ಭಾರತದಲ್ಲಿ ಸಂಗೀತವು ಎಲ್ಲ ಜನಮನದಲ್ಲಿ ವ್ಯಾಪಕವಾಗಿದೆ. ಲೋಕ ಸಂಗೀತದಿಂದ ಹಿಡಿದು ವೈದಿಕ ಸಂಗೀತ, ಶಾಸ್ತ್ರೀಯ ಸಂಗೀತ ಇವುಗಳ ಪಾರಂಪರಿಕ ವಿಕಾಸ, ಪರಿವರ್ತನೆ ಮತ್ತು ಪರಿವರ್ಧನೆ ಭಾರತದಲ್ಲಿ ಎಷ್ಟರ ಮಟ್ಟಿಗೆ ಆಗಿದೆಯೋ ಅಷ್ಟು ಮಟ್ಟಿಗೆ ಇನ್ನುಳಿದ ಯಾವ ದೇಶಗಳಲ್ಲಿ ಆದದ್ದು ಕಂಡುಬರುವುದಿಲ್ಲ. ಇದು ಭಾರತೀಯರಿಗೆ ಹೆಮ್ಮೆಯ ವಿಷಯ. ಭಾರತೀಯ ಸಂಗೀತದ ಇತಿಹಾಸ ಅತ್ಯಂತ ಪ್ರಾಚೀನವಾಗಿದ್ದು ಇದರ ಮೂಲದ ಕಥೆ ಶೋಧಿಸಲು ಸಾಧ್ಯವಿಲ್ಲ. ಆದರೂ ವೇದಗಳಲ್ಲಿ, ಪುರಾಣಗಳಲ್ಲಿ, ಉಪನಿಷತ್ತುಗಳಲ್ಲಿ ಸಂಗೀತದ ಬಗೆಗಿನ ಉಲ್ಲೇಖಗಳು ದೊರೆಯುತ್ತವೆ. ಭಾರತೀಯರು ಸಂಗೀತದ ಸಂಬಂಧವನ್ನು ಧರ್ಮದ ಜೊತೆಗೆ ಜೋಡಿಸಿದರು. ಜೀವನದ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳನ್ನು ಸಾಧಿಸುವುದಕ್ಕಾಗಿ ಸಂಗೀತವೂ ಒಂದು ಶ್ರೇಷ್ಠ ಮಾಧ್ಯಮ ಎಂದು ಭಾವಿಸಿದರು. ಸಂಗೀತದ ಸಂಬಂಧವು ಧರ್ಮದ ಜೊತೆ ಕಲ್ಪಿಸಿ ಕೊಂಡಿರುವುದರಿಂದ ನಮ್ಮ ಭಾರತೀಯರ ಸಮಸ್ತ ದೇವದೇವತೆಯರು ಗಾಯನ ವಾದನ ಹಾಗು ನರ್ತನ ಈ ಯಾವುದೇ ಒಂದು ವಿಧದ ಸಂಗೀತದ ಪರಿಣಿತರು ಎಂದು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ ಎಲ್ಲ ಭಾರತೀಯ ವಿದ್ವಾಂಸರು ಹಿಂದು ಧರ್ಮದ ಮೂಲಗ್ರಂಥವಾದ ವೇದ ಹಾಗೂ ಪುರಾಣಗಳನ್ನೇ ಆಧಾರವಾಗಿಟ್ಟುಕೊಂಡು ಬೇರೆ ಬೇರೆ ದೃಷ್ಟಿಕೋನದಿಂದ ಸಂಗೀತದ ಹುಟ್ಟಿನ ಬಗೆಗೆ ಚರ್ಚಿಸಿದ್ದಾರೆ. ಆದಿ ವಿಷ್ಣು ತನ್ನ ಮಗನಾದ ಬ್ರಹ್ಮನಿಗೆ, ಅನಂತರ ಬ್ರಹ್ಮನು ಈ ವಿದ್ಯೆಯನ್ನು ಶಿವನಿಗೂ-ವೀಣಾ ಪುಸ್ತಕಪಾಣಿ ಸರಸ್ವತಿಗೂ ಹೇಳಿಕೊಟ್ಟನು. ಸರಸ್ವತಿಯು ನಾರದನಿಗೆ, ನಾರದನಿಂದ ತುಂಬುರು, ಗಂಧರ್ವರು, ಕಿನ್ನರರು ಹಾಗೂ ಅಪ್ಸರೆಯರಿಗೆ ಈ ವಿದ್ಯೆ ಲಭಿಸಿತು. ಸ್ವರ್ಗ ಲೋಕದಿಂದ ಭರತ, ಹನುಮಾನ, ನಾರದ ಮುಂತಾದ ಋಷಿಗಳು ಈ ಕಲೆಯ ಪ್ರಚಾರಕ್ಕಾಗಿ ಭೂಮಿಯ ಮೇಲೆ ಅವತರಿಸಿದರು ಎಂದು ಹೇಳಲಾಗಿದೆ. ಕೆಲವು ವಿದ್ವಾಂಸರು ಸಂಗೀತದ ಹುಟ್ಟು ಮಾನವನ ಕಲ್ಪನಾ ಶಕ್ತಿ ಹಾಗೂ ಉತ್ಪಾದಕ ಶಕ್ತಿಯ ಕೊಡುಗೆ ಆಗಿದೆ ಎಂದು ಪ್ರತಿಪಾದಿಸಿದ್ದಾರೆ. ಆದಿಮಾನವನು ಸಂಗೀತದ ಧ್ವನಿಯ ಮೂಲಕ ವಿವಿಧ ಮನೋಭಾವಗಳನ್ನು ವ್ಯಕ್ತ ಪಡಿಸುವ ಕಲೆ ಕಲಿಯಲು ತೊಡಗಿದನು. ಅವನು ಸುಖ ಹಾಗೂ ದುಃಖದ ಅನುಭವಗಳನ್ನು ಮುಖ ವಿಕಾರದಿಂದಲೂ ಹಸ್ತಾದಿ ಅಂಗಾಂಗಗಳ ಚಲನವಲನದಿಂದಲೂ ಅಭಿವ್ಯಕ್ತಪಡಿಸುತ್ತಿದ್ದನು. ಕಾಲಕಳೆದಂತೆ ಅವನಿಗೆ ಅನೇಕ ವಸ್ತುಗಳ ಅವಶ್ಯಕತೆ ಉಂಟಾಯಿತು. ನೀರಡಿಕೆಯಾದಾಗ ನದಿ ಹಳ್ಳಗಳ ನೀರನ್ನು ಕುಡಿದು, ಹಸಿವೆಯಾದಾಗ ಹಣ್ಣು ಹಂಪಲುಗಳನ್ನು ತಿಂದು ಜೀವಿಸುತ್ತಿದ್ದನು. ನಿಸರ್ಗದ ಬಣ್ಣಬಣ್ಣದ ವಾತಾವರಣದಲ್ಲಿ ಪಶುಪಕ್ಷಿಗಳ ಧ್ವನಿಗಳು ಅವನ ಮನಸ್ಸಿನಲ್ಲಿ ಆಶ್ಚರ್ಯಜನಕ ಪ್ರವೃತ್ತಿಗಳನ್ನು ನಿರ್ಮಿಸುತ್ತಿದ್ದವು. ಮೇಘಗರ್ಜನೆ, ಗಿಡಗಳ ಸಪ್ಪಳ, ಕೋಗಿಲೆ ಹಾಗೂ ನವಿಲಿನಂತಹ ಪಕ್ಷಿಗಳ ಮಧುರ ಧ್ವನಿ ಇತ್ಯಾದಿಗಳನ್ನು ಕೇಳಿದಾಗ ಅವನು ತನ್ನ ಜೀವನದ ಕಷ್ಟಗಳನ್ನು ಮರೆಯುತ್ತಿದ್ದನು. ನಿಸರ್ಗ ನಿರ್ಮಿತ ಅನೇಕ ಮಧುರ ಧ್ವನಿಗಳನ್ನು ಕೇಳಿದ ಅವನ ಮನಸ್ಸಿನಲ್ಲಿ ಅಂತಹ ಧ್ವನಿಗಳ ಅನುಕರಣದಿಂದ ಬೇರೆ ಬೇರೆ ಧ್ವನಿಗಳ ಉತ್ಪನ್ನ ಮಾಡುವ ಆಸೆ ಉಂಟಾಯಿತು. ಕಾಲಕ್ರಮೇಣ ಅವನಿಗೆ ಈ ಪ್ರಕೃತಿಯ ಬೇರೆ ಬೇರೆ ಸ್ವರಗಳ ಅನುಕರಣೆ ಮಾಡುವಲ್ಲಿ ಯಶಸ್ಸು ದೊರೆಯಿತು. ಮುಂದೆ ಅವನು ತನ್ನ ಕಲ್ಪನಾ ಶಕ್ತಿಯ ಬಲದಿಂದ ಅನೇಕ ಮಧುರ ಸ್ವರಗಳನ್ನು ಸೃಷ್ಟಿ ಮಾಡಿರಬಹುದು. ಇದೇ ಸಂಗೀತದ ಹಿನ್ನೆಲೆಯಾಗಿರಬಹುದು. ಈಶ್ವರ ಸಾಕ್ಷಾತ್ಕಾರಕ್ಕೆ ಸಾಧನವಾಗಬಲ್ಲ ಈ ನಿಯಮಬದ್ಧ ಸಂಗೀತವನ್ನೇ ಭರತಮುನಿಯು ‘ಮಾರ್ಗ’ ಅಥವಾ ‘ಮಾರ್ಗ ಸಂಗೀತ’ ಎಂದು ಕರೆದನು.

ಪ್ರಾಚೀನ ಕಾಲದಲ್ಲಿ ಸಂಗೀತವನ್ನು ಎರಡು ವಿಧದಿಂದ ವಿಭಜಿಸಲಾಗಿತ್ತು. ೧. ಮಾರ್ಗ ಸಂಗೀತ, ೨ ದೇಶಿ ಸಂಗೀತ ಅಥವಾ ಗಾನ ಎಂದು. ಪ್ರಾಚೀನ ಋಷಿಮುನಿಗಳ ದೇವಸಾಕ್ಷಾತ್ಕಾರಕ್ಕೆ ಸಂಗೀತವು ಒಂದು ಪ್ರಮುಖ ಸಾಧನವೆಂದು ಭಾವಿಸುತ್ತಿದ್ದರು. ಸಂಗೀತದಲ್ಲಿ ಮನಸ್ಸನ್ನು ಏಕಾಗ್ರ ಮಾಡುವ ಶಕ್ತಿ ಇದೆ ಎಂದು ಅವರು ನಂಬಿದ್ದರು.

ಮಾರ್ಗ ಸಂಗೀತದಲ್ಲಿ ಜಾತಿಗಾನ ಹಾಡುತ್ತಿದ್ದರು. ಈ ಜಾತಿಗಳು ಆ ಸಮಯದಲ್ಲಿ ಪ್ರಚಾರದಲ್ಲಿದ್ದ, ಸ್ವರಗಳ ರಚನೆಗಳಾಗಿಯೋ ತಾಳಬದ್ಧವಾಗಿಯೋ ಇರುತ್ತಿದ್ದವು. ಮಾರ್ಗ ಸಂಗೀತದಲ್ಲಿ ಸ್ವರ ರಚನೆಗಳು ಹಾಗೂ ಶಬ್ದತಾಳಗಳು ಕೇವಲ ಈಶ್ವರ ಪ್ರಾಪ್ತಿಗಾಗಿ ಪ್ರಯೋಗಗೊಳ್ಳುತ್ತಿದ್ದವು. ಇವುಗಳಿಗೆ ‘ಗೀತ’ ಎಂದು ಹೇಳುತ್ತಿದ್ದರು. ಭಾಷಾ ವಿಭಾಷಾ ಹಾಗೂ ಅಂತರಭಾಷಾ ಈ ಮೂರು ಗೀತೆಗಳು ಮಾರ್ಗೀಯ ಸಂಗೀತದಲ್ಲಿದ್ದವು. ಗೀತೆಗಳಲ್ಲಿ ಶುದ್ಧಾ, ಭಿನ್ನಾ, ಗೌಡಿ, ಸಾಧಾರಣಾ, ವೇಸರಾ ಮುಂತಾದ ಪ್ರಕಾರಗಳಿದ್ದವು. ಮತಂಗನು ಶುದ್ಧಾ, ಸಾಧಾರಣಿ, ಭಾಷಾ, ವಿಭಾಷಾ, ರಾಗಗೀತ ಹಾಗೂ ಗೌಡಿ ಮುಂತಾದ ಏಳು ಪ್ರಕಾರದ ಗೀತಗಳ ವರ್ಣನೆ ಮಾಡಿದ್ದಾನೆ.

ಸಂಗೀತವು ಶಿವಸಾಕ್ಷಾತ್ಕಾರದ ಒಂದು ಸಾಧನವಾಗಿರುವುದಂತೂ ನಿಜ. ಅದರ ಜೊತೆಗೆ ಅದರಲ್ಲಿ ಮತ್ತೊಂದು ಶಕ್ತಿಯೂ ಹುದುಗಿದೆ. ಅದೇ ಜನಮನ ರಂಜಿಸುವ ಶಕ್ತಿ. ಋಷಿಮುನಿಗಳು ಸಂಗೀತದಲ್ಲಿ ಹುದುಗಿರುವ ಈ ಶಕ್ತಿಯ ಕಡೆಗೂ ಗಮನಕೊಟ್ಟು ಜನಸಾಮಾನ್ಯರಿಗೆ ಅದರ ಪರಿಚಯ ಮಾಡಿಕೊಟ್ಟರು. ಇದೇ ‘ದೇಶಿ ಸಂಗೀತ’ ಅಥವಾ ‘ಗಾನ’ ಎಂಬ ಹೆಸರಿನಿಂದ ಪ್ರಚಾರದಲ್ಲಿ ಬಂತು. ದೇಶಿ ಸಂಗೀತದ ಉದ್ದೇಶ ಕೇವಲ ಜನಮನ ರಂಜನೆ. ಆದ್ದರಿಂದ ಅದರಲ್ಲಿ ಅನೇಕ ಬದಲಾವಣೆಗಳು ಕಾನಿಸಿಕೊಂಡವು. ಆಧುನಿಕ ಕಾಲದಲ್ಲಿ ಭಾರತದ ಬೇರೆ ಬೇರೆ ಪ್ರಾಂತಗಳಲ್ಲಿ ಪ್ರಚಾರದಲ್ಲಿರುವ  ಸಂಗೀತ ಪ್ರಾಚೀನ ಕಾಲದಿಂದ ಪ್ರಚಾರದಲ್ಲಿದ್ದ ದೇಶಿ ಸಂಗೀತವೇ ಸರಿ. ಈಗಿನ ಕಾಲದಲ್ಲಿ ಇದಕ್ಕೆ ‘ಜಾನಪದ ಸಂಗೀತ’ ಅಥವಾ ‘ಲೋಕಗೀತ’ ಎಂದು ಹೇಳುತ್ತಾರೆ. ಜನಾಭಿರುಚಿಯನ್ನೇ ಅವಲಂಬಿಸಿರುವ ಕಾರಣ ದೇಶದ ಬೇರೆ ಬೇರೆ ಭಾಗಗಳಲ್ಲಿ ಇದರ ರೂಪ ಬೇರೆ ಬೇರೆಯಾಗಿದ್ದುದು ಕಂಡುಬರುತ್ತದೆ. ದೇಶಿ ಸಂಗೀತದ ಆಧಾರದ ಮೇಲೆಯೇ ಶಾಸ್ತ್ರೀಯ ಸಂಗೀತದ ನಿರ್ಮಾಣಗೊಂಡಿರುವುದು ಸರ್ವವಿಧಿತವಿದೆ.

ಭಾರತೀಯ ವೈದಿಕ ಯುಗದ ಸಂಗೀತ ಹಾಗೂ ಸಂಗೀತ ಸಾಧನೆಯ ಬಗೆಗೆ ಸಾಕಷ್ಟು ಉಲ್ಲೇಖಗಳು ಸಿಗುತ್ತವೆ. ವೇದ, ಬ್ರಾಹ್ಮಣ, ಉಪನಿಷತ್ತು ಹಾಗೂ ಅರಣ್ಯಕ ಗ್ರಂಥಗಳಲ್ಲಿ ಆ ಕಾಲದ ಸಂಗೀತದ ಸ್ಥಿತಿ, ಸಂಗೀತದ ಬಗೆಗಿದ್ದ ಜನರ ಮನೋಭಾವನೆ ಮತ್ತು ಆಗ ಪ್ರಚಾರದಲ್ಲಿದ್ದ ಸಂಗೀತದ ಬಗೆಗೂ ಹಲವಾರು ಅಂಶಗಳು ತಿಳಿದುಬರುತ್ತವೆ. ಋಗ್ವೇದ ಕಾಲದಲ್ಲಿ ಸಂಗೀತದ ಅಂಗಗಳಾದ ಗೀತ, ವಾದ್ಯ ಹಾಗೂ ನೃತ್ಯಗಳ ಪ್ರಚಾರವಿತ್ತೆಂಬುದು ಕಂಡುಬರುತ್ತದೆ.

ಋಗ್ವೇದದಲ್ಲಿ ಗೀತ ಪ್ರಬಂಧದ ಉಲ್ಲೇಖನವನ್ನು ಗೀತ, ಗಾಥಾ, ಗಾಯತ್ರಿ ಹಾಗೂ ಸಮ್ ಎಂಬ ಹೆಸರುಗಳಿಂದ ಗುರುತಿಸಲಾಗುತ್ತದೆ. ವೇದದ ಋಕ್ ಅಥವಾ ಋಚೆಗಳು ಉದಾತ್ತ, ಅನುದಾತ ಮತ್ತು ಸ್ವರಿತ ಈ ಮೂರು ಸ್ವರಗಳಲ್ಲಿ ಹಾಡಲ್ಪಡುತ್ತಿದ್ದವು. ಋಗ್ವೇದದಲ್ಲಿ ಕೆಲವು ಸಂಗೀತ ವಾದ್ಯಗಳ-ಗರ್ಗರೆ, ಶೋಣೆ, ಡವರು, ಭೂಮಿ ದುಂದಭಿ ಮುಂತಾದವುಗಳ ಉಲ್ಲೇಖಗಳು ಸಿಗುತ್ತವೆ. ಋಗ್ವೇದದಲ್ಲಿ ಗೀತ ಹಾಗೂ ವಾದ್ಯದ ಜೊತೆಗೆ ನೃತ್ಯದ ಅನೇಕ ಪ್ರಕಾರಗಳ ಪ್ರಚಾರ ಸಮಾಜದಲ್ಲಿ ಇತ್ತು. ನೃತ್ಯ ಕಾರ್ಯಕ್ರಮಗಳು ಸಾರ್ವಜನಿಕ ಸಭಾಮಂಟಪಗಳಲ್ಲಿ ಸ್ತ್ರೀ ಪುರುಷರು ಸಮಾನವಾಗಿ ಭಾಗವಹಿಸುತ್ತಿದ್ದರು. ‘ಸಮನ್’ ಎಂಬ ವಿಶೇಷ ಸಮೂಹ ನೃತ್ಯ ಸಮಾರಂಭ ಋಗ್ವೇದ ಕಾಲದಲ್ಲಿ ಅತಿ ವಿಜೃಂಭಣೆಯಿಂದ ನಡೆಯುತ್ತಿತ್ತು.

ವೈದಿಕ ಯುಗದ ಸಂಗೀತದ ಸ್ವರೂಪವು ಸಾಮವೇದ ಕಾಲದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಆ ಕಾಲದಲ್ಲಿ ಅರಣ್ಯಕ, ಸಂಹಿತಾ ಪೂರ್ವಾರ್ಚಿಕ, ಉತ್ತರಾರ್ಚಿಕ, ಗ್ರಾಮಗೇಯ ಗಾನ, ಅರಣ್ಯಗೇಯಗಾನ, ಸ್ತೋಮ ಮುಂತಾದ ಸಂಗೀತದ ಪ್ರಚಾರವಿತ್ತು. ಸಾಮದೇವ ಕಾಲದಲ್ಲಿ ಏಳು ಸ್ವರಗಳ ವಿಕಾಸವಾಯಿತು. ಎಂಬುದರ ಬಗೆಗೆ ಉಲ್ಲೇಖವಿದೆ. ಸಾಮಸ್ವರಗಳ ವಿಕಾಸವಾಯಿತು. ಎಂಬುದರ ಬಗೆಗೆ ಉಲ್ಲೇಖವಿದೆ. ಸಾಮಸ್ವರಗಳ ವಿಕಾಸವು ಕೇವಲ ಮೂರು ಸ್ವರಗಳಿಂದಾಗಿ ಪ್ರಾರಂಭವಾಗಿ ಈ ಮೂರು ಸ್ವರಗಳಲ್ಲಿಯೇ ಅಡಕವಾಗಿದ್ದ ಇನ್ನೂ ನಾಲ್ಕು ಸ್ವರಗಳ ಉತ್ಪತ್ತಿಯಾಯಿತು. ಈ ಸ್ವರಗಳಿಗೆ ಆ ಕಾಲದಲ್ಲಿ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ, ಮಂದ್ರಕೃಷ್ಟಿ ಮತ್ತು ಅತಿಸ್ವರ ಎಂಬ ಹೆಸರುಗಳಿಂದ ಗುರುತಿಸಲಾಗುತ್ತಿತ್ತು. ಆಧುನಿಕ ಸಂಗೀತದಲ್ಲಿ ಸಾಮವೇದದ ಈ ಸ್ವರಗಳು ಕೆಲಮಟ್ಟಿಗೆ ಪರಿವರ್ತನಗೊಂಡಿದ್ದು  ಕಂಡುಬರುತ್ತದೆ.

ವೈದಿಕ ಯುಗದಲ್ಲಿ ಸಂಗೀತದ ಗರ್ಭದಿಂದ ನಾಟಕದ ಉತ್ಪತ್ತಿ ಆಯಿತೆಂದು ಕೇಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಈ ಯುಗದ ನಂತರವೇ ನಾಟಕವು ಸಂಗೀತದಿಂದ ಬೇರ್ಪಟ್ಟಿತು. ಆ ಕಾಲದಲ್ಲಿ ಅನೇಕ ಧಾರ್ಮಿಕ ಸಂಘ ಸಂಸ್ಥೆಗಳು ಆಸ್ತಿತ್ವದಲ್ಲಿದ್ದವು. ಇಂತಹ ಸಂಸ್ಥೆಗಳು ಸಂಗೀತ ಆಧ್ಯಾತ್ಮಿಕ ರೂಪದ ವಿಕಾಸಕ್ಕೆ ಪ್ರಯತ್ನ ನಡೆಸುತ್ತಿದ್ದವು. ಇದರ ಫಲವಾಗಿ ಸಂಗೀತವು ಸಶಾಸ್ತ್ರೀಯವಾಯಿತಲ್ಲದೇ ಇದಕ್ಕೆ ಆಧ್ಯಾತ್ಮದ ನೆರವೂ ಕೂಡಿತು. ವೈದಿಕ ಸಂಸ್ಕೃತಿಯಲ್ಲಿ ಆತ್ಮಚಿಂತನ, ಬೃಹ್ಮಚಿಂತನ ಹಾಗೂ ಆಧ್ಯಾತ್ಮದ ತತ್ವಗಳು ಸಾಕಷ್ಟು ಕಂಡುಬರುತ್ತವೆ. ಇದರಲ್ಲಿ ಭಕ್ತಿ ಹಾಗೂ ಸಂಗೀತದ ಪ್ರಭಾವವೂ ಸಹ ಕಂಡುಬರುವುದು. ವೈದಿಕಯುಗದ ಜನರು ಸಂಗೀತವು ವಿಕಾಸದ ಒಂದು ಸಾಧನ ಎಂದು ಭಾವಿಸುತ್ತಿರಲಿಲ್ಲ. ಜೀವನದ ವಿಕಾಸದ ಸಾಧನೆಗಳಲ್ಲಿ ಸಂಗೀತವು ಒಂದು ಪ್ರಮುಖ ಅಂಗವೆಂದು ಅವರು ಭಾವಿಸಿದ್ದರು. ತಮ್ಮ ಕಲಾತ್ಮಕ ಜೀವನ ಸುಂದರಗೊಳ್ಳಲು ತಮ್ಮ ಚಾರಿತ್ರ್ಯ ಪರಿಶುದ್ಧಗೊಳ್ಳದೆ ಧರ್ಮಕ್ಕೆ ಪಾವಿತ್ರ್ಯ ಉಂಟಾಗಲು ಸಾಧ್ಯವಿಲ್ಲವೆಂದು ಅವರು ಅರಿತಿದ್ದವು. ಆದುದರಿಂದಲೇ ಅವರು ಸಂಗೀತವು ಇಂದಿಗೂ ತನ್ನ ಉಚ್ಚಗೌರವವನ್ನು ಕಾಪಾಡಿಕೊಂಡಿರುತ್ತದೆ. ವಿಶ್ವದಲ್ಲಿ ಭಾರತೀಯ ಸಂಗೀತದಷ್ಟು ಪವಿತ್ರವಾದ ಸಂಗೀತ ಮತ್ತೊಂದಿಲ್ಲ. ಏಕೆಂದರೆ ಭಾರತೀಯ ಸಂಗೀತಕ್ಕೆ ಧಾರ್ಮಿಕ ಹಿನ್ನೆಲೆ ಇದೆ. ಇದು ಮಾನವನ ಅಧಃಪತನಕ್ಕೆ ಆಸ್ಪದಕೊಡಲಿಲ್ಲ. ಆದರೆ ಕೆಲಕಾಲದ ನಂತರ ಸಂಗೀತ ಧರ್ಮದಿಂದ ಬೇರ್ಪಟ್ಟಿತು. ಆಗ ಮಾನವನು ತನ್ನ ನೈತಿಕತೆಯಿಂದ ಜಾರಲಾರಂಭಿಸಿದನು. ವೈದಿಕ ಯುಗದಲ್ಲಿ ಅನೇಕ ಪ್ರಕಾರದ ವೀಣಾವಾದ್ಯಗಳು ಇದ್ದುದ್ದು ಉಲ್ಲೇಖಗಳು ದೊರೆಯುತ್ತವೆ. ಉದಾ: ಔದುಂಬರಿ, ಸೈರಂದ್ರಿ, ಕೋಕಿಲಾ, ಕಾತ್ಯಾಯಣಿ, ಮಹತಿ, ಪಿನಾಕಿ, ಕಚ್ಛಪಿ ಮುಂತಾದವು. ಈ ಯುಗದಲ್ಲಿ ವೀಣೆಗೆ ‘ವಾಣ’ ಎಂಬ ಹೆಸರೂ ಇತ್ತು. ಇದಕ್ಕೆ ನೂರಾರು ಸ್ವರಗಳಿದ್ದ ಬಗ್ಗೆ ಉಲ್ಲೇಖವಿದೆ. ದಕ್ಷಿಣ ಭಾರತದಲ್ಲಿ ವೈದಿಕ ಯುಗದ ವೀಣೆಯು ‘ಯಾಲ’ ಎಂಬ ರೂಪದಲ್ಲಿ ಆಧುನಿಕ ಕಾಲದಲ್ಲಿ ಕಂಡುಬರುತ್ತದೆ. ‘ವಾಣ’ ಹಾಗೂ ‘ಯಾಲ’ ಏಕರೂಪವಾಗಿದ್ದವು ಎಂದು ಊಹಿಸಲಾಗಿದೆ.

‘ಉಪನಿಷತ್ತುಗಳು’ ಹಾಗೂ ‘ಶತಪಥ ಬ್ರಾಹ್ಮಣ’ ಮುಂತಾದ ಗ್ರಂಥದಲ್ಲಿ ಸಂಗೀತದ ಬಗೆಗೆ ಸಾಕಷ್ಟು ಪ್ರಶಂಸೆ ಮಾಡಿದ್ದು ಕಂಡು ಬರುತ್ತದೆ. ಸಂಗೀತದ ಮಹತ್ವವನ್ನು ಕುರಿತು ಚರ್ಚಿಸುವಾಗ ಸಂಗೀತದಲ್ಲಿ ಗೀತ, ವಾದ್ಯ ಹಾಗೂ ನೃತ್ಯಗಳಿಂದ ಪ್ರಾಪ್ತವಾಗುವ ರಸಾನಂದವು ಪರಮಾನಂದ ಅಥವಾ ಬ್ರಹ್ಮಾನಂದದ ಮೂಲ ಎಂದು ಭಾವಿಸಲಾಗಿದೆ. ನಾರದೀಯ ಶಿಕ್ಷಾ ಹಾಗೂ ಪಾಣಿನಿಯ ಶಿಕ್ಷಾ ಮುಂತಾದ ಶಿಕ್ಷಾಗ್ರಂಥಗಳಲ್ಲಿ ಸಂಗೀತದ ವಿಶೇಷ ವರ್ಣನೆ ಇದೆ. ಈ ಗ್ರಂಥದ ಕರ್ತೃಗಳು ವೇದಗಳಲ್ಲಿ ವಿಭಿನ್ನ ಸ್ವರೋಚ್ಚಾರಣೆ ಅವುಗಳ ಕಾಲ, ಸ್ಥಾನ ಹಾಗೂ ಉದ್ಭವ ಮುಂತಾದವುಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈ ವಿವರಣೆಯಿಂದ ವೇದಗಳ ಅರ್ಚಿಕ, ಗಾಧಿಕ ಹಾಗೂ ಸಾಮಿಕ ಸ್ವರಾಂತರಗಳ ಪರಿಚಯ ದೊರೆಯುತ್ತದೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ವರ್ಣೋಚ್ಛಾರದ ಮುಖ್ಯ ಸ್ಥಾನಗಳು ಮೂರು. ಉರಸ್, ಕಂಠ ಹಾಗೂ ಶಿರ ಈ ಮೂರು ಸ್ಥಾನಗಳಿಂದ ಉತ್ಪನ್ನವಾಗುವ ಸ್ವರಗಳಿಗೆ ‘ಸವನ್’ ಎಂದು ಕರೆಯಲಾಗಿದೆ. ಉರಸ್‌ನಿಂದ ಉತ್ಪನ್ನವಾಗುವ ಧ್ವನಿಗೆ ‘ಮಂದ್ರ’ ಎಂದೂ ಕಂಠದಿಂದ ಉತ್ಪನ್ನವಾಗುವ ಧ್ವನಿಗೆ ಮಧ್ಯ ಅಥವಾ ಮಧ್ಯಮ ಹಾಗೂ ಶಿರಸ್ಸಿನಿಂದ ಉತ್ಪನ್ನವಾಗುವ ಧ್ವನಿಗೆ ತಾರ, ಉಚ್ಚ ಅಥವಾ ಉತ್ತಮ ಎಂಬ ಸಂಜ್ಞೆ ಕೊಡಲಾಗಿದೆ. ನಾರದೀಯ ಶಿಕ್ಷಾ ಗ್ರಂಥದಲ್ಲಿ ಸ್ವರ, ಗ್ರಾಮ, ರಾಗ, ತಾನ ಮುಂತಾದವುಗಳ ವರ್ಣನೆ ಬರುತ್ತವೆ. ಶಿಕ್ಷಾಗ್ರಂಥಗಳಲ್ಲಿ ‘ಮೂರ್ಚ್ಛನಾ’ ಮತ್ತು ‘ತಾನ’ ಮುಂತಾದವುಗಳ ಪ್ರಯೋಗ ಕೇವಲ ಮನೋರಂಜನೆಗೆ ಇರದೆ ಅದು ಅಭ್ಯುದಯ ಹಾಗೂ ಶ್ರೇಯಸ್ಸಿಗೆ ಸಾಧಕವಾಗಿದೆ. ಈ ಗ್ರಂಥಗಳಲ್ಲಿ ಷಡ್ಜ, ಮಧ್ಯಮ ಹಾಗೂ ಗಾಂಧಾರ ಎಂಬ ಮೂರು ಗ್ರಾಮಗಳ ಉಲ್ಲೇಖಗಳು ಇವೆ. ಸ್ವರ ಹಾಗೂ ರಾಗಗಳ ವಿಶಿಷ್ಟ ಸಂಯೋಜನಕೆ ‘ಗ್ರಾಮರಾಗ’ ಎಂದು ಹೆಸರಿಸಲಾಗಿದೆ. ಮೂರ್ಛನೆಗಳ ಒಟ್ಟು ಸಂಖ್ಯೆ ೨೧ ಎಂದು ಭಾವಿಸಲಾಗಿದ್ದು ಇವುಗಳಲ್ಲಿ ಏಳರ ಸಂಬಂಧ ದೇವತೆಗಳ ಜೊತೆಗೆ ಉಳಿದ ಏಳರ ಸಂಬಂಧ ಪಿತೃಗಳ ಜೊತೆಗೆ ಇನ್ನುಳಿದ ಏಳರ ಸಂಬಂಧ ಋಷಿಗಳ ಜೊತೆಗೆ ಎಂದು ಸ್ಥಾಪನೆ ಮಾಡಲಾಗಿದೆ. ಮಧ್ಯಮ ಗ್ರಾಮಗಳ ಮೂರ್ಛನೆಗಳನ್ನು ಕೇವಲ ಯಕ್ಷರು ಷಡ್ಜ ಗ್ರಾಮಗಳ ಮೂರ್ಛನೆಗಳನ್ನು ಋಷಿಗಳು ಹಾಗೂ ಲೌಕಿಕ ಗಾಯಕರು ಮತ್ತು ಗಾಂಧಾರ ಗ್ರಾಮದಲ್ಲಿ ಮೂರ್ಛನೆಗಳ ಪ್ರಯೋಗವನ್ನು ಗಂಧರ್ವರು ಮಾಡುತ್ತಿದ್ದರೆಂದು ಶಿಕ್ಷಾಕಾರರು ಅಭಿಪ್ರಾಯಪಟ್ಟಿದ್ದಾರೆ. ನಾರದೀಯ ಶಿಕ್ಷಾ ಗ್ರಂಥದಲ್ಲಿ ಪ್ರಾಣಿಗಳ ಧ್ವನಿಗಳ ಜೊತೆಗೆ ಸ್ವರಗಳ ಸಾಮರಸ್ಯವನ್ನು ವಿವೇಚಿಸಲಾಗಿದೆ. ಮಯೂರದ ಧ್ವನಿ ಷಡ್ಜ, ಎತ್ತಿನ ಧ್ವನಿ ವೃಷಭ, ಆಡಿನ ಧ್ವನಿ ಗಾಂಧಾರ, ಕ್ರೌಂಚ ಪಕ್ಷಿಯ ಧ್ವನಿ ಮಧ್ಯಮ, ಕೋಗಿಲೆಯ ಧ್ವನಿ ಪಂಚಮ, ಕುದುರೆಯ ಧ್ವನಿ ಧೈವತ, ಆನೆಯ ಧ್ವನಿ ನಿಷಾಧ ಎಂದು ಹೇಳಲಾಗಿದೆ.

ಸಪ್ತಸ್ವರಗಳ ಉತ್ಪತ್ತಿಯ ಬಗೆಗೂ ಶಿಕ್ಷಾಗ್ರಂಥಗಳಲ್ಲಿ ಉಲ್ಲೇಖವಿದೆ. ಷಡ್ಜದ ಉತ್ಪತ್ತಿ ಕಂಠದಿಂದ, ವೃಷಭದ ಉತ್ಪತ್ತಿ ಶಿರದಿಂದ, ಗಾಂಧಾರ ಹೃದಯದಿಂದ ಮಧ್ಯಮ ಮೂಗಿನಿಂದ, ಪಂಚಮ ಹೃದಯ, ಶಿರ ಹಾಗೂ ಕಂಠದಿಂದ, ಧೈವತ ಲಲಾಟದಿಂದ ಹಾಗೂ ನಿಷಾಧಸ್ವರವು ಶರೀರದ ನಾಭಿಯಿಂದ ಉತ್ಪನ್ನವಾಗುತ್ತವೆ ಎಂದು ಹೇಳಬಹುದು. ಸಂಗೀತದ ಬಗೆಗಿನ ಶಿಕ್ಷಾ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟ ವಿವರಣೆಗಳನ್ನು ಅವಲೋಕಿಸಿದರೆ ಆ ಕಾಲದಲ್ಲಿ ನಮ್ಮ ಭಾರತೀಯ ಸಂಗೀತವು ವೈಭವ ಶಿಖರದಲ್ಲಿ ಇತ್ತೆಂದು ಭಾವಿಸಬಹುದು.

ಪುರಾಣಕಾಲದಲ್ಲಿಯೂ ಭಾರತೀಯ ಸಂಗೀತದ ಪ್ರಚಾರ ವೈಭವದಿಂದ ಸಾಗಿತ್ತು ಎಂದು ತಿಳಿದು ಬರುತ್ತದೆ. ಬ್ರಹ್ಮಪುರಾಣ, ವಿಷ್ಣು ಪುರಾಣ. ಮಾರ್ಕಂಡೇಯ ಪುರಾಣ, ಹರಿವಂಶ ಪುರಾಣ ಮುಂತಾದವುಗಳಲ್ಲಿ ಸಂಗೀತದ ವರ್ಣನೆ ಹಾಗೂ ವಿಮರ್ಶೆ ಸಿಗುತ್ತದೆ. ಈ ವಿಮರ್ಶೆಯ ಮೂಲಕ ಪುರಾಣಯುಗದಲ್ಲಿ ವೇದ ಕಾಲೀನ ಸಂಗೀತದಲ್ಲಿದ್ದ ಏಕಸೂತ್ರತೆ ವಾಯುಭೂತಮಯವಾಗಿದ್ದದ್ದು ಕಂಡುಬರುತ್ತದೆ. ಸಂಗೀತದ ಪ್ರಚಾರ ವೇದಕಾಲದಲ್ಲಿ ಕೆಲವು ಜನಾಂಗಗಳಲ್ಲಿ ಇದ್ದುದ್ದು ಈ ಕಾಲದಲ್ಲಿ ಜನ ಸಾಮಾನ್ಯರಲ್ಲಿಯೂ ಪ್ರಸಾರಗೊಳ್ಳಲು ಪ್ರಾರಂಭವಾಯಿತು. ಹಾಗೂ ಸಂಗೀತದ ಮನೋರಂಜಕ ತತ್ವ ಜನರಲ್ಲಿ ವಿಕಾಸ ಹೊಂದಲು ಪ್ರಾರಂಭವಾಯಿತು. ಜನರು ಸಂಗೀತದ ಆಂತರಿಕ ತತ್ವದ ಕಡೆಗೆ ಹೆಚ್ಚಿನ ಮಹತ್ವವನ್ನು ಕೊಡಲಾರಂಬಿಸಿದರು. ವಾಯುಪುರಾಣದಲ್ಲಿ ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ತತ್ವಗಳ ವರ್ಣನೆ ಇದೆ. ಗ್ರಾಮ ರಾಗ, ಸ್ವರಸ್ಥಾನ, ಮಂದ್ರ, ಮಧ್ಯ ಹಾಗೂ ತಾರ, ನಾಟ್ಯ ಹಾಗೂ ಸಂಗೀತ ವಾದ್ಯಾಂತರಗಳ ವರ್ಣನೆಗಳು ಸಿಗುತ್ತವೆ. ಪುರಾಣಕಾಲದಲ್ಲಿ ನಾಟಕಗಳ ಪ್ರಚಾರಗಳು ಸಾಕಷ್ಟು ಇದ್ದು ವಿಶೇಷವಾಗಿ ಸಂಗೀತ ನಾಟಕಗಳ ಪ್ರಚಾರವಿದ್ದದ್ದು ಕಂಡುಬರುತ್ತದೆ. ರಾಮಾಯಾಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಕೂಡ ಸಂಗೀತದ ವರ್ಣನೆ ದೊರೆಯುತ್ತದೆ.

ಭಾರತದ ಪ್ರಾಚೀನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಮಹಾಕಾವ್ಯಗಳಲ್ಲಿ ಸಂಗೀತದ ಮೂರು ಅಂಗಗಳಾದ ಗಾಯನವಾದನ ಹಾಗೂ ನೃತ್ಯಗಳು ಆ ಕಾಲದಲ್ಲಿ ಸಾಕಷ್ಟು ಪ್ರಚಾರದಲ್ಲಿದ್ದುದರ ಬಗೆಗೆ ತಿಳಿದು ಬರುತ್ತದೆ. ಅಲ್ಲದೇ ಸಂಗೀತದ ಕಲಾಪಕ್ಷ ಹಾಗೂ ಶಾಸ್ತ್ರ ಪಕ್ಷ ಇವೆರಡು ಆ ಕಾಲದಲ್ಲಿ ಉನ್ನತ ಸ್ಥಿತಿಯನ್ನು ಮುಟ್ಟಿದ ಬಗ್ಗೆ ವಿಧಿತವಾಗುತ್ತದೆ. ರಾಮಾಯಣದಲ್ಲಿ ಸಂಗೀತದ ಬಗೆಗೆ ರೂಪದ ಹಾಗೂ ಉತ್ಪ್ರೇಕ್ಷೆಗಳು ಕಂಡು ಬರುತ್ತದೆ. ಆ ಕಾಲದ ಜನರಲ್ಲಿ ಸಂಗೀತ ಶಿಕ್ಷಣದ ಬಗೆಗೆ ಸಾಕಷ್ಟು ಅಭಿರುಚಿ ಇದ್ದುದ್ದು ವರ್ಣಿಸಲಾಗಿದೆ. ಬಾಲಕರಲ್ಲಿಯೂ ಸಂಗೀತ ಪ್ರಿಯತೆ ಕಂಡುಬರುತ್ತಿತ್ತು. ರಾವಣನು ಸ್ವತಃ ಸಂಗೀತಜ್ಞನಾಗಿದ್ದನು. ಸಂಗೀತದ ಬಗೆಗೆ ‘ರಾವಣೀಯಂ’ ಎಂಬ ಗ್ರಂಥವನ್ನು ಸಹ ಅವನು ರಚಿಸಿದ್ದನೆಂದು ಕೆಲವು ಕಡೆ ಉಲ್ಲೇಖಗಳು ಸಿಗುತ್ತವೆ.

ಲವ-ಕುಶರಿಗೆ ಸಂಗೀತದ ಶಿಕ್ಷಣವು ವಾಲ್ಮೀಕಿಯ ಆಶ್ರಮದಲ್ಲಿ ಪ್ರಾಪ್ತಿಯಾಯಿತು. ಅವರ ಸ್ವರಮಾಧುರ್ಯ ಹಾಗೂ ಬುದ್ಧಿ ಚಾತುರ್ಯಗಳನ್ನು ಗಮನಿಸಿ ಅವರಿಗೆ ಗೇಯರೂಪದ ಅಭ್ಯಾಸ ಮಾಡಿಸಲಾಯಿತು. ಶ್ರೀ ರಾಮಚಂದ್ರನ ಹೇಳಿಕೆಯ ಮೇರೆಗೆ ಲವ-ಕುಶರು ರಾಮಾಯಣವನ್ನು ‘ಮಾರ್ಗಸಂಗೀತದ’ ಶೈಲಿಯಲ್ಲಿ ಪ್ರಸ್ತುತ ಪಡಿಸಿದರು. ಸ್ವರ, ಪದ, ತಾಲ, ಮೂರ್ಛನಾ ಮುಂತಾದ ಸಂಗೀತಾಲಂಕಾರಗಳನ್ನು ಶಾಸ್ತ್ರ ಬದ್ಧವಾಗಿ ಅವರು ಹಾಡಿ ಶ್ರೋತೃಗಳ ಮನ ತಣಿಸಿದರು ಎಂಬ ವರ್ಣನೆ ಇದೆ. ಸೀತಾ ಸ್ವಯಂವರದ ಸಮಯದಲ್ಲಿ ಶಿವಧನಸ್ಸನ್ನು ಮುರಿದನಂತರ ಆಕಾಶದಲ್ಲಿಯೂ ದೇವತೆಗಳು ದುಂದುಬಿ ಮೊಳಗಿಸಿದರು. ಅಪ್ಸರೆಯರು ನರ್ತಿಸಲು ಪ್ರಾರಂಭಿಸಿದರು ಎಂದು ಬಣ್ಣಿಸಲಾಗಿದೆ.

ಮಹಾಭಾರತದಲ್ಲಿ ವರ್ಣಿಸಲಾದ ತಾತ್ಕಾಲೀನ ಸಮಾಜ ದರ್ಶನ ಬಹುಮುಖಿಯಾಗಿದ್ದು ಅದಕ್ಕೆ ಐತಿಹಾಸಿಕ ಮಹತ್ವವಿದೆ. ಮಹಾಭಾರದಲ್ಲಿ ಒಂದು ಲಕ್ಷ ಶ್ಲೋಕಗಳಿದ್ದು ಅವೆಲ್ಲವೂ ಸಂಗೀತಮಯವಾಗಿವೆ. ಮಹಾಭಾರತ ಕಾಲದಲ್ಲಿ ವೈದಿಕ ಹಾಗೂ ಲೌಕಿಕ ಎಂದು ಎರಡು ಪ್ರಕಾರದ ಸಂಗೀತಗಳು ಪ್ರಚಾರದಲ್ಲಿದ್ದವು. ಸಂಗೀತದಲ್ಲಿ ಷಡ್ಜ ಮುಂತಾದ ಸಪ್ತಸ್ವರಗಳ ವರ್ಣನೆ ಸಿಗುತ್ತದೆ. ಸ್ವರ, ಪದ, ಸ್ತೋಮ ಮುಂತಾದವುಗಳ ಅಧ್ಯಯನವೂ ಸಹ ಆ ಕಾಲದಲ್ಲಿ ನಡೆಯುತ್ತಿತ್ತು. ಕಂಠ ಸಂಗೀತದ ಜೊತೆಗೆ ಅನೇಕ ವಾದ್ಯಯಂತ್ರಗಳ ವರ್ಣನೆಯೂ ಸಹ ಮಹಾಭಾರತದಲ್ಲಿ ದೊರೆಯುತ್ತದೆ. ಉದಾ: ವೀಣಾ, ವೇಣು, ಮೃದಂಗ, ಪಣವ, ಬೇರಿ, ಶಂಖ, ದುಂದುಬಿ, ಪುಷ್ಕರ ಮುಂತಾದ ವಾದ್ಯಗಳಿಂದ ಯುದ್ಧದ ಸಮಯದಲ್ಲಿ ಅತೀ ಘೋರವಾದ ಧ್ವನಿ ಮಾಡಲಾಗುತ್ತಿತ್ತು.

ಆ ಕಾಲದಲ್ಲಿ ಅನೇಕ ಪ್ರಕಾರದ ನೃತ್ಯಗಳು ರೂಡಿಯಲ್ಲಿದ್ದವು. ಪ್ರಾಚೀನಕಾಲದ ‘ಲಾನ್ಸ್’ ಎಂಬ ನೃತ್ಯ ಪ್ರಕಾರವಲ್ಲದೇ ‘ರಾಸಲೀಲಾ ನೃತ್ಯ’ ಎಂಬ ಮತ್ತೊಂದು ನೃತ್ಯ ಪ್ರಾರಂಭವಾಯಿತು. ರಾಜಸಭೆಗಳಲ್ಲಿ ಸಂಗೀತ ವಿದ್ವಾಂಸರಿಗೆ ಗೌರವಪೂರ್ಣ ಸ್ಥಾನವಿತ್ತು.

ಮಹಾಭಾರತದಲ್ಲಿ ಭಗವಾನ ಶ್ರೀ ಕೃಷ್ಣನನ್ನು ಸಂಗೀತದ ಮಹಾವಿದ್ವಾಂಸನೆಂದು ವರ್ಣಿಸಲಾಗಿದೆ. ಅವನ ಸಂಗೀತದ ಮುಖ್ಯಸ್ಥಳ ‘ಭೃಜಭೂಮಿ’ಯಾಗಿತ್ತು.  ಯಮುನಾ ನದಿಯ ನೃತ್ಯಮಯ ಅಲೆಗಳಲ್ಲಿ ಗೋಪಿ ಗೋಪಾಲರನ್ನು ತನ್ನ ವೇಣುವಾದನ ಹಾಗೂ ನೃತ್ಯದಿಂದ ಮಂತ್ರಮುಗ್ಧರಾಗಿ ಮಾಡುತ್ತಿದ್ದನೆಂದು ವರ್ಣನೆ ಇದೆ.

ಪಾಂಡು ಪುತ್ರ ಅರ್ಜುನನೂ ಸಹ ಮಹಾನ್ ಸಂಗೀತಜ್ಞನಾಗಿದ್ದನು. ಶ್ರೀ ಕೃಷ್ಣನ ವೇಣುವಾದನವೂ ಕೂಡಾ ಅದ್ವಿತೀಯವಾಗಿತ್ತು. ಅವನಿಗೆ ನೃತ್ಯ ಕಲೆಯಲ್ಲಿಯೂ ಸಹ ಸಾಕಷ್ಟು ಪಾಂಡಿತ್ಯವಿತ್ತು.  ಪಾಂಡವರ ಅಜ್ಞಾತವಾಸದಲ್ಲಿ ಅರ್ಜುನನ್ನು ಬ್ರಹ್ನಳೆಯ ವೇಷ ಧರಿಸಿ ಸಂಗೀತ ಶಿಕ್ಷಕನೆಂದು ಕೆಲಸ ಮಾಡಿದನು.

ವೈದಿಕೋತ್ತರ ಕಾಲದ ನಂತರ ಭಾರತೀಯರ ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟುಪಾಡುಗಳು ಹೆಚ್ಚಾದವು. ವರ್ಣವ್ಯವಸ್ಥೆಗಳ ನಿಯಮಗಳ ಹಾಗೂ ಧಾರ್ಮಿಕ ಕರ್ಮಕಾಂಡ ವೃದ್ಧಿಯಾಯಿತು. ಇದರ ಪರಿಣಾಮವಾಗಿ ಸಮಾಜದಲ್ಲಿ ಅವ್ಯವಸ್ಥೆ ಉಂಟಾಯಿತು. ಕರ್ಮಕಾಂಡದಲ್ಲಿ ಪಶುಹತ್ಯೆ ಹಾಗೂ ಅಂಧವಿಶ್ವಾಸ ಮುಂತಾದವುಗಳಿಂದ ಜನರಿಗೆ ಧರ್ಮದ ಮೇಲಿನ ವಿಶ್ವಾಸ ಕಡಿಮೆಯಾಗಲು ಪ್ರಾರಂಭಿಸಿತು. ಧಾರ್ಮಿಕ ಅವ್ಯವಸ್ಥೆ, ಕರ್ಮಕಾಂಡದಲ್ಲಿ ಹಿಂಸಾತ್ಮಕ ಕೃತ್ಯಗಳು ಮುಂತಾದವುಗಳ ನಿವಾರಣೆಗಳನ್ನು ಗೌತಮಬುದ್ಧ ಹಾಗೂ ಮಹಾವೀರ ಮುಂತಾದ ಮಹಾನ್ ವಿಭೂತಿಗಳು ಮಾಡಿದರು.

ಬೌದ್ಧ ಯುಗದಲ್ಲಿ ಸಂಗೀತ ಹಾಗೂ ನಾಟಕಕ್ಕೆ ರಾಜಾಶ್ರಯವಿತ್ತು. ರಾಜಸಭೆಯಲ್ಲಿ ಅನೇಕ ಗಾಯಕ, ವಾದಕ ಹಾಗೂ ನರ್ತಕಿಯರನ್ನು ನೇಮಿಸಲಾಗಿತ್ತು. ತಕ್ಷಶೀಲಾ, ವಿಕ್ರಮಶಿಲಾ, ಹಾಗೂ ನಲಂದ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಸಂಗೀತ ಭೋದನೆಯ ಏರ್ಪಾಡಿತ್ತು. ಬೌದ್ಧ ವಾಙ್ಞಯದಲ್ಲಿ ಸಂಗೀತ ಸಲಕರಣೆಗಳ ಬಗೆಗೆ ತಿಳುವಳಿಕೆ ಕೊಡಲು ಅತ್ಯಂತ ಸಹಾಯ ನೀಡುತ್ತದೆ. ‘ಥೇಲಿಗಾಥಾ’ ಎಂಬ ಗ್ರಂಥವು ಬುದ್ಧ ಯುಗದ ಸಂಗೀತದ ಬಗೆಗಿರುವ ಒಂದು ಉತ್ಕೃಷ್ಟ ರಚನೆಯಾಗಿದೆ. ಈ ಗ್ರಂಥದಲ್ಲಿ ಬರುವ ರಾಗ ರಾಗಿಣಿಗಳಿಂದ ಅದರ ರಚನಾಕಾರರಿಗೆ ಸಂಗೀತದ ಪೂರ್ಣಜ್ಞಾನವಿತ್ತೆಂದು ಕಂಡುಬರುತ್ತದೆ.

ಕುಶಜಾತಕ ಎಂಬ ಬೌದ್ಧ ಗ್ರಂಥದಲ್ಲಿ ಮಹಾರಾಜಾ ಕುಶನ ಬಗೆಗೆ ಹಾಗೂ ಅವನ ಸಂಗೀತ ಪ್ರೇಮದ ಬಗೆಗೆ ಹಲವು ವರ್ಣನೆಗಳು ಬರುತ್ತವೆ. ಬುದ್ಧನ ಪೂಜೆ ಹಾಗೂ ಅಸ್ಥಿಪೂಜೆ ಮಾಡುವ ಸಮಯದಲ್ಲಿಯೂ ಸಂಗೀತದ ಬಳಕೆಯಾಗುತ್ತಿದ್ದ ಬಗೆಗೆ ‘ದೀಘನಿಕಾಯ’ ಎಂಬ ಗ್ರಂಥದಲ್ಲಿ ಪ್ರಮಾಣ ದೊರೆಯುತ್ತದೆ. ಬುದ್ಧನ ಮಹಾನಿರ್ಯಾಣದ ನಂತರ ಕುಶನಗರದಲ್ಲಿಯ ಕೆಲವು ನರ್ತಕಿಯರು ಅವನ ಅಂತಿಮ ಸಂಸ್ಕಾರದ ಸಮಯದಲ್ಲಿ ಅವನ ಶರೀರದ ಹತ್ತಿರ ನೃತ್ಯ, ಗೀತ ಹಾಗೂ ವಾದನ ಮಾಡುತ್ತಿದ್ದರೆಂದು ಉಲ್ಲೇಖನ ಸಿಗುತ್ತದೆ.

‘ಸಮಜ್ಜಾ’ ಎಂಬ ಸಂಗೀತ ಸಮಾರಂಭ ಆ ಕಾಲದಲ್ಲಿ ಪ್ರಚಾರದಲ್ಲಿತ್ತು. ಆದರೆ ಬೌದ್ಧ ಭಿಕ್ಷುಣಿಯರಿಗೆ ಇದರಲ್ಲಿ ಭಾಗವಹಿಸಲು ಅಧಿಕಾರವಿರಲಿಲ್ಲ. ಒಟ್ಟಾರೆ ಬೌದ್ಧ ಭಿಕ್ಷುಣಿಯರಿಗೆ ಇದರಲ್ಲಿ ಭಾಗವಹಿಸಲು ಅಧಿಕಾರವಿರಲಿಲ್ಲ. ಒಟ್ಟಾರೆ ಬೌದ್ಧಯುಗದಲ್ಲಿ ಸಂಗೀತದ ವಿಕಾಸವೂ ಸಮಾಧಾನಕರ ರೀತಿಯಲ್ಲಿ ಮುಂದುವರೆದಿತ್ತು ಎಂದು ಸ್ಪಷ್ಟವಾಗುತ್ತದೆ.

ಸಾಮೂಹಿಕ ಸಂಗೀತದ ಜೊತೆಗೆ ಸಾಮೂಹಿಕ ಭಜನ ಪದ್ಧತಿಯೂ ಆ ಕಾಲದಲ್ಲಿ ಪ್ರಚಾರವಿತ್ತು. ವೇದಕಾಲದಲ್ಲಿ ಪ್ರಚಾರದಲ್ಲಿದ್ದ ಸಂಗೀತದ ಬಗೆಗೆ ಯಾವ ಧಾರ್ಮಿಕ ಭಾವನೆಗಳಿದ್ದವೋ ಅವು ಈ ಜೈನಯುಗದಲ್ಲಿ ದೂರವಾಗಲು ಪ್ರಾರಂಭಿಸಿದವು. ವೇದಕಾಲದಲ್ಲಿಯ ಸಂಗೀತದ ಮೇಲೆ ಉಚ್ಚವರ್ಣೀಯರ ಏಕಮಾತ್ರ ಅಧಿಕಾರವಿತ್ತು. ಆದರೆ ಅದು ಜೈನಯುಗದಲ್ಲಿ ಜನಸಾಮಾನ್ಯರ ಕೈ ಸೇರಿತು.

ಜೈನ ಗ್ರಂಥಗಳಲ್ಲಿ ಜೈನಕಾಲೀನ ಸಂಗೀತ ವಾದ್ಯಗಳ ಉಲ್ಲೇಖ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ. ವೀಣಾ, ವಿಪಂಚಿ, ವಲ್ಲಕ್ಕಿ, ಮಹತಿ, ಚಿತ್ರವೀಣೆ, ತುಂಬರುವೀಣೆ, ನಕುಲ ಪರಿವಾದನಿ ಮುಂತಾದ ವೀಣೆಗಳ ಉಲ್ಲೇಖ ದೊರೆಯುತ್ತದೆ. ಸುಷ್ರ ವಾದ್ಯಗಳಲ್ಲಿ ಶಿಂಬ, ವೇಣು ಮುಂತಾದವುಗಳ ಹಾಗೂ ಅವನದ್ಧ ವಾದ್ಯಗಳಲ್ಲಿ ಮೃದಂಗ, ನಂದಿ, ಮೃದಂಗ, ನಂದಿ, ಮೃದಂಗ ಆಡಂಬರ, ಭಂಬಾ ಮುಂತಾದ ವಾದ್ಯಗಳ ಹೆಸರುಗಳು ಸಿಗುತ್ತವೆ.

ಠಾಣಾಂಗಸುತ್ತಿ ಎಂಬ ಜೈನ ಗ್ರಂಥದಲ್ಲಿ ಸ್ವರಗಳ ಉತ್ಪತ್ತಿ, ಸಪ್ತಸ್ವರಗಳು ಹಾಗೂ ಪ್ರಾಣಿಗಳ ಧ್ವನಿ ಜೊತೆಗೆ ಅವುಗಳ ಸಂಬಂಧ, ಮಾನವ ಸ್ವಭಾವದ ಜೊತೆಗೆ ಸಂಬಂಧ, ಗ್ರಾಮ ಮೂರ್ಛನೆಗಳು. ಗೀತೆಗಳ ಗುಣ ದೋಷಗಳು ಇತ್ಯಾದಿಗಳ ವಿವೇಚನೆ ಮಾಡಲಾಗಿದೆ.

ನೃತ್ಯಕಲೆಗಳ ಪ್ರಚಾರವೂ ಸಹ ಆ ಯುಗದಲ್ಲಿ ಸಾಕಷ್ಟು ಆಯಿತು. ಸಾರ್ವಜನಿಕ ಸ್ಥಳಗಳಲ್ಲಿ ನೃತ್ಯಗಳ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ರಾಜದರ್ಬಾರದಲ್ಲಿಯೂ ಸಹ ನೃತ್ಯ ಕಾರ್ಯಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದವು. ಇಂಥ ಸಮಾರಂಭಗಳಲ್ಲಿ ನಾಗರಿಕರಾದ ಶ್ರೇಷ್ಠ ಕುಲದ ಕನ್ಯೆಯರು ಸಹ ಭಾಗವಹಿಸುತ್ತಿದ್ದರು.

ಮೊದಲನೆಯ ಶತಮಾನದಲ್ಲಿ ಸಂಗೀತದ ಶ್ರೇಷ್ಠ ಅಚಾರ್ಯರಾದ ಭರತಮುನಿ ಅವರು ಬರೆದ ನಾಟ್ಯಶಾಸ್ತ್ರ ಎಂಬ ಗ್ರಂಥ ನಾಟ್ಯ ಶಾಸ್ತ್ರವನ್ನು ಪ್ರತಿಪಾದಿಸುತ್ತಿತ್ತು. ಆದರೆ ೨೮, ೨೯ ಹಾಗೂ ೩೦ ನೇ ಆಧ್ಯಾಯಗಳಲ್ಲಿ ಸಂಗೀತ ಶಾಸ್ತ್ರದ ಬಗೆಗೆ ಸ್ಥೂಲವಾಗಿ ವಿವೇಚನೆ ಮಾಡಲಾಗಿದೆ. ಭಾರತೀಯ ಸಂಗೀತದ ಒಂದು ಅಪೂರ್ವವಾದ ಗ್ರಂಥವೆಂದು ಈ ನಾಟ್ಯ ಶಾಸ್ತ್ರವನ್ನು ಪರಿಗಣಿಸಲಾಗಿದೆ. ನಾಟ್ಯ ಶಾಸ್ತ್ರದಲ್ಲಿ ರಸ, ಛಂದಸ್ಸು, ಭಾಷೆ, ರಂಗಮಂಚ, ವೇಷ ಭೂಷಣ, ಅಭಿನಯ ಹಾಗೂ ನೃತ್ಯ ಮೊದಲಾದ ವಿಷಯಗಳನ್ನು ಕುರಿತು ವಿವೇಚನೆ ಮಾಡಲಾಗಿದೆ. ಈ ಗ್ರಂಥವು ಭಾರತೀಯ ನಾಟ್ಯ ಹಾಗೂ ಸಂಗೀತ ಶಾಸ್ತ್ರಕ್ಕೆ ಅಪೂರ್ವ ಕಾಣಿಕೆಯಾಗಿದೆ.

ಗುಪ್ತಕಾಲದಲ್ಲಿ ರಜಪೂತರ ಕಾಲದವರೆಗಿನ ಅವಧಿಯು ‘ಭಾರತೀಯ ಸಂಗೀತದ ಸುವರ್ಣ ಯುಗ’ ಕರೆಯಲ್ಪಡುತ್ತದೆ. ಈ ಕಾಲದಲ್ಲಿ ಭಾರತದ ಶ್ರೇಷ್ಠ ಕವಿಗಳೊಬ್ಬನಾದ ದತ್ತಿಲನು ಜನಿಸಿದನು. ಇವನು ‘ದತ್ತಿಲಂ’ ಎಂಬ ಗ್ರಂಥಗಳನ್ನು ಸಂಸ್ಕೃತದಲ್ಲಿ ರಚಿಸಿದನು. ಇದರಲ್ಲಿ ಸ್ವರ, ಜಾತಿ ಮುಂತಾದವುಗಳ ವರ್ಣನೆ ಮಾಡಲಾಗಿದೆ. ಈ ಗ್ರಂಥದಲ್ಲಿ ಪ್ರತಿಪಾದಿಸಲಾದ ಕೆಲವು ವಿಚಾರದೊಂದಿಗೆ ಸಾಮ್ಯವಾಗಿ ತೋರಿ ಬರುತ್ತದೆ. ದತ್ತಿಲನು ತನ್ನ ಗ್ರಂಥದಲ್ಲಿ ಅವನ ಪೂರ್ವಕಾಲೀನ ಲೇಖಕರಾದ ನಾರದ, ಕೋಸಲ ಹಾಗೂ ವಿಶಾಖಿತ ಇವರ ನಾಮೋಲ್ಲೇಖ ಮಾಡಿದ್ದಾನೆ. ಈ ಗ್ರಂಥವನ್ನು ಗುಪ್ತರ ಕಾಲದಲ್ಲಿ ಅತಿ ಶ್ರೇಷ್ಠ ಗ್ರಂಥವೆಂದು ಭಾವಿಸಲಾಗಿತ್ತು.

ಮೊದಲನೆ ಚಂದ್ರಗುಪ್ತನ ನಂತರ ಅವನ ಪುತ್ರನಾದ ಸಮುದ್ರಗುಪ್ತನು ಪಟ್ಟವೇರಿದನು. ಇವರ ಆಳ್ವಿಕೆಯ ಕಾಲ ಕ್ರಿ.ಶ. ೩೩೦-೩೮೦ ರವರೆಗೆ ಎಂದು ಭಾವಿಸಲಾಗಿದೆ. ಸಮುದ್ರಗುಪ್ತನು ಮಹಾನ್ ಸಮ್ರಾಟ ಹಾಗೂ ಮಹಾನ್ ಸಂಗೀತ ತಜ್ಞ ಕವಿಯಾಗಿದ್ದನಲ್ಲದೇ ಶ್ರೇಷ್ಠ ವೀಣಾವದಕನೂ ಆಗಿದ್ದನು. ಇವನ ಕಾಲದಲ್ಲಿ ಶಾಸ್ತ್ರೀಯ ಸಂಗೀತದಲ್ಲಿಯೂ ಸಹ ಹಲವು ಬದಲಾವಣೆಗಳಾಗಿ ಅವರ ಪ್ರಚಾರ ಚೆನ್ನಾಗಿ ಆಗುತ್ತಿತ್ತು. ನೀರಿನಲ್ಲಿ ಬೆಂಕಿ ಹುಟ್ಟುವುದು, ಸಂಗೀತದ ಮಳೆ ಸುರಿಸುವುದು ಮುಂತಾದ ಚಮತ್ಕಾರ ಹಾಗೂ ಅಪೂರ್ವ ಶಕ್ತಿಯುಳ್ಳ ಸಂಗೀತ ತಜ್ಞರು ಇವನ ಕಾಲದಲ್ಲಿ ಬಾಳಿದರು ಎಂದು ಹೇಳಲಾಗಿದೆ. ಸಮಾಜದಲ್ಲಿ ಸಂಗೀತಗಾರರಿಗೆ ಗೌರವವಿತ್ತು ಹಾಗೂ ಅವರ ನೈತಿಕ ಒಲವೂ ಚೆನ್ನಾಗಿತ್ತು. ಜಾನಪದ ಗೀತೆಗಳ ಪ್ರಚಾರವೂ ಗುಪ್ತರ ಕಾಲದಲ್ಲಿ ಸಾಕಷ್ಟು ಇತ್ತು ಎಂದು ತಿಳಿದು ಬರುತ್ತದೆ. ಭಾರತೀಯ ಸಂಸ್ಕೃತಿ ಹಾಗೂ ಅದರ ಹಿರಿಮೆ ಮಾನವ ಜೀವನ, ನಿಸರ್ಗ ಸೌಂದರ್ಯ ಮುಂತಾದ ವಿಷಯಗಳು ಜನಪದ ಗೀತೆಗಳಲ್ಲಿ ನಿರೂಪಿತವಾಗಿವೆ. ಗ್ರಾಮ್ಯ ಜೀವಿಗಳು ಸಾಮಾಜಿಕ ನೃತ್ಯ ಹಾಗೂ ಜನಪದ ಗೀತ ಸಮಾರಂಭಗಳಲ್ಲಿ ಅತ್ಯಾನಂದದಿಂದ ಭಾಗವಹಿಸುತ್ತಿದ್ದರು. ಈ ಕಾಲದಲ್ಲಿ ಭಾರತೀಯ ಸಂಗೀತದ ಸರ್ವತೋಮುಖ ಪ್ರಗತಿ ಆಗಿತ್ತು ಎಂದು ತಿಳಿದು ಬರುತ್ತದೆ.

ಗುಪ್ತರ ಕಾಲದಲ್ಲಿ ಭಾರತೀಯ ಸಂಗೀತ ಪ್ರಸಾರ ಪಾಶ್ಚಾತ್ಯ ದೇಶಗಳಲ್ಲಿಯೂ ಸಹ ಆಯಿತೆಂದು ಹೇಳಲಾಗುತ್ತದೆ. ವಿಕ್ರಮಾದಿತ್ಯನ ಕಾಲದಲ್ಲಿ ‘ಫಾಹಿಯಾನ’ ಎಂಬ ಚೀನಿ ಪ್ರವಾಸಿಯು ಈ ಬಗೆಗೆ ತನ್ನ ಗ್ರಂಥವೊಂದರಲ್ಲಿ ಉಲ್ಲೇಖಿಸಿದ್ದಾನೆ.

ಇದೇ ಕಾಲದಲ್ಲಿ ಅನೇಕ ಸುಪ್ರಸಿದ್ದ ವಿದ್ವಾಂಸರು ಆಗಿಹೋದರು. ವಿಶೇಷವಾಗಿ ಕಾಳಿದಾಸ ನಾಟಕಕಾರರಾದ ಭಾಸ, ಶೂದ್ರಕ, ಭಾರವಿ, ವಿಶಾಖದತ್ತ ಮುಂತಾದವರ ಹೆಸರುಗಳು ಉಲ್ಲೇಖನೀಯ. ಇವರ ಕೃತಿಗಳಲ್ಲಿ ಭಾರತೀಯ ಸಂಗೀತದ ತತ್ವಗಳು ಅದರ ಪ್ರಯೋಗ, ಅದರ ಪ್ರಭಾವ ಮುಂತಾದ ಸಂಗತಿಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಈ ಎಲ್ಲ ಕೃತಿಗಳನ್ನು ಪರಿಶೀಲಿಸಿದರೆ ಆ ಕಾಲದಲ್ಲಿ ಸಂಗೀತದ ಜೊತೆಗೆ ಶಿಲ್ಪಕಲೆ, ಚಿತ್ರಕಲೆ, ಕಾವ್ಯ ಮುಂತಾದ ಲಲಿತ ಕಲೆಗಳು ಉಚ್ಚಮಟ್ಟದಲ್ಲಿದ್ದವು ಎಂದು ಕಂಡುಬರುತ್ತದೆ. ಆ ಸಂಗೀತ ಕಲೆಯು ರಾಜಮನ್ನಣೆ ಪಡೆದಿತ್ತು. ಮಾಲವಿಕಾ, ಶರ್ಮಿಷ್ಠಾ, ಹಂಸ, ಪದಿಕಾ ಮುಂತಾದ ಶ್ರೇಷ್ಠ ಕಲಾವಿದರು ಆಗ ಮನ್ನಣೆ ಪಡೆದರು.

ಸಂಗೀತ ಶಾಲೆಗಳ ಹೊರತಾಗಿ ಸಂಗೀತ ಶಿಕ್ಷಣದ ಏರ್ಪಾಡು ಗುರು-ಶಿಷ್ಯ ಪರಂಪರೆ ಪದ್ಧತಿಯೂ ಪ್ರಚಲಿತವಿತ್ತು. ಸಂಗೀತ ಶಿಕ್ಷಣ ಪ್ರಾರಂಭವಾಗುವ ಪೂರ್ವದಲ್ಲಿ ಸಂಗೀತ ಕಲೆಯ ಆರಾಧ್ಯ ದೇವತೆಯನ್ನು ಪೂಜಿಸುವ ಪದ್ಧತಿ ಇತ್ತು. ಸಂಗೀತ ಶಾಲೆಗಳಲ್ಲಿ ಸ್ವರ ವರ್ಣ, ಗೀತೆ, ಮೂರ್ಛನೆ, ತಾನ, ರಾಗ, ವಸ್ತು ಹಾಗೂ ಅಭಿನಯ ಮುಂತಾದ ಸಂಗತಿಗಳ ವಿಧಿವತ್ತಾದ ಶಿಕ್ಷಣ ಕೊಡಲಾಗುತ್ತಿತ್ತು ಸಮಾಜದಲ್ಲಿ ಸಂಗೀತ ಸ್ಪರ್ಧೆ, ಸಾಮೂಹಿಕ ಸಂಗೀತ ಸಭೆಗಳು ಹಾಗೂ ನೃತ್ಯ ಕಾರ್ಯಕ್ರಮಗಳು ಏರ್ಪಡುತ್ತಿದ್ದವು.

ಗುಪ್ತರ ಕಾಲದಲ್ಲಿ ಭಾರತೀಯ ಸಂಗೀತದ ವಿಕಾಸವಾದಷ್ಟು ಬೇರೆ ಯಾವುದೇ ಕಾಲದಲ್ಲಿ ಆಗಲಿಲ್ಲ. ಈ ಕಾಲದಲ್ಲಿಯ ಸಂಗೀತದ ವೈಶಿಷ್ಟ್ಯ ಎಂದರೆ ಅದರ ಸಂರಕ್ಷಣ ಹಾಗೂ ವಿಕಾಸ ಯೋಗ್ಯ ವಿದ್ವಾಂಸರಿಂದ ಕ್ರಮವಾಗಿ ಆಯಿತು. ‘ದೇಶದಲ್ಲಿಯ ಪರಿಸ್ಥಿತಿಯು ಸಹ ಅತ್ಯಂತ ಸುಖಕರವಾಗಿತ್ತು. ಆದ್ದರಿಂದ ಸಂಗೀತ ಹಾಗೂ ಸಾಹಿತ್ಯದ ವಿಶೇಷ ಉನ್ನತಿ ಈ ಕಾಲದಲ್ಲಿ ಸಾಕಷ್ಟು ಆಯಿತು.

ರಜಪೂತರು ಎಷ್ಟು ಯುದ್ಧಪ್ರಿಯರಾಗಿದ್ದರೋ ಅಷ್ಟೇ ಸಂಗೀತಪ್ರಿಯರಾಗಿದ್ದರು. ಅವರು ತಮ್ಮ ರಾಜದರ್ಬಾರಿನಲ್ಲಿ ಅನೇಕ ಸಂಗೀತ ತಜ್ಞರಿಗೆ ಆಶ್ರಯ ಕೊಟ್ಟು ಅವರ ಯೋಗಕ್ಷೇಮವನ್ನು ನೋಡುತ್ತಿದ್ದರು. ಆ ಕಾಲದ ಸಂಗೀತ ಪದ್ಧತಿಯು ಮೌರ್ಯ ಹಾಗೂ ಗುಪ್ತರಕಾಲದಲ್ಲಿದ್ದಂತೆ ಇರಲಿಲ್ಲ. ಸಂಗೀತದಲ್ಲಿಯ ಆಧ್ಯಾತ್ಮಿಕತೆಯ ಅಂಶ ಲೋಪವಾಗುತ್ತ ಬಂದು ಅದರ ಹಲವು ಮುಖಗಳ ವಿಕಾಸವು ಹೆಚ್ಚಾಗುತ್ತಾ ಬಂತು. ಇದರ ಪರಿಣಾಮವಾಗಿ ಸಂಗೀತವು ಅನೇಕ ಮಾರ್ಗಗಳಲ್ಲಿ ಹಂಚಿಹೋಗಿ ಅದರ ಸಾರ್ವಭೌಮತ್ವ ನಷ್ಟವಾಯಿತು.

ಬೇರೆ ಬೇರೆ ವರ್ಗದ ಜಾತಿಗಳಲ್ಲಿ ಸಂಗೀತದ ವಿಭಜನೆಯಾಗಿದ್ದರಿಂದ ಸಂಗೀತ ಕ್ಷೇತ್ರದ ಕಲಾಕಾರರಲ್ಲಿ ಸಂಕುಚಿತ ಮನೋಭಾವನೆ ಮೂಡಲು ಪ್ರಾರಂಭಿಸಿತು. ಸಂಗೀತಗಾರರು ತಮ್ಮದೇ ಆದ ಒಂದು ವೈಶಿಷ್ಟ್ಯವನ್ನು ಸೃಷ್ಟಿಸಿ ಬೆಳಸಿ ತಮ್ಮದೇ ಆದ ಸಂಗೀತದ ಘರಾಣೆ ಅಥವಾ ಪರಂಪರೆ ಮಾಡಿಕೊಳ್ಳುತ್ತಿದ್ದರು. ಈ ಪ್ರಕಾರ ಒಂದು ಹಿಂದುಸ್ತಾನಿ ಸಂಗೀತದ ಪದ್ಧತಿಯಲ್ಲಿ ಘರಾಣೆ ಎಂಬ ಶಬ್ದವು ರಜಪೂತರ ಕಾಲದಿಂದಲೇ ಪ್ರಾರಂಭವಾಗಿರಬೇಕು. ಈ ಕಾಲದಲ್ಲಿ ಸಂಗೀತದ ಅನೇಕ ಗ್ರಂಥಗಳು ರಚಿಸಲ್ಪಟ್ಟವು. ಇವುಗಳಲ್ಲಿ ‘ನಾರದೀಯ ಶಿಕ್ಷಾ’ ಎಂಬ ಗ್ರಂಥ ವಿಶೇಷ ಉಲ್ಲೇಖನೀಯ, ಈ ಗ್ರಂಥದಲ್ಲಿ ವೈದಿಕ ಹಾಗೂ ಲೌಕಿಕ ಈ ಎರಡು ಪ್ರಕಾರದ ಸಂಗೀತ ಪದ್ಧತಿಗಳು ಹೇರಳವಾಗಿ ಉಲ್ಲೇಖಿಸಲ್ಪಟ್ಟಿವೆ. ತತ್ಕಾಲೀನ ಸಂಗೀತ ಶಾಸ್ತ್ರದ ವಿವರವಾದ ಪರಿಚಯ ನಮಗೆ ಈ ಗ್ರಂಥದಲ್ಲಿ ದೊರೆಯುತ್ತದೆ.

೧೨ ನೇ ಶತಮಾನದಲ್ಲಿ ರಜಪೂತರ ಕಾಲದಲ್ಲಿಯೇ ಭಾರತೀಯ ಸಂಗೀತದಲ್ಲಿ ಎರಡು ಪದ್ಧತಿಗಳು ಪ್ರಚಾರದಲ್ಲಿ ಬಂದವು. ಉತ್ತರ ಭಾರತದ ಹಿಂದುಸ್ತಾನಿ ಸಂಗೀತ ಹಾಗೂ ದಕ್ಷಿಣ ಭಾರತದ ಕರ್ನಾಟಕ ಸಂಗೀತ ಎಂದು ಹೀಗೆ ಭಾರತೀಯ ಸಂಗೀತದಲ್ಲಿ ಎರಡು ವಿಧದ ಪದ್ಧತಿಗಳು ಪ್ರಚಾರದಲ್ಲಿ ಬಂದವು. ಕಾರಣವೇನೆಂದರೆ ೧೧ ನೇ ಶತಮಾನದಲ್ಲಿ ಪಠಾಣರ ಆಗಮನದಿಂದಾಗಿ ಉತ್ತರ ಭಾರತದಲ್ಲಿ ಪ್ರಚಾರದಲ್ಲಿದ್ದ ಸಂಗೀತದ ಮೇಲೆ ಮುಸಲ್ಮಾನರ ಸಾಕಷ್ಟು ಪ್ರಭಾವ ಆಯಿತು. ದಕ್ಷಿಣ ಭಾರತವು ಇಂತಹ ಅಕ್ರಮಣದಿಂದ ದೂರ ಉಳಿದಿತ್ತು. ಆದ್ದರಿಂದ ಅಲ್ಲಿಯ ಸಂಗೀತದ ಕಲೆ ಹಾಗೂ ಸಂಸ್ಕೃತಿ ಸುರಕ್ಷಿತವಾಗಿ ಉಳಿಯಿತು. ಇದೇ ಕಾಲದಲ್ಲಿ ಬಂಗಾಲದ ಶ್ರೇಷ್ಠಕವಿ ಹಾಗೂ ಸಂಗೀತಜ್ಞನಾದ ಜಯದೇವ ಕವಿಯು ‘ಗೀತಗೋವಿಂದ’ ಎಂಬ ಗ್ರಂಥವನ್ನು ವಿವಿಧ ರಾಗಗಳಲ್ಲಿ ಹಾಡುವಂತೆ ರಚಿಸಿದ್ದನು.

ಕ್ರಿ.ಶ.೧೦೦೦ ವರ್ಷಗಳಿಂದ ೧೨೯೦ ರ ವರೆಗಿನ ಕಾಲದಲ್ಲಾದ ಮುಸಲ್ಮಾನರ ಆಕ್ರಮಣದಿಂದ ಭಾರತಕ್ಕೆ ತನ್ನ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಕಾಲದ ಸಂಗೀತವೂ ಪತನ ಮಾರ್ಗದಲ್ಲಿ ಸಾಗಿತ್ತು. ಭೋಗ ಪ್ರಧಾನ ಶೃಂಗಾರ ವಾತಾವರಣವು ಭಾರತೀಯ ಸಂಗೀತದಲ್ಲಿ ಸಮಾವೇಶವಾಗುತ್ತಿತ್ತು. ಇದರಿಂದ ಸಂಗೀತದ ರೂಪ ವಿರೂಪವಾಗಿ ಅದರಲ್ಲಿಯ ಪಾವಿತ್ರ್ಯ ಕಡಿಮೆಯಾಗಲು ಪ್ರಾರಂಭವಾಯಿತು. ಸಂಗೀತದ ಪರಂಪರೆ ಈ ಕಾಲದಲ್ಲಿ ಮಿಶ್ರಿತರೂಪ ಹೊಂದಿತು.

ಭೌಗೋಲಿಕ ಕಾರಣದಿಂದ ಹಾಗೂ ರಾಜನೀತಿ ಕಾರಣದಿಂದಾಗಲೀ ದಕ್ಷಿಣ ಭಾರತದಲ್ಲಿ ಮುಸಲ್ಮಾನರ ಆಕ್ರಮಣ ವಿಶೇಷವಾಗಲಿಲ್ಲ. ಪರಿಣಾಮವಾಗಿ ಉತ್ತರ ಭಾರತದಲ್ಲಿಯ ಅಭಿಜಾತಕಲೆಯ ಪತನದ ನಂತರವೂ ದಕ್ಷಿಣ ಭರತದಲ್ಲಿ ಸಂಗೀತ ಸಾಹಿತ್ಯ, ಕಲೆ, ಹಾಗೂ ವಿಜ್ಞಾನದ ಉತ್ಪತ್ತಿಯಾಯಿತು. ಆ ಕಾಲದಲ್ಲಿಯ ಸಂಗೀತದ ಸ್ಥಿತಿ ಹಾಗೂ ವಿಕಾಸದ ಬಗ್ಗೆ ಮತ್ತು ಆ ಕಾಲದಲ್ಲಿ ಬರೆದ ಗ್ರಂಥಗಳಿಂದ ನಮಗೆ ದೊರೆಯುತ್ತದೆ.

೧೩ ನೇ ಶತಮಾನದಲ್ಲಿ ಅಲ್ಲಾ-ಉದ್-ದೀನ್ ಖಿಲ್ಜಿಯ ದರ್ಬಾರದಲ್ಲಿದ್ದ ಅಮೀರ ಖುಸ್ರು ಎಂಬ ಶ್ರೇಷ್ಠ ಪಾರ್ಸಿ ಕವಿ ಹಾಗೂ ಸಂಗೀತಜ್ಞನು ಉತ್ತರ ಭಾರತೀಯ ಸಂಗೀತದಲ್ಲಿ ಇರಾಣಿ ಹಾಗೂ ಪಾರ್ಸಿ ಸಂಗೀತದ ಪ್ರಭಾವವನ್ನು ಬೀರಿ ಒಂದು ಹೊಸ ಸಂಗೀತ ಶೈಲಿ ಪ್ರಸ್ಥಾಪಿಸಿದನು. ಇದುವೇ ಆಧುನಿಕ ಕಾಲದಲ್ಲಿ ಪ್ರಚಾರದಲ್ಲಿರುವ ಹಿಂದುಸ್ತಾನಿ ಸಂಗೀತ ಎಂದು ಹೇಳಲಾಗುತ್ತದೆ.

ಅಮೀರ ಖುಸ್ರು ಭಾರತೀಯ ಸಂಗೀತದಲ್ಲಿ ಪ್ರಪ್ರಥಮವಾಗಿ ಖ್ಯಾಲ ಹಾಗೂ ಕವ್ವಾಲಿ ಹಾಡುಗಾರಿಕೆಯ ಶೈಲಿಗಳನ್ನು ಪ್ರಚಾರದಲ್ಲಿ ತಂದನು. ಅನೇಕ ಹೊಸ ರಾಗಗಳನ್ನು ರಚಿಸಿದನು. ಉದಾ: ಉಷಾ, ಶಾಜಿಗಿರಿ, ಝಿಲಧ್, ಯಮನ್ ಮುಂತಾದವು ಉಲ್ಲೇಖನೀಯವಾಗಿವೆ. ಸಂಗೀತ ವಾದ್ಯಗಳಲ್ಲಿಯೂ ಸಹ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿ, ಸೆಹತಾರ, (ಸಿತಾರ) ತಬಲಾ, ದಿಲ್ ರುಬಾ, ಮುಂತಾದ ವಾದ್ಯಗಳನ್ನು ನಿರ್ಮಿಸಿದನು. ಇದೇ ಕಾಲದಲ್ಲಿ ದಕ್ಷಿಣ ಭಾರತದ ‘ದೇವಗಿರಿ’ ಯಲ್ಲಿ ಗೋಪಾಲ ನಾಯಕ ಎಂಬ ಶ್ರೇಷ್ಠ ಸಂಗೀತಗಾರನಿದ್ದನು. ಇವನ ಸಮಕಾಲೀನನಾದ ಆಚಾರ್ಯ ಸಾರಂಗ ದೇವನು ‘ಸಂಗೀತ ರತ್ನಾಕರ’ ಎಂಬ ಗ್ರಂಥವನ್ನು ರಚಿಸಿದನು.

ಪ್ರಾಚೀನ ಕಾಲದ ವಿದ್ವಾಂಸರಾದ ಭರತ, ಮಾತಂಗ, ಸೋಮೇಶ್ವರ ಹಾಗೂ ಹನುಮಾನ ಇವರು ಬರೆದ ಸಂಗೀತ ಗ್ರಂಥಗಳು ತಿಳಿಯಲು ಸಾಧ್ಯವಾಗಿದ್ದರಿಂದ ಸಾರಂಗ ದೇವನು ಸಂಗೀತಾಚಾರ್ಯರ ಗ್ರಂಥಗಳ ಮಥನ ಮಾಡಿ ‘ಸಂಗೀತರತ್ನಾಕರ’ ಎಂಬ ಗ್ರಂಥ ರಚಿಸಿದನು. ಸಂಗೀತದಲ್ಲಿ ಉಪಲಬ್ಧವಿರುವ ಗ್ರಂಥಗಳಲ್ಲಿ ಸಂಗೀತರತ್ನಾಕರ ಎಂಬ ಗ್ರಂಥವು ಮುಕುಟ ಮಣಿಯಾಗಿದೆ. ಸಾರಂಗ ದೇವನು ತನ್ನ ಸಂಗೀತ ರತ್ನಾಕರ ಎಂಬ ಗ್ರಂಥವನ್ನು ಸ್ವರಾಧ್ಯಾಯ, ರಾಗಧ್ಯಾಯ, ಪ್ರಕ್ರಿಣಾಧ್ಯಾಯ, ತಾಲಾಧ್ಯಾಯ, ವಾದ್ಯಾಧ್ಯಾಯ, ಹಾಗೂ ನೃತ್ಯಾಧ್ಯಾಯ ಎಂಬ ೬ ಭಾಗಗಳಲ್ಲಿ ವಿಭಜಿಸಿದ್ದಾನೆ. ಇದರಲ್ಲಿ ಪ್ರಾಚೀನ ಕಾಲದ ಹಾಗೂ ಸಾರಂಗ ದೇವನ ಕಾಲದಲ್ಲಿದ್ದ ಸಂಗೀತ ವರ್ಣನೆ ಮಾಡಲಾಗಿದೆ.

ಇದೇ ಕಾಲದಲ್ಲಿ ಬರೆಯಲಾದ ಸಂಗೀತದ ಗ್ರಂಥಗಳಾದ ‘ಚಾರುಮತಿ’ ಎಂಬ ಕನ್ನಡ ಭಾಷೆಯಲ್ಲಿ ಬರೆದ ಗ್ರಂಥ, ಸಂಗೀತರತ್ನಾವಲಿ ಹಾಗೂ ಪಾಶ್ವಕದೇವನ ಸಂಗೀತಸಮಯಸಾರ ಎಂಬ ಗ್ರಂಥಗಳು ವಿಶೇಷ ಉಲ್ಲೇಖನಿಯವಾಗಿದೆ.

ಮೊಗಲರ ಆಳ್ವಿಕೆಯಲ್ಲಿ ವಿಶೇಷವಾಗಿ ಅಕ್ಬರನ ಕಾಲದಲ್ಲಿ ಭಾರತೀಯ ಸಂಗೀತದ ವಿಶೇಷತಃ ಹಿಂದುಸ್ತಾನಿ ಸಂಗೀತದ ಪ್ರಸಾರ ಭರದಿಂದ ಸಾಗಿತು. ಅಕ್ಬರನು ಮಹಾನ್ ಸಂಗೀತ ಪ್ರೇಮಿಯಾಗಿದ್ದನು, ಪ್ರಸಿದ್ಧ ಪಾರ್ಸಿ ಇತಿಹಾಸಕಾರನಾದ ‘ಅಬುಲ್ ಫಜಲನು’ ಬರೆದ ‘ಐನೀ ಅಕ್ಬರಿ’ ಎಂಬ ಗ್ರಂಥದಲ್ಲಿ ಅಕ್ಬರನ ಸಂಗೀತ ಪ್ರೇಮ ಹಾಗೂ ಅವನ ಕಾಲದಲ್ಲಿದ್ದ ಸಂಗೀತಕಾರರು ಹಾಗೂ ಅವನ ಕಾಲದಲ್ಲಿದ್ದ ಸಂಗೀತಕಾರರು ಹಾಗೂ ಅವನ ದರಬಾರದಲ್ಲಿದ್ದ ಪ್ರಮುಖ ಸಂಗೀತಗಾರರಲ್ಲಿ ‘ಮಿಯಾ ತಾನ ಸೇನ’ ಹಾಗೂ ಬೀನವಾದಕರಾದ ‘ಶಿಹಾಬಜಾನ’ ಬಾಸುರಿವಾದಕರಾದ ಉಸ್ತಮಾನ ಮುಂತಾದವರ ಹೆಸರು ಉಲ್ಲೇಖನೀಯವಾಗಿದೆ. ಅವನ ನಗಾರ ಖಾನೆಯಲ್ಲಿ ನಕಾರ, ಕರ್ಣಾ, ಸಿಂಗ, ಮಂಚಿತಾ ಮುಂತಾದ ವಾದ್ಯಗಳು ಉಪಯೋಗಿಸಲ್ಪಡುತ್ತಿದ್ದವು. ಇವರ ಕಾಲದಲ್ಲಿಯೇ ತಾನಸೇನ, ಸ್ವಾಮಿ ಹರಿದಾಸ, ಸೂರದಾಸ, ಮೀರಾಬಾಯಿ ಮುಂತಾದ ಶ್ರೇಷ್ಠ ಸಂಗೀತ ವಿದ್ವಾಂಸರು ಆಗಿಹೋದರು ಇದಲ್ಲದೇ ಅಕ್ಬರನ ಕಾಲದಲ್ಲಿ ಮಂದಿರ ಸಂಗೀತ ಅಥವಾ ಹವೇಲಿ ಸಂಗೀತ ಎಂದು ಪ್ರಚಾರದಲ್ಲಿರುವ ಸಂಗೀತ ಕೂಡ ಪ್ರಚಾರದಲ್ಲಿತ್ತು. ಮಂದಿರದಲ್ಲಿ ಹಾಡಲ್ಪಡುವ ಸಂಗೀತದಲ್ಲಿ ಕೇವಲ ದೇವರ ಭಕ್ತಿಪರ ರಚನೆಗಳು ಮಾತ್ರ ಹಾಡಲ್ಪಡುತ್ತಿದ್ದವು. ಈ ರಚನೆಗಳು ವಿಷ್ಣುಪದ ಹಾಗೂ ಧ್ರುಪದದಂತಹ ಸಂಗೀತದ ಶ್ರೇಷ್ಠ ಶೈಲಿಗಳಲ್ಲಿ ಹಾಡಲ್ಪಡುತ್ತಿದ್ದವು.