ರಾಗ ಮಧ್ಯಮಾವತಿ ಏಕತಾಳ

ಧರಣಿಪಾಲಕನಂದು | ಗುರುವಸಿಷ್ಠರ ಕರಸಿ |
ತರಳರ್ಗೆ ಗುಣನಾಮ | ಕರಣಂಗಳನು ಗೈದ || ||೧೧೪||

ಸುರನರೋರಗ ನುತಗೆ | ಕರೆದು ರಾಮಾಖ್ಯದೊಳು |
ಕಿರಿಯಾತ್ಮಭವಗಿಟ್ಟ | ಭರತಾಭಿಧಾನ || ||೧೧೫||

ಕಡೆಗೆ ಪುಟ್ಟಿದವರ್ಗೆ | ದೃಢದಿ ಲಕ್ಷ್ಮಣ ಶತ್ರುಘ್ನ |
ಕಡುದಿಟ್ಟರಿವರೆಂದು | ಪೊಡವೀಶ ನುಡಿದ || ||೧೧೬||

ವಾರ್ಧಕ

ಪೊಡೆಯೊಳಗೆ ಬ್ರಹ್ಮಾಂಡ ಕೋಟಿಗಳನನುದಿನದೊ
ಳಡಗಿಸುವ ಮಹಿಮಂಗೆ ಧರಣಿಪನ ಮಂದಿರದೊ
ಳಡಕದಿಂದಿರವಾಯ್ತು ಪಯನಿಧಿಯನುಳಿದು (ದಶರಥ) ನೃಪನ (ಭಾಗ್ಯವೆಂಬೆ) |
ಮಡದಿಯಳ ಮೊಲೆವಾಲು ಸವಿಯಾಯ್ತು (ವನಿತೆಯರ)
ಜೋಗುಳುವೆ ಹಸನಾಯ್ತು ಶ್ರುತಿವೇದ್ಯ (ಗೀಪರಿಯೊಳಾನೃಪಾಲಯದೊಳಂದು) || ||೧೧೭||

ಕಂದ

ಇಂತಾಶ್ರುತಿಸ್ಮೃತಿಗೋಚರ
ನಂ ತಮ್ಮಯ ಮನೆಯೊಳ್ ನೃಪನರ್ಧಾಂಗಿಯರುಂ |
ಸಂತಸದಿಂದಂ ಕನಕದೊ
ಳಂತರಿಸಿದ ತೊಟ್ಟಿಲೊಳಿಟ್ಟಾಡಿದರಾಗಳ್ || ||೧೧೮||

ರಾಗ ಜೋಗುಳ ಅಷ್ಟತಾಳ

ಜೋ ಜೋ ರಘುಕುಲದೀಪ ಕಲಾಪ ||
ಜೋ ಜೋ ಪರಬ್ರಹ್ಮರೂಪ ನಿರ್ಲೇಪ |
ಜೋ ಜೋ ರವಿಕೋಟಿತೇಜ ವಿರಾಜ |
ಜೊ ಜೋ ಶ್ರೀರಾಮರಾಜಾಧಿರಾಜ || ಜೋ ಜೋ || ||೧೧೯||

ತ್ರುವಿತ್ರುವಿ ಇಕ್ಷ್ವಾಕು ವಂಶೋದ್ಧಾರ |
ತ್ರುವಿತ್ರುವಿ ಪರತರ ಕಂಬುಶರೀರ |
ತ್ರುವಿತ್ರುವಿ ನಿರುಪಮ ಸದ್ಗುಣಚರಿತ |
ತ್ರುವಿತ್ರುವಿ ಭರತಾಖ್ಯಪಾವನ ಚರಿತ || ಜೋ ಜೋ || ||೧೨೦||

ಜೋ ಜೋ ಮನುಸಂತತಿ ಪರಿಪಾಲ |
ಜೋ ಜೋ ಶೇಷಾವತಾರ ಸುಶೀಲ |
ಜೋ ಜೋ ದೈತ್ಯ ಕುಲಾಂತಕನನುಜ |
ಜೋ ಜೋ ಲಕ್ಷ್ಮಣ ದಶರಥತನುಜ || ಜೋ ಜೋ || ||೧೨೧||

ತ್ರುವಿತ್ರುವಿ ಇನ ಪರಂಪರೆಯ ವಿಶೇಷ |
ತ್ರುವಿತ್ರುವಿ ನವರತ್ನ ಖಚಿತ ವಿಭೂಷ |
ತ್ರುವಿತ್ರುವಿ ಶತಧಾರಾಂಶುಸಂಪೂರ್ಣ |
ತ್ರುವಿತ್ರುವಿ ಶತ್ರುಘ್ನ ಸುಖದ ಸಂಪೂರ್ಣ || ಜೋ ಜೋ || ||೧೨೨||

ಭಾಮಿನಿ

ಕುಶಲವರು ಕೇಳಿಂತು ಬಿದಿಗೆಯ
ಶಶಿಯ ದಿನದಿನವೇರಿ ಕಲೆಗಳ
ವಶಗೊಳುವ ತೆರನಂತೆ ಬಾಲರು ನೆರೆದರಾ ಬಳಿಕ |
ಕುಶಲದಲಿ ಚವಲೋಪನಯನವ
ದಶರಥ ನೃಪೋತ್ತಮನು ಗೈಸಿದ
ದಶವರುಷದಾದಿಯೊಳು ಕಲಿಸಿದ ಸಕಲ ವಿದ್ಯೆಗಳ || ||೧೨೩||

ರಾಗ ತೋಡಿ ಆದಿತಾಳ

ನೋಡುವೆ ಮಕ್ಕಳಿರಾ | ನೀವಿಂ | ದಾಡುವ ವಿದ್ಯೆಗಳ ||
ಕಾಡಿನೊಳಗೆ ವೊಬ್ಬೊಬ್ಬರೆ | ಮಾಡದಿರಿ ಬೇಟೆಗಳ || ನೋಡುವೆ || ಪ ||

ರಾಮ ಬಾರೊಯೆನ್ನ | ಮುದ್ದು | ರಾಮ ಮನವಿಶ್ರಾಮ ||
ಕೋಮಲಾಂಗ ಸೂರ‍್ಯಾನ್ವಯ ಲ | ಲಾಮ ಸದ್ಗುಣಧಾಮ || ನೋಡುವೆ || ||೧೨೪||

ಎನ್ನ ಮುಂದೆ ನಿಲ್ಲು ನೀ ಮೋ | ಹನ್ನ ಬಂದು ಭರತಾ |
ಮನ್ನಿಸೆಲ್ಲ ಕಲಿತ ವಿದ್ಯೆ | ಯನ್ನು ತೋರನವರತ || ನೋಡುವೆ || ||೧೨೫||

ನಿಲ್ಲು ಜಾಣುಗದಿರು ಲಕ್ಷ್ಮಣನೆ | ಎಲ್ಲಿಯು ತಾ ಕಾಣೆ ||
ಮೆಲ್ಲನೆ ಹತ್ತಿರ ಬಾರೊ ಪೋಪುದು | ಬಲ್ಲೆ ನಿನ್ನಾಣೆ || ನೋಡುವೆ || ||೧೨೬||

ಮಗುವೆ ಬಾರೈ ಶತ್ರುಘ್ನ ನೀ | ನಗುತಲೆನ್ನ ಮುಂದೇ ||
ಸೊಗಸುದೋರಿ ನಲಿಯೋ ಬೇಗ | ಬಗೆಯನೋಳ್ಪೇ ನಿಂದೆ || ನೋಡುವೆ || ||೧೨೭||

ವಾರ್ಧಕ

ವಸುಧಾಸುತಾತ್ಮಜನೆ ಲಾಲಿಸೈ ಬಳಿಕಿತ್ತ
ಲೆಸೆವ ಸಿದ್ಧಾಶ್ರಮದೊಳಮಿತ ಮುನಿ ವೃಂದದಿಂ
ಕುಶಿಕಸುತನಿರಲು ಮಾರೀಚಾಖ್ಯ ಕಲಿ ಸುಬಾಹುಗಳೆಂಬರತ್ಯಧಿಕದ |
ಪೆಸರುಳ್ಳ ದೈತ್ಯರುಂ ತಾಪಸ ಕುಲೋತ್ತಮರ್
ಎಸಗುವಧ್ವರಕೆ ಕಂಟಕರಾಗೆ ಚಿಂತಿಸುತ
ಅಸಮ ಮುನಿ ಕೌಶಿಕಂ ಪೋಗಿ ಕಮಲಜನೊಡನೆ ದೂರಲ್ಕವಂ ಪೇಳ್ದನು || ||೧೨೮||

ಮುನಿಪ ಕೇಳಿದರಾಕೆ ಭಯಗೊಂಡು ಬಂದಿರ್ಪೆ
ವನಜಾಕ್ಷ ದಶರಥನ ಸುತನಾಗಿ ಜನಿಸಿಹಂ
ಘನ ಬೇಗದಿಂದೈದು ನಿರುಪಮನ ಕೊಂಡುಪೋಗೆಂದು ವಾಣೀಶ ನುಡಿಯೆ |
ತನುಪುಳಕದಿಂದ ವಿಶ್ವಾಮಿತ್ರ ಧರೆಗಿಳಿದು
ಮುನಿವಶಿಷ್ಠರನರಸಿ ಬಂದು ಘೋರಾರಣ್ಯ
ದನುಪಮೋದ್ಯಾನ ಸಹಿತೆಲ್ಲ ಕಳೆಕಳೆದಯೋಧ್ಯಾಪುರಕೆ ನಡೆತಂದನು || ||೧೨೯||

ಕಂದ

ಮುನಿತಾ ಬಂದಿಹನೆಂಬೀ
ಘನವಾರ್ತೆಯ ಚರರೈತಂದರುಹಲ್ಕಾಗಂ |
ವಿನಯದಿ ಸಭೆ ಸಹಿತಾಕ್ಷಣ
ಜನಪಂ ಕಾಣಿಸಿ ಕೊಂಡಾತನ ಕರೆತಂದಂ || ||೧೩೦||

ರಾಗ ಕಾಂಭೋಜಿ ಅಷ್ಟತಾಳ

ಬಂದ ಮುನಿಯ ಪೀಠದಲ್ಲಿ | ಚಂದದಿಂ ಕುಳ್ಳಿರಿಸಿ ಪಾದ |
ದ್ವಂದ್ವವನ್ನು ಪೂಜಿಸುತ್ತಲೀ ||
ನಿಂದು ನೃಪತಿ ಕರವ ಮುಗಿವು | ತಿಂದು ಪುರಕೆ ಬಿಜಯಂಗೈದಿ |
ರ್ದಂದವೇನೆನಲಾತ ಪೇಳ್ದನು || ||೧೩೧||

ಬಂದೆವಯ್ಯ ಹೀಗೆ ನಿನ್ನಲಿ | ಕಂದರಾಗಿಹರೆಂಬ ವಾರ್ತೆಯ |
ಹೊಂದಿತದನು ದಾರಿಯ ಮ್ಯಾಲೆ ||
ಚಂದವಾಯ್ತು ಬಹಳ ದಿವಸ | ದಿಂದ ಪುತ್ರರಿಲ್ಲವೆಂಬು |
ದೊಂದು ಹೇತುವ ಕಳೆದೆ ಲೋಕದಿ || ||೧೩೨||

ನಾವಿಂದಿಲ್ಲಿಗೆ ಬಂದುದು ನೀ | ಭೂವರಾಂಕ ಲಾಲಿಸೈ ಸ |
ದ್ಭಾವದಿಂದ ಮಖವನೆಸಗುವ ||
ಠೀವಿಯನ್ನು ಯೋಚಿಸಿ ಕೊಂ | ಡಾವ ಪುಣ್ಯ ನಿಧಿಗಳಾದರು |
ಕಾವರೆಂಬ ಹದನ ನೋಳ್ವಾರೆ || ||೧೩೩||

ವಾರ್ಧಕ

ಅಗ್ನಿಹೋತ್ರಾದಿ ನೈಮಿಕಗಳೀವರೆಗೆ ನಿ
ರ್ವಿಘ್ನದಿಂ ನಡೆದುದೈ ಕ್ಷಿತಿಪ ಕೇಳೀಗದಕೆ
ವಿಘ್ನಗಳು ಬಂದಕಾರಣದಿಂದಲೆಮ್ಮ ಬರವಾಯ್ತಿಲ್ಲಿಗೆನೆ ಕೇಳುತ |
ಯಜ್ಞಕೆನ್ನಿಂದಾಹ ಸೇವೆಯಂ ಗೈವೆ ಸ
ರ್ವಜ್ಞನೆ ನಿರೂಪಿಸಿದ ಸಕಲವಂ ಮಾಳ್ಪೆ ನಿ
ಮ್ಮಾಜ್ಞೆಯಂ ಮೀರ್ವನಲ್ಲೆಂದು ನೃಪನುಡಿಯಲಾಮಾತಿಗವನಿಂತೆಂದನು || ||೧೩೪||

ರಾಗ ಮುಖಾರಿ ಏಕತಾಳ

ಹೋ ಹೋ ಮೆಚ್ಚಿದೆ ಮೆಚ್ಚಿದೆ ನೃಪತಿ | ಈ ಮಾತಿಗಾನು |
ಹೋ ಹೋ ಮೆಚ್ಚಿದೆ ಮೆಚ್ಚಿದೆ ನೃಪತಿ ||
ಸೋಹರಸಲು ಪೋದ | ಹಗ್ಗವು ಕಾಲಿಗೇ |
ಸುತ್ತಿದ ತೆರನಂ | ತಾದುದು ಭಳಿರೆ || ಹೋ ಹೋ || ||೧೩೫||

ಪೂರ್ವದ ದೊರೆಗಳಂತಲ್ಲ | ನೀನೀಗ ಭೂಪ |
ಉರ್ವಿಯೊಳಾರೆಣೆಯಿಲ್ಲ ||
ಪರ್ವತ ಜರೆದರು | ನಿರ್ವಹಿಸೆಂದಿಗು |
ಸರ್ವಥ ಭಾಷೆಯ ಮೀರ್ವವನಲ್ಲ || ಹೋ ಹೋ || ||೧೩೬||

ವಸ್ತುವಾಹನವ ನಾ ಕೇಳೆ | ನಿನ್ನೊಡನಿರ್ದ |
ವಸ್ತು ಯಾವುದು ಕೊನೆ ಪೇಳೇ ||
ಪ್ರಸ್ತುತ ಸುತರೊಳು ಮಸ್ತಕಮಣಿ ನಿಗ |
ಮಸ್ತುತನ ಮನಸ್ವಸ್ಥದಿ ನೀ ಕೊಡು || ಹೋ ಹೋ || ||೧೩೭||

ವಾರ್ಧಕ

ಕುಶನೆ ಕೇಳಾ ಮುನಿಪನುತ್ತರಂ ನಾಟಿದವು
ವಶವಳಿದು ಮುನ್ನಿನೊಳ್ ಜಿಂಹ್ವೆ ಪೆಡೆತಲೆ ಸೇರಿ
ವಶವಿಲ್ಲವಾಯ್ತು ಕರಣೇಂದ್ರಿಯಂಗಳು ಹಲವನೆಣಿಸುತ್ತಲಿರ್ದು ಬಳಿಕಾ |
ಕುಶಿಕಜನೊಳೆಂದ ನೀ ಯೌವನಂ ತುಂಬದಿಹ
ಶಿಶುವಿನಿಂದಾ ಮಹಾಯಜ್ಞಮಂ ಬಿಡದೆ ಪಾ
ಲಿಸಿ ಕೊಂಬುದೇ ಸಕಲ ಪರಿಕರವ ಮೇಳೈಸಿಕೊಂಡು ತಾ ಬಹೆನೆಂದನು || ||೧೩೮||

ಕಂದ

ಎನೆ ಕೇಳ್ದಾಗತಿ ವ್ರತಿಪಂ
ಮನದೊಳ್ತಾ ಬಲು ಕೋಪವ ತಾಳುತ ಬಳಿಕಂ |
ಘನರೌದ್ರಾವೇಶದೊಳಂ
ಕನಲುತ ನೃಪನೊಡನಿಂತೆಂದನು ತಾ ಭರದಿಂ || ||೧೩೯||

ರಾಗ ಕಾಂಭೋಜಿ ಅಷ್ಟತಾಳ

ಚಂದವಾಯ್ತು ಭೂಮಿಪಾಲ ನಿನ್ನ ಮಾತಾ | ಈಗ |
ಲೆಂದುದನ್ನು ಮರೆತೆಯಲ್ಲ ಕ್ಷಣದಿ ಖ್ಯಾತಾ ||
ಬಂದ ದಾರಿಯನ್ನುವಿಡಿದು ಪೋಪೆನಾನು | ಈ
ಕಂದರನ್ನು ಕೂಡಿ ಸುಖದಿ ಬಾಳು ನೀನು || ||೧೪೦||

ಆ ದಿವಾಕರ ವಂಶದಲ್ಲಿ ಪುಟ್ಟಿ ವ್ಯರ್ಥ| ಸತ್ಯ |
ವಾದಿಯೆಂಬ ಬಿರುದ ಪೊತ್ತೆ ನೀ ನಿರರ್ಥ ||
ಮೇದಿನಿಯಲಿ ಮಖವ ರಕ್ಷಿಸಿರ್ಪರನ್ನು | ಯಾ |
ರಾದರಿಂದಿಗೆ ದೊರಕುತಾರೊ ನೋಳ್ಪೆ ನಾನು || ||೧೪೧||

ಸುರರ ಪುರಕೆ ಪೋಗಿ ಶಂಬರ ದೈತ್ಯನಾಗಾ | ನೀ |
ಮುರಿದು ಬಂದೆಯೆಂಬುದಿಂಥ ಗರ್ವವೀಗ ||
ಸರಿಯಲರಿದು ಖೂಳರಾ ಮಾರೀಚ ಮುಖ್ಯ | ರಕ್ಷ |
ದುರುಳರೊಡನೆ ಗೆಲ್ವೆನೆಂಬ ಗರ್ವವಾಕ್ಯ || ||೧೪೨||

ಕಂದ

ವ್ರತಿಪನ ಖತಿಯಂ ಕಾಣುತ
ಕ್ಷಿತಿಪತಿ ತನ್ನೊಳು ತಾನೇ ಬೆರಗಾಗುತ್ತಂ |
ಧೃತಿಗೆಟ್ಟತಿಶಯ ದುಃಖದಿ
ಮತಿಯುತನೊಡನಿಂತೆಂದನು ಮಾರುತ್ತರಮಂ || ||೧೪೩||

ರಾಗ ನೀಲಾಂಬರಿ ಝಂಪೆತಾಳ

ಏನಿದೇನನುಚಿತದ ಕಾಲ | ಬರಿದೆ ನೀ |
ನೇನು ಮುನಿದಪೆಯೊ ವ್ರತಿಪಾಲ ಗುಣಶೀಲ || ಪಲ್ಲವಿ ||

ಒಡಲೊಳಗೆ ಸುತರಿಲ್ಲವೆಂದು | ಬಲುದುಃಖ |
ದೊಳಗಿರಲು ಮುನಿವರರು ಭರದೊಳೈತಂದು ||
ಬಿಡದೆ ಗೈಸಿಹ ಮಹಾಮಖದಿ | ಪುತ್ರರನು |
ಪಡೆದೆನೈ ಋಷಿರಾಯ ಈಗ ಕೇಳುವುದು || ||೧೪೪||

ಪ್ರಾಯವನು ಸಾಲದವನೆಂತು | ಯಜ್ಞವನು |
ಪಾಲಿಸುವ ಖಳರತರಿದೆಂಬುದಿನ್ನೆಂತು ||
ರಾಯ ನಾ ಚತುರಂಗದೊಡನೆ | ಬಂದೀಗ |
ಪ್ರೀಯದಲಿ ಮಖದ ರಕ್ಷಣೆಗೈದು ಕೊಡೆನೇ || ||೧೪೫||

ಮಕ್ಕಳನು ಪಡೆದ ಮೇಲಿತ್ತ | ವೊಂದೆ ಕ್ಷಣ |
ಚಿಕ್ಕವರನಗಲಿ ತಾನಿರಲಿಲ್ಲವಲ್ಲ ||
ರಕ್ಕಸರ ಘಾತಿಪಡೆ ನಿನ್ನ | ವಶವಿಕ್ಕಿ |
ಘಕ್ಕನೇ ಕಳುಹಿಸುವೆನೆಂತು ರಾಘವನ || ||೧೪೬||

ಕಂದ

ಈ ಪರಿಯಿಂದಾ ಭುವನ ಪ್ರ
ಳಾಪವ ಗೈದಳಲುವುದನು ತಾ ಕಾಣುತ್ತಂ |
ಕೋಪದಿ ಕಿಡಿ ಕಿಡಿಯೋಗುತ
ತಾಪಸ ಕುಲವಿಖ್ಯಾತಂ ಗರ್ಜಿಸುತೆಂದಂ || ||೧೪೭||

ರಾಗ ಭೈರವಿ ಅಷ್ಟತಾಳ

ದುಃಖ ಸಾಕೊ | ನಿನ್ನ | ದುಃಖ ಸಾಕೊ ||
ಬೇಡ ನಿನ್ನ ಮಕ್ಕಳನ್ನು | ಕೂಡಿಕೊಂಡು ಸುಖದಿ ಬಾಳು |
ಆಡಿದಂಥ ಮಾತು ತಪ್ಪಿ | ಮೂಢತನದೊಳಿಪ್ಪೆಯಾದರೆ || ದುಃಖ || ||೧೪೮||

ದುರುಳ ದೈತ್ಯರನ್ನು ಕೊಂದು | ಧರೆಯ ಭಾರವನಿಳುಹಲೆಂದವ |
ತರಿಸಿಕೊಂಡಿಹ ತಾನೆ ಲಕ್ಷ್ಮೀ | ಯರಸನೆಂಬುದ ತಿಳಿಯದಿಂಥಾ || ದುಃಖ || ||೧೪೯||

ಜಗದಿ ವಿಶ್ವಾಮಿತ್ರನೆನಿಸಿ | ಅಗಡುತನವನರಿಯದಾದೆ |
ಬಗೆಯ ತೋರ್ಪೆ ಲೇಸು ಲೇಸು | ನಗೆಯಗೇಡ ಗೈದೆಯಲ್ಲೊ ||
ದುಃಖ ಸಾಕೊ | ದಶರಥ | ದುಃಖ ಸಾಕೊ || ೧೫೦ ||

ವಾರ್ಧಕ

ಎಂದ ಮುನಿಪನ ಮಾತಿಗುತ್ತರಂ ಕಾಣದತಿ
ನೊಂದು ಮನದೊಳ್ದುಗುಡಮಂ ತಾಳ್ದು ಭೂಮಿಪಂ
ಮುಂದಿರ್ದ ಗುರು ವಸಿಷ್ಠರ ಮುಖಾಂಬುಜದೆಡೆ ನಿರೀಕ್ಷಿಸಲ್ಕವನೆಂದನು |
ಇಂದು ಜಯವಹುದಂಜಬೇಡ ರಾಘವನ ಕಳು
ಹೆಂದು ಪೇಳಲ್ಕೆ ಭೂಪತಿ ಗುರು ನಿರೂಪದಿಂ
ಕಂದನಂ ಕರೆದು ಮುನಿಕೃಪೆಯಾಯ್ತು ನೀ ಪೋಗಿ ಮಖವ ಪಾಲಿಪುದೆಂದನು || || ೧೫೧ ||

ಭಾಮಿನಿ

ಎಂದ ನುಡಿಯನು ಕೇಳಿದಾಕ್ಷಣ
ತಂದೆಯಡಿಗೆರಗುತಲಿ ರಘುಜನು
ಮುಂದೆಸೆವ ಕೌಶಿಕನ ಪಾದದೊಳೆರಗಿ ನುತಿಸಲ್ಕೇ |
ಬಂದು ಲಕ್ಷ್ಮಣ ನೃಪನ ಪದದರ
ವಿಂದಕೆರಗಿದು ಪೇಳ್ದನಣ್ಣನ
ಹೊಂದಿ ಸಂಗಡಲೈದಿ ಬರುವೆನೆನುತ್ತ ಹೊರವಂಟ || ೧೫೨ ||

ರಾಗ ನೀಲಾಂಬರಿ ಝಂಪೆತಾಳ

ಮುನಿಪ ಲಾಲಿಸೊ | ತನುಜರೀರ್ವರಾ |
ವನದಿ ನಿನ್ನಯಾ | ವಿನುತಯಾಗಕೆ || ೧೫೩ ||

ಕೊಂಡು ಪೋದರೆ | ಪುಂಡು ದೈತ್ಯರಾ |
ಕಂಡುಬೆದರಲು | ದ್ದಂಡ ರಕ್ಷಿಸೋ || ೧೫೪ ||

ಮುಂದೆ ಕ್ಷೇಮದೀ | ತಂದು ಶೀಘ್ರದಿ |
ಕಂದರೀರ್ವರಾ | ಹೊಂದಿಸೆನ್ನೊಳೂ || ೧೫೫ ||

ಕಂದ

ಎನುತಾ ಭೂಮಿಪರೀರ್ವರ
ತನುಜಾತರಿಗಾವ್ರತಿಪನ ಕೈಯೊಳಗಿತ್ತಂ |
ವಿನಯದಿ ಮನ್ನಿಸಿ ಕಳುಹಲ್
ತನಯರು ಸಹಿತೈತಂದರು ಸರಯೂ ನದಿಗಂ || ೧೫೬ ||

ವಾರ್ಧಕ

ಸೆಳೆಗೊಳುವ ವೇಗದುರು ಸಲಿಲ ಪ್ರವಾಹದೊಳು
ಘುಳು ಘುಳಿಸುತಲ್ಲಲ್ಲಿ ಬಿಡದೆ ತಿರುತಿರುಗುತಿಹ
ಸುಳಿಗಳ ವಿಚಿತ್ರದಿಂ ಬೆಳೆಸಿ ವನ ಸಂದೋಹಮಂ ತನ್ನ ಇತ್ತಡಿಯೊಳು |
ಹೊಳೆ ಹೊಳೆದು ಪರಿದಾಡುತೀರ್ಪ ಸಂಭ್ರಮಗಳಿಂ
ಮಳಲೆಳೆದು ದಡವೆಲ್ಲ ಬೆಳ್ಪೇರಿ ಸೊಗಯಿಸುತ
ಮಿಳೆಯೊಳಘಹರವೆಂದು ಪೆಸರ್ವಡೆದ ಘನ ನದಿಯ ಪುಣ್ಯನಿಧಿಗಳ್ಕಂಡರು || ೧೫೭ ||

ರಾಗ ಕೇದಾರಗೌಳ ಅಷ್ಟತಾಳ

ಸರಯೂ ನದಿಯಲ್ಲಿ ಸ್ನಾನಂಗಳನುಗೈದು |
ವರಮುನಿಪನು ಬಳಿಕ ||
ಭರದಿ ಜಪಾನುಷ್ಠಾನಂಗಳ ತೀರಿಸಿ |
ತರಳರೀರ್ವರ ಕರೆದು || ೧೫೮ ||

ಹರಿಹರ ಬ್ರಹ್ಮಾಮರೇಂದ್ರರಂಶದೊಳಿರ್ಪ |
ತರತರದಸ್ತ್ರಗಳಾ ||
ದುರುಳರ ವಧೆಗೆನುತಿತ್ತ ಮನ್ನಿಸಿ ತಾನು |
ಪರತರ ಪಾವನರ್ಗೆ || ೧೫೯ ||

ಬಳಿಕ ಮುಂದೈತರೆ ಘೋರಾಟವಿಯಲದು |
ಪೊಳವರ್ದಿದೇನೆನುತಾ ||
ನಳಿನನಾಭನು ಬೆಸಗೊಳ್ಳಲು ಕೇಳ್ದಾ |
ತುಳಮುನಿನಾಥ ಪೇಳ್ದಾ || ೧೬೦ ||

ವಾರ್ಧಕ

ಬಲ್ಮೆಯಿಂ ಸುರಪ ವೃತ್ರಾಸುರನವಧಿಸಲಾ
ಕಲ್ಮಷಂ ಪ್ರಾಪ್ತಮಾಯ್ತವಗೆ ಪೂರ್ವದಿ ಬಳಿಕ
ನಾಲ್ಮೊಗದವಂ ಬಂದು ಅಭಿಷೇಕಮಂ ಗೈದವಾರಿಯನ್ನಿಳೆಗೆ ತಿದ್ದಿ |
ಸಲ್ಮೊಗದುಬೀಳಲೀ ಕಾನನದೊಳಿರ್ದ ತರು
ಗುಲ್ಮಗಳ್ಕರಕರಗಿ ಕಲುಷ ವನಮಾಯಿತಾ
ಮೇಲ್ಮೂರ್ಖ ದೈತ್ಯರಾವಾಸವಾಯ್ತಲ್ಲಿ ನಮ್ಮಾ ಶ್ರಮಕೆ ಪಗೆಯಾಯಿತು || ||೧೬೧||

ಭಾಮಿನಿ

ಕೇಳಿದೈ ರಘುರಾಮ ಮತ್ತೀ
ತಾಳು ಬನದೊಳಗಿರವದಾಯಿತು
ಖೂಳದನುಜ ಸುಬಾಹು ಮಾರೀಚಾದಿ ರಿಪುಗಳಿಗೆ |
ಪೇಳಲಿಂನೇನೆನುತ ತಾಪಸ
ಮೌಳಿನುಡಿಯಲ್ಕಿತ್ತ ನರಮೂ
ಗಾಳಿ ಸೋಂಕಿದು ಬೆಸಸಿ ಬಂದಳು ದುರುಳೆ ತಾಟಕಿಯು || ||೧೬೨||

ರಾಗ ಮಧ್ಯಮಾವತಿ ಅಷ್ಟತಾಳ

ಆರೊ ಬಂದವರು | ನಮ್ಮಡವಿಗಿ | ನ್ಯಾರೊ ಬಂದವರು ||
ಮನುಜರ ಮಾಂಸವ ಮೆಲ್ಲದೆ | ಬಲು | ದಿನವಾಯ್ತು ನೀವೆನ್ನಗಲದೆ ||
ಮನದೊಳುಂಟೇ ಬದುಕಿ ಪೋಪಿ | ರೆನುವದಾಶೆಯನ್ನು ಬರಿದೇ ||
ದನುಜರಿರ್ಪಾ ವಿಪಿನವೆಂಬುದ | ರಿನಿತು ಶಂಕೆಗಳಿಲ್ಲದೆ ನೀ | ವ್ಯಾರೊ || ||೧೬೩||

ಖಂಡ ಖಂಡಗಳಾಗಿ ಕರಿದು | ಉರಿ | ಗೆಂಡಾದ ಮೇಲಿಟ್ಟು ಹುರಿದು |
ಕಂಡಕಂಡದಿಂದಲೆಮ್ಮ | ಹಿಂಡು ದೈತ್ಯರನ್ನು ಕೂಡೀ |
ಕೊಂಡು ತಿಂದು ತೀರ್ಚಿಸುವೆನೂ | ಕಂಡ ಮೇಲೆ ಬಿಡುವುದುಂಟೆ || ಆರೊ || ||೧೬೪||

ಹುಡುಗರ ನೀ ಕೂಡಿಕೊಂಡೇ | ಬಂ | ದೊಡನೆಮ್ಮವನವನು ಕಂಡೆ ||
ಧಡಿಗ ಮುನಿಪ ನಿನ್ನನೀಗಳೆ | ಹಿಡಿದು ಕೊರಳಗಚ್ಚಿ ರಕ್ತವ |
ಕುಡಿದು ಸೀಳ್ದು ಕರುಳ ತೆಗೆದು | ಮುಡಿದು ನಲಿವೆ ಗಂಡನೊಳು || ಆರೊ || ||೧೬೫||

ವಾರ್ಧಕ

ಜವನ ಜನನಿಯೊ ಭೈರವನ ಭಗಿನಿಯೋ ಪ್ರಳಯ
ಶಿವನ ಕಣ್ಗಿಚ್ಚೊಮೇಣ್ ಸಂವರ್ತ ಮೃತ್ಯುವಿನ
ಸವತಿಯೋ ಎನುವವೋಲ್ ದನುಜೆ ಘರಘರನೆ ಪಲ್ಮೊರೆದು ಮುಂದೈತರಲ್ಕೇ |
ಇವಳು ಬಂದಳು ಕಡುಕರಾಳ ಮುಖಿಯಿದಕೊ ರಾ
ಘವದೇವ ನೋಡು ನೀ ಬೇಗದಿ ಶರಾಸನದ
ಗವಸಣಿಗೆಯನು ಕಳೆದುಕೊಡು ಮಹಾಸ್ತ್ರವ ಧುರಕೆ ಪ್ರಾರಂಭಮೆಂದು ಮುನಿಪ || ||೧೬೬||

ರಾಗ ಸೌರಾಷ್ಟ್ರ ಅಷ್ಟತಾಳ

ಎಂದ ಮಾತಿಗೆ ರಘುನಾಥ ಪೇಳಿದನೆಲೆ | ಮೌನಿಪಾಲ | ನೀ |
ನಿಂದರುಹಿದೀಗಲೇ ನಿನ್ನಯ ನುಡಿಯೇನೈ | ಮೌನಿಪಾಲ || ||೧೬೭||

ಕೊಲಬಹುದೇನಯ್ಯ ಈ ಹೆಣ್ಣುಪ್ರಾಣಿಯ | ಮೌನಿಪಾಲ || ಕ್ಷತ್ರಿ |
ಕುಲದವರಿಂಗಿದು ಹೀನತ್ವವಲ್ಲವೆ || ಮೌನಿಪಾಲ || ||೧೬೮||

ಇವಳಿಗೇನಾದರು ಗೈದು ಭಂಗಿಸುವೆನು | ಮೌನಿಪಾಲ | ಎಂ |
ದವನೊಳು ತಾನಾಗ ನಗುತಲಿಂತೆಂದನು | ಮೌನಿಪಾಲ || ||೧೬೯||

ವಾರ್ಧಕ

ಪೂರ್ವದೊಳು ಮೃತ್ಯುವನು ಶಿವಕೊಲ್ವ ಸಮಯದೋಳ್
ಗರ್ವದಿಂದಬಲೆಯೆಂದುಳುಹಿದನೆ ರಾಮನೇ
ನುರ್ವಿ ಭಾರಪಹಾರನಲ್ಲವೇ ನೀ ಬರಿದೆ ಸಂಕೋಚಮಂ ತಾಳದೆ |
ಕರ್ವಿಕೊಂಡೈತಹ ಕರಾಳಮುಖಿಯಂ ಕೊಂದು
ನಿರ್ವಹಿಪುದಂಜದಿರು ಇದರಿಂದ ಪಾತಕಂ
ಸರ್ವಥಾ ನಿನಗಿಲ್ಲಮೆನಲೆತ್ತಿ ಚಾಪಮಂ ಝೇಗೈವುತಿದಿರಾದನು || ||೧೭೦||

ರಾಗ ಶಂಕರಾಭರಣ ಮಟ್ಟೆತಾಳ

ಎಲೆಲೆ ಹುಚ್ಚಮೂಳಿ ನಿನ್ನ | ಬಲುಹು ಸಲ್ಲದೆನ್ನಕೂಡೆ |
ತಲೆಯಕುಟ್ಟಿ ಭೂತಗಣಕೆ | ಬಲಿಯ ಕೊಡುವೆನು || ||೧೭೧||

ಮೊದಲೆ ಮನುಜ ನೀನು ಮತ್ತೆ | ಅದರೊಳಿರ್ಪೆ ಹುಡುಗನಾಗಿ |
ಪದುಳದಿಂದ ತಿಂಬೆನೆಂದ | ರೊದಗೆ ನಾಲ್ಗೆಗೇ || ||೧೭೨||

ಖಳರೊಳಧಮೆ ನೋಡಿನ್ನೊಂದು | ಘಳಿಗೆಯಲ್ಲಿ ನಿನ್ನ ಜಿಹ್ವೆ |
ಯಿಳುಹಿ ಬಿಡುವೆನೆನುತ ರಾಮ | ಮುಳಿದು ತುಳಿದನು || ||೧೭೩||

ಕೇಳು ಪಸುಳೆ ನಿನ್ನ ಶೌರ‍್ಯ | ದಾಳುತನವ ತಿಳಿದೆನೀಗ |
ಸೀಳಿ ಬಿಡುವೆನೆನುತ ಕಡುಗಿ | ತೋಳನೆಗಹಿದ || ||೧೭೪||