ಕಂದ

ಆ ನುಡಿಗಂ ಪ್ರಳಯಕೃ
ಶಾನುವಿನುಗ್ರವ ಕೈಗೊಳ್ಳುತ ನಿಜ ಬಲವಂ |
ತಾನೀಕ್ಷಿಸಲೇಣ್ದೆಸೆ
ಕಾಣಿಸದೆನೆ ಮುತ್ತಿ ಮೇಲ್ವಾಯ್ದರು ಭರದಿಂ || ||೭೫||

ಭಾಮಿನಿ

ಧುರಭಯಂಕರಪ್ರಳಯರುದ್ರನ
ತೆರದೊಳಾಕ್ಷಣ ಪಾಂಡ್ಯ ಭೂಪತಿ
ತರಿತರಿದು ಕೆಡಹುತ್ತ ಮಾರ್ಬಲಗಳನು ಸಂಗರದಿ |
ಒರೆಯಲೇನಕ್ಷೋಹಿಣೀ ಬಲ
ಪೆರಸಿ ನಡೆತಂದಾ ಪ್ರದೀಪನ
ಭರದಿ ತಾ ಜರೆವುತ್ತ ರೋಷದೊಳೆಂದ ಮಾತುಲಗೆ || ||೭೬||

ರಾಗ ಭೈರವಿ ಅಷ್ಟತಾಳ

ಭಳಿರೆ ಭೂಪಾಲ ಕೇಳು | ಬಲವ ಗೆಲ್ಲು | ಬಲವಂತನಾದೆ ತಾಳು ||
ಛಲದೊಳು ಬೆಳದುಬ್ಬ | ನಿಲಿಪೆ ಸತ್ತ್ವಗಳಿರೆ | ತಳುವದೆ ನಿಲ್ಲೆಂದನು || ||೭೭||

ಬಾಯ ಡಂಬದಿ ತೀರಿತೆ | ವಿಕ್ರಮ ಛಲ | ದಾಯತವಿಹುದೆ ಮತ್ತೆ ||
ಬೀಯವೇತಕೆ ಸರ್ವ | ರಾಯರ ಮುಂದೆ ನಿ | ನ್ನಾಯತಿಕೆಯ ತೋರೆಲಾ || ||೭೮||

ಆಡದೆಯೇನೆನುತ | ನಿನ್ನಸುವನು | ತೋಡಿ ಕೆಂಗರುಳ ಮತ್ತ ||
ನೀಡಿ ಭೂತಕೆ ಮುಂದೆ | ಕೂಡಿದವರ ಕಣ್ಗೆ | ಮಾಡುವೆ ಹಬ್ಬವನು || ||೭೯||

ಚಂದ್ರಸೇನಕ ಶಾಭಾಸು | ಎನ್ನೊಡ ನೀ ಮ | ದಾಂಧತೆ ತೋರಲೇಸು ||
ಬಂದಪುದೆ ಸಿರಿ ಬಂದ ದಾರಿಲಿ ಮರ | ಳೆಂದೆಚ್ಚ ಮಾರ್ಗಣವ || ||೮೦||

ಹಂದೆ ತರಿದು ನಿನ್ನಯ | ನಂದನೆಸಹಿ | ತಿಂದು ಪೋಪುದು ನಿರ್ಣಯ ||
ಎಂದಸ್ತ್ರ ಮುಸುಕ | ಲ್ಕಂದದ ತರಿಯಲು | ಕುಂದಿ ಧರೆಗೆ ಬಿದ್ದನು || ||೮೧||

ಭಾಮಿನಿ

ಬಿದ್ದೊಡನೆ ಜವನುಗ್ರವನು ನೃಪ
ಕದ್ದನೆನೆ ಕಿಡಿಯುಗುಳಿ ಖತಿಯೊಳ
ಗೆದ್ದು ಬಾಣಾಬ್ಧಿಯಲಿ ಮುಸುಕಿದನವನ ಹೂಂಕರಿಸಿ ||
ಐದುಮೊಗನೆಂಬಂತೆ ಭೂಮಿಪ
ಕೈದುಗೊಂಡಾ ಚಂದ್ರಸೇನನ
ಬಯ್ದು ಶರನಿಧಿಯಾರಿಸಲು ಮತ್ತೆಂದ ಮೂದಲಿಸಿ || ||೮೨||

ರಾಗ ಭೈರವಿ ಏಕತಾಳ

ಭುಜವಿಕ್ರಮ ನೀನಹುದೆ | ಕುರಿ | ಗಜರಲು ಹುಲಿಯಂಜುವುದೇ ||
ಅಜಬರಹವನಳಿಸುವೆನೊ | ನೀ | ಭಜಿಸಿಕೊ ಕುಲದೈವವನು || ||೮೩||

ಅಳಿಯನು ಸಣ್ಣವನೆನುತ | ಬಿಡ | ಲಳಿವುದೆ ಮೂರ್ಖತೆ ಪಿತ್ಥಾ ||
ಅಲಗೌಷಧದಿಂದೀಗ | ನೆಲ | ಕಿಳಿಸುವೆ ನೋಡೆನಲಾಗ || ||೮೪||

ವಾಂಛೆಗಳಿಹುದೇ ನಿನಗೆ | ಜಯ | ಮಿಂಚಲು ಬಿಡುವೆನೆ ಕಡೆಗೆ ||
ಗೊಂಚಾಡದಿರೆಂದೆನುತ | ಶರ | ಸಂಚಯ ಸುರಿದನು ಮತ್ತಾ || ||೮೫||

ಬರುವಂಬನು ಕತ್ತರಿಸಿ | ಘನ | ಶರಗಳ ಮಳೆಯನೆ ಸೂಸಿ ||
ಭರದಿಂದಲಿ ಮೇಲ್ವಾಯೆ | ಆ | ಧರಣಿಪ ಗಜರಿದ ಮುನಿಯೆ || ||೮೬||

ವಾರ್ಧಕ

ಮತ್ತೆ ಶರಬಿತ್ತಿದಡೆ ನಿತ್ತರಿಯನೊತ್ತರಿಸಿ
ಕತ್ತರಿಸಿ ಹಯರಥವ ನುಗ್ಗೊತ್ತಿ ಮತ್ತೆ ಬಲ
ವತ್ಯಂತ ಭೀತಿಯಲಿ ಹಿಂದೋಡಿ ಚಿತ್ತ ಬೇಸತ್ತವಂದಲ್ಲ ತಿರುಗೆ |
ಇತ್ತ ಮುದವೆತ್ತು ಶುಭದತ್ತ ನಿಜಪುತ್ರಿಯಂ
ಇತ್ತ ದಶರಥಗಂದು ಜನಸೊಗದಿ ಭುಂಜಿಸುತ
ಇತ್ತ ಧನಗಳ ಹೊತ್ತು ಪೊಗಳುತ್ತ ತೆರಳಿದರು ಶುಭವಾದುದೆಲ್ಲರಿಂಗೆ || ||೮೭||

ಭಾಮಿನಿ

ಇತ್ತ ದುಗುಡದಿ ಚಂದ್ರಸೇನನು
ಚಿತ್ತಸಂತಾಪಾಗ್ನಿಯೊಳಗುರಿ
ಯುತ್ತಲಕಟಕಟೆಂತು ಬಾಳುವೆ ಮಾನಭಂಗದಲಿ |
ಪೃಥ್ವಿಪನ ಗೆಲುವಡೆಯು ಯುವತಿಯ
ನಿತ್ತತರುವಡೆ ಪಥಗಳಾವುದೆ
ನುತ್ತ ಚಿತ್ತದಿ ಕುದಿದು ದುಃಖಿಸುತೆಂದ ಮರುಗುತಲಿ || ||೮೮||

ರಾಗ ನೀಲಾಂಬರಿ ರೂಪಕತಾಳ

ಮುಂದೇನ್ಮಾಡಲಿ ಶಿವ ಶಿವ | ನಿಂದಿಲಿ ಸೋತೆನು ರಣದಲಿ |
ಚಂದಿರವದನೆಯು ದೊರಕದೆ | ಹೊಂದಿದುದವಮಾನ ||
ಇಂದೇತಕೆ ಸಿರಿಯೋಲಗ | ಕುಂದಿತು ಮಾರ್ಬಲ ಮಾನಸ |
ದಂದವ ಸಲಿಸುವನಾವ ವ | ಸುಂಧರೆಯೊಳಗೆನ್ನ || ||೮೯||

ಅರಿಯನು ಗೆಲದಿರೆ ಸುರನರ | ಸರುವರು ಪರಿಹಾಸಿಸುವರು |
ಕರತಟ್ಟುತ ಬಾಲಕಿಯರು | ಕಿರುನಗೆ ನಗದಿಹರೇ ||
ಧರೆಕೈವಿಡಿವಳೆ ಬೆದರಲು | ನರಕವೆ ಸರಿ ಕ್ಷತ್ರಿಯರಿಗೆ |
ಧುರಕಾವಲು ಮತ್ಸಿರಿ | ಮರೆಯಾದಳೆ ಕಡೆಗೆ || ||೯೦||

ಆರಿಗೆ ಪೇಳುವೆ ಬಂದಿಹ | ಭೂರಿತರದ ಸಂಕಷ್ಟವ |
ಹಾರಿಸಲೇಂ ಗತಿಯೆನ್ನಲು | ತೋರಿತು ಮನಕೊಂದು ||
ವೀರನು ಕೃಷ್ಣಾಖ್ಯನು ಪ್ರಿಯ | ದೂರಲು ಕಾಯುವನೆನುತ್ತ |
ಭೋರನೆ ವಂಗಕೆ ಬಂದನು | ಧಾರುಣಿಪತಿಯಂದು || ||೯೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ವಸುಧೆಸುರ ಕೇಳಿತ್ತ ಬಲುತರ |
ಕುಶಲದೊಡ್ಡೋಲಗದೊಳಿರೆ ಚರ |
ನುಸುರಿದನು ಪ್ರಿಯಬಂದನೆಂಬೊಂ | ದೊಸಗೆ ಕೇಳ್ದು || ||೯೨||

ಎದ್ದಿದಿರ್ಗೊಂಡಿರದೆ ಮಣಿಮಯ |
ಗದ್ದುಗೆಯ ತಾನಿತ್ತು ಮೌಕ್ತಿಕ |
ಬದ್ಧ ಪೀಠದೊಳೊಪ್ಪಿ ನುಡಿದನು | ಬದ್ಧಮಾತ || ||೯೩||

ಬಂದೆಯಾ ಸುಪ್ರೀಯಮಣಿಯೈ |
ತಂದೆಯಾ ಸೌಭಾಗ್ಯ ಸಿರಿ ಸುಖ |
ದಿಂದಲಿಹರೇ ನಿನ್ನವರು ಪೇ | ಳೆಂದು ನುಡಿದ || ||೯೪||

ಮತ್ತೆ ನೋಡಲು ಚಂದ್ರಸೇನನು |
ಪೊತ್ತ ದುಗುಡದೊಳೆರಡು ಕಂಗಳು |
ಹೊತ್ತಿ ಹೊಗೆಯಲು ಮೈತ್ರಿ ಭಾವದಿ | ಮತ್ತೆ ಕೇಳ್ದ || ||೯೫||

ರಾಗ ಭೈರವಿ ಝಂಪೆತಾಳ

ಆರಿಂದ ಬಂತು ನಿನ | ಗೀ ರೀತಿ ಚಿಂತೆಗಳು |
ಕಾರಣಂಗಳದೇನು | ಧಾರುಣೀಶ್ವರನೆ || ||೯೬||

ಅರಿಗಳಿಂದುಬ್ಬಿದರೊ | ದೊರೆತನಕೆ ಬಂದೆಡರೊ |
ಧುರದೊಳಪಜಯವಾಯ್ತೊ | ನೆರೆ ಖ್ಯಾತಿ ಪೋಯ್ತೊ || ||೯೭||

ಆನಿರಲು ಭಯವೇನು | ಏನಾದುದೆಂಬುದನು |
ನೀನೆನ್ನೊಳೊಗೆಯೆನಲು | ಕ್ಷೋಣೀಂದ್ರನೆಂದ || ||೯೮||

ರಾಗ ಸೌರಾಷ್ಟ್ರ ಏಕತಾಳ

ಏನೆಂಬೆನು ಪ್ರಿಯನೇ | ನಿನ್ನೊಡನೆ |
ಮಾನದ ಹಾನಿಯನೆ ||
ಕ್ಷೋಣಿಪ ಕೋಸಲ ಜಾಣನು ಸುತೆಕ |
ಲ್ಯಾಣವ ಗೈವುದ ತಾನರಿತೈದುತ |
ಮನಸೊತ್ತ | ಮುದದತ್ತ | ನೃಪನತ್ತ || ||೯೯||

ಕೇಳಲು ಬಾಲೆಯನು | ಮಾವನು |
ತಾಳುತ ಖಾತಿಯನು ||
ಕಾಳಗದೊಳು ಜನ | ಜಾಲವಳಿಸೆ ಬಲು ||
ಕೋಲನೆಸೆದು ಛಲ | ಕೇಳಿ ಗೈದು |
ಭುಜ ಹೊಯ್ದು | ಬಲುವೈದು | ಮೇಲ್ವಾಯ್ದು || ||೧೦೦||

ಮಾಡಲು ಯುದ್ಧವನು | ವಿರಥನ |
ಮಾಡಿಯೆ ಭಂಗವನು ||
ಕೂಡಲಿನ್ನು ಮುಂದಾಡಲೇನು ಪಗೆ |
ಮೂಢಗಿಂದು ಸತಿಗಾಡಿಸಿತಾರೈ |
ರಥವೇರೈ | ಪಥ ಸಾರೈ | ಹಿತಬೀರೈ || ||೧೦೧||

ರಾಗ ಕೇದಾರಗೌಳ ಝಂಪೆತಾಳ

ಎಂದೆನಲು ಕೃಷ್ಣಾಖ್ಯನು | ನಗೆ ಸೂಸು | ತೆಂದನೀ ಬವಣೆಯನ್ನು ||
ಮುಂದುವರಿದೈತಂದಿದೆ | ಮನಸಿನೊಳ | ಗೊಂದಿರ್ಪುದದನು ಪೇಳ್ವೆ || ||೧೦೨||

ಹಿರಿಯನಲ್ಲವೆ ಮಾವನೂ | ತಾ ತಂದೆ | ಸರಿಯಾತನೊಡನೆ ನೀನು ||
ತರಳೆಗಿಚ್ಛಿಸುತಲಲ್ಲಿ | ದ್ರೋಹತ್ವ | ವಿರಚಿಸಲಿಕಾದುದಲ್ಲಿ || ||೧೦೩||

ಬೇಡವಾ ಲಲನೆ ಬಗೆಗೆ | ಭೂಪನೊಳು | ಮಾಡದಿರು ಛಲವ ಹೀಗೆ ||
ರೂಢಿಯೊಳಗರಸಿ ನಿನಗೇ | ತಕ್ಕವಳ | ಜೋಡುಗೆತ್ತಿಸುವೆ ಕಡೆಗೆ || ||೧೦೪||

ವರೆಯಬೇಡೀ ಮಾತನು | ನೀನೆನಗೆ | ಪರಮ ಸಖನಾದಡಿನ್ನು ||
ಧರಣಿಪನ ಸಂಗರದಲಿ | ಬಂಧಿಸುತ | ತರುಣಿಯಳ ತಪ್ಪುದಿಲ್ಲಿ || ||೧೦೫||

ನೀ ಪೋಗದಿರಲು ತಡೆದು | ಭಜಿಸುತಲು | ಮಾಪತಿಯ ವರವ ಪಡೆದು ||
ಭೂಪನನು ತರಿದು ಸತಿಯ | ತರದಿರಲು | ರೂಪ ಮರೆಸುವೆನು ರಾಯ || ||೧೦೬||

ರಾಗ ಮಾರವಿ ಏಕತಾಳ

ಈ ತೆರ ತವ ಮನದಾಸೆಗಳಿದ್ದರೆ | ಭೀತಿಯೆ ಸಂಗರಕೆ ||
ಪ್ರೀತಿಲಿ ವೀಳ್ಯವನೋತಿಡೆ ಪಗೆಯರ | ವ್ರಾತವ ಜೈಸಲಿಕೆ || ||೧೦೭||

ಅನುಮಾನವ ಬಿಡು ಜನಪನ ಸೆರೆಸಹ | ವನಿತೆಯ ಪಿಡಿದಾನು ||
ನಿನಗೀವೆನು ಬಲು ಘನ ಭೂಪಾಲರು | ತೃಣ ಸಮ ತನಗಿನ್ನು || ||೧೦೮||

ಹಿಡಿ ನಂಬುಗೆ ಸುರರೊಡೆಯಜಭವಮುಖ | ಕಡುಗಲಿಗಳು ತಡೆಯೆ ||
ತಡೆಗಡಿದಧಟರ ನುಡಿ ನಡೆಸುವೆನಾ | ಬಿಡದೆಂದವ ನುಡಿದ || ||೧೦೯||

ವಾರ್ಧಕ

ಏರಿದಂ ರಥವನುಂ ಹಾರಿದಂ ಮರುತನಂ
ಮಿರಿ ಮುಂದಕೆ ಬಂದು ಪಗೆಯ ಪಟ್ಟಣವನ್ನು
ಸಾರಿದಂ ಕೋಟೆಯನ್ನೇರಿ ಸೈನ್ಯದ ಸಹಿತ ಕಣೆಗಳಿಂ ಬಾರಿಸಲ್ಕೆ |
ದ್ವಾರಪಾಲಕರಿದನು ಕಾಣುತಲಿ ತಡೆದರುಂ
ವೀರರಿಂಗಿದಿರಾಗಿ ನಿಲಲು ಕೈಸಾಗದಿರೆ
ದೂರಿದರು ಬಂದೊಡನೆ ಬೆವರುತ್ತ ತಡವರಿಸಿ ಭೂಮಿಪಗೆ ವಾರ್ತೆಯನ್ನು || ||೧೧೦||

ರಾಗ ಮುಖಾರಿ ಏಕತಾಳ

ರಾಜೇಂದ್ರಚಂದ್ರ ಲಾಲಿಸಯ್ಯ | ನೋಡಲು ಪಗೆಯಾ |
ರಾಜಾಭೋಜರ ದಂಡು ಜೀಯಾ ||
ತೇಜಿರಥದಿ ಬಲು ರಾಜಿಸುತ್ತಿಂದಿನೊ |
ಳಾಜಿಗೆ ಬಂದರು ಸೋಜಿಗವರಿಯೆವು || ಪಲ್ಲವಿ ||

ಎಂಬುದೇನು ಪಗೆವೃಂದ | ಮುಸುಕಿದರಿಂದ |
ಅಂಬುಧಿ ಮೇರೆ ತಪ್ಪಿದಂದ | ನುಗ್ಗಲಿಕಿಂದಾ |
ಇಂಬುಗಾಣದು ಭಟರಿಂದ | ಮುಂದ್ವರಿವಂದ |
ಶಂಭು ಬಲ್ಲನು ತಿಳಿಯೆವೊಂದ | ನಿಂದೆಂದವನಂದ |
ಅಂಬರದಿಕ್ತಟವೆಂಬುದು ತೋರದು | ಮುಂದ್ವರಿದರು ಮನ ಹಂಬಲ ಮಿರದು |
ನಿಂದೊರದು | ಬಲು ಜರದು | ನಮಗಿರಿದು | ಕದ ಸುರಿದು |
ಜನ ತರಿದು | ನುಗ್ಗರಿದು | ನೆರೆ ಮೆರದು | ಇರವರು ಖರೆ || ||೧೧೧||

ಸಟೆಮಾತೆ ಹಿಂದಣದಿದಲ್ಲ | ಕೋಟೆಯನೆಲ್ಲ |
ಹಟದಿಂದ ಪುಡಿಗೈದರಲ್ಲ | ಕೊತ್ತಳಗಳ |
ಚಟುಲತೆಯಿಂದ ಜರಿದರಲ್ಲ | ನೋಡಿದರಲ್ಲ |
ತಟಮಟ ಮನಕೆ ಮಾಡ್ದರಲ್ಲ | ಪಟುಭಟದಿಟವೆಲ್ಲ |
ಕಠಿನತೆಯಲಿ ಭೂ | ತಟ ಧೂಳೆದ್ದುದು |
ಘಟಿಸಲು ಧೂರ್ಜಟಿ ಬಲತಾಳೈ | ಯಿದ ಕೇಳೈ | ಭೂಪಾಲೈ |
ಘನಹೇಳೈ | ಬೇಗೇಳೈ | ಖತಿತಾಳೈ | ಪಗೆಸೀಳೈ |
ಬಲ ಮೇಳೈ | ಸೇಳೇಳ್ ದೊರೆಯೆ || ||೧೧೨||

ರಾಗ ಶಂಕರಾಭರಣ ಮಟ್ಟೆತಾಳ

ಚಾರನೆಂದ ನುಡಿಯ ಕೇಳು | ತಾರು ನಮ್ಮೊಳಳವಿಗೆಂದು |
ಮಿರಿ ಬಂದ ಭಟನ ನೋಳ್ಪೆ ನೀ ರಣಾಗ್ರದಿ ||
ಸೇರಿರೆಂದು ನೆರಹಿ ಸೇನೆ | ಧಾರುಣೀಂದ್ರ ಬಂದು ಪಗೆಯ |
ಮೋರೆ ನೋಡುತೆಂದ ಬಲು ಗಂಭೀರ ರೋಷದಿ || ||೧೧೩||

ಧೀರ ಭಳಿರೆ ನಮ್ಮ ಪುರಕೆ | ಭೂರಿ ದಾಳಿಯಿತ್ತು ಕೋಟೆ |
ಏರಿ ಮುರಿದು ಕೊತ್ತಳವನು | ಹೀರಿ ಜನಗಳಾ |
ಭಾರಿ ಪಂಥವಾಂತುಬಂದ | ಕಾರಣಂಗಳೇನು ವಾರ್ತೆ |
ದೋರದಿನಿತು ಗೈದೆ ಲೇಸು | ಯಾರು ಪೇಳೆಲ || ||೧೧೪||

ಒರೆಯಲೇನು ವಂಗದೇಶ | ದರಸನಾ ಕೃಷ್ಣಾಖ್ಯನೆಂದು |
ಕರೆವರೆನ್ನ ಚಂದ್ರಸೇನಗಿರದ ಹಮ್ಮನು ||
ತರಿಯಲೆಂದು ಬಂದನವನು | ಪರಮ ಪ್ರಿಯನೆನಗೆ ನಿನ್ನ |
ತರಳೆಯಾತಗೀಯದಿರಲು | ಧರಿಸು ಧನುವನು || ||೧೧೫||

ಎಂದ ಮಾತ ಕೇಳಿ ಖಾತಿ | ಯಿಂದ ನುಡಿದನೊಳ್ಳಿತಾಯ್ತು |
ಬಂದ ದಾರಿಗೊಂಡು ಪೋಗು | ಕುಂದದೆನ್ನಲಿ ||
ನಿಂದು ಪಿಂದೆ ಭಂಗವಾಂತ | ಮಂದಮತಿಯ ತೆರದೊಳಿಂದು |
ಮುಂದೆ ಬಳಲಲೇಕೆನಲ್ಕೆ | ನೊಂದು ಮನದಲಿ || ||೧೧೬||

ನುಡಿದ ನೆಲಗೆ ಪೊಡವಿಪಾಲ | ಸಡಗರಂಗಳಿಲ್ಲಿ ಬೇಡ |
ಕಡುಹುತನಗಳುಂಟೆ ತೋರು | ತಡೆಯದೆನ್ನಲಿ |
ತೊಡು ತೊಡಂಬನೆನುತ ಬಾಣ | ಝಡಿದು ಬಿಡಲಿಕಾತನದರ |
ನಡುವೆ ತರಿಯಲೆಲ್ಲ ಕಾಣು | ತ್ತೊಡನೆ ಭರದಲಿ || ||೧೧೭||

ಭಾರಿ ಕ್ರೋಧವೇರಿ ಸತ್ತ್ವ | ತೋರುತರಿಯನೆಚ್ಚ ಭರಕೆ |
ದಾರಿ ಕಾಣದಾಯ್ತು ಕೋಸ | ಲೂರ ಪಾಲಗೆ ||
ಭೂರಿ ಬಳಲುತಿಳೆಯೊಳೊರಗೆ | ವೀರನಂದು ಸೆರೆಯ ಪಿಡಿದು |
ವಾರೆ ಹಾಸ್ಯದಿಂದ ನುಡಿದ | ಧಾರುಣೇಂದ್ರಗೆ || ||೧೧೮||

ರಾಗ ಸುರುಟಿ ಏಕತಾಳ

ಸಿಕ್ಕಿದೆ ಭೂಪನೇ ನೀ | ಬಲು | ಫಕ್ಕನೆ ತನ್ನೊಡನೇ ||
ಸೊಕ್ಕಿನೊಳಳಿಯನ | ತಿಕ್ಕಿದೆ ನೆಂಬೊಂ |
ದಕ್ಕರಕಿಂದಿಲಿ | ಕಕ್ಕಸಮಾಯ್ತೈ |
ಘನ ಹೋಯ್ತೈ | ದಣಿ ವಾಯ್ತೈ || ||೧೧೯||

ಆರೈ ನಿನ್ನುವನು | ಬಿಡಿಸುವ | ಭೂರಿ ಪರಾಕ್ರಮನು ||
ಹೋರಿದೆ ತೋರಿ ಠೇಂ | ಕಾರದೊಳೀಪರಿ |
ದಾರಿಯಾಯ್ತೆ ತವ | ನಾರಿಗೆ ಪಥವೇನ್ |
ಗತಿಯೇನ್ | ಹಿತವೇನ್ || ||೧೨೦||

ವರ ಧೈರ್ಯ ಕುಂದಿಹೆಯಾ | ಸತಿಯೊಡ | ನುರುತರ ಸದ್ಧೈರ್ಯ ||
ಇರು ರಥದೊಳಗೆಂ | ದರಿಯನು ಬಂಧಿಸಿ |
ತರಳೆಯನರಸಲು ಸರಿಯುತ ಮತ್ತಾ |
ಬಲವಂತ | ಹುಡುಕುತ್ತ || ||೧೨೧||

ಭಾಮಿನಿ

ಚಾರಕರು ಬಂದಜಗೆ ಸಂಗರ
ಸಾರ ದೂರಲು ಕೇಳಿ ಧನುಗೊಂ
ಡಾರುಭಟಿಸುತ ಮಿರಿ ಪರಿಕಿಸಿ ನೃಪನ ಸೆರೆಬಿಡಿಸಿ |
ಹೀರುತರಿದಳವೇರಿ ಕೋಪದಿ
ಸಾರಿ ರಿಪುವೀರನನು ತಡೆಯುತ
ಆರುಭಟಿಸುತ ಗಜರಿ ಗರ್ಜಿಸುತೆಂದ ಹೂಂಕರಿಸಿ || ||೧೨೨||

ರಾಗ ಕೇದಾರಗೌಳ ಅಷ್ಟತಾಳ

ಬಲ್ಲಿದನಹೆ ಏನೋ ಮಲ್ಲತನದಲಿ ನ | ಮ್ಮೆಲ್ಲವರಿವಧಟಿಂದಾ ||
ಬಲ್ಲತನದಲಿ ನೃಪನನು ಜೈಸಿದ | ಖುಲ್ಲತೆ ತೋರ್ಪುದೆಂದ || ||೧೨೩||

ಹಾರದಿರೈ ಎಲೆ ಧೀರ ನೀನಾರ್ ಮದ | ವೇರುತ ಸಂಗರಕೆ ||
ಮೀರುತಲೈತಂದು ಭಾರಿಯೊಳಡಗಿದ | ಭೋರನೆ ಸಾಯಲಿಕೆ || ||೧೨೪||

ಅಳಿಯುಳಿಯೆಂಬುದು ನಿಲುಗಡೆ ನಿನಗೇನು | ಜಲಜನಂದನನಹುದೆ ||
ಅಳವಿಯೊಳೆನ್ನಯ ಬಲ ವೀಕ್ಷಿಸೆಂದಾತ | ಬಲುಶರವೆಚ್ಚ ಮುಂದೆ || ||೧೨೫||

ತರಿದೆಂದ ನೋಡಲು ಧುರಮಲ್ಲನೈ ವೃದ್ಧ | ತೆರಳುವದೈ ಮನೆಗೆ ||
ನೆರೆ ಜವ್ವನದ ಭಟರಿರಲಿತ್ತ ಬರಲೆಂದು | ತಿರುಹೆ ಮಿಸೆಯನವಗೆ || ||೧೨೬||

ಪೊಳೆಯನುತ್ತರಿಸದ ಹುಳುವಿಗೇತಕೆ ಪಂಥ | ಜಲನಿಧಿ ಲಂಘಿಸುವ ||
ಸಲೆಭುಜಬಲವಿರೆ ನಿಲುವದೆಂದಾತಗೆ | ಮುಳಿದೆಚ್ಚಯೋಧ್ಯನಾಥ || ||೧೨೭||

ಎಚ್ಚಡೆ ಶರಮಯ್ಯ ಚುಚ್ಚಿತು ಸರ್ವಾಂಗ | ಬಚ್ಚಿದುದರುಣ ಧಾರೆ ||
ಹೆಚ್ಚಿದ ಪಗೆ ಪ್ರಾಣ ಚಚ್ಚರವೈದಲು | ಬೆಚ್ಚುತ ಭಟರು ಜಾರೆ || ||೧೨೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಳಿಕ ಭೂಮಿಪ ರಣಕೆ ತನ್ನಲಿ |
ನಿಲುವರನು ಕಾಣದೆಯು ಬರೆ ಕೋ |
ಸಲಪತಿಯು ಬಹುವಿಧದಿ ಮನ್ನಿಸು | ತಜನಿಗೆಂದ || ||೧೨೯||

ಆವ ಭಯ ನಮಗಿನ್ನು ಬಂದಿಹ |
ನೋವ ಪರಿಹರಗೈದು ಪಗೆಯನ |
ಜೀವವನು ಶೈಮಿನಿಗೆ ಕಳುಹಿದ | ಭಾವನವರೇ || ||೧೩೦||

ಎಂದವನ ಮನ್ನಿಸುತಲಜಸುತ |
ಗೆಂದ ನೀ ರಾಜ್ಯವನು ಪಾಲಿಸು |
ನಂದನರು ತನಗಿಲ್ಲವಳಿಯನು | ಕಂದ ಸರಿಯೈ || ||೧೩೧||

ವಾರ್ಧಕ

ಎಂದು ದಶರಥನಿಗಂ ಬಳುವಳಿಗೆ ದೇಶಮಂ
ಚಂದ ಮಿಗೆ ಭೂವರಂ ಇತ್ತು ಮುದಗೊಂಡವಂ
ಇಂದಿರಾಧವನನುಂ ಮನದೊಳಗೆ ನೆನೆವುತಂ ಕೈವಲ್ಯಮಂ ಪಡೆದನು ||
ಅಂದಲ್ಲಿ ಮಂತ್ರಿಯಂ ನಿಲಿಸುತಲೆ ಸೊಸೆ ಸಹಿತ
ಕಂದನೊಡಗೂಡುತದ ಅಂದಯೋಧ್ಯಕೆ ಬಂದು
ಚಂದದಿಂದಿರುತಿರಲು ಒಂದು ದಿನ ಅಜ ತನ್ನ ನಂದನಂಗಿಂತೆಂದನು || ||೧೩೨||

ರಾಗ ಬೇಗಡೆ ಆದಿತಾಳ

ಕಂದ ನೀನಿಂದು ಮಾತ ಲಾಲಿಸೊ | ಕಡುವೃದ್ಧನಾದೆ |
ಮುಂದೆ ನೀ ಧಾತ್ರಿ ಪಾಲಿಸೊ ||
ಕುಂದು ಕೊರತೆಯೊಂದ ತಾರದೆ | ಇನಕುಲಕೆ ಕೀರ್ತಿ ||
ಯಿಂದ ಬಾಳು ಚಿಂತೆಯಿಲ್ಲದೆ || ||೧೩೩||

ನೀತಿ ಧರ್ಮಾಚಾರ ಚಾತುರ್ಯ | ಕಲ್ಯಾಣ ಭೋಗ |
ರೀತಿ ಸುಜನ ಪಾಲವೀಕಾರ್ಯ ||
ಘಾತಕಿಗಳತರಿ ಸಮರದಿ | ಸುಖ ಸಂ |
ಪ್ರೀತಿಯಾಂತು ಮೆರೆಯೊ ನಿತ್ಯದಿ || ||೧೩೪||

ವನಕೆ ಪೋಗಿ ದೇವನಡಿಯನು | ನೆನಸುತ್ತ ಆನು |
ಘನತೆ ಪದವಿಯನ್ನು ಪಡೆವೆನು ||
ಎನುವ ಮಾತ ಕೇಳುತಾಳ್ದನ | ಬೆಂಬಿಡೆನೆಂದು |
ವನಿತೆಯಲ್ಲಿ ಬರಲಿಕಾಕ್ಷಣ || ||೧೩೫||

ಭಾಮಿನಿ

ಅರಸ ಪರಿಕಿಸಿ ಸುತಗೆ ಪಟ್ಟವ
ವಿರಚಿಸುತ ಮಂತ್ರಿ ಪ್ರಧಾನಂ
ಗರುಹಿಸತಿಸಹಿ ತೈದಿ ವನದಲಿ ಮುನಿಗಳೆರಕದಲಿ ||
ಭರದಿ ಹರಿಯನು ಭಜಿಸುತಲೆ ಸುರ
ವರರು ಭಾಪೆಂದೆನುತ ಪೊಗಳಲು
ಪರಮತರ ಸಾಯಜ್ಯಪದವನು ಪಡೆದ ತೋಷದಲಿ || ||೧೩೬||

ರಾಗ ಕಾಂಭೋಜಿ ಝಂಪೆತಾಳ

ಅರಸನಾ ಪತ್ತುರಥನಿರಲಿತ್ತ ವಂಗೇಶ | ನೊರಗೆ ಕರಗುತಲಿ ಸಾರಥಿಯು ||
ಮರುಗಿ ಬಂದೆಲ್ಲವನು ನೆರೆ ಚಂದ್ರಸೇನಕನಿ | ಗೊರೆಯೆ ಬಿಸುಸುಯ್ದನಾ ರಾಯ || ||೧೩೭||

ಹರಹರಾ ನಿಜ ಸಖನ ತರಿದನೇನಜರಾಜ | ತರಳೆಯಳ ಸಹಿತೊಯ್ದನಲ್ಲ ||
ಪರಮ ಸ್ನೇಹಿತನನ್ನು ತರಿದ ಶತ್ರುಗಳನ್ನು | ಧುರದಿ ಗೆಲ್ಲುವ ಪರಿಯದೆಂತು || ||೧೩೮||

ಅದ್ರಿಜೆಯ ರಮಣನಡಿ ಭದ್ರ ಸ್ತೋತ್ರಗಳಿಂದ | ಸಾರ್ದರ್ಚಿಸುತ ವರವ ಪಡೆದು ||
ಉದ್ರೇಕನಾಂತರಿಪು ಭಟರ ಗೆಲ್ಲುವೆನೆಂದು | ರುದ್ರನನು ಕಾಣಲವ ನಡೆದ || ||೧೩೯||

ಸರಿದು ಬಿಲ್ವದ ವನದಿ ನೆರೆ ಮಿಂದು ರುದ್ರಾಕ್ಷಿ | ಧರಿಸಿ ಭಸ್ಮವ ಪೂಸಿನಿಂದ ||
ವರನಾಸಿಕದಿ ದೃಷ್ಟಿಯಿರಿಸಿ ಏಕೋಮನದಿ | ಹರನ ಪಾದವ ನೆನೆದನಂದು || ||೧೪೦||

ವಾರ್ಧಕ

ಈಶ ಗಿರಿಜೇಶ ಲೋಕೇಶ ನುತಪೋಷ ಭೂ
ತೇಶ ಖಳನಾಶ ಮುನಿತೋಷ ಸರ್ವೇಶ ಜಗ
ದೀಶ ತ್ರೈನೇತ್ರ ಸರ್ವೇಶ ಶಶಿಭಾಸ ವಿಶ್ವೇಶ ಲೋಕೇಶ ರಕ್ಷ |
ಶ್ರೀಶಸಖ ನಂದೀಶ ಕಾಶೀಶ ತ್ರಿಗುಣೇಶ
ಪಾಶಭಯನಾಶ ಯೋಗೇಶ ಪ್ರಣವೇಶ ಜಯ
ನೀ ಸಲಹು ಪೋಷಿಸೆಂದಾತ ಕೊಂಡಾಡಿದನು ಪರಶಿವನನಂದು ದೃಢದಿ || ||೧೪೧||