ಕನ್ನಡ ನಾಟಕ ಸಾಹಿತ್ಯದ ಇತಿಹಾಸದಲ್ಲಿ ಗಮನಿಸಬೇಕಾದ ಹೆಸರು ಸಂಸರದ್ದು. ಇವರ ನಿಜವಾದ ಹೆಸರು ಸಾಮಿವೆಂಕಟಾದ್ರಿ ಅಯ್ಯರ್ ಎಂದು. ಎ.ಎನ್‌. ಸಾಮಿ, ಎ.ಎನ್‌. ವೆಂಕಟಾದ್ರಿ ಅಯ್ಯರ್ ಎಂದು. ಎ.ಎನ್‌. ಸಾಮಿ, ಎ.ಎನ್‌. ವೆಂಕಟಾದ್ರಿ ಪಂಡಿತ, ಎ. ಎನ್‌. ಸಾಮಿ ವೆಂಕಟಾದ್ರಿ ಅಯ್ಯರ್, ಎ.ಎ. ಪಂಡಿತ ಮುಂತಾಗಿ ಅನೇಕ ಹೆಸರುಗಳಲ್ಲಿ ಕಾಣಿಸಿಕೊಂಡ ಇವರು ‘ಸಂಸ’ ರೆಂದು ಕನ್ನಡ ನಾಟಕ ಕ್ಷೇತ್ರದಲ್ಲಿ ಪ್ರಸಿದ್ಧರಾದದ್ದು ‘ವಿಗಡವಿಕ್ರಮರಾಯ’ ನಾಟಕದ ಮುದ್ರಣ ಸಂದರ್ಭದಿಂದ. ಈ ನಾಟ      ಕ ಮೊದಲು ಪ್ರಬುದ್ಧ ಕರ್ಣಾಟಕದಲ್ಲಿ ಕೆಲವು ಕಂತುಗಳಾಗಿ ಪ್ರಕಟವಾಯಿತು. ಆ ಸಂದರ್ಭದಲ್ಲಿ ನಾಟಕದ ಕರ್ತೃವಿನ ಹೆಸರನ್ನು ‘ಕಂಸ’ ಎಂದು ಇಡಲಾಗಿತ್ತಂತೆ. ಮುದ್ರಾರಾಕ್ಷಸನ ಕೃಪೆಯಿಂದ ಅದು ಸಂಸ ಎಂಬ ಹೆಸರಿನಲ್ಲಿ ಅಚ್ಚಾಯಿತಂತೆ. ಮೊದಮೊದಲು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಾಮಿಯವರು ಮುಂದೆ ತಮ್ಮ ನಾಟಕಗಳಿಗೆಲ್ಲಾ ಕರ್ತೃವಾಗಿ ಆ ಹೆಸರನ್ನೇ ಉಳಿಸಿಕೊಂಡರು. ಅಂತೆಯೇ ‘ಸಂಸ’ ಎಂಬ ಹೆಸರೇ ಈಗ ಕನ್ನಡ ನಾಟಕ ಪ್ರಪಂಚದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಆದರೆ ಸಂಸರು ‘ವಿಗಡ ವಿಕ್ರಮರಾಯ’ದ ಕರ್ತೃವಾಗಿ ತಮ್ಮ ನಿಜನಾಮಧೇಯವನ್ನು ನೀಡದೇ ವಿಚಿತ್ರವೆನ್ನಿಸುವ ಕಂಸ ಎಂಬ ಹೆಸರನ್ನೇಕೆ ಇಟ್ಟರೋ ತಿಳಿಯದಾಗಿದೆ. ಕೈಲಾಸಂಜ ಒಡನಾಡಿಗಳಲ್ಲಿ ಸಂಸರು ಒಬ್ಬರು. ಕೈಲಾಸಂ ನಾಟಕವೊಂದರಲ್ಲಿ ಬರುವ ‘ಕಂಸಧ್ವನಿ’ಯಿಂದ ಪ್ರೇರಿತರಾಗಿ ತಮ್ಮ ಹೆಸರನ್ನು ‘ಕಂಸ’ ಎಂದು ಪರಿವರ್ತನೆ ಮಾಡಿಕೊಂಡರೋ ಅಥವಾ ಭಾರತದ ದುಷ್ಟ ಚತುಷ್ಟಯರಲ್ಲಿ ಒಬ್ಬನಾದ ಕಂಸ ಅವರಿಗೆ ಪ್ರಿಯನೆನಿಸಿದನೋ ತಿಳಿಯದಾಗಿದೆ.