ಪ್ರಕೃತಿ ಸೃಷ್ಟಿಯ ಅದ್ಭುತಗಳಲ್ಲಿ, ನಮ್ಮ ಮಿದುಳು ಗಣ್ಯಸ್ಥಾನವನ್ನೇ ಪಡೆಯುತ್ತದೆ. ತನ್ನ ಬಗ್ಗೆಯೇ ಆಲೋಚಿಸುವ ತನ್ನ ರಚನೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ಸಂಶೋಧನೆ ಮಾಡುವ, ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡುವ ಅಂಗ ಮಿದುಳೊಂದೇ ! ಕೇವಲ ಒಂದೂ ಕಾಲು ಕಿಲೋಗ್ರಾಂ ತೂಗುವ ಈ ಪುಟ್ಟ ಬೆಣ್ಣೆಯಷ್ಟೇ ಮೃದುವಾದ ಅಂಗ, ನಮ್ಮ ಭಾರೀ ದೇಹದ ಪ್ರತಿಯೊಂದು ಅಂಗಾಗದ ಕಾರ್ಯ-ಚಟುವಟಿಕೆಗಳನ್ನು ನಿಯಂತ್ರಿಸಿ, ನಿರ್ದೇಶಿಸುವುದರಲ್ಲದೆ, ಅಂಗಾಂಗಗಳಿಗೆ ಕಾಯಿಲೆ ಬರದಂತೆ, ಒಂದು ಪಕ್ಷ ಬಂದರೆ ಶುಶ್ರೂಷೆ, ಅಂಗಕ್ಕೆ ಹಾನಿಯಾದರೆ ರಿಪೇರಿ ಕೆಲಸವನ್ನೂ ನಿರ್ವಹಿಸುತ್ತದೆ. ಆಳ, ವಿಸ್ತಾರ ತಿಳಿಯದ, ಒಮ್ಮೆ ಹತೋಟಿಗೆ ಸಿಗುವ, ಮಗದೊಮ್ಮೆ ಹತೋಟಿಗೆ ಸಿಗದ ನಮ್ಮ ಮನಸ್ಸಿನ ಕೇಂದ್ರವೂ ಮಿದುಳೇ. ಮಿದುಳಿನ ಕೆಲ ಭಾಗಗಳು ಕೆಲವೇ ಸೆಕೆಂಡುಗಳ ಕಾಲ ನಿಷ್ಕ್ರಿಯವಾದರೆ ಸಾಕು, ನಮಗೆ ಪ್ರಜ್ಞೆ ತಪ್ಪುತ್ತದೆ. ಹೃದಯದ ಬಡಿತ, ಉಸಿರಾಟ, ರಕ್ತದೊತ್ತಡ, ದೇಹದ ತಾಪಮಾನಗಳು ಏರುಪೇರಾಗುತ್ತವೆ. ಸಾವಿನ ನೆರಳು ನಮ್ಮ ಮೇಲೆ ಬೀಳತೊಡಗುತ್ತದೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ರೋಗಿಯ ಈ ‘ವೈಟಲ್ ಸೈನ್ಸ್’ ಬಗ್ಗೆ ವೈದ್ಯರು-ನರ್ಸ್‌‌ಗಳು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುತ್ತಾರೆ. ಅವು ಸ್ಥಿರವಾಗಿದ್ದರೆ, ‘ಪರವಾಗಿಲ್ಲ ರೋಗಿ ಬದುಕಬಹುದು’ ಎಂತಲೂ, ಅವು ಅಸ್ಥಿರವಾಗಿದ್ದರೆ ‘ರೋಗಿ ಸ್ಥಿತಿ ಗಂಭೀರ’ ಎಂದು ಘೋಷಿಸುತ್ತಾರೆ. ಇತ್ತೀಚಿನವರೆಗೆ ಹೃದಯಕ್ರಿಯೆ ನಿಂತರೆ, ಉಸಿರಾಟ ನಿಂತರೆ ‘ವ್ಯಕ್ತಿ ಸತ್ತ’ ಎನ್ನುತ್ತಿದ್ದೆವು. ಈಗ, ಮಿದುಳಿನ ನರಕೋಶಗಳು ಸ್ತಬ್ಧವಾದರೆ ‘ವ್ಯಕ್ತಿಯ ಸಾವು ಖಚಿತವಾಗಿದೆ’ ಎನ್ನುತ್ತೇವೆ. ಸತ್ತ ವ್ಯಕ್ತಿಯ ಅಂಗಾಂಗಗಳನ್ನು ಇನ್ನೊಬ್ಬರಿಗೆ ಜೋಡಿಸಲು, ತೆಗೆಯಲು ಸಾವಿನ ಈ ವಿವರಣೆ ಅಗತ್ಯವಾಗಿಬಿಟ್ಟಿದೆ. ನಮ್ಮ ಮಿದುಳಿನಲ್ಲಿರುವ ಹತ್ತು ಸಾವಿರ ಕೋಟಿಗೂ ಮಿಕ್ಕಿನ ನರಕೋಶಗಳು ಸದಾ ಚುರುಕಾಗಿ ದುಡಿಯುವ ಸಾಮರ್ಥ್ಯ ಉಳ್ಳವಾದರೂ, ಅಷ್ಟೇ ನಾಜೂಕು. ಎರಡು ಮೂರು ನಿಮಿಷಗಳ ಕಾಲ ಆಮ್ಲಜನಕ-ಗ್ಲೂಕೋಸ್ ಸಿಗದಿದ್ದರೆ, ಹಾನಿಗೀಡಾಗಿ, ಸಾಯಲೂ ಬಹುದು. ಹಾಗೆಯೇ ತಲೆಗೆ ತೀವ್ರ ಬಗೆಯ ಏಟು ಬಿದ್ದಾಗ, ಹೊರಗೆ ಯಾವ ಗಾಯವಿಲ್ಲ ದಿದ್ದರೂ, ಏಟು ಬಿದ್ದ ರಭಸಕ್ಕೆ ಮಿದುಳು, ತಲೆ ಬುರುಡೆಯೊಳಗೇ ಅಲುಗಾಡಿ, ಚಲಿಸಿ, ಬುರುಡೆಯೊಳಗಿನ ಮೂಳೆಗಳ ಏಣಿಗೆ ಬಡಿದು, ಗಾಯ ಮಾಡಿಕೊಂಡು ಹಾನಿ ಗೀಡಾಗಬಹುದು. ಮಿದುಳಿಗಾದ ಹಾನಿ ರಿಪೇರಿಯಾಗಲು ಬಹಳ ದೀರ್ಘ ಕಾಲ ಹಿಡಿಯುತ್ತದೆ. ಏಕೆಂದರೆ, ಮಿದುಳಿನ ನರಕೋಶಗಳಿಗೆ ತಮ್ಮನ್ನು ತಾವು ರಿಪೇರಿ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲವೇ ಲ್ಲವೆನ್ನುವಷ್ಟು ಕಡಿಮೆ ಎಂಬುದೂ ಗಮನಾರ್ಹ. ಮಿದುಳಿನ ರಿಪೇರಿಗೆ ನೆರವಾಗುವ ಔಷಧಿಗಳೂ ಇಲ್ಲ.

 

ಇನ್ನು ಸೂಕ್ಷ್ಮವಾದ, ಪ್ರಮುಖವಾದ ಮಿದುಳಿನ ರಚನೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ನಮಗೆ (ವಿಜ್ಞಾನಕ್ಕೆ) ಗೊತ್ತಿರುವುದು ಸ್ವಲ್ಪವೇ. ಯುದ್ಧ ಅಪಘಾತಗಳಲ್ಲಿ ಮಿದುಳಿಗೆ ಪೆಟ್ಟು ಮಾಡಿಕೊಂಡವರು, ಮಿದುಳಿನ ಅನೇಕ ಬಗೆಯ ರೋಗಗಳಿಗೆ ತುತ್ತಾದವರು, ಸ್ವಯಂ ಸೇವಕರು ತಾವು ಅನೇಕ ಬಗೆಯ ತೊಂದರೆದಾಯಕ ಪರೀಕ್ಷೆಗಳಿಗೆ ಒಳಗಾಗಿ ಮಿದುಳಿನ ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸಿದ್ದಾರೆ. ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ಅಂಗರಚನಾ ಶಾಸ್ತ್ರಜ್ಞರು, ಶರೀರಕ್ರಿಯಾ ಶಾಸ್ತ್ರಜ್ಞರು, ರಾಸಾಯನ ಶಾಸ್ತ್ರಜ್ಞರು, ತಳಿ ವಿಜ್ಞಾನಿಗಳು, ವೈದ್ಯರೂ ಮನಃಶಾಸ್ತ್ರಜ್ಞರು ಮುಂತಾದವರ ಅವಿರತ ದುಡಿಮೆ ಮತ್ತು ಅವರ ಮಿದುಳಿನ ಸಂವೇದನಾ ವಿಶ್ಲೇಷಣಾ ಸಾಮರ್ಥ್ಯಗಳಿಂದ ಮಿದುಳು ಮತ್ತು ಮನಸ್ಸಿನ ಕಾರ್ಯವಿಧಾನಗಳ ಬಗ್ಗೆ ಈಗ ಸಾಕಷ್ಟು ಮಾಹಿತಿಗಳಿವೆ. ಒಂದು ಕಾಲಕ್ಕೆ ನಿಗೂಢ, ಪ್ರಕೃತಿ ವೈಚಿತ್ಯ್ರ ಎನ್ನಲಾದ ಅನೇಕ ವಿಚಾರಗಳು ಇಂದು, ಸುಲಭವಾಗಿ ತಾರ್ಕಿಕವಾಗಿ ಅರ್ಥಮಾಡಿಕೊಳ್ಳಬಲ್ಲ ಸಂಗತಿಗಳಾಗಿವೆ. ಇವುಗಳನ್ನು ತಿಳಿಯೋಣ.

 

ಭಾರತೀಯರು ಮನಸ್ಸು, ಆತ್ಮದ ಬಗ್ಗೆ ಇತರರೆಲ್ಲರಿಗಿಂತ ಆಳವಾಗಿ ಚಿಂತಿಸಿದವರಾದರೂ, ಮಿದುಳಿನ ಬಗ್ಗೆ ಹೆಚ್ಚು ವಸ್ತುನಿಷ್ಠವಗಿ ತಿಳಿಸುವ ಪ್ರಯತ್ನ ಮಾಡಿದ ಕೀರ್ತಿ ಗ್ರೀಕರಿಗೆ ಸಲ್ಲುತ್ತದೆ. ಕ್ರಿಸ್ತಶಕ ಎರಡೆ ಸುಮಾರಿನಲ್ಲಿ ಗ್ಯಾಲನ್ (GALEN) ಎಂಬ ವೈದ್ಯ ಮಹಾಶಯ ಪ್ರಾಣಿಗಳು ಮತ್ತು ನಮ್ಮ ಹತ್ತಿರದ ಸಂಬಂಧಿ ಮಂಗಗಳ ತಲೆಯನ್ನು ಕೊಯ್ದು, ಮಿದುಳನ್ನು ತೆಗೆದು ಅಧ್ಯಯನ ಮಾಡಿದ. ಜೊತೆಗೆ ತಲೆಗೆ ಪೆಟ್ಟು ಬಿದ್ದ ಅನೇಕ ಗಾಯಾಳುಗಳನ್ನು ಪರೀಕ್ಷಿಸಿ ಅವರ ನಡೆ-ನುಡಿಗಳಲ್ಲಿ ಆಗಿದ್ದ ವ್ಯತ್ಯಾಸಗಳನ್ನು ಗಮನಿಸಿದ. ಆ ಕಾಲದಲ್ಲಿ ಪ್ರಚಲಿತವಿದ್ದ, ತತ್ವಜ್ಞಾನಿ ಅರಿಸ್ಟಾಟಲ್‌ನ ‘ಮನುಷ್ಯನ ಹೃದಯವೇ, ಆತನ ಆಲೋಚನೆಗಳು, ಭಾವನೆಗಳನ್ನು ನಿಯಂತ್ರಿಸುತ್ತದೆ’. ಎಂಬ ಹೇಳಿಕೆಗಳು ಸರಿಯಲ್ಲ. ಮಿದುಳು ಆ ಕೆಲಸ ಮಾಡುತ್ತದೆ ಎಂದು ಘೋಷಿಸಿದ. ಮಿದುಳನ್ನು ಒತ್ತಿ ಹಿಡಿದಾಗ, ಪ್ರಾಣಿಯ ಎಲ್ಲ ಕ್ರಿಯೆಗಳು ಹಾಗೇ ನಿಲ್ಲುವುದನ್ನು ತೋರಿಸಿದ. ಆದರೆ, ಆತನ ಈ ವಾದ ಇತರರಿಗೆ ರುಚಿಸಲಿಲ್ಲ. ಈ ಸಂಶೋಧನಾ ಮಾಹಿತಿಯನ್ನು ಜನ ಸ್ವೀಕರಿಸಲಿಲ್ಲ. ಆನಂತರದ ಒಂದು ಸಾವಿದ ವರ್ಷಗಳಲ್ಲಿ ಏನೊಂದೂ  ಪ್ರಗತಿ ಕಾಣಲಿಲ್ಲ.

ಹದಿನಾಲ್ಕನೇ ಶತಮಾನದಲ್ಲಿ ಇಟಲಿಯ ವೈದ್ಯವಿದ್ಯಾಲಯಗಳು ಒಂದು ಸೀಮಿತ ಪ್ರಮಾಣದಲ್ಲಿ ಸತ್ತ ವ್ಯಕ್ತಿಗಳ ದೇಹವನ್ನು ಕೊಯ್ದು ಪರೀಕ್ಷಿಸುವ ಅವಕಾಶವನ್ನು ವೈದ್ಯ ಶಿಕ್ಷಕ ವಿದ್ಯಾರ್ಥಿಗಳಿಗೆ ನೀಡಿದುವು. ಮನುಷ್ಯನ ಅಂಗಾಂಗ ರಚನೆ ಬಗ್ಗೆ ವೈದ್ಯರಷ್ಟೇ ಪರಿಣತಿ ಖ್ಯಾತ ಕಲಾವಿದ ಲಿಯೋನಾರ್ಡೋ ವಿಂಚಿಗೂ ಇತ್ತು. ಚಿತ್ರ ರಚನೆ ಮಾಡುವ ಮೊದಲು ಆತ ಒಂದು ನೂರಕ್ಕೂ ಹೆಚ್ಚಿನ ಶವಗಳನ್ನು ಕೊಯ್ದು ಅಂಗಾಂಗಗಳು, ಸ್ನಾಯುಗಳ ಆಕಾರ ಮತ್ತು ರಚನೆಯನ್ನು ಅಧ್ಯಯನ ಮಾಡಿದ ಭೂಪ ಅವನು!

‘ಮಿದುಳಿನಲ್ಲಿ ಅನೇಕ ಕುಳಿಗಳಿವೆ (VENTRICLES). ಅವುಗಳಲ್ಲಿ ಮೊದಲನೇ ಕುಳಿ ಕಲ್ಪನೆ ಮತ್ತು ಸಾಮಾನ್ಯ ಜ್ಞಾನಕ್ಕೂ, ಎರಡನೆಯ ಕುಳಿ ಸಕಾರಣ ಆಲೋಚನೆಗೂ, ಮೂರನೇ ಕುಳಿ ನೆನಪಿನ ಶಕ್ತಿಗೂ ಕಾರಣ ಎಂದು ವಿಂಚಿ ಹೇಳಿದ್ದ. ಅಂದಿನ ವೈದ್ಯರು ಅದನ್ನು ಒಪ್ಪಲಿಲ್ಲ.

೧೭ನೇ ಶತಮಾನದ ವೇಳೆಗೆ, ದೇಹದಿಂದ ಹೊರ ತೆಗೆದ ಮಿದುಳುಗಳನ್ನು ಕೆಡದೇ ಇರುವ ಉಪಾಯವಾಗಿ, ಅವನ್ನು ರಾಸಾಯನಿಕ ವಸ್ತುಗಳು ಅಥವಾ ‘ವೈನ್’ನಲ್ಲಿ ಮುಳುಗಿಸಿ ಇಡತೊಡಗಿದಾಗ, ಮಿದುಳಿನ ವಸ್ತು ಒಂದೇ ಬಗೆಯ ವಸ್ತುವಲ್ಲ; ಅದರಲ್ಲಿ ಬೂದು ವಸ್ತು (Grey Matter) ಬಿಳಿವಸ್ತು (White Matter) ಇದೆ. ಈ ಬಿಳಿ ವಸ್ತು ನರತಂತುಗಳ ಸಮೂಹ. ಈ ಬಿಳಿ ವಸ್ತುಗಳ ನಡುವೆ ಸಣ್ಣ ದ್ವೀಪಗಳ ಹಾಗೆ ನರಗಂಟುಗಳಿವೆ (Basal Ganglia) ಎಂಬುದನ್ನು ಪತ್ತೆ ಮಾಡಲಾಯಿತು. ಇಷ್ಟಾದರೂ ಹೃದಯವೇ ಮನಸ್ಸಿನ ಮೂಲ, ಅದರಲ್ಲೇ ಆತ್ಮ ಇರುವುದು ಎಂಬ ಜನ-ನಂಬಿಕೆ ಹೋಗಲಿಲ್ಲ. ಹೃದಯವನ್ನು ಅನಿಮೇಟರ್ (ಅನಿಮಾ=ಆತ್ಮ) ಎಂದು ಕರೆಯುವುದು ತಪ್ಪಲಿಲ್ಲ!

೧೬೧೬ರ ಸುಮಾರಿಗೆ ವಿಲಿಯಂ ಹಾರ್ವೆ, ಮನುಷ್ಯ ದೇಹದ ರಕ್ತ ಸಂಚಾರ ವ್ಯವಸ್ಥೆಯನ್ನು ವಿವರಿಸಿ, ಹೃದಯ ಕೇವಲ ಒಂದು ಪಂಪ್‌, ಮಿದುಳೇ ಎಲ್ಲ ಅಂಗಗಳ ರಾಜ ಎಂದರೂ ಹೃದಯಕ್ಕೆ ದಕ್ಕಿದ್ದ ಆತ್ಮದ ಸ್ಥಾನವನ್ನು ಸ್ಪಷ್ಟವಾಗಿ ನಿರಾಕರಿಸಲಿಲ್ಲ.

ಥಾಮಸ್ ವಿಲ್ಲಿಸ್ (೧೬೬೪) ಮಿದುಳಿನ ಅಂಗರಚನಾ ಶಾಸ್ತ್ರ (Cerebri Anatome) ವನ್ನು ಪ್ರಕಟಿಸಿದ. ಮುಂದೆ ಲಂಡನ್‌ನ ಸೆಂಟ್‌ಪಾಲ್ ಕೆಥೆಡ್ರಲ್ ಅನ್ನು ಕಟ್ಟಿದ ಶಿಲ್ಪಕಾರ, ಸರ್ ಕ್ರಿಸ್ಟೋಫರ್ ರೆನ್‌ನ ನೆರವು ಪಡೆದು, ಮಿದುಳಿನ ಅದ್ಭುತ ಚಿತ್ರಗಳನ್ನು ತನ್ನ ಪುಸ್ತಕದಲ್ಲಿ ಅಳವಡಿಸಿದ. ಮಿದುಳಿನ ಕುಳಿಗಳಿಗಿಂತ ಮಿದುಳಿನ ವಸ್ತುಗಳ ಪ್ರಾಮುಖ್ಯತೆಯನ್ನು ಆತ ಎತ್ತಿ ಹಿಡಿದ. ಇಂದಿನ ಮಾಪನಗಳಿಗೆ ಹೋಲಿಸಿದರೆ, ರೆನ್‌ನ ಮಿದುಳಿನ ಚಿತ್ರಗಳ ಸೂಕ್ಷ್ಮತೆ ಅದ್ವಿತೀಯ, ಅನುಪಮ. ಅವರಿಬ್ಬರ ಕೆಲಸ, ಆಧುನಿಕ ಮಿದುಳಿನ ರಚನಾ ಶಾಸ್ತ್ರಕ್ಕೆ ಭದ್ರ ಬುನಾದಿಯನ್ನು ಒದಗಿಸಿತು.

ಕೆಲವರು ಒಂದು ಶಾಸ್ತ್ರದ ವಿಕಸನಕ್ಕೆ  ಕಾರಣವಾದರೆ, ಕೆಲವರು ಅದರ ಹಿನ್ನಡೆಗೆ ಕಾರಣರಾಗುತ್ತಾರೆ. ಅಂಥವರಲ್ಲಿ ೧೮ನೇ ಶತಮಾನದ ಕೊನೆಯಲ್ಲಿದ್ದ ಪ್ರಾನ್ಜ್‌ ಜೋಸೆಫ್ ಗಾಲ್ ಒಬ್ಬ. ಮಿದುಳು ಮನಸ್ಸಿನ ಉಪಕರಣ ಎಂದು ನಂಬಿದ್ದ ಆತ, ಮನಸ್ಸಿನ ಒಂದೊಂದು ವಿಶೇಷಕ್ಕೂ, ಮಿದುಳಿನಲ್ಲಿ ಒಂದೊಂದು ಕೇಂದ್ರವಿರುತ್ತದೆ. ತಲೆಯ ಮೇಲೆ ಕೈಯಾಡಿಸಿದಾಗ, ಉಬ್ಬು ತಗ್ಗುಗಳನ್ನು ಗುರುತಿಸಿ, ಆಯಾ ಕೇಂದ್ರಗಳ ಇರುವಿಕೆಯನ್ನು ತಿಳಿಯಬಹುದು ಎಂದು ತರ್ಕಿಸಿದ. ಆತ ಎಲ್ಲೇ ಹೋಗಲಿ, ವಿಶೇಷ ಸಾಮರ್ಥ್ಯ ಉಳ್ಳ ಜನಗಳನ್ನು ಭೇಟಿ ಮಾಡಿ, ಅವರ ತಲೆಯ ಮೇಲೆ ಕೈಯಾಡಿಸಿ, ಉಬ್ಬು ತಗ್ಗುಗಳನ್ನು ಗುರುತು ಹಾಕಿಕೊಳ್ಳತೊಡಗಿದ. ತನ್ನ ಈ ‘ನಂಬಿಕೆ’ಯನ್ನು ಆತ ‘ಫ್ರೀನಾಲಜಿ’ ಶಾಸ್ತ್ರ ಎಂಬ ಪುಸ್ತಕದಲ್ಲಿ ಬರೆದುಕೊಂಡಿದ್ದಾನೆ. ಇದೆಲ್ಲ ಅಪದ್ಧ, ಮೂರ್ಖವಾದ ಎಂದು ನಮಗೆ ಈಗ ತಿಳಿದಿದೆ.

ತಲೆ ದಪ್ಪವಾಗಿದ್ದರೆ, ದೊಡ್ಡ ಮಿದುಳು, ಹೆಚ್ಚು ಬುದ್ಧಿ ಎಂಬ ನಂಬಿಕೆ ಸರಿ ಅಲ್ಲ, ಪ್ರತಿಭಾವಂತರ, ಬುದ್ಧಿಶಾಲಿಗಳ ತಲೆ ಅಥವಾ ಮಿದುಳು, ಜನಸಾಮಾನ್ಯರ ತಲೆ ಅಥವಾ ಮಿದುಳಿಗೆ ಹೋಲಿಸಿದರೆ, ನೋಡಲು ಯಾವ ವಿಶೇಷವಾಗಲೀ, ರಚನೆಯಲ್ಲಿ ಯಾವ ವಿಶೇಷತೆಯಾಗಲೀ ಇರುವುದಿಲ್ಲ. ಅವನದು ಹುಚ್ಚು ವಿಚಾರ ತರ್ಕವಾದರೂ, ವಿಲ್ಲಿಸ್ ಮಾಡಲಾಗದ್ದನ್ನು ಗಾಲ್ ಮಾಡಿದ. ಜನರ ಮನಸ್ಸನ್ನು ಹೃದಯದಿಂದ ಮಿದುಳಿನ ಕಡೆಗೆ ತಿರುಗಿಸಲು ಆತ ಯಶಸ್ವಿಯಾದ. ಜನ ತಮ್ಮ ನಡೆವಳಿಕೆ, ಆಲೋಚನೆ, ಪ್ರತಿಭೆಗಳಿಗೂ, ಮಿದುಳಿಗೂ ಸಂಬಂಧವಿದೆ ಎಂದು ತಿಳಿಯುವಂತೆ ಮಾಡಿದ.

ಆನಂತರದ ನರ ವಿಜ್ಞಾನಿಗಳು ಮಿದುಳು, ಅದರಲ್ಲೂ ವಿಶೇಷವಾಗಿ ನರಕೋಶಗಳ ರಚನೆ, ಕಾರ್ಯವಿಧಾನಗಳ ಬಗ್ಗೆ ಬೆಳಕು ಚೆಲ್ಲತೊಡಗಿದರು. ನರಕೋಶಗಳು ಪರಸ್ಪರ ಪ್ರತ್ಯೇಕವಾಗಿದ್ದುಕೊಂಡು ಕೆಲಸ ನಿರ್ವಹಿಸುತ್ತವೆಯೇ ಅಥವಾ ಪರಸ್ಪರ ಸಂಪರ್ಕವನ್ನಿಟ್ಟುಕೊಂಡು, ಸರಪಳಿಯಂತೆ ತೆಕ್ಕೆ ಹಾಕಿಕೊಂಡು ಕೆಲಸ ಮಾಡುತ್ತವೆಯೇ ಎಂಬುದರ ಬಗ್ಗೆ ಜಿಜ್ಞಾಸೆ ಎದ್ದಿತು. ಕ್ಯಾಮಿಲೋ ಗಾಲ್ಜಿ ಎನ್ನುವ ನರ ವಿಜ್ಞಾನಿ, ಹಲವಾರು ಗಂಟೆಗಳ ಕಾಲ ಸೂಕ್ಷ್ಮದರ್ಶಿಯಡಿಯಲ್ಲಿ ನೋಡುತ್ತಾ, ನರಕೋಶಗಳು ಪರಸ್ಪರ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತವೆ ಎಂದ. ಒಂದು ನರಕೋಶದ ಒಂದು ಭಾಗ, ಮತ್ತೊಂದರ ಭಾಗದೊಡನೆ ಸೇರಿಕೊಂಡಿರುತ್ತದೆ ಎಂದ. ಆದರೆ ಕಾಜಲ್ ಎನ್ನುವ ವಿಜ್ಞಾನಿ ಇದನ್ನು ಅಲ್ಲಗಳೆದು, ಅವು ಪರಸ್ಪರ ಸಂಪರ್ಕದಲ್ಲಿರುತ್ತವೆ ಎನ್ನುವುದೇನೋ ನಿಜ. ಆದರೆ ಒಂದಕ್ಕೊಂದು ತೆಕ್ಕೆ ಹಾಕಿಕೊಂಡಿರುವುದಿಲ್ಲ ಎಂದು ಅಭಿಪ್ರಾಯ ಪಟ್ಟ. ಒಂದು ನರ ತಂತುವಿನ ತುದಿ, ಇನ್ನೊಂದು ನರ ತಂತುವಿನ ತುದಿ ‘ಕೂಡುವ ಸ್ಥಳ’ (Synapse)ದ ಬಗ್ಗೆ ಹೇಳಿ, ಎರಡು ತುದಿಗಳ ನಡೆವೆ ಕಂದಕ ಜಾಗ (GAP) ಇರುವುದನ್ನು ಪ್ರದರ್ಶಿಸಿದ. ಈ ಜಾಗದಲ್ಲಿ ನಡೆಯುವ ರಾಸಾಯನಿಕ ಚಟುವಟಿಕೆಗಳ ಅಧ್ಯಯನ (Neurotransmitters=ನರವಾಹಕಗಳು) ಜ್ಞಾನ ಲೋಕಕ್ಕೆ ಹೊಸ ಬಾಗಿಲನ್ನೇ ತೆರೆಯಿತು.

ಮಿದುಳಿನ ಮುಖ್ಯ ಭಾಗಗಳು:

೧. ಪ್ರಧಾನ ಮಸ್ತಿಷ್ಕ (ಸೆರೆಬ್ರಂ): ಎಡ ಮತ್ತು ಬಲ ಅರೆಗೋಳಗಳು, ಮೇಲ್ಮೈ (ಕಾರ್ಟೆಕ್ಸ್‌) ಲಿಂಬಿಕ್ ವ್ಯವಸ್ಥೆ, ಶಿರಗುಳಿ-ಕೆಳ ಶಿರಗುಳಿ

೨. ಉಪಮಸ್ತಿಷ್ಕ (ಸೆರೆಬೆಲ್ಲಂ)

೩. ಮಿದುಳಕಾಂಡ (ಬ್ರೇನ್ ಸ್ಟೆಮ್)

೪. ಮಿದುಳ ಬಳ್ಳಿ (ಸ್ಪೈನಲ್ ಕಾರ್ಡ್‌)