ರಾಗ ಕಾಂಭೋಜಿ ಝಂಪೆತಾಳ

ತಮ್ಮ ಕೇಳ್ ನಾವಿನ್ನು ಸುಮ್ಮನಿರಬಹುದೆ ದಿಟ |
ನಮ್ಮವರ ಕೂಡಿ ಭುವನವನು ||
ಘಮ್ಮನೈದುತ ಧುರದಿ ಹಮ್ಮಿರುವ ಭೂಪರ |
ನ್ನೊಮ್ಮೆ ಜೈಸುವ ಮನವಿದೇಳು || ||೩೪೦||

ತಿರುಗಿ ಮತ್ತೊರೆದನೈ ನರರ ಪಾಡೇನು ಸಂ |
ಗರದಿ ಸುರಕುಲವ ಭಂಗಿಸುತ ||
ಮೆರೆಯೆನಮಗಾರಿದಿರು ಪರಮತರ ಸಾಮ್ರಾಜ್ಯ |
ದೊರಕುವುದು ತಮ್ಮ ಕೇಳೆಂದ || ||೩೪೧||

ಯತಿಪ ಕಾಶ್ಯಪನ ಸತಿ ದಿತಿಯದಿತಿಯರಲಿ ಸುರ |
ತತಿ ಕಿರಿಯ ಭಾಗವವರಿಂದು ||
ಹಿತದಿ ಸುರಲೋಕದೊಳಗತಿ ಭಾಗ್ಯ ಪಾಲಿಪರು |
ಸತತ ಜ್ಯೇಷ್ಠರು ದೈತ್ಯರೆಂದು || ||೩೪೨||

ಇರುತಿರಲು ಖಳರ ಕುಲ ಹರಿಸುತನ್ಯಾಯದಿಂ |
ಮೆರೆವ ಸಂಕ್ರಂದಗಿಂದಿನಲಿ ||
ಇರಿದು ಸುರಸಿರಿಗೆ ನಾವ್ ದೊರೆಯೆನಿಸಬೇಕೆನಲಿ |
ಕರುಹಿದನು ಬಲಿಯು ಸಂತಸದಿ || ||೩೪೩||

ರಾಗ ಕೇದಾರಗೌಳ ಝಂಪೆತಾಳ

ಅಣ್ಣ ಕೇಳಿಂದು ರಣದೀ | ಬಿಡದೆ ಮೈ | ಗಣ್ಣನನು ಮುತ್ತಿ ಭರದಿ ||
ಪನ್ನತಿಕೆ ಮೆರೆಸುತಿಂದು | ಸ್ವರವೆಳೆಯ | ಲೆನ್ನ ಮನಕೊಂದು ಕುಂದು || ||೩೪೪||

ತಪ್ಪದೆಯು ಸುರರ ಜೈಸಿ | ಇರೆಬಪ್ಪ | ಕಪ್ಪು ಮೈಯವ ಸಾಹಸಿ ||
ಅಪ್ಪನವರಿಂಗೆ ಮುನ್ನ | ನಮ್ಮಗಳ | ನಪ್ಪಳಿಸದಿಹನೆಯಣ್ಣ || ||೩೪೫||

ಅದಕೊಂದುಪಾಯವಿಹುದು | ತಪದಿಂದ | ಪದುಮಭವಗೊಲಿಸುತಿಂದು ||
ವಿಧವಿಧದಿ ಪಡೆದು ವರವ | ಸುಮನಸರ | ಕದನದಲಿ ಗೆಲಿದು ಮೆರೆವ || ||೩೪೬||

ರಾಗ ಭೈರವಿ ತ್ರಿವುಡೆತಾಳ

ಎಂದೆನಲು ದಿಟವೆನುತ ಶಂಬರ | ನಂದು ವನಕೈದುತ್ತ ಭಕ್ತಿಲಿ |
ಮಿಂದು ಶುಚಿಯಾಗುತ್ತ ಭಸ್ಮವ | ನಂದು ಪೂಸುತಲಗ್ನಿಕುಂಡದಿ |
ಚಂದದಿಂದವನೂರ್ಧ್ವ ಮುಖದೊಳ | ಗಂದು ಹೃದಯದ ಮಧ್ಯದೊಳಗಜ |
ಗಂದು ತಾನೇಕಾಗ್ರಚಿತ್ತದಿ | ಮಂದಮತಿ ಜಯವೆನ್ನುತಿರ್ದನು | ಶ್ರದ್ಧೆಯಿಂದ || ||೩೪೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹಲವುಗಾಲವು ನುತಿಸುತಿರಲಜ |
ತಿಳಿದು ಬರೆಕಂಡೆರಗಲೆತ್ತುತ |
ಬಳಲಲೇಕೀ ತನುವ ದಂಡಿಪೆ | ಖಳಕುಲೇಶ || ||೩೪೮||

ಮೆಚ್ಚಿದೆನು ತಪಕಾನು ಮನದಿರ |
ವುಚ್ಚರಿಸಿದೊಡನೀವೆ ವರವೆನೆ |
ಹೆಚ್ಚಿತೋಷದಿ ವಾಣಿವರನಲಿ | ಉಚ್ಚರಿಸಿದ || ||೩೪೯||

ನರರು ಪಾಡಲ್ಲೆನಗೆ ಸುರಮುಖ |
ಹರಿಹರಾದಿಗಳಿಂದ ಸಾಯದ |
ವರವ ಪಾಲಿಸೆ ನಲ್ಕೆ ಕೊಟ್ಟವ | ಸರಿದನಾಗ || ||೩೫೦||

ದೇವರಿಪು ತಾನತ್ತ ಪುರದೊಡ |
ನಾವ ಭಯವಿಲ್ಲೆಂದು ಬಲಿಸಹ |
ದೇವಪುರವನು ಮುತ್ತಿದನು ಬಲು | ಠೀವಿಯಿಂದ || ||೩೫೧||

ವಾರ್ಧಕ

ಬಂದು ಸುರಲೋಕಮಂ ಸೇವೆ ಸಹ ಮುತ್ತುತಂ
ಇಂದೆಲ್ಲ ಜನರಿಂಗೆ ಭೀತಿಯಂ ಬೀರುತಂ
ಮುಂದೆ ಕೈತಡದರಂ ಮರ್ದಿಸುತ ಖಳರೆಲ್ಲ ಗರ್ವದಿಂ ಬೊಬ್ಬಿರಿಯಲು |
ಅಂದು ನರ್ತನಗಳಿಂ ಚಮರ ಛತ್ರಂಗಳಿಂ
ಕುಂದದಿಹ ತೋಷದಿಂ ಮಣಿಮಯದ ಪೀಠದಿಂ
ಚಂದದಿಂದೊಪ್ಪುತಂ ಝೇಂಕೃತಿಯ ಕೇಳುತಂ ಸುರಪಾಲನಿಂತೆಂದನು || ||೩೫೨||

ರಾಗ ಮಾರವಿ ಅಷ್ಟತಾಳ

ಏನಿದು | ಬೊಬ್ಬೆ | ಏನಿದು || ಪಲ್ಲವಿ ||

ಏನಿದು ಗರ್ಜನೆ ದ್ವಾರದೊಳಿಂದು |
ದಾನವ ಕುಲ ಬಂದು ಹಾಯ್ದುದೇನಿಂದು |
ಕಾಣುವೆನಾರೆಂಬ ಪರಿಯೆನುತಂದು |
ತಾನೆ ದ್ವಿಪವನೇರುತ್ತಿಂತೆಂದನು || ||೩೫೩||

ಸೊಕ್ಕಿಲಿ ಪಗೆಯಿಂದಲುಬ್ಬಿದ ಖಳರ |
ತಿಕ್ಕಿಯೆ ನಿಮಿಷಾರ್ಧದೊಳಗೆಮನೂರ |
ವಕ್ಕರದಿಂದಲಿ ನುಗ್ಗಿಪೆನೆನುತ |
ಮುಕ್ಕಣ್ಣಸಖನನು ಮನದಿ ಧ್ಯಾನಿಸುತ || ||೩೫೪||

ನೆರಹಿಸಿ ಬಲವನು ಪೊರಮಡುತ್ತಿರಲು |
ದುರುಳರು ತಿಳುಹಲು ಚಾರರು ಬರಲು |
ಸುರರಾಯನಾರೆಂದು ಕೇಳಲಿಕ್ಕಂದು |
ಒರೆದರು ಖಳನೆಂದ ಮಾತುಗಳಂದು || ||೩೫೫||

ರಾಗ ಮುಖಾರಿ ಏಕತಾಳ

ಕೇಳು ಕೇಳಯ್ಯ ಶಚಿಲೋಲ | ಸುಮನಸ ಪಾಲ |
ಕೇಳು ಕೇಳಯ್ಯ ಶಚಿಲೋಲ || ಪ ||

ದೊರೆ ಶಂಬರನು ಬಂದನಿಂದು | ತ್ರೈದಶ ಲೋಕ |
ದರಸುತನವ ಮನಕಂದು ||
ಹಿರಿಯವರಿಂಗತಿ | ಸರಸದೊಳಿತ್ತಡೆ |
ಯುರುತರಲೇಸೆಂದರುಹಿದ ಮತ್ತೆ ತಾ || ||೩೫೬||

ದಿಟ್ಟತನವ ತೋರಲಿಂದು | ಬಲುತರದಿಂದ |
ಕಷ್ಟವಪ್ಪುದು ತಿಳಿಯುತ್ತಿಂದು |
ಇಷ್ಟದೊಳುತ್ತರ | ಶ್ರೇಷ್ಠನೆಯೀಯೆನೆ |
ಸಿಟ್ಟಿನೊಳೆಂದ ತ್ರಿವಿಷ್ಟಪದೊಡೆಯ || ||೩೫೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನಿದೇನಾಶ್ಚರ್ಯ ಬುದ್ಧಿಯ |
ತಾನೆ ಪೇಳ್ವರು ವೀರರೆನಿಸುತೆ |
ದಾನವಾಧಮರಿಂತು ಕೊಬ್ಬಿದ | ರೇನನೆಂಬೆ || ||೩೫೮||

ಧಡಿಗರಿಗೆ ಸಮರಾಂಗಣದಿ ಪುರ |
ಕೊಡುವೆ ಶೈಮಿನಿಯತ್ತ ಪೇಳೆಂ |
ದೊಡನೆ ಕಳುಹುತ ಬಂದು ದೈತ್ಯರ | ಪಡೆಯನುಗ್ಗೆ || ||೩೫೯||

ಮೇಲೆ ಖಳಬಲ ಮುತ್ತೆ ಮಥಿಸುತ |
ಕಾಲನಂದದಿ ಬರಲು ದಿತಿಕುಲ |
ಪಾಲ ಶಂಬರ ಹಾಯ್ದು ರಿಪು ಶಚಿ | ಲೋಲಗೆಂದ || ||೩೬೦||

ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಸುರಪ ನೀನೆನಮ್ಮ | ದಳವ ಸವರಿದದಟ ಭಳಿರೆ |
ಚೆಲುವ ನಾಕವಾಳುವಾತ | ಛಲದೊಳೆಮ್ಮಲಿ || ||೩೬೧||

ಖಳಕುಲೇಂದ್ರನಹುದೆ ಮಝರೆ | ಮಲೆತು ಬಂದಿರ್ಬಲವ ಸೆಳೆವ |
ಸುಭಟನಲ್ಲೊ ಸಾಕು ಸಾಕು | ನಿಲುವದೆನ್ನಲಿ || ||೩೬೨||

ಹಿರಿಯ ಭಾಗದವರುನಮ್ಮ | ನಿರಿದು ಸ್ವರ್ಗ ಪಾಲಿಪಂದ |
ತರವೆ ಲೇಸಿನಿಂದಲಿತ್ತು | ಭರದಿ ಮನ್ನಿಸು || ||೩೬೩||

ಅರಿವೆ ಜ್ಯೇಷ್ಠರೆಂದು ಧರ್ಮ | ತೆರವ ಬಲ್ಲೆ ನೀವೆನೆಂದು |
ಸರಳ ಸೋನೆಯಿಂದ ತುಂಬೆ | ತರಿದು ನುಡಿದನು || ||೩೬೪||

ಸಾರಿ ಪೇಳ್ವೆ ವಿಹಿತವಲ್ಲ | ಊರ ಬಿಡದೆಯಿರಲು ರಣದಿ |
ವೀರ ನಿಮ್ಮ ನೋಳ್ಪೆವೆನಲು | ಬ್ಬೇರಿ ಶಕ್ರನು || ||೩೬೫||

ಕ್ರೂರ ದನುಜ ಬಾಯ್ಗೆ ಬಂದ | ತೆರದಿ ಬಗುಳಬೇಡೆನುತ್ತ |
ಭಾರಿ ವಜ್ರದಿಂದಲಿಟ್ಟ | ಮೀರಿ ಕೋಪದಿ || ||೩೬೬||

ಭಾಮಿನಿ

ಎಂಬುದೇನಾ ಕುಲಿಶಹತಿಯಲಿ
ಶಂಬರನು ಮೈಮರೆಯೆ ಭುಜಸೌ
ರಂಭಬರ್ದಿಲರೊಡೆಯ ಹಾಯ್ದನು ಖಳರ ಭಂಗಿಸುತ ||
ಮುಂಬರಿವ ಬಗೆ ನೋಡೆ ಬಲಿ ಶರ
ತುಂಬಿ ಪಥದಲಿ ತಡೆಯೆ ನಿನ್ನಯ
ಹಂಬಲವ ನಿಲಿಸುವೆನು ತಾನೆಂದೆನುತ ಗರ್ಜಿಸಿದ || ||೩೬೭||

ರಾಗ ಭೈರವಿ ಅಷ್ಟತಾಳ

ಭಾಪುರೆ ಮೈಗಣ್ಣನೆ | ಬಲವನೆಲ್ಲಾ | ವೀಪರಿ ಜೈಸಿ ನೀನೆ ||
ಕೋಪದೊಳಣ್ಣನಾ | ಟೋಪವ ಸೋಲಿಸಿ | ತಾಪ ಗೈದುದ ತೋರೆಲಾ || ||೩೬೮||

ನಿಶಿಚರಾಧಮನೆ ಕೇಳು | ಬಯಸಿನಾಕ | ದೆಸೆಗೆಡಲೇಕೆ ಪೇಳು ||
ಕುಶಲವೆ ಸಂಗ್ರಾಮ | ಖತಿ ಮಸಗಲು ನಿನ್ನ | ನುಸುರನೆ ಭಂಗಿಪೆನು || ||೩೬೯||

ಹುಲುಖಳರೊಡನೆ ನೀನು | ಗೆಲವನೊದ | ಬಲುಹಿಂದಲೇರುತಿನ್ನು ||
ಮಲೆತು ಬಂದೆಯ ನಿನ್ನ | ಬಲನೋಳ್ಪೆ ನಿಲ್ಲೆಂದು | ಮುಳಿದೆಚ್ಚಡದ ತರಿದ || ||೩೭೦||

ನಿನ್ನಂತೆ ಬಲು ಖಳರು | ಛಲದಿ ಬಂದು | ತನ್ನೊಡನಳಿದಿಹರು |
ಪನ್ನತಿಕೆಗಳದ | ಮಣ್ಣಿಗಿಕ್ಕುವೆನೆಂದು | ತನ್ನ ಪವಿಯೊಳಿಟ್ಟನು || ||೩೭೧||

ರಾಗ ಭೈರವಿ ಏಕತಾಳ

ಅನಿತರೊಳೆದ್ದಾಖಳನು | ಸುರ | ಪನಿಗೆಂದನು ಕೇಳ್ ನೀನು ||
ಘನತೆಲಿ ಗೆಲ್ದಂದವನು | ತತ್ | ಕ್ಷಣದಲಿ ನಿಲಿಸದೆ ಬಿಡೆನು || ||೩೭೨||

ಸಾಕೆಲ ಬಲು ಬೊಬ್ಬಾಟ | ಬರಿ | ದೇಕೆಲ ತನ್ನೊಳಗದಟ ||
ಜೋಕೆಯು ನೋಡೆಂದೆನುತ | ಶರ | ನಾಕಾಧಿಪ ತೊಡಲಾತ || ||೩೭೩||

ಜೀವದೊಳಾಶೆಗಳಿರಲು | ಬಲ | ಕಾವರ ಕರೆಸೆಂದೆನಲು ||
ದೇವಾಧಿಪನದಕೆಂದ | ನಿ | ರ್ಜೀವತೆ ಗೈಯುವೆನೆಂದ || ||೩೭೪||

ಕಪ್ಪೊಡಲವ ನೀನಿಂದು | ದಿಟ | ತಪ್ಪದೆ ಕರಸಿಕೊ ಮುಂದು ||
ಅಪ್ಪಳಿಸುವೆ ನೋಡೆಂದು | ಖಳ | ಧೊಪ್ಪನೆ ಹೊಯ್ಸಲಿಕಂದು || ||೩೭೫||

ರಾಗ ಶಂಕರಾಭರಣ ಮಟ್ಟೆತಾಳ

ಬಳಿಕ ಬೀಳುತೆದ್ದು ನುಡಿದ | ಗೆಲಿದೆನೆನ್ನುತುಬ್ಬಬೇಡ |
ಬೆಳೆದ ಮದವ ನಿಲಿಸದುಳಿಯೆ | ಮಲೆತು ನಿನ್ನನು ||
ಖಳರ ದಳವ ಸಹಿತಲೀಗ | ತಲೆಯಗೊಂಬೆನೆನುತ ಕುಲಿಶ |
ಸೆಳೆದು ಪೊಯ್ಯೆ ಬಿದ್ದನಾಗ | ಇಳೆಗೆ ದೈತ್ಯನು || ||೩೭೬||

ಉರಿಯನುಗುಳುತೆದ್ದು ನೋಡು | ತರರೆ ಶಕ್ರ ಧೀರನಾದೆ |
ಯರಿವೆನೆನುತ ಕಲಿಯು ನುಡಿಯ | ಲಿರದೆ ಸುರಪನು ||
ತರತರಾಸ್ತ್ರದಿಂದಲೆಸೆಯೆ | ತರಿದು ಕಲ್ಲುಗುಂಡುಮಯವ |
ಸರಿಸೆ ದಾರಿಗಾಣದಾಗ | ಹರಿಯು ಸೋತನು || ||೩೭೭||

ಮತ್ತೆ ಹಲವು ಬಾರಿಯಿಂದ | ದೈತ್ಯನೊಡನೆ ಕಾದಿ ಸೋಲು |
ತತ್ತಸಾರೆನುತ್ತ ಹಲುಬಿ | ಚಿತ್ತಚಲಿಸುತ || ||೩೭೮||

ರಾಗ ಘಂಟಾರವ ರೂಪಕತಾಳ

ಏನ ಮಾಡಲಿ | ದಾನವರಲಿ |
ತಾನೆತಾಗಿದೆ | ಕ್ಷೋಣಿಗೊರಗಿದೆ ||
ಕೌಣಪಾದ್ಯರ | ಇನ್ನು ಕೊಲುವರ |
ಜಾಣ ಭಟರನು | ಕಾಣದಾದೆನು || ||೩೭೯||

ಎತ್ತ ನೋಡಲು | ಧೂರ್ತಬಲಗಳು |
ಮೊತ್ತ ಸಹಿತಲೀ | ಮತ್ತೆ ರಣದಲಿ ||
ನಿತ್ತು ಕಾದಲು ಮತ್ತೆ ಸೋಲಲು |
ಎತ್ತಲಿರುವರೇ | ಸತ್ತ್ವವಂತರೇ || ||೩೮೦||

ಆರಿಗಿಂದಿಲೀ | ಪೊರೆಯೆನ್ನಲೀ |
ನೀರಜೋದ್ಭವಾ | ತೋರು ರೂಪವಾ ||
ವೀರ ಸುಮತಿಯಾ | ಸಾರಿ ಹೇಳಯ್ಯಾ |
ದೂರ ಕೇಳಯ್ಯಾ | ಮೀರಿ ಪೊರೆಯಯ್ಯಾ || ||೩೮೧||

ವಾರ್ಧಕ

ಎಂದು ಸುರರೆಲ್ಲರುಂ ಗೋಳಿಡಲಿಕರಿತಜಂ
ಬಂದೊರೆದನೇನಿದುಂ ಮರುಕ ಪೇಳೆನ್ನಲುಂ
ಮಂದ ಮತಿ ಶಂಬರಂ ಬಂದು ನಮ್ಮೆಲ್ಲರಂ ಜೈಸಿ ಭಂಗಿಸಿದನವನ ||
ಕೊಂದು ಸುರನಿಕರಮಂ ಕಾಯುವವನಾವನುಂ
ತಂದೆಗತಿಯೆಲ್ಲವಂ ಪೇಳ್ದು ಪೊರೆಯೆನ್ನಲುಂ |
ನೊಂದಿರುವ ಶಕ್ರನಂ ಮೈದಡವಿ ತಾ ಪೇಳ್ದನಂಬುರುಹಭವನು ನಗುತ || ||೩೮೨||

ರಾಗ ಭೈರವಿ ತ್ರಿವುಡೆತಾಳ

ಮರುಗಬೇಡೈ | ಈ ಪರಿ | ಸೊರಗಬೇಡೈ ||
ಮರುಗಬೇಡೈ ನಿರ್ಜರೇಶ್ವರ | ನೊರೆವೆನಾತನು ತನ್ನನು |
ಭರಿತ ತಪದೊಳಗೊಲಿಸಿ ಕೇಳಿದ | ದುರುಳ ಬಲುತರವರವನು |
ಹರಿಹರಾದ್ಯಮರೌಘದಿಂದಲಿ | ಮರಣ ಪೊದ್ದದ ರೀತಿಯ |
ಇರದೆ ಪಡೆದವನಿಂದು ಸೊಕ್ಕಿದ | ಪರಿಗೆ ಕೇಳ್ದುದುಪಾಯವ | ಪೇಳ್ವೆನೀಗ || ||೩೮೩||

ಮತ್ತೆ ಮಾನವರಿಂದ ಮಡಿಯುವ | ಧೂರ್ತ ನಿಶ್ಚಯ ಬೇಗದಿ |
ಪೃಥ್ವಿ ಪಾಲಕ ಧೀರಯೋಧ್ಯಾ | ಪತ್ತನೇಶಗೆ ಶೀಘ್ರದಿ |
ಪತ್ರಿಕೆಯ ಬರೆದತ್ತ ಕಳುಹಿಸಲಿತ್ತ ಬಂದವ ಖೂಳರ |
ನೊತ್ತಿಮರ್ದಿಸಿ ಕ್ಷೇಮ ಗೈಯುವ | ನತ್ತ ಕಳುಹೈ ಚಾರರ | ಎಂದು ನುಡಿದ || ||೩೮೪||

ನೀರಜೋದ್ಭವನತ್ತ ಗಮಿಸಲು | ಭೂರಿ ತೋಷದಿ ಸುರವರ |
ವೀರ ದಶರಥನಲ್ಲಿಗಟ್ಟಿದ | ತೋರಿ ಲಿಖಿತವ ಚಾರರ |
ಭಾರಿ ತ್ವರಿತದಿ ಬಂದು ನೃಪನ ಪ | ದಾರವಿಂದಕೆ ಮಣಿಯಲು |
ಆರಿದೇನೆನೆ ವಾಲೆ ಕೊಡಲದ | ಭೂರಮಣನಾ ಸಭೆಯೊಳು | ವಾಚಿಸಿದನು || ||೩೮೫||

ರಾಗ ಕಾಂಭೋಜಿ ಝಂಪೆತಾಳ

ಶ್ರೀರಾಜಯೋಧ್ಯೇಂದ್ರ ಭೂರಾಜ ನಿಧಿಚಂದ್ರ |
ಭೂರಿಭುಜಬಲದಶರಥೇಂದ್ರ ||
ಧೀರಗುಣಸಾಂದ್ರ ಪಗೆ ಭಾರಿವನಜ್ವಾಲೇಂದ್ರ |
ದೂರುವೆನು ನಿಮ್ಮೊಳಮರೇಂದ್ರ || ||೩೮೬||

ದುಷ್ಟ ಶಂಬರನ ಖಳರೊಟ್ಟಿನಲಿ ಬಂದೆಮ್ಮ |
ಪಟ್ಟಕ್ಕೆ ಬಲು ಭಂಗಗೈದ ||
ಇಷ್ಟದಲಿ ಬಂದರಿಘರಟ್ಟನೆಂದೆನಿಸಿ ಸುಖ |
ಗೊಟ್ಟೆಮ್ಮನುಳುಹಬೇಕೆಂದ || ||೩೮೭||

ಎಂದು ಬರೆದಿರ್ದ ಆನಂದ ಒಕ್ಕಣೆಯೋದು |
ತಂದವರ ಮನ್ನಿಸುತಲಿತ್ತ ||
ಚಂದದಿಂ ಕಳುಹಿ ನಿಜ ಮಂದಗಾಮಿನಿ ಕೈಕೆ |
ಗಂದು ನಿಜ ವಾರ್ತೆ ತಾನೆಂದ || ||೩೮೮||

ರಾಗ ತೋಡಿ ಏಕತಾಳ

ಕೇಳಿದೆಯ | ಮಾತ | ಕೇಳಿದೆಯ || ಪಲ್ಲವಿ ||

ಕೇಳಿದೆಯ ಮೋಹನಾಂಗಿ | ವಾಲೆ ಬರೆದನಿಂದು ಸುರಪ |
ಖೂಳರುಪಟಳ ಹೆಚ್ಚಿ | ಬಾಳಲಿಸರೆಂದು ತನಗೆ || ಕೇಳಿ || ||೩೮೯||

ಬಂದು ಶಂಬರಾದಿ ಖಳರ | ಕೊಂದು ಸುಖವ ತೋರಬೇಕೆಂ |
ದಿಂದು ಚರರ ಕಳುಹಿದನು | ಚಂದನಗಂಧಿ || ||೩೯೦||

ಅದರಿಂದಾನು ತೆರಳಿ | ಮದಮುಖರ ಮಡುಹಿ ಧುರದಿ |
ಮಘವಗಧಿಕ ಪ್ರಿಯನೆನಿಸಿ ಬಪ್ಪೆ | ಮುದದೊಳಿಹುದೆನಲು ತಾನೆ || ||೩೯೧||

ರಾಗ ಶಂಕರಾಭರಣ ಏಕತಾಳ

ಅರಸ ಲಾಲಿಸಯ್ಯ ಸುರರ | ಪರಮ ಭಾಗ್ಯಗಳನ್ನು ನೋಡಿ |
ಹರಿಯರಸಿ ಸ್ನೇಹವಾಂತು | ಬರುವೆ ಕರದೊಯ್ಯೊ || ||೩೯೨||

ಸ್ಫುರಿತಕನಕಗಾತ್ರೆ ದುಷ್ಟ | ರಿರುವರಲ್ಲಿಗುಚಿತವಲ್ಲ |
ಬರುವುದೆನುತಲುಸುರಲಾಗ | ಲೊರೆದಾಳಾಳ್ದಗೆ || ||೩೯೩||

ಎರೆಯ ನೀನಿರಲ್ಕೆ ಪಗೆಯ | ದುರುಳರಿಂದಲಪ್ಪುದೇನು |
ಪರಿಯನರಿವೆನೈವಿನೋದ | ತರಳೆಗಳೇತಕೆ || ||೩೯೪||

ಭಾಮಿನಿ

ಭೂರಮಣ ಬೇಡೆನೆಲು ಕೇಳದೆ
ನೀರಜಾಂಬಕಿ ಛಲದೊಳಿರೆ ಕರೆ
ದೇರಿಸುತ ರಥದೊಳಗೆ ಮಾರುತ ವೇಗದಿಂ ಬರುತ |
ಭೂರಿತರ ಸಾಮ್ರಾಜ್ಯ ಲಕ್ಷ್ಮಿಯು
ತೋರಿತೈ ನಂದನವ ಕಾಣುತ
ನೀರೆಯೇನೆನೆ ಭೂಪ ಮತ್ತಾ ಸುದತಿಗಿಂತೆಂದ || ||೩೯೫||

ರಾಗ ಕಾಂಭೋದಿ ಝಂಪೆತಾಳ

ಅರಸಿಯತಿಹಿತವಾಗಿ ನಿರತ ದಿವ ಶಶಿಯೆಂಬ |
ತೆರದ ನಿರ್ಭೇದದಿಂದಿರುತ ||
ಮೆರೆವ ನಿರ್ಜರವನದೊಳಧಿಕ ಸೌಭಾಗ್ಯವಿದು |
ತರುಪುಷ್ಪಫಲ ಪಕ್ಷಿ ಸಹಿತ || ||೩೯೬|

ಸುರಗಿ ಹರಿಕೇತಕಿಯು ಸುರಹೊನ್ನೆ ಮಂದಾರ |
ವರಪಾರಿಶ್ಯಾಮಂತ ಕುಲಪಿ ||
ನೆರಕರ್ಣಿ ಶ್ರೀವರ್ಣಿ ಚಂಪಬಕುಳಮಶೋಕೆ |
ಪರಿಜಾಜಿ ಕುಂದಹನೆ ಸುರಳಿ || ||೩೯೭||

ಜಂಬು ಫಲದ್ರಾಕ್ಷೆ ದಾಡಿಂಬ ಮಾಫಲ ಚೂತ |
ನಿಂಬೆ ತಂಕಲ್ಲಿ ಪನಸುಗಳು ||
ರಂಭಾ ಕಪಿತ್ಥ ಕರ್ಜೂರಿಕ್ಷು ಸರ್ವಫಲ |
ಸಂಭ್ರಮದ ಶೋಭೆ ಪಾರ್ಶ್ವಗಳು || ||೩೯೮||

ಶುಕಭೃಂಗ ಚಕ್ರಂಚೆ ಪಿಕ ಮದುಕ ಕಾರಂಡ |
ಬಕ ಪಿಂಗಳೀಸು ಪಕ್ಷಿಗಳೆ ||
ಅಖಿಲ ಕಸ್ತುರಿಕೃಷ್ಣ ಚಕಹರಿಣ ಸೌಗಂಧ |
ಸಕಲಖಗಮೃಗವಿದೆ ಸುಶೀಲೆ || ||೩೯೯||

ಎಂದೆಲ್ಲ ವಿಭವ ಮುದದಿಂದತಾ ತೋರುತ್ತ |
ಲಂದುವೊಳಪೊಗಲು ಭೂಪೇಂದ್ರ ||
ಚಂದದಿಂ ಸುಮನಸರ ವೃಂದ ಸಹಿತಿದಿರ್ಗೊಂಡು |
ಮುಂದೆ ಮನ್ನಿಸಿದನಮರೇಂದ್ರ || ||೪೦೦||

ರಾಗ ಸುರುಟಿ ಏಕತಾಳ

ಕ್ಷೇಮವೆ ರಾಜೇಂದ್ರ | ಪ್ರಜೆ ಪರಿ | ಣಾಮವೆ ಗುಣಸಾಂದ್ರ ||
ಸೀಮೆಯ ಬಲು ಜನ | ಸ್ತೋಮವು ನಿನ್ನಯ |
ಕಾಮಿನಿಯರು ಸಹ | ಪ್ರೇಮದೊಳಿಹರೇ || ||೪೦೧||

ಸತಿಯೊಡಗೂಡುತ್ತ | ಬಂದುದೆ | ಯತಿ ಹಿತವೆನೆ ಮತ್ತ ||
ಕ್ಷಿತಿಯೊಳು ಪ್ರಜೆಜನ | ತತಿ ನಾವೆಲ್ಲವ |
ರತಿ ಸುಕ್ಷೇಮಿಗಳ್ | ವ್ಯಥೆಯನು ಬಿಡುಬಿಡು || ||೪೦೨||

ತೋರಿದರರಿಗಳನು | ನಿಮಿಷದಿ | ಹೀರುತ ಸುಖವನ್ನು ||
ತೋರುವೆನೆನೆ ಬಲ | ವಾರಿಧಿ ಸಹಸುರ |
ವೀರನೊಡನೆ ರಥ | ವೇರುತ ಬಂದ || ||೪೦೩||

ಕಂದ

ಹರಿಸುರರೊಡನೈತರುವುದ
ಪರಿಕಿಸುತಲೆ ದಾನವನುಬ್ಬೇರುತ ಖತಿಯಂ |
ಧರಿಸುತ ಮುಂದುರೆ ದಶರಥ
ಬರೆದೊರೆತೇರಿಂಗೆ ರಥವ ಸರಿಸುತಲೆಂದಂ || ||೪೦೪||

ರಾಗ ಭೈರವಿ ಅಷ್ಟತಾಳ

ಆರೆಲೊ ಫಡ ಮಾನವ | ನಮ್ಮೊಳು ಯುದ್ಧ | ದಾರೀತಿಗಿದಿರಾದವ ||
ನಾರಿಯು ಸಹಿತಲೆ | ಹೋರಿ ಸಾಯಲಿದೇಕೆ | ಭೋರನೆ ತೆರಳೆಂದನು || ||೪೦೫||

ದಾನವಾಧಮನೆ ನೀನು | ಮರ್ದಿಸುತಲು | ಕಾಣಿಸಿದಂದವನು ||
ತ್ರಾಣವುಳ್ಳಡೆ ತೋರು | ಜಾಣತೆ ಬಲ್ಲೆಯೆನ | ಲಾ ನರೇಶ್ವರಗೆಂದನು || ||೪೦೬||

ಸುರಪನ ಬೆಂಬಲಕೆ | ಬಂದವನೆಂಬು | ದರಿತೆ ಕಾದಲ್ಕೆ ಜೋಕೆ ||
ತರಿದು ನಿನ್ನನು ಸತಿಯ | ನಿರದೊಯ್ಯೆ ಬಿಡಿಸುವ | ಧುರಪರಾಕ್ರ್ರಮನಾವನು || ||೪೦೭||

ಭಂಡ ನಿಮ್ಮೆಲರನು | ಮರ್ದಿಸುತಲು | ದ್ದಂಡ ದೇವೇಂದ್ರಗಿನ್ನು ||
ಖಂಡಿತ ಸುಖವೀವ | ಮಂಡಲಾಧಿಪ ತಾನು | ಗಂಡುತನವ ತೋರೆಲಾ || ||೪೦೮||

ಸುರಮುಖ್ಯ ಭಟರೆನಗೆ | ಬೆದರಿರೆ | ನರನೇ ನೀನಿದಿರು ಹೇಗೆ ||
ಹರಣಗಳುಳಿವವೆ | ಶಿರಬರಹವನಿಂದು | ಮರೆಸುವೆನೆನಲೆಂದನು || ||೪೦೯||

ಸುರರಂದವಲ್ಲವಿಂದು | ಮಾನವರ ಸಂ | ಗರವನೆ ಪರಿಕಿಸೆಂದು ||
ಭರಿತ ಬಾಣವನಿಡೆ | ತರಿಯಲು ಕಾಣುತ್ತ | ಉರಿಸೂಸಿ ತೆಗೆದೆಚ್ಚನು || ||೪೧೦||

ಭಾಮಿನಿ

ಅರಿರಥವ ಸಾರಥಿಯ ತುರಗವ
ಹರಿಸೆ ಪೊಸ ರಥ ಬರಲು ತರಿಯುತ
ಲಿರದೆ ಪೊಡ್ಡವ ತರಿದನಾ ರಿಪು ಕರದ ದಂಡೆಯವ
ಧರಿಸಿದಡೆ ಬೇರೊಂದು ಮತ್ತೊಂ
ದೊರೆಯಲೇನರುವತ್ತನಿರಿಯಲು
ದುರುಳ ಪೊಸ ಕಾರ್ಮುಕವ ಪಿಡಿಯುತ ಸಮರಕಿದಿರಾದ || ||೪೧೧||

ರಾಗ ಭೈರವಿ ಏಕತಾಳ

ಹಾರದಿರೆಲವೊ ನಮ್ಮ | ಧನು | ಸಾರಥಿ ಮಡುಹಿದ ಹಮ್ಮ ||
ತೋರೆನ್ನುತ ಶರ ಸುರಿಸಿ | ಬರೆ | ಮೀರುತ ತರಿದನು ಸಹಸಿ || ||೪೧೨||

ಬಗುಳುತ ಗಾರ್ದಭನಂತೆ | ಜಗ | ಲಿಗೆಯರಿ ಕುಕ್ಕುರದಂತೆ ||
ಮಿಗೆ ಬೀಳುತ ಸಾವದನು | ಖಳ | ಬಗೆಗಳ ತಾನರಿಯುವೆನು || ||೪೧೩||

ನರಗುರಿ ಕೇಳಿಂದಿನಲಿ | ಬಲು | ಗರುವದಿ ಕುಣಿಯದಿರಿಲ್ಲಿ ||
ಶಿರತರಿಯುವೆ ನೋಡೆನುತ | ಪೊಸ | ಸರಳೆಚ್ಚನು ಗರ್ಜಿಸುತ || ||೪೧೪||

ತರಿದೆಸೆಯಲು ಶಂಬರನು | ಕಣ್ | ತಿರುಗುತ ಮಲಗಿದನವನು ||
ಪರಿಕಾಣುತ ಬಲಿ ಬಂದ | ಭೂ | ವರನಲಿ ಖಾತಿಯೊಳೆಂದ || ||೪೧೫||

ಆರೆಲೊ ನಮ್ಮಗ್ರಜನ | ರಣ | ಧಾರುಣಿಗೊರಗಿಸಿದಧಮ ||
ತೋರಾ ಮದ ಪಿತ್ತವನು | ಪುಡಿ | ಹಾರಿಸದುಳಿಯೆನು ತಾನು || ||೪೧೬||

ರಾಗ ಶಂಕರಾಭರಣ ಮಟ್ಟೆತಾಳ

ದನುಜನೆಂದ ನುಡಿಯ ಕೇಳು | ತನುಜ ನೀನೆ ಲೇಸಿದಾಯ್ತು |
ಎಣಿಕೆಯ ನಿರ್ಭೇದದಿಂದ | ರಣದಿ ಮನ್ನಿಪೆ ||
ಎನಲಿಕೆಂದನನುಜ ನಿನ್ನ | ತನುವ ಬಗಿದು ಭೂತಗಳ್ಗೆ |
ಸನುಮತದಿ ಹಬ್ಬವಿಕ್ಕಿ | ಘನದಿ ಮೆರೆವೆನು || ||೪೧೭||

ಬಿಗುತರದ ಮಾತನಿಂದು | ಬಗುಳುತಿರುವ ನಾಲ್ಗೆಯನ್ನು |
ಸಿಗಿದು ಜಯದ ಮುಗುದೆಯೆಳೆವ | ಬಗೆಯ ನೋಡೆಲ ||
ಬಗೆಯ ನೋಳ್ಪೆನೆಂದು ಧನುವ | ನೆಗಹಿ ಕೋಲನೆಸೆಯೆ ಹಣಿದು |
ಧಗ ಧಗಿಪ ಬಾಣ ಬಿಡಲು | ಜಗತಿಗೊರಗಿದ || ||೪೧೮||

ಎದ್ದು ಶಂಬರನು ನುಡಿದ | ನುದ್ದುರುಟುತನವ ನಿಲಿಪೆ |
ಬದ್ಧವೆಂದು ಪೊಯ್ಯೆ ಭೂಪ | ಪೊಯ್ದನಾತಗೆ ||
ರುದ್ರನಂತೆ ಬಲಿಯು ಕೇಳು | ತೆದ್ದು ಖಳರು ನಿಲಲು ರಾಯ |
ಬದ್ಧ ಭ್ರಕುಟಿಯಿಂದ ಶರಸ | ಮುದ್ರ ಮುಸುಕಿದ || ||೪೧೯||

ವಾರ್ಧಕ

ಒರೆಯಲೇನ್ ಪಗೆಗಳಂದರಸ ಶರವೆಚ್ಚಡಂ
ವಿರಥರಾಗುತ ಖಳರ್ ಕಾಳಕೇಯರಪುರಕೆ
ಸರಿಯಲಾ ಭೂಪಾಲ ಹಾರಿಸಿದ ತೇರನುಂ ಬೆನ್ನಟ್ಟಿ ಖಾತಿಯಿಂದ ||
ದುರಳರಾ ಪುರದೊಳಂ ಬಲು ತರದ ಮಾಯವಂ
ಸರಿಸಿ ಕಗ್ಗತ್ತಲೆಯ ವಿಧ ವಿಧದಿ ನೋಯಿಸಲು
ದೊರೆಯು ನೆರೆ ಬಳಲಿದುದ ಅರಿತರುಣನಂದನಂ ಯೋಚಿಸುತ ಮನದೊಳೆಂದ || ||೪೨೦||