ಭಾಮಿನಿ

ಅರರೆ ಮೋಸಗಳಾಯ್ತು ಭೂವರ
ನಿರದೆ ಸೋತನು ಮುಂದೆ ಶ್ರೀವರ
ಧರೆಯ ಭಾರವ ನೀಗಲೀತಗೆ ಜನಿಸುತಿಹ ಬಗೆಗೆ |
ಎರಡ ಗೈವರೆ ಖಳರೆನುತ ನಿಜ
ಭರಿತ ಕಾಂತಿಯ ಬಲದರೆಕ್ಕೆಯ
ಭರದೊಳೆತ್ತಲು ತ್ರಿಜಗ ಬೆಳಗಿದುದರಸ ಮೊಗಮಿನುಗೆ || ||೪೨೧||

ಕಂದ

ತರಣಿಯ ಕಿರಣವ ಹಿಂಗಿಸು
ತಿರುತಿಹ ಸುಪ್ರಭೆರಂಜಿಸೆ ಕಾಣುತ ಭೂಪಂ |
ಉರಿಮಸಗುತ ಹರನಂದದಿ
ದುರುಳರ ಮೇಲ್ವಾಯ್ದು ಗರ್ಜಿಸುತ್ತಿಂತೆಂದಂ || ||೪೨೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮಂದಮತಿ ಕೇಳ್ ಭಳಿರೆ ಮಾಯದೊ |
ಳಿಂದು ಜೈಸುವೆನೆಂದು ನೋಡುತ |
ಹಿಂದೆ ಬಂದೈ ನಿನ್ನನೀಕ್ಷಣ | ಕೊಂದು ಕಳೆವೆ || ||೪೨೩||

ಮರುಳೆ ಮಾನವ ಕಾದಲೇಕೈ |
ಸರಸಿಜೋದ್ಭವ ವರವನಿತ್ತಿಹ |
ತೆರವನರಿಯದೆ ಬಂದು ಕೆಟ್ಟೆಯ | ತರುಣಿ ಸಹಿತ || ||೪೨೪||

ಇರಲಿ ಬೊಮ್ಮನ ವರವು ಮತ್ತೈ |
ತರಲಿ ಭವಮುಖರಿಂದು ನಿನ್ನನು |
ತರಿಯದಿರೆ ದಶರಥನೆ ತಾನೆಂ | ದೊರೆಯೆ ಕೇಳ್ದು || ||೪೨೫||

ಧೀರನಹುದೇ ಎಂದು ಪಗೆರಥ |
ಕೇರಿಸಲು ಶರಮುರಿದು ಕೀಲದು |
ಜಾರುವಂದವ ನೋಡಿ ಕೈಕೆಯು | ಮೀರಿ ತನ್ನ || ||೪೨೬||

ಕರದ ಕಡಗದಿ ತೇರನಡೆಸಲು |
ವರ ಮಹಾ ದಿವ್ಯಾಸ್ತ್ರವೆಚ್ಚಡೆ |
ದುರುಳ ಶಂಬರ ಧರಣಿಗೊರಗಿದ | ಸುರರು ನಲಿಯೆ || ||೪೨೭||

ಮತ್ತೆ ಬಲಿಮುಖ ದಾನವರ ಮಥಿ |
ಸುತ್ತ ತಿರುಗುತ ಸತಿ ಚಮತ್ಕೃತಿ |
ಗತ್ತ ಮಹಸಂತಸದೊಳೆಂದನು | ಪೃಥ್ವಿಪಾಲ || ||೪೨೮||

ರಾಗ ಸುರುಟಿ ಏಕತಾಳ

ಮೆಚ್ಚಿದೆ ನಾನಿದಕೆ | ಗೈದಿಹ |
ಹೆಚ್ಚಿನ ಸಾಹಸಕೆ ||
ಅಚ್ಚರಿಯೀ ಪರಿ | ಗಿಚ್ಛೆಯೊಳೆರಡೊರ |
ಮುಚ್ಚುಮರೆಗಳೇ | ನುಚ್ಚರಿಸೀವೆನು || ||೪೨೯||

ಎರಗುತ್ತ ತನಗಿನ್ನು | ಬೇಕಾ |
ಗಿರುತಿರೆ ಬೇಡುವೆನು ||
ಅರಸನೆ ಕೇಳೆಂ | ದೆರಗಲು ಮುಂದಕೆ |
ಬರುತಲೆಯರುಣನ | ತರಳನ ಪರಿಕಿಸಿ || ||೪೩೦||

ಧೀರನು ನೀನಿರಲು | ದೈತ್ಯನು |
ಭೂರಿ ರಣಾಗ್ರದೊಳು ||
ಹಾರಿಸಿ ಶಿರವನು | ಸೇರಿಸುತೆಮಪುರ |
ನಾರಿ ಸಹಿತ ಮುದ | ವೇರುತ ಬಂದೆವು || ||೪೩೧||

ಅರಸನು ಬಲು ಪರಿಯಾ | ಮನ್ನಿಸಿ |
ಬರುತಿರೆ ಸುರರಾಯ ||
ಹರುಷದ ಭಾರದಿ | ಸುರಸಭೆ ಮಧ್ಯದಿ |
ಪರಿಪರಿಮಾನಿಸು | ತರುಹಿದನಂದು || ||೪೩೨||

ಅಳಿದರೆ ದಾನವರು | ನಿನ್ನನು |
ಬಳಲಿಸಿದರೆ ಭಟರು ||
ಚೆಲುವನೆ ನೊಂದೈ | ಯಳವಿಯೊಳೆನ್ನುತ |
ತಳುವದೆ ಬರಿಸುತ | ಲಲನಾ ಮಣಿಯರ || ||೪೩೩||

ವಾರ್ಧಕ

ಸುರಪ ಬಲುತೋಷದಿಂ ಭೂಪಗಂ ಮಜ್ಜನವ
ವಿರಚಿಸುತ ಶೃಂಗರಿಸಿ ಕೈಕೆಯಂ ಶಚಿಮುಖದಿ
ಸರಸವಂಬಡಿಸುತಂ ಗಂಧಕರ್ದಮ ಕತ್ತುರಿಯನಿತ್ತು ನೆರೆದ ಸಭೆಗೆ ||
ಬರಿಸಿ ರಾಜೇಂದ್ರನಂ ಗದ್ದುಗೆಲಿ ಕುಳ್ಳಿರಿಸಿ
ಅರಸಿಯರ ಗುಂಪಿನಿಂ ಕೈಕೆಯಂ ಮಾನಿಸುತ
ಸರುವರುಂ ಘೇಯೆನಲು ದಶರಥನ ನೋಡುತ್ತ ಮೈನಯನನಿಂತೆಂದನು || ||೪೩೪||

ರಾಗ ಬೇಗಡೆ ಏಕತಾಳ

ಧೀರವೀರೋದ್ಧಾರ ರಾಜೇಂದ್ರ | ಚಂದ್ರನಿಧಿ ಗಂ |
ಭೀರ ವಿಕ್ರಮ ಗಂಡಗುಣ ಸಾಂದ್ರ ||
ಮೂರು ಜಗದೊಳು ಹೋರಿ ನಿನ್ನೊಳು |
ಮಿರಿಜಯವನು ಸೇರಿ ಪೋಗುವ |
ಶೂರರಾಗಿಹರಾರ ಕಾಣೆನು |
ದಾರ ಮಝ ಬಿಲ್ಲಾಳು ಭಾಪುರೆ || ||೪೩೫||

ಇಂದು ದಾನವರಿಂದ ಹೊಂದಿರುವ | ಬಂಧನವ ಕಳೆ |
ದಿಂದು ಸಜ್ಜನವೃಂದವನು ಪೊರೆವ ||
ಬಂದು ನೀನೆಮಗಿಂದು ಪ್ರೀಯದಿ |
ನೊಂದು ಪಗೆಯರ ಕೊಂದು ಸುಖವನು |
ತಂದುದಕೆ ತಾನಿನ್ನು ಮನ್ನಿಪೆ |
ನೆಂದು ವರಸಂಕ್ರಂದನೆಂದನು || ||೪೩೬||

ಸಭೆಯ ಮಧ್ಯದಿ ತರಣಿ ಶಶಿಯಂತೆ | ಕಾಂತಿಯೊಳಗೊಪ್ಪಿರೆ |
ಸಭಿಕರೆಲ್ಲರು ಪೊಗಳುತಿರೆ ಮತ್ತೆ ||
ಅಭವಮುಖ್ಯರು ತ್ರಿಭುವನಂಗಳು |
ವಿಭುಧಜನ ಸಹಿತುಭಯರಿಗೆ ಮನ |
ಮುಬರಿಸಲು ಸುರಪ್ರಭುವಯೋಧ್ಯಾ |
ವಿಭುವಿನಿದಿರಲಿ ವಿಭವ ಗೈದರು || ||೪೩೭||

ಚಿತ್ರಸೇನನು ಕರೆದು ನಾರಿಯರ | ನರ್ತನವ ಗೈಸುತ |
ಲರ್ತಿಯಿಂದಿರೆ ಘೋಷ ಜಯಸಾರ ||
ಮತ್ತೆ ಮುನಿಜನವತ್ತಪರಸುತ |
ಲೊತ್ತಿ ಸರಿಯಲಿಕಿತ್ತಶಚಿಪತಿ |
ಮಿತ್ರಮಣಿ ದೊರೆ ನಿತ್ತ ವೈಭವ |
ದತ್ತ ಮೆರೆಎನಲತ್ತ ಪೊರಟನು || ||೪೩೮||

ಅರಸಿಸಹಿತಲೆ ರಥವ ನಡರುತ್ತ | ವೈಭೋಗದಿಂದಲೆ |
ಪುರಕೆ ಶೀಘ್ರದಿ ಪಯಣವಾಗುತ್ತ ||
ಹರುಷ ರಸದಲಿ ಮೆರೆದು ರಾಜ್ಯದಿ |
ಸುರಪಗಿಮ್ಮಡಿ ಸಿರಿಸುಭಾಗ್ಯದೊ |
ಳರಸ ಶೋಭಿಸೆ ತರುಣಿಮಣಿಯರು |
ಬಲುತಲಾರತಿ ಭರದೊಳೆತ್ತಲು || ||೪೩೯||

ವಾರ್ಧಕ

ಪರಮಮುನಿ ಶೌನಕರಿಗಿರದೆ ಸೂತನು ಪೇಳ್ದ |
ವರಚರಿತ್ರವನೆನ್ನ ಗುರುವಾಣಿಯರುದೋರ |
ಲರುಹಿದೆಂ ಕನ್ನಡದಿ ತರಳ ಬೆಸಸಿದನೆಂದು ಪುರುಡಿಸುತ್ತೀರ್ಷೆಯನ್ನು ||
ಧರಿಸದೆಯು ಕಿವಿದೆರೆದು ಪಂಡಿತರು ಹರ್ಷದಿಂ |
ಮೆರೆಸಿ ಜರೆಯದೆಯೆನ್ನ ಹರಸಬೇಹುದು ಮತ್ತೆ |
ಕರುಣನಿಧಿ ಶ್ರೀರಮಣ ಕರುಣಿಸುತಲಿಚ್ಛೆಯಂ ಶರಣರಂ ನಿರತ ಪೊರೆಯೆ || ||೪೪೦||

ಮಂಗಲ ಪದ

ಪದುಮದಳ ಲೋಚನಾಯ | ಜಯಮಂಗಲಂ |
ವಿಧವಿಧದಿ ನುತಪಾಲಿತಾಯ | ಶುಭಮಂಗಲಂ || ಪಲ್ಲವಿ ||
ಕನ್ನೆ ಸಿರಿಮೋಹಿತಾಯ | ಪನ್ನಗೇಂದ್ರ ಶಯನಾಯ |
ಚನ್ನಕೃಷ್ಣಕೇಶವಾಯ | ಜಯಮಂಗಲಂ |
ರನ್ನ ತುಳಸಿಮಾಲಿಕಾಯ | ಕುನ್ನಿ ದೈತ್ಯನಿಧನಾಯ |
ಮುನ್ನ ಶ್ರೀ ಜಗವಂದಿತಾಯ | ಶುಭಮಂಗಲಂ || ||೪೪೧||

|| ದಶರಥೋತ್ಪತ್ತಿ : ಸುಮಿತ್ರಾ ಸ್ವಯಂವರ ಪ್ರಸಂಗ ಮುಗಿದುದು ||