ಗ್ರಾಮಾಂತರ ಪ್ರದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಮಹತ್ವದ ಪಾತ್ರವಹಿಸುತ್ತದೆ. ಕುರಿಯನ್ನು ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ‘ಕಿರುಕಾಮಧೇನು’ ಎಂದು ಕರೆಯಬಹುದು.

ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಉತ್ತಮ ಪಾತ್ರವನ್ನು ವಹಿಸಿದೆ. ಕುರಿ ಸಾಕಾಣಿಕೆ ಸಣ್ಣ, ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಮುಖ್ಯ ಕಸುಬಾಗಿದೆ.

ಕರ್ನಾಟಕ ರಾಜ್ಯವು ೧,೯೧,೭೯೧ ಚ.ಕಿ.ಮೀ, ವಿಸ್ತಾರವನ್ನು ಹೊಂದಿದ್ದು, ದೇಶದಲ್ಲಿ ೬ನೇ ಅತಿ ದೊಡ್ಡ ರಾಜ್ಯವಾಗಿದೆ. ೨೦೦೩ನೇ ಜಾನುವಾರು ಗಣತಿಯ ಪ್ರಕಾರ ಕನಾಟಕ ರಾಜ್ಯದಲ್ಲಿ ೭೨.೫೫ ಲಕ್ಷ ಕುರಿಗಳು ಮತ್ತು ೪೪.೮೩ ಲಕ್ಷ ಮೇಕೆಗಳು ಇವೆ. ಕರ್ನಾಟಕದಲ್ಲಿರುವ ೨೭ ಜಿಲ್ಲೆಗಳಲ್ಲಿ ೯.೦೨ ಲಕ್ಷ ಕುರಿಗಳನ್ನು ಹೊಂದಿರುವ ಬೆಳಗಾಂ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ತುಮಕೂರು ೮.೮೪ ಲಕ್ಷ, ಚಿತ್ರದುರ್ಗ ೭.೧೫ ಲಕ್ಷ ಮತ್ತು ಕೋಲಾರ ೬.೩೩ ಲಕ್ಷ ಸಂಖ್ಯೆ ಹೊಂದಿದ್ದು, ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿರುತ್ತವೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕುರಿಗಳ ಸಾಂದ್ರತೆ ಅತ್ಯಂತ ವಿರಳವಾಗಿದೆ.

ರಾಜ್ಯದಲ್ಲಿ ಕುರಿ ಸಾಕಾಣಿಕೆಗೆ ಒಣ ವಾತಾವರಣವಿರುವ ಮತ್ತು ೧೫ ರಿಂದ ೨೦ ಅಂಗುಲ ಮಳೆ ಬೀಳುವ ಭಾಗಗಳು ಉತ್ತಮವಾಗಿವೆ. ಹೆಚ್ಚು ಮಳೆ ಬೀಳುವ ಶೀತ ವಾಯುಗುಣದ ಅರಣ್ಯ ಪ್ರದೇಶವು ಕುರಿ ಸಾಕಾಣೆಕೆಗೆ ಯೋಗ್ಯವಲ್ಲ. ನಮ್ಮ ರಾಜ್ಯದಲ್ಲಿ ಕುರಿಗಳನ್ನು ಮುಖ್ಯವಾಗಿ ಮಾಂಸ, ಉಣ್ಣೆ, ಚರ್ಮ ಮತ್ತು ಗೊಬ್ಬರಗಳಿಗಾಗಿ ಸಾಕುತ್ತಾರೆ. ಕುರಿ ಸಾಕಾಣಿಕೆ ಸುಲಭ ಹಾಗೂ ಲಾಭದಾಯಕ.

ಕುರಿಗಳು ಎಂತಹ ಸಂಕಷ್ಟ ಸಮಯದಲ್ಲೂ ಬದುಕಿ ಉಳಿಯಬಲ್ಲವು. ಕುರಿಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಆಧುನಿಕ ತಂತ್ರಜ್ಞಾನ, ಮೇವು ವಿಜ್ಞಾನ ಹಾಗೂ ತಳಿಯ ಅಭಿವೃದ್ಧಿ ಜ್ಞಾನವನ್ನು ಅಳವಡಿಸಿ ಕುರಿಗಳನ್ನು ಸಾಕಿದರೆ ಹೆಚ್ಚಿನ ಲಾಭ ಗಳಿಸಬಹುದು.

ಇಂದು ಕುರಿ ಸಾಕಾಣಿಕೆಯು ಅಲೆಮಾರಿ ಜನರಿಗೆ, ಕೃಷಿ ಕೂಲಿಗಾರರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ವರ್ಗದವರಿಗೆ ಜೀವಂತ ಚಲಿಸುವ ನಿಧಿಗೆ ಸಮಾನವಾಗಿದೆ.