ಖ್ಯಾಲ ಗಾಯನ ಶೈಲಿ ಭಾರತೀಯ ಶಾಸ್ತ್ರೀಯ ಸಂಗೀತದ ಉಳಿದ ಎಲ್ಲ ಶೈಲಿಗಳಿಗಿಂತ ಹೆಚ್ಚು ಜನಪ್ರಿಯ ಶೈಲಿಯಾಗಿದೆ. ಪ್ರತಿಯೊಂದು ಸಂಗೀತ ಸಭೆ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು, ಆಕಾಶವಾಣಿ, ದೂರದರ್ಶನದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು, ವಿಶ್ವವಿದ್ಯಾಲಯದ ಪಠ್ಯಕ್ರಮಗಳಲ್ಲೂ ಖ್ಯಾಲ ಗಾಯನಕ್ಕೆ ಪ್ರಮುಖ ಸ್ಥಾನವಿದೆ. ಹೀಗೆ ಖ್ಯಾಲ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಅವಿಭಾಜ್ಯ ಅಂಗವಾಗಿದೆ.

‘‘‘ಖ್ಯಾಲ’’’’ ಶಬ್ದ ಫಾರ್ಸಿ ಭಾಷೆಯದು. ಅದರ ಅರ್ಥ ‘‘ಕಲ್ಪನೆ’’ ಎಂದಾಗುತ್ತದೆ. ಆದರೆ ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಹಲವಾರು ಅರ್ಥಗಳು ಹೊರಹೊಮ್ಮುತ್ತವೆ. ಯಾವುದೋ ಒಂದು ಹಳೆಯ ವಿಷಯದ ನೆನಪು (ಸ್ಮೃತಿ) ಮನಸ್ಸಿನಲ್ಲಿ ಉತ್ಪನ್ನವಾಗುವ ಯಾವುದೋ ಒಂದು ಹೊಸ ವಿಚಾರ, ಚಿಂತನೆ, ಧ್ಯಾನ, ಕಲ್ಪನೆ ಮತ್ತು ವಿಚಾರ ಇತ್ಯಾದಿಗಳ ಹಲವಾರು ಅರ್ಥಗಳು ನಮಗೆ ಸಿಗುತ್ತವೆ.

ಖ್ಯಾಲ ಪರಿಭಾಷೆ : ಯಾವ ಒಂದು ಗೀತ ಪ್ರಕಾರದಲ್ಲಿ ರಾಗ-ನಿಯಮಗಳ ಪಾಲನೆ ಮಾಡುತ್ತ ಆಲಾಪ, ತಾನ, ಬೋಲತಾನ, ಸರಗಮ್, ಖಟಕಾ, ಮುರ್ಕಿ, ಮುಂತಾದ ವಿಭಿನ್ನ ಅಲಂಕಾರಗಳನ್ನು ಸೇರಿಸಿ ಗಾಯಕ ತನ್ನ ಭಾವನೆಯನ್ನು ಹೊಸ ಹೊಸ ಕಲ್ಪನೆಯನ್ನು ತಬಲಾದೊಂದಿಗೆ ಸಜ್ಜುಗೊಳಿಸಿ, ಸಿದ್ಧಮಾಡಿ ಇಡುತ್ತಾನೋ, ಆಗ ಅದನ್ನು ‘‘ಖ್ಯಾಲ’’ ಎನ್ನಲಾಗುತ್ತದೆ.

ಖ್ಯಾಲ ಗಾಯನ ಶೈಲಿಯಲ್ಲಿ ‘‘‘ಕಲ್ಪನೆ’’’ಗೆ ತುಂಬಾ ಮಹತ್ವವಿದೆ.  ನವನವೀನ ಕಲ್ಪನೆಗಳು, ಅಂದರೆ ಹೊಸ ಸ್ವರ ಸಮುದಾಯ ಅಥವಾ ಸ್ವರ-ಸಂಯೋಜನೆ ಮಾಡದೇ ಇದ್ದಾಗ ಗಾಯಕ ಯಾಂತ್ರಿಕನಾಗುತ್ತಾನೆ. ಗಾಯನ ಸೊರಗುತ್ತದೆ. ಸ್ವರವನ್ನು ಹಚ್ಚುವಿಕೆಯಲ್ಲಿ ರಾಗದ ಆಕರ್ಷಣೆ ಕೇಂದ್ರೀಕೃತವಾಗಿರುತ್ತದೆ. ಕೇವಲ ಲೆಕ್ಕಾಚಾರದ ಆಹಾರದ ಮೇಲೆ ಆಲಾಪ, ಬೋಲತಾನ, ತಾನಗಳು ಮುಂತಾದವುಗಳಿಂದ ಖ್ಯಾಲ ಗಾಯನದ ಗಾಯಕಿ ತುಂಬಿ ಬರುವುದಿಲ್ಲ. ಸ್ವರ ಪ್ರಸ್ತುತಪಡಿಸುವಲ್ಲಿ ರಾಗದ ವಿಭಿನ್ನ ಅಂಗಗಳನ್ನು ಕಲಾತ್ಮಕವಾಗಿ, ಕಲ್ಪನೆಯ ಆಸರೆಯಲ್ಲಿ ಭಾವ ತುಂಬಿ ಹಾಡಿದಾಗಲೇ ಶ್ರೋತೃಗಳಿಗೆ ಹಾಗೂ ಸ್ವತಃ ಗಾಯಕನಿಗೆ ಆತ್ಮಾನಂದದ ಅನುಭೂತಿಯಾಗುತ್ತದೆ. ಖ್ಯಾಲ ಗಾಯನದಲ್ಲಿ ಸ್ವರ, ಲಯ, ಶಬ್ದ, ತಾನಗಳನ್ನು ಸಾರ್ಥಕಗೊಳಿಸಲು ಸಫಲ ಕಲಾ ಪ್ರದರ್ಶನಕ್ಕಾಗಿ ಗಾಯಕನ ಕಲ್ಪನೆಯೇ ಇವೆಲ್ಲದರ ನಡುವೆ ಕೆಲಸ ಮಡುತ್ತದೆ. ಹಾಗೂ ಗಾಯನದಲ್ಲಿ ನವೀನತೆಯ ಭಾವನೆ ಮೂಡಿಸುತ್ತದೆ.

ಸಂಗೀತ ಪೂರ್ಣರೂಪದಲ್ಲಿ ಗಾಯಕ/ವಾದಕ/ನರ್ತಕನ ವ್ಯಕ್ತಿತ್ವ, ಅನುಭವ, ಬೌದ್ಧಿಕ ಮಟ್ಟ ಹಾಗೂ ಕುಶಲತೆಯನ್ನು ಒಳಗೊಂಡಿದೆ. ಕಲಾಕಾರನೇ  ಶಬ್ದಗಳ, ಭಾವನೆಗಳ ಅನುಸಾರ ಸ್ವರ, ರಾಗ,ತಾಲ ಮುಂತಾದವುಗಳ ಕಲ್ಪನೆ ಮಾಡಿ ಸುಂದರ ಹಾಗೂ ಮನೋರಂಜಕ ಪ್ರಸ್ತುತೀಕರಣದ ಮಾರ್ಗ ಹುಡುಕಬೇಕಾಗುತ್ತದೆ. ಇದೇ ಕಾರಣದಿಂದ ಒಂದೇ ರಾಗವನ್ನು ಹಲವಾರು ಗಾಯಕರು ಪ್ರಸ್ತುತಪಡಿಸಿದ್ದರೂ ಪ್ರತಿಯೊಬ್ಬರ ಗಾಯನದಲ್ಲಿ ಅದರದೇ ಆದ ವಿಶೇಷತೆ ಇರುತ್ತದೆ.

‘ಖ್ಯಾಲ’’ ಗಾಯನದ ಉತ್ಪತ್ತಿಯ ವಿಷಯದಲ್ಲಿ ವಿಭಿನ್ನ ಮತಗಳಿವೆ. ಖಾಲ ಗಾಯನದ ಜನ್ಮ ಯಾವಾಗ ಹಾಗೂ ಯಾವ ಪರಿಸ್ಥಿತಿಯಲ್ಲಿ ಆಯಿತು ಹಾಗೂ ಖಾಲ ವಿಕಾಸಕ್ಕಾಗಿ ಏನೇನು ಪ್ರಯತ್ನಗಳು ನಡೆದವು ಎಂಬ ಬಗ್ಗೆ ಸಂಗೀತ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಇದಕ್ಕೆ ಕಾರಣ ಎನೆಂದರೆ ಪ್ರಾಚೀನ ಹಾಗೂ ಮಧ್ಯಾಕಾಲೀನ ಗ್ರಂಥಗಳಲ್ಲಿ ಖಾಲ ಗಾಯಕಿಯ ಬಗ್ಗೆ ಯಾವುದೇ ಉಲ್ಲೇಖ ಲಭ್ಯವಿಲ್ಲ. ಆದಾಗ್ಯೂ ಮಧ್ಯಕಾಲೀನ ಯುಗದಲ್ಲೇ ಖ್ಯಾಲ ಜನ್ಮವಾಯಿತು ಎಂದು ಸಾಮಾನ್ಯವಾಗಿ ಹೆಚ್ಚಿನ ವಿದ್ವಾಂಸರು ಒಮ್ಮತಕ್ಕೆ ಬಂದಿದಾರೆ.

ಆಧುನಿಕ ಖ್ಯಾಲ ಗಾಯನವು ದ್ರುಪದ ಗಾಯನವನ್ನು ಆಧರಿಸಿದ್ದರೂ ದ್ರುಪದ ಗಾಯನದ ನಿಯಮಗಳಿಗಿಂತ ಭಿನ್ನವಾಗಿ ತನ್ನ ಗುಣಗಳನ್ನು ಪ್ರಕಟಿಸಿ, ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಸಂಗೀತದಲ್ಲಿ ಯಾವುದೇ ಶೈಲಿಯ ಹುಟ್ಟು ತನಗಿಂತ ಮೊದಲು ಇದ್ದ ಶೈಲಿಯನ್ನು ಆಧರಿಸಿ, ಇಲ್ಲವೇ ಪ್ರಾಚೀನ ಹಾಗೂ ಆಧುನಿಕ ಸಂಗೀತದ ಮಿಶ್ರಣದಿಂದ ಅಥವಾ ಪ್ರಾಚೀನ ಶೈಲಿಗಳ ವಿಕಾಸ ಮಾತ್ರದಿಂದ ಆಗುತ್ತದೆ. ಇದೇ ಪ್ರಕಾರ ಖಾಲ ಶೈಲಿಯ ಉಗಮ ಪ್ರಾಚೀನ ಕಾಲದಲ್ಲಿ ಪ್ರಚಲಿತವಿದ್ದ ಗೀತಗಳಿಂದ ಆಗಿದೆ. ಕಾಲಾಂತರದಲ್ಲಿ ಪ್ರಬಂಧ ದ್ರುಪದ, ಕವ್ಹಾಲಿ ಹೀಗೆ ಹಲವಾರು ಶೈಲಿಗಳಲ್ಲಿ ರೂಪ ಪಡೆದುಕೊಳ್ಳುತ್ತ ಇಂದು ನೆಮ್ಮೆದುರು ಇರುವ ಪ್ರಚಲಿತ ರೂಪದಲ್ಲಿ ಇದ್ದಂತಿದೆ.

15 ರಿಂದ 18ನೇ ಶತಮಾನದವರೆಗೆ ‘ದ್ರುಪದ’ ಗಾಯನ ಪ್ರಚಾರದಲ್ಲಿತ್ತು. ಸಮಯ ಕಳೆದಂತೆ ಈ ಗಾಯನದಲ್ಲಿ ಪರಿವರ್ತನೆ ತರುವುದು ಅವಶ್ಯವಾಯಿತು. ಆಗ ಒಂದು ಹೊಸ ಪ್ರಕಾರದ ಗಾಯನ ಶೈಲಿಯ ಆವಿಷ್ಕಾರ ಮಾಡಬೇಕೆಂಬ ಪ್ರಯತ್ನಗಳು ನಡೆದವು. ಆಗ ಮೊಗಲಕಾಲದ ‘ದ್ರುಪದ’ವನ್ನೇ ‘ಖ್ಯಾಲ’ ಆಗಿ ಪರಿವರ್ತಿಸಲಾಯಿತು ಎಂದು ಕೆಲವು ವಿದ್ವಾಂಸರ ಅಭಿಪ್ರಾಯ. ದ್ರುಪಾದಲ್ಲಿರುವ ಸರಗಮಗಳೇ ಖ್ಯಾಲ ಗಾಯನದಲ್ಲಿ ಇವೆ, ಖ್ಯಾಲದ ಆವಿಷ್ಕಾರದಲ್ಲಿ ಯಾವುದೇ ಹೊಸ ಕಲ್ಪನೆ ಇಲ್ಲ, ಇನ್ನೂ ಕೆಲವು ವಿದ್ವಾಂಸರ ಹೇಳಿಕೆ ಏನೆಂದರೆ ಭರತಮುನಿಯು ಗಾಂಧರ್ವ ಹಾಗೂ ಗಾನಾ ಮೂರು ತತ್ವಗಳನ್ನು ಹೇಳಿದ್ದಾನೆ. ಅವು ಸ್ವರ, ತಾಲ, ಪದಗಳಾಗಿವೆ. ಈ ಮೂರರ ಮಿಶ್ರಣದಿಂದ ಖ್ಯಾಲ ಉತ್ಪತ್ತಿಯಾಯಿತು ಎನ್ನುತ್ತಾರೆ.

13ನೇ ಶತಮಾನದಲ್ಲಿ ಅಮೀರ ಖುಸ್ರು ‘ಖ್ಯಾಲ’ದ ಆವಿಷ್ಕಾರ ಮಾಡಿದನೆಂದು ಹಲವು ವಿದ್ವಾಂಸರ ಅಭಿಪ್ರಾಯವಾಗಿದೆ. ಆದರೆ ಅದಕ್ಕೂ ಮೊದಲು ಸಂತ ನಾಮದೇವರ ಕಾವ್ಯ ರಚನೆಯಲ್ಲಿ ಖ್ಯಾಲದ ವರ್ಣನೆ ಇದೆ. ಸಂತ ನಾಮದೇವ 13  ನೇ ಶತಾಬ್ದಿಯಲ್ಲಿ ಆಗಿಹೋದವರು. ಅವರು ಅಮೀರ ಋಸ್ರುನ ಸಮಕಾಲೀನವರು. ಆದ್ದರಿಂದ ಖ್ಯಾಲ ಅಮೀರ ಋಸ್ರುಗಿಂತ ಮೊದಲೇ ಪ್ರಾರಂಭವಾಗಿತ್ತು. ಹಾಗೂ ಅದು ಅಮೀರ ಋಸ್ರುನ ಕಾಲದಲ್ಲಿ ಮಹಾರಾಷ್ಟ್ರದವರೆಗೂ ಪ್ರಚಾರ ಪಡೆದಿತ್ತು ಎಂಬ ಮಾತು ಸ್ಪಷ್ಟವಾಗುತ್ತದೆ ಎಂದು ಎಂದು ಇನ್ನೊಬ್ಬ ವಿದ್ವಾಂಸ ಎಂ.ವಿ.ಧೋಂಡರ ಅಭಿಪ್ರಾಯವಾಗಿದೆ.

ರೂಪಕಲಾಪ್ತಿಯಿಂದ ಖ್ಯಾಲಗಾಯಕಿಯ ನಿರ್ಮಿತ ಆಯಿತೆಂದು ಠಾಕೂರ ಜಯದೇವಸಿಂಹರ ಅಭಿಪ್ರಾಯವಾಗಿದೆ.

ಕೆಲವು ವಿದ್ವಾಂಸರ ಹೇಳಿಕೆಯಂತೆ ಕವ್ಹಾಲಿ ಗಾಯನ ಪ್ರಕಾರದಿಂದ ಖ್ಯಾಲ ಗಾಯನದ ಉದಯವಾಯಿತು.

ಅಮೀರ ಖುಸ್ರುನಿಂದ ಆವಿಷ್ಕರಿಸಿದ ಖ್ಯಾಲ ಸಂಗೀತ ಮುನ್ನಡೆಯಂತೆ 15ನೇ ಶತಮಾನದಲ್ಲಿ ಔನಪುರದ ಸುಲ್ತಾನ ಹುಸೇನ ಶರ್ಕಿ ಬೇರೆ ಬೇರೆ ರಾಗ ತಾಲ ಹಾಗೂ ಕವಿತೆಗಳ ರಚನೆ ಮಾಡಿ ಜನಪ್ರಿಯಗೊಳಿಸಿದನು. ಹೀಗಾಗಿ ಅವನೇ ಖ್ಯಾಲ ಗಾಯಕಿಯ ಪ್ರವರ್ತಕನೆಂದು ತಿಳಿಯಲಾಗಿದೆ. ಅವನು ಔನಪುರಿ, ತೋಡಿ, ಸಿಂಧುಭೈರವಿ, ಸಿಂಧೂರಾ, ರಸೀಲಿತೋಡಿ ಮುಂತಾದ ಹಲವು ರಾಗಗಳನ್ನು ನಿರ್ಮಾಣ ಮಾಡಿ ಖ್ಯಾಲದ ಪ್ರಚಾರ, ಪ್ರಸಾರ ಮಾಡಿದನು ಎಂದೂ ಎನ್ನುತ್ತಾರೆ. ರಾಜ ಬಾಜ ಬಹದೂರ ಕೂಡ ಖ್ಯಾಲ ಗಾಯೈಯ ಪ್ರಚಾರದಲ್ಲಿ ತನ್ನ ಕೊಡುಗೆ ನೀಡಿದಾನೆ. ‘ಬಾಜರ ವಾಣಿ’ ಎಂಬ ಖ್ಯಾಲ ರಾಜಾ ಬಾಜಬಹದ್ದೂರನ ಆವಿಷ್ಕಾರ ಎಂದು ಹೇಳುತ್ತಾರೆ.

‘ಸಂಗೀತ’ ಒಂದು ಸದಾ ಪರಿವರ್ತನಶೀಲ ಕಲೆ ಆಗಿದ್ದು. ಇಲ್ಲಿ ಯಾವಗಲೂ ಹೊಸ ಕಲ್ಪನೆಗಳ ಉದಯವಾಗುತ್ತಿರುತ್ತದೆ. ಅವು ಕೇಳಲು ಮಧುರ ಸುಂದರ ಹಾಗೂ ಜನಪ್ರಿಯವಾಗಿರುತ್ತದೆ. ಅನೇಕ ಶತಮಾನಗಳಿಂದ ಸಂಗೀತ ನಡೆದು ಬಂದಿದೆ. ಖ್ಯಾಲ ಗಾಯೈಯ ಇತಿಹಾಸ ಒಂದು ಮೂಲದ ರೂಪದಲ್ಲಿ ಕಂಡುಬರುವುದಿಲ್ಲ. ಪ್ರಾಚೀನ ಕಾಲದಿಂದ ನೋಡಿದರೆ, ವೇದದ ಋಚಗಳಿಂದ ಈ ಗಾಯನ ಪ್ರಾರಂಭವಾಗಿದೆ ಎಂದು ತಿಳಿಯಲಾಗಿದೆ. ತದನಂತರ ಮಾರ್ಗೀ ಸಂಗೀತ, ದೇಶಸಂಗೀತ, ಜಾತಿ ಗಾಯನ, ರಾಗಗಾಯನ ನಂತರ ದಕ್ಷಿಣಾದಿ, ಉತ್ತರಾದಿ ಎರಡು ಪದ್ಧತಿಗಳಾದವು. ಉತ್ತರ ಭಾರತೀಯ ಸಂಗೀತವನ್ನು ಹಿಂದೂಸ್ತಾನಿ ಸಂಗೀತ ಹೆಸರಿನಲ್ಲಿ ಮತ್ತು ದಕ್ಷಿಣಾದಿ ಸಂಗೀತವನ್ನು ಕರ್ನಾಟಕ ಸಂಗೀತದ ಹೆಸರಿನಲ್ಲಿ ಗುರ್ತಿಸಲಾಗಿದೆ. ಇಲ್ಲಿ ಎರಡೂ ಪ್ರಕಾರಗಳಲ್ಲೂ ‘ರಾಗ’ ಗಾಯನವೇ ಇದೆ.

ನಂತರ ದ್ರುಪದ ಗಾಯಕಿಯು ರಾಜದರ್ಬಾರಿನಲ್ಲಿ ಪ್ರತಿಷ್ಠೆ ಪಡೆಯಿತು. ಲೆಕ್ಕಾಚಾರದ ರೀತಿಯಲ್ಲಿ ಇರುವ (ಗಣಿತ)ರಾಗ ಸ್ವರೂಪವನ್ನು ಅತ್ಯಂತ ಶುದ್ಧ ರೂಪದಲ್ಲಿ ಇಟ್ಟಂತಹ, ಹಾಗೂ ರಾಜದರ್ಬಾರಿನಲ್ಲಿ ಜನರನ್ನು ಆಕರ್ಷಿಸಿದ ಈ ಗಾಯೈ ಕಾಲ ಕ್ರಮೇಣ ಹಿಂದೂಡಲ್ಪಟ್ಟಿತು ಮತ್ತು ಅದರ ಸ್ಥಾನವನ್ನು ‘ಖ್ಯಾಲ’ ಆಕ್ರಮಿಸಿತು. ಹೀಗೆ ಖ್ಯಾಲ ಗಾಯಕಿಯ ಉದ್ಯಮದ ವಿಷಯದ ಬಗ್ಗೆ ನಮಗೆ ಇತಿಹಾಸ ಹೇಳುತ್ತದೆ.

ಖ್ಯಾಲ ಗಾಯನದ ಇತಿಹಾಸವನ್ನು ನೋಡಿದಾಗ ತಿಳಿದು ಬರುವುದೇನೆಂದರೆ ರಾಜ-ಮಹಾರಾಜ ಬಾದಶಾಹಗಳು ಹೀಗೆ ಮುಂತಾದ ಆಶ್ರಯದಾತರ ಉದಾರತೆಯ ಕಾರಣದಿಂದ ಸಂಗೀತದ ಉನ್ನತಿ ಆಯಿತು. ಬಹಳಷ್ಟು ಸಂಗೀತ ಪ್ರೇಮಿ ಬಾದಶಾಹಗಳು ಸಂಗೀತಜ್ಞರಿಗೆ ತಮ್ಮ ದರಬಾರಿನಲ್ಲಿ ಆಶ್ರಯ ನೀಡಿ, ಪ್ರತಿಷ್ಟೆಯ ಸ್ಥಾನ ನೀಡಿದರು.ಅದೇ ಸಮಯದಲ್ಲಿ ಕೆಲವು ಸಂಗೀತಜ್ಞರು ಅರಬಾರಿನಿಂದ ದೂರವೇ ಉಳಿದು ಸಂಗೀತ ಸಾದನೆ ಮಾಡಿ ಅವರು ಸಂಗೀತವನ್ನು ಈಶ್ವರ ಭಕ್ತಿಯ ಸಾದನವನ್ನಾಗಿ ಮಾಡಿದರು. ಕೆಲವು ಸಮಯದ ನಂತರ, ಈಶ್ವರ ಭಕ್ತಿ ಭಗವಂತನ ಆರಾಧನೆಗಾಗಿ ಮೋಕ್ಷಪ್ರಾಪ್ತಿಗಾಗಿ ಹಾಡಲಾಗುವ ಸಂಗೀತದ ಮುಖ್ಯ ಉದ್ದೇಶ ದೂರವಾಯಿತು. ಹಾಗೂ ಆಶ್ರಯದಾತರ ಗುಣಗಾನ ಮಾಡುವ ಕಾವ್ಯಗಳ ಮೂಲಕ ಅವನರನು ಹೊಗಳಲಾಯಿತು. ಆದರೂ ಒಂದು ಹೇಳಿಕೆಯ ಪ್ರಕಾರ: ಈ ಪ್ರಕಾರ ಪರಿವರ್ತನೆ ಆದುದರಿಂದ ದರಬಾರಿನಲ್ಲಿ ಅನೇಕ ಉಚ್ಚಕೋಟಿಯ (ಶ್ರೇಣಿ) ಗಾಯಕ-ಕಲಾವಿದರು ಹಾಗೂ ವಾಗ್ಗೇಯಕಾರರು ಮುಂತಾದವರ ಪ್ರವೇಶವಾಯಿತು. ಅವರ ರಚನೆಗಳನ್ನು ಇಂದಿಗೂ ಹಾಡುತ್ತಾರೆ.

ಖ್ಯಾಲ ಉದಯ ಅಮೀರ ಋಸ್ರು,ಸುಲ್ತಾನ ಹುಸೇನ ಶರ್ಕಿ, ರಾಜಾಬಾಜ ಬಹದ್ದೂರ ಕಾಲದಲ್ಲಿ ಆಗಿರಬಹುದು ಎಂದೆನಿಸುತ್ತದೆ. ಅದಕ್ಕೆ ಜನಮನ್ನಣೆ ರಾಜಮನ್ನಣೆ ಕೊಡಿಸಿದ ಮಹಾನ್ ಕಾರ್ಯ ಮಹಮ್ಮದ ಶಾಹ ರಂಗೀಲೆ ದರಬಾರಿನ ಆಶ್ರಯದಲ್ಲಿದ್ದ ಸದಾರಂಗ-ಅದಾರಂಗರಿಗೆ ಸಲ್ಲುತ್ತದೆ. ಅವರು ತಮ್ಮ ಅದ್ವಿತೀಯ ಕಲ್ಪನಾಶಕ್ತಿಯಿಂದ ಖ್ಯಾಲಗೆ ಉಜ್ವಲ, ಪ್ರತ್ಯೇಕ ಹಾಗೂ ಸುಂದರ ರೂಪ ನೀಡಿದರು. ಹೀಗೆ ಈ ಮೇಲೆ ಮಾಡಿದ ವಿವೇಚನೆಯ ಆಹಾರದ ಮೇಲೆ ಪ್ರಬಂಧ>ದ್ರುಪದ>ಖ್ಯಾಲ ಗಾಯನ ಶೈಲಿ ಹೀಗೆ ಈ ಪ್ರಕಾರದಲ್ಲಿ ಈ ವಿಕಾಸದ ಸೋಪಾನ ಹಾಗೂ ಪರಂಪರೆ ನಡೆದು ಬಂದಿದೆ ಎನ್ನಬಹುದು. ಆದ್ದರಿಂದ ಯಾವುದೇ ಒಬ್ಬ ವ್ಯಕ್ತಿಯಿಂದ ಖ್ಯಾಲ ಉತ್ಪತ್ತಿಯಾಯಿತೆಂದು ಹೇಳಲು ಸಾಧ್ಯವಿಲ್ಲ.

ಅಕ್ಬರನ ಕಾಲದಲ್ಲಿ ಸೂರ್ಯನ ತೇಜಸ್ಸಿನಿಂದ ಬೆಳಗಿದ ಮೊಗಲ ಸಾಮ್ರಾಜ್ಯ ಔರಂಗಜೇಬನ ಕಾಲದಲ್ಲಿ ಪತನದತ್ತ ಸಾಗಿತು. ಮಹಮ್ಮದ ಶಾಹ ರಂಗೀಲೆ ಇವನು ರಾಜನೀತಿ ಕ್ಷೇತ್ರವನ್ನು ಅಲಕ್ಷ ಮಾಡಿದ್ದರಿಂದ ಅವನ ಪತನವಾಯಿತು. ಆದರೆ ಸಂಗೀತದ ಏಳ್ಗೆಯ ದೃಷ್ಟಿಯಿಂದ ನೋಡಿದರೆ ಮಹಮ್ಮದ ಶಾಹ ರಂಗೀಲೆಯ ಸಮಯದಲ್ಲಿ ಸಂಗೀತದ ಕೀರ್ತಿ ತುತ್ತತುದಿಗೇರಿತ್ತು. ಅವನ ದರಬಾರಿನಲ್ಲಿ ನ್ಯಾ,ಮತ ಖಾನ (ಸದಾರಂಗ)ಫಿರೋಜಖಾನ (ಅದಾರಂಗ) ದರಬಾರಿಗಾಯಕರಾಗಿದ್ದು ಅವರಿಬ್ಬರೂ ಅನೇಕ ಖ್ಯಾಲ ರಚನೆ ಮಾಡಿದರು. ಅದರೊಳಗಿನ ನ್ಯೂನ್ಯತೆ ನೀಗಿಸಿ, ವಿಸ್ತಾರಪೂರ್ಣ ಮಾಡಿ ಸೌಂದರ್ಯದಿಂದ ಪರಿಪೂರ್ಣಗೊಳಿಸಿದರು. ಹೀಗೆ ಖ್ಯಾಲವನ್ನು ದ್ರುಪದಗಾಯನದ ಪ್ರತಿಸ್ಪರ್ಧಿಯ ರೂಪದಲ್ಲಿ, ಖ್ಯಾಲ ದ್ರುಪದಗೆ ಸರಿಸಾಟಿಯಾಗಿ ನಿಲ್ಲುವಂತೆ ಮಾಡಿದರು. ಕಳೆದ 150 ವರ್ಷಗಳಲ್ಲಿ ಖ್ಯಾಲಗಾಯನದ ಪ್ರಚಾರ, ಪ್ರಸಾರವಾಗಿದ್ದು ಅದನ್ನು ಸಾದಾರಂಗ-ಅದಾರಂಗರ ಶಿಷ್ಯಾನುಶಿಷ್ಯರು ಮಾಡಿದರು ಎಂದು ತಿಳಿಯಲಾಗಿದೆ. ಗ್ವಾಲಿಯರ ಪ್ರಸಿದ್ಧ ಗಾಯಕರಾದ ಹದೂಖಾನ -ಹಸ್ಸೂಖಾನ ಇವರ ಪೂರ್ವಜ ನಥ್ತನ ಪೀರಬಕ್ಷರು ತಮ್ಮ ಗುರು ಪರಂಪರೆ ಸದಾರಂಗ- ಅದಾರಂಗ ಪರಂಪರೆ ಎಂದು ಹೇಳಿದಾರೆ. ವಾಸ್ತವದಲ್ಲಿ ‘ಸಾದಾರಂಗ’ ಖ್ಯಾಲದ ನಿರ್ಮಾತೃ ಎಂದು ತಿಳಿಯಲಾಗಿದೆ. ಆದ್ದರಿಂದ ಖ್ಯಾಲದ ಉತ್ಪತ್ತಿ ಮಾಡಿದವರು ಸಾದಾರಂಗ – ಅದಾರಂಗ ಎಂದೇ ತಿಳಿಯಬೇಕಾಗುತ್ತದೆ. ಏಕೆಂದರೆ ಈ ದಿನಗಳಲ್ಲಿ ಅವರೇ ರಚಿಸಿದ ಖ್ಯಾಲ ಬಂದಿಶಗಳು ವಿಶೇಷ ಪ್ರಚಾರದಲ್ಲಿವೆ.

ರಾಜಧಾನಿ ದಿಲ್ಲಿಯಲ್ಲಿ ಮುಸ್ಲಿಂ ಸಂತರ ಸಮಾಧಿ ಸ್ಥಳದಲ್ಲಿ ಸಂಗೀತ ಸಭೆಗಳು ನಡೆಯುತ್ತಿದ್ದವು. ಅದರಲ್ಲಿ ಬಹಳಷ್ಟು ಗಾಯಕರು, ವಾದಕರು, ನರ್ತಕಿಯರು ಇರುತ್ತಿದರು. ಇಷ್ಟೇ ಅಲ್ಲದೇ ಕೆಲವೊಂದು ಶ್ರೀಮಂತರ ಆಶ್ರಯದಲ್ಲಿ ಮತ್ತು ಸಾರ್ವಜನಿಕ ಉತ್ಸವಗಳಲ್ಲಿ ಗಾಯನ ಸಭೆ ನಡೆಯುತ್ತಿದ್ದವು. ಇದೇ ಪ್ರಕಾರ ಸೂಫಿ ಸಂತರಾದ ಹಜರತ ಬಖ್ತಿಯಾರ ಕಾಕಿ, ಹಜರತ ನಿಜಾಮದ್ದೀನ ಔಲಿಯಾ, ಹಜರತ ನಾಜೀರುದ್ದೀನೆ ಚಿರಾಗ ಹಜರತ ಶಾಹ ರಸೂಲನುಮಾ,ಶಾಹೂ ಅಜೀಜುಲ್ಲಾಹರ ಉರೂಸ (ಜಾತ್ರೆ) ಸಮಯದಲ್ಲಿ ಸಂಗೀತ ಸಭೆಗಳನ್ನು ಆಯೋಜಿಸಲಾಗುತ್ತಿತ್ತು. ಅದರಲ್ಲಿ ಕವ್ಹಾಲಿ ಹಾಗೂ ಖ್ಯಾಲ ಗಯಾನ ನಡೆಯುತ್ತಿದ್ದವು. ವಸಂತೋತ್ಸವದಲ್ಲೂ ಗಾಯನ ವಾದನ ನಡೆಯುತ್ತಿತ್ತು. ಈ ಪ್ರಕಾರ ಅನೇಕ ಅವಸರಗಳಲ್ಲಿ ಕಲಾಕಾರರು ಕಲೆಯನ್ನು ಪ್ರಸ್ತುತ ಪಡಿಸುತ್ತಿದ್ದರು. ಹೀಗೆ ಆಗಾಗ ಒಳ್ಳೇ ಅವಕಾಶ ಸಿಕ್ಕು, ಈ ಕಲೆಗೆ ಜನಪ್ರಿಯತೆ ಸಿಗುತ್ತ ಹೋಯಿತು. ಕಲಾಕಾರರಿಗೆ ಅಭ್ಯಾಸ (ರಿಯಾಜ) ಮಾಡಲು ಹಾಗೂ ಶಿಷ್ಯರನ್ನು ತಯಾರಿಸಲು ಪ್ರೋತ್ಸಾಹ ಸಿಗುತ್ತಲಿತ್ತು. ಇದರ ಮೂಲಕ ಹಾಗೂ ರಾಜಾಶ್ರಯದ ಮೂಲಕ ಮುಂದಿನ ಶತಮಾನದಲ್ಲಿ ಖ್ಯಾಲ ಗಾಯನದ ಕಲಾಕಾರರ ‘ಘರಾನೆ’ ಗಳು ನಿರ್ಮಾಣವಾದವು.

ಸಂಗೀತ ಇತಿಹಾಸ ದೃಷ್ಟಿಯಿಂದ 12ನೇ ಶತಮಾನದಿಂದ 18ನೇ ಶತಮಾನ ಮಧ್ಯಕಾಲ ಎಂದು ತಿಳಿಯಲಾಗಿದೆ. ಅದು ಮುಸಲ್ಮಾನ ಶಾಸಕರ ಆಡಳಿತದ ಕಾಲವಾಗಿತ್ತು. ಘರಾನೆಗಳ ಜನ್ಮ ಮಧ್ಯಕಾಲದಲ್ಲಿಯೇ ಆಯಿತೆಂದು ಹೇಳುತ್ತಾರೆ. ಸಂಸ್ಕೃತದ ಗೃಹ ಹಿಂದಿಯ ಭಾಷೆಯ ‘ಘರ’ ದಿಂದ ಘರಾನ ಶಬ್ದ ಉತ್ಪತ್ತಿ ಆಯಿತು. ಘರಾನೆ ಎಂದರೆ ವಂಶ, ಕುಲ, ‘ಪರಂಪರೆ ಎಂಬ ಅರ್ಥ’ ನೀಡುತ್ತದೆ. ಗಾಯನದ ವಿಭಿನ್ನ ಶೈಲಿಗಳ ಎನೊಂದು ಪರಂಪರೆ ಹುಟ್ಟಿಕೊಂಡಿತೊ, ಅದನ್ನೇ  ‘ಘರಾನೆ’ ಎಂದು ಕರೆಯಲಾಯಿತು.

ಘರಾನೆ ಮಹತ್ವ:

ಘರಾನೆ ನಮ್ಮ ಸಂಗೀತ ಗುರು ಪರಂಪರೆಯನ್ನು ಸದೃಢವಾಗಿಡಲು ಸುರಕ್ಷಿತವಾಗಿಡಲು, ಅದನ್ನು ಮುಂದುವರೆಸಿಕೊಂಡು ಹೋಗಲು ಸಂಗೀತದಲ್ಲಿ ನಿಯಮ ಬದ್ಧತೆ, ಶಿಸ್ತು, ಸಂಯಮ ಕಲಿಯಲು ಗುರು ಪರಂಪರೆಯ ಮೇಲೆ ಶೃದ್ಧೆ ಇಡಲು ಇರುವ ಒಂದು ಶಿಕ್ಷಣವಾಗಿದೆ ಹಾಗೂ ಅದು ಮಹತ್ವಪೂರ್ಣವಾಗಿದೆ. ಘರಾನೆ ಅಸ್ತಿತ್ವದಲ್ಲಿ ಇದ್ದುದರಿಂದ ನಮ್ಮ ಪ್ರಾಚೀನ ಸಂಗೀತದ ಕ್ರಿಯಾತ್ಮಕ ರೂಪ ಸುರಕ್ಷಿತವಾಗಿದೆ.

ಮಧ್ಯಕಾಲಿನ ರಾಜದರಬಾರಿನಲ್ಲಿ ಗಾಯಕರಿಗೆ ಆಶ್ರಯ, ಅದರ ಸಿಕ್ಕಿದರಿಂದ ಅವರು ಜೀವನವಿಡೀ ಸಂಗೀತ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು. ಹಾಗೂ ಶಿಷ್ಯರನ್ನು ತಯಾರು ಮಾಡುತ್ತಿದ್ದರು. ರಾಜಾಶ್ರಯದಲ್ಲಿ ಅವರಿಗೆ ಜೀವನ ನಿರ್ವಹಣೆಯ ತೊಂದರೆ ಇರಲಿಲ್ಲ. ರಾಜರು ಅರ್ಥಿಕ ಸಹಾಯ ನೀಡುತ್ತಿದ್ದರು. ಹೆಚ್ಚಿನ ಸಂಗೀತಜ್ಞರು ಒಂದಲ್ಲ ಒಂದು ರಾಜರ ಆಶ್ರಯ ಪಡೆದು ತಮ್ಮ ಕಲೆಯ ಪರಿವರ್ತನೆ ಮಾಡಿದರು. ಹೀಗೆ ಗ್ವಾಲಿಯರ, ಜೈಪುರ, ದಿಲ್ಲಿ ರಾಮಪುರ ಮುಂತಾದ ರಾಜಾಶ್ರಯಗಳಲ್ಲಿ ಕಲಾಕಾರರು ತಮ್ಮ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿ ಸಂಗೀತದಲ್ಲಿ ಗುರು ಶಿಷ್ಯ ಪರಂಪರೆಯನ್ನು ಬೆಳೆಸಿದರು. ಅವೇ ‘ಘ್ರಾರಾನೆ’ ಎನಿಸಿಕೊಂಡವು.

ಗಾಯಕಿ ಹಾಗೂ ಅದರ ನಿರ್ಮಾಣ :

ವಿಭಿನ್ನ ಘರಾನೆಗಳ ಗಾಯನ ಶೈಲಿಯನ್ನು ‘ಗಾಯಕಿ’ ಎನ್ನುತ್ತಾರೆ. ಗಾಯನ ಶೈಲಿಯ ವಿಭಿನ್ನತೆಯಿಂದ ಅನೇಕ ಘರಾನೆಗಳ ಜನ್ಮವಾದವು. ಧ್ರುಪದ, ಧಮಾರ, ಟಪ್ಪಾ ಮತ್ತು ಠುಮ್ರಿ ಮುಂತಾದ ಗೀತೆಗಳ ಗಾಯನ ಶೈಲಿಗಳ ಹೆಸರೇ ಗಾಯಕಿ ಆಗಿದೆ. ಗಾಯಕಿ ನಿರ್ಮಾಣ ವಿಧಿಯಲ್ಲಿ ಒಂದು ನಿಶ್ಚಿತ ನಿಯಮ ಇರುತ್ತದೆ. ಆ ನಿಯಮಗಳು ಹೀಗಿವೆ.

1) ಆವಾಜ ಹಚ್ಚುವ ರೀತಿ (ಸ್ವರ ಲಗಾವ)

2) ರಾಗ ವಿಸ್ತಾರ (ಆಲಾಪ ಮಾಡುವಿಕೆ)

3) ತಾನ-ಬೋಲ ತಾನಗಳ ಪ್ರಯೋಗ

4) ತಾಲ ಹಾಗೂ ಲಯಕಾರಿ

5) ರಾಗಗಳ ಆಯ್ಕೆ

6) ಗೀತೆಯ ಬಂದಿಶ

ಸ್ವರ ಹಚ್ಚುವ ರೀತಿ:

ಖ್ಯಾಲ ಗಾಯಕಿಯಲ್ಲಿ ಸ್ವರ ಹಚ್ಚುವ ರೀತಿ ಅತ್ಯಂತ ಮಹತ್ವಪೂರ್ಣವಾಗಿದೆ. ರಾಗ ಪ್ರಸ್ತುತೀಕರಣದಲ್ಲಿ ಯಾವ ರಾಗದಲ್ಲಿ ಯಾವ ಸ್ವರದೊಂದಿಗೆ ಯಾವ ಇನ್ನೊಂದು ಸ್ವರ ಸಂಯೋಜನೆ ಅತ್ಯಂತ ಮಧುರವಾಗಿರುತ್ತದೆ, ರಂಜಕವಾಗಿರುತ್ತದೆ ಹಾಗೂ ಆಕರ್ಷಕವಾಗಿರುತ್ತದೆ? ಈ ಎಲ್ಲ ವಿಚಾರವನ್ನು ಸ್ವರ ಲಗಾವದಲ್ಲಿ ಮಾಡಲಾಗುತ್ತದೆ. ಸ್ವರಲಗಾವದಲ್ಲಿ ರಾಗದ ಲಕ್ಷಣಗಳಾದ ಥಾಲ, ಜಾತಿ, ವಾದಿ-ಸಂವಾದಿ ಅಲ್ಪತ್ವ ಬಹುತ್ವ ನ್ಯಾಸ ಇತ್ಯಾದಿ ಎಲ್ಲ ಸ್ವರಗಳ ಮೇಲೆ ವಿಶೇಷ ಗಮನ ನೀಡುತ್ತಾರೆ.

ರಾಗ ವಿಸ್ತಾರ :

ಗಾಯಕಿ ನಿರ್ಮಾಣ ವಿಧಿಯಲ್ಲಿ ಸ್ವರ ವಿಸ್ತಾರಕ್ಕೂ ಮಹತ್ವಪೂರ್ಣ ಸ್ಥಾನವಿದೆ. ಒಂದೊಂದು ಘರಾನೆಯಲ್ಲಿ ಆಲಾಪ ಮಾಡುವಿಕೆ ಒಂದೊಂದು ರೀತಿಯಲ್ಲಿರುತ್ತದೆ. ಆಲಾಪಾಲ್ಲಿ ಅನೇಕ ಪ್ರಕಾರಗಳಿಗೆ, ಕೆಲವರು ಸ್ವರವನ್ನು ಆಆರದಲ್ಲಿ ಇಟ್ಟರೆ, ಕೆಲವರು ಬೋಲ-ಅಲಾಪ ಅಂದರೆ ಗೀತೆ (ಬಂದಿಶ)ಯ ಶಬ್ದಗಳ ಮೂಲಕ ಮಾಡಿದರೆ. ಕೆಲವರು ಸರಗಮ್ ಉಚ್ಚಾರಣೆ ಮೂಲಕ ಮಾಡಿದರೆ ಎಲವರು ನೊಂತೋಂ ರೀತಿ ಆಕರ್ಷಕ ಶಬ್ದಗಳ ಮಾಧ್ಯದಿಂದ ಆಲಾಪ ಮಾಡುತ್ತಾರೆ. ಸುಂದರ ಆಲಾಪನೆಯಿಂದ ರಸೋತ್ಪತ್ತಿಯಾಗುತ್ತದೆ. ಮೀಂಡ, ಗಮನ, ಕಣ ಹಾಗೂ ವಿಭಿನ್ನ ಅಲಂಕಾರಗಳನ್ನು ಉಶಲತೆಯಿಂದ ಸಂಯೋಜಿಸಿ ಸ್ವರ ವಿಸ್ತಾರ ರಾಗದ ಸುಂದರ ವಾತಾವರಣ ನಿರ್ಮಿಸಿ ಗಾಯನ ಆಕರ್ಷಕ ಹಾಗೂ ಪ್ರಭಾವಪೂರ್ಣವಾಗಿರುವಂತೆ ಮಾಡುತ್ತದೆ.

ತಾನಬೋಲತಾನ ಪ್ರಯೋಗ:

ಖ್ಯಾಲ ಗಾಯನದ ಗಾಕಿಯಲ್ಲಿ ತಾನ ಯೋಜನೆಗೂ ವಿಶೇಷ ಮಹತ್ವವಿದೆ. ತಾನದಲ್ಲಿ ಅನೇಕ ಪ್ರಕಾರಗಳಿವೆ. ಅವು : ಸರಳತಾನ (ಸಪಾಟ), ಕೂಟತಾನ, ರಾಗಾಂಗತಾನ, ಮಿಶ್ರತಾನ, ಅಲಂಕಾರಿಕತಾನ, ವಕ್ರತಾನ, ಫಿರತ್ ತಾನ, ಜಬಡೆಕೀತಾನ, ಮುಖಂಬಂದಿ ತಾನ ಮುಂತಾದ ತಾನಗಳು ವಿಶೇಷ ಉಲ್ಲೇಖನೀಯವಾಗಿದೆ. ಈ ಮೇಲಿನ ತಾನಗಳಲ್ಲಿ ಯಾವುದೇ ಒಂದೆರಡು ಪ್ರಕಾರಗಳಿಗೆ ಹೆಚ್ಚು ಮಹತ್ವಕೊಟ್ಟು, ಅದನ್ನೇ ಅಭ್ಯಾಸ ಮಾಡಿ ಸಂಗೀತಗಾರರು ತಾನದಲ್ಲಿ ಚಮತ್ಕಾರ, ವೈಚಿತ್ರ್ಯತೆಯನ್ನುಂಟು ಮಾಡುತ್ತಾರೆ. ಬೇರೆ ಬೇರೆ ಘರಾನೆಗಳ ಗಾಯೈ ತತ್ವದಲ್ಲಿ ಯಾವುದೇ ಒಂದು ತತ್ವಕ್ಕೆ ಪ್ರಾಧಾನ್ಯತೆ ನೀಡಿ ಅದರ ಅಭ್ಯಾಸ ಮಾಡಿ ರಾಗ ಪ್ರಸ್ತುತಪಡಿಸುತ್ತಾರೆ. ಆಗ ಭಿನ್ನ ಭಿನ್ನ ಗಾಯಕಿಯ ನಿರ್ಮಾಣವಾಗುತ್ತದೆ.

ಉದಾ:

ಕಿರಾಣಾದಲ್ಲಿ ಸರಳ ಸಪಾಟತಾನ ಪ್ರಯೋಗ ಇದೆ.
ಆಗ್ರಾ ಘರಾನೆಯಲ್ಲಿ ಗಮಕಯುಕ್ತ, ಜಬಡೇರೆ ತಾನ ವಿಭಿನ್ನ ಲಯಕಾರಿ ಯುಕ್ತ ತಾನ ಮಾಡುತ್ತಾರೆ.
ಪಟಿಯಾಲಾದಲ್ಲಿ ಅಲಂಕಾರಿಕ ವಕ್ರತಾನ
ಜಯಪುರದಲ್ಲಿ ಪೇಂಚದಾರ, ಅತ್ಯಂತ ಕ್ಲಿಷ್ಟಕರತಾನ ಪ್ರಯೋಗ
ಅಲ್ಲಾದಿಯಾ ಘರಾನೆಯಕಲ್ಲಿ ಬೋಲತಾನಗಳಿಗೆ ತನ್ನದೇ ಆದ ವಿಶೇಷತೆ ಇದೆ.

ತಾಲ-ಲಯಕಾರಿ-ಯಾವುದೇ ಗಾಯಕಿಯಲ್ಲಿ ತಾಲ ಸಂಯಮ ಒಂದು ಅತ್ಯಂತ ಅವಶ್ಯಕ ತತ್ವವಾಗಿದೆ. ಇದರಿಂದ ಸಂಗೀತದಲ್ಲಿ ಕಲಾಪಕ್ಷ ಹಾಗೂ ಭಾವಪಕ್ಷ ಎರಡನ್ನೂ ಸೇರಿಸಿ ಸಮರ್ಥವಾಗಿ ಹಾಡಬಹುದು, ತಾಲಬದ್ಧ ಆಲಾಪ, ತಾನ ಹಾಗೂ ವಿವಿಧ ಲಯಕಾರಿ ಪ್ರಯೋಗ ಈ ಎಲ್ಲ ಕುಶಲತೆಗೆ ಗಾಯಕನಿಗೆ ತಾಲದ ಮೇಲೆ ಅಧಿಕಾರ (ಪ್ರಬುದ್ಧ) ವಿದ್ದರೆ ಸಾದ್ಯವಾಗುತ್ತದೆ. ಕಠಿಣ, ಅಡ್ಡಲಯದ ತಾನ ಲಯಕಾರಿಗಳ ಸಫಲ ಪ್ರದರ್ಶನ ನೀಡಿ ಗಾಯಕ ತನ್ನ ಗಾಯಕಿಯನ್ನು ಅತ್ಯಂತ ಪ್ರಭಾವ ಪೂರ್ಣಗೊಳಿಸಬಹುದು.

ರಾಗಚಯನ:

ಸಂಗೀತದ ಅಭ್ಯಾಸ ಅಧ್ಯಯನದಲ್ಲಿ ಗಾಯಕ ಅನೇಕ ರಾಗಗಳನ್ನು ಕಲಿತಿರುತ್ತಾನೆ. ಅವುಗಳಲ್ಲಿ ಗಾಯಕ ತನಗೆ ಪ್ರಿಯವಾದ ರಾಗಗಳನ್ನು ಪುನಃ ಪುನಃ ಅಭ್ಯಸಿಸುತ್ತಿರಬೇಕಾತ್ತದೆ. ಹೀಗೆ ರಾಗಗಳ ಚಯನ ಮಾಡಿ, ಅದನ್ನು ಪುನಃ ಪುನಃ ಅಭ್ಯಸಿಸಿದರೆ, ಆ ಗಾಯಕಿ ಸಫಲವಾಗುತ್ತದೆ.

ಗೀತೆಯ ಬಂದಿಶ :

‘ಬಂದಿಶ’ದ ಅರ್ಥ ಕಟ್ಟಿರುವ ರಚನೆಗೆ ಹಿಂದುಸ್ತಾನಿ ಸಂಗೀತದಲ್ಲಿ ‘ಬಂದಿಶ’ ಎನ್ನುತ್ತಾರೆ. ಅಂದರೆ ಖ್ಯಾಲ ಗಾಯನದಲ್ಲಿ ಸ್ವರ, ತಾಲ ಪಟಗಳಿಂದ ಕೂಡಿದ ಸುಬದ್ಧ ಮತ್ತು ಸುನಿಯೋಜಿತ ರಚನೆ ‘ಬಂದಿಶ’ ಆಗಿದೆ. ಖ್ಯಾಲ ಗಾಯನದಲ್ಲಿ ಬಂದಿಶ ಮೂಲಕ ಕಾವ್ಯದ ಸಮಾವೇಶವಾಗುತ್ತದೆ. ಖ್ಯಾಲ ಗಾಯನದಲ್ಲಿ ‘ಬಂದಿಶ’ ಮಹತ್ವ ಪೂರ್ಣವಾಗಿದ್ದು, ಅವುಗಳನ್ನು ಆಕರ್ಷಕ ಮಾಡಲು ಕೆಲವು ನಿಯಮಾಪಾಲನೆ ಮಾಡುತ್ತಾರೆ.

1) ಬಂದಿಶ ಮಧುರವಾಗಿರಬೇಕು. ಸೌಂದರ್ಯದಿಂದ ಕೂಡಿದ್ದು ರಂಜಕವಾಗಿರಬೇಕು.

2) ಸ್ವರ, ತಾಲ, ಪದಗಳ ಸುಂದರ ಪ್ರಯೋಗ ಮತ್ತು ವರ್ಣ ಅಲಂಕಾರಗಳಿಂದ ಕೂಡಿರಬೇಕು.

3) ಬಂದಿಶದಲ್ಲಿ ರಾಗ ವೈಶಿಷ್ಟ್ಯ ಹಾಗೂ ವೈಚಿತ್ರ್ಯ, ತಾಲಗಳ ವೈವಿಧ್ಯತೆ ಹಾಗೂ ಪದ ಮುಂತಾದವುಗಳ ಸುಂದರ ಸಮನ್ವಯ ಇರಬೇಕು.

4) ಬಂದಿಶ ಮೂಲಕ ರಾಗದ ಸ್ವರೂಪ ತಿಳಿಯಬೇಕು.

5) ಬಂದಿಶದಲ್ಲಿ ರಾಗಲಕ್ಷಣ ರಾಗ ನಿಯಮಗಳು ಒಳಗೊಂಡಿರಬೇಕು. ಉದಾ: ರಾಗದ ಥಾಟ, ಜಾತಿ, ವಾದಿ-ಸಂವಾದಿ, ಅಲ್ಪತ್ವ, ಬಹುತ್ವ, ನ್ಯಾಸ, ಪ್ರಯೋಗ, ರಾಗದ ಮುಖ್ಯ ಸ್ವರ ಮುಂತಾದ ತತ್ವಗಳಿರಬೇಕು.

6) ಬಂದಿಶದ ಶಬ್ದ ಸಾಹಿತ್ಯ ರಾಗ-ಗಾಯನ ಸಮಯಾನುಸಾರ ಇರಬೇಕು. ರಾಗ ಭೈರವ, ಜಾಗೋ ಮೋಹನ, ಅಥವಾ ಲಲಿತದ ಭೋರ ಹೀ ಆಯೆ.

7) ಬಂದಿಶದ ರಾಗ ಹಾಗೂ ಕಾವ್ಯದ ಭಾವನೆಯಲ್ಲಿ ಏಕರೂಪತೆ ಇರಬೇಕು.

8) ರಾಗದ ಪ್ರಕೃತಿಗನುಸಾರವಾಗಿ ಬಂದಿಶ ಬೋಕಟ್ಟಿದ್ದಿರುತ್ತದೆ.ಉದಾ:ಮಾರ್ವಾ ಪಿಯ ಮೊರೆ ಆನತ ಮಾಯಿ ಮೊಹೆ.

ಭೈರವ: ಬಿನಹರಿ ಕೌನ

ಹೀಗೆ ಖ್ಯಾಲ ಬಂದಿಶಗಳ ಸಾಮನ್ಯ ಸಿದ್ಧಾಂತಗಳು ಇವೆ. ಖ್ಯಾಲದಲ್ಲಿ ಸ್ಥಾಯಿ ಮತ್ತು ಅಂತರಾ ಎಂದು ಎರಡು ಭಾಗಗಳಿವೆ. ಖ್ಯಾಲದಲ್ಲಿ ಸ್ಥಾಯಿ, ಅಂತರಾ ರಚನೆಯನ್ನಷ್ಟೇ ಬಂದಿಶ ಎನ್ನುತ್ತೇವೆ. ಸ್ಥಾಯಿಯಲ್ಲಿ ಸ್ವರರಚನೆ ಹೆಚ್ಚಾಗಿ ಮಂದ ಮತ್ತು ಮಧ್ಯ ಸಪ್ತಕದ ಸ್ವರ ಹಾಗೂ ಅಂತರದಲ್ಲಿ ಹೆಚ್ಚಾಗಿ ಮಧ್ಯ ತಾರಸಪ್ತಕದ ಸ್ವರಗಳ ಪ್ರಯೋಗವಾಗುತ್ತದೆ. ಆದರೆ ಉತ್ತರಾಂಗ ಪ್ರಧಾನರಾಗಗಳಲ್ಲಿ ಸ್ಥಾಯೀಯ ಸ್ವರರಚನೆಯಲ್ಲಿ ತಾರಸಪ್ತಕದ ಸ್ವರಗಳಿರುತ್ತವೆ.

ಖ್ಯಾಲದಲ್ಲಿ ಎರಡು ಪ್ರಾಕಾರಗಳಿವೆ:

1) ಬಡಾಖ್ಯಾಲ

2) ಛೋಟಾ ಖ್ಯಾಲ

ಬಡಾಖ್ಯಾ: ಇದು ವಿಲಂಬಿತ ಅಂದರೆ ನಿಧಾನ ಗತಿಯ ಲಯದಲ್ಲಿ ಇರುತ್ತದೆ.

ಛೋಟಾ ಖ್ಯಾಲ : ಇದು ಮಧ್ಯ ಅಥವಾ ದೃತ (ವೇಗ) ಲಯದಲ್ಲಿರುತ್ತದೆ. ಬಡಾಖ್ಯಾಲರಿಗೆ ವಿಲಂಬಿತ ಎಂದೂ, ಛೋಟಾ ಖ್ಯಾಲಗೆ ದೃತ ಎಂದೂ ಹೇಳುತ್ತಾರೆ.

ನ್ಯಾಮತ ಖಾನ ಹಾಗೂ ಫಿರೋಜಖಾನರು ಸದಾರಂಗ, ಅದಾರಂಗ ಉಪನಾಮದಿಂದ ಅನೇಕ ಖ್ಯಾಲ ರಚನೆ ಮಾಡಿದ್ದಾರೆ. ಇವರ ಹೊರತಾಗಿ ಮನರಂಗ, ಹರರಂಗ, ವಿಲರಂಗ, ರಸರಂಗ, ಇಶ್ಕರಂಗ, ಶೂಕರಂಗ, ಮೊದಲಾದವರು ಖ್ಯಾಲ ರಚನೆಯಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.

ಆಧುನಿಕ ಕಾಲದಲ್ಲಿ ಪ್ರೇಮಾಪಿಯಾ, ದರಸಪಿಯಾ, ಸಬರಂಗ ಪ್ರಾಣಪಿಯಾ, ಸುಬ್ಹಾನಪಿಯಾ. ಪ. ಓಂಕಾರನಾಥ, ಪಂ.ವಿನಾಯಕರಾವ ಪಟವರ್ಧನ ಗುಣಿದಾಸ, ಶಂಕರರಾವ ವ್ಯಾಸ, ವೀ ಅಮೀರಖಾನ ಮುಂತಾದವರು ಒಳ್ಳೆ  ಖ್ಯಾಲ ರಚನಾಕಾರರಾಗಿದ್ದಾರೆ.

ಖ್ಯಾಲ ರಚನೆಯಲ್ಲಿ ಮುಖಡಾ ತುಂಬ ಮಹತ್ವ ಹೊಂದಿದೆ. ಬಂದಿಶದಲ್ಲಿ  ‘ಸಮ್’ ಗಿಂತ ಮೊದಲು ಏನೊಂದು ರಚನೆ ಇರುತ್ತದೆಯೋ ಅದನ್ನು ‘ಮುಖಡಾ’ ಎನ್ನುತ್ತಾರೆ.ಖ್ಯಾಲ ಬಂದಿಶನ ಮುಖಡಾ 5 ಮಾತ್ರೆಯದು, ಛೋಟಾ ಖ್ಯಾಲ ಹೆಚ್ಚಾಗಿ ಖಾಲಿಯಿಂದ (9ನೇ ಮಾತ್ರೆ) ಯಿಂದ ,7ನೇ ಮಾತ್ರೆಯಿಂದ, ಕೆಲವು 12ನೇ ಮಾತ್ರೆಯಿಂದ, ಕೆಲವು 1ನೇ ಮಾತ್ರೆಯಿಂದ ಆರಂಭವಾಗುತ್ತವೆ. ಉದಾ: ಹಮೀರ ಕೈಸೆ ಘರ ಜಾಲಂಗರವಾ ಛಾಯಾನಟ ಝುನನ ಝುನನ.

ರಾಗ ಮತ್ತು ರಸ:

ಖ್ಯಾಲದಲ್ಲಿ ಇಂಥ ಒಂದು ರಾಗ ಇಂಥದ್ದೇ ಒಂದು ವಿಶಿಷ್ಠ ರಸೋತ್ಪಾದನೆ ಮಾಡುತ್ತದೆ ಎಂದು ಹೇಳುವುದು ಕಷ್ಟ್. ಏಕೆಂದರೆ ರಾಗಕ್ಕೆ ತನ್ನದೇ ಆದ ಒಂದು ವ್ಯಕ್ತಿತ್ವವಿದೆ. ಪ್ರತಿಯೊಂದು ವಿಶಿಷ್ಠ ವ್ಯಕ್ತಿತ್ವ ಹೊಂದಿರುತ್ತದೆ. ಅಷ್ಟೇ ಅಲ್ಲ ಒಂದು ರಾಗದ ಬೇರೆ ಬೇರೆ ಮುಖ  ಮೋರ ಮೋರ-ಶೃಂಗಾರ ರಸ ಅಭಿವ್ಯಕ್ತಿ ಮಾಡಿದರೆ, ಭೇರಿ ಬಜೆಸಂಗಾಮ-ವೀರರಸ ಉತ್ಪನ್ನ ಮಾಡುತ್ತದೆ. ಹೀಗೆ ಒಂದು ರಾಗದ ಬೇರೆ ಬೇರೆ ಬಂದಿಶಗಳಿಂದ ಬೇರೆ ಬೇರೆ ರಸೋತ್ಪಾದನೆ ಆಗುತ್ತದೆ.

ಬಡಾಖ್ಯಾಲ ಹಾಡಲು ಬಳಸುವ ತಾಲಗಳು:

ವಿಲಂಬಿತ ಏಕತಾಲ, ವಿಲಂಬಿತ ತೀನತಾಲ, ಝುಮರಾ ಆಡಾ ಚೌತಾಲ ಮುಂತಾದ ತಾಲಗಳು, ಛೋಟಾಖ್ಯಾಲ ಹಾಡಲು ತೀನತಾಲ, ಏಕತಾಲ, ರೂಪಾ, ಝುಪತಾಲ ಮುಂತಾದ ತಾಲಗಳಿವೆ. ಅತೀ ದ್ರುತಲಯದಲ್ಲಿ ಬಂದಿಶ ಅಥವಾ ತರಾನ ತೆಗೆದುಕೊಂಡರೆ ತೀನತಾಲ ಏಕತಾಲ ತೆಗೆದುಕೊಳ್ಳುತ್ತಾರೆ.

ಖ್ಯಾಲದಲ್ಲಿ ಉಪಯೋಗಿಸುವ ಭಾಷೆ:

ಬ್ರಜ, ಬುಂದೇಲ ಖಂಡ, ಭೋಜಪುರ, ಮಾರವಾಡಿ, ಪಂಜಾಬಿ ಮುಂತಾದ ಪ್ರಮುಖ ಭಾಷೆಗಳಿವೆ. ಕೆಲವು ರಚನೆ ಉರ್ದು ಫಾರ್ಸಿ, ಅರಬೀ ಬಾಷೆಯಲ್ಲೂ ಇವೆ.

ಖ್ಯಾಲ ರಚನೆಯಲ್ಲಿ ಶಬ್ದ ರಚನೆ ಹೆಚ್ಚಾಗಿ ಶೃಂಗಾರ ಆದರೆ ಗಂಭೀರತೆಯ ಜೊತೆಗೆ ಶಾಂತ ಕರುಣ ರಸ ಮುಂತಾದವು ಇರುತ್ತವೆ.

ಖ್ಯಾಲ ಶೈಲಿಯ ಪ್ರಚಾರ ಇಷ್ಟೊಂದು ಬೆಳೆದಿದೆ ಎಂದರೆ, ಇದರಲ್ಲಿ ಪ್ರತಿಯೊಂದು ಪ್ರಚಾರದ ರಸ ಹಾಗೂ ವಿಷಯ ಕಂಡುಬರುತ್ತದೆ. ಖ್ಯಾಲ ಶೃಂಗಾರರಸ ಪ್ರಧಾನಗಾಯನ ಎಂದು ಹೇಳಿದರು ಭಕ್ತಿರಸ ಪ್ರಧಾನ ರಚನೆಗಳೂ ಇದರಲ್ಲಿವೆ.

ಖ್ಯಾಲ ರಚನೆಯಲ್ಲಿರುವ ವಿಷಯ :

ಖ್ಯಾಲ ಗೀತೆಗಳನ್ನು ಈಶಸ್ತುತಿ, ಕೃಷ್ಣಲೀಲೆಯ ವರ್ಣನೆ , ಋತುವರ್ಣನೆ,ಸೃಷ್ಟಿ ಸೌಂದರ್ಯ ವರ್ಣನೆ,ಉತ್ಸವ ಪ್ರಸಂಗ, ನಾಯಕ-ನಾಯಿಕಾ ಭೇದ, ವಿರಹಿಣೆ ನಾರಿಯ ವಿರಹ ವೇದನೆ ನನ ಪ್ರಕಾರಗಳು. ಕೆಲವು ಗೀತೆಗಲ್ಲಿ ರಾಜರ ವರ್ಣನೆ ಮುಂತಾದ ವಿಷಯಗಳಿರುತ್ತವೆ.

ಖ್ಯಾಲದ ರಾಗಗಳು   

ಖ್ಯಾಲನ್ನು ಎಲ್ಲ ರಾಗಗಳಲ್ಲಿ ಹಾಡಲಾಗುತ್ತದೆ. ಆದರೆ ಉಚ್ಚಕೋಟಿಯ ಗಾಯಕರು ಠುಮರಿ ವಿಶೇಷ ರಾಗಗಳಾದ ಭೈರವಿ, ಪಿಲು, ಪಹಾಡಿ, ಮಾಂಡ, ಕಾಫಿ ಮುಂತಾದ ರಾಗಗಳಲ್ಲಿ ಖ್ಯಾಲ ಹಾಡುವುದಿಲ್ಲ.

ಖ್ಯಾಲ ಪ್ರಸ್ತುತೀಕರಣ:

ಮೊದಲಿಗೆ ಖ್ಯಾಲ ಗಾಯಾರು ತಂಬೂರಿಯನ್ನು ತಮಗೆ ಬೇಕಾದ ಶೃತಿಯಲ್ಲಿ ಕೂಡಿಸುತ್ತಾರೆ. ಹಾರ್ಮೋನೀಯಂ ಅಥವಾ ಸರಂಗಿ ಹಾಗೂ ತಬಲಾ ಪಕ್ಕವಾದ್ಯವನ್ನಾಗಿರಿಸಿಕೊಂಡು, ಎಲ್ಲ ವಾದ್ಯವನ್ನು ಶೃತಿ ಬದ್ದಗೊಳಿಸಿಕೊಳ್ಳುತ್ತಾರೆ. ಸುಸ್ವರದಿಂದ ಕೂಡಿದತಂಬೂರಿಯ ಮಧುರ ಧ್ವನಿಯಿಂದ ಸ್ವರಗಳ ಒಂದು ವಿಶಿಷ್ಠ ವಾತಾವರಣ ಹಾಗೂ ಹಿನ್ನೆಲೆ ನಿರ್ಮಾಣವಾಗುತ್ತದೆ. ಆಗ ತಾನಪುರಾದಿಂದ ಹೊರಡುವ ಝೇಂಕಾರದ ಸ್ವರಿತ ಸ್ವರದ ಜೊತೆಗೆ ಗಾಯಕರು ಸ್ವರಿತದ ಗಂಭೀರ, ತಯಾರಿಯಿಂದ ಕೂಡಿದ ಸ್ವರ ಹಚ್ಚುತ್ತಾರೆ. ಇದರ ನಂತರ ತಾವು ಹಾಡುವ ರಾಗದ ಪರಿಚಯಾತ್ಮಕ ಸ್ವರಾವಳಿಯಿಂದ 11/2 ಎರಡು ನಿಮಿಷ ಆಲಾಪ ಮಾಡುತ್ತಾರೆ. ನಂತರ ಸ್ಥಾಯಿ, ಅಂತರಾ ಪೂರ್ಣ ಬಂದಿಶ ಹಾಡುತ್ತಾರೆ. ಪುನಃ ಬಂದಿಶದ ಪ್ರಾರಂಭಿಕ ಶಬ್ಧಗಳನ್ನು ತೆಗೆದುಕೊಂಡು ತಬಲಾದ ‘ಸಮ್’ ನಿರ್ದೇಶನದ ಮೇಲೆ ರಾಗದ ಆಲಾಪ (ಬಹತ್) ಎಂದರೆ ರಾಗ ವಿಸ್ತಾರ ಮಾಡುತ್ತಾರೆ. ಒಂದೊಂದೇ ಆಲಾಪ ಹಾಡಿದ ನಂತರ ಬಂದಿಶದ ಮುಖಡಾ ತೆಗೆದುಕೊಂಡು ‘ಸಮ್’ ಪ್ರದರ್ಶಿಸುತ್ತಾರೆ. ಆಲಾಪ (ರಾಗವಿಸ್ತಾರ)ವನ್ನು ರಾಗ ನಿಯಮಾನುಸಾರವೇ ಮಾಡಲಾಗುತ್ತದೆ. ಇಲ್ಲಿ ಗಾಯಕ ವಿವಿಧ ಸೌಂದರ್ಯ ತತ್ವಗಳಾದ ಕಣ, ಮೀಂಡ, ಗಮಕ, ಖಟಕಾ, ಮುರ್ಕಿ, ಸ್ವರ, ಶೃಂಗಾರದ ಅನೇಕ ತತ್ವಗಳ ಸಹಾಯದಿಂದ ರಾಗದ ಶೃಂಗಾರ ಮಾಡುತ್ತಾರೆ. ಆಲಾಪವನ್ನು ಬೋಲ ಆಲಾಪ ಅಥವಾ ಆಕಾರ ಅಥವಾ ಸರಗಮ ಅಂಗದಿಂದಲೂ ಮಾಡುತ್ತಾರೆ.

ಸ್ಥಾಯಿ ಮತ್ತು ಅಂತರಾದ ಜೊತೆ-ಜೊತೆಗೆ ಮೂರು ಸಪ್ತಕದಲ್ಲಿ ರಾಗನಿಯಮಾನುಸಾರ ಆಲಾಪ ಹಾಡುತ್ತಾರೆ. ಈ ಆಲಾಪ ಶಬ್ದ, ತಾಲದ ಜೊತೆಗೆ ಅಖಂಡಿತವಾಗಿ, ಪ್ರವಾಹೀ ರೂಪದಲ್ಲಿ ನಿರಂತರ ಮುಂದುವರೆದಿರುತ್ತದೆ. ಸ್ಥಾಯಿ ಆಲಾಪ ಮಧ್ಯ ಷಡ್ಜದ ಮೇಲೂ ಅಂತರಾದ ಆಲಾಪ ತಾರ ಷಡ್ಜದ ಮೇಲೆ ಮಾಡುತ್ತಾರೆ. ಇಲ್ಲಿ ಸಮ ಮತ್ತು ಖಾಲಿಯ ನಿಶ್ಚಿತತೆಯ ಇಟ್ಟುಕೊಂಡು ಉಳಿದ ಅಂಶವನ್ನು ತಾಲದ ಅಂದಾಜು ಮಾಡುತ್ತಾ ಮುಕ್ತ ರೀತಿಯಲ್ಲಿ ಹಾಡುವುದು ಖ್ಯಾಲ ತಂತ್ರವಾಗಿದೆ.

ರಾಗದ ಪರಿಚಯಾತ್ಮಕ ಸ್ವರಾವಳಿ, ಚೀಜ, ಆಲಾಪ, ಲಯಕಾರಿ, ಬೋಲತಾನ ಹಾಗೂ ತಾನ ಇವು ಖ್ಯಾಲ ಗಾಯನದ ಪಂಚಶೀಲಗಳಾಗಿವೆ. ಇದರಲ್ಲಿ ಮುಂದುವರೆದಂತೆ ತಾಲಬದ್ಧತೆಯ ಮಾತ್ರೆ ಹೆಚ್ಚುತ್ತ ಹೋಗುತ್ತದೆ. ವಿಲಂಬಿತ ಖ್ಯಾಲ ನಂತರ ದ್ರುತ ಖ್ಯಾಲ (ಛೋಟಾಖ್ಯಾಲ) ಹಾಡುತ್ತಾರೆ. ಪ್ರಾರಂಭದಲ್ಲಿ ಇದರ ಲಯ ಮಧ್ಯಗತಿಯಲ್ಲಿ ಇರುತ್ತದೆ. ಇದರ ಪೂರ್ಣ ಬಂದಿಶ ಹಾಡಿನ ನಂತರ ಕೆಲವು ಚಪಲಗತಿಯ ಆಲಾಪ, ಬೋಲ ಆಲಾಪ, ಲಯಕಾರಿ, ಸರಿಗಮ ಆಲಾಪ, ಬೋಲಬಾಟ, ಬೆಹಲಾವೆ ಮುಂತಾದವುಗಳನ್ನು ಮಾಡುತ್ತಾರೆ. ನಂತರ ಲಯ ಬೆಳೆಸಿ ಲಯ ವೈವಿಧ್ಯತೆಯ ತಾನಬಾಜ ಮಾಡುತಾರೆ.

ಬೇರೆ ಬೇರೆ ಮಾತ್ರೆಗಳಿಂದ ತಾನ ತೆಗೆದುಕೊಂಡು ಸಮ್ ದ ಮೇಲೆ ಬರುವುದರಿಂದ ದ್ರುತ ಖ್ಯಾಲ ಸುಂದರ ವೆನಿಸುತ್ತದೆ. ಧ್ರುತ ಖ್ಯಾಲದಲ್ಲಿ ವಿವಿಧ ಪ್ರಾಕಾರದ ತಾನ-ಬೋಲತಾನ ಕೇಳಲು ಅತ್ಯಂತ ಮನೋಹರವಾಗಿರುತ್ತದೆ.

ಖ್ಯಾಲ ಗಾಯನದಲ್ಲಿ ಗಾಯಕರಿಗೆ ಸಾಥ ಸಂಗತಗೆ ಸಾರಂಗಿ ಅಥವಾ ವಾಯವಿನ ಅಥವಾ ಹಾರ್ಮೋನಿಯಂ ಹಾಗೂ ತಬಲಾ ಬಳಸುತ್ತಾರೆ.

ತಬಲಾ ಸಾಥ ಸಂಗತ:

ಖ್ಯಾಲ ಗಾಯನದಲ್ಲಿ ತಬಲಾ ಸಾಥ ಸಂಗತ ಮಾಡುವುದು ಒಂದು ದೊಡ್ಡ ಹಾಗೂ ಮಹತ್ವಪೂರ್ಣ ಕಲೆಯಾಗಿದೆ. ಗಾಯಕರು ಯಾವ ಶೃತಿಗೆ ತಂಬೂರಿ ಕೂಡಿಸುತ್ತಾರೋ ಅದೇ ಸ್ವರಕ್ಕೆ ತಬಲಾ ಕೂಡಿಸುತ್ತಾರೆ. ಡಗ್ಗಾವನ್ನು ಮಂದ್ರ  ಸ್ವಪ್ತಕದ ಗಂಧಾರಕ್ಕೆ ಕೂಡಿಸುತ್ತಾರೆ. ಕೆಲವರು ಡಗ್ಗಾ ಸ್ವರವನ್ನು ಕೂಡಿಸಿಕೊಳ್ಳುವುದಿಲ್ಲ. ಆದರೂ ಡಗ್ಗಾ ಕೆಳಗಿನ ಸ್ವರದಲ್ಲಿ ಕೂಡಿಸಿದ್ದಿರುತ್ತದೆ. ಈ ರೀತಿ ತಬಲಾ ಡಗ್ಗಾ ಶೃತಿಗೊಳಿಸಿಕೊಂಡಿರುತ್ತಾರೆ. ಗಾಯಕ ಆಲಾಪ ಮಾಡುವಾಗ ಸಾಥ ಸಂಗತಗೆ ಸಾಮಾನ್ಯ ರೂಪದಲ್ಲಿ ತಾಲದಲ್ಲಿ ತಾಲದ ಠೇಕಾ ನುಡಿಸುತ್ತಾರೆ. ಇದರಿಂದ ಗಾಯಕನ ಆಲಾಪದ ಸೌಂದರ್ಯ ಎದ್ದು ಕಂಡುಬರುತ್ತದೆ. ಗಾಯಕನ ಆಲಾಪದ ವಝುನ ಎಷ್ಟಿದೆ ಎಂಬುದನ್ನು ಕಂಡುಹಿಡಿದು ಪೂರಾವಾಗಿ ನುಡಿಸಬೇಕಾಗುತ್ತದೆ. ಗಾಯಕರು ಚೀಜ (ಬಂದಿಶ) ಹೇಳಿ ಸಮ್ ಗೆ ಬರುವ ಮೊದಲೇ ಒಂದು ಚಿಕ್ಕ ತುಕಡಾ ಬೋಲನ್ನು ತೆಗೆದುಕೊಂಡು ಸಮ್ಮಿಗೆ ಕೊಡುತ್ತಾರೆ.ಈ ಪದ್ದತಿ ಮಾಧುರ್ಯತೆಯನ್ನು ತಂದು ಕೊಡುತ್ತದೆ. ಗಾಯಕನ ಬಂದಿಶದಲ್ಲಿ ಯಾವ ಅಕ್ಷರದ ಮೇಲೆ ಸಮ್ ಬರುತ್ತದೆ.ಎಂದು ತಕ್ಷಣ ತಿಳಿದುಕೊಳ್ಳಬೇಕು.ಆ ಮೇಲೆ ಲಯದ ಒಳಗಿನ ಮಾರ್ಗದ ಅಂತರದ ಮೇಲೆ ಠೇಕಾ ನುಡಿಸುತ್ತಾ (ಭರಾವ) ಹೋಗಬೇಕು. ಗಾಯಕನಿಗೆ ಬೇಕಾದ ಲಯ ನೀಡಬೇಕು. ಗಾಯಕ ಲಯ ಬೆಳಸಿದಾಗ ಸಾಥ ಸಂಗೀತಕಾರರೂ ಠೇಕಾದ ಲಯ ಬೆಳೆಸಬೇಕು. ಆಯಾಲಯಕೆ ತಕ್ಕಂತೆ ಬೋಲ ಬಾರಿಸಬೇಕು. ಪ್ರತಿ ಸಲ ಗಾಯಕ ಸಮ್ ಗೆ ಬರುವಾಗ ಗೀತೆಯ ಮುಖಡಾ ಉಚ್ಚರಿಸುತ್ತಾನೆ. ಎಂದಾದರೆ ತಬಲಜಿ ಕೂಡ ಸಣ್ಣ ಸಣ್ಣ ಒಂದರಿಂದ ನಾಲ್ಕು ಮಾತ್ರೆಗಳವರೆಗಿನ ಮುಖಡಾವನ್ನು ತಬಲಾದ ಮೇಲೆ ನುಡಿಸಿ ‘ಸಮ್’ದ ಸೌಂದರ್ಯ ಆಕರ್ಷಣೆ ಹೆಚ್ಚಿಸುತ್ತಾನೆ. ಗಾಯಕ ತಿಹಾಯಿಯುಕ್ತ ತಾನ ಬೋಲ ತಾನ, ಲಯಕಾರಿ ಯುಕ್ತ ಕೆಲಸ ಮಾಡುವಾಗ ತಬಲಜಿ ಕೆಲವು ದೊಡ್ಡ ಮತ್ತು ತಿಹಾಯಿಯುಕ್ತ ಬೋಲಗಳನ್ನು ನುಡಿಸುತ್ತಾರೆ. ಗಾಯಕ ತಿಹಾಯಿಯುಕ್ತ ತಾನ ಮಾಡಿದರೆ ತಬಲಾಜಿ ಕೂಡ ತಿಹಾಯಿಯುಕ್ತ ಬೋಲ ನುಡಿಸಿ ಸಂಗತನ್ನು ಸಾರ್ಥಕಗೊಳಿಸುತ್ತಾರೆ. ಗಾಯಕ ಬೋಲ ಬಾಟ ಲಯಕಾರಿ ಯಾವ ವಝುನದಲ್ಲಿ ಮಾಡುತ್ತಾರೋ ಅದೇ ವಝುನದಲ್ಲಿ (ತೂಕ) ತಬಲಾಸಾಥ ನೀಡಬೇಕು. ಆಗ ಮಾತ್ರ ತಬಲಾ ಸಾಥ ಸಂಗತ ಅತೀ ಸುಂದರವಾಗಿರುತ್ತದೆ. ಗಾಯಕನಿಗೆ ಹಾಡುವಾಗ ಎಲ್ಲೂ ತೊಂದರೆ ಆಗದ ರೀತಿಯಲ್ಲಿ ಸಾಥ ಸತತ ಮಾಡುವುದು ಯೋಗ್ಯವಾಗಿದೆ. ಗಾಯಕನೊಂದಿಗೆ ತಾಲಮೇಲ ಇಡುತ್ತಿದ್ದರೆ ತಬಲಾ ಸಂಗತಗಾರ ಜನರಿಂದ ಒಳ್ಳೆ ಮೆಚ್ಚುಗೆ ಪಡೆಯುತ್ತಾನೆ.

ಖ್ಯಾಲ ಗಾಯಕನ ಗಾಯನದ ಜೊತೆಗೆ ಸಾಥ ಸಂಗೀತಾಕಾರರ ಕಲೆಯ ಆನಂದವನ್ನು ಶ್ರೋತೃಗಳು ಪಡೆಯುತ್ತಾರೆ.

ಹೀಗೆ ಸಮಗ್ರ ಖ್ಯಾಲ ಗಾಯನದ ಸುಂದರ ಪ್ರಸ್ತುತೀಕರಣದಿಂದ ಆನಂದದ ಅನುಭೂತಿಯನ್ನು ಪಡೆಯಬಹುದು.