ಕಿತ್ತೂರು ಅರಸರು ಪ್ರೀತಿಸಿದ ಮನೆತನ ಸಂಗೊಳ್ಳಿಯ ಊರಿನ ವಾಲೀಕಾರ ಭರಮಣ್ಣನ ಮನೆತನದವರನ್ನು ಎನ್ನುವುದಕ್ಕೆ ಎರಡು ಮಾತಿಲ್ಲ. ಕಿತ್ತೂರಿನ ಸಮೀಪವೇ ಪೂರ್ವದಿಕ್ಕಿನಲ್ಲಿ ನಿಚ್ಚಣಿಕೆ ಎಂಬ ಗ್ರಾಮವಿದೆ. ಅಲ್ಲಿ ಕಿತ್ತೂರು ಮಲ್ಲಸರ್ಜರ ಸುಂದರ ತೋಟವಿತ್ತು. ಎತ್ತರ ಎತ್ತರವಾಗಿ ಬೆಳೆದ ಗಿಡ-ಮರಗಳು, ತೆಂಗು ಮಾವಿನ ತೋಪುಗಳು. ನಾನಾವಿಧದ ಹಣ್ಣು ಹಂಪಲಿನ ಗಿಡಗಳು, ಬಿದಿರಿನ ಮಳೆ ಒಂದು ಕಡೆಯಾದರೆ ತೇಗಿನ ಗಿಡ-ಮರಗಳು ಮತ್ತೊಂದೆಡೆಗೆ ತುಂಬ ಮನೋಹರವಾಗಿ ಬೆಳೆದಿದ್ದವು. ಅಂತಹ ವಿಸ್ತಾರವಾದ ತೋಟದಲ್ಲಿ ಒಂದು ಹೆಬ್ಬುಲಿಯು ಸೇರಿಕೊಂಡು ಸುತ್ತಮುತ್ತಲಿನ ಜನತೆಗೆ ತ್ರಾಸ ಕೊಟ್ಟು, ಮತ್ತೆ ಯಾವುದೇ ಮಾಯದಿಂದ ಅಲ್ಲಿ ಬಂದು ಸೇರುತ್ತಿತ್ತು. ಹುಲಿಯನ್ನು ಕೊಂದುತರಲು ವೀರರನ್ನು ಕರೆಯಿಸಿ ಆಜ್ಞೆ ನೀಡಿದ್ದನು. ಹುಲಿಯ ಹಾವಳಿಯ ವಿಷಯವನ್ನೇ ತಿಲಿದ ವೀರರು ತೋಟದ ಒಳಗಡೆಗೆ ಹೋಗಲು ಹೆದರಿದರು.

ಸಂಗೊಳ್ಳಿಯ ಭರಮಣ್ಣ ವೀರಾವೇಷದಿಂದ ಬಂದು ಆ ಹುಲಿಯನ್ನು ತಾನೊಬ್ಬನೇ ಕೊಂದು ತರುವುದಾಗಿ ಹೇಳಿದನು. ಇನ್ನೊಬ್ಬ ವೀರನ ಜೊತೆಯಾದರೆ, ಆ ಹುಲಿಯನ್ನು ಜೀವಸಹಿತ ತಂದು ಕಿತ್ತೂರಲ್ಲಿ ಕಟ್ಟುವೆನು ಎಂಬುದಾಗಿ ಕೈ ಎತ್ತಿ ಪ್ರತಿಜ್ಞೆ ಮಾಡಿದನು. ಆದರೆ ಹುಲಿಯ ಹಿಡಿಯುವ-ಕೊಲ್ಲುವ ಧೈರ್ಯ ಇನ್ನೊಬರಿಗಾಗಲಿಲ್ಲ. ಸಂಗೊಳ್ಳಿಯ ಭರಮಣ್ಣನನ್ನೇ ಮಲ್ಲಸಜ್ ಹುರಿದುಂಬಿಸಿದರು.

ಭರಮಣ್ಣ ಧೈರ್ಯವಾಗಿ ಕತ್ತಿ ಹಿಡಿದು ತೋಟದ ಕಡೆಗೆ ನಡೆದನು. ಕೈಯಲ್ಲಿಯ ಕತ್ತಿಗೂ ಕಸರತ್ತು ಮೂಡಿತ್ತು. ದೂರದಿಂದ ಈ ದೃಶ್ಯ ನೋಡಲು ಇಬ್ಬರು ಮಾತ್ರ ನಡೆದರು.

ಅಡಗಿ ಕೊಂಡಿರುವ ಸ್ಥಾನವನ್ನು ಭರಮಣ್ಣಾ ಹುಡುಕ ತೊಡಗಿದನು. ಗಿಡ-ಗಂವರಗಳಲ್ಲಿ ಕೂಗಾಡಿದನು. ಹಸಿದು ಮಲಗಿದ್ದ ಹುಲಿ ಆರ್ಭಟಿಸುತ್ತ ಮರದಿಂದ ಮರದ ಬುಡಕ್ಕೆ ಜಿಗಿಯುತ್ತ ಮುಂದೆ ಬಂದಿತು. ಭಯಂಕರವಾಗಿ ಹುಲಿಗರ್ಜಿಸ ತೊಡಗಿತು. ಆ ಹುಲಿಗರ್ಜನೆ ಆ ತೋಟದಲ್ಲಿ ಮಾರ್ದನಿಗೊಳ್ಳತೊಡಗಿತು.

ಹುಲಿ ಎದುರಿಗಿದ್ದ ವೀರನ ಮೇಲೆ ಒಮ್ಮೆಲೆ ಹಾರಿ ಬಂದಿತು. ತನ್ನ ಮುಂದಿನ ಕಾಲುಗಳ ಪಂಜದಿಂದ ಭರಮಣ್ಣನ ಮುಖಕ್ಕೆ ಹೊಡೆಯಲು ಜಿಗಿಯಿತು. ಭರಮಣ್ಣ ನಿಂತಲ್ಲಿಂದಲೇ ಓರೆ ಜಿಗಿದನು. ಆದರೂ ಆರ್ಭಟಿಸಿ ಮೇಲೆ ಬಂದಾಗ ಭರಮಣ್ಣ ತನ್ನ ಖಡ್ಗವನ್ನು ಝಳಪಿಸಿದನು.

ಹುಲಿಯ ಸಿಟ್ಟು ಇಮ್ಮಡಿ-ಮುಮ್ಮಡಿಯಾಯಿತು. ಹುಲಿಯ ಕ್ರೌರ್ಯ-ಭರಮಣ್ಣನ ವೀರತನದ ಹೋರಾಟ ಮಿತಿ ಮೀರಿ ಸಾಗಿತು. ನೋಡುವ ಮನುಷ್ಯರು ಭೂಮಿಯಲ್ಲಿ ಕಾಲು ಕಿತ್ತರೆ, ಅರ್ಭಟಿಸುವ ಧ್ವನಿಗೆ ಗಿಡ-ಮರಗಳ ಮೇಲಿನ ಹಕ್ಕಿ-ಪಕ್ಷಿಗಳು ಹೌಹಾರಿ ಆಕಾಶದೆಡೆಗೆ ಹಾರಾಡಿದವು. ಕೊನೆಗೆ ಭರಮಣ್ಣ ತನ್ನ ಖಡ್ಗದ ಹೊಡೆತವನ್ನು ಹುಲಿಯ ಮುಖದ ಮೇಲೆ ಬಿತ್ತು. ಭರಮಣ್ಣನ ಭುಜವನ್ನು ಹರಿದ ಹುಲಿಯ ನಖಗಳು ಒಂದೆರಡು ಅಲ್ಲಿಯೇ ಸಿಕ್ಕಿಕೊಂಡಿದ್ದವು. ಹೀಗಾಗಿ ಅವನ ಇಡೀ ಶರೀರ ರಕ್ತಮಯವಾಗಿತ್ತು. ಹುಲಿಯನ್ನು ಹೊಡೆದ ವೀರನ ಹೆಸರು ಕಿತ್ತೂರಿನಲ್ಲಿ ವಿದ್ಯುತ್‌ಸಂಚಾರವಾಯಿತು. ಹುಲಿಯನ್ನು ಕಿತ್ತೂರ ಬಾಗಿಲಿಗೆ ಒಗೆದರು. ಜನ ಜಾತ್ರೆ ಕೂಡಿತು. ಮಲ್ಲಸರ್ಜ ಹರ್ಷತುಂಬಿ, ವೀರನಿಗೆ ಮರ್ಯಾದೆಯ ಜೊತೆ, ಭೂಮಿಯನ್ನು ಉಂಬುಳಿ ಹಾಕಿಕೊಟ್ಟು ಅದಕ್ಕೆ ‘ರಕ್ತಮಾನ್ಯದ ಹೊಲ’ ವೆಂದು ಹೆಸರಿಸಿದನು. ಸಂಗೊಳ್ಳಿಯ ರೋಗಣ್ಣವರ ದೊಡ್ಡಭರಮಪ್ಪ ಹುಲಿಯ ಹೊಡೆದ ವೀರ ಎಂಬುದು ಕಿತ್ತೂರ ನಾಡೊಳಗೆ ಹೆಸರಾಯಿತು. ಜನಪದರು ಹೋಳಿಯ ಹಾಡಿನಲ್ಲಿ ಈ ಸಂಗಿತಿಯನ್ನು ಹಾಡಿದ್ದುಂಟು.

ಕಿತ್ತೂರ ನಾಡಾಗ ಹುಲಿಯ
ಬಂದಿತ್ತು. ಹಿಂಗ ಒಂದ
ಹುಲಿಯ ಬಂದಿತ್ತೋs
ಯಾರ್ಯಾರಿಗೂ ದರಕಾರಿಲ್ಲ
ದಾರಿ ಹೋಕರ ಬಿಡತ್ತಿಲ್ಲs
ಚಿಂತಿ ಬಿತ್ತು ಅರಸಗೋs |
ನಾಡಮ್ಯಾಲ ಸುದ್ದಿ ಹೋಗಿ
ನಾಡತುಂಬ ವೀರರು ಬಂದು
ಮಾಡತಾರ ಒಂದೊಂದು ಅಕಲಾs
ಹಿಂಗ ಮಾಡತಾರ ಒಂದೊಂದು ಶಕಲಾss|
ಯಾರಿಗೂ ಬಾರದ ಧೈರ್ಯಾದ ಚೀಲಾ

ಹೊಂಟ ನಿಂತ ವೀರ ಭರಮಣ್ಣ
ಕೈಯಾಗ ಬಂದ ಖಡ್ಗಧರಿಸಿ,
ಖಡ್ಗದ ಹೆಸರ ಗುರುತಾ ನೀ ಹೇಳಿ
?
ನಿಚ್ಚಣಕಿ ಊರೆಂಬ ತೋಟದ ಒಳಗ

ಹೊಕ್ಕ ಲಿಬ್ಬಿ ಹೊಡೆದಾs ಮುಂದ ಕೇಳಾ|
ಬಂತ ಹುಲಿ ರೇಗಿ ಏರಿ

ಆಗಲಿಲ್ಲ ಯಾರಿಗೂ ಎದರಿಸುದಾs
ಏರಿ ಹೋದಾನ ನಮ್ಮ ಭರವಣ್ಣಾs
ಹೊಡೆದ ಕೆಡವ್ಯಾನ ಸಿಂಹದ ದೇಹ
ಆತೋ ಅವನ ಮೈ ರಕ್ತದ ಝರಿ.
ಹೊತ್ತ ತಂದಾನ ಹುಲಿಯ ಹೆಣಾ
ಹಿಂಗ ಆತೋ ರಣರಂಗಾss.

ಬುದ್ಧಿ ಇದವರ ಹೇಳಿರಪ್ಪಾ

ಹುಲಿ ಇತ್ತೋ ಗಂಡಾss
ತಿಳಿದ ಹೇಳಿರಿ ಆ ಹುಲಿಯ ಹೆಸರಾ?s
ಅರಸ ಮಲ್ಲಸರ್ಜಾ ನೀಡಿದೋ
ರಕ್ತ ಮಾನ್ಯದ ಒಂದು ಹೊಲಾs
ಕೇಳೋ ಜಾಣ!
ಅದ ನಮ್ಮ ವೀರ ದೊಡ್ಡ ಭರವಣ್ಣಾs.

[1]
ಕೇಳೋ ಜಾಣರ ಜಾಣ! ಹಾಡೋ ಮತ್ತಿನ್ನಾ!

ಭರಮಣ್ಣನ ಹುಟ್ಟು ಹೆಸರು ದೊಡ್ಡಭರಮಣ್ಣ, ರಾಗಣ್ಣ ಅಥವಾ ದೊಡ್ಡ ರೋಗಪ್ಪ ಇವನ ತಂದೆಯ ಹೆಸರು. ಇವರ ಮನೆತನದ ಹಿರಿಯರು ನಾಟಿ ವೈದ್ಯರಾಗಿದ್ದರಿಂದ ಮನೆತನಕ್ಕೆ ರೋಗಣ್ಣವರ ಮನೆತನ, ರಾಗಣ್ಣವರ ಮನೆತನ ಎಂಬುದು ಸಂಗೊಳ್ಳಿ ಹಾಗೂ ಸುತ್ತ ಮುತ್ತಲೂ ಗ್ರಾಮಗಳಿಗೆ ಹೆಸರು ವಾಸಿಯಾಗಿತ್ತು. ಎಂತಹ ವಿಷಜಂತುಗಳು ಮಾನವರನ್ನು ಕಚ್ಚಿದಾಗ ಈ ಮನೆತನದವರು ಪುಕ್ಕಟೆಯಾಗಿ ಚಿಕಿತ್ಸೆಮಾಡಿ, ಜೀವ ಉಳಿಸುವ ಕಾರ್ಯ ಮಾಡಿತ್ತಿದ್ದರು. ಇಟ್ಟ ಹೆಸರು ದೊಡ್ಡಭರಮಪ್ಪನಾದರೂ ಜನ ಪ್ರೀತಿ. ವಾತ್ಸಲ್ಯದಿಂದ ಭರಮಣ್ಣನೆಂದೇ ಕರೆಯುವ ರೂಢಿ ಹೆಚ್ಚಾಗಿತ್ತು. ಇವನ ತಮ್ಮನೊಬ್ಬ ಸಣ್ಣಭರಮಪ್ಪ ಕೃಷಿಯಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದನು. ಕೂಡಿ ಇದ್ದಾಗ ಇವರಲ್ಲಿ ಕುರಿ, ಆಕಳಗಳ ಹಿಂಡು, ಹೋರಿ-ಎತ್ತುಗಳ ಹಿಂಡು, ಈ ಹಾಳುಮತ ಮನೆತನದಲ್ಲಿ ಪರಂಪರಾಗತವಾಗಿ ಸಾಕುತ್ತ ಬಂದಿದ್ದರು. ಮಲಪ್ರಭಾ (ಮಲಪೂರಿ) ನದಿಯ ದಡದ ಸಂಗೊಳ್ಳಿ ಹಸುರಿನಿಂದ ಕಂಗೊಳಿಸುವ ಗ್ರಾಮವಾಗಿತ್ತು.

ರೋಗಣ್ಣವರ ಮನೆ ವಿಶಾಲವಾಗಿತ್ತು. ಪೂರ್ವಕ್ಕೆ ಹೆಬ್ಬಾಗಿಲುವುಳ್ಳ ಇವರ ಮನೆಯಲ್ಲಿ ಹದಿನರು ಎತ್ತಿನ ಗೋದಲ್ಲಿ ಮನೆಯಾಗಿತ್ತು. ಅಣ್ಣತಮ್ಮಂದಿರ ಪಾಲವಾದರೂ ಒಂದೇ ಮನೆ ಎಂಬಂತಿತ್ತು.

ಇವರ ಮನೆಯ ಉತ್ತರ ದಿಕ್ಕಿನಲ್ಲಿ ಹನುಮಾನ ಗುಡಿ ಇದ್ದು, ಬದಿಯಲ್ಲಿಯೇ ಗರಡಿ ಮನೆ ಸಗತಿ ಕಟ್ಟೆ, ಗ್ರಾಮೀಣ ಜನರಿಂದಲೇ ಕಟ್ಟಲ್ಪಟ್ಟಿದ್ದವು.

ಭರಮಣ್ಣನ ಹೆಂಡತಿಯ ಹೆಸರು ಕೆಂಚವ್ವ. ಭರಮಣ್ಣ ಕೆಂಚವ್ವ ಇವರಿಗೆ ಭೀಮಪ್ಪ, ಸಿದ್ಧಪ್ಪ ಎಂಬಿಬ್ಬರು ಹಿರಿಯ ಮಕ್ಕಳು ರಾಯಪ್ಪ(ಣ್ಣ) ಎಂಬ ಕಿರಿಯ ಮಗನು ಜನಿಸಿದರು. ಅವರೆಲ್ಲ ಬಿದಿಗೆಯ ಚಂದ್ರನಂತೆ ಬೆಳೆಯುತ್ತಿರುವಾಗ ಭೀಮಪ್ಪನು ದೊಡ್ಡವನಾದ ನಂತರ ಅಕಾಲ ಮರಣಕ್ಕೀಡಾದನು.

ರಾಯಣ್ಣ ಚುರುಕಾದ ಬಾಲಕ, ಬಲಿಷ್ಠ ಯುವಕನಾಗಿ ಬೆಳೆಯ ತೊಡಗಿದನು. ಒಮ್ಮೆಮ್ಮೆ ಕುರಿ-ಆಕಳುಗಳ ಕಾವಲು, ಇನ್ನೊಮ್ಮೆ ಎತ್ತುಗಳನ್ನು ಹೊಡೆದುಕೊಂಡು, ತಂದೆ ಹೇಳಿದಂತೆ, ರಂಟೆ-ಗುಂಟೆ ಹೊಡೆದು ಬರುತ್ತಿದ್ದನು. ಕೆಲಸಗಳು ಒತ್ತರಿಸಿ ಬಂದಾಗ ೮-೧೦ ಜೋಡಿ ಎತ್ತುಗಳ ಸಹಾಯದಿಂದ ಭೂಮಿಯ ಉತ್ತು-ಬಿತ್ತುವ ಕೆಲಸ ಮಾಡುತ್ತಿದ್ದನು. ಕೃಷಿಯಲ್ಲೂ ಸಂಘಟನಾ ಚತುರನಾಗಿದ್ದನು. ರಾಯಣ್ಣ.

ಸಂಜೆಯಾಗುತ್ತಲೆ, ಗರಡಿಮನೆ ಸಗತಿಕಟ್ಟೆಯಲ್ಲಿ ವ್ಯಾಯಾಮಮಾಡಿ, ತಾಯಿ ಕೆಂಚಮ್ಮ ಕೊಟ್ಟ ತಂಬಿಗೆ ಹಾಲನ್ನು ಗಟಗಟನೆ ಕುಡಿದು ಬಿಡುತ್ತಿದ್ದನು. ಜೊತೆ ಗೆಳೆಯರಿದ್ದರೆ ಹರಿದು ಹಂಚುತ್ತಿದ್ದನು. ಅವನಷ್ಟು ತೀವ್ರವಾಗಿ ಓಡುವವನೂ, ಉದಾರನೂ ಆ ನಾಡಿನಲ್ಲಿ ಯಾರೂ ಇದ್ದಿದ್ದಿಲ್ಲ. ರಾಯಣ್ಣ ಜಾತ್ರೆಗಳಲ್ಲಿ ಓಟದಶರತ್ತಿಗೆ ಬರುತ್ತಾನೆ ಎಂಬ ವದಂತಿ ಹರಡಿದರೆ, ನೋಡಲು ಬರುವ ಜನರದೇ ಇನ್ನೊಂದು ಜಾತ್ರೆ. ಇಟ್ಟ ಬೆಳ್ಳಿಯ ಖಡೆಗಳೆಲ್ಲ ರಾಯಣ್ಣನ ಪಾಲಿಗೆ ಆಗುತ್ತಿದ್ದವು. ಮನೆಯಲ್ಲಿ ಸಿದ್ಧಣ್ಣ ರಾಯಣ್ಣನಷ್ಟು ಚುರುಕು ಶಕ್ತಿವಾನನಾಗಲಿಲ್ಲವೆಂದು ತಂದೆ ಭರಮಣ್ಣನಿಗೆ ಚಿಂತೆ. ಆ ಚಿಂತೆಯನ್ನು  ಕೆಂಚಮ್ಮ ಮರೆಮಾಚುತ್ತಿದ್ದಳು.

ರಾಯಣ್ಣ ಹುರಿಕಟ್ಟಾದ ಶರೀರದ ಎತ್ತರದ ಚೆಲುವ. ಗೆಳೆಯರ ಗುಂಪುನಲ್ಲಿಯೇ ಸರದಾರನಾಗಿ ಕಂಗೊಳಿಸುತ್ತಿದ್ದನು. ಒಳ್ಳೆಯ ಗುಣದ ಒಡೆಯನಾಗಿದ್ದನು. ತಂದೆಯಂತೆ ಸಾಹಸಿ-ಧೈರ್ಯಾವಂತ. ಯುದ್ಧ ಕಲೆಯನ್ನು ಬಲ್ಲವ, ಗುರಿ ಹೊಡೆಯುವುದರಲ್ಲಿ ಅರ್ಜುನನಂತೆ, ಯುದ್ಧ ಕಲೆಯ ನಿಪುಣ, ದೊಣ್ಣೆ ವರಸೆ, ಕತ್ತಿ ವರೆಸೆಗಳಲ್ಲಿ ಬಲ್ಲವ, ದೈವಭಕ್ತ ದೇಶಭಕ್ತನಾಗಿದ್ದನು ರಾಯಣ್ಣ.

ಸಾದನವರ ಬಾಳಪ್ಪ ಚನ್ನಬಸು ಇವರಿಬ್ಬರೂ ಜೀವದ ಗೆಳೆಯರು. ಕೂಡಿ ಆಡಿ, ಕೂಡಿ ಉಂಡು, ಕೂಡಿ ಹಾಲುಕುಡಿಯುವ ವೀರರು.

ಒಮ್ಮೆ ಕಿತ್ತೂರಿಗೆ ಹೋಗಿ ಮೂವರು ತಮ್ಮ ತಮ್ಮ ಸಾಧನೆಗಳನ್ನು ತೋರಿಸಿ, ಅರಸರಿಂದ ಹೌದೆನಿಸಿ, ಬಂಟರೆಂಬ ಬಿರುದು ಪಡೆದು ಬಂದಿದ್ದರು.

ರಾಯಣ್ಣನ ತಂದೆ-ತಾಯಿಗಳಿಗಾಗಲೀ ರಾಯಣ್ಣ-ಸಿದ್ಧಣ್ಣನಿಗಾಗಲೀ ಊರಲ್ಲಿ ಯಾರ ಜೊತೆಗೂ ವೈರ ಇರಲಿಲ್ಲ. ಜಾತಿಗಳ ಕಲ್ಪನೆಯೇ ಅವರಿಗಿಲ್ಲ. ಎಲ್ಲರೂ ಹಾಲುಮತದವರೆಂಬ ಭಾವ ತುಂಬಿ ತುಳುಕುತ್ತಿತ್ತು.  ಮದುವೆಯ ಕಲ್ಪನೆ ಮನೆಯ ಹಿರಿಯರಲ್ಲಿ ಬಂದಾಗ, ತನಗೆ ಮದುವೆ ಬೇಡವೆಂದು ರಾಯಣ್ಣ ಹೇಳಿದ್ದುಂಟು.

ಬೇಕಾದರೆ ಅಣ್ಣ ಸಿದ್ಧಣ್ಣನಿಗೆ ಮದುವೆ ಮಾಡಿರಿ, ನನಗೆ ಏನೇನೋ ಮಾಡುವುದಿದೆ ಎಂದು ರಾಯಣ್ಣ ಹೇಳಿದ್ದುಂಟು.

ಈ ಎಲ್ಲ ವಿವರಗಳನ್ನು ಸಂಗವಳ್ಳಿ (ಸಂಗೊಳ್ಳಿ) ಮೋದಿನ ಸಾಹೇಬ ಎಂಬ ರಾಯಣ್ಣನ ಸಮಕಾಲೀನ ಲಾವಣಿಕಾರನು ಕೆಳಗಿನಂತೆ ಹಾಡಿಕೊಂಡಿದ್ದಾನೆ.[2]

ಬೆಳಗಾವಿ ಜಿಲ್ಲಾ ಪೈಕಿ ಸಂಪಗಾವಿತಾಲೂಕಿನೊಳಗೆ
ಸಂಗವಳ್ಳಿ ಎಂಬ ಸಣ್ಣ ಹಳ್ಳಿ ಇತ್ತೋ ಹದ್ದಿನೊಳಗ
ತಾಯಿ ಕೆಂಚ್ಚವ್ವನ ಹೊಟ್ಟ್ಯಾಗ ಬೆಳದನು ರಾಯಣ್ಣಾಗ
ರೋಗಣ್ಣವರ ರಾಯಣ್ಣನೆಂದು ಹೆಸರು ಆದಾನು ದೇಶದ ಮ್ಯಾಗ
ಜಾತಿಯಿಂದ ರಾಯಣ್ಣ ಕುರುಬನಾಗಿದ್ದನಾಗ
ಸಂಗವಳ್ಳಿ ವಾಲೀಕಾರಕಿ ಇತ್ತ ಅವರ ವಂಶಕ್ಕಾಗ || ೩ ||

ಸಂಗೊಳ್ಳಿ ರಾಯಣ್ಣ ತನ್ನ ಜೀವಮಾನದಲ್ಲಿ ಏನನ್ನೋ ಮಾಡಲಿಚ್ಛಿಸಿದ್ದನು. ಅದು ಅವನ ವಿವರವನ್ನು ವೀರವೃತ್ತಿ ಎಡೆಗೆ ಸಾಗಿಸಿತು.ಅವನನ್ನು ಸೂರ್ಯ-ಚಂದ್ರನಂತೆ. ೨೪ನೆಯ ವಯಸ್ಸಿನವನಿರುವುದನ್ನು ಕಾಣಬೇಕು.

ಎ ಸಿಂಹದಂತಾ ಸಂಗೊಳ್ಳಿರಾಯಾ
ಭೂಮಿಗಿ ಬಿದ್ಧಂಗ ಸೂರ್ಯನ ಛಾಯಾ
—————————-
—————————

ಜಾತಿಲಿಂದ ಕುರುಬ ಬೀರಾ
, ರೂಪದಲ್ಲಿ ಸೂರ್ಯಚಂದ್ರಾ
ಪಂಚ ಪಾಂಡವರಲಿ ಭೀಮ ಹುಟ್ಟಿ ಬಂದ್ಹಂಗ
ಗುಡುಗ-ಸಿಡ್ಲ-ಮಿಂಚ -ಗದ್ನಿ ಹೊಡೆದ್ಹಂಗ
ವಯಾ ವರುಷ ಇಪ್ಪತ್ನಾಲ್ಕು ಹನುಮಂತದೇವರ ಇದ್ದೋಬಲಕ
ಗುಣದಲ್ಲಿ ಬಾಳ ನಂಬಿಗಿವಂತ ರಾಮದೇವರಂಗ
ಕತ್ತಿ ಹಿಡಿಯತಿದ್ದೋರಣದಲ್ಲಿ ವೀರಭದ್ರ ದೇವರಂಗ[3]
ರಾಯಣ್ಣನ ದನಿ ಗವಿಯೊಳಗ ಹುಲಿ ಗದ್ನಿ ಹೊಡದಂಗ ||||

ರಾಯಣ್ಣನ ವೀರತನವು ಎಲ್ಲೆಡೆ ಹರಡಿತು. ಶೂರ ಸಂಗೊಳ್ಳಿ ರಾಯಣ್ಣನನ್ನು ಎಲ್ಲರೂ ಕಾಣಬೇಕೆಂದೆ ಬಯಕೆ. ಭರಮಣ್ಣ ವಯಸ್ಸಾಗುತ್ತ ಎಲುವಿನ ನೋವಿನಿಂದ ತೀರಿಕೊಂಡನು. ಮನೆತನದ ಭಾರವೆಲ್ಲ ಕೆಂಚಮ್ಮನ ಮೇಲೆ ಬಿತ್ತು. ವೀರವನಿತೆಯಾಗಿ ಸಾಗಿದಳು. ಒಮ್ಮಿಂದೊಮ್ಮೆ ರಾಯಣ್ಣ, ಬಾಳಣ್ಣ, ಚನ್ನಬಸಣ್ಣನಿಗೆ ಕಿತ್ತೂರ ಕರೆಬಂದಿತು. ಇವರನ್ನು ಅರಮನೆಯ ಅಂಗರಕ್ಷಕರೆಂದು ನೇಮಕ ಮಾಡಿದ ಸುದ್ದಿ ಹರಡಿತು. ತಾಯಿ ಕೆಂಚಮ್ಮನಿಗೂ ಎಲ್ಲಿಲ್ಲದ ಸಂತೋಷ, ಇಡೀ ಸಂಗೊಳ್ಳಿ ಆನಂದದಲ್ಲಿ ತೇಲಾಡಿತು. ಇವರು ಊರಲ್ಲಿದ್ದು ಕರೆಬಂದಾಗ ಅಲ್ಲಿ (ಅರಮನೆಗೆ) ಹಾಜರಿರಬೇಕು.

ಸಂಗೊಳ್ಳಿ ರಾಯಣ್ಣನ ಮನೆತನವು ವೀರ ಪರಂಪರೆಯನ್ನು ಹೊಂದಿದ್ದು, ಈ ಪರಂಪರೆಯಲ್ಲಿ ಅಜ್ಜ ಮುತ್ತಜ್ಜರು ವೀರಶ್ರೀ ಎಂಬುದಾಗಿ ಲಾವಣಿಕಾರ ನೇಸರಗಿಯ ಚೌಬಾರಿ ಅಡಿವೆಪ್ಪಗೌಡರು ಬಹು ಮಾರ್ಮಿಕವಾಗಿ ಮತ್ತು ಗಮನಾರ್ಹವಾಗಿ ತಿಳಿಸುತ್ತ ವಾಸ್ತವತೆಯನ್ನು ಲಾವಣಿಯಲ್ಲಿ ಹೆಣದಿದ್ದಾನೆ.

ಲಾವಣಿ

ಮುಂದಿನ ಪದಗಳನು ಚಂದಾಗಿ ಕೇಳಿರಿ
ಸರಿದ ರಾಯಣ್ಣನ ಕಥೇ ಸಾರಾ
ರಾಯಣ್ಣನೆಂಬುವ ನಾಮಕರಣ
ಚಾಯವಾಗಿ ಒಪ್ಪೇತವಗ
ನ್ಯಾಯದಲ್ಲಿ ಬಹಳ ಬಂಟ ಸೂರಾ
ಕೈಯಾಗ ಕತ್ತಿ ಡಾಲ ಹತಿಯಾರಾ
ಅಜ್ಜ ಆರ ತೆಲಿ ಮುತ್ತ್ಯಾ ಮೂರ ತೆಲಿ
ಅಂತು ಇಂತು ನಡಕೊಂಡ ಬಂತು
ಎಂಥಾ ಬಂಟ ಜನರ ಇದ್ದಾರಪ್ಪ ಅವರಾ
ಕುಂತ ಕೇಳರಿ ಬಡ್ಡಿ ಮಜಕೂರಾ
ಸಂದ ರಾಯಣ್ಣ ಕಥಿಸಾರ
ಹೇಳುವೆನೋ ಮುಂದ ನಡಿದಂತ ಮಜಕೂರಾ
ಸರದಾರ ರಾಯಣ್ಣಗ ಸಂಗೊಳ್ಳಿ ಊರಾಗ
ಬರೆದು ಕೊಟ್ಟಾರೋ ವತನವನು
ಹಚ್ಚಿತಿರಗುವರು ತುರಾಯಿ ಶಮನವನು.
ಬತ್ತಿ ಮುಂಡಾಸ ಬಿತ್ತಿ ಸುತ್ತಿ
ಕತ್ತಿ ಡಾಲ ಬಗಲಿಗೆ ಹಾಕಿ
ಮತ್ತ ಮಾಡುವರಪ್ಪಾ ತಳ್ಳಿಯನು
ಚಿತ್ತವಿಟ್ಟು ಕೇಳಿರಿ ನೀವು ಇನ್ನು.[4]

ಸಂಗೊಳ್ಳಿ ರಾಯಣ್ಣನ ಮನೆತನದ ಹಿನ್ನಲೆಯನ್ನು ಇನ್ನೂ ತಿಳಿಯಬೇಕಾದರೆ, ರಾಯಣ್ಣನ ಅಜ್ಜನಾದ ರಾಗಪ್ಪನು ವೀರಪ್ಪ ದೇಸಾಯಿ ವತಿಯಿಂದ ‘ಚಿಣಗಿ ಕೋವಾಡ’ ಯುದ್ಧದಲ್ಲಿ ತನ್ನ ಶೌರ್ಯವನ್ನು ತೋರಿಸಿದ್ದರಿಂದ ಸಾವಿರ ಒಂಟಿ ಸರದಾರ ಎಂಬ ಬಿರುದು ಸಿಕ್ಕಿತು. ———- ರಾಯಣ್ಣನ ಅಜ್ಜ ರಾಗಪ್ಪನಿಂದಾಗಿ ಈ ಮನೆತನಕ್ಕೆ ರಾಗಣ್ಣವರ ಎಂದು ಹೆಸರು ಬಂದಿತು. ಮುಂದೆ ಇದು ರೋಗಣ್ಣವರ ಎಂದು ಪರಿವರ್ತನೆಯಾಯಿತು——-’ ಇನ್ನೊಂದು ಅಭಿಪ್ರಾಯದಂತೆ ರಾಯಣ್ಣನ ಮುತ್ತಜ್ಜ ಆಗಿನ ಕಾಲದ ರೋಗಿಗಳಿಗೆ ಆಯುರ್ವೇದ ವನಸ್ಪತಿಗಳನ್ನು ಕೊಟ್ಟು ಅವರ ರೋಗಗಳನ್ನು ಗುಣಪಡಿಸಿ ಕಳಿಸುತ್ತಿದ್ದುದರಿಂದಿ ಇದನ್ನು  ತಿಳಿದು ಕಿತ್ತೂರಿನ ದೇಸಾಯರು ಇವನಿಗೆ ೩೫ ಎಕರೆ ಜಮೀನನ್ನು ‘ಇನಾಂ’ ಕೊಟ್ಟರೆಂದೂ ಮುಂದೆ ಈ ಮನೆತನಕ್ಕೆ ರೋಗಣ್ಣವರ ಎಂಬ ಹೆಸರು ರೂಢಿಯಲ್ಲಿ ಬಂದಿತೆಂದು ಪ್ರತೀತಿ ಇದೆ.[5]

ಸಂಗೊಳ್ಳಿ ರಾಯಣ್ಣನ ತಾಯಿ ಕೆಂಚವ್ವನಿಗೆ ಇನ್ನೂ ಗಂಡುಮಕ್ಕಳು ಬೇಕು ಎಂದು ರಾಯಣ್ಣನನ್ನು ಹಡೆಯುವ ಮುಂಚೆ ಭಕ್ತಿಯಿಂದ ಆಂಜನೇಯನನ್ನು ಪ್ರಾರ್ಥಿಸುತ್ತಿದ್ದಳಂತೆ. ಒಂದು ಸಲ ಭರಮಣ್ಣ ಮಕ್ಕಳು ಸಾಕು. ಮನೆಯಲ್ಲಿ ಒಬ್ಬ ವೀರಪುತ್ರನಿದ್ದರೆ ಸಾಕು. ಈಗಿರುವ ಇಬ್ಬರು ಮಕ್ಕಳು ಬದುಕಿ ಏಳ್ಗೆಪಡೆಯಲಿ, ಒಬ್ಬ ಮನೆಗೆ ಇನ್ನೊಬ್ಬ ಅರಮನೆಗೆ ಎಂದನಂತೆ. ಇರಲಿ ಮನೆಗೂ ಇರಲಿ ಅರಮನೆಗೂ ಇರಲಿ, ಈಗಾಗಲೇ ನಾನು ಮತ್ತೆ ಬಸುರಿ. ಮಗನೇ ಹುಟ್ಟುತ್ತಾನೇ. ಏನು ಹೆಸರು ಇಡುವುದು? ಎಂಬುದಾಗಿ ಕೇಳಿದಳಂತೆ! ಇರಲಿ ಇನ್ನೊಬ್ಬ ಮಗನನ್ನು ಹಡೆಯುವುದು ಖಚಿತವಾಯಿತು. ರಾಜ (ರಾಯ) ನೆಂದು ಹೆಸರಿಸೋಣ. ಐವರನು ಹಡೆಯುವುದು ಬೇಡ, ಹೊಟ್ಟೆಯಲ್ಲಿರುವ ಮಗ ಶೂರನಾಗುತ್ತಾನೆ. ನಾನು ಕನಸು ಕಂಡಿರುವೆನು ಎಂದನಂತೆ ಭರಮಣ್ಣ. ಕೆಂಚಮ್ಮ ನಕ್ಕಳಂತೆ.

ಹೆರಿಗೆಯ ನಂತರ ‘ತನಗೆ ಹುಟ್ಟಿದ ಮಗ ಸೂರ್ಯ-ಚಂದ್ರನಂತಿದ್ದಾನೆ’ ಎಂಬ ಸಂತೋಷ ಹಂಚಿಕೊಂಡ ರೀತಿ ಅಗಮ್ಯವಾದುದು. ರಾಯಣ್ಣನ ಬಾಲ್ಯ ಶೌರ್ಯಗಳನ್ನು ಇನ್ನೊಬ್ಬ ಲಾವಣಿಕಾರರ ಹಾಡಿಂದ ತಿಳಿಯಬಹುದಾಗಿದೆ.

ಲಾವಣಿ

ಏ ಸಣ್ಣಂದಿರತ ಅವನ ಬಣ್ಣಾ
ಚೊಕ್ಕ ಚಿನ್ನಾ ಲಿಂಬಿಹಣ್ಣಾ
ಹೋಕ ಹೋಳಕ ಹೋಳಿ ಕಾಮ ದೇವರಂಗ
ಕಕ್ಕೇರಿ ಬಿಷ್ಟವ್ವನ ಹಸ್ತ ಅವನ ತಲಿಯಮ್ಯಾಗ
ಕಿತ್ತೂರ ಅರಸರ ಪ್ರೀತಿ ಭಾಳ ಹಳಬಕಿ ನೇಮಿಸ್ಯಾರ ರಾಯಪ್ಪಗ
ಹಡಿಯ ಬೇಕ ಇಂಥಾ ಮಕ್ಕಳನ ಭೂಮಿಯ ಮ್ಯಾಗ
ಕೆಚ್ಚೆದೆಯ ಕರ್ಣನಂತವನ ರಣದಾಗ
ಇಂಥವರ ಪೂಜ್ಯವಂತರಾಗತಾರ ಲೋಕದೊಳಗ.[6][1]     ಡಾ. ನಿಂಗಣ್ಣ ಸಣ್ಣಕ್ಕಿ. ಸಂಗ್ರಹದಿಂದ, ಹೋಳಿ ಹಾಡು. ಸಂಗ್ರಹ. ಮಮದಾಪೂರ ತಾ. ಗೋಕಾಕ.

[2]     ಡಾ. ನಿಂಗಣ್ಣ ಸಣ್ಣಕ್ಕಿ ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ. ಮೂರನೆ ಮುದ್ರಣ ವಿದ್ಯಾನಿಧಿ ಪ್ರಕಾಶನ ಗದಗ-ಪುಟ-೭೪

[3]     ಅದೇ, ಪುಟ-೨೩.

[4]     ಕಿತ್ತೂರ ಕಾಳಗ (ಪುಟ ೩೯-೪೦) ಸಾ. ದೊಡ್ಡಭಾವೆಪ್ಪ ಮೂಗಿ. ಪ.: ರುದ್ರಗಡ ಪ್ರಕಾಶನ, ಬೈಲಹೊಂಗಲ.

[5]     ಸಂಗೊಳ್ಳಿ ರಾಯಣ್ಣ (ಪುಟ ೭೮) ಸಂಪಾದಕರು ಡಾ. ಸೂರ್ಯನಾಥ ಕಾಮತ್‌, ಕನ್ನಡ ಮತ್ತು ಸಂಸ್ಕೃತಿಯ ನಿರ್ದೇಶನಾಲಯ, ಬೆಂಗಳೂರು, ಪ್ರಕಟಣೆ ೧೯೯೫

[6]     ಡಾ. ನಿಂಗಣ್ಣ ಸಣ್ಣಕ್ಕಿ. ಸಂ.ಲಾವಣಿ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪುಟ ೭೨