ನಮ್ಮ ದೇಶ ಕೃಷಿ ಪ್ರಧಾನವಾದ ದೇಶ; ಹಳ್ಳಿಗಳ ನಾಡು. ನಮ್ಮಲ್ಲಿ ಶೇ. ೭೦ ರಷ್ಟು ಜನ ಹಳ್ಳಿಯ ನಿವಾಸಿಗಳು. ದೇಶಾದ್ಯಂತ ಅನ್ನ, ವಸ್ತ್ರ ಪೂರೈಸುವವರು ಈ ಹಳ್ಳಿಗರೆ. ಪಟ್ಟಣಿಗರ ಆರೋಗ್ಯಕ್ಕೆ ಬೇಕಾದ ಹಾಲು, ಬೆಣ್ಣೆ, ಮೊಸರು, ಹಣ್ಣು ಕಾಯಿಪಲ್ಯಗಳನ್ನು ಪೂರೈಸುವವರು ಈ ಹಳ್ಳಿಯವರೆ. ಗಿರಣಿಗಳಿಗೆ ಬೇಕಾದ ಕಚ್ಚಾ ಮಾಲನ್ನು ಪೂರೈಸಿಕೊಡುವವರೂ ಹಳ್ಳಿಯ ರೈತರು. ಆದ್ದರಿಂದಲೇ “ದಿಲ್ಲಿಯ ಮೂಲ ಹಳ್ಳಿಯಲ್ಲಿ” ಎಂದು ಹೇಳುವುದು. ನಮ್ಮಲ್ಲಿಯ ಬಹುಜನರ ಉತ್ಪಾದನೆಯ ಪ್ರಮುಖ ಉದ್ಯೋಗವೆಂದರೆ ವ್ಯವಸಾಯ. ಭಾರತದ ಆರ್ಥಿಕ ಪ್ರಗತಿಗೆ ವ್ಯವಸಾಯವೇ ನೆಲಗಟ್ಟು ವ್ಯವಸಾಯದ ಪ್ರಗತಿಯೇ ರಾಷ್ಟ್ರದ ಪ್ರಗತಿ. ಇದಕ್ಕಾಗಿಯೇ “ಕೃಷಿತೋ ನಾಸ್ತಿ ದುರ್ಭಿಕ್ಷಂ” ಎಂದು ನಮ್ಮ ಪೂರ್ವಜರು ಹೇಳಿರುವುದು. ನಮ್ಮಲ್ಲಿಯ ವ್ಯವಸಾಯವು ಉತ್ತಮ ರೀತಿಯಿಂದ ನಡೆಯಬೇಕಾದರೆ ಮತ್ತು ಇಲ್ಲಿಯ ಜನರು ಆರೋಗ್ಯ ಶಾಲಿಗಳಾಗಿಯೂ, ದೃಢಕಾಯರಾಗಿಯೂ ಇರಬೇಕಾದರೆ ನಮ್ಮಲ್ಲಿ ದನಗಳು ಗಟ್ಟಿಮುಟ್ಟಾಗಿ, ದುಡಿಯುವುದಕ್ಕೆ ತಕ್ಕವಾಗಿ, ಹೆಚ್ಚು ಹಾಲನ್ನು  ಕೊಡಬಲ್ಲವಾಗಿರಬೇಕು. ಇಲ್ಲಿಯ ವ್ಯವಸಾಯ – ಉಳುವುದು, ಬಿತ್ತುವುದು, ಹರಗುವುದು, ಈ ಎಲ್ಲ ಕೆಲಸಗಳಿಗೆ ದನಗಳನ್ನು ಬಿಟ್ಟರೆ ಬೇರೆ ಗತ್ಯಂತರವಿಲ್ಲ. ಆದುದರಿಂದ ಭಾರತದ ವ್ಯವಸಾಯಕ್ಕೆ ಆಕಳು ಮತ್ತು ಎತ್ತುಗಳು ಅಧಾರಭೂತವಾಗಿದೆ. ಅಧಿಕ ಆಹಾರೋತ್ಪಾದನೆಯ ಕಾರ್ಯದಲ್ಲಿ ವ್ಯವಸಾಯಕ್ಕೆ ಅದರ ಪ್ರಮುಖ ಅಂಗವಾದ ದನಗಳ ಪಾತ್ರ ಅತಿ ಮಹತ್ವ ಮತ್ತು ಮುಖ್ಯವಾದುದು.      

ನೆಲ್ಲೆತ್ತು ಬಂಡಿ  ಬಲವಿಲ್ಲದಾರಂಬ
ಕಲ್ಲುಕಳೆಗಳು ಬಿಟ್ಟವನು ಹೊಲದೊಳಗೆ
ಹುಲ್ಲನೇ ಬೆಳೆವ ಸರ್ವಜ್ಞ

ಹರಗದಾ ಎತ್ತಾಗಿ ಬರಡಾದ ಹಯನಾಗಿ
ಹರಟೆ ಹೊಡೆಯುವಾ ಮಗನಾಗೆ ಹೊಲದಲಿ
ಕರದವೇ ಬೆಳಗು ಸರ್ವಜ್ಞ
ಎಂದು ಸರ್ವಜ್ಞ ಕವಿ ದನಗಳ ಹಿರಿಮೆಯನ್ನು ಹಾಡಿದ್ದಾನೆ.

ರಾಷ್ಟ್ರಪಿತ ಗಾಂಧೀಜಿ ಸಹ “ನಾವು ಎಂದು ಗೋಮಾತೆಯನ್ನು ಅನಾದರಿಸಲು ಪ್ರಾರಂಭಿಸಿದೆವೋ ಅಂದೇ ಭಾರತದ ಅವನತಿಗೆ ಕಾರಣವಾಯಿತು” ಎಂದು ದನಗಳ ಮಹತ್ವ ಎತ್ತಿ ತೋರಿಸಿದ್ದಾರೆ.

ವೆನಿಸ್ ಯಾತ್ರಿಕ ಮನೂಚಿ ೧೬೫೫-೧೭೧೭ರವರೆಗೆ ಭಾರತದಲ್ಲಿದ್ದನು. ಔರಂಗಜೇಬ, ಶಿವಾಜಿ, ಸಂಭಾಜಿ ಮೊದಲಾದವರ ಪರಿಚಯ ಅವನಿಗಿತ್ತು. ಮೊಗಲ ಬಾದಶಹನ ವಿಚಾರ ಬರೆಯುತ್ತಾ ಗೋಸಂಭಂಧವಾಗಿ ಅವನು ಹೀಗೆ ಬರೆಯುತ್ತಾನೆ. “ಹಿಂದೂ ಜನರು ಗೋಮೂತ್ರಪ್ರಾಶನ ಮಾಡುತ್ತಾರೆ. ಸರ್ವಾಂಗಕ್ಕೆ ಲೇಪಿಸುವರು. ಸಾಹುಕಾರರೂ ಸಹ ಬೆಳಿಗ್ಗೆ ಎದ್ದು ಹಸುವಿನ ಬಾಲವನ್ನು ತಮ್ಮ ತಲೆಯ ಮೇಲಿಟ್ಟು ಗೋಮೂತ್ರದಿಂದ ಪವಿತ್ರವಾದ ಸ್ಥಳದಲ್ಲಿ ಕುಳಿತು ಉಪಾಸನೆ ಮಾಡುತ್ತಾರೆ”.

ಟಿಪ್ಪುಸುಲ್ತಾನನು ೬೦, ೦೦೦ ಜೊತೆ ಎತ್ತುಗಳ ಬಂಜಾರ ದಳವನ್ನಿಟ್ಟಿದ್ದನು. “ಆರ್ಮಿ ಆಫ್ ಇಂಡಿಯನ್ ಮೊಗಲ್ಸ್ “ನ ಲೇಖಕನಾದ ಆರ್ಯಟನ್, ೫೦೦೦ ಎತ್ತುಗಳ ಸಮೂಹ ಹೋಗುತ್ತಿದ್ದುದನ್ನು ನೋಡಿದೆನೆಂದು ಹೇಳಿರುತ್ತಾನೆ.

ಮಹಾತ್ಮಗಾಂಧಿ ಅವರೂ ಸಹ “ಅಸ್ಪೃಶ್ಯತಾ ನಿವಾರಣೆ ಎಂಬ ಲೇಖನದಲ್ಲಿ “ನನ್ನ ಜೀವನದ ಎರಡು ಮುಖ್ಯ ಆಶಯಗಳೆಂದರೆ ಅಸ್ಪೃಶ್ಯತಾ ನಿವಾರಣೆ ಮತ್ತು ಗೋರಕ್ಷಣೆ ” ಈ ಎರಡೂ ಕಾರ್ಯಗಳು ಎಂದು ಪೂರ್ಣವಾಗುವುವೋ ಅಂದೇ ಸ್ವರಾಜ್ಯ ಮತ್ತು ಮೋಕ್ಷ “ಎಂದು ಹೇಳಿರುತ್ತಾರೆ.

ಇಂದು ವಿದೇಶಿ ಹಸುಗಳು ಅಧಿಕ ಹಾಲು ಕರೆಯುತ್ತಿರುವುದಕ್ಕೆ ಕ್ರಮಬದ್ದವಾದ ತಳಿ ಸಂವರ್ಧನೆ, ಪಾಲನೆ, ಪೋಷಣೆಗಳೇ ಕಾರಣ. ಹೈನದ ವಿಷಯದಲ್ಲಿ ಮುಂದುವರಿದ ಅನೇಕ ದೇಶಗಳು ಆಧುನಿಕ ವೈಜ್ಞಾನಿಕ ಸಂಶೋಧನೆಯ ತಳಹದಿಯ ಮೇಲೆ ತಮ್ಮ ಹಿಂಡುಗಳನ್ನು ಸುಧಾರಿಸಿ ಅಭಿವೃದ್ಧಿಗೊಳಿಸಿ ಅತ್ಯಾಶ್ಚರ್ಯಕರವಾದ ಪ್ರಗತಿಯನ್ನು ಸಾಧಿಸಿವೆ. ನಮ್ಮಲ್ಲಿಯೂ ಪಶುಪಾಲನೆ ಮತ್ತು ತಳಿ ಅಭಿವೃದ್ಧಿಯ ಕೆಲಸಗಳು ಆಧುನಿಕ ವೈಜ್ಞಾನಿಕ ತಳಹದಿಯ ಮೇಲೆ ಸಾಗಿದಲ್ಲಿ ಪಶು ಸಂಪತ್ತು ಉತ್ತಮಗೊಳ್ಳುವುದು. ಈ ದಿಶೆಯಲ್ಲಿ ಪ್ರಗತಿ ಸಾಧಿಸಲು ಸಾಕಷ್ಟು ಪ್ರಯತ್ನಗಳು ಈಗಾಗಲೆ ನಡೆದಿವೆ.

ಕರ್ನಾಟಕದ ದನಗಳ ಇತಿಹಾಸ

ಅಮೃತ ಮಹಲ್, ಖಿಲಾರ ಜಾತಿಯ ದನಗಳು ತಮ್ಮ ವೇಗ ಚಪಲತೆ, ತೀವ್ರತೆ, ಚುರುಕು, ಹುಮ್ಮಸ್ಸು ಸಹಿಷ್ಣುತೆಗಳಲ್ಲಿ ಇತರ ದನಗಳಿಗಿಂತ ಭಿನ್ನವಾಗಿದ್ದು ತಮ್ಮದೇ ಆದ ಹಿರಿಮೆಯನ್ನು ಪಡೆದು ಒಂದು ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿವೆ. ಇದೇ ನಮ್ಮ ಕರ್ನಾಟಕದ ದನಗಳ ವೈಶಿಷ್ಟ್ಯ.

ಉತ್ತರ ಭಾರತದ ಸಿಂಧಿ, ಗಿರ್, ಹರಿಯಾನ,  ಸಾಹಿವಾಲ, ಥರಪಾರಕರ್ ಮೊದಲಾದ ಜಾತಿಯ ದನಗಳು ಹೈನುದನಗಳೆಂದು ಹೆಸರುವಾಸಿಯಾದರೆ. ಕರ್ನಾಟಕದ ಹಳ್ಳಿಕಾರ್, ಅಮೃತ ಮಹಲ್, ಖಿಲಾರ್, ಗುಜ್ಜಮಾವು, ಬೆಟ್ಟದಪುರ ದನಗಳು ವ್ಯವಸಾಯಕ್ಕೆ ಮತ್ತು ಚಕ್ಕಡಿ ರಸ್ತೆ ಸಾರಿಗೆಯ ಕೆಲಸಗಳಿಗೆ ಪ್ರಖಾತವಾಗಿವೆ. ಇದಕ್ಕಾಗಿಯೇ ನಮ್ಮಲ್ಲಿಯ ರೈತರು ಹೆಚ್ಚಾಗಿ ಈ ದನಗಳನ್ನು ತಮ್ಮ ಹೊಲಮನೆಯ ಕೆಲಸಗಳಿಗಾಗಿ ಮತ್ತು ರಸ್ತೆ ಸಾರಿಗೆಯ ಉಪಯೋಗಕ್ಕಾಗಿ ಬಯಸುತ್ತಾರೆ ಮತ್ತು ಸಾಕುತ್ತಾರೆ ನಮ್ಮಲ್ಲಿ ಮಸಾರಿ (ಕೆಂಪು) ಭೂಮಿ ಹೆಚ್ಚು. ಈ ಮಸಾರಿ ಭೂಮಿಯ ವಿಶೇಷ ಗುಣವೆಂದರೆ ಇದು ನೀರನ್ನು ಬೇಗ ಹಿಡಿದುಕೊಳ್ಳುತ್ತದೆ ಮತ್ತು ಅಷ್ಟೇ ಬೇಗನೆ ಆರಿಹೋಗುತ್ತದೆ. ಹೀಗಾಗಿ ಜಮೀನು ಹಸಿ (ಹದ) ಇರುವಾಗಲೇ ಉಳಬೇಕು ಮತ್ತು ಬಿತ್ತಬೇಕು. ಸ್ವಲ್ಪ ತಡವಾದರೆ ಬಿತ್ತನೆ ಇಕ್ಕಟ್ಟಾಗಿ ಬೆಳೆ ಸರಿಯಾಗಿ ಬರುವುದಿಲ್ಲ. ಆದ್ದರಿಂದ ಭೂಮಿಯಲ್ಲಿ ಹಸಿ ಇರುವಾಗಲೇ ಬಿತ್ತನೆ ಕೆಲಸವನ್ನು ತಡಮಾಡದೆ ತೀವ್ರತೆಯಿಂದ ಅಲ್ಪಾವದಿಯಲ್ಲಿ ಮುಗಿದಬೇಕು. ಇದಕ್ಕೆ ಹಳ್ಳಿಕಾರ್, ಅಮೃತಮಹಲ್, ಖಿಲಾರ‍್ಜಾತಿಯ ದನಗಳೇ ಉತ್ತಮವಾದುವುಗಳು. ಈ ದಿಶೆಯಲ್ಲಿ ಅನುಭವದಿಂದ ತಿಳಿದು ಬಂದಿರುವುದೇನೆಂದರೆ ಒಂದು ಸಾದಾ ಜವಾರಿ ಎತ್ತಿನ ಜೋಡಿ ದಿನದ ೬ ಘಂಟೆಗಳ ದುಡಿತದಲ್ಲಿ ಸಾಧಾರಣವಾದ ಮರದ ರೆಂಟೆಯಿಂದ ಕಾಲು ಎಕರೆ ಭೂಮಿಯನ್ನು ಉಳುತ್ತವೆ. ನಾಲ್ಕು ಎಕರೆ ಭೂಮಿಯನ್ನು ಬಿತ್ತುತ್ತವೆ. ಹಳ್ಳಿಕಾರ್, ಅಮೃತಮಹಲ್, ಖಿಲಾರ ಜಾತಿಯ ದನಗಳು ಇದೇ ವೇಳೆಯಲ್ಲಿ ಕಬ್ಬಿಣ ರೆಂಟೆ (ನೇಗಿಲು) ಯಿಂದ ಅರ್ಧ ಎಕರೆ ಭೂಮಿಯನ್ನು ಉಳುತ್ತವೆ ಮತ್ತು ೮ ರಿಂದ ೧೦ ಎಕರೆ ಭೂಮಿಯನ್ನು ಬಿತ್ತುತ್ತವೆ. ಸಾದಾ ರಸ್ತೆ ಸಾರಿಗೆಯ ಕೆಲಸದಲ್ಲಿ ಒಂದು ಜೊತೆ ಕಗ್ಗಜವಾರಿ ಎತ್ತುಗಳು ಒಂದು ದಿವಸದಲ್ಲಿ ೧೫ರಿಂದ ೨೦ ಮೈಲು ಪ್ರಯಾಣ ಮಾಡಿದರೆ, ಅದೇ ಹಳ್ಳಿಕಾರ್, ಅಮೃತಮಹಲ್ ಅಥವಾ ಖಿಲಾರ ಜಾತಿಯ ದನಗಳು ೩೦ಮೈಲುಗಳು ಪ್ರಯಾಣವನ್ನು ಮಾಡುತ್ತವೆ. ಸ್ವಲ್ಪಕಾಲದಲ್ಲಿ ಹೆಚ್ಚು ಕೆಲಸವನ್ನು ಚುರುಕಿನಿಂದ ತೀವ್ರವಾಗಿ ಮಾಡುವುದೇ ನಮ್ಮ ಕರ್ನಾಟಕದ ದನಗಳ ಒಂದು ವಿಶಿಷ್ಟ ಗುಣ.

ಪಶುಪಾಲನೆ, ಪೋಷಣೆ ಮತ್ತು ತಳಿ ಸಂವರ್ಧನೆ ನಮ್ಮ ದೇಶದಲ್ಲಿ ಬಹು ಪ್ರಾಚೀನ ಕಾಲದಿಂದ ವಂಶಪರಂಪರೆಯಾಗಿ ಸಾಗಿ ಬಂದಿದೆ. ನಮ್ಮಲ್ಲಿಯ ದನಗಳ ಮತ್ತು ಜನಗಳ ಜೀವನ ಬಾಂಧವ್ಯ ಬಹಳ ನಿಕಟವಾಗಿ ಒಂದಕ್ಕೊಂದು ಹೆಣೆದುಕೊಂಡಿವೆ. ಒಂದನ್ನು ಬಿಟ್ಟು ಇನ್ನೊಂದು ಬಾಳಲಾರದು. ಆಕಳು ಉಳಿದರೆ ಭಾರತ ಅಳಿಯಲಾರದು ಆಕಳು ಅಳಿದರೆ ಭಾರತ ಉಳಿಯಲಾರದು. ಈ ಪಶುಪಾಲನಾವೃತ್ತಿ ನಮ್ಮ ಪೂರ್ವಜರಿಗೆ ಹೊಸದೇನಲ್ಲ. ಈ ಜೋಪಾಸನಾಕಲೆ ನಮ್ಮ ಭಾರತದ ನಾಗರೀಕತೆಯಷ್ಟೇ ಪುರಾತನವಾದದ್ದು ಮೊದಲು ಕರ್ನಾಟಕದ ಮೂಲನಿವಾಸಿಗಳಿಗೆ ದನ ಸಾಕಣೆ ಮುಖ್ಯ ಜೀವನೋಪಾಯವಾಗಿತ್ತು. ಸಾಕುಪ್ರಾಣಿಗಳಿಗೆ ಹಿಂಡೇ ಅವರ ಸಂಪತ್ತು ದನಗಳೇ ಅವರ ಧನ. ಈ ದನಗಾರರು ತಮ್ಮ ಹಿಂಡನ್ನು ಒಂದು ಕಡೆ ಕಲೆಹಾಕಿ, ಕೂಡಿ (ದೊಡ್ಡಿ ಅಥವಾ ರೊಪ್ಪದಲ್ಲಿ ಹಾಕಿ) ಬೀಡು ಬಿಡುತ್ತಿದ್ದರು. ಈ ದನಗಳ ಬೀಡಿಗೆ “ಹಟ್ಟಿ” ಎಂದೂ, ಜೋಪಾಸನೆಗಾರರಿಗೆ “ಹಟ್ಟಿಕಾರ”ರೆಂದೂ ಹೆಸರಾಯಿತು. ಇಂದಿಗೂ ಮೈಸೂರು ಮತ್ತು ಮಂಡ್ಯದ ಪ್ರದೇಶಗಳಲ್ಲಿ “ಹಟ್ಟಿ” ಹಾಗೂ “ದೊಡ್ಡಿ”ಯಿಂದ ಕೊನೆಗೊಳ್ಳುವ ಊರಿನ ಹೆಸರುಗಳಿವೆ. ಹಟ್ಟಿಕಾರರೇ ಕರ್ನಾಟಕದ ಮೂಲಪುರುಷರು ಎಂದು ಹೇಳಬಹುದು. ಹಟ್ಟಿಕಾರರ ದನಗಳಿಗೆ “ಹಟ್ಟಿ ದನಗಳು”ಹಳ್ಳಿಕಾರ”ದನಗಳೆಂದು ಹೆಸರು ಬಂದಿರಬಹುದು. ಹಿಂದೂ ಸಂಸ್ಕೃತಿ, ಧರ್ಮದಲ್ಲಿ ಗೋವಿಗೆ ಒಂದು ಪೂಜ್ಯ ಸ್ಥಾನವಿದೆ. ಇಂದಿಗೂ ಸಹ ನಮ್ಮಹಳ್ಳಿಗಳಲ್ಲಿ ಹಟ್ಟಿಯ ಹಬ್ಬವನ್ನು (ದೀಪಾವಳಿಯನ್ನು) ಅತಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಹಟ್ಟಿಯ ಹಬ್ಬ ನಾಡಹಬ್ಬ, ದನಕರುಗಳ ಹಬ್ಬ ಅಂದು ದನಗಳಿಗೆ ಮೈತೊಳೆದು, ಶೃಂಗರಿಸಿ ಗೋಪೂಜೆಯನ್ನು ಮಾಡುತ್ತಾರೆ ಮತ್ತು ಊರಲ್ಲಿ ಮೆರೆಸುತ್ತಾರೆ. ಈ ಹಬ್ಬವನ್ನು ಆಚರಿಸದ ಹಳ್ಳಿಯೇ ಇಲ್ಲ. ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಗುಂಪುಗಟ್ಟಿಕೊಂಡು ಬಸವಣ್ಣನ ಒಂದು ಪ್ರತಿಮೆಯನ್ನು ಪೂಜಿಸಿ, ಅದಕ್ಕೆ ಹುಲ್ಲುಹಾಕಿ, ಬಸವನಕೋಟೆ ಕಟ್ಟಿಕೊಂಡು ಕೋಲು ಹಾಕುತ್ತಾ “ಬಸವಕ್ಕ ಬಸವೆನ್ನಿರೆ ಬಸವನ ಪಾದಕ ಶರಣನೆನ್ನಿರೆ. ಒಂದು ಸುತ್ತಾನ ಕೋಟೆ, ಅದರೊಳಗೊಂದು ಚಂದದ ಬಸವ”ಎಂದು ಜಾನಪದ ಹಾಡನ್ನು ಹಾಡುತ್ತಾ ಆಡುವುದು ಇಂದಿಗೂ ಸಹ ಹಳ್ಳಿಗಳಲ್ಲಿ ರೂಢಿಯಲ್ಲಿದೆ. ಇಂದಿನ ಸಾಮಾಜಿಕ ಜೀವನದಲ್ಲಿ ದನಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಬರಬರುತ್ತಾ ಈ ಹಟ್ಟಿಕಾರರು ತಮ್ಮ ದನಗಳ ಹಿಂಡನೊಂದಿಗೆ ಕೆಲವು ಸ್ಥಳದಲ್ಲಿ ನೆಲೆಯೂರಿ ನಿಂತರು. ತೋಟ ಮಾಡಿ ವ್ಯವಸಾಯದಿಂದ ಜೀವನವನ್ನು ಸಾಗಿಸುತ್ತ ಬಂದರು. ಮುಂದೆ ಅವು ಬೆಳೆದು ಊರುಗಳಾದವು. ಈ ಪ್ರಕಾರ ದನಗಾರರು ಬರಬರುತ್ತಾ ರೈತರಾದರು : ಹಳ್ಳಿಗಳು ಬೆಳೆದು ಬಂದವು. ಇಂದಿನ ಸಮಾಜ ಬೆಳವಣಿಗೆಗೆ ಆಕಳೇ ಅಡಿಗಲ್ಲು.

ಋಗ್ವೇದದಲ್ಲಿ ಸಿಂಧೂ ನದಿಯ ಉಪನದಿಯಾದ “ಗೋಮಾಲ”ನದಿಯ ತೀರ ಪ್ರದೇಶದಲ್ಲಿ ಉತ್ತಮವಾದ ದನಗಳ ಹಿಂಡು ಇತ್ತೆಂದು ಹೇಳಲಾಗಿದೆ. ಕ್ರಿ. ಪೂ. ೩೦೦ ರಲ್ಲಿ ಸಿಂಧೂ ನದಿಯ ತಪ್ಪಲು ಪ್ರದೇಶದಲ್ಲಿ ನಾಗರೀಕತೆ ಬಹಳ ಉನ್ನತಾವಸ್ಥೆಯಲ್ಲಿತ್ತೆಂದು ಹರಪ್ಪಾ ಮೊಹಂಜೊದಾರೊಗಳಲ್ಲಿ ಸಿಕ್ಕಿರುವ ಪುರಾತನ ಅವಶೇಷಗಳಿಂದ ತಿಳಿದುಬರುತ್ತದೆ. ಅಲ್ಲಿ ಸಿಕ್ಕಿರುವ ದನಗಳ ಮುದ್ರೆ ಮತ್ತು ಎಲುಬುಗಳಿಂದ ಅಲ್ಲಿಯ ಆಗಿನ ಕಾಲದ ದನಗಳು ಇಂದಿನ ಉತ್ತರ ಇಂಡಿಯಾದಲ್ಲಿಯ ಎತ್ತರವಾದ ನೆರೆ ಬಣ್ಣದ ದೊಡ್ಡ ಹೆಗಲಿನ (ದಪ್ಪ ಇಣಿಯ), ಉದ್ದಕೋಡಿನ ದನಗಳನ್ನು ಬಹುಮಟ್ಟಿಗೆ ಹೋಲುತ್ತವೆ. ಎಂದು ಹೇಳಬಹುದು. ಈ ದನಗಳ ಹಿಂಡಿನ ಜೋಪಾಸನೆಗಾರರು ಸಿಂಧೂನದಿಯ ಫಲವತ್ತಾದ ಪ್ರದೇಶ ಸಿಂಧ್ ಪ್ರಾಂತ, ಉತ್ತರ ಗುಜರಾತ್ ರಾಜಪುತಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿದ್ದರು. ಇವರಲ್ಲಿ ಗುಜರಾತಿನ “ರಾಭಾರಿ”ಮತ್ತು “ಭೇರ ನಾಡಿಯರು”, ಅಹಮದ್ ನಗರದ “ದನಗಾರರು”, ಖಾನದೇಶದ “ವನಜಾರಿಗಳು” ಹೆಸರುವಾಸಿಯಾದವರು. ಕಾಲಕ್ರಮೇಣ ಈ ಉತ್ತರ ಭಾರತದ ದನಗಾರರು ತಮ್ಮ ದನಗಳ ಹಿಂಡನೊಡನೆ ಸಂಚರಿಸುತ್ತ ದಕ್ಷಿಣಾಭಿಮುಖವಾಗಿ ಕೆಳಗೆ ಇಳಿದು ಮೈಸೂರು ಪ್ರದೇಶಕ್ಕೆ ಬಂದು ನೆಲೆಸಿರಬಹುದು ಎಂದು ಪ್ರಾಣಿ ಸಂಶೋಧಕರು ಅಭಿಪ್ರಾಯಪಡುತ್ತಾರೆ. ಹೀಗೆ ಮೈಸೂರಿಗೆ ಬಂದವರನ್ನು “ಗೊಲ್ಲರು” ಎಂದು ಕರೆಯುಲಾಯಿತು “ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟಕ ದೇಶದಿ ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂದು ಪೇಳುವೆ” ಎಂಬ ಪದ್ಯದಲ್ಲಿ “ಗೊಲ್ಲ ” ಶಬ್ದದ ಉಲ್ಲೇಖವಿದೆ. “ಗೊಲ್ಲ” ಎಂದರೆ ತಮ್ಮ ಆಕಳುಗಳ ಹಿಂಡನ್ನು ಕಟ್ಟಿಕೊಂಡು ಅವುಗಳ ಪಾಲನೆಗಾಗಿ ಒಂದು ಸ್ಥಳದಿಂದ ಮತ್ತೋಂದು ಸ್ಥಳಕ್ಕೆ ಹುಲ್ಲುಗಾವಲು, ನೀರು ಮತ್ತು ಹವಾಮಾನದ ಅನುಕೂಕಲತೆಯಿದ್ದ ಸ್ಥಳಗಳನ್ನು ಹುಡುಕಿಕೊಂಡು ತಿರುಗುತ್ತಿದ್ದರು. ಹೀಗೆ ತಿರುಗುವಾಗ ಯಾವ ದನಗಳು ಅನೇಕ ಅನಾನೂಕೂಲ ಸನ್ನಿವೇಶಗಳನ್ನು ಕಠಿಣ ಪರಿಸ್ಥಿತಿಯನ್ನು ಸಹಿಸುವ ಶಕ್ತಿ ಸಾಹಸವನ್ನು ಹೊಂದಿರುತ್ತಿದ್ದವೋ ಅಂಥವು ಮಾತ್ರ ಬದುಕಿ ಬಾಳುತ್ತಿದ್ದವು ಇದನ್ನೇ ಡಾರ್ವಿನ್ “ಬಲಿಷ್ಠರ ಉಳಿವು” ಎಂದು ಕರೆದನು. ಆವರಣಕ್ಕೂ ಜೀವನಕ್ಕೂ ನಿಕಟ ಸಂಬಂಧವುಂಟು. ಆವರಣಕ್ಕೆ ತಕ್ಕಂತೆ ಜೀವನ ಮಾರ್ಪಾಟಾಗುತ್ತದೆ. ಯಾವ ಪ್ರಾಣಿಗಳಿಗೆ ಈ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಮರ್ಥ್ಯವಿಲ್ಲವೋ ಅಂಥವು ಸಾಯುತ್ತಿದ್ದವು. ಪ್ರಕೃತಿಯ ಈ ಕೈವಾಡವನ್ನು ಡಾರ್ವಿನ್ “ಪ್ರಕೃತಿ ಆಯ್ಕೆ”ಎಂದು ಹೇಳಿರುವುದು. ಇಂಥ ಪರಿಸ್ಥಿತಿಗೆ ಹೊಂದಿಕೊಂಡು ಬಾಳಿದ ದನಗಳಲ್ಲಿ ಬೇನಯನ್ನು ತಡೆಯುವ ಶಕ್ತಿ ಸೆಡವು ವರ್ದಿಸಿತ್ತು ಆಗಿನ ಕಾಲದಲ್ಲಿ ಈಗಿನಂತೆ ಬೇರೆಬೇರೆ ಭಾಗಗಳಿಗೆ ದೊಡ್ಡ ಮಾರ್ಗಗಳ ಅನುಕೂಲತೆ ಮತ್ತು ಸಾಗಾಟಕ್ಕೆ ವಾಹನ ಸೌಕರ್ಯ ಇರಲಿಲ್ಲವಾದುದರಿಂದ ಇಂದಿನಂತೆ ಜನರಲ್ಲಿ ಹೆಚ್ಚು ಬಳಕೆ ಇರಲಿಲ್ಲ. ಆಗಿನ ಕಾಲದಲ್ಲಿ ಕಳ್ಳಕಾಕರ ಹಾವಳಿಯಿಂದ ಸುರಕ್ಷತೆ, ಭದ್ರತೆ ಇರಲಿಲ್ಲ. ಹೀಗಾಗಿ ಆಯಾ ಜಾತಿಯ ದನಗಳು ತಮ್ಮ ತಮ್ಮ ಪ್ರದೇಶದಲ್ಲಿಯೇ ಶುದ್ಧವಾಗಿ ಉಳಿದು ಬೆಳೆದು ತಮ್ಮದೇ ಆದ ಒಂದು ವಿಶಿಷ್ಟ ಜಾತಿಯನ್ನು ಸ್ಥಾಪಿಸಿಕೊಂಡವು. ಹೀಗಾಗಿ ಭಾರತದಲ್ಲಿ ಇಂದಿಗೂ ಉತ್ತಮ ಜಾತಿಯ ಸ್ಥಳಿಕ ದನಗಳನ್ನು ನಾವು ಕಾಣಬಹುದು.

ಉತ್ತರ ಭಾರತದ ಕಡೆಯಿಂದ ಜೋಪಾಸನೆಗಾರರು ತಮ್ಮ ಜೊತೆಯಲ್ಲಿ ತಂದ ದನಗಳು ಮೈಸೂರು ದೇಶದ ಅಂದಿನ ಸ್ಥಳಿಕ “ಹಳ್ಳಿಕಾರ” ದನಗಳೊಂದಿಗೆ ಬೆರೆತುದರ ಪರಿಣಾಮವಾಗಿ ಉತ್ತಮ ದನಗಳು ಸಂವರ್ಧಿಸಿದವು. ಹೀಗೆ ಮೂಲ ಹಳ್ಳಿಕಾರ್ ದನಗಳಿಂದ ಉತ್ಪನ್ನವಾದ ತಳಿದನಗಳಲ್ಲಿ “ಗುಜ್ಜಮಾವು”, ಬೆಟ್ಟದಪುರದ ದನ” ಮಹದೇಶ್ವರ ಬೆಟ್ಟದ ದನ” ಘಾಟಿಸುಬ್ರಹ್ಮಣ್ಯದ ದನ” ಮೊದಲಾದ ದನಗಳು ಇಂದಿಗೂ ಜನಪ್ರಿಯವಾಗಿವೆ. ಹೀಗೆ ನೂರಾರು ವರ್ಷಗಳ ಸಂಗೋಪಾನೆ, ಪಾಲನೆ, ಪೋಷಣೆ ಮತ್ತು ಸನ್ನಿವೇಶಗಳ ಪರಿಣಾಮದ ಫಲವೇ ಇಂದು ನಾವು ನೋಡುತ್ತಿರುವ ಶ್ರೇಷ್ಠ ಜಾತಿಯ ದನಗಳು. ಈ ಜಾತಿಯ ದನಗಳನ್ನು ಇಂದಿಗೂಸಹ ಹಾಸನ, ಅರಕಲಗೂಡು, ಹುಣಸೂರು, ಕೃಷ್ಣರಾಜನಗರ, ಶ್ರೀರಂಗಪಟ್ಟಣ, ಮದ್ದೂರು ನಾಗಮಂಡಲ, ಮಂಡ್ಯ, ಪಾಂಡವಪುರ ಈ ಭಾಗಗಳಲ್ಲಿ ಕಾಣಬಹುದು. ಕಾವೇರಿ ನದಿ ಪೋಷಿತ ಭಾಗವು ತಳಿಯ ತೌರೂರು, ಹೇಮಗಿರಿ, ಚುಂಚನಕಟ್ಟೆ. ಮಹದೇಶ್ವರ ಬೆಟ್ಟ, ಹಾಸನ, ರಾಮನಾಥಪುರ, ರಾಂಪುರ, ದೇವರಗುಡ್ಡ ಮೊದಲಾದ ದನಗಳ ವಾರ್ಷಿಕ ಜಾತ್ರೆಯಲ್ಲಿ ಅಧಿಕ ಸಂಖ್ಯೆಯಲ್ಲಿ ದನಗಳು ಸೇರುತ್ತವೆ. ಅಮೃತ ಮಹಲ್ ದನಗಳಿಂದ ಉತ್ಪನ್ನವಾದ ಉಪಶಾಖೆಯ ದನಗಳನ್ನು ತರೀಕೆರೆ, ಕಡೂರು, ಅಜ್ಜಂಪುರ, ಹೊಳಲಕೆರೆ, ಬೀರೂರು, ಅರಸೀಕೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಹೊನ್ನಾಳಿ, ಈಭಾಗಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೋಡಬಹುದು. ಇಂದು ಈ ಮೂಲ ದನಗಳ ಜೋಪಾಸನೆಗಾರರಾದ “ಹಟ್ಟಿಕಾರ್” ಮತ್ತು ಗೊಲ್ಲರ” ಹೆಸರು ಕೇಳಿ ಬರದಿದ್ದರೂ ಮೈಸೂರು ದೇಶದಲ್ಲಿ ಈ “ಹಳ್ಳಿಕಾರ್” ದನಗಳ ಹೆಸರು ಇವತ್ತಿಗೂ ಜನಪ್ರಿಯವಾಗಿ ಉಳಿದುಕೊಂಡು ಬಂದಿದೆ. ಈ ದನಗಳಿಗೆ “ಅಮೃತ ಮಹಲ್”ಎಂಬ ಹೆಸರನ್ನು ಟಿಪ್ಪು ಸುಲ್ತಾನನು ಇರಿಸಿದನೆಂದು ಚರಿತ್ರೆ ಹೇಳುತ್ತದೆ.

ವಿಜಯನಗರದ ಸಾಮ್ರಾಜ್ಯದ ವೈಭದ ಕಾಲವಾದ ೧೬ ನೆಯ ಶತಮಾನದಲ್ಲಿ (ಸುಮಾರು ೧೫೭೨-೧೬೦೦ ರಲ್ಲಿ)

ಶ್ರೀರಂಗಪಟ್ಟಣದಲ್ಲಿ ವಿಜಯನಗರದ ರಾಯಭಾರಿ ತನ್ನ ಆಡಳಿತೆಯ ಸುಭದ್ರತೆ, ಸುರಕ್ಷತೆ ಮತ್ತು ಅನುಕೂಲಕ್ಕಾಗಿ, ವಿಜಯನಗರದ ಕರುಗಟ್ಟಿಯಿಂದ ಉತ್ತಮ ದನಗಳ ಹಿಂಡನ್ನು ತರಿಸಿಕೊಂಡನೆಂದು ಹಾ‌ಗೂ ಈ ದನಗಳೊಂದಿಗೆ ಆಗ ಮೈಸೂರಲ್ಲದ್ದ ಸ್ಥಳಿಕ ದನಗಳು ಬೆರೆತು ಅವುಗಳಿಂದ ಹುಟ್ಟಿದ ಪೀಳಿಗೆಯೇ ಇಂದು ಲೋಕಪ್ರಸಿದ್ಧವಾದ ಅಮೃತ ಮಹಲ್ ದನಗಳು. ಈ ದನಗಳಿಗೆ “ಅಮೃತ ಮಹಲ್” ಎಂಬ ಹೆಸರನ್ನುಟಿಪ್ಪು ಸುಲ್ತಾನನು ಇರಿಸಿದನೆಂದು ಚರಿತ್ರೆ ಹೇಳುತ್ತದೆ           ಈ ಅಮೃತ ಮಹಲ್ ದನಗಳು ಮೊದಲು ಕಾಡುಪ್ರಾಣಿಗಳಂತಿದ್ದವು. ಈ ದನಗಳ ತಳಿಯನ್ನು ಕ್ರಮೇಣ ಸುಧಾರಿಸಿ, ಸಾಧುಮಾಡಿ, ಸಂವರ್ಧನೆ ಮಾಡಿ ಬೆಳೆಸಿದ ಶ್ರೇಯಸ್ಸು ಬಹಳ ಮಟ್ಟಿಗೆ ಮೈಸೂರು ಅರಸರಿಗೆ ಸಲ್ಲುತ್ತದೆ. ೧೬೧೭-೧೬೩೬ ರವರೆಗೆ ರಾಜ್ಯವಾಳಿದ ಚಾಮರಾಜ ಒಡೆಯರವರು  ೧೬೩೮-೧೬೫೮ ರವರೆಗೆ ಆಳಿದ ಕಂಠೀರವ ನರಸರಾಜ ಒಡೆಯರು ಈ ಅಮೃತ ಮಹಲ್ ದನಗಳ ಅಭಿವೃದ್ಧಿಗೆ ಬಹಳ ಆಸಕ್ತಿ ಮತ್ತು ಶ್ರಮ ವಹಿಸಿದ್ದರು. ೧೬೭೨-೧೭೦೪ ರವರೆಗೆ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಈ ದನಗಳ ಸುಧಾರಣೆ ತನ್ನ ವೈಭವದ ಶಿಖರವನ್ನು ಮುಟ್ಟಿತ್ತು ಎಂದು ಹೇಳಬಹುದು. ಇವರ ಆಳ್ವಕೆಯಲ್ಲಿ ಈ ದನಗಳ ಹಿಂಡು “ಬೆಣ್ಣೆ ಚಾವಡಿ” ಎಂಬ ಅಂಕಿತದಿಂದ ಸರ್ಕಾರದ ಆಡಳಿತಕ್ಕೆ ಒಳಪಟ್ಟಿತು. ಅವುಗಳು ಮೇಯುವುದರ ಸಲುವಾಗಿ ದೊಡ್ಡ ಹುಲ್ಲುಗಾವಲುಗಳು ಕಾದಿಡಲ್ಪಟ್ಟವು. ಹೀಗೆ ಕಾದಿಟ್ಟ ಹುಲ್ಲುಗಾವಲುಗಳ ಸಂಖ್ಯೆ ೨೪೦ ಹಾಗು ಅವುಗಳ ಒಟ್ಟು ವಿಸ್ತೀರ್ಣ ೪, ೧೩, ೫೩೯ ಎಕರೆ ಎಂದು ಹೇಳಲಾಗಿದೆ. ಈ ಹುಲ್ಲುಗಾವಲುಗಳು ಇಂದಿಗೂ ಸಹ “ಅಮೃತ ಮಹಲ್ ಕಾವಲು”ಗಳೆಂದು ಸರ್ಕಾರದ ವಶದಲ್ಲವೆ. ಈ ಕಾವಲಿನಲ್ಲಿರುವ ದನಗಳಿಗೆ ಗುರುತಿಗಾಗಿ “ದೆ” ಎಂದು ಮುದ್ರೆ ಹಾಕಲಾಗುತ್ತಿತ್ತು ಕಾವಲಿನಲ್ಲಿಯ ದನಗಳ ಪಾಲನೆ, ಪೋಷಣೆ ಹಾಗೂ ಸಂವರ್ಧನೆ ವ್ಯವಸ್ಥಿತ ರೀತಿಯಿಂದ ಸಾಗಲು ಸರ್ವೆಗಾರ, ಕಾವಲುರೇಂಜರ್, ಕಾವಲುಗಾರ ಎಂಬ ಸಿಬ್ಬಂದಿಗಳನ್ನು ನೇಮಿಸಲಾಗುತ್ತಿತ್ತು. ಈ ಪದ್ಧತಿ ಇನ್ನೂ ಜಾರಿಯಲ್ಲಿ ಉಳಿದು ಬಂದಿದೆ.

ಹೀಗೆ ಮೈಸೂರು ಅರಸರು ಅಭಿವೃದ್ಧಿಗೊಳಿಸಿದ ಗೋಸಂಪತ್ತು ಅವರ ನಂತರ ಹೈದರನ ವಶವಾಯಿತು. ಹೈದರಾಲಿಯ ಕಾಲದಲ್ಲಿ ಅವನ ಹತ್ತಿರ ೬೦, ೦೦೦ ದನಗಳಿದ್ದವು ಎಂದು ಹೇಳಲಾಗಿದೆ. ಹೈದರಾಲಿಯು ತಾನು ಗೆದ್ದ ತರೀಕೆರೆ, ಚಿತ್ರದುರ್ಗ, ಪಾಳೆಗಾರರಿಂದ ಮತ್ತು ತಿರುಚನಾಪಳ್ಳಿ ಮೊದಲಾದ ಸ್ಥಳಗಳಿಂದ ದನಗಳನ್ನು ಹಿಡಿದು ತಂದು ತನ್ನ ಹಿಂಡಿಗೆ ಕೂಡಿಸಿದನು. ಈ ದನಗಳು ತಂಜಾವೂರು ಮತ್ತು ತಿರುಚನಾಪಲ್ಲಿಯಲ್ಲಿ “ಪೂರ್ಣಯ್ಯ”ನ ದನಗಳೆಂದು ಜನಪ್ರಿಯವಾಗಿವೆ.

ಹೈದರಾಲಿಯ ನಂತರ ಅವನ ಮಗ ಟಿಪ್ಪು ಸುಲ್ತಾನನು ಹಾಗಲವಾಡಿ ಮೊದಲಾದ ಪಾಳೆಯಗಾರರ ಮೇಲೆ ದಂಡೆತ್ತಿ ಹೋಗಿ ಅವರಲ್ಲಿದ್ದ ದನಗಳನ್ನು ಹಿಡಿದು ತಂದು ತನ್ನ ಹಿಂಡಿಗೆ ಸೇರಿಸಿದನು. “ಬೆಣ್ಣೆ ಚಾವಡಿ” ಎಂಬ  ಹೆಸರನ್ನು ಬದಲಾಯಿಸಿ “ಅಮೃತ ಮಹಲ್” ದನಗಳೆಂದು ನಾಮಕರಣ ಮಾಡಿದನು, ಟಿಪ್ಪು ಸುಲ್ತಾನನು ಈ ದನಗಳ ಆಡಳಿತೆಗಾಗಿ ಒಂದು ಆದೇಶ ಹೊರಡಿಸಿ ಅಮೃತ ಮಹಲ್ ಇಲಾಖೆಯನ್ನು ಪುನರ್ವ್ಯವಸ್ಥೆಗೊಳಿಸಿ, ಈ ದನಗಖ ದಾಖಲೆಯನ್ನು ಇಡಿಸಿದನು. ವರ್ಷಕ್ಕೊಂದಾವರ್ತಿ ಅವುಗಳ ತಪಾಸಣೆ ಕೆಲಸವನ್ನು ನಡೆಸುತ್ತಿದ್ದನು. ಈ ಪ್ರಕಾರ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಸ್ಥಾಪಿತವಾದ “ಬೆಣ್ಣೆ ಚಾವಡಿ” ದನಗಳ ಇಲಾಖೆಯು ಹೈದರಾಲಿಯ ಕಾಲದಲ್ಲಿ ಅಭಿವೃದ್ಧಿ ಹೊಂದಿ, ಟಿಪ್ಪು ಸುಲ್ತಾನನ ಕಾಲದಲ್ಲಿ ಸರಿಯಾದ ಆಡಳಿತ ವ್ಯವಸ್ಥೆಯಿಂದ ಪ್ರಗತಿಗೊಂಡು ಅಭಿವೃದ್ಧಿಯಾಯಿತು.

ನಾಲ್ಕನೆಯ ಮೈಸೂರು ಯುದ್ಧದಲ್ಲಿ ಶ್ರೀರಂಗಪಟ್ಟಣವು ಬ್ರಿಟಿಷರ ವಶವಾಯಿತು. ಬ್ರಿಟಿಷ್ ಸರ್ಕಾರದವರು ವರ್ಷಕ್ಕೆ ತಮಗೆ ಕೆಲವು ದನಗಳನ್ನು ಕೊಡುವ ಕರಾರಿನ ಮೇಲೆ ಈ ಅಮೃತ ಮಹಲ್ ಇಲಾಖೆಯನ್ನು ಮೈಸೂರು ಆಡಳಿತಕ್ಕೆ ಒಪ್ಪಿಸಿಕೊಟ್ಟರು. ಆದರೆ ೧೩ ವರ್ಷಗಳ ನಂತರ ೧೮೧೩ ರಲ್ಲಿ ಈ ಇಲಾಖೆಯ ವ್ಯವಸ್ಥೆಯನ್ನು ನೋಡಿಕೊಳ್ಳಲು ಮದರಾಸಿನ ಕಮಿಷನರ್ ಆದ ಕ್ಯಾಪ್ಟನ್ ಹಾರ್ವೆ ಎಂಬುವರನ್ನು ನೇಮಿಸಿದರು. ಪುನಃ ೧೮೪೦ ರಲ್ಲಿ ಅದನ್ನು ಮೈಸೂರು ಕಮಿಷನರಿಗೆ ಬಿಟ್ಟುಕೊಟ್ಟರು. ಆದರೆ ೧೮೬೦ ರಲ್ಲಿ ಬ್ರಿಟಿಷ್ ಕಮೀಷನರಾದ ಸರ್ ಚಾರ್ಲ್ಸ ಟ್ರಿವಿಲಿಯನ್ ತಪ್ಪು ಆರ್ಥಿಕ ದೃಷ್ಟಿಯಿಂದ ಈ ಹಿಂಡನ್ನು ಒಡೆದು ಮಾರಾಟ ಮಾಡಿದರು. ಹೀಗೆ  ಮಾರಿದ ದನಗಳನ್ನು ಈಜಿಪ್ಟಿನ  ಪಾಷಾ ಕೊಂಡು ತನ್ನ ದೇಶಕ್ಕೆ ತೆಗೆದುಕೊಂಡು ಹೋದನು . ಪುನಃ ೧೮೬೬ ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರವರು ಮೈಸೂರಿನಲ್ಲಿಯ ದನಗಳನ್ನು ಆರಿಸಿ ಕೂಡಿಸಿ, ಪುನಃ ಹಿಂಡನ್ನು ಸ್ಥಾಪಿಸಿದರು. ಹೀಗೆ ಆರಿಸಿದ ಹಿಂಡಿನ ದನಗಳಲ್ಲಿ ಮೊದಲಿನ ಹಿಂಡಿನ ದನಗಳ ತಳಿಯ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲಾಗಲಿಲ್ಲಿ ಈ ಪ್ರಕಾರ ಸೇರಿಸಿದ ೪೦೦೦ ಆಕಳುಗಳನ್ನು ಮತ್ತು ೧೦೦ ಹೋರಿಗಳನ್ನು ೧೮೭೦ ರಲ್ಲಿ  ಮದರಾಸ್ ಸರ್ಕಾರದವರು ತಮ್ಮ ವಶಕ್ಕೆ ತೆಗೆದುಕೊಂಡು ಪುನಃ ೧೮೮೩ ರಲ್ಲಿ ಮೈಸೂರು ಮಹಾರಾಜರಿಗೆ ೨, ೨೫, ೦೦೦ ರೂಪಾಯಿಗಳಿಗೆ ಮಾರಿದರು. ಅಂದಿನಿಂದ ಈ ದನಗಳ ಸಂತೆ ಮೈಸೂರು ಸರ್ಕಾರದ ವಶದಲ್ಲಿ ಉಳಿದುಕೊಂಡಿದೆ. ೧೯೨೦ ರಲ್ಲಿ ಈ ಅಮೃತ ಮಹಲ್ ಇಲಾಖೆಯನ್ನು ವ್ಯವಸಾಯ ಖಾತೆಯ ಡೈರೆಕ್ಟರವರ ಅಧಿಕಾರಕ್ಕೆ ಸೇರಿಸಲಾಯಿತು. ಆ ನಂತರ ಕೆಲವು ವರ್ಷಗಳ ಮೇಲೆ ಈ ಅಮೃತ ಮಹಲ್ ಇಲಾಖೆಯನ್ನು ವ್ಯವಸಾಯ ಖಾತೆಯಿಂದ ಬದಲಾಯಿಸಿ, ಪಶುಪಾಲನಾ ಇಲಾಖೆಯ ಡೈರೆಕ್ಟರ್ ರವರ ಅಧಿಕಾರಕ್ಕೆ ಒಳಪಡಿಸಲಾಯಿತು. ಅಂದಿನಿಂದ ಇದು ಪಶುಪಾಲನಾ ಇಲಾಖೆಯ ಡೈರೆಕ್ಟರ್ ಅವರ ಅಧಿಕಾರ ವ್ಯಾಪ್ತಿಯಲ್ಲಿ ಉಳಿದುಕೊಂದೆ. ಇವುಗಳ ಅಭಿವೃದ್ಧಿಗಾಗಿ ಪಶುಪಾಲನಾ ಇಲಾಖೆಯವರು ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಅಜ್ಜಂಪುರ, ಹೆಬ್ಬಾಳ. ಹೆಸರಘಟ್ಟ, ಕೂಡಿಗೆ, ಕುರಿಕುಪ್ಪೆ, ಮುನಿರಾಬಾದ, ಬಂಕಾಪುರ, ತೇಗೂರು ಮೊದಲಾದ ಸ್ಥಳಗಳಲ್ಲಿ ದನಗಳ ಕೇಂದ್ರಗಳನ್ನು ಸ್ಥಾಪಿಸಿ ಹೆಚ್ಚಿನ ಅಭಿವೃದ್ಧಿ ಮತ್ತು ಆಧುನಿಕ ವೈಜ್ಞಾನಿಕ ಸಂಶೋಧನೆಯ ಕಾರ್ಯಗಳನ್ನು ಮುಂದುವರಿಸಿರುತ್ತಾರೆ.

ಹೈದರಾಲಿ ಮತ್ತು ಟಿಪ್ಪುವಿನ ಜಯಗಳಿಗೆ ಈ ಅಮೃತ ಮಹಲ್ ದನಗಳೇ ಮುಖ್ಯ ಸಾಧನಗಳಾಗಿದ್ದವು. ಹೈದರಾಲಿಯು ಈ ದನಗಳ ಸಹಾಯದಿಂದ ೨ ೧/೨ ದಿವಸಗಳಲ್ಲಿ ೧೦೦ ಮೈಲುಗಳನ್ನು ನಡೆದು ಚಿದಂಬರ ಮುತ್ತಿಗೆಯನ್ನು ಬಿಡುಗಡೆ ಮಾಡಿದನು. ಅಲ್ಲಿಂದ ಹಿಂದಿರುಗುವಾಗ ಈ ದನಗಳು ದೊಡ್ಡ ತೋಪುಗಾಡಿಗಳನ್ನು ಎಳೆದುಕೊಂಡು, ದಿವಸಕ್ಕೆ ೪೦ ಮೈಲು ದೂರ ಪ್ರಯಾಣ, ಮಾಡಿ ಶತ್ರುಗಳಿಗೆ ಆಶ್ಚರ್ಯವನ್ನುಂಟುಮಾಡಿದವು ಹಾಗೂ ಟಿಪ್ಪು ಸುಲ್ತಾನನು ಬಿದನೂರು ವಶಪಡಿಸಿಕೊಳ್ಳಲು ಈ ದನಗಲು ೬೩ ಮೈಲುಗಳನ್ನು ೨ ದಿವಸಗಳಲ್ಲಿ ಜನರಲ್ ಮೆಡಾಸ್ ಮುಟ್ಟುವುದಕ್ಕಿಂತ ಮುಂಚಿತವಾಗಿ ಮಿಂಚಿನ ವೇಗದಲ್ಲಿ ಸಾಗಿ ಮುಟ್ಟಿದುದೇ ಕಾರಣವೆಂದು ಚರಿತ್ರೆಯಿಂದ ತಿಳಿದು ಬಂದಿದೆ.

೧೮೧೮ ರಲ್ಲಿ ಮೈಸೂರು ಕಮೀಶನರೇಟರವರು ಈ ದನಗಳ ಬಗ್ಗೆ – “ಅವು ಚಪಲತೆಯುಳ್ಳವು, ಹುರುಪಿನವು ಹಾಗೂ ಸಿಟ್ಟಿನ ದನಗಳೆಂದೂ, ಅರಬ್ಬಿ ದೇಶದ ಕುದುರೆಗಳು ತಮ್ಮದೇ ಆದ ಒಂದು ಶ್ರೇಷ್ಠತೆಯನ್ನು ಪಡೆದಿರುವಂತೆ ಈ ಅಮೃತ ಮಹಲ್ ದನಗಳು ತಮ್ಮದೇ ಆದ ಒಂದು ಶ್ರೇಷ್ಠತೆಯನ್ನು ಸ್ಥಾಪಿಸಿರುತ್ತವೆ.” ಎಂದು ಪ್ರಶಂಸಿಸಿರುತ್ತಾರೆ ೧೮೪೨ ರಲ್ಲಿ ಕ್ಯಾಪ್ಟನ್ ಡೇವಿಸನ್ ಆಫ್ಘಾನಿಸ್ತಾನದಲ್ಲಿ ತಮ್ಮ ಪಡೆಗೆ ಸೇರಿಸಿದ್ದ ಅಮೃತ ಮಹಲ್ ದನಗಳ ಬಗ್ಗೆ “ಇವು ಟೇರಿಯೋ ಬೆಟ್ಟಗಳ ಕಡಿದಾದ ಕಂದರುಗಳಿಂದ ಹಿಂದಿರುಗುವಾಗ ೧೬ ಘಂಟೆಗಳ ಕಾಲ ಸತತ ನೊಗದಲ್ಲಿ ಹೂಡಿದಗ್ಯೂ ಸಹ ಸ್ವಲ್ಪವೂ ಧೃತಿಗೆಡದೆ ಹುಮ್ಮಸ್ಸಿನಲ್ಲಿ ಕುಗ್ಗದೆ ದಾರಿಯನ್ನು ದಾಟಿ ಬೇರೆ ದನಗಳಂತೆ ಸೋಲದೆ ತಮ್ಮ ಶ್ರಷ್ಟತೆಯನ್ನು ತೋರಿಸಿರುತ್ತವೆ, ಎಂದು ಹೇಳಿರುತ್ತಾರೆ.

ಮೊದಲನೆಯ ಮಹಾ ಯುದ್ಧದಲ್ಲಿ (೧೯೧೪-೧೮) ಬಾಗ್ದಾದ ಜನರಲ್ ಕಮಾಂಡಿಂಗ್ ಆಫೀಸರರು ಮೆಸಪೊಟೋಮಿಯಾಕ್ಕೆ ಹೋದ ಅಮೃತಮಹಲ್ ದನಗಳ ಬಗ್ಗೆ ಈ ದನಗಳು ಒಂಟೆಗಿಂತ ವೇಗವಾಗಿ ನಡೆಯಬಲ್ಲವೆಂದೂ, ಕಣಿವೆ ದಾರಿಗಳನ್ನು ಮತ್ತು ಸಣ್ಣ ಸಣ್ಣ ಸೇತುವೆಗಳನ್ನು ದಾಟುವಾಗ ತಮ್ಮ ಜಾಗರೂಕತೆ ಹಾಗೂ ಜಾಣತನವನ್ನು ತೋರಿಸುತ್ತವೆಯಲ್ಲದೆ ಆಹಾರ ಅಭಾವ ಬಿದ್ದಾಗ ಮತ್ತು ಪ್ರತಿಕೂಲ ಹವಾಮಾನಗಳಿಗೂ ಸಹ ಹೊಂದಿಕೊಳ್ಳುವ ಒಂದು ವಿಶಿಷ್ಟ ಗುಣವನ್ನು ಹೊಂದಿರುತ್ತವೆ.” ಎಂದು ಉಲ್ಲೇಖಿಸಿರುತ್ತಾರೆ.

ಈ ದನಗಳ ಮುಖ್ಯ ಲಕ್ಷಣಗಳೆಂದರೆ ಇವು ಮೈಕಟ್ಟಿನಲ್ಲಿ ಆಕಾರದಲ್ಲಿ ಮತ್ತು ಗಾತ್ರದಲ್ಲಿ ಹೆಚ್ಚು ದಪ್ಪ ಅಥವಾ ತೆಳು ಇಲ್ಲದೆ ಸಮತೋಲನವಾಗಿದ್ದು ಸ್ವಲ್ಪ ಹೆಚ್ಚು ಕಡಿಮೆ ಜೂಜಿನ ಕುದುರೆಗಳನ್ನು ಹೋಲುತ್ತವೆ, ಬಣ್ಣದಲ್ಲಿ ಬಿಳಿಯ ಬಣ್ಣದಿಂದ ಕಪ್ಪುಮಿಶ್ರಿತ ಬೂದಿ ಬಣ್ಣದವರೆಗೆ ಕೂಡಿರುತ್ತವೆ. ಹೋರಿಗಳ ಮಧ್ಯಭಾಗವು ತಿಳಿಯಾಗಿದ್ದು ಕುತ್ತಿಗೆ ಇಣಿಉ (ಹೆಗಲ) ಭಾಗ ಮತ್ತು ಚಪ್ಪೆಯ ಮೇಲೆ ಹೆಚ್ಚು ಕಪ್ಪು ಬಣ್ಣದಿಂದ ಕೂಡಿರುತ್ತವೆ. ಹೋರಿಗಳಲ್ಲಿ ಇಣಿಯ ದಪ್ಪವಾಗಿ ಬೆಳೆದಿರುತ್ತದೆ. ಕಪ್ಪುಬೂದಿ ಮಿಶ್ರಿತ ಬಣ್ಣದ ದನಗಳು ಹೆಚ್ಚು ಸೆಡವಿನ ದನಗಳೆಂದು ತಿಳಿದು ರೈತರು ಹೆಚ್ಚಾಗಿ ಅವುಗಳನ್ನು ಹೊಲಮನೆಯ ಕೆಲಸಗಳಿಗೆ ಉಪಯೋಗಿಸುತ್ತಾರೆ. ಇದರ ಮೈಚರ್ಮ ಮೃದುವಾಗಿ, ಕೂದಲು ನಯವಾಗಿ ನುಣುಪಾಗಿರುತ್ತವೆ. ತಲೆಯ ಮೇಲ್ಭಾಗದಲ್ಲಿ ಸ್ವಲ್ಪ ದಪ್ಪವಾಗಿ ಹೆಚ್ಚು ಅಗಲವಿಲ್ಲದ ಕೆಳಗೆ ಮುಖದ ಕಡೆಗೆ ಬರಬರುತ್ತ ನೀಳವಾಗಿ, ಎಳಸಾಗಿ ಸರಳವಾಗಿರುತ್ತದೆ. ಕೋಡುಗಳು ಬುಡದಲ್ಲಿ ಒಂದಕ್ಕೊಂದು ಅತಿ ಸಮೀಪದಲ್ಲಿ ಹುಟ್ಟಿಕೊಂಡು ಮೇಲಕ್ಕೆ ಬರಬರುತ್ತ ಅಗಲವಾಗಿ, ಸ್ವಲ್ಪ ಹಿಂದಕ್ಕೆ ಹೋಗಿ ಪುನಃ ಮುಂದಕ್ಕೆ ಬಾಗಿಕೊಂಡು, ಉದ್ದವಾಗಿದ್ದು ತುದಿಯಲ್ಲಿ ಅತಿ ಚೂಪಾಗಿರುತ್ತವೆ, ಮುಖವು ನೋಡಲು ಸುಂದರವಾಗಿ ಮನೋಹರವಾಗಿ ಕಾಣಿಸುತ್ತದೆ. ಕಿವಿಗಳು ಸಣ್ಣವಾಗಿ ತುದಿಯಲ್ಲಿ ಚೂಪಾಗಿರುತ್ತವೆ. ಕಣ್ಣುಗಳು ಕಾಂತಿಯಿಂದ ತುಂಬಿರುತ್ತವೆ. ಈ ದನಗಳ ಗಂಗೆದೊಗಲು ಮತ್ತು ತೋಬರಿ ಬೇರೆ ಜಾತಿಯ ದನಗಳಿಗಿಂತ ಸಣ್ಣಗಿರುತ್ತವೆ. ಕಾಲುಗಳು ಬಲವಾದ ಸ್ನಾಯುಗಳಿಂದ ತುಂಬಿಕೊಂಡಿರುತ್ತವೆ. ಗೊರಸುಗಳು ಕಪ್ಪಾಗಿ ಬಿರುಸಾಗಿ, ಕಬ್ಬಿಣದಂತೆ ಗಟ್ಟಿಯಾಗಿರುತ್ತವೆ. ಎತ್ತರದಲ್ಲಿ ಸುಮಾರು ೧೨೫ ರಿಂದ ೧೫೦ ಸೆಂ. ಮೀ. ಇರುತ್ತವೆ. ಎದೆ ವಿಶಾಲವಾಗಿದ್ದು ಸುಮಾರು ೨೦೦ ಸೆಂ. ಮೀ. ಸುತ್ತಳತೆ ಇರುತ್ತದೆ. ಈ ದನಗಳಲ್ಲಿ ಒಂದು ಮುಖ್ಯ ಕೊರತೆ ಎಂದರೆ ಇವುಗಳು ಹಾಲು ಹೆಚ್ಚು ಉತ್ಪಾದಿಸುವುದಿಲ್ಲ.

ಅಮೃತ ಮಹಲ್ ದನದ ಲಕ್ಷಣಗಳು 

ಹಣೆಯು ಅಗಲವಾಗಿ ಚಪ್ಪಟೆಯಾಗಿರುತ್ತದೆ. ಹಣೆಯ ಮಧ್ಯಭಾಗದಲ್ಲಿ ತಗ್ಗು ಉದ್ದವಾಗಿರುವುದಿಲ್ಲ. ಕೋಡುಗಳು ದಪ್ಪವಾಗಿ ಹೆಚ್ಚು ಅಗಲವಾಗಿ ಒಂದಕ್ಕೊಂದರ ಅಂತರವು ಬಹಳವಿರುತ್ತದೆ.