ರಾಗ ತೋಡಿ ಏಕತಾಳ

ಅರಸ ಮರುಗಲರಿತು ಸಚಿವ | ನೊರೆದು ನೀತಿಯತ್ತ |
ಮರುಕವನ್ನು ಬಿಡಿಸುತಿರುತ | ಸರಿಯೆ ಮಾಸ ಪತ್ತ ||
ತರಳೆಯರು ಬಂದು ಭೂಮಿ | ವರಗೆರಗಲಾಗ |
ಭರದಿ ಬಂದುದಲ್ಲಿಂದೆನಲು | ಸೊರಗಿ ಪೇಳ್ದರ್ ಬೇಗ || ||೨೧೯||

ದುರುಳನೊದನೆಮ್ಮನೆಲ್ಲ | ಸರ್ವಭಾಗ್ಯವಂದು |
ತರಣಿ ತಡೆದು ಶಾಪಿಸಲ್ಕೆ | ಪುರವ ಪೊಕ್ಕನಂದು ||
ಒರೆದರೆಲ್ಲ ನೀತಿ ಕೇಳು | ತರಸಿಯಳನಂದು |
ಇರಿಸಿ ಪೆಟ್ಟಿಗೆಯಲಿ ಮಿನಿನ | ಕರೆದು ಕೊಟ್ಟನಂದು || ||೨೨೦||

ಶರಧಿಯೊಳಗೆ ಭದ್ರತ್ವದಿ | ಸರಿಸಿ ಕಾಯ್ದುದೆಂದು |
ಒರೆಯುತಾಜ್ಞೆ ಎಮ್ಮನೆಲ್ಲ | ಸೆರೆಯ ಬಿಟ್ಟನಂದು ||
ಇರದೆ ನಿಧಿಯ ದಾಟಿಸಲ್ಕೆ | ಕರಗಿ ಬಂದೆವಿಂದು |
ಪೊರೆಯೆನಲ್ಕೆ ಪೂರ್ವ ಸ್ಥಿತಿಯೊ | ಳಿರುವದೆಂದನಂದು || ||೨೨೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತಲಾ ಪದ್ಮಾಖ್ಯ ಕೇಕಯ |
ಪೃಥ್ವಿಪತಿ ರಂಜಿಸುತಲೊಂದಿನ |
ಪುತ್ರಿ ಕೈಕೆಯ ನೋಡಿ ಮನದಲಿ | ಬಿತ್ತರಿಸಿದ || ||೨೨೨||

ರತಿಯ ಧಿಕ್ಕಾರವನು ಗೈಯುತ |
ಲತಿ ಸೊಬಗನಾಂತಿರುವ ಜಾತೆಗೆ |
ಪತಿಯನಾವನ ಮಾಳ್ಪೆನೆನ್ನುತ | ವ್ಯಥಿಸುತಿರಲು || ||೨೨೩||

ಇಂದುಮುಖಿಯರ ವೃಂದದಲಿ ನಡೆ |
ತಂದು ಕೈಕೆಯು ಜನಕಗೆರಗುತ |
ಲಿಂದಿನಲಿ ವನಕೇಳಿಗೈದುವ | ದೆಂದು ಮನವೈ || ||೨೨೪||

ಕುಶಲದಲಿ ಕಳುಹೆನಲಿಕೊಪ್ಪಲು |
ಬಿಸಜಗಂಧಿಯರೆಲ್ಲ ವನದಲಿ |
ಕುಸುಮಗಳ ಕೊಯ್ಯುತ್ತ ವನದೊಳ | ಗೆಸೆಯುತಿರಲು || ||೨೨೫||

ಅರಸ ದಶರಥಗೆರಗಿ ಮೃಗಗಳ |
ಬಿರಿಸು ಹೆಚ್ಚಿದುದೆಂದು ದುಗುಡದೊ |
ಳೊರೆಯೆ ವನಪಾಲಕರಿಗಭಯವ | ನರಸನಿತ್ತು || ||೨೨೬||

ರಾಗ ಮುಖಾರಿ ಏಕತಾಳ

ನೋಡುತಲೆಡಬಲಗಳನು | ಬಲೆ |
ಗೂಡಿಸಿ ಶಬರರ್ಕಳನು ||
ಕೂಡುತ ವನದೊಳು | ರೂಢಿಪ ಮುತ್ತುತ |
ಕಾಡಿನ ಮೃಗಗಳ | ಗಾಢವ ನಿಲಿಸಲು ||
ಬೇಟೆಯಾಡುತ್ತ ಬಂದ ವೀರ || ||೨೨೭||

ತಿರುಗುತ ಗಂಡಿಯನರಸಿ | ಬಲ |
ಸರಿಸುತ ಮಾರ್ಗಣ ಸುರಿಸಿ ||
ಕರಿಸೂಕರ ಪುಲಿ | ಹರಿ ಮುಖ್ಯಾದ್ಯವ |
ತರಿಯಲಿ ಕೊಂದಾ | ಹರಿಣನು ಸರಿಯೆ | ಬೇಟೆ || ||೨೨೮||

ಅರಸನು ಅದ ಬೆಂಬತ್ತ್ತೆ | ಗಿರಿ |
ಚರಿಸುತಲಾ ಕೊಳದತ್ತೆ |
ಸರಿಯಲು ಬಳಲುತ | ಸರಸಿಯನರಸುತ |
ತರಳೆಯರಿರುವಡೆ | ಗಿರದೈತಂದ || ಬೇಟೆ || ||೨೨೯||

ಶರಷಟ್ಪದಿ
ಬರುವನ ಪರಿಕಿಸಿ
ಸರಸಿಯ ಕೇಳಿಯ
ತೊರೆಯುತ ಸತಿಯರು ಹಾರುವನು |
ಪರಿಸುತ ಕುಪ್ಪಸ
ಧರಿಸುತ ಶಾಲೆಯ
ಮರೆಸುತ ನಾಚಲು ಧರಣಿಪನು || ||೨೩೦||

ವಾರ್ಧಕ

ವರಹಂಸಚರಣದಿಂ ಮದಗಜದ ಗಮನದಿಂ
ನೆರೆರಂಭದಂಕದಿಂ ಹರಿಮಧ್ಯ ಗತಿಯೊಳುಂ
ಸರಿಯಸುಳಿನಾಭಿಯಿಂ ಪೊಂಗಲಶ ಕುಚಗಳಿಂದುಲುಕುತಿಹ ಹಾರದಿಂದ ||
ಮೆರೆವ ನಳಿತೋಳ್ಗಳಿಂ ಕೇತಕಿಯುಗುರ್ಗಳಿಂ
ಪರಿ ಕಂಬುಕಂಠದಿಂ ಪವಳಲತೆಯಧರದಿಂ
ದುರೆಕುಂದರದನದಿಂ ಚಂಪಕದ ನಾಸೆಯಿಂ ದರ್ಪಣ ಕಪೋಲದಿಂದ || ||೨೩೧||

ಭಾಮಿನಿ

ಹರಿಣಲೋಚನೆ ಪುಷ್ಪಶರಧನು
ಸರಿಯ ಪುರ್ಬಿನೊಳಿಂದು ವದನದಿ
ಸ್ವರ ನುಡಿಯು ಶುಕಪಿಕದಿಕೋಮಲೆ ಶುಭ್ರ ಹರಿಗಾತ್ರೆ ||
ಉರಗವೇಣಿಯು ಭೃಂಗ ಕುಂತಳೆ
ಮೆರೆವ ತ್ರೈಭುವನೈಕ ಸುಂದರಿ
ಯರರೆ ಯಾರಿವಳೆನುತ ಕೈಕೆಯೊಳೆಂದ ನಗೆ ಮಿನುಗೆ || ||೨೩೨||

ರಾಗ ಸಾವೇರಿ ಏಕತಾಳ

ಮಾತನಾಡೆಲೆ ನೀತಿಯುತೆಗುಣದಾತೆ ಎನ್ನೊಡನೆ | ನೀ ದಯ |
ರೀತಿ ತೋರೆಲೆ ಪ್ರೀತಿ ಬೀರೆಲೆ ಸೋತೆ ನಿನ್ನೊಡನೆ || ಮತ್ತೆ |
ಭೂತಳದಿ ಸತಿ ಜಾತಿಯಲಿ ತವ ರೀತಿವಂತರನೇ | ಕಾಣೆನು |
ಖಾತಿದೋರದೆ ರೀತಿವೊಪ್ಪುವ ಮಾತ ಹೇ ಜಾಣೆ | ನುಡಿ ಎಲೆ ತನ್ನಾಣೆ ||
ಭೂತಳದೊಳು ವಿಖ್ಯಾತನಯೋಧ್ಯಾ | ನಾಥನು ದಶರಥ ನಾ ತಳುವದೆ ತಿಳಿ |
ಭೀತಿಗಳೇನ್ಬಲು ಕಾತುರಗೊಳ್ಳುವ | ದೇತಕೆ ನುಡಿ ಸಂಪ್ರೀತಿಯೊಳೆಂದ || ||೨೩೩||

ನರರು ಸುರರಲಿಯುರಗ ಖಳರೊಳು ಸರಿಯೆ ನಿನ್ನಂಥಾ | ಬಾಲೆಯ |
ಗರುಡ ಗಂಧರ್ವರಲಿ ವರ ಕಿಂಪುರುಷರೊಳಗಿತ್ತ | ನಿಜಕಿ |
ನ್ನರರ ಚಾರಣ ಸಿದ್ಧ ಯಕ್ಷರೊಳರಿಯೆ ಕಂಡತ್ತ | ಎನ್ನೊಡ |
ನರುಹು ದೇಶವ ಹಿರಿಯನಾರವ ಕರವ ಪೆಸರಿತ್ತಾ || ಪೇಳುವದೆಲೆ ಮತ್ತಾ |
ತರುಣಿಯರೆಲ್ಲರೀ ತೆರದಿಂ ವನದೊಳ | ಗಿರುತಿಹ ಕಾರಣ ಭರವೇನೆನ್ನುತ |
ಕರುಣಿಸು ಬೇಗದಿ ಕಿರುನಗೆ ಸೂಸುತ | ಭರವಸವೆನುತವನರುಹುತಲಂದ || ||೨೩೪||

ನೊಂದು ಚಾರರು ನಿಂದು ದೂರಿದರಿಂದು ವನದೊಳಗೆ || ಮೃಗತತಿ |
ಯಿಂದ ಬಳಲುತ ಅಂದಗೆಟ್ಟಿರೆ ಬಂದೆ ನಾ ಹೊರೆಗೆ | ಬೇಟೆಯ |
ಲಂದು ಗಂಡಿಗೆ ಹೊಂದಿಸುತ ಶರ ಕೊಂದಿರಲು ಬಗೆಗೆ | ಓಡಿದು |
ದೊಂದು ಹರಿಣವದಿಂದು ಮಥಿಸಲಿ | ಕ್ಕೆಂದು ಈ ಕಡೆಗೆ | ಬೆನ್ನಟ್ಟುತ ಹೀಗೆ |
ಬಂದೆನು ಸ್ಮರಶರದಿಂದೆಚ್ಚಡೆ ಮನ | ಕುಂದುತ ನಿನ್ನೊಡನೆಂದೆನು ಯೋಚಿಸು |
ತ್ತಂದಜ ನಮ್ಮುವನಂದದಿ ನಿರ್ಮಿಸಿ | ದಂದಕೆ ನೀ ಬಲು ಚಂದದಿ ಮೆರೆಯೆ || ||೨೩೫||

ರಾಗ ಸುರುಟಿ ಏಕತಾಳ

ಎಂದೆನಲಾ ಕಾಂತೆ | ಸೀಮಂತೆ |
ಎಂದಳು ಗುಣವಂತೆ ||
ಕುಂದರದನೆ ಸುಮ | ಗಂಧಿನಿ ಲಜ್ಜೆಯ |
ಮುಂದಕಿರಿಸಿ ನಗೆ | ಯಿಂದಲಿ ಮೃದುನುಡಿ  || ಪಲ್ಲವಿ ||

ವೀರ | ಪೂಶರನಾಕಾರ | ವರದುದು ಬಲುಸಾರ |
ವಿಕ್ರಮ ಗಂಭೀರ | ಮುಬ್ಬಿದಮೌದಾರ |
ದೋರುವ ಕೇಕಯ | ಧಾರುಣಿ ಪತಿಸುತೆ |
ನಾರಿಯರೆಲ್ಲರು | ಸೇರುತ ಬಂದೀ |
ಸಾರಿಯ ಜಲದಿಂ | ದೋರಾಡುತಲೀ ಹೇ |
ಧೀರನೆ ಸದ್ಗುಣ ವಾರಿಧಿ ಕೇಳೈ || ||೨೩೬||

ಅರಿಯೆ | ನೀನೆಂದುದು ಸರಿಯೆ | ಸದ್ಧರ್ಮದ ಪರಿಯೆ |
ಆಗಲಿ ಪೆಸರೊರವೆ | ಕೈಕಯಿಯು | ಕೇಳ್ದೊರೆಯೆ |
ಇರಿಸಿದೆಯೈ ಮನ | ಸರಿಯಾದುದು ದಿಟ |
ಭರದೊಳು ಜನಕನೊ | ಳೊರೆಯುತ ನಿನ್ನಯ |
ಕರಪಿಡಿವೆನು ಎಂದಿ | ರಿಸುತ ನಂಬುಗೆ |
ಸರಿದಳು ಬಲು ಸಖಿ | ಯರು ಸಹ ಮನೆಗೆ || ||೨೩೭||

ಇತ್ತ | ದಶರಥ ಪುರದತ್ತ | ತೆರಳುತಲಿಪ್ಪ |
ಪದ್ಮಕ ಸುತೆಗತ್ತ | ವರನಾರ್ ನಿನಗೆತ್ತ |
ಧಾತ್ರಿಯೊಳಗೆ ಜನ | ಮೊತ್ತದಿ ಬಯಸಿದ |
ಪೃಥ್ವಿಪರಿದ್ದಡೆ | ಬಿತ್ತರಿಸೆನ್ನುತ |
ಮತ್ತೆ ನುಡಿಯೆ ನಾ | ಚುತ್ತಲೆ ಪಿತನಡಿ |
ಗೊತ್ತಿ ಶಿರವ ತಾ | ನುತ್ತರವಿತ್ತಳು || ||೨೩೮||

ರಾಗ ಮಧುಮಾಧವಿ ಏಕತಾಳ

ತಾತ ಲಾಲಿಸಿ ಕೇಳ್ವುದಬಲೆಗಿನ್ನೆಂತು |
ಭೂತಳೇಶರ ಗುಣವರಿಯುವುದೆಂತು ||
ಯಾತಕೆ ಲಜ್ಜಿಪೆ ಎನ್ನುವನಿಂದು |
ಪ್ರೀತಿ ಬಂದರಿಗಿತ್ತು ಕಳುಹೆನಲಂದು || ||೨೩೯||

ಅರಿತರು ಗುಣವನು ಸಖಿಯರ ಮುಖದಿ |
ಮರೆಮಾಡದರಿತುದನೊರೆಯೆನೆ ಮುದದಿ ||
ಸ್ಮರರೂಪ ದಶರಥನಧಿಕ ವಿಕ್ರಮನು |
ನೆರೆ ಬಯಸಿಹೆ ನಾನು ಎನಲಂದು ನೃಪನು || ||೨೪೦||

ಎರಕವ ಗೈಯ್ಯುವೆನೆಂದೊರೆದಂದು |
ಸರಿದಯೋಧ್ಯೆಗೆ ಬರೆ ಭೂಮಿಪನಂದು ||
ಭರದಿ ಮನ್ನಿಸಿ ಬಂದ ಕಾರ್ಯವೇನೆಂದು |
ಕಿರುನಗೆಯಲಿ ಕೇಳಲಿಂತೆಂದ ಮುಂದು || ||೨೪೧||

ಭಾಮಿನಿ

ಅರಸ ನಿಜಸುತೆ ನಿನ್ನ ಬಯಸುತ
ಲಿರುವಳೈ ನಿನಗೀಯ ಬೇಕೆಂ
ದಿರದೆ ನುಡಿಸಲು ಬಂದೆನೆಂದೆನೆ ರೋಗಿ ವೈದ್ಯಮತ |
ಸರಿಯದಾಯ್ತೆಂದೆನುತ ಲಗ್ನವ
ನಿರಿಸುತೊಪ್ಪುತ ಕಳುಹೆ ತಿರುಗುತ
ಪುರಕೆ ಬಂದವ ಸಕಲ ಸನ್ನಹ ಗೈಸುತಿರಲಿತ್ತ || ||೨೪೨||

ವಾರ್ಧಕ

ಬರಿಸಿ ಬಾಂಧವರನುಂ ದಿಬ್ಬಣವ ತರಿಸುತಂ
ಬರಲಿದಿರುಗೊಂಡವಂ ಶುಭಮುಹೂರ್ತದಿ ನೃಪಂ
ತರಳೆ ಕೈಕೆಯಳನುಂ ದಶರಥಗೆ ಧಾರೆಯನ್ನೆರೆದನತಿ ಸಂತಸದಲಿ |
ಇರಲು ದಿನವೈದನುಂ ಕಳೆಯೆ ಬಳುವಳಿಯೊಳಂ
ದಿರದೆ ಕಳುಹಲ್ಕವಂ ಬಂದಯೋಧ್ಯದೊಳಿವಂ
ಪರಮ ಸಂಭ್ರಮಗಳಿಂದೊಪ್ಪುತೊಂದಿನದೊಳಂ ಸತಿಗೆಂದ ಮೃದುನುಡಿಯಲಿ || ||೨೪೩||

ರಾಗ ಕಲ್ಯಾಣಿ ಏಕತಾಳ

ನಾರಿ | ಘನ ಶೃಂಗಾರಿ | ಬಾರೆಲೆ ವಯ್ಯಾರಿ |
ಕೀರವಾಣಿ ಮಯೂರಗಮನೆ ನಗೆ |
ಬೀರುತಲೆನ್ನ ನೀರೆ ಲತಾಂಗಿ || ||೨೪೪||

ಎಂದ | ನುಡಿಯಾಲಿಸುತಂದ | ವರನೆಡೆಗೈತಂದ ||
ಅಂದಪ್ಪುತ ಕುಚ | ದಿಂದಿರಿಯುತಲೆ |
ನ್ನಿಂದಲೊಂದು ಕುಂದೆಂದಿಗೆ ಬಪ್ಪುದೆ || ||೨೪೫||

ಮತ್ತಾ | ಸತಿಸಹ ವನದತ್ತಾ | ಬಲುಸುಮ ಕೊಯ್ಯುತ್ತ |
ಚಿತ್ತದಿ ಬಲುಮುದ | ವೆತ್ತಲ್ಲಿರುತಿರೆ |
ಬಿತ್ತರಿಸುವೆ ಕಥೆ | ಯುತ್ತಮರಾಲಿಸಿ || ||೨೪೬||

ರಾಗ ಮಾರವಿ ಏಕತಾಳ

ಇತ್ತಲು ಕಾಡ್ಗಿರಿ ಗೊತ್ತಿದ ಕೊಪ್ಪಲು
ದತ್ತಲು ಶಬರರೊ | ಳುತ್ತಮನೆನಿಸಿದ ||
ಚಿತ್ರಾಯುಧನಹ | ಧೂರ್ತನು ಲುಬ್ಧಕ |
ರೊತ್ತಿಲಿ ಬೇಟೆಗೆ | ನುತ್ತಲಿ ಪೊರಟ || ಬೇಟೆಯಾಡುತ್ತ ಬಂದ || ||೨೪೭||

ನೆರಹಿಸಿ ಬಲೆಗಳ | ಧರಿಸುತ ಶರಗಳ |
ನಿರಿಸುತ ಗಂಡಿಯ | ಸರಿಸುತ ಮೃಗಗಳ ||
ಕರಡಿ ಪುಲಿ ಹರಿ | ಶರಭಸ್ತಳವೆಂ |
ದೊರೆಯುತ ಕುರುಹನು | ಪರಿಕಿಸುತಾಗ || ಬೇಟೆಯಾಡುತ್ತ ಬಂದ || ||೨೪೮||

ಜೊತೆಯ ಕಿರಾತರ | ತತಿಗುಂಪಿಲಿ ಬರು |
ತತಿಯನೆ ಭೇದಿಸು | ತತುಳ ಭಯಂಕರ ||
ಪಥಗಿರಿಯಲಿ ಧ್ವನಿ ಗೈಯುವ ಪಂದಿಯ |
ಧೃತಿಯಲಿ(ತಾ) ಕಂಡಾ(ಚಿತ್ರಾಯುಧ) || ಬೇಟೆಯಾಡುತ್ತ ಬಂದ || ||೨೪೯||

ಭಾಮಿನಿ

ನೋಡಿದನು ಸೂಕರವ ತಿರುಹಿಲಿ
ಹೂಡಿದಡೆ ಬಾಣವನು ತಪ್ಪಿಸು
ತೋಡಿ ಬರೆ ನೃಪನಿದಿರು ಕಾಣಿಸಲೆಚ್ಚ ಮಾರ್ಗಣದಿ |
ಕೂಡೆ ಬೀಳಲಿಕಿತ್ತ ಲುಬ್ಧಕ
ನೋಡಿ ಬಂದದ ಮತ್ತೆ ಖತಿಯಿಂ
ದಾಡಿದನು ಭೂವರನು ಕೈರಾತೇಶನಲಿ ಭರದಿ || ||೨೫೦||

ರಾಗ ಶಂಕರಾಭರಣ ಮಟ್ಟೆತಾಳ

ಎಲವೊ ಶಬರ ಎನ್ನ ಶರದೊ | ಳಳಿದ ಪಂದಿಯನ್ನು ಬಿಡೆನು |
ನಲವಿನಿಂದ ಬಿಟ್ಟು ಅದರ | ಕೆಲಕೆ ಸಾರೆಲಾ ||
ಮಲೆತು ನುಡಿದ ಭಳಿರೆ ತನ್ನ | ಅಲಗಿನಿಂದ ಮಡಿದುದಿಂದು |
ಛಲವದೇಕೆ ಬಿಡುವನಲ್ಲೆಂ | ದುಲಿಯಲೆಂದನು || ||೨೫೧||

ಬಿಡುಬಿಡೆಲವೊ ಸಾಕು ನಿನ್ನ | ಧಡಿಗತನವ ತೋರಲಿನ್ನು |
ಮಡುಹದುಳಿಯೆನೆಂದು ಪೇಳ | ಲೊಡನೆ ಗಜರಿದ ||
ಪೊಡವಿಪಾಲನೆಂದು ನಿನ್ನ | ಕಡುಹಿಗಂಜಿ ಪೋಪನಲ್ಲ |
ತಡೆದುಕೊಳುವುದೆನುತ ಲೆಚ್ಚ | ನೊಡನೆ ಬಾಣವ || ||೨೫೨||

ತರಿಯುತೆಂದ ಹರಣದಾಸೆ | ಇರಲು ಹಂಬಲವನು ಬಿಟ್ಟು |
ತೆರಳೆ ಲೇಸೆನುತ್ತ ಪತ್ತು | ಶರದಿ ಮುಸುಕಿದ ||
ಹರಿಸಿಕಾಲನೂರಪೊಗಿಸಿ | ತರಳೆಯನ್ನು ಒಯ್ವೆನೆಂದು |
ಸರಳ ಮಳೆಯ ಕರೆದನಾಗ | ಸುರರು ಬೆಚ್ಚಲು || ||೨೫೩||

ವಾರ್ಧಕ

ಉರಿಮಸಗಿ ಭೂವರಂ ಬರುವಂಬ ತರಿಯುತಂ
ಮೆರೆವ ದಿವ್ಯಾಸ್ತ್ರದಿಂದರಿಗೆಸೆಯೆ ಪಗೆಶಿರಂ
ಧರೆಗುರುಳಲಾಕ್ಷಣಂ ಬೇಡ ಪಡೆ ಮುತ್ತಲುಂ ಹತಿಸಿದಂ ಪರಬಲವನು |
ಕರೆಸಿ ನಿಜ ಶಬರರಂ ಸೂಕರವ ನೀಯುತಂ
ದರಿಸಿ ಸಹ ಪುರವನುಂ ಪೊಕ್ಕು ಬಲು ತೋಷದಿಂ
ದಿರೆ ಚಂದ್ರಸೇನನುಂ ನುತಿಸುತಿರೆ ಪುರಹರಂ ತಿಳಿದೆಂದನಗಜೆಯೊಡನೆ || ||೨೫೪||

ರಾಗ ಕೇದಾರಗೌಳ ಅಷ್ಟತಾಳ

ಹರಿಣಾಂಕವದನೆ ಕೇಳ್ | ಮರಿದುಂಬಿಗುರುಳೆ ಪಂ |
ಕರುಹಾಕ್ಷಿ ರನ್ನೆ ಕನ್ನೆ ||
ಧರಣೀಶ ಶಶಿಸೇನ | ನಿರದೆನ್ನನುತಿಗೈವ |
ನರುಹುವದೇನೆ ಕಾಣೆ || ||೨೫೫||

ದಶರಥನನು ಗೆಲ್ಲು | ತೆಸೆಯಬೇಕೆನ್ನುತ |
ಮಸಗಿ ತಪವ ಗೈವನು ||
ಕುಶಲದೊಳಿಚ್ಛೆಯ | ತುಸು ಮಾತ್ರ ಸಲಿಪೆನೆಂ |
ದುಸುರಲಿಕ್ಕಿಂತೆಂದಳು || ||೨೫೬||

ಹರಿ ದಶರಥನಿಗೆ | ತರಳನಾಗುತ ಲಂಕಾ |
ಪುರದರಸಾಧ್ಯರನು ||
ತರಿದಿಳೆ ಭಾರವನೊರಸಲಿಕೆಡರೆನ್ನು |
ತ್ತರುಹಲು ಪುರಹರನು || ||೨೫೭||

ಭಾಮಿನಿ

ಗಿರಿಜೆ ಕೇಳಿಂದೆಮ್ಮ ನುತಿಪರಿ
ಗಿರದೆ ವರವೀಯದಿರೆ ಬರುವುದೆ
ಶರಣವತ್ಸಲನೆಂಬ ಕೀರ್ತಿಯುಪಾಯದಿಂದೀಗ |
ಧುರದೊಳೊಮ್ಮೆಗೆ ಜೈಸಿ ಪುನರಪಿ
ಮರಣಗೈಯುವ ತೆರವು ಬಾಯೆಂ
ದಿರದೆ ನಡೆತಂದಲ್ಲಿ ಮೆಚ್ಚಿದೆನೆನಲು ಕಣ್ತೆರೆದ || ||೨೫೮||

ರಾಗ ಕಾಂಭೋಜಿ ಝಂಪೆತಾಳ

ರೂಢಿಪತಿ ನೋಡಿ ನಲಿದಾಡಿ ಕರ ಜೋಡಿ ನುಡಿ |
ಮಾಡಿ ಶಿರ ನೀಡಿ ಹೊರಳಾಡಿ ||
ವ್ಯಾಢಭೂಷಣ ಕೃಪೆಯ ಮಾಡಿ ತನ್ನಿಚ್ಛೆಕೈ |
ಗೂಡಿಸೆನಲಾಗ ನಗೆಗೂಡಿ || ||೨೫೯||

ಒರೆವುದೆನೆ ಕೋಸಲದ ದೊರೆಯಯೋಧ್ಯೇಶನನು |
ಇರಿದು ಜಯವಪ್ಪಂತೆ ದಯದಿ ||
ವರವ ಪಾಲಿಪುದೆಂದು ಶಿರವ ಚಾಚಲು ನೆಗಹಿ |
ಪುರಹರನು ಪ್ರೀತಿಯೊಳಗೆಂದ || ||೨೬೦||

ಒಂದು ಬಾರಿಗೆ ಜೈಸು ಎಂದು ವರಗಳನಿತ್ತು |
ಚಂದದಿಂ ಹರಸಿ ಸಂತಸದಿ ||
ಇಂದುಶೇಖರನಗಜೆ ಸಹಿತ ಗಿರಿಯನು ಸೇರೆ |
ಮಂದಮತಿಯಧಿಕ ಹರ್ಷದಲಿ || ||೨೬೧||

ರಾಗ ಭೈರವಿ ಏಕತಾಳ

ಭೂರಮಣನು ಬಳಿಕತ್ತ | ಮದ | ವೇರುತ ಹೂಂಕರಿಸುತ್ತ ||
ಮಾರಾರಿಯು ಬಂದೊಲಿದ | ಮೇ | ಲಾರೆನಗಿದಿರೆಂದ || ||೨೬೨||

ತಿಕ್ಕುವೆನಹಿತರನೆಂದು | ಬಲು | ಸೊಕ್ಕುತ ಪುರಕೈತಂದು ||
ಫಕ್ಕನೆ ಬಲಗೂಡುತ್ತ | ಬಂ | ದಕ್ಕರದಿಂದವನತ್ತ || ||೨೬೩||

ಮುತ್ತಿಯಯೋಧ್ಯಾಪುರವ | ಪಡೆ | ಸುತ್ತಿಸಿ ಕಾಯವು ಬಲವ ||
ಕತ್ತರಿಸಲು ಬೆದರಿದರಾಗ | ಬಲೆ | ತತ್ತರಿಸುತ ಅರುಹಲು ಬೇಗ || ||೨೬೪||

ರಾಗ ಸುರುಟಿ ಏಕತಾಳ

ಲಾಲಿಪುದೆಲೆ ರಾಯ | ಹೇ ಜೀಯ |
ಪೇಳುವದೇನ್ ಪರಿಯ ||
ಖೂಳತೆಯಲಿ ಬಲ | ಜಾಲ ಸಹಿತ ಖತಿ |
ತಾಳುತಕೋಟೆಯ | ಮೇಲೇರಿದ ಭಟ |
ಬಲು ಹಟ | ಇದು ದಿಟ || ಲಾಲಿಪು || ||೨೬೫||

ಆರೆಂಬುದನರಿಯೆ | ಬಂದಿಹ | ವೀರನ ಪೆಸರರಿಯೆ ||
ತೋರುತ ಮಹ ಝೇಂ | ಕಾರದಿಕಾದರ |
ಹೀರುತ ಕೊತ್ತಳ | ಮಿರುತ ಬಂದ |
ಮದದಿಂದ | ಪಗೆಯಿಂದ || ಲಾಲಿಪು || ||೨೬೬||

ಏರು ನೀ ರಥವನ್ನು | ರಿಪು ಶಿರ |
ಹಾರಿಸಿ ನಮ್ಮವನು ||
ಭೋರನೆ ಕರುಣವ | ಬೀರುತಲಿಂದು ಮುಂ |
ದಾರಕ ಸಂಗರ | ಧೀರನೆ ಪೊರೆಯೈ |
ನೆರೆಯೈ | ಮೆರೆಯೈ || ಲಾಲಿಪು || ||೨೬೭||

ಭಾಮಿನಿ

ಕೇಳುತಲೆ ಭೂಪಾಲನೆದ್ದನು
ಕಾಲ ಭೈರವನಂತೆ ಪಟುಭಟ
ಜಾಲ ಬೆದರಲು ಬಿಂಕದಲಿ ನೆಡೆ ಹೊಯ್ದು ಗದ್ದುಗೆಗೆ ||
ಖೂಳನಾರವನಿಂದು ಪರಿಕಿಪೆ
ನೇಳಿರೆನೆ ವಾಹಿನಿಯು ನೆರೆಯಲು
ತಾಳಿ ರೋಷಾವೇಶದಿಂದಿದಿರಾದನಾಹವಕೆ || ||೩೬೮||

ರಾಗ ಶಂಕರಾಭರಣ ಮಟ್ಟೆತಾಳ

ಆರೆಲೋ ನೃಪಾಲ ಭಳಿರೇ | ಭೂರಿಬಲವ ನೆರಹುತೆಮ್ಮ |
ನೂರಮುತ್ತಿ ಚರರನಿರಿದ | ಕಾರ‍್ಯವೇನೆಲಾ ||
ವೀರನಾದಡಿಂದು ಪೇಳ್ವು | ದಾವ ಪುರದ ಧಾರುಣೀಂದ್ರ |
ಶೂರತನವಿದ್ಯಾತಕೆನಲು | ಭೋರನೆಂದನು || ||೩೬೯||

ಇತ್ತ ತಿರುಗಿ ಕೇಳು ಪಾಂಡ್ಯ | ಪೃಥ್ವಿಪಾಲ ವಿಜಯವರ್ಮ |
ಪುತ್ರ ವೈರಿಕದಳಿವನಕೆ | ಮತ್ತದಂತಿಯು ||
ಮತ್ತೆ ಚಂದ್ರಸೇನನೆಂಬ | ಉತ್ತಮದ ಪೆಸರು ನೀನು |
ಬಿತ್ತರಿಪುದು ವಂಶನಾಮ | ಸತ್ತ್ವ ವಿವರವ || ||೨೭೦||

ಧರೆಯೊಳಧಿಕವಾದಯೋಧ್ಯ | ದರಸ ತರಣಿವಂಶದ ಜನ |
ತರಳ ಪಗೆಯ ಕರಿಯಸಿಂಗ | ಮೆರೆವ ದಶರಥ ||
ಧುರಬಲಾಢ್ಯನೆಂಬುದರಿತು | ತೆರಳು ವೈರವ್ಯಾತಕೆನಲು |
ಉರಿಯ ಮಸಗಿ ಚಂದ್ರಸೇನ | ನಿರದೆ ಗರ್ಜಿಸಿ || ||೨೭೧||

ಕಂದ

ಮತ್ತೆಡೆಬಿಡದಿರೆ ಕಾಳಗ
ಹತ್ತಿದುದಿಳೆ ಬಾಯ್ಬಿಡುವಂತೆ ಗರ್ಜಿಸಿಯುಭಯರ್ |
ಮಲೆಯುತ(ಬಲುಶರಗಳ)ಲರಿ
ದತ್ತಲೆ ಶಸ್ತ್ರಾಸ್ತ್ರವಂ ಕೆದರುತಲು ನುಡಿದರ್ || ||೨೭೨||

ರಾಗ ಭೈರವಿ ಅಷ್ಟತಾಳ

ಭಳಿರೆ ಶಾಭಾಸು ಮಲ್ಲ | ಲೋಕದಿ ನಿನ್ನ | ಛಲದಂಕನೆಂಬರೆಲ್ಲ ||
ತಿಳಿಯಬೇಕಾ ಪರಿಯ | ನಳವಿಯೋಳೀಗೆಂದು | ಹಿಳುಕಿಡೆತರಿದೆಂದನು || ||೨೭೩||

ಅರಿವೆ ಪ್ರದೀಪನಲೀ | ಭಂಗದೊಳೋಡಿ | ತಿರುಗಿ ನೀ ಸಮರಕಿಲ್ಲಿ ||
ಮರಣವ ಬಯಸುತ್ತ | ಮರುಳುತನದಿ ಬಂದೆ | ಮರಳತ್ತ ಸಾಕೆಂದನು || ||೨೭೪||

ಬಲ್ಲೆ ರಾವಣನೊಡನೆ | ಯುದ್ಧದಿ ಜೀವ | ದಲ್ಲುಳಿದ ಭಟನು ನೀನೆ ||
ಹುಲ್ಲು ವ್ಯಾಧನ ಗೆಲ್ದು | ಬಲ್ಲಿದನಾದಂತೆ | ಸಲ್ಲದು ತನ್ನೊಡನೆ || ||೨೭೫||

ಡಂಬತನಂಗಳೇಕೆ | ಬಾಹುವಿನ ಸೌ | ರಂಭಗಳಿರಲು ಜೋಕೆ ||
ಇಂಬರಿತು ತನ್ನ ವಿ | ಜೃಂಭ ಗೈಸುವ ಸತ್ತ್ವ | ಸಂಭ್ರಮದೋರೆನ್ನುತ || ||೨೭೬||

ವಾರ್ಧಕ

ಅರಿರಥಕೆ ಪತ್ತು ಧ್ವಜಗಿಪ್ಪತ್ತು ಚಕ್ರಕಂ
ಸರಿಸಿ ಮೂವತ್ತು ಸಾರಥಿಗೆ ನಲುವತ್ತು ಹಯ
ಕಿರದೆಯೈವತ್ತು ನೃಪಗಂನೂರು ಮಾರ್ಗಣವ ಬೀರ್ದವಂ ಬೊಬ್ಬಿರಿಯಲು ||
ಇರದೆ ತೇರ್ಗಿಪ್ಪತ್ತು ಕೇತಕ್ಕೆ ನಲ್ವತ್ತು
ನೆರೆಚಕ್ರಕರುವತ್ತು ಸೂತನಿಂಗೆಂಬತ್ತು
ಹರಿಗಳ್ಗೆ ಪಗೆಗಳ್ಗೆ ಇನ್ನೂರು ಕೂರ್ಗಣೆಯ ನಾರ್ದೆಚ್ಚು ಗರ್ಜಿಸಿದನು || ||೨೭೭||

ರಾಗ ಶಂಕರಾಭರಣ ಮಟ್ಟೆತಾಳ

ಖಾತಿಯಾಂತು ಬಳಿಕಯೋಧ್ಯನಾಥ ನುಡಿದನು |
ವಾತ ಬಗೆವನೇನು ಜೀಮೂತತತಿಯನು ||
ಯಾತಕೆನ್ನೊಡನೆ ನಿಲುವೆ ಜಾತು ಸಾರೆಲೋ |
ಬೂತು ಛಲಕೆ ಬೆದರುವಾತನಲ್ಲ ತಾನೆಲೊ || ||೨೭೮||

ಮರುಳೆಯಾಕೃಶಾನುವಿಂಗೆ ನೊರಜುವುದು ಬಲು |
ಭರಿತಸಿಂಗನಿಂಗೆ ಗಜಗಳರಸಿ ಮುತ್ತಲು ||
ಹರಣವುಳಿಗೆ ತನ್ನೊಳಿಂದು ಧುರವ ಗೈಯಲು |
ಶಿರಕೆ ಬೆಲೆಯು ಕಾಂಬೆನುತ್ತ ಭರದೊಳೆಸೆಯಲು || ||೨೭೯||

ತರಿದು ಮಿಂಚು ಪುಳುವಿಗಂಜಿ ತರಣಿ ಸರಿಯುಗೇ |
ಮೆರೆವುದಾ ಪಂಚಾಸ್ಯ ತಡೆಯೆ ಶರಭ ಬೆದರುಗೆ ||
ಬರಿದೆ ಗಳಹಬೇಡೆನುತ್ತ ಸರಳ ಸುರಿದನು |
ಪರಿಕಿಸುತ್ತ ಚಂದ್ರಸೇನ ತರಿದು ನುಡಿದನು || ||೨೮೦||

ಭಾನುವಂಶಜಾತ ಧಿರುರೆ ಭಾನು ನೀನೆಲಾ |
ತಾನೆಲಾ ಸ್ವರ್ಭಾನುವಿಂದು ಜಾಣ ಕೇಳೆಲಾ ||
ತ್ರಾಣವಿರಲು ತಾಳೆನುತ್ತ ಸಾಣೆಯಲಗನು |
ಕ್ಷೋಣಿಪಾಲ ನೆನೆದು ಶಿವನನರಸಗೆಚ್ಚನು || ||೨೮೧||