ವಾರ್ಧಕ
ಬೊಬ್ಬೆಯಂ ಗೈದಸುರೆ ಘರ್ಘರನೆ ಪಲ್ದಿನುವ
ನಿಬ್ಬೆರಕೆ ಮುನಿಪ ಕೈಕಾಲ್ಗೊಟ್ಟು ಲಕ್ಷ್ಮಣನ
ತಬ್ಬಿಕೊಳೆ ಮುನಿವಟುಗಳೋಡಿದರ್ಬಳಿಕಸುರರಿಪು ಕೋಪದಿಂ ಚಾಪದಾ |
ಕೆಬ್ಬಿಗಾರ್ಗೊಂದು ಕೂರ್ಗಣೆಯಿರಿಯಲಾಗ ಬಂ
ದುಬ್ಬಿರ್ದ ಬಲದ ತೋಳಂ ಕತ್ತರಿಸಲಾಗ
ಲರ್ಬಿಯಿಂ ನೀರ್ಪರಿವವೋಲ್ನೆತ್ತರಂ ಸುರಿದು ವನವರುಣಮಯವಾಗಲು || ||೧೭೫||
ರಾಗ ಶಂಕರಾಭರಣ ಮಟ್ಟೆತಾಳ
ಪೊಡವಿಗುರುಳೆ ಬಲದತೋಳು | ಜಡಿದು ಕನಲುತಾ |
ಎಡದ ಕೈಯೊಳ್ ಶೂಲವನ್ನು | ಪಿಡಿದು ಗಜರುತ ||
ನುಡಿದಳೆಲವೊ ಶೂಲವಿದನು | ಬಿಡುವೆನೀಕ್ಷಣ |
ತಡೆದುಕೊಂಡರಿಳೆಯೊಳ್ನೀನೆ | ಕಡುವಿಚಕ್ಷಣ || ||೧೭೬||
ಎನಲು ಕೇಳುತಾಗ ರಾಮ | ಕನಲಿ ಕೋಪದಿ |
ದನುಜೆ ಶೂಲವಿಡಿದ ಕೈ | ಯನೆ ಪ್ರತಾಪದಿ |
ತರಿದು ಬಳಿಕ ತಾ ಮಹೋಗ್ರ | ಶರದೊಳವಳನು |
ಧರಣಿಗುರುಳಿಸಲ್ಕೆ ಮುನಿಪ | ಪಿರಿದು ಪೊಗಳ್ದನು || ||೧೭೭||
ವಾರ್ಧಕ
ಬಳಿಕ ಕುಶ ಕೇಳು ತತ್ಕಲುಷಕಾಂತಾರಮಂ
ಕಳೆದು ತನ್ಮುನಿತಿಲಕನಾ ರಾಜಪುತ್ರನಂ
ಬಳಿಸರಿಸಿ ಪೊಕ್ಕನತ್ಯಧಿಕ ಪಾವನ ತಪೋವನದ ತನ್ನಾಶ್ರಮವನು ||
ಎಳೆದಳಿರಿನಿಂದೆಸವ ಪುಣ್ಯಭೂಜಗಳ ಮಂ
ಜುಳ ಲತಾ ಸೌರಂಭದರಳ್ದು ಶೋಭಿಸುವ ಪರಿ
ಮಳದ ಕುಸುಮೋಚ್ಚಳಿತ ಚದುರ ಮಾರುತ ಮಿಶ್ರ ಕರಮಹಾವನಮೆಸೆದುದು || ||೧೭೮||
ಶ್ರುತಿಗಳುಚ್ಚರಣೆಯಂ ಮಾಳ್ಪಸಲೆ ಪಿಕದ ಸಂ
ತತಿಯ ಶಾಸ್ತ್ರಧ್ವನಿಯ ನಿರತಗೈಯುವ ಶುಕ
ಪ್ರತತಿಯಂ ವರತಪಾನುಷ್ಠಾನದಿಂದಿಹವನೇಚರದ ನಿಚಯವದನು |
ಅತುಲ ಭುಜಬಲ ರಾಘವಂ ಕಂಡು ಮನ(ದಿ) ವಿ
ಸ್ಮಿತನಾಗಿ ಲಕ್ಷ್ಮಣಂ ಕೊಂಡಾಡುತಾ (ವಿಭವ
ಯತಿವಿರಾಜಿತ ತಪೋವನವ ಹೊಕ್ಕರು ಪುಣ್ಯಮೂರ್ತಿಗಳು ಮುನಿಪನೊಡನೆ ||) ||೧೭೯||
ರಾಗ ಭೈರವಿ ಝಂಪೆತಾಳ
ಧರಣಿಜಾ ಸುತಕೇಳು | ಪರಮಮುನಿ ಕೌಶಿಕನು |
ಹರುಷದಿಂದಾಗಲ | ಧ್ವರದ ಸಂಗ್ರಹವ ||
ಘನದಿ ನೆರಹಿಸಿ ತಪೋ | ವನದೊಳಿಹ ಋಷಿವರ್ಗ |
ವನು ಕರೆಸಿ ಮಖಶಾಲೆ | ಯನು ರಚಿಸಿ ಬಳಿಕ || ||೧೮೦||
ಚರು ಪುರೋಡಾಶಾಜ್ಯ | ವರ ಸಮಿಧೆ ತಿಲಗಳಲಿ |
ಮೆರೆದುದಾಹವನೀಯ | ಪರಮ ವೈಭವದಿ ||
ಮುನಿವರರ ಶ್ರುತಿಘೋಷ | ವಿನುತ ಹುತವಾಹನನ |
ಘನವಾದ ಚಿಳಿ ಛಿಟಿಲ್ | ಧ್ವನಿಯು ರಂಜಿಸಿತು || ||೧೮೧||
ವಾರ್ಧಕ
ತರಣಿ ಕುಲಜಾತಕೇಳ್ ಯಜ್ಞದೊಳ್ ತಿಲಸಮಿಧ
ಚರುಘೃತಗಳಾಹುತಿಯನುಂ ಬೀಳೆ ಧೂಮಮಂ
ಬರಕಡರಲಿತ್ತಲೀ ವಾರ್ತೆಯಂ ತಿಳಿದು ಬೇರೊಂದು ಠಾಣದಿ ದೈತ್ಯರು |
ನೆರೆದಭ್ರದೊಳು ಹವಿರ್ಭಾಗಮಂಗೊಂಬ ದಿವಿ
ಜರ ಬಾಯ್ಗಳಂ ಬಡಿದು ತುತ್ತುಗಳ ಬಾಚುತ
ಬ್ಬರಿಸಿ ತಿನ್ನಲು ಬೊಬ್ಬೆಯಾದುದು ಮುನಿಸ್ತೋಮವದು ಬೆದರಿತಾಕ್ಷಣದೊಳು || ||೧೮೨||
ಭಾಮಿನಿ
ಅಸುರರುಪಟಳವನ್ನು ತಾ ಸೈ
ರಿಸಲು ಬಲ್ಲರೆ ನಿಮ್ಮವರು ಸಾ
ಹಸದಿ ಕೂರ್ಗಣೆಗಳನು ಕಳುಹಿಸಿ ಚೋರವೃತ್ತಿಯಲಿ |
ಎಸೆದು ಹವಿರ್ಭಾಗಗಳ ತಿನ್ನುವ
ರಸುವನಂತಕಪುರಿಗೆ ಕಳುಹಲು
ಮಸಗಿದಂಬುಧಿಯಂತೆ ದೈತ್ಯ ಸುಬಾಹು ನಡೆತಂದಾ || ||೧೮೩||
ರಾಗ ಭೈರವಿ ಏಕತಾಳ
ಆರೆಲೊ ನೀ ಕೇಳು ಮನುಜಾ | ತಾ | ನಾರೆಂಬುದ ಬಲ್ಲೈ ತನುಜಾ |
ಚೋರನೆರುಹಿವನಕಿಂದೂ | ನಿನ | ಗಾರಟ್ಟಿದರೈ ಬಂದು || ||೧೮೪||
ದಾನವರೆಲ್ಲರ ಕೊಂದು | ಬಹು | ಮಾನದಿ ಮುನಿಗಳೊಳಿಂದು |
ನೀನಹೆ ಬಲು ಸುಪವಿತ್ರ | ನಾ | ಗೇನದು ನಿನ್ನ ವಿಚಿತ್ರ || ||೧೮೫||
ಒಂದೇ ಕ್ಷಣದಲಿ ನಿಮ್ಮಾ | ಕರೆ | ದಂದೀ ಮುನಿಗಳನೆಮ್ಮ |
ಮಂದಿರಕೊದು ತಿನ್ನುವೆವೂ | ಸುಖ | ದಿಂದ ರಾಜ್ಯವನಾಳುವೆವು || ||೧೮೬||
ಬಗುಳದಿರೆಲವೋ ದುರುಳಾ | ಕ್ಷಣ | ಕುಗಿವೆನು ನಿಮ್ಮಯ ಕರುಳಾ |
ತೆಗೆತೆಗೆ ತವ ವಿಕ್ರಮವಾ | ನೀ | ಜಗತಿಯನಾಳ್ವತಿಕ್ರಮವಾ || ||೧೮೭||
ಮೀರಿದು ಕರೆದಸುರರಿಗೇ | ಭೂ | ಭಾರವನಿಳುಹಿಸುವರೆಗೆ |
ಯಾರೆನ್ನಟ್ಟಿರಬೇಕೊ | ಖಳ | ಸಾರತ್ತಲು ಬಿಡು ಸಾಕೋ || ||೧೮೮||
ಎನೆ ಕೇಳ್ದಾಗಲೆ ಭರದಿ | ತಾ | ದನುಜನು ಕೋಪಿಸಿ ಧುರದೀ |
ವನಜದಳಾಕ್ಷನ ಕೂಡೇ | ಮ | ತ್ತನುವಾಗಿದು ನಲಿದಾಡೆ || ||೧೮೯||
ವಾರ್ಧಕ
ಭೋರ್ಗರೆದು ಮೆರೆವ ಭೈರವನಂತೆ ಜವನಂತೆ |
ಕೂರ್ಗಣೆಗಳಂ ಸುರಿದು ಧರಣಿಗಂ ತರಣಿಗಂ |
ಸಾರ್ಗಟ್ಟೆ ರಘುಜನಂ ತರುಬಿದಂ ತುರುಬಿದಂ ಖಾತಿಯಿಂದಂ ಸುಬಾಹು |
ಆರ್ಗುಂಟು ರಾಮನ ಪರಾಕ್ರಮಂ ವಿಕ್ರಮಂ |
ಸೇರ್ಗೊಡದೆ ಖಳನ ಶಸ್ತ್ರಾಳಿಯಂ ಪಾಳಿಯಂ |
ಮಾರ್ಗಣದೊಳವನ ಕೋದಂಡಮಂ ದಂಡಮಂ ಖಂಡಿಸಿದನಾಕ್ಷಣದೊಳು || ||೧೯೦||
ರಾಗ ಶಂಕರಾಭರಣ ಮಟ್ಟೆತಾಳ
ನೋಡಿ ದನುಜನು | ಮೋಡಿಯಿಂದಲೆ |
ಹೂಡಿ ಸುರಪದತ್ತದುರುಸ | ಗಾಢದಸ್ತ್ರವ || ||೧೯೧||
ಬಿಡಲು ರಾಘವ | ತಡೆಯದಾಕ್ಷಣ |
ಕಡುಗಿ ರೋಷದಿಂದಲದರ | ನಡುವೆ ತರಿದನು || ||೧೯೨||
ಬಳಿಕ ಕನಲುತಾ | ನಳಿನನಾಭನು |
ಖಳನ ತಲೆಯ ತರಿದು ಬಾಂ | ದಳದೊಳಿರಿಸಿದ || ||೧೯೩||
ಖೂಳಸೊರಗಲು | ಕೇಳಿ ತವಕದಿ |
ಕೀಳ ಮಾರೀಚನುರುಕ | ರಾಳ ರೂಪನು || ||೧೯೪||
ಬಂದು ರಘುಜನೋಳ್ | ಹೊಂದಿ ಯುದ್ಧವ |
ಕುಂದಿ ಮೊಗದ ಕಾಂತಿ ಬಳಿಕ | ಪಿಂದೆ ಸರಿದನು || ||೧೯೫||
ಭಾಮಿನಿ
ಕೃತಕದಲಿ ಮಾರೀಚನೆಂಬವ
ನತಿಶಯನು ಮೇಣಾತ ನೆನೆದನು
ಕ್ಷಿತಿಯೊಳೀ ರಘುಜನೊಳು ಯುದ್ಧವ ಗೈದು ಬದುಕುವರೆ |
ಅತುಳ ಬಲತನಗಿಲ್ಲ ಮಾಯದಿ
ಪ್ರತಿಭಟ ಭಯಂಕರನ ಗೆಲುವುದು
ಮತವೆನುತ ನಡೆತಂದ ಕಪಟದ್ವಿಜನ ರೂಪದೊಳು || ||೧೯೬||
ರಾಗ ರೇಗುಪ್ತಿ ತ್ರಿವುಡೆತಾಳ
ಜಯ ಜಯ ಜಯ ರಾಘವಾ | ದಯಾನಿಧೇ |
ಜಯ ಜಯ ಜಯ ರಾಘವಾ || ಪಲ್ಲವಿ ||
ಅಗಣಿತ ವಿಕ್ರಮ | ನನುಪಮ ಚಾರಿತ್ರ |
ಜಗತಿವಲ್ಲಭನೆ ಸಜ್ಜನ ರಕ್ಷಾಮಣಿಯೇ || ||೧೯೭||
ಮರೆಯ ಹೊಕ್ಕವರನ್ನು | ಮಮತೆಯಿಂದಲಿ ಕಾಯ್ವ |
ಬಿರುದು ನಿನ್ನದು ದೇವ | ಬಿಡದೆ ಎನ್ನನುಕಾಯೊ || ||೧೯೮||
ಕಂದ
ಎಂಬ ನಿಶಿಚರನ ಕಾಣುತ
ಲಂಬುಜನೇತ್ರನೊಳಾ ಕೌಶಿಕಮುನಿನಾಥಂ ||
ನಂಬಿದಿರಿವ ಭೂಸರನ
ಲ್ಲಿಂಬುಗೊಡದೆಸೆಯೆನುತ್ತಂ ತಾ ಬೊಬ್ಬಿರಿದಂ || ||೧೯೯||
Leave A Comment