ಮಾಲಿನೀ ವೃತ್ತ

ಮದಗಜವದನಂ ತಂ ವಿಘ್ನವಿಚ್ಛೇದದಕ್ಷಂ
ಸರಸಿಜಭವಜಾಯಾಂ ಭಾರತೀಂ ಸೋಮಮಿಶಂ |
ನಿಶಿಚರಕುಲಕಾಲಂ ರಾಘವಂ (ಜಾನಕೀಂ ಚ) ಜಾನಕೀಶಂ
ಪ್ರತಿದಿನಮತಿಭಕ್ತ್ಯಾ ನೌಮಿ ವಾಲ್ಮೀಕಿಮಾರ್ಯಂ || ||೧||

ಶಾರ್ದೂಲವಿಕ್ರೀಡಿತ

ಪ್ರಾಪ್ತಾನಂತಘನಶ್ರಿಯಃ ಪ್ರಿಯತಮಶ್ರೀರೋಹಿಣೀಜನ್ಮನೋ
ವಂಚಿಕ್ಷ್ಮಾವರ ವೀರಕೇರಳವಿಭೋ ರಾಜ್ಞಃ ಸ್ವಸೋಃ ಸೂನುನಾ |
ಶಿಷ್ಯೇಣ ಪ್ರವರೇಣ ಶಂಕರಕವೇಃ ರಾಮಾಯಣಂ ವರ್ಣ್ಯತೇ
ಕಾರುಣ್ಯೇನ ಕಥಾಗುಣೇನ ಕವಯಃ ಕುರ್ವಂತು ತಾಂ ಕರ್ಣಯೋಃ || ||೨||

ರಾಗ ನಾಟಿ ಝಂಪೆತಾಳ

ಜಯತು ಗೌರಿಯ ಕುವರ | ಜಯ ಸಕಲ ವಿಘ್ನಹರ |
ಜಯ ಸುಜನ ಮಂದಾರ | ಜಯ ಸುರೋದ್ಧಾರ || || ಪ ||

ಕಮನೀಯ ಗುಣರಾಜ | ಕಂಜಬಾಂಧವತೇಜ |
ಕುಮುದಕುಟ್ಮಲದಂತ | ಕುಂದಛವಿಯಂಥ |
ರಮಣೀಯಕರರೂಪ | ರಕ್ಷಿಸೆನ್ನನು ಗಣಪ |
ನಮಿಪೆನಾ ಬಲಬಂದು | ಹೇ ದಯಾಸಿಂಧು || ||೩||

ಬಾಲೇಂದುಶೇಖರಾ | ಬಲುದುರಿತಸಂಹಾರ |
ಮೂಲೋಕಸಂಚಾರ | ಮುನಿಜನೋದ್ಧಾರ |
ನೀಲಾಚಲೋತ್ತುಂಗ | ನಿಖಿಲದೇವಾಸಂಗ |
ಪಾಲಿಸೋ ಮಂಗಲವ | ಪರಮಗುರುಜನವ || ||೪||

ವರವೀವ ಧಾತಾರ | ವಾರ್ಧಿಸಮಗಂಭೀರ |
ಮೆರೆವ ಮೋಹನಕಾಯ | ಮೋದಕಪ್ರೀಯ |
ಸುರಪಾಲಕನ ರಕ್ಷ | ಸಕಲದೇವಾಧ್ಯಕ್ಷ |
ವರದ ಮಧುಪುರವಾಸ | ಶರಣು ವಿಘ್ನೇಶ || ||೫||

ಕಂದ

ಗಜವದನ ಗೌರಿ ಶಾರದೆ
ಅಜಹರಿ ಶಿವರಂಘ್ರಿಯುಗಳಕಭಿವಂದಿಸುತ |
ಸುಜನಂ ವಾಲ್ಮಿಕ ಮುನಿಪನ
ಭಜಿಸುತ ರಾಮಾಯಣವನು ಪೇಳುವೆ ಮುದದಿ || ||೬||

ದ್ವಿಪದಿ

ಪರಶಿವನ ಪಾದಕ್ಕೆ ಪೊಡಮಟ್ಟು ನಿಂದು |
ಗಿರಿಜೆ ಹರಿಕಥೆಗಧಿಕವಾವುದೆನಲಂದು || ||೭||

ರಾಮಾಯಣಾಮೃತವು ರಮಣೀಯಕರವು |
ಭಾಮಿನೀಮಣಿ ಕೇಳು ಬಹುಸೌಖ್ಯಕರವು || ||೮||

ಎನಲಾಗಿ ಈ ಕಥೆಯ ಎನಗೆ ಪೇಳೆನಲು |
ಘನಮಹಿಮ ರಾಮಾಯಣವನೊರೆಯುತಿರಲು || ||೯||

ಇತ್ತ ಬದರಿಯೊಳೋರ್ವ ಚೋರ ವ್ಯಾಧಂಗೆ |
ಉತ್ತಮಶ್ಲೋಕ ಮುನಿವರರ ದಯವಾಗೆ || ||೧೦||

ಪರಮತಪಸಿಗೆ ಮೆಚ್ಚಿ ಪರಮೇಷ್ಠಿ ಬಂದು |
ಕರುಣಿಸಲು ವಾಲ್ಮೀಕಿ ಋಷಿಯಾದನೆಂದು || ||೧೧||

ವರಕ್ರೌಂಚಪಕ್ಷಿಯನು ಕಂಡು ಚಿಂತಿಸುತ |
ಇರುತಿರಲು ಸುರಮುನಿಪ ನಾರದನು ಬರುತ || ||೧೨||

ನಾರದನ ಚರಣಕ್ಕೆ ನಮಿಸಿ ನಿಂದಿರುವ |
ನೀರೇರುವಾಲಿಗಳ ವಾಲ್ಮಿಕನ ಕರವ || ||೧೩||

ಪಿಡಿದು ರಜತಾದ್ರಿಯೊಳು ಪಾರ್ವತಿಗೆ ಪ್ರಿಯದಿ |
ಮೃಡನುಸುರ್ದ ರಾಮಾಯಣವ ಪೇಳ್ದ ಮುದದಿ || ||೧೪||

ಕೇಳಿ ವಾಲ್ಮೀಕಿ ಮುನಿ ಕುಶಲವರಿಗಂದು |
ಪೇಳ್ವ ಮನವಾಗಿರಲು ಬಾಲಕರು ಬಂದು || ||೧೫||

ನಮ್ಮ ಪೂರ್ವಜರೆಂತು ಜನಿಸಿದರು ಜೀಯ |
ಎಮ್ಮನರುಹೆನೆ ಪೇಳ್ದನಾಗ ಮುನಿರಾಯ || ||೧೬||

ರಾಗ ಮಧ್ಯಮಾವತಿ ತ್ರಿವುಡೆತಾಳ

ಬ್ರಹ್ಮನಿಂದ ಮರೀಚಿ ಕಶ್ಯಪ |
ಸೂರ್ಯ ಮನುವಾ ಕುಕ್ಷಿಯು |
ಧರ್ಮಯುತನು ವಿಕುಕ್ಷಿ ಇಕ್ಷ್ವಾಕು |
ಕುಲದಿ ರಾಯರಘೂತ್ತಮ | ರಾಮಕೇಳು || ||೧೭||

ಅಜಕುಮಾರ ಸುಧೀರಮಂಗಲ |
ತ್ರಿಜಗರಕ್ಷಕನೆನಿಸುತ |
ಸುಜನವಂದಿತನಾದ ದಶರಥ |
ನೃಪತಿಲಕನೆಸೆದಿರ್ದನು | ಸುಂದರಾಂಗ || ||೧೮||

ಭಾಸುರಾಂಗದ ದಶರಥೇಂದ್ರಗೆ |
ಕೌಸಲ್ಯಾ ಸ್ತ್ರೀರತ್ನವ |
ಆ ಸುಮಿತ್ರೆಯ ಕೈಕಾದೇವಿಯ |
ನೀಶ ಮದುವೆಯ ರಚಿಸಿದ | ಚಂದದಿಂದ || ||೧೯||

ಒಂದು ದಿನದಿ ಸುಮಂತ್ರ ಕೌಸಲೇ |
ಇಂದೀವರಾಕ್ಷಿ ಸುಮಿತ್ರೆಯೂ |
ಮಂದಗಮನದ ಕೈಕೆ ಸಹಿತಾ |
ನಂದದಿಂದಲಿ ಬಂದನು | ದಶರಥೇಂದ್ರ || ||೨೦||

ಮತ್ತೇಭವಿಕ್ರೀಡಿತ

ಇನವಂಶಾಬ್ಧಿ ಅಯೋಧ್ಯೆಯೊಳ್ ದಶರಥಂ ಒಡ್ಡೋಲಗಂಗೊಟ್ಟು ತಾ
ಮನಕಂದುತ್ತ ಸುಮಂತ್ರ ಮಂತ್ರಿಮುಖಮಂ ನೋಡುತ್ತಲಿರ್ಪಾಗಳಾ |
ಅನುವಿಂ ಬಂದ ವಸಿಷ್ಠರಿಂಗೆರಗುತಾ ಮಾತಾಡುವಾ ಭಕ್ತಿಯಿಂ
ಜನಪಾಲಾಗ್ರಣಿ ತನ್ನ ಕಾರ್ಯದಿರವಂ ಪೇಳುತ್ತಲಿಂತೆಂದನು || ||೨೧||

ರಾಗ ಘಂಟಾವರ ಝಂಪೆತಾಳ

ವರಮುನೀಶ್ವರದೇವ | ಪರಮಗುರುವೆ | || ಪ ||

ಪರಮೇಷ್ಠಿಯ ಕುವರ | ಎನ್ನ ರಕ್ಷಿಸು ತಂದೆ |
ಕರವ ಮುಗಿಯುವೆನೊಂದು | ಮಾತನೀ ಕೇಳು || ||೨೨||

ಸಕಲನೃಪಶೇಖರ | ಕೋಸಲಪತೇ | || ಪ ||

ಹೇಳೆನ್ನ ಭೂಪಾಲ | ನಿನ್ನಮನದಿರವ ಸುರ |
ಪಾಲನಿಗೆ ಸಮಧೀರ | ಭೂಲೋಕತಿಲಕ || ||೨೩||

ಮಕ್ಕಳಿಲ್ಲದರಿಂದ | ಮಾನಸದೊಳಿಂದು ನಾ |
ಕಕ್ಕುಲಿತೆಗೊಳುತ ಬಲು | ದುಃಖಿಸುವೆನಯ್ಯ || ||೨೪||

ಅಶ್ವಮೇಧವ ರಚಿಸಿ | ಅಮರಕುಲಗಳಿಗೆಲ್ಲ |
ಐಶ್ವರ್ಯ ಮಾಡಿದರೆ | ಆಗದೇನಯ್ಯ || ||೨೫||

ಅರಿತೆ ನಿನ್ನಯ ಮನವ | ಧರಣಿಪಾಲಾಗ್ರಣಿಯೆ |
ತರಿಸು ಬೇಕಾದುದನು | ತಡವಮಾಡದಿರು || ||೨೬||

ತುರಗಮಂ ಬಿಡುನೃಪತಿ | ದೀಕ್ಷೆಯಂ ಆಚರಿಸು |
ಹರಿಣಾಕ್ಷಿಯರ ಸಹಿತ | ನಾಗಿ ತೊಡಗಯ್ಯ || ||೨೭||

ಕಂದ

ಇಂತೆಂದಾ ಮುನಿ ಪೇಳಲ್
ಸಂತೋಷದಿ ಮುನಿಗಳೊಡನೆ ಕರಕೊಳುತಾಗ |
ಮಂತ್ರಿ ಸುಮಂತ್ರನ ಕರಪಿಡಿ
ದಂತಸ್ಥದ ಭವನದೆಡೆಗೆ ನರಪತಿ ಬಂದಂ || ||೨೮||

ರಾಗ ತೋಡಿ ಏಕತಾಳ

ವಾರಿಜಗಂಧಿ ವಯ್ಯಾರೆ | ನೀರೆ ಮೊಗವ ತೋರೆ |
ಮಾರನ ಮದ್ದಾನೆ ಎನ್ನ | ಮಾನಿನಿ ಕೌಸಲ್ಯೆ || ||೨೯||

ಪುತ್ರರಿಲ್ಲವೆಂದು ಬಲು | ಚಿಂತೆಯಿಂದ ಕಮಲ |
ಪುತ್ರಜಾತಂಗೆ ನಾಪೇಳೆ | ಮಖವ ನೀ ಮಾಡೆಂದ || ||೩೦||

ಒಳ್ಳಿತಾಯಿತು ಭೂಪಾಲ | ಫುಲ್ಲಶರಣ ರೂಪ |
ನಲ್ಲ ನಮಗೆ ಪೇಳಿದ್ದೀಗ | ಕಲ್ಯಾಣದ ಕಾರ್ಯ || ||೩೧||

ನೀ ಕೇಳಿದೆ ಏನೆ ಕೈಕೆ | ನಿನ್ನ ಮನವದೇನೆ |
ಏಕಾಂತವೇತಕೆ ಇನ್ನು | ಯಜ್ಞ ವಿರಚಿಸುವೆನು || ||೩೨||

ಭೂಕಾಂತರೊಳಗೆಲ್ಲ ಗು | ಣಾಢ್ಯ ಎನ್ನ ಕಾಂತ |
ಶ್ರೀಕಾಂತ ದಯ ಮಾಡುವನು | ಮಾಡು ಯಜ್ಞ ವನ್ನು || ||೩೩||

ಚಂದವಾಯ್ತು ರಮಣ ರಚಿಸು | ಇಂದೇ ಕ್ರತುವ ಜವದಿ |
ಕಂದನನ್ನು ಪಡೆದು ನಿತ್ಯಾ | ನಂದಗೊಳುವೆ ಮನದಿ || ||೩೪||

ನಿನ್ನ ಮನವದೇನೆ ಕನ್ಯಾ | ರನ್ನಳೆ ಸುಮಿತ್ರೆ |
ಎನ್ನೊಡನೆ ದೀಕ್ಷೆಯಿಂದ | ಇರಬೇಕಾಯಿತಲ್ಲೆ || ||೩೫||

ಎಲ್ಲ ಕಾಮ ಕಲೆಯಬಲ್ಲ | ಮುದ್ದು ಪ್ರೌಢ ನಲ್ಲ |
ಇನ್ನು ತಡವದೇಕೆ ಕ್ರತುವ | ನಾಚರಿಸುವ ಬೇಗ || ||೩೬||

ವಚನ || ಇಂತು ಸತಿಯರು ಪೇಳುತ್ತಿರಲಾಗಿ ಸುಮಂತ್ರನು ಏನೆಂದನು ಎಂದರೆ –

ರಾಗ ಪಂತುವರಾಳಿ ಏಕತಾಳ

ಭೂಪಾಲಮಣೀ | ಕೇಳಿದೆ ಏನೈ |
ದೇವಮುನಿಯು ಪೇ | ಳಿದುದಂ ಪೇಳುವೆ || ಪ ||

ಸೂರ್ಯಾನ್ವಯದೊಳ | ಗುದಿಸಿದ ದಶರಥ |
ಧಾರಿಣಿಯಂ ಪಾ | ಲಿಸುವಾ ಸಮಯದಿ  || ಅ.ಪ. ||

ಸುತರಿಲ್ಲದೆ ವೈ | ಭಾಂಡುಕ ವರಮುನಿ
ಸುತಕಾಮೇಷ್ಟಿಯ | ಮಾಡಿದಡಂದು |
ಸುತರಾಗುವರೆಂ | ದಾ ಮುನಿ ಪೇಳಿದ |
ನದರಿಂದಾತನ | ಕರೆಸಲು ಬೇಕು || ||೩೭||

ರಾಗ ಭೈರವಿ ಝಂಪೆತಾಳ

ಚಿಂತೆಯನು ಪರಿಹರಿಸು | ಮಂತ್ರಿಕುಲತಿಲಕನೆ ಸು |
ಮಂತ್ರ ಮುಂದೇನೆಂದ | ಡಿಂತೆಂದನಾಗ || ||೩೮||

ಪುತ್ರಕಾಮೇಷ್ಟಿಯನು | ಋತ್ವಿಜರ ಕರೆಸೀ ಧ |
ರಿತ್ರಿಯಲಿ ಮಾಡಿಸೈ | ಶಾಸ್ತ್ರವಿಧಿಯಿಂದ || ||೩೯||

ಆಗಲಾಗಲಿ ಮಂತ್ರಿ | ಏ ಗುಣಾಢ್ಯನೆ ಯಜ್ಞ |
ಸಾಗಬೇಕಾದಡದ | ಕೇನು ಸನ್ನಾಹ || ||೪೦||

ಜನಪಾಲನಲ್ಲಿಗಾ | ಮುನಿಬಂದಿರುವನೇಕೆ |
ವನದಿಂದ ನಡೆತಂದ | ಅನುವ ಪೇಳ್ ಮುಂದೆ || ||೪೨||

ದ್ವಿಪದಿ

ರೋಮಪಾದನು ಪೂರ್ವದೊಳಗೆ ಯಜ್ಞವನು |
ತಾ ಮಾಡಲಾ ಸುರಪ ಮಳೆಯ ತಡಸಿದನು || ||೪೩||

ಚಿಂತಿಸಲು ನಾರದನು ಚಿತ್ತೈಸಿ ಬಂದು |
ನಿಂತಾಕ್ಷಣದಿ ಭೂಪ ಪೊಡಮಟ್ಟನಂದು || ||೪೪||

ವರ ವಿಭಾಂಡುಕಪುತ್ರ ಋಷ್ಯಶೃಂಗಾಖ್ಯ |
ತೆರಳಿ ಬಂದರೆ ನಮ್ಮ ರಾಷ್ಟ್ರದಲಿ ಸೌಖ್ಯ || ||೪೫||

ಎಂದೆನಲು ಹೇಗವನ ಬರುವ ಹೇಳಯ್ಯ |
ಇಂದುಮುಖಿಯರ ಕಳುಹಿ ಕರೆಸೆನಲು ರಾಯ || ||೪೬||

ವಾರಾಂಗನೆಯರನೆಲ್ಲ ವನಕೆ ಕಳುಹಿದನು |
ನೀರೆಯರ ಋಷ್ಯಶೃಂಗಾಖ್ಯ ನೋಡಿದನು || ||೪೭||

ವಚನ || ಆಗಳಾ ಅಗಣಿತದ ನಾರಿಯರೈದಿದರದೆಂತೆನೆ –

ರಾಗ ಪಂತುವರಾಳಿ ಏಕತಾಳ

ತರುಣಿಯರೈದಿದರಾ ವನಕೆ | ಮುನಿ |
ವರನ ಮರುಳುಮಾಡಿ ಕರೆವುದಕೆ ||  || ಪ ||

ಮುನಿಯ ವೇಷವನಾಂತು | ವನದೊಳಗೆಲ್ಲರು |
ಘನಕುಚ ದ್ವಯಗಳ | ತೋರಿಸುತ |
ಕುಣಿಯುತಲಿರಲಾಗ | ಘನತಪವನು ಬಿಟ್ಟು |
ಮುನಿಪ ವನಿತೆಯರ | ನೀಕ್ಷಿಸುತ || ||೪೮||

ನಮಗೆ ಒಂದೇ ಕೋಡು | ನಿಮಗೆ ದ್ವಯಗಳುಂಟು |
ಅಮಮ ಮಹಾಮುನಿ | ವರರೆನಲು |
ಕಮಲ ವದನೆಯರು | ಭ್ರಮರಕುಂತಳೆಯರು |
ಚಮರದವೊಲು ಬೀ | ಸುತ ಹೊದ್ದುತಾ || ||೪೯||

ಕರದಲಿ ಕಜ್ಜಾಯ | ಗಳ ನೀಡಲಾ ಮುನಿ |
ವರನದ ಭಕ್ಷಿಸಿ | ತಕ್ಕೈಸಿದ |
ಗುರುಕುಚಗಳಮುಟ್ಟಿ | ತಪವನೆಲ್ಲವ ಬಿಟ್ಟು |
ಬರುತಿರ್ದ ಭೂಪ ದೀ | ಕ್ಷೆಯಕೊಂಡ ಬಳಿಗೆ || ||೫೦||

ಕಂದ

ಫುಲ್ಲಾಸ್ತ್ರನ ಬಾಧೆಯೊಳಾ
ಬಲ್ಲಿದ ಮುನಿ ರೋಮಪಾದ ಭೂಮಿಪನೆಡೆಗಂ |
ನಿಲ್ಲದೆ ಬರಲಾ ಮಗಳಂ
ಕಲ್ಯಾಣವ ರಚಿಸಿ ಯಜ್ಞಕಾರಂಭಿಸಿದಂ || ||೫೧||

ವಚನ || ಈ ಪ್ರಕಾರ ಆ ರೋಮಪಾದ ನರೇಶ್ವರನಲ್ಲಿ ಋಷ್ಯಶೃಂಗ ಮುನೀಶ್ವರಂ ಬಂದಿಹನವನ ನೀನೀಕ್ಷಣದಿಂ ಕರೆಸೆಂದನು –

ಮತ್ತೇಭವಿಕ್ರೀಡಿತ

ವರಮಂತ್ರೀಶ್ವರನೆಂದಡಾ ದಶರಥಂ ಆನಂದದಿಂ ಮಿಂದು ಭೂ
ಸುರಶ್ರೇಷ್ಠಾದ್ಯರ ವಂದಿಸುತ್ತ ಮುನಿಯಂ ಕರೆತಂದು ಸುಮುಹೂರ್ತದಿ |
ಸುರನಾಥಾದ್ಯರು ಮೆಚ್ಚುವಂತೆ ಮಖವಂ ತಾ ಮಾಳ್ಪೆನೆಂದಾಗಳಾ
ನರನಾಥಾಗ್ರಣಿ ಕೀರ್ತಿಯಾಹ ಪರಿಯಂ ವೃಂದಾರಕರ್ಕೇಳಲು || ||೫೨||

ಕಂದ

ಚತುರಂಬುಧಿಯೊಳಗುಳ್ಳಾ
ಪೃಥಿವಿಪರಂ ಗೆಲ್ದು ತುರಗ ಬಂದಾಕ್ಷಣದೊಳ್ |
ಯತಿತಿಲಕ ಬ್ರಹ್ಮಸುತನನು
ಮತದಿಂದಲೆ ತಾನು ಯಜ್ಞಕಾರಂಭಿಸಿದಂ || ||೫೩||

ಹಿಂದೆ ದಶಶಿರನ ಬಾಧೆಗೆ
ವೃಂದಾರಕರೆಲ್ಲ ನೊಂದು ಬ್ರಹ್ಮನ ಬಳಿಗೈ |
ತಂದುಂ ಜಯ ಜಯವೆನ್ನುತ
ವಂದಿಸುತವರವರು ತಮ್ಮ ಗತಿಯಂ ಪೇಳ್ದರ್ || ||೫೪||

ರಾಗ ಮಧುಮಾಧವಿ ಅಷ್ಟತಾಳ

ಪಾಹಿ ಸಾರಸಸಂ | ಭವ ದೇವ ದೇವ || ಪಲ್ಲವಿ ||

ರಾವಣನಾದ ನಿ | ಶಾಚರ ನೀಚನು |
ತಾ ವರದಿಂದ ಸ | ಮರ್ಥನಾಗಿ |
ದೇವರ್ಕಳೆಲ್ಲರ | ಪೀಡಿಸುತೈದಾನೆ |
ಕೇವಲ ದುಷ್ಟನಾ | ಗಿರುವ ದಾರಿಯ ಕಾಣೆ || ||೫೫||

ತರಣಿಚಂದ್ರಮರ ಸು | ಖದಿ ಸಂಚರಿಸ ಗೊಡ |
ತಿರುಗಾಡಬಿಡನು ಮಾ | ರುತನನೀಗ |
ಧರಣಿದೇವಿಯು ತಾನು | ಬಲು ಚಿಂತಿಸುವಳಯ್ಯ |
ಉರಗೇಂದ್ರ ಭಾರವ | ಧರಿಸಲೊಲ್ಲನು ಸ್ವಾಮಿ || ||೫೬||

ಚಿಂತೆಯಾತಕೆ ಕೇ | ಳಿಂದ್ರ ರಾವಣನಿಗೆ |
ಸಂತೋಷದಿಂ ಘೋರ | ವರವಿತ್ತೆನು |
ಸಂತತವವನಕೊ | ಲ್ಲುವ ಯತ್ನಗಳಿಗೆ ಅ |
ನಂತಶಯನನಿದ | ಕನುವ ಬಲ್ಲನು ಎಲ್ಲ || ||೫೭||

ಪೋಗುವ ನಾವೆಲ್ಲ | ಕ್ಷೀರಾಬ್ಧಿ ತಡಿಗೆ || ಪ ||

ಕಂದ

ಪರಮೇಷ್ಠಿಯು ನಗುತಾಕ್ಷಣ
ಸುರರಂ ಕರಕೊಂಡು ಕ್ಷೀರಸಾಗರ ತಡಿಯೊಳ್ |
ಹರಿಯಂಘ್ರಿಗೆರಗಿ ಕಾರ್ಯದ
ಪರಿ ಎಲ್ಲವನರುಹುತಿರ್ದನತಿ ಮುದದಿಂದ || ||೫೮||

ರಾಗ ನವರೋಜು ಚೌತಾಳ ಮತ್ತು ತಿತ್ತಿತ್ತೈತಾಳ

ಮಾಧವಸ್ವಾಮಿ ಮಾತ | ಲಾಲಿಸು ಪ್ರೇಮಿ |
ನೀ ದಯಾನಿಧಿ ಎಂದು | ನಿನ್ನಸೇರಿದೆ ಬಂದು || ಪಲ್ಲವಿ ||

ರಾವಣನೆಂಬ ನಿ | ಶಾಚರ ವೀರನು |
ದೇವತೆಗಳನೆಲ್ಲ | ಬಾಧಿಸುತ್ತಿಹನು |
ಗೋವಿಂದ ನೀ ಬಂದು | ಅಸುರರೆಲ್ಲರ ಕೊಂದು |
ಶ್ರೀವರ ಸುಜನರ | ಪೊರೆಯೋ ಭಕುತಬಂಧು || ||೫೯||

ಎನ್ನಭಜಿಸಲಂದು | ನಾನೇ ವರವಿತ್ತೆನು |
ಇನ್ನು ತಪ್ಪಿಸಲೆನ | ಗಳವಲ್ಲವಯ್ಯಾ |
ಪನ್ನಗಶಯನ ಕೇಳ್ | ನಿನ್ನ ಸುತನ ತಪ್ಪ |
ಮನ್ನಿಸಿ ದೇವರ್ಕಳ | ನಿನ್ನು ಪೊರೆಯೋ ದೇವ || ||೬೦||

ಕಂದ

ಇಂತೆನೆ ಭಜಿಸುತ ಲಕ್ಷ್ಮೀ
ಕಾಂತನಪಾದಯುಗಳಕೆರಗುತಿರಲಾಕ್ಷಣದೊಳ್ |
ನಂತನೊಳೊರಗಿದ ಹರಿ ಸುರ
ಸಂತತಿಯೊಡನಾಗಳಿಂತು ನುಡಿಯುತ್ತಿರ್ದ || ||೬೧||

ರಾಗ ಮಧ್ಯಮಾವತಿ ಏಕತಾಳ

ಏಳಿ ಕ್ಲೇಶಗಳೇನೈ ನಿಮಗಿದು ಗಾಢ |
ಖೂಳ ರಾವಣನ ಬಾ | ಧೆಗೆ ಚಿಂತೆ ಬೇಡ  || ಪ ||

ದಶರಥ ನೃಪತಿಗೆ | ಸುತನಾಗಿ ಜನಿಸುವೆ |
ದಶಶಿರನನು ಕೊಂದು | ಕೊಡುವೆನಯ್ಯ |
ವಸುಧೆಯೊಳಗೆ ಹವ್ಯ | ಕವ್ಯಗಳೆಲ್ಲವು |
ಹಸನಾಗಿ ನಡೆವಂತೆ | ಕರುಣಿಸುವೆನು ತಾಳಿ || ||೬೨||

ಆತನ ಬಂಧು ಬಾಂ | ಧವರ ಮಕ್ಕಳ ಸಹ |
ಜಾತಿಯನೆಲ್ಲವ | ಸಂಹರಿಸುವೆನು |
ಕೋತಿಗಳಾಗಿ ನೀ | ವೆಲ್ಲರುದಿಸಿರೆಂಬ |
ಮಾತ ಕೇಳುತಸುರ | ವ್ರಾತ ಕೈಮುಗಿಯೆ || ||೬೩||

ಶಾರ್ದೂಲವಿಕ್ರೀಡಿತ

ಇಂತಿಂದ್ರಾದ್ಯರಿಗೆಂದು ಶೇಷಶಯನಂ ಪಕ್ಷೀಂದ್ರನನ್ನೇರುತ
ಸಂತೋಷಾಧಿಕನಾಗಿ ಬಂದು ನಿಲಲುಂ ತದ್ಯಾಗ ಸಾಮಿಪ್ಯದಿ |
ಕಾಂತಾವರ್ಗವ ಕೂಡಿಕೊಂಡು ಮಖವಂ ಮಾಡುತ್ತ ಭೂಪಾಲಕಂ
ನಿಂತಾ ಮಾತ್ರದಿ ಋಷ್ಯಶೃಂಗಮುನಿಪಂ ಪೇಳ್ದಂ ಸುಮಾಂಗಲ್ಯದಿ || ||೬೪||

ರಾಗ ಕಲ್ಯಾಣಿ ಏಕತಾಳ

ನೃಪತೇ ಮಹಾರಾಜ | ದಶರಥ ಸುಮತೇ || ಪ ||

ಪುತ್ರಕಾಮೇಷ್ಟಿಯ | ಮಾಡಿದ್ದರಿಂದಲೆ |
ಅತ್ತ ನಿನ್ನ ಮನೋ | ರಥ ಸಿದ್ಧಿಯಾಯ್ತು |
ಪುತ್ರರು ನಾಲ್ವರು | ದಿಪರೀಗ ನೀ ಕೇಳು |
ಚಿತ್ತಚಂಚಲ ಬಿಟ್ಟು | ಸ್ಥಿರವಾಗಿ ಬಾಳಯ್ಯ || ||೬೫||

ಲಕ್ಷಣ ಶುಭವಾಗಿ | ಕಾಣ ಬಂದಿದೆ ಮತ್ತೆ |
ದಕ್ಷಿಣಾವರ್ತದಿ | ಜ್ವಲಿಪನು ಹವನ |
ಪಕ್ಷೀಂದ್ರ ವಾಹನ | ಪರಮ ಮಂಗಲದಿಂದ |
ಈಕ್ಷಣ ದಯವಹ | ಈಗ ನಿನ್ನೊಳು ಮೋಹ || ||೬೬||

ಹವ್ಯ ವಾಹನನ ಮ | ಧ್ಯದೊಳು ತೋರುತಲಿದೆ |
ದಿವ್ಯ ಸ್ವರೂಪವು | ಪಾತ್ರವ ಪಿಡಿದು |
ಅವ್ಯಕ್ತಾದ್ವಯನಾದ | ಶ್ರೀಹರಿಯವಗೆ ನೀ
ಸೇವ್ಯ ತಾನಾದೆಯೈ | ದಶರಥ ನೀ ಕೇಳು || ||೬೭||

ಕಂದ

ಇಂತೇಳು ದಿವಸ ಮುನಿಗಳ
ತಿಂಥಿಣಿಯಿಂ ಮಖವ ರಚಿಪೆ ಪೂರ್ಣಾಹುತಿಯೊಳ್ |
ಮುಂತೆಸೆದಿರೆ ವರಲಕ್ಷ್ಮೀ
ಕಾಂತನೆ ಗೋಚರಿಸಿದಂತೆ ಯಜ್ಞೇಶ್ವರನು || ||೬೮||

(ಯಜ್ಞೇಶ್ವರನ ಪ್ರವೇಶ)
ರಾಗ ವರಾಳಿ ಅಷ್ಟತಾಳ

ರಾಜಶೇಖರ ರಾಜ | ರಾಜಮಾನವದನ |
ರಾಜೀವಾಕ್ಷನ ಭಜಕ |
ರಾಜಿಪಗ್ನಿಯೊಳಿಂದು | ನರವೇಷವನು ತಾಳಿ |
ಆ ಜಗತ್ಪತಿಯನು | ಜ್ಞೆಯೊಳೀಗ ಬಂದೆನು || ||೬೯||

ಭಗವನ್ ವೀತಿಹೋತ್ರನೆ | ನಮಿಪೆ ನಿನ್ನಯ ಪಾದ |
ಯುಗಳಕೆ ಶುಭದಾಯಕ |
ಧಗಧಗಿಸುವ ತೇಜ | ಸ್ಸುಗಳ ಶರೀರದ |
ನಗೆಮೊಗ ದರುಶನ | ದಿಂದ ಸಫಲವಾಯ್ತು || ||೭೦||

ನರವರ ಸುರರೆಲ್ಲ | ಕೊಟ್ಟಪಾಯಸವಿದು |
ಧರಣೀಶ ನಿನಗೀವೆನು |
ತರುಣಿಯರಿಗೆ ನಾಲ್ಕು | ಪಾಲಾಗಿ ನೀ ನೀಡು |
ತರುಣರ್ನಾಲ್ವರುದಿಪ | ರ್ತರಣಿವಂಶಕೆ ದೀಪ || ||೭೧||

ಕಂದ

ತಂದಾಪಾಯಸ ಪಾತ್ರೆಯ
ನಂದಾ ಭೂಪತಿಗೆ ಕೊಟ್ಟು ತೆರಳಲ್ ದಿವಿಜಂ |
ಮಂದಿರಕೆ ಬಂದು ದಶರಥ
ಚಂದದಿ ತನ್ನರಸಿಯರ್ಗೆ ನುಡಿಯುತ್ತಿರ್ದಂ || ||೭೨||

ರಾಗ ತೋಡಿ ಏಕತಾಳ (ತಿತ್ತಿತ್ತೈ)

ಫುಲ್ಲಲೋಚನೇ ಸುಶೀಲೆ | ವಲ್ಲಭೆ ಕೌಸಲ್ಯೆ |
ಕಲ್ಯಾಣದ ಪಾಯಸವಿದು | ಪುತ್ರಾರ್ಥಿ ನೀ ಗ್ರಹಿಸೆ ||
ಎಲ್ಲ ಕಾಮ ಕಲೆಯ ಬಲ್ಲ | ಮದ್ದು ಪ್ರೌಢ ಬೇಗ |
ನಲ್ಲ ಕೊಡಿಸೆನ್ನ ಭಾಗ | ವೆನಲು ಕೊಟ್ಟನಾಗ || ||೭೩||

ಸರಸಿರುಹದಳನೇತ್ರೆ | ಸುರುಚಿರ ಸುಗಾತ್ರೆ |
ತರುಣಿ ನಿನ್ನ ಅಂಶ ಇಕ್ಕೊ | ಬೇಡಿಕೊಳ್ಳೆ ಕೈಕೆ ||
ವೈರಿ ನೃಪರೆದೆಗೆ ಕುಂತ | ಮಾರ ರೂಪವಂತ |
ಧೀರ ಎನ್ನ ಕಾಂತ ಬೇಗ | ತಾರೊ ಪರಮಾನ್ನವನು || ||೭೪||

ಪುತ್ರರುದಿಸುವಡಿದು | ಕಾರಣ ಸುಮಿತ್ರೆ |
ಚಿತ್ರತರ ಪಾಯಸವ | ಗ್ರಹಿಸೆಲೆ ನೀ ಬಾಲೆ ||
ಪೃಥ್ವಿಪಾಲ ಶಿರೋಮಣೇ | ಚಿತ್ತಜಸ್ವರೂಪ |
ಹಸ್ತದಲ್ಲಿ ಕೊಡಿಸೊ ಎನ್ನ | ಉತ್ತಮಾಂಶವನ್ನು || ||೭೫||

ಶೇಷದ ಪಾಯಸವಿದು | ಸುದತಿ ಕೇಳ್ ಸುಮಿತ್ರೆ |
ನಾ ಸುಮಂಗಲದಿಂದೀವೆ | ಬೇಡೆ ಪ್ರೌಢ ಗಾತ್ರೆ ||
ಭೂಸುದತೀವರ ಗುಣಾಢ್ಯ | ಬಾರೊ ಎನ್ನ ಕಾಂತ |
ಏಸು ಧನ್ಯರೋ ನಾವಿಂದು | ತಾರೊ ಪರಮಾನ್ನವನು || ||೭೬||

ಕಂದ

ಧರಣಿಪ ದಶರಥ ಭೂಪಂ
ತರುಣಿಯರಿಗೆ ಪ್ರೀತಿಯಿಂದ ಪರಮಾನ್ನವನು |
ಕರೆದಿತ್ತಾ ಮಾತ್ರದೊಳಾ
ತರುಣಿಯರುಂ ಗರ್ಭಧರಿಸೆ ಮಾತಾಡಿದರು || ||೭೭||

ರಾಗ ಕಾಂಭೋಜಿ ಝಂಪೆತಾಳ

ನಾರೀ ಶಿರೋರೆನ್ನೆ ಕೌಸಲ್ಯೆ ನಿನ್ನ |
ಮೋರೆ ಬೆಳ್‌ಚಾಯಾಗಿ ತೋರುತಿದೆ ಏಕೆ || ||೭೮||

ಕೋಕಿಲಸುವಾಣಿ ಕೇಳೆಲೆ ಕೈಕೆ ನಿನ್ನ |
ಕೋಕನದಕೋರಕ ಕುಚಾಗ್ರಕಪ್ಪೇಕೆ || ||೭೯||

ಇಂದುವದನೆ ಸುಮಿತ್ರೆ ಸುಮಗಂಧಿ ನಿನ್ನ |
ಅಂದವಾದ ತ್ರಿವಳಿ ಮರೆಯಾಯಿತೇಕೆ || ||೮೦||