ಹಳ್ಳಿಕಾರ್ ದನದ ಲಕ್ಷಣಗಳು

ಹಣೆಯು ಎರಡೂ ಬದಿಯಲ್ಲಿ ಉಬ್ಬಿಕೊಂಡಿರುತ್ತದೆ. ಮಧ್ಯದಲ್ಲಿ ಉದ್ದವಾದ ತಗ್ಗು ಬಿದ್ದಿರುತ್ತದೆ. ಕಣ್ಣಿನ ಮೇಲೆ, ಮುಖದ ಮೇಲೆ ಮತ್ತು ಗಂಗೆದೊಗಲಿನ ಮೇಲೆ ಬಿಳಿಯ ಬಣ್ಣವಿರುತ್ತದೆ. (ಇದಕ್ಕೆ ಸೋಗೆ ಎನ್ನುತ್ತಾರೆ) .

ಎರಡು ಕೋಂಬಿನ ಮಧ್ಯದಲ್ಲಿ ಹಣೆಯ ಮೇಲು ನಿಂಬೆಹಣ್ಣಿನ ಗಾತ್ರದಷ್ಟು ಗಂಟು ಉಬ್ಬಿಕೊಂಡಿರುತ್ತದೆ. ಇದಕ್ಕೆ “ನಿಂಬೂರಿ”ಎಂದು ಹೆಸರು ಇಣಿಯ ಮೇಲ್ಭಾಗದಿಂದ ಬೆನ್ನಿನ ಮಧ್ಯಬಾಗದಲ್ಲಿ ಬಾಲದವರೆಗೆ ಬಿಳಿಯ ಗೆರೆ ಇರುತ್ತದೆ.

ಖಿಲಾರ ದನದ ಲಕ್ಷಣಗಳು

ನಮ್ಮ ಕರ್ನಾಟಕದ ಇನ್ನೊಂದು ಹೆಸರುವಾಸಿಯಾದ ಮತ್ತು ಉತ್ತರ ಕರ್ನಾಟಕದಲ್ಲಿ ಚಿರಪರಿಚಿತವಾದ, ಹೆಚ್ಚು  ಜನಪ್ರಿಯವಾದ ದನಗಳ ಜಾತಿ ಎಂದರೆ “ಖಿಲಾರ” ಜಾತಿ. ಈದನಗಳ ತೌರೂರು ದಕ್ಷಿಣ ಮಹಾರಾಷ್ಟ್ರದ ಸಂಸ್ಥಾನಗಳಾದ ಸೊಲ್ಲಾಪುರ, ಸತಾರ ಜತ್ ಮತ್ತು ಔಂಧ ಜಿಲ್ಲೆಗಳು ಹಾಗೂ ಸಾತಪುಡರಾ ಗುಡ್ಡದ ಪ್ರದೇಶಗಳು. ಈ ಜಾತಿಯ ದನಗಳು ದಕ್ಷಿಣ ಹಿಂದೂಸ್ತಾನದಲ್ಲಿ ಸಿಗುವುದರಿಂದ ಇದಕ್ಕೆ “ಖಿಲಾರ”ಎಂದು ಹೆಸರು ಬಂದಿದೆ “ಖಿಲಾರ”ಎಂದರೆ “ದಕ್ಷಿಣ ದಿಕ್ಕಿನ”ಎಂದರ್ಥ ಎಂದು ಹೇಳಲಾಗಿದೆ. ಈ ದನಗಳನ್ನು ನಾವು ಇಂದು ಹೆಚ್ಚಾಗಿ ಫಂಡರಾಪುರ, ಸೊಲ್ಲಾಪುರ, ಚಿಂಚಲಿ, ರಾಯಭಾಗ, ಸಾಂಗಲಿ, ಮಿರಜ್, ಕೊಲ್ಲಾಪುರ ಮತ್ತು ವಿಜಾಪುರ ಈ ಭಾಗಗಳಲ್ಲಿ ಕಾಣಬಹುದು.

ಈ ದನಗಳೂ ಸಹ ಆಕಾರ, ಮೈಕಟ್ಟು, ಚಪಲತೆ, ಹುರುಪು ಮತ್ತು ಸಿಟ್ಟಿನಲ್ಲಿ ಅಮೃತ ಮಹಲ್ ದನಗಳಿಗೆ ಸರಿಹೋಲುತ್ತವೆ. ಬೆಳಗಾವಿ ಜಿಲ್ಲೆ ಗೋಕಾವಿಯಲ್ಲಿ ನಡೆದ ಎತ್ತಿನಗಾಡಿಯ ಓಟದ ಸ್ಪರ್ದೆಯಲ್ಲಿ ಹುಕ್ಕೇರಿ ತಾಲ್ಲೂಕು ಅಮ್ಮಣಗಿ ಗ್ರಾಮದ ಶ್ರೀಯುತ ಹಣಮಂತರಾವ್ ಲಕ್ಷಣರಾವ್ ಕುಲಕರ್ಣಿ ಇವರ ಎತ್ತಿನ ಗಾಡಿಯು ವೇಗ ಸ್ಪರ್ದೆಯಲ್ಲಿ ೧೩ ನಿಮಿಷಗಳಲ್ಲಿ ೫ ೧/೨ ಮೈಲು ಓಡಿ ನೆರೆದವರೆಲ್ಲರ ಮೆಚ್ಚುಗೆಗೆ ಪ್ರಾತ್ರವಾಗಿ ಮೊದಲನೆಯ ಬಹುಮಾನವನ್ನು ಪಡೆದಿರುತ್ತದೆ. ಅರಭಾವಿ ಹದ್ದಿನ ಎಲ್ಲಮ್ಮದೇವಿಯ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಚಕ್ಕಡಿ ಶರತ್ತಿನಲ್ಲಿ ಕೆಂಚಪ್ಪ ಮಾಯಪ್ಪ ಮಲ್ಲಾಡರವರ ಎಂಬವರ ಜೋಡಿ ಎತ್ತುಗಳ ೧೬ ನಿಮಿಷಗಳಲ್ಲಿ ೫ ೩/೪ ಮೈಲು ದಾರಿಯನ್ನು ಓಡಿ ಪ್ರಥಮ ಸ್ಥಾನವನ್ನು ಪಡೆದಿರುತ್ತವೆ. ಇದನ್ನೆಲ್ಲ ನೋಡಿದರೆ ಈ ದನಗಳು ವೇಗದ ಕೆಲಸಕ್ಕೆ ತುಂಬಾ ಉಪಯುಕ್ತವಾದವುಗಳು ಎಂದು ತಿಳಿದು ಬರುತ್ತದೆ. ಆದ್ದರಿಂದಲೇ ಉತ್ತರ ಕರ್ನಾಟಕದ ಭಾಗದಲ್ಲಿ ಈ ಖಿಲಾರ ದನಗಳನ್ನು ಸಾಕಲು, ಬೆಳೆಸಲು ರೈತರು ಹೆಚ್ಚು ಆಸಕ್ತಿಯುಳ್ಳವರಾಗಿದ್ದಾರೆ. ದಕ್ಷಿಣ ಮಹಾರಾಷ್ಟ್ರ ಭಾಗದ ರೈತರು ತಮ್ಮ ಜಾನಪದ ಸಾಹಿತ್ಯದಲ್ಲಿ ಈ ದನಗಳ ಬಗ್ಗೆ ಎತ್ತಿನ ಜೋಡಿ ಅಂದರೆ ಖಿಲಾರ ಎತ್ತಿನ ಜೋಡಿಯೇ ಜೋಡಿ : ಇದರ ಮುಂದೆ ಮತ್ತೆ ಬೇರೆ ಯಾವ ಎತ್ತಿನ ಜೋಡಿಯೂ ಇಲ್ಲವೆಂದು ಹಾಡಿ ಹರಸಿದ್ದಾರೆ. ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದಲ್ಲಿ ದನಗಳ ಮುಂದೆ ಕೋಲಾಟವಾಡುತ್ತ ಹಳ್ಳಿಗಳಲ್ಲಿ ಇಂದಿಗೂ ಖಿಲಾರ ಎತ್ತಿನ ಬಗ್ಗೆ ಹಾಡುತ್ತ ಕುಣಿಯುತ್ತಾರೆ.

ಕರ್ನಾಟಕದಲ್ಲಿ ಆಚರಿಸುವ ಎಲ್ಲ ಹಬ್ಬಗಳಿಗೂ ಒಂದು ಹಿನ್ನೆಲೆ ಇದೆ. ಈ ಹಬ್ಬಗಳು ಹಳ್ಳಿಯ ಸಂಸ್ಕೃತಿಯ ಜೀವನದ ಕುರುಹುಗಳು, ಉತ್ತರ ಕರ್ನಾಟದಲ್ಲಿ “ಮಣ್ಣೆತ್ತಿನ ಅಮಾವಾಸ್ಯೆ”ಯ ಹಬ್ಬವನ್ನು ಬಹುತೇಕ ಎಲ್ಲ ಹಳ್ಳಿಹಳಲ್ಲೂ ಆಚರಿಸುತ್ತಾರೆ. ಅಂದು ಮಣ್ಣಿನ ಬಸವಣ್ಣನನ್ನು ಮಾಡಿ ಪೂಜಿಸುತ್ತರೆ. ಅದಕ್ಕಾಗಿ ಈ ಹಬ್ಬಕ್ಕೆ “ಮಣ್ಣೆತ್ತಿನ ಅಮಾವಾಸ್ಯೆ” ಎಂದು ಹೆಸರು ಬಂದಿದೆ. ಈ ಹಬ್ಬದ ಮುಖ್ಯ ಉದ್ದೇಶ ಎಲ್ಲ ಹೊಲಮನೆಯ ಕೆಲಸಗಳು ಪ್ರಾರಂಭವಾಗುವ ಈ ಕಾಲದಲ್ಲಿ ಮಳೆಯಾಗಿ ಭೂಮಿಯು ಉಳಲು, ರೆಂಟೆ ಹೊಡೆಯಲು ಹದವಾಗಿರುತ್ತದೆ. ಅದಕ್ಕಾಗಿ ದನಗಳನ್ನು ಪೂಜಿಸಿ ಎಲ್ಲ ಮುಂದಿನ ಕೆಲಸಗಳು ಸರಿಯಾಗಿ ಸಾಗಲೆಂದು ಬಸವಣ್ಣನನ್ನು ಪ್ರಾರ್ಥಿಸಿ ಕೆಲಸಕ್ಕೆ ಪ್ರಾರಂಭಿಸುವುದೇ ಆಗಿದೆ. ಇದರಿಂದ ದನಗಳು ವ್ಯವಸಾಯದ ಉದ್ಯೋಗದಲ್ಲಿ ಮಹತ್ವವಾದ ಪಾತ್ರವನ್ನು ವಹಿಸುತ್ತವೆ. ಎಂಬುದಲ್ಲದೆ ಬೇಸಾಯಗಾರರಿಗೆ ದನಗಳ ಬಗ್ಗೆ ಇರುವ ಪೂಜ್ಯ ಭಾವನೆಯೂ ತಿಳಿದುಬರುತ್ತದೆ.

ಖಿಲಾರ ಜಾತಿಯ ದನಗಳು ಅಮೃತಮಹಲ್ ದನಗಳಿಂದ ಉತ್ಪನ್ನವಾದ ಒಂದು ಉಪಶಾಖೆ ಎಂದು ಕೆಲವರ ಅಭಿಪ್ರಾಯ. ಈ ಬಗ್ಗೆ ಕರ್ನಲ್ ಸರ್ ಅರ್ಥರ್ ಆಲಿವರ್ ಇವರು ತಮ್ಮ “ಎ ಬ್ರೀಫ್ ಸರ್ವೆ ಆಫ್ ಸಮ್ ಆಫ್ ದಿ ಇಂಪಾರ್ಟೆಂಟ್ ಬ್ರೀಡ್ಸ್ ಆಫ್ ಕ್ಯಾಟಲ್ ಇನ್ ಇಂಡಿಯಾ” ಎಂಬ ಪುಸ್ತಕದಲ್ಲಿ ಖಿಲಾರ ದನಗಳ ಬಗ್ಗೆ “ಖಿಲಾರ ಜಾತಿಯ ದನಗಳು ಅಮೃತಮಹಲ್ ದನಗಳಿಂದ ಉತ್ಪನ್ನವಾದ ಒಂದು ತಳಿ ಮತ್ತು ಇದರ ರಚನೆಯಲ್ಲಿ ಉತ್ತರ ಭಾಗದ ಕಂದು ಬಣ್ಣದ ದನಗಳ ರಕ್ತದ ಮಿಶ್ರಣ ಕಂಡು ಬರುತ್ತದೆ” ಎಂದು ಹೇಳಿರುತ್ತಾರೆ. ಈ ಖಿಲಾರ ಜಾತಿಯಲ್ಲಿಯೂ ಸಹ ಅಮೃತಮಹಲ್, ಆಟಪಾಡಿಮಹಲ್, ಮಸ್ಟಾಡ ಖಿಲಾರ, ತಪತಿ ಖಿಲಾರ, ಜತ್ ಖಿಲಾರ, ನಕಲಿ ಖಲಾರ ಮೊದಲಾದವುಗಳೆಲ್ಲ ಸಮಾವೇಶವಾಗುತ್ತವೆ. ಈ ಖಿಲಾರ ಜಾತಿಯ ದನಗಳ ಹೆಸರುಗಳು ಆಯಾ ಸ್ಥಳಕ್ಕೆ ಹೊಂದಿಕೊಂಡಿರುತ್ತವೆ. ಒಟ್ಟಿನಲ್ಲಿ ಈ ಎಲ್ಲ ಜಾತಿಯ ದನಗಳು ಖಿಲಾರ ಜಾತಿಯ ದನಗಳಲ್ಲಿಯೇ ಸೇರಿಕೊಂಡಿರುತ್ತವೆ. ಈ ಜಾತಿಯ ದನಗಳನ್ನು ನಾವು ಮಸವಾಡ, ನಾಗೋಟ, ಜತ್, ಚಿಂಚಿಲಿ, ಬಿಜಾಪುರ, ಸೊಲ್ಲಾಪುರ, ಅಥಣಿ, ಜಮಖಂಡಿ, ಫಂಡರಪುರಗಳಲ್ಲಿ ಸೇರುವ ದನಗಳ ವಾರ್ಷಿಕ ಜಾತ್ರೆಯಲ್ಲಿ ಕಾಣಬಹುದು.

ಸಾಕುವ ಪದ್ಧತಿ:ಈ ಜಾತಿಯ ದನಗಳ ಜೋಪಾಸನೆಗಾರರು ಉಳಿದ ದನಗಾರರಂತೆ ತಮ್ಮ ದನಗಳನ್ನು ಮೇಯಿಸುವುದರ ಸಲುವಾಗಿ ದೂರದ ಬೇರೆ ಪ್ರದೇಶಗಳಲ್ಲಿ ತಿರುಗಾಡುವುದಿಲ್ಲ. ಇವರು ತಮ್ಮ ವ್ಯವಸಾಯ ಉದ್ಯೋಗದ ಜೊತೆ ತಮ್ಮ ಆರ್ಥಿಕ ಸ್ಥಿತಿ ಉತ್ತಮಪಡಿಸುವುದಕ್ಕಾಗಿ ಪೂರಕ ಉದ್ಯೋಗವೆಂದು ಈ ದನಗಳನ್ನು ಸಾಕುತ್ತಾರೆ ಹಾಗೂ ಬೆಳೆಸುತ್ತಾರೆ. ಇಂಥವರನ್ನು ಬಂಜಾರರೆಂದು ಕರೆಯುತ್ತಾರೆ. ಇನ್ನು ಕೆಲವರು ಕೇವಲ ಈದನಗಳನ್ನೆ ಸಾಕಿ, ಬೆಳೆಸಿಮಾರಾಟ ಮಾಡುವುದನ್ನೇ ತಮ್ಮ ಮುಖಯ ಜೀವನದ ಉದ್ಯೋವನ್ನಾಗಿ ಮಾಡಿಕೊಂಡಿರುತ್ತಾರೆ. ಇಂಥವರನ್ನು ದನಗಾರರೆಂದು ಕರೆಯುತ್ತಾರೆ. ಉತ್ತಮ ಪೀಳಿಗೆಯ ಉತ್ಪಾದನೆಯನ್ನು ಇವರು ತಮ್ಮ ಆಕಳುಗಳಿಗೆ ಉತ್ತಮ ಶ್ರೇಷ್ಠ ಕುಲದ ಹೋರಿಗಳಿಂದಲೇ ಜೊತೆ ಕಟ್ಟಿಸುವುದರಲ್ಲಿ ವಿಶೇಷ  ಆಸಕ್ತಿಯುಳ್ಳವರಾಗಿರುತ್ತಾರೆ. ಹೆಣ್ಣು ಕರುಗಳಿಗಿಂತ ಹೋರಿ ಕರುಗಳ ಬಗ್ಗೆ ಹೆಚ್ಚು ಶ್ರದ್ಧೆ, ಪ್ರೀತಿ ವಹಿಸಿ ಸಾಕುತ್ತಾರೆ. ಹೋರಿಕರುಗಳಿಗೆ ಮೇವಿನ ಜೊತೆಗೆ ಕೈತಿಂಡಿಯನ್ನು ಕೊಟ್ಟು ಬೆಳೆಸುತ್ತಾರೆ. ಹೋರಿಗಳನ್ನು ತಡವಾಗಿ ಕಸಿ (ಹಿಡ) ಮಾಡಿಸುವುದು ಸಾಮಾನ್ಯ ಪದ್ಧತಿ. ಹೀಗೆ ಹೋರಿಗಳನ್ನು  ೬ ವರ್ಷಗಳವರೆಗೆ ಬೆಳೆಸಿ ಆಮೇಲೆ ಕಸಿ ಮಾಡಿ ಆಮೇಲೆ ಸಾರಿಗೆ ಮಾಡುವವರಿಗೆ ಮಾರುತ್ತಾರೆ. ತಪತಿಖಲಾರವನ್ನು ಸಾಕುವ ಖಿಲಾರ ಜೋಪಾಸನೆಗಾರರು ಸಾತಪುರಾ ಬೆಟ್ಟದಲ್ಲಿ ತಮ್ಮ ಹಿಂಡಿನೊಡನೆ ಅಡ್ಡಾಡುತ್ತಾರೆ. ಈದನಗಳು ಸ್ವಾಭಾವಿಕವಾಗಿ ಸ್ವಲ್ಪ ಹುಲ್ಲು ಬೆಳೆಯುವಂಥ ಕಲ್ಲು ಭೂಮಿ ಗುಡ್ಡಗಾಡುಗಳಲ್ಲಿ ಹುಟ್ಟಿ ಬೆಳೆದಿರುವುದರಿಂದ ಈ ಜಾತಿಯ ದನಗಳ ಗೊರಸುಗಳು ಕಬ್ಬಿಣದಂತೆ ಬಹಳ ಬಿರುಸಾಗಿರುತ್ತವೆ.

ಕುಂದುಗಳು : ಇವು ಹೂಡುವುದಕ್ಕೆ ಅತಿ ಉತ್ತಮ ದನಗಳಾಗಿದ್ದರೂ, ಹೈನದ ದನಗಳಲ್ಲ.

ವರ್ಣನೆ: ಇದು ಮಧ್ಯಮ ಗಾತ್ರದ ಪ್ರಾಣಿ, ಹೋರಿಗಳು ಇಣಿಯ ಹಿಂದೆ ೧೨೫ ಸೆಂ. ಮೀ. ಉದ್ದವಿರುತ್ತವೆ. ಎದೆಯ ಸುತ್ತಳತೆ ೧೫೦-೨೦೦ ಸೆಂ. ಮೀ. ಇರುತ್ತದೆ. ಈ ಅಸಾಧಾರಣವಾದ ಎದೆಯ ಬೆಳವಣಿಗೆಯು ಹೂಡುವ ಉತ್ತಮ ದನಗಳ ಲಕ್ಷಣವಾಗಿರುತ್ತದೆ. ಆಕಳುಗಳು ಇಣಿಯ ಹಿಂದೆ ೧೧೦ ರಿಂದ ೧೨೦ ಸೆಂ. ಮೀ. ನಷ್ಟು ಉದ್ದವಾಗಿರುತ್ತವೆ.

ಬಣ್ಣ:  ತಪತಿಖಿಲಾರವು ಅಚ್ಚ ಬಿಳಿ ಬಣ್ಣದಿಂದ ಕೂಡಿರುತ್ತದೆ. ಇದರ ಮೂಗು ಮತ್ತು ಗೊರಸುಗಳು (ಕೊಳಗಳು) ಗುಲಾಬಿ ಬಣ್ಣದವಾಗಿರುತ್ತವೆ. ಮಸಲಾಡಿಖಿಲಾರವು ಕಂದು ಅಥವಾ ನೊರೆಯಂತೆ ಬೆಳ್ಳಗಿರುತ್ತದೆ. ಹೋರಿಗಳಲ್ಲಿ ಇಣಿಯ ಭಾಗ, ಕುತ್ತಿಗೆ ಮತ್ತು ಚಪ್ಪೆಯ ಭಾಗಗಳು ಕಪ್ಪು ಬಣ್ಣದಿಂದ ಕೂಡಿದ ನರೆ ಬಣ್ಣದ್ದಾಗಿರುತ್ತದೆ. ಕುತ್ತಿಗೆಯು ಕೆಮ್ಮಣ್ಣು ಹಚ್ಚಿದಂತೆ ಕೆಂಪಾಗಿರುತ್ತದೆ.

ಆಕಾರ: ಎದೆಯು ವಿಶಾಲವಾಗಿರುವುದರಿಂದ ಮುಂಭಾಗವು ಚೆನ್ನಾಗಿ ಬೆಳೆದಿದ್ದು ಇವು ಹೂಡುವುದಕ್ಕೆ ಮತ್ತು ತೀವ್ರವಾಗಿ ನಡೆಯುವುದಕ್ಕೆ ಯೋಗ್ಯವಾಗಿರುತ್ತವೆ.

ಮುಖ: ಇದರ ಮುಖವು ಹಳ್ಳಿಕಾರ್ ದನಗಳಂತೆ ಉದ್ದವಾಗಿರದೆ ಸ್ವಲ್ಪ ಚಪ್ಪಟೆಯಾಗಿ ಕಾಣುತ್ತದೆ.

ತಲೆ: ಇದರ ತಲೆ ಹಣೆಯಿಂದ ಹಿಂಭಾಗದಲ್ಲಿ ಬಾಗಿ ಸಣ್ಣದಾಗಿಯೂ, ಉದ್ದವಾಗಿಯೂ ಇರುತ್ತದೆ. ಹೀಗಿರುವುದರಿಂದ ಹಣೆಯು ಸ್ವಲ್ಪ ಮುಂದಕ್ಕೆ ಎದ್ದು ಬಂದಂತೆ ಕಾಣುತ್ತದೆ. ಕೋಡುಗಳು ಬುಡದಲ್ಲಿ ಒಂದಕ್ಕೊಂದು ಸಮೀಪವಾಗಿದ್ದು ತುದಿಯಲ್ಲಿ ಅಗಲವಾಗಿರುತ್ತವೆ.

ಕಣ್ಣುಗಳು: ಇದರ ಕಣ್ಣುಗಳು ತೇಜಃಪುಂಜವಾಗಿ ಎದ್ದು ಕಾಣುತ್ತವೆ. ಸ್ವಭಾವದಿಂದ ಈ ಪ್ರಾಣಿಗಳು ಬಹಳ ಸಿಟ್ಟಿನವು ಮತ್ತು ಹುರುಪಿನವೂ ಆಗಿರುತ್ತವೆ.

ಕಿವಿಗಳು: ಇದರ ಕಿವಿಗಳು ಸಣ್ಣವಾಗಿಯೂ ತುದಿಯಲ್ಲಿ ಚೂಪಾಗಿಯೂ ಇರುತ್ತವೆ.

ಹೋರಿಗಳಲ್ಲಿ ಇಣಿಯು ದಪ್ಪವಾಗಿರುತ್ತದೆ. ಹಿಂಭಾಗವು ಒಮ್ಮೆಲೆ ಬಾಗಿರುತ್ತದೆ. ನಡು ಮತ್ತು ಬೆನ್ನ ಅಗಲವಾಗಿದ್ದು ಚೆನ್ನಾಗಿ ಬೆಳೆದಿರುತ್ತದೆ. ಬಾಲವು ಉದ್ದವಾಗಿ ತುದಿಯಲ್ಲಿ ಗೊಡೆಯು ತುಂಬಿಕೊಂಡಿರುತ್ತದೆ. ಈ ದನಗಳು ಬಹಳ ಉಗ್ರವಿದ್ದು ಸ್ವಭಾವದಲ್ಲಿ ಅನಿಶ್ಚಿತವಿರುತ್ತವೆ. ಇವನ್ನು ಹತೋಟಿಯಲ್ಲಡಲು ಸ್ವಲ್ಪ ಕಠಿಣವಾದರೂ ತಾವಾಗಿಯೇ ಮುಂದುವರಿದು ಉತ್ತಮವಾಗಿ ಕೆಲಸ ಮಾಡುವ ಪ್ರಾಣಿಗಳು.

ಕೃಷ್ಣಾ ತೀರದ ಜಾತಿಯ ದನಗಳು: ಕೃಷ್ಣಾ ಮತ್ತು ಘಟಪ್ರಭಾ ನದಿಗಳು ತೀರಪ್ರದೇಶಗಳೇ ಈ ದನಗಳ ಮೂಲ ಸ್ಥಾನ. ಆದ್ದರಿಂದಲೇ ಈ ದನಗಳಿಗೆ ಕೃಷ್ಣಾ ತೀರದ ಅಥವಾ ಹೊಳೆಸಾಲ ದನಗಳೆಂದು ಕರೆಯಲಾಗಿದೆ. ಸಾಮಾನ್ಯವಾಗಿ ನಾವು ಈ ಜಾತಿಯ ದನಗಳನ್ನು ಕೊಲ್ಲಾಪುರ, ಸಾಂಗಲಿ, ಈಚಲಕರಂಜಿ, ಮಿರಜ್, ಕುರಂದವಾಡ, ರಾಮದುರ್ಗ, ಜಮಖಂಡಿ, ಮುಧೋಳ, ಅಥಣಿ, ಚಿಕ್ಕೋಡಿ, ಚಿಂಚಲ, ರಾಯಭಾಗ, ಬೆಳಗಾವಿ, ವಿಜಾಪುರ ಈಭಾಗಗಳಲ್ಲಿ ನೋಡಬಹುದು.

ಈ ಜಾತಿಯ ದನಗಳು ಬೇರೆ ಶುದ್ಧ ಜಾತಿಯ ಅಮೃತ ಮಹಲ್, ಹಳ್ಳಿಕಾರ್ ಮೊದಲಾದ ಜಾತಿಯ ದನಗಳಂತೆ ಬಹಳ ಹಿಂದಿನಿಂದ ಬೆಳೆದು ಬಂದ ಶುದ್ಧ ತಳಿಯ ದನಗಳಲ್ಲ. ಈ ದನಗಳ ಉತ್ಪತ್ತಿಯು ಎರಡು ಮೂರು ಜಾತಿಯ ದನಗಳ ರಕ್ತ ಮಿಶ್ರಣದಿಂದ ತೀರ ಇತೀಚಿಗೆ ಉಂಟಾದುದೆಂದು ಹೇಳಲಾಗಿದೆ. ಸುಮಾರು ೧೮೮೦ ನೇ ಇಸವಿಯವರೆಗೂ ಈ ದನಗಳ ವಿಷಯವಾಗಿ ಹೇಳಿಕೊಳ್ಳುವಷ್ಟು ಸಂಗತಿಗಳು ಗೊತ್ತಿರಲಿಲ್ಲ. ಈದನಗಳ ಉತ್ಪತ್ತಿ ಸ್ಥಳಿಕ ದನಗಳೊಂದಿಗೆ ಕಾಠೇವಾಡದ “ಗಿರ್” ಜಾತಿಯ ದನಗಳು ಮತ್ತು ಆಂಧ್ರಪ್ರದೇಶದ ನೆಲ್ಲೂರು ಜಾತಿಯ ದನಗಳು ಬೆರೆತು ಆಗಿರಬಹುದು ಎಂದು ಬಾಹ್ಯ ಸಂಗತಿಗಳಿಂದಲೂ, ಹಳ್ಳಿಗಳಲ್ಲಯೂ ಸ್ಥಾನಿಕ ಪುರಾವೆಗಳಿಂದಲೂ ಊಹಿಸಬಹುದು. ಇದೂ ಅಲ್ಲದೆ ಹಿಂದಿನ ಸಾಂಗಲಿ ಸಂಸ್ಥಾನದ ಮಹಾರಾಜರು “ನೆಲ್ಲೂರು” ಜಾತಿಯ ದನಗಳನ್ನು ಮತ್ತು ಗುಜರಾತಿನಿಂದ “ಗಿರ್” ಜಾತಿಯ ದನಗಳನ್ನು ತರಿಸಿ ತಮ್ಮ ಸಂಸ್ಥಾನದ ಹಳ್ಳಿಗಳ ದನಗಳ ತಳಿ ಸುಧಾರಣೆಗೆ ಕೂಡಿಸಿದ್ದರ ಪರಿಣಾಮವಾಗಿ ಈ ಜಾತಿಯ ದನಗಳು ಉತ್ಪತ್ತಿಯಾಗಿರಬಹುದು ಎಂಬುದು ಈ ಊಹೆಗೆ ಹೆಚ್ಚು ಪುಷ್ಟಿಯನ್ನು ಕೊಡುತ್ತದೆ. ಕೊಲ್ಲಾಪುರದ ಹಿಂದಿನ ಮಹಾರಾಜರು ಕೆಲವು ದನಗಳನ್ನು ಮೈಸೂರಿನಿಂದ ತರಿಸಿ ತಮ್ಮ ರಾಯಭಾಗ ದನಗಳ ಹಿಂಡನ್ನು ಸುಧಾರಿಸಲು ಉಪಯೋಗಿಸಿದುದರ ಪರಿಣಾಮವಾಗಿ ಈ ಹೊಳೆಸಾಲ ದನಗಳ ಹುಟ್ಟಿಗೆ ಬಹಳ ಸಹಾಯಕವಾಗಿರಬಹುದೆಂದು ಹೇಳಬಹುದು.

ಈ ಜಾತಿಯ ದನಗಳು ಆಕಾರ, ಗಾತ್ರ, ಮೈಕಟ್ಟು ಹಾಗೂ ಬಣ್ಣದಲ್ಲಿ ಬಹುಮಟ್ಟಿಗೆ “ನೆಲ್ಲೂರು” ಜಾತಿಯ ದನಗಳನ್ನು ಹೋಲುತ್ತವೆ. ಅಲ್ಲದೆ ಇವುಗಳ ಅಗಲವಾದ, ಮುಂದೆ ಉಬ್ಬಿಬಂದಿರುವ ಹಣೆ, ತುದಿಯಲ್ಲಿ ಕೊಂಚ ತಿರುವಿರುವ ಜೋತಾಡುವ ಉದ್ದ ಕಿವಿಗಳು ಮತ್ತು ಈ ಆಕಳುಗಳು ಸ್ವಲ್ಪ ಹೆಚ್ಚು ಹಾಲು ಕೊಡುವ ಗುಣವುಳ್ಳವುಗಳಾಗಿರುವುದರಿಂದ ಇವುಗಳಲ್ಲಿ ಕಾಠೇವಾಡದ “ಗಿರ್” ಜಾತಿಯ ದನಗಳ ಹೋಲಿಕೆ ಕಂಡು ಬರುತ್ತದೆ. ಇದರಿಂದ ಇವು ಬಹಳ ಹಿಂದಿನಿಂದ ಬಂದ ಶುದ್ಧ ತಳಿಯಾಗಿರದೆ ಇತ್ತೀಚೆಗೆ ಉತ್ಪತ್ತಿಯಾದ ಮಿಶ್ರ ತಳಿಯ ದನಗಳೆಂದು ಹೇಳುವುದು ಸಕಾರಣವೆನ್ನಿಸುತ್ತದೆ. ಈ ಜಾತಿಯ ದನಗಳಲ್ಲಿ ನಾವು “ನೆಲ್ಲೂರು “ಜಾತಿಯ ದನಗಳ, “ಗಿರ್” ಮತ್ತು ಮೈಸೂರು ಜಾತಿಯ ದನಗಳ ಲಕ್ಷಣಗಳನ್ನು ಕಾಣಬಹುದು.

ಸಾಕುವ ಪದ್ಧತಿ: ಕೃಷ್ಣಾ ಮತ್ತು ಘಟಪ್ರಭಾ ನದಿಗಳ ದಡದಲ್ಲಿರುವ ಹಳ್ಳಿಗಳಲ್ಲಿಯ ರೈತರು ತಮ್ಮ ಮುಖ್ಯ ಉದ್ಯೋಗವಾದ ಕೃಷಿಯೊಂದಿಗೆ ಈ ದನಗಳನ್ನು ಸಾಕಿ ಬೆಳೆಸುತ್ತಾರೆ ಈ ದನಗಳನ್ನು ಹಿಂಡು ಹಿಂಡಾಗಿ ಕಟ್ಟಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಿರುಗಾಡದೆ. ತಮ್ಮ ಮನೆಗಳಲ್ಲಿಯೇ ಒಂದು ಅಥವಾ ಎರಡು ಆಕಳುಗಳನ್ನು ಸಾಕಿಕೊಂಡು ಈ ಜಾತಿಯ ದನಗಳನ್ನು ಸಂವರ್ಧನೆ ಮಾಡಿ ಬೆಳೆಸುವುದು  ಇಲ್ಲಿಯ ರೈತರ ಸಾಮಾನ್ಯ ಪದ್ಧತಿ. ಆಕಳು, ಹೋರಿ ಮತ್ತು ಕರುಗಳನ್ನು ಹೆಚ್ಚಾಗಿ ಕಟ್ಟಿ ಮೇಯಿಸುವುದೇ ಇಲ್ಲಿಯ ಪದ್ಧತಿ. ತಮ್ಮ ಹೊಲಗಳಲ್ಲಿ ಮಳೆಗಾಲ ಬಿಟ್ಟು ಸುಗ್ಗಿಯ ಕಾಲದಲ್ಲಿ ಒಣಗಿದ ಜೋಳದ ದಂಟಿನಿಂದ ಹಾಕಿದ ಗುಡಿಸಲುಗಳಲ್ಲಿ ದನಗಳನ್ನು ಕಟ್ಟಿಸಾಕಿ ಬೆಳೆಸುತ್ತರೆ. ಈ ದನಗಳಿಗೆ ಜೋಳದ ಮೇವೆ ಮುಖ್ಯ ಆಹಾರ. ಇಲ್ಲಿಯ ತೀರ ಪ್ರದೇಶದಲ್ಲಯ ಜಮೀನುಗಳಿಗೆ ನದಿಗಳು ನೀರು ಉಣಿಸುವುದರಿಂದ ಮತ್ತು ರೇವೆ ಮಣ್ಣು ತಂದು ಹಾಕುವುದರಿಂದ ಇಲ್ಲಿಯ ಭೂಮಿಯು ಬಹಳ ಫಲವತ್ತಾಗಿ ಕಪ್ಪು ಎರೆಮಣ್ಣಿನಿಂದ ಕೂಡಿರುತ್ತದೆ. ಮಳೆಗಾಲದಲ್ಲಿ ನದಿ ಮಹಾಪೂರ ಬಂದು ಇಳಿದು ಹೋದ ಮೇಲೆ ಎರಡೂ ದಂಡೆಯುದ್ಧಕ್ಕೂ ರೈತರು ಜೋಳ ಮತ್ತು ಮುಸುಕಿನ ಜೋಳ (ಗೋವಿನ ಜೋಳ) ಬೆಳೆಸುವುದಲ್ಲದೆ, ಅಕ್ಕಡಿಕಾಳುಗಳ ಬಳ್ಳಿಯನ್ನು -ಅವರೆ, ಹುರುಳಿ, ಚೊಗಚೆ, ಅಲಸಂದಿ, ಹೆಸರು ಬೆಳೆಸುವುದರಿಂದ ಒಂದಿಲ್ಲೋಂದು ಹಸಿ ಮೇವು ವರ್ಷದಲ್ಲೆಲ್ಲ ದನಗಳಿಗೆ ಮೇಯಲು ಸಿಗುವುದರಿಂದ ಈ ಜಾತಿಯ ದನಗಳ ಬೆಳವಣಿಗೆ ಉತ್ತಮವಾಗಿರುತ್ತದೆ. ಎರಡೂ ದಂಡೆಗಳ ಅಕ್ಕ ಪಕ್ಕದಲ್ಲಿ ಹುಲುಸಾಗಿ ಬೆಳೆದ ಹಸಿ ಹುಲ್ಲಿನ ಸೌಕರ್ಯವಿರುವುದರಿಂದ ದನಗಳಿಗೆ ವರ್ಷದಲ್ಲೆಲ್ಲ ಸಾಮಾನ್ಯವಾಗಿ ಹೆಚ್ಚು ಕಾಲ ರಸಭರಿತವಾದ ಮತ್ತು ಪೌಷ್ಟಿಕಾಂಶಗಳಿಂದ ಕೂಡಿದ ಹಸುರು ಮೇವು ಸಾಕಷ್ಟು ದೊರೆಯುತ್ತದೆ. ಬೇಸಿಗೆಯಲ್ಲಿ ಕೊಯ್ದು ಇಟ್ಟ ಹುಲ್ಲಿನ ಜೊತೆಗೆ ಹತ್ತಿಕಾಳು, ನುಚ್ಚು ಅಥವಾ ಕಡಲೆಕಾಯಿ (ಶೇಂಗಾ) ಹಿಂಡಿಯನ್ನು ಕೊಡುತ್ತಾರೆ. ಇದು ಇಲ್ಲಿಯ ದನಗಲ ಜೋಪಾಸನೆಯ ಪದ್ಧತಿ.

ವರ್ಣನೆ: ಈ ಜಾತಿಯ ದನಗಳು ಆಕಾರ ಹಾಗೂ ಗಾತ್ರದಲ್ಲಿ ದೊಡ್ಡವು, ದೇಹ ಸ್ಥೂಲ ಹಾಗೂ ನಡಿಗೆಯಲ್ಲಿ ಮಂದಗಾಮಿಗಳು. ಬಲಿತ ಹೋರಿಯ ತೂಕ ೬೦೦ ರಿಂದ ೯೦೦ ಕಿ. ಗ್ರಾಂ. ಗಳವರೆಗೂ, ಬಲಿತ ಆಕಳಿನ ತೂಕವು ೪೦೦ರಿಂದ ೫೦೦ ಕಿ. ಗ್ರಾಂ. ಗಳವರೆಗೂ ಇರುತ್ತದೆ. ದೇಹವು ಜಡವಾಗಿದ್ದು ಗೊರಸುಗಳು (ಕೊಳಗಳು) ಉದ್ದವಿದ್ದು ಬಹಳ ಮೆದುವಾಗಿರುವುದರಿಂದ ಇವು ಕಲ್ಲುಯುಕ್ತ ಕೆಂಪು ಮರಳು (ಕೆಂಪು ಮಸಾರಿಕಲ್ಲು) ಭೂಮಿ‌ಗಳಲ್ಲಿ ಮತ್ತು ಕಲ್ಲು ಹಾಕಿದ ಗಟ್ಟಿ ದಾರಿತ ಮೇಲೆ ಅಷ್ಟು ಸಮರ್ಪಕವಾಗಿ ಕೆಲಸ ಮಾಡಲಾರವು.

ಈ ಜಾತಿಯ ದನಗಳು ಸ್ಥೂಲ ಶರೀರ ಹಾಗೂ ಜಡಸ್ವಭಾವ ಹೊಂದಿದ್ದರೂ ಹೆಚ್ಚು ಶಕ್ತಿಯುತವಾದವುಗಳು. ಕಾಲುಗಳ ಎಲುಬುಗಳು ಗಿಡ್ಡವಾಗಿದ್ದು, ದಪ್ಪವಾಗಿ ಬಹಳ ಗಟ್ಟಿಯಾಗಿರುವುದರಿಂದ ಕಬ್ಬಿಣ ರೆಂಟೆಯಿಂದ ಆಳವಾಗಿ ಉಳುವ ಕೆಲಸ, ಹೊಲ ಮನೆಯ ಕೆಲಸ ಮತ್ತು ಹೆಚ್ಚು ಭಾರವನ್ನು ಎಳೆಯುವುದಕ್ಕೆ ಬಹಳ ಉಪಯುಕ್ತವಾದ ದನಗಳಾಗಿರುತ್ತವೆ. ಮುಖ್ಯವಾಗಿ ಇವು ಕಪ್ಪು ಎರೆಭೂಮಿಯಲ್ಲಿ ಕೆಲಸ ಮಾಡಲು ಉತ್ತಮ ದನಗಳೆಂದು ಪರಿಗಣಿಸಲ್ಪಟ್ಟಿವೆ.

ಬಣ್ಣ:  ಸಾಮಾನ್ಯವಾಗಿ ಈ ಜಾತಿಯ ಆಕಳುಗಳು ಬಿಳಿಯ ಬಣ್ಣವಿರುತ್ತವೆ. ಎತ್ತುಗಳು ಬಿಳುಪು, ಮಸಕು ಕಪ್ಪು ಮಿಶ್ರಿತ ಅಥವಾ ಬೂದಿಬಣ್ಣದಿಂದ ಕೂಡಿರುತ್ತವೆ. ಹೋರಿಗಳ ಮುಂಗಾಲಿನ ತೋಳು ಮತ್ತು ಹಿಂಗಾಲಿನ ಚಪ್ಪೆ ಹೆಚ್ಚು ಕಪ್ಪು ಬಣ್ಣದಿಂದ ಕೂಡಿರುತ್ತವೆ.

ತಲೆ: ಇದರ ಹಣೆಯು ಅಗಲವಾಗಿ ಮುಂದೆ ಉಬ್ಬಿಕೊಂಡಿರುತ್ತದೆ. ಕೋಡುಗಳು ಗಿಡ್ಡಾಗಿ, ಬುಡದಲ್ಲಿ ದಪ್ಪವಾಗಿ (ಗಡ್ಡಿಕೋಡು) ತುದಿಯಲ್ಲಿ ಚೂಪಾಗಿರದೆ ಮೊಂಡಾಗಿರುತ್ತವೆ. ಮುಖದ ಕೆಳಭಾಗವು ಕಿರಿದಾಗಿದ್ದು ಮೂಗಿನ ಸಿಂಬಿಯು ಅಗಲವಾಗಿರುತ್ತದೆ. ಕಣ್ಣಿನ ಸುತ್ತಲೂ ಕಪ್ಪು ಮಚ್ಚೆ ಇರುವುದೆ. (ಕಾಡಿಗೆ ಕಣ್ಣು) ಹೋರಿಗಳಲ್ಲಿ ಬೆಳ್ಳನೆ ಮಚ್ಚೆಇರುವುದೂ ಉಂಟು. ಕಿವಿಗಳು ಉದ್ದವಾಗಿ, ತುದಿಯಲ್ಲಿ ಸ್ವಲ್ಪ ಬಾಗಿದಂತಿದ್ದು ಜೋತಾಡುತ್ತಿರುತ್ತವೆ. ಕಿವಿಗಳ ಒಳಭಾಗವು ಕಿತ್ತಲೆ ಹಣ್ಣಿನ ಬಣ್ಣದಿಂದಿರುತ್ತದೆ.

ಕುತ್ತಿಗೆ ಇದರ ಕುತ್ತಿಗೆ ದಪ್ಪವಾಗಿ, ಗಿಡ್ಡಾಗಿ ಮಡಿಕೆಗಳಿಂದ ಕೂಡಿರುತ್ತದೆ. ಗಂಗೆದೊಗಲು ಮತ್ತು ತೋಬರಿ ಸಡಿಲಾಗಿ ಜೋತಾಡುತ್ತಿರುತ್ತವೆ. ಹೋರಿಗಳಲ್ಲಿ ಇಣಿಯ ಬಹಳ ದೊಡ್ಡದಾಗಿ ದಪ್ಪವಾಗಿ ಕಪ್ಪುಬಣ್ಣದಿಂದ ಕೂಡಿರುತ್ತದೆ.

ಕಾಲುಗಳು:   ಇದರ ಕಾಲುಗಳು ಗಿಡ್ಡಾಗಿ, ದಪ್ಪವಾಗಿ ಒಳ್ಳೆಯ ಶಕ್ತಿಯುಳ್ಳವಾಗಿರುತ್ತವೆ. ಆದರೆ ಗೊರಸುಗಳು ಉದ್ದವಿದ್ದು ಮೆತ್ತಗಿರುತ್ತವೆ.

ಈ ದನಗಳು ಕೆಲಸಕ್ಕೆ ತಮ್ಮ ಮೂಲಸ್ಥಾನದಲ್ಲಿ ಬಹಳ ಉಪಯೋಗಕರವಾಗಿರುತ್ತವೆ. ಅಲ್ಲದೆ ಇವುಗಳನ್ನು ಬೇರೆ ಕಡೆ ಸಾಕಿದಲ್ಲಿ ಅಷ್ಟು ಸಮರ್ಪಕವಾಗಿ ಬೆಳೆಯುವುದಿಲ್ಲ ಮತ್ತು ಅಷ್ಟು ಕೆಲಸವನ್ನು ಮಾಡಲಾರವು ಎಂದು ಕಂಡು ಬಂದಿದೆ. ಇವುಗಳಿಗೆ ಹೆಚ್ಚು ಆಹಾರ, ಹಸುರು ಹುಲ್ಲುಬೇಕು. ಹೀಗಾಗಿ ಸಾಕುವುದಕ್ಕೆ ಖರ್ಚು ಹೆಚ್ಚಾದರೂ ಆಕಳುಗಳು ಹೆಚ್ಚು ಹಾಲು ಕೊಡುತ್ತವೆ. ಈ ಜಾತಿಯ ದನಗಳು ಕೆಲಸ ಹಾಗೂ ಉತ್ಪಾದನೆಗೆ ಯೋಗ್ಯವಾದವು.