ಹಿಂತಿರುಗಿ ನೋಡಿದಾಗ ೨೦ನೇ ಶತಮಾನದ ಹೊಸಗನ್ನಡ ಸಾಹಿತ್ಯವು ನವೋದಯ, ಪ್ರಗತಿಶೀಲ, ನವ್ಯ, ದಲಿತ – ಬಂಡಾಯದ ಕವಲುಗಳಲ್ಲಿ ಪುತಿನ, ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಎಚ್, ಎಸ್. ಶಿವಪ್ರಕಾಶ್, ಪ್ರತಿಭಾ ನಂದಕುಮಾರ್, ಸವಿತಾ ನಾಗಭೂಷಣ, ಸಿದ್ಧಲಿಂಗಯ್ಯ, ಎಸ್. ಮಂಜುನಾಥ್, ಕೆ.ಬಿ. ಸಿದ್ಧಯ್ಯ ಈ ಕವಿಗಳು ಕಳೆದ ಶತಮಾನದ ಕನ್ನಡ ಕಾವ್ಯಕ್ಕೆ ಹೊಸ ತೇಜಸ್ಸನ್ನು ತಂದುಕೊಟ್ಟಿದ್ದಾರೆ.

ಹೊಸ ಶತಮಾನದ ಆರಂಭದ ಈ ದಶಕದಲ್ಲಿ ನಿರ್ದಿಷ್ಟವಾದ ಚಳುವಳಿಯಾಗಲಿ, ಸಿದ್ಧಾಂತ ಪ್ರಣೀತವಾದ ಕಾವ್ಯ ಮಾರ್ಗವಾಗಲಿ ಕಂಡುಬರುತ್ತಿಲ್ಲ. ಈಗಿರುವ ಸನ್ನಿವೇಶವು ಖಾಲಿಭಿತ್ತಿಯಾಗಿ ತೆರೆದ ವಾತಾವರಣವೊಂದನ್ನು ಕಲ್ಪಿಸಿದೆ ಅನ್ನಿಸಿದರೂ ಕವಿಯ ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಏನಿಲ್ಲವೆಂದರೂ ಒಂದು ವರ್ಷಕ್ಕೆ ಐವತ್ತರಿಂದ ಎಪ್ಪತ್ತರ ಸಂಖ್ಯೆವರೆಗೂ ಮುದ್ದಾಗಿ ಪ್ರಕಟವಾಗುತ್ತಿರುವ ಕವನ ಸಂಕಲನಗಳನ್ನು ಪರಿಶೀಲಿಸಿದರೆ ಇವುಗಳಲ್ಲಿ ತೊಡಗಿರುವವರ ಸಂಖ್ಯೆ ತೀರಾ ಕಡಿಮೆ ಇದೆ. ಅಂತಹ ಕೆಲವು ಪ್ರಾತಿನಿಧಿಕ ಕವಿಗಳ ಕವಿತೆಗಳನ್ನು ಆಧರಿಸಿರುವ ಈ ಅಧ್ಯಯನ ಒಂದು ಪಕ್ಷಿನೋಟ ಮಾತ್ರವೇ ಆಗಿದೆ. ಹೊಸ ಶತಮಾನದ (೨೦೦೧ ರಿಂದ ಈಚೆಗೆ) ಕನ್ನಡ ಕಾವ್ಯದ ಹರಿವನ್ನು ಅಭಿವ್ಯಕ್ತಿ ಹಾಗೂ ಅನ್ವೇಷಣೆಯ ಹಿನ್ನೆಲೆಯಲ್ಲಿ ಸ್ಥೂಲವಾಗಿ ಮೂರು ವಿಧದಲ್ಲಿ ಕಂಡುಕೊಳ್ಳಬಹುದಾಗಿದೆ.

೧. ಸಮುದಾಯಸ್ಮೃತಿ ಸಂಬಂಧಿತ ಕಾವ್ಯ
೨. ಆಧುನಿಕ ಜೀವಲಯದ ನಿರೂಪವಾಗಿ ಕಾವ್ಯ
೩. ಸ್ತ್ರೀ ಸಂವೇದನೆಯ ಆಯಾಮವಾಗಿ ಕಾವ್ಯ

. ಸಮುದಾಯಸ್ಮೃತಿ ಸಂಬಂಧಿತ ಕಾವ್ಯ

೧೯೭೦ – ೮೦ರ ದಶಕದಲ್ಲಿ ಮೊದಲಬಾರಿಗೆ ಶಿಕ್ಷಣ ಪಡೆದ ದಮನಿತ ಸಮುದಾಯಗಳು ಕಾವ್ಯದಲ್ಲಿ ತೊಡಗಿಕೊಂಡಿದ್ದರ ಮುಂದುವರೆದ ಭಾಗವಾಗಿ ಈ ಕಾಲದ ಹಲವು ಸಮುದಾಯಗಳು ಕಾವ್ಯದಲ್ಲಿ ಭಾಗವಹಿಸುತ್ತಿವೆ. ಇದಕ್ಕಿರುವ ಬಲವಾದ ಕಾರಣವೊಂದನ್ನು ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಹೀಗೆ ಗುರುತಿಸುತ್ತಾರೆ.

೮೦೯೦ರ ದಶಕದಲ್ಲಿ ಬಂಡಾಯ ಸಾಹಿತ್ಯ ಮತ್ತು ಇತರೆ ಪ್ರಗತಿಪರ, ಜನಪರ ಚಳುವಳಿಗಳು ಸೃಷ್ಟಿಸಿದ ವಾತಾವರಣದಿಂದಾಗಿ ನಮ್ಮ ಅನುಭವಗಳು ತಮ್ಮ ತನವನ್ನು ಆವಿಷ್ಕರಿಸಿಕೊಳ್ಳುವ ಬಾಯಿ ಪಡೆದುಕೊಳ್ಳುತ್ತಿವೆ. ಬಂಡಾಯ ಕಾವ್ಯ ಈಗ ಪ್ರಧಾನ ಅಭಿವ್ಯಕ್ತಿ ಮಾರ್ಗವಾಗಿ ಉಳಿದು ಕೊಂಡಿಲ್ಲದಿರಬಹುದು ಆದರೆ ಅದು ಸೃಷ್ಟಿಸಿದ ಒತ್ತಾಸೆ, ನೆಲದ ಬೇರುಗಳ ಬುಡಗಳವರೆಗೆ ತಲುಪಿದೆ ಅದು ದನಿಯಾಗಿ ಹೊಮ್ಮತೊಡಗಿದೆ  – (ನೇಕಾರ ಕವನ ಸಂಕಲನದ ಮುನ್ನುಡಿ)

ಹೀಗೆ ದನಿಯಾಗಿ ಹೊಮ್ಮಿರುವ ಕವಿ ಕೆ.ಪಿ. ಮೃತ್ಯುಂಜಯ. ‘ಒಂದು ಅನುರಾಗಕ್ಕಾಗಿ ಎಷ್ಟೆಲ್ಲ’ (೧೯೯೫), ’ಮರ್ತ್ಯ ಮೀರದ ಮಾತು’ (೨೦೦೦), ‘ಎಲೆ ಎಸೆದ ಮರ’ (೨೦೦೨), ‘ಅವರವರ ಸಾವು’ (೨೦೦೪) ಇವರ ಕವನ ಸಂಕಲನಗಳು.

ಬಿದ್ದೋಗ್ತೀಯ
ನೆಟ್ಟಗೆ ನಿಂತ್ಕೊ ಮೊದ್ಲು
ಇಲ್ಲಾಂದ್ರೆ ಡೊಂಕು ಬಿಲ್ಲಾಗ್ತೀಯ
ಸೆಟೆದು ನಿಲ್ಲಬೇಕು
ಹಿಂಗೇಳು?
ಸೆಟೆದು! (ಅಯ್ಯ ಹೇಳ್ತಾ ಇದ್ದುದ್ದು)

ಅಯ್ಯನ ಜೀವನಾನುಭವದ ಕಾದಕುಲುಮೆಯಿಂದ ಹುಟ್ಟಿರುವ ಸ್ವಾಭಿಮಾನದ ಈ ತಿಳುವಳಿಕೆಗೂ ಕವಿಯಾದ ಮಗ ಅನುಭವಿಸುತ್ತಿರುವ ಸಂಕಟಕ್ಕೂ ಇಲ್ಲಿ ಸಂಬಂಧವಿದೆ :

ರಂಗನಾಥಸ್ವಾಮಿಗೆ ಬಂಗಾರದ ಕಿರೀಟಬೇಕು
ಛತ್ರಿ ಬೇಕು
ಇವ ಮಾತ್ರ ಬ್ಯಾಡ
ಇವನು ಸತ್ತಾಗ
ಬಿರ್ನೆ ಊರೆಚೆ ತಗೊಂಡು ಹೋಗಿ
ಒಪ್ಪ ಮಾಡ್ರಿ!” ಅಂತ ಗದರ್ತಾರೆ
ಯಪ್ಪಾ ಬೇಡಿಕೊಂಡರೂ ಸಿಗದು ಸಿದಿಗಿ
ಬೊಂಬು ಇವನ ಶವಾನ ನೋಡೋಕೂ ಬರದೆ
ಸೂಳೆಮನೆ ಜಗಲಿ ಮೇಲೆ ಮೂಗುಬೊಟ್ಟು
ಹಿಡಿದು ಕೂರ್ತಾನೆ ಹಾರವ; ಇವನಿಗೊಂದು
ಹಿಡಿ ಮಣ್ಹಾಕೋಕೂ ನೇಗಿಲು
ಹೊತ್ಕೊಂಡು ಹೊರಡ್ತಾನೆ ಒಕ್ಕಲು ಮಗ || (ಜಕ್ಕಣರು)

ವರ್ಣ ಸಂಘರ್ಷದಲ್ಲಿ ಸಿಲುಕಿದ ಸಮುದಾಉಅದ ನೋವಿದು. ಮೃತ್ಯುಂಜಯರ ಕವಿತೆಗಳಲ್ಲಿ ಸಾವಿನ ನೆರಳು ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತದೆ:

ಎಲೆ ಹೆಗಲ ಮೇಲೆ ಬೀಳುತ್ತೆ
ಹಗಲು ತೋಡೆ ಮೇಲೆ ಒರಗುತ್ತೆ
ತೊಡೆ ಕುಸಿದು ಹೆಜ್ಜೆ ಮೇಲೆ
ಹೆಜ್ಜೆಯೆಂಬುದು ಹಿಸಿದು ನೆಲವನ್ನೆ!

ಹುಚ್ಚು – ಯೌವನ – ಮುಪ್ಪಿನ ಅವಸ್ಥೆಯನ್ನು ತೀವ್ರವಾಗಿ ಅಷ್ಟೇ ಸಾಂದ್ರವಾಗಿ ಹೀಗೆ ಹಿಡಿದುಕೊಡುತ್ತಾರೆ:

ಎಲೆ ಎಸೆದ ಮರ
ಕಣ್ಣೊಳಗೆ
ಮುಚ್ಚಿದರೆ ಕತ್ತಲು
ಬಿಟ್ಟರೆ ನೆರಳ || (ಎಲೆ ಎಸೆದ ಮರ)

ಎನ್ನುತ ನಮ್ಮೊಳಗೇ ಬೆಳೆಯುತ್ತಾ ಬರುವ ಸಾವು ತರುವ ಸೋಜಿಗವನ್ನು ಕಾಣಿಸುತ್ತಾರೆ. ನಾಲ್ಕು ದಿನದ ಆಟದಂತಿರುವ ಜೀವನಕ್ಕೆ ಈ ಜೀವಕ್ಕೆ ಕವಿ ಮಂಜೂರು ಮಾಡುವುದು:

ಏನು ಮಾರಿ ಏನು ಕೊಳ್ಳುವಿರಿ
ಸಂತೆಯಲ್ಲಿ; ಮರೆಯದೆ ಸೇರು ಪುರಿ
ಹೂ ಸಿಕ್ಕರೆ ಕೊಳ್ಳಿರಿ
ಮಾರು ಮಾರು ಮಾರು || (ಎಲ್ಲರೂ ಹೊರಟಾಯಿತು)

ಇದನ್ನು ಓದುವಾಗ ಸಾವನ್ನು ಕಾವ್ಯದ ಹುಡುಕಾಟದ ಹಾದಿಯಾಗಿ ಕಂಡುಕೊಂಡಿರುವ ಮತ್ತೊಬ್ಬ ಕವಿ ಗಂಗಾಧರ ಚಿತ್ತಾಲರ ಕವಿತೆಗಳು ನೆನಪಿಗೆ ಬರುತ್ತದೆ. ಗಾಢವಾಗಿ ಆವರಿಸಿಕೊಂಡಿರುವ ಈ ಸಾವಿನ ಭಯವನ್ನು ತೊರೆಯಲು ಕವಿ ಪ್ರೀತಿಯತ್ತ ಕೈ ಚಾಚುತ್ತಾರೆ:

ಕಾದು ಕಾಯಲಾಗದೆ ಕಾದು ಕುದಿದು ಕುದಿಯಲಾಗದೆ ಕುದಿದು
ಬಾಗಿ ಬೆಂಬಲ ಮಾಗಿ ಮಮ್ಮಲ ಇಳಿಬಿದ್ದು
ಇಳೆಗೆ ಸಾವರಿಸಿ ಮತ್ತೆದ್ದು ಮೇಲೆ ಅಂತರಿಕ್ಷದ ಪಕ್ಷಿಯಾಗಿ
ಸುಳಿ ಸುಳಿ ಸುತ್ತಿ ಮತ್ತೆ ಬೇರಾಗಿ
ಒಂದು ಅನುರಾಗಕ್ಕಾಗಿ(ಒಂದು ಅನುರಾಗಕ್ಕಾಗಿ ಎಷ್ಟೆಲ್ಲ)

ಕಟ್ಟಕಡೆಗೂ ಈ ಜೀವ ಹಂಬಲಿಸುವುದು ಪ್ರೀತಿಯನ್ನು ಮಾತ್ರವೇ. ಅದನ್ನು ಪಡೆಯಲೆಂದೇ ಇಲ್ಲಿ ಹೋರಾಟವಿದೆ ಅವಿಶ್ರಾಂತವಾಗಿ ಎಲ್ಲರೂ ಹೋರಾಡುತ್ತಿದ್ದಾರೆ. ಪ್ರೀತಿಯ ಜೊತೆಗೆ ನಿಸರ್ಗವು ಮನುಷ್ಯನಿಗೆ ಜೀವಪೋಷಕವಾಗಿ ಒದಗಿಬರುವುದು ಹೀಗೆ:

ಕಣ್ಣಿಗೆ ಹೂ
ತೋರಿಸಿದ ಬೆಳಕಿಗೆ
ಮನಸಿನ ನೋವು
ಮರೆಸಿದ ಗಾಳಿಗೆ
ಹೃದಯದ ಬೆಂಕಿ
ಆರಿಸಿದ ನೀರಿಗೆ
ಕೈ ಮುಗಿಯದೆ (ನಮನ)

ಕವಿ ಸುಬ್ಬು ಹೊಲೆಯಾರ್ ದಲಿತ ಲೋಕದ ಸಂಕಟವನ್ನು ಕಾವ್ಯದಲ್ಲಿ ತೋರುವ ಪ್ರಯತ್ನದಲ್ಲಿರುವರು. ಮುಖ್ಯವಾಗಿ ಕಾವ್ಯದ ನುಡುಗಟ್ಟಿನ ವಿಷಯದಲ್ಲಿ ೭೦ರ ದಶಕದ ದಲಿತ ಕಾವ್ಯಕ್ಕಿಂತ ಭಿನ್ನವಾದ ತಿರುವನ್ನು ಸುಬ್ಬುರವರ ಕಾವ್ಯ ಪಡೆಯುತ್ತಿದೆ. ‘ಸೂಜಿ ಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ (೨೦೦೩) ಇವರ ಕವನ ಸಂಕಲನ.

ಬಚ್ಚಿಟ್ಟುಕೊಳ್ಳಲಿ ಎಲ್ಲಿ
ಅವಮಾನದ ಕಲ್ಲು ಸಕ್ಕರೆಯನ್ನ (ಮೌನ ಬಿಟ್ಟು ಹೋಗುವುದೆಲ್ಲಿಗೆ)

ಈ ಅವಮಾನಕ್ಕೆ ಪುರಾವೆಯೊಂದನ್ನು ನೀಡುತ್ತಲಿದೆ ಮುಂದಿನ ಕವಿತೆ:

ನೀರೇ ನೆಲಕ್ಕೆ ಮೈಲಿಗೆಯಾಗಿರಲು
ಪಾಮರ ನಾನು ಪಾದ ಎಲ್ಲಿಡಲಿ ಮೇಲಿನವರೆ?
(ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು)

ಶೋಷಿಸಿದ ಮೇಲ್ವರ್ಗದ ಕುರಿತು ಹೀಗೆ ಹೇಳುವಾಗಲೂ ಓದುಗರ ಅರಿವಿಗೆ ತರುವುದು:

ಊರಿಗೊಂದು ಹೊಲಗೇರಿ
ಎಲ್ಲರೆದೆಯಲ್ಲಿ ನೂರೆಂಟು ಹೊಲಗೇರಿ
(ಉಸಿರುಸುಟ್ಟ ಇತಿಹಾಸ ಹೆಗಲ ಮೇಲೆ)

ಹೀಗೆ ಕನ್ನಡಿಯಂತೆ ನುಡಿದರೂ ದಮನಿತರ ಮೇಲಿನ ದೌರ್ಜನ್ಯ, ಕೊಲೆ ನಿಲ್ಲದ ಈ ಹೊತ್ತಿನಲ್ಲಿ :

ನಿಷೇಧ ಮಾಡಬೇಡಿ ಕೊಲ್ಲುವವರನ್ನು
ಇನ್ನಷ್ಟು ಕೊಲ್ಲಬೇಕು ನನ್ನಂತಹವರನ್ನು
ಕೊಲ್ಲುವವರು ಹಸುವಿನ ಹಾಲು ಕುಡಿಯುತ್ತಾರೆ
ಕೊಲ್ಲಲ್ಪಡುವವರು ತಾಯಿ ಹಾಲು ಕುಡಿಯುತ್ತಾರೆ
(ಕೊಲ್ಲುವವರು ಹಸುವಿನ ಹಾಲು ಕುಡಿಯುತ್ತಾರೆ)

ಆಳುವ ವರ್ಗದವರನ್ನು ಗೇಲಿ ಮಾಡುತ್ತಲೇ ತನ್ನಲ್ಲಿನ ಸಹಿಸುವ ಶಕ್ತಿಯನ್ನು ಎತ್ತಿಹಿಡಿಯುತ್ತಾರೆ :

ನಾನೆಷ್ಟು ವಿನಯವಂತ ಮತ್ತು ಕರುಣಾಳು ಎಂದರೆ ನನಗಾದ ದುಃಖವನ್ನು ಹಸಿದ ಹೊಟ್ಟೆ

ಅನ್ನ ಮುಕ್ಕುವಂತೆ ಮುಕ್ಕುತ್ತೇನೆ
ಎಂಜಲಾಗದ ಕೈ ಬಾಯಿಗಳಿಗೆ
ನಿರಾಶೆಯಾಗದಿರಲೆಂದು ತೇಗೆ ಸುಧಾರಿಸಿಕೊಳ್ಳುತ್ತೇನೆ
(ಅಳಿಸಲಾಗದ ಅಳುವಿನಂತೆ)

ಬೆನ್ನಿಗಿರುವ ಅವಮಾನ, ನೋವನ್ನಷ್ಟೇ ಕವಿತೆಯಲ್ಲಿ ತಲಬಲ್ಲೆ ಎನ್ನುವಂತೆ ಬರೆಯುವ ಕವಿ ತನ್ನ ಕವಿತೆ ಅನ್ಯವನ್ನು ನುಡಿಯದು ಏಕೆ? ಎನ್ನುವುದಕ್ಕೆ ಕೊಡುವ ಕಾರಣ ಮಾರ್ಮಿಕವಾಗಿದೆ:

ನಲ್ಮೆಯ ಹೊಲಗೇರಿ
ಕರ್ರಗಿನ ಸ್ಲೇಟಾಗಿದ್ದರೆ
ಬಿಳೀಯ ಪದ್ಯ ಬರೆಯಬಹುದಿತ್ತು
(ಒಂದು ಹೊರೆ ಸೌದೆಯಷ್ಟು)

ದಲಿತರ ಕೇರಿಯಲ್ಲಿ ನಿಂತುಕೊಂಡು ಲೋಕವಾಸನೆಯನ್ನು ಕಾವ್ಯವಾಗಿಸುವ ಅಪರೂಪದ ಕವಿ ಎನ್. ಕೆ. ಹನುಮಂತಯ್ಯ ‘ಹಿಮದ ಹೆಜ್ಜೆ’ (೧೯೯೮), ‘ಚಿತ್ರದ ಬೆನ್ನು’ (೨೦೦೬) ಇವರ ಪ್ರಕಟಿತ ಕವನ ಸಂಕಲನಗಳು.

ನೀವು ಮಹಾತ್ಮರು
ನಿಮ್ಮ ನೆರಳಲ್ಲಿ ಹಸಿವಿನ ಹಿಮತಂತಿಯಿಂದ ನನ್ನನ್ನು
ಕಟ್ಟಿದಿರಿ
ಬಿಸಿ ಕುಲ ಮಲಗಳ ತಿನ್ನಿಸಿ ಉಳಿಸಿದಿರಿ ನನ್ನನ್ನು
ಅಳಿಸಿದಿರಿ ನೆನಪನ್ನು
(ಯಜಮಾನರಿಗೊಂದು ಪತ್ರ)

ಹಸಿವು ಮತ್ತು ಅವಮಾನದೊಂದಿಗೆ ಏಗುತ್ತಾ ಬಂದಿರುವ ಸಮುದಾಯ ತನ್ನ ಅಸ್ತಿತ್ವದಲ್ಲಿ ಸೇರಿಹೋಗಿರುವ ಕಣ್ಣೀರಿನೊಂದಿಗೆ ಇಲ್ಲಿಗೆ ಬಂದಿದೆ:

ಅಸ್ಪೃಶ್ಯ !
ಹೌದು; ನಾನು ವಿದ್ಯುತ್ತಿನ ಹಾಗೆ
ನಿಮ್ಮ ತಣ್ಣನೆಯ ಸ್ಪರ್ಶಕ್ಕೆ
ಸಿಕ್ಕಲಾರೆ
ಅಸ್ಪೃಶ್ಯ !
ಹೌದು; ನಾನು ಗೋವು ತಿಂದು
ಗೋವಿನಂತಾದವನು
(ಗೋವು ತಿಂದು ಗೋವಿನಂತಾದವನು)

ಗೋವು ದಲಿತರ ಸಹಜವಾದ ಆಹಾರ. ಹಿಂದೂಧರ್ಮದ ನೆರಳಲ್ಲಿ ಅಥವಾ ಪಾವಿತ್ರ್ಯತೆಯ ಸೋಗಿನಲ್ಲಿ ‘ಗೋವು ನಿಷೇಧ’ ಕಾನೂನು ಜಾರಿಗೊಳಿಸಲು ಸಂಚು ರೂಪಿಸಿದ ಪಅಭದ್ರರಿಗೆ ಉತ್ತರರೂಪದ ಪ್ರತಿಕ್ರಿಯೆ ಇದು. ಗೋವನ್ನು ತನ್ನ ಸಮುದಾಯದ ರಕ್ತದಲ್ಲಿ ಅದರ ಸ್ವಭಾವದಲ್ಲಿಯೆ ಕಾಣುತ್ತಿರುವ ಕವಿ ಅದಕ್ಕೊಂದು ತಾತ್ತ್ವಿಕ ರೂಪವನ್ನು ನೀಡುವಲ್ಲಿ ಸಫಲರಾಗಿರುವರು. ಕಾಲದ ಒತ್ತಾಯಗಳು, ಕೇಡುಗಳನ್ನೇ ಸಲಕರಣೆಯನ್ನಾಗಿ ಬಳಸಿಕೊಂಡು ಮಹಾಪ್ರತಿಮೆಯೊಂದನ್ನು ಸೃಷ್ಟಿಸಬಹುದೆಂಬುದಕ್ಕೂ ‘ಗೋವು ತಿಂದು ಗೋವಿನಂತಾದವನು’ ಕವಿತೆ ಉತ್ತಮ ಉದಾಹರಣೆಯಾಗಿ ನಮ್ಮ ಮುಂದಿದೆ :

ಅಗ್ನಿ ಮಾಂಸದ ಕುಲುಮೆಯಲಿ
ನನ್ನ ಕಾಯಿಸಿ ಬಣ್ಣವ ಮಾಡಿ
ಮರಳಿ ತನ್ನ ರೂಪನೇ ಕಡೆವ
ನನ್ನಾಳದ ಅಳುವೇ
ನನ್ನ ಚಿತ್ರಕ್ಕೇಕೆ ಬೆನ್ನ ಬರೆವೆ (ಚಿತ್ರದ ಬೆನ್ನು)

ಬಹುಶಃ ತುಳಿತಕ್ಕೊಳಗಾದ ಸಮುದಾಯ ಮಾತ್ರವೆ ಒಂದು ಚಿತ್ರಕ್ಕೂ ಬೆನ್ನಿರುವುದನ್ನು ಕಲ್ಪಿಸಿಕೊಳ್ಳಬಲ್ಲದು :

ಚಮ್ಮಾರನ ಜೋಡು ಮೆಟ್ಟಿ
ಕಮ್ಮಾರನ ಖಡ್ಗ ಹಿಡಿದು ಕಾಯುತಾನಲ್ಲೋ
ರಾಜ ಕಾಯುತಾನಲ್ಲೋ
ನೇಕಾರನ ಉಡುಗೆಯುಟ್ಟು
ಹೂಗಾರನ ಹೂವ ಮುಡಿದು
ಕಾಯುತಾನಲ್ಲೋ ರಾಜ ಕಾಯುತಾನಲ್ಲೋ (ಕಾಯುತಾನಲ್ಲೋ)

ಕಾಯುವ ಪ್ರಭುತ್ವದ ಶಕ್ತಿಗಳೇ ಸಮುದಾಯವನ್ನು ನಿಯಂತ್ರಿಸುವ ಅದಕ್ಕಾಗಿ ಸಮುದಾಯಗಳು ನೇರವಾಗಿ ಅಲ್ಲದಿದ್ದರೂ ಪರಸ್ಪರ ಸಹಕರಿಸುತ್ತಿರುವ ನಾಟಕಿಯತೆಯನ್ನು ನಾವಿಲ್ಲಿ ಕಾಣುತ್ತೇವೆ. ದಲಿತಕಾವ್ಯವೆಂದರೆ ಅದು ಆವೇಶದ ಇಲ್ಲವೆ ಸ್ವಮರುಕದಲ್ಲಿ ವಿರಮಿಸುವಂಥದ್ದು ಎನ್ನುವ ರೂಢಿಮಾತುಗಳನ್ನು ಭಂಜಿಸುವ ಎನ್.ಕೆ. ಹನುಮಂತಯ್ಯ ದಲಿತ ಕಾವ್ಯದ ಬಾಹುಗಳು ಎಷ್ಟು ವಿಶಾಲ ಎಂಬುದನ್ನು ‘ಹೆಜ್ಜೆಯ ಹಿಂದೆ’ ಕವಿತೆಯಲ್ಲಿ ಕಾಣಿಸುತ್ತಾರೆ. ‘ಎಲ್ಲಾದರೂ’ ಎಂದು ಮತ್ತೆ ಮತ್ತೆ ಬರುವ ಈ ಕವಿತೆಯಲ್ಲಿ ದಲಿತ ಕಾವ್ಯಕ್ಕೆ ಇದ್ದ ಗಡಿಯನ್ನು ದಾಟಿ ಹೋಗಿದೆ.

ಬಾ ಗೆಳತಿ
ಚೂರಾದ ಮುಖಗಳನು ಆಯೋಣ
ಎಲ್ಲಾದರೂ
ನಗು ಮೆತ್ತಿಕೊಂಡಿದ್ದರೆ
ನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ
ಎಲ್ಲದರೂ
ಅಳು ಅಂಟಿಕೊಂಡಿದ್ದರೆ
ನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ
ಬಾ ಗೆಳತಿ
ಚೂರಾದ ಎದೆಗಳನು ಆಯೋಣ
ಎಲ್ಲದರೂ ಹದವಿದ್ದರೆ
ಅಲ್ಲಿ ಬೀಜಗಳಾಗಿ ಮೊಳೆಯೋಣ (ಹೆಜ್ಜೆಯ ಹಿಂದೆ)

ಇದೇ ಆಶಯ ಒಂದು ಸಣ್ಣ ತೊರೆಯಾಗಿ ಕವಿ ವೀರಣ್ಣ ಮಡಿವಾಳರ ಕಾವ್ಯದಲ್ಲಿ ಮುಂದುವರೆಯುತ್ತಿದೆ. ಪುಟ್ಟ ಸಮುದಾಯದ ಪ್ರತಿನಿಧಿಯಾಗಿ ಬರೆಯುತ್ತಿರುವ ವೀರಣ್ಣನವರ ಪ್ರಕಟಿತ ಕವನ ಸಂಕಲನ ‘ನೆಲದ ಕರುಣೆಯ ದನಿ’ (೨೦೧೦).

ನಾನೀಗ ರೂಪಾಂತರಕೆ ಹಾತೊರೆವ ಜೀವಬೀಜ
ಮಳೆ ಬಂದೇ ಬರುತ್ತದೆ ಮಣ್ಣು ಪೊರೆಯುತ್ತದೆ
ಗಾಳಿ ಬದುಕ ನೀಡುತ್ತೆ (ಜೀವ ಬೀಜದ ಪಿಸುಗಾನ)

ಈ ಭರವಸೆಯನ್ನು ಆತುಕೊಂಡು ಬರೆಯುತ್ತಿರುವಾಗಲೂ ಕವಿಯ ಗಮನವಿರುವುದು :

ನೀವು ನನ್ನ ಚರಮಗೀತೆ
ಹಾಡುವಾಗಲೂ
ನನ್ನ ಧ್ಯಾನ ಎರಡರ ಮೇಲೆ ಮಾತ್ರ
ಒಂದು ಪ್ರತಿರೋಧ
ಮತ್ತೊಂದು ಪ್ರಿಯತಮೆ (ಎರಡರ ಮೇಲೆ)

ಹೀಗೆ ನುಡಿಸುತ್ತಿರುವುದು ಸಮುದಾಯದ ಕಸುಬು. ಆ ಕಸುಬಿನೊಂದಿಗೆ ಬೆರತುಹೋಗಿರುವುದು ಈ ನೆಲದ ಭಿನ್ನಭೇದಭಾವ :

ಊರ ದೇವರ ದಿಬ್ಬಣ್ಣ
ಬೀದಿಯಲಿ ಬರುವಾಗ
ನಾವೇ ಹಡದಿ ಹಾಸಿಗೆಯಾಗಿ ಬಿದ್ದುಕೊಂಡೆವು
ಮಣ್ಣವಪ್ಪಿದ ಮಡಿಬಟ್ಟೆಯನು
ಪಲ್ಲಕ್ಕಿ ಹೊತ್ತ ನೀವು ತುಳಿದಿರಿ
ನಾವು ಎಷ್ಟೇ ನಲುಗಿದರೂ
ದೇವರು ನಮ್ಮನ್ನು ಮುಟ್ಟಲೇ ಇಲ್ಲ (ಹಡದಿ ಹಾಸುವ ಅಗಸರ ಹಾಡು)

ಮುಟ್ಟಿಸಿಕೊಳ್ಳದವರ ನಡುವೆ ಮೇಲು ಜಾತಿಗಳಿಗೆ ಹಾಸುಗಲ್ಲಾಗಿ ಬಾಳುತ್ತಿರುವಾಗಲೂ:

ನಾವು ಮತ್ತೆ ಮತ್ತೆ ಕನಿಕರಿಸುತ್ತೇವೆ
ಸಿಂಹಾಸವನೇರಿ ಕೇರಿ ಮರೆತ ಊರಿಗೆ (ಕೇರಿ ಮರೆತ ಊರಿಗೆ)

ಕೇರಿ ಮರೆತು ಮೆರೆಯುತ್ತಿರುವ ಊರೆಂಬ ಯಜಮಾನ್ಯವನ್ನು ಜರಿದರು ಸಮುದಾಯದ ಆತ್ಮವಿಶ್ವಾಸ ಇದು :

ನಮ್ಮ ನಡಿಗೆ ಆನೆ ಹಿಂಡಿನ ಹಾಗೆ
ದಿಕ್ಕು ದಿಕ್ಕಿನ ಕೂಗಿದು ನಿಲ್ಲದ ಕೊರಳ ಗಾನ
ಹಾಡುತ್ತೇವೆ
ನಮ್ಮ ಅನ್ನ ನಾವೇ ಉಣ್ಣುವವರೆಗೆ (ಭೂಮಿ)

ಈ ಭಾವಕ್ಕೆ ಹೆಗಲುಕೊಟ್ಟಂತೆ ಬರೆಯುತ್ತಿರುವ ಕವಿ ಟಿ. ಯಲ್ಲಪ್ಪ. ‘ಕಡಲಿಗೆ ಕಳಿಸಿದ ದೀಪ’ (೨೦೧೦) ಇವರ ಪ್ರಕಟಿತ ಕವನ ಸಂಕಲನವಾಗಿದೆ.

ಯಾರ ಬದುಕಿನ ದಾರಿಗೆ
ಟಾರಾದೆ ನೀನು
ಯಾರ ಪಯಣದ ತುಳಿತಕ್ಕೆ
ದಾರಿಯಾದೆಯೋ ನೀನು (ಒಡಲಾಳದಿಂದ)

ದೇವನೂರ ಮಹಾದೇವರ ‘ಡಾಂಬರು ಬಂದುದು’ ಕಥೆಯೊಂದಿಗೆ ಸಾವಯವ ಸಂಬಂಧ ಹೊಂದಿರುವ ಈ ಮಾತುಗಳಲ್ಲಿ ಪ್ರಶ್ನೆ – ಎಚ್ಚರದೊಂದಿಗೆ ಚಲಿಸುತ್ತಿರುವ ಸಮುದಾಯವೊಂದು ಕಣ್ಣಮುಂದೆ ನಿಲ್ಲುತ್ತದೆ :

ನಾನು
ನಿಮ್ಮ ಕೈಯ್ಯ ದಾಳವಾದರೂ
ಭಾನುಮತಿಯ ನೆತ್ತದಲಿ
ಚಿತ್ತ ತೆರದಿಡುವ ಕರ್ಣನ
ನನ್ನಿಯೇ ಹೊರತು
ಶಕುನಿಯ ಸೋಗಲಾಡಿತನ ನನಗಿಲ್ಲ (ಸೊಲ್ಲು)

ವರ್ಗ, ಜಾತಿಗಳಲ್ಲಿ ಚದುರಿಹೋಗಿರುವ ಸಮಾಜದಲ್ಲಿ ಜೀವಿಸುತ್ತ ಹಾಗೆ ಜೀವಿಸುತ್ತಲೇ ಹೊರಗಾಗಿ ನಿಜ ನುಡಿಯಬೇಕಾದಾಗ ಎದುರಾಗುವ ಸವಾಲಿದು. ಶೋಷಣೆಗೆ ಒಳಗಾಗಿಯೂ ತ್ಯಾಗಕ್ಕೆ ಬದ್ಧವಾಗಿರುವ ಕವಿಗೆ ಕರ್ಣನ ನಿಜದೊಟ್ಟಿಗೆ ತನ್ನ ಇರುವಿಕೆಯ ಕಂಡುಕೊಂಡರೂ :

ನೀನು
ಬಯಲ ಕಾಣಲೆಂದೇ
ಬೆತ್ತಲಾದವಳು
ನಾನು ಬೆತ್ತಲಾಗಲೆಂದೇ
ಬಯಲಿಗೆ ಬಂದವನು (ಬಯಲ ಹಾಡು)