ಹಣ್ಣು, ತರಕಾರಿ, ಮಾಂಸ ಮತ್ತು ಇನ್ನೂ ಅನೇಕ ಈ ಬಗೆಯ ಆಹಾರ ಪದಾರ್ಥಗಳಿಗೆ ವಿಶೇಷ ಗಮನ ಕೊಡದಿದ್ದರೆ ಅವು ಬೇಗನೇ ಕೆಡುತ್ತವೆಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅನಾದಿ ಕಾಲದಿಂದಲೂ ಮಾನವನು ಉಪ್ಪು ಅಥವಾ ವಿನಿಗರ್‌ನಲ್ಲಿ ಉಪ್ಪಿನಕಾಯಿ ಹಾಕಿ, ಒಣಗಿಸಿ ಹೊಗೆಯಿಂದ ಉಪಚರಿಸಿ ಇಲ್ಲವೇ ಸಕ್ಕರೆ ಅಥವಾ ಜೇನುತುಪ್ಪದಲ್ಲಿಟ್ಟು  ಇವುಗಳನ್ನು ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸುತ್ತಿದ್ದನು. ಈ ದಿಸೆಯಲ್ಲಿ ಡಬ್ಬಿಗಳಲ್ಲಿ ಸಂರಕ್ಷಿಸುವುದು ಸಾಧಾರಣವಾಗಿ ತೀರ ಇತ್ತೀಚೆಗಿನ ತಾಂತ್ರಿಕ ವಿಧಾನವೆನ್ನಬಹುದು. ಹದಿನೆಂಟನೇ ಶತಮಾನದ ಅಂತ್ಯಭಾಗದಲ್ಲಿ ಯುದ್ಧಕಾಲದ ಅವಶ್ಯಕತೆಯಿಂದ ಇದು ಅಭಿವೃದ್ಧಿ ಹೊಂದಿತು. ಫ್ರೆಂಚ್ ಸರಕಾರವು ಯುದ್ಧದಲ್ಲಿ ನಿರತರಾಗಿರುವ, ಬಹುದೂರದಲ್ಲಿ ಕಾದಾಡುತ್ತಿರುವ ಸೈನಿಕರಿಗೆ ಆಹಾರವನ್ನು ಕೆಡದಂತೆ ಒದಗಿಸಲು ಯೋಗ್ಯ ವಿಧಾನವನ್ನು ಕಂಡು ಹಿಡಿದವರಿಗೆ ೧೨,೦೦೦ ಫ್ಯ್ರಾಂಕ್ ಬಹುಮಾನ ಕೊಡುವುದಾಗಿ ಪ್ರಚುರಪಡಿಸಿತು. ಆಗ ಪ್ಯಾರಿಸ್‌ನಲ್ಲಿ ಮಿಠಾಯಿ ವ್ಯಾಪಾರ ಮತ್ತು ಭಟ್ಟಿ ಇಳಿಸುವ ಉದ್ಯೋಗದಲ್ಲಿ ನಿರತನಾಗಿದ್ದ ನಿಕೋಲಸ್ ಅಪ್ಪರ್ಟ್ ಎಂಬಾತ ಆಹಾರ ಕೆಡದಂತೆ ಗಾಜಿನ ಧಾರಕಗಳಲ್ಲಿ ಸಂರಕ್ಷಿಸುವ ವಿಧಾನವನ್ನು ಕಂಡು ಹಿಡಿದು ಅದರ ಬಗ್ಗೆ ಸ್ವಾಮ್ಯ  (ಪೇಟೆಂಟ್)ವನ್ನು ಪಡೆದನಲ್ಲದೆ ಈ ಬಹುಮಾನವನ್ನು ಗಿಟ್ಟಿಸಿಕೊಂಡನು. ಈ ವಿಷಯದ ಬಗ್ಗೆ ಅವನು ‘ಪ್ರಾಣಿಜನ್ಯ ಮತ್ತು ತರಕಾರಿ ಪದಾರ್ಥಗಳನ್ನು ಹೆಚ್ಚು ವರ್ಷ ಕಾಲ ಶೇಖರಿಸಿಡುವ ಕಲೆ’ ಶಿರ್ಷಿಕೆಯಡಿಯಲ್ಲಿ ಪುಸ್ತಕವನ್ನು ಪ್ರಕಟಿಸಿದನು. ಇದು ಡಬ್ಬಿಯಲ್ಲಿ ಆಹಾರ ಪದಾರ್ಥಗಳನ್ನು ಸಂಸ್ಕರಿಸುವ ಬಗ್ಗೆ ಬರೆದ ಮೊದಲ ಪುಸ್ತಕವಾಗಿದೆ. ಡಬ್ಬಿಯಲ್ಲಿ ಸಂಸ್ಕರಿಸುವ ಈ ವಿಧಾನವನ್ನು ಸಂಶೋಧಿಸಿದವನ ಗೌರವಕ್ಕಾಗಿ ಇದಕ್ಕೆ ಈಗಲೂ ‘ಅಪ್ಪರ್ಟೈಸಿಂಗ್’ ಎಂದೇ ಕರೆಯುತ್ತಾರೆ.

ಅಪ್ಪರ್ಟ್‌ನು ಆಹಾರವನ್ನು ಗಾಜಿನ ಧಾರಕಗಳಲ್ಲಿ ಹಾಕಿ, ಅದು ಮುಚ್ಚುವಷ್ಟು ನೀರು ತುಂಬಿ, ಮೇಲ್ಭಾಗದ ಮುಚ್ಚಳವನ್ನು ಸಡಿಲವಾಗಿರಿಸಿ, ಧಾರಕದ ಮಧ್ಯಭಾಗದ ಉಷ್ಣತೆ ೧೯೦ ಯಿಂದ ೨೧೨  ಎಫ್ (F = ಫ್ಯಾರನ್‌ಹೀಟ್) ತಲುಪುವವರೆಗೆ ನೀರಿನ ಶಾಖದ ಮೂಲಕ ಬಿಸಿ ಮಾಡಿ ಅನಂತರ ಒಳಗೆ ಗಾಳಿ ಸೇರದ ರೀತಿ ಧಾರಕವನ್ನು ಕಾರ್ಕ್ ಬಿರಡೆಯಿಂದ ಮೊಹರು ಮಾಡಿದನು. ಈ ವಿಧಾನದಿಂದ ಅವನಿಗೆ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಸಂರಕ್ಷಿಲು ಸಾಧ್ಯವಾಯಿತು. ಈ ವಿಧಾನದಲ್ಲಿ ಆಹಾರ ಕೆಡದಂತಿರಲು ಮುಖ್ಯ ಕಾರಣ ಹೊರಗಿನ ಗಾಳಿಯ ಸಂಪರ್ಕವಿಲ್ಲದಿರುವುದೆಂಬುದು ಅವನ ಪ್ರತಿಪಾದನೆಯಾಗಿತ್ತು. ಅಪ್ಪರ್ಟ್‌ನ ಸಂಸ್ಕರಣದ ವಿಧಾನವನ್ನು ಗೇಲೂಸಾಕ್‌ನು ಫ್ರೆಂಚ್ ಸರಕಾರದ ಅಪೇಕ್ಷೆಯ ಮೇರೆಗೆ ಅಭ್ಯಸಿಸಿದನು. ಆತನು ಆಹಾರ ಕೆಡಲು ಉತ್ಕರ್ಷಣೆ ಕ್ರಿಯೆಯೇ ಪ್ರಮುಖ ಕಾರಣವೆಂದು, ಆದಕಾರಣ ಧಾರಕಗಳಿಂದ ಗಾಳಿಯನ್ನು ಬೇರ್ಪಡಿಸಿದರೆ ಆಹಾರ ಕೆಡುವುದನ್ನು ತಪ್ಪಿಸಬಹುದೆಂಬ ತೀರ್ಮಾನಕ್ಕೆ ಬಂದನು. ಲೂಯಿ ಪಾಶ್ಚರ್‌ನ ಕಾಲದವರೆಗೆ ಇ ಪೂರ್ವ ಸಿದ್ಧಾಂತ ಸರ್ವರಿಂದಲೂ ಮಾನ್ಯವಾಗಿತ್ತು. ಸುಮಾರು ಕ್ರಿ.ಶ. ೧೮೬೦ರಲ್ಲಿ ಲೂಯಿಪಾಶ್ಚರನು ಸೂಕ್ಷ್ಮ ಜೀವಿಗಳ ಬಗ್ಗೆ ವ್ಯಾಪಕವಾದ ಸಂಶೋಧನೆಯನ್ನು ನಡೆಸಿ, ಇದಕ್ಕೆ ಸೂಕ್ತ ವಿವರಣೆ ನೀಡಿದನು. ಅವನು ‘ಆಹಾರ ಕೆಡಲು ಸೂಕ್ಷ್ಮಜೀವಿಗಳೇ ಕಾರಣ, ಆದಕಾರಣ ಅವುಗಳನ್ನು ನಾಶಪಡಿಸಿ, ಆಹಾರವನ್ನು ಯೋಗ್ಯ ಧಾರಕಗಳಲ್ಲಿ ಸಂರಕ್ಷಿಸಬಹುದು’ ಎಂದು ತನ್ನ ಉಷ್ಣೋಪಚಾರದ ಬಗ್ಗೆ ಮಾಡಿದ ಸಂಶೋಧನೆಯಿಂದ ಗೊತ್ತುಪಡಿಸಿದನು. ‘ಪಾಶ್ಚರೀಕರಣ’ ಎಂಬ ಶಬ್ದವನ್ನು ಇವನೇ ಮೊದಲು ಉಪಯೋಗಿಸಿದುದು. ಇದು ಆಹಾರವನ್ನು ಅಧಿಕ ಉಷ್ಣತೆಯ ಉಪಚಾರಕ್ಕೊಳಪಡಿಸಿ, ಸೂಕ್ಷ್ಮ ಜೀವಿಗಳನ್ನು ಸಂಪೂರ್ಣವಲ್ಲದಿದ್ದರೂ ಹೆಚ್ಚು ಸಂಖ್ಯೆಯಲ್ಲಿ ನಾಶಪಡಿಸಿ ಆಹಾರದ ಸಾಮಾನ್ಯ ಗುಣಮಟ್ಟವನ್ನು ಹೆಚ್ಚುಕಾಲ ಕಾಪಾಡುವಂತೆ ಮಾಡುವ ಕ್ರಿಯೆಯನ್ನು ಸೂಚಿಸುತ್ತದೆ. ಅಪ್ಪರ್ಟ್‌ನ ವಿಧಾನವು ಇದೇ ರೀತಿಯದಾಗಿತ್ತು. ಆಹಾರ, ನೀರು ಮತ್ತು ಗಾಳಿಯಲ್ಲಿರುವ ಸೂಕ್ಷ್ಮ ಜೀವಿಗಳಾದ ಬ್ಯಾಕ್ಟೀರೀಯಾ, ಬೂಸ್ಟು ಮತ್ತು ಈಸ್ಟ್‌ಗಳು ಆಹಾರದ ಹುದುಗುವಿಕೆ ಮತ್ತು ಕೊಳೆಯುವಿಕೆಗಳಿಗೆ ಕಾರಣವಾಗಿವೆ. ಇವುಗಳನ್ನು ಅಪ್ಪರ್ಟ್‌ನು ಉಷ್ಣಕ್ರಿಯೆಯಿಂದ ನಾಶಪಡಿಸಿದನು. ಇದಲ್ಲದೆ, ಇವು ಧಾರಕದಲ್ಲಿರುವ ಆಹಾರವನ್ನು ಪ್ರವೇಶಿಸದಂತೆ, ಗಾಳಿ ಸಂಚಾರಕ್ಕೆ ಎಡೆಯಿಲ್ಲದ ರೀತಿಯಲ್ಲಿ ಧಾರಕವನ್ನು ಮೊಹರು ಮಾಡಿದ್ದನು.

ಥಾಮಸ್ ಸೆಡಿಂಗ್ಟನ್ ಫ್ರಾನ್ಸ್ ದೇಶದಲ್ಲಿ ಪ್ರವಾಸ ಮಾಡುವಾಗ್ಗೆ ಅಪ್ಪಾರ್ಟ್‌ನ ವಿಧಾನದಲ್ಲಿ ಅಡಕವಾಗಿರುವ ಸಾಮಾನ್ಯ ತತ್ವಗಳನ್ನು ಮನವರಿಕೆ ಮಾಡಿಕೊಂಡನು. ಈತನು ಇಂಗ್ಲೆಂಡಿನಲ್ಲಿ ಕ್ರಿ.ಶ. ೧೮೦೭ರಲ್ಲಿ ಡಬ್ಬಿಯಲ್ಲಿ ಆಹಾರ ಸಂಸ್ಕರಿಸುವ ವಿಧಾನವನ್ನು ಮೊದಲ ಬಾರಿಗೆ ತಿಳಿಸಿದನು. ಬಿಟ್ಟಿಂಗನ ಹೇಳಿಕೆ ಪ್ರಕಾರ, ಪೀಟರ್ ಡ್ಯೂರೆಂಟ್ ಎಂಬ ಇನ್ನೊಬ್ಬ ಆಂಗ್ಲೇಯನು ಕ್ರಿ.ಶ. ೧೯೦೧ರಲ್ಲಿ ಆಹಾರವನ್ನು ತವರದ ಧಾರಕಗಳಲ್ಲಿ ಸಂಸ್ಕರಿಸುವ ವಿಧಾನದ ಬಗ್ಗೆ ಮೊದಲ ಸ್ವಾಮ್ಯ (ಪೇಟೆಂಟ್) ವನ್ನು ಪಡೆದನು.

ಬೋಸ್ಟನ್ನಿನ ವಿಲಿಯಂ ಅಂಡರ್‌ವುಡ್ ಕಂಪನಿಯ ಸ್ಥಾಪಕನಾದ ವಿಲಿಯಂ ಅಂಡರ‍್ವುಡ್‌ನು ಲಂಡನ್ನಿನಲ್ಲಿ ಹಣ್ಣುಗಳನ್ನು ಡಬ್ಬಿಗಳಲ್ಲಿ ಸಂಸ್ಕರಿಸುವ ತಾಂತ್ರಿಕ ವಿಧಾನವನ್ನು ಕಲಿತನು. ಅನಂತರ ಈತನು ಅಮೆರಿಕದಲ್ಲಿ ವಾಣಿಜ್ಯ ಮಟ್ಟದಲ್ಲಿ ಹಣ್ಣನ್ನು ಡಬ್ಬಿಗಳಲ್ಲಿ ಸಂಸ್ಕರಿಸಲು ಕ್ರಿ.ಶ. ೧೮೧೭ರಲ್ಲಿ ಪ್ರಾರಂಭಿಸಿದನು. ಅಮೆರಿಕದ ಆಂತರಿಕ ಯುದ್ಧ, ಬೋಯರ್ ಯುದ್ಧ ಮತ್ತು ಯುರೋಪಿನ ಕ್ರಿ.ಶ.೧೯೧೪ರ ಮಹಾಯುದ್ಧಗಳ ಸಮಯದಲ್ಲಿ ಸಂರಕ್ಷಿಸಿದ ಆಹಾರಕ್ಕೆ ಅಧಿಕ ಪ್ರಮಾಣದ ಬೇಡಿಕೆ ಬಂದಿತು. ಇದರಿಂದ ಡಬ್ಬಿಗಳಲ್ಲಿ ಆಹಾರ ಸಂಸ್ಕರಿಸುವ ಕಾರ್ಖಾನೆಗಳ ಅಭಿವೃದ್ಧಿಗೆ ಅವಕಾಶ ದೊರೆಯಿತು. ಎರಡನೆಯ ಜಾಗತಿಕ ಯುದ್ಧದಿಂದ ಇದಕ್ಕೆ ಇನ್ನೂ ಉತ್ತೇಜನ ದೊರೆಯಿತು. ಡಬ್ಬಿಗಳಲ್ಲಿ ಆಹಾರ ಸಂಸ್ಕರಿಸುವ ಕೈಗಾರಿಕೆಯ ತಾಂತ್ರಿಕ ವಿಧಾನ ಮತ್ತು ವ್ಯಾಪ್ತಿ ಹಿಂದೆಂದೂ ಕಾಣದಷ್ಟು ಮಟ್ಟಿಗೆ ಅಭಿವೃದ್ಧಿಯಾಯಿತು. ಡಬ್ಬಿಯಲ್ಲಿ ಸಂಸ್ಕರಿಸಿದ ಆಹಾರವು ಅನೇಕ ಬಗೆಯಲ್ಲಿ ಮತ್ತು ದರ್ಜೆಯಲ್ಲಿ ದೊರೆಯುತ್ತವೆ. ಸಾಧಾರಣ ೩೫೦ಕ್ಕೂ ಮೇಲ್ಪಟ್ಟು ಡಬ್ಬಿಗಳಲ್ಲಿ ಸಂಸ್ಕರಿಸಿದ ವಿವಿಧ ರೀತಿಯ ಆಹಾರಗಳು ಪ್ರವಾರದಲ್ಲಿವೆ. ಕ್ರಿ.ಶ. ೧೯೩೫ರ ಮೊದಲೇ ಇಂಥ ಆಹಾರ ಉತ್ಪಾದಿಸುವ ಪ್ರಪಂಚದ ಪ್ರಧಾನ ರಾಷ್ಟ್ರಗಳಲ್ಲಿಯ ಧಾರಕಗಳಲ್ಲಿ ತುಂಬಿದ ಒಟ್ಟು ಆಹಾರ ೧೪,೪೪೨ ಮಿಲಿಯ ಪೌಂಡುಗಳೆಂದು ಅಂದಾಜು  ಮಾಡಲಾಗಿದೆ. ಅಮೆರಿಕೆಯ ಸಂಯುಕ್ತ ಸಂಸ್ಥಾನವೊಂದರಲ್ಲಿಯೇ ಕ್ರಿ.ಶ. ೧೯೫೨ರಲ್ಲಿ ಡಬ್ಬಿಗಳಲ್ಲಿ ಸಂಸ್ಕರಿಸಿದ ಎಲ್ಲ ವಿಧದ ಹಣ್ಣು ಮತ್ತು ತರಕಾರಿಗಳ ಉತ್ಪನ್ನ ೭ ಮಿಲಿಯನ್ ಟನ್‌ಗಳೆಂದು ಅಲ್ಲಿಯ ಕ್ರಿ.ಶ. ೧೯೫೪ರ ಕ್ಯಾನೀಂಗ್ ಟ್ರೇಡ್ ಆಲ್ ಮೆನೆಕ್ ತಿಳಿಸುತ್ತದೆ.

ಆಹಾರ ಸಂಸ್ಕರಣೆಯ ತತ್ವಗಳು

ಆಹಾರವನ್ನು ಉಷ್ಣಕ್ರಿಯೆಯಿಂದ ಸಂರಕ್ಷಿಸುವುದರಲ್ಲಿ ಅಡಕವಾಗಿರುವ ಮೂಲತತ್ವಕ್ಕೆ ‘ಸಂಸ್ಕರಣೆ’ ಎನ್ನುತ್ತಾರೆ. ಮೂಲತಃ ಧಾರಕಗಳಲ್ಲಿ ಮೊಹರು ಮಾಡಿದ ಆಹಾರವನ್ನು ವಿವಿಧ ಮಟ್ದಲ್ಲಿ ಸಾಕಷ್ಟು ಸಮಯ ಉಷ್ಣಕ್ರಿಯೆಗೆ ಒಳಪಡಿಸುವುದೇ ಈ ವಿಧಾನವಾಗಿದೆ. ಇದರಿಂದ ಆಹಾರದಲ್ಲಿರುವ ಸೂಕ್ಷ್ಮ ಜೀವಿಗಳು ನಾಶವಾಗುವವು. ಅನಂತರ ಒಳಗೆ ಗಾಳಿಯು ಪ್ರವೇಶಿಸದಂತೆ ಡಬ್ಬಿಯ ಮುಚ್ಚಳ ಮೊಹರು ಮಾಡಬಹುದು. ಸಂಶ್ಕರಿಸುವ ಈ ವಿಧಾನ ಬೇರೆ ಬೇರೆ ಆಹಾರಗಳಿಗೆ ಸಂಬಂಧಿಸಿದಂತೆ ಭಿನ್ನರೀತಿಯದಾಗಿರುತ್ತದೆ.

ಡಬ್ಬಿಯಲ್ಲಿ ಸಂಸ್ಕರಿಸುವ ವಿಧಾನ ಪ್ರಚಾರದಲ್ಲಿ ಬಂದ ಮೊದಲ ದಿನಗಳಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿದ್ದ ಪದ್ಧತಿಯೆಂದರೆ ಡಬ್ಬಿಗಳನ್ನು ಮುಚ್ಚದೆ ಕದಿಯುವ ನೀರಿನ ಶಾಖದಿಂದ ಸಂಸ್ಕರಿಸುವುದು. ಅಪ್ಪರ್ಟ್‌‌ನು ಅಳವಡಿಸಿದ್ದ ವಿಧಾನವೂ ಇದೇ ಆಗಿತ್ತು. ಸಹಜವಾಗಿ ಆಮ್ಲೀಯತೆಯನ್ನು ಹೊಂದಿರುವ ಹಣ್ಣು ಮತ್ತು ರೂಬರ್ಟ್ ಮತ್ತು ಟೊಮೆಟೊ ಇತ್ಯಾದಿ ಅಧಿಕ ಆಮ್ಲೀಯತೆಯ ತರಕಾರಿಗಳನ್ನು ಸಮರ್ಪಕವಾಗಿ ಸಂರಕ್ಷಿಸಲು ಇದು ಉಪಯುಕ್ತ ವಿಧಾನವಾಗಿದೆ. ಏಕೆಂದರೆ, ಇವುಗಳಲ್ಲಿರುವ ಆಹಾರ ಕೆಡಲು ಕಾರಣವಾದ ಬಹುತೇಕ ಸೂಕ್ಷ್ಮ ಜೀವಿಗಳು ಕುದಿಯುವ ನೀರಿನ ಉಷ್ಣತೆಯಲ್ಲಿ ಸುಲಭವಾಗಿ ನಾಶವಾಗುತ್ತವೆ. ಆಮ್ಲ ರಹಿತ ತರಕಾರಿಗಳಲ್ಲಿರುವ ಅಧಿಕ ನೀರೋಧಕ ಶಕ್ತಿಯಿರುವ ಸೂಕ್ಷ್ಮ ಜೀವಿಗಳನ್ನು ನಾಶಪಡಿಸಲು ಹೆಚ್ಚಿನ ಉಷ್ಣತೆಯಲ್ಲಿ ಸಂಸ್ಕರಿಸಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಆಮ್ಲ ರಹಿತ ತರಕಾರಿಗಳ ಸೂಕ್ಷ್ಮ ಜೀವಿಗ ನಾಶಕ್ರಿಯೆ ಪೂರ್ತಿಯಾಗಲು ೫-೬ ಗಂಟೆಗಷ್ಟು ಕಾಲ ನೀರಿನಲ್ಲಿ ಕುದಿಸುತ್ತಿದ್ದರು. ಇಲ್ಲವೇ ಡಬ್ಬಿಯಲ್ಲಿ ಸಂಸ್ಕರಿಸಿದ ಆಹಾರವನ್ನು ೩-೪ ದಿನಗಳ ಕಾಲ ಪ್ರತಿದಿನ ಬಿಸಿ ಮಾಡುತ್ತಿದ್ದರು. ಈ ವಿಧಾನವು ಬಹಳ ಕಷ್ಟಕರವಾದುದು. ಐಸಾಕ್ ವಿನ್‌ಸ್ಲೊ ಎಂಬುವನು ಕ್ರಿ.ಶ. ೧೮೬೧ರಲ್ಲಿ ನೀರನ್ನು ಮುಟ್ಟಿ ಅದರ ಉಷ್ಣತೆಯನ್ನು ೨೫೦ವರೆಗೆ ಹೆಚ್ಚಿಸಲು ಕ್ಯಾಲ್ಸಿಯಂ ಕ್ಲೋರೈಡನ್ನು ಉಪಯೋಗಿಸಿದನು. ಆದರೆ ಇದು ಡಬ್ಬಿಯಲ್ಲಿರುವ ಪದಾರ್ಥದ ಬಣ್ಣವನ್ನು ಕೆಡಿಸಿದುದಲ್ಲದೆ, ಅದನ್ನು ವಿರೂಪಗೊಳಿಸಲು ಕಾರಣವಾಯಿತು. ಬಾಲ್ಟಿಮೋರ್ ಡಬ್ಬಿ ನಿರ್ಮಾಪಕನಾದ ಎ.ಎಲ್.ಶ್ರೀಧರ್ ಎಂಬುವನನ್ನು ಕ್ರಿ.ಶ. ೧೮೭೪ರಲ್ಲಿ ಆವಿ ಒತ್ತಡದಲ್ಲಿ ಬೇಯಿಸುವ ಪಾತ್ರೆ (ಪ್ರೇಶರ್ ಕುಕ್ಕರ್) ಅತವಾ ರಿಟಾರ್ಟ್ ನ್ನು ಕಂಡು ಹಿಡಿದನು. ಈ ಮುಚ್ಚಿದ ಪಾತ್ರೆಯೊಳಗೆ ಅಧಿಕ ಒತ್ತಡದಿಂದ ಉಗಿಯನ್ನು ಒಳಸೇರಿಸಲಾಗುತ್ತಿತ್ತು. ಈ ತಾಂತ್ರಿಕ ವಿಧಾನವು ಈ ದೆಶೆಯಲ್ಲಿ ಒಂದು ಮಹತ್ತರವಾದ ಮುನ್ನಡೆ ಎನ್ನಬಹುದು. ಇದಾದಮೇಲೆ ಈ ಉಪಯುಕ್ತವಾದ ಸಲಕರಣೆಗಳೆ ಅನೇಕ ಸುಧಾರಣೆಗಳನ್ನು ಅಳವಡಿಸಲಾಯಿತು. ಈಗ ಅನೇಕ ಮಾದರಿಯ ಹಾಗೂ ವಿವಿಧ ಗಾತ್ರದ ಒತ್ತಡದಲ್ಲಿ ಬೇಯಿಸುವ ಪಾತ್ರೆಗಳು ವಿವಿಧ ಅವಶ್ಯಕತೆಗಳಿಗನುಗುಣವಾಗಿ ದೊರೆಯುತ್ತವೆ.

ಮೊತ್ತಮೊದಲು ಬಳಕೆಯಲ್ಲಿದ್ದ ನೀರನ್ನು ಮುಚ್ಚಿಡದೆ ಕುದಿಸುವ ಸರಳ ವಿಧಾನವನ್ನು ಸಹ ಅನೇಕ ರೀತಿಯಲ್ಲಿ ಸುಧಾರಿಸಲಾಯಿತು. ಎಡೆಬಿಡದೆ ಬೇಯಿಸುವ ಪಾತ್ರಗಳು ಈ ದಿಶೆಯಲ್ಲಿ ಒಂದು ಮಹತ್ತರವಾದ ಮುನ್ನಡೆಯಾಗಿವೆ. ಹಿಂದಿನ ಕಾಲದ ಬೇಯಿಸುವ ದೊಡ್ಡ ಪಾತ್ರೆ ಉದ್ದವಾದ ಅಂದರೆ ಕೆಲವು ವೇಳೆ ೧೦೦ ಅಡಿಯಷ್ಟು ಉದ್ದವಿದ್ದು, ಕಬ್ಬಿಣದ ಅಥವಾ ಮಣ್ಣಿನ ತೊಟ್ಟಿಯಾಗಿರುತ್ತಿತ್ತು. ಇದರ ಒಳಗಿರುವ ಕುದಿಯುವ ನೀರಿನ ಮೂಲಕ, ಮೊಹರು ಮಾಡಿದ ಡಬ್ಬಿಗಳನ್ನು ಮೇಲ್ಗಡೆ ತೂಗುತ್ತಾ ಚಲಿಸುತ್ತಿರುವ ಬುಟ್ಟಿಗಳಲ್ಲಿ ರವಾನಿಸಲಾಗುತ್ತಿತ್ತು. ಇವುಗಳ ಅತಿಯಾದ ಭಾರ ಮತ್ತು ಇತರ ಅನಾನುಕೂಲತೆಗಳಿಂದಾಗಿ ಮುಂದೆ ಎಡೆಬಿಡದೆ ಚಲಿಸುತ್ತಿರುವ ಬೆಲ್ಟ್‌ಗಳಲ್ಲಿ ಮೇಲೆ ರವಾನಿಸಲಾಗುತ್ತಿತ್ತು. ಇದರಲ್ಲಿ ಡಬ್ಬಿಗಳನ್ನು ಎಡೆಬಿಡದೆ ತಿರುಗಿಸುವ ಮತ್ತು ಕಲಕುವ ಸಲಕರಣೆಯನ್ನು ಅಳವಡಿಸಲಾಗಿತ್ತು. ಸೂಕ್ಷ್ಮ ಜೀವಿ  ನಾಶಪಡಿಸುವ ಈ ಸಾಧನೆಗಳಿಂದ, ಸಂಸ್ಕರಣೆಗೆ ತಗಲುವ ಸಮಯದಲ್ಲಿ ಶೇಕಡಾ ೭೫ರಷ್ಟು ಭಾಗ ಉಳಿತಾಯವಾಗಿರುವುದೆಂದು ಬಿಟ್ಟಿಂಗನು ಅಂದಾಜು ಮಾಡಿದನು. ಈ ರೀತಿಯ ಸೂಕ್ಷ್ಮಜೀವಿ ನಾಶಪಡಿಸುವ ಸಾಧನಗಳು ಸರ್ವ ಸಾಧಾರಣವಾಗಿ ಅನೇಕ ಡಬ್ಬಿಗಳಲ್ಲಿ ಆಹಾರ ಸಂಸ್ಕರಿಸುವ ಆಧುನಿಕ ಕಾರ್ಖಾನೆಗಳಲ್ಲಿ ಉಪಯೋಗದಲ್ಲಿವೆ.

ಪ್ಯಾಕ್ ಮಾಡಲು ಬಳಸುವ ಧಾರಕಗಳು

ಆಹಾರವನ್ನು ತುಂಬಿಡಲು ತವರ ಮತ್ತು ಗಾಜಿನ ಧಾರಕಗಳನ್ನು ತೃಪ್ತಿಕರವಾಗಿ ಉಪಯೋಗಿಸಬಹುದು. ಈ ಮೊದಲು ತಿಳಿಸಿದಂತೆ ಅಪ್ಪರ್ಟ್‌ನ ಗಾಜಿನ ಜಾಡಿ ಅಥವಾ ಸೀಸೆಗಳನ್ನು ಉಪಯೋಗಿಸಿದರೆ ಪೀಟರ್ ಡ್ಯೂರಾಂಟನು ಲೋಹದ ಧಾರಕಗಳನ್ನು ಬಳಸಿದನು. ಇದರ ಅನಂತರ ಈ ಎರಡೂ ಬಗೆಯ ಧಾರಕಗಳಲ್ಲಿ ಮಹತ್ತರವಾದ ಪ್ರಗತಿಯಾಗಿದೆ. ಈಗ ಅಚ್ಚ ಬಿಳಿ ಪ್ಲಿಂಟ್ ಗಾಜಿನ ಜಾಡಿ ಮತ್ತು ಸೀಸೆಗಳು ವಿವಿಧ ಮಾದರಿ ಮತ್ತು ಗಾತ್ರದಲ್ಲಿ ದೊರೆಯುತ್ತವೆ. ಇವುಗಳಿಗೆ ಶಾಖ ನಿರೋಧಕ ಶಕ್ತಿಯಿಲ್ಲದಿರುವುದಲ್ಲದೆ ಇವುಗಳನ್ನು ಸಂಪೂರ್ಣವಾಗಿ ವಾಯು ನಿರೋಧವಾಗಿ ಮೊಹರು ಮಾಡಲು ಸಾಧ್ಯವಿದೆ.

ಲೋಹದ ತಗಡಿನಿಂದ ತಯಾರಿಸಿದ ಮೇಲ್ಭಾಗ ತೆರೆದಿರುವ ಅಥವಾ ನೈರ್ಮಲ್ಯಯುಕ್ತ ತವರ ಡಬ್ಬಿಗಳಲ್ಲಿ ತವರದ ತೆಳುವಾದ ಲೇಪನವಿರುತ್ತದೆ. ಹಿಂದಿನ ಕಾಲದಲ್ಲಿ ಇದಕ್ಕಾಗಿ ಡಬ್ಬಿಗಳನ್ನು ಕೈಯಿಂದಲೇ ತಯಾರಿಸುತ್ತಿದ್ದರು. ಡಬ್ಬಿಯ ಹೊರ ಮೈ ಭಾಗವನ್ನು ಹೆಗ್ಗತ್ತರಿಯಿಂದ ಮತ್ತು ಮುಚ್ಚಳವನ್ನು ಅಚ್ಚಿನಲ್ಲಿ ಕತ್ತರಿಸಿ ಅನಂತರ ಈ ವಿವಿಧ ಭಾಗಗಳನ್ನು ಬೆಸುಗೆಯಿಂದ ಜೋಡಿಸಿ ಡಬ್ಬಿಯನ್ನು ಸಿದ್ಧಪಡಿಸಲಾಗುತ್ತಿತ್ತು. ‘ರಂಧ್ರ ಮತ್ತು ಮೇಲ್ಮುಚ್ಚಳ ಡಬ್ಬಿ’ ಇದರ ಅನಂತರ ಪ್ರಚಾರಕ್ಕೆ ಬಂದಿತು. ಇದರಲ್ಲಿ ಡಬ್ಬಿಯ ಮೇಲ್ಮುಚ್ಛಳದ ಅರ್ಧದಷ್ಟು ಭಾಗವನ್ನು ವೃತ್ತಾಕಾರವಾಗಿ ಕತ್ತರಿಸಿ, ರಂಧ್ರ ಕೊರೆದು ಇದಕ್ಕೆ ಸರಿ ಹೊಂದುವ ಒಂದು ವೃತ್ತಾಕಾರದ ದುಂಡು ಮುಚ್ಚಳವನ್ನು ಅಳವಡಿಸಲಾಗುತ್ತಿತ್ತು. ಡಬ್ಬಿಯಲ್ಲಿ ಆಹಾರ ತುಂಬಿ ಈ ವೃತ್ತಾಕಾರದ ದುಂಡು ಮುಚ್ಚಳವನ್ನು ಇಟ್ಟು ಬೆಸುಗೆ ಮಾಡಬೇಕು. ಮುಚ್ಚಳದ ಮಧ್ಯಭಾಗದಲ್ಲಿ ಒಂದು ಸಣ್ಣ ರಂಧ್ರವಿರುತ್ತಿತ್ತು. ಡಬ್ಬಿಯನ್ನು ಮೊದಲು ಬಿಸಿ ಮಾಡಿ, ಅದರೊಳಗಿರುವ ಗಾಲಿಯನ್ನು ಹೊರತೆಗೆದು ಅನಂತರ ಈ ರಂಧ್ರವನ್ನು ಮುಚ್ಚಬೇಕು. ಇಂಥ ಡಬ್ಬಿಗಳಲ್ಲಿ ಹೆಚ್ಚು ಕಾಲ ಹಣ್ಣು, ತರಕಾರಿ, ಮಾಂಸ ಇವೇ ಮೊದಲಾದ ಆಹಾರ ಪದಾರ್ಥಗಳನ್ನು ಸಂಸ್ಕರಿಸಬಹುದು. ಈಗಿನ ಆಧುನಿಕ ನಿರ್ಮಲವಾದ ಡಬ್ಬಿಗಳು ಹಿಂದಿನ ಡಬ್ಬಿಗಳ ಬದಲಾಗಿ ಬಂದವು. ಇವುಗಳಲ್ಲಿ ಬದಿ ಅಂಚುಗಳನ್ನು ಸೇರಿಸುವಲ್ಲಿ ಸ್ವಲ್ಪ ಬೆಸುಗೆ ಮಾಡಿದ್ದನ್ನು ಬಿಟ್ಟರೆ ಬೇರೆ ಎಲ್ಲೂ ಬೆಸುಗೆ ಇರುವುದಿಲ್ಲ. ಡಬ್ಬಿಯ ಮೇಲಿನ ಮತ್ತು ಕೆಳಗನ ಮುಚ್ಚಳ ಅಥವಾ ಅಂಚಿಗೆ ಕಾಗದ ಇಲ್ಲವೇ ರಬ್ಬರ್ ಗೇಸ್ಕೇಟ್‌ನ್ನು ಡಬ್ಬಿಯ ಸುತ್ತಲೂ ಹೊಂದಿಸಿ ಗಾಳಿ ಸೇರಲು ಅವಕಾಶವಿಲ್ಲದ ರೀತಿಯಲ್ಲಿ ಮೊಹರು ಮಾಡುವ ಯಂತ್ರದಿಂದ ಮುಚ್ಚಲಾಗುತ್ತಿತ್ತು. ಈ ರೀತಿಯ ನಿರ್ಮಲವಾದ ಅಥವಾ ಮೇಲೆ ತೆರೆದಿರುವ ಡಬ್ಬಿಗಳ ಒಂದು ಮಹತ್ತರವಾದ ಉಪಯುಕ್ತತೆ ಅಂದರೆ, ಅದರ ಅಗಲವಾದ ಬಾಯಿಯ ಮೂಲಕ ಎಲ್ಲ ಬಗೆಯ ಆಹಾರ ಪದಾರ್ಥಗಳನ್ನು ಜಜ್ಜದೆ ಒಳಗೆ ತುಂಬುವುದು. ಇಂಥ ಡಬ್ಬಿಗಳು ಮಿಲಿಯಗಟ್ಟಲೆಯಲ್ಲಿ ಸ್ವಯಂ ಚಾಲಿತ ಯಂತ್ರಗಳಿಂದ ಉತ್ಪಾದನೆಯಾಗುತ್ತವೆ.

ಇತ್ತೀಚೆಗೆ ಅನೇಕ ಬಗೆಯ ಸಂಸ್ಕರಿಸಿದ ಆಹಾರವನ್ನು ತುಂಬಿಡಲು ಕಪ್ಪುಕಬ್ಬಿಣದ ತಗಡಿನಿಂದ ತಯಾರಿಸಿದ ಡಬ್ಬಿಗಳನ್ನು ಬಹು ತೃಪ್ತಿಕರವಾಗಿ ಉಪಯೋಗಿಸಲಾಗುತ್ತಿದೆ. ಇದರ ವಿಕಾಸದ ಮೂಲವು ಸಹ ಇತರ ಅನೇಕ ವಸ್ತುಗಳಂತೆ ಎರಡನೆಯ ಮಹಾಯುದ್ಧದ ಕಾಲದಲ್ಲಿ ಉಂಟಾದ ತವರದ ಕೊರತೆಯಿಂದಾಯಿತು. ಕಪ್ಪು ಬಣ್ಣದ ತಗಡಿನಿಂದ ತಯಾರಿಸಿದ ಡಬ್ಬಿಯ ಎರಡೂ ಬದಿಗಳಿಗೂ ಒಂದು ವಿಶೇಷ ರೀತಿಯ ಅರಗಿನ ಲೇಪನವಿರುತ್ತದೆ. ಇಂಗ್ಲೆಂಡಿನಲ್ಲಿ ಇದರ ಅಭಿವೃದ್ಧಿಗಾಗಿ ಬಹಳ ಕೆಲಸ ನಡೆದಿದೆ. ಈ ಪುಸ್ತಕದ ಲೇಖಕರಿಗೆ ಮೆಟಲ್ ಬಾಕ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್, ಕಲ್ಕತ್ತಾ ಇವರು ಇದೇ ರೀತಿಯ ಡಬ್ಬಿಯನ್ನು ಒದಗಿಸಿದರು. ಇದನ್ನುಪಯೋಗಿಸಿ ನಡೆಸಿದ ಸಂಶೋಧನೆಯಿಂದ ಇವು ಜಾಮ್, ಜೆಲ್ಲಿ, ಮಾರ್ಮಲೆಡ್ ಮತ್ತು ಪ್ರಿಸರ್ವನಂಥ ಆಹಾರಗಳನ್ನು ತುಂಬಿಡಲು ಉಪಯುಕ್ತವಾಗಿವೆ ಎಂದು ತಿಳಿದು ಬಂದಿದೆ.

ತವರ ಮತ್ತು ಗಾಜಿನ ಧಾರಕಗಳಲ್ಲದೆ ಹೊಸ ಮಾದರಿಯ ಇನ್ನೂ ಕೆಲವು ಧಾರಕಗಳು ಪ್ರಚಾರದಲ್ಲಿವೆ. ಇವುಗಳಲ್ಲಿ ಪ್ಲೈವುಡ್ ಧಾರಕವೂ ಸೇರಿದೆ. ಇದನ್ನು ಇತ್ತೀಚೆಗೆ ಹಾಲಿನ ಉತ್ಪನ್ನಗಳಾದ ಬೆಣ್ಣೆ, ಸಿಹಿಹಾಲು, ಹಾಲಿನ ಪುಡಿ ಮತ್ತು ಲೇಮನ್ ಚೀಸ್, ಸಣ್ಣ ಚೂರಾಗಿ ಕತ್ತರಿಸಿದ ಮಾಂಸ (ಕೈಮ), ಮಿಠಾಯಿ, ಇವೇ ಮೊದಲಾದ ಆಹಾರಪದಾರ್ಥಗಳನ್ನು ತುಂಬಿಡಲು ಬಹುತೃಪ್ತಿಕರವಾಗಿ ಉಪಯೋಗಿಸಲಾಗುತ್ತಿದೆ. ಇಂಥ ಧಾರಕಗಳನ್ನು ಜಾಮ್, ಜೆಲ್ಲಿ ಮತ್ತು ಮಾರ್ಮಲೇಡ್ (ಮುರಬ್ಬ) ತುಂಬಿಡಲೂ ಉಪಯೋಗಿಸಬಹುದು. ಇತ್ತೀಚೆಗೆ ಸುಧಾರಿಸಿದ ಶೋಧಿಸಿದ ಅರಗಿನ ತೆಲು ಪದರಿನ ಪ್ಲಾಸ್ಟಿಕ್ ಧಾರಕಗಳನ್ನು ತಯಾರಿಸಿ, ಅದರ ಬಗ್ಗೆ ಒಂದು ಸ್ವಾಮ್ಯ (ಪೇಟೆಂಟ್) ವನ್ನು ನಮ್ಮ ದೇಶದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಯ ನಿರ್ದೇಶಕರು ಪಡೆದಿರುತ್ತಾರೆ.  ಈ ಧಾರಕಗಳು ಹಣ್ಣು ಮತ್ತು ತರಕಾರಿಗಳ ಉತ್ಪನ್ನಗಳನ್ನು ಒಣಗಿದ ಮತ್ತು ಒಣಗಿದ ಸ್ಥಿತಿಯಲ್ಲಿ ತುಂಬಿಡಲು ಉಪಯುಕ್ತವಾಗಿವೆ. ಆದರೆ ಇವು ಈಗ ಬಳಕೆಯಲ್ಲಿರುವ ತವರದ ಧಾರಕಗಳ ಬದಲಾಗಿ ಎಲ್ಲ ರೀತಿಯ ಆಹಾರಗಳನ್ನು ತುಂಬಿಡಲು ಸಂಪೂರ್ಣವಾಗಿ ಬಳಸಬಹುದೆಂಬುದನ್ನು ಈಗಲೇ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ. ಅಲ್ಯೂಮಿನಿಯಂ ಮತ್ತು ಬೆಳ್ಳಿಯ ಲೇಪದ ಧಾರಕಗಳನ್ನು ಸಹ ಕೆಲವು ರೀತಿಯ ಆಹಾರ ತುಂಬಿಡಲು ಬಳಸಲಾಗುತ್ತದೆ. ಇಷ್ಟಾದರೂ ಈ ದೆಸೆಯಲ್ಲಿ ತವರದ ಧಾರಕಗಳೇ ಈವರೆಗೆ ಅಗ್ರಸ್ಥಾನವನ್ನು ಪಡೆದಿವೆ ಎನ್ನಬಹುದಾಗಿದೆ.

ಇತ್ತಿಚೀನ ವರ್ಷಗಳಲ್ಲಿ ನಮ್ಮ ದೇಶದಲ್ಲಿರುವ ಮೆಟಲ್ ಬ್ಯಾಕ್ಸ್ ಸಂಸ್ಥೆಯವರು ಒಂದು ನವನವೀನ ರೀತಿಯ ದಾರದಿಂದ ತೆಗೆಯುವ, ಅನೇಕ ಭಾಗಗಳಿಂದ ಜೊಡಿಸಲ್ಪಟ್ಟ ಧಾರಕವನ್ನು ತಯಾರಿಸಿದ್ದಾರೆ. ಇದರ ಮೈಗೆ ಹೊಂದಿಸಿರುವ ಸುತ್ತುಪಟ್ಟಿಯನ್ನೇ ತೀವ್ರವಾಗಿ ಎಳೆದು ಈ ಧಾರಕದ ಮುಚ್ಚಳವನ್ನು ಸುಲಭವಾಗಿ ತೆಗೆಯಬಹುದು. ಈ ರೀತಿಯ ಧಾರಕಗಳು ಕೇವಲ ಮಕ್ಕಳ ಮತ್ತು ದುರ್ಬಲರ ಆಹಾರ, ಕಸ್ಟರ್ಡ್ ಪುಡಿ, ಮಿಠಾಯಿ, ಬಿಸ್ಕಟ್ ಮುಂತಾದವುಗಳನ್ನು ತುಂಬಲು ಸೂಕ್ತವಾಗಿರುವವೆಂದು ಹೇಳುತ್ತಾರೆ.

ಡಬ್ಬಿಯಲ್ಲಿ ಆಹಾರ ಸಂರಕ್ಷಣೆ ಮಾಡುವುದರಲ್ಲಿ ಒಂದು ಹೊಸ ಬಗೆಯ ಪ್ರಗತಿ ಎಂದರೆ ಸ್ವತಹ ಬಿಸಿಯಾಗುವ ಡಬ್ಬಿಗಳು. ಈ ರೀತಿಯ ಡಬ್ಬಿಗಳನ್ನು ಅನೇಕ ಮಿಲಿಯಗಟ್ಟಲೆಯಲ್ಲಿ ವಿಶೇಷವಾಗಿ ಬ್‌ಇಟಿಷ್ ಮತ್ತು ಅಮೆರಿಕದ ಕಮ್ಯಾಂಡೊ ದಾಳಿಗಳಲ್ಲಿ ಮುನ್ನುಗ್ಗುವ ಸೈನಿಕರು ಉಪಯೋಗಿಸುವರು. ಡಬ್ಬಿಯು ತನ್ನಟಕ್ಕೆ ಬಿಸಿಯಾಗುವ ಈ ತತ್ವ ಹೊಸದೇನಲ್ಲ. ಸ್ಥೂಲವಾಗಿರುವ ಮತ್ತು ಅನಿಲ ಸ್ಥಿತಿಯಲ್ಲಿರದ ಒಂದು ಸಂಯೋಗದ ಆವಿಷ್ಕಾರದ ಅನಂತರ ಬಳಕೆಯಲ್ಲಿ ನೈಜತೆಯನ್ನು ಪಡೆಯಿತೆನ್ನಬಹುದು. ಈ ಸಂಯೋಗವು ತಕ್ಷಣ ಉರಿದು ಡಬ್ಬಿಯ ಒಳಗಿರುವ ಪದಾರ್ಥದ ಉಷ್ಣತೆಯನ್ನು ೪-೫ ನಿಮಿಷಗಳಲ್ಲಿ ೫೦ಸೆ. (ಸೆಲ್ಸಿಯಸ್) ಹೆಚ್ಚಿಸುತ್ತದೆ. ಸ್ವತಃ ಬಿಸಿಯಾಗುವ ಈ ಡಬ್ಬಿಯಲ್ಲಿ ಕ್ಯಾಲ್ಸಿಯಂ ಸಿಲಿಸೈಡ್ ಜೊತೆ  FeO ಅಥವಾ FeO ನಂಥವುಗಳ ಸಂಯೋಗವಿರುತ್ತದೆ.  ಇದನ್ನು ಡಬ್ಬಿಯ ಒಳಭಾಗದಲ್ಲಿ ಹೊಂದಿಸಿರುವ ಮಧ್ಯನಳಿಕೆಯಲ್ಲಿಡಬೇಕು. ಸಿಗರೇಟಿನ ಹೊತ್ತಿಸಿದ ತುದಿಯಿಂದ ಇಲ್ಲವೇ ಬೆಂಕಿಕಡ್ಡಿಯಿಂದ ಪ್ರೈಮರ್ ಮತ್ತು ಫ್ಯೂಸಿನ ಮುಖಾಂತರ ಇದನ್ನು ಉರಿಸಬೇಕು. ಇದರ ಪ್ರತಿಕ್ರಿಯೆಯಿಂದ ಹುಟ್ಟಿದ ಶಾಖ ಡಬ್ಬಿಯ ಒಳಗಿರುವ ಪದಾರ್ಥಗಳನ್ನು ಬಹುಬೇಗನೇ ಬಿಸಿ ಮಾಡುವುದು. ಈ ರೀತಿಯ ಡಬ್ಬಗಳಲ್ಲಿ ಈಗ ದ್ರವ ಪದಾರ್ಥಗಳಾದ ತಿಳಿಸಾರಿನಂತಹ ಸೂಪ್, ಇಲ್ಲವೇ ಕೊಕೊ ಮುಂತಾದವುಗಳನ್ನು ತುಂಬಬಹುದು. ಇಂತಹ ಪದಾರ್ಥಗಳ ಅವಶ್ಯಕತೆಯು ವಾಯುಯಾನ, ವಿಹಾರಕ್ಕೆ ಹೋಗುವಾಗ ಮತ್ತು ಇತರ ಬಾಹ್ಯ ಚಟುವಟಿಕೆಗಳಲ್ಲಿ ಕಂಡು ಬರುತ್ತದೆ.