ಪಂ. ಬಸವರಾಜ ರಾಜಗುರು ಅವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಎಲಿವಾಳ ಗ್ರಾಮದವರು. ಅವರ ತಂದೆ ಮಹಾಂತಸ್ವಾಮಿ ಹಾಗೂ ತಾಯಿ ರಾಚವ್ವ ದಂಪತಿಗಳ ಎರಡನೇಯ ಮಗನಾಗಿ ದಿನಾಂಕ: ೨೪-೦೮-೧೯೨೦ ರಂದು ಜನಿಸಿದರು. ರಾಜಗುರು ಅವರ ಮನೆತನವು ಒಕ್ಕಲುತನದ ಮನೆತನವಾಗಿತ್ತು. ಅವರ ತಂದೆಯವರು ಸಂಗೀತಾಸಕ್ತರಾಗಿದ್ದು ತಮಿಳುನಾಡಿನ ತಂಜಾವೂರಿನಲ್ಲಿ ಸಂಗೀತ ಕಲಿತಿದ್ದರು. ಅವರು ಒಳ್ಳೆಯ ಪಿಟೀಲುವಾದಕರಾಗಿದ್ದರು. ಬಸವರಾಜರವರ ದೊಡ್ಡಪ್ಪನವರು ಸಂಸ್ಕೃತ ವಿದ್ವಾಂಸರು, ಜೋತಿಷಿಗಳು ಆಗಿದ್ದರೆಂದು ತಿಳಿದುಬರುತ್ತದೆ.

ರಾಜಗುರು ಅವರ ಮನೆತನದಲ್ಲಿ ಸಾಕಷ್ಟು ತಾಪತ್ರಯಗಳು ಉಂಟಾದವು. ಬಸವರಾಜ ಅವರು ಆರು ವರ್ಷದ ಬಾಲಕನಿರುವಾಗ ಅವರ ತಾಯಿ ತೀರಿಕೊಂಡರು. ಪಾಪ ಅವರ ತಂದೆ ಮತ್ತೊಂದು ಮದುವೆಯಾಗದೇ ಮಕ್ಕಳನ್ನು ಜೋಪಾನ ಮಾಡಿದರು. ಅವರು ಮಕ್ಕಳಾದ ಬಸವರಾಜ ಹಾಗೂ ಸಿದ್ದಯ್ಯನವರಿಗೆ ಪಿಟೀಲು ಬಾರಿಸುತ್ತ ಹಾಡಿ ಪಾಠ ಹೇಳುತ್ತಿದ್ದರು. ಸುಮಾರು ಎರಡು ಮೂರು ವರ್ಷಗಳಲ್ಲಿ ಮಹಾಂತಸ್ವಾಮಿಯವರು ನಿಧನರಾದರು. ಅಲ್ಪ-ಸ್ವಲ್ಪ ಸಾಲಕ್ಕಾಗಿ ಸಾಲಗಾರರು ಅವರ ಇಡೀ ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಈಗ ಯುವಕ ಬಸವರಾಜರು ಮಾಡುವುದಾದರೂ ಏನು? ಆಗ ಅವರ ದೊಡ್ಡಪ್ಪನ ಮಗ, ಕೆಳದಿ ಸಂಸ್ಥಾನದ ಮಠಾಧಿಪತಿಗಳಾಗಿದ್ದ ಶ್ರೀ ರೇವಣಸಿದ್ಧ ಶಿವಾಚಾರ್ಯರು ರಾಜಗುರು ಅವರ ಸಹಾಯಕ್ಕೆ ಬಂದರು. ಅವರು ಬಸವರಾಜರಿಗೆ ಸಂಸ್ಕೃತ ಶಿಕ್ಷಣವನ್ನು ನೀಡಲು ಅವರನ್ನು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ತಂದು ಬಿಟ್ಟರು . ರಾಜಗುರು ಅವರು ಮೂರುಸಾವಿರ ಮಠದಲ್ಲಿ ಶಿಸ್ತಿನಿಂದ ಅಧ್ಯಯನದಲ್ಲಿ ನಿರತರಾಗಿರಲು ಅಲ್ಲೊಂದು ಘಟನೆ ನಡೆಯಿತು. ಅಲ್ಲಿಗೆ ಶ್ರೀ ಪಂಚಾಕ್ಷರಿ ಗವಾಯಿಗಳವರು ಆಗಮಿಸಿದ್ದರು. ಶ್ರೀ ಗುರುಸಿದ್ಧ ಸ್ವಾಮಿಗಳವರು ರಾಜಗುರು ಅವರನ್ನು ಗವಾಯಿಗಳಿಗೆ ಪರಿಚಯಿಸುತ್ತಾ ‘ಈ ಹುಡುಗ ಬಹಳ ಚಲೋ ಹಾಡ್ತಾನ, ಇವ್ನ ನಿಮ್ಮ ಸಂಗಡ ಕರಕೊಂಡು ಹೋಗ್ರಿ’ ಎಂದು ಶಿಫಾರಸು ಮಾಡಿದರು. ಆಗ ಪಂಚಾಕ್ಷರಿ ಗವಾಯಿಗಳವರು ರಾಜಗುರು ಅವರನ್ನು ತಮ್ಮ ಹತ್ತಿರ ಕರೆದು, ಮೈದಡವಿ, ‘ಮಗು ಒಂದ ಹಾಡ ಹೇಳಪಾ’ ಎಂದರು. ಆಗ ರಾಜಗುರು ಅವರು ಧೈರ್ಯದಿಂದ ‘ಭಕ್ತ ಜೀವನ ರಾಮಾ ಸುಜನ ಜೀವನ’ ಎಂಬ ಪದವನ್ನು ಹಾಡಿದರು. ಗುರುಗಳು ಬಾಲಕನ ಹಾಡನ್ನು ಮೆಚ್ಚಿ ರಾಜಗುರು ಅವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಬಸವರಾಜ ರಾಜಗುರು ಅವರು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಬಸವರಾಜ ರಾಜಗುರು ಅವರು ತಮ್ಮ ಲೇಖನ ‘ಸ್ಮೃತಿ ಸಂಪುಟದಲ್ಲಿ’ ಈ ಘಟನೆಯು ಅವರು ಜೀವನದ ಅತ್ಯಂತ ಮಹತ್ವದ ಗಳಿಗೆಯಾಗಿತ್ತು ಎನ್ನುತ್ತಾರೆ. ಅವರು ಅದೆಲ್ಲ ಅವರ ಪೂರ್ವಜನ್ಮದ ಪುಣ್ಯದ ಫಲವೆಂದು ಭಾವಿಸುತ್ತಾರೆ. ಅವರು ತಾವು ಮುಂದೆ ಪಡೆದ ಭಾಗ್ಯಕ್ಕೆಲ್ಲ ಪಂಚಾಕ್ಷರಿ ಗವಾಯಿಗಳೇ ಕಾರಣ ಎನ್ನುತ್ತಾರೆ. ಈ ಘಟನೆ ನಡೆದದ್ದು ೧೯೩೦ ಜೂನ್‌ತಿಂಗಳಿನಲ್ಲಿ.

ಶ್ರೀ ಪಂಚಾಕ್ಷರಿ ಗವಾಯಿಗಳವರು ಸಂಚಾರಿ ಪಾಠಶಾಲೆಯನ್ನು ಹೊಂದಿದ್ದರು. ಅವರು ಸುಮಾರು ಅರವತ್ತು ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ಅವರಿಗೆ ಶಿಕ್ಷಣವನ್ನು ನೀಡುತ್ತಿದ್ದರು . ಯಾರಿಗೂ ಪ್ರಸಾದದ ಭಾರವಾಗಬಾರದೆಂದು ಗುರುಗಳು ಈ ವಿದ್ಯಾರ್ಥಿಗಳೊಂದಿಗೆ ಊರಿಂದ ಊರಿಗೆ ಸಂಚರಿಸುತ್ತಿದ್ದರು. ರಾಜಗುರು ಅವರು ಅವರ ಗುರುಗಳ ವ್ಯಕ್ತಿತ್ವದ ಪ್ರಭಾವ ದೊಡ್ಡದಾಗಿತ್ತು ಎನ್ನುತ್ತಾರೆ. ಅವರಿಗೆ ಅಸಂಖ್ಯಾತ ಜನ ಶ್ರೀಮಂತರು ಧಾರಾಳವಾಗಿ ಸಹಾಯ ಸಲ್ಲಿಸುತ್ತಿದ್ದರು. ಪ್ರತಿದಿನ ಬೆಳಿಗ್ಗೆ ನಾಲ್ಕರಿಂದ ಎಂಟರವರೆಗೆ ಹಾಗೂ ಮಧ್ಯಾಹ್ನ ನಾಲ್ಕರಿಂದ ಸಂಜೆ ಏಳವರೆಗೆ ಸತತವಾದ ಸಂಗೀತಾಭ್ಯಾಸ ನಡೆಯುತ್ತಿತ್ತು. ಮಧ್ಯಾಹ್ನ ಸ್ನಾನ, ಪೂಜೆ, ಊಟ ಹಾಗೂ ವಿಶ್ರಾಂತಿಗಾಗಿ ಅವಕಾಶವಿರುತ್ತಿತ್ತು. ಉಳಿದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ, ಸಂಸ್ಕೃತಗಳ ಅಭ್ಯಾಸವಿರುತ್ತಿತ್ತು.

೧೯೩೦ರಲ್ಲಿ ರಾಜಗುರು ಅವರ ಕ್ಯಾಂಪು ಕೊಪ್ಪಳದಲ್ಲಿ ವಾಸ್ತವ್ಯ ಹೂಡಿತ್ತು. ಆಗ ಕೊಪ್ಪಳವು ಹೈದ್ರಾಬಾದದ ನಿಜಾಮರಿಗೆ ಸೇರಿತ್ತು. ಆಕಸ್ಮಾತಾಗಿ ಹೈದ್ರಾಬಾದದ ನಿಜಾಮರಾದ ಸಾಲಾರಜಂಗರು ಆಗ ಕೊಪ್ಪಳಕ್ಕೆ ಭೇಟಿ ನೀಡಿದ್ದರು. ಅವರು ಸಂಗೀತ ಪ್ರಿಯರಾಗಿದ್ದರು. ಆಗ ಅವರು ಮುದಗಲ್‌ಸಂಗಪ್ಪನವರ ಬಂಗಲೆಯಲ್ಲಿ ಕ್ಯಾಂಪ್‌ಹಾಕಿದ್ದರು. ನಿಜಾಮರು ಗದುಗಿನ ಜೀವೊಸಾನಿ ಮತ್ತು ಆದವಾನಿ ಲಕ್ಷ್ಮೀದೇವಿ ಮುಂತಾದ ಪಾತ್ರದವರನ್ನು ಹಾಡಲು ಕರೆಸಿದ್ದರು. ಆಗ ಪಂಚಾಕ್ಷರಿ ಗವಾಯಿಗಳವರ ಕ್ಯಾಂಪ್‌ಕೊಪ್ಪಳದಲ್ಲಿದ್ದರಿಂದ ಅವರಿಗೂ ಆಮಂತ್ರಣ ಬಂದಿತ್ತು. ಆ ಪಾತ್ರದ ಹೆಂಗಸರು ಹಾಡಿದ ಮೇಲೆ ಇವರ ಸರತಿ ಬಂತಂತೆ. ಆಗ ರಾಜಗುರು ಅವರು ‘ಸಖಿ ಮುಖ ಚಂದ್ರಯೆಂಬ’ ಖಂಬಾವತಿರಾಗದ ಚೀಜನ್ನು ಮತ್ತು ಒಂದು ಗಜಲ್‌ನ್ನು ಹಾಡಿದರು. ನಿಜಾಮರು ರಾಜಗುರು ಅವರ ಹಾಡನ್ನು ಮೆಚ್ಚಿ ಅವರಿಗೆ ಒಂದು ಚಿನ್ನದ ವರಹವನ್ನು ನೀಡಿದರು.

೧೯೩೩ರಲ್ಲಿ ಶ್ರೀ ಪಂಚಾಕ್ಷರಿ ಗವಾಯಿಗಳ ವಿದ್ಯಾರ್ಥಿಗಳ ಕ್ಯಾಂಪು ಹೊಸಪೇಟೆ ತಾಲೂಕಿನ ರಾಮಸಾಗರದಲ್ಲಿತ್ತು. ಆಗ ಮುಂಬಯಿಯ ಎಚ್‌.ಎಮ್‌.ವಿ. ಕಂಪನಿಯವರಿಂದ ರಾಜಗುರು ಅವರಿಗೆ ಧ್ವನಿ ಮುದ್ರಣಕ್ಕಾಗಿ ಆಮಂತ್ರಣ ಬಂದಿತು. ಆಗ ಗವಾಯಿಗಳವರು, ಪುಟ್ಟಯ್ಯನವರು ಹಾಗೂ ಇನ್ನಿಬ್ಬರೊಂದಿಗೆ ರಾಜಗುರು ಅವರು ಮುಂಬಯಿಗೆ ಹೋದರು. ಅಂದು ಧ್ವನಿ ಮುದ್ರಣದ ಪದ್ಧತಿ ಬಹು ಕಷ್ಟಕರವಾಗಿದ್ದಿತ್ತು ಅಂದರೆ ಅವರು ಒಂದು ತಿಂಗಳವರೆಗೆ ಪ್ರತಿದಿನ ಸಾಯಂಕಾಲ ಕಂಪನಿಗೆ ಹೋಗಿ ಪ್ರಾಕ್ಟೀಸ್‌ಕೊಡಬೇಕಾಗಿತ್ತು. ಆ ಅವಧಿಯ ಖರ್ಚು-ವೆಚ್ಚವನ್ನೆಲ್ಲ ಕಂಪನಿಯವರೇ ಕೊಡುತ್ತಿದ್ದರು. ರಾಜಗುರು ಅವರಿಗೆ ಬೇಕಾಗಿದ್ದ ಹತ್ತರಕಿ ನಂದೆಪ್ಪ, ಗೂಗವಾಡ ಚಿನ್ನಪ್ಪ, ತಿಪಶೆಟ್ಟಿ ಮಹಾಂತಪ್ಪ ಮುಂತಾದ ಕನ್ನಡಿಗರ ಪರಿಚಯವಾಯಿತು. ಈ ಮಹನೀಯರೆಲ್ಲ ಶ್ರೀ ಪಂಚಾಕ್ಷರಿ ಗವಾಯಿಗಳನ್ನು ತುಂಬಾ ಅಭಿಮಾನದಿಂದ ಕಾಣುತ್ತಿದ್ದರು. ರಾಜಗುರು ಅವರು ಮುಂಬಯಿ ಬೃಹ್ನನ್‌ಗರಿಯಲ್ಲಿ ಕನ್ನಡಿಗರ ಪರಿಚಯ ಮಾಡಿಕೊಂಡು ಸುಖವಾಗಿದ್ದರು.

ರಾಜಗುರು ಅವರು ಪುಟ್ಟಯ್ಯ ಹಾಗೂ ಪಂಚಾಕ್ಷರಿ ಗವಾಯಿಗಳೊಂದಿಗೆ ಒಂದು ದಿನ ಧ್ವನಿ ಮುದ್ರಣಕ್ಕಾಗಿ ಹಾಡಿದರು. ರಾಜಗುರು ಅವರು ಹಾನಗಲ್ಲ ಕುಮಾರಸ್ವಾಮಿಗಳ ಮೇಲೆ ಎರಡು ಭಕ್ತಿಗೀತೆಗಳನ್ನು ಹಾಡಿದ್ದು ತಿಳಿದುಬರುತ್ತದೆ. ಆಗ ಮುಂಬಯಿಯಲ್ಲಿ ಗಣೇಶ ಚತುರ್ಥಿ ಇರಲು ರಾಜಗುರು ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿದರು. ಮುಂದೆ ಅವರು ಪುಣೆ, ಕೊಲ್ಲಾಪೂರ, ಮಿರಜ್‌, ಬೆಳಗಾಂವಗಳಲ್ಲಿ ಟಿಕೇಟು ಇಟ್ಟು ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತ, ಹಣವನ್ನು ಗಳಿಸುತ್ತ ರಾಮಸಾಗರಕ್ಕೆ ವಾಪಸ್ಸು ಬಂದರು.

ಶ್ರೀ ಪಂಚಾಕ್ಷರಿ ಗವಾಯಿಗಳವರು ೧೯೩೬ ರಲ್ಲಿ ಗಜೇಂದ್ರಗಡದಲ್ಲಿ ಕ್ಯಾಂಪ್‌ಹಾಕಿದ್ದು ತಿಳಿದು ಬರುತ್ತದೆ. ಆಗ ಅಲ್ಲಿಯ ಸಂಸ್ಥಾನಿಕರಾದ ಘೋರ್ಪಡೆಯವರ ಮಗನ ಲಗ್ನ ವೈಭವದಿಂದ ನಡೆಯಿತು. ಆ ಮದುವೆಗಾಗಿ ಕೊಲ್ಲಾಪೂರದ ಕನ್ಯಾ ಪಕ್ಷದವರು ತಮ್ಮೊಂದಿಗೆ ಅಬ್ದುಲ್‌ಕರೀಮಖಾನ್‌ಸಾಹೇಬರನ್ನು ಕರೆದುಕೊಂಡು ಬಂದಿದ್ದರು. ಅವರ ಸಂಗೀತ ಕಾರ್ಯಕ್ರಮವಾದ ಮರುದಿನವೇ ರಾಜಗುರು ಸಂಗಡಿಗರಿಂದ ಸಂಗೀತ ಕಛೇರಿ ಆರಂಭವಾಯಿತು. ಎಂದಿನಂತೆ ಪಂಚಾಕ್ಷರಿ ಗವಾಯಿಗಳವರು ರಾಜಗುರು ಅವರನ್ನು ಮೊದಲು ಹಾಡಿಸಿದರು. ಅಬ್ದುಲ್‌ಕರೀಮಖಾನ್‌ಸಾಹೇಬರು ರಾಜಗುರು ಅವರ ಸಂಗೀತವನ್ನು ಮೆಚ್ಚಿಕೊಂಡರು.

ಪಂ.ಬಸವರಾಜ ರಾಜಗುರು ಹೇಳುವಂತೆ ಶ್ರೀ ಪಂಚಾಕ್ಷರಿ ಗವಾಯಿಗಳವರ ಮಹಿಮೆ ಅಗಾಧವಾಗಿತ್ತು. ಒಮ್ಮೆ ಗುರುಗಳು ಮಾರನಬಸರಿ ಎಂಬ ಊರಲ್ಲಿ ಕ್ಯಾಂಪ್‌ಹಾಕಿದ್ದರು. ಊರ ಹೊರಗಿನ ದೇವಾಲಯದಲ್ಲಿ ಅವರ ಕೀರ್ತನೆ ನಡೆದಿತ್ತು. ಅವರ ಕೀರ್ತನೆಯೆಂದರೆ ಅದರಲ್ಲಿ ಅರ್ಧ ಶಾಸ್ತ್ರೀಯ ಸಂಗೀತವಿರುತ್ತಿತ್ತು. ಆಗ ಪಂ. ರಾಜಗುರು ಅವರೊಂದಿಗೆ ತಂಬೂರಿ ಹಿಡಿದು ಸಾಥಿಗಾಗಿ ಕುಳಿತ್ತಿದ್ದರು. ತಂಬೂರಿ ನುಡಿಸುತ್ತ ರಾಜಗುರು ಮೇಲೆ ನೋಡಿದರಂತೆ. ಮೇಲೆ ಬಿದರಿನ ಛಾವಣಿ ಇತ್ತು. ಆ ಮೇಲ್ಚಾವಣಿಯಲ್ಲಿ ಅವರಿಗೆ ಏನೋ ಕಂಡಂತಾಯಿತು. ಅದನ್ನು ತಕ್ಷಣ ನೋಡಲಾಗಿ ಅದೊಂದು ನಾಗರಹಾವು ಇತ್ತು. ಅದನ್ನು ಕಂಡ ರಾಜಗುರು ನಡುಗ ತೊಡಗಿದರಂತೆ. ಒಂದರ್ಧಗಳಿಗೆಯಲ್ಲಿ ಆ ಹಾವು ದೊಪ್ಪನೆ ಗುರುಗಳ ಮುಂದೆ ಬಿದ್ದಿತಂತೆ. ಆಗ ಜನರೆಲ್ಲರೂ ಗಾಬರಿಯಾಗಿ ಎದ್ದು ನಿಂತರು. ರಾಜಗುರು ಅವರು ತಂಬೂರಿಯೊಂದಿಗೆ ಒಂದು ಮೂಲೆಯನ್ನು ಸೇರಿದರು. ಗುರುಗಳು ಇದೇನು? ಹೀಗೇಕೆ? ಎಂದು ವಿಚಾರಿಸಿದರು. ಅವರ ಮುಂದೆಯೇ ಹಾವು ಇರುವುದನ್ನು ತಿಳಿಸಲಾಯಿತು. ಆಗ ಗವಾಯಿಗಳು ಶಾಂತ ಸ್ವರದಲ್ಲಿ ‘ಅದೇನೂ ಮಾಡುವುದಿಲ್ಲ. ಅದಕ್ಕೇನೂ ಮಾಡಬೇಡ್ರಿ, ನಾವೀಗ ಶಿವನ ಸಂಕೀರ್ತನೆ ನಡೆಸುತ್ತಿದ್ದೇವೆ. ಇಂಥಾಹೊತ್ತಿನ್ಯಾಗ ಎಲ್ಲಾದರೂ ತೊಂದ್ರೆಯಾದಿತು,’ ಎಂದು ಹೇಳಿ ಕೈ ಮುಗಿದುಕೊಂಡು ಕುಳಿತಿರಲು ಆ ಹಾವು ಅವರ ತೊಡೆಗೆ ಹತ್ತಿಕೊಂಡು ಸರಿಯುತ್ತ ಗರ್ಭಗುಡಿ ಸೇರಿ ಮಾಯವಾಯಿತು. ಅವರ ಕೀರ್ತನೆ ಮುಂದುವರೆಯಿತು.

ರಾಜಗುರು ಮತ್ತು ಗುರುಗಳ ಕ್ಯಾಂಪ್‌ಒಮ್ಮೆ ಅಕ್ಕಿ ಆಲೂರಿನಲ್ಲಿತ್ತು. ಆಗ ಮಿರಜುದ ಶ್ರೀ ನಿಲಕಂಠ ಬುವಾ ಅವರು ಬಂದು ಗವಾಯಿಗಳೊಂದಿಗೆ ಸುಮಾರು ತಿಂಗಳುಗಳ ಕಾಲ ಅಲ್ಲಿ ನೆಲೆನಿಂತರು. ಶ್ರೀ ನೀಲಕಂಠ ಬುವಾ ಶ್ರೀ ಪಂಚಾಕ್ಷರಿ ಗವಾಯಿಗಳವರ ಗುರುಗಳಾಗಿದ್ದರೆಂದು ತಿಳಿದು ಬರುತ್ತದೆ. ಅವರಿಂದ ಹಿಂದೂಸ್ತಾನೀ ಸಂಗೀತವನ್ನು ಕಲಿತು ಪ್ರೌಢವ್ಯವಸ್ಥೆಗೆ ಬಂದಿದ್ದರೂ ಪಂಚಾಕ್ಷರಿ ಗವಾಯಿಗಳಿಗೆ ಇನ್ನೂ ಕಲಿಯಬೇಕೆಂದು ಹಂಬಲವಿತ್ತು. ಗುರುಗಳು ವಿದ್ಯಾರ್ಥಿಗಳಂತೆ ಚೀಜ ಹೇಳಿಸಿಕೊಳ್ಳುತ್ತಿದ್ದರು. ರಾಜಗುರು ಅದನ್ನು ಕೇಳಲಿದರು. ಕೆಲವು ಸಲ ನೀಲಕಂಠ ಬುವಾ ಅವರು ರಾಜಗುರು ಅವರಿಗೂ ಪಾಠ ಹೇಳುತ್ತಿದ್ದರು. ನೀಲಕಂಠ ಬುವಾ ಅವರದು ಗಂಭೀರವಾದ ವ್ಯಕ್ತಿತ್ವವಾದ್ದರಿಂದ ರಾಜಗುರು ಅವರ ಸೇವೆಯನ್ನು ಭಯ-ಭಕ್ತಿಯಿಂದ ಮಾಡುತ್ತಿದ್ದರಂತೆ.

೧೯೩೬ರಲ್ಲಿ ಹಂಪಿಯಲ್ಲಿ ನಡೆದ ವಿಜಯನಗರ ಮಹೋತ್ಸವು ಪಂ. ರಾಜಗುರು ಅವರ ಬದುಕಿನಲ್ಲಿ ಮರೆಯಲಾಗದ ಅನುಭವವನ್ನು ಉಂಟು ಮಾಡಿತೆಂದು ಹೇಳಬಹುದು. ಇಲ್ಲಿಯವರೆಗೆ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ ಅವರೀಗ ಬಹುದೊಡ್ಡ ಕಾರ್ಯಕ್ರಮದಲ್ಲಿ ಸಂಗೀತ ಕಛೇರಿ ನೀಡುವ ಸುಯೋಗ ಪಡೆದಿದ್ದರು. ಅಲ್ಲಿ ಸುಮಾರು ಹದಿನೈದು ಸಾವಿರ ಜನರು ಸೇರಿದ್ದರು. ಅಂಥ ಜನಸಾಗರದ ಮುಂದೆ ಸಂಗೀತ ಕಛೇರಿ ನೀಡುವ ಅವರ ಅವಕಾಶಕ್ಕೆ ಗುರುಗಳು ಕಾರಣವಾಗಿದ್ದರು. ಅವರೇ ರಾಜಗುರುಗಳಿಗೆ ತಬಲಾಸಾಥಿ ನೀಡಿದರು. ಎಡಗಡೆ ಪುಟ್ಟಯ್ಯನವರ ಹಾರ್ಮೋನಿಯಂ ಸಾಥಿ ಇತ್ತು. ಗುರುಗಳ ಪಕ್ಕದಲ್ಲಿರುವಾಗ ಇನ್ನೇತರ ಭಯ? ಪಂ. ರಾಜಗುರು ಅವರು ನಿರರ್ಗಳವಾಗಿ ಭಾಗೇಶ್ರೀ ಹಾಡಿದರು. ನಂತರ ಅವರು ನಿಜಗುಣ ಶಿವಯೋಗಿಗಳ ‘ನೋಡಲಾಗದೆ’ ಎಂಬ ಪದವನ್ನು ಹಾಡಿದರು. ಶ್ರೋತೃಗಳು ರಾಜಗುರು ಸಂಗೀತವನ್ನು ಬಹಳಷ್ಟು ಮೆಚ್ಚಿಕೊಂಡರು. ಮೈಸೂರ ಆಸ್ಥಾನದ ಸಂಗೀತ ವಿದ್ವಾನ್‌ಚಿಕ್ಕರಾಮರಾಯ ಎಂಬುವರು ಎದ್ದು ವೇದಿಕೆಗೆ ಬಂದು ಅವರ ಬೆನ್ನು ಚಪ್ಪರಿಸಿ ಅವರ ಗುರುಗಳಿಗೆ ‘ನೀವು ಒಳ್ಳೆಯ ಶಿಷ್ಯರನ್ನು ಸಂಪಾದಿಸಿದ್ದೀರಿ’ ಎಂದರು. ಹಂಪಿ ಸಂಗೀತ ಉತ್ಸವ ಸಮಿತಿಯವರು ರಾಜಗುರು ಅವರಿಗೆ ಚಿನ್ನದ ಪದಕದೊಂದಿಗೆ ಐವತ್ತು ರೂಪಾಯಿಯ ಕಾಣಿಕೆಯನ್ನು ನೀಡಿ ಗೌರವಿಸಿದರು. ರಾಜಗುರು ಅವರಿಗೆ ಈ ಕಛೇರಿ ತಂದ ಸಂತೋಷ ಅಷ್ಟಿಷ್ಟಲ್ಲ.

ರಾಜಗುರು ಅವರ ಸ್ವತಂತ್ರಗಾಯನದ ಪ್ರಥಮ ರೇಡಿಯೋ ಕಾರ್ಯಕ್ರಮವು ೧೯೩೮ ರಲ್ಲಿ ಮುಂಬಯಿಯಿಂದ ಪ್ರಸಾರವಾಯಿತು. ಅವರೊಬ್ಬರೆ ಮುಂಬಯಿಗೆ ಹೋಗಿ ಈ ಕಾರ್ಯಕ್ರಮವನ್ನು ನೀಡಿದ್ದರು. ಇದರಿಂದಾಗಿ ಅವರ ಹೆಸರು ಬಹಳಷ್ಟು ಪ್ರಸಿದ್ಧವಾಯಿತು.

೧೯೪೦ರ ವರ್ಷ. ಆ ವರ್ಷದಲ್ಲಿ ರಾಜಗುರು ಅವರು ಬೆಂಗಳೂರಿನಲ್ಲಿ ಎಂಟು ತಿಂಗಳುಗಳ ಕಾಲ ಕ್ಯಾಂಪ್‌ಹಾಕಿದ್ದರು. ಆ ವರ್ಷ ಸಂಗೀತ ಕಛೇರಿಗಳಿಂದ ಬಂದ ಆದಾಯ ಖರ್ಚಿಗೆ ಸಾಲದೇ ಪಂಚಾಕ್ಷರಿ ಗವಾಯಿಗಳು ಹದಿನೈದು ಸಾವಿರ ರೂಪಾಯಿಯ ಸಾಲವನ್ನು ಮಾಡಿದರು. ಅವರು ಈ ಸಾಲವನ್ನು ತೀರಿಸಲು ಒಂದು ನಾಟಕ ಕಂಪನಿಯನ್ನು ಕಟ್ಟಿದರು. ಅದರ ಹೆಸರು ಸಿದ್ದರಾಮೇಶ್ವರ ನಾಟಕ ಕಂಪನಿಯೆಂದು. ರಾಜಗುರು ಅವರು ಅಲ್ಲಿ ಹಿರಿಯ ಸಿದ್ಧರಾಮೇಶ್ವರನ ಪಾತ್ರ ವಹಿಸುತ್ತಿದ್ದರು. ಅವರು ಇತರ ನಾಟಕಗಳಾದ ರಾಜಶೇಖರ ವಿಳಾಸದಲ್ಲಿ ಶಿವಾಚಾರ್ಯರಾಗಿ, ಸತಿ ಸುಕನ್ಯಾದಲ್ಲಿ ಬೃಹಸ್ಪತಿಯಾಗಿ ಹಾಗೂ ಹೇಮರೆಡ್ಡಿ ಮಲ್ಲಮ್ಮನಲ್ಲಿ ಮಲ್ಲಿಕಾರ್ಜುನನ ಪಾತ್ರವನ್ನು ವಹಿಸುತ್ತಿದ್ದರು. ಈ ನಾಟಕ ಹವ್ಯಾಸದಿಂದಾಗಿ ಅವರ ಆರೋಗ್ಯದ ಮೇಲೆ ಪರಿಣಾಮವಾಯಿತು. ಆಗ ಕೆಲವು ಹಿರಿಯ ಹಿತೈಷಿಗಳು ಶ್ರೀ ಪಂಚಾಕ್ಷರಿ ಗವಾಯಿಗಳಿಗೆ ರಾಜಗುರು ಅವರಿಗೆ ಒಳ್ಳೆಯ ಭವಿಷ್ಯವಿದೆಯೆಂದು, ಅವರು ನಾಟಕಗಳಲ್ಲಿ ಭಾಗವಹಿಸುವುದು ಬೇಡವೆಂದು ಸಲಹೆ ನೀಡಿದರು. ರಾಜಗುರು ಅವರ ಕಂಪನಿ ೧೯೪೧ ರಲ್ಲಿ ಕೂಡಲಸಂಗಮದಲ್ಲಿ ಕ್ಯಾಂಪ್‌ಹಾಕಿತು.  ಬಸವ ಜಯಂತಿಯ ದಿನ ಗುರುಗಳು ರಾಜಗುರು ಅವರನ್ನು ತಮ್ಮ ಹತ್ತಿರ ಕರೆದು ‘ನಾನು ಕಲಿಸಿದ ವಿದ್ಯೆಯನ್ನು ಕಾಪಾಡಿಕೊ. ದುಶ್ಚಟಗಳಿಗೆ ಬಲಿಯಾಗಬೇಡ. ನಿನಗೆ ಒಳ್ಳೆಯ ಭವಿಷ್ಯವಿದೆ’ ಎಂದರು. ಈಗ ಬಸವರಾಜರಿಗೆ ಧರ್ಮ ಸಂಕಟವಾಯಿತು. ಈಗ ಅವರಿಗೆ ಪ್ರೀತಿಯ ಗುರುಗಳನ್ನು ಅಗಲುವ ನೋವು ಒಂದೆಡೆ ಇದ್ದರೆ ಸಂಗೀತಗಾರನಾಗಿ ಭಾರತವನ್ನು ಸುತ್ತಾಡಿ ಹೆಸರನ್ನು ಪಡೆಯುವ ಉತ್ಸಾಹ ಇನ್ನೊಂದೆಡೆ.

ಆಗಲೇ ಬಸವರಾಜ ಅವರಿಗೆ ಮುಂಬೈ-ಪುಣೆ ನಗರಗಳು ಚಿರಪರಿಚಿತವಾಗಿದ್ದವು . ಅವರು ಆಗಾಗ ಆ ನಗರಗಳಿಗೆ ಹೋಗಿ ಸಂಗೀತ ಕಛೇರಿಗಳನ್ನು ನೀಡಿ ಅಲ್ಲೆಲ್ಲ ಅಭಿಮಾನಿಗಳ ಬಳಗಗಳನ್ನು ಸ್ಥಾಪಿಸಿಕೊಂಡಿದ್ದರು. ಹೀಗಾಗಿ ಗುರುಗಳಿಂದ ಬಿಡುಗಡೆ ಹೊಂದಿದ ರಾಜಗುರು ಅವರು ಮುಂಬೈಗೆ ಹೋದರು.

ಪಂ. ರಾಜಗುರು ಅವರು ಮುಂಬೈಯಲ್ಲಿ ಸುಮಾರು ಎರಡು ವರ್ಷಗಳ ಕಾಲ ನೆಲಸಿದರು. ಅಲ್ಲಿ ಅವರು ಸಂಗೀತ ಕಛೇರಿಯನ್ನು ನೀಡುತ್ತ, ಹೆಚ್ಚಿನ ಸಂಗೀತವನ್ನು ಕಲಿಯುತ್ತ ಕಾಲ ಕಳೆದರು. ಈಗ ಅವರೊಂದಿಗೆ ಒಂದೆಡೆ ವಾಸವಾಗಿದ್ದವರಲ್ಲಿ ಕುಂದಗೋಳದ ಸವಾಯಿ ಗಂಧರ್ವರು ಒಬ್ಬರು. ಪಂ. ರಾಜಗುರು ಅವರು ಕಿರಾಣಾ ಘರಾಣೆಯ ಹೆಸರಾಂತ ಗಾಯಕರಾದ ಶ್ರೀ ಅಬ್ದುಲ್‌ಕರೀಮಖಾನ ಸಾಹೇಬರ ಪುತ್ರ ಶ್ರೀ ಸುರೇಶಬಾಬು ಮಾನೆ ಮತ್ತು ಜೈಪುರ ಘರಾಣೆಯ ಶ್ರೀ ದಿನಕರ ಪಾಠಕ ಅವರಿಂದ ಹೊಸ ಅಂಶವನ್ನು ಕಲಿತುಕೊಂಡರು. ಪಂ. ರಾಜಗುರು ಅವರು ಆಗಾಗ ಪುಣೆಗೆ ಹೋಗುತ್ತಿದ್ದರು. ಅಲ್ಲಿ ಅವರಿಗೆ ಅನೇಕ ಜನ ಒಳ್ಳೆಯ ಶಿಷ್ಯರು ದೊರೆತರು. ಅವರಲ್ಲಿ ಸುಪ್ರಸಿದ್ಧ ಗಾಯಕಿ ಶ್ರೀಮತಿ ಮಾಣಿಕ ವರ್ಮಾ ಒಬ್ಬರಾಗಿದ್ದರು. ಪಂ. ರಾಜಗುರು ಅವರು ೧೯೪೩ ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಭಾಗವಹಿಸಿ ಅಲ್ಲಿ ಅಸಂಖ್ಯಾತ ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾದರು.

ಪಂ. ರಾಜಗುರು ಅವರು ಆಶಾವಾದಿಗಳು. ಅವರು ಕಷ್ಟ ಸಹಿಷ್ಣುಗಳು ಆಗಿದ್ದರು. ನಿಂತಲ್ಲಿ ನಿಲ್ಲದೆ ನಾಡು ದೇವನ್ನೆಲ್ಲ ಸಂಚರಿಸಿ ಹೆಸರು ಗಳಿಸಬೇಕೆಂಬುದು ಅವರ ಧ್ಯೇಯವಾಗಿತ್ತು. ಅಂತೆಯೇ ಅವರು ೧೯೪೩ ರಿಂದ ೧೯೪೭ ರವರೆಗೆ ಪಾಕಿಸ್ತಾನದಲ್ಲಿದ್ದರು. ಅವರು ಅಲ್ಲಿಯ ಪ್ರಮುಖ ಪಟ್ಟಣಗಳಲ್ಲಿ ಸಂಗೀತ ಕಛೇರಿಗಳನ್ನು ನೀಡಿ ಜನಪ್ರಿಯತೆಯನ್ನು ಗಳಿಸಿದರು. ಅವರು ಕರಾಚಿಯಲ್ಲಿಯ ಲತೀಫಖಾನ ಸಾಹೇಬರ ಹತ್ತಿರ ಆರು ತಿಂಗಳುಗಳ ಕಾಲ ಸಂಗೀತ ಅಭ್ಯಾಸ ಮಾಡಿದರು. ಒಂದು ಸಲ ೧೯೪೪ ರಲ್ಲಿ ಅಲ್ಲಿಯ ಶಿಕಾರಪುರದಲ್ಲಿ ಒಂದು ದೊಡ್ಡ ಸಂಗೀತ ಸಮ್ಮೇಳನ ನಡೆಯಿತು. ಅದಕ್ಕೆ ಅಲ್ಲಿಯ ಜನ ‘ಹೋಳಿ ಹಂಡಾ’ ಎಂದು ಕರೆಯುತ್ತಾರೆ. ಒಮ್ಮೆ ಅಲ್ಲಿ ಹಿಂದೂ-ಮುಸ್ಲೀಂ ಭೇಧ-ಭಾವ ತಲೆ ಎತ್ತಿತ್ತು. ಮುಸ್ಲಿಮರು ಹಿಂದೂ ಜನರನ್ನು, ಹಿಂದೂ ಗಾಯಕರನ್ನು ತಿರಸ್ಕಾರದಿಂದ ನೋಡುತ್ತಿದ್ದರು. ಹೀಗಾಗಿ ಆ ಸಂಗೀತ ಸಮ್ಮೇಳನದಲ್ಲಿ ಛೋಟೆ ಗುಲಾಮ ಎಂಬ ಮುಸ್ಲಿಂ ಗಾಯಕರು ತೋಡಿ ರಾಗ ಹಾಡಿ ಭಾರಿ ಪ್ರಭಾವ ಬೀರಿದರು. ಅವರ ನಂತರ ಹಾಡಲು ಯಾರು ಮುಂದೆ ಬರದಾದರು. ಅವರ ಜೊತೆಗಿದ್ದ ಶ್ರೀ ನಿವೃತ್ತಿ ಬುವಾ ಸರನಾಯಕ, ವಿನಾಯಕರಾವ್‌ಪಟವರ್ಧನ, ಕಸ್ತೂರಿಲಾಲ ಮುಂತಾದವರು ರಾಜಗುರು ಅವರಿಗೆ ನೀವೆ ಹಾಡಬೇಕು ಎಂದು ಒತ್ತಾಯಿಸಿ ಹುರುಪು ಕೊಟ್ಟು ವೇದಿಕೆ ಹತ್ತಿಸಿದರು. ಪಂ. ರಾಜಗುರು ಅವರು ತಂಬೂರಿಯೊಂದಿಗೆ ಸ್ವರ ಹಚ್ಚಿದ ಕೂಡಲೇ ಅದ್ಭುತ ಕರತಾಡನವಾಯಿತು. ಈಗ ಅವರು ಮೈಮರೆತು ಜೀವನಪುರಿ ರಾಗವನ್ನು ಹಾಡಿದರು. ಏನು ಪ್ರೇಕ್ಷಕರ ಸಂತೋಷಕ್ಕೆ ಮಿತಿಯೇ ಇಲ್ಲ! ಆಗ ಅಲ್ಲಿಯ ಕಾರ್ಯಕರ್ತ ಪರಮಾನಂದ ಎಂಬುವರು ‘ನೀವು ಹಿಂದೂ ಗಾಯಕರ ಮಾನ ಉಳಿಸಿದಿರೆಂದು’ ರಾಜಗುರು ಅವರನ್ನು ಎತ್ತಿಕೊಂಡು ಕುಣಿದಾಡಿದರು.

ಶಿಕಾರಪುರದಲ್ಲಿ ಜಾನಕಿರಾಮ ಕ್ಷತ್ರಿಯೆಂಬ ಆಗರ್ಭ ಶ್ರೀಮಂತರ ಪರಿಚಯ ಪಂ. ರಾಜಗುರು ಅವರಿಗೆ ಆಗಿತ್ತು. ರಾಜಗುರು ಅವರ ಸಂಗೀತವು ಕ್ಷತ್ರಿಯವರನ್ನು ಮೋಡಿ ಮಾಡಿತ್ತು. ಆದ್ದರಿಂದ ಕ್ಷತ್ರಿಯವರು ರಾಜಗುರು ಅವರಿಗೆ ಸಕಲ ಸೌಕರ್ಯ ಒದಗಿಸಿಕೊಟ್ಟು ತಮ್ಮಲ್ಲಿಯೇ ಇಟ್ಟುಕೊಂಡರು. ಅವರ ಮಗ ಸಾಧುನಿಗೆ ಸಂಗೀತ ಪಾಠ ಹೇಳುವುದೊಂದು ನೆಪವಾಗಿತ್ತಷ್ಟೆ. ಕ್ಷತ್ರಿಯವರು ರಾಜಗುರು ಅವರಿಗೆ ಐದು ಗುಂಟೆ ಜಾಗ ಕೊಡುವೆ ಎಂದು, ಅವರು ಅಲ್ಲಿಯೇ ವಾಸವಾಗಿರಬೇಕೆಂದು ಕೇಳಿದ್ದರು. ಆದರೆ ೧೯೪೬ ರಲ್ಲಿ ಸ್ವಾತಂತ್ಯ್ರ ಹೋರಾಟದ ಪ್ರಯುಕ್ತವಾಗಿ ನಡೆದ ಹಿಂದೂ-ಮುಸ್ಲಿಂ ಗಲಾಟೆಗಳು ಎಲ್ಲರನ್ನು ನಡುಗಿಸಿದವು. ಇದರಿಂದಾಗಿ ಜಾನಕಿರಾಮ ಕ್ಷತ್ರಿಯವರು ತಮ್ಮ ಆಸ್ತಿಯನ್ನೆಲ್ಲ ಅಲ್ಲಿಯೇ ಬಿಟ್ಟು ಭಾರತದ ಲಖನೌ ನಗರಕ್ಕೆ ಓಡಿ ಹೋದರು.  ಆಗ ಪಂ.ರಾಜಗುರು ಅವರು ಫ್ರಂಟಿಯರ್ ಮೇಲ ರೈಲ್ವೆಯನ್ನು ಹತ್ತಿ ಭಾರತಕ್ಕೆ ಬಂದರು.

ಪಂ. ರಾಜಗುರು ಅವರು ಸುರಕ್ಷಿತವಾಗಿ ಕರ್ನಾಟಕಕ್ಕೆ ಮರಳಿ ಬಂದ ಮೇಲೆ ಹುಬ್ಬಳ್ಳಿಯ ಮೋಹನ ಟಾಕೀಜಿನಲ್ಲಿ ಅವರ ಸಂಗೀತ ಕಛೇರಿ ನಡೆಯಿತು. ಅಲ್ಲಿ ಅವರ ಸಂಗೀತವನ್ನು ಮೆಚ್ಚಿದ ಕುಂದಗೋಳದ ನಾನಾಸಾಹೇಬ ದೇಸಾಯಿಯವರು ಪಂ. ರಾಜಗುರು ಅವರನ್ನು ತಮ್ಮೂರಿಗೆ ಕರೆದುಕೊಂಡು ಹೋದರು. ಅವರು ಪಂ. ರಾಜಗುರು ಅವರಿಂದ ಸಂಗೀತವನ್ನು ಹೇಳಿಸಿಕೊಂಡರು. ಈಗ ಪಂ.ರಾಜಗುರು ಅವರಿಗೆ ದೇಶದ ನಾನಾ ಭಾಗಗಳಿಂದ ಆಮಂತ್ರಣಗಳು ಬರತೊಡಗಿದವು. ೧೯೫೦ರಲ್ಲಿ ಧಾರವಾಡದಲ್ಲಿ ರೇಡಿಯೋ ಕೇಂದ್ರ ಪ್ರಾರಂಭವಾಯಿತು. ಪಂ. ರಾಜಗುರು ಅವರಿಗೆ ತಿಂಗಳಿಗೆ ಐದು ಕಾರ್ಯಕ್ರಮಗಳು ದೊರೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಅವರು ನಾನಾಸಾಹೇಬರ ಒಪ್ಪಿಗೆ ಪಡೆದು ಧಾರವಾಡದಲ್ಲಿ ನೆಲೆಯೂರಿದರು. ಅಂದಿನಿಂದ ಧಾರವಾಡವು ಅವರ ಸಂಗೀತ ಕಾರ್ಯ ಕ್ಷೇತ್ರವಾಯಿತು.

ಯುವಕ ಪಂ. ರಾಜಗುರು ಅವರು ವಯಸ್ಸಾದಂತೆ ಮದುವೆಯ ಹಂಬಲವನ್ನು ಬೆಳೆಸಿಕೊಂಡರು. ೧೯೫೨ರಲ್ಲಿ ಬಿಜಾಪುರ ಜಿಲ್ಲೆಯ ಬೋಳೆಗಾಂವದ ಬೋಳೆಗಾಂವಮಠ ಅವರ ಮಗಳು ಮಹಾದೇವಿಯೊಂದಿಗೆ ಅವರ ಲಗ್ನವಾಯಿತು. ಶ್ರೀಮತಿ ಮಹಾದೇವಿಯವರ ಪ್ರಕೃತಿ ಬಹಳ ಸೂಕ್ಷ್ಮವಾಗಿತ್ತು. ಅವರು ರಾಜಶೇಖರ, ಹೇಮಾ ಮತ್ತು ಸರ್ವಮಂಗಳಾ ಎಂಬ ಮೂವರು ಮಕ್ಕಳನ್ನು ನೀಡಿ ೧೯೬೨ ರಲ್ಲಿ ಸ್ವರ್ಗಸ್ಥರಾದರು. ನಂತರ ಅವರು ಮಹಾದೇವಿಯವರ ತಂಗಿ ಭಾರತಿಯನ್ನು ಅದೇ ವರ್ಷ ಮದುವೆಯಾದರು. ಶ್ರೀಮತಿ ಭಾರತಿದೇವಿಯಿಂದ ರಾಜಗುರು ಅವರಿಗೆ, ಶಿವಾನಂದ, ಜಯಾ ಹಾಗೂ ನಿಜಗುಣ ಎಂಬ ಮಕ್ಕಳಾಗಿವೆ.

ಪಂ.ರಾಜಗುರು ಅವರ ಸಂಗೀತ ವೃತ್ತಿ ಅವರ ಮದುವೆಯಿಂದಾಗಿ ತೊಂದರೆಗೊಳಗಾಗಲಿಲ್ಲ. ಅವರು ಎಂದಿನಂತೆ ಆಹ್ವಾನ ಬಂದಲ್ಲಿ ಸಂಗೀತ ಕಛೇರಿ ನೀಡುತ್ತಿದ್ದರು. ೧೯೫೫ ರಲ್ಲಿ ಮಹಾರಾಷ್ಟ್ರದ ನಾಂದೇಡದಲ್ಲಿ ಒಂದು ಸಂಗೀತ ಸಮ್ಮೇಳನ ನಡೆಯಿತು. ಆ ಕಾರ್ಯಕ್ರಮಕ್ಕೆ ಅಂದಿನ ಖ್ಯಾತ ಗಾಯಕ ಶ್ರೀ ಡಿ.ವಿ. ಪಲೂಸ್ಕರರು ಬಂದಿರಲಿಲ್ಲ. ಪಂ.ಪಲೂಸ್ಕರರ ಗೈರು ಹಾಜರಿಯಲ್ಲಿ ಪಂ. ರಾಜಗುರು ಅವರು ಹಾಡಬೇಕೆಂದು ವಿನಂತಿ ಬಂತು. ಆಗ ಪಂ. ರಾಜಗುರು ಅವರು ಉಲ್ಲಾಸದಿಂದ ಹಾಡಿದರು. ಅದನ್ನು ಕೇಳಿದ ಜನ ಹುಚ್ಚೆದ್ದು ಕುಣಿದಾಡಿದರು. ಆ ಸಭೆಯಲ್ಲಿ ಉಪಸ್ಥಿತರಿದ್ದ ಮಹಾರಾಷ್ಟ್ರದ ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಬಿ.ಎ. ಕೇರ್ಕರರು ವೇದಿಕೆಗೆ ಬಂದು ಭಾಷಣವನ್ನು ಮಾಡಿ ‘ರಾಜಗುರು ಅಂದರೆ ‘ಹುಕುಮಿ ಎಕ್ಕಾ’ ಇದ್ದಂತೆ. ಅವರಿಂದ ಯಾವಾಗ ಬೇಕಾದರೂ ಹಾಡಿಸಬಹುದು. ಹುಸಿ ಎಂಬುದೇ ಇಲ್ಲ. ಡಿ.ವಿ. ಪಲೂಸ್ಕರರು ಬರಲಾರದ ನಿರಾಶೆಯನ್ನು ರಾಜಗುರು ನಿವಾರಿಸಿದರು’ ಎಂದು ಪ್ರಶಂಸಿಸಿದರು. ಸಂಘಟಕರು ಮೊದಲು ರಾಜಗುರು ಅವರಿಗೆ ಐದು ನೂರು ರೂಪಾಯಿ ಕೊಡಲು ಒಪ್ಪಿದ್ದರು. ಅಂದಿನ ಅವರ ಯಶಸ್ವಿ ಸಂಗೀತ ಕಾರ್ಯಕ್ರಮದಿಂದ ಬಂದ ಏಳುಸಾವಿರ ರೂಪಾಯಿಯ ಪಾತ್ರೆಯನ್ನು ಅವರ ಮುಂದೆ ಹಿಡಿದು ‘ಪಂಡಿತಜೀ ನಿಮಗೆ ಎಷ್ಟು ಬೇಕೊ ಅಷ್ಟು ಹಣವನ್ನು ತೆಗೆದುಕೊಳ್ಳಿ ಎಂದರು. ಅದಕ್ಕೆ ಪಂ. ರಾಜಗುರು ಅವರು ‘ನೀವೇ ನಿಮಗೆ ತಿಳಿದಷ್ಟು ಕೊಡಿರಿ’ ಎಂದರು. ಆಗ ಆ ಸಮಿತಿಯವರು ಪ. ರಾಜಗುರು ಅವರಿಗೆ ಒಂದುವರೆ ಸಾವಿರ ರೂಪಾಯಿಯ ಗೌರವ ಧನವನ್ನು ನೀಡಿದರು.

ಕನ್ನಡ ನಾಡಿನಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದ ಪಂ. ರಾಜಗುರು ಅವರು ಈಗ ಉತ್ತರ ಭಾರತಕ್ಕೆ ನಡೆದರು. ಅವರ ಸಂಗೀತ ಕಾರ್ಯಕ್ರಮವು ೧೯೫೩ರ ಆಗಸ್ಟ್‌೧೫ ರಂದು ದೆಹಲಿಯ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಯಿತು. ಇದು ಅವರ ಮೊಟ್ಟ ಮೊದಲನೆಯ ರಾಷ್ಟ್ರೀಯ ಕಾರ್ಯಕ್ರಮವಾಗಿತ್ತು. ಅವರ ಸಂಗೀತ ಕಾರ್ಯಕ್ರಮದ ವಿಮರ್ಶೆಯು ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಸಾರವಾಗಿ ಅವರ ಕೀರ್ತಿಯನ್ನು ಹೆಚ್ಚಿಸಿತು.

ಭಾರತದಲ್ಲಿ ಸಂಗೀತದ ದೊಡ್ಡ ಪರಂಪರೆಯೇ ಇದೆ. ಸ್ವಾತಂತ್ಯ್ರಾ ನಂತರದ ಕಾಲದಲ್ಲಿ ಈ ಪರಂಪರೆ ಪಾಕಿಸ್ತಾನದಲ್ಲೂ ಮುಂದುವರೆಯಿತು. ಲಾಹೋರಿನ ಖಲಿಫಾ ಎಂಬುವರು ಒಂದು ವಿಶಿಷ್ಟ ರೀತಿಯ ಸಂಗೀತ ಸಮ್ಮೇಳನವನ್ನು ನಡೆಸುತ್ತಿದ್ದರು. ಅಲ್ಲಿ ಏಳು ಜನ ತಬಲಾಜಿಗಳ ಕೂಡ ಗಾಯಕರು ಹಾಡಬೇಕಾಗಿತ್ತು ಅದೊಂದು ಕಸರತ್ತಿನ ಕೆಲಸವೇ ಆಗಿತ್ತು. ಅದಕ್ಕೆ ರಾಜಗುರು ಅವರು ಒಂದು ವರ್ಷ ಆಮಂತ್ರಿತರಾಗಿ ಹೋಗಿದ್ದರು. ತಾಳದ ಒಂದೊಂದು ಆವೃತ್ತಿಯನ್ನು ಒಬ್ಬರಾದ ಮೇಲೆ ಒಬ್ಬರು ನುಡಿಸುವುದು ಹಾಡುಗರು  ಸರಿಯಾಗಿ ಸಮ್ಮ್ ಗೆ ಬರುವುದು ಅಲ್ಲಿಯ ಕ್ರಮವಾಗಿತ್ತು. ಆಗ ಪಂ. ರಾಜಗುರು ಅವರು ಮೊದಲ ತಬಲಾಜಿಗೆ ಝಮ್ರಾ ತಾಳ ಹಿಡಿಯಲು ಹೇಳಿದರು. ಆ ತಬಲಾಜಿ ಸಂದಿಗ್ಧತೆಗೆ ಸಿಲುಕಿ ಕಕ್ಕಾಬಿಕ್ಕಿಯಾಗಿ ನುಡಿಸತೊಡಗಿದನು. ಎರಡನೆಯ ತಬಲಾಜಿಯ ಪರಿಸ್ಥಿತಿಯೂ ಇದೇ ತೆರನಾಯಿತು. ಆಗ ತಬಲಾಜಿಗಳು ಝಮ್ರಾ ತಾಳವನ್ನು ಬಿಟ್ಟು ಬೇರೆ ತಾಳದಲ್ಲಿ ಹಾಡಲು ವಿನಂತಿಸಿಕೊಂಡರು. ಆಗ ಪಂ. ರಾಜಗುರು ತ್ರಿತಾಳದಲ್ಲಿ ಹಾಡಿದಾಗ ಶ್ರೋತೃಗಳು ಚಪ್ಪಾಳೆಯನ್ನು ತಟ್ಟಿದ್ದೆ ತಟ್ಟಿದ್ದು. ಆಗ ಈ ಸಂಗೀತ ಸಮ್ಮೇಳನದ ಸಂಯೋಜಕ ಖಲಿಪಾ ಅವರು ಸಂತೋಷದಿಂದ ರಾಜಗುರು ಅವರ ಕೈಗೆ ಬಂಗಾರದ ಖಡಗವನ್ನು ತೊಡಿಸಿ ಅವರ ಕೊರಳಿಗೆ ನೋಟುಗಳ ಹಾರವನ್ನು ಹಾಕಿದರು. ಪಂ. ರಾಜಗುರು ಅವರು ಸಂಗೀತ ಕಛೇರಿಗಳಲ್ಲಿ ಯಶಸ್ವಿಯಾಗಲು, ಆದರಲ್ಲೂ ತಬಲಾಜಿಗಳನ್ನು ಧೈರ್ಯದಿಂದ ಎದುರಿಸಲು ಕಾರಣವೆಂದರೆ ಅದಕ್ಕೆ ಶ್ರೀ ಪಂಚಾಕ್ಷರಿ ಗವಾಯಿಗಳು ನೀಡಿದ ಗಟ್ಟಿಯಾದ ತರಬೇತಿ ಎಂದು ಹೇಳಬೇಕು.

ಮಹಾನ್‌ಸಂಗೀತಗಾರ ಪಂ.ರಾಜಗುರು ಅವರನ್ನು ಮಹಾನ್‌ಕವಿಗಳಾದ ದ.ರಾ.ಬೇಂದ್ರೆಯವರು ಅಭಿಮಾನದಿಂದ ಕಾಣುತ್ತಿದ್ದರು. ಪಂ.ರಾಜಗುರು ಅವರು ಬೇಂದ್ರೆಯಂಥಹ ಕವಿವರ್ಯರ ಸಮಾರಂಭಗಳಿಗೆ ಆಗಾಗ ಹೋಗುತ್ತಿದ್ದರು. ಒಮ್ಮೆ ಬೇಂದ್ರೆಯವರು ರಾಯಚೂರಿಗೆ ಹೊರಟಿದ್ದರು. ಪಂ.ರಾಜಗುರು ಅವರು ಗುಲ್ಬರ್ಗಾಕ್ಕೆ ಹೊರಟಿದ್ದರು. ಇಬ್ಬರು ರೈಲಿನಲ್ಲಿ ಒಟ್ಟಿಗೆ ಪ್ರಯಾಣ ಮಾಡುವ ಅವಕಾಶ ಅವರಿಗೆ ದೊರೆತ್ತಿತ್ತು. ಆ ಪ್ರಯಾಣದಲ್ಲಿ ಬೇಂದ್ರೆಯವರು ‘ಒಂದು ಕ್ಷಣ ಕಂಡ ತಪ್ಪಿಗೆ ಕೊರಗೋದ ಮತ್ತು ಮರಗೋದ’ ಎಂಬ ತಮ್ಮ ಭಾವಗೀತೆಯನ್ನು ತಮ್ಮದೇ ಯಾದ ಧಾಟಿಯಲ್ಲಿ ಅಂದು ತೋರಿಸಿದರು. ಅದು ಪಂ. ರಾಜಗುರು ಅವರಿಗೆ ಸರಿ ಅನಿಸಲಿಲ್ಲವಂತೆ. ಆಗ ರಾಜಗುರು ಅವರು ಅದನ್ನು ತಮ್ಮದೇ ಆದ ಧಾಟಿಯಲ್ಲಿ ಹಾಡಿ ತೋರಿಸಿದಾಗ ಕವಿ ಬೇಂದ್ರೆಯವರು ಸಂತೋಷಪಟ್ಟರು.

ಇನ್ನೊಂದು ಸಂದರ್ಭದಲ್ಲಿ ಪಂ. ರಾಜಗುರು ಅವರು ಇಂಥದೇ ಅನುಭವವನ್ನು ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಹಂಚಿಕೊಂಡಿದ್ದಾರೆ. ರಾಜಗುರು ಅವರು ಧ್ವನಿ ಮುದ್ರಣಕ್ಕಾಗಿ ಕುವೆಂಪುರವರ ಕೆಲವು ಭಾವಗೀತೆಗಳನ್ನು ತಯಾರಿಸಿದ್ದರಂತೆ. ಒಂದು ಸಲ ಅವರು ಗ.ಸ.ಹಾಲಪ್ಪನವರೊಂದಿಗೆ ಕುವೆಂಪುರವರ ಹತ್ತಿರ ಹೋಗಿ ಈ ವಿಷಯವನ್ನು ತಿಳಿಸಿದರು. ಅದಕ್ಕೆ ಕುವೆಂಪುರವರು ಒಪ್ಪಿಗೆ ಪತ್ರವನ್ನು ನೀಡಿದರು. ಹಾಗೆ ಅದು-ಇದು ಮಾತನಾಡುತ್ತ ಕುಳಿತಂತೆಯೇ ಕುವೆಂಪುರವರು ತಮ್ಮ ‘ವಿಶ್ವದ ಕೇಂದ್ರ ವೃಂದಾ ವನದಲಿ ಎಂಬ ಹಾಡನ್ನು ಅಂದು ತೋರಿಸಿದರು. ಅದು ರಾಜಗುರು ಅವರಿಗೆ ಹಾಡಿನ ಬದಲಾಗಿ ಮಂತ್ರವನ್ನು ಅಂದಂಥೆ ಕೇಳಿಸಿತು. ಆಗ ಅವರು ಉತ್ಸಾಹದಿಂದ ಅಲ್ಲಿಯೇ ಧಾಟಿ ಸಂಯೋಜನೆ ಮಾಡಿ ಆ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು. ಅದಕ್ಕೆ ಮಹಾಕವಿ ಕುವೆಂಪು ಸಂತಸಪಟ್ಟು ತಮ್ಮ ಹಾಡುಗಳ ನಾಲ್ಕು ಪುಸ್ತಕಗಳನ್ನು ಪ್ರೀತಿಯ ಕಾಣಿಕೆಯಾಗಿ ನೀಡಿದರು.

೧೯೬೧ರಲ್ಲಿ ಗ್ವಾಲಿಯರದಲ್ಲಿ ನಡೆಯುವ ತಾನಸೇನ ಸಂಗೀತ ಉತ್ಸವದಲ್ಲಿ ಪಂ. ರಾಜಗುರು ಭಾಗವಹಿಸಿದ್ದರು. ಅವರ ಪ್ರಕಾರ ಈ ಸಮ್ಮೇಳನದಲ್ಲಿ ಸಂಗೀತಗಾರರು ಭಾಗವಹಿಸಿದೆಂದರೆ ಅದೊಂದು ಅಭಿಮಾನದ ಸಂಗತಿಯಾಗಿದೆ. ಅಲ್ಲಿ ಪಂ. ಜಸರಾಜ, ವಿಲಾಯತ್‌ಹುಸೇನಖಾನ್‌, ಗುಲಾಮ ಮುಸ್ತಾಪಾಖಾನ್‌ಮುಂತಾದ ಕಲಾವಿದರ ಕಛೇರಿಯಾದ ಮೇಲೆ ರಾತ್ರಿ ಹನ್ನೊಂದಕ್ಕೆ ರಾಜಗುರು ಅವರ ಸರತಿ ಬಂದಿತು. ಪಂ.ರಾಜಗುರು ಅವರು ಗ್ವಾಲಿಯರ ಘರಾಣೆಯ ಚೀಜನ್ನು ಬಹಳಷ್ಟು ಪರಿಣಾಮಕಾರಿಯಾಗಿ ನಿರೂಪಿಸಿದರು. ಅದಕ್ಕೆ ಶ್ರೋತ್ರಗಳೆಲ್ಲ ಸಂತಸ ಪಟ್ಟರು.

ಪಂ. ರಾಜಗುರು ಅವರು ತಮ್ಮ ಭಾರತ ಪ್ರವಾಸವನ್ನು ಸಂತೋಷದಿಂದ ಪೂರೈಸಿದರು.

ಪಂ. ರಾಜಗುರು ಅವರ ಸಂಗ್ರಹದಲ್ಲಿ ಬಹಳಷ್ಟು ಅಪರೂಪದ ರಾಗಗಳು, ಹಾಗೂ ಚೀಜಗಳು ಇದ್ದು ಇವು ಅವರಿಗೆ ಬಹಳಷ್ಟು ಸಂತಸವನ್ನು, ಪ್ರಶಂಸೆಯನ್ನು ತಂದುಕೊಟ್ಟಿವೆ. ಅವರು ೧೯೮೧ರಲ್ಲಿ ಪಾಟ್ನಾದಲ್ಲಿ ಒಂದು ಸಂಗೀತ ಕಾರ್ಯಕ್ರಮ ನೀಡಿದರು. ಆಗ ಅವರೊಂದಿಗೆ ತಬಲಾ ಸಾಥ ನೀಡಿದವರು ಖ್ಯಾತ ತಬಲಾವಾದಕ ಶ್ರೀ ಸಾಮತಾ ಪ್ರಸಾದರು. ರಾಜಗುರು ಅವರು ಮಾಲಕಂಸ ರಾಗದಲ್ಲಿ ಸುಂದರ ವದನಕೆ ಎಂಬ ಜಪ್ತಾಲ ಖ್ಯಾಲ ಹಾಡಿದರು. ಅವರು ಹೇಳುವಂತೆ ಅದರ ಸಮ್ಮ್ ಬಹಳ ಕ್ಲಿಷ್ಟವಾಗಿತ್ತು. ಅದರಲ್ಲಿ ಆರನೆಯ ಮಾತ್ರೆಗೆ ಚೀಜ ಎತ್ತಿ ಹಾಡಬೇಕು. ಪಂ.ರಾಜಗುರು ಅವರು ಆ ಖ್ಯಾಲನ್ನು ನಿರಾತಂಕವಾಗಿ ಹಾಡಿ ಮುಗಿಸದ ಮೇಲೆ ಸಾಮಾತಾ ಪ್ರಸಾದರು ಎದ್ದು ನಿಂತು ಒಂದು ಚಿಕ್ಕ ಭಾಷಣವನ್ನು ಮಾಡಿ ‘ಇಂಥಹ ಅಡತಾರ ತಾಳಲಯದಲ್ಲಿ ಹಾಡುವ ಗಾಯಕರನ್ನು ನಾನು ಇದೇ ಮೊದಲು ಕಂಡಿದ್ದು, ಇದು ರಾಜಗುರು ಅವರ ತಾಳಲಯ ಸಿದ್ದಿಗೆ ದ್ಯೋತಕವಾಗಿದೆ’ ಎಂದರು.

ಪಂ.ರಾಜಗುರು ಅವರು ಧಾರ್ಮಿಕ ಸ್ವಭಾವದವರಾಗಿದ್ದರು.  ಬಾಲ್ಯದಿಂದಲೂ ಶಿವಯೋಗ ಮಂದಿರದ ಪ್ರಭಾವದಲ್ಲಿ ಬೆಳೆದ ಅವರಿಗೆ ಗುರುಗಳ ಬಗ್ಗೆ ಭಕ್ತಿ ಗೌರವ ಹೆಚ್ಚು. ಎಷ್ಟೋ ಜನ ಸ್ವಾಮಿಗಳವರ ಆರ್ಶೀವಾದ, ಕೃಪಾ-ಕಟಾಕ್ಷಗಳು ಅವರ ಪ್ರಗತಿಗೆ ಕಾರಣವಾಗಿವೆಯೆಂದು ಅವರ ನಂಬುಗೆಯಾಗಿತ್ತು. ಅಂಥ ಮಹಾತ್ಮರ ಸೇವೆ, ದರ್ಶನ ಮತ್ತು ಸಹವಾಸ ಭಾಗ್ಯ ದೊರೆತದ್ದು ಅವರ ಪುಣ್ಯವಾಗಿತ್ತು. ಪಂ. ರಾಜಗುರು ಅವರು ಮೊದಲು ಶಿವಯೋಗ ಮಂದಿರಕ್ಕೆ ಹೋದಾಗ ಹಾವೇರಿಯ ಶಿವಬಸವ ಸ್ವಾಮಿಗಳು ಅಲ್ಲಿದ್ದರು. ಅವರನ್ನು ಆಗಾಗ ರಾಜಗುರು ಅವರು ಸಂಚಾರಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಪಂ. ಬಸವರಾಜ ರಾಜಗುರು ಅವರು ಧಾರವಾಡದಲ್ಲಿ  ನೆಲೆನಿಂತ ಮೇಲೆ ಮುರಘಾಮಠದಲ್ಲಿ ಮೇಲಿಂದ ಮೇಲೆ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಆ ಮಠದ ಮೃತ್ಯುಂಜಯಪ್ಪಗಳವರು ರಾಜಗುರು ಅವರನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದರು. ರಾಜಗುರು ಹೇಳುತ್ತಾರೆ ‘ಈ ಸ್ವಾಮೀಜಿಯವರ ಬದುಕಿನ ಕೊನೆಯ ಅವಧಿಯು ನನ್ನ ಜೀವನದ ಅವಿಸ್ಮರಣೀಯ ಸಂದರ್ಭಗಳಲೊಂದಾಗಿದೆ’ ಎಂದು.

ಪಂ. ರಾಜಗುರು ಅವರ ಜೀವನವು ಒಂದು ಗ್ರಂಥವಾಗಿದೆ. ಅವರ ಸ್ಮತಿ ಸಂಪುಟದ ಪುಟಗಳು ಲೆಕ್ಕಕ್ಕೆ ಸಿಗಲಾರದ ಸಂಖ್ಯೆಯಲ್ಲಿವೆ. ಅವುಗಳಲ್ಲಿಯ ಕೆಲವನ್ನು ಅವರು ಡಾ. ಬಸವರಾಜ ಮಲಶೆಟ್ಟಿಯವರು ಸಂಪಾದಿಸಿದ ಅವರ ಅಭಿನಂದನಾ ಗ್ರಂಥ ಇಂಚರ ದಲ್ಲಿ ನೀಡಿದ್ದಾರೆ. ರಾಜಗುರು ಅವರಿಗೆ ಸಾಕಷ್ಟು ಪ್ರಶಸ್ತಿ. ಬಹುಮಾನಗಳು ಬಂದಿದ್ದರೂ ಅವರು ಇನ್ನೂ ಸಂಗೀತದ ವಿದ್ಯಾರ್ಥಿಯಾಗಿದ್ದರಿಂದ ಅವುಗಳ ಬಗ್ಗೆ ವಿಚಾರಿಸಲಿಲ್ಲ. ರಾಜಗುರು ಅವರ ಪ್ರಕಾರ ಸಂಗೀತ ಸಾಗರ ಅಪಾರವಾದುದು. ಆದರೆ ಮನುಷ್ಯನ ಸಾಧನೆಗೆ ಮಿತಿಯಿದೆ. ಹಿಮಾಲಯವನ್ನು ಇನ್ನು ಮೇಲೆ ಏರಬೇಕು ಎಂಬ ಧ್ಯೇಯವಿರಬೇಕು. ಆದರೆ ನಾವು ಹಿಮಾಲಯವನ್ನು ಏರಿ ಬಿಟ್ಟಿದ್ದೇವೆ ಎಂದರೆ ನಾವು ಪ್ರಪಾತಕ್ಕೆ ಬೀಳುತ್ತೇವೆ ಎನ್ನುತ್ತಿದ್ದರು. ಪಂ. ರಾಜಗುರು ಅವರು ಸಂಗೀತ ಲೋಕದ ವಿದ್ವಾನ್ ರಾದರು. ಪಂ. ರಾಜಗುರು ಸರಳ-ಸಂಪನ್ನರು. ಅಪರೂಪದ ನಿಗರ್ವಿಯು ಆಗಿದ್ದು ಗಮನಾರ್ಹ.