ರಾಗ ಢವಳಾರ ಏಕತಾಳ

ವರಮಹಾಲಕ್ಷ್ಮಿವಿಲಾಸನೆ ಜಯ ಜಯ |
ನಿರತ ಸುಧಾಬ್ದಿಯ ವಾಸನೆ ಜಯಜಯ |
ಸುರಮುನಿಮಾನಸಹಂಸನೆ ಜಯ ಜಯ |
ದುರಿತಕುಲದ ವಿಧ್ವಂಸನೆ ಜಯ ಜಯ |
ಪರಮ ಪುರೂಷನೆ ಹಸೆಗೇಳೂ || ||೩೩೮||

ಅನುಪಮಸದ್ಗುಣ ಸಾಂದ್ರ ಪರಾಕು |
ಇನಕುಲವಾರಿಧಿ ಚಂದ್ರ ಪರಾಕು |
ದನುಜಾಧಮ ಕುಲಶಿಕ್ಷಪರಾಕು |
ವಿನುತಾನತಜನರಕ್ಷ ಪರಾಕು |
ವಿನಯದಿ ರಾಮ ಹಸೆಗೇಳು || ||೩೩೯||

ಕುಶಿಕಸುತಾಧ್ವರಪಾಲನ ಧೀರ |
ಶಶಿಮುಖಿಯಹಲ್ಯಾ ಶಾಪವಿದೂರ |
ದಶರಥತನುಜ ಜನಕಜಾಪ್ರೀತ |
ಪಶುಪತಿಚಾಪವಿನಾಶ ವಿಖ್ಯಾತ ||
ದಶಕಂಠವೈರಿ ಹಸೆಗೇಳೂ || ||೩೪೦||

ಮುತ್ತಿನ ಹಸೆಯಲ್ಲಿ | ಪತ್ತಿಸಿ ವಧುವರರ |
ಸುತ್ತಲು ನೆರೆದಾ | ಮುತ್ತೈದೆಯರು |
ಸುತ್ತಲು ನೆರೆದಾ ಮುತ್ತೈದೆಯರು ನಿಂತು
ಮೊತ್ತಾಗಿ ಸೇಸೆ ತಳಿದರು || ಶೋಭಾನೇ || ||೩೪೧||

ಘಿಲಿರೆಂಬ ಗೆಜ್ಜೆಗಳು | ನಲಿವ ಮೊಲೆಗಟ್ಟುಗಳು |
ಬಲಿದ ಜವ್ವನದಾ | ಚಲುವೆಯರು |
ಬಲಿದ ಜವ್ವನದಿಂದ | ಚಲುವಸ್ತ್ರೀಯರು ಮುಕ್ತಾ |
ಫಲದಲಿ ಸೇಸೇ ತಳಿದರು || ಶೋಭಾನೆ || ||೩೪೨||

ಮಂಗಲಾಷ್ಟಕ

ರಾಮಂಸೂರ್ಯಕುಲಾಂಬುಧೌ ಹಿಮಕರಂ ರಾಜೀವನೇತ್ರಂ ಹರಿಂ
ಮೌನೀಕೌಶಿಕ ಯಜ್ಞಪಾಲನಕರಂ ಹತ್ವಾಮಹಾ ತಾಟಕಾಂ |
ಮಾರಾರೀಧನು ಖಂಡನಂ ರಘುವರಂ ಕೋದಂಡ ದೀಕ್ಷಾಗುರುಂ
ಕೌಸಲ್ಯಾನಂದವಿವರ್ಧನಂ ಗುಣನಿಧಿಂ ಕುರ್ಯಾತ್ಸದಾ ಮಂಗಲಂ || ||೩೪೩||

ವೃತ್ತಾಕಾರ ಮುಖಾಂಬುಜೇ ಗುಣಯುತೇ ಚಿತ್ರಾಂಬರಾಲಂಕೃತೇ
ಕಂದರ್ಪೋಪಮ ಸುಂದರೇ ಸುಲಲಿತೇ ವಕ್ಷೋದ್ಭವಂ ಶೋಭಿತೇ |
ನಾಗಾಭೂಷಣಭೂಷಿತೇ ನಿರುಪಮೇ ಕಂಕಂಜ ಪಾತ್ರಾಕೃತೇ
ಸೀತಾನಾಮವಿರಾಜಿತೇಶುಭಕರೇ ಕುರ್ಯಾತ್ಸದಾಮಂಗಲಂ || ||೩೪೪||

ಕಂದ

ಇಂತೀ ಪರಿಧಿಯೊಳ್ ವಿಪ್ರರು
ಸಂತಸದಿಂ ಮಂಗಲಾಷ್ಟಕವ ತಾವ್ ಪೇಳಲ್ |
ಕಾಂತೆಯರಾ ಬಳಿಕಂ ಭೂ
ಕಾಂತನ ಸುತರಿಗೆ ತಂದೆತ್ತಿದರಾರತಿಯಂ || ||೩೪೫||

ಶೋಭಾನೆ ಪದ ಧ್ರುವತಾಳ

ಶಂಖಿನಿಯರು ನವರತ್ನಗಳಾ |
ಲಂಕರದಿಂದಲಿಕುಚ ಭರದಿ |
ಕುಂಕುಮದಾರತಿಯಾ ಹವಣಿಸಿ |
ಹವಣಿಸಿ ತಂದಾಗ ವಿಲಾಸದಿ |
ಬಿಂಕದೊಳೊಂದೂ ಬೆಳಗಿರೆ || ಶೋಭಾನೆ || ||೩೪೬||

ಪದುಮಿನಿಯರು ನೋಟದ ವಿಟರನು |
ಮೆದೆಗೆಡಿಸುತ ಮೋಹನ ಕರದೊಳು |
ಪದುಮದಾರತೀಯ ಬೇಳಗಿರೇ || ಶೋಭಾನೆ || ೩೪೭||

ಈತೆರದೊಳು ನಾನಾಸತಿಯರು |
ಭೂತಳದೊಳಗಚ್ಚರಿಯೆನಿಸುವ |
ರೀತಿಯೊಳಾರತಿಗಳಾ |
ಆರತಿಗಳಾ ತಾ ವಧುವರರಿಗೆ |
ಪ್ರೀತಿಯೊಳಗೆತ್ತೀ ನಲಿದರೂ || ಶೋಭಾನೆ || ||೩೪೮||

ಕಂದ

ಇಂತೀ ವಿಭವದೊಳೊಲಿದಾ
ಕಾಂತೆಯರಾರತಿಯಕ್ಷತೆಯಾಗಲ್ ಮುದದಿಂ |
ಬಂದಾಕ್ಷಣದೊಳ್ ಭೂಸುರ
ಸಂತತಿಯಿಂ ದಕ್ಷಿಣೆಗೆನುತಾ ಸಭೆಯೊಳಗಂ || ||೩೪೯||

ರಾಗ ಭೈರವಿ ಆದಿತಾಳ

ಕೈಯಲ್ಲಿ ದಂಟೆ ಪಿಡಿದು ಕಾಲನಡುಗಿಸುತ್ತಾ |
ಮೈಯೆಲ್ಲ ಬಳುಕುವಂತಾ |
ಮುದುಕರು ಕೆಮ್ಮುತ್ತ |
ಸಯ್ಯನೆ ನುಗ್ಗುವಂತಾ |
ಸಾಮರ್ಥ್ಯದವರು |
ಹೊಲನಿಕ್ಕಿಬಂದು ಹೊಕ್ಕರ್ಕರ್ನಾಟರೂ || ||೩೫೦||

ಭಾಪೂರಹುವಾ ಹೈಬೃಡ್ನೆ ಕುನೃ ಜಗ್ಗ |
ಕಹಾಕರ ಬೃಡಕೋದನಾ ಲೇಕೋ |
ಜಾವನುತ್ತ ಹಿಂದುಸ್ಥಾನದ |
ವಿಪ್ರರ್ಬಂದರ್ಮಾತಾಡುತ್ತಾ || ||೩೫೧||

ಬಾಯಿಲಿ ಹುಲಿ ಹೊತ್ತಿ ಬಾಹಿರದೀ ಸತನಾಯಿ |
ಕಾಯವಿದ್ಯಮಾನತಿಜಾ ಕಳತಿತೆತಾಹಿ |
ದಾಯಿಗ ಬಂದು ಹ್ಯಾಜಾದಕ್ಷಣ ದ್ಯಾವೆನುತ್ತಾ |
ವೋರಂತೆ ಮಹರಾಷ್ಟ್ರದ ವಿಪ್ರರ್ಬಂದರ್ಮೊತ್ತಾ || ||೩೫೨||

ನಾವೆಲ್ಲ ಬಾಹೆ ಮೊದಲು ನಮ್ಮರೆಲ್ಲಿಹಳೆ |
ಠಾವಿಲ್ಲಿ ಕೊಡ್ಬಾಳೆ ಗಂಟಿಳುಹಲಿಕ್ಕೆ ಪೇಳೇ |
ಧಾವಲ್ತೋಸೀ ನಾನಿಂನ ದೇವರವೆನ್ನುತವರು |
ಕೋವಿದರ್ಬಂದರಾಗ ದೇಶಸ್ಥ ಬುಧರು || ||೩೫೩||

ಉಣಿಪುನೆಂಟಪೇಕ್ಷೋಮಂಪೆರಾವನ್ ಮಾಣಿಲು ಕೇಣೇ |
ಪಣವು ದಕ್ಷಿಣೆಯರಡಾ ಕಲಹೊಮಾಂಪೊರಿಂಚ ಪಂಣೇ |
ಗಣಿತಶಾಸ್ತ್ರೊ ತರ್ಕೊಮೀಮಾಂಸೆಂಟು ಬರೊಡು ಯೆಂಕುಳಿದಿರು |
ಸೊಣ್ಪೊಘಳಿಗೆಗ್ ಝಡಿತ್ ಪಂಬೆ ಯೆನುತ ತುಳುವ ದ್ವಿಜರು || ||೩೫೪||

ನಿಂಗೊ ದೊಡ್ಡು ಪದ್ಯಕ್ಕೊನೀವಲ್ಲಿ ಪೋಗೀ |
ಯೆಂಗೊಕ್ಕೆ ದಕ್ಷಿಣೆಯ ಕೊಡಿಸಿ ಮುಂದಾಗಿ |
ಅಂಗಳವನು ಮಾಣಿ ದಾಂಟಲು ಯಿಂಬಿಲ್ಲ |
ಹೀಗೆಂಬ ಹೈಗ ವಿಪ್ರರ್ಬಂದು ನೆರದರಲ್ಲೇ || ||೩೫೫||

ತೆಕ್ಕಡ ಪಳಘೆಚ ದಕ್ಷಿಣವಾಂತು ಹಳ್ಳಿ |
ಪೊಕ್ಕಡೆ ಹಡಲ್ಯಾತ ವಾಟರೊಂದು ಪಳ್ಳಿ |
ಚುಕ್ಕನುವಚ್ಚನಾಸಿ ಚೊಯ್ಯಯೆನುತೆಂದು |
ತಕ್ಕಷ್ಟು ಕೊಂಕಣ ವಿಪ್ರರ್ಬಂದರಂದು || ||೩೫೬||

ವಾರ್ಧಕ

ಕುವರ ಕೇಳಾಮೇಲೆ ದಕ್ಷಿಣೆಯ ಪೊತ್ತು ಭೂ
ದಿವಿಜರ್ ದಣಿದರ್ ಯಾಚಕಿಗಳ ದರಿದ್ರಮಂ
ಸವೆದುದಿತ್ತಂಡದಿಂ ನೃಪರಿತ್ತ ಧನಕನಕವಸ್ತು ಭೂದಾನದಿಂದ |
ದಿವಸ ನಾಲ್ಕೈದರೊಳಗಾಹ ಕೃತ್ಯಂ ನಡೆಸು
ತವಭೃತ ಸ್ನಾನಮಂ ಮುಗಿಯೆ ಬಳಿಕಖಿಳನೆರೆ
ದವನಿಪರ ತರತಮವನರಿತು ಮನ್ನಿಸಿದರುಡುಗೊರೆಯುಚಿತದಿಂ ಭೂಪರು || ||೩೫೭||

ಭರದಿ ಬಾಣಸಿನ ಗೃಹದೊಳಗಡುಗೆಯಂ ಗೈಸಿ |
ತರತರದೊಳೆಡೆಹಯ್ಕ ಶಾಲ್ಯೋಗರಂ ಸಾರು |
ಪರಮಾನ್ನ ಘೃತಸೂಪ ಮೊದಲಾದ ಪರಿಕರದ ಸಾಂಬರೇ ಆಂಬೊಡೆಗಳ |
ಮೆರವೆತಾಳ್ಳ ಕೋಸಂಬರೀ ಪಳದ್ಯಾಶೀ |
ಕರಣೆಗುಡಿ ಪಾಪಡೆಗಳ್ ಮಂಡಿಗೆಗಳ್ಮೊದಲಾದ |
ಪರಿಪರಿಯ ಭಕ್ಷ್ಯಭೋಜ್ಯಂಗಳಿಂ ಮಧುಶರ್ಕರಂಗಳಂ ಬಡಿಸಿರ್ದರೂ || ||೩೫೮||

ರಾಗ ಕೇದಾರಗೌಳ ಅಷ್ಟತಾಳ

ಉಂಡೆದ್ದ ಜನರು ಕೈತೊಳೆಯುತ್ತಲಿರಲು |
ದ್ದಂಡ ಭಾನಸದೊಳೋರ್ವ |
ಚಂಡವಿಪ್ರನು ಬಲುಬರಡನು ತಾ ಬಾಗಿ |
ಕೊಂಡು ಕೈತೊಳೆಯುತಿರೆ || ||೩೫೯||

ಬಂದಲ್ಲಿಗಾಗಿ ತಾ ನಸುನಗುತಲಿ ನಿಂತು |
ಮಂಥರೆ ಬಳಿಕವನ |
ಹಿಂದಣ ಕಟಿಸೂತ್ರ ಕವುಪೀನ ಸಹಿತೆಳ |
ತಂದು ನಗ್ನವಗೈದಳು || ||೩೬೦||

ನೋಡಿದು ಮೊರೆಯಿಡುತಲಿ ವೃದ್ಧ ವಿಪ್ರನು |
ಘಾಡದಿ ತನಗಾಕೆಯು ||
ಮಾಡಿರ್ದುದವಮಾನ ರಾಘವಗೊರೆಯಲಾ |
ಖೋಡಿಯನೆಳತರಿಸೀ || ||೩೬೧||

ಬಿಡಿಸಲಾಕೆಯ ಬಲು ರೋಷದಿ ಕನಲುತ್ತ |
ನುಡಿದಳು ರಘುಜನಿಗೆ ||
ಫಡ ನಿನಗೇನು ಪ್ರಯತ್ನದೊಳಾದರು |
ಅಡವಿಯ ಸೇರಿಸದೇ || ||೩೬೨||

ಬಿಡುವವಳಲ್ಲೆಂದು ಶಪಥವ ಗೈದೊಡ |
ನೊಡನೆ ಪೋಗಲು ಬಳಿಕ ||
ತಡೆಯದೆಲ್ಲರನು ಮನ್ನಿಸಿದನು ಭೂಮೀಶ |
ರುಡುಗೊರೆಯುಚಿತವಿತ್ತು || ||೩೬೩||

ವಾರ್ಧಕ

ಆದರಿಸಿದಾಮೇಲೆ ಮದುವಣಿಗರಂ ಜನಕ
ಭೂಧನ ಮದೇಭರಥಹಯಕೈದು ರತ್ನೋತ್ಕ
ರಾದಿಗಳ ಕಾಂತಾಜನಂಯೆಸೆವ ಗೋಮಹಿಷಿ ಸಹಿತ ಬಳುವಳಿಯನಿತ್ತು |
ಮೇದಿನಿಸುತಾತ್ಮಜನೆ ಕೇಳು ದಶರಥನ ಭಾ
ಗ್ಯೋದಯಕ್ಕೆಣೆಯುಂಟೆ ಪರಿಣಯಾಂತರದೊಳೊಲಿ
ದಾ ಧರಿತ್ರೀಶ ತತ್ಪುರದಿಂದ ಪೊರವಂಟನಖಿಳ ವೈಭವದಿಂದಲಿ || ||೩೬೪||

ರಾಗ ಆಹೇರಿ ಝಂಪೆತಾಳ

ಭರದೊಳೈತಂದರಾಗ | ಶೋಭಿಸುವ |
ತರತರದ ವಾದ್ಯರವದಿಂದ ಬೇಗ || ಪ ||

ಕರಿರಥಹಯಾದಿಗಳ | ನೆರವಿಯೆಂದೆಡೆವಿಡದೆ |
ಪರಿಪರಿಯ ಛತ್ರಚಾ | ಮರ ಪತಾಕೆಗಳುಲಿಯೆ |
ತರುಣಿಯರ ಗಡಣಕೂಡಿ | ರಾಜಕುವ |
ರರು ಸಹಿತ ಪಯಣಮಂ ಮಾಡೀ || ||೩೬೫||

ಜನಪನೃಪ ಕಳುಹಲಿಕೆ | ವಿನಯದಿಂ ಬರಲಾಗ |
ಅನುಸರಿಸಿ ನಡೆದರೇ | ನೆನುವೆ ಕೆಂಧೂಳೆದ್ದು |
ದಿನಪರಥವಡರುವಂತೆ | ಭಾರ್ಗವನು |
ವನದೊಳಗೆ ಕೇಳ್ದನಂತೆ || ||೩೬೬||

ವಾರ್ಧಕ

ಬಿಗಿದ ಜಡೆ ರುದ್ರಾಕ್ಷೆ ಪದ್ಮಮಾಲಿಕೆಯ ಪುಲಿ
ದೊಗಲುಡಿಗೆ ಭಸ್ಮಲೇಪನ ನಾಮ ತ್ರೈಪುಂಡ್ರ
ಪೆಗಲೇರಿಸಿದ ಬಾಣದಿಂ ಪರಮ ಶಾರ್ಙ್ಗಮಂ ನಿರತ ದಕ್ಷಿಣಹಸ್ತದೀ |
ಝಗಝಗಿಸುತಿಹ ಪರಶುಧರಿಸಿ ಶರಜಾಲಂಗ
ಳೊಗುಮಿಗೆಯ ತಾಮಸದ ಪುಂಜದಿಂದೆಸವ ಕಲಿ
ಭೃಗುರಾಮನತ್ಯಧಿಕ ರೋಷದಿಂದೆದ್ದು ಘುಡುಘುಡಿಸುತ್ತಲಿಂತೆಂದನು || ||೩೬೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನಿದೇನಾಶ್ಚರಿಯವಿಂದಿಗೆ |
ಹಾನಿಗೈದಿಹೆ ಪಾರ್ಥಿವರಕುಲ |
ಜಾಣರಾರುಳಿದವರು ಯೆನ್ನಯ | ಬಾಣಕಡಸಿ || ||೩೬೮||

ಧರೆಯನಿಪ್ಪತ್ತೊಂದು ಬಾರಿ ಕ |
ಠೋರದಿಂದರಿಛಟೆಯ ಗೆಲಿದಿಹೆ |
ಮರೆಯೊಳಡಗಿಹವಾತತಿಯ ಸಂ | ಹರಿಸದಿರೆನು || ||೩೬೯||

ಭಾಷೆಗೊಟ್ಟಿಹೆ ಹಿಂದೆ ಜನನಿಗೆ |
ದ್ವೇಷಿ ಕರರಕುತದೊಳು ಜನಕನ |
ಶೇಷಕರ್ಮವನಡೆಸಿ ಪಿತನಿಗೆ | ತೋಷವೀವೇ || ||೩೭೦||

ಎಂದು ಶಪಥವ ಗೈದು ಕ್ಷತ್ರಿಯ |
ರೊಂದನುಳಿಯದೆ ಕುಂದಿಸಿದೆ ತಾ |
ಮುಂದನರಿಯದೆ ಪಥದಿ ಬಹರಾ | ರೆಂದು ನೋಳ್ಪೆ || ||೩೭೧||

ಎನುತ ಪರಶುವ ಧರಿಸಿ ರೋಷದಿ |
ವನದ ಹೊರವಾಗಿಲಲಿ ಸಿಂಹ |
ಧ್ವನಿಯದೋರುತ ಕನಲಿ ನೋಡಿದ | ದಿನಪಕುಲರ || ||೩೭೨||

ಉಬ್ಬಿರೋಷಾವೇಶದಲಿ ರಿಪು |
ಗುಬ್ಬಸದ ಕೊಡಲಿಯನು ಧರಿಸುತ |
ದಿಬ್ಬಣಿಗರೊಳಪೊಕ್ಕು ಸವರಿದ | ಅಬ್ಬರಿಸುತಾ || ||೩೭೩||

ಭಾಮಿನಿ

ಸೇನೆ ಹಿಮ್ಮೆಟ್ಟಿದುದು ಮುಂದ್ವರಿ
ವಾನೆ ಕುದುರೆಗಳೋಡಿನಿಂದಿದ
ಏನನೆಂಬೆನು ರಥಿಕರಕ್ರಾಂತವನು ನಿಮಿಷದಲಿ |
ಆ ನೆರೆದ ಜನರೆಲ್ಲ ಕಂದಿದ
ಮಾನರಾಗಲು ಕಂಡು ದಶರಥ
ಸೂನು ರಘುಕುಲವರಿಯ ನಗುತಿಂತೆಂದನವನೊಡನೆ || ||೩೭೪||

ರಾಗ ನಾದನಾಮಕ್ರಿಯೆ ಅಷ್ಟತಾಳ

ಆರೆಲೋ ನೀನೀಗ ಬಂದವಾ | ಪೋಪ | ದಾರಿಯ ತಡೆದಡ್ಡನಿಂದವಾ ||
ಚೋರನೊ ದೈತ್ಯನೊ ಪೇಳೆನ್ನ | ಕೂಡೆ | ಪಾರುಪತ್ಯಗಳೆಲ್ಲ ಬಿಡು ನಿನ್ನ || ||೩೭೫||

ಎನಲು ಕೇಳಿದು ಭೃಗುಜಾತನು | ಬಲು | ಕನಲುತ್ತ ಪೇಳ್ದೊಂದು ಮಾತನು ||
ಜನಪರ ಕೊಲುವ ಮನೋರಥ | ಬಿಟ್ಟ | ರಿನಿತು ಆಡುವೆ ನೀನು ಬಲು ಮಾತಾ || ||೩೭೬||

ಆಹಹಾ ಸರ್ವಸಂಗ ತ್ಯಜಿಸಿದು | ಮೇಲೆ | ವಿಹಿತವೆ ಸಮರವೆಸಗುವುದು ||
ಸಹಸವಿದೆಲ್ಲೆಂದು ರಘುಜನು | ಗಹ | ಗಹಿಸಲು ಕಾಣುತ್ತ ಭೃಗುಜನು || ||೩೭೭||

ತರಳ ನೀನೇನೆಂದೆ ರಾಘವ | ಎನ್ನ | ಸೆರಗನೆ ಬಿಡು ನಿನ್ನ ಲಾಘವ ||
ಮುರಿದೊಂದು ಕ್ಷಣದಲಿ ಕೊಡುವೆನು | ತಾ | ತರಹರಿಸಲು ರಾಮ ಬಿಡುವೆನು || ||೩೭೮||

ಎಸೆದ ಶರವ ರಾಮ ತರಿವುತ್ತ | ಅತಿ | ಕುಶಲದಿ ಸಮರ ಬೇಡೆನ್ನುತ್ತ ||
ಮಸೆದಂಬುಗಳ ತೆಗೆದೆಸೆಯುತ್ತ | ತಾ | ಬಿಸಜಾಕ್ಷಗೆಂದ ಭೃಗು ಕನಲುತ್ತಾ || ||೩೭೯||

ರಾಗ ಮಾರವಿ ಏಕತಾಳ

ಸಾಸಿರ ಕರಗಳ ಧರಿಸಿಹ ಕಾರ್ತ | ವೀರ‍್ಯಾರ್ಜುನನನು ರಣದಿ ||
ನಾಶಗೊಳಿಸಿ ಲೋಕೇಶರ ಶಿರಗಳ | ನಾ ಸವರಿದೆ ಕೇಳ್ಭರದಿ || ||೩೮೦||

ಕ್ಷತ್ರಿ ಕುಲಾಂತಕನೆನಿಸಿಧರಿತ್ರಿಯೊಳ್ | ಶತ್ರುಗಳಾಗಿಹರಾ ||
ಪುತ್ರಮಿತ್ರರಿಗೆಮಧಾತ್ರಿಯ ತೋರಿದ | ಸತ್ತ್ವವನರಿಯೆಯೆಲಾ || ||೩೮೧||

ಮಲಗಿಹ ಉರಗನ ಯೆಬ್ಬಿಸಿ ಕೆಣಕಲು | ಸುಲಭವೆ ಕೇಳ್ಮರುಳೇ ||
ತಲೆಯನು ಕಾಯ್ವವರ‍್ಯಾರೆಂದೆನುತಲಿ | ಕೋಲ್ಮಳೆ ಸುರಿಸಿದನು || ||೩೮೨||

ಉರಿಯನುಗುಳಿ ಬಹ ಶರಗಳ ಕಾಣುತ | ತ್ವರಿತದಿ ರಘುಪತಿಯು ||
ಪರಿಹರಿಸುತಲಾತನ ಬಲುಶರಗಳ | ತರಿದೆಂದನು ಜವದಿ || ||೩೮೩||

ಬೊಪ್ಪನಿಗಾಗಿ ನೀ ಗೈದ ಪ್ರತಿಜ್ಞೆಗೆ | ಮುಪ್ಪುಗೊಳಿಪೆ ರಣದಿ ||
ತಪ್ಪದೆಯೆನ್ನೊಳಗಿದಿರಾಗೆನುತಲಿ | ಕ್ಷಿಪ್ರದಿ ಶರವೆಸೆದ || ||೩೮೪||

ಭಾಮಿನಿ

ರಾಮಶರವೈತಂದು ಮುನಿಜನ
ಕೋಮಲಾಂಗದ ಮೇಲೆ ನಾಟಲು
ತಾ ಮನದಿ ಕಳವಳಿಸಿ ಭೂಮಿಯೊಳೊರಗಿ ಚೇತರಿಸಿ |
ಕಾಮಪಿತನೊಳು ತಿರುಗಿ ರೋಷದಿ
ಭೀಮ ವಿಕ್ರಮ ನಿಲಲು ಸಮರಕೆ
ಆ ಮಹಾ ರಘುತಿಲಕ ಸಾಮದೊಳೆಂದನವನೊಡನೆ || ||೩೮೫||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭಳಿರೆ ಮುನಿಕುಲಜಾತಯೆನ್ನಯ |
ಕಲಹದಲಿ ನೀನುಳಿಯ ಬಲ್ಲೆಯ |
ನಿಲದೆ ಧರೆಗುರುಳೆದ್ದು ಸೋಲುವ | ಛಲವಿದ್ಯಾಕೆ || ||೩೮೬||

ಎನ್ನ ಶರಕೆ ಶಿರವನೀಯದೆ |
ಯಿನ್ನು ಕಲಹದಿ ನೀನು ಸುಮ್ಮನೆ |
ಭಿನ್ನಬಿಡದೆ ನೀ ವನಕೆ ಪೋಗಿ | ನೆನ್ನಲುಸುರ್ದ || ||೩೮೭||

ಸಾಕೆಲವೊ ಬಲು ಗರುವದದ್ರಿಯ |
ನೂಕೆಜರಿವೆನು ಸಮರಮಧ್ಯದಿ |
ಶೋಕಗೊಳಿಸುವೆ ಜೋಕೆಯೆನೆ ಪೊಸ | ಸಾಯಕವನು || ||೩೮೮||

ಕಿಡಿಗೆದರಿ ಬಿಡುತಾಗಲೆಂದನು |
ನುಡಿಗಳೀದೇನ್ವಲವು ತಾಳಿಕೊ |
ಕಡೆಯ ಕಾಲವಿದೆಂದು ಭೋ | ರ್ಗುಡಿಸುತೆ ಸದಾ || ||೩೮೯||

ಹೂಂಕರಿಸಿ ಬಹ ವಾಮಹಸ್ತವ |
ಪಂಕಜಾಕ್ಷನು ತರಿವುತಾತನ |
ಬಿಂಕ ಮುರಿವಂದದಲಿ ರೋಷ ಕ | ಳಂಕವೆಸೆದ || ||೩೯೦||

ಏನನುಸುರುವೆ ರಾಮಶರದಲಿ |
ಹಾನಿಯಾದುದು ಭೃಗುಜ ಧರಿಸಿದ |
ಬಾಣ ಚಾಪಾದ್ಯಖಿಳ ಆಯುಧ | ಕಾಣದಾಯ್ತು || ||೩೯೧||

ವಾರ್ಧಕ

ಅಹಿಯು ಭೋರ್ಗರೆವಂತೆ ಗರ್ಜಿಸುತ ಕಾರ್ಮುಕ
ಕ್ಕಹಿಸಿ ಶರಮಂ ಪೂಡಲನ್ನೆಗಂ ಜಮದಗ್ನ
ಗ್ರಹಿಸಿದಂ ಇವನ ಕೆಣಕಿದರೆನ್ನ ಬಾಳ್ವೆಗವಸಾನ (ನಿಶ್ಚಯವದೆಂದು |
ಗ್ರಹಿಸುತಂ ಗುಣಗಳನು ಕವಲು ಮನವಂ ಬಿಟ್ಟು
ಅಹಿತಭಾವವತೊರೆದು ಹೃದಯಾಂತರಾಳದಿಂ
ಮಹತುಚಿಚ್ಚೇತನಕೆ ವಂದಿಸುತ ಪೇಳಿದಂ ಶ್ರೀರಾಮಚಂದ್ರನಿಂಗೆ ||) ||೩೯೨||

ರಾಗ ಭೈರವಿ ಝಂಪೆತಾಳ

ಯಾರ ತನಯನು ನೀನು | ಊರ‍್ಯಾವುದಯ್ಯ ಪೇಳ್ |
ಧೀರತನಕೆಣೆಯಿಲ್ಲ | ಧಾರುಣಿಯೊಳ್ನಿನಗೆ || ||೩೯೩||

ನಿನ್ನ ನೆಲೆಯನು ಎನಗೆ | ಇನ್ನು ನೀ ಪೇಳಿದರೆ |
ಮನ್ನಿಸುತ ನಾ ಪೋಪೆ | ಯೆನ್ನ ಪಿತನಾಣೆ || ||೩೯೪||

ಇಂತೆಂಬ ಭಾರ್ಗವಗೆ | ಕಂತುಪಿತ ನಗುತೆಂದ |
ಸಂತಸದಯೋಧ್ಯಪುರ | ಕಾಂತ ದಶರಥಗೆ || ||೩೯೫||

ಬಾಲಕರು ನಾಲ್ವರೊಳು | ಹಿರಿಯಾತನಾ ರಾಮ |
ಶೀಲ ಕೌಶಿಕನೆಜ್ಞ | ಪಾಲಿಸೆಂದೆನುತಾ || ||೩೯೬||

ಪಿತನನುಜ್ಞೆಯ ಕೇಳಿ | ಮತಿವಂತನೊಡನೈದಿ |
ಅತಿಕ್ರೂರ ದಾನವರ | ಹತಿಸಿ ಮಖಗೈಸಿ || ||೩೯೭||

ಈ ತೆರದಿಯಿರಲಿಲ್ಲಿ | ಸೀತಾ ಸ್ವಯಂವರಕೆ |
ಧಾತ್ರಿಪತಿ ಲಿಖಿತವನು | ಕೌಶಿಕಗೆ ಬರೆಯೆ || ||೩೯೮||

ಪೋಗಬೇಕೆಂದು ಮುನಿ | ಯಾಗ ನೇಮಿಸೆ ಪೋಗಿ |
ಭಾರ್ಗವನ ಚಾಪಕನು | ವಾಗಿ ಪಿಡಿದೆತ್ತಿ || ||೩೯೯||

ವರಿಸಿ ಜನಕಜೆಯ ಸ್ವಯಂ | ವರವ ಪೂರೈಸುತಲೆ |
ವರನಗರಿಗೈಯ್ದುವೆವು | ಹರುಷದೊಳಗೆಲ್ಲ || ||೪೦೦||

ಭಾಮಿನಿ

ಇನಿತು ಭಾರ್ಗವ ರಾಮನಿಗೆ ತಾ
ಜನಪ ದಶರಥಸೂನು ರಾಮನೀ
ತನು ನಯದೊಳೇ ತತ್ವಮಾಗಲು ಬಳಿಕ ಕಾರ್ಮುಕಕೆ |
ಘನದೊಳೇರಿಸಿ ಪಿಡಿದ ಸರಳಿಂ
ಗನುವದೇನೆನೆ ಭೃಗುಜ ನುಡಿದನು
ವಿನಯದಿಂ ಲಕ್ಷ್ಯವನು ತೋರುವೆನೆನುತಲಿಂತೆಂದ || ||೪೦೧||

ರಾಗ ತೋಡಿ ಚೌತಾಳ

ಜಯತು ಜಾನಕಿ ಕಾಂತ | ಜಯತು ಸದ್ಗುಣವಂತ |
ಜಯತು ಕೃಪಾಕರ | ಜಯ ಭವಭಯ ದೂರ || ||೪೦೨||

ದುರುಳನೋರುವಯೆನ್ನ | ಕೊರೆವನಾಭಿಯ ಮುಂನ |
ಹರಿಸಲರಿಯೆನವನ | ಕರುಣದಿ ರಕ್ಷಿಸೊಯೆನ್ನ || ||೪೦೩||

ಜಾಣ ನಿನ್ನಯ ಬಾಣ | ಕಾಣದೆ ಮರಣ |
ಕ್ಷೋಣಿಯೊಳವಗಿಲ್ಲ | ವಾಣಿರಮಣ ಬಲ್ಲ || ||೪೦೪||

ಧುರದಿ ಪಿಡಿದಶರವ | ದುರುಳನಿರುವ ತಾವ |
ಭರದೊಳೆಸೆದು ಶಿರ | ತರಿಯಲಾಗದೆ ದೇವ || ||೪೦೫||

ಮಿಕ್ಕ ಮಾತೇನೆನ್ನ | ಹೆಗಲಿಗೇ ಬಾಣ |
ಫಕ್ಕನೆ ಬಿಡಲು ಖಳ | ಮುಕ್ಕುವ ಮಣ್ಣ || ||೪೦೬||

ಕಂದ

ಎನೆ ಕೇಳ್ದಾಗಲೆ ಹೊಕ್ಕಳೊ |
ಳನುಸರಿಸಿದುಕೊಂಡಿಹ ಮಣಿವಾಣ್ಯನಿಶಾಟಂ |
ತನಗಿಂದಂತಕನೊದಗಿದ
ನೆನುತಾರ್ಭಟಿಸುತ ಬೊಬ್ಬರಿದಿಳಿದೈತಂದಂ || ||೪೦೭||

ರಾಗ ಶಂಕರಾಭರಣ ಮಟ್ಟೆತಾಳ

ಆರೊ ನೀನು ಮನುಜ ನಿನ್ನ | ಭೂರಿ ವಿಕ್ರಮಂಗಳನ್ನು |
ತೋರುತೆಮ್ಮ ಮೇಲೆ ರಣ ವಿ | ಚಾರ ತೊಡಗಿದು || ||೪೦೮||

ಸೇರಿಸುಖದೊಳಿರ್ದ ಠಾವಿ | ಗೇರಿಸಿದೆ ಪ್ರತಾಪದಸ್ತ್ರ |
ವೀರನಹುದೊ ಭಳಿರೆನುತ್ತ | ಲಾರು ಭಟಿಸಲು || ||೪೦೯||

ನೋಡಿರಘುಜನೆಂದನೆಲವೋ | ಮೂಢದನುಜ ಕೇಳು ನಿನ್ನ |
ಖೋಡಿತನಗಳೀಗಲೆನ್ನ | ಕೂಡೆ ಸಲುವುದೆ || ||೪೧೦||

ಮೋಡಿಯಿಂದ ಭೃಗುಜನಾಭಿ | ತೋಡಿ ವಾಸವನ್ನು ಗೈದ |
ಪಾಡಿದೊಳ್ಳಿತೆನುತ ರಘುಜ | ಹೂಡಿದಸ್ತ್ರವ || ||೪೧೧||

ಬಿಡಲು ಖಳನ ಕಂಠವನ್ನು | ಕಡಿದು ಭೂಮಿಗುರುಳೆ ಬಳಿಕ |
ಕಡುವಿಚಿತ್ರಗೊಂಡು ಭೃಗುಜ | ನೊಡನೆರಾಮನು || ||೪೧೨||

ಧಡಿಗನೀತನ್ಯಾರು ನಿ | ಮ್ಮೊಡಲೊಳೆಂತು ಸೇರ್ದನೆನಲು |
ತಡೆಯದಾಗ ಪರಶುರಾಮ | ನುಡಿದ ಹರುಷದಿ || ||೪೧೩||

ಚದುರ ರಾಮ ಕೇಳು ವನದೊ | ಳೊದಗಿ ತಪವಗೈವ ಸಮಯ |
ಕಿದಿರು ದೈನ್ಯದಿಂದಲೋರ್ವ | ಮುದುಕ ಪಾರ್ವನು || ||೪೧೪||

ಉದರಸಲಹುದೆನೆ ಪೈತೃಕ | ವದನು ತಿಳಿಯದೆನುತಲವಗೆ ||
ಮುದದಿ ಭಾಷೆಯನ್ನು ಬಳಿಕ | ಬುಧನು ಪೇಳ್ದನು || ||೪೧೫||

ವಾರ್ಧಕ

ರಕ್ಕಸರ ಬಾಧೆಯಿಂದೈತಂದು ನಿಮ್ಮ ಮರೆ
ಹೊಕ್ಕೆ ಬೆನ್ನಟ್ಟಿ ದನುಜರ್ಬರುವರದರಿಂದ
ಪೊಕ್ಕುಳೊಳಗಿರಿಸೆನ್ನ ಕಾಯಬೇಕೆಂದವಂ ಪೇಳಲಾ ನುಡಿ ಕೇಳುತಾ |
ಬೆಕ್ಕಸಂ ಬೆರಗಾಗಿ ನಿನಗೆಂತು ನಾಭಿಯೊಳ್
ಸಿಕ್ಕಿಕೊಂಡಿರಲಿ ದಾನವರು ಬರಲವರಿಂಗೆ
ರಕ್ಕಸರ ಸದೆಬಡಿವೆ ನೀನೆನ್ನ ಮುಂದೆ ಕುಳ್ಳಿರ್ಪುದೆನಲತಿ ಮರುಗುತಾ || ||೪೧೬||

ಒಕ್ಕರದಿ ಬಲುದೈನ್ಯಮಂಗೊಳಲ್ ನುಡಿಗೆಡದೆ
ಕಕ್ಕುಲತೆಯಿಂದ ನಾಭಿಯೊಳಿಟ್ಟು ಕೊಂಡವ
ರ್ಕಕ್ಕುರಿಸಿ ಪಳುಗಿನಂದದಿ ಕರೆಯುತಿರ್ದನೇವೇಳ್ವೆ ಸೈರಿಸಲಾರದೆ |
ಮಿಕ್ಕಿದುರಿಯಿಂ ನೋಡಲಾಸುರಾಕೃತಿ ಕಂಡು
ತಿಕ್ಕಿ ಬಿಸುಡುವರೆ ತಾ ಮೊದಲಿತ್ತ ಭಾಷೆಯೊಳ್
ಸಿಕ್ಕಿರ್ದರಿಂದ ಕೊಲ್ಲುವರೆನ್ನ ಮನಸಿನೊಳ್ಬಳಲಿದೆನಿಷ್ಟು ದಿವಸ || ||೪೧೭||

ಭಾಮಿನಿ

ಇನ್ನು ಪೇಳುವದೇನು ರಾಘವ
ನಿನ್ನ ದಯದಿಂದೀ ಖಳಾಧಮ
ನುನ್ನತದ ಬಾಧೆಗಳು ಪರಿಹರವಾಯಿತಿಂದಿನೊಳು |
ಮುಂದೆ ನಿನ್ನಂಗನೆಯ ನೆವನದಿ
ಮಂದಮತಿ ದಾನವರ ಕುಲಗಳ
ನೊಂದಿಸುತ ಈ ಧರೆಯ ಭಾರವ ಕಳೆವ ವಹಿಲದಲಿ || ||೪೧೮||

ವಾರ್ಧಕ

ಸುರರ ದೂರಂ ಕೇಳ್ದು ಪಯಶರಧಿಯಿಂದೆದ್ದು
ಧರಣಿಪತಿ ದಶರಥನ ತರಳ ತಾನೆಂದೆನಿಸಿ
ತರುಣಿಯಳ ನೆವದಿಂದ ದಶಕಂಧರಾದ್ಯರಂ ಜಯಿಪನಿವನೆಂದು ಮನದಿ |
ಗ್ರಹಿಸಿ ಬಳಿಕರಿಭಾವಮಂ ಬಿಟ್ಟು ಸಂತಸದ
ಲಹರಿಯಿಂ ಕೊಂಡಾಡಿ ನಿಜಧನುವನಿತ್ತು ಮುಂ
ದಹಿತರಂ ಗೆಲ್ದು ದಿಗ್ವಿಜಯಮಂ ಪಡೆಯೆಂದು ವಹಿಸುತಾಶ್ರಮಕೆ ಬಂದಾ || ||೪೧೯||

ರಾಗ ಕೇದಾರಗೌಳ ಅಷ್ಟತಾಳ

ಅಸಮಬಾಲರು ಕೇಳಿರಾಮೇಲೆ ದಶರಥ | ವಸುಮತೀಶನ ಪಾಳ್ಯದಿ ||
ಪಸರಿಸಿತೇನೆಂಬೆ ತೋಷದ ರಭಸವು | ಮಸಗಿದಂಬುಧಿಯವೋಲು || ||೪೨೦||

ಬಳಿಕ ವಿದೇಹ ನೃಪಾಲನು ಮಿಥಿಳೆಗೆ | ಕಳುಹಿಸಿಕೊಟ್ಟ ಮುಂದೇ ||
ಘಳಿಲನೆ ನಡೆತಂದು ಭರದೊಳಯೋಧ್ಯಾ | ಪೊಳಲಿಗೈತಂದನಾಗ || ||೪೨೧||

ವಾರ್ಧಕ

ಅರರೆ ದಿಬ್ಬಣ ಬಂದಿತೆಂದು ನಗರದೊಳೆಲ್ಲ
ಕುರುಜ ಮೇರುವೆ ಮಕರ ತೋರಣಗಳಿಂದಲಂ
ಕರಿಸಿ ನರನಾರಿಯರ್ಕಲಶ ಕನ್ನಡಿ ಸೇಸೆ ಮುತ್ತಿನಾರತಿಯಗೊಂಡು |
ನೆರೆದೊಂದುಗೂಡುತುತ್ಸವದೊಳಿದಿರ್ಗೊಳಲು ಬಂ
ದರಮನೆಯ ಪೊಕ್ಕು ಮನೆದಿಬ್ಬಣಂಗಾಯಲಕೆ
ಹರುಷದಿಂ ಭೂಸುತೆಯ ಸಮ್ಮೇಳದಿಂದಿರ್ದನಾ ರಾಘವಂ ಪುರದೊಳು || ||೪೨೨||

ಮಂಗಳ ಪದ

ರಾಗ ಆರಭಿ ಏಕತಾಳ

ಕ್ಷೀರ ಶರಧಿಯೊಳಗಾಳ್ದವಗೆ | ಭೂ | ಭಾರಪಹಾರವ ಗೈದವಗೇ |
ಮಾರಮಣಿಯಮನರಂನನಿಗೆ | ಚಲ್ವ | ಮಾರಜನಕನಿಗೆ ಮಧುರಿಪುಗೆ ||
ಮಂಗಳಂ ಜಯ ಮಂಗಳಂ || ||೪೨೩||

ದಶರಥಸುತ ತಾನಾದವಗೆ | ಮುನಿ | ಕುಶಿಕಜನೆಜ್ಞವ ಕಾಯ್ದವಗೆ |
ಪಶುಪತಿಚಾಪವ ಗೆಲಿದವಗೇ | ದುಷ್ಟ | ದಶಮುಖವೈರಿಗೆ ರವಿಕುಲಗೇ ||
ಮಂಗಳಂ ಜಯ ಮಂಗಳಂ || ||೪೨೪||

ಕಾಮಿನಿ ಸೀತೆಯ ವರಿಸಿದಗೇ | ಭೃಗು | ರಾಮನ ಗರ್ವವ ನಿಲಿಸಿದಗೆ |
ಪ್ರೇಮದಿ ಭಕ್ತರ ಸಲಹುವಗೇ | ವರ | ಕ್ಷೇಮಪುರೇಶಗೆ ರಘುಪತಿಗೆ ||
ಮಂಗಳಂ ಜಯ ಮಂಗಳಂ || ||೪೨೫||

ಭಾಮಿನಿ

ಇಂತು ಧರಣಿಯ ಮೇಲೆ ಕಮಲಾ
ಕಾಂತ ತಾನು ಮನುಷ್ಯರೂಪವ
ನಾಂತು ರಾಮಾಖ್ಯದೊಳು ನಟಿಸಿದ ಚರಿತವನು ಬಿಡದೆ |
ಪಿಂತೆವಿಡಿದಾನಿಲ್ಲಿಗೀ ಪರಿ
ಯಂತೆ ವಿಸ್ತರಿಸಿದೆನು ಲಾಲಿಸಿ
ಸಂತಸವಬಡುವರಿಗೆ ಕ್ಷೇಮಪುರೇಶ ಸಲಹುವನು || ||೪೨೬||

|| ಪುತ್ರಕಾಮೇಷ್ಟಿ – ಸೀತಾಸ್ವಯಂವರ ಪ್ರಸಂಗ ಮುಗಿದುದು ||