ಹಸಿರುಮನೆ ಅನಿಲಗಳ ದಟ್ಟೈಸುವಿಕೆಯು ಹೆಚ್ಚುತ್ತಿರುವುದರ ಪರಿಣಾಮವಾಗಿ ಜಾಗತಿಕ ಸರಾಸರಿ ಉಷ್ಣಾಂಶದ ಏರಿಕೆ ವೇಗಗೊಳ್ಳುವ ಸಾಧ್ಯತೆ ಇದೆ. ಕೆಳಗಿನ ರೇಖಾಚಿತ್ರದಲ್ಲಿ ಕಾಣುವಂತೆ ಉಷ್ಣಾಂಶದ ಲಂಬ ರೇಖೆಯು ತೋರಿಸುವ ಅಂದಾಜಿನ ಪ್ರಕಾರ ಸರಾಸರಿ ಜಾಗತಿಕ ಮೇಲ್ಮೈ ಉಷ್ಣಾಂಶವು ಮುಂದಿನ ಐವತ್ತು ವರ್ಷಗಳಲ್ಲಿ ೨.೫ ಡಿಗ್ರಿ ಸೆ. ಮತ್ತು ಮುಂದಿನ ಶತಮಾನದಲ್ಲಿ ೧.೪ ರಿಂದ ೫.೮ ಡಿಗ್ರಿ ಸೆ.ಗೆ ಏರುವ ಸಾಧ್ಯತೆ ಇದೆ. ಇದು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿರುತ್ತದೆ. ಹವಾಗುಣದ ತಾಪಮಾನ ಹೆಚ್ಚುತ್ತಾ ಹೋದಂತೆ ತೇವಾಂಶ ಆವಿಯಾಗಿ ಹೋಗುವಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಜಾಗತಿಕ ಸರಾಸರಿ ಮಳೆ ಪ್ರಮಾಣ ಹೆಚ್ಚುತ್ತದೆ. ಹಲವು ಪ್ರದೇಶಗಳಲ್ಲಿ ಮಣ್ಣಿನ ತೇವಾಂಶ ಕಡಿಮೆಯಾಗುತ್ತದೆ ಹಾಗೂ ತೀವ್ರ ಸ್ವರೂಪದ ಮಳೆಗಾಳಿಗಳು ಮತ್ತೆ ಮತ್ತೆ ಬರುವ ಸಾಧ್ಯತೆ ಉಂಟಾಗುತ್ತದೆ. ಕ್ರಮೇಣ ಉಂಟಾಗಿರುವ ಜಾಗತಿಕ ತಾಪಮಾನ ಏರುವಿಕೆಯ ಪ್ರಮಾಣವನ್ನು ಚಿತ್ರ ೧ ರಲ್ಲಿ ಕೊಡಲಾಗಿದೆ.

.. ವಿವಿಧ ಮೂಲಗಳಿಂದ ಹಸಿರುಮನೆ ಅನಿಲಗಳು ಬಿಡುಗಡೆಯಾಗುವಿಕೆ

 

ವಿವಿಧ ಮೂಲಗಳಿಂದ ಹಸಿರುಮನೆ ಅನಿಲಗಳು ಬಿಡುಗಡೆಯಾಗುವಿಕೆಯನ್ನು (೨೦೦೭) ಚಿತ್ರ ೨ರಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪ್ರಕಾರ ಕೊಡಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ವಾರ್ಷಿಕವಾಗಿ ಬಿಡುಗಡೆಯಾಗುವ ಹಸಿರುಮನೆ ಅನಿಲಗಳ ಬಿಡುಗಡೆ 

.೨ ಹಸಿರುಮನೆ ಅನಿಲಗಳೆಂದರೇನು?

ಹಸಿರುಮನೆ ಅನಿಲಗಳು ಭೂಮಿಯ ಪರಿಸರದಲ್ಲಿದ್ದು ಸೂರ್ಯನಿಂದ ಶಕ್ತಿಯನ್ನು ಪಡೆದುಕೊಂಡು ಭೂಮಿಯ ವಾತಾವರಣದಲ್ಲಿ ನೆಲೆಗೊಳಿಸುತ್ತವೆ. ಪ್ರಾಕೃತಿಕವಾಗಿ ಕಾಣವು ಹಸಿರುಮನೆ ಅನಿಲಗಳೆಂದರೆ, ನೀರಿನ ಆವಿ, ಓಜೋನ್‌(O3) (ವಾತಾವರಣದ ಮೇಲ್ಮೈನ ಗಟ್ಟಿ ಆಮ್ಲಜನಕದ ಮೇಲ್ಪದರ), ಇಂಗಾಲದ ಡೈಆಕ್ಸೈಡ್‌(CO2), ಮೀಥೇನ್‌(CH4) ಮತ್ತು ನೈಟ್ರಸ್‌ಆಕ್ಸೈಡ್‌(N2O). ಮಾನವನಿಂದ ಉತ್ಪಾದಿತವಾದ ಹಸಿರುಮನೆ ಅನಿಲಗಳ ಬಿಡುಗಡೆ ಬಗ್ಗೆ ಆತಂಕವಿರುವುದಾದರೂ ನೈಸರ್ಗಿಕವಾಗಿ ಬಿಡುಗಡೆಯಾಗುವ ಅನಿಲಗಳಾದರೂ ಕೊನೆಯ ಪಕ್ಷ ಉಪಯುಕ್ತಕರವಾಗಿವೆ. ಅವುಗಳಿಲ್ಲದೆ ಹೋಗಿದ್ದಲ್ಲಿ ಭೂಮಿಯ ಸರಾಸರಿ ತಾಪಮಾನವು ಈಗಿರುವುದಕ್ಕಿಂತ ೩೩ ಡಿಗ್ರಿ ಸೆ. ನಷ್ಟು ಕಡಿಮೆಯಾಗಿರುತ್ತಿತ್ತು. ಈ ಕಡಿಮೆಯಾಗುವುದರಿಂದ ಸುಮಾರು ೧೫ ಡಿಗ್ರಿ ಸೆ. ತಾಪಮಾನವುಂಟಾಗಿ ಭೂಮಿಯಲ್ಲಿ ಜೀವಿಗಳು ಬದುಕಿ ಉಳಿಯದಂತಹ ವಾತಾವರಣ ನಿರ್ಮಾಣವಾಗುತ್ತಿತ್ತು. ದುರದೃಷ್ಟವಶಾತ್‌ಮನುಷ್ಯನಲ್ಲಿ ಪರಿಸರದ ಬಗ್ಗೆ ಕಾಳಜಿವಹಿಸುವಿಕೆಯಲ್ಲಿ ಬಹು ದೊಡ್ಡ ಕೊರತೆ ಕಂಡುಬರುತ್ತಿದೆ. ಭೂಮಿಯ ವಾತಾವರಣದಲ್ಲಿ ನೈಸರ್ಗಿಕ ಅಥವಾ ಉಪಯುಕ್ತಕರ ಹಸಿರುಮನೆ ಅನಿಲಗಳು ಕಂಡುಬರುವಂತೆಯೇ ಮಾನವನಿಂದ ಉತ್ಪಾದಿತವಾಗುವ ಅನಿಲಗಳ ಪ್ರಮಾಣ ಮತ್ತಷ್ಟು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತಿದ್ದು ಇದರಿಂದ ಜಾಗತಿಕ ತಾಪಮಾನದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತಿದೆ.

ಇಂಗಾಲದ ಡೈಆಕ್ಸೈಡ್‌

ಹಸಿರುಮನೆ ಅನಿಲಗಳಲ್ಲಿ ಬಹಳಷ್ಟು ಪರಿಚಿತವಾದ ಅನಿಲವೆಂದರೆ ಕಾರ್ಬನ್‌ಡೈಆಕ್ಸೈಡ್‌. ಇಂಗಾಲದ ಬಿಡುಗಡೆ ಪದವನ್ನು ಬಹಳಷ್ಟು ಮಟ್ಟಿಗೆ ಹಸಿರುಮನೆ ಅನಿಲ ಬಿಡುಗಡೆ ಪದಕ್ಕೆ ಪರ್ಯಾಯವಾಗಿ ಬಳಸುತ್ತಿರುವುದಕ್ಕೆ ಕಾರಣ ಹಸುರುಮನೆ ಅನಿಲಗಳು ಬಹಪಾಲು ಇಂಗಾಲಮೂಲದವೇ ಆಗಿರುತ್ತವೆ. ಪಳೆಯುಳಿಕೆ ಇಂಧನಗಳು (ತೈಲ, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲು) ಮತ್ತು ಇತರ ಸಾವಯವ ಘನವಸ್ತುಗಳನ್ನು ಉರಿಸುವಾಗ ಹಾಗೂ ಕೆಲವು ರಾಸಾಯನಿಕ ಪ್ರತಿಕ್ರಿಯೆಗಳು (ಉದಾ: ಸಿಮೆಂಟಿನ ತಯಾರಿಕೆ) ನಡೆಯುವಾಗ ಇಂಗಾಲದ ಡೈಆಕ್ಸೈಡ್‌ರೂಪುಗೊಳ್ಳುತ್ತದೆ. ಸಸ್ಯಗಳು ಇಂಗಾಲದ ಡೈಆಕ್ಸೈಡನ್ನು ಹೀರಿಕೊಳ್ಳುವುದರಿಂದಲೂ ಪರಿಸರದಲ್ಲಿ ಇಂಗಾಲದ ಡೈಆಕ್ಸೈಡ್‌ನ ನಿವಾರಣೆಯಾಗುತ್ತದೆ. ಮಾನವನಿಂದ ಉತ್ಪಾದಿತವಾದ ಇಂಗಾಲದ ಡೈಆಕ್ಸೈಡ್‌ನ ಬಹುಮಟ್ಟಿನ ಐದು ಮುಖ್ಯ ರೂಪಗಳು ಕೆಳಗಿನಂತಿವೆ:

೧) ಪಳೆಯುಳಿಕೆ ಇಂಧನದ ದಹನ: ತೈಲ, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನ ಉರಿಯುವಿಕೆ.

೨) ಇಂಧನಗಳ ಶಕ್ತಿಯೇತರ ಬಳಕೆ: ರಾಸಾಯನಿಕಗಳ ಬಳಕೆ ಮತ್ತು ರಸ್ತೆ ನಿರ್ಮಾಣದ ವಸ್ತುಗಳು.

೩) ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ: ತಯಾರಿಕೆ ಪ್ರಕ್ರಿಯೆ

೪) ಸಿಮೆಂಟ್‌ತಯಾರಿಕೆ: ತಯಾರಿಕೆ ಪ್ರಕ್ರಿಯೆ

೫) ತ್ಯಾಜ್ಯ ದಹನ: ತ್ಯಾಜ್ಯ ವಸ್ತು ನಾಶಪಡಿಸುವಿಕೆ

.೩ ಜಾಗತಿಕ ತಾಪಮಾನದ ಮೇಲೆ ಇಂಗಾಲದ ಡೈಆಕ್ಸೈಡ್‌ನ ಪರಿಣಾಮಗಳು

ಹಸಿರುಮನೆ ಅನಿಲಗಳಲ್ಲಿ ಬಹುಮುಖ್ಯವಾದ ಏಕೈಕ ಅನಿಲ ಇಂಗಾಲದ ಡೈಆಕ್ಸೈಡ್‌. ಇದು ಶೇ. ೫೫ ರಷ್ಟು ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತದೆ. ಇತರ ಅನಿಲಗಳಲ್ಲಿ ಶೇ. ೨೫ ರಷ್ಟು ಕ್ಲೋರೊಫ್ಲೊರೊಕಾರ್ಬನ್‌ಗಳು, ಶೇ.೧೫ ರಷ್ಟು ಮಿಥೇನ್‌ಹಾಗೂ ಶೆ. ೫ ರಷ್ಟು ನೈಟ್ರಸ್‌ಆಕ್ಸೈಡ್‌ಅನಿಲಗಳು ಕಾರಣವಾಗುತ್ತವೆ. ಹಸಿರುಮನೆ ಪರಿಣಾಮದಲ್ಲಿ ಓಜೋನ್‌ಅನಿಲದ ಪ್ರಮಾಣ ಎಷ್ಟು ಎಂಬುದನ್ನು ಇನ್ನೂ ಕಂಡುಹಿಡಿಯಬೇಕಾಗಿದೆ (IPCC, 2001). ಕಳೆದ ವರ್ಷಗಳಲ್ಲಿ ವಿಶ್ವದಲ್ಲಿ ಕೈಗಾರಿಕಾ ಕ್ರಾಂತಿಯನಂತರ ಇಂಗಾಲದ ಡೈಆಕ್ಸೈಡ್‌ನ ಸಾಂದ್ರತೆಯಲ್ಲಿ ಉಂಟಾದ ವ್ಯತ್ಯಾಸಗಳನ್ನು ಚಿತ್ರ ೩ ರಲ್ಲಿ ತೋರಿಸಲಾಗಿದೆ.

ಜಾಗತಿಕ ಇಂಗಾಲ ಅನಿಲದ ಬಿಡುಗಡೆಗಳಿಗೆ ಹೆಚ್ಚು ಕಾರಣವಾಗಿರುವ ನಾಲ್ಕು ಪ್ರಮುಖ ದೇಶಗಳು ಮತ್ತು ಇತರ ದೇಶಗಳು ಹಾಗೂ ಅವುಗಳ ಶೇಕಡಾವಾರು ಪ್ರಮಾಣಗಳನ್ನು ಚಿತ್ರ ೪ಅನಲ್ಲಿ ಕೊಡಲಾಗಿದೆ. ಕೃಷಿಯಿಂದ ಬಿಡುಗಡೆಯಾಗುವ CO2 ನ ಒಟ್ಟು ಮತ್ತು ಪ್ರತಿ ದೇಶದ ಪ್ರಮಾಣಗಳನ್ನು ಚಿತ್ರ ೪ಆನಲ್ಲಿ ಕೊಡಲಾಗಿದೆ.

 

ಮೀಥೇನ್‌

 

ಸಾಮಾನ್ಯವಾಗಿ ಮೀಥೇನ್‌ಅನಿಲವು ಇಂಗಾಲದಷ್ಟು ಹೆಚ್ಚು ಉತ್ಪಾದನೆಯಾಗುವುದಿಲ್ಲವಾದರೂ ಸಹ ಇದು ಹಸಿರುಮನೆ ಪರಿಣಾಮ ಬೀರುವ ಒಂದು ಮುಖ್ಯ ಅನಿಲವಾಗಿದೆ. ಮೀಥೇನ್‌(CH4) ಅನಿಲವು ಪಳೆಯುಳಿಕೆ ಇಂಧನಗಳ ಉತ್ಪಾದನೆ ಮತ್ತು ಸಾಗಾಟದ ಅವಧಿಯಲ್ಲಿ ಬಿಡುಗಡೆಗೊಳ್ಳುತ್ತದೆ. ಈ ಅನಿಲ ಬಿಡುಗಡೆಯಾಗುವ ಇತರ ಪ್ರಮುಖ ಮೂಲಗಳೆಂದರೆ ಜಾನುವಾರು ಸಾಕಣೆ ಮತ್ತು ಇತರ ಕೃಷಿ ಪದ್ಧತಿಗಳ ಹಾಗೂ ಮಣ್ಣಿನ ಗುಂಡಿಗಳಲ್ಲಿ ಶೇಖರಗೊಳ್ಳುವ ಸಾವಯವ ತ್ಯಾಜ್ಯಗಳ ಕೊಳೆತವಸ್ತುಗಳು. ಜಾಗತಿಕ ತಾಪಮಾನ ಹೆಚ್ಚಿಸುವಲ್ಲಿ ಮೀಥೇನ್‌ಸಾಮರ್ಥ್ಯವನ್ನು ೨೧ ಎಂದು ಹೇಳಲಾಗಿದ್ದು ಇದರ ಅರ್ಥ ಮೀಥೇನ್‌ಅನಿಲವು ಹಸಿರುಮನೆ ಅನಿಲಗಳಲ್ಲಿ ಇಂಗಾಲಕ್ಕಿಂತ ೨೧ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿದೆ.

ಮೀಥೇನ್‌ಅನಿಲದ ಅತಿ ಹೆಚ್ಚಿನ ಪ್ರಮಾಣಕ್ಕೆ ಕೊಡುಗೆ ನೀಡುತ್ತಿರುವ ಐದು ಪ್ರಮುಖ ಅಂಶಗಳು ಕೆಳಗಿನಂತಿವೆ:

. ಮಣ್ಣಿನಲ್ಲಿ ಶೇಖರಣೆಗಳು: ತ್ಯಾಜ್ಯ ವಸ್ತುಗಳು ಹೆಚ್ಚು ಶೇಖರಣೆಯಾಗುವುದು ಎಂದರೆ ಹೆಚ್ಚಿನ ಮೀಥೇನ್‌ಉತ್ಪಾದನೆ.

. ನೈಸರ್ಗಿಕ ಅನಿಲ ಪದ್ಧತಿಗಳು: ನೈಸರ್ಗಿಕ ಅನಿಲವು ಶಕ್ತಿ ಮೂಲವಾಗಿದೆ.

. ಕಲ್ಲಿದ್ದಲಿನ ಗಣಿ: ಕಲ್ಲಿದ್ದಲ್ಲಿನ ಗಣಿ ಪ್ರಕ್ರಿಯೆಯಲ್ಲಿ ಮೀಥೇನ್‌ಬಿಡುಗಡೆಯಾಗುತ್ತದೆ.

. ಗೊಬ್ಬರ ನಿರ್ವಹಣೆ: ಬೇಸಾಯ ಅಥವಾ ತೋಟಗಾರಿಕೆ ಬಳಕೆಗಳಲ್ಲಿ ಗೊಬ್ಬರದ ಉತ್ಪಾದನೆ.

. ತ್ಯಾಜ್ಯ ನೀರಿನ ಉಪಚರಣೆ: ನೀರಿನ ಪುನರ್ ಚಕ್ರೀಕರಣ ಪ್ರಕ್ರಿಯೆ.

ನೈಟ್ರಸ್‌ಆಕ್ಸೈಡ್‌

ನೈಟ್ರಸ್‌ಆಕ್ಸೈಡ್‌ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿಲ್ಲವಾದರೂ, ಇದು ವಾತಾವರಣದ ಮೇಲೆ ಅಪಾಯಕಾರಿ ಪರಿಣಾಮವನ್ನು ಬೀರುತ್ತಿದೆ. ನೈಟ್ರಸ್‌ಆಕ್ಸೈಡ್‌ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳ ಸಂದರ್ಭದಲ್ಲಿ ಹಾಗೂ ಪಳೆಯುಳಿಕೆ ಇಂಧನಗಳ ದಹನದ ಸಂದರ್ಭದಲ್ಲಿ ಬಿಡುಗಡೆಗೊಳ್ಳುತ್ತಿದೆ. ನೈಟ್ರಸ್‌ಆಕ್ಸೈಡ್‌ನ ಜಾಗತಿಕ ತಾಪಮಾನದ ಮೇಲೆ ಬೀರುವ ಪರಿಣಾಮದ ಸಾಮರ್ಥ್ಯ ೩೧೦ ಎಂದು ಹೇಳಲಾಗಿದ್ದು ೩೧೦ ಅಂದರೆ, ಹಸಿರುಮನೆ ಅನಿಲಗಳಲ್ಲಿ ಇಂಗಾಲದ ಡೈಆಕ್ಸೈಡ್‌ಗಿಂತ ೩೧೦ ಪಟ್ಟು ಹೆಚ್ಚು ಸಾಮರ್ಥ್ಯಶಾಲಿಯಾಗಿರುವಿಕೆ. ನೈಟ್ರಸ್‌ಆಕ್ಸೈಡ್‌ಅನ್ನು ಬಿಡುಗಡೆಮಾಡುವ ಐದು ಅತಿ ಮುಖ್ಯ ಪ್ರಕ್ರಿಯೆಗಳು ಕೆಳಗಿನಂತಿವೆ:

. ಕೃಷಿ ಮಣ್ಣು ನಿರ್ವಹಣೆ: ಅತಿ ಹೆಚ್ಚಿನ ಸಾವಯವ ಗುಣದ ಮಣ್ಣಿನ ಬಳಕೆ ಮತ್ತು ಸಾರಜನಕ ಸ್ಥಿರೀಕರಿಸುವ ಬೆಳೆಗಳ ಉತ್ಪಾದನೆ.

. ಪಳೆಯುಳಿಕೆ ಇಂಧನ ದಹನ: ನೈಸರ್ಗಿಕ ಅನಿಲ,  ತೈಲ ಅಥವಾ ಕಲ್ಲಿದ್ದಲಿನ ದಹನ.

. ಗೊಬ್ಬರ ನಿರ್ವಹಣೆ: ಜಾನುವಾರುಗಳ ಜೈವಿಕ ತ್ಯಾಜ್ಯವಸ್ತುಗಳನ್ನು ಬಳಕೆ ಉಪಯುಕ್ತ ಗೊಬ್ಬರವನ್ನಾಗಿ ಪರಿವರ್ತಿಸುವಿಕೆ.

. ನೈಟ್ರಿಕ್‌ಆಮ್ಲ: ರಸಗೊಬ್ಬರ ಉತ್ಪಾದನೆಯಲ್ಲಿನ ಒಂದು ಉಪುತ್ಪನ್ನ.

. ಮಾನವರೊಜ್ಜು: ಮನುಷ್ಯ ವಸತಿಗಳಿಂದ ಬರುವ ಜೈವಿಕ ತ್ಯಾಜ್ಯ ಮತ್ತು ತ್ಯಾಜ್ಯ ನೀರಿನ ಮಿಶ್ರಣ.

ಫ್ಲೋರಿನೇಟೆಡ್‌ಅನಿಲಗಳು

ಹೈಡ್ರೋಫ್ಲೋರೊಕಾರ್ಬನ್‌ಗಳು (HFC), ಹ್ಯಾಲೊಕಾರ್ಬನ್‌ಗಳು (HC) , ಪರ್ ಫ್ಲೋರೊಕಾರ್ಬನ್‌ಗಳು (PFC) ಮತ್ತು ಗಂಧಕದ ಹೆಕ್ಸಫ್ಲೋರೈಡ್‌(SF6) ಅನಿಲಗಳು ವಿವಿಧ ಬಗೆಯ ಕೈಗಾರಿಕಾ ಪ್ರಕ್ರಿಯೆಗಳಿಂದ ಬಿಡುಗಡೆಗೊಳ್ಳುತ್ತವೆ. ಈ ಅನಿಲಗಳು ಪ್ರಕೃತಿಯಲ್ಲಿ ನೈಸರ್ಗಿಕವಾಗಿರುವುದಿಲ್ಲ. ಇವು ಮನುಷ್ಯನ ಚಟುವಟಿಕೆಗಳಿಂದ ಉತ್ಪನ್ನವಾಗುವಂತಹವು. ಇವು ತೀಕ್ಷ್ಣವಾದ ಹಸಿರುಮನೆ ಅನಿಲಗಳಾಗಿರುವುದರಿಂದ ಇವುಗಳನ್ನು ಜಾಗತಿಕ ತಾಪಮಾನ ಹೆಚ್ಚಿಸುವ ಅತಿ ಸಮರ್ಥ ಅನಿಲೊಗಳೆಂದು (High GWP ಅನಿಲಗಳು) ಕರೆಯಲಾಗುತ್ತದೆ. ಉದಾಹರಣೆಗೆ, ಗಂಧಕದ ಹೆಕ್ಸಫ್ಲೋರೈಡ್ ಅನಿಲವು ಸುಮಾರು ೨೩,೯೦೦ ಜಾಗತಿಕ ತಾಪಮಾನ ಹೆಚ್ಚಳ ಸಾಮರ್ಥ್ಯ ಹೊಂದಿದೆ. ಅಂದರೆ SF6 ಅನಿಲವು ಹಸಿರುಮನೆ ಅನಿಲಗಳಲ್ಲಿ ಇಂಗಾಳದ ಡೈಆಕ್ಸೈಡ್‌ಗಿಂತ ೨೪,೦೦೦ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿದೆ.

ನೀರಿನ ಆವಿ (H2O)

ಇದು ಒಂದು ಪ್ರಾಥಮಿಕ ಅನಿಲವಾಗಿದ್ದು ಹೆಚ್ಚು ಪ್ರಭಾವಶಾಲಿ ಹಸಿರುಮನೆ ಪರಿಣಾಮ ಬೀರುತ್ತದೆ. ಉಷ್ಣಾಂಶ ಹೆಚ್ಚುತ್ತಾ ಹೋದಂತೆ ಗಾಳಿಯಲ್ಲಿನ ನೀರಿನ ಹಬೆಯ ಪ್ರಮಾಣವು ಹೆಚ್ಚುವುದರಿಂದ ಇನ್ನಷ್ಟು ಹೆಚ್ಚುವ ಉಷ್ಣಾಂಶವು ಧನಾತ್ಮಕ ಹಿಮ್ಮರಳುವ ಕುಣಿಕೆ ಪ್ರಕ್ರಿಯೆ (ತಾನಾಗಿ ರೂಪುಗೊಳ್ಳುವ ಒಂದು ಚಕ್ರೀಯ ಘಟನೆ) ರೂಪುಗೊಳ್ಳುವುದಕ್ಕೆಕಾರಣವಾಗಿ ತಾಪಮಾನದ ಹೆಚ್ಚಳವನ್ನು ಉಂಟುಮಾಡುತ್ತದೆ.

ಊದಾತೀತ B ವಿಕಿರಣದ ಪಾತ್ರ

ವಾತಾವರಣದಲ್ಲಿನ ಮಾನವಜನಿತ ಕ್ಲೋರೋಪ್ಲೋರೋ ಇಂಗಾಲಗಳು (CFC) ಭೂಗೋಳ ಪರಿವಲಯದ ಸ್ತರೀಯ ಉಂಗುರ (tratospheiric) ದಲ್ಲಿನ ಓಜೋನ್‌ಪದರವನ್ನು ನಾಶಪಡಿಸುತ್ತವೆ. ಇದರಿಂದ ಊದಾತೀತ- B (UV-B) ವಿಕಿರಣವು ಭೂಮಿಯ ಮೇಲ್ಮೈಯನ್ನು ತಲುಪುವ ಪ್ರಮಾಣದ ಮಟ್ಟಗಳು ಹೆಚ್ಚಾಗುತ್ತವೆ (280-320mm) ಓಜೋನ್‌ಪದರದಲ್ಲಿ ಶೇ.೧ ರಷ್ಟು ಕಡಿಮೆಯಾಗುವುದರಿಂದ ಸಮಶೀತೋಷ್ಣ ಅಕ್ಷಾಂಶಗಳಲ್ಲಿ ಜೈವಿಕವಾಗಿ ಪರಿಣಾಮ ಬೀರುವ UV-B ವಿಕಿರಣದಲ್ಲಿ ಸುಮಾರು ಶೇ. ೨ ರಷ್ಟು ಕಡಿಮೆಯಾಗುತ್ತದೆ. UV-B ವಿಕಿರಣವು ಸಸ್ಯ ಬೆಳವಣಿಗೆ ಹಾಗೂ ಸಸ್ಯಗಳಲ್ಲಿನ ಶರೀರಕ್ರಿಯಾಶಾಸ್ತ್ರೀಯ ಮತ್ತು ಜೀವರಾಸಾಯನಿಕ ಪ್ರಕ್ರಿಯೆಗಳ ಮೇಲೆ ಪ್ರತಿಕೂಲಕರ ಪರಿಣಾಮ ಬೀರಬಲ್ಲದ್ದಾಗಿರುತ್ತದೆ.

.೪ ಹಸಿರುಮನೆ ಅನಿಲಗಳನ್ನು ಹೇಗೆ ಕಡಿಮೆಗೊಳಿಸಬಹುದು?

ಮನುಷ್ಯನ ಚಟುವಟಿಕೆಗಳಿಂದ ಉಂಟಾಗುವ ಹಸಿರುಮನೆ ಅನಿಲಗಳ ಪ್ರಮುಖ ಮೂಲಗಳನ್ನು ತಿಳಿದನಂತರ ಮುಂದಿನ ಪ್ರಶ್ನೆ,ಪ್ರತಿಯೊಂದರ ಪರಿಣಾಮಗಳನ್ನು ಕಡಿಮೆ ಮಾಡಲು ಯಾವ ರೀತಿ ಕ್ರಮ ಕೈಗೊಳ್ಳಬಹುದು? ಹಸಿರುಮನೆ ಅನಿಲಗಳ ಸಾಂದ್ರೀಕರಣವನ್ನು ಕಡಿಮೆಗೊಳಿಸುವ ಅತ್ಯುತ್ತಮ ವಿಧಾನಗಳು ಕೆಳಗಿನಂತಿವೆ.

ವಿದ್ಯುಚ್ಛಕ್ತಿ ಉಳಿತಾಯ ಮಾಡಿ

ಬಳಕೆಮಾಡದಿದ್ದಾಗ ವಿದ್ಯುತ್‌ದೀಪಗಳನ್ನು, ವಿದ್ಯುತ್‌ಉಪಕರಣಗಳನ್ನು ಬಂದ್‌ಮಾಡಿ ಇಡಬೇಕು ಮತ್ತು ವಾಹನಗಳಲ್ಲಿ ಚಲಿಸುವ ಬದಲುನಡೆದುಕೊಂಡು ಹೋಗಬೇಕು. ಅಂದರೆ ಕತ್ತಲಿನಲ್ಲಿ ಕುಳಿತು ಕೊಳೆಯಬೇಕು ಅಥವಾ ಪ್ರತಿದಿನ ಮೈಲಿಗಟ್ಟಲೆ ನಡೆದು ಆಯಾಸ ಪಡಬೇಕೆಂದಿಲ್ಲ. ಜೀವನಶೈಲಿಯಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಒಂದು ಉತ್ತಮ ಬದಲಾವಣೆ ತರುವುದು ಸಾಧ್ಯವಿದೆ. ಬಳಕೆ ಮಾಡದಿರುವ ಸಮಯಗಳಲ್ಲಿ ವಿದ್ಯುತ್‌ದೀಪಗಳನ್ನು ಆರಿಸುವುದು, ವಿದ್ಯುತ್‌ಉಪಕರಣಗಳನ್ನು ಸಂಪರ್ಕ ತೆಗೆದಿರಿಸುವುದು ಹಾಗೂ ಹತ್ತಿರವೇ ಇರುವ ಐಸ್‌ಕ್ರೀಂ ಪಾರ್ಲರ್ ನಂತಹ ಜಾಗಗಳಿಗೆ ವಾಹನ ಬಳಸುವ ಬದಲು ನಡೆದು ಹೋಗುವುದು ಸ್ವಲ್ಪವೇ ಸಮಯವನ್ನು ತೆಗೆದುಕೊಳ್ಳುವುದಲ್ಲದೆ ಇದರಿಂದ ನಾವು ತಿಳಿದುಕೊಂಡಿದ್ದಕ್ಕಿಂತ ಹೆಚ್ಚಿನ ವಿದ್ಯುತ್‌ಉಳಿತಾಯವಾಗುತ್ತದೆ.

ನವೀಕರಿಸಬಲ್ಲ ಶಕ್ತಿಯನ್ನ ಬಳಸಲು ಪ್ರಾರಂಭಿಸಿ

ವಿದ್ಯುಚ್ಛಕ್ತಿ ಬಳಕೆಯನ್ನು ಮಿತಗೊಳಿಸುವುದು ಉತ್ತಮ, ಹಾಗೆಯೇ ವಿದ್ಯುಚ್ಛಕ್ತಿಯನ್ನು ಉಳಿತಾಯಗೊಳಿಸಬೇಕಾದ ಅವಶ್ಯಕತೆಯೂ ಇದೆ. ಹಲವು ಬಗೆಯ ಪರ್ಯಾಯ ಶಕ್ತಿ ಬಳಕೆಯ ವಿಧಾನಗಲಿದ್ದು ಅವುಗಳ ಬಗ್ಗೆ ಕೆಲವರಿಗೆ ಗೊತ್ತಿರುವುದಿಲ್ಲ. ಗಾಳಿ, ನೀರು ಅಥವಾ ಸೌರಶಕ್ತಿಗಳನ್ನು ಬಳಸುವುದರಿಂದ ದಹನಕಾರಿ ಇಂಧನಗಳನ್ನು ಬಳಸುವ ಬಗ್ಗೆ ತಿಳಿಯಬೇಕಾಗಿದೆ.

ತ್ಯಾಜ್ಯ ವಸ್ತುಗಳನ್ನು ಮಿತಗೊಳಿಸಿ

ಇದರ ಅರ್ಥ ಯಾವುದೇ ಬಗೆಯ ಅವಕಾಶವಿದ್ದಲ್ಲಿ ತ್ಯಾಜ್ಯವಸ್ತುಗಳನ್ನು ಪುನರ್ ಚಕ್ರಗೊಳಿಸಬೇಕು (Recycling), ಕಡಮೆ ಬಳಸಬೇಕು ಮತ್ತು ಪುನರ್ ಬಳಕೆ ಮಾಡಬೇಕು. ಯಾವುದೇ ಉತ್ಪಾದನೆಯಲ್ಲಿ ತ್ಯಾಜ್ಯವಸ್ತುಗಳುಂಟಾಗುವುದನ್ನು ಕಡಿಮೆಗೊಳಿಸಬೇಕು ಹಾಗು ಅಂತಹ ಉತ್ಪನ್ನಗಳನ್ನು ಪುನರ್ ಬಳಕೆ ಮಾಡಬೇಕು. ಪುನರ್ ಚಕ್ರಗೊಳಿಸುವಲ್ಲಿ ತ್ಯಾಜ್ಯವಸ್ತುಗಳನ್ನು ವಿಘಟಿಸಿ ಬಳಕೆಯೋಗ್ಯ ಉತ್ಪನ್ನಗಳನ್ನು ತಯಾರಿಸಲು ಶಕ್ತಿಯ ಬಳಕೆ ಅವಶ್ಯವಾಗಿ ಹೆಚ್ಚಾಗುವುದಾದರೂ ಸಹ ಇದರಿಂದ ಭೂಸ್ತರಗಳಲ್ಲಿ ತ್ಯಾಜ್ಯವಸ್ತುಗಳು ಶೇಖರವಾಗುವುದನ್ನು ಕಡಿಮೆಗೊಳಿಸಬಹುದಾಗಿದೆ.

.೫ ವಾತಾವರಣದಲ್ಲಿನ ಬದಲಾವಣೆಗಳು

ಸೂರ್ಯನ ಶಕ್ತಿಯ ಭೂಮಿಯ ಮೇಲಿನ ಹವಾಮಾನ ಮತ್ತು ವಾಯುಗುಣವನ್ನು ಚಾಲನೆಗೊಳಿಸುತ್ತದೆ ಹಾಗೂ ಭೂಮಿಯ ಮೇಲ್ಮೈಯಲ್ಲಿ ತಾಪವನ್ನುಂಟುಮಾಡುತ್ತದೆ; ಇದಕ್ಕೆ ಬದಲಾಗಿ ಭೂಮಿಯ ಶಕ್ತಿಯ ತಾಪಮಾನವನ್ನು ಆಕಾಶಕ್ಕೆ ವಿಕಿರಣಗೊಳಿಸುತ್ತದೆ. ವಾತಾವರಣದ ಹಸಿರುಮನೆ ಅನಿಲಗಳಾದ ನೀರಿನ ಆವಿ, ಇಂಗಾಲಾಮ್ಲ ಮತ್ತು ಇತರ ಅನಿಲಗಳು ಹೊರಹೋಗುತ್ತಿರುವ ಭೂಮಿಯ ಸ್ವಲ್ಪಪ್ರಮಾಣದ ಶಕ್ತಿಯನ್ನು ಪಡೆದುಕೊಂಡು ಗಾಜಿನಮನೆಯ ಗಾಜಿನ ಆವರಣದ ಫಲಕಗಳಂತೆ ತಾಪವನ್ನು ಉಳಿಸುಕೊಳ್ಳುತ್ತವೆ. ಇಂತಹ ನೈಸರ್ಗಿಕ ಹಸಿರುಮನೆ ಪರಿಣಾಮವಿಲ್ಲದೆ ಹೋಗಿದ್ದರೆ ಈಗಿರುವುದಕ್ಕಿಂತ ತಾಪಮಾನಗಳು ಇನ್ನೂ ಕಡಿಮೆ ಇರಬಹುದಾಗಿತ್ತು ಹಾಗೂ ಇಂದುಇರುವ ಬದುಕಿನ ಸ್ಥಿತಿಯೇ ಬೇರೆಯಾಗಿರಬಹುದಾಗಿತ್ತು. ಔದ್ಯೋಗಿಕ ಕ್ರಾಂತಿಯು ಪ್ರಾರಂಭವಾದಾಗಿನಿಂದ ವಾತಾವರಣದಲ್ಲಿನ ಸಾಂದ್ರೀಕರಣಗಳಲ್ಲಿ ಇಂಗಾಲದ ಡೈಆಕ್ಸೈಡ್‌ಶೇ. ೩೦ ರಷ್ಟು, ಮೀಥೇನ್‌ಎರಡು ಪಟ್ಟು ಹಾಗೂ ನೈಟ್ರಸ್‌ಆಕ್ಸೈಡ್‌ಶೇ. ೧೫ ರಷ್ಟು ಹೆಚ್ಚಾಗಿವೆ. ವಿಜ್ಞಾನಿಗಳ ಸಾಮಾನ್ಯವಾದ ನಂಬಿಕೆ ಪ್ರಕಾರ ಪಳೆಯುಳಿಕೆ ಇಂಧನಗಳ ದಹನ ಹಾಗೂ ಮಾನವನ ಇತರ ಚಟುವಟಿಕೆಗಳೇ ಇಂಗಾಲದ ಡೈಆಕ್ಸೈಡ್‌ನ ಸಾಂದ್ರೀಕರಣದ ಹೆಚ್ಚಳಕ್ಕೆ ಪ್ರಾಥಮಿಕ ಕಾರಣವಾಗಿದೆ. ಸಸ್ಯಗಳ ಉಳಿಕೆಗಳು ಮತ್ತು ಸಾವಯವ ವಸ್ತುಗಳ ಕೊಳೆಯುವಿಕೆಗಳಿಂದಾಗಿ ಮಾನವ ಚಟುವಟಿಕೆಗಳಿಗಿಂತ ಹತ್ತುಪಟ್ಟು ಹೆಚ್ಚುಇ. ಇಂಗಾಲದ ಡೈಆಕ್ಸೈಡ್‌ಬಿಡುಗಡೆಯಾಗುತ್ತದೆ. ಆದರೆ ಈ ಅನಿಲ ಬಿಡುಗಡೆಗೊಳ್ಳುವಿಕೆಗಳು ಶತಮಾನಗಳಿಂದಲೂ ಭೂಮಿಯ ಮೇಲಿನ ಹಾಗೂ ಸಾಗರದಲ್ಲಿನ ಜೀವಿಗಳಿಂದ ಹೀರಿಕೆಯಾಗುವ ಮೂಲಕ ಕೈಗಾರಿಕಾ ಕ್ರಾಂತಿಯಾಗುವವರೆಗೆ ಸಾಮಾನ್ಯವಾಗಿ ಸಮತೋಲನ ಸ್ಥಿತಿಯಲ್ಲಿಯೇ ಉಳಿದುಕೊಂಡಿದ್ದುವು. ಆದರೆ ಕ್ರಮೇಣ ಈ ಮೂಲಭೂತ ಘಟಕಗಳಡಿಯಲ್ಲಿ ಉಂಟಾದ ವ್ಯತ್ಯಾಸಗಳಿಂದಾಗಿ ವಿವಿಧ ಬಗೆಯ ನಕ್ಷಾತ್ಮಕ ಲಂಬರೇಖೆಗಳ ವ್ಯತ್ಯಾಸದ ಆಧಾರದ ಮೇಲೆ ಹಲವು ಬಗೆಯ ಅನಿಲ ಬಿಡುಗಡೆಗಳ ವಿಭಿನ್ನ ಪ್ರಮಾಣಗಳ ನೋಟಗಳು ಕಂಡುಬರಲಾರಂಭಿಸಿವೆ.

ವಾತಾವರಣದ ತಾಪಮಾನದಲ್ಲಿನ ವ್ಯತ್ಯಾಸಗಳು: ಭೂಗೋಳದ ವಾತಾವರಣದಲ್ಲಿನ ವ್ಯತ್ಯಾಸಗಳು ನೈಸರ್ಗಿಕವಾಗಿ ಉಂಟಾಗಿವೆ. ಕೈಗಾರಿಕಾ ಕ್ರಾಂತಿಯ ಅವಧಿಯಲ್ಲಿ ಕೃಷಿ ಮತ್ತು ಕೈಗಾರಿಕಾ ಪದ್ಧತಿಗಳಲ್ಲಿನ ಬದಲಾವಣೆಗಳನ್ನು ತರುವ ಮೂಲಕ ನಾವು ವಾಯುಗುಣ ಮತ್ತು ಪರಿಸರಗಳಲ್ಲಿ ವ್ಯತ್ಯಾಸಗಳನ್ನುಂಟುಮಾಡಲು ಪ್ರಾರಂಭಿಸಿದೆವು. ಕೈಗಾರಿಕಾ ಕ್ರಾಂತಿಗೆ ಮೊದಲು ಮಾನವ ಚಟುವಟಿಕೆಗಳು ವಾಯುಗುಣದ ಪರಿಸರದಲ್ಲಿ ಬಹು ಕಡಿಮೆ ಅನಿಲಗಳನ್ನು ಬಿಡುಗಡೆಗೊಳಿಸುತ್ತಿದ್ದವು. ಆದರೆ, ಈಗ ಜನಸಂಖ್ಯಾ ಬೆಳವಣಿಗೆಯೊಂದಿಗೆ, ಪಳೆಯುಳಿಕೆ ಇಂಧನ ದಹನ ಹಾಗೂ ಅರಣ್ಯ ವಿನಾಶಗಳ ಮೂಲಕ ನಾವು ನಮ್ಮ ವಾಯುಗುಣದಲ್ಲಿನ ಅನಿಲಗಳ ಮಿಶ್ರಣದರೂಪವನ್ನೇ ಬದಲಾಯಿಸುತ್ತಿದ್ದೇವೆ.

ಹೆಚ್ಚಿನ ತಾಪಮಾನಗಳ ಪರಿಣಾಮ

೧. ಮಧ್ಯಮ ಮತ್ತು ಉನ್ನತ ಮಟ್ಟದ ಅಕ್ಷಾಂಶಗಳಲ್ಲಿನ ಜಾಗತಿಕ ತಾಪಮಾನವು ಬೆಳೆಗಳನ್ನು ಬೆಳೆಯುವ ಋತುಮಾನದ ಅವಧಿಯನ್ನು ಹೆಚ್ಚಿಸಿ, ಬೇಸಿಗೆಯಲ್ಲಿ ಬೆಳೆಗಳನ್ನು ಮುಂಚಿತವಾಗಿ ಬಿತ್ತನೆ ಮಾಡುವಂತೆ ಹಾಗೂ ಮುಂಚಿತವಾಗಿ ಬೆಳೆ ಪಕ್ವವಾಗಿ ಕೊಯ್ಲಿಗೆ ಬರುವಂತಾಗಿದೆ.

೨. ಕೆನಡ ಮತ್ತು ರಷ್ಯಾದಂತಹ ದೇಶಗಳಲ್ಲಿ ಬೆಳೆ ಉತ್ಪಾದನಾ ಕ್ಷೇತ್ರಗಳನ್ನು ಧ್ರುವಪ್ರದೇಶಗಳ ಕಡೆಗೆ ವಿಸ್ತರಿಸುವಂತಾಗಿದೆ.

೩. ಜೈವಿಕ ಪ್ರಕ್ರಿಯೆಗಳಿಗೆ ಅನುಕೂಲಕ್ಕಿಂತ ಹೆಚ್ಚಿನ ಮಟ್ಟಕ್ಕೆ ತಾಪಮಾನ ಏರಿದಾಗ ಬೆಳೆಗಳು ನಿಷೇದಾತ್ಮಕ ಪ್ರತಿಕ್ರಿಯೆ ತೋರುತ್ತವೆ ಹಾಗೂ ಒಟ್ಟು ಬೆಳೆ ಮತ್ತು ಇಳುವರಿ ಪ್ರಮಾಣ ತೀವ್ರ ಕಡಿಮೆಯಾಗುತ್ತದೆ.

೪. ಅಧಿಕ ತಾಪಮಾನದ ಮತ್ತೊಂದು ಪರಿಣಾಮವೆಂದರೆ ಬೆಳೆಗಳ ಶರೀರಕ್ರಿಯಾಶಾಸ್ತ್ರೀಯ ಬೆಳವಣಿಗೆಯ ವೇಗ ಅತಿ ಹೆಚ್ಚಾಗಿ ಶೀಘ್ರ ಪಕ್ವತೆಯುಂಟಾಗುವುದರಿಂದ ಇಳುವರಿ ಕಡಿಮೆಯಾಗುತ್ತದೆ.

.೬ ವಾಯುಗುಣದ ಮೇಲೆ ಜಾಗತಿಕ ಪರಿಣಾಮ

ಪ್ರಾಥಮಿಕ ಹಸಿರುಮನೆ ಅನಿಲಗಳನ್ನು ಇತರ ಸ್ಥಳೀಯ ವಾಯು ಪ್ರದೂಷಕಗಳಾದ ಇಂಗಾಲದ ಮೊನಾಕ್ಸೈಡ್‌, ಸಾರಜನಕದ ಆಕ್ಸೈಡ್‌ಗಳು ಮತ್ತು ದ್ರವೀಭವಿಸುವ ಸಾವಯವ ಸಂಯುಕ್ತಗಳಿಗಿಂತ ಭಿನ್ನವಾದ ಮೂಲ ಪ್ರದೂಷಕಗಳೆಂದು ಪರಿಗಣಿಸಲಾಗಿದೆ. ಈ ಮೂಲ ಪ್ರದೂಷಕಗಳು ದೀರ್ಘಕಾಲದವರೆಗೆ ವಾಯು ಪರಿಸರದಲ್ಲಿ ಉಳಿಯಬಲ್ಲವಾಗಿದ್ದು ಬಹುಕಾಲದವರೆಗೆ ವಾಯುವಿನಲ್ಲಿ ಸಂಗ್ರಹಿತವಾಗಿರುತ್ತವೆ. ಮೂಲ ಪ್ರದೂಷಕಗಳು ವಾಯು ಪರಿಸರದಲ್ಲಿ ಚೆನ್ನಾಗಿ ಸಂಮಿಶ್ರವಾಗಿರುತ್ತವೆ. ಇವುಗಳಿಗೆ ಈ ಸಂಮಿಶ್ರಣ ಗುಣವಿರುವುದರಿಂದಾಗಿ, ಹಸರಿಮನೆ ಅನಿಲಗಳು ವಾಯುಪರಿಸರದ ಮೇಲೆ ಬೀರುವ ಪರಿಣಾಮವು ಅವು ಎಲ್ಲಿಯೇ ಬಿಡುಗಡೆ ಆಗಿರಲಿ ಅವುಗಳ ಪರಿಣಾಮ ಮಾತ್ರ ಒಂದೇ ಬಗೆಯಾಗಿರುತ್ತದೆ.

ವಾಯುಪರಿಸರದಲ್ಲಿ ಇದುವರೆಗೆ ಗಮನಿಸಲಾದ ಬದಲಾವಣೆಗಳು ಯಾವುವು?

ಜಾಗತಿಕ ತಾಪಮಾನದ ಹೆಚ್ಚಳವೇ ಈಗ ಪ್ರಸ್ತುತ ಸಮಸ್ಯೆಯಾಗಿದೆ. ಇದರೊಂದಿಗೆ ಹೆಚ್ಚುತ್ತಿರುವ ವಾಯು ಮತ್ತು ಸಮುದ್ರದ ಉಷ್ಣಾಂಶಗಳು, ಹಿಮಪ್ರದೇಶದಲ್ಲಿನ ಮಂಜುಗಡ್ಡೆಗಳ ಕರುಗುವಿಕೆ ಮತ್ತು ಸಮುದ್ರಮಟ್ಟದ ಹೆಚ್ಚಳಗಳು ಹೆಚ್ಚು ಹೆಚ್ಚು ಗಮನಕ್ಕೆ ಬರುತ್ತಿವೆ. ಅದರಲ್ಲೂ ಕಳೆದ ಹನ್ನೆರಡು ವರ್ಷಗಳ (೧೯೯೫-೨೦೦೬) ಅವಧಿಯಲ್ಲಿ ಹನ್ನೊಂದು ವರ್ಷಗಳು ಜಾಗತಿಕ ತಾಪಮಾನ ಏರುವಿಕೆಯಲ್ಲಿ ೧೮೫೦ ರಿಂದ ಗಮನಿಸಲಾದ ಅತಿಹೆಚ್ಚು ತಾಪಮಾನದ ವರ್ಷಗಳಾಗಿ ದಾಖಲಾಗಿವೆ. ಕಳೆದ ೧೦೦ ವರ್ಷಗಳಲ್ಲಿ (೧೯೦೬ ರಿಂದ ೨೦೦೫ರವರೆಗೆ), ಜಾಗತಿಕ ತಾಪಮಾನವು ೦.೭೪ ಡಿಗ್ರಿ ಸೆ.ನಷ್ಟು ಹೆಚ್ಚಳವಾಗಿದೆ. ಜಾಗತಿಕ ಸಮುದ್ರ ಮಟ್ಟವು ೨೦ನೇ ಶತಮಾನದಲ್ಲಿ ೧೭ ಸೆಂ.ಮೀ. ನಷ್ಟು ಹೆಚ್ಚಳವಾಗಿರುವುದಕ್ಕೆ ಭಾಗಶಃ ಕಾರಣ ಹಲವು ಹಿಮಸುರಿಯುವ ಬೆಟ್ಟದ ಪ್ರದೇಶಗಳು ಮತ್ತು ಧ್ರುವ ಪ್ರದೇಶಗಳಿಂದ ಮಂಜುಗಡ್ಡೆಗಳು ಕರಗಿ ಹರಿದಿರುವುದು. ಹೆಚ್ಚಿನ ಪ್ರಾದೇಶಿಕ ಬದಲಾವಣೆಗಳು ಸಹ ಕಂಡುಬಂದಿದ್ದು ಅವುಗಳಲ್ಲಿ ಉತ್ತರ ಧ್ರುವ ಪ್ರದೇಶ (ಆರ್ಕ್‌ಟಿಕ್‌)ದ ಉಷ್ಣಾಂಶಗಳು ಮತ್ತು ಮಂಜುಗಡ್ಡೆ, ಸಮುದ್ರದ ಲವಣತೆ, ಗಾಳಿ ಬೀಸುವಿಕೆ ಮಾದರಿಗಳು, ಬರಗಾಲ, ಮಳೆಬೀಳುವಿಕೆ ಪ್ರಮಾಣ, ಬಿಸಿಗಾಳಿ ಆವರ್ತನತೆ ಹಾಗೂ ಉಷ್ಣವಲಯಗಳಲ್ಲಿನ ಚಂಡಮಾರುತಗಳ ತೀವ್ರತೆಗಳಲ್ಲಿನ ಬದಲಾವಣೆಗಳೂ ಕೂಡ ಸೇರುತ್ತವೆ.

.೭ ಕೃಷಿಯ ಮೇಲೆ ಜಾಗತಿಕ ಪರಿಣಾಮ

ಕೃಷಿ ಮತ್ತು ವಾಯುಗುಣಗಳು ಒಂದರ ಮೇಲೊಂದು ಪರಸ್ಪರ ಅವಲಂಬಿತವಾದವು. ಇವುಗಳ ಪರಸ್ಪರ ಕ್ರಿಯಾನುವರ್ತನೆಗಳು ಉಷ್ಣಾಂಶದಲ್ಲಿನ ವ್ಯತ್ಯಾಸಗಳನ್ನು, ನೀರಿನ ಬೇಡಿಕೆ ಮತ್ತು ಪೂರೈಕೆಗಳಲ್ಲಿನ ವ್ಯತ್ಯಾಸಗಳನ್ನು ಹಾಗೂ ದ್ಯುತಿಸಂಶ್ಲೇಷಣೆ ಮತ್ತು ಉಸಿರಾಟದ ಪ್ರಕ್ರಿಯೆಗಳಿಂದ ಉಂಟಾಘುವ ಇಂಗಾಲದ ಸ್ರಾವಕಗಳನ್ನು ಉಂಟುಮಾಡುತ್ತವೆ. ಮಾನವ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕೃಷಿ ಕಾರ್ಯಗಳಿಂದಾಗಿ ಬಿಡುಗಡೆಯಾಗುವ ಹಸಿರುಮನೆ ಅನಿಲಗಳು ಒಟ್ಟು ಬಿಡುಗಡೆಗೊಂಡ ಅನಿಲಗಳಲ್ಲಿ ಶೆ. ೧೫ ರಷ್ಟು ಭಾಗಕ್ಕೆ ಕಾರಣವಾಗಿವೆ ಎಂದು ಪ್ರಸ್ತುತ ತಿಳಿದುಬಂದಿರುತ್ತದೆ. ತೀವ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಪರಿಣಾಮವಾಗಿ ಜಾಗತಿಕ ಆಹಾರೋತ್ಪಾದನಾ ಸಂಪನ್ಮೂಲಗಳು ಈಗಾಗಲೇ ತೀವ್ರ ಒತ್ತಡಕ್ಕೆ ಗುರಿಯಾಗಿರುವ ಪ್ರಸ್ತುತ ಸಂದರ್ಭದಲ್ಲಿ ಹವಾಗುಣದಲ್ಲಿನ ಬದಲಾವಣೆಗಳು ಮತ್ತು ಕೃಷಿಯ ಪರಸ್ಪರ ಸಂಬಂಧವು ನಿರ್ದಿಷ್ಟವಾದ ಪ್ರಮುಖ ಸಮಸ್ಯೆಯಾಗಿದೆ. ಜಾಗತಿಕ ತಾಪಮಾನದ ಕಾರಣದಿಂದಾಗಿ ಭಾರತ, ಪಾಕಿಸ್ತಾನ ಮತ್ತು ಆಫ್ರಿಕಾದ ಹಾಗೂ ಲ್ಯಾಟಿನ್‌ಅಮೆರಿಕದ ಬಹುಪಾಲು ದೇಶಗಳಲ್ಲಿನ ಬೆಳೆ ಉತ್ಪಾದನೆ ತೀವ್ರವಾಗಿ ಕಡಿಮೆಯಾಗುವ ಸಂಭಾವ್ಯತೆ ಕಂಡುಬರುತ್ತಿದೆ ಎಂದು ಅಂತರ ರಾಷ್ಟ್ರೀಯ ಆರ್ಥಿಕತೆ ಯ ಪೀಟರ್ ಸನ್‌ಸಂಸ್ಥೆ ಮತ್ತು ಅಮೆರಿಕ ಮೂಲದ ಸೆಂಟರ್ ಫಾರ್ ಗ್ಲೋಬಲ್‌ಡೆವಲಪ್‌ಮೆಂಟ್‌ಸಂಸ್ಥೆಯ ಇತ್ತೀಚಿನ ಅಧ್ಯಯನದಿಂದ ವರದಿಯಾಗಿದೆ. ಈ ಅಧ್ಯಯನದಲ್ಲಿ ಮಾಡಿರುವ ಅಂದಾಜಿನ ಪ್ರಕಾರ ಭಾರತದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಆಹಾರೋತ್ಪಾದನೆಯು ಶೇ. ೩೦ ರಿಂದ೪೦ರಷ್ಟು ಇಳಿಮುಖವಾಗಲಿದೆ. ಪ್ರಸ್ತುತ ಶತಮಾನದಲ್ಲಿ ದಕ್ಷಿಣ ಭೂವಲಯದ ಹಲವು ಭಾಗಗಳಲ್ಲಿ ಬೆಳೆ ಉತ್ಪಾದನಾ ಕ್ಷೇತ್ರಗಳು ಮರುಭೂಮಿಗಳಾಗಿ ಪರಿವರ್ತಿತವಾಗುವ ಸಂಭಾವ್ಯತೆ ಇರುವುದಾಗಿಯೂ ಸಹ ಈ ಅಧ್ಯಯನದಲ್ಲಿ ಮುಂಗಾಣಲಾಗಿದೆ. ಆದರೆ ಜಾಗತಿಕ ತಾಪಮಾನದಿಂದಾಗಿ ಅನುಕೂಲ ಪಡೆಯುವ ಕೆಲವೇ ದೇಶಗಳಲ್ಲಿ ಸಿರಿವಂತ ರಾಷ್ಟ್ರವಾದ ಅಮೆರಿಕ, ಕೆನಡ, ರಷ್ಯಾ ಮತ್ತು ಕೆಲವು ಐರೋಪ್ಯ ರಾಷ್ಟ್ರಗಳೂ ಸಹ ಸೇರುತ್ತವೆಂದು ಗ್ರಹಿಸಲಾಗಿದೆ.

ವಾಯು ಪರಿಸರದಲ್ಲಿ ಇಂಗಾಲದ ಡೈಆಕ್ಸೈಡ್‌ಹೆಚ್ಚು ಸಾಂದ್ರವಾಗುತ್ತಿರುವುದರಿಂದ ಬೆಳೆ ಉತ್ಪಾದನೆಗೆ ಅನುಕೂಲವಾಗುತ್ತದೆಂಬ ಊಹೆಯ ಸರಿಯಲ್ಲವೆಂದೂ ಹಾಗೂ ಕ್ರಮೇಣ ಮುಂಬರುವ ವರ್ಷಗಳಲ್ಲಿ ಈ ಭಾವನೆ ಅಳಿಸಿಹೋಗಲಿದೆ ಎಂದೂ ವರದಿ ಮಾಡಲಾಗಿದೆ. ಮುಸುಕಿನ ಜೋಳದಂತಹ ಬೆಳಗಳಿಗೆ ಇಂಗಾಲದ ಡೈಆಕ್ಸೈಡ್‌ನ ಸಾಂದ್ರೀಕರಣದಿಂದ ಅನುಕೂಲವಿರುವುದಿಲ್ಲ. ವಾಯುಗುಣದಲ್ಲಿ ಹೆಚ್ಚಿನ ಇಂಗಾಲದ ಡೈಆಕ್ಸೈಡ್‌ನ ಸಾಂದ್ರೀಕರಣದಿಂದ ಕೆಲವೇ ಬೆಳೆಗಳಿಗೆ ಮಾತ್ರ ಲಾಭವಾಗಲಿದ್ದು ಅದು ಕೇವಲ ಶೇ. ೧೫ ರಷ್ಟು, ಬತ್ತ, ಗೋಧಿ ಮತ್ತು ಸೋಯಾಬೀನ್‌ಗಳು ಮಾತ್ರ ಇಂಗಾಲದ ಡೈಆಕ್ಸೈಡ್‌ಅನಿಲದ ಬಿಡುಗಡೆಯ ಹೆಚ್ಚಳದಿಂದ ಲಾಭ ಪಡೆಯುತ್ತಿವೆಯಾದರೂ ಇದು ಬರುಬರುತ್ತಾ ಕಡಿಮೆಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಸ್ಪಷ್ಟವಾದ ಸೂಚನೆ ದೊರಕಿದ್ದು ಭಾರತದಲ್ಲಿ ಇತ್ತೀಚೆಗೆ ಕಂಡುಬಂದಂತೆ ಗೋಧಿ ಬೆಳೆ ಪಕ್ವವಾಗುವ ಸಮಯದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಿದ ತಾಪಮಾನದಿಂದಾಗಿ ಹಾನಿಯುಂಟಾಗಿರುವುದು ಸ್ಪಷ್ಟವಾಗಿದೆ. ಬಹುವಾರ್ಷಿಕ ನದಿಗಳು ಕ್ರಮೇಣ ಬತ್ತಿಹೋಗುತ್ತಿದ್ದು ಪ್ರಾದೇಶಿಕ ಮಟ್ಟದಲ್ಲಿ ಮಳೆಬೀಳುವ ಪ್ರಮಾಣದಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಮುಂಗಾರು ಮಳೆ ಬೀಳುವ ಕಾಲಮಾನಗಳಲ್ಲಿ ಮತ್ತು ಮಾದರಿಗಳಲ್ಲಿ ವ್ಯತ್ಯಾಸ ಉಂಟಾಗಿದ್ದು ಬರಗಾಲದ ಪ್ರದೇಶಗಳಲ್ಲಿ ಅಧಿಕ ಮಳೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಡಿಮೆಪ್ರಮಾಣದ ಮಳೆ ಬಿದ್ದಿರುವುದು ಕಂಡುಬಂದಿದೆ.

೨೦೦೮ರ ಹೊತ್ತಿಗೆ ಜಾಗತಿಕ ಬೆಳೆ ಉತ್ಪಾದಕತೆಯ ಪ್ರಮಾಣದಲ್ಲಿ ಶೇ. ೩ ರಿಂದ ೧೬ರಷ್ಟು ಕಡಿಮೆಯಾಗಬಹುದೆಂದು ಸಹ ಈ ಅಧ್ಯಯನದಲ್ಲಿ ತಿಳಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಬೆಳೆ ಇಳುವರಿಯು ಶೇ. ೧೬ ರಿಂದ ೨೭ ರಷ್ಟು ಕಡಿಮೆಯಾಗಬಹುದು. ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಸೂಡಾನ್‌ಮತ್ತು ಸೆನೆಜೆಲ್‌ಗಳಲ್ಲಿ ಶೆ. ೫೦ ರಷ್ಟು ಕಡಿಮೆಯಾಗುವ ಸಂಭವವಿದ್ದು ಇಡೀ ಕೃಷಿ ವ್ಯವಸ್ಥೆಯೇ ಏರುಪೇರಾಗಬಹುದೆಂದು ನಿರೀಕ್ಷಿಸಲಾಗಿದೆ.

.೮ ಜಾಗತಿಕ ತಾಪಮಾನದ ಪರಿಣಾಮ

೧) ಹವಾಮಾನ ವೈಪರೀತ್ಯದ ಘಟನೆಗಳು ಉದಾಹರಣೆಗೆ ಅಧಿಕ ಉಷ್ಣಾಂಶದ ಏರುವಿಕೆ, ಬಲವಾದ ಬಿರುಗಾಳಿ, ಬರಗಾಲ, ಹಾನಿಗೊಂಡ ಬೆಳೆಉತ್ಪಾದನೆ.

೨) ಮೇಲೆ ಮೇಲೆ ಉಂಟಾಗುವ ಬರಗಾಲ ನೀರಿನ ಪೂರೈಕೆಗಳನ್ನು ಕಡಿಮೆ ಮಾಡುವುದೇ ಅಲ್ಲದೆ ಸಸ್ಯಗಳಿಗೆ ಹೆಚ್ಚು ನೀರಿನ ಪ್ರಮಾಣ ಅಗತ್ಯವಾಗುವಂತೆ ಮಾಡುತ್ತದೆ.

೩) ಇದರಿಂದ ಮಳೆ ಬೀಳುವಿಕೆ, ಆವಿಯಾಗುವಿಕೆ, ಮಣ್ಣಿನ ಕೊಚ್ಚಿಹೋಗುವಿಕೆ ಮತ್ತು ತೇವಾಂಶ ಸಂಗ್ರಹಣೆಯಲ್ಲಿ ವ್ಯತ್ಯಾಸವಾಗುತ್ತದೆ.

ಸಮುದ್ರಮಟ್ಟದಲ್ಲಿ ಹೆಚ್ಚಳವಾಗುವಿಕೆ

೧) ಜಾಗತಿಕ ತಾಪಮಾನದಿಂದಾಗಿ ಸಮುದ್ರದ ನೀರಿನ ಉಷ್ಣತೆಯಲ್ಲಿ ಹೆಚ್ಚಳದ ಜೊತೆಗೆ ಭೂಮಟ್ಟದ ಹಿಮಗಲ್ಲುಗಳು ಮತ್ತು ಸಮುದ್ರದಲ್ಲಿನ ಮಂಜುಗಡ್ಡೆಗಳ ಭಾಗಶಃ ಕರಗುವಿಕೆಯಿಂದ ಈ ಶತಮಾನದ ಮಧ್ಯಕಾಲದ ಹೊತ್ತಿಗೆ ಸಮುದ್ರದ ಮಟ್ಟದಲ್ಲಿ ಭಾಗಶಃ ಕರಗುವಿಕೆಯಿಂದ ಈ ಶತಮಾನದ ಮಧ್ಯಕಾಲದ ಹೊತ್ತಿಗೆ ಸಮುದ್ರದ ಮಟ್ಟದಲ್ಲಿ ೦.೧ ರಿಂದ ೦.೫ ಮೀಟರ್ ಗಳಷ್ಟು ಏರಿಕೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

೨) ಇಂತಹ ಸಮುದ್ರಮಟ್ಟದ ಏರಿಕೆಯಿಂದ ತಗ್ಗಿನ ತೀರ ಪ್ರದೇಶಗಳಲ್ಲಿನ ಕೃಷಿ ಕಾರ್ಯಗಳಿಗೆ ಹಾನಿಯಾಗಬಹುದೆಂದು ನಿರೀಕ್ಷಿಸಲಾಗಿದೆ. ಉದಾಹರಣೆಗೆ ಈಜಿಪ್ಟ್‌ನ ಕೆಲವು ಭಾಗಗಳು, ಬಾಂಗ್ಲಾದೇಶ, ಇಂಡೊನೇಷ್ಯಾ, ಚೀನಾ, ನೆದರ್ ಲ್ಯಾಂಡ್ಸ್, ಫ್ಲೋರಿಡಾ ಮತ್ತು ಇತರ ತಗ್ಗಿನ ತೀರ ಪ್ರದೇಶಗಳು.

೩) ಈಗಾಗಲೇ ತೊಂದರೆಯಲ್ಲಿರುವ ದುರ್ಬಲ ನೀರು ಹರಿವಿನ ಪ್ರದೇಶಗಳು ನೀರಿನಲ್ಲಿ ಮುಳುಗಿಹೋಗುವ ಸಾಧ್ಯತೆ ಇರುತ್ತದೆ.

ಜಾಗತಿಕ ತಾಪಮಾನದಿಂದ ತೊಂದರೆಗೊಳಗಾಗುವವರು ಯಾರು?

ಜಾಗತಿಕ ತಾಪಮಾನದ ಪರಿಣಾಮಗಳು ಹಲವು ಬಗೆಯವು ಮತ್ತು ತೀವ್ರವಾದವು. ಸಮುದ್ರ ಮಟ್ಟದಲ್ಲಿನ ಏರಿಕೆಯು ಈಗಾಗಲೇ ಹೇಳಿದಂತೆ, ಬಿಸಿನೀರಿನ ಪ್ರಮಾಣ ವಿಸ್ತೃತಗೊಳ್ಳುವುದರಿಂದ ಹಾಗೂ ಧ್ರುವಪ್ರದೇಶಗಳಲ್ಲಿ ಮಂಜುಗಡ್ಡೆ ಕರಗುವುದರಿಂದ ಎರಡೂ ಬಗೆಯಲ್ಲಿ ಉಂಟಾಗುತ್ತಿದೆ. ಕುಡಿಯುವ ನೀರಿನ ಲಭ್ಯತೆಯ ಮೂಲಗಳೂ ಬದಲಾವಣೆಗೊಳ್ಳುತ್ತಿದ್ದು ಹಲವು ದೇಶಗಳಲ್ಲಿ ಮಾನವ ಜನಾಂಗ ಈಗಾಗಲೇ ಕುಡಿಯುವ ನೀರಿನ ತೊಂದರೆಯಲ್ಲಿ ಸಿಲುಕಿದೆ. ಪ್ರಕೃತಿ ವಿಕೋಪಗಳಾದ ಪ್ರವಾಹ, ನೆರೆ, ಬರಗಾಲ ಮತ್ತು ಸುಂಟರಗಾಳಿಗಳು ಹೆಚ್ಚುತ್ತಿದ್ದು ಇವುಗಳಿಂದಾಗುತ್ತಿರುವ ಹಾನಿಯು ಇಡೀ ಮಾನವ ಜನಾಂಗವನ್ನೇ ನಿರ್ಮೂಲಮಾಡುವಂತಹ ಪರಿಣಾಮ ತೋರುತ್ತಿವೆ. ಹಿಮಾಲಯದ ಮಂಜುಗಡ್ಡೆಗಳು ಕರಗಿ ಹರಿಯುವಿಕೆಯಿಂದ ಕುಡಿಯುವ ನೀರಿನ ಸಂಪನ್ಮೂಲದ ಮೇಲೆ ಉಂಟಾಗಬಹುದಾದ ಅನಾಹುತದಿಂದಾಗಿ ಒಂದು ಶತಕೋಟಿಗೂ ಹೆಚ್ಚು ಜನ ಕುಡಿಯುವ ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ. ಮುಸುಕಿನ ಜೋಳ ಮತ್ತು ಗೋಧಿ ಇಳುವರಿಗಳು ಭಾರತದಲ್ಲಿ ಶೇ. ೫ ರಷ್ಟು ಕಡಿಮೆಯಾಗುತ್ತವೆ; ಚೀನಾದಲ್ಲಿ ಬತ್ತದ ಬೆಳೆ ಶೇ. ೧೨ ರಷ್ಟು ಇಳಿತಾಯವಾಗುತ್ತದೆ. ತೀರಪ್ರದೇಶದ ನೆರೆ ಪ್ರವಾಹಗಳು ಹೆಚ್ಚುತ್ತವೆ. ಋತುಕಾಲಿಕವಾಗಿ ನಡೆಯುವ ನೀರ್ಗಲ್ಲುಹಿಮದ ಕರುಗುವಿಕೆಯು ಶೇ. ೧೫ ರಷ್ಟು ಹೆಚ್ಚಾಗುತ್ತದೆ ಹಾಗೂ ನೀರ್ಗಲ್ಲುಹಿಮದ ಒಟ್ಟು ವಿಸ್ತೀರ್ಣವು ಶೇ. ೨೦ ರಷ್ಟು ಕುಗ್ಗುತ್ತದೆ. ಇನುಯಿಟ್‌(Inuit) ನಂತಹ ಸ್ಥಳೀಯ ಸಮುದಾಯಗಳು ತಮ್ಮ ಸಾಂಪ್ರದಾಯಕ ಜೀವನ ಶೈಲಿಯನ್ನು ಕಳೆದುಕೊಳ್ಳುತ್ತವೆ. ತಗ್ಗಿನ ಪ್ರದೇಶಗಳು ಸಮುದ್ರಮಟ್ಟದ ಹೆಚ್ಚಳದಿಂದಾಗಿ ಹಾನಿಗೀಡಾಗುತ್ತವೆ. ಮಾಲ್ಡಿವ್ಸ್ ದ್ವೀಪಗಳು ಈಗಾಗಲೇ ತಮ್ಮ ಭೂವಿಸ್ತೀರ್ಣವನ್ನು ಕಳೆದುಕೊಂಡಿವೆ.

ನೈಸರ್ಗಿಕ ಸಂಪನ್ಮೂಲಗಳ ಶಿಥಿಲೀಕರಣ

ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ಅರಣ್ಯ, ಸಮುದ್ರ ಮೀನುಗಾರಿಕೆ, ವಾಯು ಮತ್ತು ನೀರಿನ ಸಂಪನ್ಮೂಲಗಳ ಶಿಥಿಲೀಕರಣದಿಂದಾಗಿ ಕೃಷಿ ಉತ್ಪನ್ನದ ಸಾಮರ್ಥ್ಯವೇ ಶಿಥಿಲಗೊಳ್ಳುತ್ತಿದೆ. ಜಾಗತಿಕ ಕೃಷಿಯಲ್ಲಿ ಮಣ್ಣಿನ ಸಂಪನ್ಮೂಲದ ಕುಸಿಯುವಿಕೆಯೇ ಒಂದು ಪ್ರಮುಖ ಸವಾಲಾಗಿ ಪರಿಣಮಿಸಿದೆ. ಮಣ್ಣು ಒಂದು ಗತಿಶೀಲ ವ್ಯವಸ್ಥೆಯಾಗಿದ್ದು ಇದರಲ್ಲಿ ಘನ ಹಂತ, ದ್ರವಹಂತ ಮತ್ತು ಅನಿಲಹಂತ ಎಂಬ ಮೂರು ಹಂತಗಳಿವೆ. ಬಹುಚರ್ಚಿತವಾದ ತಾಪಮಾನ ಬದಲಾವಣೆಯಂತೆಯೇ ಮಣ್ಣಿನಲ್ಲಿನ ತೇವಾಂಶ ಸಾಮರ್ಥ್ಯದ ಬದಲಾವಣೆಗಳೂ ಕೂಡ ಕೃಷಿಯಲ್ಲಿ ಅಷ್ಟೇ ಪ್ರಾಮುಖ್ಯವಾಗುತ್ತವೆ. ವಾಯುಗುಣದಲ್ಲಿನ ಬದಲಾವಣೆಗಳು ಇಡೀ ಭೂಪ್ರದೇಶಘಳ ಜಲಸಂಪನ್ಮೂಲದ ವ್ಯವಸ್ಥೆಯನ್ನೇ ಬದಲಿಸುವುದರಲ್ಲಿ ತೊಡಗಿರುವುದರಿಂದ ಜಲಸಂಪನ್ಮೂಲ ಯೋಜನೆ ಮತ್ತು ಕಾರ್ಯನೀತಿಗಳನ್ನು ಭವಿಷ್ಯತ್ತಿನ ದೃಷ್ಟಿಯಿಂದ ಸಂದರ್ಭಾನುಸಾರವಾಗಿ ಚಿಂತಿಸಬೇಕಾಗಿದೆ. ಆವಿಬಾಷ್ಪೀಕರಣ ಮತ್ತು ಮಳೆ ಬೀಳುವ ಪ್ರಮಾಣಗಳಲ್ಲಿ ಕಾಣುವ ಹೆಚ್ಚಳಗಳು ಹಲವು ನಿರ್ದಿಷ್ಟ ತಾಣಗಳಲ್ಲಿನ ಅಗತ್ಯತೆಗಳನ್ನು ಪೂರೈಸಲಾರವು.

ವಿಶ್ವ ಆಹಾರೋತ್ಪಾದನೆಯ ಮೇಲೆ ಉಂಟಾಗುವ ಪರಿಣಾಮಗಳು

ವಿಶ್ವ ಆಹಾರ ಸಂಸ್ಥೆಯ ವರದಿಯ ಪ್ರಕಾರ, ೨೦೧೫ರ ಹೊತ್ತಿಗೆ ಭಾರತವು ೧೨.೫ ದಶಲಕ್ಷ ಟನ್‌ಗಳಷ್ಟು  ಅಂದರೆ ಶೇ. ೧೮ ರಷ್ಟು ಮಳೆಯಾಶ್ರಿತ ಧಾನ್ಯದ ಬಳೆ ಉತ್ಪಾದನೆಯನ್ನು ಹವಾಮಾನ ಬದಲಾವಣೆಗಳಿಂದಾಗಿ ಕಳೆದುಕೊಳ್ಳುವ ಸಂಭವವಿದೆ. ಇದೇ ಸಮಯದಲ್ಲಿ ಚೀನಾದೇಶದಲ್ಲಿ ಮಳೆಯಾಶ್ರಿತ ಧಾನ್ಯದ ಬೆಳೆ ಉತ್ಪಾದನೆ ಸಾಮರ್ಥ್ಯವು ೩೬೦ ಟನ್‌ಗಳಷ್ಟು ಅಂದರೆ ಶೆ. ೧೫ ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇಡೀ ವಿಶ್ವದಲ್ಲಿ ಧಾನ್ಯದ ಬೆಳೆ ಉತ್ಪಾದನೆಯಲ್ಲಿ ನಷ್ಟ ಉಂಟಾಗಿ ೪೦೦ ದಶಲಕ್ಷ ಜನರನ್ನು ಹಸಿವೆಯ ಸಮಸ್ಯೆಗೆ ಹಾಗೂ ೩ ಶತಕೋಟಿ ಜನರನ್ನು ನೆರೆ ಹಾವಳಿಗೆ ಮತ್ತು ಕುಡಿಯುವ ನೀರಿನ ಕೊರತೆಯ ಸಮಸ್ಯೆಗೆ ಗುರಿಮಾಡುತ್ತದೆ. ವಾಯುಗುಣ ಬದಲಾವಣೆಯಿಂದ ಬೆಳೆ ಉತ್ಪಾದನೆಯಲ್ಲಿ ಉಂಟಾಗುವ ನಷ್ಟಗಳಿಂದಾಗಿ ಅಪೌಷ್ಟಿಕ ಆಹಾರದಿಂದ ದುರ್ಬಲ ಜನರ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗುವುದು. ಇದು ಬಡತನ ಮತ್ತು ಆಹಾರ ಸುರಕ್ಷತೆಯ ವಿರುದ್ಧದ ಹೋರಾಟವನ್ನು ಕುಂಠಿತಗೊಳಿಸುತ್ತದೆ. ಅತ್ಯಂತ ಕಟುವಾದ ಪರಿಣಾಮ ಆಫ್ರಿಕಾದ ಉಪ-ಸಹಾರ ದೇಶಗಳ ಮೇಲೆ ಉಂಟಾಗುತ್ತಿದ್ದು ಈ ದೇಶಗಳು ಹವಾಗುಣ ಬದಲಾವಣೆಗೆ ಸ್ವಲ್ಪವೂ ಹೊಂದಾಣಿಕೆ ಸಾಮರ್ಥ್ಯವನ್ನಾಗಲೀ ಅಥವಾ ಈ ಹಾನಿಯನ್ನು ತುಂಬುವಂತೆ ಆಹಾರವನ್ನು ಆಮದುಮಾಡಿಕೊಳ್ಳುವ ಸಾಮರ್ಥ್ಯನ್ನಾಗಲೀ ಹೊಂದಿರದ ಪ್ರದೇಶಗಳಾಗಿವೆ. ಅಳವಡಿಕೆ (ಸಿಮ್ಯುಲೇಶನ್‌) ಮಾದರಿಗಳ ಸೂಚನೆ ಪ್ರಕಾರ ಉತ್ತರ ಭಾರತದಲ್ಲಿ ತಾಪಮಾನ ಏರಿಕೆಯಿಂದಾಗಿ ಬತ್ತ ಮತ್ತು ಗೋಧಿ ಬೆಳೆ ಉತ್ಪಾದನೆಗಳು ಕುಂಠಿತವಾಗುವುದೆಂದು ನಿರೀಕ್ಷಿಸಲಾಗಿದೆ.