ಮನುಷ್ಯರಾದ ನಮಗೆ, ನಮ್ಮಲ್ಲಿ ಸಂಚಯನಗೊಳ್ಳುವ ಅನುಭವಗಳನ್ನು ಬೇರೆಯವರೆದುರು ತೋಡಿಕೊಳ್ಳುವುದರಲ್ಲಿ ಒಂದು ಬಗೆಯ ಸುಖವಿದೆ. ಈ ಸುಖಕ್ಕೆ. ನಮ್ಮೊಳಗಿನ ಅನುಭವಗಳ ಒತ್ತಡದ ವೇದನೆಗೆ ಒದಗುವ ಬಿಡುಗಡೆ ಒಂದು ಕಾರಣವಾದರೆ, ಅದನ್ನು ಹತ್ತು ಜನದ ಜತೆಗೆ ಹಂಚಿಕೊಳ್ಳುವುದರಿಂದ ಬರುವ ಸಮಾಧಾನ ಇನ್ನೊಂದು ಕಾರಣವಿರಬಹುದು. ಹೀಗೆ ತನ್ನಲ್ಲಿನ ಅನುಭವಗಳನ್ನು ಸಮುಚಿತವಾದ ಭಾಷಾ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಬಿಡುಗಡೆ ಮಾಡಿಕೊಳ್ಳುವ ಕಲೆಗಾರಿಕೆಯನ್ನು ಸಾಹಿತ್ಯ ಎಂದು ಕರೆಯಬಹುದು.

ಅನುಭವಗಳನ್ನು ಬಹುಶಃ ಯಾರೂ ಹುಡುಕಿಕೊಂಡು ಹೋಗುವುದಿಲ್ಲ. ಲೋಕಕ್ಕೂ ನಮಗೂ ಒದಗುವ ನಿರಂತರ ಸಂಪರ್ಕ ಹಾಗೂ ಸಂಘರ್ಷಗಳ ಪರಿಣಾಮಗಳೇ ಅನುಭವಗಳಾಗಿ ಲಭಿಸುತ್ತವೆ. ಆದರೆ ಹೀಗೆ ನಮ್ಮಲ್ಲಿ ಬಂದು ಒದಗುವ ಎಷ್ಟೋ ಅನುಭವಗಳು, ನಮ್ಮ ಕ್ರಿಯೆ-ಪ್ರತಿಕ್ರಿಯೆಗಳ ಮೂಲಕ ಅಭಿವ್ಯಕ್ತವಾದರೆ, ಇನ್ನೆಷ್ಟೋ ನಮ್ಮ ಅಂತರಂಗ ತಲಾತಲದಲ್ಲಿ ಮುಳುಗಿ ಹೋಗುತ್ತವೆ. ಆದರೆ ಯಾರು ತನ್ನಲ್ಲಿ ಸಂಚಯಗೊಂಡ ಅನುಭವಗಳನ್ನು ಒಂದು ವ್ಯವಸ್ಥೆಗೆ ತಂದು, ಉಚಿತವಾದ ರೀತಿಯಲ್ಲಿ  ಅಭಿವ್ಯಕ್ತಪಡಿಸುವ ಕುಶಲತೆಯನ್ನು ಸಾಧಿಸಿ ಕೊಳ್ಳುತ್ತಾನೆಯೋ ಅಂಥವನನ್ನು ಕವಿ, ಕಲೆಗಾರ ಎಂದು ಕರೆಯಬಹುದು. ಕಾವ್ಯ ಅಥವಾ ಕಲೆ ಎಂದರೆ, ತೀವ್ರವಾದ ಅನುಭವಗಳನ್ನು ಒಂದು ವ್ಯವಸ್ಥೆಗೆ ಒಳಪಡಿಸಿ, ರಮಣೀಯವಾದ ಒಂದು ಆಕಾರವನ್ನು ಕೊಡುವ ಸಾಮರ್ಥ್ಯದ ಪರಿಣಾಮ ಎಂದಂತಾಯಿತು. ಯಾಕೆಂದರೆ ಮೂಲತಃ ನಮ್ಮಲ್ಲಿ ಸಂಚಯನಗೊಳ್ಳುವ ಅನುಭವಗಳಿಗೆ ಒಂದು ವ್ಯವಸ್ಥೆ ಇರುವುದಿಲ್ಲ. ಒಂದರ ಹಿಂದೊಂದು  ಒಂದರ ಮೇಲೊಂದು ಬಂದು ಮನಸ್ಸಿನ ಉಗ್ರಾಣದಲ್ಲಿ ಜಮಾಯಿಸುವ ಅನುಭವಗಳು ಅಸ್ತವ್ಯಸ್ತವೂ ಅಖಚಿತವೂ ಆದ ಸಮೂಹ ಸ್ಥಿತಿಯಲ್ಲಿರುತ್ತದೆ. ಅವುಗಳಲ್ಲಿ ಯಾವುದನ್ನು ತಾನು ಅಭಿವ್ಯಕ್ತಿಗೆ ಅಳವಡಿಸಬಹುದು, ಯಾವುದು ಅಭಿವ್ಯಕ್ತಿಗೆ ಯೋಗ್ಯವಲ್ಲ ಎಂಬ ಮೂಲಭೂತ ವಿವೇಚನೆಗೆ  ಅಥವಾ ಆಯ್ಕೆಗೆ ಒಳಪಡಿಸುವುದೇ ಕಲೆಗಾರನ ವೈಶಿಷ್ಟ್ಯವಾಗಿದೆ.  ಅನಂತರ ಅಭಿವ್ಯಕ್ತಿಗೆ ತಕ್ಕ ಅನುಭವಗಳಿಗೆ ಒಂದು ಆಕಾರ ಕೊಡುವ ಕಸುಬಿನಲ್ಲಿ ಕವಿ ಕಲಾವಿದ ತೊಡಗುತ್ತಾನೆ. ಆದರೆ ಹೀಗೆ ಅನುಭವಕ್ಕೆ ಆಕಾರ ಕೊಡುವಾಗ, ಬಂದಂಥ ಅನುಭವಗಳನ್ನು ಯಥಾವತ್ತಾಗಿ ಬಿಡುಗಡೆ ಮಾಡುವ ಒಂದು ಮಾಧ್ಯಮವಾಗುವುದಿಲ್ಲ ಕವಿ ; ಅದರ ಬದಲು ಅನುಭವಗಳನ್ನು ಪುನರನುಭವಿಸುವ ಅತ್ಯಂತ ಮುಖ್ಯವಾದ ಒಂದು ಕಾರ್ಯ ನಡೆಯುತ್ತದೆ ಅವನ ಮನಸ್ಸಿನಲ್ಲಿ. ಇದನ್ನೆ ಸೃಜನ ಪ್ರಕ್ರಿಯೆ ಎಂದು ಕರೆಯಬಹುದು. ಈ ದೃಷ್ಟಿಯಿಂದ ಸಾಹಿತ್ಯದ ಮೂಲ ದ್ರವ್ಯ ಅನುಭವಗಳೇ ಆದರೂ ಸಾಹಿತ್ಯಾಭಿವ್ಯಕ್ತಿ ಎನ್ನುವುದು ಕೇವಲ ಅನುಭವಗಳ ಅಭಿವ್ಯಕ್ತಿ ಅಲ್ಲ. ಅದು ಅನುಭವಗಳ ಪುನರನುಭವದ ಪರಿಣಾಮ. ಹೀಗೆ ಲೋಕಾನುಭವಗಳನ್ನು ಕಾವ್ಯಾನುಭವವನ್ನಾಗಿ ಪರಿವರ್ತಿಸುವ ಕ್ರಿಯೆ ನಡೆಯದ ಹೊರತು ಅಲ್ಲಿ ಸಾಹಿತ್ಯವೆಂಬುದು ಸಂಭವಿಸುವುದಿಲ್ಲ.

ಹಾಗಾದರೆ ಕವಿ ತನಗಾಗುವ ಅನುಭವಗಳನ್ನು ಯಾಕೆ ಅಭಿವ್ಯಕ್ತಿಸದೆ ಸುಮ್ಮನಿರುವುದಿಲ್ಲ ; ತನ್ನ ಅನುಭವಗಳನ್ನು ಅವರಿವರೊಡನೆ ಹಂಚಿಕೊಳ್ಳುವುದಷ್ಟೇ ಇದರ ಹಿಂದಿರುವ ಪ್ರೇರಣೆಯೇ? ಅಥವಾ ಅದಕ್ಕಿಂತ ಮೂಲಭೂತವಾದದ್ದು ಬೇರೆ ಏನಾದರೂ ಇದೆಯೇ? -ಎಂಬ ಪ್ರಶ್ನೆ ಉದ್ಭವಿಸುತ್ತದೆ.

ನಮಗೆ ತೋರುವ ಮಟ್ಟಿಗೆ, ಮನುಷ್ಯನಿಗೆ ಕಾಲವನ್ನು ಕುರಿತು ಭಯ ಮತ್ತು ಅದರಿಂದ ಪಾರಾಗುವ ಪ್ರಯತ್ನಗಳೇ ಕಲಾನಿರ್ಮಿತಿಯ ಹಿಂದಿರುವ ಮೂಲ ಪ್ರೇರಣೆಯಾಗಿದೆ. ಕಾಲ ಎಂಬುದೊಂದು ನಿರಂತರ ಪ್ರವಾಹ. ನಾವು ಕಾಣುವ ಬದುಕು ನೋಡನೋಡುತ್ತಲೇ ಈ ಕಾಲಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ; ಅದರ ನಿಷ್ಠುರ ಸೆಳೆತಕ್ಕೆ ಯಾವುದೂ ಹೊರತಲ್ಲ. ಕಾಲಗರ್ಭದ ಆಗಸ್ತ್ಯ ಜೀರ್ಣಾಗ್ನಿಯಲ್ಲಿ ಶತಮಾನಗಳ ನಾಗರಿಕತೆ, ಸಂಸ್ಕೃತಿಗಳು ಕರಗಿ ಹೋಗಿವೆ. ಕ್ಷಣಕ್ಷಣವೂ ನಾವು ಹಳಬರಾಗುತ್ತಾ, ಗೋರಿಯ ದಾರಿಯಲ್ಲಿ ಸಾಗುತ್ತಿದ್ದೇವೆ. ಕಣ್ಣೆದುರು ಕಂಡದ್ದು, ಮನಸ್ಸು ಉಂಡದ್ದು ಎಲ್ಲವೂ ಹೀಗೆ ಈ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಾಗ, ನಾವು ಕಂಡದ್ದನ್ನು ನಮಗೆ ಅನಿಸಿದ್ದನ್ನು, ಒಟ್ಟಿನಲ್ಲಿ ನಮ್ಮ ವ್ಯಕ್ತಿತ್ವದ ಒಂದಿಷ್ಟು ಭಾಗವನ್ನಾದರೂ ಈ ಕಾಲದ ಉಪಹತಿಯಿಂದ ಉಳಿಸಿ, ನಿಲ್ಲಿಸಲು ಸಾಧ್ಯವಿಲ್ಲವೆ? ಸಾಧ್ಯ ವಾಗುವುದಾದರೆ ದಾರಿ ಯಾವುದು ? ಈ ಅನ್ವೇಷಣೆಯ ಸಾಹಸದ ಪರಿಣಾಮವಾದ ಕನಸುಗಳೇ ನಿರ್ಮಿಸಿವೆ ಸ್ವರ್ಗಲೋಕದ ಕಲ್ಪನೆಯನ್ನು ; ಕ್ಷೀರಸಾಗರ ಮಂಥನದಿಂದ ಅಮೃತವನ್ನು ಪಡೆದು ಅಮರರಾದ ನಿರ್ಜರರ ಕತೆಯನ್ನು ; ಕಳೆದು ಹೋಗುವ ಯೌವನವನ್ನು ತನ್ನ ಮಗನಿಂದ ಪಡೆದುಕೊಂಡ ಯಯಾತಿಯ ವೃತ್ತಾಂತವನ್ನು. ಈ ಪ್ರಯತ್ನವೇ ಸೃಜಿಸಿದೆ ಸಾಹಿತ್ಯ ಎಂಬ ಸಾಧನವನ್ನು. ಇಂದು ಇದ್ದು ನಾಳೆ ಕಾಲವಶವಾಗುವ ಕವಿ ಎಂಬ ವ್ಯಕ್ತಿಯ ಅಂತರಂಗದ ಕ್ರಿಯೆ-ಪ್ರತಿಕ್ರಿಯೆಗಳನ್ನು, ಭಾವ-ಭಾವನೆಗಳನ್ನು, ಅನಿಸಿಕೆ-ಆಲೋಚನೆಗಳನ್ನು, ಕಲಾತ್ಮಕ ಅಭಿವ್ಯಕ್ತಗಳ ಮೂಲಕ ಕಾಲದ ಉಪಹತಿಯಿಂದ ಪಾರುಮಾಡಿ, ಅನಂತ ಕಾಲದ ಆಸ್ವಾದದ ಸಾಮಗ್ರಿಯನ್ನಾಗಿ ಮಾಡುವುದು ಸಾಹಿತ್ಯ ಕಲೆಗಳ ಮೂಲಕ ಸಾಧ್ಯವಾಗಿದೆ. ವ್ಯಾಸ-ವಾಲ್ಮೀಕಿಗಳಾಗಲಿ, ಕಾಳಿದಾಸ-ಪಂಪರಾಗಲಿ ಇವತ್ತು ಇಲ್ಲ ; ಅವರು ಬಾಳಿಬದುಕಿದ ಪರಿಸರವಾಗಲಿ, ಅವರು ಚಿತ್ರಿಸಿದ ವ್ಯಕ್ತಿಗಳಾಗಲಿ ಇವತ್ತು ಇಲ್ಲ. ಆದರೆ ಅವರ ಕೃತಿಗಳ ಮೂಲಕ, ಅಂದು ಅವರು ಕಂಡು ಉಂಡ ಬದುಕು, ಅವರ ಅನುಭವಗಳು ಎಲ್ಲ ಕಾಲದ ಓದುಗರ ಅನುಭವಗಳಲ್ಲಿ ಮತ್ತೆ ಮತ್ತೆ ಹೊಸ ಹೊಸದಾಗಿ ನಿಲ್ಲುವ ನಿರಂತರತೆಯನ್ನು ಪಡೆದುಕೊಂಡಿವೆ.  ಬೇರೊಂದು ಮಾತಿನಲ್ಲಿ ಮಾತಿನಲ್ಲಿ ಹೇಳುವುದಾದರೆ, ಕಾಲದ ಉಪಹತಿಯಿಂದ ಪಾರುಮಾಡಿ, ಕಾಲಾತೀತದ ನೆಲೆಗೆ, ತಮ್ಮ ಅನುಭವಗಳನ್ನು ನಿಲ್ಲಿಸುವ ಸಾಮರ್ಥ್ಯ ಅವರಿಗೆ ಸಿದ್ಧಿಸಿದೆ. ಈ ಅರ್ಥದಲ್ಲಿ ಸಾಹಿತ್ಯ ಕಾಲವನ್ನು ಗೆದ್ದು ನಿಲ್ಲುವ ಒಂದು ಮುಖ್ಯವಾದ ಪ್ರಯತ್ನವಾಗಿದೆ.

ಪ್ರತಿಕ್ರಿಯೆ-೧೯೮೨