ಕಂದ

ಅತ್ತಲು ದಿವಿಜಸ್ತೋಮವ
ದುತ್ತಮ ಕಲ್ಯಾಣಮೀಕ್ಷಿಸುವೆವೆನೆ ಭರದಿಂ |
ಮೊತ್ತದಿಹರಬ್ರಹ್ಮಾದಿಗ
ಳಿತ್ತರು ಬಂದೊಡ್ಡೋಲಗಮಭ್ರದೊಳಾಗಳ್ || ||೨೪೯||

ರಾಗ ಘಂಟಾರವ ಏಕತಾಳ

ವರಕುಶಧ್ವಜನಂದು | ಕರೆದು ಮೋಹದೊಳು ಕು |
ಳ್ಳಿರಿಸಿಕೊಂಡನು ಸೀತಾ | ತರುಣಿಯನೊಲಿದು || ||೨೫೦||

ಇವಳಿಗಿನ್ನೆರೆಯ ನಾ | ವವನಪ್ಪನೊ ಕಾಣೆ |
ಹವಣಿಸಿಕೊಂಡಿರ್ದ | ಭುವಿಯ ಪಾಲಕರಲಿ || ||೨೫೧||

ಎನುತಲೆ ಬಳಿಕಾಗ | ತನುಜೆ ಶೃಂಗರಿಸು |
ತನುವಾಗಿರೆಂದನು | ವನಜಾಕ್ಷಿಯರೊಳು || ||೨೫೨||

ವಾರ್ಧಕ

ತಜ್ಜನಕಜೆಗೆ ದಿವ್ಯತೈಲದಿಂ ಕುರುಳೊಳಂ
ಸಜ್ಜನಿಂ ನೇವರಿಸಿ ಮೈಗರಸಿನಂ ಪೂಸಿ
ಮಜ್ಜನಂ ಗೈಸಿ ಪೀತಾಂಬರವನಳವಡಿಸಿ ಕುಪ್ಪಸಂ ತೊಡಿಸಿ ಕಣ್ಗೆ |
ಕಜ್ಜಳಂ ತಿದ್ದಿ ಕುಂಕುಮದ ಕಸ್ತುರಿ ತಿಲಕ
ವುಜ್ಜ್ವಲಿಪ ಫಣೆಗಿಟ್ಟು ಪರಿಮಳಿಪ ಗಂಧಂಜ
ಗಜ್ಜನನಿಗಂತಿಗುರ್ದಿ ನಾನಾಸುಮಂ ಮುಡಿಸಿ ಶೃಂಗರಿಸಿದರು ಸತಿಯರು || ||೨೫೩||

ರಾಗ ಮಾರವಿ ಏಕತಾಳ

ಬಂದನೈಯ್ಯ ಸಭೆಗೆ ಕುಶಧ್ವಜನು ಬೇಗ | ತಾ |
ಮಂದಗಾಮಿನಿಯನು ಕೊಂಡು ನಲಿಯುತಾಗ || ಬಂದನಾಗ || ||೨೫೪||

ಆನೆಯನ್ನು ಮುದದೊಳು ಶೃಂಗರಿಸಿ | ಮಧ್ವನಿಯ ತೋರಿಸಿ |
ಮುಂದಿ | ನ್ನಾನುವ ಶುಭ ಶಕುನಂಗಳ ವಿಚಾರಿಸಿ || ಬಂದಾ || ||೨೫೫||

ಗಣವಿಲ್ಲದ ಗಾನ ಗೀತ ಘೋಷದಿ | ಒಳ್ಳೆ |
ಕುಣಿವ ನಾಟಕಿ ಜನ ಸಂತೋಷದಿ ||
ಮಣಿಕೇಯೂರರವಂಗಳ ವಿಲಾಸದಿ | ಬಂದ |
ದಣಿಸಿ ಗಜವನಿಳಿದಳ್ ಮಂದಹಾಸದಿ | ಬಂದಳೈ ಸಭೆಗೆ || ||೨೫೬||

ಕಂದ

ಮದಗಜವಿಳಿದಾ ಸಭೆಗಂ
ಮದುವಳಿಯೈತಂದೀಕ್ಷಿಸಿ ಕಡೆಗಣ್ಣಿನೊಳಂ |
ಮುದದಿ ಮುಗುಳ್ನಗೆಯಾಡುತ
ಲಿದರೊಳ್ ತಂನೆರೆಯನ ಕಾಣೆನುತಂ ಬಗೆದಳ್ || ||೨೫೭||

ವಾರ್ಧಕ

ಧೂರ್ಜಟಿಯ ಮಗಳರಸಬೊಮ್ಮನಾತ್ಮಜನು ವರ
ನಿರ್ಜರರ ಸೇವಕರ್ ಮುನಿಗಳೆಂಬವರೆಲ್ಲ
ನಿರ್ಜಿತೇಂದ್ರಿಯರು ಮೇಲಾದ ಭೂವಲ್ಲಭರ ನೋಡಲು ವಿಶೇಷ ಗುಣವು |
ವರ್ಜಿತನರಾದ ಮರ್ಮಿವರಗೊಡವೇನೆಂದು
ದುರ್ಜನ ವಿನಾಶಲಜ್ಜಾಯ ಮಾನಸಳಾಗಿ
ಮೂರ್ಜಗದ ಪತಿಯೆ ತನಗೆರೆಯೆಂಬ ಹರುಷದಿಂ ಬಂದಳಾ ಜನಕನೆಡೆಗೆ || ||೨೫೮||

ರಾಗ ಸೌರಾಷ್ಟ್ರ ಅಷ್ಟತಾಳ

ಮಗುವೆ ನೋಡೀಗ ಮೋಹದ ಮುದ್ದುಕಣಿ ನಿನ್ನ |
ಮೊಗವೆತ್ತಿ ಹರುಷದಿಂದ ||
ವಿಗಡ ಧರಾಧಿಪರಿವರೆಲ್ಲ ಕುಳಿತಿಹ |
ರ್ಬಗೆದೆಯ ಕೋಮಲಾಂಗಿ || ||೨೫೯||

ಇದಕೋ ಹಿಮಾಂಶುಶೇಖರನ ಚಾಪವ ಪೂ |
ಜಿಸಿದೆ ನೋಡು ಹರುಷದಿಂದಾ ||
ಚದುರೆ ನಿನ್ನಯ ವೈವಾಹ ಸನ್ನಹಗಳ |
ನೊದಗಿಕೊಂಡಿದೆ ಚೋದ್ಯದಿ || ||೨೬೦||

ದೊರೆಗಳೊಳಾವನಾದರು ಧನುವೆತ್ತಿ |
ವರಿಸಿಕೊಳ್ಳುವನ ಕಾಣೆ ||
ತರುಣಿ ನೀನದರಿಂದ ಮೊದಲಾಗೋರ್ವನಿ |
ಷ್ಕರಿಸಿಕೊ ಮನಸಿನಲಿ || ||೨೬೧||

ಎನುತವಳನು ತೆಗೆದಪ್ಪಿ ಮುದ್ದಿಸುತಲಿ |
ಜನಪನು ತಾ ಬಳಿಕ ||
ವನಿತೆಯರ್ಸಂದೋಹದೊಳು ಕುಳ್ಳಿರಿಸಿದನುಡು |
ಗಣ ಮಧ್ಯಚಂದ್ರನಂತೆ || ||೨೬೨||

ವಾರ್ಧಕ

ವೇಷ್ಟಿಸಿದರಾಗಲಲ್ಲಿನಜನಂ ವಿವಿಧ ಸುಖ
ಗೋಷ್ಠಿಗಳನಾಡುತ ಕುಮಾರಿಯಳ ಸರಿಸದೋಳ್
ಸೃಷ್ಟೀಶನಾಜ್ಞೆಯಿಂ ಮೊಳಗಿದವು ನಿಸ್ಸಾಳ ಕೋಟಿಗಳ್ ಬಳಿಕ ಕೃತಿಯ |
ದೃಷ್ಟಿಯುಳ್ಳವನು ತಾ ಚಾಪದೆಡೆಯೋಲ್ ಸಮರ
ಚೇಷ್ಟಿತಧರಾಧಿಪರ ನಿಚಯಮಂ ಪೊಕ್ಕಳಿಸಿ
ಶ್ರೇಷ್ಠತನದಿಂ ಪೊದ್ದಿ ಹೇರಿದರ್ಬಹಳ ಪ್ರತಾಪದಿಂದೋರೋರ್ವರೂ || ||೨೬೩||

ರಾಗ ಘಂಟಾರವ ಅಷ್ಟತಾಳ

ಕೇಳಿದೆನಯ್ಯ ಇನವಂಶಜಾತನೆ |
ಪೇಳಲಸದಳವೀಗ ಶಿವನ ಕ |
ರಾಳ ಕಾರ್ಮುಕದುಗ್ರವ || ಕೇಳಿದೆ || ||೨೬೪||

ಸಾರಿಪತ್ತಿರೆ ಬರುವರಿಗೆಲ್ಲ |
ಚಾರಿ ಧನುವಲ್ಲೆಂಬ ತೆರದ ವಿ |
ಚಾರವನೆ ತಾದೋರ್ವುದು || ||೨೬೫||

ಎತ್ತಲೆಂದೆನುತಲಿ ಕೈಯ್ಯ ನೀಡಿದ |
ರೊತ್ತಿ ಪಿಡಿದು ವಿಭಾವಿಸುತ ಭೂ |
ಪೋತ್ತಮರ ಸದೆಬಡಿವುದು || ||೨೬೬||

ಭುಜಬಲಾಢ್ಯರು ತವಕಿಸಿ ಕೊಂಡತಿ |
ಗಜರುತಲೆ ಕೈಯಿಕ್ಕಿ ಧರೆಯಂ |
ಜಗಿಸುವವೊಲ್ ತಾವೊದೆವುದು || ||೨೬೭||

ಪೃಥುಳ ಭೂಭುಜರೆಲ್ಲರೀ ಪರಿಯಿಂದ |
ಮಿಥಿಳೆಯರಸನ ಧನುವಿನುಗ್ರದಿ |
ವ್ಯಥೆಯ ತಾಳ್ದಳವಳಿದರು || ||೨೬೮||

ವಾರ್ಧಕ

ವಂಗಪತಿ ಬಸವಳಿದನಳವಳಿದನಾ ಚೈದ್ಯ
ಹಿಂಗಿದಂ ಚೋಳ ಹಿಮ್ಮೆಟ್ಟಿದಂ ಪಾಂಡ್ಯನೃಪ
ಬೆಂಗೊಟ್ಟು ತಿರುಗಿದಂ ಪಾಂಚಾಲ ಬಾಹ್ಲಿಕಂ ಪಿಂತೆ ಸರಿದಂ ಲಾಳನು |
ಅಂಗಮರ್ಭರ್ಭರ ದ್ರವಿಡ ಕುರುಮಾಗಧ ಕ
ಳಿಂಗನೇಪಾಳಮುಖ್ಯರವನಿಪರ್ಬಿಲ್ಲಿನಿಂ
ಭಂಗಮಂಬಡುತಲಪಹಾಸ್ಯಕಂವೊಳಗಾದರಾ ಸಖೀಸಂದೋಹದ || ||೨೬೯||

ಕಡೆಗುಳಿದ ಭೂಪಾಲಕರ್ ಕೆಲರ್ ಕೆಲರು ತಮ
ಗೆಡದ ಚಂದಿರ ವಧಾ ಕಾರಾಗೃಹದ ಮಿತ್ರತ್ವ
ಕಡುಕಠಿನಮಾಗಿರ್ಪುದಿಂದು ತಾವೊಲ್ಲೆವೆನುತಲ್ಲಲ್ಲಿ ಮರೆಸಾರ್ದರು |
ನುಡಿಚಮತ್ಕಾರದವನಿಪ ನಿನ್ನಿನಾರಾಭ್ಯ
ಬಿಡದೆ ತಲೆ ಶೂಲೆ ಪೈತ್ಯದ ವಿಕಾರಂಗಳಿಂ
ನಡುಗುತಿದೆ ಕೈಕಾಲ್ಗಳೆಂದು ತಂತಮ್ಮೊಳಾಲೋಚಿಸುತ ಹಿಂದೆಗೆದರು || ||೨೭೦||

ಕೆಲರು ತಾವೀವರೆಗೆ ಧನುವೆತ್ತಿ ಪೆಣ್ಗಳಿಂ
ಗೊಳಿಸಿಕೊಳಲಿಲ್ಲವಂ ಧಾರೆಯನ್ನೆರೆದೆಮಗೆ
ಲಲನೆಯಂ ಕೊಡುವುದಾದರೆ ಕೊಡಲದಲ್ಲದಿರೆ ತಾನಿರಿಸಿ ಕೊಳಲೆಂದರು |
ಕೆಲರೀ ಸಖೀಜನರ ಹಾಸ್ಯಕಲ್ಲ್ಯಲ್ಲಿ ತಲೆ
ತಲೆಯ ತಗ್ಗಿಸಿಕೊಂಡು ಕೈಗಳಂ ಮುಗಿದರಾ
ಬಲ ಪ್ರತಾಪಾನ್ವಿತ ಶರಾಸನಕೆ ನಮೊಯೆಂದರಾ ಸಭಾಸ್ಥಾನದೊಳಗೆ || ||೨೭೧||

ಕಂದ

ಅನಿತರೊಳಭ್ರದಿ ಝಳಪಿಸಿ
ದನುಜಾಧಿಪ ರಾವಣನತಿ ಸಂಭ್ರಮದಿಂದಂ |
ಜನಕನ ಜರೆದು ಸಭಾಸ್ಥಳ
ಕೆನುತೈತಂದನು ಘುಡುಘುಡಿಸುತ್ತಲಿ ಭರದೊಳ್ || ||೨೭೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ನೋಡಿದನು ವರರಾಜ ಸಭೆಯನು |
ಪಾಡಿನಂಗನೆಯರ ಸಮೂಹವ |
ಕೂಡೆ ಪೂಜೆಯ ಗೈದ ಶಿವನ ಸ | ಗಾಢ ಧನುವ || ||೨೭೩||

ಕೇಳಿದರೆ ನೀವೆಮ್ಮವರು ತಾವ್ |
ಭಾಳಲೋಚನ ದಯವ ಮಾಡಿದು |
ನೀಳಕುಂತಳೆಯಳ ಮಹೋತ್ಸವ | ದೂಳಿಗವನು || ||೨೭೪||

ತನಗೆ ದೊರಕಿಸಿ ಕೊಟ್ಟನಲ್ಲದೆ |
ಜನಪರಿಂಗೀ ತರುಣಿ ಯೋಗ್ಯಳೆ |
ಯೆನುತ ಶಿರಗಳ ತೂಗಿ ನಡೆದನು | ಧನುವಿನೆಡೆಗೆ || ||೨೭೫||

ಭಾಮಿನಿ

ದಾನವರೊಳಗತ್ಯಧಿಕ ಖೂಳ ದ
ಶಾನನನು ಭ್ರಮೆಗೊಂಡು ತಾ ಸುಂ
ಮಾನದೊಳು ಬಿಲ್ಲೆಡೆಗೆ ಪೋಗುವ ರಭಸವನು ಕಂಡು ||
ಮಾನಿನಿಯರಳುಕಿದರು ಬಲುದು
ಮ್ಮಾನಗೊಂಡನು ನೃಪತಿ ಬಳಿಕಾ
ಮೀನಕೇತನಜನನಿ ನುಡಿದಳು ಮನುಜರಂದದಲೀ || ||೨೭೬||

ರಾಗ ಸೌರಾಷ್ಟ್ರ ಆದಿತಾಳ

ಇವನ್ಯಾರೆ ಬಂದವನು | ಅಕ್ಕೈಯ ನೋಡೆ | ಜವನಂತೆ ನಿಂದವನು |
ಹವಣಿಸಿಕೊಂಡುಬೇಗ | ಚಾಪವನೆತ್ತು | ವವನೇನೋ ಕಾಣೆನೀಗ || ||೨೭೭||

ಖೂಳ ಧನುವ ತಾನೇ | ಎತ್ತಿದ ಮೇಲೆ | ನ್ನಾಳದೆ ಬಿಡುವನೇನೇ ||
ಪೇಳುವುದಾರೀತನು | ಶಿವಶಿವಯಿಂಥ | ಬಾಳುವೆಗೆಟ್ಟುದನ್ನು || ||೨೭೮||

ವನಜಾಕ್ಷನಲ್ಲದೆನ್ನ | ರಮಣನ ಕಾಣೆ | ಜನಪರೊಳೆಂಬ ಮುನ್ನ ||
ದನುಜನ ಸೇರಿ ಮುಂತೆ | ಜೀವಿಸುವಂ | ತನುವಾಗಿ ಕಾಲ ಬಂತೇ || ||೨೭೯||

ಮಾಲಿನಿ ವೃತ್ತ

ಎನುತ ಮನದಿ ಚಿಂತಾಭಾರಮಂ ತಾಳ್ದು ಕಾಂತೇ |
ವನಧಿಶಯನಗೇವೆಂ ವಂಚಿಸೀ ಖೂಳ ಬಂದೂ ||
ತನಗೆ ಪಿಡಿವನಲ್ಲಾ ತಾಳಲೆಂತೀಶ ಬಲ್ಲಂ |
ಇನಿತು ನುಡಿದ ಮೇಲೇ ಈಕ್ಷಿಸೀಯೋರ್ವ ಬಾಲೇ || ||೨೮೦||

ರಾಗ ನವರೋಜು ಏಕತಾಳ

ಚಿಂತೆಯಾತಕೆ ಸೀತೇ | ರಾಮ | ಕಾಂತೆಯಲ್ಲವೆ ಖ್ಯಾತೇ ||
ಕಂತುಜನಕ ನಿನ್ನ | ಕಾಂತನಲ್ಲದೆ ಬರಿ |
ಭ್ರಾಂತ ದೈತ್ಯನ ಕೈ | ಗೆಂತು ಸಿಕ್ಕುವೆ ಬಿಡು || ಚಿಂತೆ || ||೨೮೧||

ಮುಗುದೆಯೆನ್ನನು ನೋಡಾ | ಖಳ | ನಿಗೆ ನೀನೀಕ್ಷಿಸಬೇಡ ||
ಮೊಗವ ವೃಥಾ ಖಿ | ನ್ನಗೆ ಮಾಡದಿರರಿ |
ಸೊಗಡನು ತಾಂಗಿನ್ನು | ಗುರಿಗೆ ತಾಗದು || ಚಿಂತೆ || ||೨೮೨||

ಹರನ ಚಾಪವಯೀಗ | ತಾನೇ | ನರಿಯದಿಪ್ಪುದೆ ಬೇಗ ||
ದುರುಳನ ಕೈವಶ | ದೊರಕಲು ಬೇಕಾ |
ದರೆಯು ಪ್ರಯಾಸದ | ಸರಣಂಗಳುಂಟದು || ಚಿಂತೆ || ||೨೮೩||

ಕಂದ

ಇಂತೀ ಪರಿಯೊಳಗಾ ಸತಿ
ಕಾಂತಾಮಣಿಯಳ ಸಂತವಿಸಿದಳಾ ಬಳಿಕಾ |
ನಂತರದೊಳು ತಾ ಹರುಷದಿ
ನಿಂತು ದಶಾನನ ಸಂತಸದಿಂ ಪೇಳ್ದನು ಭರದೊಳ್ || ||೨೮೪||

ವಾರ್ಧಕ

ನೃಪತಿರಸ್ಕಾರಾಪಹಾಸ ದಶರಾಸನವಿ
ದುಪಕರಿಸಿತೆಮಗೆ ಕಂಡಿರೆ ಖಳರ್‌ಮದನಾರಿ
ಕೃಪೆಯುಮಿನಿತಿಲ್ಲದತಿ ಪೋಪುದೇನೆಂದೆನುತಲುಮ್ಮಯದಿ ಬಯಲ್ಮೋಹದಾ |
ದ್ವಿಪಮಂನಡರ್ದ ಮದಗೊಬ್ಬಿನಿಂದುಬ್ಬಿ ಕೋ
ಣಪಕುಲಾಗ್ರಣಿಯು ಮುಂದೊರೆದು ಕೈಯಿಕ್ಕಿದಂ
ವಿಪುಳ ನಿಕ್ಷೇಪಮಾಶ್ರೈಸಿಕೊಂಡಿರ್ದ ಕಾಳೋರಗನ ತುಡುಕುವಂತೆ || ||೨೮೫||

ರಾಗ ಮಾರವಿ ಏಕತಾಳ

ಜಡಿದವ ಮುಷ್ಟಿಯೊ | ಳೌಕುತಿರಲು ಮೈ |
ಗೊಡಗಿರೆ ಕಾಣುತ | ಲಸುರನತ್ಯುಗ್ರದಿ |
ಕಡುಗಿ ಬೊಬ್ಬಿರಿದವ | ನಿಯ ಪದದಿಂದಲಿ |
ಬಿಡದೆತ್ತಿದ ನಾ | ಹರ ಕಾರ್ಮುಕವ || ಏನನೆಂಬೆ || ||೨೮೬||

ಕದಡಿತು ಶರಧಿಯು | ಫಣಿಪನು ಪೊರಳಿದ |
ನೆದೆಗೆಡೆ ಕೂರ್ಮನು | ಕುಸಿದವು ಗಿರಿಗಳು |
ಉದುರಿತೆಂಬರವ | ದಾನವ ಪಿಡಿದೆ |
ತ್ತಿದಚಾಪದ ಭರ | ಕದುಭುತ ಮೆರೆಯೇ || ಏನನೆಂಬೇ || ||೨೮೭||

ನಿಲಿಸಿದು ಚಾಪವ | ಮೊಳಕಾಲಿಂದಲಿ |
ನಲಿದೌಕುತಲಾ ನಾರಿಯ ಬಿಲ್ಲಿನ |
ತಲೆಪೆಡಕಿನ ಪರಿ | ಯೆಂತರ ಕೊಂಡೊ |
ಯ್ಯಲು ಸುಲಭವೆಂದೆನುತ | ಬೊಬ್ಬಿರಿದರು ಖಳರೂ || ಏನನೆಂಬೆ || ||೨೮೮||

ವಾರ್ಧಕ

ಆಗಬೇಕಾಗಬೇಕೀ ನೃಪಾಲಕಗೆಮ್ಮ
ಭಾಗದಧಿದೇವರೀ ಖಳನ ತಂದಿರಿಸಿರ್ದು
ದೀಗಿವಂಗಪಹಾಸ್ಯಮಂ ಮಾಡಲೀ ಸಖೀ ಜನರು ಬಳಿಕಾ ಜನಕನು |
ರೋಗ ಬಂದವರಂತೆ ನಿಂದಿರ್ಪನ್ಯಾಕೆ ತನು
ನೀಗುವನೊ ಯೇನೆಂದು ಬಾಯ್ಗೆ ಬಂದಂತೆ ಬೈ
ದೂಗರದು ಸಂತೋಷದಿಂದ ನಗುತಿರ್ದುದಾ ಭೂಪಾಲ ಸಂದೋಹವು || ||೨೮೯||

ರಾಗ ಕೇತಾರಗೌಳ ಅಷ್ಟತಾಳ

ಬಳಿಕ ಲಾಲಿಸು ಕುಶ ಜಗದೇಕ ದೈವವ | ನಳುಪಲಿನ್ನಾರಳವು ||
ಇಳಿಕೆಗೊಂಡುದು ತತೂಕ್ಷಣ ಶರಾಸನವದು | ಖಳ ದಶಕಂಠಗಂದು ||
ಕಳವಳಿಸಿತು ಕರಣೇಂದ್ರಿಯಗಳ್‌ಹಂಕೃತಿ | ಗಳ ನಡುಗಿತು ಧಿಮ್ಮನೆ ||
ಎಳೆದೇರಿಸಿದ ತೆಬ್ಬು ನಿಲುಕದಾಯಿತು ಕೂಡೆ | ತಳಮಳಿಸಿದನಾತನು || ||೨೯೦||

ವಾರ್ಧಕ

ಸರ್ರೆಂದು ಸಿಡಿದು ಕೈಯಿಂದುಡಿದು ಚಾಪಮಂ
ಘರ್ರೆಂದು ಮಗುಚಿಮೆಡೆಯೋಳ್ನಿಗುಚಿ ಬೀಳಲ್ಕೆ
ಕಿರ್ರೆಂದು ಚೀರಿ ನೆತ್ತರ ಕಾರಿ ಘರ್ಗರನೆ ಬಾಯೊಳ್ನೊರೆ ಹಾಯ್ದು ಕಡೆಗೆ |
ಘರ್ರೆಂದು ಕಣ್ಗೆ ಕತ್ತಲೆ ನುಣ್ಗೆ ಸೇರಿತಲೆ
ಭರ್ರೆಂದು ತಿರುಗಿ ಮೂರ್ಛೆಯೊಳೊರಗಿದಬ್ಬರಕೆ
ಧರ್ರೆಂದು ನೆರೆದ ಜನರಂಬರದ ಸುರರು ಸಹಿತೆಲ್ಲರುಂ ಭಯಗೊಂಡರು || ||೨೯೧||

ಭಾಮಿನಿ

ಬಳಲಿದನು ದಶಕಂಠನೆಂಬುದ
ತಿಳಿದು ಇಂದ್ರಾರಾತಿ ಮುಖ್ಯರು
ಬಳಿ ಸಲಿಸಿ ಕೊಂಡೊಯ್ದು ಸಂತವಿಸಿದರು ನಿಮಿಷದಲಿ |
ಬಳಿಕ ಸಭೆಗೈತಂದು ನುಡಿದನು
ಭಳಿರೆ ಜನಪತಿಯೆನ್ನ ಮಾನವ
ಕಳೆದುದಕೆ ಕೇಳ್ಜಾನಕಿಯ ನಾನೊಯ್ವೆ ಕಳವಿನೊಳು || ||೨೯೨||

ಕಂದ

ಎನುತಂ ಬಲುಗರ್ಜಿಸುತಂ
ದನುಜಂ ಮೊಗಮಂ ತಿರುಗಿಸಿ ಪೋಗಲ್ಕಿತ್ತಂ |
ಜನಕ ನೃಪಾಲಕನಾಗಂ
ಮುನಿ ಸಭೆಗೈತಂದೆಂದನು ತಾ ನಸುನಗುತಂ || ||೨೯೩||

ರಾಗ ತುಜಾವಂತು ಝಂಪೆತಾಳ

ಕೇಳಿಮುನಿ ತಿಲಕರಿರ | ಕಡುಹರುಷದಿಂದ |
ಪೇಳುವೆನು ಮನಸಿನೊಳ | ಗಿರ್ದ ಸಂಗತಿಯ || ||೨೯೪||

ಸುತೆಯ ಪರಿಣಯಕಾಗಿ | ಸರಿಸಮಾನಸರಾಗ |
ಕ್ಷಿತಿಪರೆಲ್ಲರ ಮಾನ | ಕ್ಷಯವಾಯಿತಿಂದೂ || ||೨೯೫||

ವ್ರತಿ ಕುಲದಿ ಭುಜಬಲ | ವ್ರಜರಾಗಿ ಎಸೆದಿರ್ಪ |
ರತುಳರೀಕ್ಷಣವೆದ್ದು | ರಭಸದಿಂ ಬರಲೀ || ||೨೯೬||

ಸಲ್ಲದಿಹ ನುಡಿ ರಾಜ | ವಲ್ಲಭನೆ ನೀ ಪೇಳ್ದ |
ಬಲ್ಲಿದ ಸಮರ್ಥರಿ | ಲ್ಲಿಲ್ಲ ನಿಚಯದೊಳು || ||೨೯೭||

ಎಲ್ಲಿ ಶುಭ ಶೋಭನವಿ | ದೆಲ್ಲಿ ಮಖಯಾಗವಹು |
ದಲ್ಲಿ ಸಂಚರಿಸುವರಿ | ಗೆಲ್ಲಿಹುದು ಕಡುಹು || ||೨೯೮||

ಎಂದು ಮುನಿಗಳು ಪೇಳ | ಲಂದು ಭೂಪನ ಮೊಗವು |
ಕುಂದಲದು ಕಾಣುತರ | ವಿಂದನಾಭನಿಗೆ || ||೨೯೯||

ಚಂದದಿಂದಾ ಕುಶಿಕ | ನಂದನನು ಕಣ್ಸನ್ನೆ |
ಯಿಂದ ಧನುವೆತ್ತು ನೀ | ನೆಂದು ಸೂಚಿಸಿದ || ||೩೦೦||

ಕಂದ

ಸನ್ನೆಯ ನೋಡುತ ರಘುಜಂ
ತನ್ನಯ ಚಿತ್ತದಿ ಬಲು ಸಂತೋಷವಬಡುತಂ |
ಸನ್ನಹದಿಂದಂ ಗುಣ ಸಂ
ಪನ್ನನು ತಾನೆದ್ದು ಸಭಾಸ್ಥಳಕೈತಂದಂ || ||೩೦೧||

ವಾರ್ಧಕ

ಕೆಳೆಯನೇನಾದಿಮಾಯಾಭಿರಂಜಿತ ರಾಮ
ನಿಳಯನಿವ ಬಳಿಕ ವೈಭವದಿ ವಿಕ್ರಮದಿ ಭೂ
ವಳಯದೋಳ್ಕಮಲಭವಕುಸುಮಶರರಗ್ಗಳರಿವರ್ಗೆ ಪೆತ್ತವನಲ್ಲವೆ |
ಹೊಳೆಯ ಪಿತನಂದಬ್ಧಿಯಿಂದೆದ್ದ ಸುಧೆಯವೋಲ್
ಪೊಳೆಯುವ ಮುನಿಸ್ತೋಮದಿಂ ಪೊರಡುತೈತರಲ್
ಇಳೆಯಸುತೆ ನೋಡುತಿವನೇ ಗಂಡನೆಂದು ಮನದೋಲ್ ನಿಶ್ಚಯಂ ತಾಳ್ದಳು || ||೩೦೨||

ರಾಗ ತೋಡಿ ಅಷ್ಟತಾಳ

ಬಂದನು ರಾಘವದೇವ | ಸತಿ | ವೃಂದಾರಕರ ಸಂಜೀವ ||
ಕಂದರ್ಪ ಜನಕ ಮು | ಕುಂದ ಮಾಧವನರ |
ವಿಂದ ಲೋಚನ ಮುನಿ | ವೃಂದವಂದಿತನೆದ್ದು || ಬಂದನು || ||೩೦೩||

ಕೆದರಿದ ನೃಪಮಂಡಲಕಾರ | ಮೇ | ಣಿದಿರಿನೊಳಿಹನಾರೀನಿಕರ ||
ಮುದದಿ ತಾನೀಕ್ಷಿಸು | ತುದಧಿಗಂಭೀರನು |
ಮದನಾರಿ ಧನುಪೂಜಿ | ಸಿದ ಠಾವಿಗಾಕ್ಷಣ || ಬಂದನು || ||೩೦೪||

ವಾರ್ಧಕ

ಬಂದುಗ್ರಚಾಪದೆಡೆಯೊಳ್ನಿಂತ ರಾಘವಂ
ಇಂದಿರಾರಮಣನೊಲ್ ದಿವಿಜರ್ಗೆ ಪರಬ್ರಹ್ಮ
ನಂದದಿ ಮುನೀಶ್ವರರಿಗಧಿಪತಿಯವೋಲ್ ಧರಾಧಿಪಗೆ ಮೇಲೀತನಿಂಗೆ |
ಕಂದನಾಕಾರದೊಳ್ ನೆರದಖಿಳ ಸತಿಯರ್ಗೆ
ಕಂದರ್ಪನಂತೀ ಪ್ರಕಾರದಿಂ ಕಾಣಿಸ
ಲ್ಕಿಂದೀವರಾಕ್ಷಿಯಳ ಚೆಲುವನುಂ ಕಂಡಂಗಜಂಗೊಪ್ಪಿಸಿದರಂಗವ || ||೩೦೫||

ಆ ನೆರೆದ ಜನರೆಲ್ಲ ಕಂಡುದೋ ಕಾಣದೋ
ಏನೆಂದು ತಿಳಿಯದಾ ರೀತಿಯೊಳ್ ಚಾಪಮಂ
ದಾನವಧ್ವಂಸಿ ಪಿಡಿದೆತ್ತಿ ತಿರುವಂ ಬಿಗಿದು ಕರ್ಣಪೂರದಿ ಸೆಳೆಯಲು |
ಆನೆ ಕಬ್ಬಂ ಸವಿವ ತೆರದಿ ನಿರಿ ನಿಟಿಲೆನೆ ವಿ
ತಾನದಿಂ ಮುರಿದುದಿಕ್ಕಡಿಯಾಗಿ ಧರೆಗುರುಳೆ
ಮೀನಕೇತನವೈರಿಕಾರ್ಮುಕಂ ಭಾರ್ಗವನ ಹೃದಯಮಂ ಕಳವಳಿಸಲು || ||೩೦೬||

ರಾಗ ಆರಭಿ ಏಕತಾಳ
ಅಂಗಜ ಸ್ವರೂಪೆಯರ | ವಂಗಡದಿಂದೆದ್ದು ರಘು |
ಪುಂಗವೆನೆಡೆಗೆ ಬಂದ | ಳಂಗನೆ ಸೀತೇ || ಪಲ್ಲವಿ ||

ತುಂಗಕುಚ ಭಾರದಿ ಮ | ತಂಗಗಮನೆ ವೈಯ್ಯಾರದಿ |
ಕಂಗಳ ಪಿಡಾಳದಿ | ಪತಂಗನ ಪ್ರಭೆ ||
ನುಂಗುವಂತಾ ಸತಿ ಕೋಮ | ಲಾಂಗದಿಂದ ಸತಿ ಸೇವೆ ಸ್ಮರನ |
ಮುಂಗೈ ಅರಗಿಣಿಯವೋಲು | ಶೃಂಗಾರಮಣೀ || ಅಂಗ || ||೩೦೭||

ಆ ಲತಾಂಗಿ ಬಳಿಕ ತಾ ವಿ | ಶಾಲ ವೈಭವದಿಂದ ತನ್ನ |
ಲೋಲನ ಹತ್ತಿರ ನಿಂತು ಪದ್ಮ | ಮಾಲೆಯ ಕೊರಳ್ಗೆ ||
ಲೀಲೆಯಿಂದ ಹಾಕಿ ನಗುತ | ಕಾಲಿಗೆರಗಿ ನಿಂದಿರಲ್ಕೆ |
ಮೇಲೆ ನಲಿನಲಿದು ದಿವಿಜ | ಜಾಲ ಕೊಂಡಾಡೇ || ||೩೦೮||

ಭಾಮಿನಿ

ತರುಣ ಕೇಳೈ ಬಳಿಕ ನೃಪವಧು
ವರರ ತನ್ನಾಲಯಕೆ ಕೊಂಡೊ
ದಿರಿಸಿ ಮನ್ನಿಸಲಾಗ ಭೂಪನೊಳಪ್ಪಣೆಯಗೊಂಡು |
ಧರಣಿಪರು ದುಮ್ಮಾನದಿಂದಲಿ
ಪುರಕೆ ಬಿಜಯಂಗೈಯಲಮರರು
ತೆರಳಿದರು ಮೇಲಿತ್ತ ವಿಭವದೊಳೆಸೆದನಾ ಜನಕ || ||೩೦೯||

ವಾರ್ಧಕ

ಹರುಷದಿಂದಾಗ ವಿಶ್ವಾಮಿತ್ರಮುನಿ ನೃಪನಿ
ಗರುಹಿದಂ ಕೋಸಲಧರಾಧಿಪನ ತನುಜರಿವ
ರರಿಕೆ ನಿನಗಿರಲೆಂದು ವಿನಯ ಪರನಾಗಿ ನಡೆದಂ ನಿಜಾಶ್ರಮಕೆ ನಲಿದು |
ತೆರನಲೇಸಾಯ್ತು ನಿಮಿವಂಶ ತಾ ಮನು ಪರಂ
ಪರೆಗೆ ಸಂಬಂಧಮಂ ಘಟನೆಯಾಯ್ತಿನ್ನೇನು
ಧರೆ ತಾನೆ ಧನ್ಯವಾಯ್ತೆಂದು ಪುಳಕಿತನಾಗುತಾ ನೃಪಂ ಮಂತ್ರಿಗೆಂದಂ || ||೩೧೦||

ರಾಗ ಮುಖಾರಿ ಅಷ್ಟತಾಳ

ಲಾಲಿಸೋ | ಮಂತ್ರಿ | ಲಾಲಿಸೋ || ಪಲ್ಲವಿ ||

ಲಾಲಿಸೋ ಮಂತ್ರಿಕುಲೋತ್ತಮ ಖ್ಯಾತ |
ಮೇಲೆಮಗೊಂದಾಶ್ಚರ್ಯದ ಮಾತ || ಅನುಪಲ್ಲವಿ ||

ಇವನಂತೆ ಕೋಸಲಾಧಿಪನಾತ್ಮಜನು |
ಭುವಿಯೊಳಗಧಿಕ ಪರಾಕ್ರಮ ವ್ರಜನು |
ಕುವರಿಯ ಪುಣ್ಯದಿ ದೊರಕಿದನಲ್ಲ |
ಅವನಿಯೊಳೆನ್ನಂತ ಧನ್ಯರ‍್ಯಾರಿಲ್ಲ || ಲಾಲಿಸು || ||೩೧೧||

ಗುರುಶತಾನಂದರು ನೀ ಸಹಿತಾಗಿ |
ಹರುಷದಿಂದಯೋಧ್ಯಾಪುರಕೀಗ ಪೋಗಿ ||
ವರದಶರಥ ಭೂಮೀಶನ ಕಂಡು |
ಬರುವುದು ದಿಬ್ಬಣವನು ಕರಕೊಂಡು || ಲಾಲಿಸು || ||೩೧೨||

ಕಂದ

ಎನುತಾ ಸಚಿವ ಪುರೋಹಿತ
ರನು ಸನ್ನಾಹದಿ ನೃಪ ತಾಂ ಕಳುಹಲ್ಕವರುಂ |
ವಿನಯದಿ ಬಂದಾ ಕೋಸಲ
ಜನಪದವಂ ಸಾರ್ದು ಭೂಪನಂ ಕಂಡೆಂದರ್ || ||೩೧೩||

ರಾಗ ತುಜಾವಂತು ಝಂಪೆತಾಳ

ಲಾಲಿಸೋ ಮಹವೀರ ಶರಧಿಗಂಭೀರ |
ಪಾಲಿಸೈ ದಶರಥನೃಪಾಲ ಗುಣಶೀಲ || ಪ ||

ಇಂದು ಮಿಥಿಳಾನಗರ | ದಿಂದ ನಿಮಿಕುಲಶರಧಿ |
ಚಂದಿರನು ನಿಮ್ಮಲ್ಲಿ | ಗೆಂದು ಕಳುಹಿಸಲು ||
ಬಂದೆವೈ ಶುಭಕಾರ್ಯ | ವೊಂದಿಹುದು ನಿಮಗೀಗ |
ಚಂದವಾಯ್ತಿನ ವಂಶ | ಯಿಂದುಕುಲಕೆಲ್ಲ || ||೩೧೪||

ರಾಮನೆಂಬವ ನಿಮ್ಮ | ಪ್ರೇಮದಾತ್ಮಜನಂತೆ |
ಸೋಮಶೇಖರನ ಧನು | ವಾಮಹಸ್ತದೊಳು |
ತಾ ಮುರಿದು ಸಂತಸದಿ | ಕಾಮಿನಿ ವಿದೇಹಜೆಯ |
ನಾ ಮಹಿಮವರಿಸಿದನು | ಭೂಮಿಪರ ಮುಂದೆ || ||೩೧೫||

ಅದರಿಂದ ನಿಮ್ಮೆಡೆಗೆ | ಮುದದೊಳು ವಿದೇಹ ನೃಪ |
ಮದುವೆಗೆಂದೆನುತೆಲ್ಲ | ಒದಗಿಬಹುದೆಂದು |
ಪದುಳದಿಂ ಪತ್ರಿಕೆಯ | ನಿದನಿತ್ತು ಎಮ್ಮುವನು |
ಚದುರ ತಾ ಕಳುಹಿದನು | ಸುದಿನವನು ನೋಡಿ || ||೩೧೬||

ಕಂದ

ಎಂದು ಸುಧಾಮನು ದಶರಥ
ಗಂದಿತ್ತಸುಲೇಖನಮಂ ಕರಣಿಕರೊಡನಂ |
ಚಂದದಿ ವಾಚಿಸಲೆನುತಾ
ನಂದದೊಳೀಯಲು ಭರದಿಂದೋದಿದರಾಗಳ್ || ||೩೧೭||

ವಾರ್ಧಕ

ಶ್ರೀಮತ್‌ಪ್ರಭಾಕರ ಕುಲೋತ್ತಮನ ಪಾಲಕ ಶಿ
ರೋಮಂಡನಪ್ರತಿಮನಹಿತ ಮದಗಜಸಿಂಹ
ಭೀಮವಿಕ್ರಮ ಚತುರ್ದಶಭುವನವಿಖ್ಯಾತ ಸಾಕೇತನಗರಾಧಿಪ |
ಆ ಮಹಾ ದಶರಥೇಂದ್ರೈಯ್ಯನವರಿಗೆ ನಿಮ್ಮ
ತಾಮರಸವೈರಿಕುಲಸಂಜಾತನಾದ ಮಿಥಿ
ಳಾ ಮಹೀಪಾಲಕ ವಿದೇಹಂ ಕೃತಾನೇಕ ಸಾಷ್ಟಾಂಗ ಬಿನ್ನಪವನು || ||೩೧೮||

ಕುಶಲರೀ ನೆಲೆಗೆ ನಾವೆಲ್ಲ ನಿಮ್ಮಭ್ಯುದಯ |
ಕುಶಲಂಗಳಂ ಬಿಡದೆ ಲೇಖನಾನನದೊಳರು
ಹಿಸಬೇಕು ತರುವಾಯ ಸಕಲಮವನೀಶ್ವರರ ಗರ್ವಾಪಹಾರೋತ್ಕಟ |
ಶಶಿಧರ ಶರಾಸನಂ ಗೆಲಿದೊಲಿಸಿದಂ ಸೀತೆ
ಗಸಮಬಲ ರಾಘವಂ ಈಗ ನೀವೆಲ್ಲರೀ
ಒಸಗೆಯಂ ಕೇಳಿದಾಕ್ಷಣ ವಿವಾಹೋತ್ಸವಕೆ ಐತರುವುದಿತಿ ಬಿನ್ನಹ || ||೩೧೯||

ರಾಗ ಗಾಂಧಾರಿ ಅಷ್ಟತಾಳ

ಭಳಿರೆ ಶಭಾಸು ಸುಧಾಮ | ನಾ |
ತಿಳಿದೆನುತ್ಸಹವನತಿಪ್ರೇಮ ||
ಖಳರುಪಹತಿಗಾ | ಕುಳಮುನಿ ಕೌಶಿಕ |
ನೆಳೆಯರನು ಕೊಂಡೊದ ಮೇಲಣ |
ದೊಳವ ತಾನರಿಯದಿರ್ದೆನು || ||೩೨೦||

ಮುನಿಕ್ರತುವನು ರಕ್ಷಿಸಿದನೇ | ದುಷ್ಟ |
ದನುಜರೆಲ್ಲರ ಶಿಕ್ಷಿಸಿದನೇ ||
ವಿನಯದಿಂದಾಮೇಲೆ | ಘನಮಿಥಿಳೆಗೆ ಪೋಗಿ |
ಜನಕನಲ್ಲಿಹ ಶಿವಪಿನಾಕವ |
ನೆನಿತು ಮುರಿದನೆ ರಾಮನು || ||೩೨೧||

ವ್ರತಿಪನ ಮಾತದು ಸಿದ್ಧ | ಮಧು |
ಚಿತನವಕರಿಸಿದು ಬದ್ಧ ||
ಇತರಿಂದೇನಪ್ಪುದತಿಶಯ ಮಹಿಮೆಯು |
ಸತತಕ್ಷೇಮಿಗಳಹರೆ ಯೆನ್ನಯ |
ಸುತರು ನಿಮ್ಮಯ ಪುರದೊಳು || ||೩೨೨||

ಕಂದ

ಬಳಿಕಾ ಭೂಪತಿ ತನ್ನಾ
ತುಳ ಮಂತ್ರಿಯನೊಡನೀ ಹದನವ ಪೇಳುತ್ತಂ |
ಪುಳಕಿತ ಹರುಷದಿ ಮೋಹದ
ಕೆಳದಿಯರೊಡನಿಂತೆಂದನು ನಸುನಗುತಾಗಳ್ || ||೩೨೩||

ರಾಗ ಸೌರಾಷ್ಟ್ರ ಅಷ್ಟತಾಳ

ಕಾಮಿನಿಯರು ನೀವೆನ್ನಯ ಮಾತನು | ಕೇಳ್ದಿರೇನೈ | ನಮ್ಮ ||
ರಾಮಲಕ್ಷ್ಮಣರ ಉತ್ಸವ ವರ್ತಮಾನವ | ಕೇಳ್ದಿರೇನೈ || ||೩೨೪||

ತಾ ಮುನಿವರನೆಜ್ಞವನು ಕಾಯ್ದನಂತೆ | ಕೇಳ್ದಿರೇನೈ | ದುಷ್ಟ |
ತಾಮಸಿಚರರನ್ನು ಸಂಹರಿಸಿದನಂತೆ | ಕೇಳ್ದಿರೇನೈ || ||೩೨೫||

ಕಲ್ಲಾದಹಲ್ಯೆಯನುದ್ಧರಿಸಿದನಂತೆ | ಕೇಳ್ದಿರೇನೈ | ಗೌರಿ |
ವಲ್ಲಭನುರು ಚಾಪವಂ ಖಂಡಿಸಿದನಂತೆ | ಕೇಳ್ದಿರೇನೈ || ||೩೨೬||

ಸಲ್ಲಲಿತಾಂಗಿ ಜಾನಕಿಗೊಲಿಸಿದನಂತೆ | ಕೇಳ್ದಿರೇನೈ | ನ |
ಮ್ಮೆಲ್ಲರ ಬರ ಹೇಳಿ ಕಳುಹಿದ ಜನಕನು | ಕೇಳ್ದಿರೇನೈ || ||೩೨೭||

ವಾರ್ಧಕ

ತರುಣ ಕೇಳಾ ಮೇಲೆ ಸಕಲಸನ್ನಾಹದಿಂ
ಮರುದಿವಸ ಸತಿಸುತರ್ಮಂತ್ರಿ ಪ್ರಜೆ ಪರಿವಾರ
ಗುರುವಸಿಷ್ಠಾದ್ಯರೊಡಗೊಂಡು ವಾದ್ಯಾರವದಿ ನಡೆತಂದನಾ ಮಿಥಿಲೆಗೆ |
ಭರದಿ ಮುಂದೈತಂದು ಜನಕ ಕ್ಷಿತೀಶ್ವರಗೆ
ಹರಿಕಾರ ಪೇಳ್ದರಾ ದಶರಥನೃಪೋತ್ತಮನ
ಬರವಾಯಿತೆಂದು ಕೇಳ್ದಾಕ್ಷಣಂ ಸರ್ವಸಂಭ್ರಮದಿಂದಲಿದಿರ್ಗೊಂಡನು || ||೩೨೮||

ಭಾಮಿನಿ

ಏನನೆಂಬೆನು ಶರಧಿವಾರಿಧಿ
ಗಾನುವಂದದೊಳುಭಯರಾಯರ
ಸೇನೆ ಸನ್ನಹದೊಳು ಸತಿಯ ವೈವಾಹ ಸಂಭ್ರಮವ |
ತಾನೆರೆದು ಚೆಲುವಾಯ್ತು ಬಲು ಸಂ
ಮಾನದಿಂ ಸುರಮುನಿಪನೆಂದ ವಿ
ಧಾನವಿಡಿದಾ ಲಗ್ನವನು ನಿಶ್ಚೈಸಿದರು ಬಳಿಕ || ||೩೨೯||

ರಾಗ ಸೌರಾಷ್ಟ್ರ ಏಕತಾಳ

ತನುಜರು ಕೇಳಿರೈ ವಿನಯದಿ ದಶರಥ |
ಜನಕರು ಸಹಿತ ಮಾತಾಡಿ ||
ವನಜಲೋಚನನಿಗೆ | ವನಿತೆ ಸೀತಾದೇವಿ |
ತನಯ ಲಕ್ಷ್ಮಣನಿಗೂರ್ಮಿಳೆಯ || ||೩೩೦||

ಭರತಂಗೆ ಮಾಳವಿ ನಿರತ ಶತ್ರುಘ್ನಗೆ |
ತರುಣಿ ತಾ ಶ್ರುತಕೀರ್ತಿಯೆಂದು ||
ಪರಮ ವೈಭವದಿ ನಿರ್ಧರಿಸಿದ ಬಳಿಕಾಗ |
ವಿರಚಿಸಿ ನಿಶ್ಚಯ ತಾಂಬೂಲವಾ || ||೩೩೧||

ವಾರ್ಧಕ

ಎಸೆದುದಾ ಬಳಿಕ ವೈವಾಹಮಂದಿರದೊಳಂ
ಪಸರಿಸುವ ನವರತ್ನಭೂಷಣಂ ನೂತನದ
ವಸನವರ ಚಂದನಾಕ್ಷತೆಲಾಜೆದೂರ್ವೆಗೋರೋಜನಂ ನಾನಾವಿಧ |
ಕುಸುಮದಶಧಾನ್ಯದಿಂ ಸಾಹಿತ್ಯಮಂ ಮೇಲೆ
ಮುಸುಕಿಕೊಂಡಿಹುದು ಮಂಡಪದೊರೆಗೆ ವಿಪ್ರರ್ಜೋ
ಯಿಸರು ವಿದ್ವಾಂಸ ಕವಿಕೋವಿದರ್ಪಂಡಿತಾಚಾರ್ಯ ಯಾಜಕನಿಚಯವು || ||೩೩೨||

ರಾಗ ಕಾಂಭೋಜಿ ಆದಿತಾಳ

ಬಾಲರು ಕೇಳ್ದಿರೆ ಬಳಿಕ ಸಂತೋಷದಿ ಭೂ |
ಪಾಲನು ತನ್ನಯ ಪೊಳೆವ ಮಕ್ಕಳಿಗೆ ||
ಲೀಲೆಯಿಂದಲಿ ನಾಂದಿ ಮುಖವನು ಮಾಡಿ ವಿ |
ಶಾಲ ಮುತ್ತಿನ ಬಾಸಿಗವ ಕಟ್ಟಿಸಿದಾ ||
ಏನನೆಂಬೆನುತ್ಸವದಾನಂಗಳು || ||೩೩೩||

ರಭಸದೊಳಾ ಮೇಲೆ ರಾಜಪುತ್ರರನು |
ಇಭದ ಮೇಲೇರಿಸಿ ಎಸೆವ ವಾದ್ಯದೊಳು |
ಶುಭದ ಮುಹೂರ್ತದೊಳಾಗ ನಾಟ್ಯ ನರ್ತನದ |
ವಿಭವದಿ ಬಂದರ್ವಿವಾಹಮಂದಿರಕೆ ||
ಏನನೆಂಬೆನುತ್ಸವದಾನಂಗಳು || ||೩೩೪||

ಕಲಶಕನ್ನಡಿಗಳ ಕೈಯೊಳು ಪಿಡಿದು |
ಲಲನೆಯರೈದರು ಲಾಘವಂಗಳಲೀ |
ಒಲಿದಿದಿರಾಕ್ಷತೆ ಬೀಸುವ ಜನರನು |
ಕುಲದಿಂದ ಬಂದಿತು ಕೂಡೆ ದಿಬ್ಬಣವು ||
ಏನನೆಂಬೆನುತ್ಸವದಾನಂಗಳು || ||೩೩೫||

ಆನೆಯಿಂದಿಳಿಸಿದು ಆ ನೃಪಜನರ ಸು |
ಮಾನದಿ ಕುಳ್ಳಿರ್ಸಿದರ್ಮಂಟಪದೊಳಗೆ |
ಏನು ಧನ್ಯನೊ ವಿದೇಹನು ರಾಮಪಾದವ |
ತಾನೆ ತೊಳೆದು ತೀರ್ಥವನು ಧರಿಸಿದ ||
ಏನನೆಂಬೆನುತ್ಸವ ದಾನಂಗಳು || ||೩೩೬||

ವಾರ್ಧಕ

ಕಡೆಗೆ ಮಧುಪರ್ಕದಿಂ ವೈದಿಕಂಗಳಗೈದು
ಗುಡಜೀರಿಗೆಯನಿತ್ತು ಪುಣ್ಯಾಹ ರಚನೆಯಂ
ನಡೆಸಿ ಕನ್ಯಾವರಣಮಂ ಮಾಡಿ ಬಳಿಕ ಧಾರೆಯನೆರೆದನಾ ಜನಕನು |
ಜಡಿದು ಹೋಮಾಗ್ನಿಯಂ ಗಮಿಸಿ ಕುಳ್ಳಿಹ ಪುರುಷ
ರೆಡದೊಳೊಪ್ಪಿರ್ದರಾ ವಧುಗಳಾ ಮೇಲೆಲ್ಲ
ಮಡದಿಯರ್ಸೇಸೆಯಂ ತಳಿದು ಹಸೆಗೇಳಿಸಿದರಾ ಶೋಭನಂ ಪಾಡುತ || ||೩೩೭||