ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳಿದೈ ಮುನಿತಿಲಕನೊಂದೂ |
ಪೇಳಿದುದು ಹದನಾಯ್ತು ಮೇಣವ |
ಖೂಳನಾಗಲಿ ವಿಪ್ರನಾಗಲಿ | ತಾಳದಿಂದು || ||೨೦೦||

ದೀನತನದಲಿ ಬೇಡಿಕೊಳ್ಳುವ |
ನೇನು ದೋಷವ ಗೈದುದಾದರು |
ಮಾನದಲಿ ಕಳುಹುವುದು ಮತವೈ | ಭಾನುಕುಲದಿ || ||೨೦೧||

ಇಳೆಯ ಪಾಲರ ನೀತಿ ಮೇಲೀ |
ಖಳನುಪದ್ರವ ಹೊಂದದಂದದಿ |
ಕಳುಹುವೆನು ಬೇರೊಂದು ಠಾವಿಂ | ಗಳುಕದಿವನ || ||೨೦೨||

ವಾರ್ಧಕ

ಅನಿಲಶರದಿಂದೆಚ್ಚ ಭರಕೆ ಮಾರೀಚ ಖಳ
ವನಧಿ ದಕ್ಷಿಣ ತೀರಕೈದಿ ಬಿದ್ದಿರಲತ್ತ
ಅನಿಮಿಷರ ನಿಲಿಸಿದಂ ಹವ್ಯಭೋಜನಕೆ ಸುಸ್ಥಿರಮಾಗಿ ಸಂತೋಷದಿ |
ಮುನಿಪನಧ್ವರವನೇವೇಳ್ವೆ ನಿರ್ವಿಘ್ನದಿಂ
ಘನತರದೊಳಂ ಸಾಂಗಮಾದುದೈ ಬಳಿಕ ಕೇಳ್
ತನುಜಾತಮವಭೃತ ಮಹೋತ್ಸವಂ ಸುಲಭಮಾಯ್ತಸುರಾರಿ ಕರುಣದಿಂದ || ||೨೦೩||

ಕಂದ

ಈ ಪರಿಯೊಳ್ ನೃಪತನುಜ |
ರ್ತಾಪಸವನದೊಳ್ ಕೌಶಿಕನೊಡಲಿರಲಿತ್ತಂ ||
ತಾಪರಿತೋಷದೊಳಿರೆ ಮಿಥಿ |
ಲಾಪುರದೊಳ್ ಜನಕ ನೃಪೋತ್ತಮನೆಸೆದಿರ್ದಂ || ||೨೦೪||

ರಾಗ ಮಧ್ಯಮಾವತಿ ತ್ರಿವುಡೆತಾಳ

ಒಂದುದಿನ ಮಿಥಿಲೇಶ ಹಯಮಖ |
ಕೆಂದು ನೆಲಶೋಧಿಸಲು ಕಾಣಿಸಿ |
ತಂದು ನವರತ್ನಗಳ ಖಚಿತದೊಳ್ |
ಬಂಧಿಸಿದ ಪೆಟ್ಟಿಗೆಯನು | ನಲವಿನಿಂದ || ||೨೦೫||

ನೋಡಿ ಮನದೊಳು ವಿಸ್ಮಯವಬಡು |
ತಾಡಿದನು ತಾನೇನ ಕಂಡೆನು |
ರೂಢಿಗದ್ಭುತವನ್ನು ಹರಹರ |
ಹಾಡಿನಧ್ವರವೆನುತಲೀ | ವಿನಯದಿಂದ || ||೨೦೬||

ತಿಳಿದು ನಾರದಮುನಿಪನಂಬರ |
ವಿಳಿದುತತ್ಪುರಕಾಗಿ ಜನಕನ |
ಬಳಿಗೆ ಬರುತಿರೆ ಕಂಡು ಭೂಪತಿ |
ಘಳಿಲನೈದಿದಿರ್ಗೊಂಡನು | ತೋಷದಿಂದ || ||೨೦೭||

ರಾಗ ಪೂರ್ವಿ ರೂಪಕತಾಳ

ನಾರದನೈತರೆ ನಾರಾಯಣೆನುತಲಿ |
ಧಾರುಣೀಪತಿ ಕಂಡು ಬಳಿಕ ||
ಭೂರಿಸಂತಸದಿಂದಲರ್ಘ್ಯಪಾದ್ಯದೊಳುಪ |
ಚಾರವ ಗೈದೆಂದನವಗೆ || ||೨೦೮||

ಏನಚ್ಚರಿಯವಿದು ಪೆಟ್ಟಿಗೆ ದೊರೆತಿರ್ಪು |
ದೇನು ಕಾರಣವೆನೆ ಮುನಿಪ ||
ತಾನೆಂದನೆಲೆರಾಯ ಕೇಳಿದದ್ಭುತವಲ್ಲ |
ಮಾನಿನಿಯಿಹಳೊರ್ವಳೊಲಿದು || ||೨೦೯||

ಆದಿಲಕ್ಷ್ಮೀದೇವಿ ಭೂಭಾರವಿಳುಹಲು |
ಮೇದಿನಿಯೊಳಗವತರಿಸಿ ||
ಮೋದದಿಂ ತವಜಾತೆಯಾಗಿರ್ಪಳಯ್ಯ ಭಾ |
ಗ್ಯೋದಯಕಿನ್ನೆಣೆಯುಂಟೆ || ||೨೧೦||

ಆ ಮಹಾಸತಿಗೆ ನೀ ಸೀತೆಯೆಂದೆನುತಲಿ |
ನಾಮವನಿಟ್ಟು ರಕ್ಷಿಪುದು ||
ಭೂಮಿಯೊಳ್ ಪಾವನನಹೆಯೆಂದು ಸಂತೈಸು |
ತಾ ಮುನಿ ನಡೆದಾ ಹಂಸೆಯಲಿ || ||೨೧೧||

ವಾರ್ಧಕ

ಜನಪ ಕೇಳಾ ಮಂದಸಂ ತೆಗಸಿ ನೋಡಿದಡೆ
ಮಿನುಗುತಿಹ ಕಾಂಚನಾಭರಣ ವರಚಂದಿರಾ
ನನದ ಕಸ್ತುರಿ ತಿಲಕ ಫಣಿವೇಣಿ ಭೃಂಗ ಕುಂತಳೆ ಚಾರುಹರಿಣನೇತ್ರೆ |
ವಿನುತಲಲಿತಾಂಗ ಪೀತಾಂಬರಾಲಂಕಾರ
ದಿನಪ ಶತಕೋಟಿ ಲಾವಣ್ಯದಿಂ ಶೋಭಿಸುವ
ಘನ ವಿಚಿತ್ರದ ಬಾಲೆಯೆಸೆವುತಿರೆ ತಂದಿರಿಸಿಕೊಂಡುಪಾಲನೆಗೈದನು || ||೨೧೨||

ರಾಗ ಸೌರಾಷ್ಟ್ರ ಆದಿತಾಳ

ಬಾಲಕರಿರ ಕೇಳಿ ಮಿಥಿಳೇಂದ್ರ ಭೂಪ ತಾ |
ನಾರಿಯತಂದು ಸಂತಸದೀ ||

ಬಾಲಕಿಯನು ತಂದು ಸ್ವೀಕಾರವನು ಗೈದು |
ಮೇಲೆ ರಕ್ಷಿಸಿದನನವರತ || ||೨೧೩||

ವರಪುರೋಹಿತನಾದ ಶತಾನಂದ ಮುನಿಪನ |
ಕರೆಸಿದು ಜಾತಕರ್ಮವನು ||
ವಿರಚಿಸಿಗೀರ್ವಾಣ ಮುನಿನಾಥಪೇಳಿದ |
ತೆರದಿ ಸೀತಾಂಗನೆಯೆನುತ || ||೨೧೪||

ಪೆಸರಿಟ್ಟು ಮೋಹದೊಳ್ ಕರೆದು ಮುದ್ದಿಸುತಲೆ |
ಎಸೆವ ಬಾಲ್ತೊಡಿಗುಡಿಗೆಗಳ ||
ಕುಸುಮದಳಾಕ್ಷಿಗೆ ಶೃಂಗರಿಸಲು (ಚೆಲ್ವ) |
ಮಿಸುನಿ ಬೊಂಬೆಯ ವೋಲುನಲಿಯೆ || ||೨೧೫||

ವಾರ್ಧಕ

ಇರಲೊಂದು ದಿವಸದೋಳ್ ಸಂಚಾರಕೋಸುಗಂ
ಪರಶುರಾಮಂ ಭೂಮಿಪಾಲಕನ ಮಂದಿರಕೆ
ಬರಲವಂಗುಪಚರಿಸಲಾಗನುಷ್ಠಾನಮಂ ಗೈವ ಭರದಿಂದಲೆದ್ದು |
ಪರಮಸಾಹಸಿಪೋಗಿ ಬಹುದನ್ನೆಗಾಕ್ಷಿತಿಪ
ವರಮನೆಯೊಳೀರ್ದ ತ್ರಿಪುರಾರಿಕೋದಂಡಮಂ
ತರಳೆ ತಾನೆತ್ತಿಕೊಂಡಶ್ವಮಂ ಮಾಡಿಕುಣಿದಾಡಿದಳ್ ಸಖಿಗಳೊಡನೇ || ||೨೧೬||

ರಾಗ ಮಧ್ಯಮಾವತಿ ಏಕತಾಳ

ಆಡಿದಳು | ಸೀತೇ | ಆಡಿದಳು ||
ಪಾಡಿಸಿ ಬಿಲ್ಗುದುರೆಯೇರಿ |
ನೋಡಿ ಜನರ ನಗುತಲಾಗ || ಆಡಿದಳು ||
ಶಿವನ ಬಿಲ್ಲೆಂದರಿಯದೆ ತ | ದ್ಭವನದಿಂದಲೆತ್ತಿಕೊಂಡು |
ತವಕದಿಂದ ಬರಿಯೊಳಿಟ್ಟು | ಹವಣಿಸಿ ಮತ್ತೆ ||
ಕುವರಿಯರ ಸಂಗಡವೆ ಕೂಡಿ |
ನವನೂತನದ ಸ್ವರಗಳಿಂದ |
ದಿವಿಜರ್ನೋಡಿ ನಗುವತೆರದಿ |
ಕುವಲಯಾಕ್ಷಿ ಸಂತಸದಿಂದ || ಆಡಿದಳು || ||೨೧೭||

ಒದಗಿನಿಂದೈತರುವ ಭಾರ್ಗವ | ನಿದ ಕಂಡು ವಿಸ್ಮಿತನಾಗಿ |
ಮದನವೈರಿಯ ಧನುವು ಬಾಲಕಿ | ಗೊದಗಿತಿನ್ನೆಂತೋ ||
ಸುದತಿಯಲ್ಲಿವಳ್ ಸಾಕ್ಷಾತ್ ಗೋಮಿನಿ |
ವಧುವೆಂದರಿತು ತನ್ನ ಮನದಿ |
ಮುದವಗೊಂಡು ಭೂಮಿಪನೆಡೆಗೆ |
ಚದುರತಾನೈತಂದನತ್ತಾ || ಆಡಿದಳು || ||೨೧೮||

ವಾರ್ಧಕ

ಕಾಣೆನೆಲೆ ನೃಪತಿ ನಿನ್ನಂಥ ಸೌಭಾಗ್ಯರಂ
ಜಾಣನಹೆ ಕೇಳು ತವ ತನುಜೆಯಾಡಿಸುವ ಸು
ತ್ರಾಣದ ಶರಾಸನವ ಜೋಕೆಯಿಂದಿರಿಸಿ ಸ್ವಯಂವರವ ರಚಿಸು ಬಳಿಕಾ |
ಕೇಣವಿಲ್ಲದೆ ದಿಟ್ಟನಾರಿದಂ ಪಿಡಿದೆತ್ತಿ
ಬಾಣಂಗಳಂ ಹೂಡಿ ಎಸೆವನಾತನೆ ಜಗ
ತ್ರಾಣನಾಯಕನವಂಗೀ ಕುವರಿಯಂ ಕೊಡಿಸು ಧನ್ಯನಹೆ ನೀನೆಂದನು || ||೨೧೯||

ಭಾಮಿನಿ

ಇಂತುಪೇಳಿದು ಜಾಮದಗ್ನಿಯು
ಸಂತಸದಿ ತಾಗಮಿಸಲಿತ್ತಲು
ದಂತಿಗಾಮಿನಿಯಳ ಸ್ವಯಂವರವೆಸಗಬೇಕೆನುತ |
ಅಂತವಿಲ್ಲದ ಸಂನಹಂಗಳ
ನಂತರಿಸಿ ದೇಶಾಧಿಪತಿಗಳ
ತಿಂಥಿಣಿಯನೆರಹಿಸಿದು ಪುರಶೃಂಗರಿಸಲಾಕ್ಷಣದಿ || ||೨೨೦||

ಕಂದ

ಅನಿತರ ಮೇಲಾ ಭೂಪಂ
ಘನ ಋಷಿ ಸಂದೋಹವ ಕೂಡಿಸುತಾ ಬಳಿಕಂ |
ಮುನಿಕುಶಿಕಾತ್ಮಜನೆಡೆಗಂ
ವಿನಯದಿ ಚರನಂ ಕಳುಪಲು ಬಂದಿಂತೆಂದಂ || ||೨೨೧||

ರಾಗ ಮಾರವಿ ಏಕತಾಳ

ಸಲಾಮು ಮಾಡ್ತೆನೆಲೆ ಮುನಿಯಪ್ಪನೆ | ವಿಲಾಸದಿಂದ ಬೇಗ ಬಲ್ |
ಕಲಾಪಿ ಕೌಶಿಕನೆಂಬ ನೀನಹುದಲಾ ಪೇಳೆನಗೀಗ || ಸಲಾಮು ||
ಸಡಗರದೋಲ್ ನಮ್ದೊರೆ ಜನಕಪ್ಪನು |
ಹುಡುಗಿಯ ಮದುವೆಗೆಂದೆನುತಾ | ತಾ
ಕೊಡಕ್ಯಾ ಸಿಂದಿಗೆ ಕೂಡಿಸಿ ಧಾರೇನ್ |
ಕಡುಗಲಿರಾಯ | ತಡೆಯಾದೆ ವಾದ್ಯಗಳ್ | ಬೆಳತನಕಾಗಿ |
ನಡೆಯದ್ದೇಳೈ ಯೀಕ್ಷಣ ಸುಮ್ಮನೆ |
ಬಿಡುವವನಲ್ಲೈ ಬಂದವನೀತಾ || ಸಲಾಮು || ||೨೨೨||

ಯೇಟಾದರು ನೀವು ಕಾಡಿನೊಳಿರ್ಸೊಗ |
ಸಾಟಿದ ಬಗೆಯೇನ ಬಲ್ಲಿರಿ | ಬಲ್ |
ಮೀಟಾಗಿಹುದೈ ಮಿಥಿಳಾನಗರದ | ತಾಟನೆ ಕಾಣುವರಿ |
ಪೋಟೇ ನೀಡಿದ ವೋಲೆಯ ನೋಡಿಸಿ | ಧಾಟಿವಂ ಮಾಡೆಮಗೆ |
ಬಿಡಧೂಟವ ಮಾಡ್ಮ್ಯಾನ್ ಬೆರ್ರನೆನಾಂ
ಸಂಗಾಟಲೆ ಪೋಗುವ ಬಾ ಬೇಗಾ || ||೨೨೩||

ವಾರ್ಧಕ

ಚಾರಕಂ ತನಗತ್ತ ವೈವಾಹ ಪತ್ರಿಕೆಯ
ಚಾರುಮುನಿಯೋದಿ ಭೂಜಾತೆಸ್ವಯಂವರ
ಕ್ಕಾರಣಿಸಿ ಬಹುದೆಂದು ಬರೆದಿರ್ದ ಪರಿಕರಂ ತಿಳಿದು ತನ್ನಂ ಕರದೊಳೂ |
ನಾರಿ ಸೀತೆಯನು ರಘುಜಾತಂಗೆ ಪರಿಣಯಂ
ಧಾರುಣೀಶ್ವರರ ಮುಂದೆಸಗಬೇಕೆಂಬ ನಿ
ರ್ಧಾರಮಂ ಗೈದು ಸುಮುಹೂರ್ತದೊಳ್ ಪೊರಟನಾ ನೃಪಸುತರ ಕೂಡಿಕೊಂಡು || ||೨೨೪||

ರಾಗ ಮಾರವಿ ಏಕತಾಳ

ಬಳಿಕಲ್ಲಿಂದಲಿ | ಘಳಿಲನೆ ಪೊರಟಾ |
ಕುಳಮುನಿ ತಾನಾ | ಗಳೆ ಸುರನದಿಯಂ |
ಕಳೆದರೆ ಬೇಗದಿ | ನಳಿನಸಖಾನ್ವಯ |
ದೊಳು ಜನಿಸಿರ್ದರು | ಗಳು ಸಹಿತಾಗೀ || ಬಂದರಂದು || ||೨೨೫||

ಕಂಡರು ಪಥದೊಳು | ದ್ದಂಡದ ಸುಮತಿಯ |
ಖಂಡ ಪುರಾಂತರ | ಗೊಂಡಿದಿರ್ಬರಲು ಪ್ರ |
ಚಂಡನಶ್ವಂಜಯ | ಮಂಡಲಾಧಿಪನಿದಿ
ರ್ಗೊಂಡನು ವರದೋ | ರ್ದಂಡ ವಿಕ್ರಮರಾ || ಏನನೆಂಬೇ || ||೨೨೬||

ಮುನಿಪತಿ ಬಳಿಕಾ | ವನಜದಳಾಕ್ಷನೋ |
ಳಿನಿತೀಪುರಕವ | ಜನಕನ ದಾಯಾದ್ಯ |
ನೃಪನಶ್ವಂಜಯ | ನಿನಗೆ ಸಂಬಂಧಿಗ |
ನೆನುತರುಹಿದನಾ | ಗನುನಯದಿಂದಾ || ಏನನೆಂಬೆ | ||೨೨೭||

ಕಡೆಗಾ ಭೂಪನು | ಬಿಡದಲೆ ಮನ್ನಿಸಿ |
ಕಡುತವಕದಿ ಜಗ | ದೊಡೆಯನ ಕಳುಹಿಸಿ |
ಕೊಡಲಾಗಳು ಪಥ | ವಿಡಿದೈ ತರುತಿರೆ |
ಪೊಡವಿಯೊಳದ್ಭುತ | ಕಡರಿದ ವನಕೇ || ಬಂದರಂದು || ||೨೨೮||

ವಾರ್ಧಕ

ಕೋಕನಂಗಳನಾಡದಿರ್ಪ ಪುಷ್ಕರದೋಲ್ದಿ
ವಾಕರ ಹಿಮಾಂಶುಗಳ್ ಮೂಡದಂಬರದೋಲು
ಮಾಕರದೊಳಿಲ್ಲನಿರ್ದಾಗಾರದೋಳ್ ಗೌತಮಾಶ್ರಮಂ ಕಂಗೊಳಿಸಲು |
ಈ ಕುತೂಹಲವದೇನೆಂದು ಹರಿ ಬೆಸಗೊಂಡ
ರಾ ಕುಶಿಕನಂದನಂ ಸಂತಸದಿ ನುಡಿದನೆಲೆ
ಕಾಕುತ್ಸ್ಥಕೇಳ್ ಗೌತಮನ ಸತಿಗೆ ಸುರಪನಳುಪಿದರೆ ಮುನಿ ಶಪಿಸಿರ್ದನು || ||೨೨೯||

ನಡನಡುಗುತ್ತಾ ಜಗತ್ಪಾವನೆಯು ಖೇದದಿಂ
ದೆಡೆ ಬಿಡದೆ ಬಳಿಕಾ ಮುನೀಶ್ವರನ ಚರಣಮಂ
ಪಿಡಿದೆಂದಳೆಲೆ ಪ್ರಾಣನಾಥನಾ ನಿರಪರಾಧಿಯು ಸಲಹವೇಳ್ವುದೆನುತ |
ಜಡಿವ ಕಂಬನಿಯಿಂದ ಬೇಡಿಕೊಳಲಿವಳಿಂಗೆ
ಕಡುಕರುಣದಿಂದ ಶಾಂತತ್ವಮಂ ತಾಳ್ದು ಮುನಿ
ನುಡಿದನೈ ಮುಂದೆ ಕಾಲಾಂತರದಿ ರಾಮನಿಂದುದ್ಧಾರಮಾಗಲೆಂದು || ||೨೩೦||

ಆಗಲೆ ವಿಶಾಪಮಂಗೊಂಡು ವನಜಾಕ್ಷಿ ಶಿಲೆ
ಯಾಗಿ ಬಿದ್ದಿಹಳಿಲ್ಲಿ ಕೇಳಿದೈಯೆಲೆ ಕೃಪಾ
ಸಾಗರನೆ ನಿನ್ನ ಪದದರುಶನವನಿತ್ತಿವಳನುದ್ಧರಿಸುದೆನುತಿಲ್ಲಿಗೆ |
ಸಾಗಿ ಬರುಬರುತಲಾ ಪಾಷಾಣದಲ್ಲಿ ಭವ
ರೋಗ ಭೇಷಜನ ಪರಮಾಂಘ್ರಿರಜಮಂ ಸೋಂಕ
ಲಾಗಿ ಶಿಲೆಯೊಡೆದು ಸಲ್ಲಲಿತಾಂಗಿ ಬಂದು ಪದದೊಳ್ ಮಣಿದಳಾ ರಘುಜನ || ||೨೩೧||

ರಾಗ ದೇಶಿ ಸಾವೇರಿ ಏಕತಾಳ

ಜಯ ಜಯ ಜಯ ರಾಘವ | ಜಗನ್ಮಯ ವಿಶ್ವರೂಪ ಭವ |
ಭಯನಾಶನಘಹರ || ಪ ||

ಬಹುದೀನಳಾಗಿಯರಣ್ಯದಿ ಬಿ | ದ್ದಿಹೆ ತಾನು ನೀಯೆನ್ನ ಪುಣ್ಯದಿ |
ಕ್ಷಯರಹಿತನಿಲ್ಲಿಗೆ ಬಂದು | ಮಹಿಳೆಗುದ್ಧರಿಸಿದೆ || ಜಯ ಜಯ || ||೨೩೨||
ಸ್ಮರಣೆಯಿಂದಲಿ ಜನ್ಮ ಜನ್ಮದ ಪಾಪ | ತರಿದೋಗುವದು ನಿದ್ದೆ ತನ್ಮಯಳಾಗಿ |
ಸ್ಮರಿಸದಿದ್ದವಳಿಂಗೆ ದೊರಕಿದುದಾಶ್ಚರ‍್ಯ | ಜಯ ಜಯ || ||೨೩೩||

ಭಾಮಿನಿ

ಇನಿತು ವಂದಿಸಿ ಚರಣಕೆರಗಿದ
ಮುನಿಸತಿಯಹಲ್ಯೆಯನು ಕಾಣುತ
ವನಜದಳಲೋಚನನು ತಾ ಮಿಗೆ ತೆಗೆದು ಮನ್ನಿಸಲು |
ಅನಕ ಗೌತಮನೆಂಬ ವೃತಿಪನು
ಇನಕುಲೇಶರ ಬಳಿಗೆ ಬರಲಾ
ತನಿಗೆ ತಕ್ಕವಿಸುತ್ತಲಾ ಬಳಿಕಿತ್ತನಾ ಸತಿಯ || ||೨೩೪||

ವಾರ್ಧಕ

ಮುನಿಪತಿಯ ನೋಡಿ ಸಂತಸಗೊಂಡು ನುಡಿದನೆಲೆ
ವನಜಲೋಚನ ನಿನ್ನ ಮಹಿಮೆಗವಧಿಯ ಕಾಣೆ
ಮನುಜ ರೂಪವ ತಾಳ್ದು ಬಂದುದಕೆ ತಾ ಪೇಳ್ವೆ ಶಿಲೆಯನುಂ ಉದ್ಧರಿಸಿದು |
ವನಿತೆಯಂಗೈದುಮೆನಗಿತ್ತ ಕಾರಣದಿಂದ
ನಿನಗೆ ಕಲ್ಯಾಣಮಾಗಲಿ ಮುಂದಿದೇ ಪರಿಯೊ
ಳೆನುತ ನಲಿದಾಡಿ ಪರಸಿದು ತನ್ನ ಸತಿಯಳಂ ಕೊಂಡೈದಿದಂ ತೋಷದಿ || ||೨೩೫||

ರಾಗ ಕಾಂಭೋಜಿ ಝಂಪೆತಾಳ

ಕುಶನೆ ಕೇಳಾ ಮೇಲೆ | ನೃಪಸುತರನೊಡಗೊಂಡು |
ಕುಶಿಕಸುತ ಮುಂದೈತರಲ್ಕೆ ||
ಕುಶಲದಿಂದೆಸೆವ ಮಿಥಿ | ಲಾಪುರದ ಕಲಶಗಳು |
ಶಶಿ ಸೂರ‍್ಯರಂತೆ ತೋರಿದವು || ||೨೩೬||

ಇದಕೊ ದೂರಿಲ್ಲ ರಾ | ಘವ ನೋಡು ನಿಮಿಕುಲದ |
ಚದುರನೃಪನೂರು ಕಾಣುತಿದೆ ||
ಒದಗಿಸಿಯೆ ಪೋಪುದೆನೆ | ಅಗಣಿತ ಗುಣಾನ್ವಿತರು |
ಮುದದಿ ನಗರವ ಹೊಕ್ಕರಂದು || ||೨೩೭||

ಮುನಿಪತಿಯ ಬರವಾಯಿ | ತೆಂದು ಕೇಳ್ದಾ ಕ್ಷಣದಿ |
ಜನಕನೃಪನಿದಿರ್ಗೊಂಡು ಬಳಿಕ ||
ಇನಕುಲೇಶರ ಸಹಿತ | ಪಡಿಬಿಡಾರದೊಳಿಳುಹಿ |
ವಿನಯದಿಂ ಮನ್ನಿಸಿದನಾಗ || ||೨೩೮||

ಭಾಮಿನಿ

ಮೇಲೆ ಪುರವನು ಶೃಂಗರಿಸಿದು ವಿ
ಶಾಲ ಗುಡಿತೋರಣವಗಟ್ಟಿಸಿ
ಮೂಲಮಂತ್ರಿ ಸುಧಾಮನಿಂದುದ್ವಾಹಪರಿಕರದ |
ಜಾಲವನು ನೆರಹಿಸುತ ಸಕಲನು
ಕೂಲತೆಯ ಗೈದೊಡನೆ ತಾ ಭೂ
ಪಾಲ ನಿಚಯವ ಬೇರೆ ಬೇರಿಳುಹಿಸಿದು ಮನ್ನಿಸಿದ || ||೨೩೯||

ರಾಗ ಕೇದಾರಗೌಳ ಅಷ್ಟತಾಳ

ಆಮೇಲುದ್ವಾಹ ಮಂಟಪ ಕಾಣಾ ರಂಜಿಸಿ |
ಗೋಮೇಧಿಕಗಳೆಂದು ||
ನೇಮಿಸಿ ನೆಲಗಟ್ಟುಕಟ್ಟಿ ವೈಡೂರ‍್ಯದಿಂ |
ದಾ ಮಹಕಂಭವಿಟ್ಟು || ||೨೪೦||

ಪಚ್ಚೆಯ ತೊಲೆಗಳು ವಜ್ರದ ಮಾಳಿಗೆ |
ಸ್ವಚ್ಛನೀಲದ ಲೋವೆಯಾ ||
ಹೆಚ್ಚಿನ ಮುತ್ತು ಮಾಣಿಕಗಳ ಝಲ್ಲಿಯಾ |
ಮುಚ್ಚಿದ ಕುಂದಣವ || ||೨೪೧||

ಪವಳದ ಹೊಸ್ತಿಲು ಪುಷ್ಯರಾಗದ ಗೋಡೆ |
ಪವಣಿಸಿದನುಪಮದ ||
ನವರತ್ನ ಖಚಿತದ ಕಲಶಗಳೆಸೆದವು |
ರವಿಕೋಟಿ ತೇಜದಿಂದ || ||೨೪೨||

ವಾರ್ಧಕ

ಇಳಿದುದೊಲ್ ದಿವಿಜೇಂದ್ರನಾಲಯದ ಭಾಗ್ಯಮೀ
ಸ್ಥಳಕೆ ವೈವಾಹ ಮಂಟಪದ ರೂಪಂಗೊಂಡು
ತಿಳಿಯದೆನಲೀಪರಿಯ ರಂಜಿಸಿತು ವಿವಿಧ ರಚನಾ ಚಮತ್ಕಾರದಿಂದ |
ಬಳಿಕ ನಗರಂ ಗುಡಿಯ ಪಲ್ಲವದ ಝಲ್ಲರಿಯ
ಬಿಳುಗೊಡೆಗಳುಂ ಪತಾಕೆಗಳ ನಾನಾ ವಿಧದ
ಕಲಶ ಮುತ್ತಿನ ಸೂಸಕದ ಸೀಗುರ್ತಗಳಿಂದ ಸುರಪುರಕೆ ಮಿಗಿಲೆನಿಸಿತು || ||೨೪೩||

ರಾಗ ಭೈರವಿ ಝಂಪೆತಾಳ

ರಾಜ ಕುವರರು ಕೇಳಿ | ಮೂಜಗದಿ ಪೊಸತೆನಲು |
ರಾಜಶೇಖರನದನು | ರಾಜಸಭೆಗಂದು || ||೨೪೪||

ತರಿಸೆನುತಲನುಜಂಗೆ | ಕರೆದು ಪೇಳಲು ಪೋಗಿ |
ಭರದಿ ಸಾವಿರದನೂ | ರ್ಕರಿ ಘಟಿಗಳಿಂದ || ||೨೪೫||

ಎಳೆತಂದು ರಾಜಸಭೆ | ಗಿಳುಹಲಾಕ್ಷಣದಲ್ಲಿ |
ತಳೆದು ಶೈವಾಗಮಂ | ಗಳಲಿ ಪೂಜಿಸಲು || ||೨೪೬||

ವಾರ್ಧಕ

ಅಂಗಜ ಸುರೂಪ ಕೇಳಿತ್ತಲುವಿದೇಹನೃಪ
ಡಂಗುರಂ ಪೊಸಿದಂ ನೆರದಖಿಳ ಪಾರ್ಥಿವರ
ಶೃಂಗ ಸಂದೋಹದೊಳ್ ವೈದೇಹಿಯಂ ವರಿಸುವಡೆ ಮಹೇಶನ ಚಾಪವ |
ಹಿಂಗದೇರಿಸಿ ಗೆಲುವೆನೆಂಬ ಸಾಹಸಮುಳ್ಳ
ತುಂಗ ಭುಜಬಲರು ನಡೆತನ್ನಿರೆಂದೆನೆ ಬಿಡಾ
ರಂಗಳೊಳ್ ಸೂರ‍್ಯಾಸ್ತ ಸಮಯಾಂತರದೊಳೆಲ್ಲರುಂ ಕೇಳ್ವ ತೆರದಿಂದಲಿ || ||೨೪೭||

ಭಾಮಿನಿ

ಮರುದಿವಸ ಬೆಳಗಿನಲಿ ಜನಪನು
ಕರೆಸಿ ಸರ್ವರಸಭೆಗೆ ತಾನುಪ
ಚರಿಸಿ ತಾಂಬೂಲಾದಿಗಳನಿತ್ತವರ ಮನ್ನಿಸುತಾ |
ವರಕುಶಧ್ವಜನೊಡನೆ ಸಭೆಗಾ
ತರಳಲೋಚನೆಯನ್ನು ತಾರೆನೆ
ಭರದಿ ತಾನೈತಂದು ಕಂಡನು ದಿವಿಜವಂದಿತೆಯಾ || ||೨೪೮||