ಭಾಮಿನಿ

ಅವನು ತಪವಾಂತಿರಲಿಕಿತ್ತಲು
ಭುವನದಲ್ಲಣ ದಶವದನನು
ತ್ಸವದಿ ಸಿಂಹಾಸನದೊಳಧಿಕಾನಂದ ವೈಭವದಿ |
ದಿವಿಜತತಿಜಯವೆನಲು ದಿತಿ ಸಂ
ಭವರು ರಾಕ್ಷಸ ಮಂತ್ರಿ ಮುಖ್ಯರು
ಕುವರರೊಡನೊಪ್ಪಿರಲು ಮನದೊಳು ತಾನೆಯೋಚಿಸಿದ || ||೧೪೨||

ರಾಗ ಕಾಂಭೋಜಿ ಝಂಪೆತಾಳ

ಆರಿರುವರಿನ್ನು ಸರಿ ಮೂರುಲೋಕವನೆಲ್ಲ |
ಸಾರಿಜೈಸುತ ಭಾಗ್ಯಸೆಳೆದ ||
ವಾರಿಜೋದ್ಭವ ಸುರರ ಸೋಲಿಸಿದೆ ಶಂಕರನ |
ಮೀರಿವಲಿಸಿದೆ ಛಲದಿ ಹಿಂದೆ || ||೧೪೩||

ಅರಿತೆ ಸನಕಾದ್ಯರಲಿ ತರಣಿವಂಶದಿ ವೈರಿ |
ದೊರೆ ಪತ್ತುರಥಗೆ ಮಗನಾಗಿ ||
ಹರಿಜನಿಸಿ ಬಹನೆಂದು ತಿಳಿದಯೋಧ್ಯಾಖ್ಯಪುರ |
ದರಸ ಮಾಂಧಾತಗಿದಿರಾಗಿ || ||೧೪೪||

ಭೂರಿ ಸೆಣಸುತ ಗೆದ್ದೆ ಸಾರಿಯನರಣ್ಯಕನ | ||
ಹೀರಿ ಪಲಗಾಲವಾಯ್ತೀಗ ||
ಧಾರುಣಿಪರಾರೆಂದು ನೀರಜೋದ್ಭವಗೊರೆಯೆ |
ವೀರ ದಶರಥನೆಂದು ಪೇಳ್ದ || ||೧೪೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಿಸಜಭವನೆಂದುದನು ಕೇಳುತ |
ಮಸಗಿ ಬಹಿರಂಗದಿ ಪ್ರಹಸ್ತನೊ |
ಳುಸುರಿದನು ಮಾರ್ಬಲವನೆರಹುವ | ದಸಮ ಧುರಕೆ || ||೧೪೬||

ಪತ್ತುಸ್ಯಂದನಯೋಧ್ಯಪುರದಲಿ |
ಉತ್ತಮನು ತಾ ಶ್ರೇಷ್ಠನೆಂಬುದ |
ನಿತ್ತಲರಿತೆನು ಜೈಸಬೇಕವ | ನತ್ತಸರಿಯೆ || ||೧೪೭||

ಎಂದು ಮಿಸೆಯ ತಿರುಹಿ ಮಣಿಮಯ |
ಸ್ಯಂದನವನಡರುತ್ತ ಬಲ ಸಹಿ |
ತಂದು ಪೊರಟೈತಂದನಾ ಅಸು | ರೇಂದ್ರ ಭರದಿ || ||೧೪೮||

ವಾರ್ಧಕ

ಆರ್ಬಣ್ಣಿಸುವನಸುರನರ್ಭಕರ ಸಹಿತ ಸಚಿ
ವರ್ಬಹಳ ಬಲದಿಂದಲರ್ಬುದದ ಸಂಖ್ಯೆಯಿಂ
ಪರ್ಬುದಳ ಕೂಡಿಬರೆ ಪರ್ವತವೆ ಜರಿದು ಭೂಗರ್ಭಾಭ್ರನಡನಡುಗಲು ||
ಜರ್ಬಿನಿಂದಾಪುರವ ಪರ್ಬುಕಂದಿಸಿಕಾದ
ವರ್ಬರಲು ಮೇಲೆ ಖಳ ವೂರ್ಬಲವು ಧುಮುಕುತಂ
ದಾರ್ಭಡಿಸುತಿರೆ ಚಾರಕರ್ ಭೀತಿಯಿಂದೈದುತುರ್ವೀಂದ್ರಗಿಂತೆಂದರು || ||೧೪೯||

ರಾಗ ಸಾರಂಗ ಏಕತಾಳ

ಲಾಲಿಸಬೇಕು ಜೀಯ | ರಾಯ ನಮ್ಮೊಡೆಯಾ |
ಲಾಲಿಸಬೇಕು ಜೀಯ || ಪಲ್ಲವಿ ||

ಈಟಿ ಕಠಾರಿಯು | ಘೋಟಕ ಗಜರಥ |
ಕೂಟವಧಿಕ ಖಳ | ಕೋಟಿಯೊಳಿಂದೂ | ಐತಂದು || ಲಾಲಿಸ || ೧೫೦ ||

ಇತ್ತ ನಮ್ಮ ದ್ವಾರದ ಹೊರಗೆ | ಹತ್ತು ತಲೆಯ ದೈತ್ಯ ಕಡೆಗೆ |
ಸುತ್ತುಮುತ್ತು ಬಲವ ನಿಲಿಸುತ | ಇರ್ಪನು ದಾತ || || ೧೫೧ ||

ಏನೆಂಬೆ ದೊರೆಯೆ | ದಾನವರುಬ್ಬಟೆ |
ತಾನಂಭೋ ನಿಧಿ | ಗಾನದೊಳಿಹುದು | ನೋಡುವುದು || ೧೫೨ |

ರಾಗ ಸೌರಾಷ್ಟ್ರ ತ್ರಿವುಡೆತಾಳ

ಉಸುರಲೀ ಪರಿ ಕೇಳ್ದು ರೌದ್ರದಿ |
ಮಸಗಲೇಣ್ದೆಸೆ ಕಂಪಿಸಲು ಮದ |
ಮೆಸಗಿ ಮುತ್ತಿದನಾವನಿಂದಿನೊ | ಳಸಮ ಭಟನು || ೧೫೩ ||

ಆರು ಬಂದರದೇನಿದೆಂಬುದ |
ಸಾರಿ ಪರಿಕಿಪೆನೆಂದು ಮಣಿರಥ |
ವೇರಿ ಬಲಗೂಡುತ್ತ ಪೊರಟನು | ದಾರಧೀರ || ೧೫೪ ||

ಬಂದು ತಾರಕೆ ಮಧ್ಯದಲಿ ಶಶಿ |
ಯಂದದಿಂದರಿತಿಮಿರದ್ಯುಮಣಿಯ |
ನಿಂದು ನಿಜಕುಲ ಧರ್ಮ ಮಾರ್ಗದೊ | ಳೆಂದ ಖಳಗೆ || ೧೫೫ ||

ರಾಗ ಶಂಕರಾಭರಣ ಅಷ್ಟತಾಳ

ಅಸುರರಧಿಪ ಕೇಳು ನಿನ್ನ | ಪೆಸರು ವಂಶ ರಾಜ್ಯಗಳನು ||
ಕುಶಲದಿಂದ ಪೇಳೆನಲ್ಕೆ | ವಸುಧೆಪಾಲಗೆ || ೧೫೬ ||

ಅಸಮಸಹಸಿ ಲಂಕೆಯಾಳ್ದ | ದಶಶಿರಾಖ್ಯ ಬೊಮ್ಮ ವಂಶ |
ವೆಸೆಯುವಹಿತಶರಧಿವಡಬ | ನುಸುರು ನಾಮವ || ೧೫೭ ||

ತರಣಿಕುಲವಯೋಧ್ಯದೇಶ | ದರಸ ವೈರಿ ಕರ್ಪುರಾಗ್ನಿ |
ಮೆರೆವ ದಶರಥೇಂದ್ರ ನಿಲ್ಲಿ | ಯರುಹು ಕಾರ್ಯವ || ೧೫೮ ||

ಧರಿಸು ಚಾಪ ಸರಿಸು ಬಲವ | ಧುರಕೆನುತ್ತ ಬಂದೆನಿಲ್ಲೆಂ |
ದೊರೆಯೆ ಖಾತಿಗೊಂಡು ನುಡಿದ | ಜರೆದು ವೈರಿಯ || ೧೫೯ ||

ಭಾಮಿನಿ

ನೀನೆಲಾ ಪಿಂದೆಮ್ಮ ವಂಶದ
ಕ್ಷೋಣಿಪತಿಯನರಣ್ಯನಿರಿದಿಹ
ದಾನವಾಧಿಪ ಬಲ್ಲೆ ನಿಲ್ಲೆಂದೆನುತ ಗರ್ಜಿಸಿದ |
ತಾನೆ ಖಳಪತಿ ಸನ್ನೆಯಿಂಬಲು
ಸೇನೆ ಮುತ್ತಲಿಕಾ ಪ್ರಹಸ್ತನು
ಸಾಣೆಯಲಗನು ಸುರಿಸಿ ಮತ್ತಾ ನೃಪತಿಗಿಂತೆಂದ || ೧೬೦ ||

ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ರಾಯ ನಮ್ಮೊಳಿಂದು ಧುರವ ಗೈಯುತ |
ಕೊಲಿಸಲೇಕೆ ದಳವನೆಲ್ಲ ವ್ಯರ್ಥ ಕಾದುತ ||
ಕಲಿತ ಚಾಪ ಶಸ್ತ್ರ ವಿದ್ಯಗಳನು ತೋರಿಸು |
ತಿಳಿವೆನೆನಲು ನಿನ್ನ ಪೆಸರದಾವುದೆಂದನು || ||೧೬೧||

ಇತ್ತಕೇಳು ಲಂಕೆಯೊಡೆಯ ರಾವಣೇಂದ್ರನ |
ಮಿತ್ರ ಸಚಿವ ನಾ ಪ್ರಹಸ್ತ ನೋಡು ವಿಕ್ರಮ ||
ದೈತ್ಯ ಸೇನೆ ಸಹಿತ ಮುಸುಕಿ ಮೇಲೆ ಬೀಳಲು |
ಅಸ್ತ್ರದಿಂದ ರಕ್ತ ಸುರಿಸೆ ಮಂತ್ರಿ ಖತಿಯೊಳು || ||೧೬೨||

ರಾಗ ನಾದನಾಮಕ್ರಿಯೆ ಅಷ್ಟತಾಳ

ವೀರ ನೀನಾದೆ ಶಾಭಾಸುರೆ | ಖಳ | ರಾರುಭಟೆಗೆ ನರರ್ ನಿಲುವರೆ ||
ಈ ರೀತಿ ಬಲಗಳ ಭಂಗಿಸಿ | ನಮ್ಮ | ಮೀರಿಸಲಪ್ಪುದೆ ಸಹಸಿ || ||೧೬೩||

ಧಾರಿಣಿಯೊಳಗಿಪ್ಪ ಮನುಜರ | ಬಲ | ಹಾರಿಸುತ್ತೇರಿದಹಂಕಾರ ||
ಭೂರಿಯ ಪಿತ್ತವನಳಿಸುವೆ | ಪ್ರಾಣ | ಹಾರಿಸುತ್ತೆಮನತ್ತ ಸರಿಸುವೆ || ||೧೬೪||

ಎನೆ ಕೇಳ್ದು ಖಾತಿಯ ಧರಿಸುತ್ತ | ಹೇ | ಜನಪಾಲ ನೀನುಬ್ಬಬೇಡಿತ್ತ ||
ಘನತೆಯ ತೋರೆನ್ನುತೆಸೆಯಲು | ನೃಪ | ನನಿತಾನು ಖಂಡಿಸೆ ಛಲದೊಳು || ||೧೬೫||

ಏರಿ ಮದದಿ ಬಹ ಶರವನು | ಖಳ | ಧಾರುಣೀಂದ್ರನಿಗೆಚ್ಚಡದರನು ||
ಹೀರಿಸಿ ಪೊಯ್ಯಲು ಬೀಳುತ್ತ | ನೋಡಿ | ಜಾರಿತು ಸೇನೆಯು ಪಿಂದತ್ತ || ||೧೬೬||

ವಾರ್ಧಕ

ಧುರದೊಳರಿಜನರು ಶಚಿಮುಖಖಳರು ದಳಗಳುಂ
ಧರೆಗೊರಗೆ ಪಲವರುಂ ಸರಿಯೆ ಲಂಕೇಶ್ವರಂ
ಪರಿಕಿಸುತ ದಶಚಾಪ ಝೇಂಕರಿಸಿ ಹೂಂಕರಿಸೆ ಭುವನತ್ರಯಂ ಬೆಚ್ಚಲು ||
ಸುರರೆಲ್ಲರಚ್ಚರಿಯಲಿರಲಿಕಂದಾ ರಾಯ
ಮೆರೆವ ಕಾರ್ಮುಕವನ್ನು ಝೇಗೈಸೆ ಮುನಿತಂದ
ದೊರೆರಥಕೆ ತೇರನುಂ ಚಾಚಲಂದುಭುಯರುಂ ಕಾದಿದರು ಏವೇಳ್ವೆನು || ||೧೬೭||

ರಾಗ ಭೈರವಿ ಅಷ್ಟತಾಳ

ಎಲವೋ ಭೂಪಾಲ ಕೇಳು | ಶಚಿಮುಖ | ಖಳರ ನೀ ಯುದ್ಧದೊಳು ||
ಗೆಲಿದ ಗರ್ವವನರೆ | ಘಳಿಗೆಯೊಳ್ ನಿಲುಸುವೆ | ಛಲದಂಕ ನಿಲ್ಲೆಂದನು || ||೧೬೮||

ಅರಿವೆ ಕೇಳ್ ತವ ಪೂರ್ವದಿ | ಮಾಹಿಷ್ಮತಿ | ಯರಸನೊಡನೆ ರಣದಿ ||
ಸೆರೆಸಿಕ್ಕಿದಧಟನೀ | ಧುರಧೀರ ಬಾರಿಂದು | ಪರಿಕಿಪೆ ಭುಜಬಲವ || ||೧೬೯||

ಗಳಹುವದೇನು ನೀನು | ತ್ರೈಲೋಕ್ಯವ | ಗೆಲಿದಾತನೆಂಬುದನು ||
ತಿಳಿದುಸುರೈ ಸುರ | ಕುಲಜರೆಲ್ಲವರಳು | ಕುವರೇನು ನೀ ಬಲ್ಲೆಯ || ||೧೭೦||

ಕೇಳ್ದೆ ರಸಾತಳದಿ | ಬಲಿಯು ನಿನ್ನ | ನೊಯ್ದಿಡೆ ಬಿಳಿದುರ್ಗದಿ ||
ಜೋಲ್ದಾಬಲೆಯರೆಲ್ಲ | ನಾಲ್ದೆಸೆ ನಿಂದು ಕೈ | ಹೊಯ್ದು ಕುಣಿಸಿದಂದವ || ||೧೭೧||

ಪರಶುರಾಮನು ಭೂಪರ | ಕೊಲ್ಲುತ ಬರ | ಲರಿತಡಗುತಲಿ ಪೋರ ||
ನೆರೆ ಬದುಕಿದ ಭಂಡ | ತರಣಿ ವಂಶಜ ಕ್ಷತ್ರಿ | ಯರಸೆ ನೀ ಧಾರುಣಿಗೆ || ||೧೭೨||

ಅರಿತಿಹೆ ನೀ ರಂಭೆಯ | ತುಡುಕಿ ತಪಿ | ಸಿರುವ ವೇದಾವತಿಯ ||
ಕರವಿಕ್ಕಿ ಶಾಪವ | ಧರಿಸಿದ ಭಟನಲ್ಲೋ | ಸರಿ ಶಾಭಾಸೆಂದನು || ||೧೭೩||

ಭಾಮಿನಿ

ಗಿರಿಗೆ ಗಿರಿ ನಿಧಿ ನಿಧಿಗೆ ಮಲೆಯುವ
ತೆರದಿ ಝೇಂಕೃತಿ ಗೈದು ಪಂಥದೊ
ಳೆರಡು ಜಾವವ ಕಾದುತಿರ್ದರದೇನ ಬಣ್ಣಿಪೆನು ||
ಸುರರು ಭಾಪೆಂದೆನುತನಭದೋ
ಳಿರಲು ಶಸ್ತ್ರಾಸ್ತ್ರಗಳ ಕೆದರುತ
ಭರದಿ ಹೂಂಕರಿಸುತ್ತ ದಾನವ ರಾಯನಿಂತೆಂದ || ||೧೭೪||

ರಾಗ ಭೈರವಿ ಏಕತಾಳ

ಧಿರುರೆ ಪರಾಕ್ರಮನಹೆಯ | ಸರಿ | ಸರಿಯಾಗುತ ಸೆಣಸುವೆಯ ||
ಪರಿಕಿಸು ಬಲು ಹಂದೆನುತ | ಬಲು | ಶರವೆಚ್ಚಡೆ ಖಂಡಿಸುತ || ||೧೭೫||

ಅಣ್ಣನ ಪುರಬೆಂಬೊತ್ತಿ | ಮು | ಕ್ಕಣ್ಣನ ಪರ್ವತವೆತ್ತಿ ||
ಕುನ್ನಿಯೆ ಪಾತಕಿ ನೀನು | ದಿಟ | ಗಣ್ಯವೆ ತನಗೆನಲವನು || ||೧೭೬||

ದಶರಥ ತಾನೆಂದೆನುತ | ಮದ | ದಶಶಿರನೊಡನೆ ಯುದ್ಧ ||
ಎಸಗಲು ಜಯವಧು ಬಂದು | ನಿ | ನ್ನೊಶವಪ್ಪಳೆ ಸಾರಿಂದು || ||೧೭೭||

ಉತ್ತಮ ಕುಲದೊಳಗುದಿಸಿ | ಆ | ದೈತ್ಯರ ವೇಷವ ಧರಿಸಿ ||
ನೆತ್ತರು ಮಾಂಸವ ಸವಿದು | ಇಹ | ನತ್ತಲೆ ಬರುವಳೆ ಒಲಿದು || ||೧೭೮||

ಆದಡೆ ನಿಲ್ಲೆಂದೆನುತ | ಬಲು | ಕ್ರೋಧದಿ ಮುಸುಕಲು ಮತ್ತ ||
ಮೇದಿನಿಪತಿ ತುಂಡಿಸುತ | ಪಗೆ | ಯಾದನಿಗುಸುರಿದನತ್ತ || ||೧೭೯||

ರಾಗ ಭೈರವಿ ಝಂಪೆತಾಳ

ಧೀರ ಹುಲುಶರವೇಕೆ | ಹರ ಬೊಮ್ಮರೊಲಿದಿತ್ತ |
ಭೂರಿ ಮಾರ್ಗಣವೆಂದು | ತೂರಿದನು ಕಣೆಯ || ||೧೮೦||

ತರಿದೆಂದ ಹಾಳೂರಿ | ಗರಸ ನಿನಗೇಕಂಥ |
ಹರಕಮಲಜಾದಿಗಳ | ಶರವೆನ್ನುತೆಚ್ಚ || ||೧೮೧||

ಸಾಕೆಲವೊ ಬೊಬ್ಬಾಟ | ವೀಕಣದಿ ಕೇಳದಟ |
ಕೋಕಿ ಕೆಂಗರುಳೀವೆ | ಶಾಕಿನೀ ಗಣಕೆ || ||೧೮೨||

ಎಲವೊ ಬಿಸದಬ್ಜಮಿಂ | ದಳಿಕುಲಕೆ ಪಥ್ಯವೇ |
ಖಳರಿಂಗೆ ನರರಿದಿರೆ | ಬಳಲದೇಕೆಂದ || ||೧೮೩||

ಗರುಡ ತಾನಳಿಯಾಗಿ | ನೆರೆಹಾಲಹಲಮಬ್ಜ |
ಬೆರಸುಗೈ ದಾನವರ | ತರಿಯಲಾವೆಂದ || ||೧೮೪||

ಭಾಮಿನಿ

ಕಾದಿದರು ಪುರಹರಗಜಾಸುರ
ಮಾಧವನ ಕೈಟಭನ ಸಂಗರ
ಹಾದಿಗಿಮ್ಮಡಿಯೆನಲು ವಿವಿಧಾಯುಧದಿ ತಮ್ಮೊಳಗೆ |
ಕ್ರೋಧದಿಂ ದಿನವೈದು ಸಲೆಯಂ
ದಾದಿದೇವಿ ನಿಕುಂಭಿಳೇಶ್ವರಿ
ಯಾ ದನುಜಗಿತ್ತಿರ್ಪಶಕ್ತಿಯ ತೆಗೆದ ಖತಿಮಸಗೆ || ||೧೮೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ರಾಯ ಕೇಳೈ ವ್ಯರ್ಥ ಬಲು ಪರಿ |
ಬಾಯೊಳಾಡಲು ಫಲವೇಕೋನಿ |
ನ್ನಾಯತಿಕೆಯಿದ ಗೆಲಲು ವೀರರ | ಜೀಯನೈಸೆ || ||೧೮೬||

ಖಳನೆ ಕೇಳವನಿಯಲಿ ಸಜ್ಜನ |
ಬಲವಿಹೀನನ ಬೆದರಿಸಿದ ತೆರ |
ಕಳುಕುವನೆ ನಿಲ್ಲೆನುತಲಜಶರ | ಮುಳಿಯುತೆಚ್ಚ || ||೧೮೭||

ಧರೆಗೊರಗುತೆಚ್ಚರ್ತು ನುಡಿದನು |
ಕರೆಸು ಮೃತ್ಯುಂಜಯನ ನಿನ್ನಯ |
ಹರಣ ಕಾವರ ಬರಿಸೆನುತ್ತಲಿ | ಭರದೊಳೆಚ್ಚ || ||೧೮೮||

ಗಜರಿ ನೃಪ ಬಲು ದಿವ್ಯ ಶಸ್ತ್ರ |
ವ್ರಜವ ತುಂಬಲು ಕೊಳ್ಳದೈತರೆ |
ಸುಜನ ಕರಗಲು ಬಿದ್ದ ಸೈನಿಕ | ಗಜಬಜಿಸಲು || ||೧೮೯||

ವಾರ್ಧಕ

ಅರಸ ಮಣಿರಥದೊಳಂ ಮೂರ್ಛೆಯಿಂದೊರಗಲುಂ
ನೆರೆ ಮುತ್ತಿದಹಿತರಂ ನುಗ್ಗರದು ಖಳವರಂ
ದರಮನೆಯ ಪೊಕ್ಕವಂ ಸರ್ವರತ್ನಂಗಳಂ ವಿಭವಮಂ ಸೂರೆಗೈದು ||
ಹೊರಸಿದಂ ಬಲದೊಡಂ ಮತ್ತೆ ತಾನರಸಲುಂ
ಧರಣೀಶನರಸಿಯುಂ ಬಾಲೆಯರ ವೃಂದದಿಂ
ದಿರೆ ನೋಡಿ ರಾಕ್ಷಸಂ ಮನದೊಳಂ ಯೋಚಿಸುತ ಕೂಗುತ್ತಲಿಂತೆಂದನು || ||೧೯೦||

ಭಾಮಿನಿ

ಹರಿಣನೇತ್ರೆಯನಿವಳ ಸೆರೆಯೊಳ
ಗಿರಿಸಲರಿ ತಾನೆಂತು ಜನಿಸುವ
ನರಿವೆನೆಂದಬಲೆಯರ ಸಹಿತವನೊದು ರಥದೊಳಗೆ |
ಹರಿಸುತಂಬರಪಥದಿ ಬರುತಿರೆ
ತರಳೆ ಕೋಸಲರಾಯನಂದನೆ
ಮರುಗಿದಳು ನಡನಡುಗಿ ಕಲ್ಮರ ಕರಗುವಂದದಲಿ || ||೧೯೧||

ರಾಗ ನೀಲಾಂಬರಿ ಏಕತಾಳ

ಹರಹರಯಿಂದಿನಲಿ | ಬಲಸಹಿತೆನ್ನ | ವರನನು ಸಮರದಲಿ ||
ಇರಿದು ಭಂಡಾರವೆಲ್ಲ | ಹೊರಿಸುತಲೆಮ್ಮ | ಭರದಿ ಕೊಂಡೊವನಲ್ಲ || ||೧೯೨||

ಪತ್ತುರಥನ ಸತಿಯಾ | ಆ ಪ್ರದೀಪನ | ಪುತ್ರಿಯಜನ ಸೊಸೆಯ ||
ಧೂರ್ತ ಸ್ವಾಧೀನ ಗೈವನು | ಗತಿ ಯಾರು ಎನ್ನ | ನತ್ತಲೆ ಬಿಡಿಸಲಿನ್ನು || ||೧೯೩||

ಸುರಪ ದಿಕ್ಪಾಲಕರು | ಮನುಮುನಿ | ಯುರಗ ಧರಣಿಯುನವಗ್ರಹರು ||
ತರಳೆ ಕಷ್ಟವನೋಳ್ಪುದು | ಪ್ರಾರಬ್ಧಮೆನ್ನ | ಪೊರೆಯಲೊಬ್ಬರ ಕಾಣದು || ||೧೯೪||

ವನಜಸಖನೆ ನಿನ್ನಯ | ಕುಲದೊರೆಗೊಲಿಸಿ | ದನುಜನೊಡವೆ ದಮ್ಮಯ್ಯ ||
ಅನುಕಂಪನಿಧಿ ಮಡುಹಿ | ಖೂಳನ ಕೀರ್ತಿ | ಯನು ಧರಿಸೆನ್ನ ಸಲಹಿ || ||೧೯೫||

ರಾಗ ಬೇಗಡೆ ಆದಿತಾಳ

ಎಂದು ದ್ಯುಮಣಿಯಡಿಯ ನೆನೆದಳು | ಜಗತಿಗೆ ನೀ |
ನೊಂದು ಕಣ್ಣಾಗಿರ್ಪೆ ಮುದದೊಳು ||
ಕುಂದದೆರಡು ಪಥದಿ ನಡೆಯುವೆ | ತ್ರೈಮೂರ್ತಿಯರ |
ಚಂದದಿಂದೊಳಗೊಂಡು ಬೆಳಗುವೆ || ||೧೯೬||

ಎರಡೆರಡು ವೇದದೊಡಲಾಗಿ | ಬ್ರಹ್ಮತ್ವ ಮೆದೈ |
ಸಲಿಸುತಾಮರುತುವಿನಾಲಿಸಾಗಿ ||
ತಿರುಗಿ ಪನ್ನೆರಡು ಸ್ಥಾನದಿ | ಸಪ್ತಾಶ್ವದಿಂದ |
ಚರಿಸಿ ಲೋಕ ನಿತ್ಯ ಭರದಿ || ||೧೯೭||

ಇರುವದೊಂದೇ ಪಾಲಿಸಲಾತನೆ | ಹೆಳವನಾಗಿರುತೆ |
ಸರ್ವಗುಪಕಾರ ಮಾಳ್ಪನೇ ||
ತರಳೆಯನ್ನು ಮರತು ಪೋಪುದೇ | ಸಹಸ್ರಕಿರಣ |
ಕರುಣದೊಳ್ ಕಾಯಬಾರದೆ || ||೧೯೮||

ವಾರ್ಧಕ

ಹರಿಯೊಡನೆ ಸಿಲುಕಿರ್ದ ಕುರಿಯಂತೆ ವಾಯಸನ
ನುರೆಸೇರ್ದ ಕೋಗಿಲೆಯ ಮರಿಯಂತೆ ವಿಹಗನೊಶ
ವಿರುವ ಫಣಿಯಂತೆ ಪುಲಿಯಾಧೀನವಾಗಿರ್ಪ ಪಸುವಿನೆಳೆಗರುವಿನಂತೆ |
ನೆರೆಬೆಕ್ಕಿನೊಳಗಾದ ಇಲಿಯಂತೆ ಭಯದಿಂದ
ದುರುಳ ರಕ್ಕಸನ ನೋಡುತ ಬಿದ್ದು ಮರುಗುತಿರೆ
ತರಣಿ ಬಿಡದೈತಂದು ರಥವನುಂ ಪಥದೊಳಂ ತಡೆದು ಖಳಗಿಂತೆಂದನು || ||೧೯೯||

ರಾಗ ಮಾರವಿ ಅಷ್ಟತಾಳ

ಏನಯ್ಯಾ | ವೀರ | ಏನಯ್ಯ || ಪಲ್ಲವಿ ||

ಏನಯ್ಯ ತನ್ನಯ ವಂಶದ ದೊರೆಯ |
ಕ್ಷೋಣಿಲಿ ಜಯಿಸುತ್ತಲಾತನ ಸತಿಯ ||
ಕೌಣಪರಾಯ ನೀನೊಯ್ಯುವುದಿಂದು |
ಜಾಣರ ಮತವಲ್ಲ ಯೋಚಿಪುದಿಂದು || ||೨೦೦||

ಸಾಲ್ದಲೆಯವ ವೀರನಾಗಿರಲರಿಯ |
ಧಾಳ್ಧೂಳಿ ಗೈವುದು ನೀ ತವ ಪರಿಯ |
ಪೊದು ನಾರಿಯಗೊಂಬುದೇತರ ಧರ್ಮ |
ಐದು ಮೊಗನು ಮೆಚ್ಚಗೈವೆಯ ಕರ್ಮ || ||೨೦೧||

ಪರಸತಿ ಪರಧನವೆಳೆಯುವಭಟಗೆ |
ನರಕವೆಂದೆಂಬುದು ಸಿದ್ಧಾಂತ ಕಡೆಗೆ |
ನೆರೆ ಬಲ್ಲಿದವನಾಗಿ ನೀ ಗೈಯಬಹುದೇ |
ತರುಣಿಯ ಬಿಟ್ಟತ್ತ ಪೋಪುದು ಮುಂದೆ || ||೨೦೨||

ವರಬ್ರಹ್ಮವಂಶಜನಾಗುತ್ತ ನೀನು |
ದುರುಳತೆಯೆಸಗಲು ಕೀರ್ತಿಗಳೇನು |
ಬರುವುದೆ ಲೇಸಲ್ಲ ಬಿಡು ಬಿಡೆಂದೆನಲು |
ತಿರುಹುತ್ತ ಖಡ್ಗವನೆಂದ ಕೋಪದೊಳು || ||೨೦೩||

ಭಾಮಿನಿ

ನೀತಿಯರುಹಲು ಬಂದೆಯಾ ಖ
ದ್ಯೋತ ತಿಳಿವೆನು ಧರ್ಮಗಳ ಬಿಡು
ಸೂತ ಪೌರಾಣಿಕನೆ ಸಾರೆಂದೆನುತ ಹೂಂಕರಿಸೆ |
ಆತ ಖಳನಿಗೆ ತನ್ನ ವಂಶದ
ಭೂತಳಾಧಿಪನಿಂದ ಮಡಿಯೆಂ
ದಾತತೂಕ್ಷಣ ಶಪಿಸಿ ಸರಿಯಲು ಬಂದ ನಿಜಪುರಕೆ || ||೨೦೪||

ರಾಗ ಕಾಂಭೋಜಿ ಝಂಪೆತಾಳ

ಬಂದು ಕಮಲೋದ್ಭವನೊಳೆಂದ ದಶರಥನಿಗಾ |
ನಿಂದಿರಿದು ಸತಿಯ ತಂದಿಹೆನು ||
ಮುಂದೆಂತು ಜನಿಪ ಪಗೆಯೆಂದೆನಲು ರಾವಣನೊ |
ಳೆಂದನುರು ಭಯದಿಂದಲಜನು || ||೨೦೫||

ಧರಣೀಂದ್ರ ಸಂಗರದೊಳುರೆ ಬಳಲಿ ಮೂರ್ಛಿಸಿದ |
ನಿರದೆದ್ದು ಮುಂದಕಾ ಸತಿಯ ||
ಎರಕದಿಂ ಜನಿಸುತಿಹನರಸ ನಿನ್ನಯ ವೈರಿ |
ಮರೆಯ ಬೇಡೆನೆ ಕೇಳ್ದು ಸತಿಯ || ||೨೦೬||

ತರಿವೆನಿವಳಿಂಗೆನಲು ತರುಣಿ ಹತ್ಯವದೇಕೆ |
ಮರುಳುತನವೇಕೆನಲಿಕೆಂದ ||
ಸೆರೆಗಿಡುವೆನೆನಲು ಸರಸಿರುಹಭವ ಸನ್ನೆಯಲಿ |
ಸರಿಸೆ ಪೌಲಸ್ತ್ಯನಿಂತೆಂದ || ||೨೦೭||

ರಾಗ ಭೈರವಿ ತ್ರಿವುಡೆತಾಳ
ಏನಿದೇನೈ | ಯೋಚನೆ | ಏನಿದೇನೈ || ಪಲ್ಲವಿ ||

ಅರಿತರಿತು ನಿಗಮಾದಿಶಾಸ್ತ್ರವ | ಪರರ ದಂಡಿಸಬಹುದೆಯದರೊಳು |
ತರಳೆಯಲ್ಲವೆ ಪಾತಕದ ಮನ | ತರವೆ ನಿನ್ನಯ ಪಗೆಯು ಜನಿಸದ |
ತೆರವುಪಾಯವದುಂಟಿವಳನೀ | ಕರಸಿ ನಮ್ಮ ತಿಮಿಂಗಿಲನ ವಶ |
ಕಿರದೆ ಭದ್ರದೊಳಿತ್ತು ಕಾಯೆಂ | ದರುಹಿ ಬಿಡು ರಿಪುವೆಂತು ಜನಿಸುವ |
ಮಾತ ಕೇಳು || ||೨೦೮||

ಎಂದೆನಲು ಕೈಕಸೆಯು ನಡೆಯು | ತ್ತೆಂದಳಣುಗನಿಗಜ್ಜನುಸುರಿದ |
ನಂದದಿಂ ನಡೆ ಕುಟಿಲತನಗಳು | ಬಂದುದೇಕವ ಬಿಡುವದೆನುತಲೇ |
ನಿಂದು ಪೇಳಲು ಕೇಳ್ದು ಝಷಕವ | ನಂದು ಬರಸುತ ಸತಿಯ ಪೆಟ್ಟಿಗೆ |
ಯಿಂದ ಭದ್ರದೊಳಿರಿಸುತವನೊಡ | ನಂದು ಕೊಟ್ಟವನೆಂದ ಭರದಲಿ |
ಖಳಕುಲೇಂದ್ರ || ||೨೦೯||

ಇರಿಪುದೆಚ್ಚರಿಕೆಯಲಿ ಕಾಯುತ | ಲಿರುವದೆಂದವನನ್ನು ಕಳುಹುತ |
ಲೊರೆದನಜನೊಡನಹಿತ ಜನಿಸುತ | ಬರುವದೆಂತೈ ಸನಕರೆಂದುದು |
ಬರಿಯದಾದುದು ನೀನು ಪುಸಿಯೊಡ | ನೊರೆವೆನೆನಲಿಂತೆಂದ ನಿಶ್ಚಯ |
ಬರುವ ಸಮಯದೊಳೊರೆವೆನೆನ್ನಲು | ಪರಿಕಿಸುವೆನೆಂದೆನುತಲಿರ್ದನು |
ತೋಷದಿಂದ || ||೨೧೦||

ಭಾಮಿನಿ

ಮತ್ತೆ ನೃಪನರ್ಧಾಂಗಿ ಜೊತೆಯೊಳ
ಗಿತ್ತ ತಂದಿಹ ದೂತಿಯರ ಬಿಡ
ಲತ್ತ ಬಲ ಸಹಿತೆದ್ದು ಭೂವರ ಪರಿಕಿಸಲು ಪಗೆಯ |
ದೈತ್ಯನಿಲ್ಲದಿರಲ್ಕೆ ಪುರದಿಸ
ಮಸ್ತಭಾಗ್ಯಗಳರಸಿ ಸಹಿತಲೆ
ಎತ್ತ ನೋಡಲು ಕಾಣದಿರೆ ಬಿಸುಸುಯ್ದನಾರಾಯ || ||೨೧೧||

ರಾಗ ನೀಲಾಂಬರಿ ಝಂಪೆತಾಳ

ಏನ ಮಾಡಲಿ ಇನ್ನು | ಸೇನೆ ಸಹಿತೆನ್ನುವನು |
ದಾನವಾಧಮನೆನ್ನ | ತ್ರಾಣ ಜೈಸಿದನು || ||೨೧೨||

ರತುನ ಭಂಡಾರಗಳ | ನತಿಪರಾಕ್ರಮಿ ಖೂಳ |
ಸತಿಯರ ಸ್ತೋಮಗಳ | ಜೊತೆಯ ಭಾಗ್ಯಗಳ || ||೨೧೩||

ಅತಿ ಮದೋತ್ಕಟದಿಂದ | ಕದನ ಗೈಯುತಲಿಂದು |
ಚತುರತೆಲಿ ಕೊಂಡೊದ | ಗತಿಯೇನು ಮುಂದು || ||೨೧೪||

ಹಾ ನಾರಿ ಸುಗುಣಮಣಿ | ಜಾಣೆ ಫಣಿವೇಣಿ |
ಏಣಾಂಕ ವದನೆ ನಿಜ | ರಾಣಿ ಸುಶ್ರೋಣಿ || ||೨೧೫||

ಆ ನಾಗಗಮನೆ ಶುಕ | ವಾಣಿ ಕಟ್ಟಾಣಿ |
ಕಾಣಿಸೆಲೆ ಬಾಲೆ ಮಣಿ | ಮಾನಿನೀರಮಣಿ || ||೨೧೬||

ಎತ್ತ ಪೋದಳೊ ತನ್ನ | ಮತ್ತಕಾಶಿನಿಯನ್ನು |
ದೈತ್ಯವಶಗೈದವನೇ | ನೆತ್ತಗಮಿಸಿದನೊ || ||೨೧೭||

ನಿತ್ಯ ಖಳ ಬಂಧನದೊ | ಳಿನಿತೆಂತು ಬಾಳುವಳೊ ||
ಬಿತ್ತರಿಪರಾರೆನಗೆ | ಚಿತ್ತಹಿತ ಕಡೆಗೆ || ||೨೧೮||