ವೀಣಾ ಮಧುರನಾದ
ಅಲೆ ಅಲೆ ಅಲೆಯಾಗೈತರುತಿದೆ
ದಿವ್ಯ ವೀಣಾ ಮಧುರನಾದ.

ಕಾಲದೇಶಾತೀತ
ಪೂರ್ಣತೆಯ ಕಡೆಯಿಂದ
ಭುವನ ಮೋಹನಮಧುರ
ಇಂಚರವ ಸಾರುತಿದೆ.

ಬಾನ ಬಯಲಿನ ತುಂಬ
ಬೆಳುದಿಂಗಳನೆ ತುಂಬಿ
ಬಾನೆದೆಯ ಹೂವುಗಳ
ಮಲರಿಸುತ ಹರಿಯುತಿದೆ.

ಭಾವಭಾಷಾತೀತ
ವಿವಿಧಾನುಭವಗಳನು
ನನ್ನೆದೆಯ ಸಿರಿಗುಡಿಗೆ
ತಂದಿಲ್ಲಿ ನಿಲಿಸುತಿದೆ.

ಅಖಿಲ ಸಚರಾಚರವ
ನಾದದಲಿ ಮುಳುಗಿಸುತ
ಗ್ರಹ ತಾರೆ ಚಂದಿರನ
ನರ್ತನಂಗೈಸುತಿದೆ.

ಸಚ್ಚಿದಾನಂದನ
ಅನಂತರೂಪವನು
ನನ್ನ ಸಾಂತತೆಯಲ್ಲಿ
ಸೆರೆಗೈದು ತೋರುತಿದೆ