ಸ್ವಾಮಿ ಹರಿದಾಸ, ಕೃಷ್ಣದಾಸ, ಕುಂಬನದಾಸ, ಸೂರದಾಸ, ನಂದದಾಸ, ವಲ್ಲಭಾಚಾರ್ಯ, ಮುಂತಾದ ಭಕ್ತಕವಿಗಳ ರಚನೆಗಳು ಭಕ್ತಕವಿಗಳ ರಚನೆಗಳು ಶಾಸ್ತ್ರೀಯ ಸಂಗೀತದಲ್ಲಿಯ ಉಚ್ಚ ಮಟ್ಟದ ರಚನೆಗಳಾಗಿವೆ. ಬಾದಶಾಹನ ದರಬಾರದಲ್ಲಿ ಕೇವಲ ರಾಜನ ಸ್ತುತಿಪರ ಮತ್ತು ಶೃಂಗಾರಪರ ರಚನೆಗಳನ್ನು ಒಳಗೊಂಡು ಸಂಗೀತ ನಡೆಯುತ್ತಿತ್ತು. ಹೀಗಾಗಿ ಆ ಕಾಲದಲ್ಲಿ ದರ್ಬಾರದಲ್ಲಿ ನಡೆಯುವಂಥ ಸಂಗೀತಕ್ಕೆ ‘ದರಬಾರಿ ಸಂಗೀತ’ ಮತ್ತು ದೇವಸ್ಥಾನದಲ್ಲಿ ನಡೆಯುವ ಸಂಗೀತಕ್ಕೆ ‘ಹವೇಲಿ ಸಂಗೀತ ಅಥವಾ ಮಂದಿರದ ಕೀರ್ತನ ಸಂಗೀತ’ ಎಂದು ಕರೆಯುತ್ತಿದ್ದರು.

ಔರಂಗಜೇಬನ ಕಾಲದಲ್ಲಿ ಸಂಗೀತಕ್ಕೆ ಅಷ್ಟು ಪ್ರೋತ್ಸಾಹ ದೊರೆಯಲಿಲ್ಲ. ಏಕೆಂದರೆ ಅವನಿಗೆ ಭಾರತೀಯ ಸಂಗೀತದ ಬಗೆಗೆ ಅತ್ಯಂತ ತಿರಸ್ಕಾರವಿತ್ತು. ಅವನ ದರಬಾರದಲ್ಲಿದ್ದ ಎಲ್ಲ ಸಂಗೀತಗಾರರನ್ನು ದೂರ ಅಟ್ಟಿದನು. ಅದರ ಪರಿಣಾಮವಾಗಿ ದರಬಾರದಲ್ಲಿದ್ದ ಶ್ರೇಷ್ಠ ಸಂಗೀತಗಾರರು ವೇಶ್ಯಾವೃತ್ತಿ ಮಾಡುವ ನೃತ್ಯಾಂಗನೆಯರ ಆಶ್ರಯ ಪಡೆಯಬೇಕಾಯಿತು. ಇದರಿಂದಾಗಿ ಸಂಗೀತದಲ್ಲಿ ಅಶ್ಲೀಲ ಶೃಂಗಾರಯುಕ್ತ ರಚನೆಯಾಗತೊಡಗಿದವು. ಹೀಗಾಗಿ ಈ ದರ್ಬಾರಿ ಸಂಗೀತದ ಬಗೆಗೆ ಜನರಲ್ಲಿ ಒಂದು ತರಹದ ತಿರಸ್ಕಾರ ಭಾವನೆ ಉಂಟಾಯಿತು. ಮುಂದೆ ಮಹಮ್ಮದ್ ಶಾ ರಂಗಿಲೆ ಕಾಲದಲ್ಲಿ ‘ಸದಾರಂಗ’ ಮತ್ತು ‘ಅದಾರಂಗ’ನಂತಹ ಶ್ರೇಷ್ಠ ಸಂಗೀತ ವಿದ್ವಾಂಸರಿಂದ ಸಂಗೀತಕ್ಕೆ ಪುನಃ ಚೈತನ್ಯಪ್ರಾಪ್ತವಾಯಿತು. ‘ಸದಾರಂಗ’ ಮತ್ತು ‘ಅದಾರಂಗ’ ಇವರು ಜಟಿಲವಾದ ಧ್ರುಪದ ಗಾಯನದ ಬದಲಾಗಿ ಸೌಮ್ಯ ಹಾಗೂ ಮನೋಧರ್ಮವುಳ್ಳ ಖ್ಯಾಲ ಹಾಡುಗಾರಿಗೆಯ ಪ್ರಚಾರ ಮಾಡತೊಡಗಿದರು. ಇಂದಿಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಅವರು ಮಾಡಿದ ರಚನೆಗಳು ಹಾಡಲ್ಪಡುತ್ತವೆ.

ದಕ್ಷಿಣ ಭಾರತದಲ್ಲಿ ಹಿಂದುಸ್ಥಾನಿ ಸಂಗೀತಕ್ಕಿಂತ ಕರ್ನಾಟಕ ಸಂಗೀತ ಭರದಿಂದ ಪ್ರಚಾರವಾಗತೊಡಗಿತು. ದಕ್ಷಿಣ  ಭಾರತದ ಜನರು ಸಂಗೀತದಲ್ಲಿಯ ಪಾವಿತ್ರ್ಯ ಹಾಗೂ ಘನತೆ ಕೇವಲ ದಕ್ಷಿಣ ಭಾರತದಲ್ಲಿ ಆ ಕಾಲದಲ್ಲಿ ಕಂಡು ಬರುತ್ತಿತ್ತು. ಕರ್ನಾಟಕ ಸಂಗೀತ ಬೆಳವಣಿಗೆಯಲ್ಲಿ ದಕ್ಷಿಣ ಭಾರತದಲ್ಲಿ ಉದಯಿಸಿದ ಅನೇಕ ವಿದ್ವಾಂಸರು ತಮ್ಮ ಸೇವೆಯನ್ನು ಸಲ್ಲಿಸಿದರು. ಇವರಲ್ಲದೇ ವಿದ್ವಾಂಸರಾದ ಮಾರ್ಗದರ್ಶಿ ಶೇಷಯ್ಯಂಗಾರರು ಹಾಗೂ ತಂಜಾವೂರಿನ ಗೋವಿಂದರಾವ ದೀಕ್ಷಿತ ಇವರ ಹೆಸರುಗಳು ಉಲ್ಲೇಖನೀಯವಾಗಿವೆ. ಮಾರ್ಗದರ್ಶಿ ಶೇಷಯ್ಯಂಗಾರರು ದಕ್ಷಿಣ ಭಾರತದ ತಮಿಳುನಾಡಿನವರಾಗಿದ್ದರು. ಇವರು ಶ್ರೇಷ್ಠ ಸಂಗೀತಜ್ಞರು ಹಾಗೂ ಸಂಸ್ಕೃತ ಪಂಡಿತರಾಗಿದ್ದರು. ಇವರು ‘ಕೋಸಲ’ ಎಂಬ ಉಪನಾಮದಿಂದ ಅನೇಕ  ಸಂಗೀತ ರಚನೆಗಳನ್ನು ರಚಿಸಿದರು. ಇವರ ಎಲ್ಲ ಕೃತಿಗಳು ಶಾಸ್ತ್ರಬದ್ಧವಾಗಿರುವುದರಿಂದ ಜನರು ಇವರಿಗೆ ‘ಮಾರ್ಗದರ್ಶಿ’ ಎಂಬ ಬಿರುದುಕೊಟ್ಟು ಗೌರವಿಸಿದರು. ಕರ್ನಾಟಕ ಸಂಗೀತದಲ್ಲಿ ಇವರು ರಚಿಸಿದ ಕೀರ್ತನೆಗಳು ಅತ್ಯಂತ ಮಹತ್ವಪೂರ್ಣವಾಗಿವೆ.

ತಂಜಾವೂರಿನ ಪ್ರಸಿದ್ಧ ಸಂಗೀತ ವಿದ್ವಾಂಸರಾದ ಗೋವಿಂದ ದೀಕ್ಷಿತರು ‘ಸಂಗೀತಸುಧಾ’ ಎಂಬ ಕರ್ನಾಟಕ ಸಂಗೀತದ ಗ್ರಂಥವನ್ನು ರಚಿಸಿದರು. ಇದಲ್ಲದೇ ಗೋವಿಂದ ದೀಕ್ಷಿತರು ‘ಜಯಂತ ಸೇನ’ ಎಂಬ ಹೊಸ ರಾಗದ ಸೃಷ್ಟಿಯನ್ನು ಮಾಡಿದರು. ಇದೇ ಕಾಲದಲ್ಲಿ ಭಾವಭಟ್ಟ, ಪಂ. ವೆಂಕಟಮುಖಿ, ಅಕಳಂಕ, ವಿಕ್ರಮ, ಕ್ಷೇತ್ರಜ್ಞ ಮುಂತಾದ ಶ್ರೇಷ್ಠ ವಿದ್ವಾಂಸರು ಆಗಿಹೋದರು. ಭಾವಭಟ್ಟರು ಬಿಕಾನಿರದ ಅರಸರಾದ ಮಹಾರಜ ‘ಅನುಪಸಿಂಹ’ ಇವರ ಆಶ್ರಯದಲ್ಲಿದ್ದರು. ಇವರು ಅನುಪವಿಲಾಸ್, ಅನುಪಸಂಗೀತರತ್ನಾಕರ ಅನುಪಾಂಕುಶ ಹಾಗೂ ‘ಸಂಗೀತ ವಿನೋದ’ ಎಂಬ ಸಂಗೀತ ಗ್ರಂಥಗಳನ್ನು ರಚಿಸಿದರು. ಈ ಗ್ರಂಥಗಳಲ್ಲಿ ಈಗ ಪ್ರಾಪ್ತವಾದ ಅನುಪಸಂಗೀತ ರತ್ನಾಕರದಲ್ಲಿ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತದ ಬಗ್ಗೆ ವಿವೇಚನೆ ಮಾಡಲಾಗಿದೆ.

ಕ್ರಿ.ಶ. ೧೬೬೦ ರಲ್ಲಿ ತಂಜಾವೂರಿನ ವಿಜಯ ‘ರಾಘವರಾಯು’ ಎಂಬ ಅರಸರ ಬಳಿ ಮಂತ್ರಿಯಾಗಿದ್ದ ಪ್ರಸಿದ್ಧ ಸಂಗೀತ ವಿದ್ವಾಂಸರಾದ ಪಂ. ವೆಂಕಟಮುಖಿಯವರು ‘ಚಂತುರಡಿ ಪ್ರಕಾಶಿಕಾ’ ಎಂಬ ಗ್ರಂಥವನ್ನು ರಚಿಸಿದರು. ಈ ಗ್ರಂಥದಲ್ಲಿ ಅವರು ‘ರಾಮಾಮಾತ್ಯರ’ ಸ್ವರಮೇಳ ಕಲಾ ನಿಧಿಯ ಕಟುವಾದ ಟೀಕೆ ಮಾಡಿ ವೀಣೆ, ಶೃತಿ, ಮೇಳ, ರಾಗ ಆಲಾಪನೆ, ಕಾಯಗೀತ ಪ್ರಬಂಧ ಹಾಗೂ ತಾಲಗಳ ಬಗೆಗೆ ವಿವೇಚನೆ ಮಾಡಿದ್ದಾರೆ. ಸಪ್ತಕದ ೧೨ ಸ್ವರಗಳಿಂದ ೭೨ ಮೇಳಗಳ ರಚನೆಗಳನ್ನು ಇವರು ಗಣಿತ ಪದ್ಧತಿಯನುಸಾರವಾಗಿ ಮಾಡಿದ್ದಾರೆ. ಒಂದು ಮೇಳದಿಂದ ೪೮೪ ರಾಗಗಳ ಉತ್ಪತ್ತಿಯನ್ನು ಸಹ ಸಿದ್ಧ ಮಾಡಿದ್ದಾರೆ. ಇವರ ಕಾಲದಲ್ಲಿ ಪ್ರಚಾರದಲ್ಲಿದ್ದ ಅನೇಕ ರಾಗಾಂಗ, ಭಾವಾಂಗ, ಉದಾಂಗ ರಾಗಗಳ ಲಕ್ಷಣಗಳನ್ನು ಇವರು ನಿರೂಪಿಸಿದ್ದಾರೆ. ಕರ್ನಾಟಕ ಸಂಗೀತ ಶಾಸ್ತ್ರದ ನಿರೂಪಣೆ ಮಾಡಿದ ಶ್ರೇಯಸ್ಸು ಪಂ. ವೆಂಕಟಮುಖಿಯವರಿಗೆ ಸಲ್ಲುತ್ತದೆ.

ಪಂ. ವೆಂಕಟಮುಖಿಯರ ನಂತರ ತಮಿಳು ನಾಡಿನ ವಿದ್ವಾಂಸರಾದ ಆಕಳಂಕರು ‘ಸಂಗೀತ ಸಾರ’ ಎಂಬ ಗ್ರಂಥ ರಚಿಸಿದರು. ಇದರಲ್ಲಿ ೨೪ ಶೃತಿಗಳ ಬ್ರಹ್ಮ ವೀಣೆಯ ವಿಚಾರವಾಗಿ ಚರ್ಚಿಸಲಾಗಿದೆ. ಪಂ. ವೆಂಕಟಮುಖಿಯ ಹಾಗೆ ಇವರೂ ಕೂಡ ಒಂದು ಹೊಸ ಮೇಳ ಪದ್ಧತಿಯ ರಚನೆ ಮಾಡಿದರು.

ಭಾರತೀಯ ಇತಿಹಾಸದಲ್ಲಿ ಕ್ರಿ.ಶ. ೧೭೦೧ ರಿಂದ ೧೯೪೭ರ ವರೆಗಿನ ಕಾಲ ಬ್ರಿಟಿಷರ ಕಾಲ ಎಂದು ಭಾವಿಸಲಾಗುತ್ತದೆ. ಈ ಕಾಲದಲ್ಲಿಯ ಭಾರತೀಯ ಸಂಗೀತದಲ್ಲಿ ಅನೇಕ ಪರಿವರ್ತನೆಗಳು ಕಂಡುಬರುತ್ತವೆ. ಹಿಂದುಸ್ತಾನಿ ಸಂಗೀತದ ಹೊಸ ಹೊಸ ಶೈಲಿಗಳ ಉಗಮವಾಯಿತು. ೧೮ ನೇ ಶತಮಾನದ ಪೂರ್ವಾರ್ಧದಲ್ಲಿ ಮಹಮ್ಮದಶಾ ಹರಂಗೀಲ್ ಮೊಗಲ್ ವಂಶದ ಕೊನೆಯ ಬಾದಶಹನಾಗಿದ್ದನು. ಇವನು ಅತ್ಯಂತ ಸಂಗೀತ ಪ್ರೇಮಿಯಾಗಿದ್ದನು. ಇವರ ದರಬಾರಿನಲ್ಲಿ ‘ನ್ಯಾಮತ್ ಖಾನ್’ ಎಂಬ ವೈಣಿಕನಿದ್ದನು. ಇವನು ಸದಾರಂಗಿಲೆ ಎಂಬ ಉಪನಾಮ ಧರಿಸಿ ಮಹಮದ ಶಹಾನ ವರ್ಣನೆಗಳನ್ನು ತನ್ನ ರಚನೆಗಳಲ್ಲಿ ಮಾಡಿ ಸಂಗೀತ ಕ್ಷೇತ್ರದಲ್ಲಿ ಇವನ ಹೆಸರನ್ನು ಅಮರಗೊಳಿಸಿದ್ದಾನೆ. ಅವನ ಪುತ್ರನಾದ ಫಿರೋಜ ಖಾನ್ ಆದಾರಂಗ ಎಂಬ ಹೆಸರನ್ನು ಧರಿಸಿ ಅನೇಕ ಖ್ಯಾಲಗಳನ್ನು ರಚಸಿ ಹಿಂದುಸ್ತಾನಿ ಖ್ಯಾಲ ಪದ್ಧತಿಯ ಪ್ರಸಾರ ಮಾಡಿದನು.

ಟಪ್ಪಾ ಎಂಬ ಗಾಯನ ಶೈಲಿಯ ಉಗಮ ಇದೇ ಕಾಲದಲ್ಲಿ ಆಯಿತು. ಲಕನೌದ ‘ಮಿಯಾಶೋರಿ’ ಎಂಬ ಗಾಯಕನು ಇದರ ಜನಕನಾಗಿದ್ದಾನೆಂದು ಹೇಳಲಾಗುತ್ತದೆ. ವಾಸ್ತವವಾಗಿ ಟಪ್ಪಾ ಗಾಯನ ಪ್ರಕಾರವು ಪ್ರಥಮವಾಗಿ ಪಂಜಾಬದ ಲೋಕ ಗೀತದ ಪ್ರಕಾರವಾಗಿದ್ದು. ಉಸುಕಿನ ಪ್ರದೇಶದಲ್ಲಿ ಒಂಟೆಯ ಮೇಲೆ ಪ್ರವಾಸ ಮಾಡುವ ಜನರು ಈ ಗಾಯನ ಪರಕಾರವನ್ನು ಬಳಸುತ್ತಿದ್ದರೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಮುಂದೆ ವಿಯಾಶೋರಿ ಇವನು ಈ ಲೋಕ ಗೀತದಲ್ಲಿ ಕೆಲವು ಪರಿವರ್ತನೆಗಳನ್ನು ಮಾಡಿ ಅವುಗಳಿಗೆ ಲಾಸ್ಯಬದ್ಧ ರೂಪವನ್ನು ಕೊಟ್ಟನು.

೧೮ ನೇ ಶತಮಾನದ ಉತ್ತರಾರ್ಧದಲ್ಲಿ ಸಂಗೀತದ ಸಾಧನೆ ಹಾಗೂ ಅದರ ಬೆಳವಣಿಗೆ ಸಾಧಾರಣ ರೂಪದಿಂದ ನಡೆಯುತ್ತಿತ್ತು. ಮುಸಲ್ಮಾನರ ಶಕ್ತಿ ಕ್ಷೀಣಿಸುತ್ತಾ, ಭಾರತದ ಮೇಲೆ ಬ್ರಿಟಿಷರ ಅಧಿಕಾರ ದಿನೇ ದಿನೇ ಹೆಚ್ಚುತ್ತಿದ್ದ ದುರ್ಬರ ಕಾಲದಲ್ಲಿ ಸಂಗೀತಕಲೆಯು ರಾಜಾಶ್ರಯದಿಂದ ಹೊರ ಬಂದು ಸ್ವತಂತ್ರ ರೂಪದಿಂದ ಸಣ್ಣ ಪುಟ್ಟ ಸಂಸ್ಥಾನದಲ್ಲಿ ಬೆಳೆಯಹತ್ತಿತು. ಈ ಕಾಲದಲ್ಲಿ ಹಿಂದುಸ್ತಾನಿ ಸಂಗೀತದಲ್ಲಿ ಒಂದು ಹಾಗು ಪಾರ್ಸಿ ಸಂಗೀತದ ಸಮ್ಮಿಶ್ರಣವಾದದ್ದು ಕಂಡುಬರುತ್ತದೆ.

ಪಾರ್ಸಿ ಶಾಸ್ತ್ರೀಯ ಸಂಗೀತದ ಕೆಲವು ಪ್ರಕಾರಗಳು ಪೂರ್ಣವಾಗಿ ಇದ್ದಕ್ಕಿದ್ದಂತೆ ಹಿಂದುಸ್ತಾನಿ ಸಂಗೀತದಲ್ಲಿ ಒಳಗೊಂಡವು ಉದಾ: ಕವ್ವಾಲಿ, ಕುರ್ಬಾನ, ಶೇಖತಾ, ಗಜಲ್ ಮುಂತಾದವು.

ಭಾರತಕ್ಕೆ ಯುರೋಪಿಯನ್ನರ ಆಗಮನದಿಂದ ಒಂದು ರೀತಿಯ ಅನೈತಿಕತೆ ಹಾಗೂ ಅಸ್ಥಿರತೆ ಹೆಚ್ಚಿತು. ಬ್ರಿಟೀಷರು ನಮ್ಮ ಸಂಗೀತದ ಕಡೆಗೆ ಒಳ್ಳೆಯ ಭಾವನೆಯಿಂದ ನೋಡುತ್ತಿರಲಿಲ್ಲ. ಸಂಗೀತದ ರೂಪವೂ ಸಹ ಅತ್ಯಂತ ಅಶ್ಲೀಲವಾಗಿತ್ತು ಗಜಲ, ಠುಮರಿ, ಮುಂತಾದ ಗಾಯನ ಶೈಲಿಗಳಲ್ಲಿ ಶ್ರಂಗಾರವೇ ಹೆಚ್ಚಿರುತ್ತಿತ್ತು. ಸಂಗೀತವು ಕೇವಲ ಭೋಗ ವಿಲಾಸ ಎಂದು ತಿಳಿಯಲಾಗಿತ್ತು. ಪರಿಣಾಮವಾಗಿ ಸುಶಿಕ್ಷಿತ ಸ್ತ್ರೀ ಪುರುಷರು, ಹಿಂದುಸ್ತಾನಿ ಸಂಗೀತಗಾರರನ್ನು ಚಾರಿತ್ರ್ಯ ಹೀನರೆಂದು ಭಾವಿಸುತ್ತಿದ್ದರು. ಇದರಿಂದಾಗಿ ಸಂಗೀತದ ಗೌರವ ಕೆಳಮಟ್ಟಕ್ಕೆ ಇಳಿಯಲು ಪ್ರಾರಂಭವಾಯಿತು.

ಸುಗಮ ಸಂಗೀತ ಹಾಗೂ ನಾಟ್ಯ ಸಂಗೀತದ ಪ್ರಕಾರವು ಕರ್ನಾಟಕ ಹಾಗೂ ಮಹಾರಾಷ್ಟ್ರ ಪ್ರಾಂತಗಳಲ್ಲಿ ಇದೇ ಕಾಲದಲ್ಲಿ ಉದಯಿಸಿತು. ಶಾಸ್ತ್ರೀಯ ಸಂಗೀತದಲ್ಲಿಯ ಶೃಂಗಾರ ರಚನೆಗಳಿಂದ ಬೇಸತ್ತ ಜನರು ನಿಸರ್ಗದ ಸುಂದರ ಚಿತ್ರಣ, ಪ್ರಸಂಗ ವಿಶೇಷದ ಚಿತ್ರಣ ಮುಂತಾದ ವಿಷಯಗಳನ್ನು ಜೋಡಿಸಿದ ಸುಗಮ ಹಾಗೂ ನಾಟ್ಯ ಸಂಗೀತದ ಕಡೆಗೆ ಆಕರ್ಷಿತರಾದರು.

ದಕ್ಷಿಣ ಭಾರತದಲ್ಲೂ ಕರ್ನಾಟಕ ಸಂಗೀತದ ಪ್ರಚಾರ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿತ್ತು. ಈ ಕಾಲದಲ್ಲಿ ತಮಿಳುನಾಡು ಆಂಧ್ರ ಹಾಗೂ ಕರ್ನಾಟಕದ ಭಾಗಗಳಲ್ಲಿ ಅನೇಕ ಹೆಸರಾಂತ ಸಂಗೀತ ವಿದ್ವಾಂಸರು ಆಗಿಹೋದರು. ಇವರಲ್ಲಿ ಪಲ್ಲವಿ ಗೋಪಾಲಯ್ಯರ. ತುಳಜಾಜಿ ಮಹಾರಾಜ್, ರಾಮಸ್ವಾಮಿ ದೀಕ್ಷಿತರು, ಶ್ಯಾಮ ಶಾಸ್ತ್ರಿಗಳು, ತ್ಯಾಗರಾಜರು ಮತ್ತು ಸ್ವಾಮಿ ದಿಕ್ಷಿತರು, ಮಹಾ ರಾಜಾಸ್ವಾತಿ ತಿರುನಾಳ್ ಮುಂತಾದವರ ಹೆಸರುಗಳು ವಿಶೇಷ ಉಲ್ಲೇಖನೀಯವಾಗಿದೆ. ದಕ್ಷಿಣ ಭಾರತದ ಕರ್ನಾಟಕ ಸಂಗೀತದ ‘ಸುವರ್ಣ ಯುಗ’ ಇದೇ ಎಂದು ಹೇಳಲಾಗುತ್ತದೆ.

ಇದೇ ಸಮಯದಲ್ಲಿ ಶ್ರೀನಿವಾಸ ಪಂಡಿತ ಎಂಬ ವಿದ್ವಾಂಸರು ‘ರಾಗ ತತ್ವ ವಿಬೋಧ’ ಎಂಬ ಸಂಗೀತ ಗ್ರಂಥವನ್ನು ರಚಿಸಿದರು. ಈ ಗ್ರಂಥದಲ್ಲಿ ಅಧಿಕಾಂಶವು ಅಹೋಬಲನ ಗ್ರಂಥ ‘ಸಂಗೀತ ಪಾರಿಜಾತ’ ದ ಕ್ಲಿಷ್ಟ ತತ್ವಗಳನ್ನು ವಿಮರ್ಶಿಸಿದ್ದಾನೆ.

ಕರ್ನಾಟಕ ಸಂಗೀತ ಚರಿತ್ರೆಯಲ್ಲಿ ೧೮ ನೇ ಶತಮಾನದ ಉತ್ತರಾರ್ಧದಿಂದ ೧೯ ನೇ ಶತಮಾನದ ಉತ್ತರಾರ್ಧ ಕಾಲವು ಅತ್ಯಂತ ಮಹತ್ವಪೂರ್ಣ ಎಂದು ಹೇಳಲಾಗಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತದ ಪ್ರಚಾರ ಹಾಗೂ ಅದರ ಬೆಳವಣಿಗೆ ಭರದಿಂದ ನಡೆದಿತ್ತು. ಧರ್ಮ ಹಾಗೂ ಅಧ್ಯಾತ್ಮದ ಹಿನ್ನೆಲೆಯಲ್ಲಿ ಜನರ ಹೃದಯದಲ್ಲಿ ಸಂಗೀತದ ಪ್ರಭಾವ ಅತೀ ಆಳವಾಗಿ ಬೇರೂರಿತ್ತು. ಸಂಗೀತ, ನೃತ್ಯ, ನಾಟಕ ಮುಂತಾದವುಗಳ ಪ್ರಸಾರ ದೇವಾಲಯಗಳಲ್ಲಿ, ಹೊಲಗದ್ದೆಗಳಲ್ಲಿ ಹಾಗೂ ಚಿಕ್ಕ ಗುಡಿಸಲುಗಳಲ್ಲಿಯೂ ಸಹ ನಡೆಯುತ್ತಿತ್ತು. ಕೆಲವು ಸಂಸ್ಥಾನಿಕರು ಹಾಗೂ ಧನಿಕರು ಶ್ರೇಷ್ಠ ಸಂಗೀತಜ್ಞರಿಗೆ ಉಚ್ಚ ಸ್ಥಾನ ಕೊಟ್ಟು ಕರ್ನಾಟಕ ಮನೆ ಮನೆಗಳಲ್ಲಿ ಚಿಕ್ಕ ಮಕ್ಕಳು ಹಾಗೂ ಸ್ತ್ರೀಯರಿಗೆ ಶ್ರೇಷ್ಠ ಕಲಾವಿದರ ಕೃತಿಗಳ ಮೂಲಕ ಶಿಕ್ಷಣವನ್ನು ನೀಡಲಾಗಿತ್ತು. ನೃತ್ಯದ ಪರಂಪರೆಯೂ ಸಹ ಸಂಗೀತದ ಜೊತೆಗೆ ಮುಂದುವರೆದಿತ್ತು. ಅನೇಕ ವಿಧದ ಸುಂದರವಾದ ಲೋಕ ನೃತ್ಯಗಳು ಆ ಕಾಲದಲ್ಲಿ ನೃತ್ಯಾರಾಧನೆ ಸಹ ಧಾರ್ಮಿಕತೆಯಿಂದ ಕೂಡಿತ್ತು.

ಭರತನಾಟ್ಯದ ಪರಂಪರೆಯಿಂದ ನೃತ್ಯ ನಾಟ್ಯದ ಜನ್ಮವೂ ಸಹ ಆಯಿತು. ತಂಜಾವೂರು, ಕುಚುಪುಡಿ, ಮುಂತಾದ ಸ್ಥಳಗಳಲ್ಲಿ ಅರ್ಚಕರು ದೇವಾಲಯಗಳಲ್ಲಿ ನಾಟ್ಯವಾಡುತ್ತಿದ್ದರು. ಇಂಥ ಅರ್ಚಕರಿಗೆ ಭಾಗವತರು ಎಂದು ಹೇಳಲಾಗುತ್ತಿತ್ತು.

ಈ ಮಹತ್ವ ಪೂರ್ಣ ಕಾಲದಲ್ಲಿ ಕರ್ನಾಟಕ ಸಂಗೀತದ ಸುಪ್ರಸಿದ್ಧ ತ್ರಿರತ್ನಗಳಾದ ಶ್ಯಾಮಾಶಾಸ್ತ್ರೀ, ಆಚಾರ್ಯ ತ್ಯಾಗರಾಜರು ಹಾಗೂ ಮುತ್ತು ಸ್ವಾಮಿ ದೀಕ್ಷಿತರು ಆಗಿಹೋದರು.

ಇವರಿಂದ ಕರ್ನಾಟಕ ಸಂಗೀತದ ಪದ್ಧತಿಯ ಬೆಳವಣಿಗೆ ಅತ್ಯಂತ ಮಹತ್ವಪೂರ್ಣ ಕೊಡುಗೆ ನೀಡಲ್ಪಟ್ಟಿದೆ. ಈ ತ್ರಿರತ್ನಗಳು ಕರ್ನಾಟಕ ಸಂಗೀತದಲ್ಲಿ ಒಂದು ಹೊಸಯುಗ ಪ್ರಾರಂಭಿಸಿದರು.

ಭಕ್ತಿ, ಜ್ಞಾನ, ವೈರಾಗ್ಯ ಮುಂತಾದ ತತ್ವಗಳನ್ನು ಒಳಗೊಂಡಿದ್ದ ಅನೇಕ ಹೊಸ ರಚನೆಗಳನ್ನು ಇವರು ಸೃಷ್ಠಿಸಿದರು. ಸಂಗೀತದ ಪಾವಿತ್ರ್ಯ ಅದರ ತೇಜಸ್ಸು. ಅದರ ಶಕ್ತಿ ಮುಂತಾದವುಗಳ ಪರಿಚಯವನ್ನು ಜನರಿಗೆ ಮಾಡಿಕೊಟ್ಟರು. ಇಂದಿಗೂ ಸಮಸ್ತ ಭಾರತದೇಶವು ಈ ಮಹಾನ್ ಸಂಗೀತಜ್ಞರಿಗೆ ಚಿರಋಣಿಯಾಗಿದೆ. ಇದರಿಂದ ಭಾರತೀಯ ಸಂಗೀತದ ಗೌರವ ಹಾಗೂ ಘನತೆ ಉಚ್ಛಮಟ್ಟಕ್ಕೆ ಏರಿತು ಎಂದು ಹೇಳಬಹುದು.

ರಾಜಕೀಯ ಹಾಗೂ ಐತಿಹಾಸಿಕ ಪರಿವರ್ತನೆಯ ಜೊತೆಗೆ ಭಾರತೀಯ ಸಂಗೀತದಲ್ಲಿಯೂ ಸಾಕಷ್ಟು ಪರಿವರ್ತನೆಗಳಾದದ್ದು ಆ ಕಾಲದಲ್ಲಿ ಕಂಡುಬರುತ್ತದೆ. ಉತ್ತರ ಭಾರತದಲ್ಲಿ ಸಂಗೀತಕ್ಕೆ ಪ್ರಾಪ್ತವಾದ ರಾಜಾಶ್ರಯವು ಬ್ರಿಟಿಷರ ಕಾಲದಲ್ಲಿ ದೂರವಾಯಿತು. ಏಕೆಂದರೆ ಭಾರತದಲ್ಲಿಯ ಸಂಸ್ಥಾನಗಳ ಮೇಲೆ ಬ್ರಿಟಿಷರ ಸಂಸ್ಕೃತಿಯ ಪ್ರಭಾವ ಬೀಳಲು ಪ್ರಾರಂಭವಾಯಿತು. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತಕ್ಕೆ ಸಂಸ್ಥಾನಿಕರು ಹಾಗೂ ಹಲವಾರು ಧನಿಕರು ಆಶ್ರಯ ನೀಡಿದರು. ಸಂಗೀತಕ್ಕೆ ಸಂಸ್ಥಾನಿಕರು ಹಾಗೂ ಹಲವಾರು ಧನಿಕರು ಆಶ್ರಯ ನೀಡಿದರು. ಹಿಂದೂಸ್ತಾನಿ ಸಂಗೀತದ ಸ್ಥಿತಿಯು ಮಾತ್ರ ಅತ್ಯಂತ ಶೋಚನೀಯವಾಗಿತ್ತು. ಮೊಗಲರ ಅಂತಿಮ ಕಾಲದಲ್ಲಿಯೇ ಸಂಗೀತಕ್ಕೆ ಧರ್ಮದ ಜೊತೆಯಲ್ಲಿದ್ದ ಸಂಬಂಧವು ದೂರವಾಗಿತ್ತು. ಕೇವಲ ಶೃಂಗಾರಮಯ ರಚನೆಗಳು ಖ್ಯಾಲ, ಠುಮರಿ ಮುಂತಾದ ಶೈಲಿಗಳಲ್ಲಿ ಬಂದವು. ಐಷಾರಾಮಿ ಹಾಗೂ ವಿಲಾಸಿ ರಾಜರ ಸಂಪರ್ಕದಲ್ಲಿ ಒಂದು ಸಂಗೀತ ಕಲಾಕಾರರ ನೈತಿಕ ಚಾರಿತ್ರ್ಯವೂ ಸಹ ಇಳಿಮುಖವಾಯಿತು. ಇದರಿಂದಾಗಿ ಆ ಕಾಲದಲ್ಲಿ ಹಿಂದುಸ್ತಾನಿ ಸಂಗೀತವು ಗೌರವಾನ್ವಿತ ಮನೆಗಳಲ್ಲಿ ನಿಷಿದ್ಧವೆಂದು ಭಾವಿಸಲಾಗುತ್ತಿತ್ತು.

ಪಾಶ್ಚಾತ್ಯ ಸಂಗೀತ ಶಿಕ್ಷಣ ಪಡೆದ ಯುವಕ ಯುವತಿಯರು ಭಾರತೀಯ ಸಂಗೀತವನ್ನು ದೂರ ಮಾಡಿ ಪಾಶ್ಚಾತ್ಯ ಸಂಗೀತವನ್ನು ಅನುಸರಿಸಲು ಪ್ರಾರಂಭಿಸಿದರು.

ಈ ಪ್ರಕಾರ ಹಿಂದುಸ್ತಾನಿ ಸಂಗೀತವು ತನ್ನ ಪತನದ ಹಾದಿಯನ್ನು ಹಿಡಿಯಿತು. ಆದರೆ ಒಂದು ವಿಶೇಷತೆ ಏನೆಂದರೆ, ಭಾರತೀಯರು ಪಾಶ್ಚಾತ್ಯ ಸಂಗೀತದಲ್ಲಿ ಅಭಿರುಚಿಯನ್ನು ತೋರಿಸುತ್ತಿರುವಾಗ ಪಾಶ್ಚಾತ್ಯರು ನಮ್ಮ ಭಾರತೀಯ ಸಂಗೀತದಲ್ಲಿ ಅಭಿರುಚಿ ತೋರಿಸಲು ಪ್ರಾರಂಭಿಸಿದರು. ಭಾರತೀಯ ಸಂಗೀತದಿಂದ ಪ್ರಭಾವಿತರಾದ ಪಾಶ್ಚಾತ್ಯರು ‘ಸರ್ ವಿಲಿಯಂ ಜಾನ್ಸ್, ಕ್ಯಾಪ್ಟನ್ ಡೇ, ಕ್ಯಾಪ್ಟನ್ ವಿಲಾರ್ಡ್ ಮುಂತಾದವರು ಭಾರತೀಯ ಸಂಗೀತದ ಅಧ್ಯಯನ ಮಾಡಿ ಕೆಲವು ಗ್ರಂಥಗಳನ್ನು ಬರೆದಿರುವರು. ಪರಿಣಾಮವಾಗಿ ಸುಶಿಕ್ಷಿತ ಜನರಲ್ಲಿ ಇವರ ಪ್ರಭಾವ ಬಿದ್ದು ಸಂಗೀತದ ಬಗ್ಗೆ ಅನಾದರ ಭಾವ ಕಡಿಮೆಯಾಗಲು ಪ್ರಾರಂಭವಾಯಿತು. ಇದರ ಹೊರತಾಗಿ ನಮ್ಮ ಭಾರತೀಯರೇ ಆದ ಪಂ. ಭಾತಖಂಡೆ ಹಾಗೂ ಪಂ.ಪಲುಸ್ಕರ ಮುಂತಾದ ವಿದ್ವಾಂಸರು ಸಂಗೀತದ ಪುನರುತ್ಥಾನ ಕಾಲದಲ್ಲಿ ಅತ್ಯಂತ ಆದರಣೀಯ ಕಾರ್ಯವನ್ನು ಮಾಡಿದ್ದಾರೆ. ಸಂಗೀತದ ಪ್ರಸಾರ ಕಾರ್ಯದಲ್ಲಿ ಶಾಸ್ತ್ರ, ಚರ್ಚಾಗೋಷ್ಠಿಗಳನ್ನು ಏರ್ಪಡಿಸುವುದು. ಸ್ವರಲಿಪಿ ಪದ್ಧತಿಯನ್ನು ತಯಾರಿಸುವುದು, ಪದ ಸಂಗ್ರಹ, ಜನರಲ್ಲಿ ಸಂಗೀತದ ಪ್ರಚಾರ, ಸಂಗೀತ ಶಿಕ್ಷಣಕ್ಕೆ ನಿಶ್ಚಿತ ರೂಪವನ್ನು ಕೊಡುವುದು ಮುಂತಾದ ಕಾರ್ಯಗಳು ಪ್ರಾರಂಭವಾದವು. ಇದರಿಂದ ಜನರು ಪುನಃ ಹಿಂದುಸ್ತಾನಿ ಸಂಗೀತದ ಕಡೆಗೆ ಆಕರ್ಷಿತರಾಗತೊಡಗಿದರು. ಪಂ. ಭಾತಖಂಡೆಯವರು ಹಿಂದುಸ್ತಾನಿ ಸಂಗೀತ ಪದ್ಧತಿ, ಹಿಂದುಸ್ತಾನಿ ಕ್ರಮಿಕ ಪುಸ್ತಕ ಮಾಲಿಕಾ, ಅಭಿನವರಾಗ ಮಂಜರಿ, ‘ಶಾರ್ಟ ಹಿಸ್ಟಾರಿಕಲ್ ಸರ್ವೆ ಆಫ್ ಇಂಡಿಯನ್ ಮ್ಯಾಜಿಕ್’ ಮುಂತಾದ ಗ್ರಂಥಗಳನ್ನು ರಚಿಸಿದರು. ಹಿಂದುಸ್ತಾನಿ ಸಂಗೀತ ಶಾಸ್ತ್ರದಲ್ಲಿ ಥಾಟ ಪದ್ಧತಿಯ ಪ್ರಸಾರವು ಕೂಡ ಇವರಿಂದಲೇ ಆಯಿತು. ಇವರು ಕರ್ನಾಟಕ ಹಾಗೂ ಹಿಂದುಸ್ತಾನಿ ಪದ್ಧತಿಗಳ ತುಲನಾತ್ಮಕ ಅಧ್ಯಯನದ ಪರಿಚಯ ಮಾಡಿಕೊಟ್ಟರು.

ಶ್ರೇಷ್ಠ ಗಾಯಕ ಬಾಲಕೃಷ್ಣ ಬುವಾ ಈಚಲಕರಂಜಿಕರರ ಶಿಷ್ಯರಾದ ಪಂ. ವಿಷ್ಣು ದಿಗಂಬರ ಪಲುಸ್ಕರರೂ ಕೂಡ ಹಿಂದುಸ್ತಾನಿ ಸಂಗೀತದ ಪ್ರಸಾರದ ಕಾರ್ಯದಲ್ಲಿ ಅತೀ ಮಹತ್ವಪೂರ್ಣ ಕಾರ್ಯವನ್ನು ನಿರ್ವಹಿಸಿದ್ದಾರೆ.

ಸಂಗೀತದಲ್ಲಿ ಶೃಂಗಾರಪೂರ್ಣ ರಚನೆಗಳ ಬದಲಾಗಿ ಅವರು ಭಕ್ತಿರಸ ಪೂರ್ಣ ಪದಗಳನ್ನು ಹಾಡಲು ಪ್ರಾರಂಭಿಸಿದರು ಪರಿಣಾಮವಾಗಿ ಸಮಾಜದಲ್ಲಿ ಭಕ್ತಿಮಯ ವಾತಾವರಣ ಉಂಟಾಗಿ ಸಂಗೀತಕ್ಕೆ ಮತ್ತೊಮ್ಮೆ ಆದರದ ಸ್ಥಾನ ದೊರೆಯಲು ಪ್ರಾರಂಭಿಸಿತು. ಸಂಗೀತದ ಪ್ರಸಾರಕ್ಕಾಗಿ ಅವರು ಅನೇಕ ಸಂಗೀತ ವಿದ್ಯಾಲಯಗಳನ್ನು ಸ್ಥಾಪನೆ ಮಾಡಿದರು. ಇವುಗಳಲ್ಲಿ ಲಾಹೋರ ಮತ್ತು ಮುಂಬೈಯ ‘ಗಾಂದರ್ವ ಮಹಾವಿದ್ಯಾಲಯ’ ಗಳು ಪ್ರಮುಖವಾಗಿವೆ.

ಪಂ. ಪಲುಸ್ಕರದ ಪದಗಳಲ್ಲಿ ಕೇವಲ ಭಕ್ತಿರಸ ಅಷ್ಟೇ ಅಲ್ಲದೇ ರಾಷ್ಟ್ರೀಯ ಭಾವನೆಯೂ ಸಹ ಗೋಚರವಾಗುತ್ತದೆ. ಬ್ರಿಟಿಷರ ಕಾಲದಲ್ಲಿ ಹಲವು ಶ್ರೇಷ್ಠ ಗಾಯಕರಾಗಿ ಹೋದರಲ್ಲದೇ ಶ್ರೇಷ್ಠ ವಾದ್ಯ ವಾದನಗಾರರೂ ಆಗಿ ಹೋದರು. ಇವರಲ್ಲಿ ಬೀನವಾದಕರಾದ ಉಸ್ಥಾದ ಬಂದೇ ಅಲಿಖಾನ ಹಾಗೂ ರಾಮಪುರ ಸಂಸ್ಥಾನದ ವಜೀರಖಾನ ಸಾಹೇಬರು ಹಾಗೂ ತಬಲಾ ವಾದಕರಾದ ಲಕ್ಷ್ಮಣರಾವ ಪರ್ವತೀಕರ ಮುಂತಾದವರು ವಿಶೇಷ ಉಲ್ಲೇಖನೀಯರಾಗಿದ್ದಾರೆ. ಇವರ ತರುವಾಯ ಅಬ್ದುಲ್ ಕರೀಮ್ ಖಾನ, ಉಸ್ತಾದ ಅಲ್ಲಾದಿಯಾ ಖಾನ, ಉಸ್ತಾದ ಇನಾಯತ ಖಾನ, ಶಂಕರ ಪಂಡಿತ, ಉಸ್ತಾದ ಮುರಾದ ಖಾನ, ಉಸ್ತಾದ ಅಲ್ಲಾ ಉದ್ದೀನ್ ಖಾನ ಮುಂತಾದ ಗಾಯಕ ವಾದಕರು ಆಗಿಹೋದರು.

ಇದೇ ಕಾಲದಲ್ಲಿ ಬಂಗಾಲದ ಕವಿಶ್ರೇಷ್ಠರಾದ ರವೀಂದ್ರನಾಥ ಠಾಕೂರರು ಒಂದು ಹೊಸ ಸಂಗೀತ ಪದ್ಧತಿಯನ್ನು ಸ್ಥಾಪಿಸಿದರು. ಈ ಪದ್ಧತಿಗೆ ಇಂದು ‘ರವೀಂದ್ರ ಸಂಗೀತ’ ಎಂದು ಕರೆಯಲಾಗುತ್ತದೆ.

ಹಿಂದೂಸ್ತಾನಿ ಸಂಗೀತದಲ್ಲಿ ರಜಪೂತ ಕಾಲದಲ್ಲಿ ನಿರ್ಮಾಣವಾಗಿದ್ದ ವಿವಿಧ ಘರಾಣೆಗಳು ಅಂದರೆ ಮನೆತನಗಳು ಪೂರ್ಣವಾಗಿ ವಿಕಾಸ ಹೊಂದಿದವು. ಸಂಗೀತದಲ್ಲಿ ವೈಶಿಷ್ಟ್ಯ, ಸಾಮಾಜಿಕ ಘಟನೆಗಳು, ಅಭ್ಯಾಸ ಮಾಡುವ ಪದ್ಧತಿ, ಸ್ವರ ರಚನಾ ಭೇದ, ಸ್ವರಸಂಗ್ರಹ ಭೇದ, ತಾಲ ಮತ್ತು ಲಯದ ವೈಶಿಷ್ಟ್ಯ ಇವುಗಳಿಂದಾಗಿ ಬೇರೆ ಘರಾಣೆಗಳು ಪ್ರಚಾರದಲ್ಲಿ ಬಂದವು.

ಹಿಂದುಸ್ತಾನಿ ಸಂಗೀತದಲ್ಲಿ ಘರಾಣಾ ಎಂಬ ಶಬ್ದಕ್ಕೆ ಒಂದು ವಿಶೇಷ ಮಹತ್ವವಿದೆ. ಘರಾಣೆ ಎಂದರೆ ಪರಂಪರೆ, ಪಂಥ, ಪಂಗಡ ಎಂದರ್ಥ

ಮೂಲಧ್ಯೇಯ ಒಂದೇ ಇದ್ದರೂ ಪ್ರತಿಯೊಂದು ಕಲಾ ಪರಂಪರೆಯಲ್ಲಿ ಬೇರೆ ಬೇರೆ ವೈಶಿಷ್ಠ್ಯಗಳು ಕಂಡುಬರುತ್ತವೆ. ಅಂದರೆ ಬೇರೆ ಬೇರೆ ಮನೆತನಗಳಲ್ಲಿ ಕುಲಾಚಾರ, ಕುಲದೇವರು ಮುಂತಾದವುಗಳಲ್ಲಿ ಯಾವ ರೀತಿ ವಿಭಿನ್ನತೆ ಕಂಡು ಬರುತ್ತದೆಯೋ ಅದೇ ರೀತಿ ಸಂಗೀತ ಸಾಧಕರಲ್ಲಿಯೂ ಕೂಡಾ ಭಿನ್ನತೆ ಕಂಡುಬರುತ್ತದೆ. ನಮ್ಮ ಪ್ರಾಚೀನ ಸಂಗೀತಗಾರರು ಬುದ್ಧಿ ಮತ್ತು ಭಾವನೆಗಳಲ್ಲಿ ಯಾವುದಾದರೊಂದರ ಪ್ರಭಾವಕ್ಕೆ ಗುರಿಯಾಗಿ ಆ ಮಾರ್ಗದಲ್ಲಿಯೇ ಸಂಗೀತ ಸಾಧನೆ ಗೈದರು. ಕೆಲವರು ಸ್ವರ ಪ್ರಾಧಾನ್ಯವಾಗಿರುವ ಮಾರ್ಗದತ್ತ ನಡೆದರೆ, ಇನ್ನೂ ಕೆಲವರು ಲಯ ತಾಲದ ಬೌದ್ಧಿಕ ಅಭಿವ್ಯಕ್ತಿಗೆ ಲಕ್ಷ ಕೊಟ್ಟರು. ಇನ್ನೂ ಕೆಲವರು ಸ್ವರ ಮತ್ತು ಲಯ ಈ ಎರಡೂ ಅಂಗಗಳ ಮಧುರ ಸಂಗಮದಲ್ಲಿ ಆನಂದ ಪಡೆದರು. ಈ ಪ್ರಕಾರ ಕೇವಲ ಸ್ವರದ ಆನಂದ ಪಡೆಯುವ, ಕೇವಲ ಲಯದ ಆನಂದ ಪಡೆಯುವ ಹಾಗೂ ಸ್ವರ ಮತ್ತು ಲಯ ಇವುಗಳ ಸಮನ್ವಯ ಸಾಧಿಸಿ ಆನಂದ ಪಡೆಯುವ ಬೇರೆ ಬೇರೆ ಪಂಥಗಳು ಅಂದರೆ ಘರಾಣೆಗಳು ನಿರ್ಮಾಣವಾದವು.

‘ಖ್ಯಾಲ’ ಎಂಬ ಹಾಡುಗಾರಿಕೆ ಶೈಲಿ ಪ್ರಚಾರದಲ್ಲಿ ಬರುವ ಮೊದಲು ‘ಧ್ರುಪದ’ ಎಂಬ ಗಾಯನದ ಪ್ರಕಾರವು ಪ್ರಚಾರದಲ್ಲಿತ್ತು. ಈ ಗಾಯನ ಪ್ರಕಾರದಲ್ಲಿ ಕೂಡ ಬೇರೆ ಬೇರೆ ವಾಣಿಗಳು ಅಂದರೆ ಶೈಲಿಗಳಿದ್ದವು. ಉದಾ: ಗೋಬರ ಹಾರಿವಾಣಿ, ಸೌಹಾರವಾಣಿ, ಡಾಗುರವಾಣಿ, ಹಾಗೂ ಖಂಡ ಹಾರವಾಣಿ ಎಂಬ ಹೆಸರುಗಳಿಂದ ಅವು ಪ್ರಚಾರದಲ್ಲಿದ್ದವು. ಖ್ಯಾಲ ಗಾಯನದಲ್ಲಿ ಈ ದ್ರುಪದ ವಾಣಿಗಳ ಅಧಾರದ ಮೇಲೆಯೇ ಬೇರೆ ಬೇರೆ ಘರಾಣೆಗಳ ಉತ್ಪತ್ತಿಯಾಯಿತೆಂದು ಹೇಳಲಾಗುತ್ತದೆ.

ಘರಾಣೆಗಳ ಕೆಲವು ಲಕ್ಷಣಗಳು ಹೀಗಿವೆ

೧. ಪ್ರತಿಯೊಂದು ಘರಾಣೆಗೆ ಸ್ವತಂತ್ರವಾದ ಒಂದು ಶೈಲಿ ಇರಬೇಕು. ೨. ಘರಾಣೆಯ ವೈಶಿಷ್ಠ್ಯಗಳನ್ನು ಪ್ರಸ್ತುತ ಪಡಿಸುವ ಅನುಯಾಯಿ ಕಲಾವಿದ ಇರಬೇಕು. ೩ ನಿರ್ದಿಷ್ಟವಾದ ಅಭ್ಯಾಸ ಕ್ರಮ. ರಾಗ ಪ್ರಸ್ತುತ ಪಡಿಸುವ ವೈಶಿಷ್ಠ್ಯ ಘರಾಣೆಯಲ್ಲಿ ಇರಬೇಕು.

ಹಿಂದುಸ್ತಾನಿ ಸಂಗೀತದಲ್ಲಿ ವಿವಿಧ ಘರಾಣೆಗಳು ಪ್ರಚಾರದಲ್ಲಿವೆ. ಗ್ವಾಲಿಯರ ಘರಾಣೆ, ಆಗ್ರಾ ಘರಾಣೆ, ಕಿರಾಣಾ ಘರಾಣೆ, ಜೈಪುರ ಘರಾಣೆ, ರಾಮಪುರ ಘರಾಣೆ, ಸಹಸ್ವಾನ ಘರಾಣೆ, ಭೆಂಡಿ ಬಜಾರ ಘರಾಣೆ ಹಾಗೂ ಮೇವಾಡ ಘರಾಣೆ ಮುಂತಾದ ಘರಾಣೆಗಳು ವಿಶೇಷ ಲೋಕಪ್ರಿಯವಾಗಿವೆ.

ಆಧುನಿಕ ಕಾಲದಲ್ಲಿ ಈ ಘರಾಣೆಗಳಲ್ಲಿ ಸುಮಧುರ ಸ್ವಾರಸ್ಯವಾದದ್ದು ನಾವು ಕಾಣುತ್ತೇವೆ. ಯಾವುದೇ ಒಂದು ಘರಾಣೆಗೆ ಅಂಟಿಕೊಳ್ಳದೆ ಅಧುನಿಕ ಕಲಾವಿದರು ಯಾವ ಘರಾಣೆಯಲ್ಲಿ ಸುಂದರ ತತ್ವಗಳಿರುತ್ತವೆಯೋ ತಮ್ಮ ಗಾಯನ ಅಥವಾ ವಾದನದಲ್ಲಿ ಪೋಣಿಸಿ ಪ್ರಸ್ತುತ ಪಡಿಸುತ್ತಾರೆ.

ಗಾಯನದಂತೆ ಸಿತಾರ ಹಾಗೂ ತಬಲಾ ವಾದನದಲ್ಲಿಯೂ ಕೂಡ ನಮಗೆ ವಿವಿಧ ಘರಾಣೆಗಳು ಕಂಡುಬರುತ್ತವೆ. ಸಿತಾರದಲ್ಲಿ ದಿಲ್ಲಿ ಘರಾಣಾ, ಅಥವಾ ಸೇನಿ ಘರಾಣಾ, ರಾಮಪುರ ಘರಾಣಾ, ಬಂದೇಲಿ ಘರಾಣಾ ಮುಂತಾದವು. ತಬಲಾದಲ್ಲಿ ದಿಲ್ಲಿ ಘರಾಣಾ, ಅಜರಾಡಾ ಘರಾಣಾ, ಲಖನೌ ಘರಾಣಾ, ಪಂಜಾಬ ಘರಾಣಾ ಮುಂತಾದ ಘರಾಣೆಗಳು ಪ್ರಚಾರದಲ್ಲಿವೆ.

ಕರ್ನಾಟಕ ಸಂಗೀತದಲ್ಲಿಯೂ ಕೂಡ ಹಿಂದುಸ್ತಾನಿ ಸಂಗೀತದಂತೆ ವಿವಿಧ ಘರಾಣೆಗಳುಂಟು ಇವುಗಳಿಗೆ ‘ಬಾನಿ’ ಎಂದು ಕರೆಯುತ್ತಾರೆ.

ಬ್ರಿಟೀಷರ ಕಾಲದಲ್ಲಿ ಕರ್ನಾಟಕ ಸಂಗೀತದ ಅನೇಕ ಸಂಗೀತ ವಿದ್ವಾಂಸರು ಸಂಗೀತದ ವಿಕಾಸ ಕ್ರಮದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಇವರಲ್ಲಿ ಶ್ರೀ ಮಹಾವೈದ್ಯನಾಥಯ್ಯರ್, ಪಟ್ಟಣದ ಸುಬ್ರಮಣ್ಯಂ ಅಯ್ಯರ್, ಪಲ್ಲವಿ ಶೇಷಯ್ಯರ, ರಾಮನಾಥ ಶ್ರೀನೀವಾಸ ಅಯ್ಯಂಗಾರ್, ವೀಣೆ ವೆಂಕಟದಾಸರು, ಮೃದಂಗಂ ನಾರಾಯಣ ಸ್ವಾಮಿಯಪ್ಪಾ, ತಂಜಾವೂರು ಕೃಷ್ಣಭಾಗವತರು, ಮುಂತಾದವರು ವಿಶೇಷ ಉಲ್ಲೇಖನಿಯರಾಗಿದ್ದಾರೆ.

ಇದೇ ಕಾಲದಲ್ಲಿ ಕರ್ನಾಟಕದಲ್ಲಿ ಸಂಗೀತ ವಿಕಾಸಕ್ಕಾಗಿ ಮೈಸೂರು ಮಹಾರಾಜರು ಸಲ್ಲಿಸಿದ ಸೇವೆ ಅತ್ಯಂತ ಸ್ಮರಣೀಯವಾಗಿವೆ. ಕೃಷ್ಣರಾಜ ಒಡೆಯರ ಅವರು ಅನೇಕ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತಗಾರರಿಗೆ ಆಶ್ರಯವಿತ್ತಿದ್ದರು. ಅವರ ಅರಮನೆಯಲ್ಲಿ ಮೇಲಿಂದ ಮೇಲೆ ಸಂಗೀತ ಕಾರ್ಯಕ್ರಮಗಳು ಏರ್ಪಡುತ್ತಿದ್ದವು. ಇವರ ಅಸ್ಥಾನದಲ್ಲಿ ವೀಣೆ ಶೇಷಣ್ಣ , ವಾಸುದೇವಾಚಾರ್ಯ, ಟೈಗರ ವರದಾಚಾರ್ಯ, ಬಿಡಾರಂ ಕೃಷ್ಣಪ್ಪನವರು, ಮುತ್ತಯ್ಯ ಭಾಗವತರು ಮತ್ತು ರಾಮಾನುಜ ಅಯ್ಯಂಗಾರ್ ಮೊದಲಾದ ಕರ್ನಾಟಕ ಸಂಗೀತ ವಿದ್ವಾಂಸರು ಹಾಗೂ ಉಸ್ತಾದ ವಿಲಾಯತ್ ಹುಸೇನ ಖಾನ, ಉಸ್ತಾದ ಫೈಯಾಜ ಖಾನ ಮೊದಲಾದ ಹಿಂದುಸ್ತಾನಿ ಸಂಗೀತ ವಿದ್ವಾಂಸರು ಆಸ್ಥಾನ ವಿದ್ವಾಂಸರೆಂದು ಇದ್ದರು. ಇದೇ ಕಾಲದಲ್ಲಿ ಉತ್ತರ ಕರ್ನಾತಕದಲ್ಲಿ ಹಿಂದುಸ್ತಾನಿ ಸಂಗೀತದ ಪ್ರಸಾರವೂ ಪ್ರಾರಂಭವಾಯಿತು. ಶ್ರೀ ಜಯಚಾಮರಾಜ ಒಡೆಯರ ಅವರು ಭಾರತೀಯ ಸಂಗೀತದಲ್ಲಿ ಅಷ್ಟೇ ಅಲ್ಲದೆ ಪಾಶ್ಚಾತ್ಯ ಸಂಗೀತದಲ್ಲಿಯೂ ಪಾಂಡಿತ್ಯ ಪಡೆದಿದ್ದರು. ಒಟ್ಟಾರೆ ಕರ್ನಾಟಕದಲ್ಲಿ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳನ್ನು ಪ್ರಚಾರದಲ್ಲಿ ತಂದ ಶ್ರೇಯಸ್ಸು ಮೈಸೂರು ಅರಸರಿಗೆ ಸಲ್ಲುತ್ತದೆ.

ನಮ್ಮ ಸ್ವಾತಂತ್ರ್ಯದ ನಂತರ ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಕ್ರಾಂತಿಕಾರಿ ಪರಿವರ್ತನೆ ಆಯಿತು. ಅದರಂತೆ ಸಂಗೀತದ ಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಪರಿವರ್ತನೆ ಪ್ರಾರಂಭವಾಯಿತು. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಹಿಂದುಸ್ತಾನಿ ಸಂಗೀತ ಪರಂಪರೆಯಲ್ಲಿಯ ಶೃಂಗಾರ ಭಾವಗಳನ್ನು ಪಂ. ಪಲುಸ್ಕರ ಹಾಗೂ ಪಂ. ಭಾತಖಂಡೆಯವರು ಬದಲಾಯಿಸಿ ಅದರ ಬದಲಾಗಿ ಭಕ್ತಿಪರ ರಚನೆಗಳು ಹಾಗೂ ಸ್ವರಲಿಪಿ ಪದ್ಧತಿ ಮುಂತಾದ ವಿಷಯಗಳ ಮೇಲೆ ತಮ್ಮ ಕಾಣಿಕೆಗಳನ್ನು ನೀಡಿದರು. ಇದರ ಪರಿಣಾಮವಾಗಿ ಜನರಲ್ಲಿ ಮತ್ತೊಮ್ಮೆ ಸಂಗೀತದತ್ತ ಒಲವು ಉಂಟಾಯಿತು. ಸ್ವಾತಂತ್ರ್ಯದ ನಂತರ ವಿವಿಧ ಸಂಸ್ಥಾನಗಳ ವಿಲೀನವಾಯಿತು. ಇದರಿಂದಾಗಿ ಸಂಗೀತ ವಿದ್ವಾಂಸರು ಸಂಸ್ಥಾನಗಳನ್ನು ಬಿಟ್ಟು ದೊಡ್ಡ ನಗರಗಳಲ್ಲಿ ವಾಸಿಸಲು ಪ್ರಾರಂಭಿಸಿದರು. ಅಲ್ಲಿ ಅವರಿಗೆ ಹೊಸ ಶ್ರೋತೃಗಳು ದೊರಕಿದರು ಈ ಹೊಸ ಶ್ರೋತೃವರ್ಗಕ್ಕೆ ಶಾಸ್ತ್ರೀಯ ಸಂಗೀತ ಕೇಳುವ ರೀತಿ ಗೊತ್ತಿರಲಿಲ್ಲ. ಅವರು ಸಂಗೀತ ಸಭೆಗಳಿಗೆ ಮನಬಂದಂತೆ ಬರುವುದು ಹಾಗೂ ಹೋಗುವುದು ಅಥವಾ ತಿಂಡಿ ತಿನಿಸುಗಳನ್ನು ತಿನ್ನುವುದು, ಪಾನೀಯ ಸೇವಿಸುವುದು ತಮ್ಮ ಮಿತ್ರರೊಡನೆ ಕುಶಲ ಸಂಭಾಷಣೆ ನಡೆಸುವುದು ಮುಂತಾದ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ.

ಇದರಿಂದಾಗಿ ಕಲಾಕಾರನ ಏಕಾಗ್ರತೆಯಲ್ಲಿ ವ್ಯತ್ಯಾಸ ಉಂಟಾಗಿ ಅವನ ಕಾರ್ಯಕ್ರಮವು ಯಶಸ್ವಿಯಾಗುವುದಿಲ್ಲ. ಜನರ ಅಭಿರುಚಿ ಶಾಸ್ತ್ರೀಯ ಸಂಗೀತದ ಕಡೆಗೆ ಕಡಿಮೆಯಾಗುತ್ತ ಬಂದು ಅದರ ಬದಲಾಗಿ ನಾಟ್ಯ ಸಂಗೀತ, ಸುಗಮ ಸಂಗೀತ ಲೋಕ, ಸಂಗೀತ, ಚಿತ್ರಪಟ ಸಂಗೀತ ಮುಂತಾದ ಸಂಗೀತ ಪ್ರಕಾರಗಳಿಗೆ ಮನ್ನಣೆ ಸಿಗಲು ಪ್ರಾರಂಭವಾಯಿತು. ಭಾರತೀಯ ಸಂಗೀತಕ್ಕೆ ಪುನಶ್ಚೇತನ ಮಾಡುತ್ತಲಿದೆ. ಆಕಾಶವಾಣಿ ಹಾಗೂ ದೂರದರ್ಶನ ಮೂಲಕ ಸಂಗೀತಗಾರರ ವಾಣಿ ಹಾಗೂ ಅವರ ಕಲೆ ಸರ್ವಸಾಧಾರಣ ಜನರಿಗೂ ಕೇಳುವಂತೆ ವ್ಯಾಪಕ ಕ್ಷೇತ್ರವನ್ನು ನಿರ್ಮಿಸಿದೆ. ಇದರಿಂದ ಸಂಗೀತ ಸಾಧಕರು ಹಾಗೂ ಶ್ರೋತೃಗಳಲ್ಲಿ ಹೆಚ್ಚಳವಾಯಿತಲ್ಲದೇ ಶಾಸ್ತ್ರೀಯ ಸಂಗೀತ ಹಾಗೂ ವಿಕಾಸ ಕಾರ್ಯದಲ್ಲಿಯೂ ಸಾಕಷ್ಟು ಸಹಾಯಕ ಕಾರ್ಯವಾಗಿದೆ. ಸಂಗೀತ ವಿಕಾಸ ಕಾರ್ಯಕ್ಕೆ ಸಂಗೀತ ನಾಟಕ ಅಕಾಡಮಿಗಳು ಸ್ಥಾಪಿತವಾಗಿವೆ. ಈ ಅಕಾಡೆಮಿಗಳು ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ರೀತಿಯಲ್ಲಿ ಸಂಗೀತದ ರಕ್ಷಣೆ ಹಾಗೂ ಪ್ರಸಾರ ಕಾರ್ಯ ಮಾಡುತ್ತವೆ.

ಪ್ರಾಚೀನ ಕಾಲದಲ್ಲಿ ಸಂಗೀತ ಶಿಕ್ಷಣ ಗುರು ಶಿಷ್ಯ ಪರಂಪರೆಯಿಂದ ನಡೆಯುತ್ತಿತ್ತು. ಈ ಪದ್ಧತಿಯನ್ನು ವಿದ್ವಾಂಸರು ವಿದ್ಯಾರ್ಥಿಗಳನ್ನು ಬಾಲ್ಯದಿಂದಲೇ ಆರಿಸಿ ತಮ್ಮಲ್ಲಿ ೧೨ ವರ್ಷಗಳ ಕಾಲ ವಿದ್ಯಾಭ್ಯಾಸಕ್ಕಾಗಿ ಇರಿಸಿಕೊಳ್ಳುತ್ತಿದ್ದರು. ಈ ವಿಧಾನದಿಂದ ಸಂಗೀತದ ಕ್ಷೇತ್ರದಲ್ಲಿ ಶ್ರೇಷ್ಠ ಕಲಾವಿದರನ್ನು ತಯಾರಿಸುವುದು ಈ ಗುರುಶಿಷ್ಯ ಪರಂಪರೆಯ ಏಕಮಾತ್ರ ಉದ್ದೇಶವಾಗಿತ್ತು. ಕಾಲಕ್ರಮೇಣ ಈ ಗುರು ಕುಲ ಪದ್ಧತಿ ಕಡಿಮೆಯಾಗಿ ಸಂಗೀತದ ಶಿಕ್ಷಣದಲ್ಲಿ ಹಲವಾರು ಬದಲಾವಣೆಗಳಾದವು. ಪಾಠಶಾಲಾ, ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಂಗೀತ ಶಿಕ್ಷಣವನ್ನು ಕೊಡಲು ಪ್ರಾರಂಭವಾಯಿತು ಸಾಮೂಹಿಕ ಶಿಕ್ಷಣ ಸಂಗೀತ ಪದ್ಧತಿಯಿಂದ ಸಂಗೀತ ಕಲೆಯು ಬೆಳವಣಿಗೆಗೆ ಅಷ್ಟೇ ಅಲ್ಲದೇ ರಾಷ್ಟ್ರೀಯ ಐಕ್ಯತೆ ಭಾವನೆ ಬೆಳೆಯಲೂ ಸಹ ಇದು ಸಹಾಯಕವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿಯೂ ಸಹ ನಮ್ಮ ಭಾರತೀಯ ಸಂಗೀತವು ಅತ್ಯಂತ ಲೋಕಪ್ರಿಯವಾಗಿದೆ. ಪಾಶ್ಚಾತ್ಯ ದೇಶಗಳಲ್ಲಿಯೂ ಸಹ ನಮ್ಮ ಭಾರತೀಯ ಸಂಗೀತದ ಕಡೆಗೆ  ವಿಶೇಷ ಗೌರವದ ದೃಷ್ಠಿಯಿಂದ ನೋಡುತ್ತಾರೆ. ಪಂ. ರವಿಶಂಕರ, ಅಲ್ಲಾ ರಖಾ, ಉದಯಶಂಕರ, ಎಂ ಸುಬ್ಬುಲಕ್ಷ್ಮಿ, ಪಂ. ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್ ಮೊದಲಾದ ನಮ್ಮ ಶ್ರೇಷ್ಠ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಿ ಪಾಶ್ಚಾತ್ಯರ ಮನಸ್ಸನ್ನು ತಣಿಸಿದ್ದರು.

ಭಾರತ ಸರ್ಕಾರವು ಪ್ಯಾರಿಸ ಮತ್ತು ಅಮೇರಿಕಾ ದೇಶಗಳಲ್ಲಿ ಭಾರತೋತ್ಸವದಂಥ ಸಾಂಸ್ಕೃತಿಕ ಹಾಗೂ ಕಲಾತ್ಮಕ ಉತ್ಸವಗಳನ್ನು ಏರ್ಪಡಿಸಿ ನಮ್ಮ ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ಪ್ರದರ್ಶಿಸುವ ಸ್ತುತ್ಯಾರ್ಹ ಕಾರ್ಯವನ್ನು ಮಾಡುತ್ತಲಿದೆ.

ನಮ್ಮ ದೇಶದ ಶ್ರೇಷ್ಠ ಸಂಗೀತ ವಿದ್ವಾಂಸರಿಗೆ ಅವರು ಸಲ್ಲಿಸಿದ ಸಂಗೀತ ಸೇವೆಗಾಗಿ ಪದ್ಮಶ್ರೀ, ಪದ್ಮಭೂಷಣ ಮುಂತಾದರ ಗೌರವ ನಿಡುತ್ತಲಿದೆ. ಇದಲ್ಲದೆ ಸಂಗೀತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದೆ.

ಮಧ್ಯ ಪ್ರದೇಶದ ಸರ್ಕಾರವು ಮಹಾಕವಿ ಕಾಳಿದಾಸನ ಹೆಸರಿನಲ್ಲಿ ಭಾರತದ ಶ್ರೇಷ್ಠ  ಸಂಗೀತಗಾರರಿಗೆ ಪ್ರಶಸ್ತಿಯನ್ನು ಕೊಟ್ಟು ಗೌರವಿಸುವಂತಹ ಸ್ತುತ್ಯಾರ್ಹ ಕಾರ್ಯ ಮಾಡುತ್ತಿದೆ. ಮೊದಲನೆಯದಾಗಿ ಈ ಪ್ರಶಸ್ತಿಯನ್ನು ಪಡೆಯುವ ಭಾಗ್ಯ ನಮ್ಮ ದೇಶದ ಶ್ರೇಷ್ಠ ಗಾಯಕರಾದ ಹಾಗೂ ನಮ್ಮ ಕರ್ನಾಟಕದವರೇ ಆದ ಡಾ. ಮಲ್ಲಿಕಾರ್ಜುನ ಮನ್ಸೂರ ಅವರಿಗೆ ದೊರತಿದ್ದು ಹೆಮ್ಮೆಯ ವಿಷಯವಾಗಿದೆ.

ನಮ್ಮ ದೇಶದ ಜಾನಪದ ಸಂಗೀತ ಹಾಗೂ ಭಕ್ತಿ ಸಂಗೀತ ಕೂಡ ಅತ್ಯಂತ ಸಮೃದ್ಧವಾಗಿದೆ. ಪ್ರಾಚೀನಕಾಲದಿಂದಲೇ ಮಾನವನ ಸಂಬಂಧ ನಿಸರ್ಗದೊಡನೆ ಅನ್ಯೋನ್ಯವಾಗಿದ್ದರಿಂದ ಅವನ ಪ್ರತಿಯೊಂದು ಕ್ರಿಯೆಯು ಪ್ರಾಕೃತಿಕವಾಗಿದ್ದು ಯಾವುದೇ ಪರಿಸ್ಥಿತಿಯಲ್ಲಿ ಅವನು ನಿಸರ್ಗದ ಮೊರೆಹೋಗುತ್ತಾನೆ. ಇದರಿಂದಾಗಿ ಅವನ ಮನೋಭಾವಗಳು ಸಂಗೀತದ ರೂಪ ಧರಿಸಿ ಹೊರ ಬರುತ್ತವೆ. ಇಂತಹ ಸಂಗೀತ ಸಹಜವಾಗಿರುತ್ತದೆ.

ಲೋಕ ಜೀವನದ ಅತ್ಯಂತ ಸುಂದರವಾದ ಪ್ರತಿಬಿಂಬವು ಜಾನಪದ ಸಂಗೀತದಲ್ಲಿ ಕಂಡುಬರುತ್ತದೆ. ಏಕೆಂದರೆ ಜಾನಪದ ಗೀತೆಗಳಲ್ಲಿ ಶಬ್ದ ಹಾಗೂ ಸ್ವರಗಳ ಸಂಯೋಜನೆಯಲ್ಲಿ ಕೃತ್ರಿಮತೆ ಇರುವುದಿಲ್ಲ. ಗೀತೆಗಳಲ್ಲಿ ಲೋಕ ಜೀವನದ ಅತ್ಯಂತ ಸರಳವಾದ ಪರಿಚಯ ಇರುತ್ತದೆ.

ಜಾನಪದ ಗೀತೆಗಳು ವಿಶೇಷವಾಗಿ ನಾಲ್ಕು ಅಥವಾ ಐದು ಸ್ವರಗಳಲ್ಲಿ ಹಾಡಲ್ಪಡುತ್ತವೆ. ಲಯದ ವಿವಿಧ ಪ್ರಕಾರಗಳು ಇದರಲ್ಲೂ ಕಂಡುಬರುತ್ತವೆ. ನಮ್ಮ ದೇಶದ ನಾನಾ ಪ್ರದೇಶಗಳಲ್ಲಿ ವಿವಿಧ ಪ್ರಕಾರಗಳು ಕಂಡು ಬರುತ್ತವೆ. ವಿಶೇಷವಾಗಿ ಕರ್ನಾಟಕದಲ್ಲಿ ಸುಗ್ಗಿ ಹಾಡುಗಳು, ಸಾಂಪ್ರದಾಯಕ ಹಾಡುಗಳು ರಾಜಸ್ಥಾನದಲ್ಲಿ ಲಾಲತ್, ಧಾಮಿರ, ಕಾಶ್ಮೀರದಲ್ಲಿ ಶುಫಿಯಾನಾ ಛಕರ, ಹಿಮಾಚಲ ಪ್ರದೇಶದಲ್ಲಿ ನಾಚಿ, ಮಹಾರಾಷ್ಟ್ರದಲ್ಲಿ ಅಭಂಗ, ಓವಿ. ಲಾವಣಿ, ಅಂಗಾಯಿಗೀತ, ಮಧ್ಯಪ್ರದೇಶದಲ್ಲಿ ಬಾರ್, ಮಾನೆ, ಗನಗೌರ, ಮೊಹರಾ, ಸಾಜನ ಕೇಶರಬಾಟ, ಕೇರಳದಲ್ಲಿ ವಂಚಿಪಟ್ಟು, ತುಂಬಿತುಳಲ್ ಮುಂತಾದ ಗೀತ ಗೋವಿಂದದಿಂದ ಹಿಡಿದು ಸ್ವಾಮಿ ಹರಿದಾಸ, ಸೂರದಾಸ, ಮೀರಾಬಾಯಿ, ಕೃಷ್ಣದಾಸ್, ತುಲಸಿದಾಸ, ನಾನಕ, ಕಬೀರ, ನಾಮದೇವ, ತುಕಾರಾಮ, ಮುಂತಾದ ಶ್ರೇಷ್ಠ ಭಕ್ತರು ಅಲ್ಲದೆ ನಮ್ಮ ಕರ್ನಾಟಕದ ಶ್ರೇಷ್ಠ ಭಕ್ತ ಶಿರೋಮಣಿಗಳಾದ ಪುರಂದರದಾಸರು, ಕನಕದಾಸರು ಮತ್ತು ಭಕ್ತಿಭಂಡಾರಿ ಬಸವಣ್ಣನವರು, ವೈರಾಗ್ಯನಿಧಿ ಅಕ್ಕಮಹಾದೇವಿ ಇವರ ಕೃತಿ ಹಾಗೂ ವಾಣಿಯಲ್ಲಿ ಭಕ್ತಿಯುತ ಭಾವನೆ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ಕಂಡುಬರುತ್ತದೆ. ಇವರು ತಮ್ಮ ರಚನೆಗಳನ್ನು ಸಂಗೀತದ ಶ್ರೇಷ್ಠ ಶೈಲಿಯೊಂದರಲ್ಲಿ ಮಾಡಿದರೂ ಇವರ ಸಂಗೀತಕ್ಕೆ ಈಗಿನ ಕಾಲದಲ್ಲಿ ಭಕ್ತಿಯ ಸಂಗೀತ ಎಂದು  ಪರಿಗಣಿಸಲಾಗುತ್ತದೆ. ಸಂಕ್ಷೀಪ್ತದಲ್ಲಿ ಹೇಳುವುದಾದರೆ ನಮ್ಮ ಭಾರತೀಯ ಸಂಗೀತದ ಬೆಳವಣಿಗೆ ಕಾಲ ಕಾಲಕ್ಕೆ ಬದಲಾಗುತ್ತಾ ಬಂದಿದೆ.

ಯಾವ ಯಾವ ಕಾಲದಲ್ಲಿ ಯಾವ ತರಹದ ಸಂಗೀತದ ಪ್ರಚಾರವಿತ್ತೋ ಅದೇ ಪ್ರಕಾರ ಸಂಗೀತ ಶಾಸ್ತ್ರದ ಕೂಡಾ ನಿರ್ಮಿತವಾಗಿದೆ. ಸಾಮಾಜಿಕ ಸ್ಥಿತಿಯ ಕಾರಣದಿಂದ ಸಂಗೀತದಲ್ಲಿ ಸಾಕಷ್ಟು ಪರಿವರ್ತನೆಗಳಾಗಿವೆ. ಅವುಗಳನ್ನೇ ಫಲಸ್ವರೂಪವಾಗಿ ಸಂಗೀತದ ಮೂಲ ಸಿದ್ಧಾಂತಗಳು ಮಾಯವಾಗಲು ಪ್ರಾರಂಭವಾದವು. ಸೌಂದರ್ಯ ಧರ್ಮವಿದ್ದು ಚಮತ್ಕಾರ ವಿಜ್ಞಾನವಾಗಿದೆ. ನಮ್ಮ ಸಂಗೀತವು ಕೂಡ ಚಮತ್ಕಾರ ಪ್ರಧಾನವಾಗಿದೆ. ಸಂಗೀತದಲ್ಲಿ ಸೌಂದರ್ಯ ದೃಷ್ಟಿ ಆಧುನಿಕ ಕಾಲದಲ್ಲಿ ಕಡಿಮೆಯಾಗುತ್ತಲಿದೆ. ವೈಜ್ಞಾನಿಕ ಯುಗದ ಕೊಡುಗೆಯಿಂದ ಕಳೆದ  ೨೦-೩೦ ವರ್ಷಗಳಿಂದ ಸಂಗೀತದ ವಿಕಾಸವು ಬಹು ವೇಗದಿಂದ ಆಗಿದೆ. ಧ್ವನಿಪ್ರಸಾರಕ ಯಂತ್ರಗಳಿಂದ ಉದಾ: ಆಕಾಶವಾಣಿ, ದೂರದರ್ಶನ, ಧ್ವನಿ ಸುರುಳಿಗಳ ಮೂಲಕ ಭಾರತದ ಮೂಲೆ ಮೂಲೆಗೂ ಸಂಗೀತದ ಸ್ವರಗಳು ಝೇಂಕರಿಸುತ್ತವೆ. ಸಂಗೀತವು ಗುರು ಮುಖೇನ ಬರುವಂಥ ವಿದ್ಯೆ. ಇದರಲ್ಲಿ ಸಂದೇಹವೇ ಇಲ್ಲ. ಆದರೆ ವಿಜ್ಞಾನವು ಸಂಗೀತವನ್ನು ಕಂಪ್ಯೂಟರಾಯಿಸ್ಡ್ ಮಾಡಿದ್ದರಿಂದ ಅನೇಕ ಸಂಗೀತ ಶಿಷ್ಯರನ್ನು ತಯಾರಿಸಬಹುದೆಂದು ಉಹಿಸಲಾಗಿದೆ.