ಭಾಮಿನಿ

ಹರನ ವರವಿರಲೆಸೆದ ಶರದಿಂ
ದರಸ ಮೂರ್ಛೆಯೊಳರಗೆ ರಥದಲಿ
ಮರುಗಿದುದು ಜನಕಟಕ ಹಾಯೆಂದೆನುತ ಹಮ್ಮೈಸಿ |
ಸುರರ ಮನ ಕರಗಲ್ಕೆ ಸುಜನರು
ಕರಕರಿಸೆ ವಿಧುಸೇನ ಹಾಸ್ಯವ
ಸರಿಸಿ ಮದವಂಕುರಿಸಲೆಂದನು ಬಳಿಕ ನಗೆ ಸೂಸಿ || ||೨೮೨||

ರಾಗ ಕಮಾಚು ಏಕತಾಳ

ಭಲಾ ಭಲಾ ಭಲೆ ದಶರಥ ಭೂಪತಿ |
ಕಲಹದಿ ತನ್ನನ್ನು ಜೈಸಿದೆಯ ||
ಕಲಿಯು ಪರಾಕ್ರಮಿ | ಛಲದಂಕನು ರಿಪು |
ಕುಲತಿಮಿರಾರ್ಕನು | ಬಳಲಿದೆಯ || ||೨೮೩||

ವಸುಧೆಯೊಳಗ್ಗಳ | ದಶರಥ ಮನುಕುಲ |
ದಸಮಸುಕೀರ್ತಿಯೊ | ಳೆಸೆಯುವನೆ ||
ಮಸಗುತ ವ್ಯಾಧನ | ನುಸುರಡಗಿಸುತಲೆ |
ಕುಶಲದೊಳಾ ನೃಪ | ಶಶಿಸಮನು || ||೨೮೪||

ಇಂದೆನ್ನೊಳು ಮದ | ದಿಂದ ರಣಾಗ್ರದಿ |
ನೊಂದುರುಳಿದೆ ಹಾ ನಿನ್ನರಸಿ ||
ಗಿಂದುಗತಿಯದೇ | ನೆಂದುಸುರೈಬಾ |
ಎಂದೆನೆ ಗಜರಿದ ನಾ ಸಹಸಿ || ||೨೮೫||

ಭಾಮಿನಿ

ಏಳು ಪುನಃ ಕಟ್ಟಾಳುತನವಿರೆ
ಕಾಳಗಕೆ ನಿಲು ತೀರದಡೆ ನಿಜ
ಕಾಲಿಗೆರಗಲು ಪೊರೆವೆ ಬಲಹೀನರನು ಪೊರೆವಂದ |
ತಾಳುವೆನು ಭಯವೇತಕೆನ್ನುತ
ಖೂಳ ಬಲುತರ ಗಳಹಲೆದ್ದು ವಿ
ಶಾಲಮತಿಯದ ನೋಡಿದನು ಝೇಂಕರಿಸುತಿದಿರಾದ || ||೨೮೬||

ರಾಗ ಸೌರಾಷ್ಟ್ರ ತ್ರಿವುಡೆತಾಳ

ವೀರ ನಿಮಿಷಾರ್ಧದಲಿ ನಿನ್ನಸು |
ಹೀರುವೆನು ನಿನಗಾಸೆಯುಳ್ಳಡೆ |
ಸೇರುಪಾದವನೆಂದು ಭೂಮಿಪ | ನಾರುಭಟಿಸೆ || ||೨೮೭||

ಮರುಳೆ ಮಂಜಿನ ಮಳೆಗೆ ಕುಲಗಿರಿ |
ಜರಿವುದೇ ನೀನೆಷ್ಟು ಸೆಣಸಲು |
ಸರಿದು ಪೋಪೆನೆ ಕಂಡೆ ನಿನ್ನಯ | ಪರಿಯನೆಲ್ಲ || ||೨೮೮||

ಒಂದು ಬಾರಿಗೆ ತನ್ನ ಮೂರ್ಛಿಸು |
ತಿಂದು ಬೆಳೆದಿಹ ಮದದ ಗಿರಿಗಾ |
ನಿಂದು ವಜ್ರನೆನುತ್ತ ನುಡಿಯ | ಲ್ಕೆಂದನಾಗ || ||೨೮೯||

ಈಶನನು ಒಲಿಸಿರ್ಪೆನಿಂದಿಲಿ |
ನಾಶಗೈಯದೆ ಪೋದೆನಾದರೆ |
ಭೂಸತಿಯ ಪಾಲಕನೆ ಶರಸ | ನ್ಯಾಸವೆಂದ || ||೨೯೦||

ಫಾಲನೇತ್ರನ ಕರೆಸು ನಿನ್ನನು |
ಸೀಳದಿರಲಜಸೂನು ಮನುಕುಲ |
ಮೌಳಿ ದಶರಥನೆಂಬ ಕಾಯವ | ಜ್ವಾಲೆಗೀವೆ || ||೨೯೧||

ಭಾಮಿನಿ

ಒರೆದ ನುಡಿ ಕೇಳುತ್ತ ಕೋಪದೊ
ಳರಿರಥಕೆ ತೆಗೆದೆಚ್ಚ ಭರಕದು
ಸರಿದು ಯೋಜನವೆರಡ ಸರ್ರನೆ ತಿರುಗಲೀಕ್ಷಿಸುತ |
ತಿರುಗಿ ಪಗೆ ತೇರಿಂಗೆ ಶಸ್ತ್ರವ
ಸುರಿಯೆ ಯೋಜನ ಮೂರು ಪಿಂದ
ಕ್ಕಿರದೆ ಘರ್ರನೆ ಸರಿಯೆ ಸರಿಸುತ ವೀರನಿಂತೆಂದ || ||೨೯೨||

ರಾಗ ಮಾರವಿ ಏಕತಾಳ

ಪೊಡವಿಪ ನೀ ಬಲು | ಕಡುಗಲಿಯಾದೆಯ | ದೃಢಭುಜ ವಿಕ್ರಮದಿ ||
ಧಡಿಗತೆ ತೋರೆನು | ತಡೆಬಿಡದೆಚ್ಚಡೆ | ಕಡಿಯುತಲದ ಭರದಿ || ||೨೯೩||

ಬಿಗುತರ ನುಡಿಗಳ | ಬಗುಳುವ ನಾಲಗೆ | ಸಿಗಿಯುತಲಿಂದಿನಲಿ ||
ಜಗಳದೊಳಾ ಜಯ | ಮುಗುದೆಯ ಸೆಳೆವೆನು | ಬಗೆದೋರೆನೆ ಕನಲಿ || ||೨೯೪||

ಬಲುತರ ಶಸ್ತ್ರಾಯುಧದೊಳು ಹೆಣಗಲು | ಬಳುವಳಿಯಜಶರವ ||
ಮುಳಿದೆಚ್ಚಡೆ ಪಗೆ | ತಲೆಧಾರುಣಿಯೊಳು | ಹೊಳೆಯಲು ಜನ ನಲಿಯೆ || ||೨೯೫||

ವಾರ್ಧಕ

ಒರೆವೆ ಮುಂದಣ ಕಥೆಯನರಿದಳಂ ಸರಳಿಂಗೆ
ಸರಿಯಲಾಚೆಗೆ ನೃಪಂ ಹರುಷದಿಂ ಪುರದೊಳಿರೆ
ಶರಧಿಯಲಿ ಕೌಸಲ್ಯೆಯಿರ್ಪ ಪೆಟ್ಟಿಗೆ ಝಷದ ಕೈತಪ್ಪಿ ಶರಧಿಯೊಳಗೆ ||
ಸರಿದು ಬಲುತೆರೆವಶದಿ ತೇಲುತ್ತಲೈತರಲು
ವರುಣನಾಳ್ಗಳು ಕೊಂಡು ಅರಸಗರುಹುವೆವೆಂದು
ವರುಣನಡಿಗೆರಗಿತಂದಿರಿಸಿ ಕಾಣ್ಕೆಯನಂದು ಪೇಳಿದರು ನೋಡಿದುದನು || ||೨೯೬||

ರಾಗ ಸುರುಟಿ ಏಕತಾಳ

ಶರಧಿಪ ಕೇಳಿಂದು | ಬಲೆಗಳ |
ಸರಿಸುತಲಾವಿಂದು ||
ತೆರೆ ಬಳಿಯರಸಲು | ಕರೆ ಪೊದ್ದುತಲಿಹ |
ಸರಿ ಪೆಟ್ಟಿಗೆಯಿದ | ಪರಿಕಿಸಿ ತಂದೆವು || ||೨೯೭||

ಏನಿದು ಚೋದಿಗವು | ನಿಜವನು |
ಕಾಣೆವಾವೀತೆರವು ||
ದಾನವ ಕುಹಕವೊ | ಜಾಣರಪಾಯವೊ |
ಏನಾ ಹರಿಕೃಪೆ | ಕಾಣಿಸಿದಂದವೊ || ||೨೯೮||

ಅರಿಯುವರಾರಿದನು | ನೀನದ |
ನರಿಯುವೊಡಾಜ್ಞೆಯನು ||
ಕರುಣಿಸಿದಡೆ ಮನ | ಹರುಷದೊಳಿಹೆವೆನ |
ಲರಸಿಯೊಡನೆ ತಾ | ನರುಹಿದ ವರುಣನು || ||೨೯೯||

ರಾಗ ಕೇದಾರಗೌಳ ಝಂಪೆತಾಳ

ಕಾಂತೆ ನೋಡಿದರನೆಲ್ಲಾ | ಸತ್ಯವನು | ಕಂತು ಪಿತನೊಬ್ಬ ಬಲ್ಲ ||
ಎಂತು ಬಂದುದೊ ಪೆಟ್ಟಿಗೆ | ಇದರೊಳಿ | ನ್ನೆಂತು ಕೃತ್ರಿಮವೊ ಕಡೆಗೆ || ||೩೦೦||

ಇರದೆ ನಮ್ಮೊಳು ದ್ವೇಷದಿ | ಖಳರೇನು | ವಿರಚಿಸಿದರೋ ಮಾಯದಿ ||
ಹರಹರಾ ಇದನರಿಯಲು | ಪಥಮಾವು | ದರಿಯದಾಯ್ತೆನಗೆನ್ನಲು || ||೩೦೧||

ಹಿಂದೊಂದು ಶಿಶುಕಂಡುದು | ಅದು ಬೊಮ್ಮ | ನಿಂದ ನಿಶ್ಚಯಮಾದುದು ||
ಇಂದು ಪೆಟ್ಟಿಗೆಯೊಳೇನು | ನೋಳ್ಪೆ ಗೋ | ವಿಂದ ಗತಿ ಎನ್ನುತವನು || ||೩೦೨||

ಭಾಮಿನಿ

ಭರದಿ ಬೀಗವ ಸೆಳೆದು ಬಾಗಿಲ
ಪರಿಕಿಸಲಿಕೇನೆಂಬೆ ರತಿಯೋ
ಸಿರಿಯೊ ಗಿರಿಜೆಯೊ ವಾಣಿಶಚಿಯೋ ರಂಭೆ ಮೋಹಿನಿಯೊ |
ತರಣಿ ಕಿರಣವೆ ತರುಣಿಯೆನಿಸಿತೊ
ಪರಿಯ ದೇವನೆ ಬಲ್ಲನದರಿಂ
ದರಿಯ ಬೇಕಿದನೆನುತ ಭಾಮಾಮಣಿಯೊಳಿಂತೆಂದ || ||೩೦೩||

ರಾಗ ಕಾಂಭೋದಿ ಝಂಪೆತಾಳ

ಆರು ನೀನೆಲೆ ತಾಯೆ ಭೂರಿತವ ಭದ್ರತೆಯ |
ಸಾರಿರ್ದ ಕಾರಣವದೇನು ||
ಈ ರೀತಿಯೊಬ್ಬಳೀ ನೀರಿನೊಳಗೈತಂದ |
ಕಾರಿಯವ ಪೇಳ್ವುದೆನುತ || ||೩೦೪||

ತಿರುಗಿ ವರುಣನು ಮತ್ತೆ ನೆರೆಯೋಚಿಸುತಲಾವ |
ದೊರೆಯರಸಿ ಜನಕನಾರಬಲೆ ||
ಮೆರೆವ ಮೊಗ ಕಂದಿರ್ಪ ಚರಿತೆಯೇನೆಂಬುದನು |
ಕರುಣದಿಂದುಸುರುವದು ಬಾಲೆ || ||೩೦೫||

ಅರಿಯದಾದೆನು ನಿನ್ನ ಪೆಸರಿರವನೆಲ್ಲವನು |
ಸರಸಿಜಾಂಬಕಿಯೆನ್ನೊಳೀಗ ||
ಅರುಹುವದು ಭಯಗೊಳದೆಯೆನಲಾಕೆ ಪೇಳಿದಳು |
ವರುಣನೊಳು ವ್ಯಥೆಯ ನಿಜ ಕಥೆಯ|| ||೩೦೬||

ರಾಗ ಭೈರವಿ ತ್ರಿವುಡೆತಾಳ

ಚಿತ್ತವಿಸಯ್ಯ ಖ್ಯಾತ | ಬಿನ್ನಪವಿದ |
ನುತ್ತಮನುದಧಿನಾಥ || ಪೇಳುವೆನೆನ್ನ |
ವೃತ್ತಾಂತವೆಲ್ಲವತ್ತ | ಕೋಸಲ ದೊರೆ |
ಪುತ್ರಿಯಾಗಿರ್ದೆನತ್ತ | ಕೌಸಲೆ ಎನ್ನ |
ಪತ್ತು ರಥಾಖ್ಯಗಿತ್ತ | ರಾಜ್ಯವ ಸಹಿ |
ತಿತ್ತೆನ್ನ ಜನಕನತ್ತ | ತಪಕೆ ಪೋಗ |
ಲಿತ್ತಯೋಧ್ಯದೊಳಾವತ್ತ | ಸಂತಸದೊಳಿರುತ ||
ಉತ್ತಮೋತ್ತಮ ಭಾಗ್ಯದಿಂ ನಿಜ |
ಪತ್ತನದಿ ಸುಖವೆತ್ತು ಬಾಳಿರ |
ಲತ್ತ ಬಂದಾಪತ್ತನೇನದ |
ಬಿತ್ತರಿಪೆ ಮನವಿತ್ತು ತಿಳಿಯಿದ || ||೩೦೭||

ಶರನಿಧಿಯ ಮಧ್ಯದಿ | ತ್ರೈಕೂಟದ |
ಗಿರಿಲಂಕಾ ಪುರವರದಿ | ಇರುವ ದೈತ್ಯ |
ರರಸ ರಾವಣ ಮದದಿ | ಮುತ್ತುತನಲ್ಲಾ |
ಗಿರದೆ ಮೂರ್ಛಿಸಿ ಭರದಿ | ಸೂರೆಗೈದನ |
ನೆರೆ ಭಾಗ್ಯವನು ಮುದದಿ | ಎನ್ನನು ಸಖಿ |
ಯರ ಸಹಿತೊಯ್ಯಹಾದಿ | ಗಟ್ಟುತಲಿನ |
ನುರಿದು ಶಾಪಿಸಲಿಕೈದಿ | ಪುರದಿ ವೈರೋದಿ ||
ಅರಿಯು ಪುಟ್ಟುಗೀ ತರಳೆಯುದರದಿ |
ತರಿವೆನಲ್ಲದೊಡಿರಿಪೆ ಸೆರೆಗೆಂ |
ದೊರೆಯೆ ಅಜಮುಖ್ಯರರುಹೆ ನೀತಿಯ |
ತರಿಸಿ ಪೆಟ್ಟಿಗೆ ಕರೆಸಿ ಮತ್ಸ್ಯವ || ||೩೦೮||

ಅಂದೆನ್ನನಿರಿಸುತಲಿ | ಬೀಗವನಿಕ್ಕು |
ತಂದಾತಗೀಯುತಲಿ || ಕಾದಿರುವನು |
ತಂದರುಹಲು ತನ್ನಲಿ | ಭದ್ರವಿದೆನು |
ತಂದಿಡುತತಿ ಬಾಯಲಿ | ಇರುತಲಿರ |
ಲೊಂದಿನ ಮರೆವೆಯಲಿ | ತಪ್ಪಲು ನಡೆ |
ತಂದುದೀ ಜಲಧಿಯಲಿ | ದೇವರ ದಯ |
ದಿಂದಲಿ ಬದುಕುತಲಿ | ಸೇರ್ದೆನಾನಿಲ್ಲಿ ||
ತಂದೆಯಂದದೊಳಿಂದು ಕಾಯೆನು |
ತಂದು ಮರುಗುತ ಮುಂದೆ ಪತಿಯೊಡ |
ನೆಂದಿಗಾದರು ಚಂದದಿಂದಿಹ |
ನಂದ ಗೈಯೆನಲ್ಕೆಂದ ವರುಣನು || ||೩೦೯||

ವಾರ್ಧಕ

ಮರುಗದಿರು ನೀನೆಂದು ಮನ್ನಣೆಯ ಗೈದಂದು
ತರತರದಿ ಶೃಂಗರಿಸಿ ದಂಡಿಗೆಯೊಳ್ ಕುಳ್ಳಿರಿಸಿ
ಪರಮಸಂಭ್ರಮದಿಂದಯೋಧ್ಯೆಗೈತರಲಂದು ನೃಪನೆದ್ದು ಮನ್ನಿಸಿದನು ||
ವರುಣ ಕೌಸಲೆಯನುಂ ದೊರೆಗಿತ್ತು ಕಥೆಯನುಂ
ಒರೆದತ್ತ ಸರಿಯಲ್ಕೆ ಸತಿರಮಣಗೆರಗಲ್ಕೆ
ಹರುಷದಿಂದಪ್ಪುತಂ ವಿಭವದಿಂದೊಪ್ಪುತಂದಿರುತಿರ್ದ ನಾ ವೀರನು || ||೩೧೦||

ರಾಗ ಕಾಂಭೋಜಿ ಝಂಪೆತಾಳ

ಇತ್ತ ಮಗಧೇಶ ಮುದವೆತ್ತು ಚಂದ್ರಾಖ್ಯಮಣಿ |
ರತ್ನ ಪೀಠದೊಳೆಸೆದು ನುಡಿದ ||
ಪುತ್ರಿಯಾದ ಸುಮಿತ್ರೆಗಿತ್ತಲೇರಿತು ಪ್ರಾಯ |
ಧಾತ್ರಿಪಾಲರ ಬರಿಸಿ ಮುಂದ || ||೩೧೧||

ವಿರಚಿಪೆ ಸ್ವಯಂವರವ ಪುರವ ಶೃಂಗರಿಸುತ್ತ |
ಬರೆಸು ಲೇಖನ ಡಂಗುರವನು ||
ಭರದಿಂದ ಹೊಯ್ಸೆಂದು ಅರುಹಿ ಮಂತ್ರೀಶನಲಿ |
ತರಳ ಶ್ರುತಸೇನನೊಡನವನು || ||೩೧೨||

ಸರ್ವಾಧಿಕಾರವನು ಸರಸದಿಂ ಗೈಯೆನ್ನು |
ತರುಹೆ ಸನ್ನಹಗಳನು ತಾನು ||
ನೆರಹಿ ಬಹು ವಿಧದಿಂದ ಪರಮತರ ಸಿಂಗರವ |
ವಿರಚಿಸಲು ನಡೆಯಿಸಿದನವನು || ||೩೧೩||

ಇತ್ತ ಡಂಗುರವಾಲೆಯತ್ತೆಲ್ಲ ಬರಸಲ್ಕೆ |
ಮತ್ತು ಭೂಪಾಲಕರು ನೆರೆಯೆ ||
ಉತ್ತಮೋತ್ತಮದಿಂದ ಮನ್ನಿಸುತ್ತಿರುತಿರಲು |
ಇತ್ತ ಕಾಳಿಂಗ ದೇಶದಲಿ || ||೩೧೪||

ರಾಗ ಸೌರಾಷ್ಟ್ರ ತ್ರಿವುಡೆತಾಳ

ವೀರ ಸೇನಕಸುತ ಪ್ರವೀರನು |
ಭೂರಿ ಜನರೊಡನಲ್ಲಿಗೈತಂ |
ದೊರೆದನಾ ಸೊಬಗಿಂಗೆ ಮೆಚ್ಚುತ | ವೀರನಂದು || ||೩೧೫||

ಅರರೆ ತ್ರೈಜಗತಿಯೊಳಗೀತೆರ |
ವಿರುವದೇ ಸೌಭಾಗ್ಯ ಸಿಂಗರ |
ಧರೆಶರಧಿಯಜಭವರು ತೆತ್ತರೆ | ವರೆಯಲೇನೈ || ||೩೧೬||

ನೀಲ ಭಿತ್ತಿಯೊ ಹರಿಯ ಕಾರ್ಮುಕ |
ಮೇಲು ಮಂಟಪವೋ ಖರದ್ಯುತಿ |
ಏಳುಲೋಕವೊ ಚಪ್ಪರವೊ ಮನೆ | ಶೂಲಿಧನುವೊ || ||೩೧೭||

ಒಂದೆಸೆಗೆ ಸುರವರರು ಮುನಿಜನ |
ರೊಂದು ಬದಿ ರಾಜೇಂದ್ರ ದೊರೆಗಳು |
ಒಂದು ಕಡೆ ಸತಿಯೊಂದು ಪಥ ಭಟ | ರಿಂದಲೆಸೆಯೆ || ||೩೧೮||

ಭಾಮಿನಿ

ವರ ನಿಗಮ ಸ್ಮೃತಿ ಗೀತ ಗಾಯನ
ಮೆರೆಯುವಾಗಮ ಶ್ರುತಿ ಪುರಾಣದೊ
ಳಿರದೆ ಶಾಸ್ತ್ರಾದಿಗಳ ತರ್ಕದ ವಾದ್ಯ ಫೋಷದಲಿ |
ಇರಲು ಬರೆ ಮರ್ಯಾದೆಯಲಿ ಕು
ಳ್ಳರಿಸಿ ಸೋದರ ಭಾನುದತ್ತನ
ತರಳೆ ನೀಲೆಯ ಸಹಿತ ಶೃಂಗರ ಗೈದರೊಲವಿನಲಿ || ||೩೧೯||

ಆರ್ಯಸವಾ
ತರಳೆಯರಿಬ್ಬರ | ಹರುಷದಿ ನೃಪದಂ | ಡಿಗೆಯಲಿ ಕುಳ್ಳಿರಿಸಿ ||
ನೆರೆದಿಹ ಜನಸಭೆ | ಗಿರದೈತಂದವ | ನೆರೆದರ ತೋರಿಸಿದ || ||೩೨೦||

ರಾಗ ತೋಡಿ ಅಷ್ಟತಾಳ
ನೋಡಿರಿ | ಸಭೆ | ನೋಡಿರಿ || ಪಲ್ಲವಿ ||

ಈತನು ತೆಲುಗನಂಗನು ಬಳಿಕೀತ |
ಭೂತಳಪತಿ ಚೋಳ ಕೇರಳದಾತ |
ಈತನು ಕೊಂಕಣ ಸೌರಾಷ್ಟ್ರದಾತ |
ನೀತನು ಸೌವೀರ ಕಾಶ್ಮೀರದಾತ || ||೩೨೧||

ಮತ್ತೆಂದನಯೋಧ್ಯೇಶ ದಶರಥನೀತ |
ನುತ್ತಮ ಬಲವಂತ ರಾಜೇಂದ್ರನಾತ |
ಇತ್ತ ಕಾಳಿಂಗ ಧಾತ್ರಿಪನ ಸಂಜಾತ |
ಮತ್ತಕಾಶಿನಿ ಪ್ರದೀಪನ ನೋಳ್ಪುದೀತ || ||೩೨೨||

ಪರಿಕಿಸುತಾ ದಶಸ್ಯಂದನನನ್ನು |
ತರಳೆ ಸುಮಿತ್ರೆಯು ಪೂಸರವನ್ನು |
ಇರಿಸೆ ಕಂಠದಿ ನೀಲೆಯಾ ಪ್ರವೀರನನು |
ಇರಿಸಲ್ಕೆ ನೋಡುತ್ತ ಭದ್ರಾಖ್ಯತಾನು || ||೩೨೩||

ಮಣಿಮಂಟಪದಿ ವಧುವರರ ಕುಳ್ಳಿರಿಸಿ |
ಜನಪ ಧಾರೆಯ ಗೈದ ದಕ್ಷಿಣೆ ಕೊಡಿಸಿ |
ಘನದಾನ ಭೋಜನದಿಂದಲಿ ದಣಿಯೆ |
ಮುನಿಜನರೆಲ್ಲರು ಹರಸುತ ನಲಿಯೆ || ||೩೨೪||

ವಾರ್ಧಕ

ಇರುತಿರಲಿಕತ್ತಲುಂ ಪರಶುಧರನರಸಿದಂ
ಅರಿಗಳಂ ಪದಿನೆಂಟು ಬಾರಿ ಸಂಹರಿಸಿದೆಂ
ತಿರುಗಿ ಖಂಡಿಸದೆಯುಂ ವರುಷ ಪಲವಾದುದುಂ ಕೊಬ್ಬಿರುವ ಕ್ಷತ್ರಿಕುಲವ ||
ತರಿಯಬೇಕೆನ್ನುತಂ ಬತ್ತಳಿಕೆ ಬಿಗಿಯುತಂ
ಪರಶುಧರ ಗದೆಯಾಂತು ಭಸ್ಮಮಂ ಪೂಸುತಂ
ಉರಿಯನಂದುಗುಳುತಂ ನಡುಗೆ ಸಚರಾಚರಂ ನಡೆತಂದನಾ ಸ್ಥಾನಕೆ || ||೩೨೫||

ರಾಗ ಮಾರವಿ ಏಕತಾಳ

ಬರುತವನಂಗನ | ನಿರಿಯುತವಂಗ |
ಹರಸಿ ತೆಲುಂಗನನು | ತರಿದು ಕಾಳಿಂಗನ |
ನೆರೆಕೊಂಕಣ ಬ | ರ್ಬರ ಕೇರಳ ಪಲಿ |
ಪುರ ನೇಪಾಳರ | ಧರೆಗೊರಗಿಸಿದ || ಏನನೆಂಬೆ || ||೩೨೬||

ಮತ್ತೆ ಕಾಶಿಯ | ನೊತ್ತುತ ಕಾಶ್ಮೀರ |
ದತ್ತ ಸೌವೀರವ | ಸುತ್ತ್ತಿ ಸೌರಾಷ್ಟ್ರವ |
ಸುತ್ತುತ ಮಾಳವ | ದತ್ತ ನಿಷದನಿಧಿ |
ನೊತ್ತಾಯದಿ ಮಥಿ | ಸುತ್ತಲಿ ಬಂದಾ || ಏನನೆಂಬೆ || ||೩೨೭||

ಚರಿಸುತ ಬಲುಪುರ | ವರಿಗಳನುರೆ ಸಂ |
ಹರಿಸುತ ಕಾ | ಡ್ಗಿರಿ ಯರನು |
ಇರಿದಡಗಿಸಿ ಭುಜ | ತರಳರ ಕುಲವನು |
ತರಿಯುತಲಂ | ದಿರ ದೈತಂದ || ಏನನೆಂಬೆ || ||೩೨೮||

ಭಾಮಿನಿ

ಝಗಝಗಿಸಿ ಪರಶುಧರ ತಾ ಬಂ
ದೊಗುತ ಮಗಧನ ಕೋಟೆ ಭಂಗಿಸಿ
ಬಗೆಗೊಳದೆ ಕಾದರನು ಸವರುತ ದ್ವಾರ ಪುಡಿಗೈಯ್ಯೆ
ಧಿಗಿಲೆನುತಲುಳಿದವರು ನೃಪಪದ
ಯುಗಕೆ ದೂರಲು ಮುನಿದು ಬಂದನೆ
ಭೃಗು ಕುಲೋತ್ತಮನೆಂದು ಯೋಚಿಸುತಿರ್ದ ಮಾಗಧನು || ||೩೨೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂದು ಕ್ಷತ್ರಿಯ ಜಲಧಿವಡಬನ |
ಮುಂದೆ ಬಾಳುವನಾವ ಬೆದರಲು |
ಹೊಂದುವುದು ನಾರಕವ ಕ್ಷತ್ರಿಯ | ವೃಂದವದಕೆ || ||೩೩೦||

ಇದಿರಾಗಿ ಹೆಣಗುತ್ತಲಳಿಯಲು |
ತ್ರಿದಶಲೋಕದ ಸಕಲಸಂಪದ |
ಕೊದಗಲಪ್ಪುದೆನುತ್ತ ನಿಶ್ಚಯ | ಮುದದಿ ಗೈದ || ||೩೩೧||

ಅನಿತರಲಿ ಭೃಗುರಾಮ ನುಗ್ಗುತ |
ಜನರ ಮಥಿಸುತಲಿಹುದ ಕಾಣುತ |
ಜನಪನಾ ಚಂದ್ರಾಖ್ಯ ನುಡಿದನು | ಘನತೆಯಿಂದ || ||೩೩೨||

ರಾಗ ಭೈರವಿ ಅಷ್ಟತಾಳ

ಎಲವೊ ಭಾರ್ಗವ ಕೇಳೆಲಾ | ಕೋಟೆಯ ಮುರಿ | ದೊಳ ನುಗ್ಗಿ ಬಾಗಿಲ್ಗಳ ||
ಕಳಚಿ ಪುಡಿಗೈದು | ಬಲಗಳ ಕೊಲುತಿಹ | ಕೆಲಸವೇನುಸುರೆಂದನು || ||೩೩೩||

ನೆಲಪಾಲರೆಲ್ಲರನು | ಕೊಲ್ಲುವೆನೆಂಬ | ಛಲವಾಂತು ಬಂದೆ ನಾನು ||
ಬಲವಂತನಾದಡೆ | ನಿಲು ಎಂದು ಸಾರಥಿ | ತಲೆಗಡಿದುರುಳಿಸಿದ || ||೩೩೪||

ಮುನಿಕುಲದಲಿ ಜನಿಸಿ | ಕೋಪದೊಳೆಲ್ಲ | ಜನಪರ ಸಂಹರಿಸಿ ||
ಘನತೆಯ ಗೊಂಡರೆ | ಸನುಮತವೇ ಧರ್ಮ | ವನುಕರಿಸದೆ ಬಂದೆಯ || ||೩೩೫||

ದುರುಳರು ಬಾಹುಜರು | ದ್ರೋಹವ ಮುನಿ | ವರರಿಗೆ ಗೈಯುವರು ||
ತರಿಯದೆ ಬಿಟ್ಟರೆ | ಧರೆ ಹೊರಲಾರದೆಂ | ದಿರಿದನು ಪಗೆಯುರಕೆ || ||೩೩೬||

ಮತ್ತೆ ಭೂಪಾಲಕನ | ಪದ್ಮಕ ನಿನ | ದತ್ತನ ಶ್ರುತ ಸೇನನ ||
ಎತ್ತಿ ಖಡ್ಗದಿ ತಲೆ | ಕತ್ತರಿಸುತ ನೃಪ | ಮೊತ್ತವ ಬರಿಗೈದನು || ||೩೩೭||

ವಾರ್ಧಕ

ಅರಿಗಳಂ ಜನಗಳಂ ದೊರೆಗಳಂ ದಳಗಳಂ
ತರಳರಂ ವೃದ್ಧರಂ ಬಂದರಂ ನಿಂದರಂ
ಸರಿದರಂ ಜರಿವರಂ ಜಾರ‍್ವರಂ ಪಾರ‍್ವರನ್ನೊರಸಿದಂ ಧಾರುಣಿಯಲಿ |
ತಿರುಗುತಂ ನೋಡುತಂ ಅಜಸುತನು ದಶರಥಂ
ವರನಸುವ್ರತಗಳಿಂ ವಿಭವದಿಂದಿರಲವಂ
ತರಿಯಲುಂ ಕಾಲಮಿದು ಅಲ್ಲವೆಂದಾಕ್ಷಣಂ ತಿರುಗಿದಂ ರಾಮ ಭರದಿ || ||೩೩೮||

ಭಾಮಿನಿ

ಮತ್ತೆ ದಶರಥನಾ ಕಳಿಂಗಜ
ಮತ್ತಕಾಶಿನಿಯರು ಸಮೇತದೊ
ಳತ್ತ ತಮ್ಮಾಲಯಕೆ ಸರಿಯುತ ಸುಖದೊಳಿರುತಿರಲು |
ಇತ್ತ ಕಾಳಿಕಪುರದಿ ದಾನವ
ಮೊತ್ತದಿಂದೋಲಗವನೀಯುತ
ಚಿತ್ತದಲಿ ಯೊಚಿಸುತ ಶಂಬರನೆಂದ ಬಲಿಯೊಡನೆ || ||೩೩೯||