ಕಂದ

ನಿದ್ದೆಯ ಹೊತ್ತಿಲಿ ಬೆಣ್ಣೆಯ |
ಮುದ್ದೆಯ ರಸಬಾಳೆ ಹಣ್ಣು ಜೇನ್ ತುಪ್ಪಗಳಂ ||
ಕದ್ದವರಾರೆನೆ ಕೇಳುತ |
ಬುದ್ಧಿವಿಶಾಲತೆಯೊಳೆಂದಳೊಬ್ಬಳು ತರುಣಿ || ||೨೦೫||

ರಾಗ ಸೌರಾಷ್ಟ್ರ ಅಷ್ಟತಾಳ

ಮರುಳಾದೆ ಏನೆ ಬಾಲೆ | ಇಲ್ಲಿಗೆ ರಾತ್ರೆ | ಬರುವರಾರೆಂದು ಪೇಳೆ |
ನೆರೆಹೊರೆಯವರು ಎಚ್ಚರಿತುಕೊಂಡಿರುವಾಗ |
ಸರಿರಾತ್ರೆಯೊಳಗೋರ್ವ ಸುಳಿವ ಮಾತುಂಟೆನೆ || ಮರುಳಾದೆ ||೨೦೬||

ಚಿನ್ನ ಬೆಳ್ಳಿಗಳ ಬಿಟ್ಟು | ಸಕ್ಕರೆ ಬಾಳೆ | ಹಣ್ಣಿಗೆಂದಾಸೆ ಪಟ್ಟು |
ಬೆಣ್ಣೆ ತುಪ್ಪಗಳ ಮೆಲ್ವರೆ ಮನೆಯೊಳಗಿದ್ದ |
ಸಣ್ಣವರಾಟವಲ್ಲದೆ ಬೇರಿನ್ನಾರುಂಟು || ಮರುಳಾದೆ ||೨೦೭||

ಅಕ್ಕ ನೀ ಸುಮ್ಮನಿರೆ | ಆದರೆ ಕಳ್ಳ | ಸಿಕ್ಕದೆ ಪೋಗ ಬಾರೆ |
ದಕ್ಕದು ಕಳವು ಹಾದರವೆರಡಕು ಸಣ್ಣ |
ಮಕ್ಕಳಾದರು ಕಂಡು ಸೊಕ್ಕ ಮುರಿಯಬೇಕು || ಮರುಳಾದೆ ||೨೦೮||

ಭಾಮಿನಿ

ವನಿತೆಯರು ತಮ್ಮೊಡನೆ ಯೋಚಿಸಿ |
ಮನೆಗೆ ಬಂದಾಕ್ಷಣವೆ ಮಕ್ಕಳ |
ಘನತರದೊಳಂಜಿಸುತ ಕೇಳುತ್ತಿರಲು ರಾತ್ರೆಯಲಿ ||
ಕನಸ ಕಂಡಂದದಲಿ ಮರುದಿನ |
ಕೆನೆ ಮೊಸರ ಸುರಿದೋಡುತಿರಲಾ |
ಧ್ವನಿಯ ಲಾಲಿಸಿ ತಿಳಿದು ಬಳಿಕಿಂತೆಂದಳಾ ತರುಣಿ || ||೨೦೯||

ರಾಗ ನಾದನಾಮಕ್ರಿಯೆ ಝಂಪೆತಾಳ

ಅಕ್ಕ ಕೇಳೀ ಕೇರಿ | ಒಕ್ಕಲೊಳು ಕಳುವವರು |
ಮಕ್ಕಳೊಳಗಲ್ಲದೆ ಮತ್ತೊಬ್ಬರಲ್ಲ ||೨೧೦||

ಪೇಳಲಂಜುವೆ ಬಂದ | ಹೊಸ ಪರಿಯ ಬಾಲಕಗೆ |
ಕಾಲಲಂದುಗೆ ಗೆಜ್ಜೆಕಡಗ ಮೊದಲುಂಟು ||೨೧೧||

ಪೀತಾಂಬರವನುಟ್ಟು | ಫಣೆಗೆ ತಿಲಕವನಿಟ್ಟು |
ಜಾತಿ ತುಳಸಿಯ ದಂಡೆ ಕೊರಳೊಳಗೆ ಕಂಡೆ ||೨೧೨||

ನೀಲವರ್ಣದ ಮೈಯ | ನುಡಿವ ಕೊಳಲಿದೆ ಕೈಯ |
ಬಾಲಕೃಷ್ಣನ ರೂಪ ಪ್ರತಿಯಾಗಿ ತೋರ್ಪ ||೨೧೩||

ನಂದಗೋಪ ಯಶೋದೆ | ಕಂದನಲ್ಲದೆ ಮನೆಗೆ |
ಬಂದು ಕಳುವವರಿಲ್ಲ ಬದಲೊಬ್ಬರಿಲ್ಲ ||೨೧೪||

ಅರಸುಗಳ ಬಾಲಕರು ಅನ್ಯಾಯ ಮಾಡಿದರೆ |
ಪರರೊಡನೆ ಪೇಳ್ದರದ ಪರಿಹರಿಪರ‍್ಯಾರು ||೨೧೫||

ಭಾಮಿನಿ

ಶರಧಿ ಮೇರೆಯ ತಪ್ಪಿತಾದರೆ |
ಧರಣಿ ತಲೆಕೆಳಗಾಗಿ ಪೋದರೆ |
ಕರುಣವಿಲ್ಲದೆ ಬೇಲಿಯೇ ಬೆಳೆತಿಂದು ಕೆಡಿಸಿದರೆ ||
ಅರಸುಗಳೊಳನ್ಯಾಯವಾದರೆ |
ಪರಿಹರಿಪರಿಲ್ಲೆಂದು ಗೋಕುಲ |
ದರಸಿಯಾದ ಯಶೋದೆಯೆಡೆಗೈತಂದರರಮನೆಗೆ || ||೨೧೬||

ರಾಗ ಸೌರಾಷ್ಟ್ರ ಅಷ್ಟತಾಳ

ಏನಿರೆ ಸತಿಯರೆಲ್ಲರು ನಡೆತಂದಿರಿ | ಏನಿರವ್ವ |
ಮಾನಿನಿಯರಿರ ಮಂಚದಲಿ ಕುಳ್ಳಿರಿ ಬನ್ನಿ | ಏನಿರವ್ವ  || ಪಲ್ಲವಿ ||

ಆನನ ರಸತಗ್ಗಿತಂಬುಜವದನೆಯ | ರೇನಿರವ್ವ | ನಿಮ್ಮ |
ಮಾನಸ ಹರುಷ ನಿ | ಧಾನವಾಗಿರುವದಿ | ದೇನಿರವ್ವ ||೨೧೭||

ಊಟ ಮೀವುಗಳಲ್ಲಿ ತೊಡರು ಬಂದಡರಿತೆ | ಏನಿರವ್ವ |
ಕಾಟಕ ಜನರಿಂದ ಮುನಿಸು ಬಂದೊದಗಿತೆ | ಏನಿರವ್ವ
ಕೋಟಲೆ ಮನೆಯ ಸಂಸಾರ ವೆಗ್ಗಳಿದು | ದೇನಿರವ್ವ
ಆಟಕವಲ್ಲಿದು ವೇಳ್ಯ ಸಾಧಿಸಿ ಬಂದು | ದೇನಿರವ್ವ ||೨೧೮||

ಅಂತರಂಗದೊಳನುತಾಪವೆಗ್ಗಳಿಸಿಹು | ದೇನಿರವ್ವ | ಬಲು |
ಚಿಂತೆಯಿಂದರಮನೆಗೈತಂದ ಕಾರಣ| ವೇನಿರವ್ವ |
ಕಾಂತೆಯರಿರ ಕಪಟವ ಮಾಡದುಸುರಿ ಮ | ತ್ತೇನಿರವ್ವ | ಲಕ್ಷ್ಮಿ |
ಕಾಂತನು ದಯದಿ ನಮ್ಮೆಲ್ಲರ ಸಲಹುವ | ಏನಿರವ್ವ ||೨೧೯||

ಕಂದ

ಪದುಮದಳಾಕ್ಷಿ ಯಶೋದೆಯು |
ಸುದತಿಯರಂ ಮನ್ನಿಸುತ್ತ ವೀಳ್ಯವ ಕೊಡಲುಂ |
ಮದಗಜಗಮನೆಯರಾಗಲೇ |
ಮುದದಿಂ ಪೇಳಿದರು ಕೃಷ್ಣ ನಾಟಂಗಳನು || ||೨೨೦||

ರಾಗ ಪಂತುವರಾಳಿ ಮಟ್ಟೆತಾಳ

ಕೇಳೆ ಗೋಪಿ ರಂಗನಾಟವ | ನೀ ಕರುಣದಿಂದ | ಕೇಳೆ ಗೋಪಿ ರಂಗನಾಟವ |
ಪೇಳದಿರುವುದಚಿತವಲ್ಲ | ಪೇಳ್ದೊಡೊಂದು ಕಾರ್ಯವಿಲ್ಲ |
ಕೇಳೆ ಗೋಪಿ ರಂಗನಾಟವ || ಪಲ್ಲವಿ

ಸರಿಯ ರಾತ್ರಿಯೊಳಗೆ ಬಾಗಿ | ಲ್ಮುರಿಯಲಾಗಿ ಬೆದರಿ ಕದವ |
ತೆರೆಯಲೊಳಗೆ ಬಂದು ನಾ | ವರಿಯದಂತೆ ಹಾಲು ಮೊಸರ |
ಸುರಿವು ತೋಡಿ ಬರುವ ಸುಮ್ಮನೆ | ಇರಲು ಸ
ಕ್ಕರೆಯ ಕದ್ದು ಮೆಲುವ | ಘಮ್ಮನೆ | ನಗುತ ಮೇಲ್ |
ಬರಿಯ ಮಾಡಿ ಬಿಡುವ ನಮ್ಮನೆ ನೀ | ಕರುಣದಿಂದ || ಕೇಳೆ ||೨೨೧||

ಅಟ್ಟದ ಮೇಲಡಗಿಸಿ ಬ | ಚ್ಚಿಟ್ಟರದರ ಬುಡಕೆ ಕೋಲ
ಲಿಟ್ಟು ತೂತು ಮಾಡಿ ಬಂದಷ್ಟು ಬಾಯನಿಟ್ಟು ಸವಿಯ |
ತೊಟ್ಟಿನವರ ಕರೆದು ಕೊಡುವನು | ಬೆದರಿಸಲುಕ |
ಲ್ಲಿಟ್ಟು ಭಾಂಡಗಳನು ಒಡೆವನು | ಸತಿಪತಿಯರ |
ಜುಟ್ಟು ಜುಟ್ಟು ಕಟ್ಟಿ ಬಿಡುವನು ನೀ | ಕರುಣದಿಂದ || ಕೇಳಿ ಗೋಪಿ ||೨೨೨||

ಕಂದ

ಬಾಲೆಯರಿಂತೆಂದಾ ಗೋ |
ಪಾಲನ ದೂರನರುಹಲು ನಸುನಗುತಾಗಂ ||
ಬಾಲಕನೆಸಗಿದರೆಮ್ಮಯ |
ಮೇಲಪಕೀರ್ತಿಯು ಬಹುದೆನುತವರೊಡನೆಂದಳ್ || ||೨೨೩||

ರಾಗ ಕಾಂಭೋಜಿ ಏಕತಾಳ

ಅಮಮ ಇದೆಂಥ ಚೋದ್ಯವು ||
ಇವರಾಡುವ ಮಾತುಗ | ಳಮಮ ಇದೆಂಥ ಚೋದ್ಯವು || ಪಲ್ಲವಿ ||

ತಮ್ಮ ಮನೆಗೆ ರಾತ್ರಿಯೊಳಗೆ ಪೋ |
ಗೆಮ್ಮ ಬಾಲ ಬಾಗಿಲ ಮುರಿದನು ಗಡ | ಅಮಮ || ಅನು ಪಲ್ಲವಿ ||

ಸಂಜೆಯೊಳಂಗಳಕಿಳಿಯದ ಬಾಲನು | ಪರರೊಡವೆಯ ಮುಟ್ಟಲಿ
ಕಂಜುತ್ತಲಳುಕುತ್ತ | ಲಿಹ ಗೋಪಾಲನು ಮೀಸಲ್ಮೊಸರ್ಬೆಣ್ಣೆಯ
ಎಂಜಲ ಮಾಡಿದನಂತೆ ವಿಶಾಲನು | ಶಿವಶಿವಾ ನಾವು
ರಂಜಿಸಿ ಕೇಳಿದೆ ವೀಪರಿ ಜಾಲವನು || ||೨೨೪||

ರಾಗ ಕೇದಾರಗೌಳ ಅಷ್ಟತಾಳ

ಸರಿ ರಾತ್ರೆಯೊಳಗೆನ್ನ | ತರಳ ಮನೆಗೆ ಬಂದ | ಗುರುತವೇನಮ್ಮ ಪೇಳು ||
ಇರುಳು ಪಟ್ಟಣವ ರಕ್ಷಿಪ ತಳವಾರಿನ | ಚರರ ನೀ ಕರೆಸಿ ಕೇಳು ||೨೨೫||

ಕಂದನಿರುಳು ನಿಮ್ಮ | ಮಂದಿರದೊಳು ಬೆಣ್ಣೆ | ತಿಂದಿಹ ಗುರುತವೇನೆ |
ಒಂದರ ಮೇಲೊಂದಿಟ್ಟೊಡೆದ ಭಾಂಡದ ಚಿಪ್ಪು | ತಂದು ತೋರುವೆವು ಕಾಣೆ ||೨೩೬||

ಕಂದ

ಪರಿಹಾಸ್ಯದಿಂದ ನಗುತಾ |
ತರುಣಿಯರಂ ಬಹುಮಾನಿಸುತ ಕಳುಹಲ್ಕಂದು ||
ಮರುದಿನ ಮಾಡಿದ ಲೂಟಿಯ |
ಭರದಿಂದೈತಂದು ಪೇಳ್ದಳೊಬ್ಬಳು ತರುಣಿ || ||೨೨೭||

ರಾಗ ಕಲ್ಯಾಣಿ ಅಷ್ಟತಾಳ

ಎಷ್ಟೆಂದು ಪೇಳಲಮ್ಮ | ಗೋಪಾಲನ | ದುಷ್ಟತನವ ಗೋಪಮ್ಮ ||
ಕಟ್ಟಿದ ಕರುಗಳ | ಬಿಟ್ಟು ಕರೆವ ಮುನ್ನ |
ಹಟ್ಟಿಯಿಂ ನೆಗೆದೋಡಿದ | ಕೇಳು ವಿನೋದ || ಎಷ್ಟೆಂದು ||೨೨೮||

ಬಣ್ಣಗತಿಯಲಿ ಬಂದ | ಪಾಲ್ಮೊಸರ್ತುಪ್ಪ | ಬೆಣ್ಣೆಯ ಕದ್ದು ತಿಂದ |
ಮಿಣ್ಣನೆ ಮಲಗಿದ್ದ | ಚಿಣ್ಣನ ಮೂಗಿಗೆ |
ಸುಣ್ಣವ ಬರೆದೋಡಿದ | ನೀ ಕೇಳವ್ವ ||೨೨೯||

ಇಷ್ಟೆಲ್ಲ ಕಂಡುನಾವು | ಅಟ್ಟದಲಿ ಬ | ಚ್ಚಿಟ್ಟ ದುಗ್ಧದ ಭಾಂಡವು |
ಪುಟ್ಟಗೋಪಾಲರ ಹೆಗಲೇರಿ ಕೆಳಗೆ ಮೈ |
ದಿಟ್ಟೋಡಿ ಪೋದ ಕಾಣೆ | ಕೇಳೆಲೆ ಜಾಣೆ ||೨೩೦||

ಭಟ್ಟ ಬ್ರಾಹ್ಮಣರಿಗೆನ್ನುತ್ತ | ಮೂಲೆಯಲಿ ಬ | ಚ್ಚಿಟ್ಟರ್ದಡದ ನೋಡುತ |
ಕೆಟ್ಟ ಮೂಳಿಯ ಮಕ್ಕಳೆನುತ ಬಾಗಿಲ್ಗೆ ಕ |
ಲ್ಲಿಟ್ಟೋಡಿ ಪೋದನಮ್ಮ | ಕೇಳೆ ಗೋಪಮ್ಮ ||೨೩೧||

ಕಂದ

ಮಕ್ಕಳ ಮಾಣಿಕ ಪಾಲ್ಮೊಸ |
ರಿಕ್ಕಿದರದನುಣ್ಣಲೊಲ್ಲ ಸೇರದು ಬೆಣ್ಣೆ ||
ಚಿಕ್ಕವ ನಿಮ್ಮಡಿಗೆಯ ಮನೆ |
ಪೊಕ್ಕನು ಸರಿರಾತ್ರೆಯೊಳೆಂಬುದಿದಚ್ಚರಿಯಂ || ||೨೩೨||

ರಾಗ ಕಲ್ಯಾಣಿ ಅಷ್ಟತಾಳ

ಸಣ್ಣವರಾಟವಲ್ಲ | ಸಂಗಡ ಬಂದ | ಚಿಣ್ಣರೊಳ್ ಕೇಳ್ದೆವೆಲ್ಲ |
ಅಣ್ಣರಾಮರಿಯದಂದದೊಳೋಡಿ ಬಂದಿವಳ |
ಬಣ್ಣದುಟಿಯ ಸವಿದ | ಕೇಳು ವಿನೋದ || ಸಣ್ಣವ ||೨೩೩||

ಎಂದೂ ಎನ್ನಣುಗನಿಗೆ | ಆಲದ ಹಣ್ಣು | ತಿಂದು ಅಭ್ಯಾಸವಾಗೆ |
ಒಂದರಿಯದ ಬಾಲ ಮುಗುದೆ ನಿನ್ನಧರವ |
ತಿಂದರಿಂದೇನಾಯಿತೆ | ಪೇಳೆಲೆ ಕಾಂತೆ || ಸಣ್ಣವ ||೨೩೪||

ನಸುಬೆಳಕಾಗುವಾಗ | ಯವ್ವನವತಿ | ಮೊಸರ ಮಂತಿಸುತಿಪ್ಪಾಗ |
ಕುಶಲದಿಂದೆಳೆದಮರ್ದಪ್ಪುತ ತರುಣಿಯ |
ಪೊಸ ಕುಚಂಗಳ ಮುಟ್ಟಿದ | ಕೇಳು ವಿನೋದ ||೨೩೫||

ದೇವತಾರ್ಚನೆಗೆನ್ನುತ್ತ | ನಿತ್ಯದಲಿ ರಾ | ಜೀವಗಳನು ಕೊವಂಥ |
ತಾವರೆ ಮೊಗ್ಗೆಂದರಿಯದೆ ಮುಟ್ಟಲು |
ಆವಮಾನಗಳು ಕುಂದಿತೆ | ಕೇಳೆಲೆ ಕಾಂತೆ ||೨೩೬||

ನೀರನು ತರಲು ಪೋದ | ಈ ಸುದತಿಯ | ದಾರಿಯಡ್ಡವ ಕಟ್ಟಿದ |
ನಾರಿ ಹೇಳಿದಕೇನು ಬೆಲೆಕೊಟ್ಟೆಯೆನುತುಟ್ಟ |
ಸೀರೆಯ ನೆಗೆದೋಡಿದ | ಕೇಳು ವಿನೋದ ||೨೩೭||

ಆರೇಳು ವರ್ಷವಾದ | ಬಾಲಕನುಟ್ಟ | ಸೀರೆಯಂದವ ನೋಡಿದ |
ಸೌರಮ್ಯಾಂಬರವಿದರ ಬೆಲೆ ಏನೆನುತ ಮೇಲ್ |
ಹಾರಿಸಲೇನಾಯಿತೇ | ಪೇಳೆಲೆ ಕಾಂತೆ ||೨೩೮||

ರಾಗ ಬಿಲಹರಿ ಅಷ್ಟತಾಳ

ಮಗಗಿನ್ನಾದರು ಬುದ್ಧಿ ಪೇಳೆ | ಇನ್ನು |
ನಗೆಯಲ್ಲ ಕೈ | ಮುಗಿವೆವು ಮಾತ ಕೇಳೆ || ಮಗ || ಪಲ್ಲವಿ ||

ಕಳವು ಹಾದರವು ಮದ್ದಲ್ಲ | ನೀವು | ಇಳೆಯಪಾಲಿಸುವರಿ | ಗಿದು ಯೋಗ್ಯವಲ್ಲ ||
ಬಳಸುವುದಪಕೀರ್ತಿ ಎಲ್ಲ | ರಾಜ್ಯ | ದೊಳಗಿರುವುದು ಕಷ್ಟ ನೀ ಕೇಳು ಸೊಲ್ಲ ||೨೩೯||

ಉಂಡದಕಳಲುವರಾರು | ನೆಲ | ನುಂಡು ಕೆಟ್ಟಿತು ಎಲ್ಲ ಪಾಲ್ಬೆಣ್ಣೆ ಮೊಸರು |
ಕಂಡ ಕಡೆಯಲಿ ಚೆಲ್ಲುವರು | ಕಪಿ | ವಿಂಡುಗಳಿಗೆ ಸಹ ಕರೆದು ಕೊಡುವರು ||೨೪೦||

ರಾಗ ಪಂತುವರಾಳಿ ರೂಪಕತಾಳ

ಚಂದವಾಯಿತು ಮಗನೆ | ಚಂದವಾಯಿತು |
ನಂದಗೋಪನಣುಗ ಕದ್ದು | ತಿಂದನೆಂಬ ಮಾತು ಬಂದುದು || ಪಲ್ಲವಿ ||

ಪರರ ಮನೆಯ ಪಾಲು ಬೆಣ್ಣೆ | ಸುರಿವುತೋಡಿಬರುವುದಕ್ಕೆ |
ಕರವದೇನು ಕಡಿಮೆಯಾಯಿತೆ | ಅಯ್ಯಯ್ಯೊ ನಡತೆ || ಚಂದ ||೨೪೧||

ನರಿಯು ನಾಯಿ ತಿಂದು ಪೋದುದೆಮ್ಮ ತೋಟದಲ್ಲಿ ಪಣ್ಗಳ |
ತರಿಸಲ್ಯಾರು ಬೇಡವೆಂದರೇ | ಬೇಕೆಂಬುದಾದರೆ || ಚಂದ ||೨೪೨||

ಪರರಿಗೆಲ್ಲ ಬುದ್ಧಿ ಪೇಳಿ ಪಾಲಿಸುತ್ತಿರುವ ನಾವು |
ನೆರೆಮನೆಯೊಳ್ಕಳವು ಮಾಳ್ಪರೆ | ಕೈಮಾಡಿದಾದರೆ ||೨೪೩||

ರಾಗ ಕಲ್ಯಾಣಿ ಅಷ್ಟತಾಳ

ಗೊಲ್ಲ ಹೆಣ್ಣುಗಳು ಕೂಡಿ | ನಿನ್ನೊಡನೆಲ್ಲ | ಸಲ್ಲದ ಮಾತನಾಡಿ |
ಖುಲ್ಲಗಾತಿಯರು ಮತ್ಸರದಿ ದೂರುವರೆನ್ನ | ಕೊಲ್ಲ ಬೇಕೆನುತಲಮ್ಮ ಕೇಳ್ ಗೋಪಮ್ಮ ||೨೪೪||

ನೆರೆಮನೆಯೊಳ್ಕಳುವರೆ ಪಾಲ್ಮೊಸರ್ಗೇನು | ಬರಗೆಟ್ಟು ಪೋದುದೇನು |
ಇರುಳು ಪಟ್ಟಣವ ಸಂಚರಿಸಲ್ಕೆನಗೇನು | ಮರುಳಾಟವಾಯ್ತೇನಮ್ಮ | ಗೋಪಮ್ಮ ||೨೪೫||

ಮೀಸಲು ಮೊಸರುಂಡರೆ | ಮಾನವರ್ಗದು | ದೋಷದ ಗುಣವಲ್ಲವೆ |
ಆ ಸುದತಿಯರೆಂದ | ಮಾತಿಗಣ್ಣನ ಕೂಡೆ | ನೀ ಸಾಕ್ಷಿಗಳನು ಕೇಳು | ಆ ಕ್ಷಣದೊಳು ||೨೪೬||

ಕಂದ

ಕಂದನ ನುಡಿಯಂ ಕೇಳ್ದಾ |
ನಂದನ ಸತಿ ಮಗುವ ಮುದ್ದು ಮಾಡುತ್ತಾಗಂ |
ಬಂದರೆ ನಿಮ್ಮನೆಗೀತನ |
ತಂದೆನಗೊಪ್ಪಿಸುವದೆಂದೊಡಂಬಡಿಸಿದಳಾಗಳ್ || ||೨೪೭||

ವಾರ್ಧಕ

ಮಂದಗಾಮಿನಿ ಯಶೋದೆಯ ಮಾತಿಗವರು ನಡೆ |
ತಂದು ಕೃಷ್ಣನ ಹಿಡಿಯಬೇಕೆಂಬ ಮೊದಲವರ |
ಮಂದಿರವ ಪೊಕ್ಕೊಡನೆ ನಲವಿನಿಂದಿಟ್ಟಿರುವ ಬಿಂದಿಗೆಯ ಮೊಸರ ಸುರಿದು ||
ಮುಂದೆ ಪಾಲ್ಮೊಸರು ಬೆಲ್ಲವನಿಟ್ಟ ಠಾವಾವು |
ದೆಂದು ಹುಡುಕಾಡುತಿಹ ಸಮಯದೊಳು ಗೋಪಿಯರು |
ಇಂದಿರಾಪತಿಯನಡ್ಡವಗಟ್ಟಿ ಹಿಡಿದು ಎಳೆ ತಂದರು ಯಶೋದೆಯೆಡೆಗೆ || ||೨೪೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಂದು ಗೋಪಿಯ ಕೈಯೊಳಿದ್ದ ಮು | ಕುಂದನನು ಕಾಣುತ್ತ ಬರಿಗೈ |
ಯಿಂದ ತಾವಿದ್ದಿರವನೀಕ್ಷಿಸು | ತಂದು ಭ್ರಮಿಸಿ ||೨೪೯||

ಮಾತನಾಡದೆ ನಾಚುತಲಿ ಮನ | ಸೋತು ಸುಮ್ಮನೆ ಮನೆಗೆ ಬಂದತಿ |
ಕೌತುಕದ ಶಿಶುವೆನುತ ಕೃಷ್ಣನ | ಪೊಗಳುತಿಹರು ||೨೫೦||

ಕಾರಣೀಕದ ನಂದಗೋಪ ಕು | ಮಾರಕನ ಪಡೆ | ದವರ ಪುಣ್ಯ ವಿ |
ಚಾರವೆಂದೇ ಪೊಗಳುತಿರ್ದರು | ಕೇರಿಯೊಳಗೆ ||೨೫೧||

ರಾಗ ಆನಂದ ಭೈರವಿ ಏಕತಾಳ

ತಪ್ಪಿಸಿಕೊಳ್ಳದ ಹಾಗೆ | ಕಟ್ಟುವ ಸಿಕ್ಕಿದರೆ ಕೈಗೆ |
ಬಾಲನ | ಚಾರು | ಶೀಲನ ||೨೫೨||

ಜಾಗರದೊಳಿರುವ ನಾವು | ಜತನವೆಂದು ಮಾತಾಡುತ್ತ |
ಪೋದರು | ಮನೆಯೊಳ್ | ಕಾದರು ||೨೫೩||

ಕದ್ದು ಮೊಸರು ಬೆಣ್ಣೆ ತುಪ್ಪ | ಮೆದ್ದೋಡಲಾ ಕೃಷ್ಣನ |
ತಡೆದರು | ಎಲ್ಲ | ಹಿಡಿದರು ||೨೫೪||

ರಾಗ ಮಧ್ಯಮಾವತಿ ಅಷ್ಟತಾಳ

ಸಿಕ್ಕಿದ | ಕಳ್ಳ | ಸಿಕ್ಕಿದ | ಇವನ
ಸೊಕ್ಕುಗಳನೆ ಮುರಿ | ದಿಕ್ಕದೆ ಬಿಡೆವು || ಸಿಕ್ಕಿದ ||೨೫೫||

ಬೊಂಬೆಯ ಮದುವೆಯಾಟದೊಳಿರಲಿವ ಬಾಲ |
ನೆಂಬುದಕಾಗಿ ಸುಮ್ಮನೆ ಬಿಟ್ಟೆವು |
ಕಂಬದ ಮರೆಗಾಗಿ ಕರೆದೊಯ್ದೀ ತುರಣಿಯ |
ಚುಂಬಿಸಿ ತುಟಿಕಚ್ಚಲುಚಿತವೇನಮ್ಮ || ಸಿಕ್ಕಿದ ||೨೫೬||

ಮೊಸರು ತುಪ್ಪ ಬಾಳೆಯ ಹಣ್ಣ ಮೆಲುವಾಗ |
ಹಸುಮಗುವೆಂದು ಲಾಲಿಸಿ ಕೊಂಡೆವು |
ನಿಶೆಯೊಳಗಡಗಿ ಬಳಿಗೈತಂದೀ ತರುಣಿಯ |
ಪೊಸಕುಚಗಳ ಮುಟ್ಟಲುಚಿತವೇನಮ್ಮ || ಸಿಕ್ಕಿದ ||೨೫೭||

ಕಣ್ಣಮುಚ್ಚಾಲೆಯಾಡುವ ಎಂದು ಕರೆವಾಗ |
ಸಣ್ಣವನೆಂದು ಸುಮ್ಮನೆ ಬಿಟ್ಟೆವು |
ಕಣ್ವಪುರೀಶ ಶ್ರೀಕೃಷ್ಣ ಈ ತರುಣಿಯ |
ಬೆನ್ನ ಮೇಲೇರಿರಬಹುದೆ ಏನಮ್ಮ ||೨೫೮||

ವಾರ್ಧಕ

ಗೋಪಾಲಕೃಷ್ಣ ಸಿಕ್ಕಿದನಿವನ ಬೆಳಗಾಗೆ |
ಗೋಪಿಯಿದ್ದೆಡೆಗೊದು ಬುದ್ಧಿಕಲಿಸುವೆನೆನುತ |
ಆ ಪುಣ್ಯಚರಿತೆಯರು ಸರಿರಾತ್ರೆಪರಿಯಂತ ಕಾದಿರ್ದರಾ ಬಾಲನ |
ಶ್ರೀಪತಿಯು ಮನೆಗೆ ತಾ ಬಾರದಿರಲು ಯಶೋದೆ |
ತಾಪವನು ನೆರೆತಾಳಿ ಮಗನೆಲ್ಲಿ ಪೋದನೆಂ |
ದಾ ಪುರದ ಕೇರಿಯೊಳಗರಸಿದಳು ಶ್ರೀಹರಿಯ ಗುಣರೂಪಮಂ ಪೊಗಳುತ || ||೨೫೯||

ರಾಗ ರೇಗುಪ್ತಿ ಅಷ್ಟತಾಳ

ರಂಗ ಬಂದನೇ | ಪಾಂಡು | ರಂಗ ಬಂದನೆ |
ರಂಗು ಮಾಣಿಕದ ಹರಳ | ಉಂಗುರದ ಕಯ್ಯ ಬೆರಳ || ಪಲ್ಲವಿ ||

ಸಿರಿಯ ಸೋಲ್ಮುಡಿಯ ಸೌಂ | ದರ್ಯ ಪುಷ್ಪಮಾಲೆಯ |
ಧರಿಸಿ ಕುಂಕುಮವ ಕ | ಸ್ತುರಿಯ ನಾಮ ಹಣೆಯೊಳಿಟ್ಟು || ರಂಗ ||೨೬೦||

ಕೊರಳ ಕೌಸ್ತುಭ ಹಾರ | ಮೆರೆವ ಕರ್ಣಕುಂಡಲದ |
ಕರದಿ ಕಂಕಣ ಪೀತಾಂ | ಬರದುಡಿಗೆಯನುಟ್ಟು || ರಂಗ ||೨೬೧||

ಉರದೊಳೊಪ್ಪುದ ರತ್ನ | ಸರ ವೈಜಯಂತೀಮಾಲೆ |
ಕರದಿ ಕೊಳಲ ಪಿಡಿದ ಕಣ್ವಪುರದ ಗೋಪಾಲಕೃಷ್ಣ ||೨೬೨||

ಕಂದ

ತಂದರೆ ಮಾಳ್ಪೆ ವಿಚಾರವ |
ನೆಂದಾಡಿದ ಮಾತಿಗಾಗಿ ಗೋಪಿಯರಾಗಳ್ ||
ವಂದಿಸಿ ಸಿಕ್ಕಿಹ ನಿನ್ನಯ |
ಕಂದಗೆ ನೀಂ ಬುದ್ಧಿ ಹೇಳೆನುತ್ತಿಂತೆಂದರ್ || ||೨೬೩||

ರಾಗ ಭೈರವಿ ಏಕತಾಳ

ಗೋಪಮ್ಮ | ನಿಮ್ಮ | ಕಂದನ ಕಳ್ಳ ಚಾಡಿಯ ಬಿಡಿಸೇ | ಬೇಡ |
ವೆಂದೊಡಂಬಡಿಸೇ | ದಯ | ದಿಂದ ನಮ್ಮೆಲ್ಲರ ನಡೆಸೇ | ಬೇ |
ಕೆಂಬ ವಸ್ತುಗಳೆಲ್ಲ ಕೊಡಿಸೆ || ಗೋಪಮ್ಮ    || ಪಲ್ಲವಿ ||

ಸುಳ್ಳು ಮಾತಾಡುವಿರಿ ನೀವೆಂದೆ | ಗೋಪಾಲಕೃಷ್ಣ | ಒಳ್ಳೆಯವನೆಂದೆ | ಗುಣದಿ ಹಿಂದೆ |
ದಯ | ಉಳ್ಳಡಿನ್ನಾದರು ಮುಂದೆ | ಇಕೊ | ಕಳ್ಳನ ಒಪ್ಪಿಸಿದೆವು ಇಂದೆ |
ಸಟೆ | ಯಲ್ಲ ಕೈ ಮುಗಿದು ಬೇಡುವದೊಂದೆ || ಗೋಪಮ್ಮ ||೨೬೪||

ಬೆಳಗು ಜಾವದಲಿ ಮೆಲ್ಲಗೆ ಬಂದ | ದಂಪತಿಗಳು ಕೋಣೆ | ಯೊಳಗೆ ಮಲಗಿರೆ ನಾಚಿಕೆಗೊಂಡ |
ನಮ | ಗಳವಲ್ಲ ಪೇಳಲ್ಕಾ ಭಂಡ | ನೋಡ | ಲಿಳೆಯೊಳಗೀತನು ಬಲು ಪುಂಡ |
ಮುದ | ದೊಳ ನಗುತಿರುವನು ದೇವ ಮುಕುಂದ || ಗೋಪಮ್ಮ ||೨೬೫||