ಶಾರ್ದೂಲವಿಕ್ರೀಡಿತ

ಶ್ರೀ ರಾಮಂ ದಿವಿಜೌಘ ವಂದಿತಪದಂ ಸೀತಾಮನೋಹ್ಲಾದಕಂ
ಕಾರುಣ್ಯಾಂಬುಧಿ ಭಕ್ತವತ್ಸಲ ಹರಿಂ ಕೌಸಲ್ಯ ಗರ್ಭೋದ್ಭವಂ |
ಮಾರೀಚಾದಿ ಸಮಸ್ತ ದೈತ್ಯಮಥನಂ ಮಹಾತ್ಪ್ರತಾಪಾನ್ವಿತಂ
ವೀರಂ ಪಾವನ ಪುಣ್ಯನಾಮಚರಿತಂ ವಂದೇ ಸದಾ ರಾಘವಂ || ||೧||

ರಾಗ ನಾಟಿ ಮಟ್ಟೆತಾಳ

ಜಯ ಜಯ ಸಿದ್ಧಿವಿನಾಯಕ | ಜಯ ಜಯ ಬುದ್ಧಿಪ್ರದಾಯಕ |
ಜಯ ಸುಂದರ ಮಹಾಕಾಯ | ಜಯಮೋದಕ ಪ್ರಿಯಾ ||
ಜಯ ಜಯ ಮೂಷಿಕವಾಹನ | ಜಯ ಜಯ ಕರಿಮುಖ ಮೋಹನ |
ಜಯಧೃತ ಅಂಕುಶ ಪಾಶ | ಜಯ ವಿಘ್ನವಿನಾಶ || ಜಯ ಜಯ ಜಯತು || ||೨||

ಕುಂಜರಕೇತನ ಪೂಜಿತ | ಕಂಜಸಖೋಪಮ ತೇಜಿತ |
ರಂಜಿತ ಕನಕವಿಭೂಷ | ಮಂಜುಳಕರಭಾಷ ||
ಭುಂಜ ಕಪಿತ್ಥ ಫಲೋರಸ | ಭಂಜನ ಶಶಿಮದಸಾರಸ |
ಗುಂಜ ಸಮಾರಕ್ತಾಭ | ಪುಂಜಕಲಾಶೋಭಾ || ಜಯ ಜಯ ಜಯತು || ||೩||

ಗಿರಿಜಾನಂದಸುವರ್ಧನ | ದುರುಳಾಸುರತತಿಮರ್ದನ |
ವರಮುನಿಮಾನಸಹಂಸ | ದುರಿತಕುಲಧ್ವಂಸ ||
ಶರಣಾಗತ ಜನಪಾಲಕ | ನರಕಾಂತಕಹಿತ ಬಾಲಕ |
ಶರನಗರಾಂತರ ನಿಲಯ | ಸುರುಚಿರ ಮಣಿವಲಯ || ಜಯ ಜಯ ಜಯತು || ||೪||

ಕಂದ

ಶಾರದೆಗೆರಗುತ ಶಾಸ್ತ್ರವಿ
ಶಾರದೆ ಲಕ್ಷುಮಿಯನುತಿಸಿ ಕಾತ್ಯಾಯಿನಿಗಂ |
ಮೀರದೆ ಮಣಿದಾಲಸ್ಯದಿ
ಸೇರದೆ ತ್ರಿದಶರಿಗೊಂದಿಪೆ ನಾ ಮನ್ಮನದೊಳ್ || ||೫||

ಭಾಮಿನಿ

ವೀರವಿತರಣ ಶೂರ ಕುಲಿಶಶ
ರೀರ ನತಮಂದಾರ ತತ್ತ್ವವಿ
ಚಾರ ಶರಧಿಗಭೀರ ಜಗದುದ್ಧಾರ ಭವ ದೂರ |
ಧೀರ ದಶಶಿರ ಕ್ರೂರದರ್ಪ ವಿ
ಹಾರ ಕದನಕಠೋರ ಅಕ್ಷಕು
ಮಾರಖಳಸಂಹಾರ ಭಳಿರೆ ಸಮೀರಸುತ ಶರಣು || ||೬||

ದ್ವಿಪದಿ

ಆದಿಕವಿ ವಾಲ್ಮೀಕಿ ಮುನಿಪಗೊಂದಿಸುತ |
ಮೇದಿನಿಯೊಳೆಸೆವ ಕವಿಜನರ ಮನ್ನಿಸುತ || ||೭||

ಗುರುಕೇಶವಾಖ್ಯ ಯತಿವರರ ವರ್ಣಿಸುತ |
ಹಿರಿಯವರ ಪದಯುಗಂಗಳಿಗೆರಗಿ ಮತ್ತಾ || ||೮||

ನಾಟಕ ಸುರಾಮಾಯಣಾಮೃತದೊಳಂದು |
ತಾಟಕಿ ಸುಬಾಹು ಮುಖ್ಯರಿಗೆಲ್ಲ ಕೊಂದು || ||೯||

ಸೀತಾಸ್ವಯಂವರವ ಗೈದು ರಘುವರನು |
ಖ್ಯಾತಿಯಂ ತಳೆಯುತ್ತಯೋಧ್ಯೆಗೈದಿದನು || ||೧೦||

ಇಂತೆಂಬ ಕಥನವನು ಯಕ್ಷಗಾನದಲಿ |
ಕಂತುಪಿತನಾಜ್ಞೆಯಿಂದೊರೆವೆನಿಂದಿನಲಿ || ||೧೧||

ವಾರ್ಧಕ

ರಜತಾದ್ರಿ ಶಿಖರದೊಳ್ ಪರಮ ವೈಭವದಿಂದ
ಅಜಸುರಾದಿಗಳ ವಂದನೆಯನುಂ ಕೈಗೊಂಡು
ಗಜವದನ ಶರಜನ್ಮನಂದಿ ಭೃಂಗೀಶ್ವರರ ಅಭಿನಯ ವಿಲಾಸದೊಡನೆ |
ಗಜಬಜಿಪ ಶ್ರುತಿಘೋಷ ಗಾನಗೀತಂಗಳಿಂ
ನಿಜದ ಪಂಚ ಬ್ರಹ್ಮ ವೈದುಮುಖಮಾಗೆಸೆದು
ತ್ರಿಜಗಮಂ ಪಾಲಿಸುತ ಗಿರಿಜೆಯೊಡಗೂಡಿ ಪರಮೇಶ್ವರಂ ಇರುತಿರಲ್ಕೆ || ||೧೨||

ಭಾಮಿನಿ

ಒಂದು ದಿನ ಕೈ ಮುಗಿದು ಪಾರ್ವತಿ
ಇಂದುಶೇಖರನೊಡನೆ ನಗುತಿಂ
ತೆಂದಳೆಲೆ ಪ್ರಾಣೇಶ ನೀ ಕೇಳಾದಿ ವಿಷ್ಣುವಿಗೆ |
ಬಂದಿರುವ ಸಾಹಸ್ರನಾಮಗ
ಳಿಂದ ಉತ್ತಮವಾವುದೆನುತೆನ
ಗಿಂದು ಕರುಣಾರಸದಿ ಪೇಳೆನೆ ತ್ರಿಪುರಹರ ನುಡಿದ || ||೧೩||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತರುಣಿ ಕೇಳು ಸಹಸ್ರನಾಮದ |
ಸರಿ ಕಣಾ ರಘುರಾಮ ನಾಮಾ |
ಕ್ಷರಗಳೆರಡರ ಮಹಿಮೆ ಬಹಳವ | ನೊರೆವೆ ನಿನಗೆ || ೧೪||

ಎನುತ ಮೂಲ ಕಥಾನುಸಾರವ |
ವನಿತೆಗರುಹಲು ಬಳಿಕ ವಾರಿಜ |
ತನಯನುಪದೇಶಿಸಿದ ನಾರದ | ಮುನಿಪಗಂದು || ||೧೫||

ಇತ್ತ ಬದರಿಯೊಳೋರ್ವ ವ್ಯಾಧನು |
ಕೃತ್ರಿಮದ ಜನ ಹತ್ಯೆಗೈದಿರೆ |
ಉತ್ತಮರ ದೆಶೆಯಿಂದರುಹಿ ತನ | ಪೆತ್ತವರ್ಗೆ || ||೧೬||

ವಾರ್ಧಕ

ಮುನಿಯಾದ ವಾಲ್ಮೀಕಿ ಕ್ರೌಂಚಪಕ್ಷಿಯ ನೆವದಿ
ವನದಿ ಚಿಂತಿಸುತಿರಲ್ ನಾರದಂ ಬಂದುಮವ
ಗನುಪಮದ ರಾಮಕಥೆಯನ್ನರುಹಿ ಸಂತೈಸಿ ಪೋಗಲಾನಂತರದೊಳು |
ವನದೊಳಿತ್ತಂ ಬಳಿಕ ತನ್ನಾಶ್ರಮದೊಳಿರ್ದ
ಜನಕಜಾ ನಂದನರ್ ತಾವ್ಯಾವ ಕುಲಜರೆಂ
ದೆನಲವರಿಗೀ ರಾಮಚರಿತಮಂ ಪೇಳಲಾರಂಭಿಸಿದ (ಕವಿಮಾರ್ಗದಿ) || ||೧೭||

ರಾಗ ಮಧ್ಯಮಾವತಿ ತ್ರಿವುಡೆತಾಳ

ಖಗ ಕುಲಾನ್ವಯರಾದ ಕುಶಲವ |
ರುಗಳು ಲಾಲಿಸಿ ವಿನಯದಿಂದೀ |
ಜಗತಿಗುತ್ತಮವಾದಯೋಧ್ಯಾ |
ನಗರ ಶೋಭಿಸುತಿರ್ದುದು | ಚಂದದಿಂದ|| ||೧೮||

ಆ ಪುರದೊಳಿಕ್ಷ್ವಾಕು ಕುಕ್ಷಿ ದಿ |
ಲೀಪ ಸಗರ ವಿಕುಕ್ಷಿ ಭಗೀರಥ |
ಭೂಪ ರಘು ಮೊದಲಾದ ನೃಪರು ಪ |
ರಂಪರೆಯೊಳಾಳಿರ್ದರು | ಕುಶಲದಿಂದ || ||೧೯||

ಮೇಲೆ ಕುಶ ಕೇಳಜಕುಮಾರ ಸು |
ಶೀಲ ದಶರಥ ನೃಪ ಲಲಾಮ ವಿ |
ಶಾಲ ಕೀರ್ತಿಗುಣಾಢ್ಯನೀ ಧರೆ |
ಪಾಲಿಸುತ್ತಿರುತಿರ್ದನು | ದಶರಥೇಂದ್ರ || ||೨೦||

ವಾರ್ಧಕ

ಲವನೆ ಕೇಳಿಂದ್ರಾದಿದಿಕ್ಪಾಲಕರು ವಾಣಿ
ಧವ ಫಣಿಪನಲ್ಲಿ ಸಹಿತಾಗಿ ಗಮಿಸುವದರಿಂ
ದವಗೆ ದಶರಥನೆಂಬ ಗುಣನಾಮ ಉಂಟಾಯ್ತು ಬಳಿಕ ಕೋಸಲದೇಶದ |
ಯುವತಿ ಕೌಸಲ್ಯೆ ಕೇಕಯದ ಕೈಕೇಯಿಯೆಂ
ಬವಳು ಮೇಣ್ಮಗಧದೇಶದ ಸತಿ ಸುಮಿತ್ರೆಯಿಂ
ತಿವರ ಪಾಣಿಗ್ರಹಣಮಂ ಗೈದು ಸುಖದಿಂದ ರಾಜ್ಯಮಂ ಪಾಲಿಸುತಿರೆ || ||೨೧||

ಭಾಮಿನಿ

ಒಂದು ದಿನ ದಿವಿಜೇಂದ್ರಚರರೈ
ತಂದು ಲೇಖನವಿತ್ತು ಪೇಳಿದ
ರಿಂದು ಶಂಬರದೈತ್ಯನುಪಟಳ ಪೆರ್ಚಿತಾಕ್ಷಣದಿ |
ಬಂದು ನೀ ಪರಿಹರಿಸಬೇಕೆನೆ
ಚಂದವಾಯ್ತೆಂದೆನುತ ಮೋಹದ
ಇಂದುಮುಖಿ ಕೈಕೆಯಳ ಮೊಗ ನೋಡುತ್ತ ನೃಪನುಡಿದ || ||೨೨||

ರಾಗ ತೋಡಿ ಅಷ್ಟತಾಳ (ಚತುರಶ್ರ ಅಷ್ಟ)

ಕೇಳ್ದೆಯೇನೆ ಸುಲಲಿತಾಂಗಿ | ಕೈಕೆ ಸುಗುಣಾಢ್ಯೆ ||
ಖೂಳದೈತ್ಯರಿರಿತಕಾಗಿ | ಕರೆದನೆಮ್ಮ ಸುರಪ || ||೨೩||

ಪೋಪುದಾದರೆನ್ನರಮಣ | ಪೋಗುವ ಸಂಗಡವೆ ||
ಆ ಪುರಂದರನ ಪಟ್ಟಣಕೆ | ತಾನು ಬಹೆ ನಿಮ್ಮೊಡನೆ || ||೨೪||

ಒಳ್ಳಿತಾಗಲದಕೇನೆಂದು | ವಲ್ಲಭೆಯ ರಥದಿ ||
ಕುಳ್ಳಿರಿಸಿಕೊಂಡು ನಡೆದ | ಕೂರ್ಮ ನಡುಗುವಂತೆ || ||೨೫||

ಭಾಮಿನಿ

ಹಾರಿದನು ರಥದೊಡನೆ ದಶರಥ |
ನಾರುಭಟಿಸುತ ಪೊಕ್ಕು ಶಕ್ರನ |
ಚಾರುಮನ್ನಣೆಗೊಂಡು ಶಂಬರಮುಖ್ಯ ದಿತಿಸುತರ ||
ತೋರುತೋರೆನಲಾಗ ಕೇಳಿದು |
ಭೂರಿವಿಕ್ರಮದಿಂದಲಸುರರು |
ಮೀರಿ ಬಂದಡಹಾಯ್ದು ನಿಂದರು ಸಮರಕನುವಾಗಿ || ||೨೬||

ರಾಗ ಮಾರವಿ ಏಕತಾಳ

ನೀನ್ಯಾರೆಲವೊ ನರಗುರಿ ನಮ್ಮಯ | ಸೇನೆಯ ಕೆಣಕಲಿಕೆ |
ದಾನವರೊಳು ತಾವ್ ಸಮರದೊಳೀಡೇ | ಮಾನವರ್ಸೆಣಸಲಿಕೆ || ||೨೭||

ಫಡ ಫಡ ತೊಲಗದಿರೆಲವೋ ಶಂಬರ | ದಡಿಗ ಖಳಾಧಮನೆ |
ತಡೆಯದೆ ನಿನ್ನಯ ತಲೆಯ ಚಂಡಾಡದೆ | ಬಿಡುವೆನೆ ಮದಾಂಧನೆ || ||೨೮||

ಮೋರೆಯೀಕ್ಷಿಸದೆ ರಣದೊಳು ಕಾದುವೆ | ವೀರನಹುದೊ ಮುದುಕ ||
ನಾರಿಗೆ ಗತಿಯೇನುಸುರದೆ ನಡೆ ನಡೆ | ಸಾರೊ ಭುವನಕೀಗ || ||೨೯||

ದಿವಿಜರ ಬಾಯ್‌ಬಡಿದೆಜ್ಞದ ಹವಿಗಳ | ಸವಿ ಸವಿದುಂಡುದನು |
ತವಬಾಯಿಂದುಗುಳಿಸುವೆನು ನೋಡೆಂ | ದವನಿಪನುಸುರಿದನು || ||೩೦||

ತಪ್ಪಾಡಿದೆಯಾದರೆ ನಾಲಿಗೆ ಕೊ | ದಪ್ಪಳಿಸುವೆ ತಾಳು ||
ತಪ್ಪಿತೆನುತ ಶಚಿಯನು ಪಾದಕೆ ತಂ | ದೊಪ್ಪಿಸದಿರೆ ಬಿಡೆವು || ||೩೧||

ಎನುತೆನುತೀ ಪರಿ ಸಮಸಮ ಯುದ್ಧವ | ನೆಸಗಿ ಪರಾಕ್ರಮದಿ ||
ಅನಿಮಿಷರೆದೆ ಧಗಧಗಿಸಲು ಕಾದಿದ | ರನುಪಮ ವಿಕ್ರಮದಿ || ||೩೨||

ವಾರ್ಧಕ

ತರಳ ಕೇಳಾಹವದಿ ಭೂಮೀಶನುರವಣಿಸೆ
ದುರುಳರಾ ಕಾಲಕೇಯರ ಪುರಕೆ ಭರದೊಳುಂ
ಸರಿಯಲುಂ ಕಂಡಿವಂ ಬೆನ್ನಟ್ಟುತಿರೆ ಮೋಹದಂಧಕಾರದಿ ಸಿಲುಕಿತು |
ತೆರನ ಕಾಣದೆ ನೃಪಂ ಬಳಲಿ ಬೆಂಡಾಗಿ ನಿಂ
ದಿರಲು ಕತ್ತಲೆಯೊಳಾದಿವಿಜ ವೈರಿಗಳು ಬೊ
ಬ್ಬಿರಿದು ತಾವಾರ್ಭಟಿಸುತೈಸಿಕೊಂಡಿರಲದಂ ಸಂಪಾತಿ ತಿಳಿದೆಂದನು || ||೩೩||

ರಾಗ ಬೇಗಡೆ ಅಷ್ಟತಾಳ

ಮೋಸವಾಯ್ತಿನ್ನೇನೆಂಬೆನೀ ಪರಿಯ |
ವಾಸವಾರ್ಜಿತ ನಮ್ಮ ಕರುಣದ ಸಿರಿಯ ||
ಮಾಸುವ ಕಾಲ ಬಂದೊದಗಿದೆ ಸಾಕು |
ಈ ಸಮಯದಿ ಸಹಾಯವ ಮಾಡಬೇಕು ||
ಕೇಳ್ದೆಯಾ | ಭೂಪ | ಕೇಳ್ದೆಯಾ || ||೩೪||

ಲಕ್ಷುಮಿಯರಸನ ಕಾರ‍್ಯಕೆ ಹಿತವೆ |
ಪೇಕ್ಷಿಸುವುದ ಕಂಡು ತನಗಿಂದು ಮತವೆ ||
ಲಕ್ಷವೆಂದು ಕಲಿ ಮನದಿ ಯೋಚಿಸುತ |
ಪಕ್ಷೀಂದ್ರ ಬಲದ ತೋಳದಂ ನೆಗಹಿಸುತ || ಕೇಳ್ದೆಯಾ || ||೩೫||

ತೋರಿದನನುಪಮ ರತ್ನದ ಪ್ರಭೆಯ |
ಮೀರಿತು ಸೂರ‍್ಯನ ಕಿನ್ನರ ಸಭೆಯ ||
ಭೋರನೆ ನಡನಡುಗುತ್ತಿರಲಾಗ |
ಧಾರಿಣಿಪತಿ ಮುಂದುವರಿದನು ಬೇಗ || ಕೇಳ್ದೆಯಾ || ||೩೬||

ವಾರ್ಧಕ

ಸಂಗರದಿ ದಶರಥಂ ಗುಡುಗಿ ರೌದ್ರಾವೇಶ
ಮಂಗೊಂಡು ಕಾದುತಿರಲಾಸಮಯದೋಳ್ ರಥದ
ಬೆಂಗಡೆಯ ಕೀಲುರಿದು ಗಾಲಿಯಂ ಕಳಚುವಂತಾಗಿ ನೃಪ ಕಾಣದಿರಲು |
ತುಂಗ ಕುಚಯುಗೆ ತನ್ನ ಕಡಗ ಕಂಕಣಗಳಿಂ
ಸಿಂಗರದ ಕರದೊಳ್ವರೂಥಮಂ ನಡರಿಸಲು
ಹಿಂಗದೆ ಧರಾಧಿಪಂ ಶಂಬರನ ಮುರಿದಟ್ಟಿ ದಿಗ್ವಿಜಯಮಂ ಪಡೆದನು || ||೩೭||

ಭಾಮಿನಿ

ಪಿಂತೆ ತಿರುಗಿದು ನೋಡೆ ತನ್ನಯ
ಕಾಂತೆಯಳ ಕೈಚಳಕವನು ಮಿಗೆ
ಸಂತಸಂಬಡುತಾಗ ಮುಂದಹ ದೈವಕೃತ್ಯವನು |
ತಾಂ ತಿಳಿಯದವಳೊಡನೆ ನುಡಿದನು
ದಂತಿಗಾಮಿನಿ ಪಿರಿದು ಮೆಚ್ಚಿದೆ
ನಿಂತು ಬೇಕಾದೆರೆಡು ವರಗಳನೀವೆ ನಿನಗೆಂದ || ||೩೮||

ರಾಗ ಕೇದಾರಗೌಳ ಅಷ್ಟತಾಳ

ಅರಸನ ನುಡಿಕೇಳ್ದು ಕೈಕೇಯಿ ದೇವಿಯು |
ಚರಣಕಾನತಳಾಗುತ್ತ ||
ವರಗಳಿನ್ಯಾಕೆ ಬೇಕೆಂಬಾಗ ಬೇಡುವೆ |
ನಿರಲಿ ನಿನ್ನ ಮೇಲೆಂದಳು || ||೩೯||

ಹೆಂಡತಿ ನುಡಿದಂದವನು ಕೇಳ್ದು ಹರುಷವ |
ಗೊಂಡವಳನು ತಕ್ಕೈಸಿ ||
ಚಂಡಸುರೌಘವ ಸಂತೈಸಿ ಪೊರಟನು |
ದ್ದಂಡ ಪರಾಕ್ರಮದಿ || ||೪೦||

ಸಂಪಾತಿಯನು ಕಂಡು ಸುಖಗೋಷ್ಠಿಯಿಂ ಸ್ನೇಹ |
ಸಂಪಾದಿಸುತ ಬಳಿಕ ||
ಗುಂಪಾದ ವಾದ್ಯನಿನಾದದೊಳ್ಪುರಕಾಗ |
ದಂಪತಿಗಳು ಬಂದರು || ||೪೧||

ಕಂದ

ಇತ್ತಲು ದಶಶಿರನೆಂಬ ಖ
ಳೋತ್ತಮನುಪಹತಿ ಸೈರಿಸಲಾರದೆ ಬಳಿಕಂ |
ಚಿತ್ತದಿ ದಿವಿಜರ್‌ಬಳಲುತ
ಬತ್ತಿದ ಮೊಗದಿಂದೈದಿ ಸುರೇಶನೊಳೆಂದರ್ || ||೪೨||

ರಾಗ ಸುರುಟಿ ಏಕತಾಳ

ಲಾಲಿಸು ದಿವಿಜೇಂದ್ರ | ಸುರಕುಲ |
ಪಾಲಕ ಗುಣಸಾಂದ್ರ || ಪ ||

ದಶಶಿರನೆಂಬವನು | ಬಾಧಿಸಿ |
ದೆಶೆಗೆಡಿಸೆಮ್ಮುವನು ||
ಶಶಿಸೂರ್ಯರ ಸಂಚಾರವ ನಿಲಿಸಿದ |
ಪಶುಪತಿಯೇ ಬಲ್ಲಾತನುಪದ್ರವ || ಲಾಲಿಸು || ||೪೩||

ಶಚಿಯರ ಸೆರೆವಿಡಿದು | ಕೊಂಡೈ |
ದತಿಶಯದಲಿ ಬಡಿದು ||
ಕ್ಷಿತಿಯ ಮಖಾದಿಗಳಪಹರಿಸುತ್ತಲಿ |
ಕ್ರತುಮುಖರೆಂಬೀ ಪೆಸರಡಗಿಸಿದರು || ||೪೪||

ವಾರ್ಧಕ

ಕೇಳಿದೈ ಕುಶಕುಮಾರಕನೆ ಭಯದಿಂದ ದಿವಿ
ಜಾಳಿ ಮೊರೆಯಿಡಲವರನೊಡಗೊಂಡು ವಾಗ್ದೇವಿ
ಯಾಳಿದನ ಬಳಿಗೈದಲಾತನಿವರಂ ಕಂಡು ಲಕ್ಷ್ಮೀನಿವಾಸನೊಡನೆ |
ಪೇಳಬೇಕೆನಲೈದಿ ಪಾಲ್ಗಡಲ ತಡಿಯೊಳೀ
ಪಾಳಯವು ನಿಂತು ಬಳಿಕಾರಂಭಿಸಿದರಂದು
ಘೋಳೆನುವ ಜಯರವಂ ಬ್ರಹ್ಮಾಂಡ ಭೇದಿಸುವ ತೆರದೊಳಾ ಕ್ಷಣದೊಳಂದು || ||೪೫||

ಭಾಮಿನಿ

ಏನಿದೇನದ್ಭುತವು ಮೇಘ
ಧ್ವಾನದೊಳು ಧ್ವನಿಕೇಳುತಿದೆ ಇಂ
ದೇನುಪದ್ರಗಳಡಗಿತೋ ಸುರನಿಕರಕೆಂದೆನುತ |
ಭಾನುಕೋಟಿ ಪ್ರಕಾಶನಾಕ್ಷಣ
ತಾನೆ ಹೊರಬಂದಾಲಿಸುತ ಸು
ಮ್ಮಾನದಿಂದಲಿ ಕಳುಹಿ ಗರುಡನನವರ ಕರೆಸಿದನು || ||೪೬||

ಕಂದ

ಬಂದಾ ಅಮರಸ್ತೋಮಕೆ
ಸಂದರುಶನಮಂ ನೀಡಲು ಸುಮನಸರುಗಳುಂ |
ಇಂದಿರೆಯರಸನ ಕಂಡಾ
ನಂದದಿ ಜಯ ಜಯ ರವದಿಂ ನುತಿಸಿದರಾಗಳ್ || ||೪೭||

ರಾಗ ಮಧ್ಯಮಾವತಿ ಏಕತಾಳ

ಪಾಲಿಸಬೇಕೆಮ್ಮ ಪರಮಪಾವನನೆ |
ಬಾಲ ಮುಕುಂದ ಕ್ಷೀರಾಬ್ಧಿಶಯನನೆ ||
ನಳಿನಸುಲೋಚನ ನರಕವಿಮೋಚನ |
ಖಳಕುಲದಹನ ಖಗಪತಿವಾಹನ || ಪಾಲಿಸ || ||೪೮||

ಭವ ಭಯ ವರ್ಜಿತ ಭಜಕಜನಾರ್ಚಿತ |
ರವಿಶತಸಂಕಾಶರಮೆಯಳ ಪ್ರಾಣೇಶ || ಪಾಲಿಸ || ||೪೯||

ನಿರುಪಮ ಚಾರಿತ್ರ ನಿಗಮ ಸಂತತ ಸ್ತೋತ್ರ |
ನಿರತ ನಿಜಾನಂದ ನಿರ್ಮಲ ನಿರ್ದ್ವಂದ್ವ || ಪಾಲಿಸ || ||೫೦||

ವಾರ್ಧಕ

ನೊಂದೆವೈ ದಶಕಂಠನುಪಹತಿಗಳಿಂದ ನಾವ್
ನಿಂದೆವೈ ಬಿಡದೆ ದೇಶಭ್ರಮಣೆಯೋಳ್ ಬಳಿಕ
ಸಂದೆವೈ ಕಡುದುರುಳನತ್ಯುಗ್ರ ಸೇವೆಯೊಳಗದನು ಸೈರಿಸಲಾರದೆ |
ಬಂದೆವೈ ದೇವರ ಪದಾಂಬುಜದೆಡೆಯೊಳಿಂತು
ನಿಂದೆವೈನತೆಯವಾಹನ ಜಗದ ವ್ಯಾಪಕನೆ
ತಂದೆ ವೈಭವದಿಂದ ದಯದೋರಿ ರಕ್ಷಿಸಲು ಬೇಕೆಂದನಬುಜೋದ್ಭವ || ||೫೧||

ಕಂದ

ಕಡುದೈನ್ಯದಿ ದಿವಿಜರ್ಮೊರೆ
ಯಿಡುವ ವಿಷಾದದ ವಾಕ್ಯವನಾಲಿಸಿ ಮುದದಿಂ |
ಕಡಲಾಳ್ದನು ಕೃಪೆಯಿಂದಲಿ
ಬಿಡದವರಿಂಗಭಯವ ಕೊಡುತೆಂದನು ಭರದೊಳ್ || ||೫೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಳಲಿದಿರಿ ಬಲುವಾಗಿ ಸಾಕಿ |
ನ್ನಳಲದಿರಿ ಬಿಡಿ ಚಿಂತೆ ಮುಂದಾ |
ಖಳನುಪದ್ರವ ನಿಲಿಸಿಕೊಡುವೆನು | ಇಳೆಯೊಳೆಲ್ಲ || ||೫೩||

ಕಿರಿದು ದಿನಕಾ ಜಗತಿಯೊಳಗವ |
ತರಿಸಿ ನರರೂಪಿನಲಿ ನಿಮ್ಮನು |
ಹರುಷಬಡಿಸುವೆ ನಂಬಿರೆನ್ನಯ | ಭರವಸೆಯನು || ||೫೪||

ವಾರ್ಧಕ

ಬಂದು ದಶಸ್ಯಂದನಗೆ ಕಂದ ತಾನೆಂದೆನಿಸಿ
ಇಂದು ಸುಮಗಂಧಿ ನೆವದಿಂದಲೀ ಬಂಧಿಸುತ
ನಿಂದಿಸುವ ಮಂದಖಳ ವೃಂದಮಂ ಸಮರದೊಳು ಕುಂದದೆಮ ಮಂದಿರದೊಳು |
ನಿಂದಿರಿಸಿ ಚಂದದೊಳು ಮುಂದೆಸೆವ(ಧುರದಿ) ದಶ
ಕಂಧರನ ನಂದನರ್ ಹೊಂದಿದ ಮದಾಂಧರಂ
ಬಂಧು ಸಂಮಂದಿಗರ ಮಂದಿ ತಮ್ಮಂದ್ಯರುಗಳಂದಮಂ ಕಂದಿಸುವೆನು || ||೫೫||

ಅಂಜದೇ ನೀವ್ ಪೋಗಿ ಧರೆಯೊಳ್ವಾನರರಾಗಿ
ಸಂಜನಿಸಿ ವನದೊಳಂ ಬೆಳೆದಿರ್ಪ ಫಲಗಳಂ
ಭುಂಜಿಸುತ ಮುದದಿಂದಲಿರಿ ಬಹೆನು ಭರದಿಂದ ಸಂದೇಹಮಿಲ್ಲೆನುತಲಿ |
ಕಂಜಲೋಚನನಭಯವಿತ್ತು ಪೇಳಿದ ವಿನಯ
ರಂಜಿತದ ನುಡಿಕೇಳ್ದು ಸುರರು ಧೈರ್ಯವ ತಾಳ್ದು
ಮಂಜುಳ ಶರೀರನಡಿಗೆರಗಿ ಸಂತಸದಿ ಗುಡಿಕಟ್ಟಿ ತಾವ್ ಬೀಳ್ಕೊಂಡರು || ||೫೬||