೋದಾರ್ಭಕಂ |
ನಾಗಾರಾತಿಸುವಾಹನಂ ಗಿರಿಧರಂ ಕ್ಷೀರಾಬ್ಧಿಜಾತಾಧವಂ ||
ವಾಗೀಶಾದಿ ಸುಪರ್ವಸನ್ನುತ ಮಹಾ ಗೋಪಾಂಗನಾವೇಷ್ಟಿತಂ |
ಯೋಗೀಂದ್ರಾರ್ಚಿತ ಪಾದಪದ್ಮಯುಗಳಂ ವಂದೇ ಸರೋಜಾಂಬಕಂ ||
ರಾಗ ನಾಟಿ ಝಂಪೆತಾಳ
ಜಯ ಗೋಪಿಕಾನಂದ | ಜಯ ಗೋಪಜನವೃಂದ |
ಜಯ ಸಚ್ಚಿದಾನಂದ | ಜಯತು ಗೋವಿಂದ || ಜಯ || ಪಲ್ಲವಿ ||
ನಂದಗೋಪಕುಮಾರ | ನವನೀತ ವರಚೋರ |
ಸಿಂಧುಕನ್ಯಾ ರಮಣ | ಸರಸಿರುಹ ಚರಣ ||
ಇಂದ್ರಾದಿಸುರ ನಮಿತ | ಸ್ಥಾಣುಸಖ ಶುಭಚರಿತ |
ಸುಂದರಾತ್ಮಕ ವರ್ಣ | ಸಕಲಗುಣ ಪೂರ್ಣ || ಜಯ ||೧||
ಕಂಸದೈತ್ಯವಿನಾಶ | ಕಮಲನೇತ್ರ ವಿಲಾಸ |
ಹಂಸವಾಹನ ತಾತ | ಲೋಕ ವಿಖ್ಯಾತ ||
ವಂಶ ಶರನಿಧಿ ಸೋಮ | ಶರಣು ಮುನಿಜನ ಪ್ರೇಮ |
ಹಂಸಡಿಬಿಕರ ಪ್ರಾಣ | ಕಳೆದ ನೆರೆ ಜಾಣ || ಜಯ ||೨||
ಪುಣ್ಯನಾಮ ವಿಧೇಯ | ಪರಮಮಂಗಳ ಕಾಯ |
ಅರ್ಣವ ಸುಗಂಭೀರ | ನತ ಜನೋದ್ಧಾರ ||
ಪೂರ್ಣಚಂದ್ರ ಸುವದನ | ಕ್ಷೀರವಾರಿಧಿ ಶಯನ |
ಕಣ್ವಪುರ ಸ್ಥಿರವಾಸ | ಕೃಷ್ಣಜಗದೀಶ || ಜಯ ||೩||
ವಾರ್ಧಕ
ಗುರುಗಣಪ ಗೌರಿಶಂಕರ ಶಾರದಾಂಬಿಕೆಯ |
ಚರಣಕಮಲಕೆ ನಮಿಸಿ ಸರಸಿಜಾಸನಗೆರಗಿ |
ತರಣಿ ಶಶಿ ಮುಂತಾದ ಸಕಲಸುರ ದೇವರ್ಕಳಿಗೆ ಕರವ ಮುಗಿದು ಬಳಿಕ |
ಪರಮವೈಷ್ಣವ ಶುಕಾಚಾರ್ಯ ಮುನಿವದನಸರ |
ಸಿರುಹದಿಂದೊಗೆದ ಶ್ರೀಕೃಷ್ಣಚರಿತವನು ನಾ |
ವಿರಚಿಸುವೆ ಕನ್ನಡದ ಯಕ್ಷಗಾನದಲಿ ಶಿವಕರುಣಿಸಿದ ಬುದ್ಧಿಯಿಂದ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಶ್ರೀ ಮಹೋನ್ನತ ಭಾಗವತವ | ನ್ನಾ ಮಹಾಯೋಗೀಂದ್ರ ಶುಕನತಿ |
ಪ್ರೇಮದಿಂ ಪೇಳ್ದನು ಪರೀಕ್ಷಿತ | ಭೂಮಿಪತಿಗೆ ||೪||
ಆ ಪುರಾಣ ಕಥಾ ಸಮುದ್ರದಿ | ಗೋಪಿಜನ ಲೀಲಾ ಚರಿತ್ರವ |
ನಾ ಪೊಗಳಿ ವರ್ಣಿಸುವೆನತಿ ಸಂ | ಕ್ಷೇಪದಿಂದ ||೫||
ಜಾಲಮಾತುಗಳಲ್ಲ ಮಾನವ | ರಾಳಿದಂತ ಚರಿತ್ರವಲ್ಲಿದು |
ಪೇಳಿ ಪೊಗಳಲು ಮುಕುತಿ ರಾಜ್ಯವ | ನಾಳಬಹುದು ||೬||
ದ್ವಿಪದಿ
ಆ ಪರೀಕ್ಷಿತ ರಾಯ ಬೆಸಗೊಂಡನೊಲಿದು |
ತಾಪಸೇಂದ್ರನೊಳೊಂದು ದಿವಸ ಕೈಮುಗಿದು ||೭||
ಜಗದಪತಿ ದೇವಕಿಗೆ ಜನಿಸಿ ರಾಕ್ಷಸರ |
ಪಗೆಯಿಂದ ತರಿದು ಸಲಹಿದನೆಂತು ಸುರರ ||೮||
ಬಲರಾಮ ಸಹಿತೊಡನೆ ಬಳೆದು ಗೋಕುಲದಾ |
ಲಲನೆಯರ ಮೋಹಿಸುತಲೆಂತು ಸೋಲಿಸಿದ ||೯||
ಎನಗೆ ಕರುಣಿಪುದೆಂದು ಎರಡಿಲ್ಲದಂದು |
ಮುನಿಯ ಪಾದಕೆ ನಮಿಸಲಾ ದಯಾಸಿಂಧು ||೧೦||
ಕೇಳಿದನು ಭೂಪತಿಯ ಕಡು ದೈನ್ಯ ನುಡಿಯ |
ಪೇಳಿದನು ಭಾಗವತ ಪೌರಾಣ ಕಥೆಯ ||೧೧||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಭೂಪ ಕೇಳೈ ಮೊದಲು ಸಂದ | ದ್ವಾಪರಾಯುಗದೊಳಗೆ ರಾಕ್ಷಸ |
ಭೂಪರಿದ್ದರು ಭೂಮಿಗಧಿಕ ಪ್ರ | ತಾಪದಿಂದ ||೧೨||
ದಾನವರು ದಿನದಿನದೊಳೆಸಗುವ | ಹೀನ ಕರ್ಮವ ತಡೆಯಲಾರದೆ |
ತಾನೆ ಭುವಿ ಯೋಚಿಸಿದಳಂದು ನಿ | ಧಾನದಿಂದ ||೧೩||
ಧರಣಿ ತಾ ಬಡಗೋವು ರೂಪವ | ಧರಿಸಿ ಬಂದಳು ಸತ್ಯಲೋಕಕೆ |
ಸರಸಿಜೋದ್ಭವಗೆರಗಿ ಪೇಳ್ದಳು | ಮರುಕದಿಂದ ||೧೪||
ರಾಗ ಕಾಂಭೋಜಿ ಅಷ್ಟತಾಳ
ಕರುಣಿಸು ಕಮಲ ಸಂಜಾತ | ಅವ |
ಧರಿಸಿ ಲಾಲಿಪುದೊಂದು ಮಾತಾ ||
ದುರುಳ ದಾನವರು ಮಾಡುವ ದುಶ್ಚರಿತ್ರವ |
ನೊರೆವೆನೆಂದರೆ ಎದೆ ತರಹರಗೊಳುತಿದೆ ||೧೫||
ಸುಜನರ ತಿರುಗಾಡಗೊಡರು | ದೈತ್ಯ |
ಕುಜನರೆಸಗುವಂತ ತೊಡರು ||
ಯಜನ ಕರ್ಮಗಳೆಲ್ಲ ವನದ ಪಾಲಾಯಿತು |
ನಿಜವೇದ ಮತಗಳು ತ್ಯಜವಾಯ್ತು ಧರೆಯೊಳು ||೧೬||
ಧರ್ಮನಾಶನವಾಯಿತಯ್ಯ | ಅ |
ಧರ್ಮ ವೆಗ್ಗಳವಾಗಿ ಮಹಿಯ ||
ನಿರ್ಮಲಾತ್ಮಕ ನಿರಂಜನನ ಪೂಜಿಸದ ದು |
ಷ್ಕರ್ಮಿಗಳನು ಪೊತ್ತು ದಣಿದೆನು ಬೇಸತ್ತು ||೧೭||
ತಂದೆ ಮಕ್ಕಳ ನಂಬಲಾರ | ಬಂಧು |
ಬಾಂಧವರಲಿ ಬದ್ಧ ವೈರ ||
ಒಂದ ಕೊಟ್ಟೊಂಬತ್ತ ಕೊಂಬರ ನ್ಯಾಯದಿ |
ಬಂದಿಕಾರರ ಕಾಟ ದಿನನಿತ್ಯ ಕೊಂದಾಟ ||೧೮||
ವಾರ್ಧಕ
ಧರಣಿಯಿಂತೆಂದಜನ ಚರಣದೊಳ್ ಮಣಿದಿರಲು |
ಕರುಣದಿಂದಾ ಧರೆಯ ಶಿರವನುಂ ನೆಗಪಿ ನೀ |
ಮರುಗದಿರು ನೋಳ್ಪೆನೆಂದರವಿಂದಭವನ ಭವ ಸುರಪ ಮುಖ್ಯಾಮರರನು ||
ಕರೆದೆಂದನಮ್ಮೊಡನೆ ಹರಿವುದಲ್ಲಿದು ಜಗ |
ದ್ಭರಿತನಹ ವಿಷ್ಣುವಿಂಗರುಹಲೇಳಿರೆನುತ್ತ |
ಸುರರನೊಡಗೊಂಡತುಳ ಹರುಷದಿಂದೈದಿದಂ ಭರದೊಳಿಂಗಡಲ ತಡಿಗೆ || ||೧೯||
ಕಂದ
ಆ ಪಾಲಾಂಬುಧಿಯಂ ಕಂ |
ಡಾ ಪರಮೇಷ್ಟಿ ಮೊದಲಾದ ನಿರ್ಜರವ್ರಾತಂ ||
ಶ್ರೀಪತಿಯಂ ಪೊಗಳುತ್ತಿರ |
ಲೀ ಪರಿ ಬಿನ್ನಪವ ಗೈದ ಭಾರತಿನಾಥಂ ||೨೦||
ರಾಗ ತ್ರಿಪದಿ ನೀಲಾಂಬರಿ ಝಂಪೆತಾಳ
ಜಯ ಸದಾನಂದ ಭಗವಂತ | ಕಮಲಾಕ್ಷ |
ಜಯಲೋಕನಾಥ ಜಯ ಜಯ ರಮಾಕಾಂತ || ಜಯ || ಪಲ್ಲವಿ ||
ದನುಜ ಶಿಶುಪಾಲ ಮದಕಂಸ | ರಾಕ್ಷಸರ |
ಪೆಸರು ಘನವಾತು ಖಳವಂಶ | ಅನ್ಯಾಯ |
ವೆಸಗುವರು ಮಿತಿಯಿಲ್ಲ ತಿಂದು ಮಧುಮಾಂಸ || ಜಯ ||೨೧||
ಸಜ್ಜನರಿಗೆಡೆಯಿಲ್ಲವೈಯ್ಯ | ಲೋಕದೊಳು |
ದುರ್ಜನರು ಬಲು ಹೆಚ್ಚಿತಯ್ಯ | ದಾನವರ |
ಘರ್ಜನೆಯ ನಿಲಿಸಿ ನಮ್ಮುವನು ಸಲಹಯ್ಯ || ಜಯ ||೨೨||
ಭೂಕನ್ನೆ ಮೊರೆಯಿಡುವಳೆನಗೆ | ಬಿನ್ನಪವ |
ನಾ ಕಾಲದೊಳು ಗೈವೆ ನಿನಗೇ | ಜಗದುಪತಿ |
ನೀ ಕರುಣದಿಂದ ನೀಡಭಯ ಧಾರುಣಿಗೆ || ಜಯ ||೨೩||
ವಾರ್ಧಕ
ಇಂತೆಂದು ಸುರರೆಲ್ಲ ಬಿನ್ನವಿಸುತಿರಲಾಗ |
ಕಂತುಪಿತ ಮನದಿ ಗೋಚರಿಸುತಾಕ್ಷಣದೊಳಗೆ |
ಸಂತಸವ ತಾಳಿಯಭಯವನಿತ್ತನಾಗಲಾನಂತಶಯನನು ಕರುಣದಿ ||
ಚಿಂತೆ ಬೇಡಿನ್ನು ಗೋಕುಲದೊಳಗೆ ಪಶುವಕಾ |
ವಂತ ಚನ್ನಿಗರಾಗಿ ನೀವೆನುತ ಗಗನ ನುಡಿ |
ಯಂತೆ ಕೇಳಿಸಿತದರನಾಲಿಸುತಲಜನು ಭೂಕಾಂತೆಯೊಡನಿಂತೆಂದನು || ||೨೪||
ರಾಗ ನಾದನಾಮಕ್ರಿಯೆ ಏಕತಾಳ
ಕೇಳಿದೆಯ ಭೂದೇವಿ | ಇನ್ನೇನೇ | ಸತ್ಯ |
ಕಾಲವು ಬಂದೊದಗಿದಾಮೇ | ಲಿನ್ನೇನೇ ||೨೫||
ನೀಗಿತಮ್ಮ ನಿನ್ನ ಬಾಧೆ | ಇನ್ನೇನೇ | ಲಯ |
ವಾಗುವರು ದನುಜರು ಮುಂ | ದಿನ್ನೇನೇ ||೨೬||
ಪೋಗು ನೀ ಸದನಕ್ಕೆ | ಇನ್ನೇನೇ | ಧೈರ್ಯ |
ಳಾಗು ಸುಖದಿಂದ ಬಾಳು | ಇನ್ನೇನೆ ||೨೭||
ಕಂದ
ವಾರಿಜಭವನೀ ಪರಿಯಿಂ |
ಧಾರುಣಿಯನು ಸಂತವಿಟ್ಟು ನಿಜ ಮಂದಿರಕಂ ||
ಭೋರನೆ ನಡೆತಂದಸುರರು |
ವೈರಿಯ ನೆನವುತ್ತಲಿದ್ದನತಿ ಭಕ್ತಿಯೊಳು ||೨೮||
ಭಾಮಿನಿ
ಧರಣಿಪತಿ ಕೇಳಿತ್ತ ಮಧುರಾ |
ಪುರದೊಳಗೆ ನೃಪನುಗ್ರಸೇನನ |
ತರಳ ಕಂಸನೆನಿಪ್ಪ ದುಷ್ಟನುದಾರ ಗರ್ವದಲಿ |
ದುರುಳರಿಗೆ ಗುರುವೆನಿಸಿ ದೈತ್ಯರ |
ನೆರವಿಯಲಿ ಧರೆಗರಸನಾಗುತ |
ಮೆರವುತಿರ್ದನು ಭುಜಬಲೋನ್ನತ ಮದದ ಮೋಡಿಯಲಿ ||೨೯||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಈ ತೆರದೊಳಿಹ ಕಂಸನೆನಿಪನ | ತಾತನಗ್ರಜ ದೇವಕನ ಸಂ |
ಜಾತೆ ದೇವಕಿಯೆಂಬವಳು ರೂ | ಪಾತಿಶಯದಿ ||೩೦||
ಮೆರವುತಿರ್ದಳು ಮಾತೆಪಿತರಿಗೆ | ಹರುಷವನು ಬೀರುತ್ತ ಸದ್ಗುಣ |
ಭರಿತೆಯಾಗಿ ಸುಶೀಲದಲಿ ಹೊಸ | ಹರೆಯದಿಂದ ||೩೧||
ವರನನರಸುತ್ತಿರಲು ತತ್ಪುರ | ವರನು ಶೂರನೃಪಾಲನಣುಗನು |
ಸ್ಮರನ ಲಾವಣ್ಯವತಿ ಸದ್ಗುಣ | ಭರಿತನಾಗಿ ||೩೨||
ಇರಲು ವಸುದೇವಾಭಿಧಾನವ | ನರಿತು ಸಾರಸಗಮನೆಗೀತನೆ |
ವರನೆನುತ ನಿಶ್ಚೈಸಿ ಖಳಗೆ | ಚ್ಚರಿಸೆ ಮುದದಿ ||೩೩||
ನೋಡಿ ಕಂಸನು ಪಿತನನುಜ್ಞೆಯ | ಬೇಡಿ ತಂಗಿಗೆ ಪರಿಣಯವ ತಾ |
ಮಾಡಬೇಕೆಂದೆನುತ ಸಂತಸ | ಗೂಡಿ ಭರದಿ ||೩೪||
ರಾಗ ಶಂಕರಾಭರಣ ಏಕತಾಳ
ಸತ್ಯವಂತ ವಸುದೇವ ನೃ | ಪೋತ್ತಮಂಗೆ ಮದುವೆಯಾಗೆ |
ಪೃಥ್ವಿಪಾಲರೆಲ್ಲ ಬಂದ | ರುತ್ಸಾಹಕೆಂದು ||೩೫||
ರಂಗ ಮಂಟಪದಿ ಕೋಮ | ಲಾಂಗಿ ದೇವಕಿ ವಸುದೇವ |
ಗಂಗನೆಯ ರೆತ್ತಿದರು | ಮಂಗಳಾರತಿಯ ||೩೬||
ಪೊಂಗಲಶಕುಚದ ಮೋಹ | ನಾಂಗಿಯರೆಲ್ಲರು ಶೋಭಾ |
ನಂಗಳ ಪಾಡಿದ ರಾಗ | ಶೃಂಗಾರದಿಂದ ||೩೭||
ರಾಗ ಕೇದಾರಗೌಳ ಅಷ್ಟತಾಳ
ದಾರೆ ಚತುರ್ಥಿನಾಗೋಲೆಯ ಕಳೆದುಪ | ಚಾರ ಮನ್ನಣೆಗಳಿಂದ ||
ಬೇರೆ ಬೇರರಸುಗಳಿಗೆ ಕೊಟ್ಟನುಚಿತವ | ಭೂರಿ ಸಂತೋಷದಿಂದ ||೩೮||
ಚಾರುಚರಿತೆ ತನ್ನ ಮಗಳಿಗೆಂದೆನುತಾಗ | ನೂರು ತುರಗ ಕೊಟ್ಟನು ||
ಮೀರಿದ ಮದವೆತ್ತಾನೆಗಳ ಶೃಂಗರಿಸಿ ನಾ | ನೂರೆಣಿಕೆಯೊಳಿತ್ತನು ||೩೯||
ಸಾರಥಿ ಸಹಿತ ಸಂದಣಿಸಿದ ತೇರ್ಗಳ | ತೋರಿದನತಿ ಬೆಲೆಯ ||
ಹೇರಳಪಟ್ಟೆ ಪೀತಾಂಬರವಿತ್ತ ಕು | ಮಾರಿಗೆ ಬಳುವಳಿಯ ||೪೦||
ಪಾವಕನಂತೆ ಪ್ರಜ್ವಲಿಪ ರತ್ನಗಳ ರಾ | ಜೀವಾಕ್ಷಿಗಿತ್ತನೆಲ್ಲ ||
ಸೇವೆಯ ಮಾಳ್ಪ ದಾಸಿಯರ ಕೊಟ್ಟುದಕಿನ್ನು | ದೇವ ಶಂಕರನೆ ಬಲ್ಲ ||೪೧||
ಎಲ್ಲಿ ನೋಡಿದರು ದಂಡಿಗೆಯಾನೆ ಕುದುರೆಯ | ಚೆಲ್ಲಾಟ ಘನವಾಯಿತು ||
ಅಲ್ಲಲ್ಲಿ ಪಿಡಿದ ಚಾಮರ ಛತ್ರ ಬಿರುದಿನ | ಘಲ್ಲಣೆ ಮೀತಿಮೀರಿತು ||೪೨||
ವಲ್ಲಭೆ ಸಹಿತಾಗ ವಸುದೇವ ಮಣಿರಥ | ದಲ್ಲಿ ಕುಳ್ಳಿರ್ದ ಬಂದು ||
ಉಲ್ಲಾಸದೊಳು ತೇರ ನಡೆಸುತ್ತ ಬರುತಿರ್ದ | ಬಲ್ಲಿದ ಕಂಸನಂದು ||೪೩||
ರಾಗ ಮಾರವಿ ತ್ರಿವುಡೆತಾಳ
ವಸುಧೆ ಪಾಲಕನೆ ಕೇಳಾ | ವೇಳ್ಯದೊಳೊಂದು |
ವಿಷಮ ಸಂಭವಿಸಿದುದ ||
ವಸುದೇವ ದೇವಕಿಯರ ಕಳುಹಿಸಲು ಬಂ |
ದಸುರ ಕಂಸಾಖ್ಯಗಾಗಸದೊಳಗೆಸೆದುದ || ವಸುಧೆ || ||೪೪||
ಭಾಮಿನಿ
ಕೇಳೆಲವೊ ಖಳ ಕಂಸ ತಂಗಿಯ |
ಮೇಲೆ ಮೋಹವ ಮಾಳ್ಪೆ ನಿನಗೀ |
ಲೋಲಲೋಚನೆಯುದರದೊಳಗೆಂಟನೆಯ ಗರ್ಭದಲಿ ||
ಶ್ರೀಲಲಾಮನು ಜನಿಸಿ ಬಲು ದೈ |
ತ್ಯಾಳಿಯನು ಸಂಹರಿಸಿ ನಿನ್ನನು |
ಸೀಳುವನು ಪುಸಿಯಲ್ಲೆನುತ್ತಡಗಿತು ನಭೋವಚನ || ||೪೫||
ರಾಗ ಭೈರವಿ – ಏಕತಾಳ
ಖಳನತಿ ಕೋಪವ ತಾಳ್ದು | ಕಂ | ಗಳೊಳಿಂಗಳವನುಗುಳ್ದು ||
ಜಳಪಿಸಿ ಖಡ್ಗವನುಗಿದು | ಖತಿ | ಯೊಳು ತಾನಧರವನಗಿದು ||೪೬||
ಫಡ ತಂಗಿಯೆ ತನಗಿವಳು | ಎ | ನ್ನೊಡಲಿಗೆ ವಿಷವಾದವಳು ||
ನುಡಿದರೆ ಫಲವೇನಿನ್ನು | ತಲೆ | ಕಡಿದೀಗಲೆ ತೀರ್ಚುವೆನು ||೪೭||
ಕೆಡೆಯೆನುತಲಿ ಬಾಲಕಿಯ | ಕೊರ | ಳೆಡೆಗಾನಿಸೆ ಕೂರಸಿಯ ||
ಮಿಡುಕುತಬಲೆ ಬಾಯ್ ಬಿಡಲು | ಕಂ | ಡೊಡನೆಲ್ಲವರಳುತಿರಲು ||೪೮||
ಕಂದ
ಈ ವಿಧಮಂ ಕಂಡಾ ವಸು |
ದೇವಂ ನಡುಗುತ್ತಲಿಳಿವ ಕಂಬನಿಯಿಂದಂ ||
ಹಾ ವಿಧಿಯೆಂದತಿ ಸುಯ್ವುತ |
ಕೋವಿದನಂ ತಡೆವುತಸಿಯಪಿಡಿದಿಂತೆಂದಂ || ||೪೯||
ರಾಗ ನಾದನಾಮಕ್ರಿಯೆ – ಏಕತಾಳ
ಲೇಸು ಕಾರ್ಯವೇನೊ ನಿನಗೆ | ಕಂಸರಾಯ | ಇವಳ |
ಘಾಸಿ ಮಾಳ್ಪುದುಚಿತವಲ್ಲ | ಕಂಸರಾಯ ||
ಹೇಸದಿಹಳೆ ಭಾಗ್ಯಲಕ್ಷ್ಮಿ | ಕಂಸರಾಯ | ಕೀರ್ತಿ |
ಮಾಸುವುದು ಗ್ರಹಿಸಿನೋಡು | ಕಂಸರಾಯ ||೫೦||
ಮಾನಿನಿಯ ಕೊಲೆಗೆ ಬಯಸಿ | ಕಂಸರಾಯ | ನಿನ್ನ |
ಮಾನ ಕೆಡಿಸಿ ಕೊಳದಿರಯ್ಯ ಕಂಸರಾಯ ||
ಜ್ಞಾನವಂತನಾಗಿ ನೀನು | ಕಂಸರಾಯ | ಇಂತು |
ಹೀನ ಬುದ್ಧಿಯೋಚಿಸುವರೆ | ಕಂಸರಾಯ ||೫೧||
ಒಡಲು ಶಾಶ್ವತವಲ್ಲ | ಕಂಸರಾಯ | ಮಳೆ
ಹೊಡೆದ ನೀರ ನೆರೆಗಳಂತೆ | ಕಂಸರಾಯ
ಮಡದಿ ಮಕ್ಕಳೆಂಬ ಭಾಗ್ಯ | ಕಂಸರಾಯ | ಪ್ರಾಣ |
ಬಿಡುವ ವೇಳ್ಯಕೊದಗದಯ್ಯ | ಕಂಸರಾಯ ||೫೨||
ಕಂಡು ಕಂಡು ತಿಳಿದು ತಿಳಿದು | ಕಂಸರಾಯ | ಯಮನ |
ದಂಡನೆಗೆ ಸಿಲುಕದಿರಯ್ಯ | ಕಂಸರಾಯ ||
ಬಂಡಾಟಗಳುಚಿತವಲ್ಲ | ಕಂಸರಾಯ | ನರಕ |
ಕುಂಡದೊಳಗೆ ಬೀಳದಿರಯ್ಯ | ಕಂಸರಾಯ ||೫೩||
ರಾಗ ಮಾರವಿ – ಏಕತಾಳ
ಎನಲಾ ಕಂಸನು ಕನಲುತಲೆಂದನು | ನಿನಗೀ ಧರ್ಮವನು |
ವಿನಯದಿ ಕಲಿಸಿದನ್ಯಾರವ ನಾರಿಂ | ಗೆನುತಿಹೆ ನೀನಿದನು ||೫೪||
ಮರೆಯದೆ ಲಾಲಿಸುವರಿಗುಸುರುವ ದೀ | ಪರಮ ರಹಸ್ಯಗಳ ||
ಒರೆಯದಿರೈ ಸಾಕರಿತಿಹೆ ನಾನೀ | ಪರಿಯ ಪ್ರಯತ್ನಗಳ ||೫೫||
ಆರು ಕೊಲುವರಾರಿಂದಾರಳಿವರು | ಬೇರು ಬಲ್ಲರಿಗೆಲೆಯ ||
ತೋರುವುದುಚಿತವೆ ಸಾರತ್ತಲು ನಾ | ತೀರಿಸುವೆನು ಸತಿಯ ||೫೬||
ರಾಗ ನೀಲಾಂಬರಿ ರೂಪಕತಾಳ
ಕೊಂದವರಿಗೆ ಕೊಲೆ ತಪ್ಪದು | ಕಡೆಗೀ ಭಯ ನಿನಗಪ್ಪುದು |
ನೊಂದರೆ ಪ್ರಾಣದ ಹಗೆಯೆಂ | ದೆಂದಿಗು ಬಿಡದಯ್ಯ || ಪಲ್ಲವಿ ||
ಹುಟ್ಟಿದ ಕೂಡಲೆ ಮರಣವ | ಕಟ್ಟಿರಿಸಿದ ವಿಧಿ ಫಣೆಯಲಿ |
ಕೆಟ್ಟಲ್ಲದೆ ಲೋಕದಿ ಮನ | ಪುಟ್ಟದು ಮನುಜರಿಗೆ ||
ಸಿಟ್ಟೇಕೀಪರಿ ನಿನ್ನೊಡ | ಹುಟ್ಟಿದ ಸೋದರಿಯಲ್ಲವೆ |
ನಿಷ್ಠುರವ ಬಿಡು ಪಾತಕ | ತಟ್ಟದಿರದು ನಿನಗೆ ||೫೭||
ಮುಳ್ಮೊನೆ ಕಾಲಿಗೆ ನೆಟ್ಟರೆ | ಪಲ್ಮೊನೆ ಚುಚ್ಚುವದೇತಕೆ |
ಸುಳ್ಮನಸಿನ ಭ್ರಮೆಯಿಂದಲಿ | ಕಲ್ಮನ ಮಾಡದಿರು ||
ತಾಳ್ಮಮತೆಯನೆನ್ನೀ ಸತಿ | ಯೊಳ್ಮಾಡದಿರಕೃತ್ಯವ |
ಜನ್ಮಾಂತ್ರಕು ಬಿಡದವಗುಣ | ಪಾಳ್ಮಾಡಿಸದಿರದು ||೫೮||
ಮತ್ತೊಂದನು ಕೇಳೀ ಸತಿ | ಪೆತ್ತಂದಿಗೆ ತನಗುದಿಸಿದ |
ಪುತ್ರಂದ್ಯರನೆಲ್ಲರ ತಂ | ದಿತ್ತಂದಿಗೆ ನಿನ್ನ ||
ಚಿತ್ತದ ಭಯ ನೀಗಿಸುವೆನು | ಸತ್ಯದ ಮಾತಿದು ನೀ ಕೇ |
ಳುತ್ತಮ ಮಾಂಗಲ್ಯದೊಳವ | ಕೃತ್ಯವ ಮಾಡದಿರು ||೫೯||
ರಾಗ ತೋಡಿ ಅಷ್ಟತಾಳ
ನಿಜವಲ್ಲ | ಮಾತು | ನಿಜವಲ್ಲ || ಪಲ್ಲವಿ ||
ನಿಜವಲ್ಲವೀ ಮಾತು ನಿನ್ನಂತರಂಗ |
ಕುಜನರ ಕೂಡಾಡುವಂಥ ಪ್ರಸಂಗ || ನಿಜವಲ್ಲ || ಅ.ಪ ||
ಬೀಸಿದ ಕೈ ತಪ್ಪಿ ನಡೆದರೆ ಮುಂದೆ |
ಸಾಸಿರ ಕಾಲವೆಂಬರು ಗಾದೆ ಹಿಂದೆ ||
ನೀ ಶಿಶುಗಳ ತಂದು ಕೊಡುವ ಮಾತುಂಟೆ |
ಲೇಸೆಂದು ನಂಬಿ ಬಿಟ್ಟರೆ ಟೆಂಟೆಮೆಂಟೆ || ನಿಜವಲ್ಲ ||೬೦||
ಬೆಟ್ಟದ ಮೊಸಳೆಯ ಜಲದೊಳು ತಂದು |
ಬಿಟ್ಟರುಪಕಾರವೆಂದರಿವುದೆ ಮುಂದು ||
ದುಷ್ಟರಿಗುಂಟೆ ದಾಕ್ಷಿಣ್ಯವೆಂದೆಂದು |
ಭ್ರಷ್ಟಕಾರ್ಯದ ಮಾತಾಡುವರೆ ನೀನಿಂದು || ನಿಜವಲ್ಲ ||೬೧||
Leave A Comment