ವಚನ : ಈ ತೆರದಿಂ ಕೈಕೆ ಕೌಸಲ್ಯೆಸುಮಿತ್ರೆಯರು ಏನೆಂದರು ಎಂದರೆ –

ರಾಗ ಸೌರಾಷ್ಟ್ರ ಅಷ್ಟತಾಳ

ಅಂಗನಾಮಣಿ ಎನ್ನ ಅಂಗದ ವ್ಯಥೆಯನ್ನು |
ತಾಳಲಾರೆನು || ||೮೧||

ಅಡಿಯಿಡಲಳವಲ್ಲ ಮಡಿವರೆ ಮನಸ್ಸಿಲ್ಲ |
ತಾಳಲಾರೆನು || ||೮೨||

ಗಳಿಗೆ ಗಳಿಗೆಗೊಂದು ಅಲಗು ನೆಟ್ಟಂತಿದೆ |
ತಾಳಲಾರೆನು || ||೮೩||

ನಿನ್ನಂತೆ ಎನಗಾಯಿತಹುದೀಗ ಬಹುವ್ಯಥೆ |
ತಾಳಲಾರೆನು || ||೮೪||

ಉಂಡರುಬ್ಬಸ ಚಿಣ್ಣ ಗುಂಡು ಕಲ್ಲಿಟ್ಟಂತೆ |
ತಾಳಲಾರೆನು || ||೮೫||

ಒಬ್ಬರಂತೆನಗಲ್ಲ ಉಬ್ಬಸ ಘನವಮ್ಮ |
ತಾಳಲಾರೆನು || ||೮೬||

ಕ್ಷೀರ ಸಾಗರವಾಸ ನಾರಾಯಣ ದೇವೇಶ |
ರಕ್ಷಿಸೆಮ್ಮನು || ||೮೭||

ಎಂದು ಮೂವರು ಪೇಳಿದಂದವ ತಿಳಿದ ಗೋ |
ವಿಂದನಂದು || ||೮೮||

ಶಾರ್ದೂಲವಿಕ್ರೀಡಿತ

ಮಾಸೇ ಚೈತ್ರಸಿತಾರ್ಧ ರಮ್ಯನವಮ್ಯಾಂ ಮಧ್ಯಾಹ್ನ ಕಾಲಾಗಮೇ
ಮೇಷಾರ್ಕೇ ಸುಕುಳೀರ ಲಗ್ನದುದಯೇ ತಾರಾ ಪುನರ್ವಸುವಿನೊಳ್ |
ದೇಶಾಧೀಶ್ವರನಾದ ಪಂಕ್ತಿರಥನಿಂ ಕೌಸಲ್ಯಗರ್ಭಾಬ್ಧಿಯೊಳ್ |
ಶ್ರೀ ಸರ್ವೇಶ್ವರ ಮೋದದಿಂದ ಲೊಗೆದಂ ಲೋಕೈಕರಕ್ಷಾಮಣಿ || ||೮೯||

ಕಂದ

ವರಕೈಕೆ ಪಡೆದಳೊರ್ವನ
ಸರಸಿಜದಲನೇತ್ರೆ ಮಿತ್ರೆ ಬೆಸನಾದಳು ಇ |
ರ್ವರು ಸುಕುಮಾರರ ಲಗ್ನದಿ
ಧರಣೀಶಗೆ ತಂದುಕೊಟ್ಟರತಿಮುದದಿಂದಂ || ||೯೦||

ರಾಗ ಕಲ್ಯಾಣಿ ಏಕತಾಳ

ದಶರಥ ಭೂಪಗೆ | ಕೌಸಲ್ಯಾ ದೇವಿಯು |
ಶಿಶುವ ಕೈಯೊಳಗಿತ್ತ | ಳತಿ ಮೋಹದಿಂದ ||
ಎಸೆವ ಸಂತಸದಿಂದಾ | ಘ್ರಾಣಿಸಿ ರಾಮನೆಂ |
ದತಿಶಯ ಮೂರ್ತಿಯ | ಸತಿಗಿತ್ತನಾಗ || ||೯೧||

ತನ್ನ ಬಾಲನ ಕೊಟ್ಟ | ಳಿಂದೀವರಾಕ್ಷಿ ಸಂ |
ಪನ್ನಗೆ ಕೊಡಲಾತ | ಮನ್ನಿಸಿ ಭರತ ||
ರನ್ನನೆಂದುನ್ನತ | ನಾಮವ ವಿರಚಿಸಿ |
ಚೆನ್ನೆ ಕೈಕೆಗೆ ಕೊಟ್ಟು | ದನ್ನು ನೋಡಿದಳು || ||೯೨||

ಶಿಶುಗಳೆರಡ ತಂ | ದು ಸುಮಿತ್ರೆ ಕೊಡಲಾಗಿ |
ವಸುಧೇಶ ಲಕ್ಷ್ಮಣ | ಶತ್ರುಘ್ನರೆಂದು |
ಶಶಿಮುಖಿಗಿತ್ತಾಗ | ಮಂಗಲ ಘೋಷದಿ |
ವಸುಮತೀಸುರರ್ಗೆ ವಂ | ದಿಸುತಿದ್ದನಾಗ || ||೯೩||

ವಚನ || ಆಗಳಾ ಮಂದಗಮನೆಯರು ಬಂದು ಜೋಗುಳವ ಪಾಡಿದರದೆಂತೆನೆ –

ರಾಗ ಆಂದೋಳಿ ಅಷ್ಟತಾಳ

ಅಂಗನಾಕುಲರ | ನ್ನೆಯರೆಲ್ಲ ಬಂದು |
ಮಂಗಲಕರ ಶುಭ | ಲಗ್ನದೊಳಂದು |
ಶೃಂಗಾರಮಾಗಿಹ | ತೊಟ್ಟಿಲ ತಂದು |
ಇಂಗಡಲರಸನ | ತೂಗಿದರಂದು || ಜೋ | ಜೋ || ||೯೪||

ಜೋಜೋ ದಶಶಿರ | ವೈರಿಮುರಾರಿ |
ಜೋಜೋ ಶ್ರೀರಾಮ | ಚಂದ್ರ ಉದಾರಿ |
ಜೋಜೋ ಇಂದ್ರಜಿ | ತುವಿನ ಸಂಹಾರಿ |
ಜೋಜೋ ಲಕ್ಷ್ಮಣ | ಶೇಷಾವತಾರಿ || ಜೋ | ಜೋ || ||೯೫||

ಜೋಜೋ ಕೈಕಾ | ದೇವಿಯ ಕಂದ |
ಜೋಜೋ ಭರತವೀರ | ಸದ್ಗುಣಸಾಂದ್ರ |
ಜೋಜೋ ಸುಮಿತ್ರಾ | ದೇವಿಯ ಕಂದ |
ಜೋಜೋ ಶತ್ರುಘ್ನ | ರವಿಕೋಟಿಸಾಂದ್ರ || ಜೋ | ಜೋ || ||೯೬||

ಕಂದ

ಸಿತಬೆದಿಗೆಯ ಚಂದ್ರನ ಪೋ
ಲುತ ಸುಂದರ ವಿಗ್ರಹದೊಳು ವರ್ಧಿಸುತಿರಲು |
ಪ್ರತಿವಿದ್ಯವ ಕಲಿತಿಹ ವರ
ಸುತರನ್ನೀಕ್ಷಿಸುತ ದಶರಥೇಂದ್ರಂ ಪೇಳ್ದಂ || ||೯೭||

ರಾಗ ಕೇದಾರಗೌಳ ಝಂಪೆತಾಳ

ಕಮಲದಳನಯನ ರಾಮ | ಇನ ಕುಲ |
ಕ್ಕಮಿತಸೌಭಾಗ್ಯಧಾಮ ||
ಕಡು ಮದ್ದು ಮೊಗದ ಬಾಲ | ಎತ್ತೆತ್ತ |
ನಡೆದು ದಣಿದೆಯೊ ಸುಶೀಲ || ||೯೮||

ತಮ್ಮ ಲಕ್ಷ್ಮಣನು ನಾನೂ | ಬೇಟೆಗೆ ಮ |
ಹನ್ಮಮತೆಯಲಿ ಪೋದೆವು ||
ಸಣ್ಣವರು ವಿಪಿನದೊಳಗೆ | ಇಬ್ಬರೇ |
ಮಿಣ್ಣನೈದುವರೆ ಹೀಗೆ || ||೯೯||

ಆನೆ ಕುದುರೆಗಳು ಸಹಿತ | ಆಯ್ದಿದೆವು |
ಕಾನನದಿ ಕೇಳು ತಾತ ||
ಸುರವಿರೋಧಿಗಳು ಕಂಡು | ಸೈರಿಸರು |
ತರವಲ್ಲ ಪೋಪುದಿಂದು || ||೧೦೦||

ಅರಿರಾಯರೆಮ್ಮ ಕಂಡು | ನಡನಡುಗಿ |
ಚರಣಕೆರಗಿದರು ಬಂದು |
ಇತ್ತ ಬಾರಯ್ಯ ಭರತ | ತಿರಿಗಿಯಾ |
ಡುತ್ತಿರುವುದ್ಯಾವನೀತ || ||೧೦೧||

ಅನುಜ ಶತ್ರುಹನು ನಾನೂ | ಬಿಲು ವಿದ್ಯ |
ವನು ಕಲಿಯುತಲೆ ಬಂದೆವು |
ತರವಲ್ಲವಪ್ಪಗಳಿರ | ವನದೊಳಗೆ |
ತಿರುಗದಿರಿ ಬಾಲಕರಿರ || ||೧೦೨||

ಮಾಲಿನೀವೃತ್ತ

ವರಸುತರೊಡನಾ ಭೂಪಾಲ ಮಾತಾಡುವಾಗ
ಗುರು ಕುಶಿಕಜನಂದೈತಂದ ಮಾಂಗಲ್ಯದಿಂದ |
ಪರಮಪುರುಷನಂ ಕಂಡುತ್ತಮಾನಂದದಿಂದ
ಹರಸಲು ಧರಣೀಶಂ ರಾಮ ತಾಂ ವಂದಿಸಲ್ಕೆ || ||೧೦೩||

ರಾಗ ವರಾಳಿ ಏಕತಾಳ

ಋಷಿತಿಲಕಾಗ್ರಣಿ ವಂದನಂ |
ಕುಶಿಕ ನಂದನವರ ಕೌಶಿಕಮುನೇ || ಪಲ್ಲವಿ ||

ಸಾಕೇತಪುರ ನಿನ್ನ ಪಾದಸಂಗದಿ |
ಸಕಲರಘವ ಪರಿಹರಿಸಿತಲ್ಲ || ||೧೦೪||

ಕಂಗಳಿಗೆ ಮಹಾಸುಖವಾಯ್ತು | ಮುನಿ
ಪುಂಗವ ಕೇಳಯ್ಯ ನಿನ್ನ ಕಂಡ ಮಾತ್ರದಿ || ||೧೦೫||

ಪೂರ್ವಜನ್ಮದಿ ನರದೇವನಲ್ಲೋ |
ಸರ್ವೇಶ್ವರನ ಭಜಿಸಿ ಋಷಿಯಾದೆ || ||೧೦೬||

ಧನ್ಯ ನಾನೀಗ ವರಬ್ರಹ್ಮಋಷಿಯೆ |
ಎನ್ನನುಧ್ಧರಿಸಯ್ಯ ಮುನಿರಾಯ || ||೧೦೭||

ಆನೆ ಕುದುರೆ ಮಂದಿ ಸೇನೆ ಎಲ್ಲ | ಈ
ಕ್ಷೋಣಿ ಕೂಡಿರುವ ಭಾಗ್ಯ ನಿನ್ನದಯ್ಯ || ||೧೦೮||
ಅರುಹು ನಿನ್ನ ಮನದಭಿಲಾಷೆಗಳ |
ತರಿಸಿ ಕೊಡುವೆನಯ್ಯ ಹರುಷದಿಂದ || ||೧೦೯||

ರಾಗ ಯರಕಲಕಾಂಭೋಜಿ ಆದಿತಾಳ

ಅಜನಂದನ ದಶರಥನೃಪತೇ | ನೀ |
ರಜನಯನ ಚಾರುಶೀಲ ರಿಪುಮಥನ || ಪಲ್ಲವಿ ||

ಎಲೆ ಭೂಪ ಏನೆಂಬೆ ಎನ್ನಭಿಲಾಷೆಗಳ |
ಸಲಿಸಿ ಕೊಡುವೆನೆಂದು ಪೇಳ್ದೆಯಲ್ಲ || ||೧೧೦||

ಪಿರಿದಾದ ಯಾಗವನ್ನು ಮಾಡಲೆಂದು ಸಕಲ |
ಪರಿಸೋಪಸ್ಕಾರಗಳ ಮಾಡಿಬಂದೆ || ||೧೧೧||

ಮತಿವಂತ ಪರಾಕ್ರಮಿಯಾದ ಧೀರ ನೀ |
ನತಿಸತ್ಯಸಂಧನಾಗಿರುವೆಯಲ್ಲ || ||೧೧೨||

ಸೋದರನಾಗಿರುತಿಹ ಲಕ್ಷ್ಮಣನ್ನ ಕೂಡಿ |
ಮೋದದಿ ರಾಮನ ಎನ್ನೊಡನೆ ಕಳುಹಿಸೊ || ||೧೧೩||

ಮತ್ತೇಭವಿಕ್ರೀಡಿತ

ವರಮೌನೀಶ್ವರನೆಂದ ಮಾತ ನರಪಂ ತಾ ಕೇಳುತಲೆ ಚಿಂತಿಸಿ
ಹರ ಮಾಹೇಶ್ವರನೆನ್ನ ಪುತ್ರರುಗಳಂ ಬಿಟ್ಟಿಂತು ನಾನಿಲ್ವೆನೋ |
ತರುಣಪ್ರಾಯದ ಕೋಮಲಾಂಗ ರಿವರಂ ಕಂಡೇಯ ಕೌಶಿಕಮುನೇ
ತರವೇನೈ ನಿಮಗಿಂಥ ಕಾರ್ಯ ಗುರುವೇ ಕೇಳೆಂದ ಧಾತ್ರೀಶ್ವರಂ || ||೧೧೪||

ರಾಗ ಭೈರವಿ ಝಂಪೆತಾಳ

ಅಮಲಗುಣಧಾಮ ಮುನಿ | ನಮಿಪೆ ನಾ ನಿನಗೆ || ಪಲ್ಲವಿ ||

ಸ್ವಾಮಿ ನಿಸ್ಪೃಹಮನದ | ಮುನಿಯೆ ನಮಿಸುವೆ ನಿನಗೆ |
ರಾಮನಗಲಿರುವಂಥ | ಮನಧೈರ್ಯವಿಲ್ಲ || ||೧೧೫||

ಷೋಡಶ ವಯಸ್ಸಾಗ | ಲಿಲ್ಲೆನ್ನ ಬಾಲರಿಗೆ |
ಕೂಡೆನ್ನ ಮಕ್ಕಳನು | ಕಳುಹಿಕೊಡಲಾರೆ || ||೧೧೬||

ರಕ್ಕಸರ ಕೊಲುವಂಥ | ರಣಸಮರ್ಥರೆ ಇವರು |
ಧಕ್ಕಡಿಗತನದ ಬಲು | ಕುಟಿಲರಲ್ಲಯ್ಯ || ||೧೧೭||

ರಾಕ್ಷಸರ ಯುದ್ಧಕ್ಕೆ | ಗಜತುರಗ ಸಹಿತಾಗಿ |
ಈ ಕ್ಷಣವೆ ಬರುವೆ ವಿ | ಶ್ವಾಮಿತ್ರ ಮುನಿಯೆ || ||೧೧೮||

ಕೇಕಯವೃತ್ತ

ದಶರಥ ನರಪಾಲ ಪೇಳ್ದುದಂ ಕೇಳುತಾಗ
ಎಸೆವರುಣ ಮುಖಾಕ್ರಾಂತಂ ತತ್ಸಭಾಮಧ್ಯದೊಳಗೆ |
ಉಸಿರಿಡುತ್ತಂ ಭುಗಿಭುಗಿಲೆನುತಾಚಾರ್ಯನನ್ನೀಕ್ಷಿಸುತ್ತಂ
ಕುಶಿಕಜನತಿಕೋಪಾರೂಢಂ ತಾನಾಗಿರ್ದ ಪೇಳ್ದಂ || ||೧೧೯||

ರಾಗ ವರಾಳಿ ಏಕತಾಳ

ಮಿತ್ರವಂಶಜಾತನಾದ | ಭೂಮಿಪಾಲ | ನೀನು |
ಸತ್ಯವಂತನೆಂದು ನಂಬಿ | ಬಂದೆನಲ್ಲ || ||೧೨೦||

ಬಂದಕ್ಷಣದಿ ಪೇಳ್ದ ಮಾತು | ನಿನ್ನೊಳಿಲ್ಲ | ಈಗ |
ಒಂದೇ ನಿಮಿಷ ಕಷ್ಟಮಾತು | ಬಂದಿತಲ್ಲ || ||೧೨೧||

ಸೂರ್ಯವಂಶ ಭೂಪರು ಹಿಂ | ದೇನು ಯೋಗ್ಯ | ನೀ ದು |
ಷ್ಕಾರ್ಯಕ್ಕೆ ಸೇರಿದ ಮೇಲೆ | ಸಾಕು ಭಾಗ್ಯ || ||೧೨೨||

ಬಂದ ದಾರಿಗೆ ಸುಂಕವಿಲ್ಲ | ಪೋಪೆ ಕೇಳು | ನಿನ್ನ |
ಕಂದರನ್ನು ಕೂಡಿ ಸುಖದಿ | ರಾಜ್ಯ ವಾಳು || ||೧೨೩||

ಕಂದ

ಮುನಿ ಕುಶಿಕಾಖ್ಯಂ ಪೇಳಿದ
ಘನ ರೌದ್ರದ ಮಾತ ಕೇಳಿ ಪದ್ಮಜ ತನಯಂ |
ತನುಮಧ್ಯದೊಳಾ ಋಷಿಯಂ
ವಿನಯದಿ ಸಂತೈಸುತಾಗ ಜನಪತಿಗೆಂದಂ || ||೧೨೪||

ರಾಗ ಶಂಕರಾಭರಣ ಮಟ್ಟೆತಾಳ

ಅಜಕುಮಾರ ಧೀರ ವೀರ | ಬಾಹುವಿಕ್ರಮ || ಪಲ್ಲವಿ ||

ಸುಜನರಕ್ಷ ಚಿಂತೆ ಬೇಡ | ಸೂರ್ಯವಂಶ ಭೂಮಿಪಾಲ |
ಭಜಕರಿಷ್ಟವೀವ ರಾಮ | ನನ್ನು ಕಳುಹಿಸು || ||೧೨೫||

ಮುನ್ನ ಕೊಡುವೆನೆಂದು ಹೇಳಿ | ಇನ್ನು ಇಲ್ಲವೆಂದುಸುರಲು |
ಧನ್ಯಶೀಲ ಧರ್ಮದ್ರೋಹ | ಬಾಹದಲ್ಲಯ್ಯ || ||೧೨೬||

ತನಯನಾದ ರಾಮಚಂದ್ರ | ನತಿಕಿಶೋರ ಮನುಜನಲ್ಲ |
ಮನದಿ ತಿಳಿಯೊ ಈತನೀಗ | ಗರುಡವಾಹನ || ||೧೨೭||

ಈ ತಪಸ್ವಿಯನ್ನು ನೆನೆಯ | ಲೆಲ್ಲ ಕಾರ್ಯ ಸಿದ್ಧಿಯಹುದು |
ಭೀತಿ ಇಲ್ಲದಂತೆ ರಾಮ | ನನ್ನು ಕಳುಹಿಸೊ || ||೧೨೮||

ತನಯ ಬಾರೊ ರಾಮಚಂದ್ರ | ವನಜನೇತ್ರ ಸುಗುಣಸಾಂದ್ರ |
ಮುನಿಕುಲೇಶ ಕರೆಯಬಂದ | ಪೋಗಬೇಕೆಲ || ||೧೨೯||

ಋಷಿಕುಲಾರ್ಯ ಕುಶಿಕತನಯ | ಅಸಮಧೈರ್ಯ ಯಜ್ಞಕಾರ್ಯ |
ಎಸಗು ಬೇಗ ಎನುತ ಸುತರ | ಬೀಳುಕೊಟ್ಟನು || ||೧೩೦||

ರಾಜ ತಿಲಕ ಹರ್ಷಪುಳಕ | ರಾಜಿಯಾಗಲಿಂದು ನಿನಗೆ |
ರಾಜ ರಾಮ ಲಕ್ಷ್ಮಣರನು | ಕೊಂಡುಪೋಪೆನೈ || ||೧೩೧||

ಕಂದ

ಧರಣಿಪಗೆ ಪೇಳಿ ಮಕ್ಕಳ
ಕರುಣದಿ ಕರಕೊಂಡು ಬರುತ ಮುನಿಕುಲ ತಿಲಕಂ |
ಪುರಮಂ ಕಳೆದೈದುತ ಬಾ
ಲರನೀಕ್ಷಿಸಿ ಮಾತನಾಡುತಿರ್ದಂ ಪಥದೊಳ್ || ||೧೩೨||

ರಾಗ ನಾದನಾಮಕ್ರಿಯೆ ಅಷ್ಟತಾಳ

ಶ್ರೀರಾಮ ಲಕ್ಷ್ಮಣ ದೇವೇಶ | ರಿರ |
ಕೇಳಿ ನಾ ಪೇಳುವ ವಚನವ ||
ನೀರಜ ಕೋಮಲ ಕಾಯರೆ | ಮುಂದೆ |
ದಾರಿ ಪಾಷಾಣವೆಗ್ಗಳವಯ್ಯ || ||೧೩೩||

ಬಳಲಿಕೆಯಾದರೆ ಪೇಳಿರೋ | ಮಂತ್ರ |
ಗಳ ಉಪದೇಶ ಮಾಡುವೆನಿಂದು ||
ನಲವೇರುವದು ಹಸಿವಾಗದು | ಇನ |
ಕುಲ ತಿಲಕಾಗ್ರಣಿಗಳಿರಿನ್ನು || ||೧೩೪||

ಕರುಣಿಸೊ ಮುನಿರಾಯ ಮಂತ್ರವ | ನಿನ್ನ |
ಕರುಣದಿ ಬಾಧೆಗಳಲಿಲ್ಲವೈ ||
ಗುರುವಾಗ ಕೊಟ್ಟನು ಮುದದಿಂದ | ಇರೆ |
ತರುಣ ನೋಡಿದನೊಂದು ಅಡವಿಯ || ||೧೩೫||

ವೃತ್ತಾಂತವೇನೀ ಕಾಡಾವುದು | ಮುನಿ |
ಪೋತ್ತಮ ಚಿತ್ರವಾಗಿದೆ ಇದು ||
ಧೂರ್ತೆ ರಕ್ಕಸಿಯೋರ್ವಳ್ ತಾಟಕಿ | ತಾಪ |
ಸೋತ್ತಮರನು ತಿಂಬಳ್ ಘಾತಕಿ || ||೧೩೬||

ಏಕೆ ದಾರಿಯ ಬಿಡಳೇನಯ್ಯ | ಮುನಿ |
ಆಕೆ ಜೀವಿಸುವಳಿನ್ನೇನಯ |
ಶ್ರೀಕರ ರಾಮ ಅವಳಕೊಂದು | ಮುಂದೆ |
ಲೋಕಕೆ ಕೀರ್ತಿಯಾಗಿರು ನಿಂದು || ||೧೩೭||

ಸ್ತ್ರೀಹತ್ಯೆ ಮಾಡೆ ಲೋಕದೊಳೆಲ್ಲ | ಎನ್ನ |
ದ್ರೋಹಿ ಎಂಬರು ಎನಗಿದು ಸಲ್ಲ |
ನೀ ಹರಿಯಲ್ಲವೆ ಭಾರ್ಗವ | ತಾಯ |
ಪ್ರಾಹರಿಸಿದ ಸುದ್ದಿಯರಿಯೆಯ || ||೧೩೮||

ತಂದೆ ಪೇಳಿದು ದಿಟವಾಯ್ತಯ್ಯ | ಈಗ |
ಕೊಂದು ಕೊಡುವೆ ತಾಳಿ ಮುನಿರಾಯ |
ಇಂದೆನ್ನ ಮೇಲೆ ದಯವ ಮಾಡು | ಎನು |
ತಂದುಸುರಲು ಆಶ್ಚರ್ಯಗಳಾಯ್ತು || ||೧೩೯||

ಕೇಕಯವೃತ್ತ

ನಿಟಿನಿಟಿಲೆನುತಾಗ ಘೋರ ರೂಪಿಂದ ಬೇಗ
ಅಟವಿಯೊಳಗಣ ಮಾರಿ ಬಂದಳಡ್ಡೈಸಿ ದಾರಿ |
ಅಟಕಟಿಸುತ ಭಾರಿ ಕಣ್ಣು ಕೆಂಗಿಡಿಯ ಕಾರಿ
ಕುಟಿಲತನ ವಿಕಾರಿ ತಾಟಕೀ ಎಂಬ ನಾರಿ || ||೧೪೦||

ರಾಗ ಪಂತುರಾವಳಿ ಮಟ್ಟೆತಾಳ

ಆರೆಲೋ ಮನುಜ ಇಲ್ಲಿ | ಅಂಜಿಕಿಲ್ಲದೆ | ಇಂಥ |
ಘೋರವಾದ ಎನ್ನ ವನಕೆ | ಬಂದು ಸಿಕ್ಕಿದೆ || ||೧೪೧||

ಸಿಕ್ಕಿದೆನೆಂದು ನೀ ಪೇಳ್ವ | ಪೌರುಷ ಸಾಕೆ | ಕಳ್ಳ |
ರಕ್ಕಸಿ ನೀನ್ಯಾರೆ ಅತ್ತ | ಸಾರೆಲೆ ಜೋಕೆ || ||೧೪೨||

ತಾಟಕಿ ನಾನೆನ್ನ ವನ | ನಿಮಗಿದುಸಲ್ಲ | ಎನ್ನ |
ಬೇಟೆಯ ಹುಲ್ಲೆಗಳಂತಾ | ದಿರಿ ನೀವೆಲ್ಲ || ||೧೪೩||

ನಿನ್ನ ಬೇಟೆ ಎಂಬುದಾವ | ಗಣ್ಯ ಕಾಣೆಲೆ | ಮೂಳಿ |
ಕುನ್ನಿಯಂತೆ ದಾರಿಯ ಬಿ | ಟ್ಟತ್ತ ಸಾರೆಲೆ || ||೧೪೪||

ಈಕ್ಷಣದಲ್ಲಿ ನಿನ್ನ ಮಾಂಸ | ಖಂಡವ ಬೇಗ | ನಾ |
ಭಕ್ಷಿಸುವೆನೆನುತ ಪಲ್ಲ | ತೋರಿದಳಾಗ || ||೧೪೫||

ಹಲ್ಲ ಕಂಡರಂಜುವನೇ | ರಾಮ ಕಾಣೆಲೆ | ನಿ |
ಮ್ಮೆಲ್ಲರ ವಂಶಕ್ಕೆ ಶೂಲ | ನಾಗಿರುವೆನೆಲೆ || ||೧೪೭||

ಕಲ್ಲು ಮರದ ಮಳೆಯಗರೆವೆ | ನೆನ್ನುತಲಂದು | ಅಸುರೆ |
ತಲ್ಲಣಿಸದೆ ಸಿಡಿಲಿನಂತೆ | ಹೊಡೆದಳು ಬಂದು || ||೧೪೭||

ರಾಘವಾ ಅವಳ ನೀ ಮಾ | ತಾಡಿಸ ಬೇಡ | ಅತಿ |
ಬೇಗ ಕೊಂದು ಕಾಲನ ವಶ | ಮಾಡೆಲೊ ಗಾಢ || ||೧೪೮||

ರಾಗ ಮಾರವಿ ಮಟ್ಟ್ಟೆತಾಳ

ಘೋರ ರೂಪಿನಸುರೆ ಮದ | ವೇರಿ ಭುಜವನೊದರಿಸುತ್ತ |
ಮೂರು ಲೋಕ ನುಂಗ ಬಂದ | ಮಾರಿಯಂತಿರೆ ||
ಚೀರಿ ಬಾಯ ಬಿಟ್ಟು ಹಲ್ಲ | ತೋರಿ ಭಯವ ಬೀರಿ ಋಷಿಗೆ |
ಶೂರ ರಾಮಚಂದ್ರಗಿಟ್ಟ | ಳೊಂದು ಶೂಲವ || ||೧೪೯||

ಇಟ್ಟ ಶೂಲವನ್ನು ರಾಮ | ತಟ್ಟಿ ಬಿಲ್ಲ ಕೊಪ್ಪಿ ನಿಂದ |
ದಿಟ್ಟೆಗೊಂದು ಶರವನಾಗ | ಬಿಟ್ಟ ರೋಷದಿ ||೧೫೦||

ಕೆಟ್ಟ ತೊತ್ತೆ ಎನ್ನ ಕೂಡೆ | ಇಷ್ಟು ಶೌರ್ಯವೇಕೆನುತ್ತ |
ಅಟ್ಟಿ ಹಿಡಿದು ಬಡಿದಡೊಂದು | ರಟ್ಟೆ ಬೀಳಲು || ||೧೫೧||

ಎತ್ತಣಿಂದ ಬಂದೆ ನಿನ್ನ | ತುತ್ತ ಮಾಳ್ಪೆನೆನುತಲಾಗ |
ಮೃತ್ಯು ಬಾಯ ಬಿಟ್ಟವೋಲು | ಧೂರ್ತೆ ಗರ್ಜಿಸೆ ||೧೫೨||

ಚಿತ್ತದಲ್ಲಿ ರಾಮ ಕ್ರೋಧ | ವೆತ್ತು ಸುರರ ಹವಿಯನುಗುಳೆ |
ನುತ್ತ ಬಾಣದಿಂದ ಕೊರಳ | ಕತ್ತರಿಸಿದನು || ||೧೫೩||

ಶಾರ್ದೂಲವಿಕ್ರೀಡಿತ

ಶ್ರೀರಾಮಂ ಪಿಡಿದೆಚ್ಚ ದಿವ್ಯಶರದಿಂದಾ ಧೂರ್ತೆ ಯಮನಾಳ್ಗಳೊಳ್
ಸೇರಲ್ ದಿವ್ಯಸುವೃಷ್ಟಿ ಮಂಗಳಮಯಂ ಭೋರೆಂದುದಾಕಾಶದಿ |
ಸೌರಮ್ಯಾಂಗದಿನಾ ಸುರಾಂಗನೆಯರುಂ ಸಂಗೀತಮಂ ಪಾಡಲು
ಧೀರೋದಾರರನಾ ಕುಮಾರರುಗಳಂ ಮುನಿಕರೆದು ಮಾತಾಡಿದಂ ||೧೫೪||