ಮಾನವನ ನಾಗರಿಕತೆ, ಸಂಸ್ಕೃತಿ ಸಂವರ್ಧನೆಗೆ ಮಹಿಳೆಯರ ಕೊಡುಗೆ ಅನನ್ಯವಾದುದು. ಮೆಸೊಪೊಟೆಮಿಯಾ, ಈಜಿಪ್ತ, ಹರಪ್ಪ, ಮೊಹೆಂಜೋದಾರೋ ಈ ನಾಗರಿಕತೆಗಳೆಲ್ಲ ವಿಶೇಷವಾಗಿ ಅಭಿವೃದ್ಧಿ ಹೊಂದಲು ಅಲ್ಲಿ ಇದ್ದ ಕೃಷಿ ಸಂಪತ್ತು. ಈ ಕೃಷಿ ಆವಿಷ್ಕಾರ ಮಹಿಳೆಯರಿಂದ! ಮಡಿಕೆ-ಕುಡಿಕೆಗಳ ತಯಾರಿಕೆ, ಬಟ್ಟೆ, ನೂಲುವದು, ನೇಯುವದು ಇವೆಲ್ಲವೂ ಮಹಿಳೆಯರಿಂದಲೇ ಮಾನವ ನಾಗರಿಕತೆಗೆ ಸಂದ ಕೊಡುಗೆಗಳು ಎಂಬುದನ್ನು ಪುರುಷ ಪ್ರಧಾನ್ಯತೆ ಪಡೆದುಕೊಂಡ ಸಮಾಜ ಕಾಲಕ್ರಮೇಣ ಮರೆತು ಬಿಟ್ಟಿತು.

ಈ ಭೂಮಿಯ ಮೇಲೆ ಮಾನವ ಆಹಾರ ಸಂಗ್ರಹಣೆಗೆ ಅಲೆಯುತ್ತಿದ್ದ ಕಾಲದಲ್ಲಿ ಗಂಡು-ಹೆಣ್ಣೆಂಬ ಭೇದವೇ ಇರಲಿಲ್ಲ. ಕಾಲಾ ನಂತರ ಈಟಿ, ಭರ್ಜಿಯಂತಹ ಉಪಕರಣಗಳಿಂದ ಬೇಟೆಯಾಡುತ್ತಿದ್ದ ಹಂತದಲ್ಲಿಯೂ ಈ ಭೇದವಿರಲಿಲ್ಲ. ಪುರುಷ ಬೇಟೆಯಾಡಲು ಅಲೆಯುತ್ತಿದ್ದರೆ, ಸ್ತ್ರೀಯರು ಶಿಶುಪಾಲನೆಗೆ ತಮ್ಮ ವಾಸ ಸ್ಥಳಗಳಲ್ಲಿ ಉಳಿಯುತ್ತಿದ್ದರು. ಮಾತೃ ಪ್ರಧಾನ ಸಮೂಹ ವ್ಯವಸ್ಥೆ ಆಗ ರೂಪುಗೊಂಡಿತು. ಇಂದಿಗೂ ಬುಡಕಟ್ಟು ಜನಾಂಗಗಳು ಮಾತೃ ವಂಶೀಯವಾಗಿವೆ.

ತಾವು ವಾಸಿಸುತ್ತಿದ್ದ ಸ್ಥಳಗಳಲ್ಲಿ ತಿಂದು ಎಸೆದ ಬೀಜಗಳು ಮೊಳಕೆಯೊಡೆಯುತ್ತಿದ್ದುದನ್ನು ಕಂಡು ಕುತೂಹಲದಿಂದ ತಾವೂ ತಮಗೆ ಬೇಕಾದ ಗಡ್ಡೆ, ಗೆಣಸು, ಹಣ್ಣು ಹಂಪಲ ಇತರ ಸಸ್ಯಗಳ ಬೀಜಗಳನ್ನೂರಿ ಕೃಷಿ ವಿಧಾನವನ್ನು ಮಹಿಳೆಯರು ಕಂಡುಕೊಂಡರು.

ಕೃಷಿ ಆವಿಷ್ಕಾರಕ್ಕೆ ಮಹಿಳೆಯರೇ ಕಾರಣಕರ್ತರಾಗಿದ್ದರೂ ಪಶುಪಾಲನೆ, ನೇಗಿಲು ಮತ್ತಿತರ ಉತ್ಪಾದನಾ ಸಾಧನಗಳು ಪುರುಷನ ಕೈಗೆ ಬಂದವು. ಏಕೆಂದರೆ ಮಹಿಳೆಯರು ದಿನದ ಬಹುಪಾಲು ಸಮಯವನ್ನು ಮಕ್ಕಳ ಪಾಲನೆಗೆ ಮೀಸಲಾಗಿಡಬೇಕಾಗಿತ್ತು. ಉತ್ಪಾದನಾ ಸಾಮಗ್ರಿಗಳು ಪುರುಷನ ಕೈಗೆ ಬಂದಂತೆ ಅವನ ಪ್ರಾಧಾನ್ಯತೆ ಬಲಿಯತೊಡಗಿತು. ಪುರುಷ ಪ್ರಾಬಲ್ಯ ಬೆಳೆದಂತೆ ಗಂಡು-ಹೆಣ್ಣು ಜೋಡಿ ವ್ಯವಸ್ಥೆ (ಯುಗ್ಮ ವ್ಯವಸ್ಥೆ) ರೂಪುಗೊಂಡು ಈ ವ್ಯವಸ್ಥೆಯ ಒಳಗೂ ಹೊರಗೂ ಪುರುಷ ತನ್ನ ಅಧಿಕಾರವನ್ನು ಸ್ಥಾಪಿಸಿಕೊಂಡನು. ಹೆಣ್ಣು ಕೇವಲ ಭೋಗದ ವಸ್ತುವಾಗಿ; ಮಕ್ಕಳನ್ನು ಹೆರುವ ಯಂತ್ರವಾಗಿ ಅವನ ಆಧೀನಕ್ಕೆ ಒಳಗಾದಳು. ಜಗತ್ತಿನಾದ್ಯಂತ ಅವಳು ಎರಡನೆಯ ದರ್ಜೆಯ ಪ್ರಜೆಯಾಗಿ ಪರಿಗಣಿಸಲ್ಪಟ್ಟದ್ದು ಮಾನವ ಇತಿಹಾಸದ ದುರಂತವೇ ಸರಿ.

ಭಾರತೀಯ ಸಮಾಜದಲ್ಲಿ ಮಹಿಳೆ:

ಋಗ್ವೇದ ಕಾಲದಲ್ಲಿ ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಉಸಿರಾಡಲು ತಕ್ಕ ಮಟ್ಟಿಗೆ ಸ್ವಾತಂತ್ಯ್ರವಿದ್ದಿತು. ಶಿಕ್ಷಣ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಅವಳಿಗೆ ಅವಕಾಶಗಳಿದ್ದವು. ಅಥರ್ವ ವೇದ ಕಾಲಕ್ಕಾಗಲೇ ಹೆಣ್ಣು ಮಗುವಿನ ಜನನ ದುರಾದೃಷ್ಟಕರವೆಂದು ಭಾವಿಸಲಾಯಿತು.

ಉಪನಿಷತ್ತುಗಳ ಕಾಲ ಆತ್ಮ ಜಿಜ್ಞಾಸೆಗೆ ತೆರೆದುಕೊಂಡ ಕಾಲ. ಲೋಪಾಮುದ್ರೆ, ಗಾರ್ಗಿ, ಮೈತ್ರೇಯಿ, ಮೊದಲಾದವರು ತಾತ್ವಿಕ ಜಿಜ್ಞಾಸೆಯಲ್ಲಿ ತೊಡಗಿಸಿಕೊಂಡಿದ್ದು ಬೃಹದಾರಣ್ಯಕ ಉಪನಿಷತ್ತಿನಿಂದ ತಿಳಿದು ಬರುತ್ತದೆ. ಅವಳ ಈ ಅಸ್ತಿತ್ವವೂ ಬಹಳ ಕಾಲ ಮುಂದುವರಿಯಲಿಲ್ಲ.

ಧರ್ಮ ಶಾಸ್ತ್ರಗಳ ಕಾಲದಲ್ಲಿ ಸ್ಮೃತಿಕಾರರು ಧರ್ಮಸೂತ್ರಗಳ ಮೂಲಕ ಕಠೋರವಾದ ಕಟ್ಟುಪಾಡುಗಳನ್ನು ಹೆಣ್ಣಿನ ಮೇಲೆ ವಿಧಿಸಿದರು. ಅವಳು ಪುರುಷನ ತೊತ್ತಾಗಿ ಬಲಿ ಪಶುವಾದ ದುರಂತ ಚಿತ್ರಣ ಈ ಕಾಲದಿಂದ ದೊರೆಯುತ್ತದೆ.

ಜೈ-ಬೌದ್ಧ ಧರ್ಮಗಳೂ ಸಹ ಅವಳನ್ನು ಪುರುಷನಿಗೆ ಸಮಾನವಾಗಿ ಕಾಣಲಿಲ್ಲ.

ರಾಮಾಯಣ-ಮಹಾಭಾರತದಂತಹ ಮಹಾಕಾವ್ಯಗಳಲ್ಲಿ ತಾಯಿಯಾಗಿ ಮಾತ್ರ ಅವಳು ಗೌರವದ ಸ್ಥಾನ ಪಡೆದಿರುವಳೇ ವಿನಹ, ಉಳಿದೆಲ್ಲ ದೃಷ್ಟಿಯಿಂದ ಪುರುಷಾಧೀನಕ್ಕೆ ಒಳಪಟ್ಟು ಅವನ ಆಸ್ತಿಯ ಒಂದು ಭಾಗವಾಗಿ, ಶೃಂಗಾರದ ಗೊಂಬೆಯಾಗಿ, ಭೋಗದ ವಸ್ತುವಾಗಿ, ದಾರುಣವಾದ ಬದುಕನ್ನು ಅಪ್ಪಿಕೊಂಡಿದ್ದಕ್ಕೆ ಸೀತೆ, ಮಂಡೋದರಿ, ದ್ರೌಪದಿಯಂತಹ ಪಾತ್ರಗಳೇ  ಉದಾಹರಣೆಗಳು.

ಜನಪದ ಸಮಾಜದಲ್ಲಿ ಮಹಿಳೆ:

ಶಿಷ್ಟ ಸಮಾಜದ ಪ್ರಭಾವದಡಿಯಲ್ಲೇ ಜನಪದ ಸಮಾಜವೂ ಬೆಳೆಯಿತು. ದುಡಿದು ಉಣ್ಣುವ ಹಕ್ಕು, ಸ್ವತಂತ್ರ ಅಸ್ತಿತ್ವವನ್ನು ಕಳೆದುಕೊಂಡು ಮಹಿಳೆ ಗಂಡಿನ ಗುಲಾಮಳಾದಳು. ಪಿತೃ ಪ್ರಧಾನ ವ್ಯವಸ್ಥೆಯ ಮೌಲ್ಯಗಳನ್ನೇ ಜನಪದ ಸಮಾಜವೂ ಸ್ವೀಕರಿಸಿದ್ದರಿಂದ ಆ ಮೌಲ್ಯಗಳೇ ಜನಪದ ಹೆಣ್ಣಿಗೆ ಆದರ್ಶವೆನಿಸಿದವು.

ಆದರೂ ನಾಗರಿಕತೆಯಿಂದ ದೂರವಿರುವ ಬುಡಕಟ್ಟು ಜನಾಂಗಗಳು ಇನ್ನೂ ಮಾತೃ ವಂಶೀಯ ಬೇರುಗಳನ್ನು ಉಳಿಸಿಕೊಂಡಿವೆ.

ಮಾತೃವಂಶೀಯ ಸಮಾಜದಲ್ಲಿ ಇಂದಿಗೂ ಹೆಣ್ಣಿನ ಸ್ಥಾನ-ಮಾನಗಳು ಭಿನ್ನವಾಗಿವೆ. ಗಾರೋ ಪರ್ವತ ಪ್ರದೇಶದಲ್ಲಿರುವ ಖಾಸೀ ಜನಾಂಗದಲ್ಲಿ ಈಗಲೂ ಮಾತೃ ಪ್ರಧಾನ ಸಮಾಜ-ಸಂಸ್ಕೃತಿಯ ಪುನರಚನೆಗೆ, ಮರು ಚಿಂತನೆಗೆ ಬೆಳಕು ನೀಡುತ್ತವೆ. ಮಹಿಳಾ ಅಧ್ಯಯನ, ಸ್ತ್ರೀ ವಿಮೋಚನಾ ಚಳುವಳಿಗಳು, ಸ್ತ್ರೀವಾದಿ ಚಿಂತನಗಳು ರೂಢಿಗತ ಸಮಾಜ ಮತ್ತು ಸಾಂಸ್ಕೃತಿಕ ವಿನ್ಯಾಸದಲ್ಲಿರುವ ಲಿಂಗಾಧಾರಿತ ತರತಮ ಭಾವನೆಗಳನ್ನು ಮತ್ತು ಗಂಡಿನ ಸರ್ವಾಧಿಕಾರವನ್ನು ಪ್ರಶ್ನಿಸುತ್ತದೆ. ಹೆಣ್ಣಿನ ಬುದ್ಧಿ-ಭಾವನೆಗಳನ್ನು ಸಂಪೂರ್ಣವಾಗಿ ಸವರಿಹಾಕಿ ಶೀಲ, ತ್ಯಾಗ, ಸಹನೆ, ಪಾತಿವ್ರತ್ಯದಂತಹ; ಮೌಲ್ಯಗಳನ್ನು ಅವಳ ತಲೆಯಲ್ಲಿ ತುಂಬಿ, ಅವಳ ಬದುಕನ್ನು ದ್ವಂದ್ವಗೊಳಿಸಿದ; ಅಸ್ತಿತ್ವವನ್ನು ತುಳಿದುಹಾಕಿದ ಪುರುಷ ಸಮಾಜದ ಸ್ವಾರ್ಥವನ್ನು ಅನಾವರಣಗೊಳಿಸುತ್ತವೆ.

ಮೌಖಿಕ ಪರಂಪರೆಯಲ್ಲಿ ಜೀವಂತವಾಗಿರುವ ಮಹಿಳಾ ಜನಪದ ಸಾಹಿತ್ಯದಲ್ಲಿ ಅವಳ ಜೀವನಾನುಭವ ಗಟ್ಟಿಗೊಂಡು ಹಾಡು, ಕಥನಗೀತೆ, ಕಥೆ ಒಗಟು ಮುಂತಾದ ಪ್ರಕಾರಗಳಲ್ಲಿ ಸತ್ವಪೂರ್ಣವಾಗಿ ಅಭಿವ್ಯಕ್ತಗೊಂಡಿವೆ.

ಪುರುಷ ಪ್ರಧಾನ ವ್ಯವಸ್ಥೆಯ ಅಧೀನದಲ್ಲಿಯೇ, ವ್ಯವಸ್ಥೆಯನ್ನು ಅನಿವಾರ್ಯವಾಗಿಯೇ, ಅರಿವಿಲ್ಲದೆಯೇ ಒಪ್ಪಿಕೊಂಡಂತೆ ತೋರಿದರೂ; ಅವನ ನಿಯಂತ್ರಣದ ಅಧೀನತೆಯಿಂದ ಹೊರಬರುವುದಕ್ಕೆ ಪ್ರಯತ್ನಿಸಿದ; ಮಿತಿಗಳನ್ನು ಉಲ್ಲಂಘಿಸಿದ ವ್ಯವಸ್ಥೆಯನ್ನು ಪ್ರತಿಭಟಿಸಿ ಪರ್ಯಾಯ ವ್ಯವಸ್ಥೆಯನ್ನು ಕಟ್ಟಿಕೊಂಡ ಮಾದರಿಗಳು ಮಹಿಳೆಯರಿಂದಲೇ ಸೃಷ್ಟಿಗೊಂಡ ಜನಪದ ಸಾಹಿತ್ಯದಲ್ಲಿ ದೊರೆಯುತ್ತವೆ.

ಮಹಿಳಾ ಸಾಹಿತ್ಯದ ಮೂಲಕವೇ ಅವಳ ಒಳಲೋಕವನ್ನು ಗ್ರಹಿಸುವ, ಸ್ಪಂದನೆಗಳನ್ನು ಗುರುತಿಸುವ ಅಧ್ಯಯನ ಇತ್ತೀಚಿಗೆ ಮಹತ್ವವನ್ನು ಪಡೆದುಕೊಳ್ಳುತ್ತಲಿದೆ.

ಮಹಿಳೆಯರಿಂದಲೇ ಸೃಷ್ಟಿಗೊಂಡ ಜನಪದ ಬಿಡಿಗೀತೆಗಳು, ಕಥನ ಕಾವ್ಯ, ಜನಪದ ಮಹಾಕಾವ್ಯಗಳನ್ನು ಮತ್ತು ಕಥೆಗಳನ್ನು ಮುಖ್ಯ ಆಕರಗಳನ್ನಾಗಿಸಿ ಪ್ರಧಾನ ವ್ಯವಸ್ಥೆಗೆ ಮಹಿಳೆ ತೋರಿದ ಪ್ರತಿಕ್ರಿಯೆ ಹಾಗೂ ಪ್ರತಿಭಟನೆಯನ್ನು ಈ ಉಪನ್ಯಾಸದಲ್ಲಿ ನಿರೂಪಿಸುವ ಪ್ರಯತ್ನ ಮಾಡಲಾಗಿದೆ.