ಶಾರ್ದೂಲವಿಕ್ರೀಡಿತ

ಚಿಂತಾಕ್ರಾಂತನುಮಾಗಿ ತಾ ದಶಶಿರಂ ಪೋಗಲ್ಕೆ ಭೂಪಾಲಕಂ
ಸಂತೋಷಾಧಿಕದಿಂದ ಚಾಪದಿರವಂ ನೋಡುತ್ತ ಮಿಥಿಲೇಶ್ವರಂ |
ಮುಂತಾ ಚಾಪವ ಭಂಗಮಾಳ್ಪರಿದಕೋ ಮಾಂಗಲ್ಯಮಾಗಿರ್ದಲ
ಗ್ನಂ ತೋರುತ್ತಿದೆ ಎಂದಡಾ ಮುನಿವರಂ ಶ್ರೀರಾಮಗಿಂತೆಂದನು || ||೨೨೬||

ರಾಗ ಪಂತುವರಾಳಿ ಮಟ್ಟೆತಾಳ

ರಾಮ ಇನಕುಲೇಶ ಬಾಲ | ವನಜಲೋಚನ || ಪಲ್ಲವಿ ||

ರಾಯರೆಲ್ಲ ಬಂದು ಧನುವಿ | ಗೆರಗಿ ಪೋದರು |
ರಾವಣೇಶ ದಂತಭಗ್ನ | ನಾಗಿ ತೆರಳಿದ || ||೨೨೭||

ಶಿವನ ಚಾಪವನ್ನು ಮುರಿವ | ಸಮಯ ಬಾಲಕ |
ಅವನಿಜಾತೆ ಸೀತೆಯನ್ನು | ವರಿಸೊ ರಾಘವ || ||೨೨೮||

ಏತಕಿನ್ನು ತಡವ ಮಾಳ್ಪೆ | ನೀತಿಯಲ್ಲವು |
ಸೀತೆ ಭೂಮಿಜಾತೆಯನ್ನು | ವರಿಸೊ ಬಾಲಕ || ||೨೨೯||

ವಚನ || ಇಂತೆಂದು ಮುನಿ ಪೇಳಲಾವೇಳ್ಯದಲ್ಲಿ ಶ್ರೀರಾಮಂ
ಶಿವಧನುವಿನೆಡೆಗೆ ಬಹ ಬಗೆಯದಂತೆನೆ-

ರಾಗ ನಾದನಾಮಕ್ರಿಯೆ ಅಷ್ಟತಾಳ

ದಟ್ಟಿಚಲ್ಲಣ ಬಿಗಿದುಟ್ಟನು | ಕಿ | ಗ್ಗಟ್ಟು ಕಠಾರಿಯನಾಂತನು ||
ತಟ್ಟನೆ ಬಿಲ್ಲನು ಹಿಡಿದನು | ಅಘ | ರಟ್ಟ ಧನುವ ಮುರಿದಿಟ್ಟನು || ||೨೩೦||

ವಚನ || ಇತ್ತಲಾ ಸೀತಾದೇವಿ ಬರುತಿರ್ದಳದೆಂತೆನೆ

ರಾಗ ಯೆರುಕುಲಕಾಂಭೋಜಿ ಏಕತಾಳ

ಪವಳವ ಪೋಲುವ ಪದ ಮಾ | ಧವನ ಬಳಿಗೈದಲಾಗ |
ಯುವತಿಯರೆಲ್ಲಾರು ಕಂಡು | ನುಡಿಯುತಿರ್ದರು || ಪಲ್ಲವಿ ||

ಗುರುಕುಚಯುಗಳೆ ಮ | ಧುರತರ ವಚನೆ ಸಿತ |
ಕರಿಗಮನೆ ನಿನ್ನ ಭಾಗ್ಯ | ದರಸನಾದ ರಾಮ ||
ಪರಮೇಶ್ವರ ಪಿಡಿ [ಯುವಂಥ | ಪುರಹರದ] ಚಾಪವನ್ನು |
ಭರದಿಂದಲಿ ಖಂಡಿಸಿದ | ನರೆನಿಮಿಷದೊಳು || ||೨೩೧||

ಕನ್ನೆಯರ ಕುಲಕೆಲ್ಲ | ರನ್ನೆ ನೀ ಸೀತಾದೇವಿ |
ನಿನ್ನ ಭಾಗ್ಯದಿಂದಲಿ ಶ್ರೀ | ಚಿನ್ಮಯನೊಲಿದು ||
ಬಂದು ಗಂಡನಾದ ರಾಮ | ಚಂದ್ರ ತಾ ನಿನಗೆ ಈಗ |
ಸೌಂದರ್ಯದ ಮಾಲೆಯಿಕ್ಕು | ಸುಂದರಾಂಗಗೆ || ||೨೩೨||

ಇಂದೀವರಾಕ್ಷಿಯರೆಲ್ಲ | ಎಂದ ಮಾತ ಕೇಳಿ ಸೀತೆ |
ಚಂದದಿಂದ ಮಾಲೆಯ ಗೋ | ವಿಂದಗಿಕ್ಕಲು ||
ಅಂದಲ್ಲಿ ಭವನದೊಳಿದ್ದ | ಮಂದಿಯೆಲ್ಲ ಮುಂದೆ ಬಂದು |
ವಂದಿಸಿತ್ತು ಸುರರ ನರರ | ವೃಂದವೆಲ್ಲವು || ||೨೩೩||

ವಚನ || ಆಗ ತದನಂತರದೊಳು ಅತ್ಯಂತ ಸಂತೋಷಯುಕ್ತನಾಗಿ ಜನಕರಾಯಂ ಅಯೋಧ್ಯಪಟ್ಟಣದೊಳಿರ್ದ ದಶರಥರಾಯಂಗೆ ಈ ಮಂಗಳವಾರ್ತೆಯಂ ಪೇಳಿ ದಿಬ್ಬಣ ಸಹ ತೆರಳಿಸಿಕೊಂಡು ಬಾರೆಂದು ಒಬ್ಬ ಚಾರಕನಂ ಕಳುಹಲು ಅವನಯೋಧ್ಯಾಪುರಕೆ ಹೋಗಿ ಏನೆಂದನು ಎಂದರೆ-

ರಾಗ ಭೈರವಿ ಝಂಪೆತಾಳ

ವಸುಮತೀಪತಿತಿಲಕ | ದಶರಥ ಮಹಾರಾಜ |
ಕುಸುಮಶರರೂಪ ಕೇಳ್ | ಮಹಾಭಾಗ್ಯವಂತ || ಪಲ್ಲವಿ ||

ನಿನ್ನ ಸುತನಾಗಿರ್ಪ | ರಾಮಚಂದ್ರನ ವಾರ್ತೆ |
ಚೆನ್ನಾಗಿ ಕೇಳಯ್ಯ | ಸರಸಹೃದಯದಲಿ || ||೨೩೪||

ಕೌಶಿಕಮುನಿಯ ಕೂಡಿ | ಕೊಂಡು ಮಿಥಿಲಾಪುರಕೆ |
ಕುಶಲದಿಂದಲಿ ಬಂದು | ಧನುವನೆತ್ತಿರುವ || ||೨೩೫||

ಜನಕರಾಯನು ತನ್ನ | ತನುಜೆಯ ವಿವಾಹವನು |
ವಿನಯದಿಂ ರಚಿಸಲೆಂ | ದನುವ ಮಾಡಿದನು || ||೨೩೬||

ಮುನ್ನ ಈಶ್ವರನಿತ್ತ | ಚಾಪವನು ಮುರಿವರಿಗೆ |
ಕನ್ನಿಕೆಯ ಕೊಡುವೆನೆಂ | ದೆನುತ ಪೇಳಿದನು || ||೨೩೭||

ಅನುಜ ಲಕ್ಷ್ಮಣ ಸಹಿತ | ವಿನಯದಿಂದೈತಂದು |
ಧನುವ ಮುರಿಯಲು ಸೀತೆ | ರಾಮಚಂದ್ರನಿಗೆ || ||೨೩೮||

ಮಾಲೆಯಿಕ್ಕಿದ ವಾರ್ತೆ | ಯರುಹಿ ಕರೆ ಎಂದು ಭೂ |
ಪಾಲ ಕಳುಹಲು ಬಂದು | ಪೇಳಿದೆನು ನಾನು || ||೨೩೯||

ಕಂದ

ಭರತನ ಶತ್ರುಹ ಸತಿಯರ
ನರಸಂ ಮುನಿವರರ ಕೂಡಿಕೊಂಡೈತರಲುಂ |
ಪರಮಗುಣಾಢ್ಯ ಜನಕಭೂ
ವರ ಕೈಮುಗಿಯುತ್ತ ಬಂದು ಮಾತಾಡಿಸಿದಂ || ||೨೪೦||

ರಾಗ ಭೈರವಿ ಏಕತಾಳ

ಕುಶಲವೆ ದಶರಥವೀರ | ಕೇ |
ಳಸಮಗುಣಾಢ್ಯಗಭೀರ |
ಕುಸುಮಶರನ ಸಾಕಾರ | ಕರು |
ಣಿಸು ಸದ್ಧರ್ಮ ವಿಚಾರ || ||೨೪೧||

ನಿನ್ನ ಸುತನು ರಾಮ ಬಂದ | ಸಂ |
ಪನ್ನನು ಧನುವೆತ್ತಿ ನಿಂದ |
ಎನ್ನ ಮಗಳ ಮುದದಿಂದ | ಧಾರೆ |
ಯನ್ನೆರೆಯುವೆ ನೋಡೆಂದ || ||೨೪೨||

ಲಕ್ಷ್ಮಣನಿಂಗೂರ್ಮಿಳೆಯ | ಕೊಡ |
ಲೀಕ್ಷಿಸುವೆನು ಕೇಳಯ್ಯ |
ಲಕ್ಷಿಸು ದಶರಥರಾಯ | ಮಹಾ |
ಲಕ್ಷ್ಮೀ ಕಟಾಕ್ಷವಿದಯ್ಯ || ||೨೪೩||

ಜನಕಮಹೀಪತಿವೀರ | ತ |
ಮ್ಮನ ಮಗಳುಗಳಾದವರ ||
ತನಯ ಭರತ ಶತ್ರುಹರಿಗೆ | ಬಲು |
ವಿನಯದೊಳೀಯೊ ಬಾಲರಿಗೆ || ||೨೪೪||

ವರಮುನಿಪತಿಯೆ ಕೇಳೀಗ | ತನ್ನ |
ವರಕುವರಿಯರನ್ನು ಬೇಗ ||
ಕರೆದು ಧಾರೆಯ ಮಾಡುವೆನು | ಈ |
ಧರಣಿಪ ಸುತರಿಗೆ ನಾನು || ||೨೪೫||

ರಾಗ ಕಾಂಭೋಜಿ ಚೌತಾಳ

ಶ್ರೀ ರಾಮಚಂದ್ರ ಧೀರ | ಸುಂದರಾಂಗ ಬಾ ವೀರ ||
ಚಂದ್ರವದನ ಪುರು | ಷೋತ್ತಮ ಬಾರೋ || ಪಲ್ಲವಿ ||

ವರಕುವರಿ ಸೀತೆಯನ್ನು | ನಿನಗೆ ಈವೆನು ಧೀರ ||
ಹರುಷದಿ ವರಿಸೋ ನೀ | ವರಮಹಾನುಭಾವ || ||೨೪೬||

ಸೌಮಿತ್ರ ಶುಭಾಂಗ | ಅತಿಚರಿತ್ರನೆ ಕೇಳು ||
ಸೌವರ್ಣ ವರ್ಣಕಾಯ | ಇನಕುಲದ ರಾಯ || ||೨೪೭||

ನಿನಗಿನ್ನೂರ್ಮಿಳೆಯು | [ಅನುಮತದೊಳು ಪ್ರೀಯ ||
ಜನುಮ ಸಾರ್ಥಕವಾಗೆ | ಅನುನಯದಿ ಬಾಳಯ್ಯ ||] ||೨೪೮||

ಸೂರ್ಯವಂಶತಿಲಕ | ನಾದ ಭರತ ಕೇಳು |
[ಭಾರ್ಯೆ ಮಾಂಡವಿ ಯೀ | ಕೆಯ ಪತಿಕರಿಸಯ್ಯ ||] ||೨೪೯||

ಶತ್ರುಗಳ ಸಂಹರಿಪ | ಶತ್ರುಘ್ನನಿಗೆ ವಿಶ್ರುತ ||
ಕೀರ್ತಿಯ ವಿನಯದಿ ನಡೆಸಿಕೊ | ಕೀರ್ತಿ ವಿಶಾಲ || ||೨೫೦||

ವಚನ || ಈ ಪ್ರಕಾರವಾಗಿ ಆಯಾ ಬಾಲಕರಿಗೆ ಪೇಳಿದಂಥವನಾಗಿ ಪ್ರತ್ಯೇಕ ಪ್ರತ್ಯೇಕ ಧಾರೆಯಂ ಮಾಡುತಿರ್ದನದೆಂತೆನೆ –

ರಾಗ ಢವಳಾರ ಅಷ್ಟತಾಳ, ಏಕತಾಳ, ತ್ರಿವುಡೆ
(ಅಷ್ಟ) ಗಂಗಾ ಜಲವ | ನ್ನಾಗಲೆ ತಂದು |
ಅಂಗನೆಯರ ಸಹಿ | ತವೆ ತಾನಿಂದು |
(ಏಕ) ಮಂಗಳ ಮಹಿಮ ಶ್ರೀ | ರಾಮನಿಗೊಲಿದು |
ಅಂಗನೆ ಸೀತಾ | ದೇವಿಯ ಧಾರೆಯ |
(ತ್ರಿವುಡೆ) ಮಂಗಲದಿ ಜನಕ | ನೆರೆದನು |
ಸೋಬಾನೆ || ||೨೫೧||

(ಅಷ್ಟ) ಮತ್ತೆ ಲಕ್ಷ್ಮ | ಣಂಗೂರ್ಮಿಳೆಯ |
ಇತ್ತು ತಾ ಭರ | ತಂಗೆ ಮಾಂಡವಿಯ |
(ಏಕ) ಅರ್ತಿಯೊಳಗೆ ಶ | ತ್ರುಘ್ನಗೆ ವಿಶ್ರುತ |
ಕೀರ್ತಿಯನಿತ್ತಾ | ವೈಭವದಿಂದತಿ |
(ತ್ರಿವುಡೆ) ಚಿತ್ರದಿ ಧಾರೆ | ಎರೆದನು |
ಸೋಬಾನೆ || ||೨೫೨||

ನಾರಾಯಣಸೋಬಾನೆ ತ್ರಿವುಡೆ (ಧ್ರುವ) ತಾಳ

ಚಿನ್ನದ ಹಸೆಮಣೆಯಾ ಮೇಲೆ |
ಪನ್ನಗವೇಣಿಯ ಕುಳ್ಳಿರಿಸಿ |
ಚೆನ್ನಾಗಿ ಶೋಭನ ಪಾಡುತ |
ಚಿನ್ನದಾರತಿಯ | ಬೆಳಗಿರೆ ||
ಸೋಬಾನೆ || ||೨೫೩||

ಮಂಗಳ ಜಯ ರಾಮಗೆ ಸೀತೆಗೆ |
ಮಂಗಳ ಲಕ್ಷ್ಮಣನಿಗೆ ಭರತಗೆ |
ಮಂಗಳ ಶತ್ರುಘ್ನನಿಗೆನುತಲೆ |
ಮಂಗಳಾರತಿಯ || ಬೆಳಗಿರೆ ||
ಸೋಬಾನೆ || ||೨೫೪||

ವಚನ || ಇಂತು ಸಕಲ ಸಂಭ್ರಮದಿ ವಿವಾಹವಾಗಲಾ ದಶರಥಂ ಸಂತೋಷದಿ ಪುತ್ರರು ತರುಣಿಯರು ಸಹಿತಲೆ ಮುಂದೈತರಲಾ ಪಥದೊಳು ಅಂತಕಹರನಂದದಿ ಪರಶುರಾಮಂ ತಡೆದು ಗರ್ಜಿಸುತ ಏನೆಂದನು ಎಂದರೆ –

ರಾಗ ಮಾರವಿ ಮಟ್ಟೆತಾಳ

ಆರೆಲೋ ನಡೆದು ಬಹ | ರಾಮ ಕೇಳೊ ಮೂಢ |
ವೀರನಾದರೆನ್ನ ಕೂಡೆ | ಬಾಣವೆಸೆಯಯ್ಯ || ||೨೫೫||

ಎನ್ನ ಗುರುವಿನ ಚಾಪ | ವನ್ನು ಮುರಿಯುತ್ತೀಗ |
ಕನ್ನೆಯನೊಯ್ಯ ಬಿಡುವೆನೆ | ಬಿಟ್ಟು ನಡೆಯೋಗಾಢ || ||೨೫೬||

ಭಾರ್ಗವ ನಿಸ್ಸೀಮ ಕೇಳು | ಪೋಗುವರೆ ಮಾರ್ಗ |
ಈಗ ಬಿಡಲು ಬೇಕಲ್ಲಯ್ಯ | ಮಹಾಮುನಿವರ್ಯ || ||೨೫೭||

ಹೆಂಡತಿಯ ಬಿಡುವುದೆಂಬ | ಬಂಡಾಟವಿದೇನೊ |
ಪುಂಡಾಟಿಕೆ ಏತಕೆಲವೊ | ಚಂಡ ಪರಶುರಾಮ || ||೨೫೮||

ದಶರಥಸುತ ರಾಮ | ಪರಶುರಾಮನೆಂಬ |
ಪೆಸರೆರಡಿಲ್ಲದಂತೆ | ಮಾಳ್ಪೆನೀಗ ನೋಡು || ||೨೫೯||

ಇಷ್ಟೊಂದಹಂಕಾರವೇಕೊ | ಇಟ್ಟು ಮುರಿದ ಚಾಪವನ್ನು |
ದಿಟ್ಟ ಭಗ್ನ ಮಾಡಿದ್ದೆಂಬ | ಗರ್ವ ಸಲ್ಲದಯ್ಯ || ||೨೬೦||

ರಾಗ ಮಾರವಿ ಏಕತಾಳ

ವಿಪ್ರಕುಲಾಧಮ | ನಿನ್ನಯ ಶೌರ್ಯವ |
ಕ್ಷಿಪ್ರದಿ ನಿಲಿಸುವೆ | ಬೆದರದಿರೀಪರಿ |
ಕೇಳೋ ಭಾರ್ಗವರಾಮ || ||೨೬೧||

ವೃದ್ಧತನದ ರಾ | ಕ್ಷಸಿಯನು ಕಾಡೊಳು |
ಯುದ್ಧದಿ ಕೊಂದಾ | ಗರ್ವವು ಸಲ್ಲದು |
ಕೇಳೋ ದಶರಥರಾಮ || ||೨೬೨||

ಅವಳೆನ್ನಯ ತಾ | ಯಲ್ಲ ಮುನೀಂದ್ರನೆ |
ಅವನಿಯೊಳವ್ವೆಯ | ಶಿರವರಿದಿಲ್ಲವೆ |
ಪೇಳೋ ಭಾರ್ಗವರಾಮ || ||೨೬೩||

ಕ್ಷತ್ರಿಯ ವಂಶವ | ನೆಲ್ಲವ ಸವರುವ |
ಚಿತ್ರಪುರುಷ ನಾ | ರೆಂದರಿಯೆಯ ನೀ |
ಕೇಳೋ ರಾಘವರಾಮ || ||೨೬೪||

ಮುನಿಯೆಂದತಿಶಯ | ಮಾಡಿದೆನಲ್ಲದೆ |
ಧನುವಿಡಿದಾಮೇಲ್ | ಯುದ್ಧದಿ ಭಯವೇ |
ಕೇಳೋ ಭಾರ್ಗವರಾಮ || ||೨೬೫||

ಬಲ್ಲಿದನಾದರೆ | ಕಣೆಗಳ ಮೊತ್ತವ |
ಚೆಲ್ಲತಿವೇಗದಿ | ನೋಳ್ಪೆ ಪರಾಕ್ರಮ |
ಕೇಳೋ ರಾಘವರಾಮ || ||೨೬೬||

ಬಿಲ್ಲ ಸೆಳೆದು ಹೆದೆ | ಏರಿಸಿದಾ ಕ್ಷಣ |
ಎಲ್ಲಿಗೆಸೆಯಲೀ | ಶರವೆಂದೆನುತಲಿ |
ಹೇಳೋ ಭಾರ್ಗವರಾಮ || ||೨೬೭||

ವಚನ || ಈ ತೆರದಿ ಶ್ರೀರಾಮನು ಬಾಣಮಂ ತೊಡಲು ಅವತಾರಮೂರ್ತಿಯಂ ಕಂಡು ಪರಶುರಾಮನು ಏನೆಂದನು ಎಂದರೆ –

ರಾಗ ನಾದನಾಮಕ್ರಿಯೆ ರೂಪಕ ತಾಳ

ಜಯ ಜಯಾ ಜಾನಕೀಶ | ಶ್ರೀರಾಮಚಂದ್ರ ||
ಜಯ ಜಯ ಭಾನುಕುಲೇಶ | ರವಿಕೋಟಿ ಸಾಂದ್ರ || ಪಲ್ಲವಿ ||

ನಿನ್ನ ಕೂಡೆ ಸೆಣಸಿ ವ್ಯರ್ಥ | ಖಿನ್ನನಾದೆ ಗ್ರಹಿಸಲೀಗ |
ನನ್ನ ನಿನ್ನ ವಿಕ್ರಮದಲಿ | ಭಿನ್ನ ಭೇದ ಕಾಣದಯ್ಯ || ಜಯ ಜಯಾ || ||೨೬೮||

ನೋಡಲಿನ್ನು ಯುದ್ಧಮುಖದಿ | ಮಾಡಿದ ಪ್ರತಿಜ್ಞೆ ಸಾಕು |
ಬೇಡ ಹೋಗು ಶ್ರೀ ಗೋವಿಂದ | ಗಾಡಿಕಾರ್ತಿಯೊಡನೆ ಚಂದ || ಜಯ ಜಯ || ||೨೬೯||

ಸ್ಥಿರಜೀವಿಯಾಗಿರ್ಪಂತೆನ್ನ | ಕರುಣಿಸೊ ರಾಘವ ರಾಮ |
ಇರದೆ ತಪಕೆ ಪೋಪೆನಯ್ಯ | ವರವ ಕೊಡು ಮಹಾನುಭಾವ || ಜಯ ಜಯ || ||೨೭೦||

ವಾರ್ಧಕ

ಇಂತೆಂದು ಶ್ರೀರಾಮಚಂದ್ರಗಭಿವಂದಿಸುತ
ತಾಂ ತೆರಳಲಿತ್ತಲುಂ ಸತಿಸಹಿತ ರಾಘವಂ
ಸಂತಸದಿ ಪುರಕೆ ಬಂದಿರ್ದನೆಂದೆನುತ ಬಾಲರಿಗೆ ಮುನಿಪತಿ ಪೇಳ್ದನು |
ಕಂತುಜನಕನ ಚರಿತೆ ಇದನು ಕೇಳ್ದವರಿಗ
ತ್ಯಂತ ಸೌಖ್ಯವನಿತ್ತು ಧರೆಯೊಳನವರತ ನಿ
ಶ್ಚಿಂತೆಯಲಿ ಸಲಹುವನು ಕಣ್ವಪುರದೊಡೆಯ ಶ್ರೀ ಕೃಷ್ಣಂ ಕಟಾಕ್ಷದಿಂದ || ||೨೭೧||

|| ಮಂಗಲ ||

|| ಪುತ್ರಕಾಮೇಷ್ಟಿ-ಸೀತಾಕಲ್ಯಾಣ ಪ್ರಸಂಗ ಮುಗಿದುದು ||

***