ಭಾರತವು ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸೀಖ, ಪಾರ್ಸಿ ಮುಂತಾದ ಸರ್ವ ಧರ್ಮಗಳು ಆಗರ. ಹಿಂದೂ ಧರ್ಮದ ನಾಲ್ಕೂ ವರ್ಣಗಳಲ್ಲಿ ಶೂದ್ರರು ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಮಟ್ಟದಲ್ಲಿ ಹಿಂದುಳಿದವರಾಗಿದ್ದರಿಂದ ಅವರನ್ನು ಅತೀ ಕೆಳಮಟ್ಟದವರೆಂದು ಪರಿಗಣಿಸಲಾಗುತ್ತಿದೆ. ಅವರು ವರ್ಗೀಕೃತ ಶ್ರೇಣಿ ಪರಿಧಿಯ ಆಚೆಗಿಟ್ಟ ಪಂಚಮರಲ್ಲಿ ಹೂಲೆಯ ಮಾದಿಗರು ಮುಂತಾದ ಪಂಗಡಗಳುಂಟು ಡಕ್ಕಲಿಗ ವೃಂದದ ಜೀವನ-ವಿಧಾನಗಳನ್ನು ಕುರಿತ ಅಧ್ಯಯನದಿಂದ ಡಕ್ಕಲಿಗೆ ವೃಂದದ ಜೀವನ-ವಿಧಾನಗಳನ್ನು ಕುರಿತ ಅಧ್ಯಯನದಿಂದ ಇವರು ಹೂಲೆ ಮಾದಿಗರಿಗಿಂತಲೂ ಕೆಳಮಟ್ಟದವರೆಂದು ಸ್ಪಷ್ಟವಾಗುತ್ತದೆ. ಏಕೆಂದರೆ ಡಕ್ಕಲಿಗರು, ಮಾದಿಗರಿಗೆ ಗೌಡ್ರ, ಏಪ್ಪಾ ಎಂದೇ ಸಂಭೋಧಿಸುತ್ತಾರೆ. ಮಾದಿಗರು ಅನ್ನ ನೀರು ಹಾಕಿದಾಗಲೇ ಡಕ್ಕಲಿಗರು ಊಟ ಮಾಡಬೇಕು. ಇದಕ್ಕೆ ಡಕ್ಕಲಿಗರು ತಮ್ಮ ಹಿರಿಮೆಯನ್ನು ಹೇಳುತ್ತ, ಕುಳಿತ ಜಾಗದಲ್ಲಿಯೇ ಮಾದಿಗರು ಅನ್ನ ನೀರು ತಂದು ಹಾಕುತ್ತಾರೆ. ಆದ್ದರಿಂದ ಅವರಿಗೆ ನಾವು ಗುರುಗಳು, ಅವರಿಗಿಂತ ನಾವು ಶ್ರೇಷ್ಠ ಎಂಬುದು ಡಕ್ಕಲಿಗರ ವಾದ. ಅದು ಏನೇ ಇರಲಿ, ಎರಡೂ ಗುಂಪಿನವರು ತಮ್ಮಷ್ಟಕ್ಕೆ ತಾವೇ ಶ್ರೇಷ್ಠರೆಂದು ವಾದ ಮಾಡುತ್ತಾರೆ. ಇದನ್ನೇ ಡಕ್ಕಲಿಗರು ಮುಂದುವರೆಸುತ್ತ, ತಾವು ಮಾದಿಗರ ಗುರುಗಳೆಂದು ಹೆಮ್ಮೆಯಿಂದ ಹೇಳುತ್ತಾರೆ. ಇದು ಅಸ್ಪೃಶ್ಯರ ಮಧ್ಯದಲ್ಲಿಯೇ ಇರುವ ಶ್ರೇಣಿಕೃತ ವ್ಯವಸ್ಥೆ ಎಂದು ಹೇಳಬಹುದು.

ಇವರಿಗೆ ಮಳೆ, ಗಾಳಿ, ಬಿಸಿಲು,ರಾತ್ರಿ, ಹಗಲುಗಳ ನಡುವಣ ವ್ಯತ್ಯಾಸವೇ ಇರುವುದಿಲ್ಲ. ಇವರು ಅಲೆಮಾರಿಗಳು, ಅಲೆಯುವ ಪಾದಗಳಿಗೆ ದಣಿವೆನಿಸಿದರೆ, ಗುಡಿ – ಗುಂಡಾರಗಳೇ ಇವರಿಗೆ ಆಸರೆ. ಒಂದು ವೇಳೆ ಅವು ಇಲ್ಲದಿದ್ದಲ್ಲಿ ತಮ್ಮದೇ ಆದ ತಾತ್ಕಾಲಿಕ ಬಿಡಾರಗಳನ್ನು ಹಾಕಬಲ್ಲರು. ಹೀಗೆ ಗೊತ್ತುಗುರಿಯಿಲ್ಲದ ಬದುಕಿನ ಹಾದಿಯಲ್ಲಿ ಪಯಣಿಸುತ್ತಾ, ಪುರಾತನ ನಾಗರಿಕತೆಯ ಪಳೆಯುಳಿಕೆಗಳೋ ಎಂಬ ಭ್ರಮೆ ಹುಟ್ಟಿಸುವ ಇವರು ಡಕ್ಕಲಿಗರು. ತಮ್ಮ ಸ್ವಂತ ಹಕ್ಕಿನ(ಮಾದಿಗರ) ಮನೆಗಳಿದ್ದ ಊರುಗಳಲ್ಲಿ ತಮ್ಮ ಮೂಲ ವೃತ್ತಿಯನ್ನು ಮಾಡಿ ಅವರಿಂದ ಅನ್ನ-ನೀರು, ಬಟ್ಟೆ-ಬರೆ, ಪಾತ್ರೆ-ಪಡಗ, ದುಡ್ಡು-ದುಗ್ಗಾಣಿಗಳನ್ನು ಪಡೆಯುತ್ತಾರೆ. ನಿಗದಿತ ಊರುಗಳಲ್ಲಿ ಎಂಟು – ಹತ್ತು ದಿನಗಳವರೆಗೆ ಇದ್ದು, ಅಲ್ಲಿಂದ ಮತ್ತೊಂದು ಊರಿಗೆ ಪ್ರಯಾಣ ಬೆಳೆಸುತ್ತಾ ಸಾಗುವ ಇವರದು ಅತಂತ್ರ ಬದುಕು. ನಾಗರಿಕತೆಯ ವಿಕಾಸದ ವಿವಿಧ ಘಟ್ಟಗಳಲ್ಲಿ ಹಾಯ್ದು ಬಂದ ಈ ಜನಪದ ವೃಂದ ತಮಗೆ ಎದುರಾದ ಅನೇಕ ಬಗೆಯ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲೂ ತಮ್ಮ ಪೂರ್ವದ ವೃತ್ತಿಯನ್ನು ಸಂಪೂರ್ಣವಾಗಿ ತೊರೆದಿಲ್ಲ.

ಈ ಜನಪದ ವೃಂದ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಮುಂತಾದ ಪ್ರದೇಶಗಳಲ್ಲಿ ಚದುರಿಕೊಂಡಿದ್ದು, ಇತ್ತೀಚೆಗೆ ಅವರ ಆಚಾರ-ವಿಚಾರ ಸಂಪ್ರದಾಯಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು.