ರಾಗ ಕಾಂಭೋಜಿ ಮಟ್ಟೆತಾಳ

ಇನಕುಲಾಬ್ಥಿಸೋಮ ರಾಮ | ದನುಜವೈರಿ ಸುಗುಣ ಧಾಮ |
ವನಜನೇತ್ರ ಬಹುನಿಸ್ಸೀಮ | ಮಾತ ಕೇಳಯ್ಯ ||೧೫೫||

ಇಂದಿನಿರುಳು ಇಲ್ಲಿ ನಾವು | ಚಂದದಿಂದ ಕಳೆವ ದಿನವ |
ಒಂದು ಕಂಟಕಂಗಳಿಲ್ಲ | ಮುಂದೆ ಬಾಲಕ ||೧೫೬||

ಬ್ರಹ್ಮದಂಡವಧಿಕ ಚಕ್ರ | ಧರ್ಮಪಾಶ ಕಾಲನಸ್ತ್ರ |
ನಿರ್ಮಲ ಸುವಾರುಣಾಸ್ತ್ರ | ಮಹೇಂದ್ರಾಸ್ತ್ರವು ||೧೫೭||

ಕೊಡುವೆನೈದು ಅಸ್ತ್ರಗಳನು | ಪೊಡವಿಪಾಲಕುವರ ಇಂದ್ರ |
ನೊಡನೆ ಕಾದಲಾತ ಹಿಂದೆ | ನಡೆದು ಪೋಪನು ||೧೫೮||

ಕಂದ

ಎನುತಾ ಮಂತ್ರಗಳೈದನು
ಮುನಿಪನವರ್ಗಿತ್ತನಂದು ಸಂತಸದಿಂದಂ |
ವನಮಂ ಕಳೆದಾಶ್ರಮಕೈ
ದಿನಿತಂ ರಘುಕುಲಜರಿಂಗೆ ನುಡಿಯುತ್ತಿರ್ದಂ || ||೧೫೯||

ರಾಗ ಭೈರವಿ ಝಂಪೆತಾಳ

ಶ್ರೀರಾಮ ಕೇಳಯ್ಯ | ಆಶ್ರಮದ ಸುತ್ತಲೂ |
ಆರೈದು ಕೊಳ್ಳಿರನು | ಜಾಗ್ರಜರು ಸತತ || ಪಲ್ಲವಿ ||

ಆರುದಿನಪರ್ಯಂತ | ಈ ಋಷಿಗಳೊಡಗೂಡಿ |
ಓರಂತೆ ಯಾಗವನು | ಒಡನೆ ರಚಿಸುವೆನು ||
ಶ್ರೀರಾಮ ಲಕ್ಷ್ಮಣರೆ | ಅರಿಗಜ ಮೃಗೇಂದ್ರರಿರ |
ಶೂರರೇ ಕೇಳಿರೆ | ನ್ನಯ ವಾಕ್ಯಗಳನು ||೧೬೦||

ಏಕಭಾವದಿ ತಂದ | ನೇಕ ವಸ್ತುವನಿಂದು |
ಶ್ರೀಕರದಿ ಯಜ್ಞವನು ಮಾಡುವೆನು ನಾನು ||
ಆ ಕುಠಾರರು ಬರಲು | ಬೇಕಾದ ಅಸ್ತ್ರದಿಂ |
ನಾ ಕೊಂದು ಕೊಡುವೆನೈ | ಕ್ಷಣದಿ ಮುನಿರಾಯ || ||೧೬೧||

ವೀರ ಲಕ್ಷ್ಮಣ ಸಮರ | ಶೂರ ಆ ದಿಕ್ಕಿನೊಳು |
ಸೇರಿ ಧನು ಶರವಿಡಿದು | ಭೂರಿ ರಾಕ್ಷಸರ ||
ಸಾರಿಯಲಿ ತ್ರಿಶಿರನನು | ದೂರ ಸೇರಿಸು ಧೀರ |
ಚಾರುಗುಣಗಂಭೀರ | ಮಾರನಾಕಾರ || ||೧೬೨||

ಕೇಕಯವೃತ್ತ

ಅನುಜನೊಡನೆ ರಾಮ ಮಾತನಾಡುತ್ತ ನಿಲಲು
ದನುಜರು ಭರದಿಂದೈ ತಂದು ತೂರಾಡುತಿರಲು |
ಮುನಿವರರು ರಾಮ ರಾಮ ಎಂದರಾ ಭೀತಿಯಿಂದ
ಅನುವರಿತು ರಾಕ್ಷಸರ ಶ್ರೀ ರಾಮ ಮಾರಾಂತುನಿಂದ || ||೧೬೩||

ರಾಗ ಕೇದಾರಗೌಳ ಮಟ್ಟೆತಾಳ

ಆರೆಲೋ ಮನುಜಾ ಬಂದವ | ನಾರೆಲೋ ಮನುಜಾ || ಪಲ್ಲವಿ ||

ವನದೊಳಧಿಕ ರಜನಿಚರರ | ಹೆಣಗಿ ಯುದ್ಧ ರಂಗದಲ್ಲಿ |
ಕಣನ ಜೈಸಲೆಂದು ದೃಢದ | ಮನವ ಮಾಡಿ ಇದಿರು ನಿಂತ |
ಮನುಜ ನಿನ್ನ ಪೆಸರದೇನೆಲಾ | ಸಂಗ್ರಾಮ ಬಿಟ್ಟು |
ವಿನಯದಿಂದ ಪಿಂತೆ ಸಾರೆಲಾ || ||೧೬೪||

ಮನುಜನಾದ ದಶರಥನ್ನ | ತನಯ ರಾಮನೆಂಬ ನಾಮ |
ಮುನಿಯ ಯಾಗವನ್ನು ಕಾಯ್ವ | ರಣ ಸಮರ್ಥನೆನ್ನ ಬರಿದೆ |
ಕೆಣಕಿ ನೀನು ಸಾಯಬೇಡೆಲಾ | ಶರಣಾಗಿ ಬೇಗ |
ಗುಣದಿ ಕಲಹ ಬಿಟ್ಟು ಪೋಗೆಲಾ || ||೧೬೫||

ಮನುಜನಾದ ದಶರಥನ್ನ | ತನಯನೆಂಬ ಹೆಮ್ಮೆಯಿಂದ |
ಮುನಿಯ ಮಾತ ಕೇಳಿ ಬಂದು | ಎನಗೆ ಗ್ರಾಸವಾದೆ ಭಳಿರೆ |
ತನುವಿನಾಸೆ ಬಿಟ್ಟು ಕಳೆ ಎಲಾ | ಬೆಂಬಲಕೆ ಬೇಗ |
ಜನಕನನ್ನು ಕರೆಸಿಕೊಳ್ಳೆಲಾ || ||೧೬೬||

ಎಷ್ಟು ಮಾತದೇತಕೆಂದು | ದುಷ್ಟಗೊಂದು ಶರವನೆಸೆದು |
ನೆಟ್ಟನಾ ಮಾರೀಚನನ್ನು | ಇಟ್ಟನಾ ಸಮುದ್ರದಲ್ಲಿ |
ಮತ್ತೆ ಒಬ್ಬ ದನುಜ ಬಂದನು | ಶ್ರೀರಾಮನೊಡನೆ |
ಉತ್ತರವನು ಹೇಳಿ ನಿಂದನು || ||೧೬೭||

ಅರೆಲೋ ಸುಬಾಹು ನಾ ಸು | ರಾರಿಯನ್ನು ಗೆಲುವನೆಂಬ |
ವೀರರನ್ನು ಬಡಿದು ತಿಂಬ | ಮಾರಿ, ಬೇಗ ಅತ್ತಸಾರು |
ರಾಮನೆಂಬ ಪೆಸರು ನಿಲ್ಲದು | ಎನ್ನ ಕೂಡೆ |
ರಾಮನೆಂಬ ಗರ್ವ ಸಲ್ಲದು || ||೧೬೮||

ಎನ್ನ ತಿಂಬ ಮಾರಿ ಯಾರೊ | ನಿನ್ನ ಕೊರಳ ಕೊಯ್ವೆನೀಗ |
ಕುನ್ನಿ ಸಾಯಬೇಡ ಹೋಗು | ಇನ್ನು ಬಾಣ ಎಸೆವೆ ನೋಡು |
ಕೇಳು ಪಾಪಿ ನೀಚ ರಾಕ್ಷಸ | ನಿನ್ನ ಕೊಂದ |
ಮೇಲೆ ಎನಗೆ ಪರಮಸಂತಸ || ||೧೬೯||

ಎನಗೆ ಬಾಣ ಎಸೆವೆನೆಂದು | ಮನುಜ ಪೇಳ್ವೆ ಸಾಕು ನಿನ್ನ |
ಕ್ಷಣಕೆ ಕೊರಳನರಿದು ಈ | ಧರಣಿಯೊಳಗೆ ಚೆಲ್ವೆನೀಗ |
ರಾಮನೆಂಬ ಗರ್ವ ಸಲ್ಲದು | ಎನ್ನ ಕೂಡೆ |
ರಾಮನೆಂಬ ಪೆಸರು ನಿಲ್ಲದು || ||೧೭೦||

ಧರಣಿಯಲ್ಲಿ ಎನ್ನ ಕೊರಳ | ನರಿವ ಧೀರನಹುದೆನುತ್ತ |
ಸರಳ ಬಿಟ್ಟು ರಕ್ಕಸನ್ನ | ಕೊರಳ ಕತ್ತರಿಸಿದನಾಗ |
ಮುನಿಗಳೆಲ್ಲ ಜಯಜಯೆಂದರು | ಯಜ್ಞದಲ್ಲಿ |
ದನುಜ ವೈರಿ ಜಯ ಜಯೆಂದರು || ||೧೭೧||

ಶಾರ್ದೂಲವಿಕ್ರೀಡಿತ

ಘೋರಾಕಾರಸುಬಾಹು ಬೀಳೆ ಮುನಿಪಂ ಸಂತೋಷಮಂ ತಾಳಿದಂ
ಭೋರೆಂದೆದ್ದು ಸುಘೋಷವೇದರವದಿಂ ತಾ ಯಜ್ಞಮಂ ನಡೆಸಿದಂ |
ಶ್ರೀರಾಮಂಗೆ ಸುರೇಂದ್ರಮುಖ್ಯರೆರಗುತ್ತಾನಂದದಿಂ ವಂದಿಸಲ್
ಧೀರಂಗಾ ಮುನಿರಾಜಮೌಳಿ ಜನಕಂ ಲೇಖಾರ್ಥಮಂ ಕಳುಹಿದಂ || ||೧೭೨||

ರಾಗ ಘಂಟಾರವ ಝಂಪೆತಾಳ

ಜನಕ ಕಳುಹಿದ ದೂತ | ವಿನಯದಿಂ ಬರಲಿತ್ತ |
ಮುನಿಕೌಶಿಕಗೆ ಕೊಟ್ಟ | ನಾ ಲೇಖನವನು || ||೧೭೩||

ಓಲೆಯನು ಕಂಡು ಮುನಿ | ಪಾಲ ತಾ ಹರ್ಷದಲಿ |
ಶ್ರೀಲೋಲ ರಾಮನೊಡ | ನಿದೆ ಬಂದೆ ಎಂದ || ||೧೭೪||

ಕಂದ

ಇಂತೆಂದಾ ಜನಕನ ಚರ
ನಂ ತಳುವದೆ ಕಳುಹಿ ಮೌನಿಕುಲ ತಿಲಕಂ ಶ್ರೀ |
ಕಾಂತಂ ರಾಮಂ ತನ್ನಯ
ಮುಂತೆಸೆದಿರೆ ನುಡಿಯುತಿರ್ದ ವಿಶ್ವಾಮಿತ್ರಂ || ||೧೭೫||

ರಾಗ ಪಂತುವರಾಳಿ ಮಟ್ಟೆತಾಳ

ರಾಮ ಇನಕುಲೇಶ ಬಾಲ | ವನಜಲೋಚನ |
ಇನ್ನಯೋಧ್ಯಾಪುರಕೆ ನಾವು | ಪೋಗಬೇಕೆಲೈ || ||೧೭೬||

ಜನಕರಾಜಧಾನಿಯಲ್ಲಿ | ಒಂದು ಯಜ್ಞವು |
ಮದನದಹನ ಧನುವ ನೋಡ | ಬಹುದು ಬಾಲಕ || ||೧೭೭||

ತ್ವರಿತದಲ್ಲಿ ಮುನಿಗಳೊಡನೆ | ನಾವು ಪೋಗುವ |
ಭರದೊಳಗ್ರ ಗಂಗೆಯನ್ನು | ಎಲ್ಲರ್ದಾಟುವ || ||೧೭೮||

ಕೇಕಯವೃತ್ತ

ಮುನಿವರನಿಂತೆಂದಾ ಮಾತ್ರದೊಳ್ ಗಂಗೆಯಲ್ಲಿ
ಘನ ಜಪತಪದಿಂದ ಇರುತಿರ್ದರಾ ಸಮಯದೊಳ್ |
ಜನಪ ಸುಮತಿರಾಜಂ ಬಂದವರ ಕಂಡು ಧೀರಂ
ವಿನುತರು ನಮಿಸುವಾಗ ಮುನಿಗೆ ತಾ ಪೇಳ್ದ ನಿಂತು || ||೧೭೯||

ರಾಗ ಕಾಂಭೋಜಿ ಚೌತಾಳ ಮತ್ತು ತಿತ್ತಿತ್ತೈ

ವಿಶ್ವಾಮಿತ್ರ ಮುನೀಂದ್ರ | ವರಗುಣಸಾಂದ್ರ || ಪಲ್ಲವಿ ||

ಇಂದು ನಮ್ಮಯ ಪುರಕೆ | ಬಂದ ಕಾರಣದಿಂದಾ |
ನಂದವಾಯಿತು ನಮಗೆ | ವಂದಿಸುವೆನು ನಿಮಗೆ || ||೧೮೦||

ಚೆಲುವ ಬಾಲರಿದಾರು | ಜಲರುಹಾಕ್ಷರು ಮತ್ತೆ |
ಬಲವೈರಿಸಮಬಲರು | ಕೋದಂಡಧರರಾಗಿಹರು || ||೧೮೧||

ಸುಮತಿಭೂಪತೇ ಕೇಳು | ಸದ್ಗುಣಧಾಮ || ಪಲ್ಲವಿ ||

ದಶರಥಸುತ ರಾಮ | ಅಸಮ ಸದ್ಗುಣಧಾಮ |
ರಸಿಕ ಲಕ್ಷ್ಮಣ ಕಾಣೊ | ಬಿಸರುಹಾಕ್ಷರು ಜಾಣ || ||೧೮೨||

ಎನ್ನ ಯಾಗರಕ್ಷಣೆಗೆ | ಮನ್ನಿಸಿ ಕರೆತಂದೆ |
ಪುಣ್ಯಜನ ಸುಬಾಹು | ವನ್ನು ಕೊಂದರಿವರು || ||೧೮೩||

ಕೇಕಯವೃತ್ತ

ವರಮುನಿ ಪೇಳೆ ಸುಮತಿರಾಜ ಸಂತೋಷದಿಂದ
ಚರಣಕೆ ನಮಿಸಿ ಪೂಜೆಮಾಡಿ ಸಲ್ಲಿಸುತ ನಿಲಲು |
ಪರಮಪುರುಷನಾದ ರಾಮನಂ ಕೂಡಿ ಬರಲು
ಹರುಷದಿ ಮುಂದಿರ್ಪ ವನವನುಂ ತೋರುತಿರ್ದಂ || ||೧೮೪||

ರಾಗ ಘಂಟಾರವ ಝಂಪೆತಾಳ

ಮುನಿಕುಲೋತ್ತಮ ಕೇಳು | ವನದೊಳತ್ಯಧಿಕವಿದು |
ಘನತರಾಶ್ರಮವಾವು | ದೆನಗೆ ಪೇಳಯ್ಯ || ||೧೮೫||

ಕೇಳು ರಾಘವ ವೀರ | ಹೇಳುವೆನು ನಿನಗೀಗ |
ಶ್ರೀಲೋಲ ಈ ವನದ | ಮೂಲ ಸಂಗತಿಯ || ||೧೮೬||

ಮುನ್ನ ಗೌತಮಮುನಿಪ | ತನ್ನರಸಿಯೊಂದಾಗಿ |
ಚೆನ್ನಾಗಿ ಇಲ್ಲಿರ್ದ | ರಧಿಕ ವಿಭವದಲಿ || ||೧೮೭||

ಸುರಪನೈತಂದು ಮುನಿ | ವರನಿಲ್ಲದಿಹ ಸಮಯ |
ವರಿತಹಲ್ಯೆಯ ರಮಿಸಿ | ದನು ಕಾಮುಕದಲಿ || ||೧೮೮||

ಮತ್ತಹಲ್ಯೆಗೆ ಶಾಪ | ವಿತ್ತಡರೆಯಾದಳಿವ |
ಳುತ್ತಮಪುರುಷ ಕೇಳು | ಚಿತ್ತಾವಧಾನ || ||೧೮೯||

ಇಂದು ನಿನ್ನಯ ಪಾದ | ಸೋಂಕಲವಳೇಳುವಳು |
ಎಂದಡಾ ರಾಮಚರ | ಣಸ್ಪರ್ಶವಾಗೆ || ||೧೯೦||

ಶ್ರೀ ಮುಕುಂದ ಮುರಾರಿ | ದಾಮೋದರಾ ಎನುತ |
ಭಾಮಿನಿಯಹಲ್ಯೆ ಬಂ | ದೆರಗಿದಳು ಪದಕೆ || ||೧೯೧||

ಇಂತೆಂದು ಹಲ ತೆರದಿ | ಕಾಂತೆ ಭಜಿಸುತ್ತಿರಲು |
ಸಂತಸದಿ ಗೌತಮ ಮು | ನೀಂದ್ರ ನಡೆತಂದ || ||೧೯೨||

ರಾಗ ಯೆರುಕಲಕಾಂಭೋಜಿ ಏಕತಾಳ

ಅಚ್ಯುತಾನಂತಾ ಗೋವಿಂದಾ | ನಾರಾಯಣಾ ವಾಸುದೇವಾ |
ಸಚ್ಚಿದಾನಂದಾ ಮುಕುಂದ | ಸಲಹೊ ನೀನಿಂದು || ಪಲ್ಲವಿ ||

ಈ ಕಲ್ಲಾಗಿ ಬಿದ್ದಹಲ್ಯೆ | ನಿನ್ನ ಪಾದಸಂಗದಿಂದ |
ಶೋಕಹೀನೆಯಾಗಿ ಬಂದ | ಳೆನ್ನ ಭಾರ್ಯೆಯು ||
ಶ್ರೀಕಮಲೆಯರಸ ನೀನು | ಲೋಕೇಶ ಎನ್ನರಸಿಯನ್ನು |
ನಾ ಕರೆದುಕೊಂಡುಪೋಪೆ | ಹೇ ಕೃಪಾನಿಧೇ || ||೧೯೩||

ಇನ್ನು ವಿಶ್ವಾಮಿತ್ರಮುನಿ | ಯನ್ನು ಕೂಡಿಕೊಂಡು ಬೇಗ |
ತನ್ನಗರಕೆ ಹೋಗಿರೆಂದು | ಬೀಳುಕೊಟ್ಟನು || ||೧೯೪||

ಕೇಕಯವೃತ್ತ

ವನಿತೆಯ ಕರಕೊಂಡು ಗೌತಮ ಮುನಿ ನಿಲಲತ್ತ
ಇನ ಕುಲಜರು ಸಹಿತ ವರವಿಶ್ವಾಮಿತ್ರರಂದು |
ಜನಕನಗರಕೈತಂದರು ಸಂತೋಷದಿಂದ
ಜನಪನಿವರಂ ನೋಡಿ ಮೌನಿಯೊಳ್ ಪೇಳ್ದನಂದು || ||೧೯೫||

ರಾಗ ಕಾಂಭೋಜಿ ಝಂಪೆತಾಳ

ಸಾಧು ಶೀಲಾಗ್ರಣಿಯೆ | ಸಾಧು ಶೀಲ || ಪಲ್ಲವಿ ||

ವರಮುನಿಪ ತವಚರಣ | ದರುಶನದ ಫಲದೊಳಘ |
ಹರಿದು ಹೋಯಿತನೇಕ | ತಾಪವಿಂದೀಗ ||
ಚರಣ ನಿರ್ಮಲಕರವು | ಪರಮಮಂಗಲವಾಯ್ತು |
ಧರೆಯೊಳಗೆ ನಾಧನ್ಯ | ನಾದೆನಲ್ಲೊ | ಸ್ವಾಮಿ || ||೧೯೬||

ಬಾಲರಿವರಾರು ಮುನಿ | ಬಲವೈರಿಸಮಧೀರ |
ಶೀಲಸಂಪನ್ನರೈ | ಕೋದಂಡಧರರು ||
ಬಾಲರವಿಕೋಟಿತೇ | ಜಃಪುಂಜರಾಗಿಹರು |
ಪಾಲಿಸುವರಾವ ಜನ | ಜಾಲವನ್ನೀಗ || ||೧೯೭||

ರಾಗ ಮುಖಾರಿ ಝಂಪೆತಾಳ

ನೃಪತಿಮೌಲೇ | ಜನಕ | ನೃಪತಿಮೌಲೇ || ಪಲ್ಲವಿ ||

ದಶರಥನ ಸುತರಿವರು | ವಸುಮತೀಪತಿ ಕೇಳು |
ರಸಿಕರಿವರೆನ್ನ ಯ | ಜ್ಞದ ರಕ್ಷೆಗಾಗಿ |
ಕುಶಲದಿಂದಾಂ ಪೋಗಿ | ಕರೆತಂದ ಕಾರಣದಿ |
ನಿಶಿಚರರ ಕೊಂದು ಯಾ | ಗವ ಕಾಯ್ದ ರಾಮ || ||೧೯೮||

ಬರುವಾಗ ಸುಮತಿಭೂ | ಪಾಲ ಕಂಡನು ಮತ್ತೆ |
ವರಗೌತಮನ ಆಶ್ರ | ಮಕೆ ಬಂದೆವು |
ಅರೆಯಾಗಿ ಬಿದ್ದಹ | ಲ್ಯೆಗೆ ವಿಶಾಪವ ಮಾಡಿ |
ಕರೆದು ಗೌತಮಗಿತ್ತು | ಬಂದನೀ ಧೀರ || ||೧೯೯||

ಕೇಕಯವೃತ್ತ

ಕುಶಿಕಸುತನ ಮಾತಂ ಕೇಳುತಾ ರಾಜಮೌಳಿ
ದಶರಥಸುತರಿಂಗೆ ವಂದಿಸುತ್ತೆಂದನಾಗ |
ಋಷಿತಿಲಕನೆ ನೋಡಾ ಹಿಂದೆ ಪುತ್ರಾರ್ಥಿಯಾಗಿ
ಎಸಗಿದೆ ಕ್ರತುವೊಂದಾಶ್ಚರ್ಯಮಂ ಕಾಣಲಾಯ್ತು || ||೨೦೦||

ರಾಗ ಭೈರವಿ ಝಂಪೆತಾಳ

ಧರಣಿಯನು ಶೋಧಿಸು | ತ್ತಿರಲು ಕನ್ಯಾರತ್ನ |
ದೊರಕಲಾ ಸುರಮುನಿಪ | ಬಂದು ಮುದದಿಂದ ||
ವರಕುವರಿ ಸಿರಿದೇವಿ | ಹರಿಯೆ ಪತಿಯಾಗುವನು |
ಅರಿತು ಸಲಹೋ ಎಂದು | ಮುನಿ ಪೋದನಂದು || ||೨೦೧||

ಇರಲು ಯವ್ವನದೋರೆ | ಸಿರಿಸೀತೆಗಾ ಸ್ವಯಂ |
ವರ ಮಾಡಲೆಂದು ನಾ | ಪುರವ ರಚಿಸುವೆನು ||
ದೊರೆ ದೊರೆಗಳೆಲ್ಲರಿಗೆ | ಬರೆಸಿದೆನು ಓಲೆಯನು |
ಕರೆಯಲಟ್ಟಿದೆ ನಿಮ್ಮ | ಕರುಣಿಸೈ ನಮ್ಮ || ||೨೦೨||

ಕಂದ

ಇಂತೆಂದು ಜನಕರಾಯಂ
ಸಂತೋಷದಿ ಪೇಳುತಿರಲು ದೇಶಾಧಿಪರ |
ತಿಂಥಿಣಿ ಬರಲಾ ಸಮಯದೊ
ಳಂತರವರಿತವರವರನು ಮನ್ನಿಸುತಿರ್ದಂ || ||೨೦೩||

ರಾಗ ಯೆರುಕಲಕಾಂಭೋಜಿ ಏಕತಾಳ

ಬಂದಿರೇನೈ | ನಡೆ | ತಂದಿರೇನೈ || ಪಲ್ಲವಿ ||

ಅಂಗದ ಭೂಪಾಲ ನಮೋ | ವಂಗದೇಶಾಧೀಶ ನಮೋ |
ಬಂಗಾಳದ ರಾಯಗೆ ಕ | ಳಿಂಗಗೆ ನಮೋ ||
ಮಂಗಲಾಕಾರ ಕಾಂಭೋಜೋ | ತ್ತುಂಗ ಕಾಶೀರಾಜ ನಮೋ |
ಸಿಂಗಳದ ರಾಯಗೆ ಮಾ | ತಂಗಗೆ ನಮೋ || ||೨೦೪||

ಸೌರಾಷ್ಟ್ರ ಬರ್ಬರ ದೇಶ | ಧೀರಪಾಂಡ್ಯ ಕೇಕಯರ್ಗೆ |
ಗೋರಾಷ್ಟ್ರ ಹಮ್ಮಿರರಿಂಗೆ | ಹೇರಳ ನಮೋ || ||೨೦೫||

ವಾರ್ಧಕ

ಜನಕಭೂಪತಿ ಬಂದ ನೃಪರ ಮನ್ನಿಸುತ ಶಿವ
ಧನುವನಿಲ್ಲಿಗೆ ತನ್ನಿರೆಂದೆನುತ್ತಲಿ ಪೇಳ
ಲನಿತರಲಿ ಚರರು ತೀವ್ರದಲಿ ಚಾಪವ ಹೊತ್ತು ತರಲೊಡನೆ ಮಿಥಿಲೇಂದ್ರನು |
ಅನುಜಕುಶಧ್ವಜನೊಡನೆ ಸೀತೆಯಂ ಸಿಂಗರಿಸಿ
ಘನಬೇಗದಿಂದ ಕರೆತರುವದೆನಲೈದೆ ಭೂ
ತನುಜೆಯಂ ಶೃಂಗಾರವೆಸಗಿ ಕರಕೊಂಡಾಗ ನಡೆತಂದರಾಸಭೆಯೊಳು || ||೨೦೬||

ರಾಗ ಪಂತುವರಾಳಿ ರೂಪಕತಾಳ (ಚರಿತೆ)

ಇಂತು ಶೃಂಗಾರವಾ | ಗಿಹ ಸೀತಾದೇವಿಯ |
ದಂತಿಯೇರಿಸಿ ನಡೆತಂದು ||
ಕಾಂತೆ ನೋಡಿತ್ತ ಭೂ | ಪಾಲರ ಪಂಕ್ತಿಯ |
ನಿಂತು ನೋಡೆಲೆ ಸುರಸಭೆಯ || ||೨೦೭||

ವರಹಂಸೆಯನ್ನೇರಿ | ಪರಮೇಷ್ಠಿ ಬಂದಿಹ |
ಪರಶಿವನೈದನೆ ನೋಡೆ ||
ಕರಿಯೇರಿ ಸುರಪನೈ | ತಂದನೆರಳೆಯೇರ್ದು |
ಸರಿವನಲನನು ನೋಡೆಂದ || ||೨೦೮||

ಉರುಪರಾಕ್ರಮಿ ಕೋಣ | ವಾಹನದಿಂದ ಬಂ |
ದಿರುವಾತನಿವ ದಂಡಧಾರ ||
ನಿರುತಿ ವರುಣರೆಲ್ಲ | ಸಂತೋಷದಿಂದ ಕು |
ಳ್ಳಿರುವರ ನೋಡೆಲೆ ಬಾಲೆ || ||೨೦೯||

ದಿಕ್ಕಿನ ಪತಿಗಳ | ನೀಕ್ಷಿಸೆನಲು ನಸು |
ನಕ್ಕಳು ಜನಕನ ಪುತ್ರಿ ||
ಮಕ್ಕಳಾಟಿಕೆ ಯೇಕೆ | ಬೊಮ್ಮನೆನಗೆ ಮಗ |
ಮುಕ್ಕಣ್ಣ ಸಖನೆನ್ನ ಪತಿಗೆ || ||೨೧೦||

ಸುರರು ಕಿನ್ನರರೆಲ್ಲ | ನರರು ಕೀಟಕರೆನ್ನ |
ಅರಸರಾಗುವ ಮಾತದೇನು ||
ಉರಗನ ಹಾಸುಗೆ | ಯಾದ ದಯಾನಿಧಿ |
ಹರಿಯೆನ್ನ ರಮಣ ಕೇಳಯ್ಯ || ||೨೧೧||

ವಚನ || ಈ ರೀತಿಯಿಂದ ಜಾನಕಿ ಪೇಳ್ದು ಪಿಂತಿರುಗಿ ಸತಿಯರಂ
ಸೇರಿ ಇರಲಾಗಿ ಆ ವೇಳ್ಯದೊಳ್ ಇತ್ತಲಾಗಿ
ಭೂಪಾಲಕರು ಮಾತಾಡುತಿರ್ದರದೆಂತೆನೆ –

ರಾಗ ಘಂಟಾರವ ಏಕತಾಳ

ಯಾಕಯ್ಯಾ ನೀವೇಳಿ | ಬಿಡಿ | ಸಾಕಯ್ಯ ನೀವೇಳಿ || ಪಲ್ಲವಿ ||

ಬೇಕಿಲ್ಲವು ನಮ | ಗೀಕನ್ನಿಕೆಯ ತೋಟಿ || ||೨೧೨||
ಪಿತ್ತವೇರಿ ಕಣ್ | ಗತ್ತಲೆ ಬರುತಿದೆ | ಯಾಕಯ್ಯಾ || ||೨೧೩||
ಸಂದು ಶೂಲೆ ನಮ | ಗೆಂದೆಂದಿಗಾಗದು || ಸಾಕಯ್ಯ || ||೨೧೪||
ಸತ್ತ ಸುದ್ದಿಗಿ | ನ್ನುತ್ತರವೇನಿದೆ || ಯಾಕಯ್ಯಾ || ||೨೧೫||
ತಾಯ ಹಾಲು ಎನ್ನ | ಬಾಯಿಗೆ ಬರುತಿದೆ || ಸಾಕಯ್ಯಾ || ||೨೧೬||

ವಚನ || ಆಗಲಾ ಸಭೆಯೊಳ್ ಆ ಹರಧನುಸ್ಸನ್ನೆತ್ತುವ ಮಹಾ ಪರಾಕ್ರಮಶಾಲಿಗೆ ಸೀತಾ
ದೇವಿಯು ಪುಷ್ಪಮಾಲಿಕೆಯನ್ನು ಹಾಕುವಂಥವಳಾಗುವಳೆಂದು ಜನಕರಾಯಂ ನುಡಿಯುತ್ತಿರಲಾಗಿ –

ರಾಗ ಘಂಟಾರವ ಏಕತಾಳ

ಅಂಗದ ಭೂಮಿಪಾಲ | ಬಂದ ಆಗಲ್ಲೆ ನಿಂದ |
ಮುಂಗೈಯ ಬಳೆ ತಿದ್ದಿಕೊಂಡ ||
ಗಂಗಾಧರನಾ ಚಾಪವನೆತ್ತಲು | ತುಂಗವಿಕ್ರಮನು ಭಂಗದಿ ಪೋದ || ||೨೧೭||

ಗೋಟದ ರಾಯ ಮುಂದೆ | ಬಂದ ಆಗಲ್ಲೆ ನಿಂದ |
ಸೂಟಿಯೊಳ್ ಚಾಪವನೆತ್ತಲೆಂದಾ ||
ಸಾಟಿಯೋಗದೆ ಮುಂದೋಟವೆ ಸರಿಯೆಂದು | ದಾಟಿ ಧನುವ
ವಂದಿಸುತ್ತಿದ್ದನಾಗ || ||೨೧೮||

ಕೇರಳದರಸ ನಡೆ | ತಂದ ಕಡು ಪಂಥ |
ದೋರುತ್ತ ಚಾಪವ ಹೊದ್ದಿ ನಿಂದ ||
ಮಾರಾರಿಯ ಬಿಲ್ಲ ಸಾರಿ ಪಿಡಿದು ರಕ್ತ | ಕಾರಿದಾಕ್ಷಣ ಸಾರಿದ ಹಿಂದೆ || ||೨೧೯||

ಕಂದ

ಈ ತೆರದೊಳು ಭೂಪಾಲ
ವ್ರಾತ [ವು ಮುಂದೊತ್ತಿ ಬಂದು] ಮುಟ್ಟುತ ಧನುವಂ |
ಸೋತರು ಕೆಲವರು ಚಾಪದ
ಮಾತಿನ್ನೇಕೆಂದು ಹಿಂದೆ ಶರಣೆನುತಿರ್ದರ್ || ||೨೨೦||

ವಚನ || ಆ ವೇಳ್ಯದೊಳು ಲಂಕಾಧಿಪತಿ ರಾವಣೇಶ್ವರನು ಮುಂದೆ ಬಂದನದೆಂತೆನೆ –

ಕೇಕಯ ವೃತ್ತ

ದೆಸೆ ದೆಸೆ ನಡುಗಲ್ಕೆ ಬಂದು ಮಾರ್ಗಸ್ಥನಾಗಿ
ಅಸುರ ಬಲವ ಕೂಡಿಕೊಂಡು ಸಂತೋಷದಿಂದ |
ದಶಶಿರಗಳ ತೋರಿಸುತ್ತ ಆ ಸಭಾಮಧ್ಯದಲ್ಲಿ
ಅಸುರನು ನಡೆತಂದಾ ಧನುವ ತಾ ಕಂಡು ನಿಂದ || ||೨೨೧||

ರಾಗ ಕೇದಾರಗೌಳ ಪಂಚಘಾತ ಮಟ್ಟೆತಾಳ

ಅಸುರ ಬಿಲ್ಲ ಹಿಡಿದು ಮತ್ತೆ | ವಸುಧೆಯಲ್ಲಿ ಮಂಡಿ ಹಾಕಿ |
ಅಸಮಸಾಹಸದಲಿ ಎತ್ತ | ಲಾಗ ಸೀತೆ ನೋಡಿ ಚಿಂ |
ತಿಸುತ ಮನದಿ ಬಾಡುತಿರ್ದಳು | ಜನಕರಾಯ |
ನುಸುರದಿರ್ದ ದುಗುಡ ಭರದೊಳು || ||೨೨೨||

ಮತ್ತೆ ಸಾಹಸಿತ್ವದೊಳಗೆ | ಎತ್ತಿ ಧನುವ ಸತ್ವದಿಂದ |
ನೆತ್ತಿಯಲ್ಲಿರಿಸಿಕೊಳಲು | ರಕ್ತಕಾರಿ ಧರೆಗೆ ಬೀಳೆ |
ದೈತ್ಯರೆಲ್ಲ ಭೀತಿಗೊಂಡರು | ಅಂಬರದೊಳಾ |
ದಿತ್ಯರೆಲ್ಲ ನಾಚಿಕೊಂಡರು || ||೨೨೩||

ಬಿದ್ದು ಧರೆಯಿಂದೆದ್ದು ನಾಚು | ತಿದ್ದ ರಾವಣನ್ನ ನೋಡಿ |
ಮದ್ದಿದೀಗಲೆಂದು ಸೀತೆ | ಹೊದ್ದಿದಧಿಕ ಹರ್ಷದಿಂದ |
ಬುದ್ಧಿಯೊಳ್ಳಿತಾಯಿತೆಂದಳು | ಅಸುರನನ್ನು |
ಲುಬ್ಧನೆಂದು ಬೈದು ನಿಂದಳು || ||೨೨೪||

ಬಿದ್ದ ಭರಕೆ ಧರಣಿ ತಗ್ಗ | ಲೊದ್ದು ಹೂಂಕರಿಸಿ ಖಳನು |
ಎದ್ದು ಬಹಳ ಭಂಗದಿಂದ | ಸಾಧ್ಯವೆಂದು ಭಾಷೆ ಮಾಡಿ |
ಎದ್ದುಹೋದ ನಿಜ ನಿವಾಸಕೆ | ಮಿಥಿಲೇಂದ್ರನಾಗ |
ಹೊದ್ದಿದನು ಸಂತೋಷ ನಿಮಿಷಕೆ || ||೨೨೫||