ಜನಪದ ದೈವಗಳು ಮನುಷ್ಯರಷ್ಟೇ ಪ್ರಾಚೀನವಾಗಿವೆ. ಭಾರತದಲ್ಲಿ ಕ್ರಿ.ಶ. ಪೂರ್ವ ಏಳನೆಯ ಶತಮಾನಕ್ಕಿಂತ ಪೂರ್ವದಲ್ಲಿಯೇ ದೈವಗಳ ಅಸ್ತಿತ್ವದ  ಬಗೆಗೆ ಪ್ರಸ್ತಾಪ ಬರುತ್ತದೆ. ಪಿತೃದೇವತೆಗಿಂತ ಮಾತೃದೇವತೆಯ ಕಲ್ಪನೆಯೇ ಪ್ರಾಚೀನವಾದುದೆಂಬ ಸತ್ಯ ಪ್ರಾಗೈತಿಹಾಸಿಕ ಉತ್ಖನನಗಳಿಂದ ತಿಳಿದು ಬರುತ್ತದೆ. ಯುರೋಪಿನ ಶಿಲಾಯುಗದ ಉತ್ಖನನಗಳಲ್ಲಿ ಮಾತೃ ದೇವತೆಗಳ ಪ್ರತಿಮೆಗಳೇ ಪ್ರಾಚೀನವಾದವುಗಳಾಗಿವೆ.

ಪಾಶ್ಚಾತ್ಯ ದೇಶಗಳಲ್ಲಿ ಅತ್ಯಂತ ಪ್ರಾಚೀನಕಾಲದ ಮಾತೃದೇವತೆಯ ಮೂರ್ತಿಗಳು ಲಭಿಸಿವೆ. ರಷ್ಯಾದಲ್ಲಿ ಸುಮಾರು ಐವತ್ತು ನೂರು ವರ್ಷಗಳ ಹಿಂದಿನ ಮಾತೃದೈವಗಳ ರೂಪಗಳು ಲಭಿಸಿವೆ. ತುಂಬಾ ಪ್ರಾಚೀನವಾಗಿರುವ ಜನಪದ ದೈವಗಳು ವಿಶ್ವದ ಸಂಸ್ಕೃತಿಯ ಪ್ರತೀಕಗಳಾಗಿವೆ.

ಜನಪದ ದೈವಗಳಲ್ಲಿ ಅನೇಕ ಪ್ರಭೇದಗಳಿವೆ. ಗಂಡು-ಹೆಣ್ಣುಗಳಿಗೆ ಸಂಬಂಧಿಸಿದ ಮಾನವ ಸಂಬಂಧಿ ದೈವಗಳು, ಉಭಯ ಲಿಂಗಸಂಬಂಧಿ ದೈವಗಳು, ಪ್ರಾಣಿ ಸಂಬಂಧಿ-ಪಶುಸಂಬಂಧಿ-ಪಕ್ಷಿಸಂಬಂಧಿ ದೈವಗಳು, ಭೂತಸಂಬಂಧಿ ದೈವಗಳು, ಜಲ-ವಾಯು-ಅಗ್ನಿ ಸಂಬಂಧಿ ದೈವಗಳು ಹೀಗೆ ಪ್ರಭೇದಗಳು ಬೆಳೆದುಕೊಂಡು ಹೋಗುತ್ತವೆ.

ಭಾರತದ ಜನ ಸಮುದಾಯದಲ್ಲಿ ರುದ್ರದೇವತೆಗಳಿವೆ, ಸೌಮ್ಯದೇವತೆಗಳಿವೆ, ಶಕ್ತಿದೇವತೆಗಳಿವೆ. ಗಡಿರಕ್ಷಣಾದೇವತೆಗಳು, ಫಲದೇವತೆಗಳು ಹಾಗೂ ರೋಗನಿವಾರಣಾ ದೇವತೆಗಳು ಗಮನಸೆಳೆಯುತ್ತವೆ. ಸತಿಪದ್ಧತಿಯಿಂದುಂಟಾದ ಮಾಸ್ತಿದೇವತೆಗಳೂ ಇವೆ.

ಜನಪದ ದೈವಗಳನ್ನು ಮನೆದೈವಗಳು, ಕುಲದೈವಗಳು, ಗ್ರಾಮದೈವಗಳು, ಪ್ರಾಂತ ದೈವಗಳು ಮತ್ತು ನಾಡ ದೈವಗಳು – ಎಂದು ವರ್ಗೀಕರಿಸಬಹುದಾಗಿದೆ. ಗ್ರಾಮದೈವಗಳಲ್ಲಿ ಹಾಗೂ ನಾಡದೈವಗಳಲ್ಲಿ ಹೆಣ್ಣುದೈವಗಳೇ ಪ್ರಧಾನಸ್ಥಾನ ಪಡೆದಿವೆ.

ಜನಪದ ದೈವಗಳ ಉಗಮ-ವಿಕಾಸ, ಪ್ರಭೇದಗಳು ಈ ವಿಷಯಗಳಿಗೆ ಸಂಬಂಧಿಸಿದಂತೆ ಇಲ್ಲಿ ಚರ್ಚಿಸಲಾರದೆ, ಜನಪದ ದೈವಗಳ ವಿಶಿಷ್ಟ ಲಕ್ಷಣಗಳನ್ನು ಕುರಿತು ಇಲ್ಲಿ ಅಧ್ಯಯನ ಮಾಡಲಾಗಿದೆ. ಈ ವಿಶಿಷ್ಟ ಲಕ್ಷಣಗಳ ಅಧ್ಯಯನವೇ ಈ ದೇಶದ ವಿಶಿಷ್ಟ ಸಂಸ್ಕೃತಿಗಳ ಅಧ್ಯಯನವಾಗಿದೆ. ಹೀಗಾಗಿ ಜನಪದ ದೈವಗಳ ಬಗೆಗಿನ ಸಾಂಸ್ಕೃತಿಕ ಚರ್ಚೆ ಇಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ.

ಜನಪದ ದೈವಗಳಲ್ಲಿ ಹೆಣ್ಣುದೈವಗಳು ಮತ್ತು ಗಂಡುದೈವಗಳು ಎಂದು ಪ್ರಮುಖವಾಗಿ ವರ್ಗೀಕರಿಸಿ ಆ ಮೂಲಕ ಅವುಗಳ ವಿಶಿಷ್ಟ ಲಕ್ಷಣಗಳನ್ನು ಗುರುತಿಸಬಹುದಾಗಿದೆ. ಜನಪದ ದೈವಗಳ ಪ್ರಮುಖವಾದ ಒಂದು ಲಕ್ಷಣವೆಂದರೆ ಏಕತೆಯಲ್ಲಿ ಅನಂತತೆಯನ್ನು ಕಂಡುಕೊಳ್ಳು ವುದಾಗಿದೆ. ಅದು ಒಂದು ಪ್ರಧಾನ ಸಂಸ್ಕೃತಿಯ ಮೂಲಕ ಅನೇಕ ಉಪಸಂಸ್ಕೃತಿಗಳನ್ನು ಹೊಂದುವ ಮಾದರಿಯದ್ದಾಗಿದೆ. ಎಲ್ಲವನ್ನೂ ಕೂಡಿಸಿ ಒಂದು ಎಂದೆನ್ನುವ ಕೃತ್ರಿಮ ಸಂಸ್ಕೃತಿಗಿಂತ, ಒಂದರಲ್ಲಿಯೇ ಅನೇಕ ಮುಖಗಳನ್ನು ಕಾಣುವ ನೈಜಸಂಸ್ಕೃತಿ – ಸಹಜಸಂಸ್ಕೃತಿ ಗಳನ್ನು ಜಾನಪದ ಹೊಂದಿದೆ. ಎಲ್ಲ ಪಾಠಗಳನ್ನು ಪರಿಷ್ಕರಿಸಿ ಒಂದೇ ಪಾಠ ಶ್ರೇಷ್ಠವೆನ್ನುವ, ಎಲ್ಲ ಹಾಡುಗಳನ್ನು ಕೇಳಿ ಒಂದೇ ಹಾಡು ಮಹತ್ವದ್ದೆನ್ನುವ, ಎಲ್ಲ ದೈವಗಳಲ್ಲಿ ಒಂದೇ ದೈವ ಪ್ರಮುಖವೆನ್ನುವ ಕೇಂದ್ರೀಕೃತ ಸಂಸ್ಕೃತಿಗಿಂತ, ಒಂದು ಪಾಠದಲ್ಲಿ ಅನಂತ ಪಾಠಗಳನ್ನು ಸೃಷ್ಟಿಸಿಕೊಳ್ಳುವ, ಒಂದು ಹಾಡಿನ ಮೂಲಕ ಅನೇಕ ಹಾಡುಗಳನ್ನು ಕಟ್ಟಿಕೊಳ್ಳುವ, ಒಂದು ದೈವದ ಮುಖಾಂತರ ಅನೇಕ ದೈವಗಳನ್ನು ಕಂಡುಕೊಳ್ಳುವ ವಿಕೇಂದ್ರೀಕೃತ ಸಂಸ್ಕೃತಿ ವಿಶಿಷ್ಟ ವಾದುದು. ಜನಪದ ದೈವಗಳು ವಿಕೇಂದ್ರೀಕೃತ ಸಂಸ್ಕೃತಿಯನ್ನು ಹೊಂದಿವೆಯೇ ಹೊರತು ಕೇಂದ್ರೀಕೃತ ಸಂಸ್ಕೃತಿಯಲ್ಲವೆಂಬುದನ್ನು ಗಮನಿಸಬೇಕು. ಒಂದನ್ನು ವಿಸ್ತರಿಸಿ ಹಲವು ಮಾಡುವ ಸಂಸ್ಕೃತಿಗೂ; ಹಲವುಗಳನ್ನು ಕಟ್ಟಿ ಒಂದನ್ನು ಹೇಳುವ ಸಂಸ್ಕೃತಿಗೂ ತುಂಬಾ ವ್ಯತ್ಯಾಸವಿದೆ. ಸೃಜನಶೀಲತೆಯಿದ್ದಾಗ ಮಾತ್ರ ಒಂದರಲ್ಲಿ ಹಲವು ಕಾಣುತ್ತವೆ. ಏಕತೆಯಲ್ಲಿ ಅನಂತತೆ ತುಂಬಿಕೊಳ್ಳುತ್ತದೆ. ಎಲ್ಲವನ್ನೂ ಕೈಬಿಟ್ಟು ಒಂದೇ ಅಂತಿಮವೆಂದು ಹೇಳುವ ಸಂಸ್ಕೃತಿ ಹೆಚ್ಚು ಅಪಾಯಕಾರಿಯಾದುದು. ಇಂತಹ ಅಪಾಯದಿಂದ ಪಾರಾದ ಜನಪದ ದೈವಗಳು ವಿಶಿಷ್ಟ ಲಕ್ಷಣಗಳನ್ನು ಹೊಂದಿ ವೈವಿಧ್ಯಮಯವಾಗಿವೆ. ಈ ವಿಶಿಷ್ಟ ಲಕ್ಷಣಗಳನ್ನು ಜನಪದ ದೈವಗಳ ಉಗಮ ಮತ್ತು ಬೆಳವಣಿಗೆಯಲ್ಲಿಯೇ ಗಮನಿಸಬಹುದಾಗಿದೆ.

ಭಾರತದಲ್ಲಿ ಶಕ್ತಿ ಪೂಜೆ ಅತ್ಯಂತ ಪ್ರಾಚೀನವಾಗಿದೆ. ಕರ್ನಾಟಕದ ಸವದತ್ತಿ ಎಲ್ಲಮ್ಮ, ಮೈಸೂರು ಚಾಮುಂಡಿ, ತಮಿಳುನಾಡಿನ ಮಾರಿಯಮ್ಮ, ಆಂಧ್ರಪ್ರದೇಶದ ಬತ್ತಮ್ಮಾ, ಮಹಾರಾಷ್ಟ್ರದ ಅಂಬಾಭವಾನಿ ಈ ದೇಶದ ಪ್ರಮುಖ ಶಕ್ತಿದೇವತೆಗಳೆನಿಸಿದ್ದಾರೆ. ಭಾರತದ ತುಂಬಾ ಈ ಶಕ್ತಿದೇವತೆಗಳ ಗುಡಿಗಳಿವೆ. ಆದಿಶಕ್ತಿಯ ಭಿನ್ನ-ಭಿನ್ನ ರೂಪಗಳಾಗಿ ಈ ದೈವಗಳು ಗ್ರಾಮಗಳಲ್ಲಿ ಕಾಣಿಸಿಕೊಂಡಿವೆ.

ಎಲ್ಲವ್ವನ ಕ್ಷೇತ್ರಗಳು ಭಾರತದುದ್ದಗಲಕ್ಕೂ ಇವೆ. ಹಿಮಾಚಲ ಪ್ರದೇಶದಲ್ಲಿಯೂ ಎಲ್ಲಮ್ಮನ ಕ್ಷೇತ್ರವಿದೆ. ಈಕೆಯ ಹೆಸರಿನಲ್ಲಿ ಅಲ್ಲೊಂದು ಸರೋವರವಿದ್ದು ಆಕೆ ಅಲ್ಲಿ ಜಲ ಸ್ವರೂಪಿಣೆಯಾದುದು ತಿಳಿದುಬರುತ್ತದೆ. ಮಹಾರಾಷ್ಟ್ರದ ಮಾವೂರು ಗ್ರಾಮದಲ್ಲಿ ಅತ್ಯಂತ ಪ್ರಾಚೀನವಾದ ದೇವೀಪೀಠವೊಂದಿದ್ದು ಅದೂ ಕೂಡ ಎಲ್ಲವ್ವ ದೇವಿಯ ಕ್ಷೇತ್ರವಾಗಿದೆ. ಎಲ್ಲವ್ವ ಅಲ್ಲಿ ಸತಿ ಹೋದಳೆಂದು ಸ್ಥಳ ಪುರಾಣವೊಂದು ಹೇಳುತ್ತದೆ. ಎಲ್ಲವ್ವ ಅಥವಾ ರೇಣುಕೆ ಕಾಶ್ಮೀರದ ಅರಸನ ಮಗಳಾಗಿದ್ದಳೆಂದು ಕೆಲವು ಐತಿಹ್ಯಗಳು ಹೇಳುತ್ತವೆ. ಈ ಹೆಣ್ಣುದೈವಗಳೆಲ್ಲಾ ಮಾತೃಪ್ರಧಾನ ವ್ಯವಸ್ಥೆಯ ಶಾಕ್ತ ಸಂಪ್ರದಾಯದಿಂದ ಹುಟ್ಟಿದವುಗಳಾಗಿವೆ. ಆದಿಶಕ್ತಿಗೆ ಉಗ್ರ ರೂಪವೂ ಇದೆ, ಸೌಮ್ಯ ರೂಪವೂ ಇದೆ. ಹೀಗಾಗಿ ಈ ಶಕ್ತಿ ದೈವಗಳಲ್ಲಿ ಉಗ್ರ ರೂಪದ ದೈವಗಳಿವೆ, ಸೌಮ್ಯ ರೂಪದ ದೈವಗಳಿವೆ. ಕರ್ನಾಟಕದಲ್ಲಿ ಸವದತ್ತಿಯ ಎಲ್ಲವ್ವ, ಗುಡ್ಡಾಪುರ ದಾನವ್ವ, ಬಳ್ಳಾರಿ ದುರ್ಗವ್ವ, ಸಿರಸಂಗಿ ಕಾಳವ್ವ, ಶಿರಸಿ ಮಾರಿಕಾಂಬಿಕಾ, ಕೊಲ್ಲೂರು ಮೂಕಾಂಬಿಕಾ, ಮೈಸೂರ ಚಾಮುಂಡಿ ಇವೆಲ್ಲಾ ಪ್ರಮುಖ ಶಕ್ತಿದೇವತೆಗಳಾಗಿವೆ.

ಒಟ್ಟಾರೆಯಾಗಿ ಭಾರತದ ಶಕ್ತಿದೈವಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಬಹುದಾಗಿದೆ. ಎಲ್ಲವ್ವನ ಪರಂಪರೆಯ ದೈವಗಳು, ಮಾರೆವ್ವನ ಪರಂಪರೆಯ ದೈವಗಳು, ಚಾಮುಂಡಿ ಪರಂಪರೆಯ ದೈವಗಳು ಮತ್ತು ಮಹಾಸತಿ ಪರಂಪರೆಯ ದೈವಗಳು. ಈ ನಾಲ್ಕು ಪರಂಪರೆ ಗಳಲ್ಲಿ ಶಕ್ತಿ ದೈವಗಳು ಹರಡಿಕೊಂಡಿವೆ.

ಕರ್ನಾಟಕದ ಸಂದರ್ಭವನ್ನು ತೆಗೆದುಕೊಂಡರೆ ಎಲ್ಲವ್ವನ ಮುಖ್ಯ ಕ್ಷೇತ್ರ ಸವದತ್ತಿ ಯಾಗಿದ್ದರೂ ಕೂಡ ರಾಜ್ಯದ ಅನೇಕ ಗ್ರಾಮಗಳಲ್ಲಿ ಎಲ್ಲವ್ವನ ಕ್ಷೇತ್ರಗಳಲ್ಲಿವೆ. ಅದೇ ರೀತಿ ಶಿರಸಿಮಾರೆವ್ವ ಅನೇಕ ಊರುಗಳಲ್ಲಿ ನೆಲೆಸಿದ್ದಾಳೆ. ಎಲ್ಲವ್ವನ ಒಂದು ರೂಪದಲ್ಲಿ ಅನೇಕ ರೂಪಗಳನ್ನು ಕಾಣುವ, ಮಾರೆವ್ವ ಒಬ್ಬಾಕೆಯ ಮುಖಾಂತರ ಅನೇಕ ಮಾರೆವ್ವಗಳನ್ನು ಸೃಷ್ಟಿಸಿಕೊಳ್ಳುವ ಶಕ್ತಿಯನ್ನು ಜನಪದರು ಪಡೆದಿದ್ದಾರೆ. ಭಾರತದ ಗ್ರಾಮಗಳಲ್ಲಿ ಸುತ್ತಾಡಿದಾಗ ಅನೇಕ ಹೆಣ್ಣು ದೈವಗಳು ಮಾರೆವ್ವನ ಇಲ್ಲವೆ ಎಲ್ಲವ್ವನ ಪರಂಪರೆಯ ಮುಂದುವರಿಕೆಯಾಗಿ ಕಾಣಿಸುತ್ತವೆ. ಒಬ್ಬ ಶಕ್ತಿದೇವತೆ ಜನಪದರಲ್ಲಿ ನೂರಾರು ರೂಪ ಪಡೆದು, ನೂರಾರು ಐತಿಹ್ಯಗಳನ್ನು ಸೃಷ್ಟಿಸಿಕೊಂಡು, ಆಯಾ ಸ್ಥಳದ ವಿಶಿಷ್ಟತೆಯನ್ನು ಮೈಗೂಡಿಸಿಕೊಂಡು ಗ್ರಾಮದೇವತೆಗಳಾಗಿ, ಪ್ರಾಂತದೇವತೆಗಳಾಗಿ, ನಾಡದೇವತೆಗಳಾಗಿ ಕಾಣಿಸಿಕೊಂಡಿವೆ. ಹೀಗೆ ಏಕರೂಪದಲ್ಲಿ ಅನಂತ ರೂಪಗಳನ್ನು ಪಡೆದುಕೊಳ್ಳುವ ಈ ವಿಶಿಷ್ಟ ಲಕ್ಷಣವನ್ನು ಜನಪದ ದೈವಗಳಲ್ಲಿ ಪ್ರಮುಖವಾಗಿ ನೋಡಬಹುದಾಗಿದೆ.

ಕರ್ನಾಟಕ ರಾಜ್ಯವೊಂದನ್ನೇ ತೆಗೆದುಕೊಂಡರೆ ನೂರಾರು ಹೆಸರಿನ ಹೆಣ್ಣು ದೈವಗಳು ಕಾಣಿಸಿಕೊಳ್ಳುತ್ತವೆ. ಕಬ್ಬಾಳದ ದುರಗಮ್ಮ, ಮಧಗಿರಿ ಮಾರಮ್ಮ, ಹಾಲ್ಕೋಟೆ ಮಾರಮ್ಮ, ಬೆಪ್ಪಳ್ಳಿ ಮಾರಮ್ಮ, ದಂಡಿನ ಮಾರಿ, ಉರಿಮಾರಿ, ಸೀಗುಮಾರಿ, ಉತ್ತನಳ್ಳಿ ಮಾರಿ, ಮೂಕಳ್ಳಿ ಮಾಮಾರಿ, ಬೆಂಕಿ ಮಾರಿ, ಅಗರ ದಿಂಡಿನಮಾರಿ, ಕುಂಟ್ಮಾರಿ, ಕೆಮ್ಮಾರಿ, ಕಿವುಡ್ಮಾರಿ, ಅರಕೇರಿ ಬಿಸಿಲುಮಾರಿ, ಉಳ್ಳೇನಳ್ಳಿ ಮಾರಿ, ಅಂಕಾಲಮ್ಮ, ಕ್ಯಾತಮ್ಮ, ಏಳುನಾಲಗೆ ದುರಗಿ, ದೇವಮ್ಮ, ಮದ್ದೂರಮ್ಮ, ಸಿದ್ಧಮ್ಮ, ಹಟ್ಟಿ ಲಕ್ಷಮ್ಮ, ಚೌಡಮ್ಮ, ಸೀಯಳ್ಳಿ ಕಾಳಮ್ಮ, ಹಾಸನಮ್ಮ, ಹುಂತುರಮ್ಮ, ಬಾಚಳ್ಳಿ ಅಮ್ಮ, ಬ್ಯಾಲಕಮ್ಮ, ಬಿಸಾಳಿಯಮ್ಮ, ಮುದ್ದಮ್ಮ, ಮಾಸ್ತಮ್ಮ, ಹಟ್ಟಿಕಲ್ಲಮ್ಮ, ಹೊಂಬಾಳಮ್ಮ, ಬಾಣಂತಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಕಿಕ್ಕೇರಮ್ಮ, ಗಂಗಮ್ಮ, ಹೊನ್ನಾಲದಮ್ಮ, ದೇವೀರಮ್ಮ, ಬೆಟ್ಟದ ಚಿಕ್ಕಮ್ಮ, ಮಹದೇವಮ್ಮ, ಮೊಗನಮ್ಮ, ಮುತ್ತಮ್ಮ, ಮಾಯಮ್ಮ, ಹುಚ್ಚಮ್ಮ, ಮಸಣಮ್ಮ, ಕೆಂಚಮ್ಮ, ಮಂಚಮ್ಮ, ಅಲಕಮ್ಮ, ಮರುಗಮ್ಮ, ರಾಕಾಸಮ್ಮ, ಕಗ್ಗಲಿಯಮ್ಮ, ಲಕ್ಕಮ್ಮ, ಚಿಕುದೇವಿ, ಮೂಗೂರು ತಿಬ್ಬಾದೇವಿ, ಕಲ್ಲೂರ ಮಲ್ಲುಗದೇವಿ, ಮುಡಗುಂಡದ ಮುಳ್ಳಾಚಿ, ಹುಚ್ಚನಳ್ಳಿ ಉರಿಕಾತಿ, ಬನ್ನೂರ ಹ್ಯಾಮದ್ರಿ, ಉತ್ತನಳ್ಳಿ ಉರುಕಾತಿ, ಗೊಂಡನಳ್ಳಿ ಗೊತ್ತುಗಾಕಿ, ಕೊಡಗಿನ ಮಮ್ಮಾಯಿ, ಪಿರಿಯಾಪಟ್ಟಣದ ಬರಿಮಸಣೆ, ದೂರದ ದುಬ್ಲಮ್ಮ, ಬಂಡಿ ಮಾಕಾಳಿ, ಏಕನಾಥೇಶ್ವರಿ, ಅಣ್ಮಮ್ಮ, ಕಬ್ಬಾಳಮ್ಮ, ಉಡಸಲಮ್ಮ, ಪಟ್ಟಲದಮ್ಮ, ಕಾಳಗಟ್ಟಮ್ಮ, ಕುದುರಮ್ಮ, ಹುಲಿಕೇರಮ್ಮ, ಮುಳುಕಟ್ಟಮ್ಮ, ಸುಗುಜಾಲಮ್ಮ, ದಂಡಮ್ಮ, ಪ್ಲೇಗಮ್ಮ, ಸೀತಾಳಮ್ಮ, ಕೋಲಾರಮ್ಮ, ಸಪ್ಲಮ್ಮ, ಕರಗಮ್ಮ, ಚೇಳೂರಮ್ಮ, ನಾಣ್ಚಾರಮ್ಮ, ಉಜ್ಜನಿ ಚೌಡಮ್ಮ, ಹುಲಿಯೂರಮ್ಮ, ಬಂಡಳ್ಳಮ್ಮ, ಚಿನ್ನಾಗರದಮ್ಮ, ಸಿಡುಬಿನಮ್ಮ, ಹಳೇಮಾರಮ್ಮ, ಆಲದ ಮರದಮ್ಮ, ಸತ್ಯಮ್ಮ, ಗಿಡದಮ್ಮ, ಹುತ್ತಮ್ಮ, ಕೆರೆಚೌಡಮ್ಮ, ತಿಪ್ಪಗಟ್ಟಮ್ಮ, ಗಂಗಿಮಾಳಮ್ಮ, ಕಂಬದಮ್ಮ, ಬಿಸಲಮ್ಮ, ಬರಗೇರಮ್ಮ, ಬೆಸ್ತರಗಂಗಮ್ಮ, ಬುಕ್ಕಮ್ಮ ಚೌಡೇಶ್ವರಿ, ಚಾಮುಂಡಿ, ಕೊಲ್ಲೂರ ಮುಕಾಂಬಿಕೆ – ಇವೆಲ್ಲಾ ದಕ್ಷಿಣ ಕರ್ನಾಟಕದ ಹೆಣ್ಣು ದೈವಗಳಾಗಿವೆ.

ಸವದತ್ತಿ ಎಲ್ಲವ್ವ, ದ್ಯಾಮವ್ವ, ದುರಗವ್ವ, ಹುಲಿಗೆವ್ವ, ಸತ್ಯವ್ವ, ಕರಿಯವ್ವ, ಶಬಣವ್ವ, ಮಲ್ಲವ್ವ, ಸೆಟಿಗೆವ್ವ, ಲಕುಮವ್ವ, ಕುಮುದವ್ವ, ಕಾಳವ್ವ, ತಿಪ್ಪವ್ವ, ಕಲ್ಲವ್ವ, ಚಿನ್ನಮ್ಮ, ಹೊನ್ನಮ್ಮ, ಹಲಗೇರಮ್ಮ, ಕಬ್ಬಾಳಮ್ಮ, ಉಳ್ಳುಮರದಮ್ಮ, ಬೇವಿನಮರದಮ್ಮ, ಮಾರೆಮ್ಮೆ, ಮೂಕಮ್ಮ, ತುಳಜಮ್ಮ, ಚಿಂಚನಸೂರ ಮಾಪುರ ತಾಯಿ, ಮಾತಂಗಿ, ಚೌಡಿ, ಭದ್ರಕಾಳಿ, ಬಾದಾಮಿ ಬನಶಂಕರಿ, ಈ ಮುಂತಾದ ಹೆಣ್ಣು ದೈವಗಳು ಉತ್ತರ ಕರ್ನಾಟಕ ಪ್ರದೇಶದಲ್ಲಿ ಪೂಜೆಗೊಳ್ಳುತ್ತವೆ.

ಕಾಳಮ್ಮ, ತೊಳಸಮ್ಮ, ಸೂರ್ಯಮ್ಮ, ನೀಲಮ್ಮ, ಸಿರುಸೇಲಮ್ಮ, ಜಕ್ಕವ್ವ, ಮಾರಿಕಾಂಬ, ಪಿಲಿಚೌಂಡಿ ಧೂಮಾವತಿ, ಚೌಂಡಿ, ರಕ್ತೇಶ್ವರಿ, ಸಿರಿ ಈ ಮುಂತಾದ ಹೆಣ್ಣು ದೈವಗಳು ಕರಾವಳಿ ಪ್ರದೇಶದಲ್ಲಿ ಪ್ರಚಲಿತದಲ್ಲಿದ್ದರೆ; ಪಾಕತ್ತಮ್ಮ, ಪೂವದಮ್ಮ, ಕಾವೇರಮ್ಮ, ದಬ್ಬಚ್ಚವ್ವೆ, ಭದ್ರಕಾಳಿ ಈ ಮೊದಲಾದ ಹೆಣ್ಣು ದೈವಗಳು ಕೊಡಗು ಜಿಲ್ಲೆಯಲ್ಲಿ ನೆಲೆಸಿವೆ.

ಹೆಣ್ಣು ದೈವಗಳೇ ಪ್ರಧಾನವಾಗಿರುವ ಜಾನಪದರ ಬದುಕಿನಲ್ಲಿ ಗಂಡುದೈವಗಳ ಅಸ್ತಿತ್ವವೂ ಅಲ್ಲಲ್ಲಿ ಇರುವುದನ್ನು ಕಾಣಬಹುದಾಗಿದೆ. ದಕ್ಷಿಣ ಕರ್ನಾಟಕದ ಕಡೆ ಮಾದೇಶ್ವರ, ಭೈರವೇಶ್ವರ, ಮತ್ತಿಕಾಳೇಶ್ವರ, ಮುನೇಶ್ವರ, ಕೊಟ್ರೇಶ್ವರ, ಭೀಮೇಶ್ವರ, ನಂಜುಂಡೇಶ್ವರ, ಸಿದ್ಧೇಶ್ವರ, ಹಿಡಂಬೇಶ್ವರ, ಧವಳೇಶ್ವರ, ಚೋಳೇಶ್ವರ, ಪಾತಾಳೇಶ್ವರ, ಕೆಂಚೇಶ್ವರ, ಬಾಳಿಕಾಯಿ ಈಶ್ವರ, ಜುಂಜಪ್ಪ, ಬೀರಪ್ಪ, ಮುತ್ತಪ್ಪ, ತಿಮ್ಮಪ್ಪ, ನಿಂಗಯ್ಯ, ಜೋಗಪ್ಪ, ಆಂಜನೇಯ, ಬಿಳಿಗಿರಿರಂಗ, ಬಿಸಲಪ್ಪ, ಭೈರವ, ಮಂಟೇಸ್ವಾಮಿ, ಬ್ಯಾಟರಾಯ ಸ್ವಾಮಿ, ಯುಗ್ಗಪ್ಪಸ್ವಾಮಿ ಈ ಮೊದಲಾದ ಗಂಡು ದೈವಗಳು ಪ್ರಚಲಿತದಲ್ಲಿವೆ. ಉತ್ತರ ಕರ್ನಾಟಕದಲ್ಲಿ ಮೈಲಾರಲಿಂಗ, ಜೋಕುಮಾರ, ಭರಮಪ್ಪ, ಬೂದಲಪ್ಪ, ಬಟ್ಟಪ್ಪ, ಚಿಕ್ಕಪ್ಪ, ಕಂಬದಪ್ಪ, ಪಲ್ಲೆಪ್ಪ, ಈರಭದ್ರ, ಸಿದ್ಧರಾಮ, ಬಸವಣ್ಣ, ಉಳವಿಬಸವಣ್ಣ, ಶರಣಬಸವಣ್ಣ, ಹಮಿಗೆಜ್ಜ, ಗವಿಸಿದ್ಧಪ್ಪಜ್ಜ, ಗುಡ್ಡದಮಲ್ಲ, ಗುದ್ನೆಪ್ಪ, ಅಳೆಪ್ಪ, ಕೂಲಳ್ಳಿ ಬಸಣ್ಣ, ಕೊಟ್ರಬಸಣ್ಣ, ಹನುಮಂತ, ಮಾಳೇಶ್ವರ, ನಗರೇಶ್ವರ ಈ ಮುಂತಾದ ಗಂಡು ದೈವಗಳು ಕಾಣಿಸಿಕೊಳ್ಳುತ್ತವೆ.

ಕರಾವಳಿ ಪ್ರದೇಶದಲ್ಲಿ ಪಂಜುರ್ಲಿ, ಜಟ್ಟಿಂಗ, ಮಾಳಿಂಗರಾಯ, ಭರಮದೇವರು, ಅಣ್ಣಪ್ಪ, ಗುತ್ತು, ಬಂಟಂ, ನಾರಳತ್ತಾಯ, ಬೊಬ್ಬರ್ಯ, ನೀಚ, ಕುಕ್ಕಿನಂತಾನು, ತನಿಮಾನಿಗ, ಉಳ್ಳಾಲಿ,  ಮಗಂದ್ರಾಯ, ಜುಮಾದಿ, ಕೊಡಮಂತಾಯ, ಕಲ್ಕುಡ, ಕಲ್ಲುರ್ಟಿ, ಚಟ್‌ಗ, ಜಾರಂದ್ರಾಯ, ಬಬ್ಬು ಈ ಮೊದಲಾದ ಗಂಡು ದೈವಗಳಿದ್ದರೆ, ಕೊಡಗು ಜಿಲ್ಲೆಯಲ್ಲಿ ಇಗ್ಗುತ್ತಪ್ಪ, ಅನ್ಯುಪ್ಪ, ಮುತ್ತಪ್ಪ, ಪಾತಾಳಮೂರ್ತಿ, ಮಂದಣಮೂರ್ತಿ, ಕುಟ್ಲಿಪಾತ ಹೆಸರಿನ ಗಂಡು ದೈವಗಳಿವೆ.

ಸಾವಿರಾರು ಸಂಖ್ಯೆಯಲ್ಲಿರುವ ಈ ಜನಪದ ದೈವಗಳಿಗೆ ಪ್ರಾದೇಶಿಕ ವಿಶಿಷ್ಟತೆಯ ಗುಣಲಕ್ಷಣಗಳಿವೆ. ಅವುಗಳಲ್ಲಿ ಕೆಲವು ಪ್ರಮುಖ ಲಕ್ಷಣಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದೆ. ಈ ದೈವಗಳ ಲಕ್ಷಣಗಳನ್ನು ಎರಡು ರೀತಿಯಿಂದ ಗಮನಿಸಬಹುದಾಗಿದೆ. ಒಂದು ಅವುಗಳ ಐತಿಹ್ಯ – ಆಚರಣೆಗಳ ಮೂಲಕ ಈ ದೈವಗಳ ವಿಶಿಷ್ಟ ಲಕ್ಷಣಗಳನ್ನು ಕಂಡುಕೊಳ್ಳ ಬಹುದಾದರೆ, ಮತ್ತೊಂದು ಜನಪದರ ಸೃಜನಶೀಲ ರಚನೆಗಳಲ್ಲಿ ಅಂದರೆ ಜನಪದ ಕಾವ್ಯದಲ್ಲಿ ಈ ಲಕ್ಷಣಗಳನ್ನು ಕಾಣಬಹುದಾಗಿದೆ.

ಜನಪದ ದೈವಗಳ ವಿಶಿಷ್ಟ ಲಕ್ಷಣಗಳನ್ನು ಈ ಅಂಶಗಳ ಮೂಲಕ ಕಂಡುಕೊಳ್ಳ ಬಹುದಾಗಿದೆ. ಜನಪದ ದೈವಗಳ ವಾಸಸ್ಥಾನ, ಅವುಗಳ ಸ್ವರೂಪ, ವೇಷಭೂಷಣ, ವಾಹನ-ವಾದ್ಯ-ಲಾಂಛನ, ಪಾನೀಯ-ಆಹಾರ-ಪೂಜೆ-ಜಾತ್ರೆ-ಬಲಿ, ಆಚರಣೆಗಳು, ಫಲಾಫಲ, ಸಂಬಂಧಗಳು, ಸಾಂಸ್ಕೃತಿಕ ಸಂಘರ್ಷ, ಸಮನ್ವಯತೆ ಈ ಅಂಶಗಳನ್ನು ಸೂಕ್ಷ್ಮವಾಗಿ ಬಿಚ್ಚುತ್ತಾ ಹೋದರೆ ಜನಪದ ದೈವಗಳ ವಿಶಿಷ್ಟ ಲಕ್ಷಣಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ಈ ಜನಪದ ದೈವಗಳ ಆಚರಣೆಗಳೊಂದಿಗೆ ಶಿಷ್ಟದೈವಗಳ ಆಚರಣೆಗಳನ್ನು ಮುಂದಿಟ್ಟು ಕೊಂಡು ತೌಲನಿಕವಾಗಿ ನೋಡಿದರೆ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತವೆ. ಇಲ್ಲಿ ಜನಪದ ದೈವಗಳ ವಿಶಿಷ್ಟ ಲಕ್ಷಣಗಳನ್ನು ಮಾತ್ರ ಗುರುತಿಸಲು ಪ್ರಯತ್ನಿಸಲಾಗಿದೆ.

ಜನಪದ ಹೆಣ್ಣು ದೈವಗಳು – ಗಂಡು ದೈವಗಳ ಆಚರಣೆ-ಆರಾಧನೆಯ ಪ್ರಸಂಗಗಳು ಬೇರೆ-ಬೇರೆಯಾಗಿಯೇ ಇರುವುದರಿಂದ ಇಲ್ಲಿ ಈ ಎರಡೂ ದೈವಗಳ ವಿಶಿಷ್ಟ ಲಕ್ಷಣಗಳನ್ನು ಪ್ರತ್ಯೇಕವಾಗಿಯೇ ಕೊಡಲಾಗಿದೆ. ಕೊನೆಯಲ್ಲಿ ಇವೆರಡೂ ವರ್ಗದ ದೈವಗಳಲ್ಲಿರಬಹುದಾದ ಸಂಬಂಧಗಳನ್ನು ಕುರಿತಂತೆ ವಿಶ್ಲೇಷಿಸಲಾಗಿದೆ. ಇಂತಹ ಒಂದು ಚರ್ಚೆಯ ಮೂಲಕ ಜಾನಪದ ಸಂಸ್ಕೃತಿಯ ಪರಂಪರೆಯನ್ನು ಗುರುತಿಸಿಕೊಳ್ಳಬಹುದಾಗಿದೆ.