ಭಾಮಿನಿ

ಮಾಯೆಗಾ ಮಂಥರೆಯ ರೂಪದಿ
ರಾಯ ದಶರಥನಲ್ಲಿ ಸೇರುವ
ದಾಯವನು ನೆರೆ ತಿಳುಹಿ ಮುಂದಣ ರಾಜಕಾರ್ಯವನು |
ಪ್ರೀಯದಿಂ ರಮೆದೇವಿಗರುಹಲಿ
ಕಾಯತಾಕ್ಷಿಯು ಪೋಗಿ ನಿಮಿಕುಲ
ರಾಯ ಜನಕನ ಮನೆಯೊಳಿರ್ದಳು ಬಾಲತನದಿಂದ || ||೫೭||

ಮೇಲೆ ದಿವಿಜರು ಕಪಿ ಸ್ವರೂಪವ
ಲೀಲೆಯಿಂದಲಿ ಧರಿಸಿ ಜನಿಸುತ
ವಾಲಿ ಸುಗ್ರೀವಾದಿ ಬಹುವಿಧ ನಾಮಧೇಯದೊಳು |
ಜಾಲನೆರೆದಿರಲನಿಲತನುಜ ವಿ
ಶಾಲಮತಿ ಹನುಮಂತ ವಾನರ
ಲೋಲ ರವಿಜನ ಪೊರೆಗೆ ಬಂದಿಂತೆಂದನುತ್ಸಹದಿ || ||೫೮||

ರಾಗ ಮಧ್ಯಮಾವತಿ ಏಕತಾಳ

ಕೇಳಿದೆನಯ್ಯ ಮಾವ ಸುಗ್ರೀವ |
ತಾಳಿ ಹರುಷವ ಮನದೊಳಗಿಂದು || ಕೇಳಿದೆನಯ್ಯ || ಪ ||

ಸೂರ್ಯನಪ್ಪಣೆಯಿಂದ ನಾನಿಲ್ಲಿಗೈತಂದೆ |
ಕಾರಿಯಂಗಳು ಬಹಳುಂಟದನು ಪೇಳ್ವೆ ||
ಶೌರ್ಯವಂತನು ವಾಲಿ ನಿನಗವನೊಳು ನಿಲ್ವ |
ಧೈರ್ಯಸಾಲದೆಂಬುದ ತಾನೆ ತಿಳಿದು || ಕೇಳಿದೆನಯ್ಯ || ||೫೯||

ಮುಂದಹ ಕಾರ್ಯ ಕೈಗೂಡಲೋಸುಗರ |
ವಿಂದನಾಭನು ಮಮಕಾರವಗೊಂಡು ||
ಚಂದದೊಳೈತಹ ನಾವಿಲ್ಲಿ ಕೂಡಿರ್ಪು |
ದೆಂದು ನೇಮವನಿತ್ತು ಕಳುಹಿದನಯ್ಯ || ಕೇಳಿದೆನಯ್ಯ || ||೬೦||

ಭಾಮಿನಿ

ಇಂತು ಕೇಳಿದು ಸಕಲ ತಾವ
ತ್ಯಂತ ಹರುಷಂಬಡುತ ಕಮಲಾ
ಕಾಂತನನುಪಮ ಮನುಜ ಲೀಲೆಯ ಕಾಂಬ ಲವಲವಿಕೆ |
ಯಂ ತಳೆದು ಗಿರಿ ಕಾನನಂಗಳ
ಲಂತರಿದು ಚರಿಸುತ್ತಲಿರ್ದರು
ಕಂತುಜನಕನ ಮಹಿಮೆಯೆಂತುಟೊ ಕುಶನೆ ಕೇಳೆಂದ || ||೬೧||

ಕಂದ

ಇನಿತೀಪರಿಯೊಳು ಮನುಮಥ
ಜನಕಂ ಕ್ಷೀರಾಭ್ದಿಯೊಳಿರುತಿರೆ ಬಳಿಕಿತ್ತಂ |
ಜನಪ ದಶರಥಂ ತನ್ನಯ
ಮನದೊಳು ಸುತರಿಲ್ಲೆನುತಂ ಚಿಂತಿಸುತಿರ್ದಂ || ||೬೨||

ರಾಗ ಘಂಟಾರವ ಝಂಪೆತಾಳ

ಕೇಳಿರರ್ಧಾಂಗಿಯರು | ಕೇಯೂರ ಖಚಿತ ರ |
ತ್ನಾಳಿ ಶೋಭಿತೆಯರುಗ | ಳೆನ್ನ ಮಾತಾ || ||೬೩||

ಪಾಲಿಸಿದೆನಿಳೆಯನರು | ವತ್ತು ಸಾವಿರ ವರುಷ |
ಬಾಲಕರ ಮೊಗಗಾಣ | ಬಾರದಾಯ್ತಲ್ಲ || ||೬೪||

ಹರಹರಾ ಪೂರ್ವದೊಳು | ಹಗೆಯಾರಿಗಾಗಿಹೆನೊ |
ತರಳರನು ಪಡೆಯದಾ | ಯೋಗ್ಯ ನಾನಾದೆ || ||೬೫||

ಭಾಮಿನಿ

ಇಂತು ತನುಜಾಪೇಕ್ಷೆಯೊಳು ಭೂ
ಕಾಂತನಿರುತಿರೆ ಕಂಡು ಸತಿಯರು
ಕಂತುಪಿತ ದಯಗೈದರೇನದು ದೊಡ್ಡಿತೇ ಬರಿದೆ |
ಭ್ರಾಂತಿಯನು ಕೈಗೊಂಡು ಚಿತ್ತದಿ
ಚಿಂತಿಸುತಲಿರಲೇತಕೆನುತಲಿ
ಸಂತವಿಸೆ ಬಳಿಕೊಂದು ದಿನ ಮೃಗಬೇಟೆ ಗೈದಿದನು || ||೬೬||

ರಾಗ ಮುಖಾರಿ ಏಕತಾಳ

ಬೇಟೆಗೆನ್ನುತ ಪೋದನೃಪತಿ | ಉದ್ಯಾನವ ಕಂಡು |
ಬೇಟೆಗೆನ್ನುತ ಪೋದ ನೃಪತಿ || ಪ ||

ಮೀಟಾಗಿಹ ಕರಿ | ಘೋಟಕ ರಥಗಳ |
ಕಾಟಕ ಜನರನು | ಕೂಟವನೆರಹಿ || ಬೇಟೆ || ಅ.ಪ. ||

ಕಂಡೊಂದು ಕಡೆಯೊಳ್ವಲೆಯಾ ಕಟ್ಟಿದರು | ಬೇರೊಂದು ಬದಿಯೊಳು |
ಶುಂಡಾಲ ಮೋಹರವನಟ್ಟಿದರು | ಹಿಂಭಾಗದೆಡೆಯೊಳ್ |
ತಂಡಾಗಿ ಸ್ಯಂದನವ ನೊಚ್ಚಿದರು | ಕೆಲರೈದಿ ನಡುವೆ |
ಹಿಂಡಾಗಿ ಭರದಿ ಬೈಗಟ್ಟಿದರು ||
ಕಂಡು ಮೃಗಂಗಳು | ಗಂಡಿಯ ಕಾಣದೆ |
ದಂಡದಿ ಸಿಲುಕಲು | ಗಂಡುಗಲಿಗಳುರೆ |
ಖಂಡಿಸುತಲಿ ನೃಪ ಮಂಡಲದಿದಿರಿಗೆ |
ಕೊಂಡೊದಿಟ್ಟರು | ರುಂಡಗಳೊಲಿದು || ಬೇಟೆ || ||೬೭||

ಇತ್ತೋರ್ವ ಚೌಡಲ್ಯ ಭೂಸುರನು | ಯಾತ್ರೆಯ ನೆವದಿ |
ಹೊತ್ತಿರ್ದ ಕುರುಡರಿರ್ವರನು | ಕಾವಡಿಯಲ್ಲಿ |
ಹೊತ್ತಿರ್ದು ಪಥದಿ ನಡೆಯಲವನು | ಮಧ್ಯಾಹ್ನ ಕಾಲ |
ದತ್ತ್ಯುಗ್ರವಾಗಿಹ ದಿವಾಕರನು ||
ಹತ್ತಿತು ತೃಷೆ ನೀ | ರೆತ್ತಲು ಕಾಣದೆ |
ನುತ್ತಲಿ ಕಾವಡಿ ಯೆತ್ತಿಯೆ ಮರದಡಿ |
ಗಿತ್ತು ಕಮಂಡಲ | ವೆತ್ತು ಕೊಳವನರ |
ಸುತ್ತಲಿ ಹೋದ ದ್ವಿ | ಜೋತ್ತಮ ಭರದಿ || ಬೇಟೆ || ||೬೮||

ಭಾಮಿನಿ

ಕಂಡು ತಾ ಬಳಿಕೊಂದು ಕೊಳದಿ ಕ
ಮಂಡಲವ ಮುಳುಗಿಸುತಲಿರೆ ಮದ
ಶುಂಡಿಲಾಕಾರದಲಿ ಘಳಿಘಳಿಸಿತ್ತು ಶಬ್ದವದು |
ಚಂಡ ಭುಜಬಲ ನೃಪತಿ ಕೇಳಿದು
ಕೆಂಡದಂತುರಿ ಮಸಗಿ ಚಾಪವ
ಗೊಂಡು ಕೂರ್ಗಣೆಯುಗಿದನಾ ಕುಂಜರವಿದೆಂದೆನುತ || ||೬೯||

ವಾರ್ಧಕ

ಮತ್ತಗಜವೆಂಬ ಭಾವದೊಳೆಚ್ಚ ಕಣೆಯಿಂದ
ಕತ್ತರಿಸಿತವನ ತಲೆ ಶಿವಶಿವ ಮಹಾದೇವೆ
ನುತ್ತ ಪ್ರಾಣಂ ಬಿಡಲ್ ನಡನಡುಗುತೈದಿ ನೃಪನಂಧಕರಿಗರುಹಲಂದು |
ಎತ್ತಣಿಂದುದಿಸಿತೋ ಕೋಪಶಿಖಿ ತಾಂಡವಗೆ
ಮತ್ತೆಂದ ನೀ ಪುತ್ರ ಶೋಕದೊಳ್ ಮಡಿಯೆನುತ
ಲಿತ್ತು ಶಾಪಂ ಬಳಿಕ ಸ್ವರ್ಗಸ್ಥರಾಗೆ ನೃಪ ಸಂಸ್ಕಾರಮಂ ಗೈದನು || ||೭೦||

ಕಂದ

ಮನದೊಳು ವಿಪ್ರನ ಶಾಪವ
ನೆನದಾ ನಿಜಪುರಕೆ ಐತರುತ ನರಪಾಲಂ |
ಘನ ಪುತ್ರೋತ್ಸಹಮಂ ಪಡೆ
ವೆನು ಬಳಿಕೇನಾದರು ಆಗಲಿಯೆನುತಿರ್ದಂ || ||೭೧||

ರಾಗ ಕೇದಾರಗೌಳ ಅಷ್ಟತಾಳ

ಇಂತೆಂದು ನಿಶ್ಚೈಸುತ್ತಲಿ ಭೂಮೀಶ |
ನಂತರ‍್ಯವನು ತಿಳಿದು ||
ಸಂತಸದಿಂದ ವಸಿಷ್ಠರು ಬರಲಾ |
ನಂತರದೊಳು ಜಾಬಾಲಿ || ||೭೨||

ವಾಮದೇವರು ಸಹಿತಲಿ ನಡೆತಂದಿರೆ |
ಭೂಮೀಶನರಿತು ತನ್ನ ||
ಕಾಮಿನಿಯರು ಸಹಿತಿದಿರ್ಗೊಂಡು ಕರೆತಂದು |
ಪ್ರೇಮದಿ ಪೀಠವನು || ||೭೩||

ಏರಿಸಿ ವರಪಾದ ಪೂಜೆಯಗೈದುಪ |
ಚಾರದಿ ವಂದಿಸಲು ||
ಧಾರಿಣಿಪನ ಮೊಗನೋಡಿ ಮತ್ತಜನ ಕು |
ಮಾರನಿಂತೆಂದನಾಗ || ||೭೪||

 

ರಾಗ ಸೌರಾಷ್ಟ್ರ ಏಕತಾಳ

ಭೂರಿ ವಿಕ್ರಮನೆ ನಿನ್ನ | ಪಾರುಪತ್ಯ ಸುಕ್ಷೇಮವೆ |
ಚಾರುಮೊಗವು ಕಂದಿದೇಕೆ | ಧಾರಿಣಿಪಾಲ || ||೭೫||

ಏನಿರವ್ವ ಸುಗುಣೆಯರು ನಿ | ಮ್ಮಾನನವು ಬಾಡಿದೇಕೆ |
ಮಾನಿನಿಯರ್ನಿಮಗೇಕಂಥಾ | ಹಾನಿಯಿಲ್ಲವಲ್ಲಾ || ||೭೬||

ಎನಲು ಕೇಳುತುದರದಲ್ಲಿ | ತನುಜ ಸಂತತಿಯಿಲ್ಲದ ||
ಮನುಜಾತ ಸಲ್ಲನು ಗಡ ಮುಂ | ದನಿಮಿಷರಲ್ಲಿ || ||೭೭||

ಕಂದರಿಲ್ಲದರಿಂಗಿಸಿತ್ತು | ಹೊಂದದೀ ರಾಜ್ಯದ ಮೇಲೆ |
ಕಂದು ಕೊರಳನಾಣೆ ಹುಸಿಯ | ಲ್ಲೆಂದನು ಭೂಪ || ||೭೮||

ವಾರ್ಧಕ

ವ್ಯರ್ಥವಾಯ್ತೀ ಜನ್ಮವಕಟಕಟ ಬರಿದೇ ನಿ
ರರ್ಥವಾಯ್ತನ್ವಯದ ಭಾಗ್ಯಸಿರಿ ವಿಭವ ಪರ
ಮಾರ್ಥಂ ಅಪುತ್ರಸ್ಯ ಲೋಕೋಕ್ತಿಯೆಂಬುದಿದು ಮನ ಕೊರೆವುದೀ ಭವದೊಳು |
ಸ್ವಾರ್ಥಮಾಯ್ತಧಿಕ ತರಮಾಗಿ ನೆಲೆ ಇಲ್ಲದಾ
ನರ್ಥದಿಂ ನರಕಭಾಜನನಾದೆ ಧರೆಯೊಳು ಸ
ಮರ್ಥ ಮನುಕುಲದ ರಾಯರ ಕೀರ್ತಿಗಂತಕಂ ತಾನಾದೆಯೆನುತಳಲ್ದನು || ||೭೯||

ಭಾಮಿನಿ

ಎನೆ ತಪೋಧನರೆಂದರೆಲೆ ಭೂ
ವಿನಯ ಕೇಳೈ ನೀನಯೋಗ್ಯನೆ
ಮನುಕುಲದ ಬೆಳುವಿಕೆಗೆ ಪುತ್ರೋತ್ಸಹವು ತೋರದುದೇ |
ಇನಿತು ಖೇದವ ಪಡುವುದೇತಕೆ
ವನಜನಾಭನ ದಯದಿ ನಿನ್ನಲಿ
ತನುಜರುದ್ಭವಿಸುವರು ಸುತಕಾಮೇಷ್ಟಿಯಾಗದೊಳು || ||೮೦||

ಕಂದ

ಎಂದವರೈದಿರಲಿತ್ತಾ
ನಂದದಿ ಸತಿಯರ ಮೊಗವನ್ನೀಕ್ಷಿಸುತಾಗಂ |
ನಂದನರಾಪೇಕ್ಷೆಯೊಳಂ
ಮಂದಸ್ಮಿತ ವಚನದೊಳ್ ಕುವಲಯಪ ನುಡಿದಂ || ||೮೧||

ರಾಗ ತೋಡಿ ಆದಿತಾಳ

ತರುಣಿ ಕೇಳ್ದೆಯಾ ನೀನೊಲಿದು | ತವಕದಿ ಕೌಸಲ್ಯೇ ||
ವರಮುನೀಂದ್ರರ್ವಚಿಸಿದ ಯಜ್ಞ | ವಿರಚಿಸಲು ಲೇಸಲ್ಲೇ ||
ಪರಮಪಾವನ ರೂಪೆ ಕೇಳ್ | ಪಡೆವೆ ಸುತರ ಬೇಗ ||
ಬರಿದೆ ತಡವಿನ್ಯಾತಕಾರಂ | ಭಿಸುವ ಯಜ್ಞವೀಗ || ||೮೨||

ಏನೆ ಕೈಕೆ ವ್ರತಿಪರೆಜ್ಞ | ಯೆಲ್ಲಿ ಗೈವೆಧ್ವರಕೇ |
ಮಾನಿನೀ ಮಣಿ ನಿನ್ನ ಮನದೀ | ಮಾಳ್ಪುದು ನಿರ್ಧರವೆ ||
ಭಾನುತೇಜ ಕೇಳುಯೆನ್ನ | ಭಾವವದನು ನೆರೆವೇ ||
ಸಾನುಕುಲಕೆ ಯಿಂದಧ್ವರವ | ಸಾಗಿಸೈ ನಾಸ್ವರಿತೇ || ||೮೩||

ಸುಲಲಿತಾಂಗಿಯೆ ಸುಮಿತ್ರ ಕೇಳ್ | ಸುಗುಣರೆಂದ ಮಖಕೇ ||
ಒಲಿವುದುಂಟೆ ನಿನ್ನ ಮನದ | ಒಳವ ಪೇಳ್ ಸನ್ಮಖಕೆ ||
ಬಲಿದ ಸ್ಮರನ ತಂತ್ರವನ್ನು | ಬಲ್ಲಿದೆರೆಯನಿಂತು ||
ಸುಲಭವೇ ನಾವ್ ಸುರತವಾಡದೆ | ಸುತರ ಪಡೆವದೆಂತು || ||೮೪||

ನಳಿನಾಕ್ಷಿ ಕೇಳ್ ಮದನ ಸುಖದಿ | ನಲಿದರಿಂದಲೇನೆ ||
ಖಳಸಂಹಾರನ ಕೃಪೆಯಾಗಲು ಬೇ | ಕೆಜ್ಞ ಮುಖದಿ ಕಾಣೇ ||
ತಿಳಿಯದಾದೆ ಪ್ರಾಣಕಾಂತ | ಮಖಕೆಯಿನ್ನೇನ್‌ತಡವೇ ||
ಘಳಿಲನೆ ನೀ ಮಾಡಿಸಿದರೆ | ಘನ ಸಂಜಾತರ ಪಡೆವೇ || ||೮೫||

ವಾರ್ಧಕ

ಉಚಿತದಿಂದರ್ಧಾಂಗಿಯರ್ನುಡಿಯಲಾ ಕುಂಭ
ಕುಚಯುಗಳೆಯರ್ಗೆ ಮನ್ನಿಸಿ ಬಳಿಕ ಭೂಮಿಪಂ
ಸಚಿವನಾಗಿಹ ಸುಮಂತನ ಕರೆಸಿಕೊಂಡು ಗುಪ್ತಾಲಯದೊಳೈದಿ ನಗುತ |
ಪ್ರಚುರನೊಳು ಪೇಳ್ದನೆಲೆ ಮಂತ್ರಿ ಕೇಳಾವ್ರತಿಪ
ರ್ವಚಿಸಿರ್ದ ಕ್ರತುಮುಖದಿ ಸಂತಾನಮಪ್ಪುದೇ
ಸಚರಾಚರಾತ್ಮಕಂ ಕೃಪೆ ಗೈವನೇ ತನ್ನ ಮೇಲೆನಲ್ಕವನೆಂದನು || ||೮೬||

ರಾಗ ಕೇದಾರಗೌಳ ಏಕತಾಳ

ದೇವಲಾಲಿಸಿಂದು ನೀ ರಾ | ಜೀವಾತ್ಮ ಸಂಭವನಲ್ಲಿ |
ತಾವೆ ಸನತ್ಕುಮಾರರು | ಭೂ ವಿಸ್ತಾರವ || ||೮೭||

ಪೇಳಿದಾಗ ಸೂರ‍್ಯಾನ್ವಯದ | ಬಾಳಿಕೆಯೊಳು ನಿಮ್ಮಯ ವಂ |
ಶಾವಳಿಯನು ವಿವರಿಸಿ ಮುಂ | ದಾಳುವದುಂಟು || ||೮೮||

ಎಂದು ಪೇಳ್ದ ಮಾತಿಗಾಗಿ | ಹಿಂದೆ ತಾಂಡವನ ಶಾಪ |
ಬಂದುದರಿಂ ಸಂತಾನವು | ಪೊಂದದಿರ್ಪುದೇ || ||೮೯||

ವಾರ್ಧಕ

ಅತ್ತ ಸುಮನಸರ ದೂರಂ ಕೇಳ್ದು ವಿನಯದಿಂ
ಚಿತ್ತಜನ ತಾತನಿನ್ನುದರದೋಳ್ ಬರುವನೆಂ
ದಿತ್ತ ಭಾಷೆಯನೆಂಬುದನು ಕೇಳಿಬಲ್ಲೆ ಮೊದಲಿಂಗೆ ನಿಶ್ಚಯವಿದಿನ್ನು |
ಚಿತ್ತದನುಮಾನಮಂ ಕಳೆದು ನೀ ಸಕಲ ಸಂ
ಪತ್ತಿನಿಂದಧ್ವರಂ ಎಸಗು ಆಚಾರ‍್ಯತ್ವ
ಕುತ್ತಮಂ ಋಷ್ಯಶೃಂಗಂ ಎಂಬ ಮುನಿಪನಂ ಕರೆಸು ಎಂದಡೆ ನುಡಿದನು || ||೯೦||

ಭಾಮಿನಿ

ಹಿಂಗದಲ್ಲಿಗೆ ಕರಸಿಕೊಂಡರು
ಮಂಗಳಾತ್ಮರು ಪೇಳಿದೆಜ್ಞ ಕ್ರ
ಮಂಗಳನು ತಿಳಿಕೊಂಬನೇ ಯೆನಲಾತನಿಂತೆಂದ || ಅರ್ಧ || ||೯೧||

ರಾಗ ಶಂಕರಾಭರಣ ತ್ರಿವುಡೆತಾಳ

ಎಲೆ ನೃಪಾಲಕ ಕೇಳು ಕಾಶ್ಯಪ |
ಕುಲದೊಳುದಿಸಿರ್ದವ ವಿಭಾಂಡಕ |
ಸತಿಮುನಿಪನೂರ್ವಶಿಯ ಕಾಣಲು | ಚಲಿತಮಾಗೀ || ||೯೨||

ನೀರಿನೊಳಗಿಹ ರೇತಸವ ಮೃಗ |
ನಾರಿ ಕುಡಿದಾಕ್ಷಣದಿ ಗರ್ಭವ |
ಮೀರಿ ಬಳಿಕ ಪ್ರಸೂತೆಯಾದಳು | ಚಾರುಮುನಿಯಾ || ||೯೩||

ಕಂಡು ಶಿವ ವರವಿತ್ತನದನು |
ದ್ದಂಡಮಾಗಿಯೆ ಪರಸಿತಾ ಭೂ |
ಮಂಡಲದೊಳಿದ್ದಲ್ಲಿ ಕ್ಷಾಮಗ | ಳಂಡಲೆಯನು || ||೯೪||

ಹೊಂದಲಾಗದೆನುತ್ತ ಕಡೆಗದ |
ರಿಂದ ತನ್ನಯ ಪುರದೊಳಾತನ |
ತಂದು ಕ್ಷೇಮದಿ ರೋಮಪಾದನು | ವಂದಿಸಿದನು || ||೯೫||

ಸಕಲ ಋತ್ವಿಜರುಗಳೊಳುತ್ತಮ |
ಪ್ರಕಟ ನಿಗಮಾಗಮದೊಳಾತನು |
ಶುಕಮುನೀಂದ್ರಾದಿಗಳ ಸಮವೈ | ದಿಕದೊಳೆಂದ || ||೯೬||

ವಾರ್ಧಕ

ಇನ್ನು ತಡವೇತಕೈ ನಾ ಪೋಗಿ ಸುಗುಣ ಸಂ
ಪನ್ನನಂ ತಂದು ದೀಕ್ಷೆಯಗೊಂಡರಾಗದೇ
ಎನ್ನುವ ಸುಮಂತನಂ ತಕ್ಕೈಸಿ ಪೊರಮಟ್ಟು ವಂಗದೇಶವ ಕಾಣುತ |
ಉನ್ನತೋತ್ಸಹಗಳಿಂ ಪುರಕೈದಿತಾನೃಪನ
ಮನ್ನಣೆಯಕೈಗೊಳ್ಳುತಲಿ ಋಷ್ಯಶೃಂಗನಂ
ಸನ್ನುತಿಸಿ ಬಳಿಕವರನೊಡಗೊಂಡು ದಶರಥೇಂದ್ರಂ ಬಂದ ನಗರಕಂದು || ||೯೭||

ಭಾಮಿನಿ

ಮೇಲೆ ನೆರಹಿಸಿ ಸಕಲ ಸನ್ನಹ
ವಾಲಯವ ಶೃಂಗರಿಸುತಧ್ವರ
ಶಾಲೆಯನು ವಿರಚಿಸಿದನಂದು ವಶಿಷ್ಠನಾಜ್ಞೆಯಲಿ |
ಓಲೆಯನು ಬರೆದಿತ್ತು ಧರಣೀ
ಪಾಲಕರ ಸಂದೋಹ ವರಮುನಿ
ಜಾಲ ಭೂಸುರ ತತಿಯ ಸಹಿತಾಕ್ಷಣವೆ ಕರೆಸಿದನು || ||೯೮||

ರಾಗ ಕಾಂಭೋಜಿ ಅಷ್ಟತಾಳ

ಕೇಳ್ದಿರೇನೈಯ್ಯ ಕೌತುಕವ | ಲಕ್ಷ್ಮೀ |
ಯಾಳ್ದನು ಧರೆಗವತರಿಪ ಮೂಲಕವ || ಪ ||

ಸುತಕಾಮೇಷ್ಟಿಯಧ್ವರಕೆ | ಬೇಕಾ |
ದತುಳಸೋಪಸ್ಕರ ಯಾಗಮಂಟಪಕೆ |
ಕ್ಷಿತಿಪನು ತರಿಸಿ ದೀಕ್ಷೆಯೊಳು | ತನು |
ಸತಿಯರು ಸಹಿತಿರ್ದ ತನುಜಾಪೇಕ್ಷೆಯೊಳು || ||೯೯||

ಮೊದಲಶ್ವಮೇಧಯಾಗವನು | ಮಾಳ್ಪು |
ದನು ವಿಧಿಸಿದ ಋಷಿಗಳ ವಾಕ್ಯವನ್ನು ||
ಪದುಳದಿ ಕೇಳಿ ಶೃಂಗರಿಸಿ | ಬಂದು |
ಕುದುರೆಯ ಬಿಡಲು ದಿಗ್ದೇಶ ಸಂಚರಿಸಿ || ||೧೦೦||

ಸಾರಲು ಬಳಿಕಲುತ್ಸಹದಿ | ಯಜ್ಞ |
ಕಾರಂಭಿಸಿದರಾಗ ದ್ರವ್ಯಸಂಗ್ರಹದಿ ||
ಸಾರಂಗಮುನಿ ವಶಿಷ್ಠರನು | ತಾ ವಿ |
ಚಾರಿಸಿ ಬ್ರಹ್ಮತ್ವವಿತ್ತು ಭೂವರನು || ||೧೦೧||

ವಾರ್ಧಕ

ಬಳಿಕ ಋತ್ವಿಜರೆಲ್ಲವರ ಮಂತ್ರ ತಂತ್ರಾಳಿ
ಗಳಲಿ ತತ್ಸಾಮಗಾನದೊಳೆಸದು ಸ್ವರವಿಡಿದು
ಮೊಳಗುವಂಬರ ಮೇಘಧ್ವಾನದಿಂದೆಸವುತಿಹ ನಿಗಮಘೋಷಗಳಿಂದಲಿ |
ನಳಿನ ತೋಳ್ಗಳ ಬೀಸಿ ಚರುಸಮಿಧೆ ಘೃತಶೀಲ
ಗಳನು ಸ್ವಾಹಾಕಾರದಿಂದಲಾಹುತಿಗೊಡಲ್
ಚಿಳಿ ಚಿಟಿಲು ಚಿಟಿಲೆಂದು ಶಿಖಿಪ್ರಕಾಶಿಸೆ ಸುರರು ಸಂತುಷ್ಟಿಯಂ ತಾಳ್ದರು || ||೧೦೨||

ಕಂದ

ಭಾರೀ ಸೀಮಂತವ ಗೈ
ದಾ ರಸೆಯಧಿಪತಿ ಸಂತೋಷದೊಳಿರಲಿತ್ತಂ |
ನಾರಿಯರಿಗೆ ನವಮಾಸಂ
ಪೂರಿತವಾಗಲ್ಕೆ ತಮ್ಮೊಳು ನುಡಿವುತಿರ್ಪರ್ || ||೧೦೩||

ರಾಗ ತೋಡಿ ಝಂಪೆತಾಳ

ನಾರೀಶಿರೋರನ್ನೆ ಕೌಸಲ್ಯೆ ನಿನ್ನ |
ಮೋರೆ ಬೆಳ್ ಚಾಯಾಗಿ ತೋರುತಿದೆ ಏಕೆ || ||೧೦೪||

ಕೋಕಿಲ ಸುವಾಣಿ ಕೇಳೆಲೆ ಕೈಕೆ ನಿನ್ನ
ಕೋಕನದ ಕೋರಕ ಕುಚಾಗ್ರ ಕಪ್ಪೇನೆ || ||೧೦೫||

ಇಂದುವದನೆ ಸುಮಿತ್ರೆ ಸುಮಗಂಧಿ ನಿನ್ನ |
ಅಂದವಾಗಿಹ ತ್ರಿವಳಿ ಮರೆಯಾಯಿತೇಕೆ || ||೧೦೬||

ವಚನ || ಇಂತೆಂದಾಗ ಕೈಕೆ ಕೌಸಲ್ಯಾ ಸುಮಿತ್ರೆಯರು ಏನೆಂದರು ಎಂದರೆ ||

ರಾಗ ಯರಕಲ ಕಾಂಭೋಜಿ ಅಷ್ಟತಾಳ

ಎಂತು ಬಾಳ್ದಪರೊ | ಲೋಕದಿ ಗರ್ಭ | ವೆಂತು ತಾಳ್ದಪರೊ ||
ಎಂತು ತಾಳ್ದಪರೊ ಭೂ | ಕಾಂತೆಯರ್ಬಸುರೊಳ |
ಗಾಂತೀರ್ದಶಿಶುವಿನ | ತ್ಯಂತ ವೇದನೆಯಿಂದ || ಎಂತು || ||೧೦೭||

ತಂಗಿ ಸೈರಿಸಲಾರೆ | ಮೈಯೊಳಗಾಪು | ದಂಗದ ಬಗೆ ಬೇರೆ ||
ಹಿಂಗದೆ ಪೊಡಲೊಳು | ಶೃಂಗದಿಂದಿರಿದಂತೆ |
ಕಂಗೊಳಿಸುವದು ಕೇಳ್ | ಭೃಂಗ ಕುಂತಳೆಯಿಂ || ಎಂತು ಬಾಳ್ದಪರೊ || ||೧೦೮||

ಅಕ್ಕ ನಿನ್ನಂತಿದೇನೂ | ತನಗಾಗಿದೆ | ಬೆಕ್ಕಸ ಬೆರಗಾದೆನು ||
ಇಕ್ಕಿದನ್ನವನುಂಡ | ರುಕ್ಕಿ ಮೇಲ್ಬಂದುಸುರು |
ಸಿಕ್ಕಿದಂತಿಹುದು ಮೇ | ಣಕ್ಕರಗೊಳದಿಂ || ಎಂತು || ||೧೦೯||

ನಿಮ್ಮಂತೆಯೆನಗಲ್ಲವೇ | ವ್ಯಥೆಯನು | ಒಮ್ಮೆ ಕಾಣಿಸಲಿಲ್ಲವೆ ||
ದಮ್ಮಯ್ಯ ಕಟಿಯಲ್ಲಿ | ಗುಮ್ಮಿದೋಲ್ ಬದಿಯಲ್ಲಿ |
ಸುಮ್ಮನೆ ಕರರಿದಂ | ತುಮ್ಮಳಿಸುವದಿಂ || ಎಂತು || ||೧೧೦||

ಆರ್ಯಸವಾ

ಈ ಪರಿಯಿಂದಾ ಸತಿಯರು ತಮತಮ | ಗಾಪ ಪರೀಕ್ಷೆಯ ವಿವರಿಸಲು ||
ಭೂಪನ ವಂಶೋದ್ಧರಿಸುವ ಕಾಲ ಸ | ಮೀಪದಿ ಬಂದುದು ಸವನಿಸಲು || ||೧೧೧||

ವಾರ್ಧಕ

ತರುಣಿಯೇಕಾದಶದರಾಹುವಿನ ಬಲನಿಶಾ
ಕರನ ಶುಭದೃಷ್ಟಿ ದಾನವಪುರೋಹಿತ ದೇವ
ಗುರು ಸೋಮಸುತರ ಕೇಂದ್ರದೊಳಗಾ ಚೈತ್ರ ಸಿತಪಕ್ಷದ ಸುನವಮಿ ದಿನದಿ |
ವರ ಪುನರ್ವಸು ತಾರೆ ಕರ್ಕಟಕ ಲಗ್ನದೋಳ್
ಹಿರಿಯರಸಿ ಬೆಸಲಾಗಿಯಾ ಹರಿಯ ಮೇಲೆಯವ
ತರಿಸಿದಂ ಸತ್ತ್ಜರಜ ತಮಗುಣ ವ್ಯಾಪಕಂ ಮಧ್ಯಾಹ್ನ ಸಮಯದೊಡನೇ || ||೧೧೨||

ಭಾಮಿನಿ

ಮರುದಿವಸಮಧ್ಯೆಯಲಿ ಕೈಕಾ
ತರುಣಿ ಬೆಸಲಾಗಿರ್ದಡಾ ಮೇ
ಲೆರಡನೆಯ ಮಖತಾರೆಯಲಿ ಬಳಿಕಾ ನೃಪನ ಮಡದಿ |
ವರ ಸುಮಿತ್ರೆಯು ಪಡೆದಳೀರ್ವರ
ಧರಣಿಪಗೆ ತೋಷಾಬ್ಧಿಯುಕ್ಕಿತು
ಪುರದಿ ಗುಡಿ ತೋರಣವಗಟ್ಟಿದು ಜನರು ನಲಿದಾಡೇ || ||೧೧೩||