ಒಂದು ಐತಿಹ್ಯದ ಪ್ರಕಾರ ರಾಜಸ್ಥಾನದ ರಜಪೂತ ಮನೆತನದಲ್ಲಿ “ಬೆಂಗನ್” (ದಿಡಾ) ಎಂಬುವನು ದುಡಿಯುತ್ತಿದ್ದನು. ಹಲವಾರು ದಿನಗಳಾದ ಮೇಲೆ ಅವನು ಅದೇ ಮನೆತನದ “ಭೀಕರಿ” ಎಂಬ ಕನ್ಯೆಯನ್ನು ಅಪಹರಿಸಿಕೊಂಡು ಹೋಗಿ ಮದುವೆಯಾದನು. ಮುಂದೆ ಅವರಿಂದ ಒಟ್ಟು ಐದು ಜನ ಗಂಡು ಮಕ್ಕಳಾದರು. ೧) ಘೇಸ (ಘೀಸಾಡಿ), ೨) ಮಾರ (ಮಾರವಾಡಿ),  ೩) ಸಾಳ (ಡೊಂಬರ),  ೪) ಮೋಲಾ (ಲಂಬಾಣಿ) ಮತ್ತು ೫) ಕಿಮಡ (ಮೆಲುಷಿಕಾರಿ). ಈ ಐವರು ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ಮೇಲೆ, ನಾಲ್ಕು ಜನರಿಗೆ ಮದುವೆ ಮಾಡಿದನು. ಮೋಲಾ ಮದುವೆ ಆಗದೆ ಬ್ರಹ್ಮಚಾರಿಯಾಗಿ ಉಳಿದನು. ಕೆಲವು ದಿನಗಳಾದ ಮೇಲೆ ಅವರು ಬೇರೆಯಾಗಲು ನಿರ್ಧರಿಸಿದರು. ಆಗ  ಘೇಸನಿಗೆ ಕಬ್ಬಿಣದ ಬುಟ್ಟಿ, ಕುಡಗೋಲು; ಮಾರನಿಗೆ ಒಂದು ಗುಂಜಿ ಬಂಗಾರ; ಸಾಳನಿಗೆ ಒಂದು ಕತ್ತೆ, ಡಮರು (ವಾದ್ಯ); ಮೋಲಾನಿಗೆ ಒಂದು ಆಕಳು, ಗೋಣಿಚೀಲ ಮತ್ತು ಕಿಮಡನಿಗೆ ಒಂದು ನಾಯಿ, ಬಿಲ್ಲು ಬಾಣ ಕೊಟ್ಟು ಬೇರೆ ಮಾಡಿದರು. ಐವರು ಸಹೋದರರು ತಮ್ಮ ಪಾಲಿಗೆ ಬಂದ ವಸ್ತುಗಳನ್ನು ಪಡೆದುಕೊಂಡು ಪ್ರತ್ಯೇಕವಾಗಿ ಜೀವನ ಆರಂಭಿಸಿದರು.

ಕೆಲವು ದಿನಗಳಾದ ಮೇಲೆ ನಾಲ್ಕು ಜನ ಸಹೋದರರು ತಮಗೆ ಅನುಕೂಲವಾದ ಪ್ರದೇಶಗಳಿಗೆ ವಲಸೆ ಹೋದರು. ಮೋಲಾನಿಗೆ ಯಾವ ಕಡೆಗೆ ಹೋಗಬೇಕೆಂಬುದು ತಿಳಿಯಲಿಲ್ಲ. ಕೆಲವು ದಿನಗಳವರೆಗೆ ಅಲ್ಲಿಯೇ ಇದ್ದು ಜೀವನ ಸಾಗಿಸಿದನು. ಒಂದು ದಿನ ಕಾಡು ಮೇಡುಗಳಲ್ಲಿ ಅಲೆದು ಗೋವು ಮೇಯಿಸುತ್ತಿದ್ದಾಗ, ಮಥುರಾ ಭಾಗದ ಅಲೆಮಾರಿ ತಂಡದವರ ಪರಿಚಯವಾಯಿತು. ಸಹಜವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ, “ಮೋಲ” ಒಬ್ಬಂಟಿಗ ಎಂಬುದು ಗೊತ್ತಾಯಿತು. ಆಗ ಅ ತಂಡದಲ್ಲಿಯ ಒಬ್ಬ ಯಜಮಾನನು, ಒಂದು ಆಕಳ ಜೊತೆಗೆ ಅಲೆದು ಕಷ್ಟಪಡುವುದಕ್ಕಿಂತ “ಗೋಕುಲ”ಕ್ಕೆ ಹೋಗಿ, ಶ್ರೀಕೃಷ್ಣನನ್ನು ಭೆಟ್ಟಿ ಆಗು ಎಲ್ಲವೂ ಸರಿ ಹೋಗುತ್ತದೆ ಎಂದು ಉಪದೇಶ ಮಾಡಿದನು. ಮೋಲಾ ಕೆಲವು ಹೊತ್ತು ಯೋಚಿಸಿ, ತನ್ನ ಆಕಳ ಸಮೇತ ಮಥುರಾದ ದಾರಿ ಹಿಡಿದನು. ಮೋಲಾ ಮಥುರಾ ಅದಕ್ಕೆ ಶ್ರೀಕೃಷ್ಣನು ತನ್ನ ಬಳಿಯಿರುವ ಗೋವುಗಳನ್ನು ಕಾಯುತ್ತ ಜೀವನ ಸಾಗಿಸು ಎಂದು ಆದೇಶಿಸಿದನು.

ಮೋಲಾ ಒಳ್ಳೆಯದಾಯಿತೆಂದು ಶ್ರೀಕೃಷ್ಣನ ಆಸ್ಥಾನದಲ್ಲಿದ್ದುಕೊಂಡು ಗೋವುಗಳನ್ನು ಕಾಯತೊಡಗಿದನು. ದಿನದಿಂದ ದಿನಕ್ಕೆ ಮೋಲಾ ಪ್ರಾಮಾಣಿಕ ಎಂಬುದು ಮನವರಿಕೆಯಾಯಿತು. ಆದ್ದರಿಂದ ಶ್ರಿಕೃಷ್ಣನಿಗೆ ಮೋಲಾನ ಮೇಲೆ ಅತೀವ ಪ್ರೀತಿ. ಮೋಲಾ ಗೋವುಗಳ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದನು. ಉಳಿದ ಗೋಪಾಲಕರ ಜೊತೆಗೆ ಸೇರಿಕೊಂಡು ಗೋವುಗಳನ್ನು ಕಾಯುತ್ತ ಒಳ್ಳೆಯ ಗೋರಕ್ಷಕನಾಗಿ ಎಲ್ಲರ ಮೆಚ್ಚುಗೆ ಪಡೆದನು.

ಕೆಲವು ವರ್ಷಗಳು ಕಳೆದ ಬಳಿಕ ಮೋಲಾನಿಗೆ ಚಿಂತೆಯಾಯಿತು. ತನ್ನ ಸಹೋದರರಿಗೆ ಮದುವೆಯಾಗಿ ಮಕ್ಕಳಾದವು. ತನ್ನ ವಂಶೋತ್ಪತ್ತಿ ಆಗಲಿಲ್ಲ ಎಂಬ ಕೊರಗು. ಒಂದು ದಿನ ಶ್ರೀಕೃಷ್ಣನನ್ನು ಭೆಟ್ಟಿ ಆಗಿ ಇಲ್ಲಿಯವರೆಗೆ ತಮ್ಮ ಸೇವೆ ಮಾಡಿರುವೆ, ಇನ್ನು ಮುಂದೆ ನನ್ನದೇ ಅದ ವಂಶ ಬೆಳೆಸಬೇಕೆಂದು ನಿರ್ಧರಿಸಿರುವೆ. ಆದ್ದರಿಂದ ಕನ್ಯೆಯನ್ನು ದಾನ ಮಾಡಬೇಕೆಂದು ಪ್ರಾರ್ಥಿಸಿದನು. ಶ್ರೀಕೃಷ್ಣ ಮೋಲಾನ ಅಂತರಂಗದ ಬಯಕೆಯನ್ನು ಅರಿತುಕೊಂಡು ಒಂದು ಕರಾರು ಹಾಕಿದನು. ಕನ್ಯಾದಾನ ಮಡುವೆ, ಆದರೆ ಅವಳ ಜೊತೆಗೆ ಯಾವುದೇ ಬಗೆಯ ಲೈಂಗಿಕ ಸಂಪರ್ಕ ಇರಿಸಕೂಡದು  ಎಂದನು. ಅದಕ್ಕೆ ಮೋಲಾ ಪ್ರತಿಜ್ಞೆ ಮಾಡಿ ಒಪ್ಪಿಕೊಂಡನು. ಶ್ರೀಕೃಷ್ಣ ರಾಧಿಕಾಳನ್ನು ಕರೆದು ಇದ್ದ ವಿಷಯ ಹೇಳಿ, ಮೋಲಾನ ಜೊತೆ ಹೋಗಲು ಆಜ್ಞೆಮಾಡಿದ. ರಾಧಿಕಾ ಯಾವುದಕ್ಕೂ ಚಕಾರ ಎತ್ತದೇ ಮೋಲಾನ ಹಿಂದೆ ಹೋಗಲು ಒಪ್ಪಿಕೊಂಡಳು. ಆಗ ಶ್ರೀಕೃಷ್ಣ ತಮ್ಮಿಂದ ಒಂದು ಸಮುದಾಯ ಬೆಳೆಯಲಿ ಎಂದು ಇಬ್ಬರನ್ನು ಆಶೀರ್ವದಿಸಿ ಬೀಳ್ಕೊಟ್ಟನು.

ಮೋಲಾ ಮತ್ತು ರಾಧಿಕಾ ಇಬ್ಬರೂ ಜೊತೆಗೂಡಿ ದಾರಿಯಲ್ಲಿ ಬರುತ್ತಿದ್ದಾಗ ಮಹಾಮಂತ್ರವಾದಿ “ಭವಯ್ಯ” ನ ಆಕಸ್ಮಿಕ ಭೇಟ್ಟಿಯಾಯಿತು. ಅವನಿಗೆ ತಮ್ಮ ಜೊತೆಗೆ ಕರೆದುಕೊಂಡು ರಾಹುಗಡ, ಪಾವುಗಡ ಮತ್ತು ಚಾವುಗಡದ ರಾಜರುಗಳ ಆಸ್ಥಾನಗಳಿಗೆ ಪ್ರತ್ಯೇಕವಾಗಿ ಭೇಟ್ಟಿ ನೀಡಿದರು. ಆ ರಾಜರುಗಳ ಅಪ್ಪಣೆ ಪಡೆದು ಲೋಕನೃತ್ಯ ಮಾಡಿದರು. ಮೂವರು ಸಂಸ್ಥಾನಿಕರು ಇವರ ಲೋಕನೃತ್ಯಕ್ಕೆ ಮನಸೋತು, ತಮಗೆ ಬೇಕಾದುದನ್ನು ಕೇಳರೆಂದು ಹೇಳಿದಾಗ, ಅವರು ಒಬ್ಬೊಬ್ಬ ದತ್ತಕ ಪುತ್ರರನ್ನು ತಮಗೆ ಕೊಡಬೇಕೆಂದು ಬೇಡಿಕೊಂಡರು ಆಗ ಮೂರು ಜನ ರಾಜರು ಒಬ್ಬೊಬ್ಬ ಪುತ್ರರನ್ನು ಕೊಟ್ಟರು. ಅವರಿಂದ ಪಡೆದುಕೊಂಡು ಬಂದ ಪುತ್ರರಿಗೆ, ಸಂಸ್ಥಾನದ ನೆನಪಿಗಾಗಿ ರಾಹುಗಡದಿಂದ ತಂದವನಿಗೆ ರಾಠೋಡ, ಪಾವುಗಡದಿಂದ ತಂದವನಿಗೆ ಪವಾರ ಮತ್ತು ಚಾವುಗಡದಿಂದ ಚವ್ಹಾಣ ಎಂದು ಕರೆದು. ಎಲ್ಲರೂ ಜೊತೆಗೂಡಿ ಬೇರೆ ಪ್ರದೇಶಕ್ಕೆ ಕಾಡಿನ ಮುಖಾಂತರ ಹೊರಟರು. ದಾರಿಯಲ್ಲಿ, ಸುಖದೇವ ಬ್ರಾಹ್ಮಣನ ಮೂವರು ಕನ್ಯೆಯರಾದ ನಾಗರಶಿ, ಆಶಾವರಿ ಇವರುಗಳು ಗಿಡದ ಕೆಳಗಡೆ ಕುಳಿತುಕೊಂಡು ಅಳುತ್ತಿದ್ದರು. ಅವರನ್ನು ಕಂಡು ವಿಚಾರಿಸಲಾಗಿ, ತಮಗೆ ಬೇಗ ಮದುವೆ ಆಗದುದಕ್ಕೆ ತಮ್ಮ ತಂದೆಯವರು ಪಶ್ಚಾತ್ತಾಪ ಪಟ್ಟುಕೊಂಡು ಕಾಡಿನಲ್ಲಿ ಬಿಟ್ಟುಹೋದರೆಂದು ಹೇಳಿದರು. ತಬ್ಬಲಿಯಾದ ಮೂವರು ಕನ್ಯೆಯರನ್ನು ತಮ್ಮ ಜೊತೆಗೆ ಕರೆದುಕೊಂಡು ಕಣ್ವ ಋಷಿಯ ಆಶ್ರಮಕ್ಕೆ ಬಂದರು. ಆಶ್ರಮದಲ್ಲಿ ಋಷಿಯ ಆಶೀರ್ವಾದವನ್ನು ಪಡೆದು ಮೋಲಾ ಮತ್ತು ರಾಧಿಕಾ ತಾವು ಕರೆತಂದ ತಬ್ಬಲಿ ಕನ್ಯೆಯರ ವಿಷಯ ಹೇಳಿದರು. ಆಗ ಕಣ್ವ ಋಷಿ ಸ್ವಲ್ಪ ಸಮಯ ಯೋಚಿಸಿ, ಜೊತೆಯಲ್ಲಿದ್ದ ಮೂವರು ಪುತ್ರರರ ಬಗ್ಗೆ ವಿಚಾರಿಸಲಾಗಿ ಮೋಲಾ ಮತ್ತು ರಾಧಿಕಾ ಎಲ್ಲ ವಿಷಯ ಸವಿಸ್ತಾರವಾಗಿ ಹೇಳಿದರು. ಕಣ್ವ ಋಷಿ ಯಾವುದೇ ಸಂಶಯಪಡೆದೆ, ಈ ಮೂವರು ಪುತ್ರಿಯರೆ ಜೊತೆಯಲ್ಲಿದ್ದ ಕ್ಷತ್ರೀಯ ಪುತ್ರರಿಗೆ ಕೊಟ್ಟು ಮದುವೆ ಮಾಡುವದರಲ್ಲಿ ತಪ್ಪೇನಿಲ್ಲವೆಎಂದು ಸೂಚಿಸಿದನು. ಎಲ್ಲರ ಮುಖದಲ್ಲಿಯೂ ಸಂತಸ ಚಿಮ್ಮಿತು. ರಾಹುನಿಗೆ ನಾಗರಶಿ, ಪಾವುನಿಗೆ ಕೊಗರಶಿ ಮತ್ತು ಚಾವುನಿಗೆ ಆಶಾವರಿಗೆ ನಿಶ್ಚಿಯಿಸಿ, ಕಣ್ವ ಋಷಿಯ ಸಮ್ಮುಖದಲ್ಲಿಯೇ ಮದುವೆ ಮಾಡಿದರು.* ಹೀಗೆ ಮುಂದುವರೆದ ಗುಂಪಿನವರೇ ಲಂಬಾಣಿಗಳೆಂದು ನಂಬಲಾಗಿದೆ.

* * *


*      ಈ ಕೆಲ ಸಂಗತಿಗಳನ್ನು ಗಮನಿಸಿದಾಗ ವಾಸ್ತವದಲ್ಲಿ ನಡೆದಿರಬಹುದಾದ ಅನೇಕ ಸಂಗತಿಗಳು ಗೋಚರಿಸಬಹುದು. “ಇದಂ ಇಥ್ಥಂ” ಇದು ಹೀಗೆಯೇ ಎಂದು ಹೇಳಲಾಗದಿದ್ದರೂ ಜನಪದ ಬದುಕಿನ ಚರಿತ್ರೆಯನ್ನು ವ್ಯಕ್ತಿ ಅನೇಕ ಸಲ ಈ ದಂತ ಕತೆಗಳನ್ನೇ ಆಧರಿಸಬೇಕಾಗುತ್ತದೆ. ಅಲೆಮಾರಿ ಜನಾಂಗಗಳ ಸಂದರ್ಭಗಳಲಂತೂ ಇದೇ ಆಧಾರವಾದರೂ ಆಗಬಹುದು.

ಅಲೆಮಾರಿಗಳಾದ ಲಂಬಾಣಿ ಜೀವನವನ್ನು ಕುರಿತು ವಿಚಾರ ಮಾಡಿದಾಗ ಇವರು ಪಶುಪಾಲಕರಾಗಿದ್ದುದು ಮತ್ತು ಅನುಕೂಲ ಕೃಷಿಕರಾದದ್ದು ಹೀಗೆ ವಿಭಿನ್ನ ಹಂತಗಳ ಜೀವನ ಸ್ವರೂಪವನ್ನು ಅವರು ದಾಟಿ ಬರಬೇಕಾಗುತ್ತದೆ. ಮತ್ತು ವಿವಿಧ ಭೌಗೋಲಿಕ ಪ್ರದೇಶವನ್ನು ಸುತ್ತಬೇಕಾಗುತ್ತದೆ. ಸಮುದಾಯ, ಬ್ರಾಹ್ಮಣ ಸಮುದಾಯ, ಹಿಂದಿನ ಗೊಲ್ಲ ಸಮುದಾಯ ಈ ಎಲ್ಲ ಸಮುದಾಯಗಳ ಸಂಪರ್ಕವನ್ನು ಬೆಳೆಸಿಕೊಂಡ ವಿವಿಧ ಪಂಗಡಗಳ ಕನ್ಯೆಯರನ್ನು ಮದುವೆ ಆದುದರಲ್ಲಿ ಆಶ್ಚರ್ಯವಿಲ್ಲ. ಹೀಗಾಗಿ ಲಂಬಾಣಿ ಸಮುದಾಯಗಳಲ್ಲಿ ಕೆಲವೊಮ್ಮೆ ಬೇರೆ ನಡವಳಿಕೆಯೂ ಅಂತರ್ಗತವಾಗಿರುತ್ತದೆಂದು ಊಹಿಸಬಹುದು. ಅವರ ನಡವಳಿಕೆಗಳಲ್ಲಿ ಹಬ್ಬ-ಹರಿದಿನಗಳಲ್ಲಿ ಬೇರೆ ಬೇರೆ ಸಮುದಾಯಗಳ ನಡವಳಿಕೆಗಳ ಹಬ್ಬ ಹರಿದಿನಗಳ ಛಾಯೆಯೇ ಕಂಡುಬಂದಿದೆ. ಇದರಲ್ಲಿ ಆಶ್ಚರ್ಯಪಡುವ ಕಾರಣವಿಲ್ಲ. ಒಟ್ಟಾರೆ ಇದೊಂದು ಸಮ್ಮಿಶ್ರ ಸಂಸ್ಕೃತಿಯ ಸೃಷ್ಟಿಗೆ ಕಾರಣವಾಯಿತೆಂದು ಹೇಳಬಹುದು. ಲಂಬಾಣಿ ಬುಡಕಟ್ಟು ಅದಕ್ಕೊಂದು ಜೀವಂತ ಉದಾಹರಣೆಯಾಗಿದೆ.