ಮಾನವ ಜೀವನದಲ್ಲಿ ಪ್ರವಾಸವು ಮಹತ್ವದ ಮತ್ತು ಮನೋಹರವಾದ ಅಂಶ. ಪ್ರತಿಯೊಬ್ಬನ ಪಾಲಿಗೂ ಪ್ರವಾಸ ಮಾಡುವ ಯೋಗ ಒಂದಿಲ್ಲೊಂದು ಕಾರಣದಿಂದಾಗಿ ಬಂದೇ ಬರುವದು. ಹತ್ತಿರವೆ ಇರಲಿ ದೂರವೆ ಇರಲಿ ಹೊಸ ಸ್ಥಳಕ್ಕೆ ಹೋದಾಗ ಅಲ್ಲಿ ನೋಡತಕ್ಕ ಆಕರ್ಷಕ ಸ್ಥಳಗಳಿದ್ದಲ್ಲಿ ವಸ್ತು ವಿಶೇಷಗಳಿದ್ದಲ್ಲಿ ಅವುಗಳನ್ನು ಕಾಣುವ ಇಚ್ಛೆ ಪ್ರತಿಯೊಬ್ಬನ ಮನದಲ್ಲಿ ಮೂಡುವದು ಸಹಜ. ಹೊಸ ಹೊಸ ಸ್ಥಳಗಳ ಪ್ರಕೃತಿ ಸೌಂದರ್ಯವನ್ನು, ಪವಿತ್ರ ನೆಲೆಗಳನ್ನು, ಪ್ರಸಿದ್ಧ ಉದ್ದಿಮೆಗಳನ್ನು, ವೈಜ್ಞಾನಿಕ ವೈಚಿತ್ರ್ಯ ಗಳನ್ನು, ಕಲಾಸಾಧನೆಗಳನ್ನು ಕಾಣಬೇಕೆಂಬ ಕಾತರವು, ನಾನಾ ರೀತಿಯ ಸಂಸ್ಕೃತಿ-ಸಂಸ್ಕಾರ-ಆಚಾರ ವಿಚಾರಗಳನ್ನು ಪ್ರತ್ಯಕ್ಷವಾಗಿ ಪರಿಚಯಿಸಿಕೊಳ್ಳಬೇಕೆಂಬ ಬಯಕೆಯು, ಹೊಂದುವ ಉತ್ಸಾಹವು ಜನರಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಪ್ರೇಕ್ಷಣೀಯ ಸ್ಥಳಗಳನ್ನು ನೋಡಲೆಂದೇ ಪ್ರವಾಸ ಕೈಕೊಳ್ಳುವವರು ಅನೇಕರು. ದಿನಕಳೆದಂತೆ ಇಂಥವರ ಸಂಖ್ಯೆ ಹೆಚ್ಚಾಗುತ್ತಲಿದೆ. ಇನ್ನು ವೃತ್ತಿಯ ಕಾರ್ಯಕಲಾಪಗಳಿಗಾಗಿ, ವ್ಯಾಪಾರ-ವ್ಯವಹಾರಗಳಿಗಾಗಿ ಇನ್ನಿತರ ಕಾರಣಗಳಿಗಾಗಿ ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಸರಿಯಾದ ಅನುಕೂಲತೆಗಳಿದ್ದರೆ ಅಲ್ಲಿ ಸಾಧ್ಯವಾದಷ್ಟು ಹೆಚ್ಚು ಕಾಲ ನಿಂತು ಅಲ್ಲಿಯ ನೋಡತಕ್ಕ ನೆಲೆಗಳನ್ನು ನೋಡಿ ನಲಿಯ ಬಯಸುವದು ಜನರ ಸಹಜ ಸ್ವಭಾವವಾಗಿದೆ.

ಪ್ರೇಕ್ಷಣೀಯ ಸ್ಥಳಗಳ ದೃಷ್ಟಿಯಿಂದ ನೋಡಿದಾಗ ಉತ್ತರಕನ್ನಡ ಜಿಲ್ಲೆ ಪ್ರವಾಸಿಗಳಿಗೆ ನಂದನವನವಾಗಿದೆ. ಇಲ್ಲಿ ಎತ್ತದೃಷ್ಟಿಹಾಯಿಸಿದರೂ ಕಾಣುವ ದೃಶ್ಯ ಪ್ರೇಕ್ಷಣೀಯವೆ! ಗುಂಡಬಳೆಯ ಒಂದು ಶಿಲಾಶಾಸನವು ಈ ನೆಲವನ್ನು “ಕೊಂಕಣ ಶ್ರೀಮುಖ ದರ್ಪಣಂ” ಎಂದು ನಿರೂಪಿಸಿದೆ ಶ್ರೀ ರಂಗನಾಥ ದಿವಾಕರರು ಉತ್ತರ ಕನ್ನಡವನ್ನು “ಸಿಂಡೆರೆಲ್ಲಾ ಜಿಲ್ಲೆ” ಎಂದಿದ್ದಾರೆ. “ಕೊಂಕಣ ಧಾತ್ರಿಯ ಕಂಕಣದಂತೆಸುವ” ಸೀಮೆ ಇದೆಂದು ಇನ್ನೊಂದೆಡೆಯಲ್ಲಿ ಬಣ್ಣಸಲಾಗಿದೆ.

ಕವಿತಾಗುಣಾರ್ಣವ, ಆದಿಕವಿ ಪಂಪ ಸಾವಿರಕ್ಕೂ ಹೆಚ್ಚುವರುಷ ಪೂರ್ವದಲ್ಲಿಯೇ (ಕ್ರಿ.ಶ. ೯೫೦) ಆಗಿನ ಬನವಾಸಿ ದೇಶವನ್ನು ಅಂದರೆ ಇಂದಿನ ಉತ್ತರ ಕನ್ನಡ ಜಿಲ್ಲೆಯನ್ನು ಮೆಚ್ಚಿ ಪ್ರಶಸ್ತಿಪತ್ರವೆಂಬಂತೆ ಈ ಕೆಳಗಿನ ಕವಿತೆಗಳನ್ನು ಬರೆದದ್ದು ಇದೆ.

“ಚಾಗದ ಭೋಗದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರಮಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವದು ನಂದನವನದೊಳ್ ಬನವಾಸಿದೇಶದೊಳ್||

ತೆಂಕಣಗಾಳಿ ಸೋಂಕಿದೊಡಮೊಳ್ನುಡಿಳ್ದೊಡಮಿಂಪನಾಳ್ದಗೇ
ಯಂಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂಕೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿದೇಶಮಂ||”

ಪಂಪನಂತೆಯೇ ಉತ್ತರ ಕನ್ನಡದಲ್ಲಿಯೆ ನೆಲೆಸಿದ ಇನ್ನೊರ್ವ ಅಚ್ಚಗನ್ನಡ ಮೇರು ಕವಿ ಆಂಡಯ್ಯ

“ಪನವುಂ ನಾಲಿಗೆಯುಳ್ಳವಂ ಬಣ್ಣಿಸಲ್ಕಾರನಾ
ನೆಲಮಂ ಮತ್ತಿನ ಮಾನಿಸರ್ ಪೊಗಳೇನಂ ಬಲ್ಲರ್ ಎಂಬ
ಬಲ್ಲುಲಿಯ ನೆಟ್ಟನೆ ತಾಳ್ದು ಕನ್ನಡವೆನಿಪ್ಪಾ ನಾಡು ಚೆಲ್ವಾಯ್ತು
ಮೆಲ್ಲೆಲರಿ ಪೂತ ಕೊಳಗಳಿಂ ಕೆರೆಗಳಿಂ ಕಾಲೂರ್ರ‍ಳಿಂ ಕೆಯ್ಗಳಿಂ||”

ಆಂಡಯ್ಯನು ವರ್ಣಿಸಿದ ಕನ್ನಡನಾಡಿನ ಪರಿಯನ್ನು ಪರಿಕಿಸಿದಾಗ ಆ ಪ್ರದೇಶ ಉತ್ತರ ಕನ್ನಡವೇ ಎಂಬುದು ಅರಿವಾಗುವದು.

ಆದಿ-ಕವಿ ಪಂಪ ಈ ಮನೋಹರವಾದ ಪ್ರದೇಶದಲ್ಲಿಯೆ ಮತ್ತೊಮ್ಮೆ ಹುಟ್ಟಿಬರಬೇಕೆಂದು ಬಯಸಿದಂತೆಯೇ ೨೦ನೇ ಶತಮಾನದಲ್ಲಿಯೂ ಕವಿ ದಿನಕರ ದೇಸಾಯಿಯವರು (ಕಿ.ಶ. ೧೯೫೫)ರಲ್ಲಿ ಈ ಸಾಲುಗಳಲ್ಲಿ ಹಂಬಲಿಸಿದ್ದಾರೆ.

“ಹುಟ್ಟುವದಾದರೆ ಇನ್ನು ಇನ್ನು”
“ಉತ್ತರ ಕನ್ನಡದಲ್ಲೇ” ಅನ್ನು ||
ಒಂದು ಬದಿ ಸಹ್ಯಾದ್ರಿ ಒಂದು ಬದಿ ಕಡಲು
ನಡುಮಧ್ಯದಲಿ ಅಡಕೆ ತೆಂಗುಗಳ ಮಡಲು
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ
ಇಲ್ಲಿಯ ಇನ್ನೊಮ್ಮೆ ಹುಟ್ಟುವೆನು ನಲ್ಲೆ||

ರಾಮಾಯಣ ಮಹಾಭಾರತ ಕಾಲದಿಂದಲೂ ಈ ಜಿಲ್ಲೆಯ ಪ್ರದೇಶಗಳು ಪ್ರಸಿದ್ಧಿ ಪಡೆದು ಪೂರ್ವದ ಪುರಾಣ ಕಾವ್ಯಗಳಲ್ಲಿ ಬಣ್ಣಿಸಲ್ಪಟ್ಟಿವೆ. ಪರಶುರಾಮ ಸೃಷ್ಟಿಯ ಭಾಗ-ಕುಂತಲ ದೇಶ ಮುಂತಾದ ಹೆಸರಿನಿಂದ ಕರೆಯಲ್ಪಟ್ಟ ನೆಲವಿದು. ಗೋಕರ್ಣ, ಬನವಾಸಿ, ಯಾಣ, ಸೂಪಾ ಮುಂತಾದ ಸ್ಥಳಪುರಾಣಗಳು ಪ್ರಖ್ಯಾತವಾಗಿವೆ. ಕನ್ನಡದ ಮೊದಲ ಸಾಮ್ರಾಜ್ಯವನ್ನು ಬನವಾಸಿಯ ಕದಂಬರು ಇಲ್ಲಿ ಕಟ್ಟಿದರು. ಶಾತವಾಹನರು, ಶಿಲಾಹಾರರು, ಪಲ್ಲವರು, ಚಾಲುಕ್ಯ ರಾಷ್ಟ್ರಕೂಟರು ಈ ನೆಲವನ್ನು ಆಳಿದ್ದರು. ಗೇರಸೊಪ್ಪೆ, ನಗಿರೆ, ಕೆಳದಿ, ಬಿಳಗಿ, ಮೊದಲಾದ ರಾಜಮನೆತನಗಳು ಇಲ್ಲಿ ಆಡಳಿತ ನಡೆಸಿದ್ದರು. ಹೈದರ ಟಿಪ್ಪುಸುಲ್ತಾನರು ಈ ಜಿಲ್ಲೆಯನ್ನು ತಮ್ಮ ಸ್ವಾಧೀನದಲ್ಲಿರಿಸಿಕೊಂಡಿದ್ದರು. ಬ್ರಿಟೀಶರ ಆಡಳಿತದಲ್ಲಿ ಇಲ್ಲಿಯ ಸಂಪತ್ತು ಸೂರೆಯಾಗಿ ಬೆಂಡಾದ ಈ ಜಿಲ್ಲೆ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ಸಾಹಸಿಯೆಂಬ ಹೆಸರಿನಿಂದ ದೇಶದಾದ್ಯಂತ ಪ್ರಸಿದ್ಧಿ ಪಡೆಯಿತು. ಇಂದು ಸ್ವತಂತ್ರಭಾರತದ ಕರ್ನಾಟಕ ರಾಜ್ಯದಲ್ಲಿ ಸಮಾವೇಶಗೊಂಡು “ಕನ್ನಡನಾಡಿನ ಕಡಲಿನ ಸೀಮೆ, ಬಣ್ಣಿಸಿದಷ್ಟೂ ಇನ್ನೂ ಕಡಿಮೆ” ಎಂಬ ಹಿರಿಮೆಯಿಂದ ಮೆರೆದಿದೆ.

ಈ ಜಿಲ್ಲೆಯ ವಿಸ್ತಾರ ೧೦೩೨೭ ಚದರ ಕಿಲೋಮೀಟರ. ಅದರಲ್ಲಿ ೮೨೯೨ ಚದರ ಕಿ.ಮಿ. ಅರಣ್ಯ ಆವರಿಸಿದೆ ಆಂದರೆ ಈ ಜಿಲ್ಲೆಯ ೮೦% ರಷ್ಟು ಅರಣ್ಯವೆ ಇದೆ. ಪಡುವಣ ದಿಕ್ಕಿಗೆ ಅರಬ್ಬಿ ಸಮುದ್ರದ ಸೆರಗು ೧೪೪ ಕಿ.ಮಿ. ಉದ್ದವಾಗಿದೆ. ಉತ್ತರ ಕನ್ನಡದಲ್ಲಿ ನಿಸರ್ಗದೇವಿ ತನ್ನ ಚೆಲುವಿನ ಸಿರಿಯನ್ನೇ ಚೆಲ್ಲಿ ನಲಿದು ನರ್ತಿಸುತ್ತಿದ್ದಾಳೆ. ಕಾಡು-ಕಡಲಿನ ನಡುವೆ ಫಲವತ್ತಾದ ನೆಲ. ತೆಂಗು-ಕೌಂಗು-ಹಲಸು- ಮಾವು-ನೇರಲ ಹೀಗೆ ಹಲವು ಹಣ್ಣು ಮರಗಳ ಬನಗಳ ಪಕ್ಕದಲ್ಲಿಯೇ ಬೆಟ್ಟದಲ್ಲಿ ನಂದಿ-ಸಾಗವಾನಿ-ಶ್ರೀಗಂಧ ಮರಗಳ ಜೊತೆಗೆ ನೂರಾರು ಜಾತಿಯ ಸಸ್ಯರಾಶಿಯಿಂದ ಸಮೃದ್ಧವಾದ ಪ್ರಕೃತಿ ಸೌಂದರ್ಯ ವರ್ಣನಾತೀತ! ಕಮನೀಯ ಕರಾವಳಿ, ಮೈಸಿರಿಯಿಂದ ಮನಸೇಳೆವ ಮಲೆನಾಡು, ಬೆಡಗಿನ ಬೆಳವಲ ಈ ಮೂರು ಸ್ವಾಭಾವಿಕ ಭೌಗೋಳಿಕ ವಿಭಾಗಗಳು ಈ ಜಿಲ್ಲೆಗೆ ಮಾತ್ರ ಲಭಿಸಿವೆ. ಇದರಿಂದಾಗಿ ಈ ಜಿಲ್ಲೆ ನಿಸರ್ಗ ಸ್ವರ್ಗವೇ ಆಗಿದೆ.

ಇಲ್ಲಿಯ ಹೊಳೆ-ಹಳ್ಳ-ಝರಿ-ಅಳವೆ-ಕೂರ್ವೆ-ಗಿರಿ-ಕಂದರ-ಕಡಲ ಬಯಲುಗಳ ಸೌಂದರ್ಯ ಒಂದೊಂದು ಕಡೆ ಒಂದೊಂದು ತೆರ. ಒಂದರಂತೆ ಒಂದಿಲ್ಲ. ಒಂದು ಇನ್ನೊಂದಕ್ಕೆ ಹಿಂದಿಲ್ಲ. ಇವುಗಳ ನಡುವೆ ಸಂಚರಿಸುವ ಮತ್ಸ್ಯ-ಮೃಗ-ಖಗಗಳಿಗೆ ಎಣೆಯಿಲ್ಲ. ಇವೆಲ್ಲವನ್ನು ನೋಡುತ್ತ ವಿಹರಿಸುವ ಮನಕ್ಕೆ ದಣಿವಿಲ್ಲ “ಸ್ವರ್ಗ ನಿಸರ್ಗವು ಸೊಬಗಿನ ದಿಬ್ಬ, ಎಲ್ಲಾಕಡೆಯೂ ಕಣ್ಣಿಗೆ ಚೆಲುವಿನ ಹಬ್ಬ”. ಇಂತಿರುವ ನೆಲೆಯಲ್ಲಿ ಈ ತಾಣವೇ ಪ್ರೇಕ್ಷಣೀಯ ಎಂದು ಬೊಟ್ಟುಮಾಡಿ ತೋರುವದು ಕಷ್ಟವಾದರೂ ನೈಸರ್ಗಿಕ, ಐತಿಹಾಸಿಕ, ಧಾರ್ಮಿಕ, ಔದ್ಯಮಿಕ ಮೊದಲಾದ ದೃಷ್ಟಿಯಿಂದ ಪರಿಶೀಲಿಸಿ ಕೆಲವು ಸ್ಥಳಗಳನ್ನು ಆಯ್ದು ಈ ಹೊತ್ತಿಗೆಯಲ್ಲಿ ನಿವೇದಿಸಲಾಗಿದೆ. ಇಲ್ಲಿ ಹೇಳದೇ ಬಿಟ್ಟ ಕೆಲಸ್ಥಳಗಳಲ್ಲಿಯೂ ರಸಿಕರು ಗುಣಾಕರ್ಷಯನ್ನು ಗುರುತಿಸಬಹುದಾಗಿದೆ.

ಘಟ್ಟಗಳ ಗಾಡಿ ಮೋಡಿ!: ಪ್ರವಾಸಿಗಳು ಕರಾವಳಿ ಪ್ರದೇಶಕ್ಕೆ ಕಾಲಿಡುವಾಗ ಸಹ್ಯಾದ್ರಿ ಬೆಟ್ಟಗಳ ಸಾಲುಗಳನ್ನು ದಾಟಿ ಇಳಿದು ಬರಬೇಕಾಗುತ್ತದೆ. ಆಗ ಬಸ್ಸು ನಾಗಮುರಿಗೆ ಮಾರ್ಗದಲ್ಲಿ ಸಾಗಿ ಬರುವಾಗ ಕಾಣುವ ಪರ್ವತ ಶ್ರೇಣಿ ಮೇಘಮಾಲೆಯನ್ನು ತೊಟ್ಟು ಶೋಭಿಸಿದರೆ ಅದರ ಪಕ್ಕದಲ್ಲೆ ಕಣ್ಣು ತಿರುಗುವ ಕಡಿದಾದ ಕಂದಕ! ನಡುವೆ ಅಲ್ಲಲ್ಲಿ ತರತರವಾಗಿ ತೋರುತ್ತ ರುದ್ರರಮಣೀಯವಾಗಿ ರೋಮಾಂಚಾನುಭವ ನೀಡುವ ಈ ಘಟ್ಟದ ರಸ್ತೆಗಳ ಪ್ರಯಾಣ ಚಿರಸ್ಮರಣೀಯವಾಗಿರುವದು. ಉತ್ತರ ಕನ್ನಡದಲ್ಲಿ ಅಲ್ಲಲ್ಲಿ ಘಟ್ಟಗಳು ನೂರಾರು ಇದ್ದು ಅವುಗಳಲ್ಲಿ ದೊಡ್ಡವೂ ಪ್ರಾಮುಖ್ಯವಾದವುಗಳೆಂದರೆ ಅರಬೈಲು, ದೇವಿಮನೆ, ಮಲಮನೆ, ದೊಡ್ಡಮನೆ, ಮತ್ತಿ, ವಡ್ಡಿ, ಹೈದರ, ಕುಂಡಾಲ, ನೀಲಕುಂದ, ಹೊಗೆವಾಡಿ, ದೋಕರ್ಪ, ತಿನ್ನೆ, ಡಿಗ್ಗಿ, ಅಣಶಿ, ಕುವೇಶಿ. ಈ ಘಟ್ಟಗಳಲ್ಲಿ ಒಂದೊಂದು ತಿರುವಿಗೂ ಕಾಣುವ ರಮ್ಯದೃಶ್ಯಾವಳಿಗಳಿಂದ ಮನಸೂರೆಗೊಂಡು ಸಾಗಿ ಬಂದದಾರಿಯ ದೂರ ಹಾಗು ಪ್ರಯಾಣದ ಆಯಾಸದ ಅರಿವೇ ಆಗುವುದಿಲ್ಲ. ಘಟ್ಟವನ್ನು ಇಳಿದು ಕರಾವಳಿಯ ಬೈಲು ಪ್ರದೇಶಕ್ಕೆ ಕಾಲಿಟ್ಟೊಡನೆ ಅಡಿಕೆ-ತೆಂಗು-ಹಲಸು-ಮಾವು-ಬಾಳೆಗಳಿಂದ ಶೋಭಿಸುವ ಚಿಕ್ಕ ಚಿಕ್ಕ ಹಳ್ಳಿಗಳು ನಳನಳಿಸುವ ನೆಲ್ಲುಗದ್ದೆಗಳ ನಡುವೆ ಕಂಗೊಳಿಸುತ್ತವೆ.