ಶಾರ್ದೂಲವಿಕ್ರೀಡಿತ

ಶ್ರೀಕಾಂತಂ ಸುರವೈರಿದಾವದಹನಂ ಬ್ರಹ್ಮೇಶಸಂಪೂಜಿತಂ
ಪಾಕಾರಾದಿ ಮುಖಾಮರೈಕಶರಣಂ ದಿವ್ಯಾಯುಧಾಲಂಕೃತಂ |
ರಾಕಾಭ್ಜಾಚ್ಛಸುತೀಕ್ಷ್ಣ ದಂಷ್ಟ್ರಯುಗಳಂ ದೀಪ್ಯಸ್ತಟಾಶೋಭಿತಂ
ಲೋಕೇಶಂ ನಿಜಭಕ್ತವಾರಶರಣಂ ಶ್ರೀನಾರಸಿಂಹಂ ಭಜೇ || ||೧||

ರಾಗ ಭೈರವಿ ಝಂಪೆತಾಳ

ಜಯತು ಜಯ ಗಣನಾಥ | ಜಯಲೋಕವಿಖ್ಯಾತ |
ಜಯತು ಜಯನತದಾತ | ಜಯಗೌರಿಜಾತ || ||೨||

ಪಾಶಧರ ಹರಿಪ್ರೀತ | ವಾಸವಾದ್ಯಮರನುತ |
ಕ್ಲೇಶಭವನಾಶ ಪ್ರ | ಕಾಶ ಖಳನಾಶ || ||೩||

ವೀರ ಗಂಭೀರ ರಣ | ಶೂರ ಸಾಕಾರಗುಣ |
ವಾರಿಧಿಯೆ ನಮಿಪೆ ದಯ | ದೋರಿ ಪಾಲಿಪುದು || ||೪||

ವಾರ್ಧಕ

ಹರನನುಂ ಗಣಪನಂ ವಾಣಿಯಂ ಗೌರಿಯಂ
ಹರಿಯನುಂ ಸಿರಿಯನುಂ ತರಣಿಯಂ ಶಶಿಯನುಂ
ಧರಣಿಯಂ ಸುರಪನಂ ಶಿಖಿಯನುಂ ಮರುತನಂ ವರುಣನಂ ದ್ಯುಮಣಿಜನನು |
ನಿಋತಿಯಂ ಧನಪನಂ ಕವಿಗಳಂ ಮುನಿಗಳಂ
ಗುರುವನುಂ ಬ್ರಹ್ಮನಂ ಭೂಜನಂ ಹರಿಜನಂ
ಭರದೊಳುಂ ನೆನೆವೆನುಂ ಕರುಣದಿಂ ಸುಮತಿಯನ್ನೀವುತಂ ಪೊರೆಗೆಮ್ಮನು || ||೫||

ಭಾಮಿನಿ

ಶ್ರೀರಮಣ ಭವದೂರ ಖಳಸಂ
ಹಾರ ದೀನೋದ್ಧಾರ ನಿಧಿಗಂ
ಭೀರ ನಿತ್ಯಾನಂದನಾಗಿಹ ವಿಷ್ಣುಮೂರುತಿಯೆ |
ಮಾರಪಿತವೇದಾಂತ ಸುಪ್ರಿಯ
ಮೂರು ಲೋಕಾಧಾರ ಚಿನುಮಯ |
ನೀರಜಾಂಬಕನೊಲಿದು ಪಾಲಿಸು ಮತಿಗೆ ಮಂಗಲವ || ||೬||

ದ್ವಿಪದಿ

ಆದಿರಾಮಾಯಣದ ಚರಿತಾಮೃತದಲಿ
ಮೇದಿನಿಪನಜಗೆ ಸುತರುದಿಸಿ ವಿಭವದಲಿ || ||೭||

ಪತ್ತುರಥನೆಂದೆನಿಸಿ ಭೂಪರನು ಜೈಸಿ
ಮತ್ತೆ ಮೂರಬಲೆಯರ ವರಿಸಿರ್ದು ಸಹಸಿ || ||೮||

ಇಂದ್ರಲೋಕವ ಪೊಕ್ಕು ಖಳರ ಮರ್ದಿಸುತ
ಚಂದದಿಂ ಮೆರೆದಿರ್ದ ಗಂಭೀರಚರಿತ || ||೯||

ಯಕ್ಷಗಾನದೊಳೊರೆವೆ ತಿಳಿದಂದದಿಂದ
ಲಕ್ಷ್ಮೀಶ ಸಲಹೆನ್ನ ಸತತ ಕೃಪೆಯಿಂದ || ||೧೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಘನತಪೋಧನ ಸೂತ ಶೌನಕ |
ಮುನಿಕದಂಬಕೆ ಚೆಲ್ವ ಚರಿತವ |
ವಿನಯದಿಂದರುಹುತ್ತಲಿರೆ ಪದ | ವನಜಕೆರಗಿ || ||೧೧||

ಪತ್ತು ರಥನೆಂಬರಸನಾರೈ |
ಮತ್ತೆ ವೈಭವದೊಳಗೆ ಮೂವರು |
ಮತ್ತಕಾಶಿನಿಯರನು ವರಿಸುತ | ಲರ್ತಿಯಿಂದ || ||೧೨||

ವಿಕ್ರಮದಿ ಭೃಗುರಾಮ ಕ್ಷತ್ರಿಯ |
ಚಕ್ರವಾಲವನರಿಯೆ ಬದುಕಿದ |
ಶಕ್ರನರಿಗಳ ಮರ್ದಿಸಿದನಾ | ಚಕ್ರವರ್ತಿ || ||೧೩||

ಮೆರೆದನೆಂತಾ ಚರಿತವನು ನಮ |
ಗೊರೆಯಬೇಕೆನೆ ಮೌನಿರಾಯರ |
ಕರುಣದಿಂ ತಕ್ಕೈಸಿ ಯಮಿ ತಾ | ನೊರೆದನಾಗ || ||೧೪||

ವಾರ್ಧಕ

ಸರಸದಿಂ ಕೇಳಿರೈ ಖದ್ಯೋತವಂಶದಲಿ
ನೆರೆಪರಂಪರೆಯೊಳಗಯೋಧ್ಯ ಪುರವರದೊಳಂ
ದರಸನಜನೆಂಬವಂ ಪುಟ್ಟಿಸದ್ಧರ್ಮದಿಂದವನಿಯಂಪಾಲಿಸುತಲಿ |
ಇರಲು ವಾಸಿಷ್ಠನುಂ ಸಚಿವಂ ಸುಮಂತ್ರನುಂ
ಇರಲೆಲ್ಲವೊಂದಿನಂ ಗದ್ದುಗೆಯೊಳೊಪ್ಪುತಂ
ಧರಣೀಂದ್ರ ಕುಶಲದಿಂ ಬಣ್ಣಿಸುತ ವಾಸಿಷ್ಠ ಮೌನೀಶಗಿಂತೆಂದನು || ||೧೫||

[ರಾಗ ಕಾಂಭೋಜಿ ಝಂಪೆತಾಳ

ಲಾಲಿಸೆಲೆ ದರ್ಪಣಕಪೋಲೆ ಸದುಗುಣಶೀಲೆ |
ಬಾಲೆ ಫಣಿವೇಣಿ ನಿಜರಾಣಿ |
ಪಾಲಿಸಿದೆನವನಿ ಪಲಗಾಲವಿಂದಿನವರೆಗೆ |
ಬಾಲಕರಗಾಣೆ ಸುಶ್ರೋಣಿ || ||೧೬||

ಮತ್ತಕಾಶಿನಿ ನಮಗೆ ಪುತ್ರರಿಲ್ಲದ ಮೇಲೆ |
ಧಾತ್ರಿ ಸೌಭಾಗ್ಯವೇಕಿನ್ನು ||
ವ್ಯರ್ಥವಾಯ್ತೆನ್ನಯ ಸಮಸ್ತ ಸತ್ಕರ್ಮ ಪರ |
ಮಾರ್ಥವೀನಡತೆ ಸಾಕಿನ್ನು || ||೧೭||

ಹಿಂದಾದ ಸೌಭಾಗ್ಯ ಕಂದ ಸತಿಯರ ವ್ರತವ |
ನಂದು ಕೆಡಿಸಿರ್ದಪೆನೊ ಶಿವನೆ ||
ಇಂದಪುತ್ರಸ್ಯ ಗತಿ ನಾಸ್ತ್ಯೆಂಬ ತೆರನಾಯ್ತು |
ಸಿಂದೂರಗಮನೆಯಹಿವೇಣಿ || ||೧೮||

ವೀರಯಿನಕುಲದ ಮಹವುದಾರರಾಯರ ಕೀರ್ತಿ |
ಮಾರುತಂಶಕನೆಂಬುದೆನಿಸಿ |
ಜಾರಿನೆಲೆಯಿಲ್ಲದೇ ಸಾರಿಯಾ ನರಕದೊಳ್ |
ನರಳುವಂತಾಯ್ತೆಂದ ಸಹಸೀ || ||೧೯||

ತರುಣಿಮನ ಕರಗುತ್ತ ಹರಹರಾ ನಮಗಿಂಥ |
ದುರಿತ ಬರೆದನೆ ಬ್ರಹ್ಮನೆನುತ ||
ಕೊರಗಿ ನೆಲದಲಿ ಪೊರಳೆ ನೃಪನು ನಿಟ್ಟುಸಿರಿಟ್ಟು |
ಗುರುವಸಿಷ್ಠನಿಗೆಂದನಾಗ ||] ||೨೦||

ವಾರ್ಧಕ

ಹರಿಗಬ್ಜಮಾಕಾಶಕಾದಿತ್ಯನುಡುಗಳ್ಗೆ
ವರ ಚಂದ್ರ ಶಿಷ್ಯರ್ಗೆ ಗುರುಲತೆಗೆ ತರು ಪೀಠ
ಕುರೆಲಿಂಗ ಮುಂಶಿರಕೆ ಮಣಿಮಕುಟ ಮುಖಕಕ್ಷಿ ರಾಜೇಂದ್ರ ಸಭೆಗೆ ಕವಿಯು |
ತರಳೆಗಾಳ್ದಂ ಸಕಲ ಸಂಪದಕೆ ದಾತಾರ
ನರಗೋರ್ವ ಸುಕುಮಾರ ನಿಲ್ಲದಿರೆ ಫಲವೇನು
ಬರಿದಾಯ್ತು ಬಾಳೆಂದು ಕೊರಗುತಿಹ ನೃಪನಿಂಗೆ ವಾಸಿಷ್ಠ ನಿಂತೆಂದನು || ||೨೧||

ರಾಗ ಸಾಂಗತ್ಯ ರೂಪಕತಾಳ

ರಾಜೇಂದ್ರ ವಂಶಾಭ್ಧಿ ರಾಜಾ ಕೇಳ್ ದಿವಸದಿ |
ರಾಜಕುಲಾಬ್ಜಮಾರ್ತಾಂಡ ||
ಭೋಜ ಸುಸಂಪದ ಸಾಮ್ರಾಜ್ಯ ಶೋಭಿತ |
ವ್ಯಾಜವ ಬಿಡು ಸುಪ್ರಚಂಡ || ||೨೨||

ಪೊಂದೆ ತಾವರೆಗಂದ ನಂದೊಪ್ಪಿದಾ ಸಭೆ |
ಗಂದೆಲ್ಲ ಋಷಿಯೋಗಿ ಜನರು ||
ಬಂದಿರಲೀ ಕುಲದಂದವ ನುಡಿದುದ |
ನಂದು ಕೇಳಿಹೆ ಚೆಲ್ವ ಕಥೆಯ || ||೨೩||

ಆ ರಘುವಂಶದಿ ವೀರಮಹಾತ್ಮರು |
ಭಾರಿ ವಿಖ್ಯಾತಿಗಳಿಂದ ||
ಮೆರೆವರೆಂದೆನುತಲಿ ಸಾರಿದರೈ ಸುಕು |
ಮಾರ ಪುಟ್ಟುಗು ಸಿದ್ಧವೆಂದ || ||೨೪||

ಭಾಮಿನಿ

ಎನಲು ನೃಪನರ್ಧಾಂಗಿ ನುಡಿದಳು
ಘನಮಹೋತ್ತಮ ಪೇಳ್ದ ಮಾತಿನ
ಘನತೆ ದೃಢವೇ ನಮ್ಮ ಕುಲಸಿರಿ ಮೇಲೆ ಹಬ್ಬುವುದೇ |
ಜನಿಪರೇ ಬಾಲಕರು ಬಂದಿಹ
ಮನದ ಶಂಕೆಯು ಪೋಪುದೆಂದೆನೆ
ಮುನಿಪ ನಾರದನಾಗ ಬಂದನಯೋಧ್ಯಪುರಕಾಗಿ || ||೨೫||

ರಾಗ ಕೇದಾರಗೌಳ ಅಷ್ಟತಾಳ

ನಾರದನೈತಂದ ವಾರತೆ ಕೇಳುತ್ತ |
ಧಾರುಣಿ ಪಾಲಕನು ||
ಭೋರನಿದಿರ್ಗೊಂಡು ವೀರಮಣಿಯುತ ಮತ್ತೆ |
ಚರಣ ಪೂಜಿಸುತಿರಲೆಂದನು || ||೨೬||

ಭಾನು ವಂಶಾಂಬುಜಭಾನು ನಿನಗೆ ಸ್ವ |
ರ್ಭಾನುವೆ ತಡೆದಂದದಿ ||
ಏನಿದು ಮರುಕ ದುಮ್ಮಾನ ಪೇಳೆಂದೆನ |
ಲಾ ನರೇಶ್ವರ ಮುದದಿ || ||೨೭||

ನಂದನರಿಲ್ಲೆಂಬುದೊಂದೆ ಕಾರಣ ಬೇರಿ |
ನ್ನೊಂದಿಲ್ಲವೀ ರಾಜ್ಯದಿ ||
ಎಂದಾತನೆರಗುತ್ತ ನಿಂದಿರೆ ಭಾರತಿ |
ಕಂದನೆಂದನು ಮುದದಿ || ||೨೮||

ರಾಗ ಬೇಗಡೆ ತ್ರಿವುಡೆತಾಳ

ಲಾಲಿಸೈ ಕಿವಿಗೊಟ್ಟು ಭೂಪೇಂದ್ರ | ನಾನೆಂಬೆ ಮುಂದಿನಿ |
ನ್ನೇಳಿಗೆಯನರಿ ದ್ವಿಪದ ನರೇಂದ್ರ ||
ಜಾಲವಲ್ಲಿದು ಹಿಂದೆ ದಕ್ಷನ | ಬಾಲೆಯದಿತಿಯು ನುತಿಸೆ ಶ್ರೀಪತಿ ||
ಲೋಲನೇತ್ರೆಗೆ ಭಾಷೆಯನು ತಾ | ಹೇಳಿದನು ದಿಟ ತಾಳು ಧೈರ್ಯವ || ||೨೯||

ಮೂರು ಜನುಮದಿ ನಿನಗೆ ಮಗನಾಗಿ | ದಾನವರನೆಲ್ಲರ |
ತರಿದು ಭೂಮಿಯ ಭಾರವನು ನೀಗಿ ||
ತೋರುವೆನು ಸಂತಸವೆಂದು ಮು | ರಾರಿ ವಾಸವ ಜನನಿಗರುಹಿದ |
ವಾರತೆಯ ತಿಳಿದಿಲ್ಲವೇ ಸುಕು | ಮಾರನಪ್ಪನು ನಿನಗೆ ನಿಶ್ಚಯ || ||೩೦||

ಯತಿಪ ಕಾಶ್ಯಪ ನಿನಗೆ ಮಗನೆನಿಸಿ | ತಾಪತ್ತುರಥನೆಂ |
ದತಿ ಪರಾಕ್ರಮಿಯಪ್ಪನಾ ಸಹಸಿ ||
ಹಿತದೊಳಾತನ ಸತಿಯು ಕೋಸಲ | ವತಿಗೆ ಪುಟ್ಟುತ ಲಗ್ನಗೈಸಲು |
ರತಿಪತಿಯ ಪಿತನುದಿಸಿ ಖೂಳರ | ಹತಿಸಿ ರಂಜಿಪ ವ್ಯಥೆಯ ಬಿಡು ನೃಪ || ||೩೧||

ಕಂದ

ಮತ್ತಾ ಮೂರನೆ ದೇವರೆ
ಪುತ್ರನೆನಿಸುತಲೆ ಕೊಲ್ವನು ಜಗದೊಳ್ ಖಳರಂ |
ಚಿತ್ತದ ಚಿಂತೆಯು ಬೇಡೆಂ
ದತ್ತಲೆ ಧೈರ್ಯವ ನರುಹುತ ಮುನಿವರನಡೆದಂ || ||೩೨||

ಭಾಮಿನಿ

ಹರಿಹರರ ಕೀರ್ತಿಸುತ ಹಂಸೆಯೊ
ಳಿರದೆ ತೆರಳಲ್ಕತ್ತ ತೋಷದೊ
ಳರಸ ಸತಿ ಯೊಡನಿರಲು ಕಾಲಾಂತರಕೆ ಗರ್ಭವನು |
ಧರಿಸಿದಡೆ ಸೀಮಂತಮಂ ನೆರೆ
ವಿರಚಿಸಲು ನವ ಮಾಸದಂತ್ಯದಿ
ತರುಣಿ ವೇದನೆಗೊಳುತ ಮರುಗಿದಳೇನ ಬಣ್ಣಿಪೆನು || ||೩೩||

ರಾಗ ಸೌರಾಷ್ಟ್ರ ಏಕತಾಳ

ಎಂತು ತಾಳಲಯ್ಯೊ | ತಡೆಯಲಾರೆ | ಎಂತು ನಾ ಬಾಳಲಯ್ಯೊ ||
ಮುಂತೆಯೆ ವಡಲೊಳು | ನಿಂತು ತಿರುಗುತಿಹು |
ದಂತರವರಿಯೆನಲ್ಲ | ದೇವನೆ ಬಲ್ಲ || ||೩೪||

ಕಟಿಯೂರು ಜಾನುಗಳು | ವಕ್ಷಗಳಲ್ಲಿ | ಸಟೆಯಲ ಕುಟಿಲಗಳು |
ತುಟಿ ಕುಚ ತಟಿ ನಾಭಿ | ದಿಟ ಪಟುತರಮದೋ |
ತ್ಕಟ ಜಂಘೆ ನೋವಿದೆಲ್ಲ | ಸಹಿಸೆನಲ್ಲ || ||೩೫||

ಶಿರಕರ ಚರಣವನು | ಎತ್ತಲಿಕಾರೆ | ಭರಿತ ಭಾರಂಗಳೇನು ||
ಧರಣಿಯ ತರುಣಿಯರ್ | ಧರಿಸುವರೆಂತಿದ |
ಪರಿಯನಾರ್ಗೆಂಬೆನೆಲ್ಲ | ಶಂಕರ ಬಲ್ಲ || ||೩೬||

ವಾರ್ಧಕ

ಮತ್ತೆ ಸುಮುಹೂರ್ತದಿಂ ಸುರರುಘೇಯೆನ್ನಲುಂ
ಪುತ್ರನಂಪಡೆದಳುಂ ಸಂತಸದ ಗುಡಿಯೊಳುಂ
ಧಾತ್ರೀಶನಾನಂದಗೊಳ್ಳುತಂ ಮುನಿಗಳಂ ಬರಿಸುತಂ ವಿಭವದಿಂದ |
ಪತ್ತು ದಿನ ಕಳೆಯಲುಂ ಹರ್ಷದಿಂ ನಲಿವಿನಿಂ
ಉತ್ತಮದ ಪೆಸರಿಟ್ಟು ಋತ್ವಿಜರು ಸರಿಯಲ್ಕೆ
ಇತ್ತಲರ್ಭಕನ ಚಿನ್ನದ ತೊಟ್ಟಿಲೊಳಗಿಟ್ಟು ತೂಗಿದರ್ ಶೋಭಾನದಿ || ||೩೭||

ರಾಗ ಕಾಪಿ ಅಷ್ಟತಾಳ

ಜೋಜೋ ಖದ್ಯೋತವಂಶಲಲಾಮ |
ಜೋ ಜೋ ಸಾಗರಕುಲಸಾರ್ವಭೌಮ ||
ಜೋಜೋ ಅರಿಕಾಲತಿಮಿರಮಾರ್ತಾಂಡ |
ಜೋಜೋ ಸದ್ಗುಣನಿಧಿ ಸುಪ್ರಚಂಡ || ಜೋ || ||೩೮||

ಜೋಜೋ ಲೀಲಾವತಿಗರ್ಭಚಂದ್ರ |
ಜೋಜೋ ಭೂಮಿಪಸುತ ಗುಣಸಾಂದ್ರ ||
ಜೋಜೋ ಕುಜನವಿಘಾತ ವಿಖ್ಯಾತ |
ಜೋಜೋ ಸಜ್ಜನದಾತ ಸುಪ್ರೀತ || ಜೋ || ||೩೯||

ಜೋಜೋ ಸತ್ಯಾತ್ಮಸದ್ಧರ್ಮಾನಂದ |
ಜೋಜೋ ಬಿಡೌಜಾದಿ ಸುರಜನವೃಂದ ||
ಜೋಜೋ ಅಜಪುತ್ರ ಸೌಭಾಗ್ಯಸಿರಿಯೆ |
ಜೋಜೋ ನೀ ಮೆರೆ ಶ್ರೀಹರಿ ಪೊರೆಯೆ || ಜೋ || ||೪೦||

ರಾಗ ಭೈರವಿ ತ್ರಿವುಡೆತಾಳ
ತರಳ ಬಳಿಕಾ ದ್ಯುಮಣಿಯಂದದಿ | ಮೆರೆಯೆ ಬೆಳೆಯಲು ಕಾಣುತ |
ವಿರಚಿಸಿದನುಪನಯವ ಮತ್ತವ | ಶರದ ವಿದ್ಯವ ಕಲಿಸುತ |
ಗುರುಗೆ ಪಂಡಿತನಾಗಿ ಭುಜಮುಂ | ದ್ವರಿಯುತುಬ್ಬಲು ನೋಡುತ |
ಹರುಷವಾಂತಿರೆ ಸಕಲ ಗುಣಗಳ | ಭರಿತನಾಗುತ ನೃಪಸುತ | ಚಂದದಿಂದ || ||೪೧||

ಸರುವ ಬಗೆಯಲಿ ವೀರನಾಗುತೆ | ವರರಥವ ದಶದಿಕ್ಕಲಿ |
ಚರಿಸೆ ಸುರರಭ್ರದಲಿ ಪೊಗಳಿದ | ರರಸ ದಶರಥ ನೀತನು |
ತರಣಿ ವಂಶೋದ್ದಾಮನೆನ್ನಲು | ಧರಣಿಯಲಿ ಗುಣನಾಮದಿ |
ಭರಿತ ವಿಕ್ರಮತನದೊಳಿದ್ದನು | ನಿರತಮಹಸದ್ಧರ್ಮ ಮಾರ್ಗದಿ | ಏನನೆಂಬೆ || ||೪೨||

ಭಾಮಿನಿ

ಇತ್ತಲೀ ತೆರದಿಂದಲಿರುತಿರ
ಲತ್ತಕೋಸಲಪಾಲನೋಲಗ
ವಿತ್ತನೊಂದಿನವಾ ಪ್ರದೀಪನು ಸಕಲ ವೈಭವದಿ
ಪುತ್ರಿ ಕೌಸಲೆಯೆಂಬ ಗುಣಮಣಿ
ಗತ್ತ ಷೋಡಶ ವರ್ಷ ತುಂಬಲು
ಚಿತ್ತದಲಿ ತಿಳಿದೆಂದನಂದು ಸುನಂದ ಮಂತ್ರಿಯೊಳು || ||೪೩||

ರಾಗ ಕಾಂಭೋಜಿ ಝಂಪೆತಾಳ

ಕೇಳಿದೆಯ ಸಚಿವಕುಲ ಮಾಲ ಮಣಿ ಬಾಲಕಿಗೆ |
ಮೇಲೆ ಯೌವನ ತುಂಬಿತಿಂದು ||
ಆಲಿಪುದು ವರನ ಗುಣಶೀಲವಿಕ್ರಮರಾರು |
ಭೂಲೋಕದೊಳಗೆಂದನಂದು || ||೪೪||

ಒಂದು ಸರಿಯಾದರಿನ್ನೊಂದರಲಿ ಕೊರತೆ |
ಯಿಂದುಮುಖಿಗಹ ವರನ ಕಾಣೆ ||
ಚಂದ್ರಸೇನಕನೋರ್ವನಿಂದಳಿಯನಾಗುವಡೆ |
ಮಂದಮತಿಯಾಗಿರ್ಪನವನು || ||೪೫||

ಆತನಾಗದು ಮತ್ತೆ ಭೂತಳದೊಳಾರೆನಲು |
ಆತಗೆಂದನಯೋಧ್ಯಪುರದಿ ||
ಖ್ಯಾತ ಖದ್ಯೋತಕುಲ ರಾಜನಜನಿಂಗೊಬ್ಬ |
ಜಾತನಿರ್ಪನು ಧೀರನೆಂದ || ||೪೬||

ವಸುಧೇಶರೊಳಗಾತ ದಶರಥಾಖ್ಯನು ಖ್ಯಾತ |
ಕುಸುಮಗಂಧಿನಿಗಹನು ವರನು ||
ಕುಶಲವಹುದೆನಲಾಗ ಮಂತ್ರಿಯನು ಶೀಘ್ರದಲಿ |
ಕೋಸಲೇಶನು ಪೋಪುದೆಂದ || ||೪೭||

ರಾಗ ಕೇದಾರಗೌಳ ಅಷ್ಟತಾಳ

ಧರಣೀಶನಪ್ಪಣೆ ಗೊಳುತಯೋಧ್ಯವ ಸೇರೆ |
ದೊರೆಯಜ ಮನ್ನಿಸುತ ||
ಬರವೇನು ಮಂತ್ರಿಯೆ ಕೋಸಲದಿಂದೆನೆ |
ಕರವ ಜೋಡಿಸುತೆಂದನು || ||೪೮||

ದೊರೆರಾಯ ಕೋಸಲದೊರೆ ನಿನ್ನೊಡನೆ ಮತ್ತೊಂ |
ದೊರೆಯೆಂದು ಕಳುಹಿಸಿದ ||
ಭರಿತ ಕ್ಷೇಮವು ಶುಭಕರ ನಿನ್ನ ತರಳಗೆ |
ತರಳೆಯ ನೀವೆನೆಂದ || ||೪೯||

ಮನ್ನಿಸಬೇಕೆಮ್ಮ ವಚನವೆಂದೆರಗಲು |
ಪೂರ್ಣಸಂತೋಷದಲಿ ||
ಚಿನ್ಮಯಾನುಗ್ರಹ ನಡೆಯಲಿ ಶುಭವೆಂದು |
ತನ್ನ ಮಂತ್ರೀಶಗೆಂದ || ||೫೦||

ವಾರ್ಧಕ

ದೊರೆ ಕೋಸಲೇಶ್ವರಂ ಕಳುಹಿರ್ಪನೀತನಂ
ತರಳದಶರಥನಿಗಂ ಬಾಲೆಯಳ ನೀವೆನೆಂ
ದೊರೆದನದರಿಂದಲುಂ ನಡೆ ನಿಶ್ಚಯಂಗಳಂ ಗೈದು ಬಹುದೆನುತ ಕಳುಹೆ ||
ಭರದಿಂದಲುಭಯರುಂ ಬರಲಾ ಪ್ರದೀಪನುಂ
ಪರಿಕಿಸುತ ತೋಷದಿಂ ಸತ್ಕಾರ ಗೈಯುತಂ
ಪರಿಣಾಮ ವಾರ್ತೆಯಂ ಕೇಳಲಂದರುಹುತಂ ಮತ್ತೆಂದನಾ ಸುಮಂತ || ||೫೧||

ರಾಗ ಮಾರವಿ ಅಷ್ಟತಾಳ

ಕೇಳಯ್ಯಾ | ಭೂಪ | ಕೇಳಯ್ಯ || ಪ ||

ಬಾಲೆಯನೀವೆನು ದಶರಥಗೆಂದು |
ಬಾಲಕಿ ರೂಪವ ಕೊಟ್ಟೆ ನೀನಿಂದು ||
ಬಾಲನ ತೇಜವ ನೋಡೆನುತ್ತಿತ್ತ |
ಬಾಲೆಗೆ ಕೊಡಲದ ಒಪ್ಪಲು ಮತ್ತ || ||೫೨||

ಸರಿಸರಿಯುಭಯರ ಮತಗಳೊಂದಾಯ್ತು |
ಕರೆಕರೆ ಜೋಯ್ಸ ಲಗ್ನಗಳೆಂತು ||
ಒರೆಯಲಿಎನೆ ಬರಪೇಳಲು ಎಲ್ಲ |
ದೊರೆರಾಯಗಿಂತೆಂದ ಗುಣಿಸುತಲೆಲ್ಲ || ||೫೩||

ಬರುವ ಸಪ್ತಮಿ ದಿನ ಲಗ್ನವದೆನಲು |
ಭರದಿ ದಿಬ್ಬಣಗೊಂಡು ಬಹೆವು ನಾವೆನಲದ ||
ತರುಣಿಯ ನೀವೆ ನಾನೆಂದೆನಲಂದು |
ಪೊರಟು ಸುಮಂತ ಬಂದನಯೋಧ್ಯಕಂದು || ||೫೪||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಂದುಸುರೆ ಕೇಳುತ್ತ ಭೂವರ |
ನಂದು ಬರಿಸುತ ದಿಬ್ಬಣವ ಮುದ |
ದಿಂದ ಬಂಧುಗಳೆಲ್ಲ ಪೊರಟರು | ಚಂದದಿಂದ || ||೫೫||

ಇತ್ತ ಕೋಸಲಪಾಲ ಸಂಭ್ರಮ |
ವೆತ್ತು ಭರದಲಿ ಸಿಂಗರಿಸಿ ಪುರ |
ಮತ್ತೆ ಬಂದರ ಮನ್ನಿಸುತಲಿರ | ಲತ್ತಜವದಿ || ||೫೬||

ಬಂದ ದಿಬ್ಬಣಿಗರನು ಮನ್ನಿಸು |
ತಂದುವುಪಚಾರಗಳ ಗೈವುತ |
ಚಂದದಿಂ ಮಂಟಪದೊಳಿರಿಸುತ | ಲಂದು ಮುದದಿ || ||೫೭||

ಇರಲು ವೈಭವದಿಂದಲಿತ್ತಲು |
ಧರಣಿ ಪಾಲಕ ಪಾಂಡ್ಯ ದೇಶದ |
ದೊರೆಯೆನಿಪ ಕಲಿ ಚಂದ್ರಸೇನನು | ಹರುಷದಿಂದ || ||೫೮||

ಓಲಗವ ಕೊಟ್ಟಖಿಳ ದೇಶದ | ಭೂಲಲಾಲಮರ ಮಧ್ಯದೊಳಗಿರೆ |
ಕಾಲಿಗೆರಗುತ ಗುಪ್ತಚಾರರು | ಪೇಳ್ದರಾಗ || ||೫೯||

ರಾಗ ಮುಖಾರಿ ಏಕತಾಳ

ಭೂತಳೇಶ್ವರ ಲಾಲಿಸಯ್ಯ | ಪ್ರೀತೀಲಿ ಜೀಯ |
ನೂತನ ಕಾರ್ಯ ಮುಂದಿಡಯ್ಯ ||
ಯಾತು ಭಟನುತವ | ಮಾತುಳ ಸುತೆಯಳ |
ಖ್ಯಾತನಯೋಧ್ಯಾ | ನಾಥಜಗೀಯುವ |
ರೀತಿಯರಿಯದೆ ನೃಪಜಾತಗಳೈದಿತು |
ತಾ ತಡೆಯದೆ ನಿಜಧಾತ ವಿಖ್ಯಾತ || ||೬೦||

ಮತ್ತೆ ಭೂಸುರ ಕುಲವೆಲ್ಲ | ಗುಂಪಾಗುತೆಲ್ಲ |
ರತ್ತಾಲೆ ಗಮಿಸುವರಲ್ಲ ||
ಧಾತ್ರಿಪಗಳಿಯನು ಯಶಯುತ ನೀನಿರೆ |
ಪುತ್ರಿಯನನ್ಯರಿಗಿತ್ತಪನೇನದು |
ಚಿತ್ತದಿ ತಿಳಿಯುತಲತ್ತಗಮಿಸಲೆಮ |
ಗೊರ್ತಮಾನ ಸಹಿತಿಲ್ಲದೆ ಧಾರೆಯೆ || ||೬೧||

ರಾಗ ಭೈರವಿ ಏಕತಾಳ

ಚಾರಕರೆಂದುದ ಕೇಳಿ | ಹುಂ | ಕಾರದಿ ರೋಷವ ತಾಳಿ ||
ಭೂರಿ ಘನತೆ ಮಾತುಳಗೇ | ಇರ | ದೋರನು ವಾರ್ತೆಯ ತನಗೆ || ||೬೨||

ಸೋದರಳಿಯ ತಾನಿರಲು | ಸುತೆ | ಯಾದಳನೀವ ಲಗ್ನದೊಳು ||
ಮೇದಿನಿಯರಸುತ ಮಾವ | ನೆರೆ | ಹಾದಿಲಿ ಪೋಪಂಗೀವ || ||೬೩||

ಹಿತದಿಂದಲಿ ಕೇಳುವೆನು | ಕೊಡ | ಲತಿವಾಯ್ತೆಮ ಸುಖಗಿನ್ನು ||
ಖತಿ ದೋರಲು ಸಂಗರದಿ | ನೃಪ | ತತಿಯನು ಹೀರುವೆ ಭರದಿ || ||೬೪||

ಬಂಧಿಸಿ ಸೆರೆಯೊಳಗವನ | ಮುದ | ದಿಂದಲೆ ಬಾಲೆಯನ್ನಾ ||
ಇಂದೆಳತರುವೆನು ಸಿದ್ಧ | ನೋ | ಡೆಂದವ ಗರ್ಜಿಸುತ್ತೆದ್ದ || ||೬೫||

ಬಳಿಕವ ಮಣಿರಥವಡರಿ | ನಿಜ | ಬಲದೊಳು ವಾರ್ತೆಯ ಸಾರಿ ||
ದಳಪತಿಯೊಡಗೂಡುತ್ತ | ಬಂ | ದಳುಕದೆ ಪೊಕ್ಕನು ಮತ್ತಾ || ||೬೬||

ಭಾಮಿನಿ

ಆ ಸಭೆಯ ನುಗ್ಗಿದಡೆ ನೆರೆದಿಹ
ರಾ ಸಮರ್ಥರು ಬೆರಗಿನಿಂದಿರ
ಲಾ ಸಮಯದೊಳಗಾ ಪ್ರದೀಪನು ರತುನ ಗದ್ದುಗೆಯ |
ತೋಷದಿಂದಿತ್ತವನ ಮನ್ನಿಸು
ತಾಸುಜನಮಣಿ ಬಳಿಕ ಕಿರುನಗೆ
ಸೂಸಿ ವೀರನ ನೋಡುತೆಂದನು ಮಧುರ ವಚನದಲಿ || ||೬೭||

ರಾಗ ಕೇದಾರಗೌಳ ಝಂಪೆತಾಳ

ಕ್ಷೇಮವೇನಳಿಯ ನಿನಗೆ | ಪುರದಿ ಪರಿ | ಣಾಮವೇ ಸಕಲರಿಂಗೆ ||
ಈ ಮಹಾ ಸಭೆಗೆ ಬರಲು | ತಡವೇನು | ನೀ ಮುದದಿ ಪೇಳೆನ್ನಲು || ||೬೮||

ಎಲ್ಲ ಕ್ಷೇಮಿಗಳಾದರೂ | ನಾವ್ ಬೇಗ | ಇಲ್ಲಿ ಕೂಡಿದೆವಾದರೂ ||
ಸಲ್ಲಲಿತ ಹಿತವ ಗೈವ | ಭಟರುಂಟೆ | ಬಲ್ಲೆನಿದರಂದ ಮಾವ || ||೬೯||

ಅರರೆ ಕ್ರೋಧಗಳೇನೆಲ | ಸತ್ಕರವ | ವಿರಚಿಸಿದೆ ನಾನುಂಟೆಲ ||
ಮರುಳುತನವೇನೆನಲ್ಕೆ | ಮಾತುಳನೊ | ಳೊರೆದ ನಿಜ ಮನದ ಬಯಕೆ || ||೭೦||

ಮರುಳೆ ಸೋದರದಳಿಯಗೆ | ಕೊಡದೆ ನೀ | ತರಳೆಯನ್ನನ್ಯರಿಂಗೆ ||
ತರಲು ಯೋಚಿಸುತಲಿಂದ | ಬಲುತರದ | ಸರಸ ಮಾತೇತಕೆಂದ || ||೭೧||

ತರಳೆ ಬಯಸಿದಳಾತನ | ಅದರಿಂದ | ತೆರುವೆ ಕೇಳ್ ಸುಗುಣ ರನ್ನ ||
ಭರದಿಂದ ಮುಂಗಜ್ಜವ | ಭದ್ರದಿಂ | ನೆರವೇರಿಸಿಲ್ಲಿ ಹಿತವ || ||೭೨||

ನುಡಿಯಲೇಕೀ ಮಾತನು | ತನಗಿಂದು | ಹುಡುಗಿಯಳನಿತ್ತು ನೀನು ||
ಬಿಡದೆ ಕಳುಹಲ್ಕೆಲೇಸು | ಅಲ್ಲದಡೆ | ಕಡುಹ ತೋರೈ ಶಭಾಸು || ||೭೩||

ಧರಣಿಪನ ಕುಲದೊಳುದಿಸಿ | ಇತ್ತನುಡಿ | ಗೆರಡ ಬಗೆಯುವೆ ಸಾಹಸಿ ||
ತರುಣಿ ಹಂಬಲವ ತೊರೆದು | ನಡೆನಿನ್ನ | ಪುರಿಗೆಂದ ವೀರನಂದು || ||೭೪||