ಏಳುತಲೇ ಎದ್ದು ಯಾರ‍್ಯಾರ ನೆನೆಯಾಲಿ

ಎಳ್ಳು ಜೀರಿಗೆ ಬೆಳೆಯೋಳಾ-ಭೂಮಿತಾಯ
ಎದ್ದೊಂದು ಗಳಿಗೆ ನೆನೆದೇನು

ಹೊತ್ತನಂತೆ ಎದ್ದು ಯಾರ‍್ಯಾರ ನೆನೆದೇನು
ಕಲ್ಲು ಕಾವೇರಿ ಕಪಿನೀಯ-ನೆನೆದಾರೆ
ಮೇಲಿದ್ದ ಪಾಪ ಪರಿಹಾರ

ಏಳುವಾಗ ನೆನೆವೇನು ಭಾಳಲೋಚನದವನ
ಜೋಳೀಗೆ ಹೊನ್ನ ಮಳೆಗರೆದ-ಕೈಲಾಸ್ದ
ದೇವ ಮಲ್ಲಯನ ನೆನವೇನು

ಎಳ್ಳು ಹೊಲದಾಗಿರುವ ದೊಳಹೊಟ್ಟೆ ಬೆನವಣ್ಣ
ಎಳ್ಳೆಲೆ ತುಪ್ಪ ತಿಳಿದುಪ್ಪ-ಸಲಿಸುವೆ
ದೊಳಹೊಟ್ಟೆ ಬೆನವ ಕೊಡು ಮತಿಯ

ಮೊದಲಾಗಿ ನೆನವೇನು ಮದನ ಗೋವಿಂದನ
ಹದಿನೆಂಟು ನಾಮದೊಡೆಯನ-ನೆನೆದಾರೆ
ಹೊತ್ತಿದ್ದ ಪಾಪ ಪರಿಹಾರ

ಏಳುತಲೆ ಶಿವ ಎನ್ನಿ ಬೀಳುತಲೆ ಶಿವ ಎನ್ನಿ
ಯಾಳೆ ಬಂದಾಗ ಶಿವ ಎನ್ನಿ-ಯೋಳ್ಹೆಡೆಯ
ಸರಪ ಬಂದಾಗ ಶಿವ ಎನ್ನಿ