ಹಿಂದಿನ ಕಾಲದಲ್ಲಿ ಪ್ರತಿ ಗ್ರಾಮದಲ್ಲೂ ಸುತ್ತಲೂ ತೋಪುಗಳು, ತೋಟಗಳು, ಗೋಮಾಳ ಮತ್ತು ವನಗಳು ಇರುತ್ತಿದ್ದವು. ಮಾವು, ಹಲಸು, ಹುಣಿಸೆ, ನೇರಳೆ, ಬೇವು, ಹಿಪ್ಪೆ, ಹೊಂಗೆ ತೋಪುಗಳನ್ನು ಹೇರಳವಾಗಿ ಬೆಳೆಸುತ್ತಿದ್ದರು.  ಜಮೀನು ಗಡಿಗಳಲ್ಲಿ, ರಸ್ತೆ ಬದಿಗಳಲ್ಲಿ ಗಿಡಮರಗಳನ್ನು ಬೆಳೆಸುತ್ತಿದ್ದರು. ನಾಲೆ ಮತ್ತು ಕಾಲುವೆ ಬದಿಗಳಲ್ಲಿ ಎತ್ತರವಾಗಿ ಬೆಳೆಯುವ ಮರಗಳನ್ನು ಬೆಳೆಸುತ್ತಿದ್ದರು. ಜನರು ಗಿಡಮರಗಳ  ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದರಿಂದ ಪ್ರತಿ ಗ್ರಾಮ ಮತ್ತು ಗ್ರಾಮಸ್ಥರಿಗೆ ಬೇಕಾದ ವಸ್ತುಗಳು ಹಳ್ಳಿಯ ಸಮೀಪದ ಅರಣ್ಯಗಳಿಂದಲೇ ದೊರಕುತ್ತಿದ್ದವು.

ಅಡುಗೆಗೆ ಸೌದೆ, ಊಟಕ್ಕೆ ಮುತ್ತುಗದೆಲೆ, ಹಣ್ಣಿಗಾಗಿ ಮಾವು, ಹಲಸು, ನೇರಳೆ ಯಲಚಿ, ಬೇಲ ಇತ್ಯಾದಿ ಬಗೆಬಗೆಯ ಹಣ್ಣುಗಳು; ದನಗಳಿಗೆ ಮೇವು; ಮನೆ ಮತ್ತು ಗುಡಿಸಲುಗಳಿಗೆ ಮರ; ಎಣ್ಣೆಗಾಗಿ ಹೊಂಗೆ, ಹಿಪ್ಪೆ ಮತ್ತು ಬೇವು; ರೋಗಕ್ಕೆ ಮೂಲಿಕೆಗಳು; ಬುಟ್ಟಿ ಹೆಣಿಕೆಗೆ ಬೊಂಬು, ಹಗ್ಗಕ್ಕೆ ನಾರು; ಪೀಠೋಪಕರಣಗಳಿಗೆ ಮರ; ಪೂಜೆ ಮತ್ತು ಪುನಸ್ಕಾರಗಳಿಗೆ ಧೂಪ, ಹೋಮಕ್ಕೆ ದರ್ಭೆ; ಅರ್ಚನೆಗೆ ಮತ್ತು ಮುಡಿಯಲಿಲಕ್ಕೆ ಪುಷ್ಪಗಳು; ಕಷಾಯಕ್ಕೆ ಸೊಗದೆ ಬೇರು; ಸ್ನಾನಕ್ಕೆ ಸೀಗೆ; ಬಟ್ಟೆ ಒಗೆಯಲು ಅಂಟುವಾಳ, ಕಮ್ಮಾರನಿಗೆ ಇದ್ದಿಲು; ಬಡಗಿಗೆ ಮರ; ಅಕ್ಕಸಾಲಿಗನಿಗೆ ಗುಲಗಂಜಿ ಮತ್ತು ಅರಗು ಮುಂತಾದ ಅನೇಕ ಬಗೆಬಗೆಯ ವಸ್ತುಗಳು ಅರಣ್ಯಗಳಿಂದ ದೊರಕುತ್ತಿದ್ದವು. ಒಕ್ಕಲಿಗನಿಗೆ, ಬಡಗಿ, ಕಮ್ಮಾರ, ನೇಕಾರ, ಅಗಸ, ವೈದ್ಯ, ಪೂಜಾರಿ, ಪುರೋಹಿತರ ಕಸುಬುಗಳಿಗೆ ಬೇಕಾದ ವಸ್ತುಗಳು ಸುಲಭವಾಗಿ ದೊರೆಯುತ್ತಿದ್ದವು.

ಅರಣ್ಯ ನಾಶದಿಂದ ಮತ್ತು ಜನಸಂಖ್ಯೆ ಹೆಚ್ಚಳದ ಪರಿಣಾಮದಿಂದ ಗ್ರಾಮಸ್ಥರಲ್ಲಿನ ಸೌಹಾರ್ದತೆ, ನೆಮ್ಮದಿ ಹಾಳಾಗಿದೆ ಹಾಗೂ ಅವರ ಆರ್ಥಿಕ ಸ್ಥಿತಿ ವಿಷಮಿಸಿದೆ ಮತ್ತು ಬಡತನ ತಾಂಡವವಾಡುತ್ತಿದೆ. ಈ ಅತಂತ್ರ ಸ್ಥಿತಿಗೆ ಅನೇಕ ಕಾರಣಗಳನ್ನು ಕೊಡಬಹುದು. ಜನಸಂಖ್ಯಾ ಸ್ಫೋಟದಿಂದ ಉಂಟಾಗಿರುವ ಹೆಚ್ಚಿನ ಆಹಾರ ಉತ್ಪನ್ನಗಳ ಬೇಡಿಕೆ, ವೃಕ್ಷಗಳ ಬಗ್ಗೆ ಬೆಳೆಯುತ್ತಿರುವ ತಾತ್ಸಾರ, ಮರಗಿಡಗಳನ್ನು ನಾಶಮಾಡುವ ಪ್ರವೃತ್ತಿ, ಜಮೀನು ದಾಹವೇ ಕಾರಣಗಳಾಗಿವೆ. ಈ ಮೇಲಿನ ಅನೇಕ ಕಾರಣಗಳು ಮರಗಳನ್ನು ಅನಿವಾರ್ಯವಾಗಿ ಬೆಳೆಸಬೇಕಾದ ಸ್ಥಿತಿಗೆ ತಂದೊಡ್ಡಿವೆ.

ವನಸಂಪತ್ತನ್ನು ನಾಶ ಮಾಡುವುದರಿಂದ ಆಗುವ ದುಷ್ಪರಿಣಾಮಗಳೇನು?

) ಹವಾನಿಯಂತ್ರಕ ವೃಕ್ಷ ಸಮೂಹ

ಕಾಡಿದ್ದರೆ ಕಾರ್ಮೋಡ ಮತ್ತು ಕಾಡಿದ್ದರೆ ನಾಡು ಎಂಬ ಗಾದೆಗಳಿಂದ ನಮ್ಮ ಪೂರ್ವಜರಿಗೆ ವನದಿಂದಾಗಿ ಹವಾತಂಪಾಗಿರುತ್ತದೆ ಮತ್ತು ಮಳೆ ಬರುತ್ತದೆ ಎಂದು ನಂಬಿಕೆಯಿತ್ತು ಎಂಬುದನ್ನು ತಿಳಿದು ಬರುತ್ತದೆ. ಬಿರುಗಾಳಿಯ ಹೊಡೆತವನ್ನು ತಡೆಯುವಲ್ಲಿ ಮರಗಿಡಗಳು ದಕ್ಷವಾಗಿ ಕಾರ್ಯನಿರ್ವಹಿಸುತ್ತವೆ  ಹಾಗೂ ವೃಕ್ಷಗಳಿರುವೆಡೆ ಧೂಳಿರುವುದಿಲ್ಲ ಮತ್ತು ಸ್ವಚ್ಛ ಗಾಳಿ ಬೀಸುತ್ತದೆ. ಮರಗಳ ನಾಶದಿಂದ ಬೇಸಿಗೆಯ ಧಗೆ ಹೆಚ್ಚಾಗುತ್ತದೆ. ಈ ದೃಷ್ಟಿಯಿಂದ ಮರಗಳು ಹವಾನಿಯಂತ್ರಕಗಳಾಗಿ ವರ್ತಿಸುತ್ತವೆ.

) ಜಲಸಂಪನ್ಮೂಲ ನಿಯಂತ್ರಕ ವನಗಳು

ಮರಗಳ ಎಲೆಗಳು ಒಣಗಿ ಉದುರಿ, ಕೊಳೆತು ಮಣ್ಣು ಸೇರಿ, ಮಣ್ಣು ಸಡಿಲಗೊಂಡು ಮಳೆಬಂದಾಗ ನೀರನ್ನು ಹಿಂಗುವಂತೆ ಮಾಡುತ್ತವೆ. ಒಣಗಿದ ಮರದ ಬೇರುಗಳು ಕೊಳೆತು ನೆಲದಲ್ಲಿ ಬಿರುಕುಗೊಂಡು ಇದರಲ್ಲಿ ನೀರು ಆಳಕ್ಕೆ ಇಳಿಯುವಂತೆ ಮಾಡಿ ಆಳದಲ್ಲಿ ಜಲಸಂಪನ್ಮೂಲ ಹೆಚ್ಚಾಗುವಂತೆ ಆಗುತ್ತದೆ. ವೃಕ್ಷ ಸಂಪತ್ತು ಮತ್ತು ತರಗು ಮಳೆಯ ನೀರನ್ನು  ಬೇಗೆ ಹರಿದುಹೋಗದಂತೆ ತಡೆಯೊಡ್ಡಿ ನಿಧಾನವಾಗಿ ಹರಿದು ಹಳ್ಳ ಸೇರುವಂತೆ ಮಾಡಿ ಪ್ರವಾಹವಾಗುವುದನ್ನು ತಡೆಯುತ್ತದೆ.

) ವನಮಣ್ಣಿನ ರಕ್ಷಾಕವಚಗಳು

ಮಳೆ ಹನಿಯ ಬಿರುಸಾದ ಹೊಡೆತವನ್ನು ತಡೆಯುವ ವೃಕ್ಷ ಸಂಪತ್ತು ಮಣ್ಣು ರಕ್ಷಣೆಗೆ ಅಗಾಧ ಕೊಡುಗೆ ನೀಡುತ್ತಿದೆ. ಎಲೆಗಳು ಮಳೆ ಹನಿಗಳನ್ನು ತಡೆದು ತುಂತುರು ಹನಿಗಳಾಗಿ ಒಡೆಯುವಂತೆ ಮಾಡಿ ನೆಲಕ್ಕೆ ಇಳಿಸುತ್ತವೆ. ಈ ತುಂತುರ ಹನಿಗಳು ಮಣ್ಣನ್ನು ಚದುರಿಸಲು ಶಕ್ತಿಗುಂದುತ್ತವೆ. ಆದುದರಿಂದ ಮಣ್ಣಿನ ಕಣಗಳು ಅಲ್ಲಿಯೇ ಇದ್ದು ಜಲವನ್ನು ಹೀರಿಕೊಳ್ಳುವುದರಿಂದ ಮಣ್ಣಿನ ಜಲಸಂಗ್ರಹ ಶಕ್ತಿ ಹೆಚ್ಚುತ್ತದೆ. ಹಸಿರುಹೊದಿಕೆ ನಾಶವಾದರೆ ಮಣ್ಣಿನ ಫಲವತ್ತತೆಯೂ ನಾಶವಾಗಿ ಮಣ್ಣನ್ನು ನಿಸ್ಸಾರಗೊಳಿಸುತ್ತದೆ. ಇದನ್ನು ತಡೆಯುವ ಮರಸಂಪತ್ತು ಜಲ ಮತ್ತು ಮಣ್ಣನ್ನು ರಕ್ಷಿಸುವ ರಕ್ಷಾಕವಚವಾಗಿದೆ.

ಗಿಡಮರಗಳ ನಾಶದಿಂದ ಆಗುವ ದುಷ್ಪರಿಣಾಮಗಳು

ಸೌದೆ ಅಭಾವ ಉಂಟಾಗಿ ಸಗಣಿಯನ್ನು ಬೆರಣಿಯಾಗಿ ಉರಿಸುವ ಕಾರ್ಯ ಅಗಾಧವಾಗಿ ಬೆಳೆಯುತ್ತಿರುವುದರಿಂದ ಉಪಯುಕ್ತ ಫಲವತ್ತಾದ ಗೊಬ್ಬರದ ನಾಶವಾಗುತ್ತಿದೆ. ಗೊಬ್ಬರವಿಲ್ಲದೆ ಜಮೀನು ನಿಸ್ಸಾರವಾಗಿ ಇಳುವರಿ ಕುಗ್ಗುತ್ತದೆ. ಇದನ್ನು ತಪ್ಪಿಸಲು ಉರುವಲು ಮರಗಳನ್ನು ಹೆಚ್ಚಾಗಿ ಬೆಳೆಸಿ ಶೇ. ೪೦ರಷ್ಟು ಬೆಳೆಗಳಿಗೆ ಗೊಬ್ಬರವನ್ನು ಸೌದೆ ಮರ ಬೆಳೆಸುವುದರಿಂದ ಒದಗಿಸಬಹುದೆಂದು ಮತ್ತು ಇದರಿಂದಾಗಿ ಶೇ. ೩೦ರಷ್ಟು ಹೆಚ್ಚು ಆಹಾರದ ಉತ್ಪತ್ತಿ ಮಾಡಬಹುದೆಂದು ಅಂದಾಜು ಮಾಡಲಾಗಿದೆ.

ಅರಣ್ಯ ಸಂಪತ್ತಿನ ನಾಶದಿಂದ ರೈತರಿಗೆ ಹುಲ್ಲು, ಸೊಪ್ಪು ದೊರಕದಂತಾಗಿರುವುದರಿಂದ ಪಶುಸಂಪತ್ತು ಮತ್ತು ಗೋಮಾಳ ನಾಶವಾಗಿ ಹೋಗಿದೆ. ವನಸಂಪತ್ತಿನ ನಾಶದಿಂದ ಹಸಿರೆಲೆಗೊಬ್ಬರ ದೊರಕದಂತಾಗಿ ರೈತರಿಗೆ ಬೆಳೆ ಇಳುವರಿ ಕುಗ್ಗಿಹೋಗುತ್ತದೆ.

ರೈತರಿಗೆ ಬೇಕಾದ ನೇಗಿಲು, ಕುಂಟೆ, ಮರಮುಟ್ಟು ಇತ್ಯಾದಿ ಮಾಡಿಕೊಳ್ಳಲು ಮರ ಸುಲಭವಾಗಿ ದೊರಕುತ್ತಿಲ್ಲ. ಈಗ ದೂರದ ಅರಣ್ಯಗಳಿಂದಲೇ ದುಬಾರಿ ಹಣದಿಂದ ಮರ ತರಿಸಬೇಕಾಗುತ್ತದೆ. ಇದಲ್ಲದೆ ಅನೇಕ ಕಸುಬುದಾರರಿಗೆ ಬೇಕಾದ ಬೊಂಬು, ನಾರು, ಒಗಚು, ಅಂಟು, ಗೇರು ಇತ್ಯಾದಿ ಅನೇಕ ಕಚ್ಚಾ ವಸ್ತುಗಳು ದೊರಕದೆ ಬೇರೆ ಕಸುಬು ಅವಲಂಬಿಸಬೇಕಾಗಿದೆ.

ಹೀಗೆ ವೃಕ್ಷನಾಶದಿಂದ ಗ್ರಾಮ ಜೀವನದ ಮೇಲೆ ಅತಿಯಾದ ದುಷ್ಪರಿಣಾಮಗಳು ಉಂಟಾಗುತ್ತವೆ.

ಈ ದುಷ್ಟರಿಣಾಮಗಳನ್ನು ಎದುರಿಸುವ ಶಕ್ತಿ ನಮ್ಮ ಕೈಯಲ್ಲಿದೆ. ನಮ್ಮ ಪೂರ್ವಜರಂತೆ ಗಿಡಮರಗಳ ಬಗ್ಗೆ, ವನಗಳ ಬಗ್ಗೆ ಆಸಕ್ತಿ ವಹಿಸಿದರೆ ಹತ್ತಾರು ವರ್ಷಗಳಲ್ಲಿ ನಮ್ಮ ಅನೇಕ ಅವಶ್ಯಕತೆಗಳನ್ನು ನೀಗಿಕೊಳ್ಳಬಹುದಾಗಿದೆ.

ಮೊದಲನೆಯದಾಗಿ ವೃಕ್ಷಗಳ ಬಗ್ಗೆ ತಾತ್ಸಾರ ಭಾವನೆ ತಪ್ಪಿಸುವುದು ಅತ್ಯಗತ್ಯ. ಬೆಳೆಗಳನ್ನು ಬೆಳೆಯುವುದು ಮಾತ್ರ ಗುರಿಯಾಗಬಾರದು. ಮರಗಳೂ ಒಂದು ಬೆಳೆ ಮಾತ್ರವಲ್ಲ, ಮಾನವನ ಅನೇಕ ಬಗೆಯ ಅವಶ್ಯಕತೆಗಳನ್ನು ದೀರ್ಘಕಾಲ ಪೂರೈಸಬಲ್ಲದೆಂಬ ದೂರದೃಷ್ಟಿ ಇರಬೇಕು . ನಮ್ಮ ಮುಂದಿನ ಪೀಳಿಗೆಗಾಗಿ ವಿವಿಧ ಬಗೆಯ ಮರಗಳನ್ನು ನೆಟ್ಟು ಬೆಳೆಸುವುದನ್ನು ನಮ್ಮ ಹಿರಿಯರು ಗಿಡಮರಗಳನ್ನು ಬೆಳೆಸಿದಂತೆ ಬೆಳೆಸಬೇಕಾಗಿದೆ. ಇದಕ್ಕಾಗಿ ರೈತರು ತಮ್ಮ ಕೆಲವು ಆತಂಕಗಳನ್ನು ದೂರಮಾಡಿಕೊಳ್ಳಬೇಕಾಗಿದೆ.

ರೈತರಿಗಿರುವ ಮೊದಲನೆಯ ಆತಂಕವೇನೆಂದರೆ, ಮರ ಬೆಳೆಸಿದರೆ ಬೆಳೆ ಇಳುವರಿ ಕುಂಠಿತವಾಗುತ್ತದೆ ಮತ್ತು ಬೆಳೆ ತಲೆ ಎತ್ತುವುದಿಲ್ಲ ಎಂಬುದು. ಇದಕ್ಕೆ ಅಗಲ ನೆರಳು ಬೀಳುವ ಮರಗಿಡಗಳನ್ನು ಜಮೀನಿನ ಮಧ್ಯ ಭಾಗದಲ್ಲಿ ನೆಡಬಾರದು ಮತ್ತು ಕಡಿಮೆ ನೆರಳು ಬೀಳುವ ಮರಗಳನ್ನು ನೆಡಬೇಕು. ರೈತರಿಗ ವಿವಿದೋದ್ದೇಶಗಳಿಗೆ ವಿವಿಧ ಮರಗಳಿವೆ. ನೆರಳು ಕಟ್ಟದ, ಆಳ ಬೇರಿಳಿಸಿ ನೆಲದ ತಳಪದರದಿಂದ ಪೋಷಕಾಂಶಗಳನ್ನು ಮತ್ತು ನೀರನ್ನು ಪಡೆದು ಬೆಳೆಯುವಂತಹ ಜಾಲಿಯಂತಹ ಅನೇಕ ಮರಗಿಡಗಳಿವೆ. ರಾಜಾಸ್ಥಾನದಲ್ಲಿ ಬೆಳೆ ಜಮೀನಿನಲ್ಲಿ ೫೦-೬೦ ಮರ ಬೆಳೆಸುವ ವಾಡಿಕೆ. ತಮಿಳುನಾಡಿನ ತಂಜಾವೂರು, ತಿರುಚನಾಪಳ್ಳಿ ಕಡೆ ಗದ್ದೆ ಬದುಗಳಲ್ಲಿ ಜಾಲಿ, ಸರ್ವೆಮರ ಬೆಳೆಸುತ್ತಿರುವುದರಿಂದ ಬತ್ತದ ಬೆಳೆ ಇಳುವರಿ ಕಡಿಮೆಯಾಗಿಲ್ಲ. ನುಗ್ಗೆ, ಬಿಳಿಜಾಲಿ, ಬೂರುಗ , ನೀರಂಜಿ, ಹೊಂಗೆ ಮುಂತಾದ ಮರಗಳು ಬದುವಿನಲ್ಲಿ ಬೆಳೆಸಲು ಸೂಕ್ತ. ಮರದ ಬೇರುಗಳಿಂದ ತೊಂದರೆ ಕಂಡುಬಂದಲ್ಲಿ ಸುತ್ತಲೂ ಚರಂಡಿ ತೆಗೆದರೆ ಅನುಕೂಲ.

ಜಮೀನಿನ ಹತ್ತಿರ ಮರಗಳಿದ್ದಲ್ಲಿ ಹಕ್ಕಿಗಳು ವಾಸಮಾಡಿಕೊಂಡಿದ್ದು ತೆನೆಗಳಲ್ಲಿ ಕಾಳನ್ನು ಕುಕ್ಕಿ ಬೆಳೆ ನಾಶಮಾಡುತ್ತವೆ ಎಂಬ ಮತ್ತೊಂದು ಭಾವನೆ ಇದೆ. ಇದರ ಪರಿಹಾರಕ್ಕೆ ಅನೇಕ ಹಣ್ಣು ಮರಗಿಡಗಳನ್ನು ನೆಡುವುದರಿಂದ ಇದನ್ನು ತಪ್ಪಿಸಬಹುದು. ಅಲ್ಲದೆ ಅನೇಕ ಹಕ್ಕಿಗಳಿಗೆ ಹುಳು ಹುಪ್ಪಟೆ ಮತ್ತು ಗೆದ್ದಲುಗಳೇ ಆಹಾರ. ಹಕ್ಕಿಗಳು ತಮ್ಮ ತೂಕದ ಎರಡರಷ್ಟು ಹುಳುಗಳನ್ನು ಹೆಕ್ಕಿ ತಿನ್ನುವುದರಿಂದ ಇಳುವರಿ ಕುಂಠಿತವಾಗುವುದು ತಪ್ಪುತ್ತದೆ.

ಮರಗಿಡಗಳನ್ನು ಬೆಳೆಸಲು ಜಾಗವೆಲ್ಲಿದೆ ಎಂದು ಹೇಳುವುದುಂಟು. ಗೋಮಾಳದಲ್ಲಿ ಮರನೆಟ್ಟರೆ ಜಾನುವಾರು ಮೇಯಿಸಲು ಎಲ್ಲಿ ಹೋಗಬೇಕೆಂದು ಕೇಳುವವರಿದ್ದಾರೆ. ಆದರೆ ಗೋಮಾಳ ಬರೀ ಬಂಜರು ಎಂಬ ಅಂಶ ಮನಗಂಡರೆ ಒಳ್ಳೆಯದು. ಈಗ ಗೋಮಾಳಗಳು ಕೃಷಿ ವಿಸ್ತರಣೆಯಿಂದ ಕೃಷಿ ಜಮೀನುಗಳಾಗಿ ಪರಿವರ್ತನೆ ಹೊಂದಿವೆ. ಅಳಿದುಳಿದಿರುವ ಗೋಮಾಳಗಳ ನಿರ್ವಹಣೆಗೆ ಸರಿಯಾದ ವ್ಯವಸ್ಥೆ ಮಾಡಬೇಕಾಗಿದೆ. ಸ್ವಲ್ಪ ಭಾಗಕ್ಕೆ ಮರನೆಟ್ಟು ದೊಡ್ಡದಾಗುವವರೆಗೆ ರಕ್ಷಣೆಗೆ ವ್ಯವಸ್ಥೆ ಮಾಡಬೇಕು.

ಕೃಷಿ ಬೆಳೆಗಳು ಶೀಘ್ರ ಫಸಲು ಕೊಟ್ಟರೆ ಮರಗಳು ದೀರ್ಘಕಾಲದವರೆಗೆ ಬಿತ್ತದೆ, ಹರಗದೆ, ಆರೈಸದೆ, ಖರ್ಚು ಮಾಡದೆ ಫಲವನ್ನು ನೀಡುತ್ತವೆ. ಮರಗಳು ರೈತರ ಶತ್ರುವಲ್ಲ ಮಿತ್ರ ಮತ್ತು ಬಂಧುಗಳು. ಮಳೆಗಾಲದಲ್ಲಿ ಮರನೆಡುವ ಸಂಪ್ರದಾಯವನ್ನು ಬೆಳೆಸಬೇಕು. ಮರನೆಡಲು ಬೇಕಾದ ಜಾಗಗಳು, ಹಿತ್ತಲು, ಅಂಗಳ, ಬಾವಿ ಸುತ್ತ, ಗೊಬ್ಬರದ ಗುಂಡಿ, ಜಮೀನು ಮೂಲೆ, ಬದು, ರಸ್ತೆಪಕ್ಕ, ಬಂಜರು ಭೂಮಿ, ಗೋಮಾಳ, ಶಾಲೆ ಬದಿ, ಚಾವಡಿ ಮುಂದೆ ಅಲಂಕರಕ್ಕೆ ಹಾಗೂ ಸೌದೆ, ಸೊಪ್ಪು, ಹಣ್ಣು ಮತ್ತು ಇತರ ಉದ್ದೇಶಗಳಿಗಾಗಿ ಬೆಳೆಸಬಹುದು.

ರೈತರು ಎಲ್ಲೆಲ್ಲಿ, ಯಾವ ಉಪಯೋಗಕ್ಕೆ ಹೇಗೆ, ಯಾವಾಗ ಮರ ಬೆಳೆಸಬೇಕೆಂಬುದನ್ನು ಈ ಮುಂದೆ ವಿವರಿಸಲಾಗಿದೆ. ರೈತರು ಸ್ವಂತಕ್ಕೆ, ಗ್ರಾಮಕ್ಕೆ ಮತ್ತು ರಾಷ್ಟ್ರದ ಹಿತ ದೃಷ್ಟಿಯಿಂದ ಸಾಮೂಹಿಕವಾಗಿ ಅರಣ್ಯವನ್ನು ಬೆಳೆಸಬಹುದು.

ಮರಮುಟ್ಟು ವನ

ರಾಷ್ಟ್ರೀಯ ಅರಣ್ಯ ಯೋಜನೆಯಂತೆ ಭೂಮಿಯ ಮೂರನೆ ಒಂದು ಭಾಗ ಅರಣ್ಯ ಮತ್ತು ಬೆಟ್ಟಗುಡ್ಡಗಳಲ್ಲಿ ಶೇ. ೬೦ ರಷ್ಟು ಭಾಗವನ್ನು ಅರಣ್ಯಗಳಿಗೆ ಮೀಸಲಿಟ್ಟು ನೈಸರ್ಗಿಕ ಸಮತೋಲನ ಕಾಯ್ದುಕೊಂಢು ಹೋಗಬೇಕಾಗಿದೆ. ಈ ಹಸಿರು ಹೊದಿಕೆ ಭೂಮಿಗೆ ಇಲ್ಲದಿದ್ದರೆ ಜೀವನಕ್ಕೆ ಅವಶ್ಯಕವಾದ ಉರುವಲು, ಮರಮುಟ್ಟು, ಕೈಗಾರಿಕೆಗೆ ಬೇಕಾದ ಕಚ್ಚಾ ಅರಣ್ಯ ಉತ್ಪನ್ನಗಳು, ಕೃಷಿಗೆ ಬೇಕಾದ ಸೊಪ್ಪು, ಮೇವು, ಮರಮುಟ್ಟು ಸಿಗುವುದು ಕಷ್ಟವಾಗಬಹುದು. ಇದಲ್ಲದೆ ಮಣ್ಣಿಗೆ ರಕ್ಷಣೆಯಿಲ್ಲದಿದ್ದರೆ ಮೇಲ್ಮಣ್ಣು ಕೊಚ್ಚಿ ಜಮೀನು ಕೊರಕಲಾಗುತ್ತದೆ. ಪ್ರವಾಹ ಮತ್ತು ಹವಾಗುಣಗಳ ವೈಪರೀತ್ಯ ಉಂಟಾಗುತ್ತದೆ ಹಾಗೂ ಸಂಪನ್ಮೂಲಗಳ ಕೊರತೆಯುಂಟಾಗುತ್ತವೆ.

ವನನಾಶದಿಂದಾಗಿರುವ ಕ್ಷೋಭೆಯಿಂದ ಪಾರಾಗಲು ಎಲ್ಲಾ ಕಡೆಗಳಲ್ಲಿ ಸಾಗುವಳಿ ಜಮೀನು, ಗೋಮಾಳ, ಕೆರೆಕಟ್ಟೆ ಏರಿ ಮತ್ತು ಹಿನ್ನೀರಿನ ಭಾಗ, ಕ್ಷಾರಮಣ್ಣಿನ ಮತ್ತು ಚೌಳು ಭೂಮಿಗಳಲ್ಲಿ, ಮನೆ ಸುತ್ತಮುತ್ತ, ಹೆದ್ದಾರಿಗಳಲ್ಲಿ ಮರಗಿಡಗಳನ್ನು ನೆಟ್ಟು ಬೆಳೆಸುವುದು ಮತ್ತು ಕಾಪಾಡುವುದು ಅತ್ಯವಶ್ಯಕ.

ಒಂದು ಎಕರೆಯಲ್ಲಿ ೧೫ ಅಡಿ ಅಂತರದಲ್ಲಿ ನೆಡುವಾಗ ೨೦೦ ಮರಗಳನ್ನು ಬೆಳೆಸಬಹುದು. ಒಂದು ಎಕರೆ ಗದ್ದೆಯಲ್ಲಿ ೬೦೦ ಅಡಿಯಷ್ಟು ಉದ್ದದ ಬದುಗಳು ಇದ್ದು ಇವುಗಳ ಮೇಲೆ ೧೫ ಅಡಿ ಅಂತರದಲ್ಲಿ ಸುಮಾರು ೪೦ ಮರಗಳನ್ನು ನೆಡಬಹುದು ಐದು ಎಕರೆ ಗದ್ದೆಯಲ್ಲಿ ಒಂದು ಎಕರೆಯಷ್ಟು ಮರಗಳನ್ನು ನೆಡಬಹುದಾಗಿದೆ. ಅಂದರೆ ಐದನೆ ಒಂದು ಭಾಗ ಅಂದರೆ ಶೇ. ೨೦ ರಷ್ಟು ಜಮೀನಿಗೆ ರಕ್ಷಣೆ ದೊರೆತಂತಾಗುತ್ತದೆ.

ಗಾಳಿ ತಡೆ

ಬಿಡಿಮರಗಳಲ್ಲದೆ ಬೇಲಿಗಾಗಿ ಕಂಬದಂತೆ ಉಪಯೋಗವಾಗುವಂತಹ ಜೀವಂತಮರಗಳನ್ನು ಬೇಲಿಗಳಲ್ಲಿ ಬೆಳೆಸಬಹುದು. ದನಗಳಿಗೆ ಪುಷ್ಟಿಕರ ಮೇವು, ಹಣ್ಣು ಕಾಯಿಕೊಡುವ ಮರಗಳನ್ನು ನೆಡಬಹುದು. ಬೇರುಗಳು ಜಮೀನಿನ ಮೇಲ್ಭಾಗದಲ್ಲಿ ಬೆಳೆಯುವುದನ್ನು ತಪ್ಪಿಸಲು ಕಾಲುವೆ ತೋಡಬಹುದು. ಗಾಳಿ ತಡೆ ಬೆಳೆಸುವುದರಿಂದ ಅನೇಕ ಫಸಲುಗಳಾದ ಬಾಳೆ, ತೆಂಗು, ಮಾವು ಇತ್ಯಾದಿಗಳಿಗೆ ಬಿರುಗಾಳಿಯಿಂದ ರಕ್ಷಣೆ ಪಡೆಯುವುದಲ್ಲದೆ , ಶೇ. ೪೦ರಷ್ಟು ಅಧಿಕ ಇಳುವರಿ ವರದಿಯಾಗಿದೆ. ಹೇಗೆಂದರೆ ಗಾಳಿ ಜೋರಾಗಿ ಬೀಸಿದಾಗ ಮಣ್ಣಿನ ತೇವಾಂಶ ಆರಿಹೋಗುತ್ತದೆ ಮತ್ತು ಎಲೆಗಳೂ ಸಹ ನೀರಾವಿ ಹೊರಹಾಕುತ್ತವೆ. ಗಾಳಿ ತಡೆಯಿದ್ದರೆ ರಭಸದ ಗಾಳಿಯಿಂದ ರೆಂಬೆ ಉದುರುವುದು ತಪ್ಪುತ್ತದೆ.

ಮುಂಗಾರು ಮತ್ತು ಹಿಂಗಾರು ದಿಕ್ಕಿಗೆ ಗಾಳಿಗೆ ಅಡ್ಡಲಾಗಿ ೩-೪ ಸಾಲು ಮಧ್ಯದಲ್ಲಿ ಎತ್ತರದ ಮರಬದಿಗಳ ಸಾಲಿನಲ್ಲಿ ಚಿಕ್ಕದಾದ ನಿತ್ಯಹರಿದ್ವರ್ಣ ಮರಗಳನ್ನು ಉದ್ದಕ್ಕೂ ಬೆಳೆಸಿದಲ್ಲಿ ಅನೇಕ ಬೆಳೆಗಳನ್ನು ರಕ್ಷಿಸಬಹುದು ಮತ್ತು ಹೆಚ್ಚು ಇಳುವರಿ ಪಡೆಯಬಹುದು. ಗಾಳಿ ತಡೆಗಳ ಮೂಲ ಗಾಳಿಯ ತೇವಾಂಶ ಹೆಚ್ಚುವುದರಿಂದ ಬೆಳೆಗಳಿಗೆ ಅನುಕೂಲ ಮತ್ತು ಮಣ್ಣಿನ ರಕ್ಷಣೆ ಉಂಟಾಗುತ್ತದೆ. ಜಮೀನಿನ ಶೇ. ೭ ರಷ್ಟು ಭಾಗದಲ್ಲಿ ಗಾಳಿ ತಡೆ ಬೆಳೆಸಿದಲ್ಲಿ ಉಳಿದ ಜಮೀನಿಗೆ ಸಂಪೂರ್ಣ ರಕ್ಷಣೆ ದೊರೆಯುತ್ತದೆಂದು ಕೃಷಿ ತಜ್ಞರು ಹೇಳುತ್ತಾರೆ.

ಸಮುದಾಯ ವನನಿರ್ಮಾಣದಲ್ಲಿ ರೈತರು ಲಾಭ ಸಂಪಾದಿಸಲು ಸಾಮೂಹಿಕವಾಗಿ ರೈತರು ಕೆರೆಗಳ ಹಿಂದೆ, ಕಾಲುವೆಗಳ ಪಕ್ಕ, ಸೀಳುದಾರಿ, ಶಾಲೆ, ಚಾವಡಿ ಸುತ್ತ, ಸ್ಮಶಾನ, ದೇವಸ್ಥಾನದ ಬದಿಗಳಲ್ಲಿ ಗಿಡಮರಗಳನ್ನು ನೆಡುವುದು ಅತ್ಯವಶ್ಯಕ.

ಹಿಂದೆ ಪ್ರತಿಗ್ರಾಮದಲ್ಲೂ ಮೂರನೆ ಒಂದು ಭಾಗವನ್ನು  ಸಾರ್ವಜನಿಕ ಉಪಯೋಗಕ್ಕಾಗಿ ನಿಯುಕ್ತಿಗೊಳಿಸಿದ್ದರು. ಗೋಮಾಳ, ದೇವಸ್ಥಾನ, ಸ್ಮಶಾನ, ಗುಂಡು ತೋಪು ಇತ್ಯಾದಿಗಳನ್ನು ಈ ಕಾರ್ಯಕ್ಕಾಗಿ ಮೀಸಲಿಟ್ಟಿದ್ದು ಜನಸಂಖ್ಯೆ ಹೆಚ್ಚಳದಿಂದಾಗಿ ಈ ಜಮೀನುಗಳು ಮಾಯವಾಗಿಬಿಟ್ಟಿವೆ. ಈಗ ಉಳಿದಿರುವ ಗೋಮಾಳ ರಕ್ಷಣೆ ಜೊತೆಗೆ ಕನಿಷ್ಠ ೧೦-೨೦ ಎಕರೆ ವಿಸ್ತೀರ್ಣದಲ್ಲಿ ಗ್ರಾಮ ಕಾಡುಗಳನ್ನು ಬೆಳೆಸುವುದು ಅತ್ಯಾವಶ್ಯಕ.

ಕರ್ನಾಟಕ ಸರ್ಕಾರದ ಅರಣ್ಯ ನೀತಿಯಂತೆ ಕೀಳ್ದರ್ಜೆಗೆ ಸೇರಿದ ಅರಣ್ಯವನ್ನು ಸ್ಥಳೀಯರಿಗೆ ಅರಣ್ಯ ಸಮಿತಿ ರಚಿಸಿ, ನೋಂದಣಿ ಮಾಡಿಸಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಅರಣ್ಯ ನಿರ್ಮಿಸಿ ಅದರ ಉಸ್ತುವಾರಿ ಮತ್ತು ಇಳುವರಿಯಲ್ಲಿ ಅರ್ಧದಷ್ಟು ಭಾಗವನ್ನು ಸ್ಥಳೀಯರಿಗೆ ಮೀಸಲಿಟ್ಟಿರುವುದು ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಇದು ಸರಿಯಾಗಿ ಅನುಷ್ಠಾನಗೊಂಡಲ್ಲಿ ಒಳ್ಳೆಯ ಕ್ರಮವಾಗಬಹುದು.

ರೈತರು ಮರಗಳನ್ನು ಬೆಳೆಸುವುದು ಹೇಗೆ?

ಅನೇಕ ಮರಗಳನ್ನು ಬೀಜಗಳಿಂದ ಬೆಳೆಸಬಹುದಾಗಿದೆ. ಹಣ್ಣು ಮತ್ತು ಕೆಲವು ಮರಗಳನ್ನು ಕಸಿಕಟ್ಟಿ, ಕೊಂಬೆಯ ತುಂಡು ನೆಟ್ಟು ಬೇರು ಬಿಡಿಸಿ ಹಾಗೂ ಗೂಟಿ ಹಾಕಿ ಬೆಳೆಸಬಹುದಾಗಿದೆ. ಬೀಜಗಳನ್ನು ನೇರವಾಗಿ ಫಲವತ್ತಾದ ಭೂಮಿಯಲ್ಲಿಯೇ ನೆಟ್ಟು ಬೆಳೆಸುವುದು ಸುಲಭ ಮತ್ತು ಅಗ್ಗದ ಕ್ರಮ. ಬೇಗ