ಮಣ್ಣುನೀರುಸಸ್ಯಗಳ ಸಂಬಂಧ

 

ಮಣ್ಣು, ನೀರು ಮತ್ತು ಸಸ್ಯಗಳಲ್ಲಿ ಅತಿ ನಿಕಟವಾದ ಪರಸ್ಪರ ಸಂಬಂಧವಿದೆ. ಕೆಳಗಿನ ಸಂಗತಿಗಳು ಈ ಮಾತಿಗೆ ಪುಷ್ಟಿಯನ್ನು ಕೊಡುತ್ತವೆ.

 • ಮಣ್ಣಿನ ಮೇಲ್ಭಾಗದಿಂದ ಮತ್ತು ಸಸ್ಯಗಳ ಎಲೆಗಳ ಮೂಲಕ ನೀರು ಆವಿಯ ಮತ್ತು ಬಾಷ್ಪದ ರೂಪದಲ್ಲಿ ನಿರಂತರವಾಗಿ ಹೊರಹೊಮ್ಮುತ್ತಿರುತ್ತದೆ. ಈ ಕಾರ್ಯವು ಅವಿರತವಾಗಿ ಸಾಗಲು ಮಣ್ಣಿಗೆ ಸೂಕ್ತ ಪ್ರಮಾಣದಲ್ಲಿ ನೀರಿನ ಪೂರೈಕೆಯು ಆಗುತ್ತಿರಬೇಕು. ಇಷ್ಟೇ ಅಲ್ಲ, ಸಸ್ಯಗಳಿಗೆ ಅವಶ್ಯಕತೆ ಇರುವಾಗ ಯೋಗ್ಯ ಪ್ರಮಾಣದಲ್ಲಿ ನೀರು ದೊರೆಯುವಂತಿರಬೇಕು.
 • ನೀರು ಮಣ್ಣಿನಲ್ಲಿರುವ ಸಸ್ಯ ಪೋಷಕಗಳನ್ನು ತನ್ನಲ್ಲಿ ಕರಗಿಸಿಕೊಂಡು ಮೃತ್ತಿಕಾ ದ್ರಾವಣವಾಗುತ್ತದೆ. ಬೇರುಗಳ ಮೂಲಕ ಈ ದ್ರಾವಣವನ್ನು ಸಸ್ಯಗಳು ಹೀರಿಕೊಂಡು ತಮಗೆ ಬೇಕಾದ ಪೋಷಕಗಳನ್ನು ಪಡೆದುಕೊಳ್ಳುತ್ತವೆ. ಹೀಗೆ, ನೀರು ಪೋಷಕಗಳ ವಾಹಕದಂತೆ ಕಾರ್ಯವನ್ನು ನಿರ್ವಹಿಸುತ್ತದೆ.
 • ಸರಿಯಾದ ಪ್ರಮಾಣದಲ್ಲಿ ಹವೆಯು ಮಣ್ಣಿನಲ್ಲಿರಬೇಕು. ಅದರಂತೆಯೇ ಮಣ್ಣಿನ ಉಷ್ಣತಾಮಾನವೂ ಸಸ್ಯಗಳಿಗೆ ಹಿತಕರವಾಗಿರಬೇಕು. ಇವುಗಳಿಗೂ ನೀರಿಗೂ ನಿಕಟವಾದ ಸಂಬಂಧವಿದೆ.
 • ಮಣ್ಣಿನಲ್ಲಿರುವ ಸಕಲ ಜೀವಿಗಳು ತಮ್ಮ ಚಟುವಟಿಕೆಗಳನ್ನು ನಡೆಸಲು ಮತ್ತು ಮಣ್ಣಿನಲ್ಲಿ ಹಲವು ಬಗೆಯ ರಾಸಾಯನಿಕ ಕ್ರಿಯೆಗಳು ಸಾಗಲು ನೀರು ಅತ್ಯವಶ್ಯ.
 • ಸಸ್ಯದ ಕೋಶದಲ್ಲಿರುವ ಜೀವರಸದ ಅಸ್ತಿತ್ವಕ್ಕೆ ಮತ್ತು ಅದು ಕ್ರಿಯಾಶೀಲವಾಗಿರಬೇಕಾದರೆ ನೀರು ಬೇಕೇ ಬೇಕು.
 • ಹರಿಯುವ ನೀರಿನ ರಭಸಕ್ಕೆ ಮಣ್ಣು ಕೊಚ್ಚಿ ಹೋಗಿ ಕೆರೆ, ಸರೋವರ, ನದಿ, ಹಳ್ಳಗಳು ಇತ್ಯಾದಿಗಳಲ್ಲಿ ಈ ಮಣ್ಣು ಸಂಗ್ರಹವಾಗುತ್ತದೆ. ಈ ಬಗೆಯ ಅನಾನುಕೂಲಗಳು ನಡೆಯದಂತಾಗಬೇಕು.

ಮಣ್ಣಿನ ಆರ್ದ್ರತೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿತುಕೊಂಡರೆ, ಮಣ್ಣು ಮತ್ತು ನೀರು ಇವುಗಳನ್ನು ಸಮರ್ಥ ರೀತಿಯಿಂದ ಬಳಸಿಕೊಂಡು ಸಸ್ಯಗಳಿಗೆ ಪೂರ್ಣ ಪ್ರಯೋಜನವಾಗುವಂತೆ ನೋಡಿಕೊಳ್ಳಲು ಮತ್ತು ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳು ವ್ಯರ್ಥವಾಗದಂತೆ ಮಾಡಲು ನೆರವು ದೊರೆಯುತ್ತದೆ.

ಮಣ್ಣಿನ ಜಲಧಾರಣಾ ಸಾಮರ್ಥ್ಯ

ಮಣ್ಣು ಸಂಪೂರ್ಣವಾಗಿ ಹಸಿಯಾಗುವಷ್ಟು ಮಳೆಯು ಬಂದು, ಮಳೆಯು ನಿಂತ ನಂತರ ಅಥವಾ ನೀರಾವರಿಯನ್ನು ಒದಗಿಸಿ ಅದನ್ನು ನಿಲ್ಲಿಸಿದನಂತರ ಮಣ್ಣನ್ನು ವೀಕ್ಷಿಸಿದರೆ ಅದರಲ್ಲಿರುವ ಎಲ್ಲ ರಂಧ್ರಗಳೂ ನೀರಿನಿಂದ ತುಂಬಿರುವುದನ್ನು ಕಾಣಬಹುದು. ಕೆಲ ಸಮಯದೊಳಗೆ (ಒಂದೆರಡು ದಿನಗಳೊಳಗೆ) ಗುರುತ್ವಾಕರ್ಷಣೆಯಿಂದ ಈ ನೀರಿನ ಸ್ವಲ್ಪ ಭಾಗವು ಬಸಿದು ಭೂಮಿಯಾಳಕ್ಕೆ ಹೋಗಿರುತ್ತದೆ. ಉಳಿದಿರುವ ನೀರು ಗುರುತ್ವಾಕರ್ಷಣೆಯಿಂದ ಬಸಿಯದಂತೆ ಕೆಳಗೆ ವಿವರಿಸಿದ ಎರಡು ಶಕ್ತಿಗಳು ನೋಡಿಕೊಳ್ಳುತ್ತವೆ.

) ಪರಕರ್ಷಣ (ಕರ್ಷಣ = ಆಕರ್ಷಣ) ಶಕ್ತಿ: ವಿಭಿನ್ನ ಪ್ರಕಾರಗಳ ವಸ್ತುಗಳಲ್ಲಿರುವ ಪರಸ್ಪರ ಆಕರ್ಷಣ ಶಕ್ತಿಗೆ “ಪರಕರ್ಷಣ ಶಕ್ತಿ” ಎನ್ನುತ್ತಾರೆ. ಮಣ್ಣಿನ ಮತ್ತು ನೀರಿನ ಕಣಗಳು ವಿಭಿನ್ನ ವಸ್ತುಗಳಾಗಿರುವುದರಿಂದ ಪರಸ್ಪರ ಆಕರ್ಷಿತವಾಗುತ್ತವೆ. ಈ ಶಕ್ತಿಯ ಕಾರಣದಿಂದ ಮಣ್ಣಿನ ಪ್ರತಿ ಕಣದ ಸುತ್ತ ತೆಳುವಾದ ಪೊರೆಯ ರೂಪದಲ್ಲಿ ನೀರು ಅಂಟಿಕೊಂಡಿರುತ್ತದೆ. ಪರಕರ್ಷಣ ಶಕ್ತಿಯು ಮರಳು ಮತ್ತು ನೀರಿನ ಮಧ್ಯದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿದ್ದರೆ ಅತಿ ಸೂಕ್ಷ್ಮ ಎರೆ ಕಣ ಮತ್ತು ನೀರಿನ ಕಣಗಳಲ್ಲಿ ಅಧಿಕ ಪ್ರಮಾಣದಲ್ಲಿರುತ್ತದೆ. ಆದ್ದರಿಂದಲೇ, ಮರಳು ಮಣ್ಣಿಗಿಂತ ಎರೆ ಮಣ್ಣಿನ ಜಲಧಾರಣಾ ಶಕ್ತಿಯು ಅತಿ ಹೆಚ್ಚು.

ಪರಕರ್ಷಣ ಶಕ್ತಿಯ ಪ್ರಭಾವವು ಮಣ್ಣಿನ ಕಣಗಳು ಸಮೀಪದಲ್ಲಿ ಅತ್ಯಧಿಕವಾಗಿರುತ್ತದೆ. ಕಣಗಳಿಂದ ದೂರ ಸಾಗಿದಂತೆ. ಈ ಶಕ್ತಿಯ ಪ್ರಮಾಣವು ಕಡಿಮೆಯಾಗುತ್ತಾ ಹೋಗುತ್ತದೆ.

) ಸ್ವಕರ್ಷಣ ಶಕ್ತಿ: ಒಂದೇ ವಸ್ತುವಿನ ಕಣಗಳಲ್ಲಿರುವ ಪರಸ್ಪರ ಆಕರ್ಷಣೆಗೆ “ಸ್ವಕರ್ಷಣ” ಶಕ್ತಿಯೆನ್ನುವರು. ನೀರಿನ ಕಣಗಳು ಪರಸ್ಪರ ಆಕರ್ಷಿಸುತ್ತವೆಯಾದ್ದರಿಂದ ಗುರುತ್ವಾಕರ್ಷಣೆಯನ್ನು ಎದುರಿಸಿ, ಮಣ್ಣಿನ ಕಣಗಳ ಸುತ್ತ ಸ್ವಲ್ಪ ಪ್ರಮಾಣದಲ್ಲಿ ನೀರು ಉಳಿದುಕೊಳ್ಳಬಲ್ಲದು. ಇದಕ್ಕೆ ಸ್ವಕರ್ಷಣ ಶಕ್ತಿ ಕಾರಣವೆನ್ನಬಹುದು.

ಆಕರ್ಷಣ ಶಕ್ತಿಗಳು ಮತ್ತು ಮಣ್ಣಿನ ಆರ್ದ್ರತೆ

ಮೇಲೆ ವಿವರಿಸಿದ ಗುರುತ್ವಾಕರ್ಷಣ, ಪರಕರ್ಷಣ ಮತ್ತು ಸ್ವಕರ್ಷಣ ಶಕ್ತಿಗಳಿಗೂ ಮಣ್ಣಿನಲ್ಲಿರುವ ಆರ್ದ್ರತೆಗೂ ನಿಕಟ ಸಂಬಂಧವಿದೆ.

ಗರಿಷ್ಠ ಜಲಧಾರಣಾ ಸಾಮರ್ಥ್ಯ: ಮಳೆಯು ಬಂದು ನಿಂತೊಡನೆ ಅಥವಾ ನೀರಾವರಿಯನ್ನು ನಿಲ್ಲಿಸಿದೊಡನೆ, ಮಣ್ಣಿನಲ್ಲಿರುವ ಎಲ್ಲ ರಂಧ್ರಗಳ ನೀರಿನಿಂದ ತುಂಬಿರುತ್ತವೆ. ಈ ಸಂದರ್ಭದಲ್ಲಿ ಮಣ್ಣಿನಲ್ಲಿರುವ ಶೇಕಡಾವಾರು ನೀರಿನ ಪ್ರಮಾಣಕ್ಕೆ ಮಣ್ಣಿನ ಗರಿಷ್ಠ ಜಲಧಾರಣಾ ಸಾಮರ್ಥ್ಯವೆನ್ನುತ್ತಾರೆ.

ಪ್ರಯೋಗ ಶಾಲೆಯಲ್ಲಿ ಗರಿಷ್ಠ ಜಲಧಾರಣಾ ಸಾಮರ್ಥ್ಯವನ್ನು ಕೆಳಗಿನಂತೆ ಕಂಡುಹಿಡಿಯಬಹುದು. ಧಾತುವಿನಿಂದ (ಹಿತ್ತಾಳೆಯಿಂದ) ನಿರ್ಮಿಸಿದ ವಿಶಿಷ್ಟ ಬಗೆಯ ಡಬ್ಬಗಳನ್ನು ಉಪಯೋಗಿಸಬೇಕು. ಇದರ ಕೆಳಭಾಗದಲ್ಲಿ ಸಣ್ಣ ರಂಧ್ರಗಳಿರುತ್ತವೆ. ಅದರ ಮೇಲೆ ಸೋಸು ಕಾಗದದ ತುಂಡನ್ನು ಇಡಬೇಕು. ಡಬ್ಬದಲ್ಲಿ ಮಣ್ಣನ್ನು ಸ್ವಲ್ಪ ಸ್ವಲ್ಪವಾಗಿ ತುಂಬುತ್ತಾ ಮಣ್ಣು ಸರಿಯಾಗಿ ಕುಳಿತುಕೊಳ್ಳುವಂತೆ ಮಾಡಲು ಡಬ್ಬವನ್ನು ನಿಧಾನವಾಗಿ ತಟ್ಟುತ್ತಿರಬೇಕು. ಮಣ್ಣು ತುಂಬಿದ ಡಬ್ಬಗಳನ್ನು ನೀರಿರುವ ಪರಾತ(ತಟ್ಟೆ)ದಲ್ಲಿಡಬೇಕು. ಡಬ್ಬದ ತಳದಲ್ಲಿರುವ ರಂಧ್ರಗಳ ಮೂಲಕ ನೀರು ಮೇಲೇರಿ ಬಂದು ಮಣ್ಣನ್ನು ಒದ್ದೆ ಮಾಡುತ್ತದೆ. ಸುಮಾರು ೧೨ ತಾಸುಗಳಾದ ನಂತರ ಡಬ್ಬಗಳನ್ನು ಹೊರತೆಗೆದು, ಡಬ್ಬಗಳಿಗೆ ಅಂಟಿಕೊಂಡಿರುವ ನೀರನ್ನು ಒರಸಿ, ಕೂಡಲೇ ಭೌತಿಕ ತಕ್ಕಡಿಯಲ್ಲಿ ತೂಗಬೇಕು. ನಂತರ ಈ ಡಬ್ಬಗಳನ್ನು ಶಾಖ ಪೆಟ್ಟಿಗೆಯಲ್ಲಿ ೧೦೫ ರಿಂದ ೧೧೦ ಡಿಗ್ರಿ ಸೆಲ್ಸಿಯಸ್‌ಉಷ್ಣತಾಮಾನದಲ್ಲಿ ೨೪ ಗಂಟೆಗಳ ಕಾಲ ಇಟ್ಟು, ಹೊರತೆಗೆದು, ತಣಿಸಿ, ನಂತರ ತಕ್ಕಡಿಯಲ್ಲಿ ತೂಗಬೇಕು. ಎರಡು ತೂಕಗಳಲ್ಲಿಯ ಅಂತರವು ಮಣ್ಣಿನಲ್ಲಿಯ ನೀರಿನ ಪ್ರಮಾಣವನ್ನು ಸೂಚಿಸುತ್ತದೆ. ಒಣ ಮಣ್ಣಿನ ಆಧಾರದ ಮೇಲೆ ಮಣ್ಣಿನಲ್ಲಿರುವ ಶೇಕಡಾವಾರು ನೀರಿನ ಪ್ರಮಾಣವನ್ನು ಲೆಕ್ಕ ಹಾಕಬೇಕು. ಇದೇ ಮಣ್ಣಿನ ಗರಿಷ್ಠ ಜಲಧಾರಣಾ ಸಾಮರ್ಥ್ಯ.

ಮಣ್ಣಿನ ಜಲಧಾರಣಾ ಸಾಮರ್ಥ್ಯ: ಮೇಲೆ ಹೇಳಿದಂತೆ ಮಣ್ಣಿನ ಎಲ್ಲ ರಂಧ್ರಗಳಲ್ಲಿ ನೀರು ತುಂಬಿಕೊಂಡಿತೆಂದರೆ, ಹವೆಗೆ ಮಣ್ಣಿನಲ್ಲಿ ಸ್ಥಾನವೇ ಇಲ್ಲದಂತಾಗುತ್ತದೆ. ಇಂತಹ ಸ್ಥಿತಿಯಲ್ಲಿ, ಸಸ್ಯದ ಬೇರುಗಳಿಗೆ ಆಮ್ಲಜನಕದ ಕೊರತೆಯಾಗಿ ಬೆಳವಣಿಗೆಯು ಕುಂಠಿತವಾಗುತ್ತದೆ. ಆದರೆ ಸುದೈವದಿಂದ ದೊಡ್ಡ ರಂಧ್ರಗಳಲ್ಲಿರುವ ನೀರು, ಗುರುತ್ವಾಕರ್ಷಣೆಗೊಳಗಾಗಿ ಭೂಮಿಯಾಳಕ್ಕೆ ಚಲಿಸತೊಡಗುತ್ತದೆ. ಸುಮಾರು ೨-೩ ದಿನಗಳಲ್ಲಿ ಈ ಬಗೆಯ ನೀರು ಬಸಿದು ಹೋಗಿ ಪರಕರ್ಷಣ ಮತ್ತು ಸ್ವಕರ್ಷಣ ಶಕ್ತಿಗಳ ಪ್ರಭಾವಕ್ಕೆ ಒಳಗಾದ ನೀರು ಮಾತ್ರ ಮಣ್ಣಿನಲ್ಲಿ ಉಳಿದುಕೊಳ್ಳುತ್ತದೆ. ಈ ಸಮಯದಲ್ಲಿ ಮಣ್ಣಿನಲ್ಲಿರುವ ಶೇಕಡಾವಾರು ನೀರಿಗೆ ಆ ಮಣ್ಣಿನ ಜಲಧಾರಣಾ ಸಾಮರ್ಥ್ಯವೆನ್ನುತ್ತಾರೆ. ನೀರನ್ನು ಬಸಿದು ಹೋಗದಂತೆ ಹಿಡಿದಿಟ್ಟುಕೊಂಡಿರುವ ಈ ಸಾಮರ್ಥ್ಯವು ೦.೧ ರಿಂದ ೦.೩ ವಾಯುಭಾರಕ್ಕೆ ಸಮನಾಗಿರುತ್ತದೆ.

ಮಣ್ಣಿನ ಜಲಧಾರಣಾ ಸಾಮರ್ಥ್ಯವನ್ನು ಈ ಮುಂದೆ ವಿವರಿಸಿದ ವಿಧಾನದಿಂದ ಕಂಡು ಹಿಡಿಯಬಹದುದು.

ಮಣ್ಣಿನ ಜಲಧಾರಣಾ ಶಕ್ತಿಯನ್ನು ತಿಳಿದುಕೊಳ್ಳಬೇಕೆಂದಿರುವ ಭೂ ಭಾಗದಲ್ಲಿ ೨ ರಿಂದ ೩ ಚ.ಮೀ. ಸ್ಥಳವನ್ನು ಆರಿಸಿಕೊಂಡು, ಆ ಸ್ಥಳಕ್ಕೆ ಪೂರೈಸಬೇಕೆಂದಿರುವ ನೀರು ಹೊರಗೆ ಹರಿದು ಹೋಗದಂತೆ ಆ ಸ್ಥಳದ ಸುತ್ತಲೂ ಸಣ್ಣದಾಗಿ ಬದುವನ್ನು ನಿರ್ಮಿಸಬೇಕು. ಎಷ್ಟು ಆಳದವರೆಗಿರುವ ಮಣ್ಣಿನ ಜಲಧಾರಣಾ ಸಾಮರ್ಥ್ಯವನ್ನು ಕಂಡುಹಿಡಿಯಬೇಕಿದೆ ಎಂಬುದನ್ನು ನಿರ್ಧರಿಸಿ, ಅಷ್ಟು ಆಳದವರೆಗಿರುವ ಮಣ್ಣು ಗರಿಷ್ಠ ಜಲಧಾರಣಾ ಸಾಮರ್ಥ್ಯವನ್ನು ತಲುಪಲು ಬೇಕಾಗುವಷ್ಟು ನೀರನ್ನು, ಆರಿಸಿಕೊಂಡ ಸ್ಥಳದಲ್ಲಿ ನಿಲ್ಲುವಂತೆ ಮಾಡಬೇಕು. ಎಲ್ಲ ನೀರು ಕೆಳಗೆ ಇಂಗಿದೊಡನೆ, ಆ ಪ್ರದೇಶವನ್ನು ಪಾಲಿಥಿನ್‌ಹಾಳೆಯಿಂದ ಮುಚ್ಚಿ, ಮಣ್ಣಿನಿಂದ ನೀರು ಆವಿಯಾಗಿ ಹೋಗದಂತೆ ಮಾಡಬೇಕು. ಪಾಲಿಥಿನ್‌ಹಾಳೆಯ ಬದಲು ಸುಮಾರು ೪೦ ರಿಂದ ೪೫ ಸೆಂ.ಮೀ. ದಪ್ಪವಾಗುವಂತೆ ಹುಲ್ಲನ್ನು ಮುಚ್ಚಬಹುದು. ಪ್ರತಿದಿನ ಈ ಪ್ರದೇಶದಲ್ಲಿ ಇಚ್ಛಿತ ಆಳಕ್ಕೆ ಸೂಕ್ತ ಸಾಧನದಿಂದ ಮಣ್ಣಿನ ನಮೂನೆಯನ್ನು ಹೊರತೆಗೆದು, ಶಾಖ ಪೆಟ್ಟಿಗೆಯಲ್ಲಿ ಒಣಗಿಸಿ ಅದರಲ್ಲಿರುವ ನೀರಿನ ಪ್ರಮಾಣದಲ್ಲಿ ಕಂಡುಹಿಡಿಯಬೇಕು. ಈ ರೀತಿ ಮಣ್ಣಿನ ನಮೂನೆಗಳನ್ನು ಸಂಗ್ರಹಿಸಿ, ಅದರಲ್ಲಿಯ ನೀರಿನ ಪ್ರಮಾಣವನ್ನು ಕಂಡು ಹಿಡಿಯುವ ಕಾರ್ಯವನ್ನು ಮುಂದುವರಿಸಬೇಕು. ಮಣ್ಣಿನಲ್ಲಿಯ ನೀರಿನ ಪ್ರಮಾಣವು ಸ್ಥಿರಗೊಂಡಿತೆಂದರೆ ಈ ಕಾರ್ಯವನ್ನು ನಿಲ್ಲಿಸಿ ಆ ಸಮಯದಲ್ಲಿ ಮಣ್ಣಿನಲ್ಲಿರುವ ಶೇಕಡಾವಾರು ನೀರಿನ ಪ್ರಮಾಣವನ್ನು ಕಂಡು ಹಿಡಿದು ಅದೇ ಆ ಮಣ್ಣಿನ ಜಲಧಾರಣಾ ಸಾಮರ್ಥ್ಯವೆಂದು ಪರಿಗಣಿಸಬೇಕು. ಮಣ್ಣಿನ ಗುಣಧರ್ಮಗಳ ಮೇಲಿಂದ ನೀರಿನ ಪ್ರಮಾಣವು ಸ್ಥಿರಗೊಳ್ಳಲು ೪೮ರಿಂದ ೭೨ ಗಂಟೆಗಳು ಬೇಕಾಗಬಹುದು.

ಮಣ್ಣಿನ ಕಣಗಳ ಗಾತ್ರ, ಕಣಗಳ ರಚನೆ, ಸಾವಯವ ಪದಾರ್ಥಗಳ ಪ್ರಮಾಣ ಮತ್ತು ಆ ಮಣ್ಣಿನಲ್ಲಿರುವ ಪ್ರಮುಖ ಖನಿಜಗಳ ಸ್ವಭಾವ ಇತ್ಯಾದಿಗಳು ಮಣ್ಣಿನ ಜಲಧಾರಣಾ ಶಕ್ತಿಯ ಮೇಲೆ ಪ್ರಭಾವವನ್ನು ಬೀರುತ್ತವೆ.

ಸಸ್ಯವನ್ನು ಬಾಡಿಸುವ ಜಲಬಿಂದು: ಮಣ್ಣಿನ ಜಲಧಾರಣಾ ಶಕ್ತಿಯ ಸುಮಾರು ಅರ್ಧದಷ್ಟು ನೀರನ್ನು (ಶೇಕಡಾ ೪೦-೬೦ರಷ್ಟು ಅಂದರೆ ಸರಾಸರಿ ೫೦ರಷ್ಟು ನೀರನ್ನು) ಸಸ್ಯಗಳು ತಮ್ಮ ಬೇರುಗಳ ಮೂಲಕ ಸುಲಭವಾಗಿ ಹೀರಿಕೊಂಡು ಬೆಳೆಯಬಲ್ಲವು. ಒಂದು ಹಂತವನ್ನು ಮುಟ್ಟಿದೊಡನೆ, ಮಣ್ಣಿನಿಂದ ಹೀರಿಕೊಂಡ ನೀರು ಸಸ್ಯಗಳ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವುದಿಲ್ಲ. ಆಗ ಸಸ್ಯಗಳು ಬಾಡತೊಡಗುತ್ತವೆ. ಆರಂಭದ ದಿನಗಳಲ್ಲಿ, ಮಧ್ಯಾಹ್ನದ ಬಿಸಿಲಿನಲ್ಲಿ ಮಾತ್ರ ಬಾಡಿ ಮರುದಿನ ಬೆಳಗಾಗುವುದರೊಳಗೆ ಸಾಮಾನ್ಯ ಸ್ಥಿತಿಗೆ ಬಂದಿರುತ್ತವೆ. ಆದರೆ ಕೆಲವೇ ದಿನಗಳಲ್ಲಿ, ನೀರಿನ ಕೊರತೆಯು ಅಧಿಕಗೊಂಡು, ಸಸ್ಯಗಳು ಪೂರ್ತಿಯಾಗಿ ಬಾಡುತ್ತವೆ. ಸಸ್ಯಗಳು ಈ ಹಂತವನ್ನು ಮುಟ್ಟಿದಾಗ ಮಣ್ಣಿನಲ್ಲಿ ಉಳಿದಿರುವ ಶೇಕಡಾವಾರು ನೀರಿಗೆ ಸಸ್ಯಗಳು ಬಾಡಿಸುವ ಜಲಬಿಂದು ಎಂದು ಹೆಸರು. ಇದಕ್ಕೆ ಸಸ್ಯಗಳನ್ನು ಶಾಶ್ವತವಾಗಿ ಬಾಡಿಸುವ ಜಲಮಿತಿ ಎಂಬ ಹೆಸರೂ ಇದೆ. ಬಾಡಿದ ಸಸ್ಯಗಳನ್ನು ಸಾಪೇಕ್ಷ ಆರ್ದ್ರತೆಯು ೯೮ರಿಂದ ೧೦೦ ಇರುವ ವಾತಾವರಣದಲ್ಲಿಟ್ಟರೂ ಅವು ಚೇತರಿಸಿಕೊಳ್ಳುವುದಿಲ್ಲ. ಆದರೆ ನೀರಿನ ಪೂರೈಕೆಯಾದರೆ ಸಸ್ಯಗಳು ಬೆಳೆಯಬಲ್ಲವು.

ಮಣ್ಣಿನಲ್ಲಿರುವ ನೀರಿನ ಪ್ರಮಾಣವು ಸಸ್ಯಗಳನ್ನು ಬಾಡಿಸುವ ಹಂತಕ್ಕೆ ತಲುಪಿದಾಗ ಮಣ್ಣು ೧೫ ವಾಯುಭಾರಕ್ಕೆ ಸಮನಾಗಿರುವ ಶಕ್ತಿಯಿಂದ ನೀರನ್ನು ಹಿಡಿದಿಟ್ಟುಕೊಂಡಿರುತ್ತದೆ.

ಸಸ್ಯಗಳನ್ನು ಬಾಡಿಸುವ ಜಲಬಿಂದುವನ್ನು ಈ ಮುಂದೆ ವಿವರಿಸಿದ ಎರಡು ವಿಧಾನಗಳಿಂದ ಕಂಡುಹಿಡಿಯಬಹುದು.

. ಗಿಡ್ಡ ತಳಿಯ ಸೂರ್ಯಕಾಂತಿ ಸಸ್ಯದ ಸಹಾಯದಿಂದ: ಸುಮಾರು ಅರ್ಧ ಕಿ.ಗ್ರಾಂ. ಮಣ್ಣನ್ನು ತುಂಬಿದ ಪ್ಲಾಸ್ಟಿಕ್‌ಕುಂಡದಲ್ಲಿ ಗಿಡ್ಡ ತಳಿಯ ಸೂರ್ಯಕಾಂತಿ ಬೀಜಗಳನ್ನು ಬಿತ್ತಬೇಕು. ಮೊದಲು ನಾಲ್ಕೈದು ಬೀಜಗಳನ್ನು ಬಿತ್ತಿ, ಹುಟ್ಟಿ ಬಂದ ನಂತರ ಎರಡು ಉತ್ತಮ ಸಸಿಗಳನ್ನು ಮಾತ್ರ ಇರಲು ಬಿಟ್ಟು ಉಳಿದವುಗಳನ್ನು ಕಿತ್ತು ತೆಗೆಯಬೇಕು. ಕುಂಡದ ಮುಚ್ಚಳದಲ್ಲಿ ಎರಡು ರಂಧ್ರಗಳನ್ನು ಮಾಡಿ, ಪ್ರತಿ ರಂಧ್ರದ ಮುಖಾಂತರ ಒಂದೊಂದು ಸಸಿಯು ಹೊರಬರುವಂತೆ ಮಾಡಿ ಮುಚ್ಚಳವನ್ನು ಹಾಕಿ ಸಸ್ಯಗಳಿಗೆ ಅವಶ್ಯಕವಿರುವಷ್ಟು ನೀರನ್ನು ಪೂರೈಸಬೇಕು. ಸುಮಾರು ಆರು ವಾರಗಳವರೆಗೆ ಸಸಿಗಳನ್ನು ಬೆಳೆಯಲು ಬಿಡಬೇಕು. ಅಷ್ಟರಲ್ಲಿ ಪ್ರತಿ ಸಸಿಗೆ ಐದಾರು ಎಲೆಗಳು ಬಂದಿರುತ್ತದೆ.

ಮಣ್ಣಿನಲ್ಲಿ ಗಾಜಿನ ಕೊಳವೆಯೊಂದನ್ನು ಹುಗಿದು ಅದರ ಮೇಲ್ಭಾಗವನ್ನು ಅರಳೆಯಿಂದ ಮುಚ್ಚಿದರೆ ಹವೆಯಾಡಲು ಅನುಕೂಲವಾಗುತ್ತದೆ. ನೀರು ಬಸಿದು ಹೋಗಲು ಕುಂಡದಲ್ಲಿ ಮಾಡಿದ ರಂಧ್ರವನ್ನೂ ಮುಚ್ಚಬೇಕು. ಮಣ್ಣಿನ ಮೇಲ್ಭಾಗವನ್ನು ಮೇಣದಿಂದ ಮುಚ್ಚಿ ನೀರು ಆವಿಯ ರೂಪದಿಂದ ಹೊರಬೀಳದಂತೆ ನೋಡಿಕೊಳ್ಳಬೇಕು.

ಸಸ್ಯಗಳಿಗೆ ನೀರಿನ ಪೂರೈಕೆಯನ್ನು ನಿಲ್ಲಿಸಿ, ಬಾಡಲು ಬಿಡಬೇಕು. ಎರಡೂ ಸಸ್ಯಗಳು, ಬಾಡಿದ ಚಿಹ್ನೆಯನ್ನು ತೋರಿದೊಡನೆ ಶೇಕಡ ೧೦೦ ಸಾಪೇಕ್ಷ ಆರ್ದ್ರತೆ ಇರುವ ಘಂಟಾ ಪಾತ್ರೆಯಲ್ಲಿಡಬೇಕು. ಸಸ್ಯಗಳಿಂದ ಬಾಷ್ಪ ರೂಪದಲ್ಲಿ ನೀರು ಹೊರ ಹೋಗುವುದನ್ನು ತಪ್ಪಿಸಲು ಘಂಟಾ ಪಾತ್ರೆಯನ್ನು ಕಪ್ಪು ಬಟ್ಟೆ ಇಲ್ಲವೇ ಕಪ್ಪು ಪಾಲಿಥೀನ್‌ನಿಂದ ಮುಚ್ಚಬೇಕು. ಇಡೀ ರಾತ್ರಿಯೆಲ್ಲ ಹಾಗೆಯೇ ಇರಲು ಬಿಡಬೇಕು. ಬೆಳಗಾಗುವುದರೊಳಗೆ ಸಸ್ಯಗಳು ಚೇತರಿಸಿಕೊಂಡು ಸಾಮಾನ್ಯ ಸ್ಥಿತಿಗೆ ಬಂದರೆ ಕುಂಡವನ್ನು ಹೊರತೆಗೆದು ಒಂದೆರಡು ತಾಸುಗಳವರೆಗೆ ಹೊರಗಿಟ್ಟು ಸಸ್ಯಗಳು ಬಾಡಿದೊಡನೆ ಪುನಃ ಘಂಟಾ ಪಾತ್ರೆಯಲ್ಲಿಡಬೇಕು. ಸಸ್ಯಗಳು ಘಂಟಾ ಪಾತ್ರೆಯಲ್ಲಿಟ್ಟಾಗಲೂ ಚೇತರಿಸಲಾರದ ಸ್ಥಿತಿಯನ್ನು ತಲುಪುವವರೆಗೆ ಈ ಕ್ರಿಯೆಯನ್ನು ಮುಂದುವರಿಸಬೇಕು.

ಸಸ್ಯಗಳು ಚೇತರಿಸಿಕೊಳ್ಳದ ಸ್ಥಿತಿಯನ್ನು ಮುಟ್ಟಿದವೆಂದರೆ, ಅವುಗಳನ್ನು ಕತ್ತರಿಸಿ ಕುಂಡದಿಂದ ಮಣ್ಣಿನ ನಮೂನೆಯನ್ನು ತೆಗೆದು, ಶಾಖ ಪೆಟ್ಟಿಗೆಯಲ್ಲಿ ೧೦೫-೧೧೦ ಸೆಲ್ಸಿಯಸ್‌ನಲ್ಲಿ ಒಣಗಿಸಿ, ಮಣ್ಣಿನಲ್ಲಿರುವ ಶೇಕಡಾ ಆರ್ದ್ರತೆಯನ್ನು ಲೆಕ್ಕ ಮಾಡಬೇಕು. ಇದೇ, ಆ ಮಣ್ಣಿನ ಬಾಡಿಸುವ ಬಿಂದು ಎಂದು ತಿಳಿಯಬೇಕು.

. ಪ್ರೆಶರ್ ಮೆಂಬ್ರೇನ್‌ಸಾಧನದಿಂದ: ಪ್ರೆಶರ್ ಮೆಂಬ್ರೇನ್‌ ಸಾಧನದಲ್ಲಿ, ಮೆಂಬ್ರೀನ್ ಇಟ್ಟು, ಅದರ ಮೇಲೆ ಮಣ್ಣನ್ನು ಇಟ್ಟುಕೊಳ್ಳಬಲ್ಲ ರಬ್ಬರಿನ “ಉಂಗುರ”ಗಳನ್ನು ಇಡಬೇಕು. ಪ್ರತಿ ಉಂಗುರದಲ್ಲಿ ಬಾಡಿಸುವ ಬಿಂದುವನ್ನು ಕಂಡುಕೊಳ್ಳಬೇಕೆಂದಿರುವ ಮಣ್ಣಿನ ನಮೂನೆಯನ್ನು ಹಾಕಬೇಕು. ಇದಕ್ಕೆ ೨೫ ಗ್ರಾಂ ಮಣ್ಣನ್ನು ಉಪಯೋಗಿಸಬೇಕು. ಮೆಂಬ್ರೇನ್ ಮೇಲೆ ಸಾಕಷ್ಟು ನೀರನ್ನು ಹಾಕಿ ರಾತ್ರಿಯೆಲ್ಲ ಹಾಗೆಯೇ ಇರಲು ಬಿಡಬೇಕು. ಉಂಗುರಗಳಲ್ಲಿರುವ ಮಣ್ಣು ನೀರನ್ನು ಹೀರಿಕೊಂಡಿರುತ್ತದೆ. ಮೆಂಬ್ರೇನ್ ಮೇಲಿರುವ ಹೆಚ್ಚಿನ ನೀರನ್ನು ಪಿಚಕಾರಿಯಿಂದ ಹೊರತೆಗೆಯಬೇಕು.

ಸಾಧನದ ಮುಚ್ಚಳವನ್ನು ಭದ್ರಪಡಿಸಿ, ಎಲ್ಲ ಸಂಪರ್ಕಗಳು ಸರಿಯಾಗಿವೆ ಎಂಬುದನ್ನು ದೃಢಪಡಿಸಿಕೊಂಡು, ಮಣ್ಣಿನ ಮೇಲೆ ಭಾರವು ಬೀಳುವಂತೆ ಮಾಡಬೇಕು. ಈ ಭಾರವು ನಿಧಾನವಾಗಿ ಹೆಚ್ಚುತ್ತಾ ೧೫ ವಾಯುಭಾರವನ್ನು ಮುಟ್ಟುವಂತೆ ಮಾಡಬೇಕು. ಇದೇ ಸ್ಥಿತಿಯಲ್ಲಿ, ಸಾಧನವು ೧೮ ರಿಂದ ೨೪ ತಾಸುಗಳವರೆಗೆ ಇರಲು ಬಿಡಬೇಕು. ಪ್ರಾರಂಭದಲ್ಲಿ ಮಣ್ಣಿನಿಂದ ದೊಡ್ಡ ಪ್ರಮಾಣದಲ್ಲಿ ನೀರು ಹೊರ ಬರುತ್ತದೆಯಾದರೂ ನಂತರ ಹೊರ ಬರುವ ನೀರಿನ ಪ್ರಮಾಣವು ನಿಧಾನಗೊಂಡು, ಕೊನೆಗೆ ಹೊರಬರುವ ಕ್ರಿಯೆಯು ನಿಲ್ಲುತ್ತದೆ. ಸಾಧನವನ್ನು ತೆರೆದು, ಮಣ್ಣನ್ನು ಶಾಖ ಪೆಟ್ಟಿಗೆಯಲ್ಲಿ ಒಣಗಿಸಿ ಮಣ್ಣಿನಲ್ಲಿರುವ ಶೇಕಡಾ ಆರ್ದ್ರತೆಯನ್ನು ಲೆಕ್ಕ ಮಾಡಬೇಕು. ಈ ಅಂಕಿಯೇ ಬಾಡಿಸುವ ಬಿಂದು ಎನಿಸುತ್ತದೆ.

ವಾತಾವರಣದಿಂದ ಹೀರಿಕೊಂಡ ಆರ್ದ್ರತೆ: ಮಣ್ಣನ್ನು ಹವೆಯಲ್ಲಿ ಒಣಗಿಸಿದರೂ, ಆ ಮಣ್ಣಿನಲ್ಲಿ ಸ್ವಲ್ಪ ಪ್ರಮಾಣದ ಆರ್ದ್ರತೆಯು ಉಳಿದುಕೊಂಡಿರುತ್ತದೆ. ಈ ಆರ್ದ್ರತೆಯ ಪ್ರಮಾಣವನ್ನು ಕಂಡುಹಿಡಿಯಲು ಮಣ್ಣನ್ನು ಮೊದಲು ಶೇಕಡಾ ೧೦೦ ರಷ್ಟು ಆರ್ದ್ರತೆ ಇರುವ ವಾತಾವರಣದಲ್ಲಿ ಇಡಬೇಕು. ನಂತರ ಮಣ್ಣನ್ನು ಹೊರತೆಗೆದು ಅದರಲ್ಲಿರುವ ಶೇಕಡಾವಾರು ಆರ್ದ್ರತೆಯನ್ನು ಕಂಡುಹಿಡಿಯಬೇಕು.

ಮಣ್ಣಿನಲ್ಲಿರುವ ಈ ಆರ್ದ್ರತೆಯು, ದ್ರವರೂಪದಲ್ಲಿರದೆ ವಾಯುರೂಪದಲ್ಲಿರುತ್ತದೆ ಮತ್ತು ವಾಯುರೂಪದಲ್ಲಿಯೇ ಚಲಿಸುತ್ತದೆ. ಮಣ್ಣಿನ ಕಣಗಳು ಅಧಿಕ ಶಕ್ತಿಯಿಂದ ಆರ್ದ್ರತೆಯನ್ನು ಹಿಡಿದುಕೊಂಡಿರುತ್ತವೆ. ಈ ಶಕ್ತಿಯು ೩೧ ವಾಯುಭಾರಕ್ಕೆ ಸಮ ಎಂದು ಕಂಡು ಬಂದಿದೆ. ಆದ್ದರಿಂದ ಈ ನೀರು ಸಸ್ಯಗಳಿಗೆ ಪ್ರಯೋಜನಕಾರಿಯಾಗಲಾರದು. ಆದರೆ ಮಣ್ಣಿನಲ್ಲಿರುವ ಹಲವು ಪ್ರಕಾರದ ಸೂಕ್ಷ್ಮ ಜೀವಿಗಳು ಈ ಆರ್ದ್ರತೆಯನ್ನು ಉಪಯೋಗಿಸಿಕೊಳ್ಳಬಲ್ಲವು.

ಸ್ಫಟಿಕದಲ್ಲಿರುವ ನೀರು: ಮಣ್ಣಿನ ಕಣದಲ್ಲಿ ರಾಸಾಯನಿಕವಾಗಿ ಸ್ವಲ್ಪ ನೀರು ಬಂಧಿತವಾಗಿರುತ್ತದೆ. ಈ ನೀರನ್ನು ಬೇರ್ಪಡಿಸಲು ೧೦,೦೦೦ ವಾಯುಭಾರದಷ್ಟು ಶಕ್ತಿಯು ಬೇಕಾಗುತ್ತದೆ. ಸಸ್ಯಗಳಿಗೆ ಈ ನೀರು ದೊರೆಯುವುದಿಲ್ಲ. (ಚಿತ್ರ-೧)

ಮಣ್ಣಿನಲ್ಲಿರುವ ಆರ್ದ್ರತೆಯ ವರ್ಗೀಕರಣ

ಮಣ್ಣಿನಲ್ಲಿರುವ ಆರ್ದ್ರತೆ ಮತ್ತು ಸಸ್ಯಗಳಲ್ಲಿರುವ ಪರಸ್ಪರ ಸಂಬಂಧವನ್ನು ಪರಿಗಣಿಸಿ ಮೃತ್ತಿಕಾ ಜಲವನ್ನು ಎರಡು ರೀತಿಯಿಂದ ವರ್ಗೀಕರಿಸುವ ರೂಢಿಯಿದೆ.

. ಭೌತಿಕ ವರ್ಗೀಕರಣ: ಭೌತಿಕವಾಗಿ ಮಣ್ಣಿನಲ್ಲಿರುವ ನೀರನ್ನು ಮೂರು ವರ್ಗಗಳಲ್ಲಿ ವಿಂಗಡಿಸಬಹುದು.

. ಗುರುತ್ವಾಕರ್ಷಣೆಗೆ ಒಳಗಾಗುವ ನೀರು: ಈ ಮೊದಲೇ ವಿವರಿಸಿದಂತೆ ಮಳೆಯು ನಿಂತೊಡನೆ ಅಥವಾ ನೀರಾವರಿಯ ಜಲವನ್ನು ಪೂರೈಸಿದ ನಂತರ ಮಣ್ಣಿನಲ್ಲಿರುವ ಎಲ್ಲ ರಂಧ್ರಗಳು ನೀರಿನಿಂದ ತುಂಬಿರುತ್ತವೆ. ದೊಡ್ಡ ಆಕಾರದ ರಂಧ್ರಗಳಲ್ಲಿರುವ ನೀರು, ಪರಕರ್ಷಣ ಅಥವಾ ಸ್ವಕರ್ಷಣ ಶಕ್ತಿಗೆ ಒಳಪಡುವುದಿಲ್ಲ. ಆದರೆ, ಅದರ ಬದಲು ಗುರುತ್ವಾಕರ್ಷಣೆಯಿಂದ ಈ ನೀರು ಕೆಳಗೆ ಬಸಿದು ಹೋಗುತ್ತದೆ. ಆದ್ದರಿಂದ ಈ ನೀರನ್ನು ಗುರುತ್ವಾಕರ್ಷಣೆಗೆ ಒಳಗಾಗುವ ನೀರು ಎನ್ನುತ್ತಾರೆ.  ಈ ನೀರು ಪೂರ್ತಿಯಾಗಿ ಬಸಿದು ಹೋಗಲು ೨-೩ ದಿನಗಳು ಬೇಕಾಗಬಹುದು. ಕೆಳಗಿನ ಸಂಗತಿಗಳು ಬಸಿದುಹೋಗುವ ನೀರಿನ ವೇಗವನ್ನು ನಿರ್ಧರಿಸುತ್ತವೆ.

 • ಮಣ್ಣಿನ ಕಣಗಳ ಗಾತ್ರ: ಉರುಟು ಕಣಗಳ ಪ್ರಾಬಲ್ಯವಿರುವ ಮಣ್ಣಿನಲ್ಲಿ ನೀರು ವೇಗವಾಗಿ ಬಸಿದುಹೋಗುತ್ತದೆ. ಆದರೆ ಜಿನುಗು ಎರೆಕಣಗಳ ಪ್ರಾಬಲ್ಯವಿರುವ ಮಣ್ಣಿನಲ್ಲಿ ಒಟ್ಟು ರಂಧ್ರ ಪ್ರದೇಶವು ಮರಳು ಮಣ್ಣಿಗಿಂತ ಅಧಿಕವಾಗಿದ್ದರೂ ದೊಡ್ಡ ರಂಧ್ರಗಳ ಸಂಖ್ಯೆ ಕಡಿಮೆ. ಆದ್ದರಿಂದ ಎರೆಮಣ್ಣಿನಲ್ಲಿ ನೀರು ನಿಧಾನವಾಗಿ ಬಸಿದುಹೋಗುತ್ತದೆ.
 • ಮಣ್ಣಿನ ಕಣಗಳ ರಚನೆ: ಕಾಳಿನಾಕಾರದ ಮತ್ತು ಸ್ಥಿರವಾದ ರಚನೆಯಿರುವ ಮಣ್ಣಿನಲ್ಲಿ ನೀರು ಹೆಚ್ಚು ವೇಗದಿಂದ ಬಸಿಯುತ್ತದೆ.
 • ಸಾವಯವ ಪದಾರ್ಥ: ಸೂಕ್ತ ಪ್ರಮಾಣದಲ್ಲಿ ಸಾವಯವ ಪದಾರ್ಥವಿದ್ದರೆ ಮಣ್ಣಿನ ಕಣಗಳ ರಚನೆಯು ಉತ್ತಮಗೊಳ್ಳುತ್ತದೆಯಲ್ಲದೇ ಸ್ಥಿರಗೊಳ್ಳುತ್ತದೆ. ಎರೆಯ ಪ್ರಾಬಲ್ಯವಿರುವ ಮಣ್ಣಿನ ಮಧ್ಯಮ ಮತ್ತು ದೊಡ್ಡ ಆಕಾರದ ಛಿದ್ರಗಳ ಸಂಖ್ಯೆಯು ಹೆಚ್ಚುತ್ತದೆ. ಹೀಗಾಗಿ ಸಾವಯವ ಪದಾರ್ಥವಿರುವ ಎರೆಮಣ್ಣಿನಲ್ಲಿ ನೀರು ತುಲನಾತ್ಮಕವಾಗಿ ವೇಗದಿಂದ ಬಸಿದು ಹೋಗುತ್ತದೆ.
 • ಉಷ್ಣತಾಮಾನ: ಉಷ್ಣತಾಮಾನವು ಅಧಿಕಗೊಂಡರೆ, ನೀರಿನ ಸ್ನಿಗ್ಧತೆಯು ಕಡಿಮೆಯಾಗುತ್ತದೆ. ಇದರಿಂದ ಬಸಿಯುವ ವೇಗವು ಹೆಚ್ಚುತ್ತದೆ.
 • ಮಣ್ಣಿನಲ್ಲುಂಟಾದ ದಾರಿಗಳು: ಸಸ್ಯದ ಬೇರುಗಳು ಕೊಳೆತ ಮೇಲೆ ಮಣ್ಣಿನಲ್ಲುಂಟಾಗುವ ಪೊಳ್ಳು, ಕೀಟಗಳು, ಎರೆಹುಳುಗಳು ಮತ್ತು ಮಣ್ಣಿನಲ್ಲಿ ವಾಸಿವು ಇತರ ಸಣ್ಣ-ದೊಡ್ಡ ಪ್ರಾಣಿಗಳು ಮಾಡಿದ ದಾರಿಗುಂಟ ನೀರು ವೇಗವಾಗಿ ಬಸಿದು ಹೋಗಲು ಆಸ್ಪದವುಂಟಾಗುತ್ತದೆ.

ಮಣ್ಣಿನಲ್ಲಿಯ ಹವೆಯು ಇರಬೇಕಾದ ದೊಡ್ಡ ರಂಧ್ರಗಳನ್ನು ಈ ನೀರು ಆಕ್ರಮಿಸುತ್ತದೆಯಾದ್ದರಿಂದ, ಸಸ್ಯಗಳು ಆಮ್ಲಜನಕದ ಕೊರತೆಯಾಗಿ ನೀರನ್ನು ಸರಿಯಾಗಿ ಹೀರಿಕೊಳ್ಳಲಾರವು. ಅಲ್ಲದೇ, ಈ ನೀರು ಸ್ವಲ್ಪ ಅವಧಿಯ (೨-೩ ದಿನಗಳು)ವರೆಗೆ ಮಾತ್ರ ಮಣ್ಣಿನಲ್ಲಿರುವುದರಿಂದ ಸಸ್ಯಗಳಿಗೆ ಇದನ್ನು ಬಳಸಲು ಸಾಕಷ್ಟು ಆಸ್ಪದ ಸಿಗುವುದಿಲ್ಲ. ಆದಾಗ್ಯೂ ಈ ಅಲ್ಪ ಸಮಯದಲ್ಲಿಯೇ ಸಸ್ಯಗಳು ಸಣ್ಣ ಪ್ರಮಾಣದಲ್ಲಿ ಈ ನೀರನ್ನು ಹೀರಿಕೊಳ್ಳುವ ಸಾಧ್ಯತೆಯಿದೆ.

. ಸೂಕ್ಷ್ಮ ರಂಧ್ರಗಳಲ್ಲಿರುವ ನೀರು: ಮಣ್ಣಿನಲ್ಲಿರುವ ಸೂಕ್ಷ್ಮ ರಂಧ್ರಗಳು ಒಂದಕ್ಕೊಂದು ಸಂಪರ್ಕವನ್ನು ಹೊಂದಿ, ಸೂಕ್ಷ್ಮನಾಳಗಳಂತೆ ಕಾರ್ಯವನ್ನು ನಿರ್ವಹಿಸುತ್ತವೆ. ಈ ವರ್ಗದ ನೀರಿನ ಒಂದು ಭಾಗವು ಮಾತ್ರ ಸಸ್ಯಗಳಿಗೆ ದೊರೆಯುತ್ತದೆ.

. ವಾತಾವರಣದಿಂದ ಹೀರಿಕೊಂಡ ನೀರು: ಮಣ್ಣನ್ನು ಹವೆಯಲ್ಲಿ ತೆರೆದಿಟ್ಟರೆ, ಹವೆಯೊಳಗಿನ ಆರ್ದ್ರತೆಯನ್ನು ಮಣ್ಣು ಹೀರಿಕೊಳ್ಳಬಲ್ಲದು. ಆದರೆ ಈ ನೀರನ್ನು ಮಣ್ಣಿನಿಂದ ಬೇರ್ಪಡಿಸಲು ೩೧ ವಾಯುಭಾರಕ್ಕೆ ಸಮನಾದಷ್ಟು ಶಕ್ತಿಬೇಕು. ಆದ್ದರಿಂದ ಸಸ್ಯಗಳು ಈ ನೀರನ್ನು ಬಳಸಲಾರವು.

. ಜೈವಿಕ ವರ್ಗೀಕರಣ: ಮಣ್ಣಿನಲ್ಲಿರುವ ಎಲ್ಲ ನೀರು, ಸಸ್ಯಗಳಿಗೆ ದೊರೆಯಲಾರದು. ಆದ್ದರಿಂದ ಸಸ್ಯಗಳಿಗೆ ಆಗುವ ಪ್ರಯೋಜನವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಣ್ಣಿನಲ್ಲಿರುವ ನೀರನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಲಾಗಿದೆ.

. ಲಭ್ಯಜಲ: ಗುರುತ್ವಾಕರ್ಷಣೆಗೊಳಗಾದ ನೀರು ಸ್ವಲ್ಪ ಸಮಯದವರೆಗೆ ಮಾತ್ರ ಸಸ್ಯಗಳ ಸಮೀಪದಲ್ಲಿ ಇರುವುದರಿಂದ, ಸಸ್ಯಗಳಿಗೆ ಹೇಳಿಕೊಳ್ಳುವ ಪ್ರಮಾಣದಲ್ಲಿ ನೀರು ದೊರೆಯುವುದಿಲ್ಲ. ಆದರೆ ಮಣ್ಣಿನ ಜಲಧಾರಣಾ ಸಾಮರ್ಥ್ಯದಿಂದ ಆರಂಭವಾಗಿ ಸಸ್ಯಗಳನ್ನು ಬಾಡಿಸುವ ಜಲಬಿಂದುವಿನವರೆಗೆ ಇರುವ ನೀರನ್ನು ಸಸ್ಯಗಳು ಬಳಸಿಕೊಳ್ಳಬಲ್ಲವು. ಆದ್ದರಿಂದ ಮಣ್ಣಿನಲ್ಲಿರುವ ಒಟ್ಟು ನೀರಿನ ಈ ಭಾಗಕ್ಕೆ ಲಭ್ಯಜಲವೆಂದು ಹೆಸರು.

ಪರಕರ್ಷಣ ಮತ್ತು ಸ್ವಕರ್ಷಣ ಶಕ್ತಿಗಳಿಂದಾಗಿ ನೀರು ಮಣ್ಣಿನ ಪ್ರತಿ ಕಣದ ಸುತ್ತಲೂ ಪೊರೆಯ ರೂಪದಲ್ಲಿ ಆವರಿಸುತ್ತದೆ. ಕಣದಿಂದ ದೂರಹೋದಂತೆ ಈ ಶಕ್ತಿಗಳ ಪ್ರಭಾವವು ಕಡಿಮೆಯಾಗುತ್ತಾ ಸಾಗುತ್ತದೆ. ಉದಾಹರಣೆಗೆ, ಮಣ್ಣಿನಲ್ಲಿಯ ನೀರು ಸಸ್ಯಗಳನ್ನು ಬಾಡಿಸುವ ಜಲಬಿಂದುವಿನ ಸಮೀಪದಲ್ಲಿದ್ದಾಗ ಮಣ್ಣಿನ ಕಣಗಳ ಸುತ್ತ ಇರುವ ನೀರಿನ ಪೊರೆಯು ತೆಳುವಾಗಿರುತ್ತದೆ. ಆದ್ದರಿಂದ ಪರಕರ್ಷಣ ಮತ್ತು ಸ್ವಕರ್ಷಣ ಶಕ್ತಿಗಳ ಪ್ರಭಾವವು ನೀರಿನ ಕಣಗಳ ಮೇಲೆ ಅಧಿಕವಾಗಿರುತ್ತದೆ. ಈ ಸ್ಥಿತಿಯಲ್ಲಿದ್ದ ನೀರನ್ನು ಹೊರಗೆಳೆಯಲು ೧೫ ವಾಯುಭಾರಕ್ಕೆ ಸಮನಾದ ಶಕ್ತಿಯು ಬೇಕಾಗುತ್ತದೆ. ಹೀಗಾಗಿ ಸಸ್ಯಗಳು ನೀರನ್ನು ಹೀರಿಕೊಳ್ಳಲಾರವು.

ನೀರಿನ ಪ್ರಮಾಣವು ಅಧಿಕಗೊಳ್ಳುತ್ತ, ಮಣ್ಣು ಜಲಧಾರಣಾ ಸಾಮರ್ಥ್ಯವನ್ನು ತಲುಪಿತೆಂದರೆ, ಮಣ್ಣಿನ ಕಣಗಳ ಸುತ್ತಲಿರುವ ನೀರಿನ ಪೊರೆಯು ದಪ್ಪವಾಗುತ್ತದೆ. ಮಣ್ಣಿನ ಕಣಗಳಿಂದ ನೀರಿನ ಕಣಗಳಿರುವ ಅಂತರವು ಅಧಿಕಗೊಳ್ಳುತ್ತದೆ. ಇದರ ಪರಿಣಾಮವಾಗಿ, ನೀರಿನ ಈ ಕಣಗಳ ಮೇಲೆ ಪರಕರ್ಷಣ ಮತ್ತು ಸ್ವಕರ್ಷಣ ಶಕ್ತಿಗಳ ಪ್ರಭಾವವು ಕಡಿಮೆಯಾಗುತ್ತದೆ. ಆದ್ದರಿಂದಲೇ, ಜಲಧಾರಣಾ ಸಾಮರ್ಥ್ಯದಷ್ಟು ನೀರು ಮಣ್ಣಿನಲ್ಲಿರುವಾಗ ಕೇವಲ ೦.೧ ರಿಂದ ೦.೩ ವಾಯುಭಾರಕ್ಕೆ ಸಮನಾದ ಶಕ್ತಿಯಿಂದ ನೀರನ್ನು ಮಣ್ಣಿನಿಂದ ಬೇರ್ಪಡಿಸಬಹುದು. ಸಸ್ಯಗಳು ನೀರನ್ನು ಸುಲಭವಾಗಿ ಹೀರಿಕೊಳ್ಳಬಲ್ಲವು.

ಮಣ್ಣಿನಲ್ಲಿ ಜಲಧಾರಣಾ ಸಾಮರ್ಥ್ಯದಷ್ಟು ನೀರು ಇದ್ದರೆ, ಸಸ್ಯಗಳು ನೀರನ್ನು ಹೆಚ್ಚು ಶ್ರಮವಿಲ್ಲದೆ ಹೀರಿಕೊಳ್ಳುತ್ತವೆ. ನೀರಿನ ಪ್ರಮಾಣವು ಕಡಿಮೆಯಾಗುತ್ತಾ ಸಾಗಿದಂತೆ ನೀರನ್ನು ಹೀರಿಕೊಳ್ಳಲು ಹೆಚ್ಚು ಶಕ್ತಿಯನ್ನು ವ್ಯಯಮಾಡಬೇಕಾಗುತ್ತದೆ. ನೀರು ಬಾಡಿಸುವ ಬಿಂದುವನ್ನು ಮುಟ್ಟಿತೆಂದರೆ ತಮಗೆ ಬೇಕಾಗುವಷ್ಟು ನೀರನ್ನು ಹೀರಿಕೊಳ್ಳಲಾಗದೇ ಸಸ್ಯಗಳು ಬಾಡಿ ಹೋಗುತ್ತವೆ. ಆದ್ದರಿಂದ ಮಣ್ಣಿನಲ್ಲಿರುವ ನೀರಿನ ಮಟ್ಟವು ಸಸ್ಯಗಳನ್ನು ಬಾಡಿಸುವ ಬಿಂದುವನ್ನು ತಲುಪುವವರೆಗೆ ದಾರಿಕಾಯದೇ ಜಲಧಾರಣಾ ಸಾಮರ್ಥ್ಯದ ಆದಷ್ಟು ಹತ್ತಿರ ಇರುವಂತೆ ನೀರಿನ ನಿರ್ವಹಣೆಯನ್ನು ಮಾಡಿದರೆ, ಸಸ್ಯಗಳು ಉತ್ತಮ ರೀತಿಯಿಂದ ಬೆಳೆದು, ಅಧಿಕ ಇಳುವರಿಯನ್ನು ಕೊಡುತ್ತವೆಂದು ಕಂಡು ಬಂದಿದೆ.

. ಅಲಭ್ಯ ಜಲ: ಸಸ್ಯಗಳು ಬಾಡಿಸುವ ಜಲಬಿಂದುವಿಗಿಂತ ನೀರಿನ ಪ್ರಮಾಣ ಕಡಿಮೆಯಾಯಿತೆಂದರೆ, ಸಸ್ಯಗಳು ಮಣ್ಣಿನಿಂದ ನೀರನ್ನು ಹೀರಿಕೊಳ್ಳಲಾರವು. ಆಗ ಮಣ್ಣು ನೀರನ್ನು ಹಿಡಿದಿಟ್ಟುಕೊಂಡ ಕರ್ಷಣ ಶಕ್ತಿಯು ೧೫ ವಾಯುಭಾರಕ್ಕಿಂತ ಅಧಿಕವಾಗಿರುತ್ತದೆ. ಈ ನೀರಿಗೆ ಅಲಭ್ಯ ನೀರು ಎನ್ನುತ್ತಾರೆ.

ಚಿತ್ರ ೨ನ್ನು ಪರಿಶೀಲಿಸಿದರೆ ನೀರಿನ ಭೌತಿಕ ಮತ್ತು ಜೈವಿಕ ವರ್ಗೀಕರಣಗಳಲ್ಲಿರುವ ಸಂಬಂಧವನ್ನರಿಯಬಹುದು. 

ಆರ್ದ್ರತೆಯ ಪ್ರಮಾಣವನ್ನು ವ್ಯಕ್ತಪಡಿಸುವ ವಿಧಾನ

ಮಣ್ಣಿನಲ್ಲಿರುವ ಆರ್ದ್ರತೆಯ ಪ್ರಮಾಣವನ್ನು ತೂಕದ ಆಧಾರದ ಮೇಲೆ ವ್ಯಕ್ತಪಡಿಸುವುದು ವಾಡಿಕೆ. ಆದರೆ ಕೆಲವು ಬಾರಿ ನೀರನ್ನು ಗಾತ್ರದ ಆಧಾರದ ಮೇಲೆ ಇಲ್ಲವೇ ಆಳದಲ್ಲಿ ಹೇಳಬೇಕಾಗುತ್ತದೆ. ಮಣ್ಣಿನಲ್ಲಿರುವ ಆರ್ದ್ರತೆಯನ್ನು ವ್ಯಕ್ತಪಡಿಸುವ ವಿವಿಧ ವಿಧಾನಗಳನ್ನು ಕೆಳಗಿನ ಉದಾಹರಣೆಗಳಿಂದ ತಿಳಿದುಕೊಳ್ಳಬಹುದು. ಈ ರೀತಿ ಮಣ್ಣಿನಲ್ಲಿರುವ ನೀರನ್ನು ವ್ಯಕ್ತಪಡಿಸಬೇಕಾದ ಪ್ರಸಂಗಗಳು ನೀರಿನ ನಿರ್ವಹಣೆಯ ಸಂದರ್ಭದಲ್ಲಿ ಮೇಲಿಂದ ಮೇಲೆ ಬರುತ್ತವೆಯಾದ್ದರಿಂದ ಇದಕ್ಕೆ ಸಂಬಂಧಿಸಿದ ವಿವರಗಳನ್ನು ಅರಿತುಕೊಳ್ಳುವುದು ಅವಶ್ಯ.

ಶಾಖ ಪೆಟ್ಟಿಗೆಯಲ್ಲಿ ಒಣಗಿಸಿದ ಮಣ್ಣಿನ ತೂಕದ ಆಧಾರದ ಮೇಲೆ ಹಸಿ ಮಣ್ಣಿನಲ್ಲಿರುವ ಆರ್ದ್ರತೆಯನ್ನು ಕಂಡುಕೊಳ್ಳುವ ವಿಧಾನ.

ಬಿಗಿಯಾದ ಮುಚ್ಚಳವಿರುವ ಗಾಜಿನ ಅಥವಾ ಲೋಹದ ಸಣ್ಣ ಪೆಟ್ಟಿಗೆಯಲ್ಲಿ, ಸ್ವಲ್ಪ ಪ್ರಮಾಣದ (೧೦ ರಿಂದ ೨೦ ಗ್ರಾಂ) ಮಣ್ಣನ್ನು ತುಂಬಿ, ಕೂಡಲೇ ಮುಚ್ಚಿ ತೂಕ ಮಾಡಬೇಕು. ಮುಚ್ಚಳವನ್ನು ತೆಗೆದು, ಮಣ್ಣನ್ನು ಪೆಟ್ಟಿಗೆ ಸಹಿತ ಶಾಖಪೆಟ್ಟಿಗೆಯಲ್ಲಿ ೨೪ ಗಂಟೆಗಳ ಕಾಲ ೧೦೫ ರಿಂದ ೧೧೦ ಸೆ. ಉಷ್ಣತಾಮಾನದಲ್ಲಿ ಒಣಗಿಸಬೇಕು. ಮಣ್ಣಿರುವ ಪೆಟ್ಟಿಗೆಯನ್ನು, ಒಣಗಿಸುವ ಸಾಧನದಲ್ಲಿ ತಣಿಸಿ, ತೂಕ ಇವೆರಡು ತೂಕಗಳ ಸಹಾಯದಿಂದ ಮಣ್ಣಿನಲ್ಲಿರುವ ಆರ್ದ್ರತೆಯ ಪ್ರಮಾಣವನ್ನು ಶಾಖಪೆಟ್ಟಿಗೆಯಲ್ಲಿ ಒಣಗಿದ ಮಣ್ಣಿನ ಆಧಾರದ ಕಂಡು ಹಿಡಿಯಬೇಕು. ಕೆಳಗಿನ ಉದಾಹರಣೆಯಿಂದ ಈ ವಿಧಾನವು ಸ್ಪಷ್ಟವಾಗುತ್ತದೆ.

ಈ ಉದಾಹರಣೆಯಲ್ಲಿ ವಿವಿಧ ತೂಕಗಳು ಮುಂದಿನಂತಿದ್ದವೆಂದು ಪರಿಗಣಿಸಲಾಗಿದೆ.

ಹಸಿ ಮಣ್ಣಿನ ತೂಕ (ಹಸಿ ಮಣ್ಣಿರುವ ಪೆಟ್ಟಿಗೆಯ ತೂಕ – ಖಾಲಿ ಪೆಟ್ಟಿಗೆಯ ತೂಕ) = ೧೮.೫ ಗ್ರಾಂ
ಶಾಖ ಪೆಟ್ಟಿಗೆಯಲ್ಲಿ ಒಣಗಿಸಿದ ನಂತರ ಮಣ್ಣಿನ ತೂಕ (ಒಣಗಿದ ಮಣ್ಣಿನಲ್ಲಿರುವ ಪೆಟ್ಟಿಗೆಯ ತೂಕ-ಖಾಲಿ ಪೆಟ್ಟಿಗೆಯ ತೂಕ) = ೧೪.೨ ಗ್ರಾ.
ಆದ್ದರಿಂದ ಮಣ್ಣಿನಲ್ಲಿರುವ ಆರ್ದ್ರತೆಯ ತೂಕ = ೪.೩ ಗ್ರಾಂ

ಒಟ್ಟು ೧೪.೨ ಗ್ರಾಂ ಒಣ ಮಣ್ಣಿನಲ್ಲಿ ೪.೩ ಗ್ರಾಂ ನೀರು (ಆರ್ದ್ರತೆ) ಇದೆ ಎಂದಂತಾಯಿತು. ಇದರ ಮೇಲಿಂದ, ಆ ಮಣ್ಣಿನಲ್ಲಿರುವ ಶೇಕಡಾವಾರು ನೀರನ್ನು (ಶಾಖ ಪೆಟ್ಟಿಗೆಯಲ್ಲಿ ಒಣಗಿಸಿದ ಮಣ್ಣಿನ ಆಧಾರದ ಮೇಲೆ) ಕೆಳಗಿನಂತೆ ಗೊತ್ತುಪಡಿಸಬೇಕು.

ಶಾಖ ಪೆಟ್ಟಿಗೆಯಲ್ಲಿ ಒಣಗಿಸಿದ ಮಣ್ಣಿನ ಆಧಾರದ ಮೇಲೆ ಮಣ್ಣಿನಲ್ಲಿರುವ ಆರ್ದ್ರತೆಯನ್ನು ವ್ಯಕ್ತಪಡಿಸುವ ವಿಧಾನವನ್ನೇ ಎಲ್ಲರೂ ಅನುಸರಿಸುತ್ತಾರೆ. ಇದೇ ಸರಿಯಾದ ವಿಧಾನ. ಹವೆಯಲ್ಲಿ ಒಣಗಿದ ಮಣ್ಣಿನ ಆಧಾರದ ಮೇಲೆಯೂ ಮಣ್ಣಿನಲ್ಲಿರುವ ಆರ್ದ್ರತೆಯನ್ನು ವ್ಯಕ್ತಪಡಿಸಬಹುದು. ಆದರೆ ಒಂದೇ ಮಣ್ಣಿನ ನಮೂನೆಯನ್ನು ಹವೆಯಲ್ಲಿ ಒಣಗಿಸಿದಾಗ ಹವೆಯಲ್ಲಿರುವ ಸಾಪೇಕ್ಷ ಆರ್ದ್ರತೆಯ ಮೇಲಿಂದ ಮಣ್ಣಿನಲ್ಲಿರುವ ಆರ್ದ್ರತೆಯು ಹೆಚ್ಚು ಕಡಿಮೆಯಾಗಬಲ್ಲದು. ಆದರೆ ಒಂದೇ ಮಣ್ಣಿನ ನಮೂನೆಯನ್ನು ಹವೆಯಲ್ಲಿ ಒಣಗಿಸಿದಾಗ ಹವೆಯಲ್ಲಿರುವ ಸಾಪೇಕ್ಷ ಆರ್ದ್ರತೆಯ ಮೇಲಿಂದ ಮಣ್ಣಿನಲ್ಲಿರುವ ಆರ್ದ್ರತೆಯು ಹೆಚ್ಚು ಕಡಿಮೆಯಾಗಬಲ್ಲದು. ಆದ್ದರಿಂದ ಅಸ್ಥಿರವಾದ ಆಧಾರದ ಮೇಲೆ ಲೆಕ್ಕ ಮಾಡಿದಾಗ ಒಂದೇ ರೀತಿಯ ಪರಿಣಾಮವು ದೊರೆಯಲಾರದು. ಶಾಖ ಪೆಟ್ಟಿಗೆಯಲ್ಲಿ ಒಣಗಿದ ಮಣ್ಣಿನ ಆಧಾರದ ಮೇಲೆ ಲೆಕ್ಕವನ್ನು ಮಾಡಿದರೆ ಈ ಸಮಸ್ಯೆಯು ಉದ್ಭವವಾಗುವುದಿಲ್ಲ.

ಮೇಲಿನ ವಿಧಾನದ ಬಳಕೆಯನ್ನು ಹಲವು ಪ್ರಸಂಗಗಳಲ್ಲಿ ಮಾಡಿಕೊಳ್ಳಬಹುದು. ಕೆಲವು ಉದಾಹರಣೆಗಳು ಕೆಳಗಿನಂತಿವೆ (ಕಾಲ್ಪನಿಕ ಅಂಕಿಗಳನ್ನು ಬಳಸಲಾಗಿದೆ):

೧) ಮಣ್ಣು, ಜಲಧಾರಣಾ ಸಾಮರ್ಥ್ಯದಲ್ಲಿದ್ದಾಗ ಸಂಗ್ರಹಿಸಿದ ಹಸಿ ಮಣ್ಣಿನ ತೂಕ = ೨೪.೩ ಗ್ರಾಂ
೨) ಅದೇ ಮಣ್ಣು ಬಾಡಿಸುವ ಬಿಂದುವಿನಲ್ಲಿದ್ದಾಗ ಸಂಗ್ರಹಿಸಿದ ಮಣ್ಣಿನ ತೂಕ = ೨೧.೧ ಗ್ರಾಂ
೩) ಗಾಳಿಯಲ್ಲಿ ಒಣಗಿದ ಮಣ್ಣಿನ ತೂಕ = ೨೦.೦ ಗ್ರಾಂ
೪) ಶಾಖ ಪೆಟ್ಟಿಗೆಯಲ್ಲಿ ಒಣಗಿದ ಮಣ್ಣಿನ ತೂಕ = ೧೮.೫ ಗ್ರಾಂ

 

ಈ ಅಂಕಿಗಳ ಸಹಾಯದಿಂದ ಕೆಳಗೆ ತೋರಿಸಿದ ಲೆಕ್ಕಗಳನ್ನು ಮಾಡಬಹುದು.

*      ಆರ್ದ್ರತೆ, ಮಣ್ಣಿನ ಆರ್ದ್ರತೆ, ಮಣ್ಣಿನಲ್ಲಿರುವ ನೀರು, ಮಣ್ಣಿನಲ್ಲಿರುವ ಹಸಿ, ಮೃತ್ತಿಕಾ ಜಲ ಮುಂತಾದವುಗಳನ್ನು ಸಮಾನ ಪದಗಳೆಂದು ಈ ಅಧ್ಯಾಯದಲ್ಲಿ ಬಳಸಿದೆ.