ಸಾಹಿತ್ಯದಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳಾಗುತ್ತ ಬಂದಿವೆ. ಈ ಬದಲಾವಣೆಗಳಿಗೆ ಧಾರ್ಮಿಕ, ಸಾಮಾಜಿಕ, ಹಾಗೂ ಸಾಂಸ್ಕೃತಿಕವಾದ ಕಾರಣಗಳಿವೆ. ಈ ಕಾರಣಗಳನ್ನು ಮೂಲಮಾನವನ್ನಾಗಿರಿಸಿಕೊಂಡು ಸಾಹಿತ್ಯ ಚರಿತ್ರೆಯ ಅಧ್ಯಯನ ಮಾಡುವವರು ಅಂದಂದಿನ ಪ್ರಮುಖವಾದ ಧರ್ಮಗಳ, ರಾಜರುಗಳ, ಮಹತ್ವದ ಕವಿಗಳ ಅಥವಾ ಸಾಹಿತ್ಯಕ ಚಳುವಳಿಗಳ ಹೆಸರಿನಲ್ಲಿ ಸಾಹಿತ್ಯವನ್ನು ವರ್ಗೀಕರಿಸುತ್ತಾರೆ. ಈ ಬಗೆಯ ವರ್ಗೀಕರಣ ಚಾರಿತ್ರಿಕವಾಗಿ ಸಾಹಿತ್ಯವನ್ನು ಅಧ್ಯಯನ ಮಾಡುವ ವಿಧಾನಗಳಲ್ಲಿ ಒಂದು ಎಂಬುದನ್ನು ನಾವು ತಿಳಿಯಬೇಕು.

ಸಾಹಿತ್ಯ ಸಂಭವಿಸುವುದು ಅಂದಂದಿನ ಸಮಾಜದಲ್ಲಿ. ಸಮಾಜ ಎಂಬುದು, ವಿವಿಧ ವರ್ಗದ, ಜಾತಿಯ ಜನಗಳನ್ನು ಉಳ್ಳದ್ದು. ನಮ್ಮ ಪ್ರಸ್ತುತ ಇಂಡಿಯಾದ ವರ್ಣ ವ್ಯವಸ್ಥಾಮೂಲವಾದ ಸಾಮಾಜಿಕ ಪರಿಸರದಲ್ಲಿ ಒಂದೊಂದು ವರ್ಗ/ಜಾತಿಗಳು ಬೇರೆ ಬೇರೆಯ ಪದರಗಳಾಗಿ ಒಂದರ ಮೇಲೊಂದು ಇವೆ ಎಂಬುದನ್ನು ಮರೆಯಬಾರದು. ಈ ಪ್ರತಿಯೊಂದು ಪದರವೂ ಸೇರಿ ಒಟ್ಟಾಗಿ ಸಮಾಜ ಅನ್ನಿಸಿಕೊಂಡರೂ, ಪ್ರತಿಯೊಂದು ಪದರದ ಶತ ಶತಮಾನಗಳ ‘ಚರಿತ್ರೆ’ ಬೇರೆ ಬೇರೆಯಾಗಿದೆ ಎಂಬುದನ್ನು ನಾವು ಗುರುತಿಸಕೊಳ್ಳಬೇಕಾಗಿದೆ. ಈ ‘ಚರಿತ್ರೆ’ ಅನ್ನುವುದು ಕೇವಲ, ಆಯಾ ಪದರಗಳ ಆಚರಣೆ, ನಂಬಿಕೆ, ಇತ್ಯಾದಿಗಳ ವೈಶಿಷ್ಟ್ಯಗಳಿಂದ ಕೂಡಿದ್ದು ಮಾತ್ರವಲ್ಲ, ಆ ಒಂದೊಂದು ಪದರಕ್ಕೂ ತನ್ನದೇ ಆದ ನೆನಪುಗಳಿವೆ. ಈ ನೆನಪುಗಳ ಹಿಂದೆ ಮರೆಯಲಾರದ ಅನುಭವಗಳಿವೆ. ಈ ಅನುಭವಗಳು, ಮೂಲತಃ ಆಯಾ ವರ್ಗ/ಜಾತಿಗಳ ಸ್ಥಾನಮಾನಗಳನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ನಿಷ್ಕರ್ಷಿಸುವ, ನಿಯಂತ್ರಿಸುವ ಶಕ್ತಿಗಳಾಗಿರುತ್ತವೆ. ಆದುದರಿಂದ ಚರಿತ್ರೆ ಎಂದರೆ ಮೂಲತಃ ನೆನಪುಗಳೇ. ಅದರಲ್ಲೂ ಯಾವ ವರ್ಗ, ಜಾತಿ ಶತಶತಮಾನಗಳ ಕಾಲ ಶೋಷಣೆಗೆ ಒಳಗಾಗಿದೆಯೋ ಅದು ತನ್ನ  ನೆನಪುಗಳನ್ನು ಸುಲಭವಾಗಿ ಕಳಚಿಕೊಳ್ಳಲು ಬರುವುದಿಲ್ಲ. ಸಾಮಾನ್ಯವಾಗಿ ಎಲ್ಲ ರೀತಿಯ ಸವಲತ್ತುಗಳನ್ನೂ ಪಡೆದ ಪ್ರತಿಷ್ಠಿತ ವರ್ಗದ ನೆನಪುಗಳೇ ಬೇರೆ; ಶೋಷಣೆಗೆ, ದಬ್ಬಾಳಿಕೆಗೆ ಒಳಗಾದ ಅಪ್ರತಿಷ್ಠಿತ ವರ್ಗದ ನೆನಪುಗಳೇ ಬೇರೆ. ಶೋಷಿಸುವ ವರ್ಗ, ತನ್ನ ನೆನಪುಗಳನ್ನು ಸುಲಭವಾಗಿ ಕಳಚಿಕೊಳ್ಳಬಹುದು. ಆದರೆ ಶೋಷಣೆಗೆ ಒಳಗಾಗುತ್ತ ಬಂದ ವರ್ಗ ಹಾಗೆ ಮಾಡಲು ಬರುವುದಿಲ್ಲ, ಆದುದರಿಂದಲೇ ಶತಶತಮಾನಗಳ ಕಾಲ ತುಳಿತಕ್ಕೆ ಒಳಗಾದ ‘ದಲಿತ’ ವರ್ಗದ/ಜಾತಿಯ ನೆನಪುಗಳು ನೋವಿನಿಂದ, ರೊಚ್ಚಿನಿಂದ ಕೂಡಿರುವುದು ತೀರಾ ಸಹಜವಾಗಿದೆ.

ಈಗ ಹೇಳಿದ ಈ ಪದರಗಳಲ್ಲಿ ತೀರಾ ಕೆಳಗಿನ ವರ್ಗ/ಜಾತಿಯನ್ನು ನಾವು ದಲಿತ ಎಂದು ನಿರ್ದೇಶಿಸುತ್ತೇವೆ. ಇದರ ಮೇಲ್ಪದರ ಅದೇ ಪ್ರತಿಷ್ಠಿತ ವರ್ಗ/ಜಾತಿ. ಅದೇ ಉದ್ದಕ್ಕೂ ಈ ದೇಶದ ‘ಬುದ್ಧಿವಂತ’ ವರ್ಗ. ಅದು ಅಕ್ಷರ ಜ್ಞಾನದ ಸವಲತ್ತುಗಳಿಂದ ಉಳಿದೆಲ್ಲ ವರ್ಗ|ಜಾತಿಗಳನ್ನು ನಿಯಂತ್ರಿಸುತ್ತಾ ಆ ಸವಲತ್ತುಗಳು ಕೆಳಕ್ಕೆ ಇಳಿಯದಂತೆ ತಡೆಹಿಡಿಯುತ್ತಾ ತಾನೇ ಎಲ್ಲರ ಪರವಾಗಿ ಅಭಿವ್ಯಕ್ತಿ ನೀಡುತ್ತಿದ್ದೇನೆಂದು ಅಂದುಕೊಳ್ಳುತ್ತಾ, ತಾನು ವ್ಯಕ್ತಪಡಿಸುವ ಅನುಭವಗಳೇ ಎಲ್ಲರ ಅನುಭವಗಳೆಂಬ ಭ್ರಮೆಯನ್ನು ಮೂಡಿಸುತ್ತಾ, ಶತಮಾನಗಳ ಕಾಲ ಒಂದು ರೀತಿಯ ಪ್ರಭುತ್ವವನ್ನು ನಡೆಯಿಸಿದೆ. ಈ ಮೇಲ್ಪದರದ ಸಾಹಿತ್ಯಾಭಿವ್ಯಕ್ತಿಗೆ, ನಡುವಣ ಪದರದಿಂದ ಇನ್ನೂ ಕೆಳಗಿನ ಪದರದವರಂತೂ ಎಲ್ಲೋ ದೂರ ಹೊರಗಿದ್ದುಕೊಂಡು ಒಂದು ರೀತಿಯಲ್ಲಿ ‘ಅಸ್ಪೃಶ್ಯ’ರಾಗಿದ್ದುಕೊಂಡು, ಹಾಗಿರುವುದೇ ತಮ್ಮ ವಿಧಿ, ಕರ್ಮ-ದೈವವೆಂದು ನಂಬುತ್ತಾ ಪಶುಸಮಾನರಾಗಿ ಬಾಳಿದವರು. ಇವರೇ ನಿಜವಾದ ಅರ್ಥದಲ್ಲಿ ದಲಿತರು.[1]

ಕ್ರಮ ಕ್ರಮೇಣ ಅಕ್ಷರಜ್ಞಾನದ ಸವಲತ್ತುಗಳು, ಕೇವಲ ಮೇಲ್ಪದರದಿಂದ ನಡುವಣ ಪದರಗಳಿಗಿಳಿಯತೊಡಗಿದಂತೆ ಅಥವಾ ಮೇಲ್ಪದರದ ತುಂಬಾ ಸಂವೇದನಾಶೀಲರಾದ ಹಾಗೂ ಅನುಕಂಪದಿಂದ ಕೂಡಿದ ಕೆಲವು ವ್ಯಕ್ತಿಗಳು, ನಡುವಣ ಪದರದವರ ಪರವಾಗಿ ನಿಂತಾಗ-ಬುದ್ಧ, ಬಸವ, ರಾಮಾನುಜ ಇಂಥವರಿಂದ, ನಡುವಣ ಪದರಗಳಲ್ಲೂ ಒಂದಷ್ಟು ಎಚ್ಚರ ಹುಟ್ಟಿ, ಆ ಪದರದ ಅನುಭವಗಳನ್ನು ಆ ಪದರದವರೇ ಅಭಿವ್ಯಕ್ತಿಸುವಂಥ ಒಂದು ಸಂದರ್ಭ ಒದಗಿತು.  ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಹನ್ನೆರಡನೆಯ ಶತಮಾನದಲ್ಲಿ ನಡೆದ ಶಿವಶರಣರ ಆಂದೋಲನವನ್ನು ಇದಕ್ಕೆ ನಿದರ್ಶನವಾಗಿ ತೋರಿಸಬಹುದು. ವಾಸ್ತವವಾಗಿ ಕನ್ನಡ ಸಾಹಿತ್ಯದ ಮೊದಲ ಆಂದೋಲನ ಇದೇ. ತಮಗೆ ದೊರೆತ ಅಭಿವ್ಯಕ್ತಿಯ ಸವಲತ್ತುಗಳಿಂದ ಹಾಗೂ ಬಸವಣ್ಣನವರಂಥ ವ್ಯಕ್ತಿತ್ವದ ಬೆಂಬಲದಿಂದ ತತ್ಪರಿಣಾಮವಾದ ವೈಚಾರಿಕತೆಯಿಂದ, ಈ ನಡುವಣ ಪದರ, ಮೇಲ್ಪದರದ ಗುತ್ತಿಗೆಯ ಮನೋಧರ್ಮವನ್ನೂ, ಶೋಷಣೆಯ ತಂತ್ರಗಳನ್ನೂ ಪ್ರಶ್ನಿಸಿ, ಪ್ರತಿಭಟಿಸಿ ಒಂದು ರೀತಿಯ ‘ವರ್ಗಸಮರ’ವನ್ನೇ ಸಾರಿತು. ತಮ್ಮ ಸಾಚಾ ಅನುಭವಗಳನ್ನು ತಾವೇ, ತಮ್ಮ ಭಾಷೆಯಲ್ಲೇ ಹೇಳುವಂಥ ಅವಕಾಶಗಳನ್ನು ನಿರ್ಮಾಣ ಮಾಡಿಕೊಂಡಿತು. ಆದರೆ ಅಲ್ಲಿ ಅವರು ತಮ್ಮ ‘ಐತಿಹಾಸಿಕ ನೆನಪು’ಗಳನ್ನು ಅನುಭವದ ಮೂಲದ್ರವ್ಯವನ್ನಾಗಿ ಮಾಡಿಕೊಳ್ಳದೆ, ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಹೇಳಿಕೊಳ್ಳುವ ಕಡೆ ತೊಡಗಿಕೊಂಡರು. ಆಧ್ಯಾತ್ಮಿಕವಾದ ಅನುಭವಗಳಿಗೂ ಅನಧಿಕಾರಿಗಳೆಂಬಂತೆ ನಡೆಸಿಕೊಳ್ಳಲ್ಪಟ್ಟ ಈ ಜನ, ಕಡೇ ಪಕ್ಷ, ಆಧ್ಯಾತ್ಮಿಕ ಅನುಭವ ಯಾರೊಬ್ಬರ ಸ್ವತ್ತೂ ಅಲ್ಲ, ಎಂಬ ಆತ್ಮಪ್ರತ್ಯಯದಿಂದ ಸೆಣಸಿ ನಿಂತದ್ದು, ಮತ್ತು ತತ್ಸಂಬಂಧವಾದ ಅನುಭವಗಳನ್ನು, ಜನಭಾಷೆಯಲ್ಲಿ ಹೇಳತೊಡಗಿದ್ದು ಒಂದು ಅರ್ಥದಲ್ಲಿ ಪ್ರತಿಭಟನೆಯಂತೆ ತೋರಿದರೂ, ಇಲ್ಲಿ ಈ ಹಂತದಲ್ಲಿ ನಿಜವಾದ ತಮ್ಮ ನೆನಪುಗಳಿಗೆ ಅಭಿವ್ಯಕ್ತಿಯನ್ನು ಕೊಡುವ ‘ದಲಿತ ಸಾಹಿತ್ಯ’ ನಿರ್ಮಾಣವಾಗುವ ಅವಕಾಶ ತಪ್ಪಿಹೋಯಿತು ಎಂದು ತರ್ಕಿಸಲು ಅವಕಾಶವಿದೆ. ಇಲ್ಲಿ ಅಂಥ ‘ಅವಕಾಶ ತಪ್ಪಿಹೋಯಿತು’ ಎಂಬುದಕ್ಕೆ ಕಾರಣವನ್ನು, ವಚನಕಾರರ ಆಂದೋಲನದ ಮೂಲ ಉದ್ದೇಶಗಳಲ್ಲೇ ಹುಡುಕಬೇಕು. ಮೊದಲನೆಯದಾಗಿ, ಅದು ಮೂಲಭೂತವಾಗಿ ಸಾಹಿತ್ಯಕ ಚಳುವಳಿಯಾಗಿರಲಿಲ್ಲ; ಎರಡನೆಯದಾಗಿ, ಸಾಹಿತ್ಯ ಚಳುವಳಿಗಳ ಸಂದರ್ಭದಲ್ಲಿ ನಾವು ಇಂದು ಮಾತನಾಡುವ ‘ಸಾಮಾಜಿಕ ಪ್ರಜ್ಞೆ’ ‘ಸಾಮಾಜಿಕ ಎಚ್ಚರ’ ಇತ್ಯಾದಿಗಳ ಬಗ್ಗೆ-ಅವರು ತಲೆ ಕೆಡಿಸಿಕೊಂಡಿರಲೂ ಇಲ್ಲ.

ಮತ್ತೆ ನಡುವಣ ಈ ಪದರಗಳಲ್ಲಿ ಉಂಟಾದ ಈ ಎಚ್ಚರ ಹಾಗೂ ಅಭಿವ್ಯಕ್ತಿಯ ಸಾಮರ್ಥ್ಯ, ಇನ್ನೂ ಕೆಳಗಿನ ಪದರಗಳ ಕಡೆಗೆ ಇಳಿಯತೊಡಗಿದ್ದು ಇಪ್ಪತ್ತನೆಯ ಶತಮಾನದ ವೇಳೆಗೆ, ಈ ಹೊತ್ತಿಗೆ ರಾಷ್ಟ್ರದಲ್ಲಿ ನಡೆದ ಪುನರುಜ್ಜೀವನ (Renaissance)ದಿಂದ. ಇದರಿಂದ ಪಾಶ್ಚಾತ್ಯ ಸಾಹಿತ್ಯ ವಿಜ್ಞಾನಗಳಿಂದ ಹುಟ್ಟಿಕೊಂಡ ಹೊಸ ಎಚ್ಚರ, ಮಾನವೀಯತೆ, ಆಧುನಿಕತೆ ಇತ್ಯಾದಿಗಳಿಂದಾಗಿ, ನಡುವಣ ಪದರಗಳಿಂದ ಹಿಡಿದು ಇನ್ನೂ ಕೆಳಗಿನ ಪದರಗಳೂ, ತಮ್ಮ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳಲು ಅವಕಾಶವಾಯಿತು. ನವೋದಯ ಮತ್ತು ಪ್ರಗತಿಶೀಲಗಳೆಂದು, ಕನ್ನಡದ ಸಂದರ್ಭದಲ್ಲಿ ಗುರುತಿಸುವ ಸಾಹಿತ್ಯ ಚಳುವಳಿಗಳು ಇದರ ಪರಿಣಾಮಗಳಾಗಿವೆ.

ಈ ಸಂದರ್ಭದಲ್ಲಿ ಇನ್ನೂ ತೀರಾ ಕೆಳಗಿನ ಪದರ-ಯಾವುದನ್ನು ‘ದಲಿತ’ ಎಂದು ನಿರ್ದೇಶಿಸಬಹುದೋ ಅದು,-ಮೆಲ್ಲಗೆ ಎಚ್ಚರಗೊಳ್ಳತೊಡಗಿತ್ತು; ಆತ್ಮ ಪ್ರತ್ಯಯವನ್ನು ಗಳಿಸಿಕೊಳ್ಳತೊಡಗಿತ್ತು. ಗಾಂಧಿ, ಅಂಬೇಡ್ಕರ್ ಅವರಂಥವರಿಂದ ಈ ಪದರವವರಿಗೊಂದು ವ್ಯಕ್ತಿತ್ವ ಮೂಡತೊಡಗಿತ್ತು. ಆದರೆ ಮೇಲಿನ ಎಲ್ಲ ಪದರಗಳ ತುಳಿತ ಮಾತ್ರ ಕಡಿಮೆಯಾಗಿತ್ತೆಂದು ಹೇಳಲುಬಾರದು. ಮೇಲ್ಪದರಗಳವರಿಗೆ, ಈ ಕೆಳಪದರದವರ ಬಗೆಗೆ ಸಹಾನುಭೂತಿ ಅನುಕಂಪಗಳು ಇದ್ದಂತೆ ತೋರಿದರೂ, ಅವರನ್ನು ಸಾಧ್ಯವಾದಷ್ಟು ಮಟ್ಟಿಗೆ ‘ಅಸ್ಪೃಶ್ಯ’ರನ್ನಾಗಿ ಉಳಿಸಲು ಉಳಿದ ಎಲ್ಲಾ ಪದರಗಳೂ, ಮೇಲ್ಪದರದೊಂದಿಗೆ ಸಹಕರಿಸಿದಂತೆ ತೋರುತ್ತದೆ. ನವೋದಯ ಮತ್ತು ಪ್ರಗತಿಶೀಲ ಸಾಹಿತಿಗಳು ಈ ಕೆಳವರ್ಗದ, ಅನುಭವಗಳನ್ನು ಅರಿಯಲು ಅಭಿವ್ಯಕ್ತಿಸಲು ಮುಂದಾದರೂ, ಅದೇ ಪದರದ ಅನುಭವಗಳನ್ನು ಅಲ್ಲಿಂದ ಹುಟ್ಟಿ ಬಂದವರೇ ನಿಜವಾಗಿ ಸಶಕ್ತವಾಗಿ ಅಭಿವ್ಯಕ್ತಗೊಳಿಸಲು ಸಾಧ್ಯ-ಎಂಬ ಅಂಶದ ಕಡೆಗೆ ಅಷ್ಟಾಗಿ ಗಮನ ಕೊಡಲಿಲ್ಲ. ಹೀಗಾಗಿ ಇವರ ಸಾಮಾಜಿಕಪ್ರಜ್ಞೆ, ಹಿಂದಿನವರದಕ್ಕಿಂತ ಕೊಂಚ ಮುಂದುವರಿದದ್ದೂ ನೈಜ ಎಂಬಂತೆ ಭಾಸವಾದರೂ, ‘ದಲಿತ’ ವರ್ಗದ, ಅಥವಾ ಕೆಳಗಿನ ಕಪ್ಪು ಪದರದ ಬಗ್ಗೆ ಕೇವಲ ಸಹಾನುಭೂತಿಪರವಾದ ನಿಲುವುಗಳನ್ನು ತಾಳುವುದರ ಮೂಲಕ, ಒಂದು ರೀತಿಯಲ್ಲಿ ಆ ಪದರದ ಸಮಸ್ಯೆಗಳನ್ನು ‘ರೊಮ್ಯಾಂಟಿಸೈಸ್’ ಮಾಡುವ ಕಡೆ ಗಮನ ಕೊಟ್ಟಂತೆ ತೋರುತ್ತದೆ.

ಇನ್ನು ‘ನವ್ಯ’ವಂತೂ, ತನ್ನ ಅತಿ ಬೌದ್ಧಿಕತೆಯಿಂದ, ಕೇವಲ ಪರಿಮಿತ ಬುದ್ಧಿವಂತ ಓದುಗ ವರ್ಗವೊಂದನ್ನು ನಿರ್ಮಿಸಿಕೊಂಡು, ನಗರದ ಗೊಂದಲಗಳನ್ನು ತಮ್ಮ ‘ಸಾಮಾಜಿಕ ಪ್ರಜ್ಞೆ’ಯ ಮೂಲದ್ರವ್ಯಗಳನ್ನಾಗಿ ಮಾಡಿಕೊಂಡು, ನಿಜವಾಗಿಯೂ ಹಿಂದಿನ ಎಲ್ಲ ಸಾಹಿತ್ಯಕ ಚಳುವಳಿಗಳಿಗಿಂತ ಮಿಗಿಲಾಗಿ, ಸಮಾಜದ ಈ ‘ಕೆಳಪದರ’ವನ್ನು, ಒಂದು ರೀತಿಯಲ್ಲಿ ನಿರ್ಲಕ್ಷಿಸಿತೆಂದೇ ಹೇಳಬೇಕು. ಆದರೆ ನವ್ಯ ಸಂದರ್ಭದ ಕಾದಂಬರಿಕಾರರಲ್ಲಿ ಕೆಲವರು, ಈ ಪದರಗಳನ್ನು ಕುರಿತು, ಬರೆಯುವ ಪ್ರಾಮಾಣಿಕವಾದ ಪ್ರಯತ್ನಗಳನ್ನು ಕೈಗೊಂಡರು.

ಈಚೆಗೆ, ಈ ಕೆಳಪದರಗಳು- ಇದುವರೆಗೂ, ಬಾಯಿಪಡೆಯದಿದ್ದ ಈ ಕೆಳ ಪದರಗಳು- ತಮ್ಮ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳುತ್ತಾ, ತಮ್ಮ ಅನುಭವಗಳನ್ನು ತೋಡಿಕೊಳ್ಳುವುದರ ಮೂಲಕ, ಹೊಸಗನ್ನಡ ಸಾಹಿತ್ಯಕ್ಕೆ ಹೊಸ ಆಯಾಮಗಳನ್ನು ಕೊಡತೊಡಗಿವೆ.

ಈ ಹಿನ್ನೆಲೆಯಿಂದ ನೋಡಿದರೆ, ಸಾಹಿತ್ಯ ಚರಿತ್ರೆ ಎಂದರೆ, ಈ ಸಾಮಾಜಿಕ ಎಚ್ಚರ ಹಾಗೂ ಅಭಿವ್ಯಕ್ತಿಯ ಸಾಮರ್ಥ್ಯಗಳು ಹೇಗೆ ಮೇಲ್ಪದರದಿಂದ ಕ್ರಮ ಕ್ರಮೇಣ, ಕೆಳಗಿನ ಪದರಗಳ ಮೂಲಕ ಇಳಿಯುತ್ತಾ ವ್ಯಾಪಕವಾಗುತ್ತಾ ಬಂತೆಂಬುದರ ಚರಿತ್ರೆಯೇ ಆಗಿದೆ ಎನ್ನಬಹುದು.

ಈ ಹಂತದಲ್ಲಿ ಮೇಲ್ಪದರಗಳವರು, ಈ ಕೆಳಪದರದವರ ಅಭಿವ್ಯಕ್ತಿಯನ್ನು ಕುರಿತು ತೋರುವ ಪ್ರತಿಕ್ರಿಯೆಗಳು ಹೀಗಿವೆ;

೧. ಸಾಹಿತ್ಯವೆಂಬುದು, ಸಾಹಿತಿಯಾದವನ ಮನಸ್ಸಿನ ಸೃಷ್ಟಿ. ಸಾಹಿತಿ ಎಂಬ ವ್ಯಕ್ತಿ ಯಾರೆಲ್ಲರ ಅನುಭವಗಳನ್ನೂ, ತನ್ನ ವಿಶಿಷ್ಟ ಪ್ರತಿಭಾಶಕ್ತಿಯ ಮೂಲಕ ಗ್ರಹಿಸಿ ಅಭಿವ್ಯಕ್ತಪಡಿಸಬಲ್ಲ. ಹೀಗಿರುವಾಗ, ‘ದಲಿತರು’ ಬರೆದದ್ದೇ ‘ದಲಿತ ಸಾಹಿತ್ಯ’ವೆಂಬ ಮಾತಿಗೆ, ಅರ್ಥವಿಲ್ಲ.

೨. ಯಾವುದನ್ನು ‘ದಲಿತ ಸಾಹಿತ್ಯ’ ಎಂದು ಕರೆಯುತ್ತೀರೋ ಅದರಲ್ಲಿ ಕೇವಲ ಆಕ್ರೋಶವಿದೆ; ಸಾಹಿತ್ಯವಾಗುವುದಕ್ಕೆ ಬೇಕಾದ ಕಲೆಗಾರಿಕೆ ಇಲ್ಲ.

ಇವುಗಳಲ್ಲಿ ಮೊದಲನೆಯದಂತೂ ತೀರಾ ಭ್ರಮಾತ್ಮಕವಾದ ನಿಲುವಾಗಿದೆ. ಸಾಹಿತ್ಯವೆಂಬುದು ಮೂಲಭೂತವಾಗಿ ಸಾಹಿತಿ ಎಂಬ ವ್ಯಕ್ತಿಯೊಬ್ಬನ ಮನಸ್ಸಿನ ನಿರ್ಮಿತಿ, ನಿಜ. ಆದರೆ ಆ ವ್ಯಕ್ತಿ, ಈ ದೇಶದ ಶ್ರೇಣೀಕರಣಗೊಂಡ ಯಾವ ‘ಪದರ’ಕ್ಕೆ ಸಂಬಂಧಪಟ್ಟವನು, ಮತ್ತು ಆ ಪದರದ ಚಾರಿತ್ರಿಕ ನೆನಪುಗಳಿಂದ ಆತ ಹೇಗೆ ಬದ್ಧನಾಗಿದ್ದಾನೆ-ಎಂಬುದನ್ನು ನಿರ್ಲಕ್ಷಿಸಿ ಮಾತನಾಡುವುದು, ಸಾಹಿತ್ಯ ನಿರ್ಮಿತಿಯನ್ನು ತೀರಾ ಸರಳೀಕರಣಗೊಳಿಸಿದ ನಿಲುವಾಗುತ್ತದೆ. ನಿಜ. ಒಂದು ಕಾಲಕ್ಕೆ, ಅಕ್ಷರಜ್ಞಾನದ ಸವಲತ್ತುಗಳು ಮೀಸಲಾದ ಒಂದು ವರ್ಗದ ಜನ, ತಾವೇ ಉಳಿದೆಲ್ಲರ ಪರವಾಗಿ ಬರೆಯುತ್ತಿದ್ದೇವೆ, ತಾವು ಬರೆದದ್ದೇ ಎಲ್ಲರ ಅನುಭವ ಎಂಬ ಭ್ರಮೆಯಲ್ಲಿದ್ದರು. ಆದರೆ, ಇಂದು, ವಿವಿಧ ಪದರಗಳವರು, ತಮ್ಮ ತಮ್ಮ ವಿಶಿಷ್ಟಾನುಭವಗಳನ್ನು ಹೇಳಿಕೊಳ್ಳಲು ಸಾಧ್ಯವಾಗಿರುವ ಸಂದರ್ಭದಲ್ಲಿ ಹಿಂದಿನಂತೆಯೇ, ಯಾವುದೇ ಸಾಹಿತಿ ಯಾರೆಲ್ಲರ ಅನುಭವಗಳನ್ನೂ ತಾನೇ ಹೇಳುತ್ತಿದ್ದೇನೆಂದು ತಿಳಿಯುವುದು ಸರಿಯಲ್ಲ. ಒಂದು ವರ್ಗದ ಅಥವಾ ಜಾತಿಯ ಪ್ರವಾಹಕ್ಕೆ ಒಳಪಟ್ಟವನ ಅನುಭವವನ್ನು, ಅದರಿಂದಾಚೆಗೆ ನಿಂತವನು ಸಮರ್ಪಕವಾಗಿ ಹೇಳಲು ಸಾಧ್ಯವಿಲ್ಲ, ಹಾಗೆ ಹೇಳಲು ಹೊರಟರೆ, ಬೇರೊಂದು ಪದರದ ಅನುಭವಗಳನ್ನು ಊಹಿಸಿಕೊಂಡು, ಕಲ್ಪಿಸಿಕೊಂಡು ಹೇಳಬೇಕು, ಮತ್ತು ಹೇಳಬಹುದು. ಹಾಗೆ ಹೇಳಿದ್ದು ಒಂದು ಮಟ್ಟದಲ್ಲಿ ‘ಸಾಹಿತ್ಯ’ವಾಗುತ್ತದೆ, ಮತ್ತು ಸಾಹಿತ್ಯವಾಗಿದೆ ನಿಜ. ಆದರೆ ‘ಕೆಳಪದರ’ದವನೇ, ಸಾಹಿತಿಯಾದಾಗ, ತನ್ನ ಅನುಭವಗಳನ್ನು ಅಭಿವ್ಯಕ್ತಿಸಲು ತೊಡಗಿದಾಗ, ಆ ಬರೆಹಕ್ಕೆ ಒದಗುವ ಸಾಚಾತನ ಹಾಗೂ ಅವನೇ ಆವಿಷ್ಕಾರಮಾಡಿಕೊಳ್ಳುವ ಭಾಷೆಯಲ್ಲಿ ಸಂಭವಿಸುವ ಲಯ, ಬೇರೆಯವರಲ್ಲಿ ಬಾರದು. ಆದುದರಿಂದ ದಲಿತರನ್ನು ಕುರಿತು, ಇತರರು ಬರೆಯುವ ಸಾಹಿತ್ಯಕ್ಕಿಂತ, ದಲಿತರೇ ತಮ್ಮ ಅನುಭವಗಳನ್ನು ನೇರವಾಗಿ ಹೇಳಿಕೊಳ್ಳುವ ಸಾಹಿತ್ಯ ಸಹಜವೂ ಅರ್ಥಪೂರ್ಣವೂ ಆಗುತ್ತದೆಂಬುದರಲ್ಲಿ ಸಂಶಯವಿಲ್ಲ.

ಎರಡನೆಯದಾಗಿ ಈ ‘ದಲಿತ ಸಾಹಿತ್ಯ’ದಲ್ಲಿ ಆಕ್ರೋಶವಿದೆ; ಕಲೆಗಾರಿಕೆಯಿಲ್ಲ-ಎಂಬ ಮಾತನ್ನು ನೋಡೋಣ. ಮೊದಲನೆಯ ಮಾತೆಂದರೆ, ಇದರಲ್ಲಿ ಆಕ್ರೋಶವಿದೆ ಎಂಬುದು ನಿಜ. ಆದರೆ ಅದು ತೀರಾ ಸಹಜವಾಗಿದೆ, ಮತ್ತು ಚಾರಿತ್ರಿಕವಾಗಿಯೂ ಸಮರ್ಥನೀಯವಾಗಿದೆ. ಶತಶತಮಾನಗಳ ಕಾಲ ಅಮಾನವೀಯ ಹಿಂಸೆ, ಅತ್ಯಾಚಾರ ಹಾಗೂ ಶೋಷಣೆಗೆ ಒಳಗಾದವನು, ಮೊಟ್ಟಮೊದಲಿಗೆ ಬಾಯಿ ಪಡೆದಾಗ ಅವನ ಅಭಿವ್ಯಕ್ತಿಯಲ್ಲಿ ಯಾತನೆಯ, ಆಕ್ರೋಶದ, ಪ್ರತಿಭಟನೆಯ ದನಿಯಲ್ಲದೆ, ಕೇವಲ ‘ಸೌಂದರ್ಯ’ವನ್ನು ನಿರೀಕ್ಷಿಸಬಹುದೆ? ಆತನ ದನಿ ಹಾಗಿರುವುದಕ್ಕೆ ಅವನು ತೇಲಿಬಂದ ಚರಿತ್ರೆಯೇ ಕಾರಣ; ಅವನ ಅನುಭವಗಳೇ ಕಾರಣ. ಎರಡನೆಯದಾಗಿ ಅದು ಇನ್ನೂ ‘ಕಲೆ’ಯಾಗಿಲ್ಲ ಅನ್ನುವುದಾದರೆ, ಅದು ಕಲೆ ಅಲ್ಲ ಎಂದು ಆಕ್ಷೇಪಿಸಲು ನೀವು ಬಳಸುವ ಮಾನದಂಡಗಳು ಯಾವುವು ಎಂದು ಪ್ರಶ್ನಿಸಬೇಕಾಗುತ್ತದೆ. ನೇರವಾಗಿ, ಶೋಷಣೆ ಮಾಡುವವರನ್ನು ಉದ್ದೇಶಿಸಿ ಬರೆದ ಈ ಪ್ರತಿಭಟನೆಯ ಕಾವ್ಯ, ಶೋಷಕರ ಪಾಲಿಗೆ ಭಯೋತ್ಪಾದಕವೂ, ಅವರ ಪಾಪಪ್ರಜ್ಞೆಯನ್ನು ಕೆಣಕುವಂಥದೂ ಆಗಿ ಕಂಡರೆ ಆಶ್ಚರ್ಯವಲ್ಲ. ಅಂಥವರಿಗೆ ಅದು ‘ಕಲೆ’ಯಾಗಿ ಕಂಡೀತಾದರೂ ಹೇಗೆ? ಕಲೆಗಾರಿಕೆ (craftmanship) ಎಂಬುದು ಮಾನವ ಚರಿತ್ರೆಯಲ್ಲಿ ‘ಕಲಿಕೆ’ಗಳಿಂದ ಪರಿಷ್ಕರಣಗೊಳ್ಳುತ್ತಾ ಬಂದದ್ದೆಂಬುದನ್ನು ನಾವು ಮರೆಯಬಾರದು. ಜತೆಗೆ, ಯಾವುದೇ ಕಲೆಯನ್ನು, ಅದರ ಸೌಂದರ್ಯಾಂಶಗಳಿಂದ ಮಾತ್ರ ಅಳೆಯದೆ, ಅದರ ಹಿಂದಿರುವ ಸಾಂಸ್ಕೃತಿಕ ಒತ್ತಡಗಳ ದೃಷ್ಟಿಯಿಂದಲೂ ನೋಡಬೇಕು, ಅದು ಯಾವ ಸಾಂಸ್ಕೃತಿಕ ಸಂದರ್ಭದ ಸಹಜಾನುಭವವಾಗಿ ರೂಪುಗೊಂಡಿದೆ ಎಂಬುದನ್ನು ಗುರುತಿಸಬೇಕು.

ದಲಿತಸಾಹಿತ್ಯ ಎಂಬುದು ಕೇವಲ ನಮ್ಮ ಪರಿಸರದಲ್ಲಿ ಮಾತ್ರ ಕಾಣಿಸಿಕೊಂಡದ್ದಲ್ಲ, ಈಚೀಚೆಗೆ ಭಾರತದಲ್ಲಿ ಸ್ಪಷ್ಟವಾಗಿ ರೂಪುತಾಳುತ್ತಿರುವ ಒಂದು ಜಾಗತಿಕ ಸಾಹಿತ್ಯಪ್ರಭೇದ.   ಜಗತ್ತಿನಾದ್ಯಂತ, ಎಚ್ಚರುತ್ತಿರುವ, ಶತಶತಮಾನಗಳ ಕಾಲ ದಮನಕ್ಕೆ ಒಳಗಾದ, ಕೆಳಪದರದ ವಿಶಿಷ್ಟ ದನಿ ಇದು.[2] ನವೋದಯ, ಪ್ರಗತಿಶೀಲ, ನವ್ಯ ಇತ್ಯಾದಿಗಳಿಗೆ ಹೇಗೆ ಗುರುತಿಸಬಲ್ಲ ನಿಲುವುಗಳಿವೆಯೋ ಹಾಗೆಯೇ ದಲಿತ ಸಾಹಿತ್ಯಕ್ಕೆ ವಿಶಿಷ್ಟವಾದ ಗುಣ-ಲಕ್ಷಣ ಧೋರಣೆಗಳಿವೆ. ಯಾವುದೇ ಸಾಹಿತ್ಯಕ ಆಂದೋಲನಗಳಿಗಿರುವಂತೆ ಇಲ್ಲಿಯೂ ರಭಸ, ಘೋಷಣೆಗಳಿವೆ. ಆದರೆ ಕೇವಲ ಘೋಷಣೆಗಳನ್ನು ಕೂಗಿದಷ್ಟಕ್ಕೆ ಯಾವುದೇ ಸಾಹಿತ್ಯ ಚಳುವಳಿ ಮೌಲಿಕವಾಗುವುದಿಲ್ಲ. ಘೋಷಣೆಯಿಂದಾಚೆಗೆ ಅಥವಾ ಹಿನ್ನೆಲೆಗೆ ಯಾವ ಸೈದ್ಧಾಂತಿಕ ನಿಲುವುಗಳಿವೆ ಎನ್ನುವುದು ಮುಖ್ಯ. ಹಾಗೆಂದು, ಈ ಸೈದ್ಧಾಂತಿಕ ನಿಲುವುಗಳೂ ಸಹ, ಪರಿಸ್ಥಿತಿಯ ಅನಿವಾರ‍್ಯತೆಯಿಂದ, ತಕ್ಕಷ್ಟು ಚಿಂತನೆಯಿಂದ ನಿಷ್ಪನ್ನಗೊಂಡವುಗಳಾಗದೆ, ಯಾವ್ಯಾವೋ ರಾಜಕೀಯ ಪಕ್ಷಗಳ ವಿವಿಧೋದ್ದೇಶ ಮೂಲವಾದ ತಂತ್ರಗಳಾಗಿದ್ದರಂತೂ, ಅಲ್ಲಿ ಸಾಹಿತ್ಯಕ್ಕೆ ಅಪಾಯ ತಪ್ಪಿದ್ದಲ್ಲ. ಯಾವುದೇ ಸಾಹಿತ್ಯ ನಿರ್ಮಿತಿ ಸಿದ್ಧಾಂತಗಳನ್ನು ಮೀರಿ ನಿಲ್ಲುವುದರಿಂದ ಮಾತ್ರ ನಿಜವಾಗಿಯೂ ಮೌಲಿಕವಾಗಬಲ್ಲದು.

ಯಾವುದೇ ಹೊಸ ಸಾಹಿತ್ಯ ಚಳುವಳಿ ಹುಟ್ಟಿಕೊಂಡಾಗ, ನೆಲೆನಿಂತ ಸಾಹಿತ್ಯದೊಂದಿಗೆ ಸಂಬಂಧಿಸಿದವರು, ಅದನ್ನು ಗುಮಾನಿಯಿಂದ ನೋಡುವುದು, ಒಂದು ರೀತಿಯಲ್ಲಿ ಅಸಾಹಿತ್ಯಕ ಪ್ರತಿಷ್ಠೆಯ ಪರಿಣಾಮವಾಗಿದೆ. ನಮ್ಮ ಪರಿಸರದಲ್ಲಿ ಒಂದನ್ನೊಂದು ಹಾದುಕೊಂಡು ಹೋಗುವಂಥ ಎಷ್ಟು ವಿಚಾರ ಪ್ರವಾಹಗಳಿದ್ದರೆ, ಅಷ್ಟೂ ಒಳ್ಳೆಯದು-ಒಂದು ಜನಾಂಗವನ್ನು ಜೀವಂತವಾಗಿಡುವುದಕ್ಕೆ ಮತ್ತು ಸೃಜನಶೀಲತೆಯನ್ನು ಕಾಪಾಡಿಕೊಳ್ಳುವುದಕ್ಕೆ.

ಪ್ರತಿಕ್ರಿಯೆ-೧೯೮೨


[1] ‘ದಲಿತ’ ಎಂಬ ಪರಿಕಲ್ಪನೆಯನ್ನು ಕುರಿತು ಮಾತನಾಡುವ ಬಹುಮಂದಿ, ಎಲ್ಲ ವರ್ಗ/ಜಾತಿಗಳಲ್ಲಿಯೂ ಶೋಷಣೆ ಇದೆ; ಹಾಗೆ ಶೋಷಣೆಗೆ ಒಳಗಾದವರೇ ‘ದಲಿತ’ರು ಎಂದು ಸರಳೀಕರಣ ಮಾಡುತ್ತಾರೆ. ಆದರೆ ‘ದಲಿತ’  ಹಾಗೂ ‘ಶೋಷಿತ’ ಈ ಎರಡಕ್ಕೂ ಸ್ವಲ್ಪವ್ಯತ್ಯಾಸವಿದೆ ಎಂಬುದನ್ನು ಗುರುತಿಸುವ ಅಗತ್ಯವಿದೆ. ದಲಿತರು, ಮೂಲತಃ ಶೋಷಿತರೇ ನಿಜ; ಆದರೆ ‘ಶೋಷಿತ’ರೆಲ್ಲ ದಲಿತರಲ್ಲ. ದಲಿತರು ಕೇವಲ ಶೋಷಿತರಷ್ಟೇ ಅಲ್ಲ, ಶೋಷಣೆಯ ಜತೆಗೆ ಅಮಾನವೀಯವಾದ ಹಿಂಸೆ ಕ್ರೌರ್ಯಗಳಿಗೆ ಒಳಗಾದವರು, ಒಂದು ವ್ಯಕ್ತಿತ್ವವೇ ಇಲ್ಲದವರೆಂಬಂತೆ ನಡೆಯಿಸಿಕೊಳ್ಳಲ್ಪಟ್ಟವರು.

[2] ನೋಡಿ: The New Black poetry; Ed. Clarence Major. Modern poetry from America, Ed. Gerald More and Ulli Beier.